ಸತ್ಯ ದೇವರಿಗೆ ಭಯಪಡುವುದರಿಂದ ಪ್ರಯೋಜನಗಳು
“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು [“ಪ್ರಯೋಜನವಾಗುವುದನ್ನು,” NW] ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
1. ದಿವ್ಯ ಭಯದಿಂದ ಯಾವ ಆಪತ್ತುಗಳನ್ನು ತಪ್ಪಿಸಿಕೊಳ್ಳಸಾಧ್ಯವಿತ್ತು?
ಆದಾಮನು ದಿವ್ಯ ಭಯವನ್ನು ಬೆಳೆಸಿಕೊಂಡಿದ್ದಲ್ಲಿ, ಅದು ಅವನನ್ನು ಅವನ ಸ್ವಂತ ನಿತ್ಯ ಮರಣಕ್ಕೆ ನಡಿಸಿದ ಮತ್ತು ಅವನ ಸಂತತಿಯನ್ನು ಸಾವಿರಾರು ವರ್ಷಗಳ ದುಃಖಕ್ಕೆ ನಡಿಸಿದ ಪಾಪದಿಂದ ನಿರ್ಬಂಧಿಸಸಾಧ್ಯವಿತ್ತು. ಪುರಾತನ ಇಸ್ರಾಯೇಲ್ ಜನಾಂಗವು ಆತನಿಗೆ ಭಯಪಟ್ಟು ತನ್ನನ್ನು ಪ್ರೀತಿಸುವ ಯೆಹೋವನ ಬುದ್ಧಿವಾದಕ್ಕೆ ಕಿವಿಗೊಟ್ಟಿದ್ದರೆ, ಆ ಜನಾಂಗವು ಬಾಬೆಲಿಗೆ ಬಂದಿವಾಸಿಯಾಗಿ ಒಯ್ಯಲ್ಪಡುತ್ತಿರಲಿಲ್ಲ, ಇಲ್ಲವೆ ದೇವರ ಕುಮಾರನನ್ನು ತಿರಸ್ಕರಿಸಿ ಆತನ ರಕ್ತಪಾತಕ್ಕೆ ದೋಷಿಗಳಾಗಿರುತ್ತಿರಲೂ ಇಲ್ಲ. ಇಂದಿನ ಜಗತ್ತು ದೇವರಿಗೆ ಭಯಪಟ್ಟಲ್ಲಿ, ಸರಕಾರದಲ್ಲಿ ಯಾ ವ್ಯಾಪಾರದಲ್ಲಿ ಯಾವ ಭ್ರಷ್ಟಾಚಾರವೂ ಇರುತ್ತಿರಲಿಲ್ಲ, ಯಾವ ಪಾತಕವೂ, ಯಾವ ಯುದ್ಧವೂ ಇರುತ್ತಿರಲಿಲ್ಲ.—ಜ್ಞಾನೋಕ್ತಿ 3:7.
2. ನಮ್ಮ ಸುತ್ತಲೂ ಲೋಕದಲ್ಲಿರುವ ಪರಿಸ್ಥಿತಿಗಳ ಮಧ್ಯೆಯೂ, ನಾವು ಯೆಹೋವನ ಭಯವನ್ನು ಏಕೆ ಬೆಳೆಸಿಕೊಳ್ಳಬೇಕು?
2 ನಮ್ಮ ಸುತ್ತಲಿರುವ ಜಗತ್ತು ಏನನ್ನೇ ಮಾಡಲಿ, ವ್ಯಕ್ತಿಗಳಾಗಿ, ಕುಟುಂಬವಾಗಿರುವ, ಮತ್ತು ಯೆಹೋವನ ಸೇವಕರ ಸಭೆಗಳಾಗಿರುವ ನಾವಾದರೊ ಸತ್ಯ ದೇವರ ಭಯವನ್ನು ಬೆಳೆಸಿಕೊಳ್ಳುವುದರಿಂದ ಪ್ರಯೋಜನ ಹೊಂದಬಲ್ಲೆವು. ಇದು ಇಸ್ರಾಯೇಲ್ ಜನಾಂಗಕ್ಕೆ ಮೋಶೆಯು ಕೊಟ್ಟ ಮರುಜ್ಞಾಪನಕ್ಕೆ ಹೊಂದಿಕೆಯಲ್ಲಿದೆ: “ನೀವು ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೀ ನಡೆಯುತ್ತಾ ಆತನನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” (ಧರ್ಮೋಪದೇಶಕಾಂಡ 10:12, 13) ಸತ್ಯ ದೇವರಾದ ಯೆಹೋವನಿಗೆ ನಾವು ಭಯಪಡುವಾಗ ನಮಗೆ ಬರುವ ಕೆಲವು ಪ್ರಯೋಜನಗಳು ಯಾವುವು?
ವಿವೇಕ—ಬಂಗಾರಕ್ಕಿಂತಲೂ ಹೆಚ್ಚು ಅಮೂಲ್ಯ
3. (ಎ) ನಾವು ಪಡೆಯಬಲ್ಲ ಅತಿ ಮುಖ್ಯ ಪ್ರಯೋಜನವು ಯಾವುದು? (ಬಿ) ಕೀರ್ತನೆ 111:10ರ ಅರ್ಥವೇನು?
3 ನಿಜ ವಿವೇಕವು ಅತಿ ಮುಖ್ಯವಾದ ಪ್ರಯೋಜನ. ಕೀರ್ತನೆ 111:10 ಘೋಷಿಸುವುದು: “ಯೆಹೋವನ ಭಯವೇ ಜ್ಞಾನಕ್ಕೆ [“ವಿವೇಕದ,” NW] ಮೂಲವು.” ಅದರ ಅರ್ಥವೇನು? ಸಮಸ್ಯೆಗಳನ್ನು ನಿಭಾಯಿಸಲು, ಅಪಾಯಗಳನ್ನು ತಪ್ಪಿಸಿಕೊಳ್ಳಲು, ಮತ್ತು ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಬುದ್ಧಿಯನ್ನು ಸಾಫಲ್ಯಪೂರ್ವಕವಾಗಿ ಬಳಸುವ ಸಾಮರ್ಥ್ಯವೇ ವಿವೇಕವು. ಅದು ಸ್ವಸ್ಥ ತೀರ್ಮಾನವನ್ನು ಕೇಳಿಕೊಳ್ಳುತ್ತದೆ. ಅಂತಹ ವಿವೇಕದ ಪ್ರಾರಂಭವು, ಮೊದಲನೆಯ ಭಾಗವು, ತಳಪಾಯವು ಯೆಹೋವನ ಭಯವಾಗಿದೆ. ಏಕೆ? ಏಕಂದರೆ ಸಮಸ್ತ ಸೃಷ್ಟಿಯು ಆತನ ಕೈಕೆಲಸವಾಗಿದೆ. ಅದು ಆತನ ಮೇಲೆ ಆತುಕೊಂಡಿರುತ್ತದೆ. ಆತನು ಮಾನವಕುಲಕ್ಕೆ ಇಚ್ಛಾ ಸ್ವಾತಂತ್ರ್ಯವನ್ನು ಅನುಗ್ರಹಿಸಿದನಾದರೂ, ಆತನ ಮಾರ್ಗದರ್ಶನದ ಹೊರತು ಅದು ತನ್ನ ಸ್ವಂತ ಹೆಜ್ಜೆಗಳನ್ನು ಯಶಸ್ವಿಯಾಗಿ ನಡೆಸಿಕೊಳ್ಳುವ ಸಾಮರ್ಥ್ಯವನ್ನು ಕೊಡಲಿಲ್ಲ. (ಯೆಹೋಶುವ 24:15; ಯೆರೆಮೀಯ 10:23) ಜೀವಿತದ ಕುರಿತ ಆ ಮೂಲಭೂತ ನಿಜತ್ವಗಳನ್ನು ನಾವು ಗಣ್ಯಮಾಡಿದಲ್ಲಿ ಮತ್ತು ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸಿದಲ್ಲಿ ಮಾತ್ರ, ಬಾಳುವ ಸಾಫಲ್ಯವನ್ನು ನಾವು ಹೊಂದಬಲ್ಲೆವು. ಯೆಹೋವನ ಜ್ಞಾನವು ನಮಗೆ ದೇವರ ಚಿತ್ತವು ನಿಶ್ಚಿತವಾಗಿ ಸಫಲವಾಗುತ್ತದೆ ಮತ್ತು ನಂಬಿಗಸ್ತಿಕೆಗಾಗಿ ಬಹುಮಾನವನ್ನೀಯುವ ಆತನ ವಾಗ್ದಾನ ಮತ್ತು ಸಾಮರ್ಥ್ಯವು ಖಂಡಿತ ಎಂಬ ನಿಶ್ಚಂಚಲವಾದ ಮನವರಿಕೆಯನ್ನು ಕೊಟ್ಟಲ್ಲಿ, ಆಗ ವಿವೇಕದಿಂದ ಕ್ರಿಯೆಗೈಯಲು ದಿವ್ಯ ಭಯವು ನಮ್ಮನ್ನು ಪ್ರಚೋದಿಸಲಿದೆ.—ಜ್ಞಾನೋಕ್ತಿ 3:21-26; ಇಬ್ರಿಯ 11:6.
4, 5. (ಎ) ಒಬ್ಬ ಯುವಕನ ವಿಶ್ವವಿದ್ಯಾನಿಲಯದ ಶಿಕ್ಷಣವು ಅವನನ್ನು ನಿಜ ವಿವೇಕವಿಲ್ಲದವನಾಗಿ ಬಿಟ್ಟಿತೇಕೆ? (ಬಿ) ಈ ಮನುಷ್ಯ ಮತ್ತು ಅವನ ಪತ್ನಿಯು ತದನಂತರ ನಿಜ ವಿವೇಕವನ್ನು ಹೇಗೆ ಗಳಿಸಿದರು, ಮತ್ತು ಇದು ಅವರ ಜೀವನವನ್ನು ಯಾವ ರೀತಿಯಲ್ಲಿ ಮಾರ್ಪಡಿಸಿತು?
4 ಒಂದು ಉದಾಹರಣೆಯನ್ನು ಗಮನಿಸಿರಿ. ಕೆಲವು ದಶಕಗಳ ಹಿಂದೆ, ಒಬ್ಬ ಯುವಕನು ಕೆನಡದಲ್ಲಿ ಸಸ್ಕ್ಯಚ್ಯುವಾನ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದನು. ಪಾಠಕ್ರಮದಲ್ಲಿ ಜೀವವಿಜ್ಞಾನವು ಸೇರಿತ್ತು, ಮತ್ತು ಅವನಿಗೆ ವಿಕಾಸವಾದವು ಕಲಿಸಲ್ಪಟ್ಟಿತು. ಪದವೀಧರನಾದ ಬಳಿಕ, ಅವನು ಪರಮಾಣು ಭೌತವಿಜ್ಞಾನದಲ್ಲಿ ವಿಶೇಷಜ್ಞನಾಗಿ, ಟೊರಾಂಟೊ ವಿಶ್ವವಿದ್ಯಾನಿಲಯದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಲು ವಿದ್ಯಾರ್ಥಿವೇತನ ಪಡೆದನು. ಅಧ್ಯಯನ ಮಾಡಿದಂತೆ, ಪರಮಾಣು ವಿನ್ಯಾಸಗಳಲ್ಲಿ ಕ್ರಮ ಮತ್ತು ರಚನೆಯ ವಿಸ್ಮಯಕರ ಪುರಾವೆಯು ಅವನಿಗೆ ತೋರಿಬಂತು. ಆದರೆ ಈ ಪ್ರಶ್ನೆಗಳಿಗೆ ಯಾವ ಉತ್ತರಗಳೂ ಕೊಡಲ್ಪಡಲಿಲ್ಲ: ಇವೆಲ್ಲವನ್ನು ರಚಿಸಿದಾತನು ಯಾರು? ಯಾವಾಗ? ಮತು ಯಾಕೆ? ಆ ಉತ್ತರಗಳ ಹೊರತು, ಆಗ ಯುದ್ಧದಲ್ಲಿ ತೊಡಗಿದ್ದ ಜಗತ್ತಿನಲ್ಲಿ ತನ್ನ ಜ್ಞಾನವನ್ನು ವಿವೇಕದಿಂದ ಅವನು ಬಳಸಸಾಧ್ಯವಿತ್ತೊ? ಅವನನ್ನು ಯಾವುದು ಮಾರ್ಗದರ್ಶಿಸಿತು? ರಾಷ್ಟ್ರೀಯತೆಯೊ? ಪ್ರಾಪಂಚಿಕ ಬಹುಮಾನಗಳ ಒಂದು ಅಪೇಕ್ಷೆಯೊ? ವಾಸ್ತವವಾಗಿ, ನಿಜ ವಿವೇಕವನ್ನು ಅವನು ಗಳಿಸಿದ್ದನೊ?
5 ಅವನು ಪದವೀಧರನಾದ ಸ್ವಲ್ಪ ಸಮಯದ ಬಳಿಕ, ಆ ಯುವಕನು ಮತ್ತು ಅವನ ಪತ್ನಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಧ್ಯಯನ ಮಾಡಲು ಆರಂಭಿಸಿದರು. ತಮಗೆ ಹಿಂದೆ ಸಿಕ್ಕದೆ ಇದ್ದ ಉತ್ತರಗಳನ್ನು ದೇವರ ಸ್ವಂತ ವಾಕ್ಯದಿಂದ ಅವರು ಪಡೆಯತೊಡಗಿದರು. ನಿರ್ಮಾಣಿಕನಾದ ಯೆಹೋವ ದೇವರ ಪರಿಚಯವು ಅವರಿಗಾಯಿತು. ಕೆಂಪು ಸಮುದ್ರದಲ್ಲಿ ಮೋಶೆಯ ಕುರಿತು ಮತ್ತು ಬಾಬೆಲಿನಲ್ಲಿ ದಾನಿಯೇಲ ಮತ್ತು ಅವನ ಸಂಗಡಿಗರ ಕುರಿತು ಅವರು ಕಲಿತಷ್ಟಕ್ಕೆ, ಮನುಷ್ಯರಿಗಲ್ಲ, ದೇವರಿಗೆ ಭಯಪಡುವ ಪ್ರಮುಖತೆಯನ್ನು ಅವರು ಕಲಿತುಕೊಂಡರು. (ವಿಮೋಚನಕಾಂಡ 14:10-31; ದಾನಿಯೇಲ 3:8-30) ಯೆಹೋವನಿಗಾಗಿ ನಿಜ ಪ್ರೀತಿಯೊಂದಿಗೆ ಜೊತೆಗೂಡಿದ ಅಂಥ ದಿವ್ಯ ಭಯವು ಅವರನ್ನು ಪ್ರೇರೇಪಿಸತೊಡಗಿತು. ಬಲುಬೇಗನೆ ಅವರ ಇಡೀ ಜೀವನ ಮಾರ್ಗವು ಮಾರ್ಪಾಟು ಹೊಂದಿತು. ಜೀವವಿಜ್ಞಾನದಲ್ಲಿ ಅವನು ಯಾರ ಕೈಕೆಲಸವನ್ನು ಅಭ್ಯಸಿಸಿದನ್ದೊ ಅವನು ಯಾರೆಂದು ಕೊನೆಗೆ ಆ ಯುವಕನಿಗೆ ತಿಳಿಯಿತು. ತನ್ನ ಭೌತವಿಜ್ಞಾನದ ಅಧ್ಯಯನದಲ್ಲಿ ಯಾರ ವಿವೇಕವು ಪ್ರತಿಬಿಂಬಿಸಿದ್ದನ್ನು ಅವನು ಕಂಡಿದನ್ದೊ ಆತನ ಉದ್ದೇಶವನ್ನು ಅವನು ತಿಳಿದುಕೊಳ್ಳಲಾರಂಭಿಸಿದನು. ತನ್ನ ಜೊತೆಮಾನವನನ್ನು ನಾಶಮಾಡುವ ಉಪಕರಣಗಳನ್ನು ತಯಾರಿಸುವುದಕ್ಕಾಗಿ ತನ್ನ ಜ್ಞಾನವನ್ನು ಬಳಸುವ ಬದಲಾಗಿ, ಇತರರು ದೇವರನ್ನು ಮತ್ತು ತಮ್ಮ ನೆರೆಯವರನ್ನು ಪ್ರೀತಿಸುವಂತೆ ನೆರವಾಗಲು ಅವನು ಹಾಗೂ ಅವನ ಪತ್ನಿ ಬಯಸಿದರು. ದೇವರ ರಾಜ್ಯದ ಘೋಷಕರಾಗಿ ಪೂರ್ಣ ಸಮಯದ ಸೇವೆಯಲ್ಲಿ ಅವರು ಸೇರಿಕೊಂಡರು. ತದನಂತರ, ಅವರು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡನ್ನು ಹಾಜರಾದರು ಮತ್ತು ಮಿಷನೆರಿಗಳಾಗಿ ಹೊರಗೆ ಕಳುಹಿಸಲ್ಪಟ್ಟರು.
6. ಯೆಹೋವನ ಭಯದಲ್ಲಿ ಬೇರೂರಿದ ವಿವೇಕವು ನಮಗಿರುವುದಾದರೆ, ಸಮೀಪದೃಷ್ಟಿಯ ಯಾವ ಬೆನ್ನಟ್ಟುವಿಕೆಗಳನ್ನು ನಾವು ವರ್ಜಿಸುವೆವು, ಬದಲಾಗಿ ನಾವು ಏನನ್ನು ಮಾಡುತ್ತಿರುವೆವು?
6 ಪ್ರತಿಯೊಬ್ಬನು ಒಬ್ಬ ಮಿಷನೆರಿಯಾಗಿರಲು ಸಾಧ್ಯವಿಲ್ಲ ನಿಶ್ಚಯ. ಆದರೆ ನಾವೆಲ್ಲರೂ ಯೆಹೋವನ ಭಯದಲ್ಲಿ ಬೇರೂರಿರುವ ವಿವೇಕದಲ್ಲಿ ಆನಂದಿಸಬಲ್ಲೆವು. ಆ ವಿವೇಕವನ್ನು ನಾವು ಬೆಳೆಸಿಕೊಂಡಲ್ಲಿ, ಜೀವವೆಲ್ಲದರ ಅರ್ಥವೇನೆಂದು ನಿಜವಾಗಿ ಕೇವಲ ಕಲ್ಪಿಸುವ ಮನುಷ್ಯ ತತ್ವಜ್ಞಾನಗಳನ್ನು ನಾವು ಆತುರದಿಂದ ಹೀರಿಕೊಳ್ಳೆವು. ನಮಗೆ ನಿತ್ಯಜೀವವನ್ನು ಕೊಡಬಲ್ಲಾತನಾದ, ಜೀವದ ಮೂಲನಾದ ಯೆಹೋವ ದೇವರಿಂದ ಪ್ರೇರಿಸಲ್ಪಟ್ಟ ಬೈಬಲಿನ ಅಧ್ಯಯನಕ್ಕೆ ನಾವು ನಮ್ಮನ್ನು ಅನ್ವಯಿಸಿಕೊಳ್ಳುವೆವು. (ಕೀರ್ತನೆ 36:9; ಕೊಲೊಸ್ಸೆ 2:8) ಸ್ವತಃ ನಾಶನದ ಅಂಚಿನಲ್ಲಿ ಓಲಾಡುತ್ತಿರುವ ಒಂದು ವಾಣಿಜ್ಯ ವ್ಯವಸ್ಥೆಗೆ ಗುಲಾಮರಾಗುವ ಬದಲಾಗಿ, ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ನಮ್ಮ ಜೀವನದ ಪ್ರಧಾನ ವಿಷಯವಾಗಿ ಇರಿಸುತ್ತಾ, ಅನ್ನ ವಸ್ತ್ರದಲ್ಲಿ ತೃಪ್ತಿಯಿಂದಿರುವಂತೆ ಹೇಳುವ ಯೆಹೋವನ ಬುದ್ಧಿವಾದಕ್ಕೆ ಕಿವಿಗೊಡುವೆವು. (1 ತಿಮೊಥೆಯ 6:8-12) ಈ ಲೋಕದಲ್ಲಿ ಅನುಕೂಲಸ್ಥರಾಗಿರುವುದರಲ್ಲಿ ನಮ್ಮ ಭವಿಷ್ಯವು ಅವಲಂಬಿಸಿದೆ ಎನ್ನುವಂತೆ ಕ್ರಿಯೆಗೈಯುವ ಬದಲಾಗಿ, ಈ ಲೋಕವೂ ಅದರ ಆಶೆಯೂ ಗತಿಸಿಹೋಗುತ್ತದೆಂದೂ ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುತ್ತಾನೆಂದೂ ಯೆಹೋವನ ವಾಕ್ಯವಾದ ಬೈಬಲು ಹೇಳುವಾಗ, ನಾವದನ್ನು ನಂಬುವೆವು.—1 ಯೋಹಾನ 2:17.
7. ಮೌಲ್ಯಗಳ ಸಮತೆಯನ್ನು ಪಡೆಯುವಂತೆ ಜ್ಞಾನೋಕ್ತಿ 16:16 ನಮಗೆ ಹೇಗೆ ಸಹಾಯ ಮಾಡುತ್ತದೆ? (ಬಿ) ದೇವರ ಚಿತ್ತವನ್ನು ನಮ್ಮ ಜೀವಿತದ ಕೇಂದ್ರ ಬಿಂದುವಾಗಿ ಮಾಡುವುದರಿಂದ ಯಾವ ಬಹುಮಾನಗಳು ಸಿಗುತ್ತವೆ?
7 “ಬಂಗಾರಕ್ಕಿಂತಲೂ ಜ್ಞಾನವನ್ನು [“ವಿವೇಕವನ್ನು,” NW] [ಯೆಹೋವನ ಭಯದಿಂದ ಪ್ರಾರಂಭಿಸುವ ವಿವೇಕ] ಪಡೆಯುವದು ಎಷ್ಟೋ ಮೇಲು; ಬೆಳ್ಳಿಗಿಂತಲೂ ವಿವೇಕವನ್ನು [“ತಿಳಿವಳಿಕೆ,” NW] ಹೊಂದುವದು ಲೇಸು” ಎಂದು ಸತ್ಯವಾಗಿ ನುಡಿಯುವ ಮೂಲಕ ಜ್ಞಾನೋಕ್ತಿ 16:16 ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅಂತಹ ವಿವೇಕ ಮತ್ತು ತಿಳಿವಳಿಕೆಯು, ದೇವರ ಚಿತ್ತವನ್ನು ಮಾಡುವುದನ್ನು ನಮ್ಮ ಜೀವನದ ಕೇಂದ್ರ ಬಿಂದುವಾಗಿ ಮಾಡಲು ನಮ್ಮನ್ನು ಪ್ರಚೋದಿಸಲಿದೆ. ಮತ್ತು ಮಾನವ ಇತಿಹಾಸದ ಈ ಕಾಲಾವಧಿಗಾಗಿ ತನ್ನ ಸಾಕ್ಷಿಗಳಿಗೆ ದೇವರು ವಹಿಸಿಕೊಟ್ಟಿರುವ ಕೆಲಸವು ಅದಾವುದು? ಆತನ ರಾಜ್ಯದ ಕುರಿತು ಸಾರುವುದು ಮತ್ತು ಯೇಸು ಕ್ರಿಸ್ತನ ನಿಜ ಶಿಷ್ಯರಾಗುವಂತೆ ಪ್ರಾಮಾಣಿಕ ಹೃದಯದ ಜನರಿಗೆ ಸಹಾಯಮಾಡುವುದೇ. (ಮತ್ತಾಯ 24:14; 28:19, 20) ನಿಜ ಸಂತೃಪ್ತಿ ಮತ್ತು ಹೆಚ್ಚು ಸಂತೋಷದ ಬಹುಮಾನಗಳನ್ನು ಫಲಿಸುವ ಕೆಲಸವು ಇದಾಗಿದೆ. ಹೀಗಿರಲಾಗಿ ಸಕಾರಣದಿಂದಲೆ, “ಜ್ಞಾನವನ್ನು [“ವಿವೇಕವನ್ನು,” NW] ಪಡೆಯುವವನು ಧನ್ಯನು” ಎಂದು ಬೈಬಲು ಹೇಳುತ್ತದೆ.—ಜ್ಞಾನೋಕ್ತಿ 3:13.
ಕೆಟ್ಟತನದ ವಿರುದ್ಧ ಕಾಪಾಡಿಕೊ
8. (ಎ) ದೇವರಿಗೆ ಭಯಪಡುವುದರಿಂದ ಬರುವ ಎರಡನೆಯ ಪ್ರಯೋಜನವನ್ನು ಹೆಸರಿಸಿರಿ. (ಬಿ) ಯಾವುದರ ಎದುರಾಗಿ ನಾವು ಕಾಪಾಡಲ್ಪಡುತ್ತೇವೊ ಆ ಕೆಟ್ಟತನವು ಯಾವುದು? (ಸಿ) ದಿವ್ಯ ಭಯವು ಒಂದು ಪ್ರಬಲವಾದ ಪ್ರೇರಕ ಶಕ್ತಿಯಾಗುತ್ತದೆ ಹೇಗೆ?
8 ಯಾವುದು ಕೆಟ್ಟದ್ದೊ ಅದರಿಂದ ನಾವು ಹೀಗೆ ಕಾಪಾಡಲ್ಪಡುವುದೆ ದೇವರಿಗೆ ಭಯಪಡುವುದರಿಂದ ಬರುವ ಎರಡನೆಯ ಪ್ರಯೋಜನ. ದೇವರನ್ನು ಆಳವಾಗಿ ಗೌರವಿಸುವವರು ತಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ತಾವಾಗಿಯೆ ನಿರ್ಣಯಿಸುವುದಿಲ್ಲ. ದೇವರು ಏನನ್ನು ಒಳ್ಳೆಯದೆಂದು ಹೇಳುತ್ತಾನೊ ಅದನ್ನು ಕೆಟ್ಟದ್ದಾಗಿ ಅವರು ವೀಕ್ಷಿಸುವುದಿಲ್ಲ, ಇಲ್ಲವೆ, ಕೆಟ್ಟದ್ದೆಂದು ದೇವರು ಹೇಳುವ ವಿಷಯಗಳನ್ನು ಅವರು ಒಳ್ಳೆಯದೆಂದು ಪರಿಗಣಿಸುವುದೂ ಇಲ್ಲ. (ಕೀರ್ತನೆ 37:1, 27; ಯೆಶಾಯ 5:20, 21) ಅಷ್ಟಲ್ಲದೆ, ದೇವರ ಭಯದಿಂದ ಪ್ರೇರಿತನಾದ ಒಬ್ಬ ವ್ಯಕ್ತಿಯು, ಯೆಹೋವನು ಏನನ್ನು ಒಳ್ಳೆಯದೆಂದು ಹೇಳುತ್ತಾನೊ ಮತ್ತು ಏನನ್ನು ಕೆಟ್ಟದ್ದೆಂದು ಹೇಳುತ್ತಾನೊ ಅದನ್ನು ಬರೇ ತಿಳಿಯುವುದ ರಲ್ಲಿ ನಿಲ್ಲುವುದಿಲ್ಲ. ಅಂತಹ ವ್ಯಕ್ತಿಯು ಯೆಹೋವನು ಪ್ರೀತಿಸುವುದನ್ನು ಪ್ರೀತಿಸುತ್ತಾನೆ ಮತ್ತು ಯೆಹೋವನು ಹಗೆಮಾಡುವುದನ್ನು ಹಗೆಮಾಡುತ್ತಾನೆ. ಫಲಿತಾಂಶವಾಗಿ, ಅವನು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ಕಾರ್ಯನಡಿಸುತ್ತಾನೆ. ಹೀಗೆ, ಜ್ಞಾನೋಕ್ತಿ 16:6, NW ರಲ್ಲಿ ಹೇಳಿದ ಪ್ರಕಾರ, “ಯೆಹೋವನ ಭಯದಲ್ಲಿ ಒಬ್ಬನು ಕೆಟ್ಟತನದಿಂದ ತಿರುಗುತ್ತಾನೆ.” ಒಬ್ಬ ವ್ಯಕ್ತಿಯು ತನ್ನ ಸ್ವಂತ ಬಲದಿಂದ ಏನನ್ನು ಮಾಡಶಕ್ತನಾಗದಿರಬಹುದೊ ಅದನ್ನು ಸಾಧಿಸುವುದಕ್ಕೆ ಅಂಥ ದಿವ್ಯ ಭಯವು ಪ್ರಬಲ ಪ್ರೇರಕ ಶಕ್ತಿಯಾಗಿ ಕಾರ್ಯನಡಿಸುತ್ತದೆ.
9. ದೇವರನ್ನು ಅಸಂತೋಷಗೊಳಿಸದಿರುವ ಒಂದು ಬಲವಾದ ಅಪೇಕ್ಷೆಯು ಮೆಕ್ಸಿಕೊ ಶಹರದ ಒಬ್ಬ ಸ್ತ್ರೀಯ ನಿರ್ಣಯವನ್ನು ಹೇಗೆ ಪ್ರಭಾವಿಸಿತು, ಯಾವ ಫಲಿತಾಂಶದೊಂದಿಗೆ?
9 ಒಬ್ಬ ವ್ಯಕ್ತಿಯಲ್ಲಿ ದಿವ್ಯ ಭಕ್ತಿಯು ಕೇವಲ ವಿಕಸಿಸಲಾರಂಭಿಸುವಾಗಲೂ, ತನ್ನ ಜೀವಮಾನವಿಡೀ ವಿಷಾದಗೊಳ್ಳಸಾಧ್ಯವಿರುವ ಒಂದು ವಿಷಯವನ್ನು ಮಾಡುವುದರಿಂದ ದೂರವಿರಲು ಅದು ಅವನನ್ನು ಬಲಪಡಿಸಬಹುದು. ಉದಾಹರಣೆಗೆ, ಮೆಕ್ಸಿಕೊ ಶಹರದ ಗರ್ಭಿಣಿ ಸ್ತ್ರೀಯೊಬ್ಬಳು ಗರ್ಭಪಾತದ ಕುರಿತು ಯೆಹೋವನ ಸಾಕ್ಷಿಯೊಬ್ಬಳನ್ನು ಕೇಳಿದಳು. ಸಾಕ್ಷಿಯು ಆ ಸ್ತ್ರೀಗೆ ಹಲವಾರು ಶಾಸ್ತ್ರವಚನಗಳನ್ನು ಓದಿ, ಅನಂತರ ವಿವೇಚಿಸಿದ್ದು: “ನಿರ್ಮಾಣಿಕನಿಗೆ ಜೀವವು ಅತಿ ಪ್ರಾಮುಖ್ಯವಾಗಿದೆ, ಇನ್ನೂ ಹುಟ್ಟದವರ ಜೀವಗಳು ಕೂಡ.” (ವಿಮೋಚನಕಾಂಡ 21:22, 23; ಕೀರ್ತನೆ 139:13-16) ಅವಳ ಮಗು ಅಸಹಜವಾಗಿ ಜನಿಸಬಹುದೆಂದು ವೈದ್ಯಕೀಯ ಪರೀಕ್ಷೆಯು ಸೂಚಿಸಿತ್ತು. ಆದರೆ ಈಗ ದೇವರ ವಾಕ್ಯದಲ್ಲಿ ಅವಳೇನನ್ನು ಕಂಡಳೊ ಅದರಿಂದ ಪ್ರೇರಿತಳಾಗಿ, ಆ ಸ್ತ್ರೀಯು ತನ್ನ ಮಗುವನ್ನು ಹೆರಲು ನಿರ್ಧರಿಸಿದಳು. ಅವಳ ಡಾಕ್ಟರನು ಅವಳನ್ನು ಪುನಃ ನೋಡಲು ನಿರಾಕರಿಸಿದನು, ಮತ್ತು ಅವಳ ಗಂಡನು ಅವಳನ್ನು ಬಿಟ್ಟುಬಿಡುವೆನೆಂದು ಬೆದರಿಸಿದನು, ಅದರೆ ಆಕೆ ದೃಢವಾಗಿದ್ದಳು. ಸಕಾಲದಲ್ಲಿ, ಅವಳು ಒಂದು—ಸಹಜವಾದ, ಸುಸ್ವಸ್ಥ, ಮತ್ತು ಚೆಂದವಾದ ಹೆಣ್ಣು ಮಗುವನ್ನು ಹೆತ್ತಳು. ಕೃತಜ್ಞತೆಯಿಂದ ಪ್ರೇರಿಸಲ್ಪಟ್ಟು ಅವಳು ಸಾಕ್ಷಿಗಳಿಗಾಗಿ ಹುಡುಕಿದಳು, ಮತ್ತು ಅವರು ಅವಳೊಂದಿಗೆ ದೇವರ ವಾಕ್ಯವನ್ನು ಅಭ್ಯಸಿಸಲಾರಂಭಿಸಿದರು. ಒಂದು ವರ್ಷದೊಳಗೆ ಅವಳು ಮತ್ತು ಅವಳ ಗಂಡ ದೀಕ್ಷಾಸ್ನಾನ ಪಡೆದುಕೊಂಡರು. ಕೆಲವು ವರ್ಷಗಳ ಬಳಿಕ ಒಂದು ಜಿಲ್ಲಾ ಅಧಿವೇಶನದಲ್ಲಿ, ಆ ಮೊದಲನೆಯ ಸಾಕ್ಷಿಯನ್ನು ಪುನಃ ಭೇಟಿಯಾಗಲು ಮತ್ತು ತಮ್ಮ ಚೆಂದದ ನಾಲ್ಕು ವರ್ಷದ ಮಗಳನ್ನು ಪರಿಚಯಿಸಲು ಅವರು ಸಂತೋಷಪಟ್ಟರು. ದೇವರೆಡೆಗೆ ಯೋಗ್ಯ ಗೌರವ ಮತ್ತು ಆತನನ್ನು ಅಸಂತೋಷಗೊಳಿಸದಿರುವ ಬಲವಾದ ಇಚ್ಛೆಯು ಖಂಡಿತವಾಗಿಯೂ ಒಬ್ಬನ ಜೀವಿತದಲ್ಲಿ ಬಲವಾದ ಪ್ರಭಾವಗಳನ್ನು ಹಾಕುತ್ತದೆ.
10. ದಿವ್ಯ ಭಯವು ಜನರನ್ನು ಯಾವ ವಿಧದ ಕೆಟ್ಟತನದಿಂದ ಮುಕ್ತರಾಗುವಂತೆ ಬಲಗೊಳಿಸಬಲ್ಲದು?
10 ದಿವ್ಯ ಭಯವು ಕೆಟ್ಟತನದ ಒಂದು ವ್ಯಾಪಕ ಶ್ರೇಣಿಯ ಎದುರಾಗಿ ನಮ್ಮನ್ನು ಬಲಪಡಿಸುತ್ತದೆ. (2 ಕೊರಿಂಥ 7:1) ಯೋಗ್ಯವಾಗಿ ಬೆಳೆಸಿಕೊಂಡಾಗ, ಅದು ಒಬ್ಬನಿಗೆ, ಯೆಹೋವನಿಗೆ ಮತ್ತು ಅವನಿಗೆ ಮಾತ್ರ ತಿಳಿದಿರುವ ಗುಪ್ತ ಪಾಪಗಳನ್ನು ನಿಲ್ಲಿಸಿಬಿಡಲು ಸಹಾಯ ಮಾಡಬಲ್ಲದು. ಅದು ಅವನಿಗೆ ಮದ್ಯಸಾರ ದುರುಪಯೋಗದ ಅಥವಾ ಅಮಲೌಷಧ ಅಪಪ್ರಯೋಗದ ದಾಸ್ಯದಿಂದ ಮುಕ್ತನಾಗಲು ನೆರವಾಗಬಲ್ಲದು. ದಕ್ಷಿಣ ಆಫ್ರಿಕದ ಮಾಜಿ ಅಮಲೌಷಧ ವ್ಯಸನಿಯೊಬ್ಬನು ವಿವರಿಸಿದ್ದು: “ದೇವರ ಜ್ಞಾನವನ್ನು ನಾನು ಪಡೆದುಕೊಂಡಷ್ಟಕ್ಕೆ, ಆತನನ್ನು ನೋಯಿಸುವ ಯಾ ಅಸಂತೋಷಪಡಿಸುವ ಒಂದು ಭಯವನ್ನು ಸಹ ನಾನು ವಿಕಸಿಸಿಕೊಂಡೆ. ಆತನು ನೋಡುತ್ತಿದ್ದಾನೆಂದು ನನಗೆ ಗೊತ್ತಿತ್ತು, ಆತನ ದೃಷ್ಟಿಯಲ್ಲಿ ಮೆಚ್ಚಲ್ಪಡುವ ಒಂದು ಹಂಬಲವು ನನಗಿತ್ತು. ಶೌಚಕೂಪದಲ್ಲಿ ಹಾಕಿ ನೀರುಹಾಯಿಸುವ ಮೂಲಕ ನನ್ನ ವಶದಲ್ಲಿದ್ದ ಅಮಲೌಷಧಗಳನ್ನು ನಷ್ಟಗೊಳಿಸಲು ಅದು ನನ್ನನ್ನು ಪ್ರೇರೇಪಿಸಿತು.” ದಿವ್ಯ ಭಯವು ಇನ್ನೂ ಸಾವಿರಾರು ಜನರಿಗೆ ತದ್ರೀತಿಯ ವಿಧಗಳಲ್ಲಿ ಸಹಾಯ ಮಾಡಿದೆ.—ಜ್ಞಾನೋಕ್ತಿ 5:21; 15:3.
ಮನುಷ್ಯರಿಗೆ ಹೆದರುವ ವಿರುದ್ಧವಾಗಿ ಕಾಪು
11. ಯೆಹೋವನ ಹಿತಕರವಾದ ಭಯವು ಯಾವ ಸಾಮಾನ್ಯ ಪಾಶದ ಎದುರಾಗಿ ನಮ್ಮನ್ನು ಕಾಪಾಡಬಲ್ಲದು?
11 ಹಿತಕರವಾದ ದೇವರ ಭಯವು ಮನುಷ್ಯರ ಭಯದ ವಿರುದ್ಧವಾಗಿಯೂ ನಮ್ಮನ್ನು ಕಾಪಾಡುತ್ತದೆ. ಹೆಚ್ಚಿನ ಜನರು ಅಧಿಕ ಅಥವಾ ಕಡಿಮೆ ಪರಿಮಾಣದ ಮನುಷ್ಯರ ಭಯದಿಂದ ಬಾಧಿಸಲ್ಪಡುತ್ತಾರೆ. ಯೇಸು ಕ್ರಿಸ್ತನ ಅಪೊಸ್ತಲರು ಸಹ ಗೆತ್ಸೇಮನೆ ತೋಟದಲ್ಲಿ ಸೈನಿಕರಿಂದ ಆತನು ಆಕ್ರಮಿಸಲ್ಪಟ್ಟಾಗ, ಅವನನ್ನು ಬಿಟ್ಟು ಓಡಿಹೋದರು. ತದನಂತರ, ಮಹಾ ಯಾಜಕನ ಅಂಗಣದಲ್ಲಿ ಪೇತ್ರನು, ಸಮತೆ ತಪ್ಪಿದವನೂ ಭಯಭರಿತನೂ ಆಗಿ ಯೇಸುವಿನ ಶಿಷ್ಯರಲ್ಲಿ ತಾನೊಬ್ಬನೆಂಬುದನ್ನು ಮತ್ತು ಅವನನ್ನು ಅರಿತಿರುವುದನ್ನೂ ಅಲ್ಲಗಳೆದನು. (ಮಾರ್ಕ 14:48-50, 66:-72; ಯೋಹಾನ 18:15-27) ಆದರೆ ಆತ್ಮಿಕ ಸಮತೆಯನ್ನು ಪುನಃ ಪಡೆಯಲು ಅಪೊಸ್ತಲರಿಗೆ ಸಹಾಯವು ಕೊಡಲ್ಪಟ್ಟಿತು. ಇನ್ನೊಂದು ಕಡೆ, ಅರಸ ಯೆಹೋಯಾಕೀಮನ ದಿನಗಳಲ್ಲಿ, ಶಮಾಯನ ಮಗನಾದ ಊರೀಯನು ಎಷ್ಟು ಭಯಭ್ರಾಂತನಾದನೆಂದರೆ ಯೆಹೋವನ ಪ್ರವಾದಿಯೋಪಾದಿ ತನ್ನ ಸೇವೆಯನ್ನೂ ತ್ಯಜಿಸಿ ದೇಶಬಿಟ್ಟು ಓಡಿಹೋದನು, ಅಂತೂ ಹಿಡಿಯಲ್ಪಟ್ಟು ಕೊಲ್ಲಲ್ಪಡಲಿಕ್ಕಾಗಿ ಮಾತ್ರ.—ಯೆರೆಮೀಯ 26:20-23.
12. (ಎ) ಮನುಷ್ಯನ ಭಯದ ವಿರುದ್ಧವಾಗಿ ಯಾವ ಭದ್ರತೆಗೆ ಜ್ಞಾನೋಕ್ತಿ 29:25 ಸೂಚಿಸುತ್ತದೆ? (ಬಿ) ದೇವರಲ್ಲಿ ಭರವಸೆಯನ್ನು ಹೇಗೆ ವಿಕಸಿಸಲಾಗುತ್ತದೆ?
12 ಮನುಷ್ಯನ ಭಯವನ್ನು ಜಯಿಸಲು ಒಬ್ಬ ವ್ಯಕ್ತಿಗೆ ಯಾವುದು ಸಹಾಯಮಾಡಬಲ್ಲದು? “ಮನುಷ್ಯನ ಭಯ ಉರುಲು” ಎಂಬ ಎಚ್ಚರಿಕೆಯನ್ನು ಕೊಟ್ಟ ಮೇಲೆ ಜ್ಞಾನೋಕ್ತಿ 29:25 ಕೂಡಿಸುವುದು: “ಯೆಹೋವನ ಭರವಸ ಉದ್ಧಾರ.” ಯೆಹೋವನಲ್ಲಿ ಭರವಸೆಯು ಕೀಲಿ ಕೈ. ಅಂಥ ಭರವಸೆಯು ಜ್ಞಾನ ಮತ್ತು ಅನುಭವದ ಮೇಲೆ ಆಧಾರಿತವಾಗಿದೆ. ಆತನ ವಾಕ್ಯವನ್ನು ಅಭ್ಯಸಿಸುವ ಮೂಲಕ ಯೆಹೋವನ ಮಾರ್ಗಗಳ ಯುಕ್ತತೆಯ ಪುರಾವೆಯನ್ನು ನಾವು ಕಾಣುತ್ತೇವೆ. ಆತನ ವಿಶ್ವಾಸಾರ್ಹತೆಯನ್ನು, ಆತನ ವಾಗ್ದಾನಗಳ (ಪುನರುತ್ಥಾನವೂ ಸೇರಿರುವ) ನಿಶ್ಚಯತೆಯನ್ನು, ಆತನ ಪ್ರೀತಿ ಮತ್ತು ಸರ್ವಶಕ್ತ ಬಲವನ್ನು ಪ್ರದರ್ಶಿಸುವ ಘಟನೆಗಳ ಪರಿಚಯವು ನಮಗಾಗುತ್ತದೆ. ಆಮೇಲೆ ನಾವು ಆ ಜ್ಞಾನದ ಮೇಲೆ ಕ್ರಿಯೆಗೈಯುವಾಗ, ಯೆಹೋವನು ಮಾರ್ಗದರ್ಶಿಸುವ ವಿಷಯಗಳನ್ನು ಮಾಡುತ್ತಾ, ಯಾವುದರ ವಿರುದ್ಧ ಆತನು ಎಚ್ಚರಿಸುತ್ತಾನೋ ಅದನ್ನು ದೃಢವಾಗಿ ನಿರಾಕರಿಸುತ್ತಾ, ಆತನ ಪ್ರೀತಿಯ ಪರಾಮರಿಕೆ ಮತ್ತು ಆತನ ವಿಶ್ವಾಸಾರ್ಹತೆಯನ್ನು ಸಾಕ್ಷಾತ್ತಾಗಿ ಅನುಭವಿಸಲಾರಂಭಿಸುತ್ತೇವೆ. ತನ್ನ ಚಿತ್ತವನ್ನು ಪೂರೈಸುವುದಕ್ಕಾಗಿ ಆತನ ಶಕ್ತಿಯು ಕಾರ್ಯಕ್ಕೆ ತೊಡಗುವ ಪುರಾವೆಯನ್ನು ನಾವು ವೈಯಕ್ತಿಕವಾಗಿ ಕಾಣುತ್ತೇವೆ. ಆತನಲ್ಲಿ ನಮಗಿರುವ ಭರವಸೆಯು ಬೆಳೆಯುತ್ತದೆ ಮತ್ತು ಅದರೊಂದಿಗೆ ಆತನಿಗಾಗಿ ನಮ್ಮ ಪ್ರೀತಿ ಮತ್ತು ಆತನನ್ನು ಅಸಂತೋಷಗೊಳಿಸುವುದನ್ನು ವರ್ಜಿಸುವ ನಮ್ಮ ಪ್ರಾಮಾಣಿಕ ಅಪೇಕ್ಷೆಯು ಬೆಳೆಯುತ್ತದೆ. ಅಂತಹ ಭರವಸೆಯನ್ನು ಒಂದು ದೃಢವಾದ ಬುನಾದಿಯ ಮೇಲೆ ಕಟ್ಟಲಾಗುತ್ತದೆ. ಮನುಷ್ಯನ ಭಯದ ವಿರುದ್ಧವಾಗಿ ಕೊತ್ತಳದೋಪಾದಿ ಅದು ಕಾರ್ಯನಡಿಸುತ್ತದೆ.
13. ದಿವ್ಯ ಭಯವು ನಮ್ಮ ಐಹಿಕ ಕೆಲಸದಲ್ಲಿ, ಮನೆಯಲ್ಲಿ, ಮತ್ತು ಶಾಲೆಯಲ್ಲಿ ಹೇಗೆ ಸಹಾಯ ಮಾಡಬಲ್ಲದು?
13 ಅಪ್ರಾಮಾಣಿಕ ವ್ಯಾಪಾರ ಪದ್ಧತಿಗಳಲ್ಲಿ ಭಾಗವಹಿಸಲು ನಮ್ಮ ನಿರಾಕರಣೆಗಾಗಿ ಒಬ್ಬ ಯಜಮಾನನು ನಮ್ಮ ಕೆಲಸದ ನಷ್ಟದ ಬೆದರಿಕೆಯನ್ನು ನಮಗೆ ಹಾಕುವಾಗ, ದಿವ್ಯ ಭಯದೊಂದಿಗೆ ಜತೆಗೂಡಿದ ಯೆಹೋವನಲ್ಲಿ ನಮ್ಮ ಭರವಸೆಯು, ಯಾವುದು ಯೋಗ್ಯವೊ ಅದಕ್ಕಾಗಿ ನಮ್ಮನ್ನು ದೃಢಗೊಳಿಸುತ್ತದೆ. (ಹೋಲಿಸಿ ಮೀಕ 6:11, 12.) ಅವಿಶ್ವಾಸಿ ಕುಟುಂಬ ಸದಸ್ಯರಿಂದ ಬರುವ ವಿರೋಧದ ಎದುರಲ್ಲಿ ಸತ್ಯಾರಾಧನೆಯಲ್ಲಿ ಬಿಡದೆ ಮುಂದುವರಿಯಲು ಅಂಥ ದಿವ್ಯ ಭಯವು ಅನೇಕ ಸಾವಿರಾರು ಕ್ರೈಸ್ತರನ್ನು ಶಕ್ತರಾಗಿ ಮಾಡುತ್ತದೆ. ತಮ್ಮನ್ನು ಯೆಹೋವನ ಸಾಕ್ಷಿಗಳಾಗಿ ಗುರುತಿಸಿಕೊಳ್ಳುವಂತೆ, ಶಾಲೆಗೆ ಹಾಜರಾಗುವ ಯುವಕರಿಗೂ ಬೇಕಾದ ಧೈರ್ಯವನ್ನು ಅದು ಕೊಡುತ್ತದೆ, ಮತ್ತು ಬೈಬಲಿನ ಮಟ್ಟಗಳನ್ನು ಅವಹೇಳನ ಮಾಡುವ ಸಹಪಾಠಿಗಳ ಕುಚೋದ್ಯದೊಂದಿಗೆ ವ್ಯವಹರಿಸಲು ಅದು ಅವರನ್ನು ಬಲಗೊಳಿಸುತ್ತದೆ. ಹೀಗೆ ಒಬ್ಬಾಕೆ ಹದಿಹರೆಯದ ಸಾಕ್ಷಿಯು ಹೇಳಿದ್ದು: “ಅವರೇನು ನೆನಸುತ್ತಾರೆಂಬುದು ನಿಜವಾಗಿ ಪ್ರಾಮುಖ್ಯವಲ್ಲ. ಯೆಹೋವನು ಏನು ನೆನಸುತ್ತಾನೆಂಬುದೇ ಮಹತ್ವದ್ದು.”
14. ತಮ್ಮ ಜೀವವು ಬೆದರಿಕೆಗೆ ಹಾಕಲ್ಪಟ್ಟಾಗ್ಯೂ ಯೆಹೋವನ ಜನರು ಹೇಗೆ ಜಯಶಾಲಿಗಳಾಗ ಶಕ್ತರಾಗಿದ್ದಾರೆ?
14 ತಮ್ಮ ಜೀವಗಳು ಬೆದರಿಕೆಗೆ ಹಾಕಲ್ಪಡುವಾಗಲೂ ಯೆಹೋವನ ಮಾರ್ಗಗಳಲ್ಲಿ ದೃಢವಾಗಿ ನಿಲ್ಲಲು ಇದೇ ಮನವರಿಕೆಯು ನಿಜ ಕ್ರೈಸ್ತರಿಗೆ ಬಲವನ್ನು ಕೊಡುತ್ತದೆ. ಲೋಕದಿಂದ ಹಿಂಸೆಯನ್ನು ಅಪೇಕ್ಷಿಸಲೇಬೇಕೆಂದು ಅವರಿಗೆ ತಿಳಿದದೆ. ಅಪೊಸ್ತಲರು ಹೊಡೆಯಲ್ಪಟ್ಟರು ಮತ್ತು ಯೇಸು ಕ್ರಿಸ್ತನು ತಾನೇ ದುರ್ಜನರಿಂದ ಹೊಡೆಯಲ್ಪಟ್ಟು ಕೊಲ್ಲಲ್ಪಟ್ಟನೆಂದು ಅವರಿಗೆ ತಿಳಿದದೆ. (ಮಾರ್ಕ 14:65; 15:15-39; ಅ. ಕೃತ್ಯಗಳು 5:40; ಹೋಲಿಸಿ ದಾನಿಯೇಲ 3:16-18.) ಆದರೆ ತಾಳಿಕೊಳ್ಳಲು ಆತನು ತಮ್ಮನ್ನು ಬಲಪಡಿಸಶಕ್ತನು; ದೇವರ ಸಹಾಯದಿಂದ ತಾವು ಜಯಶಾಲಿಗಳಾಗಬಲ್ಲೆವು; ನಂಬಿಗಸ್ತರನ್ನು ಆತನು ತಪ್ಪದೆ ಬಹುಮಾನಿಸುವನು—ಅವಶ್ಯಬಿದ್ದಲ್ಲಿ ಪುನರುತ್ಥಾನದ ಮೂಲಕವೂ ಅವರನ್ನು ತನ್ನ ಹೊಸ ಲೋಕದಲ್ಲಿ ಜೀವಿತರಾಗಿ ಮಾಡುವನು ಎಂಬ ಪೂರ್ಣ ಭರವಸೆಯು ಯೆಹೋವನ ಸೇವಕರಿಗಿದೆ. ದಿವ್ಯ ಭಯದಿಂದ ಜತೆಗೂಡಿದ ದೇವರೆಡೆಗಿನ ಅವರ ಪ್ರೀತಿಯು, ಆತನನ್ನು ಅಪ್ರಸನ್ನಗೊಳಿಸುವ ಏನನ್ನಾದರೂ ಮಾಡುವುದನ್ನು ವರ್ಜಿಸುವಂತೆ ಅವರನ್ನು ಪ್ರಬಲವಾಗಿ ಪ್ರೇರೇಪಿಸುತ್ತದೆ.
15. ನಾಜಿ ಕೂಟ ಶಿಬಿರಗಳಲ್ಲಿ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯೆಹೋವನ ಸಾಕ್ಷಿಗಳನ್ನು ಶಕ್ತರಾಗಿಮಾಡಿದ್ದು ಯಾವುದು?
15 ಈ ಪ್ರೇರೇಪಣೆಯು ಯೆಹೋವನ ಸಾಕ್ಷಿಗಳನ್ನು 1930 ಗಳಲ್ಲಿ ಮತ್ತು 1940 ಗಳಲ್ಲಿ ನಾಜಿ ಕೂಟ ಶಿಬಿರಗಳ ಥರಥರಿಕೆಗಳನ್ನು ತಾಳಿಕೊಳ್ಳಲು ಶಕ್ತರನ್ನಾಗಿ ಮಾಡಿತು. ಲೂಕ 12:4, 5 ರಲ್ಲಿ ಕಂಡುಬರುವ ಯೇಸುವಿನ ಬುದ್ಧಿವಾದವನ್ನು ಅವರು ಹೃದಯಕ್ಕೆ ತೆಗೆದುಕೊಂಡರು: “ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ—ದೇಹವನ್ನು ಕೊಂದು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವರಿಗೆ ಹೆದರಬೇಡಿರಿ. ನೀವು ಯಾರಿಗೆ ಹೆದರಬೇಕೋ ನಿಮಗೆ ತಿಳಿಸುತ್ತೇನೆ; ಕೊಂದ ಮೇಲೆ ನರಕ [“ಗೆಹೆನ,” NW] ದೊಳಗೆ ಹಾಕುವ ಅಧಿಕಾರವುಳ್ಳವನಿಗೆ ಹೆದರಬೇಕು; ಹೌದು, ಆತನಿಗೇ ಹೆದರಬೇಕೆಂದು ನಿಮಗೆ ಹೇಳುತ್ತೇನೆ.” ಹೀಗೆ, ಜಾಕ್ಸ್ನ್ಹಾಜನ್ ಕೂಟ ಶಿಬಿರದಲ್ಲಿದ್ದ ಒಬ್ಬ ಸಾಕ್ಷಿಯಾದ ಗುಸ್ಟವ್ ಆಶ್ನರ್, ಅನಂತರ ಬರೆದದ್ದು: ‘ಎಸೆಸ್ (SS) ಪೊಲೀಸರು ಔಗುಸ್ಟ್ ಡಿಕ್ಮಾನ್ಗೆ ಗುಂಡಿಕ್ಕಿದರು ಮತ್ತು ನಮ್ಮ ನಂಬಿಕೆಯನ್ನು ಪರಿತ್ಯಜಿಸುವ ದಾಖಲೆಗೆ ನಾವು ಸಹಿ ಹಾಕದಿದ್ದರೆ ಉಳಿದಿರುವ ನಮಗೂ ಗುಂಡುಹಾಕುವೆವೆಂದು ಬೆದರಿಸಿದರು. ನಮ್ಮಲ್ಲಿ ಯಾರೂ ಸಹಿ ಹಾಕಲಿಲ್ಲ. ಅವರ ಗುಂಡುಗಳಿಗಿಂತ ಹೆಚ್ಚಾಗಿ ಯೆಹೋವನನ್ನು ಅಪ್ರಸನ್ನಗೊಳಿಸುವ ಭಯವು ನಮಗಿತ್ತು.’ ಮನುಷ್ಯನ ಭಯವು ಸಂಧಾನಮಾಡಿಕೊಳ್ಳಲು ನಡಿಸುತ್ತದೆ, ಆದರೆ ದೇವರ ಭಯವು ಯಾವುದು ಯೋಗ್ಯವೊ ಅದಕ್ಕಾಗಿ ಒಬ್ಬನು ದೃಢವಾಗಿ ನಿಲ್ಲುವಂತೆ ಮಾಡುತ್ತದೆ.
ಜೀವದ ಸಂರಕ್ಷಣೆ
16. ಜಲಪ್ರಳಯದ ತನಕ, ದಶಕ ದಶಕಗಳಲ್ಲಿ, ಒಂದು ಯೋಗ್ಯ ಮಾರ್ಗಕ್ರಮವನ್ನು ಕಾಪಾಡಿಕೊಳ್ಳಲು ನೋಹನನ್ನು ಶಕ್ತನನ್ನಾಗಿ ಮಾಡಿದ್ದು ಯಾವುದು, ಮತ್ತು ಅವನಿಗೆ ಹಾಗೂ ಅವನ ಮನೆವಾರ್ತೆಗೆ ದೊರೆತ ಫಲಿತಾಂಶವೇನು?
16 ನೋಹನು ಪ್ರಳಯಕ್ಕೆ ಹಿಂದಿನ ಲೋಕದ ಕಡೆಯ ದಿನಗಳನ್ನು ಪಾರಾಗಿ ಉಳಿದನು. ಮನುಷ್ಯನ ಕೆಟ್ಟತನದ ಕಾರಣ ಆ ಕಾಲದ ದುಷ್ಟ ಜಗತ್ತನ್ನು ನಾಶಮಾಡಲು ಯೆಹೋವನು ನಿಶ್ಚಯಿಸಿದ್ದನು. ಆ ಮಧ್ಯೆ ನೋಹನಾದರೊ, ಹಿಂಸಾಚಾರ, ಘೋರ ಅನೈತಿಕತೆ, ಮತ್ತು ದಿವ್ಯ ಚಿತ್ತದೆಡೆಗೆ ಉದಾಸೀನತೆಯು ತುಂಬಿದ್ದಂತಹ ಆ ಲೋಕದಲ್ಲಿ ಜೀವಿಸಿದನು. ನೋಹನು ನೀತಿಯನ್ನು ಸಾರಿದಾಗ್ಯೂ, ಅವರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ [“ಲಕ್ಷಕೊಡದೆ,” NW] ಇದ್ದ”ರು. (ಮತ್ತಾಯ 24:39) ಆದರೂ ದೇವರು ತನ್ನ ಮುಂದಿಟ್ಟ ಕೆಲಸದಿಂದ ನೋಹನು ಹಿಮ್ಮೆಟಲ್ಟಿಲ್ಲ. “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:22) ಜಲಪ್ರಳಯವು ಬರುವ ತನಕ, ವರ್ಷಾನುವರ್ಷ, ಒಂದು ಯೋಗ್ಯ ಮಾರ್ಗಕ್ರಮವನ್ನು ಕಾಪಾಡಲು ನೋಹನನ್ನು ಶಕ್ತನನ್ನಾಗಿ ಮಾಡಿದ್ದು ಯಾವುದು? ಇಬ್ರಿಯ 11:7 ಉತ್ತರಿಸುವುದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೂಕ್ತಿಯನ್ನು ಹೊಂದಿ ಭಯಭಕ್ತಿ [“ದಿವ್ಯ ಭಯವನ್ನು,” NW]” ಯನ್ನು ತೋರಿಸಿದನು. ಫಲಿತಾಂಶವಾಗಿ, ಅವನು ಮತ್ತು ಅವನ ಪತ್ನಿ ಮತ್ತು ಅವನ ಗಂಡು ಮಕ್ಕಳು ಮತ್ತು ಅವರ ಪತ್ನಿಯರು ಜಲಪ್ರಳಯದಿಂದ ಸುರಕ್ಷಿತರಾಗಿ ಉಳಿಸಲ್ಪಟ್ಟರು.
17. (ಎ) ಬೇರೆ ಜನರು ಏನೇ ಮಾಡಲಿ, ನಾವೇನು ಮಾಡತಕ್ಕದ್ದು? (ಬಿ) ಯೆಹೋವನಿಗೆ ಭಯಪಡುವವರು ನಿಜವಾಗಿ ಸಂತೋಷವುಳ್ಳ ಜನರಾಗಿದ್ದಾರೆ ಏಕೆ?
17 ಅನೇಕ ವಿಷಯಗಳಲ್ಲಿ ನೋಹನ ದಿವಸವನ್ನು ಸರಿಹೋಲುವ ಒಂದು ಕಾಲಾವಧಿಯಲ್ಲಿ ನಾವು ಜೀವಿಸುತ್ತೇವೆ. (ಲೂಕ 17:26, 27) ಪುನಃ ಒಂದು ಎಚ್ಚರಿಕೆಯು ಕೊಡಲ್ಪಡುತ್ತಿದೆ. ಆಕಾಶಮಧ್ಯದಲ್ಲಿ ಹಾರಿಹೋಗುವ ಒಬ್ಬ ದೇವದೂತನು ಎಲ್ಲಾ ಜನಾಂಗ, ಕುಲ, ಭಾಷೆಯ ಜನರಿಗೆ, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ” ಎಂದು ಪ್ರೇರೇಪಿಸುವುದರ ಕುರಿತು ಪ್ರಕಟನೆ 14:6, 7 ತಿಳಿಸುತ್ತದೆ. ನಿಮ್ಮ ಸುತ್ತಲಿನ ಜಗತ್ತು ಏನನ್ನೇ ಮಾಡುತ್ತಿರಲಿ, ಆ ಮಾತುಗಳಿಗೆ ಕಿವಿಗೊಡಿರಿ, ಮತ್ತು ಬಳಿಕ ಇತರರಿಗೆ ಆ ಆಮಂತ್ರಣವನ್ನು ನೀಡಿರಿ. ನೋಹನಂತೆ ನಂಬಿಕೆಯಲ್ಲಿ ಕಾರ್ಯನಡಿಸಿ ದಿವ್ಯಭಯವನ್ನು ತೋರಿಸಿರಿ. ಹಾಗೆ ಮಾಡುವುದು ನಿಮ್ಮ ಜೀವದ ಮತ್ತು ಇತರ ಅನೇಕರ ಜೀವದ ಸಂರಕ್ಷಣೆಗೆ ನಡಿಸಬಲ್ಲದು. ಸತ್ಯ ದೇವರಿಗೆ ಭಯಪಡುವ ಜನರಿಂದ ಅನುಭವಿಸಲ್ಪಡುವ ಪ್ರಯೋಜನಗಳನ್ನು ಕುರಿತು ನಾವು ಯೋಚಿಸುವಾಗ, ಪ್ರೇರಿತ ಕೀರ್ತನೆಗಾರನೊಂದಿಗೆ ನಾವು ಸಹಮತದಲ್ಲಿರದೆ ಇರಲಾರೆವು, ಆತನು ಹಾಡಿದ್ದು: “ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.”—ಕೀರ್ತನೆ 112:1.
ನೀವು ಹೇಗೆ ಉತ್ತರಿಸುವಿರಿ?
◻ ಸತ್ಯ ದೇವರಿಗೆ ಭಯಪಡುವುದರಿಂದ ಬರುವ ಕೆಲವು ಮಹತ್ತಾದ ಪ್ರಯೋಜನಗಳಾವುವು?
◻ ದಿವ್ಯ ಭಯದಲ್ಲಿ ಬೇರೂರಿರುವ ವಿವೇಕವು ನಮ್ಮನ್ನು ಹೇಗೆ ಕಾಪಾಡಬಲ್ಲದು?
◻ ದಿವ್ಯ ಭಯವು ನಮ್ಮನ್ನು ಕೆಟ್ಟತನದಿಂದ ದೂರತೊಲಗುವಂತೆ ಮಾಡುವುದೇಕೆ?
◻ ದಿವ್ಯ ಭಯವು ಮನುಷ್ಯನ ಭಯದ ವಿರುದ್ಧವಾಗಿ ನಮ್ಮನ್ನು ಹೇಗೆ ರಕ್ಷಿಸುತ್ತದೆ?
◻ ನಮ್ಮ ಭವಿಷ್ಯದ ಜೀವನ ಪ್ರತೀಕ್ಷೆಗಳ ಮೇಲೆ ದಿವ್ಯ ಭಯದ ಸಂಬಂಧವೇನು?
[ಪುಟ 16,17 ರಲ್ಲಿರುವಚಿತ್ರಗಳು]
“ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.”—ಕೀರ್ತನೆ 112:1