ಒಂದು ವಿಭಾಗಿತವಾದ ಚರ್ಚು ಅದೆಷ್ಟು ಕೆಟ್ಟದಾಗಿದೆ?
“ಯಾವುದರ ಎದುರುಗೋಡೆಯು ದಿಢೀರನೆ ಕುಸಿದು ಬಿದಿದ್ದೆಯೊ ಆ ಮುರುಕು ಮನೆಯಲ್ಲಿ ಜೀವಿಸುತ್ತಿರುವ ಒಂದು ದೊಡ್ಡ ಮತ್ತು ಬೆದರಿಹೋದ ಪರಿವಾರದಂತೆ, ಬಹುಮಟ್ಟಿಗೆ ಪ್ರತಿಯೊಂದು ಕೋಣೆಯಲ್ಲಿ—ಯೇಸು ಕ್ರಿಸ್ತನಿಗೆ ವ್ಯಕ್ತಿಪರ ಭಕ್ತಿಯನ್ನು ಒತ್ತಿಹೇಳುವ ಸಂಪ್ರದಾಯಬದ್ಧ ಗುಂಪುಗಳ ಸದಸ್ಯರಾದ “ಯೇಸು ಮಕ್ಕಳು,” ಕಪ್ಪು ರೇಷ್ಮೆ ಸ್ಯೂಟ್ಗಳನ್ನು ಧರಿಸಿದ ಸೊಬಗಿನ ಆ್ಯಂಗ್ಲೊ-ಕ್ಯಾತೊಲಿಕ್ ಪುರುಷಗಾಮಿಗಳೆಡೆಗೆ ತಮಟೆಯ ತೀವ್ರ ಬಡೆತದೊಡನೆ ಅರಚುವುದರೊಂದಿಗೆ—ಒಂದು ಜಗಳವು ನಡೆಯುತ್ತಿರುವಂತೆ ತೋರುತ್ತದೆ.”—ದ ಸಂಡೇ ಟೈಮ್ಸ್, ಲಂಡನ್, ಎಪ್ರಿಲ್ 11, 1993.
ಈ ಪರಿವಾರವು ಚರ್ಚ್ ಆಫ್ ಇಂಗ್ಲೆಂಡ್. ಜಗಳವು ಸ್ತ್ರೀಯರನ್ನು ಪೌರೋಹಿತ್ಯಕ್ಕೆ ಸೇರಿಸಿಕೊಳ್ಳುವ ಕುರಿತಾಗಿದೆ. ಈ ಆಳವಾದ ಅನೈಕ್ಯದ ಸುಸ್ಪಷ್ಟ ವರ್ಣನೆಯು ಕ್ರೈಸ್ತಪ್ರಪಂಚದ ಎಲ್ಲರಿಗೆ ಇದೇ ರೀತಿಯಲ್ಲಿ ಅನ್ವಯಿಸುತ್ತದೆ. ಸ್ತ್ರೀಯರನ್ನು ಪುರೋಹಿತರನ್ನಾಗಿ ಅನುಮತಿಸುವ ನಿರ್ಣಯವನ್ನು ಆರ್ತೊಡಾಕ್ಸ್ ಚರ್ಚುಗಳ ಕುಲಪತಿಗಳು ಮತ್ತು ಪೋಪರು ಖಂಡಿಸುವುದರೊಂದಿಗೆ, ಒಟ್ಟಿನ ಫಲಿತಾಂಶವು, “ಕ್ರೈಸ್ತಪ್ರಪಂಚದ ಉಳಿದ ಪಂಗಡಗಳೊಂದಿಗೆ ಪುನರ್ ಏಕೀಕರಣದ ಸ್ವಪ್ನವು ಎಂದಿಗಿಂತಲೂ ಇನ್ನಷ್ಟು ಹೆಚ್ಚು ದೂರವಾಗಿದೆ,” ಎಂಬದಾಗಿ ಒಂದು ವರದಿಯು ತೀರ್ಮಾನಿಸುತ್ತದೆ.
ಚರ್ಚು ಎಷ್ಟು ವಿಭಾಗಿತವಾಗಿದೆ?
ಮತ್ತಾಯ 7:21 ರಲ್ಲಿ ನಾವು ಓದುವಂತೆ, ಅನೇಕರು ಕರ್ತನೆಂಬದಾಗಿ ತನ್ನಲ್ಲಿ ನಂಬಿಕೆ ತೋರ್ಪಡಿಸುತ್ತಾರಾದರೂ, ‘ತಂದೆಯ ಚಿತ್ತವನ್ನು ಮಾಡಲು’ ಅವರಿನ್ನೂ ತಪ್ಪುತ್ತಾರೆ ಎಂದು ಯೇಸು ಕ್ರಿಸ್ತನು ಹೇಳಿದ. ಮೆಕ್ಲೀನ್ಸ್ ಪತ್ರಿಕೆಯು ಅವಲೋಕಿಸುವುದು: “ಕ್ರೈಸ್ತರು ಮತ್ತು ಅವರ ಚರ್ಚುಗಳು ಆ ಪ್ರಶ್ನೆಯ ಮೇಲೆ ಅಷ್ಟು ವ್ಯಾಪಕವಾಗಿ ಭಿನ್ನವಾಗಿರುವಾಗ, ದೇವರ ಚಿತ್ತವು ನಿಜವಾಗಿ ಏನು ಎಂಬ ವಿಷಯದಲ್ಲಿನ ಗಲಿಬಿಲಿಗಾಗಿ, ರಕ್ಷಣೆಯನ್ನು ಹುಡುಕುವ ಮತ್ತಾಯನ ಓದುಗರನ್ನು ಮನ್ನಿಸಿಬಿಡಸಾಧ್ಯವಿದೆ.” ಕೆನಡದ ನಾಡಿಗರ ನಡುವಣ ಒಂದು ಸಮೀಕ್ಷೆಯನ್ನು ಹಿಂಬಾಲಿಸಿ, ಅದು ತೀರ್ಮಾನಿಸಿದ್ದೇನಂದರೆ, “ಕೆನಡದ ಕ್ರೈಸ್ತರ ನಂಬಿಕೆ ಮತ್ತು ಪದ್ಧತಿಗಳಲ್ಲಿ ಪ್ರಚಂಡವಾದ ಭಿನ್ನತೆಗಳಿವೆ—ವಿವಿಧ ಪಂಗಡಗಳ ಮಧ್ಯೆ ಇರುವುದಕ್ಕಿಂತಲೂ, ವಾಸ್ತವಿಕವಾಗಿ, ಯಾವುದೇ ಒಂದು ಪಂಗಡದ ಸದಸ್ಯರ ನಡುವೆ ಅಧಿಕ ಭಿನ್ನತೆಗಳಿವೆ.”
ಅದರ ಸಮೀಕ್ಷೆಗೆ ಅನುಸಾರವಾಗಿ, ಅವರ ಚರ್ಚು ಅದನ್ನು ಖಂಡಿಸುತ್ತದಾದರೂ 91 ಪ್ರತಿಶತ ಕ್ಯಾತೊಲಿಕರು ಕೃತಕ ಸಂತಾನ ನಿರೋಧದ ಉಪಯೋಗದೊಂದಿಗೆ ಸಹಮತದಿಂದಿದ್ದಾರೆ; ಸ್ತ್ರೀಯರು ಪುರೋಹಿತರಾಗುವಂತೆ ಅನುಮತಿಸಲ್ಪಡಬೇಕೆಂದು 78 ಪ್ರತಿಶತ ಜನರು ನೆನಸುತ್ತಾರೆ; ಮತ್ತು 41 ಪ್ರತಿಶತ ಜನರು “ನಿರ್ದಿಷ್ಟ ಪರಿಸ್ಥಿತಿಗಳಲ್ಲಿ” ಗರ್ಭಪಾತವನ್ನು ಸ್ವೀಕರಿಸುತ್ತಾರೆ. “ದೇವತಾಶಾಸ್ತ್ರದ ಅನೇಕಾನೇಕ ಪ್ರಶ್ನೆಗಳ” ಮೇಲೆ ವಿವಿಧ ಪಂಗಡಗಳೊಳಗಿರುವ ಭಿನ್ನಾಭಿಪ್ರಾಯವು, ಮೆಕ್ಲೀನ್ಸ್ ಅನ್ನುವುದು, “ಪ್ರಧಾನ ಚರ್ಚುಗಳ ಸಂದುಗಳನ್ನೇ ಬಿರಿಯುತ್ತಿರುವ ಮತಬೇಧಗಳನ್ನು ಒತ್ತಿಹೇಳುತ್ತದೆ.”
ಇಬ್ಬಗೆಯ ಮಟ್ಟಗಳು
ನೈತಿಕತೆಯ ವಿಷಯದಲ್ಲಿ ಇಬ್ಬಗೆಯ ಮಟ್ಟಗಳು ಹಾಗೂ ಪರಸ್ಪರ ವಿರುದ್ಧಾತ್ಮಕ ಮಟ್ಟಗಳು ನೆಲೆಸಿರುತ್ತವೆ. ಕೆಲವು ಜನರು ಬೈಬಲ್ ತತ್ವಗಳನ್ನು ಸಮರ್ಥಿಸುವವರಾಗಿ ತೋರ್ಪಡಿಸಿಕೊಳ್ಳುತ್ತಾರೆ, ಆದರೆ ಇತರರು ಅವನ್ನು ಧಿಕ್ಕರಿಸುತ್ತಾರೆ. ಉದಾಹರಣೆಗೆ, ಮೆಟ್ರೋಪಾಲಿಟನ್ ಚರ್ಚ್ ಆಫ್ ಟೊರಾಂಟೊದಲ್ಲಿ ಇಬ್ಬರು ಸ್ತ್ರೀಗಾಮಿಗಳ ಮಧ್ಯೆ ನಡಿಸಲ್ಪಟ್ಟ “ವಿವಾಹ” ಸಂಸ್ಕಾರವು, ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿತ್ತೊ? ಭಾಗಿಗಳಾದವರು ಹಾಗೆನಿಸಿಕೊಂಡರೆಂಬದು ವ್ಯಕ್ತ. “ನಮ್ಮ ಪ್ರೇಮವನ್ನು ಬಹಿರಂಗವಾಗಿ ಮತ್ತು ದೇವರ ಮುಂದೆ ಆಚರಿಸಲು ನಾವು ಅಪೇಕ್ಷಿಸುತ್ತೇವೆ,” ಎಂದರವರು.
“ಯಾರಿಗೆ ದೂರುಗಳ ಮೇಲೆ ದೂರುಗಳು ನೀಡಲ್ಪಟ್ಟಿದ್ದವೊ ಆ ಒಬ್ಬ ಕ್ಯಾತೊಲಿಕ್ ಆರ್ಚ್ಬಿಷಪರು, ಮಕ್ಕಳಕಾಮಿಗಳಾದ ಪಾದ್ರಿಗಳನ್ನು, ಅವರು ಹೆಚ್ಚು ಆಲರ್ಟ್ ಹುಡುಗರನ್ನು ಎಲ್ಲಿ ಭೇಟಿಯಾಗುವರೊ ಅಂತಹ ಇನ್ನೊಂದು ಚರ್ಚಿಗೆ ವರ್ಗಾಯಿಸಿದ್ದು” ಹೇಗೆಂದು ಒಬ್ಬ ಅಂಕಣಗಾರನು ಸವಾಲು ಹಾಕಿದ. ಅಪ್ರಾಪ್ತ ವಯಸ್ಸಿನ 1,00,000 ಎಳೆಯ ಬಲಿಪಶುಗಳನ್ನು, ಸುಮಾರು 2,000 ದಿಂದ 4,000 ಪಾದ್ರಿಗಳು ಲೈಂಗಿಕವಾಗಿ ಕೆಡಿಸಿರಬಹುದೆಂದೂ, ಆನೇಕಾವರ್ತಿ ಆ ಕುರಿತು ಏನೂ ಮಾಡಲಾಗಿಲ್ಲವೆಂದೂ ಪಾದ್ರಿ ಆ್ಯಂಡ್ರೂ ಗ್ರೀಲಿ ಸೂಚಿಸುತ್ತಾರೆ.
ಐಕಮತ್ಯವಿಲ್ಲದ ಚರ್ಚು ಐಕಮತ್ಯವಿಲ್ಲದ ಜನರನ್ನು ಉತ್ಪಾದಿಸುತ್ತದೆ. ಬಾಲ್ಕನ್ ದೇಶದಲ್ಲಿ, ಸರ್ಬಿಯನ್ ಮತ್ತು ಕ್ರೋಆ್ಯಟ್ “ಕ್ರೈಸ್ತರು” ಇಬ್ಬರೂ ತಮ್ಮ “ನ್ಯಾಯಸಮ್ಮತ” ಯುದ್ಧದಲ್ಲಿ ಕ್ರಿಸ್ತನು ತಮ್ಮೊಂದಿಗಿದ್ದಾನೆಂದು ಭಾವಿಸುತ್ತಾರೆ. ಯುದ್ಧದಲ್ಲಿ ಕ್ರಿಸ್ತನ ಕ್ರೂಶಾರೋಹಣ ಚಿಹ್ನೆಗಳನ್ನು ಅನೇಕರು ಧರಿಸುತ್ತಾರೆ, ಒಬ್ಬನು, “ಹೋರಾಟವು ಅತ್ಯಂತ ತೀಕ್ಷೈವಾಗಿದ್ದಾಗ ಕ್ರೂಶಾರೋಹಣವನ್ನು ಯಾವಾಗಲೂ ತನ್ನ ಬಾಯಲ್ಲಿ ಹಿಡಿಯುತ್ತಿದ್ದನು” ಎಂದು ವರದಿಯಾಗಿದೆ.
“ನಿಮ್ಮಲ್ಲಿ ಬೇಧಗಳಿರಬಾರದು”
ಬೈಬಲ್ ಕೆಲವು ವಿಷಯಗಳನ್ನು ಮನಸ್ಸಾಕ್ಷಿಗೆ ಬಿಟ್ಟುಬಿಡುತ್ತದೆ ನಿಜ, ಆದರೆ ಅಂಥ ಬೇಧಗಳಿಗೆ ಇದು ಎಡೆಗೊಡಬಾರದು. ಅಪೊಸ್ತಲ ಪೌಲನು ಸ್ಪಷ್ಟವಾಗಿಗಿ ಹೇಳುವುದು: “ನಿಮ್ಮೆಲ್ಲರ ಮಾತು [ಮತ್ತು ಕ್ರಿಯೆ] ಒಂದೇ ಆಗಿರಬೇಕು; ನಿಮ್ಮಲ್ಲಿ ಬೇಧಗಳಿರಬಾರದು.”—1 ಕೊರಿಂಥ 1:10; ಎಫೆಸ 4:15, 16.
ಅಪೊಸ್ತಲ ಪೌಲನು ಆ ಮಾತುಗಳನ್ನು ಬರೆದ ಸುಮಾರು ಎರಡು ಸಾವಿರ ವರ್ಷಗಳ ಅನಂತರ “ಕ್ರೈಸ್ತತ್ವ”ದ ಕಡೆಗಿನ ಒಂದು ಪ್ರಾಮಾಣಿಕ ನೋಟವು ಕೆಲವು ಅತಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. “ಕ್ರೈಸ್ತರು” ಅಷ್ಟು ವಿಭಾಗಿತರಾಗಿರುವುದು ಏಕೆ? ಅಂತಹ ವಿಭಾಗಿತ ಚರ್ಚು ಪಾರಾಗಿ ಉಳಿಯಬಲ್ಲದೋ? ಐಕಮತ್ಯದ ಒಂದು ಕ್ರೈಸ್ತಪ್ರಪಂಚವು ಎಂದಾದರೂ ಇರುವುದೋ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸಲಿದೆ.
[ಪುಟ 3 ರಲ್ಲಿರುವ ಚಿತ್ರ]
ಗರ್ಭಪಾತದ ವಿರುದ್ಧ ಪಾದ್ರಿಗಳಿಂದ ವಿರೋಧ ಪ್ರದರ್ಶನ
[ಕೃಪೆ]
Cover and above: Eleftherios/Sipa Press