ರುಆಂಡದ ನಮ್ಮ ಸಹೋದರರ ಧೈರ್ಯಭರಿತ ವಿಶ್ವಾಸ
ಲೋಕವು 1994ರ ಆರಂಭದಲ್ಲಿ ಆಫ್ರಿಕದ ರುಆಂಡ ದೇಶದಿಂದ ಹೊರಬಂದ ಮಹಾ ಪ್ರಮಾಣದ ಸಾಮೂಹಿಕ ಹತ್ಯೆಯ ವರದಿಗಳಿಂದ ಧಿಗ್ಭಮ್ರೆಗೊಂಡಿತು. ಪಾಶವೀಯ ಆಂತರಿಕ ಯುದ್ಧವೊಂದು ಸ್ಫೋಟಿಸಿತ್ತು—ಶತಕಗಳ ವೈರತ್ವದ ಪರಾಕಾಷ್ಠೆ.
ಕಾನೂನು ಮತ್ತು ವ್ಯವಸ್ಥೆಯ ಸಮಗ್ರ ಕುಸಿತವನ್ನು ಎದುರಿಸುತ್ತಾ, ರುಆಂಡದಲ್ಲಿರುವ 2000-ಮತ್ತು-ಅಧಿಕ ಯೆಹೋವನ ಸಾಕ್ಷಿಗಳು ತಮ್ಮ ಜೀವಗಳಿಗಾಗಿ ಪಲಾಯನಗೈಯುವಂತೆ ಬಲಾತ್ಕರಿಸಲ್ಪಟ್ಟರು. ಸುಮಾರು 1,300 ಮಂದಿ ಸಾಎರ್ ಮತ್ತು ಟಾನ್ಸೆನೀಯದಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯವನ್ನು ಕಂಡುಕೊಂಡರು, ಆದರೆ ಕೆಲವರು ಸಕಾಲದಲ್ಲಿ ಪಾರಾಗಲು ಶಕ್ತರಾಗಲಿಲ್ಲ. ನಮ್ಮ ಸಹೋದರ, ಸಹೋದರಿಯರಲ್ಲಿ ಸುಮಾರು 400 ಮಂದಿ—ವಯಸ್ಕರು ಮತ್ತು ಮಕ್ಕಳು, ಎಲ್ಲರೂ ಅಯೋಧರೇ—ಬುದ್ಧಿಕೆಟ್ಟ ಹಿಂಸಾಚಾರದಿಂದ ಅಳಿದುಹೋದರು ಎಂದು ವರದಿಸಲು ನಮಗೆ ದುಃಖವಾಗುತ್ತದೆ. ಈ ಧೈರ್ಯಶಾಲಿ ಸಮಗ್ರತೆ ಪಾಲಕರ ನಷ್ಟದಲ್ಲಿ ಲೋಕಾದ್ಯಂತ ಕ್ರೈಸ್ತರು ಶೋಕಿಸುತ್ತಾರೆ ಮತ್ತು ಪುನರುತ್ಥಾನದ ಬೈಬಲಿನ ವಾಗ್ದಾನದಲ್ಲಿ ಸಾಂತ್ವನಪಡೆಯುತ್ತಾರೆ.—ಯೋಹಾನ 11:25.
ರುಆಂಡದ ಪಾರಾಗಿ ಉಳಿದಿರುವ ಸಹೋದರ, ಸಹೋದರಿಯರು ಹೇಗೆ ನಿಭಾಯಿಸಿದ್ದಾರೆ? ವಿಷಯಗಳನ್ನು ನೇರವಾಗಿ ವಿಚಾರಿಸಲು ಅನೇಕ ದೇಶಗಳಿಂದ ಹಿರಿಯರು ಕಳುಹಿಸಲ್ಪಟ್ಟರು. ರುಆಂಡದ ಸಹೋದರರು ಸನ್ನಿವೇಶವನ್ನು “ಅತಿ ಘನತೆ ಮತ್ತು ಧೈರ್ಯದಿಂದ” ಎದುರಿಸಿದ್ದಾರೆಂದು ಒಂದು ವರದಿಯು ಹೇಳುತ್ತದೆ. ಉದಾಹರಣೆಗೆ, ಸಹೋದರರು ಮಾಡಿದ ಮೊದಲ ಬೇಡಿಕೆಗಳಲ್ಲಿ ಒಂದು ಬೈಬಲ್ ಸಾಹಿತ್ಯವಾಗಿದೆ. ‘ಅನೇಕ ವಸ್ತುಗಳ ತುರ್ತು ಜರೂರಿಯಲ್ಲಿ ಅವರು ಇದ್ದರೂ ಸಹ, ಭೌತಿಕ ಸಹಾಯಕ್ಕಿಂತಲೂ ಆತ್ಮಿಕ ಆಹಾರವನ್ನು ಪಡೆಯುವುದರ ಕುರಿತು ಅವರು ಹೆಚ್ಚು ಚಿಂತಿತರಾಗಿದ್ದರೆಂದು ಭಾಸವಾಗುತ್ತದೆ,’ ಎನ್ನುತ್ತಾ ವರದಿಯು ಮುಕ್ತಾಯಗೊಳ್ಳುತ್ತದೆ. ಮತ್ತು ಶಿಬಿರಗಳಲ್ಲಿ ಪರಿಸ್ಥಿತಿಗಳು ಒಡ್ಡೊಡ್ಡಾಗಿದ್ದರೂ ‘ನಮ್ಮ ಸಹೋದರರು ವಾಸಿಸುವ ಸ್ಥಳವು ಅತಿ ಶುಚಿಯಾದದ್ದು.’
ಆಹಾರ, ಕಂಬಳಿಗಳು, ಬಟ್ಟೆಗೆಳು, ಪಾದರಕ್ಷೆಗಳು, ಮತ್ತು ಔಷಧದ ಖರೀದಿಗಾಗಿ ಬೇಕಾದ ಹಣಸಹಾಯವನ್ನು ವಾಚ್ ಟವರ್ ಸೊಸೈಟಿಯು ಒದಗಿಸಿತು. ಫ್ರಾನ್ಸ್ನಲ್ಲಿರುವ ನಮ್ಮ ಸಹೋದರರು ಉದಾರವಾಗಿ ಸಹಾಯವನ್ನಿತ್ತರು, ಮತ್ತು ರುಆಂಡದ ನಮ್ಮ ಜರೂರಿಯಿರುವ ಸಹೋದರರಿಗೆ ಬಹುತೇಕ ಎರಡು ಟನ್ನುಗಳಷ್ಟು ಸರಬರಾಯಿಗಳು ಜೂನ್ ಆರಂಭದೊಳಗೆ ಕಳುಹಿಸಲ್ಪಟ್ಟವು.
ಈ ವಿದ್ಯಮಾನಗಳು ಒಂದು ಉತ್ತಮ ಸಾಕ್ಷಿಯಲ್ಲಿ ಫಲಿಸಿದವು ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಜೊತೆ ಸಾಕ್ಷಿಗಳಿಂದ ನಮ್ಮ ರುಆಂಡದ ಸಹೋದರರು ಅಂತಹ ಸಹಾಯವನ್ನು ಪಡೆದರು, ಮತ್ತು ಈ ಸಹಾಯವನ್ನು ಇತರರೊಂದಿಗೆ ಹಂಚಲು ಸಾಧ್ಯವಾಯಿತು ಎಂಬ ವಾಸ್ತವಾಂಶದಿಂದ ಅವಲೋಕಿಸುವವರ ಹೃದಯವು ಸ್ಪರ್ಶಿಸಲ್ಪಟ್ಟಿತು. ಶಿಬಿರಗಳಲ್ಲಿ ತಮ್ಮ ಧರ್ಮದ ಸದಸ್ಯರಿಂದ ಭೇಟಿಮಾಡಲ್ಪಟ್ಟವರಲ್ಲಿ ಸಾಕ್ಷಿಗಳು ಏಕೈಕವಾಗಿದ್ದಾರೆ ಎಂದು ಕೆಲವರು ಹೇಳಿದರು!
ನಮ್ಮ ರುಆಂಡದ ಸಹೋದರರ ದುರವಸ್ಥೆಯು ಈ “ಕಡೇ ದಿವಸ” ಗಳಲ್ಲಿ, ಮನುಷ್ಯರು “ಕ್ರೂರರೂ,” “ಹಿಂಸಾತ್ಮಕರೂ” ಆಗುವರು ಎಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತದೆ. (2 ತಿಮೊಥೆಯ 3:1-5; ಟುಡೇಸ್ ಇಂಗ್ಲಿಷ್ ವರ್ಷನ್) ಮತ್ತು ಶಾರೀರಿಕ ಅಪಾಯಗಳಿಂದ ಯೆಹೋವನು ತನ್ನ ಜನರನ್ನು ಅದ್ಭುತಕರವಾಗಿ ಸಂರಕ್ಷಿಸುವನೆಂಬ ಆಶ್ವಾಸನೆಯನ್ನೀಯುವುದಿಲ್ಲವಾದರೂ, ಅವನು ಅವರ ಆತ್ಮಿಕತೆಯನ್ನು ಮತ್ತು ಅವನೊಂದಿಗಿನ ಸಂಬಂಧವನ್ನು ಸುರಕ್ಷಿತವಾಗಿಡುವ, ಮತ್ತು ಈಗ ನಾಶವಾಗುವವರನ್ನು ಕ್ರಿಸ್ತನ ಸಹಸ್ರ ವರ್ಷದ ಆಳಿಕೆಯಲ್ಲಿ ಪುನರುತ್ಥಾನಗೊಳಿಸುವ ವಚನವನ್ನಿತ್ತಿದ್ದಾನೆ. (ಕೀರ್ತನೆ 91:1-10) ಈ ಪರೀಕ್ಷೆಯ ಸಮಯದಲ್ಲಿ ಪಾರಾಗಿ ಉಳಿದಿರುವ ನಮ್ಮ ಸಹೋದರರನ್ನು ಯೆಹೋವನು ಪೋಷಿಸಲಿ ಮತ್ತು ಸಹಾಯ ಮಾಡಲಿ ಎಂಬ ನಮ್ಮ ಪ್ರಾರ್ಥನೆಗಳು ಅವರ ಪರವಾಗಿ ಸಲ್ಲಿಸಲ್ಪಡುವುದು ಮುಂದುವರಿಯುತ್ತಾ ಇರಲಿ.—ಕೀರ್ತನೆ 46:1.