ಧರ್ಮವನ್ನು ಚರ್ಚಿಸುವುದರಿಂದ ಯಾವ ಪ್ರಯೋಜನವು ಲಭಿಸಬಲ್ಲದು?
ತಮ್ಮ ಮಗು ನುಡಿಯುವ ಮೊದಲ ಶಬ್ದಗಳಿಗಾಗಿ ಹೆತ್ತವರು ಆತುರದಿಂದ ಕಾಯುತ್ತಾರೆ. ಗುಳುಗುಳಿಸುವ ಶಬ್ದಗಳ ನಡುವೆ, ಪ್ರಾಯಶಃ “ಮಮ್ಮ” ಅಥವಾ “ಪಪ್ಪಾ” ದಂತಹ ಒಂದು ಪುನರುಚ್ಚರಿಸಲ್ಪಡುವ ಪದವನ್ನು ಅವರು ಕೇಳುವಾಗ, ಅವರ ಹೃದಯಗಳು ಸಂತೋಷದಿಂದ ಉಬ್ಬುತ್ತವೆ. ಕೂಡಲೇ ಅವರು ಇದರ ಕುರಿತಾದ ಸುದ್ದಿಯನ್ನು ಸ್ನೇಹಿತರೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಮಗುವಿನ ಮೊದಲ ಸಂಸರ್ಗವು ಆನಂದವನ್ನು ತರುವಂತಹ ನಿಜವಾದ ಶುಭ ವಾರ್ತೆಯಾಗಿದೆ.
ಚಿಕ್ಕ ಮಗುವಿನ ಜ್ಞಾನೇಂದ್ರಿಯಗಳಿಂದ ಹೀರಲ್ಪಟ್ಟ ಧ್ವನಿಗಳು, ನೋಟಗಳು, ಮತ್ತು ವಾಸನೆಗಳು ಒಂದು ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಖಂಡಿತವಾಗಿಯೂ, ಪ್ರತಿಕ್ರಿಯೆಗಳು ವಿಭಿನ್ನವಾಗಿರುತ್ತವೆ. ಆದರೆ, ಸ್ವಲ್ಪ ಸಮಯಾವಧಿಯ ನಂತರ, ಒಂದು ಶಿಶುವು ಈ ಉದ್ದೀಪನಗಳಿಗೆ ಪ್ರತಿಕ್ರಿಯಿಸಲು ತಪ್ಪುವುದಾದರೆ, ತಮ್ಮ ಮಗುವಿನ ಬೆಳವಣಿಗೆಯು ತಡೆಗಟ್ಟಿರಬಹುದೆಂದು ಹೆತ್ತವರು ತಕ್ಕದ್ದಾಗಿಯೇ ಚಿಂತಾಕ್ರಾಂತರಾಗುವರು.
ತಮಗೆ ಪರಿಚಯವಿರುವಂತಹ ಜನರಿಗೆ ಹಸುಗೂಸುಗಳು ಚೆನ್ನಾಗಿ ಪ್ರತಿಕ್ರಿಯಿಸುತ್ತವೆ. ತಾಯಿ ಮಗುವನ್ನು ಮುದ್ದಾಡುವಾಗ, ಸಾಮಾನ್ಯವಾಗಿ ಒಂದು ಅರಳಿದ ನಗು ಫಲಿಸುತ್ತದೆ. ಆದರೆ, ಭೇಟಿನೀಡುತ್ತಿರುವ ಒಬ್ಬ ಸಂಬಂಧಿಯ ಸ್ಪರ್ಶವೇ ಕಣ್ಣೀರನ್ನು, ಅವರಿಂದ ಎತ್ತಿಹಿಡಿಯಲ್ಪಡಲೂ ಒಂದು ಹಟಮಾರಿ ನಿರಾಕರಣೆಯನ್ನು ಕೆರಳಿಸಬಹುದು. ಇದನ್ನು ಅನುಭವಿಸುವ ಅನೇಕ ಸಂಬಂಧಿಕರು ಬಿಟ್ಟುಕೊಡುವದಿಲ್ಲ. ಮಗುವು ಅವರನ್ನು ಹೆಚ್ಚು ಚೆನ್ನಾಗಿ ಆರಿಯಲು ಆರಂಭಿಸಿದಂತೆ, ಅವರ ಸಂತೋಷಕ್ಕೆ, ಅಪರಿಚಿತತೆಯ ತಡೆ ಕುಸಿಯುತ್ತದೆ ಮತ್ತು ಮಗುವಿನ ಮಂದಹಾಸವು ಮೆಲ್ಲನೇ ತೋರಿಬರುತ್ತದೆ.
ತದ್ರೀತಿಯಲ್ಲಿ, ಬಹು ಸಮಯದಿಂದ ಪರಿಚಯಸ್ಥರಾಗಿರದ ಒಬ್ಬರೊಂದಿಗೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಬಹಿರಂಗವಾಗಿ ಚರ್ಚಿಸಲು ಕೆಲವು ವಯಸ್ಕರು ಹಿಂಜರಿಯುತ್ತಾರೆ. ಒಂದು ವೈಯಕ್ತಿಕ ವಿಷಯ—ಧರ್ಮದ, ಕುರಿತಾಗಿ ಒಬ್ಬ ಅಪರಿಚಿತನು ಯಾಕೆ ಚರ್ಚಿಸಲು ಬಯಸುತ್ತಾನೆಂಬದು ಅವರಿಗೆ ಅರ್ಥವಾಗದಿರಬಹುದು. ಪರಿಣಾಮವೇನೆಂದರೆ, ಸೃಷ್ಟಿಕರ್ತನ ಕುರಿತಾಗಿ ಮಾತಾಡುವವರ ಮತ್ತು ತಮ್ಮ ನಡುವೆ ಒಂದು ತಡೆಯು ಬರುವಂತೆ ಅವರು ಅನುಮತಿಸುತ್ತಾರೆ. ಎಷ್ಟೆಂದರೂ, ಯಾವುದು ಮಾನವಕುಲದ ಒಂದು ಸ್ವಭಾವಸಿದ್ಧ ವೈಶಿಷ್ಟ್ಯ—ಆರಾಧಿಸುವ ಅಭಿಲಾಷೆ—ವಾಗಿದೆಯೋ ಅದನ್ನು ಚರ್ಚಿಸಲೂ ಅವರು ನಿರಾಕರಿಸುತ್ತಾರೆ.
ವಾಸ್ತವವಾಗಿ, ನಾವು ನಮ್ಮ ಸೃಷ್ಟಿಕರ್ತನ ಕುರಿತಾಗಿ ಕಲಿಯಲು ಆಸಕ್ತರಾಗಿರಬೇಕು, ಮತ್ತು ಇತರರೊಂದಿಗೆ ಸಂಭಾಷಿಸುವದು ನಮ್ಮನ್ನು ಕಲಿಯುವ ಒಂದು ಸ್ಥಾನದಲ್ಲಿಡುವುದು. ಇದು ಯಾಕಂದರೆ ದೀರ್ಘ ಸಮಯದಿಂದ ದೇವರು ತೆರೆದ ಸಂಸರ್ಗಕ್ಕೆ ಸಂಬಂಧಿಸಲ್ಪಟ್ಟಿದ್ದಾನೆ. ಹೇಗೆಂದು ನಾವು ನೋಡೋಣ.
‘ಕಿವಿಗೊಡಿರಿ ಮತ್ತು ಕಲಿಯಿರಿ’
ಒಬ್ಬ ಮಾನವನೊಂದಿಗೆ ದೇವರ ಪ್ರಥಮ ಸಂಸರ್ಗವು ಏದೆನ್ ತೋಟದಲ್ಲಿ ಆದಾಮನೊಂದಿಗಾಗಿತ್ತು. ಆದರೆ, ಆದಾಮ ಮತ್ತು ಹವ್ವರು ಪಾಪಮಾಡಿದ ನಂತರ, ಅವನು ಅವರೊಂದಿಗೆ ಮುಂದೆ ಇನ್ನೂ ಸಂಸರ್ಗ ಮಾಡಲು ಬಯಸಿದಾಗ, ಅವರು ಬಚ್ಚಿಕೊಳ್ಳಲು ಇಷ್ಟಪಟ್ಟರು. (ಆದಿಕಾಂಡ 3:8-13) ಆದರೂ, ದೇವರೊಂದಿಗಿನ ಸಂಸರ್ಗವನ್ನು ಸ್ವಾಗತಿಸಿದ ಪುರುಷರ ಮತ್ತು ಸ್ತ್ರೀಯರ ವಿವರಣೆಗಳನ್ನು ಬೈಬಲು ದಾಖಲಿಸುತ್ತದೆ.
ತನ್ನ ದಿನದ ದುಷ್ಟ ಲೋಕದ ಆಸನ್ನವಾಗುತ್ತಿರುವ ನಾಶನದ ಕುರಿತಾಗಿ ದೇವರು ನೋಹನೊಂದಿಗೆ ಸಂಸರ್ಗಮಾಡಿದನು, ಈ ಕಾರಣದಿಂದ ನೋಹನು “ಸುನೀತಿಯನ್ನು ಸಾರುವವ” ನಾದನು. (2 ಪೇತ್ರ 2:5) ತನ್ನ ಸಂತತಿಯವರಿಗೆ ದೇವರ ವದನಕನೋಪಾದಿ ನೋಹನು, ಮನುಷ್ಯನೊಂದಿಗಿನ ದೇವರ ವ್ಯವಹಾರಗಳಲ್ಲಿ ಕೇವಲ ನಂಬಿಕೆಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲ ತಾನು ಯೆಹೋವನ ಪಕ್ಷದಲ್ಲಿರುವದನ್ನು ಸಹ ಬಹಿರಂಗವಾಗಿ ಘೋಷಿಸಿದನು. ನೋಹನು ಯಾವ ಪ್ರತಿಕ್ರಿಯೆಯನ್ನು ಗಮನಿಸಿದನು? ದುಃಖಕರವಾಗಿ, ಆತನ ಸಮಕಾಲೀನರಲ್ಲಿ ಹೆಚ್ಚಿನವರು “ಪ್ರಳಯದ ನೀರು ಬಂದು ಎಲ್ಲರನ್ನು ಬಡಕೊಂಡು ಹೋಗುವ ತನಕ ಗಮನವನ್ನು ಕೊಡಲಿಲ್ಲ.” (ಮತ್ತಾಯ 24:37-39, NW) ಆದರೆ ನಮಗೆ ಸಂತೋಷಕರವಾಗಿ, ನೋಹನ ಕುಟುಂಬದ ಏಳು ಸದಸ್ಯರು ಕಿವಿಗೊಟ್ಟರು, ದೇವರ ಉಪದೇಶಗಳಿಗೆ ವಿಧೇಯರಾದರು, ಮತ್ತು ಭೌಗೋಲಿಕ ಪ್ರಳಯವನ್ನು ಪಾರಾದರು. ಅವರಿಂದಲೇ ಇಂದು ಜೀವಿಸುತ್ತಿರುವ ಎಲ್ಲಾ ಮಾನವರು ಹುಟ್ಟಿದ್ದಾರೆ.
ಅನಂತರ ದೇವರು, ಜನರ ಒಂದು ಇಡೀ ಜನಾಂಗದೊಂದಿಗೆ, ಪುರಾತನ ಇಸ್ರಾಯೇಲಿನೊಂದಿಗೆ ಸಂಸರ್ಗಮಾಡಿದನು. ಮೋಶೆಯ ಮೂಲಕ, ದೇವರು ದಶಾಜ್ಞೆಗಳನ್ನು ಮತ್ತು ಅಷ್ಟೇ ನಿರ್ಬಂಧಕ್ಕೊಳಪಡಿಸುವ 600 ನಿಯಮಗಳನ್ನು ಕೊಟ್ಟನು. ಇಸ್ರಾಯೇಲ್ಯರು ಅವುಗಳಿಗೆಲ್ಲಾ ವಿಧೇಯರಾಗಬೇಕೆಂದು ಯೆಹೋವನು ನಿರೀಕ್ಷಿಸಿದನು. ಪ್ರತಿ ಏಳು ವರ್ಷಗಳಿಗೆ, ಪರ್ಣಶಾಲೆಗಳ ವಾರ್ಷಿಕ ಜಾತ್ರೆಯಲ್ಲಿ, ದೇವರ ಧರ್ಮಶಾಸ್ತ್ರವು ಗಟ್ಟಿಯಾಗಿ ಓದಲ್ಪಡಬೇಕೆಂದು ಮೋಶೆಯು ನಿರ್ದೇಶಿಸಿದನು. “ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು” ಎಂದು ಆತನು ಸೂಚಿಸಿದನು. ಯಾವ ಉದ್ದೇಶಕ್ಕಾಗಿ? “ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕಾಗಿರುವದರಿಂದ ಅವರು ಕಿವಿಗೊಡಲಾಗುವಂತೆ ಮತ್ತು ಕಲಿಯಲಾಗುವಂತೆ.” ಎಲ್ಲರೂ ಕಿವಿಗೊಡಬೇಕಾಗಿತ್ತು ಮತ್ತು ಕಲಿಯಬೇಕಾಗಿತ್ತು. ತಾವೇನನ್ನು ಕೇಳಿದರೋ ಅದನ್ನು ಚರ್ಚಿಸಲು ಅವರು ಎಷ್ಟು ಆನಂದಿಸಿರಬೇಕೆಂದು ಊಹಿಸಿರಿ!—ಧರ್ಮೋಪದೇಶಕಾಂಡ 31:10-12, NW.
ಐದಕ್ಕಿಂತ ಹೆಚ್ಚು ಶತಮಾನಗಳ ನಂತರ, ಯೆಹೂದದ ರಾಜ ಯೆಹೋಷಾಫಾಟನು, ಯೆಹೋವನ ಶುದ್ಧ ಆರಾಧನೆಯನ್ನು ಪುನರುಜ್ಜೀವಿಸುವ ಒಂದು ಚಳುವಳಿಯಲ್ಲಿ ಸರದಾರರನ್ನು ಮತ್ತು ಲೇವಿಯರನ್ನು ವ್ಯವಸ್ಥಾಪಿಸಿದನು. ಈ ಮನುಷ್ಯರು ಯೆಹೂದದ ಪಟ್ಟಣಗಳಲ್ಲೆಲ್ಲಾ ಪ್ರಯಾಣಿಸುತ್ತಾ ನಿವಾಸಿಗಳಿಗೆ ಯೆಹೋವನ ನಿಯಮಗಳನ್ನು ಕಲಿಸಿದರು. ಈ ನಿಯಮಗಳನ್ನು ಬಹಿರಂಗವಾಗಿ ಚರ್ಚಿಸುವಂತೆ ಮಾಡಿದುದರಿಂದ, ಈ ರಾಜನು ಸತ್ಯ ಆರಾಧನೆಗಾಗಿ ತನ್ನ ಸಾಹಸವನ್ನು ತೋರಿಸಿದನು. ಆತನ ಪ್ರಜೆಗಳಾದರೋ, ಕಿವಿಗೊಟ್ಟು ಕಲಿಯಬೇಕಾಗಿತ್ತು.—2 ಪೂರ್ವಕಾಲವೃತ್ತಾಂತ 17:1-6, 9.
ಚರ್ಚೆಯ ಮೂಲಕ ಸಾಕ್ಷಿಯನ್ನು ಕೊಡುವುದು
ತನ್ನ ವದನಕನೋಪಾದಿ ಸೇವೆ ಸಲ್ಲಿಸಲು, ದೇವರು ತನ್ನ ಸ್ವಂತ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸಿದನು. (ಯೋಹಾನ 1:14) ಯೇಸು ತಮ್ಮ ಮುಂದೆ ಪ್ರಕಾಶರೂಪಭರಿತನಾದದ್ದನ್ನು ಮೂವರು ಶಿಷ್ಯರು ನೋಡಿದಾಗ, ದೇವರ ಸ್ವಂತ ವಾಣಿಯು ಹೀಗೆ ಘೋಷಿಸುವದನ್ನು ಅವರು ಕೇಳಿದರು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” (ಮತ್ತಾಯ 17:5) ಅವರು ಸಿದ್ಧಮನಸ್ಸಿನಿಂದ ವಿಧೇಯರಾದರು.
ತದ್ರೀತಿಯಲ್ಲಿ, ತನ್ನ ಅಪೊಸ್ತಲರು ದೇವರ ಉದ್ದೇಶಗಳನ್ನು ಇತರರಿಗೆ ಘೋಷಿಸುವಂತೆ ಯೇಸು ನಿರ್ದೇಶಿಸಿದನು. ಆದರೆ ಭೂಮಿಯ ಮೇಲೆ ಸುಮಾರು ಆರು ತಿಂಗಳುಗಳ ಶುಶ್ರೂಷೆಯು ಇನ್ನೂ ಉಳಿದಿದ್ದಾಗ, ಸ್ವರ್ಗದ ರಾಜ್ಯದ ಸಾರುವಿಕೆಯ ಕೆಲಸವು ಎಷ್ಟು ವಿಸ್ತಾರವಾಗಿತ್ತೆಂದರೆ, ಹೆಚ್ಚು ಮಂದಿ ಶಿಷ್ಯರ ಆವಶ್ಯಕತೆಯಿರುವದೆಂದು ಯೇಸು ತಿಳಿಯಪಡಿಸಿದನು. ಅವರಲ್ಲಿ 70 ಮಂದಿಗೆ ಆತನು, ಅಪರಿಚಿತರೊಂದಿಗೆ ದೇವರ ರಾಜ್ಯವನ್ನು ಹೇಗೆ ಚರ್ಚಿಸಬೇಕೆಂದು ಕಲಿಸಿದನು ಮತ್ತು ಬಳಿಕ ಆ ಸಂದೇಶವನ್ನು ಬಹಿರಂಗವಾಗಿ ಹರಡಿಸಲು ಕಳುಹಿಸಿದನು. (ಲೂಕ 10:1, 2, 9) ಸ್ವರ್ಗದಲ್ಲಿದ್ದ ತನ್ನ ತಂದೆಗೆ ಹಿಂದಿರುಗಿ ಹೋಗುವ ಸ್ವಲ್ಪ ಸಮಯದ ಮುಂಚೆ, ಈ ಸಂದೇಶದ ಕುರಿತಾಗಿ ಇತರರೊಂದಿಗೆ ಮಾತಾಡಲು ಅವರು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಿದನು. ಅವನು ಅವರಿಗೆ ಹೀಗೆಯೂ ಆಜ್ಞಾಪಿಸಿದನು: “ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಲೋಕವ್ಯಾಪಕವಾಗಿ, ಇಂದು ನಿಜ ಕ್ರೈಸ್ತರು ದೇವರ ರಾಜ್ಯದ ಸುವಾರ್ತೆಯನ್ನು ತಮ್ಮ ನೆರೆಹೊರೆಯವರೊಂದಿಗೆ ಚರ್ಚಿಸುವುದರ ಮೂಲಕ ಆ ನೇಮಕವನ್ನು ನೆರವೇರಿಸುತ್ತಿದ್ದಾರೆ. ಈ ಚರ್ಚೆಗಳು, ಸೃಷ್ಟಿಕರ್ತನಾದ ಯೆಹೋವನ ಕುರಿತಾದ ಸತ್ಯಕ್ಕೆ ಸಾಕ್ಷಿಯನ್ನು ಕೊಡಲು ಅವರನ್ನು ಶಕ್ತರನ್ನಾಗಿ ಮಾಡುತ್ತವೆ.—ಮತ್ತಾಯ 24:14.
ಶಾಂತ, ಆತ್ಮೋನ್ನತಿ ಮಾಡುವ ಚರ್ಚೆಗಳು
ಯೇಸುವಿನ ಶಿಷ್ಯರು ಇತರರೊಂದಿಗೆ ತಮ್ಮ ನಂಬಿಕೆಗಳನ್ನು ಯಾವ ರೀತಿಯಲ್ಲಿ ಚರ್ಚಿಸಬೇಕಾಗಿತ್ತು? ಅವರು ವಿರೋಧಿಗಳನ್ನು ರೇಗಿಸಬಾರದಿತ್ತು, ಅಥವಾ ವಿರೋಧಿಗಳೊಂದಿಗೆ ವಾದಿಸಬಾರದಿತ್ತು. ಬದಲಾಗಿ, ಸುವಾರ್ತೆಯನ್ನು ಸಂತೋಷದಿಂದ ಸ್ವೀಕರಿಸುವವರನ್ನು ಅವರು ಹುಡುಕಬೇಕಿತ್ತು ಮತ್ತು ನಂತರ ಅದರ ಬೆಂಬಲದಲ್ಲಿ ಶಾಸ್ತ್ರೀಯ ರುಜುವಾತನ್ನು ಪ್ರಸ್ತುತಪಡಿಸಬೇಕಿತ್ತು. ಯೇಸು ಸಹ ಘೋಷಿಸಿದಂತೆ, ಖಂಡಿತವಾಗಿಯೂ, ತನ್ನ ಮಗನ ಶಿಷ್ಯರೊಂದಿಗೆ ಸಂಪರ್ಕದಲ್ಲಿ ಬಂದಂತಹವರ ಪ್ರತಿಕ್ರಿಯೆಗಳನ್ನು ದೇವರು ಗಮನಿಸಿದನು: “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ.” (ಮತ್ತಾಯ 10:40) ಯೇಸುವಿನ ಸಮಕಾಲೀನರಲ್ಲಿ ಹೆಚ್ಚಿನವರು ಆತನ ಸಂದೇಶವನ್ನು ತಿರಸ್ಕರಿಸಿದಾಗ ಅದು ಎಂತಹ ಒಂದು ತಿರಸ್ಕಾರವಾಗಿತ್ತು!
“ಕರ್ತನ ದಾಸನು ಜಗಳ” ವಾಡುವ ಅಗತ್ಯವಿಲ್ಲವೆಂದು ಕ್ರೈಸ್ತ ಅಪೊಸ್ತಲ ಪೌಲನು ಬುದ್ಧಿವಾದ ಹೇಳಿದೇನು. ಬದಲಾಗಿ ಆತನು “ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.” (2 ತಿಮೊಥೆಯ 2:24, 25) ಗ್ರೀಸಿನ ಅಥೇನೆಯ ಜನರಿಗೆ ಪೌಲನು ಸುವಾರ್ತೆಯನ್ನು ಘೋಷಿಸಿದ ರೀತಿಯು ಒಂದು ಉತ್ತಮ ಉದಾಹರಣೆಯನ್ನು ಒದಗಿಸುತ್ತದೆ. ಆತನು ಯೆಹೂದ್ಯರೊಂದಿಗೆ ಅವರ ಸಭಾಮಂದಿರದಲ್ಲಿ ತರ್ಕಿಸಿದನು. ಪ್ರತಿದಿನ ಪೇಟೆಯಲ್ಲಿ “ಕಂಡುಬಂದವರ ಸಂಗಡಲೂ” ಆತನು ಮಾತಾಡಿದನು. ನಿಸ್ಸಂಶಯವಾಗಿ ಕೇವಲ ಹೊಸ ಆಲೋಚನೆಗಳಿಗೆ ಕಿವಿಗೊಡುವದನ್ನು ಕೆಲವರು ಇಷ್ಟಪಟ್ಟರೂ, ಪೌಲನು ನೇರವಾಗಿ ಮತ್ತು ದಯಾಪೂರ್ವಕವಾಗಿ ಮಾತಾಡಿದನು. ಅವರು ಪಶ್ಚಾತ್ತಾಪಪಡುವಂತೆ ಅವರನ್ನು ಪ್ರಬೋಧಿಸಿದ ದೇವರ ಸಂದೇಶವನ್ನು ಆತನು ಕೇಳುಗರೊಂದಿಗೆ ಚರ್ಚಿಸಿದನು. ಅವರ ಪ್ರತಿಕ್ರಿಯೆಯು ಇಂದಿನ ಜನರ ಪ್ರತಿಕ್ರಿಯೆಯಂತೆಯೇ ಇತ್ತು. “ಕೆಲವರು ಅಪಹಾಸ್ಯಮಾಡಿದರು; ಬೇರೆ ಕೆಲವರು—ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.” ಪೌಲನು ಚರ್ಚೆಯನ್ನು ಲಂಬಿಸಲು ಪಟ್ಟುಹಿಡಿಯಲಿಲ್ಲ. ಅವನ ಸಂದೇಶವನ್ನು ಪ್ರಚಾರ ಮಾಡಿರಲಾಗಿ, ಅವನು “ಅವರ ಮಧ್ಯದಿಂದ ಹೊರಟುಹೋದನು.”—ಅ. ಕೃತ್ಯಗಳು 17:16-34.
ಅನಂತರ, ಪೌಲನು ಎಫೆಸದಲ್ಲಿದ್ದ ಕ್ರೈಸ್ತ ಸಭೆಯ ಸದಸ್ಯರಿಗೆ, ತಾನು ‘ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಯಿಂದ ಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯಲಿಲ್ಲವೆಂದು’ ಹೇಳಿದನು. ಇನ್ನೂ ಹೆಚ್ಚಾಗಿ, ಆತನು ‘ಯೆಹೂದ್ಯರಿಗೂ ಗ್ರೀಕರಿಗೂ ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ಪೂರ್ಣವಾಗಿ ಚರ್ಚಿಸಿದ್ದನು.’—ಅ. ಕೃತ್ಯಗಳು 20:20, 21.
ಬೈಬಲ್ ಸಮಯಗಳಲ್ಲಿ ದೇವರ ನಂಬಿಗಸ್ತ ಸೇವಕರು ಧರ್ಮವನ್ನು ಹೇಗೆ ಚರ್ಚಿಸಿದರೆಂದು ಈ ಶಾಸ್ತ್ರೀಯ ಉದಾಹರಣೆಗಳು ಪ್ರಕಟಿಸುತ್ತವೆ. ಅಂತೆಯೇ ಇಂದು, ಯೆಹೋವನ ಸಾಕ್ಷಿಗಳು ತಮ್ಮ ನೆರೆಹೊರೆಯವರೊಂದಿಗೆ ವಿಧೇಯತೆಯಿಂದ ಧರ್ಮದ ಕುರಿತಾಗಿ ಚರ್ಚಿಸುತ್ತಾರೆ.
ಫಲಪ್ರದವಾಗಿರುವ ಚರ್ಚೆಗಳು
‘ದೇವರ ವಾಕ್ಯವನ್ನು ಕೇಳಿರಿ.’ ‘ಆತನ ಆಜೆಗ್ಞಳಿಗೆ ಕಿವಿಗೊಡಿರಿ.’ ಬೈಬಲಿನಲ್ಲಿ ಅಂತಹ ಪ್ರಬೋಧನೆಗಳು ಎಷ್ಟೊಂದು ಬಾರಿ ತೋರಿಬರುತ್ತವೆ! ಇನ್ನೊಂದು ಸಲ ಯೆಹೋವನ ಸಾಕ್ಷಿಗಳು ನಿಮ್ಮೊಂದಿಗೆ ಮಾತಾಡುವಾಗ ನೀವು ಈ ಬೈಬಲ್ ಸಂಬಂಧಿತ ನಿರ್ದೇಶನೆಗಳಿಗೆ ಪ್ರತಿಕ್ರಿಯಿಸಬಲ್ಲಿರಿ. ಈ ಸಂದೇಶವು ರಾಜಕೀಯವಾದದ್ದಲ್ಲ ಬದಲಾಗಿ ದೇವರಿಂದ ಒಂದು ಸ್ವರ್ಗೀಯ ಸರಕಾರ, ಅಂದರೆ ಆತನ ರಾಜ್ಯವನ್ನು ಸಮರ್ಥಿಸುತ್ತದೆ. ಸದ್ಯದ ದಿನದ ಕಲಹಗಳನ್ನು ತೆಗೆಯುವ ದೇವರ ಮಾಧ್ಯಮ ಇದಾಗಿದೆ. (ದಾನಿಯೇಲ 2:44) ತದನಂತರ ಸ್ವರ್ಗದಿಂದ ದೇವರ ಈ ಆಳಿಕ್ವೆಯು, ಇಡೀ ಭೂಮಿ ಏದೆನ್ ತೋಟದಂತೆ ಒಂದು ಪ್ರಮೋದವನವಾಗಿ ಪರಿವರ್ತಿಸಲ್ಪಡುವಂತೆ ಏರ್ಪಡಿಸುವುದು.
ಮಾಜಿ ಪೊಲೀಸ್ ಪತ್ತೇದಾರನೊಬ್ಬನು, ಯೆಹೋವನ ಸಾಕ್ಷಿಗಳು ಆತನೊಂದಿಗೆ ಬೈಬಲಿನ ಕುರಿತಾಗಿ ಮಾತಾಡಿದಾಗಲೆಲ್ಲಾ ಕಿವಿಗೊಡಲು ಪದೇ ಪದೇ ನಿರಾಕರಿಸಿದನು. ಆದರೆ ತಾನು ಎದುರಿಸಬೇಕಾಗಿದ್ದಂತಹ ಪಾತಕದಲ್ಲಿನ ವೃದ್ಧಿಯಿಂದ ಆತನು ಜೀವಿತದೊಂದಿಗೆ ಜುಗುಪ್ಸೆಗೊಂಡಿದ್ದನು. ಆದುದರಿಂದ ಮುಂದಿನ ಸಲ ಭೇಟಿ ಕೊಟ್ಟ ಸಾಕ್ಷಿಗೆ, ತಾನು ಬೈಬಲಿನ ಸಂದೇಶವನ್ನು ಪರೀಕ್ಷಿಸಲು ಬಯಸುವೆನೆಂದು ಹೇಳಿದನು. ಕ್ರಮವಾದ ಚರ್ಚೆಗಳು ಪರಿಣಮಿಸಿದವು. ಆ ಪೊಲೀಸ್ ವ್ಯಕ್ತಿ ಹಲವಾರು ಸಲ ತನ್ನ ಮನೆಯನ್ನು ಬದಲಾಯಿಸಿದರೂ, ಚರ್ಚೆಗಳನ್ನು ಮುಂದುವರಿಸಲಿಕ್ಕಾಗಿ ಸಾಕ್ಷಿಗಳು ಆತನ ಹೊಸ ನಿವೇಶನವನ್ನು ಸಂತೋಷದಿಂದ ಹುಡುಕಿ ತೆಗೆಯುತ್ತಿದ್ದರು. ಕೊನೆಗೆ ಆ ಅಧಿಕಾರಿಯು ಒಪ್ಪಿಕೊಂಡದ್ದು: “ನಾನು ಹುಡುಕುತ್ತಿದ್ದ ಪುರಾವೆಯು ಪವಿತ್ರ ಶಾಸ್ತ್ರವಚನಗಳಲ್ಲಿಯೇ ಇತ್ತು. ನನ್ನೊಂದಿಗೆ ಮಾತಾಡುವದರಲ್ಲಿ ಆ ಸಾಕ್ಷಿಗಳು ಪಟ್ಟುಹಿಡಿಯದಿರುತ್ತಿದ್ದರೆ, ಜೀವನದ ಅರ್ಥವೇನೆಂದು ಆಲೋಚಿಸುತ್ತಾ ನಾನು ಇನ್ನೂ ಲೋಕದಲ್ಲಿ ಇರುತ್ತಿದ್ದೆ. ನಿಜಾಂಶವೇನಂದರೆ, ನಾನು ಸತ್ಯವನ್ನು ಕಲಿತಿದ್ದೇನೆ, ಮತ್ತು ನನ್ನ ಜೀವನದ ಉಳಿದ ಭಾಗವನ್ನು ನಾನು, ನನ್ನಂತೆಯೇ ದೇವರಿಗಾಗಿ ಅನ್ವೇಷಿಸುತ್ತಿರುವವರಿಗಾಗಿ ಹುಡುಕುವದರಲ್ಲಿ ಕಳೆಯುವೆನು.”
ಆಸಕ್ತ ಕೇಳುಗರು ಯಥಾರ್ಥವಾಗಿ ಹೆಚ್ಚನ್ನು ತಿಳಿಯಲು ಬಯಸುತ್ತಾರೆ. ಪ್ರಸ್ತುತಪಡಿಸಲ್ಪಟ್ಟ ನಂಬಿಕೆಗಳಿಗಾಗಿ ಅವರು ತಕ್ಕದ್ದಾಗಿಯೇ ಕಾರಣಗಳನ್ನು ನಿರೀಕ್ಷಿಸುತ್ತಾರೆ. (1 ಪೇತ್ರ 3:15) ಒಬ್ಬ ಎಳೆಯ ಮಗು ಹೇಗೆ ತನ್ನ ಹೆತ್ತವರಿಗೆ ಯಾವಾಗಲೂ ಪ್ರಶ್ನೆಗಳನ್ನು ಕೇಳುತ್ತಾ ಅವರು ಪ್ರತಿಕ್ರಿಯಿಸುವಂತೆ ನಿರೀಕ್ಷಿಸುತ್ತದೋ, ಹಾಗೆಯೇ ಸಾಕ್ಷಿಗಳು ನಿಮಗೆ ದೃಢವಾದ ಉತ್ತರಗಳನ್ನು ಕೊಡಲು ನೀವು ತಕ್ಕದಾಗಿಯೇ ನಿರೀಕ್ಷಿಸುತ್ತೀರಿ. ಅವರು ಸಂತೋಷದಿಂದ ಹಿಂದಿರುಗಿ ನಿಮ್ಮೊಂದಿಗೆ ಬೈಬಲಿನ ಸಂದೇಶವನ್ನು ಇನ್ನೂ ಹೆಚ್ಚಾಗಿ ಚರ್ಚಿಸುವರು ಎಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಬಲ್ಲಿರಿ.
ಪ್ರಾಯಶಃ ನಿಮಗೆ ಈಗಾಗಲೇ ಬೈಬಲಿನ ಕುರಿತಾಗಿ ಸ್ವಲ್ಪ ತಿಳಿದಿದೆ. ದೇವರು ನಿಮ್ಮಿಂದ ಏನು ಅಪೇಕ್ಷಿಸುತ್ತಾನೋ ಅದು ನೀವು ಜೀವಿಸುವ ವಿಧದಲ್ಲಿ ಕೆಲವು ಬದಲಾವಣೆಗಳನ್ನು ಅವಶ್ಯಪಡಿಸುವುದೆಂದು ನೀವು ಗ್ರಹಿಸುತ್ತೀರಿ. ದೇವರ ಆವಶ್ಯಕತೆಗಳು ತುಂಬಾ ತ್ಯಾಗವನ್ನು ಕೇಳಿಕೊಳ್ಳುತ್ತವೆಂಬ ಭಯದ ಕಾರಣದಿಂದಾಗಿ ವಿಷಯಗಳನ್ನು ಬೆನ್ನಟಲ್ಟು ಹಿಂಜರಿಯದಿರ್ರಿ. ಅವು ನಿಜ ಸಂತೋಷವನ್ನು ಮಾತ್ರ ತರುವವು. ಹೆಜ್ಜೆಹೆಜ್ಜೆಯಾಗಿ ಪ್ರಗತಿಮಾಡುವಾಗ ನೀವಿದನ್ನು ಗಣ್ಯಮಾಡುವಿರಿ.
ಮೊಟ್ಟಮೊದಲಾಗಿ, ಯೆಹೋವನು ಯಾರು, ಆತನು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ, ಮತ್ತು ಆತನು ಏನನ್ನು ನೀಡುತ್ತಾನೆಂಬದನ್ನು ಪರಿಗಣಿಸಿರಿ. ಬೈಬಲು ಇದರ ಕುರಿತಾಗಿ ಏನು ಹೇಳುತ್ತದೆಂದು ತೋರಿಸಲು ಸಾಕ್ಷಿಗಳನ್ನು ಕೇಳಿರಿ. ಅವರೇನನ್ನು ಹೇಳುತ್ತಾರೋ ಅದನ್ನು ನಿಮ್ಮ ಸ್ವಂತ ಬೈಬಲಿನ ಪ್ರತಿಯಲ್ಲಿ ತಾಳೆ ನೋಡಿರಿ. ಧರ್ಮದ ಕುರಿತಾದ ಸತ್ಯವನ್ನಾಗಿ ಅವರೇನನ್ನು ಪ್ರಸ್ತುತಪಡಿಸುತ್ತಾರೋ ಅದರಲ್ಲಿ ಸಾಕ್ಷಿಗಳು ವಿವೇಚನೆಯುಳ್ಳವರಾಗಿದ್ದಾರೆಂದು ಕಲಿತಾಗ, ಅವರು ಶಾಸ್ತ್ರವಚನಗಳಿಂದ ನಿಮ್ಮೊಂದಿಗೆ ಹಂಚಿಕೊಳ್ಳಬಹುದಾದ ಇನ್ನೂ ಹೆಚ್ಚು ಒಳ್ಳೆಯ ವಿಷಯಗಳನ್ನು ನೀವು ಪರಿಶೋಧಿಸಲು ಬಯಸುವಿರಿ ಎಂಬದು ನಿಸ್ಸಂಶಯ.—ಜ್ಞಾನೋಕ್ತಿ 27:17.
ಅವರ ಸ್ಥಳೀಯ ಕೂಟದ ಸ್ಥಳವಾಗಿರುವ, ರಾಜ್ಯ ಸಭಾಗೃಹದಲ್ಲಿ ಸಾಕ್ಷಿಗಳನ್ನು ಗಮನಿಸಲು ನಿಮಗೆ ಸ್ವಾಗತವಿದೆ. ದೇವರ ವಾಕ್ಯದ ಪ್ರಯೋಜನಕಾರಿ ಚರ್ಚೆಗಳನ್ನು ನೀವು ಅಲ್ಲಿ ಕೇಳುವಿರಿ. ಉಪಸ್ಥಿತರಿರುವವರು ಒಬ್ಬರು ಇನ್ನೊಬ್ಬರೊಂದಿಗೆ ದೇವರ ಉದ್ದೇಶಗಳ ಕುರಿತಾಗಿ ಮಾತಾಡುವದರಲ್ಲಿ ಹೇಗೆ ಆನಂದಿಸುತ್ತಾರೆಂದು ನೀವು ನೋಡುವಿರಿ. ಇಂದು ನಮಗಾಗಿರುವ ದೇವರ ಚಿತ್ತದ ಕುರಿತಾದ ಸತ್ಯವನ್ನು ಕಲಿಯಲು ನಿಮಗೆ ಸಹಾಯ ಮಾಡುವಂತೆ ಈ ಸಾಕ್ಷಿಗಳನ್ನು ಅನುಮತಿಸಿರಿ. ಸತ್ಯ ಆರಾಧನೆಯನ್ನು ಚರ್ಚಿಸಲು ಮತ್ತು ಆತನ ಮೆಚ್ಚಿಕೆಯ ಮುಗುಳುನಗೆಯನ್ನು ಹಾಗೂ ಪ್ರಮೋದವನದಲ್ಲಿ ನಿತ್ಯಜೀವವನ್ನು ಪಡೆಯಲು ಕೊಡಲ್ಪಡುವ ದೇವರ ಆಮಂತ್ರಣಕ್ಕೆ ಪ್ರತಿಕ್ರಿಯಿಸಿರಿ.—ಮಲಾಕಿಯ 3:16; ಯೋಹಾನ 17:3.
[ಪುಟ 5 ರಲ್ಲಿರುವ ಚಿತ್ರ]
ನೋಹನು ಬಹಿರಂಗವಾಗಿ ದೇವರ ಉದ್ದೇಶದ ಕುರಿತಾಗಿ ಮಾತಾಡಿದನು
[ಪುಟ 7 ರಲ್ಲಿರುವ ಚಿತ್ರಗಳು]
ಪ್ರಾಚೀನ ಅಥೇನೆಯಲ್ಲಿ ಪೌಲನು ಮಾಡಿದಂತೆ, ಯೆಹೋವನ ಸಾಕ್ಷಿಗಳು ಇತರರಿಗೆ ಬೈಬಲ್ ಸತ್ಯಗಳನ್ನು ಕಲಿಸುತ್ತಾರೆ