ನಮಗೆ ನಿವೃತ್ತಿ ಇಲ್ಲ!
ಜಪಾನಿನ ಟೋಕಿಯೊದಲ್ಲಿ ಒಂದು ಅಸಾಮಾನ್ಯ ಗೃಹವನ್ನು ನೀವು ಸಂದರ್ಶಿಸುವಾಗ, “ನಮಗೆ ನಿವೃತ್ತಿ ಇಲ್ಲ” ಎಂಬ ಅನಿಸಿಕೆಯನ್ನು ನೀವು ಪಡೆಯುತ್ತೀರಿ. ಸರಾಸರಿ 70ರ ವಯಸ್ಸಿನ 22 ಮಂದಿ ಪುರುಷರ ಮತ್ತು ಸ್ತ್ರೀಯರ ಕುಟುಂಬವು ಅಲ್ಲಿ ವಾಸಿಸುತ್ತದೆ. ಅವರು ರಕ್ತ ಸಂಬಂಧದಿಂದಲ್ಲ ಬದಲಾಗಿ ಒಂದು ಸಾಮಾನ್ಯ ಆಸಕ್ತಿಯಾದ—ಮಿಷನೆರಿ ಸೇವೆಯಿಂದ ಬಂಧಿತರು. ಅವರು ಒಟ್ಟು 1,026 ವರ್ಷಗಳ ಪೂರ್ಣ ಸಮಯದ ಸಾರುವ ಕೆಲಸದಲ್ಲಿ ಬಿಡದೆ ಮುಂದುವರಿದಿದ್ದಾರೆ! ಅತಿ ಪ್ರಾಯಸ್ಥ ಸದಸ್ಯರಲ್ಲಿ ಮೂವರು 1910 ರಲ್ಲಿ ಜನಿಸಿದರು. ಅವರಲ್ಲಿ ಏಳು ಮಂದಿ ತಮ್ಮ ಪೂರ್ಣ ಸಮಯದ ಸೇವೆಯನ್ನು ಹದಿಹರೆಯದಲ್ಲಿದ್ದಾಗ ಆರಂಭಿಸಿದರು. ಜಪಾನಿನಲ್ಲಿ II ನೆಯ ಲೋಕ ಯುದ್ಧದ ಬಳಿಕ ಕಾರ್ಯ ಪ್ರಾರಂಭಿಸಿದಂದಿನಿಂದ, ರಾಜ್ಯ ಸಾರುವಿಕೆಯ ಕೆಲಸದ ಬೆಳವಣಿಗೆಯನ್ನು ಅವರಲ್ಲಿ ಒಂಬತ್ತು ಮಂದಿ ಕಂಡಿದ್ದಾರೆ.—ಯೆಶಾಯ 60:22.
ಆದರೂ, ಈ ಆರು ಮಹಡಿಗಳ ಮುಂಚಿನ ವಾಚ್ ಟವರ್ ಬ್ರಾಂಚ್ ಕಟ್ಟಡವು, ವಿಶೇಷವಾಗಿ ಅಲ್ಲಿ ವಾಸಿಸುತ್ತಿರುವ ಮಿಷನೆರಿಗಳ ಹುಮ್ಮಸ್ಸು, ಎದ್ದುಕಾಣುವ ಒಲವಿನ ಕಾರಣ ಒಂದು ಉತ್ತೇಜನದ ಸ್ಥಳವಾಗಿದೆ. ಮುದಿ ಪ್ರಾಯ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದ ಶಾರೀರಿಕ ಸೀಮಿತಗಳು ಅವರಲ್ಲಿ ಹೆಚ್ಚಿನವರಿಗೆ ಇರುವುದಾದರೂ, ಈ ಆತ್ಮಿಕ ಯೋಧರಲ್ಲಿ ಯಾರೂ ಬಿಟ್ಟುಕೊಡಲು ಸಿದ್ಧರಿಲ್ಲ. ಅವರಿಗಾಗಿ ಜಪಾನಿ ಸಾಕ್ಷಿಗಳು ಕಟ್ಟಡವನ್ನು ಪೂರ್ಣವಾಗಿ ಹೊಸದುಮಾಡಿ, ತಳಮನೆಯಲ್ಲಿ ಒಂದು ರಾಜ್ಯ ಸಭಾಗೃಹ ಮತ್ತು ಪ್ರಯಾಣಿಕ ಮೇಲೆತ್ತಿಗೆ (ಎಲಿವೇಟರ್) ಯನ್ನು ಒದಗಿಸಿದ್ದಾರೆ.
ಅವರನ್ನು ಸಂತೋಷಗೊಳಿಸುವ ವಿಷಯ
ಅಷ್ಟು ಹೆಚ್ಚು ವರ್ಷಗಳಿಂದ ತಮ್ಮ ನೇಮಕದಲ್ಲಿರುವ ಈ ಮಿಷನೆರಿಗಳು ಇದೇ ತಮ್ಮ ಮನೆ ಎಂದು ಭಾವಿಸುತ್ತಾರೆ. “ಕಳೆದ ಬೇಸಿಗೆಯಲ್ಲಿ ಜಿಲ್ಲಾ ಅಧಿವೇಶನಕ್ಕಾಗಿ ನಾನು ಆಸ್ಟ್ರೇಲಿಯಕ್ಕೆ ಹಿಂದಿರುಗಿದಾಗ, ಎರಡು ವಾರಗಳ ಬಳಿಕವೆ ನಾನು ಹಿಂದೆ ಜಪಾನಿಗೆ ಬರಲು ಸಿದ್ಧಳಾಗಿದ್ದೆ!” ಎಂದರು ಕುಟುಂಬದ ಅತಿ ವೃದ್ಧ ಸದಸ್ಯರಲ್ಲಿ ಒಬ್ಬಾಕೆ. ತಾವು ಸೇವೆಗೈಯುವ ಜನರನ್ನು ಅವರು ಪ್ರೀತಿಸುತ್ತಾರೆ ಮತ್ತು ಅವರಿಗಾಗಿ ಆಳವಾದ ಮಮತೆಯನ್ನು ಬೆಳೆಸಿಕೊಂಡಿದ್ದಾರೆ. ಗತಕಾಲದ ಚಟುವಟಿಕೆಗಳನ್ನು ನೆನಪಿಸುತ್ತಾ ಬರುವ ಪತ್ರಗಳನ್ನು ಮತ್ತು ಟೆಲಿಫೋನ್ ಕರೆಗಳನ್ನು ಈ ಮಿಷನೆರಿಗಳೆಲ್ಲರು ನೆಚ್ಚುತ್ತಾರೆ.
ಶ್ರದ್ಧಾಯುಕ್ತ ಶುಶ್ರೂಷೆಯ ಫಲಿತಾಂಶವದು. ಯೆಹೋವನೆಡೆಗೆ ಪ್ರೀತಿಯಿಂದ ಪ್ರೇರಿಸಲ್ಪಟ್ಟವರಾಗಿ ಈ ಮಿಷನೆರಿಗಳು ದೇವರ ವಾಕ್ಯವನ್ನು ಹಲವಾರು ಪರಿಸ್ಥಿತಿಗಳ ಕೆಳಗೆ ಜರೂರಿಯಿಂದ ಸಾರಿದ್ದಾರೆ. (ಹೋಲಿಸಿ 2 ತಿಮೊಥೆಯ 4:2.) “ಯೆಹೋವನನ್ನು ಸೇವಿಸುವ ಕಾರಣದಿಂದ ಮಾತ್ರ ನಮ್ಮನ್ನು ಸಂತೋಷವಾಗಿರಿಸಲು ನಾವು ನಮ್ಮನ್ನು ತರಬೇತು ಮಾಡಿಕೊಂಡೆವು” ಎನ್ನುತ್ತಾರೆ ಜಪಾನಿನಲ್ಲಿ 37 ವರ್ಷ ಸೇವೆಮಾಡಿದ ವಿರ ಮಕೇ. “ಬಾಗಿಲಿಗೆ ಯಾರು ಬರದಿದ್ದರೂ, ಯೆಹೋವನ ಕುರಿತು ಸಾಕ್ಷಿಕೊಡಲು ನಾವಲ್ಲಿದ್ದೇವೆ.”
ಈ ಮಿಷನೆರಿಗಳಲ್ಲಿ ಹನ್ನೆರಡು ಮಂದಿ ಎಂದೂ ಮದುವೆಯಾಗಲಿಲ್ಲ, ಆದರೆ ಅಪಕರ್ಷಣೆಯಿಲ್ಲದೆ ಕರ್ತನನ್ನು ಸೇವಿಸಲು ಶಕ್ತರಾದುದಕ್ಕಾಗಿ ಅವರು ಹರ್ಷಿತರು. (1 ಕೊರಿಂಥ 7:35) ಮಿಷನೆರಿಯಾಗಿ 43 ವರ್ಷ ಸೇವೆಮಾಡಿದ ಗ್ಲ್ಯಾಡಿಸ್ ಗ್ರೆಗರಿ ಅವರಲ್ಲೊಬ್ಬರು. ಅವರನ್ನುವುದು: “ಯೆಹೋವನ ಸೇವೆಗಾಗಿ ಅಧಿಕ ಸ್ವಾತಂತ್ರ್ಯವಿರುವಂತೆ, ನಾನು ಪಯನೀಯರ್ ಸೇವೆಗಿಳಿದೆ, ಬಳಿಕ ಗಿಲ್ಯಡ್ [ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್]ಗೆ ಹೋದೆ, ಮತ್ತು ಅನಂತರ ಮಿಷನೆರಿ ಸೇವೆಗೆ. ಮದುವೆಯಾಗೆನು ಎಂಬ ಯಾವ ವ್ರತವನ್ನೂ ಕೈಕೊಳ್ಳದೆ ನಾನು ಅವಿವಾಹಿತಳಾಗಿ ಉಳಿದಿದ್ದೇನೆ, ಮತ್ತು ಹಲವಾರು ಮಿತ್ರರಂತೆ ನಾನೆಂದೂ ಅದಕ್ಕಾಗಿ ವಿಷಾದಪಟ್ಟಿಲ್ಲ.”
ಸರಿಹೊಂದಿಸಿಕೊಳ್ಳುವ ಸಿದ್ಧಮನಸ್ಸು
ಪ್ರಾಯ ಸಂದಂತೆ ಕೆಲವು ಜನರು ಹಟಮಾರಿಗಳಾಗುತ್ತಾರಾದರೂ, ಈ ಮಿಷನೆರಿಗಳು ಹೊಂದಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಲೋಅಸ್ ಡಾಯರ್, ಮಾಲಿ ಹ್ಯಾರನ್, ಮತ್ತು ಲೇನ ಮತ್ತು ಮಾರ್‌ಗ್ರಿಟ್ ವಿಂಟೆಲರ್, ಟೋಕಿಯೊದ ವಾಸದ ಮನೆಗಳಿರುವ ಕ್ಷೇತ್ರದಲ್ಲಿ ಸಣ್ಣದಾದ ಮಿಷನೆರಿ ಗೃಹದಲಿದ್ದರು. ಅಲ್ಲಿ ಅವರು 20 ಕ್ಕಿಂತ ಹೆಚ್ಚು ವರ್ಷ ವಾಸಿಸಿದ್ದು, ಆ ಕ್ಷೇತ್ರದ ಜನರಿಗೆ ಪ್ರಿಯರಾದರು. ಅವರ ಟೆರಿಟೊರಿಗಳಲ್ಲಿ, ವಿಂಟೆಲರ್ ಸೋದರಿಯರಿಗೆ ಪತ್ರಿಕಾ ಪಥದಲ್ಲಿ 40 ಜನರಿದ್ದರು ಮತ್ತು ಮಾಲಿ ಮತ್ತು ಲೋಅಸ್‌ಗೆ 74 ಮಂದಿ. ಆಗ ಸೊಸೈಟಿಯು ಅವರನ್ನು ಟೋಕಿಯೊದ ಮಧ್ಯೆ ಆರು ಮಹಡಿಗಳ ಮಿಷನೆರಿ ಗೃಹಕ್ಕೆ ಸ್ಥಳಾಂತರಿಸುವಂತೆ ಕೇಳಿಕೊಂಡಿತು. “ನಾನು ಮೊದಲು ನಿರಾಶೆಪಟ್ಟೆ ಮತ್ತು ಅಸಂತೋಷಗೊಂಡೆ” ಎಂದು ಅರಿಕೆ ಮಾಡುತ್ತಾರೆ ಲೇನ. ಆದರೂ ಎಂದಿನಂತೆ ಅವರು ತಮ್ಮ ಹೊಸ ನೇಮಕಕ್ಕೆ ಹೊಂದಿಸಿಕೊಂಡರು. ಅವರಿಗೆ ಈಗ ಹೇಗೆನಿಸುತ್ತದೆ? “ಬಹಳ ಸಂತೋಷ” ಎಂದು ಉತ್ತರಿಸುತ್ತಾರೆ ಲೇನ. “ಈಗ ಇಬ್ಬರು ಬೆತೆಲ್ ಸಹೋದರರು ನಮಗಾಗಿ ಅಡಿಗೆ ಮಾಡಲು ಮತ್ತು ಮನೆಯನ್ನು ಶುಚಿ ಮಾಡಲು ಇಲ್ಲಿದ್ದಾರೆ. ನಮ್ಮನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ.” ಅವರೆಲ್ಲರೂ ಲೋಅಸ್ ಹೇಳುವುದನ್ನು ಒಪ್ಪುತ್ತಾರೆ: “ಯೆಹೋವನ ಸಂಸ್ಥೆಯು ನಮಗೆ ಕೊಡುವ ಪ್ರೀತಿಯ ಪರಾಮರಿಕೆಯು, ನಾವು ಬಿಡದೆ ಮುಂದುವರಿಯುವಂತೆ ನಮಗೆ ನೆರವಾಗುತ್ತದೆ.”
ನೋರೀನ್ ತಾಮ್ಸನ್ ಸಹ ಹೊಸ ಪರಿಸ್ಥಿತಿಗಳಿಗೆ ಹೊಂದಿಸಿಕೊಂಡರು. “ಇಡೀ ಜಪಾನ್ ಕೇವಲ ಒಂದು ಜಿಲ್ಲೆಯಾಗಿದ್ದಾಗ ನಾನು ನನ್ನ ಗಂಡನೊಂದಿಗೆ [ಮೂಲತಃ ನ್ಯೂ ಜೀಲೆಂಡ್‌ನವರು] 15 ವರ್ಷ ಜಿಲ್ಲಾ ಸೇವೆಯಲ್ಲಿ ಜತೆಗೂಡುವ ಸುಯೋಗವನ್ನು ಪಡೆದೆ” ಅನ್ನುತ್ತಾರೆ ಅವರು. ಆದರೆ ಅವರ ಗಂಡನ ಆರೋಗ್ಯ ಕೆಟ್ಟಿತು, ಮತ್ತು ಅವರ ಜೀವನದ ಅತಿ ಮಹತ್ತಾದ ಕಷ್ಟವನ್ನು—18 ವರ್ಷಗಳ ಹಿಂದೆ ಗಂಡನ ಮರಣವನ್ನು ಅವರಿಗೆ ತಾಳಿಕೊಳ್ಳಲಿಕ್ಕಿತ್ತು. “ಆ ಸಮಯದಲ್ಲಿ ಮಿಷನೆರಿ ಕಾರ್ಯದಲ್ಲಿ ಮುಂದುವರಿಯಲು ನನ್ನನ್ನು ಶಕ್ತಳನ್ನಾಗಿ ಮಾಡಿದ್ದು ಇಡೀ ಜಪಾನಿನ ಸಹೋದರರಿಂದ ತೋರಿಸಲ್ಪಟ್ಟ ಪ್ರೀತಿ, ಅದರೊಂದಿಗೆ ಪ್ರಾರ್ಥನೆ ಮತ್ತು ಸೇವೆಯಲ್ಲಿ ತತ್ಪರತೆಯೇ” ಎಂದನ್ನುತ್ತಾರೆ ಅವರು.
ಆರೋಗ್ಯ ಸಮಸ್ಯೆಗಳ ಕೆಳಗೆ ತಾಳಿಕೊಳ್ಳುವುದು
“ಹೆಚ್ಚಿನವರಿಗೆ ಒಂದಲ್ಲ ಒಂದು ವಿಧದ ಆರೋಗ್ಯ ಸಮಸ್ಯೆಯಿದೆ, ಆದರೆ ಅವರು ಹರ್ಷಚಿತ್ತರಾಗಿದ್ದಾರೆ, ಮತ್ತು ಸೇವೆಮಾಡಲು ಅವರಿಗಿರುವ ಅಪೇಕ್ಷೆಯು ಎದ್ದುಕಾಣುವ ಗುಣ” ಎನ್ನುತ್ತಾರೆ ಮಿಷನೆರಿ ಗೃಹದ ಮೇಲ್ವಿಚಾರಕರಾದ ಆಲ್ಬರ್ಟ್ ಪಾಸ್ಟರ್. ಮಿಷನೆರಿಗಳನ್ನು ನೋಡಿಕೊಳ್ಳಲು ಒಬ್ಬ ಡಾಕ್ಟರ್ ಮತ್ತು ದಾದಿಯಾಗಿರುವ ಅವರ ಪತ್ನಿ ಮನೆಯಲ್ಲಿ ನೇಮಿಸಲ್ಪಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ಒಂದು ದಿನ, ಗಿಲ್ಯಡ್ ಶಾಲೆಯ 11 ನೆಯ ತರಗತಿಯ ಪದವೀಧರೆ, ಎಲ್ಸಿ ಟಾನೀಗಾವ, ಒಮ್ಮೆಲೆ ತನ್ನ ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡರು. ನಾಲ್ಕು ತಿಂಗಳುಗಳ ಬಳಿಕ ಅವರ ಬಲಗಣ್ಣು ಸಹ ಬಾಧಿತವಾಯಿತು. “ಹಿಂದಿನಂತೆ ಸೇವೆಮಾಡಲು ಶಕ್ತಳಾಗದಿರುವುದಕ್ಕೆ ನನಗೆ ಕೆಲವೊಮ್ಮೆ ತುಸು ನಿರಾಶೆಯಾಗುತ್ತದೆ ನಿಜ. ಆದರೆ ಸೊಸೈಟಿಯ ಎಲ್ಲ ದಯೆಯ ಒದಗಿಸುವಿಕೆಗಳಿಂದ ಮತ್ತು ನನ್ನ ಜೊತೆಗಾರ್ತಿ ಮತ್ತು ಇತರರ ಪ್ರೀತಿಯ ಸಹಾಯದಿಂದ ನಾನು ಯೆಹೋವನ ಸೇವೆಯಲ್ಲಿ ಆನಂದವನ್ನು ಕಂಡುಕೊಳ್ಳುತ್ತಾ ಇದ್ದೇನೆ” ಎಂದು ಹೇಳುತ್ತಾರೆ ಎಲ್ಸಿ.
ಎಲ್ಸಿಯ ಗಿಲ್ಯಡ್ ಸಹಪಾಠಿಗಳಾದ ಶೀನೀಚಿ ಟೋಹಾರ ಮತ್ತು ಅವರ ಪತ್ನಿ ಮಾಸಾಕೊ, ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಆರೋಗ್ಯದ ಸಂಬಂಧದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ನುರಿತ ಭಾಷಣಗಾರ ಶೀನೀಚಿಗೆ, ದೃಷ್ಟಿಮಾಂದ್ಯದಿಂದಾಗಿ ತನ್ನ ಟಿಪ್ಪಣಿ ನೋಡಲು ಆಗದಿರುವುದು ಒಂದು ದೊಡ್ಡ ಪಂಥಾಹ್ವಾನ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ದೊಡ್ಡ ಶಸ್ತ್ರಕ್ರಿಯೆಯು ಅವರಿಗಾಗಿದ್ದರೂ, ಈಗ ಅವರು ನೆರವಾಗುತ್ತಿರುವ ಒಬ್ಬ 90 ವಯಸ್ಸಿನ ಬೈಬಲ್ ವಿದ್ಯಾರ್ಥಿಯ ಕುರಿತು ಮಾತಾಡುವಾಗ ಅವರ ಕಣ್ಣುಗಳು ಹೊಳೆಯುತ್ತವೆ.
‘ಶರೀರದಲ್ಲಿ ಶೂಲ ನಾಟಿ’ ದ್ದರೂ ಈ ಮಿಷನೆರಿಗಳು ತಮ್ಮ ನಿರ್ಬಲತೆಗಳನ್ನು ಅಪೊಸ್ತಲ ಪೌಲನಂತೆ ದೃಷ್ಟಿಸುತ್ತಾರೆ, ಅವನಂದದ್ದು: “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:7-10) ಮತ್ತು ಅವರು ಬಲವುಳ್ಳವರಾಗಿದ್ದಾರೆ ಖಂಡಿತ! ಮುಂಜಾನೆ ಆರಾಧನೆಗಾಗಿ ಪ್ರತಿ ದಿನ ಏಳು ಗಂಟೆಗೆ ಅವರು ಉಪಸ್ಥಿತರು. ಉಪಾಹಾರದ ಬಳಿಕ, ಶಾರೀರಿಕವಾಗಿ ಶಕ್ತರಾದವರು ಬೆಳಗ್ಗೆ ಬೇಗ ಕ್ಷೇತ್ರ ಸೇವೆಗಾಗಿ ಹೊರಗೆ ಹೋಗುತ್ತಾರೆ.
ಸೇವೆಗಾಗಿ ಕ್ರಮವಾಗಿ ಹೊರಗೆ ಹೋಗುವವರಲ್ಲಿ ರಿಚರ್ಡ್ ಮತ್ತು ಮರ್ಟ್‌ಲ್ ಶೀರೋಮ ಇಬ್ಬರು. ಮಿದುಳಿನ ಅಪಧಮನಿ ಮಾಂದ್ಯದಿಂದಾಗಿ 1978 ರಲ್ಲಿ ಮರ್ಟ್‌ಲ್‌ಗೆ ಲಕ್ವಾ ಹೊಡೆದಿದೆ, ಅದರೆ ನವಂಬರ 1987ರ ತನಕ ತನ್ನ ಗಂಡನೊಂದಿಗೆ ಸಂಚಾರ ಸೇವೆಯಲ್ಲಿ ಅವರು ಜತೆಗೂಡಿದರು. ಈಗ ಸ್ವತಃ 70ರ ವಯಸ್ಸಿನ ರಿಚರ್ಡ್, ಮರ್ಟ್‌ಲ್‌ಗೆ ಎಲ್ಲವನ್ನು ಮಾಡಲು ನೆರವಾಗುತ್ತಾರೆ. ಅವರು ಬೆಳಿಗ್ಗೆ 5 ಗಂಟೆಗೆ ಎದ್ದು, ಅವರನ್ನು ಮಂಚದಿಂದ ಕೆಳಗಿಳಿಸಿ, ಸ್ನಾನ ಮಾಡಿಸುತ್ತಾರೆ, ಬಟ್ಟೆತೊಡಿಸುತ್ತಾರೆ, ಅಂದಗೊಳಿಸುತ್ತಾರೆ, ಮತ್ತು ಉಣಿಸುತ್ತಾರೆ. ಅನಂತರ ಗಾಲಿಕುರ್ಚಿಯಲ್ಲಿ ಅವರನ್ನು ಪ್ರತಿದಿನ ಬೆಳಗ್ಗೆ ಕ್ಷೇತ್ರ ಸೇವೆಗಾಗಿ ಒಯ್ಯುತ್ತಾರೆ. ಸುಮಾರು ಒಂದು ತಾಸಿನ ತನಕ ಮನೆ ಮನೆಯ ಸೇವೆ ಮಾಡಿ, ಅನಂತರ ಬಸ್ ಸ್ಟ್ಯಾಂಡ್‌ಗಳ ಬಳಿಯಲ್ಲಿ ಜನರಿಗೆ ಸಾಕ್ಷಿಕೊಡುತ್ತಾರೆ. ಮರ್ಟ್‌ಲ್ ಈಗ ಮಾತಾಡಶಕ್ತರಲ್ಲ, ಆದರೆ ಅವರು ಉದ್ಗರಿಸಿದ ಕೊನೆಯ ಪದಗಳು ಡೆಂಡೊ, ಡೆಂಡೊ, ಆಗಿದ್ದವು. ಅವು “ಸಾರುವುದು, ಸಾರುವುದು” ಎಂಬ ಪದಗಳಿಗೆ ಜಪಾನಿ ಶಬ್ದಗಳಾಗಿವೆ.
ಅವರ ಮಗಳಾದ ಸ್ಯಾಂಡ್ರ ಸುಮೀಡ ಅವರಿಗೆ ನೆರವಾಗಲು ಮಿಷನೆರಿ ಗೃಹಕ್ಕೆ ಸ್ಥಳಾಂತರ ಮಾಡಿದ್ದಾಳೆ. ಸ್ಯಾಂಡ್ರ ಇತ್ತೀಚೆಗೆ ತನ್ನ ಪ್ರಿಯ ಗಂಡನನ್ನು ಹೃದಯಾಘಾತದಿಂದ ಕಳೆದುಕೊಂಡಳು. ತನ್ನ ಗಂಡನೊಂದಿಗೆ ಮಿಷನೆರಿಯಾಗಿ ಸೇವೆನಡಿಸಿದ್ದ ಅವಳನ್ನು, ಗ್ವಾಮ್‌ನಿಂದ ಹಿಂದೆ ಜಪಾನಿಗೆ ನೇಮಿಸಿದುದರಲ್ಲಿ ವಾಚ್ ಟವರ್ ಸೊಸೈಟಿಯ ದಯೆಯ ಏರ್ಪಾಡನ್ನು ಅವಳು ಗಣ್ಯಮಾಡುತ್ತಾಳೆ. “ಗ್ವಾಮ್‌ನಲ್ಲಿ ಇದುದ್ದರಿಂದಾಗಿ ನನ್ನ ಹೆತ್ತವರಿಗೆ ಸಹಾಯ ಮಾಡುವುದರಲ್ಲಿ ನನಗೆ ಹೆಚ್ಚಿನ ಪಾಲು ಸಿಗಲಿಲ್ಲವೆಂದು ನನಗೆ ಯಾವಾಗಲೂ ಅನಿಸುತ್ತಿತ್ತು” ಎಂದನ್ನುತ್ತಾಳೆ ಅವಳು. “ನನ್ನ ತಂಗಿ ಜೊಆ್ಯನ್ ಈ ಮನೆಯಲ್ಲಿ ಅವರನ್ನು ಆರೈಕೆ ಮಾಡಿದಳು. ಹೀಗೆ ಸಂದರ್ಭವು ತೆರೆಯಲ್ಪಟ್ಟಾಗ, ನನಗೆ ಹಾಯೆನಿಸಿತು. ಇಲ್ಲಿ ಬೇಕಾಗಿದ್ದೇನೆಂಬ ಅನಿಸಿಕೆಯು, ನನ್ನ ಪತಿಯ ಅನಿರೀಕ್ಷಿತ ಮರಣದಂದಿನಿಂದ ನನಗೆ ಉಪಶಮನದಂತಿದೆ.”
ಇನ್ನೂ ಕೆಲಸಸಾಧಿಸುತ್ತಿರುವ ಒಂದು ಸಂಸ್ಥೆ
ಮಿಷನೆರಿಗಳಿಗೆ ವೃದ್ಧಾಪ್ಯದ ಪರಿಣಾಮಗಳ ಅನುಭವವಾದಾಗ್ಯೂ, ತಮ್ಮ ಮಿಷನೆರಿ ಹುರುಪನ್ನು ಬಿಟ್ಟುಕೊಡಲು ಅವರು ನಿರಾಕರಿಸುತ್ತಾರೆ. (ಕೀರ್ತನೆ 90:10; ರೋಮಾಪುರ 5:12) ಜಪಾನಿಗೆ ಪ್ರಪ್ರಥಮವಾಗಿ ಬಂದ ಗಿಲ್ಯಡ್ ಪದವೀಧರರಲ್ಲಿ ಜೆರಿ ಮತ್ತು ಯೋಶಿ ಟೋಮ ಇಬ್ಬರು, ಇವರಿನ್ನೂ ಶೀಬೂಯ ಪೇಟೆಬೀದಿಯ ವ್ಯಾಪಾರ ಟೆರಿಟೊರಿಗೆ ಹೋಗುತ್ತಾರೆ. “ಇಲ್ಲಿ 1949 ರಲ್ಲಿ ನಿಂತಿದ್ದ ಎರಡು ಮಹಡಿಗಳ ಕಟ್ಟಡಕ್ಕೆ ನಾವು ಬಂದಾಗ, ನಾವು ನೆಲಮಾಳಿಗೆಯಿಂದ ನೆಲಮಾಳಿಗೆಗೆ ಹೋದೆವು. ಈಗ ಟೋಕಿಯೊ ಮುಖ್ಯಪಟ್ಟಣವಾಗಿ ಮಾರ್ಪಟ್ಟಿದೆ. ನಾವು ಮುದುಕರು, ಹಿಂದೆ ಮಾಡಿದಷ್ಟನ್ನು ಮಾಡಲಾರೆವು. ಆದರೆ ಸಾರುವಿಕೆಯಿಂದ ಹಿಂದೆ ಬರುವಾಗ, ನಾವೆಷ್ಟೋ ಉಲ್ಲಾಸಿತರು” ಎನ್ನುತ್ತಾರೆ ಯೋಶಿ.
ಲಿಲ್ಯನ್ ಸ್ಯಾಮ್ಸ್‌ನ್ 40 ವರ್ಷಗಳಿಂದ ಜಪಾನಿನಲ್ಲಿ ಮಿಷನೆರಿಯಾಗಿದ್ದು ತಮ್ಮ ಶುಶ್ರೂಷೆಯಲ್ಲಿ ಬಹಳವಾಗಿ ಆನಂದಿಸುತ್ತಾರೆ. “ತನ್ನ ಅಸ್ವಸ್ಥ ತಾಯಿಯ ಆರೈಕೆ ಮಾಡಲು ಹವಾಯಿಗೆ ಹಿಂದಿರುಗಿದ, ನನ್ನ ಮಿಷನೆರಿ ಜೊತೆಗಾರ್ತಿ ಆ್ಯಡಲೈನ್ ನಾಕೊ ಅಭ್ಯಸಿಸುತ್ತಿದ್ದ 80ರ ವಯಸ್ಸಿನ ಒಬ್ಬ ಹೆಂಗಸಿಗೆ ನಾನೀಗ ನೆರವಾಗುತ್ತಿದ್ದೇನೆ. ಪೂರ್ವಜರ ಪೂಜೆಯ ಸಮಸ್ಯೆಯನ್ನು ಪರಿಹರಿಸಿಕೊಂಡ ಬಳಿಕ ಆ ಹೆಂಗಸು ಇತ್ತೀಚೆಗೆ ರಾಜ್ಯ ಪ್ರಚಾರಕಳಾದಳು. ದೇವಸ್ಥಾನಕ್ಕೆ ಹೋಗಿ ಪುರೋಹಿತನ ಹೆಂಡತಿಗೆ, ‘ನಾನು ಕ್ರೈಸ್ತತ್ವಕ್ಕೆ ಪರಿವರ್ತಿತಳಾದೆ!’ ಎಂದಳವಳು.” ಅವರ ಜೀವನದಲ್ಲಿ ಅಂಥ ಸಂತಸಗಳಿರಲಾಗಿ, 19 ನೆಯ ವಯಸ್ಸಿನಲ್ಲಿ ತಮ್ಮ ಐಹಿಕ ಉದ್ಯೋಗವನ್ನು ಬಿಟ್ಟು ಪಯನೀಯರ್ ಸೇವೆ ಆರಂಭಿಸಿದ ದಿನಕ್ಕಾಗಿ ಲಿಲ್ಯನ್ ಎಂದೂ ವಿಷಾದಪಟ್ಟಿಲ್ಲ.
ನಾಲ್ವತೈದು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಮಿಷನೆರಿ ಜೊತೆಗಾರ್ತಿಯರಾದ ರೂತ್ ಅಲ್‌ರಿಕ್ ಮತ್ತು ಮಾರ್ಥ ಹೆಸ್ ಈ ಮಿಷನೆರಿ ಗೃಹದಿಂದ 35 ವರ್ಷಗಳಿಂದ ಕೆಲಸಮಾಡಿದ್ದಾರೆ. ಅವರು ಟೆರಿಟೊರಿಯಲ್ಲಿ ತಮ್ಮನ್ನು ಚೆನ್ನಾಗಿ ಸ್ಥಾಪಿಸಿಕೊಂಡಿದ್ದಾರೆ. ಒಮ್ಮೆ ಒಬ್ಬ ಸರ್ಕಿಟ್ ಮೇಲ್ವಿಚಾರಕರು ಮಾರ್ಥಳನ್ನು ಕೇಳಿದ್ದು: “ಮನೆ ಮನೆಯ ಸೇವೆಗಾಗಿ ನಾನು ನಿನ್ನ ಮುಖವನ್ನು ಎರವು ತೆಗೆದುಕೊಳ್ಳಲೊ?” ಸರ್ಕಿಟ್ ಮೇಲ್ವಿಚಾರಕರು ಸಂಭಾಷಣೆಗಳನ್ನಾರಂಭಿಸಲು ಕಷ್ಟಪಡುತ್ತಿದ್ದಾಗ, ಮರಿಯಳ ಮುಖದ ಪರಿಚಯವಿದ್ದ ಜನರಾದರೂ ಪತ್ರಿಕೆಗಳಿಗಾಗಿ ಮೊದಲೆ ಕೈಚಾಚುತ್ತಿದ್ದರು.
ಆರೋಗ್ಯ ಸಮಸ್ಯೆಗಳಿಂದಾಗಿ ಓದಲಾರದ ಒಬ್ಬ ಸ್ತ್ರೀಯು ರೂತಳ ಪತ್ರಿಕಾ ಪಥದಲ್ಲಿದ್ದಾಳೆ. ಆದರೂ, ಸ್ತ್ರೀಯು ಪತ್ರಿಕೆಗಳನ್ನು ಪಡೆಯುವುದನ್ನು ಮುಂದುವರಿಸಿದ್ದಾಳೆ ಮತ್ತು ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌ನಲ್ಲಿ) ಎಂಬ ಬೌಂಡ್ ಪುಸ್ತಕವನ್ನೂ ಸ್ವೀಕರಿಸಿದಳು. ಸಾಹಿತ್ಯವನ್ನು ಯಾರೂ ಓದುತ್ತಿಲ್ಲವೆಂದು ತೋರಿದರ್ದಿಂದ ಪತ್ರಿಕೆಗಳನ್ನು ನೀಡುವುದನ್ನು ಮುಂದರಿಸಬೇಕೊ ಬೇಡವೊ ಎಂದು ರೂತ್ ಯೋಚಿಸಿದರು. ಬಳಿಕ ಒಂದು ದಿನ ಆ ಹೆಂಗಸಿನ ಪತಿಯು ಅನ್ವೇಷಣೆ ಪುಸ್ತಕದೊಂದಿಗೆ ರೂತಳನ್ನು ಸಮೀಪಿಸಿ ಅಂದದ್ದು: “ಇದು ಆಶ್ಚರ್ಯಕರ ಪುಸ್ತಕ! ನಾನು ಇದನ್ನು ಪೂರಾ ಎರಡು ಸಾರಿ ಓದಿದೆ.” ರೂತ್ ಅವನೊಂದಿಗೆ ಮತ್ತು ಅವನ ಪತ್ನಿಯೊಂದಿಗೆ ಒಂದು ಬೈಬಲಧ್ಯಯನ ಆರಂಭಿಸಿದರು.
ಈ ಮಿಷನೆರಿ ಗೃಹವು ಸ್ವತಃ ಆಸಕ್ತ ಜನರನ್ನು ಆಕರ್ಷಿಸುತ್ತದೆ. ಒಂದು ಸಂಜೆ ಒಬ್ಬ ಯುವಕನು ಮನೆಗೆ ಬಂದು ಹೇಳಿದ್ದು: “ನಾನಿಲ್ಲಿಗೆ ಬಂದಲ್ಲಿ ನನಗೆ ಬೈಬಲನ್ನು ಕಲಿಯಲು ಸಹಾಯ ಸಿಗಬಲ್ಲದೆಂದು ನನಗೆ ತಿಳಿದದೆ.” ಅವನೊಂದಿಗೆ ಒಂದು ಅಧ್ಯಯನವು ಪ್ರಾರಂಭಿಸಲ್ಪಟ್ಟಿತು. ಚೈನೀಸ್ ಹೋಟೆಲೊಂದರಲ್ಲಿ ಅಡಿಗೆಯವನಾದ ಅವನು, ಅನೇಕ ವರ್ಷಗಳಿಂದ ಬಹಿಷ್ಕೃತಳಾಗಿದ್ದ ಒಬ್ಬ ಸ್ತ್ರೀಯೊಂದಿಗೆ ಕೆಲಸ ಮಾಡುತ್ತಿದ್ದನು. ಪ್ರಚಾರಕನೊಬ್ಬನು ಹೋಟೆಲಿಗೆ ಭೇಟಿಮಾಡಿದಾಗ ನೀಡಲ್ಪಟ್ಟ ಪತ್ರಿಕೆಗಳು ಅಡಿಗೆಮನೆಯನ್ನು ಸೇರಿದವು. ಆ ಯುವ ಅಡಿಗೆಯವನಿಗೆ ಅವು ಇಷ್ಟವಾದವು ಮತ್ತು ಆ ಹಿಂದಣ ಸಾಕ್ಷಿಯೊಂದಿಗೆ ಅವನು ಪ್ರಶ್ನೆ ಕೇಳಲಾರಂಭಿಸಿದನು. ಅವನ್ನು ಉತ್ತರಿಸಲಾಗದಿದ್ದ ಆಕೆ ಮಿಷನೆರಿ ಗೃಹವನ್ನು ಸಂದರ್ಶಿಸುವಂತೆ ಅವನಿಗೆ ಹೇಳಿದಳು. ಅವನೀಗ ಶುಶ್ರೂಷಾ ಸೇವಕ ಮತ್ತು ಪಯನೀಯರನಾಗಿ ಸೇವೆಮಾಡುತ್ತಿದ್ದಾನೆ. ಸಕಾಲದಲ್ಲಿ, ಆ ಬಹಿಷ್ಕೃತ ಮಹಿಳೆಯು ಪುನಃಸ್ಥಾಪಿಸಲ್ಪಟ್ಟು, ಕೊನೆಗೆ ಅವಳೂ ಕ್ರಮದ ಪಯನೀಯರಳಾದಳು.
ಯೆಹೋವನು ತಮಗಾಗಿ ಮಾಡಿರುವ ವಿಷಯಗಳಿಗಾಗಿ ಆ ಮನೆಯಲ್ಲಿರುವ ಮಿಷನೆರಿಗಳೆಲ್ಲರು ಕೃತಜ್ಞರು. ಅವರು ಆಸ್ಟ್ರೇಲಿಯ, ಕೆನಡ, ಹವಾಯಿ, ಸ್ವಿಟ್ಸರ್ಲೆಂಡ್, ಮತ್ತು ಅಮೆರಿಕದಿಂದ ಬಂದವರು, ಮತ್ತು 11 ಮಂದಿ ಗಿಲ್ಯಡ್ ಮಿಷನೆರಿ ಶಾಲೆಯ 11 ನೆಯ ತರಗತಿಯವರು ಅಥವಾ ಅದಕ್ಕೆ ಮುಂಚಿನವರು. ಜಪಾನಿನಲ್ಲಿ ರಾಜ್ಯ ಕಾರ್ಯದ ಪ್ರಗತಿಯನ್ನು ಅವರು ನೋಡಿದ್ದಾರೆ ಮತ್ತು ಅರಸ ದಾವೀದನ ಭಾವಾವೇಶದಲ್ಲಿ ಪಾಲಿಗರಾಗುತ್ತಾರೆ, ಅವನಂದದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ. ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತನೆ 37:25) ದೇವರ ಪ್ರೀತಿಯ ಆರೈಕೆಗಾಗಿ ಗಣ್ಯತೆಯಲ್ಲಿ, ಈ ಮಿಷನೆರಿಗಳು ನಿವೃತ್ತರಾಗಲಿಕ್ಕಲ್ಲ, ಬದಲಾಗಿ ಯೆಹೋವನನ್ನು ಸೇವಿಸುತ್ತಾ ಮುಂದರಿಯಲು ದೃಢನಿಶ್ಚಯ ಮಾಡಿದ್ದಾರೆ.