ಬಾಸ್ನೀಯದಲ್ಲಿರುವ ವಿಶ್ವಾಸಿಗಳ ನಮ್ಮ ಕುಟುಂಬಕ್ಕೆ ನೆರವು ನೀಡುವುದು
ಯೆಹೋವನ ಸಾಕ್ಷಿಗಳು ರಾಜಕೀಯ ಸಂಘರ್ಷಗಳಲ್ಲಿ ಭಾಗವಹಿಸುವುದಿಲ್ಲ. (ಯೋಹಾನ 17:16) ಆದಾಗ್ಯೂ, “ವಿಶೇಷವಾಗಿ ವಿಶ್ವಾಸಿಗಳ ನಮ್ಮ ಕುಟುಂಬಕ್ಕೆ” ಒಳ್ಳೆಯದನ್ನು ಮಾಡುವ ಪೌಲನ ಬುದ್ಧಿವಾದವನ್ನು ಅನುಸರಿಸಿ, ಯುದ್ಧಛಿದ್ರ ಕ್ಷೇತ್ರಗಳಲ್ಲಿ ಅವರ ಜೊತೆ ಕ್ರೈಸ್ತರಿಗೆ ಸಹಾಯವನ್ನು ಒದಗಿಸಲು ಅವರು ಮನಃಪೂರ್ವಕವಾಗಿ ಬಂದರು. (ಗಲಾತ್ಯ 6:10, ಬೆಕ್) ಇಸವಿ 1993-94ರ ಚಳಿಗಾಲವು ಹತ್ತರಿಸಿದಂತೆ, ಆಸ್ಟ್ರಿಯ ಮತ್ತು ಕ್ರೊಏಷಿಯದಿಂದ ಸಾಕ್ಷಿಗಳು ಬಾಸ್ನೀಯದಲ್ಲಿರುವ ವಿಶ್ವಾಸಿಗಳ ಅವರ ಕುಟುಂಬಕ್ಕೆ ನೆರವನ್ನೀಯಲು ತಮ್ಮ ಜೀವಗಳನ್ನು ಗಂಡಾಂತರಕ್ಕೊಡ್ಡಿದರು. ಈ ಕೆಳಗಿನದ್ದು ಅವರ ವರದಿಯಾಗಿದೆ.
ಇಸವಿ 1993ರ ಮಾರ್ಚ್ನಿಂದ ಅಕ್ಟೋಬರದ ತನಕ, ಬಾಸ್ನೀಯಕ್ಕೆ ಪರಿಹಾರ ಸರಬರಾಯಿಗಳನ್ನು ಕಳುಹಿಸಲು ಯಾವುದೇ ಅವಕಾಶವಿರಲಿಲ್ಲ. ಆದಾಗ್ಯೂ, ಅಕ್ಟೋಬರದ ಆರಂಭದಲ್ಲಿ ಸಾಮಗ್ರಿಗಳನ್ನು ಸಾಗಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ಸೂಚಿಸಿದರು. ಇದು ಇನ್ನೂ ಒಂದು ಅಪಾಯಕಾರಿ ಜವಾಬ್ದಾರಿಯಾಗಿತ್ತು ಯಾಕಂದರೆ ಬಾಸ್ನೀಯದ ಎಲ್ಲಾ ಮುಂಚೂಣಿಗಳಲ್ಲಿ ತೀವ್ರ ಹೋರಾಟ ನಡಿಯುತ್ತಿತ್ತು.
ಆದಾಗ್ಯೂ, ಅಕ್ಟೋಬರ 26, 1993ರ ಮಂಗಳವಾರ, ಬಾಸ್ನೀಯದಲ್ಲಿರುವ ಜೊತೆ ಕ್ರೈಸ್ತರುಗಳಿಗಾಗಿ 16 ಟನ್ನು ಆಹಾರ ಮತ್ತು ಸೌದೆಯನ್ನು ಹೇರಿಕೊಂಡು ನಮ್ಮ ಟ್ರಕ್ಗಳು ವಿಯೆನ್ನವನ್ನು ಬಿಟ್ಟವು. ಗುರುತಿಸುವಿಕೆಗಾಗಿ ನಾವು ನಮ್ಮ ಜಿಲ್ಲಾ ಅಧಿವೇಶನದ ಲ್ಯಪೆಲ್ ಕಾರ್ಡುಗಳನ್ನು ಧರಿಸಿದ್ದೆವು.
ಕ್ರೊಏಷಿಯ ಮತ್ತು ಬಾಸ್ನೀಯದ ಗಡಿಯಲ್ಲಿ ಆಗಮಿಸಿದಾಗ, ಒಂದು ಮಿಲಿಟರಿ ನೆಲೆಗೆ ಮೈಗಾವಲಾಗಿದ್ದು ನಮ್ಮನ್ನು ಕೊಂಡೊಯ್ಯಲಾಯಿತು, ಅಲ್ಲಿ ನಮ್ಮ ಟ್ರಕ್ಗಳು ಸಮಗ್ರವಾಗಿ ಶೋಧಿಸಲ್ಪಟ್ಟವು. ಸರ್ಬಿಯನ್ ಕ್ಷೇತ್ರದ ಮೂಲಕ ಪ್ರಯಾಣಿಸಲು ನಾವು ಮಾಡಿದ ವಿನಂತಿಯು ನಿರಾಕರಿಸಲ್ಪಟ್ಟಿತು. ಕೇಂದ್ರ ಬಾಸ್ನೀಯದ—ನೇರವಾಗಿ ಕದನ ನಡೆಯುತ್ತಿರುವ ವಲಯದ—ಮೂಲಕ ಮಾತ್ರ ನಮಗೆ ಹಾದುಹೋಗುವ ಮಾರ್ಗವು ಅನುಮತಿಸಲ್ಪಟ್ಟಿತು!
ವ್ಯರ್ಥ ಪ್ರಯತ್ನಗಳು?
ಮಿಲಿಟರಿ ಮೈಗಾವಲು ತಂಡ ಒಂದು ತನಿಖೆಕಟ್ಟೆಯಿಂದ ಇನ್ನೊಂದಕ್ಕೆ ನಮ್ಮನ್ನು ನಡಿಸಿತು ಮತ್ತು ಟ್ಯಾಂಕುಗಳಿಂದ ಮತ್ತು ತೋಪುಗಳಿಂದ ಕರ್ಣಛಿದ್ರಿಸುವ ಆಸ್ಫೋಟನಗಳನ್ನು ನಾವು ಕೇಳಿದೆವು. ರಾತ್ರಿಯ ಸಮಯದಲ್ಲಿ, ಎರಡು ಟ್ಯಾಂಕುಗಳು ಮತ್ತು ಒಂದು ಜೀಪು ಮೈಗಾವಲಿದ್ದು ಕಾಡುಗಳ ಮೂಲಕ ನಾವು ಪ್ರಯಾಣಿಸಿದೆವು. ನಮ್ಮ ಟ್ರಕ್ಗಳು ಕದನದ ಮುಂಚೂಣಿಯ ಉದ್ದಕ್ಕೂ ನಿಧಾನವಾಗಿ ಸಾಗಿದವು! ಬೆಳಗ್ಗೆ ತನಕ ಎಲ್ಲವೂ ಸುಗಮವಾಗಿ ಮುಂದುವರಿಯಿತು, ನಮ್ಮ ತಲೆಗಳ ಮೇಲೆ ಗುಂಡುಗಳು ಉಡಾಯಿಸಲ್ಪಟ್ಟಾಗ, ನಾವು ಒಂದು ಗುಡ್ಡದ ಹಿಂದುಗಡೆ ಅಡಗಿಕೊಳ್ಳಬೇಕಾಯಿತು. ಸ್ವಲ್ಪ ಸಮಯದ ಅನಂತರ ಗುಂಡುಹಾರಿಸುವಿಕೆಯು ನಿಂತಿತು, ಮತ್ತು ನಾವು ನಮ್ಮ ಪಯಣವನ್ನು ಮುಂದುವರಿಸಿದೆವು.
ಸೇನಾಶಿಬಿರವೊಂದಕ್ಕೆ ನಾವು ಆಗಮಿಸಿದಾಗ, ಕಮಾಂಡಿಂಗ್ ಆಫೀಸರನು ನಾವು ಯಾರು ಮತ್ತು ನಮಗೇನು ಬೇಕು ಎಂದು ವಿಚಾರಿಸಿದನು. “ನೀವು ಕೈಗೊಂಡ ಕೆಲಸವು ಖಂಡಿತವಾಗಿ ಸೋಲುವುದು,” ಎಂದು ನಮ್ಮ ಉದ್ದೇಶವನ್ನು ನಾವು ಹೇಳಿದ ಅನಂತರ ಅವನಂದನು. “ಶಿಬಿರದಿಂದ ಕೆಲವೇ ಗಜಗಳಷ್ಟು ದೂರ ಸಹ ಸುರಕ್ಷಿತವಾಗಿ ಹೋಗುವ ಸಾಧ್ಯತೆಯು ನಿಮಗಿಲ್ಲ. ದೇಶದಲ್ಲಿ ಆಹಾರದ ಅಭಾವವು ಎಷ್ಟು ಇದೆಯೆಂದರೆ, ಜನರು ನಿಮ್ಮನ್ನು ಆಕ್ರಮಿಸುವರು ಮತ್ತು ನಿಮ್ಮ ಸಾಮಗ್ರಿಗಳನ್ನು ಸೂರೆಮಾಡುವರು.” ನಾವು ತಿರುಗಿ ಹಿಂದಕ್ಕೆ ಹೋಗುವಂತೆ ಅವನು ನಮ್ಮನ್ನು ಒತ್ತಾಯಿಸಿದನು.
ನಮ್ಮ ಪ್ರಯತ್ನಗಳು “ಖಂಡಿತವಾಗಿ ಸೋಲುವವೊ?” ಯುದ್ಧಛಿದ್ರ ಮತ್ತು ಆಹಾರದ ಅಭಾವಗ್ರಸ್ತ ಪ್ರದೇಶಗಳಲ್ಲಿ ನಾವು ಪ್ರಯಾಣಿಸಶಕ್ತರಾದರೂ, ನಮ್ಮ ಸಾಮಗ್ರಿಗಳು ಮತ್ತು ನಮ್ಮ ಜೀವಗಳನ್ನು ಸಂರಕ್ಷಿಸಿಕೊಳ್ಳುವೆವು ಎಂದು ನಿರೀಕ್ಷಿಸುವುದು ವ್ಯರ್ಥವೊ? ಒಂದು ಗಂಭೀರ ನಿರ್ಣಯವನ್ನು ಮಾಡಬೇಕಿತ್ತು. ನಾವು ಆಗಲೇ ಬಂದೂಕು ಹಾರಿಸುವುದನ್ನು ಮತ್ತು ಬಾಂಬುಗಳ ಕಿವುಡಾಗಿಸುವ ಸ್ಫೋಟನಗಳನ್ನು ಕೇಳಿದ್ದೆವು. ಸೈನಿಕರೊಂದಿಗೆ ರಾತ್ರಿಯನ್ನು ಕಳೆದಾದ ಮೇಲೆ, ಅವರು ಕಾಳಗದ ಉಗ್ರ ಕಾರ್ಯಕ್ರಮಗಳಿಗಾಗಿ ಸಿದ್ಧರಾಗುವುದನ್ನು ನಾವು ಕಾಣಶಕ್ತರಾದೆವು. ಅವರು ಗುಂಡುನಿರೋಧಕ ನಡುವಂಗಿಗಳನ್ನು ಧರಿಸಿದ್ದರು ಮತ್ತು ಧಾರಾಳವಾಗಿ ಶಸ್ತ್ರಸಜ್ಜಿತರಾಗಿದ್ದರು. ಅಡಿಗೆಯವನು ಸಹ ತನ್ನ ಬೆನ್ನ ಹಿಂದೆ ಮೆಷಿನ್ ಗನ್ ಧರಿಸಿದ್ದನು. ಮತ್ತು ಇಲ್ಲಿ ನಾವು ನಮ್ಮ ಷರ್ಟು, ಟೈ, ಮತ್ತು ಲ್ಯಪೆಲ್ ಕಾರ್ಡುಗಳನ್ನು ಧರಿಸಿದೆವು! ನಮಗೆ ಮುಂದುವರಿಯುವುದು ವಿವೇಕವಾಗಿತ್ತೊ?
ಟ್ರಾವ್ನಿಕ್ನಲ್ಲಿ ಆಗಮನ
ಈ ಯುದ್ಧದಲ್ಲಿ ಭಾಗವಹಿಸುತ್ತಿದ್ದ ಮೂರನೆಯ ಪಕ್ಷದೊಂದಿಗೆ ಸಮಾಲೋಚನೆ ನಡಿಸುವುದು ನಮ್ಮ ಏಕೈಕ ನಿರೀಕ್ಷೆ ಎಂದು ಭಾಸವಾಯಿತು. ಆ ಪಕ್ಷದ ಪಾಳೆಯ ಕೇಂದ್ರಾಲಯವನ್ನು ಕಂಡುಕೊಳ್ಳುವುದು ಎಲ್ಲಿ ಎಂದು ನಿನಗೆ ತಿಳಿದದೆಯೋ ಎಂದು ಮರುದಿನ ಬೆಳಗ್ಗೆ ನಾವು ಒಬ್ಬ ಯುವ ಸ್ತ್ರೀಯೊಡನೆ ವಿಚಾರಿಸಿದೆವು. “ಅದು ಬಹಳ ದೂರವೇನೂ ಇಲ್ಲ,” ಎಂದು ಅವಳು ಹೇಳಿದಳು. “ಕಾಡಿನ ಮೂಲಕ ಸ್ವಲ್ಪ ಮುಂದೆ ಹೋದರೆ, ಒಮ್ಮೆ ಆಸ್ಪತ್ರೆಯಾಗಿದ್ದ ಒಂದು ಕಟ್ಟಡವನ್ನು ಕಂಡುಕೊಳ್ಳುವಿರಿ.” ನಾವು ಹೋಗಲು ತುಂಬಾ ಆತುರದಿಂದ ಇದ್ದೆವು. ಸೇನಾ ಶಿಬಿರವನ್ನು ನಿಶ್ಶಸ್ತ್ರವಾಗಿ ಬಿಟ್ಟುಹೋಗಲು ಧೈರ್ಯತಾಳುವುದನ್ನು ನೋಡಿ ಸೈನಿಕರು ಅಚ್ಚರಿಗೊಂಡರು.
ಹಿಂದಿನ ಆಸ್ಪತ್ರೆಯು ವಿಧ್ವಂಸಗೊಂಡಿತ್ತು, ಆದರೆ ಒಬ್ಬ ಅಧಿಕಾರಿಯು ಅಲ್ಲಿ ಹಾಜರಿದ್ದನು. ಅವನು ಸಹಾಯ ಮಾಡಲು ಒಪ್ಪುತ್ತಾ, ಮೊದಲು ಅವನ ದಳಪತಿಯೊಂದಿಗೆ ಮಾತಾಡುವಂತೆ ಸಲಹೆಯನ್ನಿತ್ತನು. ಅವನು ತನ್ನ ಜರ್ಜರಿತ ಕಾರಿನಲ್ಲಿ ನಮ್ಮನ್ನು ಅತಿ ವೇಗದಿಂದ ಮುಂಚೂಣಿಯ ಉದ್ದಕ್ಕೂ ಕೊಂಡೊಯ್ದನು. ನಾವು ಒಂದು ಕಟ್ಟಡದ ಹತ್ತಿರ ನಿಂತೆವು, ಅಲ್ಲಿ ಒಂದು ಕತ್ತಲೆಯ ಕೋಣೆಯಲ್ಲಿ ಕಮಾಂಡಿಂಗ್ ಆಫೀಸರ್ ನಮ್ಮೊಡನೆ ಮಾತಾಡಲು ಒಪ್ಪಿದನು.
“ಕಳೆದ ರಾತ್ರಿ ನಿಮ್ಮ ಮೇಲೆ ಗುಂಡು ಹಾರಿಸಲು ಬಯಸಿದ್ದೆವು,” ಎಂದನು ಅವನು. “ನೀವು ಏನನ್ನು ಬಯಸುತ್ತೀರಿ?”
“ನಾವು ಯೆಹೋವನ ಸಾಕ್ಷಿಗಳಾಗಿದ್ದೇವೆ, ಮತ್ತು ನಮ್ಮ ಸಹೋದರರಿಗೆ ಪರಿಹಾರ ಸಾಮಗ್ರಿಯನ್ನು ತೆಗೆದುಕೊಂಡು ಹೋಗಲು ಬಯಸುತ್ತೇವೆ.”
ಅವನು ಬಹಳಷ್ಟು ಅಚ್ಚರಿಗೊಂಡನು—ಮತ್ತು ಪ್ರಭಾವಿತನಾದನು—ಯಾಕಂದರೆ ವಾರಗಳಿಂದ ಬಾಸ್ನೀಯದೊಳಗೆ ಪ್ರವೇಶಿಸಲು ಯಾವುದೇ ಪರಿಹಾರ ವಾಹನಸಾಲು ಧೈರ್ಯತಾಳಿರಲಿಲ್ಲ. ಪೂರ್ತಿಯಾಗಿ ತನಿಖೆಮಾಡಿದ ಅನಂತರ, ನಮಗೆ ಲಿಖಿತ ದೃಢೀಕರಣವು ದೊರೆಯಿತು. ಮೊದಲಿನ ರಾತ್ರಿ ನಮ್ಮ ಪಯಣವನ್ನು ಮುಂದುವರಿಸುವ ಯಾವುದೇ ಅವಕಾಶ ಇಲ್ಲವೆಂದು ನಾವು ಎಣಿಸಿದ್ದೆವು, ಮತ್ತು ಈಗ ಯಾವುದೇ ಮೈಗಾವಲು ಇಲ್ಲದೆ ನಾವು ಮುಂದುವರಿಯಶಕ್ತರಾದೆವು!
ಕಾಡುಗಳ ಮೂಲಕ ನಾವು ಒಂದು ತನಿಖೆಕಟ್ಟೆಯಿಂದ ಇನ್ನೊಂದಕ್ಕೆ ದಾಟುತ್ತಾ ವಾಹನ ಚಲಾಯಿಸಿದೆವು ಮತ್ತು ಕೆಲವೊಮ್ಮೆ ನಾವು ಮುಂಚೂಣಿಯ ಉದ್ದಕ್ಕೂ ಚಲಾಯಿಸಿದೆವು. ಅಪಾಯದ ನಡುವೆಯೂ ನಾವು ಸುರಕ್ಷಿತವಾಗಿ ಟ್ರಾವ್ನಿಕ್ನಲ್ಲಿ ಆಗಮಿಸಿದೆವು. ನಮ್ಮ ಆಗಮನವನ್ನು ಕೇಳಿದ ಕೂಡಲೇ ಸೈನಿಕನೊಬ್ಬನು ನಮ್ಮ ಸಹೋದರರು ಎಲ್ಲಿ ಒಟ್ಟಾಗಿ ನೆರೆದಿದ್ದರೋ ಆ ಮನೆಗೆ ಧಾವಿಸಿದನು. “ಟ್ರಕ್ಗಳೊಂದಿಗೆ ನಿಮ್ಮ ಜನರು ಇಲ್ಲಿ ಬಂದಿದ್ದಾರೆ!” ಎಂದವನು ಕೂಗಿ ಹೇಳಿದನು. ಅವರ ಆನಂದವನ್ನು ನೀವು ಊಹಿಸಬಲ್ಲಿರಿ. ಮನೆಯೊಳಗೆ ನಾವು ಆಹಾರವನ್ನು ಕೊಂಡೊಯ್ದೆವು, ಕೊಂಚವೇ ಶಬ್ದಗಳನ್ನು ಮಾತಾಡಿದೆವು, ಯಾಕಂದರೆ ನಾವು ಮುಂದಕ್ಕೆ ಹೋಗಲಿಕ್ಕಿತ್ತು. ಕತ್ತಲಾಗುತ್ತಾ ಬರುತ್ತಿತ್ತು, ಮತ್ತು ಇನ್ನೂ 32 ಕಿಲೊಮೀಟರುಗಳಷ್ಟು ದಾರಿ ಮುಂದಕ್ಕಿತ್ತು.
ಜೆನಟ್ಸಕ್ಕೆ
ಒಂದು ಮೈಗಾವಲು ಕಾರು ಅತಿ ವೇಗದಿಂದ ಕಾಡುಗಳ ಮೂಲಕ ನಮ್ಮನ್ನು ಮಾರ್ಗದರ್ಶಿಸಿತು. ನಾವು ಎಂದಿಗೂ ಜೆನಟ್ಸಕ್ಕೆ ಯಶಸ್ವಿಯಾಗಿ ತಲಪಲಾರೆವು ಎಂದು ಕೆಲವರು ಹೇಳಿದರು, ಆದರೆ ನಾವು ತಲುಪಿದೆವು. ನಗರದಲ್ಲಿ ಮಹಾ ವಿಷಣ್ಣತೆಯು ಹಬ್ಬಿರುವಂತೆ ಭಾಸವಾಗುತ್ತಿತ್ತು. ಬೆಳಕು ಇರಲಿಲ್ಲ ಮತ್ತು ರಸ್ತೆಗಳ ಮೇಲೆ ಕಾರುಗಳು ಇರಲಿಲ್ಲ. ಜೆನಟ್ಸ ಎಲ್ಲಾ ಕಡೆಗಳಿಂದ ಸುತ್ತುವರಿಯಲ್ಪಟ್ಟಿರುವ ಕಾರಣ, ಆಹಾರದ ಮಹಾ ಅಭಾವ ಮತ್ತು ಹತಾಶೆಯು ಉಂಟಾಗಿತ್ತು.
ರಸ್ತೆಯುದ್ದಕ್ಕೂ ನಾವು ಚಲಾಯಿಸುತ್ತಿದ್ದ ಹಾಗೆ, ಬೆರಗುಗೊಳಿಸುವ ವಿಷಯವನ್ನು ನಾವು ನೋಡಿದೆವು—ಇಬ್ಬರು ಕ್ರೈಸ್ತ ಸಹೋದರಿಯರು ಸಾಕ್ಷಿ ನೀಡುತ್ತಿದ್ದರು! ಸರಬರಾಯಿಯು ಕಡಿಮೆಯಾದುದರಿಂದ ಆಹಾರಕ್ಕಾಗಿ ಕಾಡುಗಳಲ್ಲಿ ಹುಡುಕಲು ಸಹೋದರರು ಹೋಗಬೇಕಾಗುವುದು ಎಂದು ಮುಂಚಿನ ದಿನದ ಅವರ ಕೂಟದಲ್ಲಿ ತೀರ್ಮಾನಿಸಲಾಗಿತ್ತು ಎಂದು ನಾವು ತಿಳಿದುಕೊಂಡೆವು. ನಾವು ಸಕಾಲದಲ್ಲಿ ಬಂದು ತಲುಪಿದೆವು! ಬೆಳಗ್ಗೆ 4 ಘಂಟೆಗೆ ಟ್ರಕ್ಗಳಲ್ಲೊಂದರಿಂದ ನಾವು ಸಾಮಗ್ರಿಗಳನ್ನು ಇಳಿಸಿದೆವು, ಆಗ ರಸ್ತೆಯಲ್ಲಿ ಯಾರೂ ಇರಲಿಲ್ಲ.
ಮರುದಿನ ನಾವು ಒಬ್ಬ ಜೆನೆರಲ್ನನ್ನು ಸಂಪರ್ಕಿಸಿದೆವು, ಜೆನಟ್ಸಕ್ಕೆ ಬರಲು ಶಕ್ತರಾದುದಕ್ಕಾಗಿ ಅವನಿಗೆ ಬಹಳಷ್ಟು ಆಶ್ಚರ್ಯವಾಯಿತು. ನಮ್ಮ ಮುಂದಿನ ಗಮ್ಯಸ್ಥಾನವಾದ ಸಾರಯೆವೊಗೆ ಪ್ರಯಾಣಿಸುವ ಕುರಿತು ನಾವು ವಿಚಾರಿಸಿದೆವು.
“ತಿಂಗಳುಗಳಿಂದ ಅಲ್ಲಿಗೆ ಟ್ರಕ್ ಮೂಲಕ ಹೋಗುವ ಸಾಹಸಕ್ಕೆ ಯಾರೂ ಧೈರ್ಯಪಟ್ಟಿರುವುದಿಲ್ಲ,” ಎಂದು ಜೆನೆರಲ್ ಹೇಳಿದನು. ಕೊನೆಗೂ ಅವನು ಪರ್ವತಗಳನ್ನು ದಾಟಿ ಪ್ರಯಾಣಿಸಲು ನಮಗೆ ಪರವಾನಗಿಯನ್ನಿತ್ತನು. “ಆದರೆ ನಾನು ನಿಮಗೆ ಹೇಳುತ್ತೇನೆ, ಅದನ್ನು ಮಾಡುವುದು ಕಷ್ಟಮಯ,” ಎಂದವನು ಎಚ್ಚರಿಸಿದನು. “ನಿಮ್ಮ ಟ್ರಕ್ಗಳು ನಿಮ್ಮ ಗಮ್ಯಸ್ಥಾನಕ್ಕೆ ತಲುಪುವಷ್ಟು ಶಕ್ತಿಯುತವಾಗಿದೆ ಎಂಬುದರಲ್ಲಿ ನನಗೆ ನಿಶ್ಚಯವಿಲ್ಲ.”
ಜೆನೆರಲ್ನು ಹೇಳಿದ್ದರಲ್ಲಿ ಅತಿಶಯೋಕಿಯ್ತಿರಲಿಲ್ಲ. ನಾವು ಸಾರಯೆವೊನಿಂದ ಕೇವಲ 40 ಕಿಲೊಮೀಟರುಗಳಷ್ಟು ದೂರವಿದ್ದರೂ, ಕಾಡುಗಳ ಮೂಲಕ 140 ಕಿಲೊಮೀಟರುಗಳ ಬಳಸುಹಾದಿಯನ್ನುಪಯೋಗಿಸಬೇಕಾಗಿ ಬಂತು! ಕೆಲವೊಮ್ಮೆ ಘಂಟೆಗೆ ಕೇವಲ 5 ಕಿಲೊಮೀಟರುಗಳಷ್ಟು ವೇಗದಲ್ಲಿ ಚಲಿಸುತ್ತಾ, ಸೆನಟ್ಸದಿಂದ ಸಾರಯೆವೊನ ಮೂಲಕ ಜಬ್ಲಾನಿಕದ ಪ್ರಯಾಣಕ್ಕೆ ಮೂರು ದಿನ ಮತ್ತು ಎರಡು ರಾತ್ರಿಗಳು ತಗಲಿದ್ದನ್ನು ನಾವೆಂದಿಗೂ ಮರೆಯಲಾರೆವು. “ರಸ್ತೆ”ಯು ಶಸ್ತ್ರಸಜ್ಜಿತ ವಾಹನಗಳ ಪುನರಾವರ್ತಿಸಲ್ಪಟ್ಟ ಚಲನೆಯಿಂದ ಉಂಟಾದ ಒಂದು ಹಾದಿಯಾಗಿತ್ತು. ಅಂಜಿಸುವ ಬಂಡೆಗಳ ಮತ್ತು ಗುಂಡಿಗಳ ಮೇಲಿನಿಂದ ನಾವು ವಾಹನ ನಡಿಸಿದೆವು. ಆಗಾಗ್ಗೆ ನಾವು ಬೆಳಕಿಲ್ಲದೆ ವಾಹನ ಚಲಾಯಿಸಬೇಕಾಗಿ ಬಂತು, ಮತ್ತು ಎರಡು ಸಂದರ್ಭಗಳಲ್ಲಿ ನಮ್ಮ ಟ್ರಕ್ಗಳು ಅಪಾಯಕರ ಗುಡ್ಡಗಳಲ್ಲಿ ಬಹುತೇಕ ಜಾರಿದವು. ನಮ್ಮ ವಾಹನಸಾಲನ್ನು ಹಿಂಬಾಲಿಸುವ ಸೇನೆಯ ಒಂದು ಟ್ರಕ್ ಒಂದು ಕ್ಷಣ ಬೆಳಕನ್ನು ಪ್ರಕಾಶಿಸಿತು ಮತ್ತು ತಕ್ಷಣವೇ ಗುಂಡುಗಳು ನಮ್ಮ ಕಡೆಗೆ ಹಾರಿಸಲ್ಪಟ್ಟವು. ಕೆಲವು ಸಲ ನಾವು ಹಾನಿಗೊಂಡ ಸೇತುವೆಗಳನ್ನು ಮತ್ತು ಟಯರುಗಳನ್ನು ಸರಿಪಡಿಸಬೇಕಾಗುತ್ತಿತ್ತು.
ಸಾರಯೆವೊವಿನ ಹೊರವಲಯಕ್ಕೆ ನಾವು ಆಗಮಿಸಿದಾಗ, ಅಧಿಕಾರದಲ್ಲಿದ್ದ ಜೆನೆರಲ್ರೊಡನೆ ಮಾತಾಡಲು ನಾವು ಕೇಳಿಕೊಂಡೆವು. ನಾವು ಕಾಯುತ್ತಿರುವಾಗ, ಟ್ರಕ್ ಒಂದರಲ್ಲಿ ಹತ್ತು ಹೆಣಗಳನ್ನು ಮತ್ತು ರುಂಡಗಳು ತುಂಬಿರುವ ಗೋಣಿಯ ಚೀಲವನ್ನು ನಾವು ನೋಡಿದೆವು; ಹೆಣಗಳನ್ನು ಒಪ್ಪಿಸಲು ಸೈನಿಕರು ಸಮಾಲೋಚನೆ ನಡಿಸುತ್ತಿದ್ದರು. ಇದು ಖಂಡಿತವಾಗಿಯೂ ಅಹಿತಕರವಾದ ಒಂದು ನೋಟವಾಗಿದ್ದು, ಯುದ್ಧವು ನಿಲ್ಲಿಸಲ್ಪಡುವ ಆ ದಿನಕ್ಕಾಗಿ ಹಾತೊರೆಯುವಂತೆ ನಮ್ಮನ್ನು ಮಾಡಿತು.—ಯೆಶಾಯ 2:4.
ಬೆಳಗ್ಗೆ ಹತ್ತು ಘಂಟೆಗೆ, ನಮ್ಮಲ್ಲಿ ಒಬ್ಬನಿಗೆ ಜೆನೆರಲ್ ಮತ್ತು ಅವನ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕೇವಲ ಒಂದು ಮೊಂಬತ್ತಿಯಿಂದ ಬೆಳಕಿಸಲ್ಪಟ್ಟ ಕತ್ತಲೆಯ ಕೋಣೆಯಲ್ಲಿ ಮಾತಾಡುವ ಪರವಾನಗಿ ಸಿಕ್ಕಿತು.
“ನೀವು ಯಾರು?” ಜೆನೆರಲ್ ಕೇಳಿದನು.
“ನಾವು ಯೆಹೋವನ ಸಾಕ್ಷಿಗಳು. ಸಾರಯೆವೊನಲ್ಲಿರುವ ನಮ್ಮ ಜೊತೆ ಸಾಕ್ಷಿಗಳಿಗೆ ನಾವು ಆಹಾರವನ್ನು ಕೊಂಡೊಯ್ಯಲು ಬಯಸುತ್ತೇವೆ.”
“ಸಾರಯೆವೊನಲ್ಲಿ ಬಹಳ ಮಂದಿ ಯೆಹೋವನ ಸಾಕ್ಷಿಗಳು ಇದ್ದಾರೆಂದು ನಿಮಗೆ ಗೊತ್ತೋ?”
“ಹೌದು, ಅದಕ್ಕಾಗಿಯೇ ನಾವಿಲ್ಲಿ ಇದ್ದೇವೆ.”
ಅನಂತರ ಜೆನೆರಲ್ನು ಒಬ್ಬ ಸಾಕ್ಷಿಯ ಹೆಸರನ್ನು ಹೇಳಿದನು. “ನೀವು ಅವನನ್ನು ಬಲ್ಲಿರೋ?”
“ಹೌದು, ಅವನು ನಮ್ಮ ಸ್ನೇಹಿತನು.”
“ಅವನು ನನ್ನ ಸ್ನೇಹಿತನೂ ಸಹ,” ಅಂದನು ಜೆನೆರಲ್. “ನಾವಿಬ್ಬರೂ ಒಟ್ಟಿಗೆ ಶಾಲೆಗೆ ಹೋಗಿದ್ದೆವು. ಅವನು ಒಬ್ಬ ಸಾಕ್ಷಿಯಾದ ಅನಂತರ, ನಾನು ಅವನನ್ನು ಇನ್ನೂ ಹೆಚ್ಚಾಗಿ ಮೆಚ್ಚುತ್ತೇನೆ. ಅವನು ನಿಮ್ಮ ಜನರಿಗಾಗಿ ಬಹಳಷ್ಟನ್ನು ಮಾಡಿದ್ದಾನೆ. ಯೆಹೋವನ ಸಾಕ್ಷಿಗಳ ಕುರಿತು ನಮಗೆ ಇನ್ನಷ್ಟನ್ನು ದಯಮಾಡಿ ಹೇಳಿರಿ.”
ಒಂದು ತಾಸಿನ ಚರ್ಚೆಯು ಆದನಂತರ, ಒಂದು ಡಜನಿಗಿಂತಲೂ ಅಧಿಕ ಪತ್ರಿಕೆಗಳು ಮತ್ತು ಬ್ರೋಷರ್ಗಳು ನೀಡಲ್ಪಟ್ಟವು. ಎರಡನೆಯ ಭೇಟಿಯ ಅನಂತರ, ಸಾರಯೆವೊವಿನ ಸಹೋದರರಿಗೆ ಪರಿಹಾರ ಸಾಮಗ್ರಿಗಳನ್ನು ನೀಡಸಾಧ್ಯವಾಗುವಂತೆ ಜೆನೆರಲ್ನು ವಿಶೇಷ ಏರ್ಪಾಡುಗಳನ್ನು ಮಾಡಲು ಸಮ್ಮತಿಸಿದನು.
ಇದೊಂದು ಸಣ್ಣ ಜವಾಬ್ದಾರಿಯಾಗಿರಲಿಲ್ಲ. ಕೆಲವು ಮಂದಿ ಸಾಕ್ಷಿಗಳಲ್ಲದವರ ಸಹಿತ ಸುಮಾರು 30 ವ್ಯಕ್ತಿಗಳಲ್ಲಿ ಪ್ರತಿಯೊಬ್ಬನು ಸುಮಾರು 27 ಕಿಲೊಗ್ರಾಮ್ಗಳಷ್ಟು ಭಾರದ ಪಾರ್ಸೆಲುಗಳನ್ನು ಪ್ರಯಾಸದಿಂದ ಎಳೆದರು. ಅವರು ರಾತ್ರಿ ಎಂಟು ಘಂಟೆಯಿಂದ ಬೆಳಗ್ಗೆ ಐದು ಘಂಟೆಯ ವರೆಗೆ ಎರಡು ರಾತ್ರಿ ದುಡಿದರು—ಮೊತ್ತದಲ್ಲಿ 18 ತಾಸುಗಳು. ಒಬ್ಬ ಹಿರಿಯನು ವರ್ಣಿಸಿದ್ದೇನಂದರೆ ಅವನ ನೆರೆಯವರು ಪರಿಹಾರ ಪ್ರಯತ್ನಗಳಿಂದ ಎಷ್ಟು ಪ್ರಭಾವಿತರಾದರೆಂದರೆ ಸಹೋದರರೊಂದಿಗೆ ಅವರು ಮೊಣಕಾಲೂರಿ ಯೆಹೋವನಿಗೆ ಉಪಕಾರಸ್ತುತಿ ಸಲ್ಲಿಸಿದರು! ನಿಶ್ಚಯವಾಗಿ, ಅವರೂ ಸ್ವಲ್ಪ ಆಹಾರವನ್ನು ಪಡೆದರು.
ನಮ್ಮ ಸಹೋದರರು ಸುಮಾರು 11,000 ಕಿಲೊಗ್ರಾಮ್ಗಳಷ್ಟು ತೂಕದ ಪರಿಹಾರ ಸಾಮಗ್ರಿಯನ್ನು ಪಡೆದಾಗ ನಮ್ಮ ಸಹೋದರರ ಆನಂದವನ್ನು ಊಹಿಸಿರಿ! ಸನ್ನಿವೇಶವು ಅತಿ ನಿರಾಶಜನಕವಾಗಿತ್ತು. ಸ್ಥಳಿಕವಾಗಿ, ಒಂದು ಕಿಲೊಗ್ರಾಮ್ ಹಿಟ್ಟಿನ ಕ್ರಯ ಸುಮಾರು ರೂ. 8700 ಮತ್ತು ರೂ. 19,220 ನಡುವೆ ಇತ್ತು. ಒಂದು ಗೋಣಿ ಸೌದೆಯ ಕ್ರಯ ಸುಮಾರು ರೂ. 7,750, ಮತ್ತು ಒಂದು ಲೀಟರ್ ಡೀಸಲ್ ಇಂಧನದ ಕ್ರಯವು ರೂ. 620 ಇತ್ತು.
ನಾವು ದಾರಿಯಲ್ಲಿ ಎದುರಿಸಿದಂತಹ ಪ್ರತಿಯೊಂದು ಅಪಾಯಕ್ಕೆ ಈಗ ನಮಗೆ ಪ್ರತಿಫಲ ಸಿಕ್ಕಿತೊ ಎಂಬಂತೆ ಅದಿತ್ತು. ಈ ಪರಿಹಾರ ಸರಬರಾಯಿಗಳು ಸಹೋದರರಿಗೆ ದೊರಕಿದಾಗ, ಅವರ ಆನಂದವನ್ನು ಅವಲೋಕಿಸುವುದರಲ್ಲಿ ನಾವು ಆನಂದಿಸಿದೆವು. ಅವರು ಮತ್ತು ನಾವು ಎಂದಿಗೂ ಮರೆಯದಿರುವ ಅನುಭವ ಅದಾಗಿತ್ತು. ಆದರೆ ಈಗ ಮನೆಗೆ ಹಿಂದೆರಳುವ ಕಷ್ಟಮಯ ಕೆಲಸದ ಕುರಿತು ಯೋಚಿಸಲು ಆರಂಭಿಸಬೇಕಾಗಿತ್ತು.
ಮನೆಗೆ ಹಿಂದೆರಳುವುದು
“ಯಾವ ಮಾರ್ಗದಿಂದ ನಾವು ಈಗ ಹಿಂದೆರಳತಕ್ಕದ್ದು?” ನಾವು ಜೆನೆರಲ್ನನ್ನು ವಿಚಾರಿಸಿದೆವು.
“ಯಾವ ಮಾರ್ಗದಿಂದ ಬಂದಿದ್ದೀರೋ ಅದೇ ಮಾರ್ಗದಿಂದ,” ಅವನು ಉತ್ತರಿಸಿದನು.
ನಾವು ದಣಿದಿದ್ದೆವು, ಇಂಧನವು ಕಡಿಮೆಯಾಗಿತ್ತು, ಮತ್ತು ಹೆಚ್ಚಿನ ಟಯರುಗಳು ಇರಲಿಲ್ಲ. ಮಳೆಯು ಬರಲಾರಂಭಿಸಿತು, ಮತ್ತು ಕೆಸರಿನ ಮೂಲಕ ನಮಗೆ ಪ್ರಯಾಣಿಸಲು ಸಾಧ್ಯವಿರಲಿಲ್ಲ. ನಾವು ದಕ್ಷಿಣಕ್ಕೆ ಪ್ರಯಾಣಿಸ ಸಾಧ್ಯವಿದೆಯೊ ಎಂದು ಜೆನೆರಲ್ನನ್ನು ವಿಚಾರಿಸಿದೆವು.
“ಅಲ್ಲಿ ಈಗ ಭಾರಿ ಕಾದಾಟವು ನಡೆಯುತ್ತಾ ಇದೆ,” ಅಂದನು ಅವನು. “ಒಂದು ಇಲಿ ಸಹಿತ ಸುರಕ್ಷಿತವಾಗಿ ಅಲ್ಲಿಂದ ದಾಟಿ ಮುಂದಕ್ಕೆ ಹೋಗಲು ಸಾಧ್ಯವಿಲ್ಲ.” ಆದಾಗ್ಯೂ, ಸ್ವಲ್ಪ ಸಮಯದ ಅನಂತರ ಅವನು ಪುನಃ ಪರಿಗಣಿಸಿದನು. “ಅದನ್ನು ಪ್ರಯತ್ನಿಸಿರಿ,” ಅವನಂದನು. “ಎಷ್ಟೆಂದರೂ ಇಲ್ಲಿಯ ವರೆಗೆ ಬರುವುದರಲ್ಲಿ ನೀವು ಜಯಪ್ರದರಾಗಿದ್ದೀರಿ.”
ನಾವು ಒಂದು ಟ್ರಕ್ನ್ನು ಸಾರಯೆವೊನಲ್ಲಿ ಹಿಂದಕ್ಕೆ ಬಿಟ್ಟು ಬರಬೇಕಾಯಿತು ಮತ್ತು ಅದರ ಇಂಧನವನ್ನು ಇತರ ಮೂರು ಟ್ರಕ್ಗಳಲ್ಲಿ ನಾವು ವಿತರಿಸಿಕೊಂಡೆವು. ನಾವು ಮಧ್ಯರಾತ್ರಿ ಅಲ್ಲಿಂದ ಬಿಟ್ಟು, ಪುನಃ ಕಾಡುಗಳ ಮೂಲಕ ವಾಹನ ಚಲಾಯಿಸಿದೆವು.
ನಮ್ಮ ಹಿಂದೆರಳುವ ಪಯಣವು ಸಮಸ್ಯೆಗಳಿಲ್ಲದ್ದಾಗಿರಲಿಲ್ಲ. ಸೇನೆಯ ಒಂದು ಟ್ರಕ್ ರಸ್ತೆಯಲ್ಲಿ ಮಗುಚಿ ಬಿದ್ದಿತ್ತು, ಇದರಿಂದ ನಮಗೆ ದಾಟಿಹೋಗಲು ಆವಶ್ಯಕವಾಗಿದ್ದ ಸೇತುವೆಯನ್ನು ಅದು ಆಂಶಿಕವಾಗಿ ತಡೆಯುತ್ತಿತ್ತು. ನಾವು ಅದರ ಒಂದು ಚಕ್ರವನ್ನು ಕಳಚಿದರೆ ದಾಟಿಹೋಗಲು ಬೇಕಾಗುವಷ್ಟು ಸ್ಥಳಾವಕಾಶ ಉಂಟಾಗುತ್ತಿತ್ತು.
ಸಶಸ್ತ್ರನಾಗಿದ್ದ ಸೈನಿಕನಿಗೆ ನಾವು ಮನವಿ ಮಾಡಿದೆವು. “ನಾವು ಒಂದು ಚಕ್ರವನ್ನು ಕಳಚಿ, ಸೇತುವೆಯನ್ನು ನಾವು ದಾಟಿದ ಅನಂತರ ಪುನಃ ಜೋಡಿಸಿಕೊಡಬಹುದೋ?”
“ನೀವು ಚಕ್ರವನ್ನು ಮುಟ್ಟಿದರೆ, ನನ್ನ ಬಂದೂಕು ಕೆಲಸಮಾಡಬೇಕಾಗುತ್ತದೆ,” ಎಂದು ಸೈನಿಕನು ಅವನ ಆಯುಧವನ್ನು ಗುರಿಯಿಡುತ್ತಾ ಉತ್ತರಿಸಿದನು.
ಸ್ವಲ್ಪ ಕಾಫಿಯನ್ನು ಮಾಡಿ, ಒಂದು ಕಪ್ಪನ್ನು ಸೈನಿಕನಿಗೆ ಕೊಡಲು ಯೋಚಿಸಿದೆವು. ಸುಮಾರು ಕೆಲವು ತಾಸುಗಳ ತನಕ ಸಾಗ್ರೆಬ್ನಲ್ಲಿ ನಡೆದಂತಹ ರೀತಿಯ 1991ರ ನಮ್ಮ ಅಂತಾರಾಷ್ಟ್ರೀಯ ಅಧಿವೇಶನಗಳ ಕುರಿತು ಅವನಿಗೆ ಹೇಳಿದೆವು. ಅನಂತರ, ಅವನ ಮನೋಭಾವವು ಸ್ವಲ್ಪ ಮೃದುವಾಯಿತು, ಮತ್ತು ಚಕ್ರವನ್ನು ಕಳಚಲು ಅವನು ಅನುಮತಿಸಿದನು.
ಯಾಬಿನ್ಲಿಟ್ಸದಲ್ಲಿ ನಮ್ಮಲ್ಲೊಬ್ಬನು ನಾವು ಪ್ರಯಾಣಿಸಬೇಕಾದ ಮಾರ್ಗದ ಕುರಿತು ಒಬ್ಬ ಕಮಾಂಡರ್ನೊಡನೆ ಮಾತಾಡಿದನು. ಅವನೇನನ್ನು ಆಲಿಸುತ್ತಿದ್ದನೋ ಅದನ್ನು ನಂಬಲಿಕ್ಕೆ ಅವನಿಗೆ ಆಗಲಿಲ್ಲ. “ನೀವು ಆ ನೆರ್ವಿಟಾ ಕಣಿವೆಯ ಮೂಲಕ ಹೋಗಲು ಬಯಸುತ್ತೀರೋ?”
ಅವನು ಯೋಗ್ಯವಾಗಿಯೆ ಚಿಂತಿತನಾದನು. ನೆರಟ್ವಾ ಕಣಿವೆಯ ಗುಡ್ಡಪಕ್ಕಗಳು ಬೇರೆ ಬೇರೆ ಸೇನೆಗಳ ನಿಯಂತ್ರಣದಲ್ಲಿವೆ. ಅವನು ಎಡೆಬಿಡದೆ ಒಬ್ಬರು ಇನ್ನೊಬ್ಬರೆಡೆಗೆ ಗುಂಡುಹಾರಿಸುತ್ತಿದ್ದಾರೆ. ಸುಮಾರು 16 ಕಿಲೊಮೀಟರುಗಳಷ್ಟು ರಸ್ತೆಯು ಅಪಾಯಕರವಾಗಿದೆ. “ಮಾರ್ಗವು ಇರುವುದೇ ಆ ರೀತಿಯಲ್ಲಿ,” ಅಂದನು ಜೆನೆರಲ್, “ಮತ್ತು ಹಾಗಿದ್ದರೂ ನೀವು ಅದನ್ನು ದಾಟಿಹೋಗಲು ಬಯಸುತ್ತೀರೊ?”
ವಿಷಯವನ್ನು ತೂಗಿನೋಡಿದ ಅನಂತರ, ಜೆನೆರಲ್ನು ಹೇಳಿದ್ದೇನಂದರೆ ನಾವು ಹೋಗಸಾಧ್ಯವಿದೆ—ಆದರೆ ನಮ್ಮೊಂದಿಗೆ ಅಧಿಕೃತ ಅಧಿಕಾರಿಗಳು ಜತೆಗೂಡಿ ಇದ್ದರೆ ಮಾತ್ರ. ಆದರೆ, ಈ ಅಧಿಕಾರಿಗಳು ನಮ್ಮೊಂದಿಗೆ ಬರಲು ಸಮ್ಮತಿಸತ್ತಿರಲಿಲ್ಲ! ಕಟ್ಟಕಡೆಗೆ, ಕೇವಲ ಆಚೇ ಪಕ್ಕದಲ್ಲಿರುವವರೊಡನೆ ಸಂಪರ್ಕಿಸಿ, ನಾವು ದಾಟಿಹೋಗುವುದನ್ನು ತಿಳಿಸಿರಿ ಎಂದು ಅವರನ್ನು ವಿನಂತಿಸಿದೆವು. ಮರುದಿನ ಬೆಳಗ್ಗೆ ಮೈಗಾವಲು ಇಲ್ಲದೆ ನಾವು ದಾಟಿ ಹೋಗಲಿದ್ದೆವು.
ಮಾನವ ಹಿತಸಾಧನೆಯ ನೆರವನ್ನು ಸಾಗಿಸುತ್ತವೆ ಎಂಬುದನ್ನು ನಮ್ಮ ಟ್ರಕ್ಗಳ ಮೇಲೆ ದೊಡ್ಡ ಅಕ್ಷರಗಳ ಹೆಸರು ಪಟ್ಟಿಯನ್ನು ಹಚ್ಚಿದೆವು. ಪ್ರಾರ್ಥನೆಯನ್ನು ಮಾಡಿದ ಅನಂತರ, ನಾವು ಕಣಿವೆಯೊಳಗೆ ವಾಹನ ನಡಿಸಿಕೊಂಡು ಹೋದೆವು. ಗುಂಡುಗಳು ಹಾರಿಸಲ್ಪಟ್ಟರೆ, ನಮ್ಮ ವೇಗವನ್ನು ಹೆಚ್ಚಿಸೆವು ಮತ್ತು ಸಂಶಯವನ್ನು ಉಂಟುಮಾಡೆವು ಎಂದು ನಾವು ಸಹಮತಿಸಿಕೊಂಡೆವು.
ನಾವು ಸೇತುವೆಯನ್ನು ದಾಟಿ ನದಿಯ ಆಚೇಪಕ್ಕಕ್ಕೆ ಹೋದೆವು ಮತ್ತು ಪ್ರಾಣಿಗಳ ಹೆಣಗಳನ್ನು ಮತ್ತು ವಿಧ್ವಂಸಗೊಳಿಸಲ್ಪಟ್ಟ ಟ್ರಕ್ಗಳನ್ನು ಮತ್ತು ಟ್ಯಾಂಕುಗಳನ್ನು ದಾಟಿ, ಇನ್ನೊಂದು ಕಣಿವೆಯ ಮೂಲಕ ಮುಂದುವರಿದೆವು. ಫಕ್ಕನೇ ನಾವು ರಸ್ತೆಯ ಮೇಲೆ ನೆಲದಲ್ಲಿ ಸಿಡಿಮದ್ದು ಬಿದ್ದಿರುವುದನ್ನು ಕಂಡೆವು. ಇದು ನಮಗೆ ದಾಟಿಹೋಗುವುದನ್ನು ಅಸಾಧ್ಯ ಮಾಡಿತು. ಇಬ್ಬರು ಸೈನಿಕರು ಒಂದು ಬಂಡೆಯ ಹಿಂದಿನಿಂದ ತೂರಿನೋಡುವ ತನಕ, ನಾವು ನಮ್ಮ ಟ್ರಕ್ನ ಹಾರ್ನನ್ನು ಬಾರಿಸಿದೆವು. “ನೀವು ಯಾರು? ನಿಮಗೇನು ಬೇಕು?” ಎಂದವರು ಕೇಳಿದರು.
ನಮ್ಮನ್ನು ಗುರುತಿಸಿಕೊಂಡ ಅನಂತರ, ಅವರು ಮಾರ್ಗವನ್ನು ತೊಡಕಿಲ್ಲದಂತೆ ಮಾಡುವರೊ ಎಂದು ನಾವು ವಿಚಾರಿಸಿದೆವು, ಮತ್ತು ಅವರು ಒಪ್ಪಿದರು. ಕೊನೆಗೂ ನಾವು ಆಚೇ ಪಕ್ಕವನ್ನು ತಲುಪಿದೆವು.
ನಮ್ಮನ್ನು ನೋಡಿ ಸೈನಿಕರು ಬೆರಗಾದರು. ಅವರು ತಮ್ಮ ಅಡಗಿಕೊಳ್ಳುವ ತಾಣಗಳಿಂದ ಮೆಲ್ಲನೆ ಹೊರಬಂದರು, ಅವರ ತೋಪುಗಳನ್ನು ನೇರವಾಗಿ ನಮ್ಮೆಡೆಗೆ ಗುರಿಮಾಡಿಟ್ಟುಕೊಂಡು ಟ್ರಕ್ಗಳನ್ನು ಸಮೀಪಿಸಿದರು. ನಮ್ಮ ಲೈಸೆನ್ಸ್ ಪ್ಲೇಟ್ಗಳೊಂದಿಗೆ ನಮ್ಮ ರಹದಾರಿ ಪತ್ರಗಳನ್ನು ನಾವು ತೋರಿಸಿದೆವು, ಯುದ್ಧಗ್ರಸ್ತ ವಲಯಗಳ ಮೂಲಕ ನಾವು ವಾಹನ ಚಲಾಯಿಸುವಾಗ ಭದ್ರತೆಯ ಕಾರಣಗಳಿಗಾಗಿ ನಾವಿದನ್ನು ಮಾಡಿಕೊಂಡಿದ್ದೆವು.
“ನಿಮ್ಮನ್ನು ಯಾರೂ ನಿರೀಕ್ಷಿಸಿರಲಿಲ್ಲ,” ಎಂದು ಒಬ್ಬ ಸೈನಿಕನು ಹೇಳಿದನು. “ನೀವು ಹೇಗೆ ದಾಟಿಕೊಂಡು ಬರಲು ಸಾಧ್ಯವಾಯಿತು?”
ನಮ್ಮ ಕೇಳಿಕೆಗೆ ಪ್ರತಿವಿರುದ್ಧವಾಗಿ, ಈ ತನಿಖೆಕಟ್ಟೆಗಳಿಗೆ ನಾವು ಬರುತ್ತೇವೆ ಎಂದು ಸುದ್ದಿಯನ್ನೇ ಕೊಟ್ಟಿರಲಿಲ್ಲ! ಅಧಿಕಾರಿಯು ಮುಂದುವರಿಸಿದ್ದು: “ನಮ್ಮ ಬಂದೂಕುಗಳು ಸಿದ್ಧವಾಗಿ ಇಡಲ್ಪಟ್ಟಿದ್ದವು ಮತ್ತು ನಾವು ಗುಂಡು ಹಾರಿಸುವುದರಲ್ಲಿದ್ದೆವು.”
ಅವರು ಅದನ್ನು ಏಕೆ ಮಾಡಲಿಲ್ಲವೆಂದು ನಾವು ವಿಚಾರಿಸಿದೆವು.
“ನನಗೇನೂ ಕಲ್ಪನೆಯಿಲ್ಲ,” ಎಂದು ಸೈನಿಕನು ಉತ್ತರಿಸಿದನು. “ಅದು ನಿಮ್ಮ ಭಾಗ್ಯವೆಂದೇ ನನ್ನ ನಂಬಿಕೆ. ಆದರೆ ನಮ್ಮ ದುರ್ಬೀನುಗಳ ಮೂಲಕ ನಿಮ್ಮನ್ನು ನಾವು ನೋಡಿದಾಗ, “ಮಾನವ ಹಿತಸಾಧನೆಯ ನೆರವು” ಹೆಸರುಪಟ್ಟಿಯನ್ನು ನಾವು ನೋಡಿದೆವು, ಮತ್ತು ಆಗ ನಿಮ್ಮನ್ನು ಏನು ಮಾಡುವುದು ಎಂದು ನಮಗೆ ತಿಳಿಯಲಿಲ್ಲ. ಅಂತೂ ನೀವು ಸುರಕ್ಷಿತವಾಗಿ ಆಗಮಿಸಿದಿರಿ.” ಸಂರಕ್ಷಣೆಗಾಗಿ ನಾವು ಅನಂತರ ಯೆಹೋವನಿಗೆ ಉಪಕಾರಗಳ ಹೃತ್ಪೂರ್ವಕ ಪ್ರಾರ್ಥನೆಯೊಂದನ್ನು ಸಲ್ಲಿಸಿದೆವು.
ಅವರ ಪರಿಸ್ಥಿತಿಗಳು ಕಠಿನವಾಗಿರುವುದಾದರೂ, ಬಾಸ್ನೀಯದಲ್ಲಿರುವ ನಮ್ಮ ಸಹೋದರ, ಸಹೋದರಿಯರ ಆತ್ಮವು ಪ್ರೇರಕವಾಗಿದೆ. ಅವರು ತಮ್ಮೊಡನೆ ಇದ್ದ ಭೌತಿಕ ವಸ್ತುಗಳಲ್ಲಿ ಹಾಗೂ ನಂಬಿಕೆಯ ಮತ್ತು ಪ್ರೋತ್ಸಾಹದ ಅನೇಕ ಮಾತುಗಳಲ್ಲಿ ಪಾಲಿಗರಾದರು. ಜೆನಟ್ಸದಲ್ಲಿ, 2 ಮಂದಿ ವಿಶೇಷ ಪಯನೀಯರರು, 11 ಮಂದಿ ಆಕ್ಸಿಲಿಯರಿ ಪಯನೀಯರರ ಸಹಿತ 40 ಕ್ರಿಯಾಶೀಲ ಸಾಕ್ಷಿಗಳಿದ್ದಾರೆ, ಮತ್ತು 14 ಮಂದಿ ಹೊಸತಾಗಿ ದೀಕ್ಷಾಸ್ನಾನ ಪಡೆದ ವ್ಯಕ್ತಿಗಳಾಗಿದ್ದಾರೆ. ಸಾರಯೆವೊ ನಗರದಲ್ಲಿ 4 ಮಂದಿ ಆಕ್ಸಿಲಿಯರಿ ಪಯನೀಯರರ ಸಹಿತ ಇನ್ನೂ ಇರುವ 65 ಸಾಕ್ಷಿಗಳು 134 ಬೈಬಲ್ ಅಧ್ಯಯನಗಳನ್ನು ನಡಿಸುತ್ತಿದ್ದಾರೆ. ಸಾಕ್ಷಿಗಳು ಪ್ರತಿ ತಿಂಗಳು ಸರಾಸರಿ 20 ತಾಸುಗಳಷ್ಟನ್ನು ಇತರರೊಂದಿಗೆ ದೇವರ ರಾಜ್ಯದ ಸುವಾರ್ತೆಯ ಕುರಿತು ಮಾತಾಡಲು ವ್ಯಯಿಸುತ್ತಾರೆ.
ನಿಜವಾಗಿಯೂ, ಯೆಹೋವನ ಸಾಕ್ಷಿಗಳು ವಿಶ್ವಾಸಿಗಳ ಲೋಕವ್ಯಾಪಕ ಕುಟುಂಬವಾಗಿ ಮಾಡಲ್ಪಟ್ಟಿದ್ದಾರೆ. ವಿಶ್ವಾಸದಲ್ಲಿ ತಮಗೆ ಸಂಬಂಧಿಗಳಾದವರಿಗೆ—ಅವರು ಎಂದಿಗೂ ಭೇಟಿಯಾಗದೆ ಇರುವವರಿಗಾಗಿ ಸಹ—ಒಳ್ಳೆಯದನ್ನು ಮಾಡಲು ಅವರು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿಕೊಳ್ಳಲು ಸಿದ್ಧಮನಸ್ಸುಳ್ಳವರಾಗಿದ್ದಾರೆ. ಏಕೆ? ಏಕೆಂದರೆ ಅವರು ಅವರನ್ನು ಪ್ರೀತಿಸುತ್ತಾರೆ. ಯೇಸು ಕ್ರಿಸ್ತನು ಅಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ನಿಶ್ಚಯವಾಗಿಯೂ, ಬಾಸ್ನೀಯದಲ್ಲಿರುವ ವಿಶ್ವಾಸಿಗಳ ನಮ್ಮ ಕುಟುಂಬದೊಂದಿಗೆ ಇದು ವಾಸ್ತವವಾಗಿದೆ.
[ಪುಟ 24ರಲ್ಲಿರುವಚಿತ್ರ/ಚಿತ್ರಗಳು]
(For fully formatted text, see publication)
ಆಡ್ರಿಯ್ಯಾಟಿಕ್ ಸಮುದ್ರ
ಆಸ್ಟ್ರೀಯ
ಸ್ಲೊವೇನಿಯ
ಹಂಗೆರಿ
ಕ್ರೊಏಷಿಯ
ಬಾಸ್ನೀಯ
ಟ್ರಾವ್ನಿಕ್
ಸರ್ಬಿಯಾ
ಸೆನಟ್ಸ
ಸಾರಯೆವೊ
[ಚಿತ್ರಗಳು]
ಬಾಸ್ನೀಯ ಮತ್ತು ಹೆರ್ಸಗೊವಿನಕ್ಕೆ ನೆರವು ಕೊಂಡೊಯ್ಯಲ್ಪಡುವುದು
[ಪುಟ 26 ರಲ್ಲಿರುವ ಚಿತ್ರ]
ಮಗುಚಿಬಿದ್ದ ಟ್ರಕ್ನ್ನು ಕೊಂಚಕೊಂಚವಾಗಿ ದಾಟುವುದು