ದೇವಾಧೀನತೆಯು ನಮ್ಮಿಂದ ಅಪೇಕ್ಷಿಸುವ ಸಂಗತಿಗಳು
“ಹೀಗಿರಲಾಗಿ ದೇವರಿಗೆ ನೀವೇ ಅಧೀನರಾಗಿರಿ.”—ಯಾಕೋಬ 4:7, NW.
1. ನಾವು ಆರಾಧಿಸುವ ದೇವರ ಕುರಿತು ಏನು ಹೇಳಸಾಧ್ಯವಿದೆ?
ಯೆಹೋವನು ಎಂತಹ ಅದ್ಭುತ ದೇವರಾಗಿದ್ದಾನೆ! ಅನೇಕ ರೀತಿಗಳಲ್ಲಿ ಸರಿಸಾಟಿಯಿಲ್ಲದವನು, ಸಮಾನಸ್ಥರಿಲ್ಲದವನು, ಅಸದೃಶನು, ಅದ್ವಿತೀಯನು ಆಗಿದ್ದಾನೆ! ಅವನು ಸರ್ವೂನ್ನತನು, ಯಾರಲ್ಲಿ ಎಲ್ಲಾ ನಿಜ ಅಧಿಕಾರವು ನೆಲೆಸಿದೆಯೋ ಆ ವಿಶ್ವ ಸಾರ್ವಭೌಮನು ಆಗಿದ್ದಾನೆ. ಅವನು ನಿತ್ಯತೆಯಿಂದ ನಿತ್ಯತೆಗೆ ಇರುವವನು ಮತ್ತು ಯಾವನೇ ಮನುಷ್ಯನು ನೋಡಿ, ಜೀವಿಸಲಾರದಷ್ಟು ಮಹಿಮಾಭರಿತನು ಆತನಾಗಿದ್ದಾನೆ. (ವಿಮೋಚನಕಾಂಡ 33:20; ರೋಮಾಪುರ 16:26) ಅವನು ಬಲದಲ್ಲಿ ಮತ್ತು ವಿವೇಕದಲ್ಲಿ ಅಗಾಧನೂ, ನ್ಯಾಯದಲ್ಲಿ ಸಮಗ್ರವಾಗಿ ಪರಿಪೂರ್ಣನೂ, ಮತ್ತು ಪ್ರೀತಿಯ ವ್ಯಕ್ತೀಕರಣನೂ ಆಗಿದ್ದಾನೆ. ಅವನು ನಮ್ಮ ನಿರ್ಮಾಣಿಕನು, ನಮ್ಮ ನ್ಯಾಯಾಧಿಪತಿ, ನಮ್ಮ ಧರ್ಮವಿಧಾಯಕ, ಮತ್ತು ನಮ್ಮ ರಾಜನು ಆಗಿದ್ದಾನೆ. ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಅವನಿಂದ ಬರುತ್ತವೆ.—ಕೀರ್ತನೆ 100:3; ಯೆಶಾಯ 33:22; ಯಾಕೋಬ 1:17.
2. ದೇವಾಧೀನತೆಯು ಯಾವ ಸಂಗತಿಗಳನ್ನು ಒಳಗೂಡಿಸುತ್ತದೆ?
2 ಇವೆಲ್ಲ ವಾಸ್ತವಾಂಶಗಳ ನೋಟದಲ್ಲಿ, ಅವನಿಗೆ ಅಧೀನರಾಗಿರುವ ನಮ್ಮ ಹಂಗಿನ ಕುರಿತು ಯಾವುದೇ ಪ್ರಶ್ನೆಯಿರಸಾಧ್ಯವಿಲ್ಲ. ಆದರೆ ನಮಗಾಗಿ ಇದರಲ್ಲಿ ಏನು ಸೇರಿರುತ್ತದೆ? ಹಲವಾರು ಸಂಗತಿಗಳು. ಯೆಹೋವ ದೇವರನ್ನು ನಾವು ವೈಯಕ್ತಿಕವಾಗಿ ನೋಡಲು ಸಾಧ್ಯವಿಲ್ಲದಿರುವುದರಿಂದ, ಅವನಿಗೆ ಅಧೀನರಾಗಿರುವುದರಲ್ಲಿ ಶಿಕ್ಷಿತ ಮನಸ್ಸಾಕ್ಷಿಯ ಧ್ವನಿಗೆ ಕಿವಿಗೊಡುವುದು, ದೇವರ ಐಹಿಕ ಸಂಸ್ಥಾಪನೆಯೊಂದಿಗೆ ಸಹಕರಿಸುವುದು, ಲೌಕಿಕ ಅಧಿಕಾರಿಗಳನ್ನು ಮಾನ್ಯಮಾಡುವುದು ಮತ್ತು ಕುಟುಂಬವೃತ್ತದೊಳಗೆ ಶಿರಸ್ಸುತನದ ಸೂತ್ರವನ್ನು ಗೌರವಿಸುವುದು ಸೇರಿರುತ್ತದೆ.
ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರುವುದು
3. ಒಳ್ಳೇ ಮನಸ್ಸಾಕ್ಷಿಯನ್ನಿಟ್ಟುಕೊಳ್ಳಲು, ಯಾವ ವಿಧದ ನಿಷೇಧಗಳಿಗೆ ನಾವು ವಿಧೇಯರಾಗಿರತಕ್ಕದ್ದು?
3 ಒಳ್ಳೇ ಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಲು, ಅನಿರ್ಬಂಧಿಸಲಾರದ—ಅಂದರೆ ಮಾನವರು ಆಚರಿಸಬೇಕೆಂದು ನಿರ್ಬಂಧಿಸಸಾಧ್ಯವಿರದ ನಿಯಮಗಳಿಗೆ ಯಾ ಸೂತ್ರಗಳಿಗೆ—ನಾವು ವಿಧೇಯರಾಗಿರತಕ್ಕದ್ದು. ಉದಾಹರಣೆಗೆ, ದಶಾಜ್ಞೆಗಳಲ್ಲಿ ಹತ್ತನೆಯ ಆಜ್ಞೆಯು ಆಶಿಸುವುದರ ವಿರುದ್ಧವಿದ್ದು, ಮಾನವ ಅಧಿಕಾರಿಗಳಿಂದ ನಿರ್ಬಂಧಿಸಲಾರದ್ದಾಗಿದೆ. ಪ್ರಾಸಂಗಿಕವಾಗಿ, ಇದು ದಶಾಜ್ಞೆಗಳ ದೈವಿಕ ಮೂಲಕ್ಕೆ ಸಾಕ್ಷ್ಯವನ್ನೀಯುತ್ತದೆ, ಯಾಕಂದರೆ ಅತಿಕ್ರಮಿಸಿದರೆ ದಂಡನೆಯ ಮೂಲಕ ಜಾರಿಗೊಳಿಸಸಾಧ್ಯವಿಲ್ಲದ ನಿಯಮವೊಂದನ್ನು, ನಿಯಮಗಳನ್ನು ರಚಿಸುವ ಮಾನವ ಸಂಘವೊಂದು ಮಾಡುತ್ತಿರಲಿಲ್ಲ. ಈ ನಿಯಮದ ಮೂಲಕ, ಪ್ರತಿಯೊಬ್ಬ ಇಸ್ರಾಯೇಲ್ಯನಿಗೆ—ಒಂದು ಒಳ್ಳೇ ಮನಸ್ಸಾಕ್ಷಿ ಬೇಕಿದ್ದಲ್ಲಿ—ತನಗೆ ತಾನೇ ಪೊಲೀಸನಾಗಿ ಇರುವ ಜವಾಬ್ದಾರಿಯನ್ನು ಯೆಹೋವ ದೇವರು ಕೊಟ್ಟನು. (ವಿಮೋಚನಕಾಂಡ 20:17) ತದ್ರೀತಿಯಲ್ಲಿ, ಶರೀರಭಾವದ ಕರ್ಮಗಳಲ್ಲಿ, ದೇವರ ರಾಜ್ಯದಲ್ಲಿ ಬಾಧ್ಯಸ್ಥನಾಗದಂತೆ ಒಬ್ಬನನ್ನು ತಡೆಯುವುದರಲ್ಲಿ “ಹೊಟ್ಟೇಕಿಚ್ಚು” ಮತ್ತು “ಮತ್ಸರ” ಕೂಡಿರುತ್ತವೆ—ಈ ಪ್ರತಿಕ್ರಿಯೆಗಳ ವಿರುದ್ಧ ಮಾನವ ನ್ಯಾಯಾಧಿಪತಿಗಳು ದಂಡನೆಯನ್ನು ವಿಧಿಸಲಾರರು. (ಗಲಾತ್ಯ 5:19-21) ಆದರೆ ಒಂದು ಒಳ್ಳೇ ಮನಸ್ಸಾಕ್ಷಿಯನ್ನು ಹೊಂದಿರಲು, ನಾವು ಇವುಗಳನ್ನು ಹೋಗಲಾಡಿಸತಕ್ಕದ್ದು.
4. ಒಳ್ಳೇ ಮನಸ್ಸಾಕ್ಷಿಯನ್ನಿಟ್ಟುಕೊಳ್ಳಲು ಬೈಬಲಿನ ಯಾವ ಸೂತ್ರಗಳಿಗನುಸಾರ ನಾವು ಜೀವಿಸತಕ್ಕದ್ದು?
4 ಹೌದು, ಬೈಬಲಿನ ಸೂತ್ರಗಳ ಪ್ರಕಾರ ನಾವು ಜೀವಿಸತಕ್ಕದ್ದು. ಮೋಶೆಯ ನಿಯಮಶಾಸ್ತ್ರದಲ್ಲಿ ಅತಿ ಮುಖ್ಯ ಆಜ್ಞೆ ಯಾವುದು ಎಂದು ಕೇಳಿದಾಗ ಉತ್ತರದಲ್ಲಿ ಯೇಸು ಕ್ರಿಸ್ತನು ವಿವರಿಸಿದ ಎರಡು ಆಜ್ಞೆಗಳಲ್ಲಿ ಅಂತಹ ಸೂತ್ರಗಳನ್ನು ಸಾರಾಂಶಿಸಬಹುದು. “ನಿನ್ನ ದೇವರಾದ ಕರ್ತ [ಯೆಹೋವ, NW] ನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು. . . . ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:36-40) ಈ ಆಜ್ಞೆಗಳಲ್ಲಿ ಎರಡನೆಯದರಲ್ಲಿ ಏನು ಒಳಗೂಡಿರುತ್ತದೆ ಎಂದು ಉದಾಹರಿಸುವ ಯೇಸುವಿನ ಮಾತುಗಳು ಮತ್ತಾಯ 7:12 ರಲ್ಲಿ ದಾಖಲಿಸಲ್ಪಟ್ಟಿವೆ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.”
5. ಯೆಹೋವ ದೇವರೊಂದಿಗೆ ನಾವು ಒಂದು ಸುಸಂಬಂಧವನ್ನು ಹೇಗೆ ಇಟ್ಟುಕೊಳ್ಳಬಹುದು?
5 ಸರಿಯಾದದ್ದು ಯಾವುದು ಎಂದು ನಾವು ತಿಳಿದಿರುವುದನ್ನು ನಾವು ಮಾಡತಕ್ಕದ್ದು ಮತ್ತು ಇತರರು ನೋಡಲಿ ಯಾ ನೋಡದಿರಲಿ ಯಾವುದು ತಪ್ಪು ಎಂದು ನಮಗೆ ತಿಳಿದದೆಯೋ ಅದನ್ನು ಮಾಡುವುದರಿಂದ ನಮ್ಮನ್ನು ದೂರವಿಟ್ಟುಕೊಳ್ಳತಕ್ಕದ್ದು. ನಾವೇನು ಮಾಡಬೇಕೋ ಅದನ್ನು ಮಾಡದೆ ಇರುವುದರಿಂದ ಯಾ ನಾವೇನು ಮಾಡಬಾರದೋ ಅದನ್ನು ಮಾಡುವುದರಿಂದ ತೊಂದರೆಗೊಳಗಾಗದೆ ಬಚಾಯಿಸಿಕೊಂಡು ಹೋಗಶಕ್ತರಾಗಬಹುದಾದರೂ ಕೂಡ ಇದು ಹಾಗಿರುತ್ತದೆ. ಇಬ್ರಿಯ 4:13 ರಲ್ಲಿ ಅಪೊಸ್ತಲ ಪೌಲನು ವ್ಯಕ್ತಪಡಿಸಿದ ಎಚ್ಚರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಮ್ಮ ಸ್ವರ್ಗೀಯ ಪಿತನೊಂದಿಗೆ ಒಂದು ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳುವುದು ಎಂದು ಇದರ ಅರ್ಥವಾಗಿದೆ: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ.” ಸರಿಯಾದದ್ದನ್ನು ಮಾಡುವುದರಲ್ಲಿ ಪಟ್ಟುಹಿಡಿದು ಮುಂದುವರಿಯುವುದು ಪಿಶಾಚನ ತಂತ್ರೋಪಾಯಗಳೊಂದಿಗೆ ಸೆಣಸಲು, ಲೋಕದ ಒತ್ತಡಗಳನ್ನು ಪ್ರತಿರೋಧಿಸಲು, ಮತ್ತು ಸ್ವಾರ್ಥದೆಡೆಗಿನ ಬಾಧ್ಯತೆಯಾಗಿ ಪಡೆದ ಪ್ರವೃತ್ತಿಯ ವಿರುದ್ಧ ಹೋರಾಡಲು ನಮಗೆ ಸಹಾಯವನ್ನೀಯುತ್ತದೆ.—ಹೋಲಿಸಿರಿ ಎಫೆಸ 6:11.
ದೇವರ ಸಂಸ್ಥಾಪನೆಗೆ ಅಧೀನತೆ
6. ಕ್ರೈಸ್ತಪೂರ್ವದ ಸಮಯಗಳಲ್ಲಿ ಯೆಹೋವನು ಯಾವ ಸಂಪರ್ಕ ಮಾಧ್ಯಮಗಳನ್ನು ಬಳಸಿದನು?
6 ನಮ್ಮ ಜೀವಿತಗಳಲ್ಲಿ ಬೈಬಲ್ ಸೂತ್ರಗಳನ್ನು ನಾವು ಹೇಗೆ ಅನ್ವಯಿಸಬೇಕೆಂದು ವೈಯಕ್ತಿಕವಾಗಿ ತೀರ್ಮಾನಿಸಲು ಯೆಹೋವ ದೇವರು ಪೂರ್ಣವಾಗಿ ನಮಗೆ ಬಿಟ್ಟುಕೊಟ್ಟಿರುವುದಿಲ್ಲ. ಮಾನವ ಕುಲದ ಇತಿಹಾಸದ ಆರಂಭದಿಂದ, ಸಂಪರ್ಕದ ಮಾಧ್ಯಮವಾಗಿ ಮಾನವರನ್ನು ದೇವರು ಬಳಸಿದ್ದಾನೆ. ಆದಕಾರಣ, ಹವ್ವಳಿಗೆ ಆದಾಮನು ದೇವರ ವದನಕನಾಗಿದ್ದನು. ಹವ್ವಳು ಸೃಷ್ಟಿಸಲ್ಪಡುವ ಮೊದಲೇ ಆದಾಮನಿಗೆ ನಿಷೇಧಿತ ಹಣ್ಣಿನ ಕುರಿತಾಗಿ ಅಪ್ಪಣೆಯು ಕೊಡಲ್ಪಟ್ಟಿತ್ತಾದುದರಿಂದ, ಅವಳಿಗಾಗಿ ದೇವರ ಚಿತ್ತವೇನೆಂದು ಹವ್ವಳಿಗೆ ಆದಾಮನು ತಿಳಿಸಿದ್ದಿರಬೇಕು. (ಆದಿಕಾಂಡ 2:16-23) ತನ್ನ ಕುಟುಂಬಕ್ಕೆ ಮತ್ತು ಜಲಪ್ರಲಯದ ಮುಂಚಿನ ಲೋಕಕ್ಕೆ ನೋಹನು ದೇವರ ಪ್ರವಾದಿಯಾಗಿದ್ದನು. (ಆದಿಕಾಂಡ 6:13; 2 ಪೇತ್ರ 2:5) ಅಬ್ರಹಾಮನು ತನ್ನ ಕುಟುಂಬಕ್ಕೆ ದೇವರ ವದನಕನಾಗಿದ್ದನು. (ಆದಿಕಾಂಡ 18:19) ಮೋಶೆಯು ಇಸ್ರಾಯೇಲ್ ಜನಾಂಗಕ್ಕೆ ದೇವರ ಪ್ರವಾದಿಯೂ, ಸಂಪರ್ಕದ ಸೇತುವೆಯೂ ಆಗಿದ್ದನು. (ವಿಮೋಚನಕಾಂಡ 3:15, 16; 19:3, 7) ಅವನ ನಂತರ, ಸ್ನಾನಿಕನಾದ ಯೋಹಾನನ ವರೆಗೂ, ಅನೇಕ ಪ್ರವಾದಿಗಳು, ಯಾಜಕರುಗಳು, ಮತ್ತು ಅರಸರುಗಳು ಅವನ ಜನರಿಗೆ ತನ್ನ ಚಿತ್ತವನ್ನು ತಿಳಿಸಲು ದೇವರಿಂದ ಉಪಯೋಗಿಸಲ್ಪಟ್ಟರು.
7, 8. (ಎ) ಮೆಸ್ಸೀಯನ ಬರೋಣದೊಂದಿಗೆ, ದೇವರ ವದನಕರೋಪಾದಿ ಯಾರನ್ನು ಬಳಸಲಾಗುತ್ತಿದೆ? (ಬಿ) ಇಂದು ಯೆಹೋವನ ಸಾಕ್ಷಿಗಳಿಂದ ದೇವಾಧೀನತೆಯು ಏನನ್ನು ಅಪೇಕ್ಷಿಸುತ್ತದೆ?
7 ಮೆಸ್ಸೀಯನಾದ ಯೇಸು ಕ್ರಿಸ್ತನ ಬರೋಣದೊಂದಿಗೆ, ಅವನನ್ನು ಮತ್ತು ಅವನ ನಿಕಟ ಸಹವಾಸಿಗಳಾದ ಅಪೊಸ್ತಲರುಗಳನ್ನು ಮತ್ತು ಶಿಷ್ಯರನ್ನು, ತನ್ನ ವದನಕರಾಗಿ ಸೇವೆ ಸಲ್ಲಿಸಲು ದೇವರು ಉಪಯೋಗಿಸಿದನು. ತದನಂತರದಲ್ಲಿ, ತಮ್ಮ ಜೀವಿತಗಳಲ್ಲಿ ಬೈಬಲ್ ಸೂತ್ರಗಳನ್ನು ಹೇಗೆ ಅನ್ವಯಿಸಬೇಕೆಂದು ಯೆಹೋವನ ಜನರಿಗೆ ತಿಳಿಸುವುದಕ್ಕೆ ಯೇಸು ಕ್ರಿಸ್ತನ ಅಭಿಷಿಕ್ತ ಅನುಯಾಯಿಗಳು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ”ನೋಪಾದಿ ಕಾರ್ಯನಡಿಸಲಿದ್ದರು. ದೇವಾಧೀನತೆ ಅಂದರೆ ಯೆಹೋವ ದೇವರು ಬಳಸುವ ಸಾಧನವನ್ನು ಅಂಗೀಕರಿಸುವುದು ಎಂಬರ್ಥವಾಗಿತ್ತು.—ಮತ್ತಾಯ 24:45-47; ಎಫೆಸ 4:11-14.
8 ಇಂದು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯೆಹೋವನ ಸಾಕ್ಷಿಗಳೊಂದಿಗೆ ಜತೆಗೂಡಿದೆ ಮತ್ತು ಈ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಪ್ರತಿನಿಧಿಸಲ್ಪಟ್ಟಿದೆ ಎಂದು ನಿಜಾಂಶಗಳು ತೋರಿಸುತ್ತವೆ. ಆ ಮಂಡಲಿಯು ಪ್ರತಿಯಾಗಿ, ವಿವಿಧ ಸ್ಥಾನಗಳಲ್ಲಿ—ಹಿರಿಯರೋಪಾದಿ ಮತ್ತು ಸಂಚರಣೆ ಪ್ರತಿನಿಧಿಗಳೋಪಾದಿ—ಸ್ಥಳೀಕ ಮಟ್ಟದಲ್ಲಿ ಕಾರ್ಯವನ್ನು ಮಾರ್ಗದರ್ಶಿಸಲು ಮೇಲ್ವಿಚಾರಕರನ್ನು ನೇಮಿಸುತ್ತದೆ. ದೇವಾಧೀನತೆಯು, ಇಬ್ರಿಯ 13:17 ರಲ್ಲಿರುವದಕ್ಕೆ ಹೊಂದಿಕೆಯಲ್ಲಿ, ಪ್ರತಿಯೊಬ್ಬ ಸಮರ್ಪಿತ ಸಾಕ್ಷಿಯು ಈ ಮೇಲ್ವಿಚಾರಕರುಗಳಿಗೆ ಅಧೀನತೆಯಲ್ಲಿರುವಂತೆ ಅಪೇಕ್ಷಿಸುತ್ತದೆ: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.”
ಶಿಸ್ತನ್ನು ಸ್ವೀಕರಿಸುವುದು
9. ದೇವಾಧೀನತೆಯಲ್ಲಿ ಆಗಾಗ್ಗೆ ಏನು ಒಳಗೂಡಿರುತ್ತದೆ?
9 ದೇವಾಧೀನತೆಯು ಮೇಲ್ವಿಚಾರಕರೋಪಾದಿ ಸೇವೆಸಲ್ಲಿಸುವವರಿಂದ ಶಿಸ್ತನ್ನು ಕೆಲವೊಮ್ಮೆ ಸ್ವೀಕರಿಸುವ ಅರ್ಥದಲ್ಲಿರುತ್ತದೆ. ನಾವು ಯಾವಾಗಲೂ ಆವಶ್ಯಕವಾದ ಶಿಸ್ತನ್ನು ಸ್ವತಃ ನಮಗೇ ನೀಡಿಕೊಳ್ಳದಿದ್ದಲ್ಲಿ, ನಮ್ಮ ಸಭೆಯ ಹಿರಿಯರುಗಳಂಥ ಅನುಭವವುಳ್ಳವರಿಂದ ಮತ್ತು ಹಾಗೆ ಮಾಡಲು ಅಧಿಕಾರವುಳ್ಳವರಿಂದ ನಮಗೆ ಬುದ್ಧಿವಾದ ಮತ್ತು ಶಿಸ್ತು ಕೊಡಲ್ಪಡುವ ಅಗತ್ಯವಿರಬಹುದು. ಅಂತಹ ಶಿಸ್ತನ್ನು ಸ್ವೀಕರಿಸುವುದು ವಿವೇಕದ ಪಥವಾಗಿದೆ.—ಜ್ಞಾನೋಕ್ತಿ 12:15; 19:20.
10. ಶಿಸ್ತನ್ನು ಜಾರಿಗೊಳಿಸುವವರಿಗೆ ಯಾವ ಹಂಗು ಇರುತ್ತದೆ?
10 ಶಿಸ್ತನ್ನು ಜಾರಿಗೊಳಿಸುವ ಹಿರಿಯರು ಸ್ವತಃ ತಾವಾಗಿಯೇ ದೇವಾಧೀನತೆಯ ಉದಾಹರಣೆಗಳಾಗಿ ಇರತಕ್ಕದ್ದು ಎಂಬುದು ಸ್ಫುಟ. ಹೇಗೆ? ಗಲಾತ್ಯ 6:1 ಕ್ಕನುಸಾರ ಅವರು ಒಳ್ಳೆಯ ರೀತಿಯಲ್ಲಿ ಬುದ್ಧಿವಾದವನ್ನು ಕೊಡತಕ್ಕದ್ದು ಮಾತ್ರವಲ್ಲ, ಅವರು ಆದರ್ಶಪ್ರಾಯರಾಗಿರತಕ್ಕದ್ದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.” ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹಿರಿಯನ ಬುದ್ಧಿವಾದವು ಅವನ ಉದಾಹರಣೆಗೆ ತಕ್ಕಂತೆ ಇರಬೇಕು. ಅಂಥದ್ದು 2 ತಿಮೊಥೆಯ 2:24, 25 ರಲ್ಲಿ ಮತ್ತು ತೀತ 1:9 ರಲ್ಲಿ ಕೊಡಲ್ಪಟ್ಟ ಪ್ರಬೋಧನೆಗೆ ಹೊಂದಾಣಿಕೆಯಲ್ಲಿದೆ. ಹೌದು, ತಪ್ಪು ಮನಗಾಣಿಸುವಿಕೆ ಯಾ ಸರಿಪಡಿಸುವಿಕೆಯನ್ನು ಮಾಡುವವರು ಎಂದಿಗೂ ನಿಷ್ಠುರರಾಗಿರದಂತೆ ಇರಲು ಅತಿ ಜಾಗ್ರತೆಯಿಂದಿರತಕ್ಕದ್ದು. ಅವರು ಯಾವಾಗಲೂ ಶಾಂತಭಾವದವರೂ, ದಯಾಪರರೂ, ಆದರೂ ದೇವರ ವಾಕ್ಯದಲ್ಲಿರುವ ಸೂತ್ರಗಳನ್ನು ಎತ್ತಿಹಿಡಿಯುವದರಲ್ಲಿ ಸ್ಥಿರತೆಯುಳ್ಳವರೂ ಆಗಿರತಕ್ಕದ್ದು. ಅವರು ನಿಷ್ಪಕ್ಷಪಾತವಾಗಿ ಆಲಿಸುವವರಾಗಿದ್ದು, ಶ್ರಮಪಡುವವರಿಗೆ ಮತ್ತು ಹೊರೆಹೊತ್ತವರಿಗೆ ವಿಶ್ರಾಂತಿದಾಯಕರಾಗಿರತಕ್ಕದ್ದು.—ಹೋಲಿಸಿರಿ ಮತ್ತಾಯ 11:28-30.
ಮೇಲಧಿಕಾರಿಗಳಿಗೆ ಅಧೀನತೆ
11. ಲೌಕಿಕ ಅಧಿಕಾರಿಗಳೊಂದಿಗೆ ಅವರ ಸಂಬಂಧದಲ್ಲಿ ಕ್ರೈಸ್ತರಿಂದ ಏನು ಅಪೇಕ್ಷಿಸಲ್ಪಟ್ಟಿದೆ?
11 ಲೌಕಿಕ ಅಧಿಕಾರಿಗಳಿಗೆ ವಿಧೇಯರಾಗುವುದನ್ನು ಕೂಡ ನಮ್ಮಿಂದ ದೇವಾಧೀನತೆಯು ಅಪೇಕ್ಷಿಸುತ್ತದೆ. ನಮಗೆ ರೋಮಾಪುರ 13:1 ರಲ್ಲಿ ಸಲಹೆಯನ್ನೀಯಲಾಗಿದೆ: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವುದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು.” ರೋಮಾಪುರ 13:7 ರಲ್ಲಿ ಅಪೊಸ್ತಲ ಪೌಲನು ಗಮನಿಸಿರುವಂತೆ, ಇತರ ವಿಷಯಗಳೊಂದಿಗೆ ವಾಹನ ಸಂಚಾರ ನಿಯಮಗಳಿಗೆ ವಿಧೇಯರಾಗಿರುವಂತೆ, ಮತ್ತು ಕರಗಳನ್ನು ಮತ್ತು ಕಂದಾಯಗಳನ್ನು ಸಲ್ಲಿಸುವುದರಲ್ಲಿ ಪ್ರಜ್ಞಾವಂತರಾಗಿರುವಂತೆ ಈ ಮಾತುಗಳು ನಮ್ಮಿಂದ ಅಪೇಕ್ಷಿಸುತ್ತವೆ.
12. ಕೈಸರನೊಂದಿಗಿನ ನಮ್ಮ ಅಧೀನತೆಯು ಯಾವ ಅರ್ಥದಲ್ಲಿ ಸಂಬಂಧಿತವಾಗಿದೆ?
12 ಆದರೂ, ಕೈಸರನಿಗೆ ಅಂತಹ ಎಲ್ಲಾ ಅಧೀನತೆಯು ಸಂಬಂಧಿತವಾಗಿರತಕ್ಕದ್ದು. ಮತ್ತಾಯ 22:21 ರಲ್ಲಿ ದಾಖಲಿಸಲ್ಪಟ್ಟಂತೆ, ಯೇಸು ಕ್ರಿಸ್ತನು ತಿಳಿಸಿದ ಸೂತ್ರವನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡತಕ್ಕದ್ದು: “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” ಆಕ್ಸ್ಫರ್ಡ್ ಎನ್ಐವಿ [ನ್ಯೂ ಇಂಟರ್ನ್ಯಾಶನಲ್ ವರ್ಷನ್] ಸ್ಕೊಫೀಲ್ಡ್ ಸಡ್ಟೀ ಬೈಬಲ್ನ ರೋಮಾಪುರ 13:1 ರಲ್ಲಿರುವ ಪಾದಟಿಪ್ಪಣಿಯು ಅವಲೋಕಿಸುವುದು: “ಅನೈತಿಕವಾದ ಯಾ ಕ್ರೈಸ್ತ ವಿರೋಧಿಯಾದ ನಿಯಮಗಳಿಗೆ ಅವನು ವಿಧೇಯನಾಗಬೇಕು ಎಂದು ಇದರ ಅರ್ಥವಲ್ಲ. ಅಂತಹ ವಿದ್ಯಮಾನಗಳಲ್ಲಿ ಮನುಷ್ಯರಿಗಿಂತ ದೇವರಿಗೆ ವಿಧೇಯನಾಗುವುದು ಅವನ ಕರ್ತವ್ಯವಾಗಿದೆ. (ಅ. ಕೃತ್ಯಗಳು 5:29; cp. ದಾನಿ. 3:16-18; 6:10ff).”
ದೇವಾಧೀನತೆಯು ಕುಟುಂಬ ವೃತ್ತದೊಳಗೆ
13. ಕುಟುಂಬ ವೃತ್ತದೊಳಗೆ ದೇವಾಧೀನತೆಯು ಅದರ ಸದಸ್ಯರುಗಳಿಂದ ಏನನ್ನು ಅಪೇಕ್ಷಿಸುತ್ತದೆ?
13 ಕುಟುಂಬ ವೃತ್ತದೊಳಗೆ, ಗಂಡನು ಮತ್ತು ತಂದೆಯು ಶಿರಸ್ಸಾಗಿ ಕಾರ್ಯ ನಿರ್ವಹಿಸುತ್ತಾನೆ. ಇದು ಎಫೆಸ 5:22, 23 ರಲ್ಲಿ ಕೊಡಲ್ಪಟ್ಟ ಹಿತೋಕ್ತಿಗೆ ಹೆಂಡತಿಯರು ಕಿವಿಕೊಡಲು ಅಪೇಕ್ಷಿಸುತ್ತದೆ: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿರುತ್ತಾನೆ.”a ಮಕ್ಕಳ ಕುರಿತಾದರೋ, ಅವರು ತಮ್ಮ ಸ್ವಂತ ನಿಯಮಗಳನ್ನು ಮಾಡುವುದಿಲ್ಲ, ಬದಲಿಗೆ ತಂದೆಗೂ, ತಾಯಿಗೂ ಇಬ್ಬರಿಗೂ ಅವರ ದೇವಾಧೀನತೆಯು ಸಲ್ಲಿಸಲ್ಪಡತಕ್ಕದ್ದು, ಇದು ಎಫೆಸ 6:1-3 ರಲ್ಲಿ ಪೌಲನು ವಿವರಿಸಿದಂತಿದೆ: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.”
14. ದೇವಾಧೀನತೆಯು ಕುಟುಂಬದ ಶಿರಸ್ಸುಗಳಿಂದ ಏನನ್ನು ಅಪೇಕ್ಷಿಸುತ್ತದೆ?
14 ಗಂಡಂದಿರು ಮತ್ತು ತಂದೆಗಳು ತಾವಾಗಿಯೇ ದೇವಾಧೀನತೆಯನ್ನು ತೋರಿಸುವುದಾದರೆ, ಅಂತಹ ದೇವಾಧೀನತೆಯನ್ನು ಸಲ್ಲಿಸಲು ಹೆಂಡತಿಯರಿಗೆ ಮತ್ತು ಮಕ್ಕಳಿಗೆ ಸುಲಭವಾಗುತ್ತದೆ, ನಿಶ್ಚಯ. ತಮ್ಮ ಶಿರಸ್ಸುತನವನ್ನು ಚಲಾಯಿಸುವಾಗ, ಎಫೆಸ 5:28, 29 (30) ರಲ್ಲಿ ಮತ್ತು 6:4 ರಲ್ಲಿ ಕಂಡುಕೊಳ್ಳುವಂತಹ ಬೈಬಲ್ ತತ್ವಗಳನ್ನು ಪರಿಪಾಲಿಸುವುದರ ಮೂಲಕ ಅವರಿದನ್ನು ಮಾಡಬಹುದು: “ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ. . . . ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.” “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನೂ ಸಾಕಿಸಲಹಿರಿ.”
ದೇವಾಧೀನತೆಯನ್ನು ವ್ಯಕ್ತಪಡಿಸಲು ಸಹಾಯಕಗಳು
15. ಆತ್ಮದ ಯಾವ ಫಲವು ದೇವಾಧೀನತೆಯನ್ನು ವ್ಯಕ್ತಪಡಿಸಲು ನಮಗೆ ಸಹಾಯ ಮಾಡುವುದು?
15 ಈ ವಿವಿಧ ಕ್ಷೇತ್ರಗಳಲ್ಲಿ ದೇವಾಧೀನತೆಯನ್ನು ವ್ಯಕ್ತಪಡಿಸಲು ನಮಗೆ ಯಾವುದು ಸಹಾಯ ಮಾಡುವುದು? ಮೊದಲನೆಯದು, ನಿಸ್ವಾರ್ಥ ಪ್ರೀತಿ—ಯೆಹೋವ ದೇವರಿಗಾಗಿ ಮತ್ತು ನಮ್ಮ ಮೇಲೆ ಯಾರನ್ನು ಅವನು ಇಟ್ಟಿದ್ದಾನೋ ಅವರಿಗಾಗಿ ಪ್ರೀತಿ. ನಮಗೆ 1 ಯೋಹಾನ 5:3 ರಲ್ಲಿ ಹೇಳಲಾಗಿದೆ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” ಯೋಹಾನ 14:15 ರಲ್ಲಿ ಯೇಸುವು ಅದೇ ವಿಷಯವನ್ನು ಹೇಳಿದ್ದಾನೆ: “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.” ನಿಜವಾಗಿಯೂ, ಪ್ರೀತಿಯು—ಆತ್ಮದ ಪ್ರಧಾನ ಫಲ—ನಮಗಾಗಿ ದೇವರು ಮಾಡಿರುವುದನ್ನೆಲ್ಲಾ ಗಣ್ಯಮಾಡಲು ನಮಗೆ ಸಹಾಯ ಮಾಡುವುದು ಮತ್ತು ಈ ರೀತಿಯಲ್ಲಿ ದೇವಾಧೀನತೆಯನ್ನು ಸಲ್ಲಿಸಲು ನಮಗೆ ಸಹಾಯಮಾಡುವುದು.—ಗಲಾತ್ಯ 5:22.
16. ದೇವಾಧೀನತೆಯನ್ನು ಪ್ರದರ್ಶಿಸುವುದರಲ್ಲಿ ದೇವ ಭಯವು ಹೇಗೆ ಸಹಾಯಕವಾಗಿದೆ?
16 ಎರಡನೆಯದು, ದೇವ ಭಯವಾಗಿದೆ. ಯೆಹೋವ ದೇವರನ್ನು ಅಪ್ರಸನ್ನತೆಗೊಳಿಸುವ ಭಯವು ನಮಗೆ ಸಹಾಯ ಮಾಡುವುದು ಯಾಕಂದರೆ ಅದು “ಪಾಪದ್ವೇಷವನ್ನು ಹುಟ್ಟಿಸುತ್ತದೆ.” (ಜ್ಞಾನೋಕ್ತಿ 8:13) ನಿರ್ವಿವಾದವಾಗಿ, ಯೆಹೋವನನ್ನು ಅಪ್ರಸನ್ನಗೊಳಿಸುವ ಭಯವು, ಮನುಷ್ಯನ ಭಯದ ಕಾರಣ ಒಪ್ಪಂದ ಮಾಡಿಕೊಳ್ಳದಂತೆ ನಮ್ಮನ್ನು ಕಾಪಾಡುವುದು. ಜಯಿಸಬೇಕಾದ ತೊಂದರೆಗಳು ಏನೇ ಆಗಿದ್ದರೂ ಕೂಡ ದೇವರ ಉಪದೇಶಗಳಿಗೆ ವಿಧೇಯರಾಗಲು ನಮಗೆ ಅದು ಸಹ ಸಹಾಯಮಾಡುವುದು. ಇನ್ನೂ ಅಧಿಕವಾಗಿ, ಶೋಧನೆಗಳಿಗೆ ಯಾ ತಪ್ಪುಗೈಯುವಿಕೆಯ ಕಡೆಗಿನ ಪ್ರವೃತ್ತಿಗಳಿಗೆ ಶರಣಾಗತರಾಗುವುದರಿಂದ ಅದು ನಮ್ಮನ್ನು ಸಂರಕ್ಷಿಸುವುದು. ತನ್ನ ಪ್ರೀತಿಯ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸುವಂತೆ ಪ್ರಯತ್ನಿಸಲು ಅಬ್ರಹಾಮನಿಗೆ ಸಾಧ್ಯಮಾಡಿದ್ದು ಯೆಹೋವನ ಭಯವೇ ಆಗಿತ್ತು ಎಂದು ಶಾಸ್ತ್ರಗ್ರಂಥ ತೋರಿಸುತ್ತದೆ, ಮತ್ತು ಪೋಟೀಫರನ ಹೆಂಡತಿಯ ಅನೈತಿಕ ಪ್ರಣಯಪ್ರಯತ್ನಗಳನ್ನು ಯಶಸ್ವಿಯಾಗಿ ಪ್ರತಿರೋಧಿಸಲು ಯೋಸೇಫನನ್ನು ಶಕ್ತನನ್ನಾಗಿ ಮಾಡಿದ್ದು ಯೆಹೋವನನ್ನು ಅಪ್ರಸ್ನಗೊಳಿಸುವ ಭಯವಾಗಿತ್ತು.—ಆದಿಕಾಂಡ 22:12; 39:9.
17. ದೇವಾಧೀನತೆಯನ್ನು ಪ್ರದರ್ಶಿಸುವುದರಲ್ಲಿ ನಂಬಿಕೆಯು ಯಾವ ಪಾತ್ರವನ್ನಾಡುತ್ತದೆ?
17 ಮೂರನೆಯ ಸಹಾಯಕವು ಯೆಹೋವ ದೇವರಲ್ಲಿ ನಂಬಿಕೆ. ನಂಬಿಕೆಯು ಜ್ಞಾನೋಕ್ತಿ 3:5, 6 ರಲ್ಲಿರುವ ಬುದ್ಧಿವಾದವನ್ನು ಆಲಿಸಲು ನಮಗೆ ಸಾಧ್ಯಮಾಡುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಅನ್ಯಾಯವಾಗಿ ನಾವು ಕಷ್ಟಾನುಭವಿಸುತ್ತಿದ್ದೇವೆಂದು ಭಾಸವಾಗುವಾಗ ಯಾ ನಮ್ಮ ಕುಲ ಯಾ ರಾಷ್ಟ್ರೀಯತೆಯ ಯಾ ವ್ಯಕ್ತಿತ್ವ ತಿಕ್ಕಾಟದ ಕಾರಣ ಪಕ್ಷಪಾತಕ್ಕೊಳಗಾಗಿದ್ದೇವೆಂದು ಭಾವಿಸುವಾಗ, ನಂಬಿಕೆಯು ವಿಶೇಷವಾಗಿ ನಮಗೆ ಸಹಾಯ ಮಾಡುವುದು. ಹಿರಿಯನಾಗಿ ಯಾ ಶುಶ್ರೂಷಾ ಸೇವಕನಾಗಿ ಸೇವೆ ಸಲ್ಲಿಸಲು ಶಿಫಾರಸು ಮಾಡಲ್ಪಡುತ್ತಿದ್ದಾಗ ಅವರನ್ನು ತಪ್ಪಾಗಿ ಉಪೇಕ್ಷಿಸಲಾಗಿದೆ ಎಂದು ಕೆಲವರು ಭಾವಿಸಲೂ ಬಹುದು. ನಮಗೆ ನಂಬಿಕೆ ಇದ್ದರೆ, ಅವನು ತಕ್ಕ ಸಮಯದಲ್ಲಿ ವಿಷಯಗಳನ್ನು ಸರಿಪಡಿಸಲು ಯೆಹೋವನ ಮೇಲೆ ಕಾದುಕೊಂಡಿರುವೆವು. ತನ್ಮಧ್ಯೆ, ನಾವು ತಾಳ್ಮೆಯುಕ್ತ ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿರಬಹುದು.—ಪ್ರಲಾಪಗಳು 3:26.
18. ದೇವಾಧೀನತೆಯ ನಮ್ಮ ಪ್ರದರ್ಶಿಸುವಿಕೆಯಲ್ಲಿ ನಾಲ್ಕನೆಯ ಸಹಾಯಕ ಯಾವುದು?
18 ನಾಲ್ಕನೆಯ ಸಹಾಯ ದೀನತೆಯಾಗಿದೆ. ದೀನ ವ್ಯಕ್ತಿಗೆ ದೇವಾಧೀನತೆಯನ್ನು ತೋರಿಸಲು ಕಷ್ಟವಾಗುವುದಿಲ್ಲ ಯಾಕಂದರೆ ‘ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಅವನು ದೀನಭಾವದಿಂದ ಇತರರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸುತ್ತಾನೆ.’ ದೀನ ವ್ಯಕ್ತಿಯೊಬ್ಬನು ಸ್ವತಃ ತನ್ನನ್ನು “ಚಿಕ್ಕವ”ನೋಪಾದಿ ನಡಿಸಿಕೊಳ್ಳಲು ಇಚ್ಛೆಯುಳ್ಳಾತನಾಗಿದ್ದಾನೆ. (ಫಿಲಿಪ್ಪಿ 2:2-4; ಲೂಕ 9:48) ಆದರೆ ಅಹಂಕಾರಿಯು ಅಧೀನತೆಯಲ್ಲಿರುವುದಕ್ಕೆ ಮುನಿಯುತ್ತಾನೆ ಮತ್ತು ಅದರೆಡೆಗೆ ಸಿಡಿಮಿಡಿಗೊಳ್ಳುತ್ತಾನೆ. ಅಂತಹ ವ್ಯಕ್ತಿಯೊಬ್ಬನು ಠೀಕೆಯಿಂದ ರಕ್ಷಿಸಲ್ಪಡುವದಕ್ಕಿಂತ, ಹೊಗಳಿಕೆಯಿಂದ ವಿನಾಶಗೊಳ್ಳುವನು ಎಂದು ಹೇಳಲ್ಪಟ್ಟಿದೆ.
19. ವಾಚ್ ಟವರ್ ಸೊಸೈಟಿಯ ಹಿಂದಿನ ಅಧ್ಯಕ್ಷರೊಬ್ಬರು ನಮ್ರತೆಯ ಯಾವ ಒಂದು ಉತ್ತಮ ಉದಾಹರಣೆಯನ್ನು ಒದಗಿಸಿದ್ದರು?
19 ನಮ್ರತೆ ಮತ್ತು ದೇವಾಧೀನತೆಯ ಒಂದು ಉತ್ತಮ ಉದಾಹರಣೆಯು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಎರಡನೆಯ ಅಧ್ಯಕ್ಷರಾದ ಜೊಸೆಫ್ ರಥರ್ಫರ್ಡ್ರಿಂದ ಒಮ್ಮೆ ಒದಗಿಸಲ್ಪಟ್ಟಿತ್ತು. ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯವನ್ನು ಹಿಟ್ಲರನು ನಿಷೇಧಿಸಿದಾಗ, ಅಲ್ಲಿನ ಸಹೋದರರು, ನಿಷೇಧದ ನೋಟದಲ್ಲಿ ಅವರ ಕೂಟಗಳ ಮತ್ತು ಅವರ ಸಾರುವ ಚಟುವಟಿಕೆಗಳ ಕುರಿತು ಅವರೇನು ಮಾಡತಕ್ಕದ್ದು ಎಂದು ವಿಚಾರಿಸಿ ಅವರಿಗೆ ಬರೆದರು. ಅವರು ಅದನ್ನು ಬೆತೆಲ್ ಕುಟುಂಬಕ್ಕೆ ತಿಳಿಸಿದರು ಮತ್ತು ಜರ್ಮನ್ ಸಹೋದರರಿಗೆ, ನಿರ್ದಿಷ್ಟವಾಗಿ ಕಠಿಣ ದಂಡನೆಯು ಒಳಗೂಡಿರುವ ನೋಟದಲ್ಲಿ ಏನು ಉತ್ತರ ಕೊಡುವುದು ಎಂದು ತಮಗೆ ತಿಳಿದಿಲ್ಲ ಎಂದು ಮರೆಮಾಜದೆ ಒಪ್ಪಿಕೊಂಡರು. ಅವರಿಗೆ ಏನು ಹೇಳಬೇಕೆಂದು ಯಾರಿಗಾದರೂ ತಿಳಿದಿದ್ದರೆ ಅವರದನ್ನು ಆಲಿಸಲು ಆನಂದಿಸುವರು ಎಂದವರು ಹೇಳಿದರು. ಎಂಥ ಒಂದು ನಮ್ರ ಭಾವ!b
ದೇವಾಧೀನತೆಯನ್ನು ಪ್ರದರ್ಶಿಸುವುದರಿಂದ ಪ್ರಯೋಜನಗಳು
20. ದೇವಾಧೀನತೆಯನ್ನು ಪ್ರದರ್ಶಿಸುವುದರಿಂದ ಯಾವ ಆಶೀರ್ವಾದಗಳು ಫಲಿಸುತ್ತವೆ?
20 ದೇವಾಧೀನತೆಯನ್ನು ಪ್ರದರ್ಶಿಸುವುದರ ಪ್ರಯೋಜನಗಳು ಏನು? ಎಂದು ಯುಕ್ತವಾಗಿ ಕೇಳಬಹುದು. ಪ್ರಯೋಜನಗಳು ಖಂಡಿತವಾಗಿಯೂ ಅನೇಕ. ಸ್ವತಂತ್ರವಾಗಿ ವರ್ತಿಸುವವರಿಂದ ಅನುಭವಿಸಲ್ಪಡುವ ವ್ಯಾಕುಲತೆಗಳನ್ನು ಮತ್ತು ಹತಾಶೆಗಳನ್ನು ನಾವು ತಪ್ಪಿಸುತ್ತೇವೆ. ಯೆಹೋವ ದೇವರೊಂದಿಗೆ ಒಂದು ಸುಸಂಬಂಧವನ್ನು ನಾವು ಆನಂದಿಸುತ್ತೇವೆ. ನಮ್ಮ ಕ್ರೈಸ್ತ ಸಹೋದರರೊಂದಿಗೆ ನಮಗೆ ಅತ್ಯುತ್ತಮ ಸಹವಾಸವಿದೆ. ಇನ್ನೂ ಹೆಚ್ಚಾಗಿ, ನಿಯಮಾನುಸಾರವಾಗಿ ನಮ್ಮನ್ನು ನಡೆಸಿಕೊಳ್ಳುವದರ ಮೂಲಕ, ಲೌಕಿಕ ಅಧಿಕಾರಿಗಳೊಂದಿಗೆ ಅನಾವಶ್ಯಕ ತೊಂದರೆಗಳಿರುವದನ್ನು ನಾವು ಹೋಗಲಾಡಿಸುತ್ತೇವೆ. ಗಂಡಂದಿರು ಮತ್ತು ಹೆಂಡತಿಯರೋಪಾದಿ, ಹೆತ್ತವರು ಮತ್ತು ಮಕ್ಕಳೋಪಾದಿ ಒಂದು ಸಂತೋಷ ಕುಟುಂಬ ಜೀವಿತದಲ್ಲಿ ನಾವು ಆನಂದಿಸುತ್ತೇವೆ. ಅಲ್ಲದೆ, ದೇವಾಧೀನತೆಯನ್ನು ಕಾಪಾಡಿಕೊಳ್ಳುವುದರಿಂದ, ಜ್ಞಾನೋಕ್ತಿ 27:11ರ ಹಿತೋಪದೇಶಕ್ಕನುಸಾರವಾಗಿ ನಾವು ವರ್ತಿಸುತ್ತೇವೆ: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.”
[ಅಧ್ಯಯನ ಪ್ರಶ್ನೆಗಳು]
a ಒಬ್ಬ ಪಯನೀಯರ್ ಶುಶ್ರೂಷಕನು ತನ್ನ ಹೆಂಡತಿಯ ಗೌರವದ ಮತ್ತು ಪ್ರೀತಿಯ ಬೆಂಬಲದ ಕುರಿತು ಒಂಟಿಗ ಪಯನೀಯರನೊಡನೆ ಹೊಗಳಿದನು. ತನ್ನ ಹೆಂಡತಿಯ ಇತರ ಗುಣಗಳ ಕುರಿತು ಏನನ್ನಾದರೂ ಅವನ ಮಿತ್ರನು ಹೇಳಬೇಕಿತ್ತು ಎಂದು ಒಂಟಿಗ ಪಯನೀಯರನು ಯೋಚಿಸಿದನು. ಆದರೆ ವರ್ಷಗಳ ನಂತರ, ಈ ಒಂಟಿಗ ಪಯನೀಯರನು ಸ್ವತಃ ಮದುವೆಯಾದಾಗ, ವೈವಾಹಿಕ ಪರಮಾನಂದಕ್ಕೆ ಹೆಂಡತಿಯ ಪ್ರೀತಿಯ ಬೆಂಬಲ ಎಷ್ಟೊಂದು ಅತ್ಯಾವಶ್ಯಕವೆಂದು ಅವನು ಅರಿತನು.
b ಬಹಳ ಪ್ರಾರ್ಥನೆ ಮತ್ತು ದೇವರ ವಾಕ್ಯದ ಅಧ್ಯಯನದ ಅನಂತರ, ಜೊಸೆಫ್ ರಥರ್ಫರ್ಡ್ರು, ಜರ್ಮನಿಯಲ್ಲಿರುವ ಸಹೋದರರಿಗೆ ಯಾವ ಉತ್ತರ ಕೊಡಬೇಕೆಂಬುದನ್ನು ಸ್ಪಷ್ಟವಾಗಿಗಿ ತಿಳಿದುಕೊಂಡರು. ಅವರೇನು ಮಾಡಬೇಕು ಯಾ ಮಾಡಬಾರದು ಎಂದು ಅವರಿಗೆ ಹೇಳುವುದು ಅವರ ಜವಾಬ್ದಾರಿಯಲ್ಲ. ಒಟ್ಟಾಗಿ ಕೂಟವಾಗಿ ಸೇರುವುದರ ಮತ್ತು ಸಾಕ್ಷಿನೀಡುವುದರ ಕುರಿತು ಅವರೇನು ಮಾಡತಕ್ಕದ್ದು ಎಂದು ಅವರಿಗೆ ಸ್ಪಷ್ಟವಾಗಿಗಿ ತಿಳಿಸಿದ ದೇವರ ವಾಕ್ಯವು ಅವರಲ್ಲಿ ಇತ್ತು. ಆದುದರಿಂದ ಜರ್ಮನ್ ಸಹೋದರರು ಗುಪ್ತವಾಗಿ ಕಾರ್ಯನಡಿಸಿದರು, ಆದರೆ ಒಟ್ಟಾಗಿ ಕೂಟವಾಗಿ ಸೇರುವುದನ್ನು ಮತ್ತು ಅವನ ನಾಮದ ಮತ್ತು ರಾಜ್ಯದ ಕುರಿತು ಸಾಕ್ಷಿ ಕೊಡುವುದರ ಯೆಹೋವನ ಅಪ್ಪಣೆಗಳಿಗೆ ಅವರು ವಿಧೇಯರಾಗಿರುವುದನ್ನು ಮುಂದರಿಸಿದರು.
ಪುನರ್ವಿಮರ್ಶೆಯ ಪ್ರಶ್ನೆಗಳು
▫ ದೇವರು ಸಂಪರ್ಕ ಮಾಧ್ಯಮಗಳಾಗಿ ಯಾವ ಪುರುಷರುಗಳನ್ನು ಬಳಸಿದ್ದಾನೆ, ಮತ್ತು ಅವನ ಸೇವಕರು ಅವರಿಗೆ ಏನನ್ನು ಸಲ್ಲಿಸಬೇಕಾಗಿತ್ತು?
▫ ದೇವಾಧೀನತೆಯು ಯಾವ ವಿವಿಧ ಸಂಬಂಧಗಳಲ್ಲಿ ಅನ್ವಯಿಸಲ್ಪಡುತ್ತದೆ?
▫ ದೇವಾಧೀನತೆಯನ್ನು ಪ್ರದರ್ಶಿಸಲು ಯಾವ ಗುಣಗಳು ನಮಗೆ ಸಹಾಯ ಮಾಡುವುವು?
▫ ದೇವಾಧೀನತೆಯು ಯಾವ ಆಶೀರ್ವಾದಗಳನ್ನು ಫಲಿಸುತ್ತದೆ?
[ಪುಟ 16 ರಲ್ಲಿರುವ ಚಿತ್ರ]
ತನ್ನ ಜನರಿಗೆ ಅವನ ಚಿತ್ತವನ್ನು ತಿಳಿಯಪಡಿಸಲು ದೇವರು ಯೆರೂಸಲೇಮಿನ ದೇವಾಲಯ ಸಂಸ್ಥಾಪನೆಯನ್ನು ಬಳಸಿದನು
[ಪುಟ 18 ರಲ್ಲಿರುವ ಚಿತ್ರಗಳು]
ದೇವಾಧೀನತೆಯನ್ನು ನಾವು ಪ್ರದರ್ಶಿಸಬಹುದಾದ ಕ್ಷೇತ್ರಗಳು