ದೇವಾಧೀನತೆ—ಯಾಕೆ ಮತ್ತು ಯಾರಿಂದ?
“ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
1. ಸ್ವಾತಂತ್ರ್ಯದ ಯಾವ ವಿಧಗಳಿಗೆ ವ್ಯಾಪಕವಾಗಿ ಮೌಲ್ಯಕೊಡಲ್ಪಟ್ಟಿದೆ?
ಯಾವುದರ ಮೂಲಕ 18 ನೆಯ ಶತಮಾನದಲ್ಲಿ ಉತ್ತರ ಅಮೆರಿಕದ 13 ಬ್ರಿಟಿಷ್ ವಸಾಹತುಗಳು ತಮ್ಮ ತಾಯ್ನಾಡಾದ ಬ್ರಿಟನ್ನಿಂದ ಅವರ ಸ್ವಾತಂತ್ರ್ಯವನ್ನು ಘೋಷಿಸಿದವೋ, ಆ ಸ್ವಾತಂತ್ರ್ಯ ಘೋಷಣೆಯು ಅತಿ ಹೆಸರುವಾಸಿ ಮಾನವ ದಾಖಲೆಗಳಲ್ಲಿ ಕೂಡಿರುತ್ತದೆ. ಅವರು ಸ್ವಾತಂತ್ರ್ಯವನ್ನು ಬಯಸಿದರು, ಮತ್ತು ವಿದೇಶಿ ಹತೋಟಿಯಿಂದ ಸ್ವಾತಂತ್ರ್ಯವು ಮತ್ತು ಬಿಡುಗಡೆಯು ಜೊತೆ ಜೊತೆಯಾಗಿ ಹೋದವು. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವು ಬಲು ಲಾಭದಾಯಕವಾಗಿರಬಲ್ಲದು. ಇತ್ತೀಚೆಗಿನ ಸಮಯಗಳಲ್ಲಿ ಕೆಲವು ಪೂರ್ವ ಯೂರೋಪಿನ ದೇಶಗಳು ರಾಜಕೀಯ ಸ್ವಾತಂತ್ರ್ಯದೆಡೆಗೆ ಮುನ್ನಡೆದಿವೆ. ಆದಾಗ್ಯೂ, ಆ ದೇಶಗಳಲ್ಲಿ ಅಂತಹ ಸ್ವಾತಂತ್ರ್ಯವು ಅದರೊಂದಿಗೆ ಅನೇಕ ಗಂಭೀರ ಸಮಸ್ಯೆಗಳನ್ನು ತಂದಿವೆ ಎಂಬುದನ್ನು ಒಪ್ಪಲೇ ಬೇಕು.
2, 3. (ಎ) ಯಾವ ವಿಧದ ಸ್ವಾತಂತ್ರ್ಯವು ಅಪೇಕ್ಷಣೀಯವಲ್ಲ? (ಬಿ) ಈ ವಾಸ್ತವಾಂಶವು ಮೂಲತಃ ಹೇಗೆ ಮನಗಾಣಿಸಲ್ಪಟ್ಟಿತು?
2 ಅನೇಕ ವಿಧಗಳ ಸ್ವಾತಂತ್ರ್ಯವು ಅಪೇಕ್ಷಣೀಯವಾಗಿರಬಹುದಾದರೂ, ಒಂದು ವಿಧದ ಸ್ವಾತಂತ್ರ್ಯವು ಅಪೇಕ್ಷಣೀಯವಲ್ಲದ್ದಾಗಿದೆ. ಅದೇನು? ಮಾನವನ ನಿರ್ಮಾಣಿಕನಾದ ಯೆಹೋವ ದೇವರಿಂದ ಸ್ವಾತಂತ್ರ್ಯವು. ಅದೊಂದು ಆಶೀರ್ವಾದವಲ್ಲ, ಬದಲು ಶಾಪವಾಗಿದೆ. ಯಾಕೆ? ಮೇಲೆ ಉಲ್ಲೇಖಿಸಲ್ಪಟ್ಟ ಪ್ರವಾದಿ ಯೆರೆಮೀಯನ ಮಾತುಗಳು ಅಷ್ಟೊಂದು ಯುಕ್ತವಾಗಿ ತೋರಿಸುವಂತೆ, ತನ್ನ ನಿರ್ಮಾಣಿಕನಿಂದ ಮಾನವನೆಂದೂ ಸ್ವತಂತ್ರನಾಗಿ ವರ್ತಿಸಲು ಯೋಜಿಸಲ್ಪಡಲಿಲ್ಲ. ನಮ್ಮ ನಿರ್ಮಾಣಿಕನಿಗೆ ಅಧೀನನಾಗಿರುವುದು ಅವನಿಗೆ ವಿಧೇಯನಾಗಿರುವದೆಂದರ್ಥವಾಗಿದೆ.
3 ಆ ವಾಸ್ತವಾಂಶವು ಮೊದಲನೆಯ ಮಾನವ ಜೋಡಿಯ ಮೇಲೆ ಯೆಹೋವನು ಅವರಿಗಿತ್ತ ಅಪ್ಪಣೆಯಿಂದ ಅಚ್ಚೊತ್ತಲಾಗಿತ್ತು, ಅದು ಆದಿಕಾಂಡ 2:16, 17 ರಲ್ಲಿ ದಾಖಲಿಸಲ್ಪಟ್ಟಂತೆ ಇದೆ: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” ತನ್ನ ಸೃಷ್ಟಿಕರ್ತನಿಗೆ ಅಧೀನನಾಗಲು ನಿರಾಕರಿಸುವುದು ಆದಾಮನ ಮತ್ತು ಅವನ ಎಲ್ಲಾ ಸಂತತಿಯ ಮೇಲೆ ಪಾಪ, ಕಷ್ಟಾನುಭವ, ಮತ್ತು ಮರಣವನ್ನು ತಂದಿತು.—ಆದಿಕಾಂಡ 3:19; ರೋಮಾಪುರ 5:12.
4, 5. (ಎ) ದೇವರಿಗೆ ಅಧೀನರಾಗಿರಲು ಮಾನವನ ನಿರಾಕರಿಸುವಿಕೆಯಿಂದ ಏನು ಫಲಿಸಿದೆ? (ಬಿ) ಯಾವ ನೈತಿಕ ನಿಯಮವನ್ನು ತಪ್ಪಿಸಿಕೊಳ್ಳಸಾಧ್ಯವಿಲ್ಲ?
4 ದೇವರಿಗೆ ಅಧೀನನಾಗಿರಲು ಮಾನವನ ನಿರಾಕರಿಸುವಿಕೆಯು ಅವಿವೇಕದ್ದೂ, ನೈತಿಕವಾಗಿ ತಪ್ಪೂ ಆಗಿದೆ. ಇದರಿಂದಾಗಿ ಲೋಕದಲ್ಲಿ ವ್ಯಾಪಕವಾದ ನಿಯಮರಾಹಿತ್ಯತೆ, ಪಾತಕ, ಹಿಂಸಾಚಾರ, ಮತ್ತು ಲೈಂಗಿಕವಾಗಿ ರವಾನಿತ ರೋಗಗಳ ಫಲಗಳೊಂದಿಗೆ ಲೈಂಗಿಕ ಅನೈತಿಕತೆ ಫಲಿಸಿದೆ. ಇದಲ್ಲದೆ, ಬಾಲಕರ ತಕ್ಷೀರುಗಳ ಇಂದಿನ ಪೀಡೆಯು ಯೆಹೋವನಿಗೆ ಹಾಗೂ ಅವರ ಹೆತ್ತವರಿಗೆ ಮತ್ತು ದೇಶದ ನಿಯಮಗಳಿಗೆ ಅಧೀನರಾಗಲು ಯುವಕರು ನಿರಾಕರಿಸುವದರಿಂದ ಬಹುತೇಕವಾಗಿ ಉಂಟಾಗಿದೆಯಲ್ಲವೇ? ಅನೇಕ ಜನರು ಉಡುಪು ಧರಿಸಿಕೊಳ್ಳುವ ವಿಲಕ್ಷಣ ಮತ್ತು ಕೊಳಕು ವಿಧದಿಂದ ಮತ್ತು ಅವರು ಬಳಸುವ ಹೊಲಸು ಭಾಷೆಯಿಂದ ಈ ಸ್ವಾತಂತ್ರ್ಯದ ಆತ್ಮವು ಕಂಡುಬರುತ್ತದೆ.
5 ಆದರೆ ನಿರ್ಮಾಣಿಕನ ದಯಾ ದಾಕ್ಷಿಣ್ಯ ಶೂನ್ಯವಾದ ನೈತಿಕ ನಿಯಮದಿಂದ ಯಾರೊಬ್ಬನೂ ತಪ್ಪಿಸಿಕೊಳ್ಳಶಕ್ತನಲ್ಲ: “ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು.”—ಗಲಾತ್ಯ 6:7, 8.
6, 7. ಯಾವ ಉದಾಹರಣೆಗಳಲ್ಲಿ ಕಂಡಂತೆ, ಅಧೀನರಾಗಿರಲು ನಿರಾಕರಿಸುವುದರ ಮೂಲಕಾರಣ ಏನು?
6 ಅಧೀನತೆಯಲ್ಲಿರಲು ಈ ಎಲ್ಲಾ ನಿರಾಕರಿಸುವಿಕೆಯ ಮೂಲ ಕಾರಣ ಏನಾಗಿದೆ? ಸರಳವಾಗಿ ನಮೂದಿಸುವುದಾದರೆ, ಅದು ಸ್ವಾರ್ಥ ಮತ್ತು ದುರಹಂಕಾರವಾಗಿದೆ. ಆದುದರಿಂದಲೇ ಮೊದಲನೆಯ ಸ್ತ್ರೀಯಾದ ಹವ್ವಳು ತನ್ನನ್ನು ಸರ್ಪನಿಂದ ವಂಚಿಸಲ್ಪಡಲು ಬಿಟ್ಟುಕೊಟ್ಟಳು ಮತ್ತು ನಿಷೇಧಿತ ಹಣ್ಣಿನಲ್ಲಿ ಪಾಲಿಗಳಾದಳು. ಅವಳು ವಿನೀತಳೂ, ನಮ್ರಳೂ ಆಗಿದ್ದಿದ್ದರೆ, ದೇವರಂತೆ ಆಗುವ—ಒಳ್ಳೇದನ್ನು ಮತ್ತು ಕೆಟ್ಟದ್ದನ್ನು ತಾನಾಗಿಯೇ ತೀರ್ಮಾನಿಸುವ—ಶೋಧನೆಯು ಅವಳನ್ನು ಆಕರ್ಷಿಸುತ್ತಿರುತ್ತಿದ್ದಿಲ್ಲ. ಮತ್ತು ಅವಳು ನಿಸ್ವಾರ್ಥಿಯಾಗಿರುತ್ತಿದ್ದರೆ, ಅವಳ ಸೃಷ್ಟಿಕರ್ತನಾದ ಯೆಹೋವ ದೇವರಿಂದ ಸ್ಪಷ್ಟವಾಗಿಗಿ ನಿಷೇಧಿಸಲ್ಪಟ್ಟದ್ದನ್ನು ಅವಳು ಬಯಸುತ್ತಿದ್ದಿಲ್ಲ.—ಆದಿಕಾಂಡ 2:16, 17.
7 ಆದಾಮ, ಹವ್ವರ ಪತನದ ತುಸು ಸಮಯದ ನಂತರ, ದುರಭಿಮಾನ ಮತ್ತು ಸ್ವಾರ್ಥವು ತನ್ನ ತಮ್ಮನಾದ ಹೇಬೆಲನನ್ನು ಕೊಲ್ಲುವಂತೆ ಕಾಯಿನನಿಗೆ ಕಾರಣವಾಯಿತು. ಹಾಗೆಯೇ ಸ್ವಾರ್ಥವು, ಕೆಲವು ನಿರ್ದಿಷ್ಟ ದೇವದೂತರುಗಳನ್ನು ಸ್ವತಂತ್ರವಾಗಿ ವರ್ತಿಸುವಂತೆ ಮಾಡಿ, ಅವರು ತಮ್ಮ ಮೂಲ ಸ್ಥಾನವನ್ನು ತ್ಯಜಿಸುವಂತೆ ಮತ್ತು ವಿಷಯಲಂಪಟತನದಲ್ಲಿ ಆನಂದಿಸಲು ಶರೀರಧಾರಿಗಳಾಗುವಂತೆ ಕಾರಣವಾಯಿತು. ದುರಭಿಮಾನ ಮತ್ತು ಸ್ವಾರ್ಥವು ನಿಮ್ರೋದನನ್ನು ಪ್ರೇರಿಸಿತು ಮತ್ತು ಇದು ಅವನ ಸಮಯದಿಂದ ಅಧಿಕಾಂಶ ಲೋಕಾಧಿಪತಿಗಳ ವೈಶಿಷ್ಟ್ಯತೆಯಾಗಿದೆ.—ಆದಿಕಾಂಡ 3:6, 7; 4:6-8; 1 ಯೋಹಾನ 3:12; ಯೂದ 6.
ಯೆಹೋವ ದೇವರಿಗೆ ನಾವು ಅಧೀನತೆ ಸಲ್ಲಿಸಬೇಕಾದ ಕಾರಣ
8-11. ದೇವಾಧೀನತೆಯನ್ನು ನಾವು ತೋರಿಸಲು ಇರುವ ನಾಲ್ಕು ಬಲಾಢ್ಯ ಕಾರಣಗಳು ಯಾವುವು?
8 ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ನಾವು ಅಧೀನತೆಯನ್ನು ಯಾಕೆ ಸಲ್ಲಿಸತಕ್ಕದ್ದು? ಎಲ್ಲಕ್ಕಿಂತಲೂ ಮೊದಲ ಕಾರಣವೇನಂದರೆ ಅವನು ವಿಶ್ವದ ಸಾರ್ವಭೌಮನಾಗಿದ್ದಾನೆ. ಎಲ್ಲಾ ಅಧಿಕಾರವು ಯೋಗ್ಯವಾಗಿ ಅವನಲ್ಲಿ ನೆಲಸಿರುತ್ತದೆ. ಅವನು ನಮ್ಮ ನ್ಯಾಯಾಧಿಪತಿ, ಧರ್ಮವಿಧಾಯಕ, ಮತ್ತು ಅರಸನಾಗಿದ್ದಾನೆ. (ಯೆಶಾಯ 33:22) ಅವನ ಕುರಿತಾಗಿ ಉಚಿತವಾಗಿಯೇ ಬರೆಯಲ್ಪಟ್ಟದ್ದು: “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ.”—ಇಬ್ರಿಯ 4:13.
9 ಇನ್ನೂ ಹೆಚ್ಚಾಗಿ, ನಮ್ಮ ಸೃಷ್ಟಿಕರ್ತನು ಸರ್ವಶಕ್ತನಾಗಿರುವುದರಿಂದ, ಅವನನ್ನು ಯಾರೊಬ್ಬನೂ ಯಶಸ್ವಿಯಾಗಿ ವಿರೋಧಿಸಶಕ್ತನಲ್ಲ; ಅವನಿಗೆ ಅಧೀನನಾಗಿರುವ ತನ್ನ ಹಂಗನ್ನು ಯಾರೊಬ್ಬನೂ ಅಲಕ್ಷಿಸಸಾಧ್ಯವಿಲ್ಲ. ಬೇಗನೆ ಯಾ ನಂತರ, ನಿರಾಕರಿಸುವವರು ಪ್ರಾಚೀನ ಕಾಲದ ಫರೋಹನಂತೆ ಮತ್ತು ಪಿಶಾಚನಾದ ಸೈತಾನನಿಗೆ ಆಗುವಂತೆ, ದೇವರ ಕ್ಲುಪ್ತಕಾಲದಲ್ಲಿ ನಾಶವಾಗಲಿರುವರು.—ಕೀರ್ತನೆ 136:1, 11-15; ಪ್ರಕಟನೆ 11:17; 20:10, 14.
10 ಅಧೀನತೆಯು ಎಲ್ಲಾ ಬುದ್ಧಿಶಕ್ತಿಯುಳ್ಳ ಜೀವಿಗಳ ಹಂಗಾಗಿರುತ್ತದೆ ಯಾಕಂದರೆ ಅವರ ಸೃಷ್ಟಿಕರ್ತನನ್ನು ಸೇವಿಸುವ ಉದ್ದೇಶಕ್ಕಾಗಿ ಅವರು ಅಸ್ತಿತ್ವದಲ್ಲಿದ್ದಾರೆ. ಪ್ರಕಟನೆ 4:11 ಘೋಷಿಸುವುದು: “ಕರ್ತನೇ [ಯೆಹೋವನೇ, NW], ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಅವನು ಮಹಾ ಕುಂಬಾರನಾಗಿದ್ದಾನೆ, ಮತ್ತು ಅವನ ಉದ್ದೇಶವನ್ನು ನಿರ್ವಹಿಸಲು ಅವನು ಮಾನವ ಪಾತ್ರೆಗಳನ್ನು ಮಾಡುತ್ತಾನೆ.—ಯೆಶಾಯ 29:16; 64:8.
11 ನಮ್ಮ ಸೃಷ್ಟಿಕರ್ತನು ಸರ್ವಜ್ಞಾನಿಯಾಗಿರುವುದರಿಂದ, ನಮಗೆ ಅತ್ಯುತ್ತಮವಾಗಿರುವುದನ್ನು ಅವನು ಬಲ್ಲಾತನಾಗಿದ್ದಾನೆಂಬ ನಿಜಾಂಶವನ್ನು ನಾವೆಂದೂ ಅಲಕ್ಷಿಸಬಾರದು. (ರೋಮಾಪುರ 11:33) ಅವನ ನಿಯಮಗಳು ‘ನಮ್ಮ ಮೇಲಿಗಾಗಿ’ ಇವೆ. (ಧರ್ಮೋಪದೇಶಕಾಂಡ 10:12, 13) ಎಲ್ಲಕ್ಕಿಂತಲೂ ಮೇಲಾಗಿ, “ದೇವರು ಪ್ರೀತಿಸ್ವರೂಪಿ”ಯಾಗಿರುವುದರಿಂದ, ನಮಗೆ ಅತ್ಯುತ್ತಮವಾದುದ್ದನ್ನೇ ಅವನು ಬಯಸುತ್ತಾನೆ. ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಅಧೀನತೆಯಲ್ಲಿರಲು ನಮಗೆ ಎಷ್ಟೊಂದು ಒತ್ತಾಯಿಸುವ ಕಾರಣಗಳಿರುತ್ತವೆ!—1 ಯೋಹಾನ 4:8.
ಯೇಸು ಕ್ರಿಸ್ತನು, ದೇವಾಧೀನತೆಯ ಪರಿಪೂರ್ಣ ಆದರ್ಶ
12, 13. (ಎ) ದೇವಾಧೀನತೆಯನ್ನು ಯೇಸು ಕ್ರಿಸ್ತನು ಹೇಗೆ ವ್ಯಕ್ತಪಡಿಸಿದನು? (ಬಿ) ಯೇಸುವಿನ ಯಾವ ಮಾತುಗಳು ಅವನ ಅಧೀನತೆಯ ಮನೋಭಾವವನ್ನು ತೋರಿಸುತ್ತವೆ?
12 ಶಂಕೆಗೆ ಯಾವುದೇ ಎಡೆಇಲ್ಲದೇ, ಯೆಹೋವನ ಏಕಜಾತ ಪುತ್ರನಾದ ಯೇಸು ಕ್ರಿಸ್ತನು ದೇವಾಧೀನತೆಯ ಪರಿಪೂರ್ಣ ಆದರ್ಶವನ್ನು ನಮಗೆ ನೀಡುತ್ತಾನೆ. ಅಪೊಸ್ತಲ ಪೌಲನು ಇದನ್ನು ಫಿಲಿಪ್ಪಿ 2:6-8 ರಲ್ಲಿ ನಿರ್ದೇಶಿಸುತ್ತಾನೆ: “[ಯೇಸುವು] ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲೆನ್ಲು ಎಂದೆಣಿಸದೆ ತನ್ನನ್ನು [ಇನ್ನಷ್ಟು] ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ಭೂಮಿಯ ಮೇಲಿರುವಾಗ, ಯೇಸುವು ತನ್ನಷ್ಟಕ್ಕೆ ತಾನೇ ಏನನ್ನೂ ಮಾಡಲಿಲ್ಲ ಎಂದು ಪದೇ ಪದೇ ಹೇಳಿದನು; ಅವನು ಸ್ವತಂತ್ರವಾಗಿ ವರ್ತಿಸಲಿಲ್ಲ, ಆದರೆ ಯಾವಾಗಲೂ ತನ್ನ ಸ್ವರ್ಗೀಯ ತಂದೆಗೆ ಅಧೀನತೆಯಲ್ಲಿ ತನ್ನನ್ನು ಇಟ್ಟುಕೊಂಡನು.
13 ಯೋಹಾನ 5:19, 30 ರಲ್ಲಿ ನಾವು ಓದುವುದು: “ಅದಕ್ಕೆ ಯೇಸು ಅವರಿಗೆ—ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ. ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.” ತದ್ರೀತಿಯಲ್ಲಿ, ಅವನಿಗೆ ನಂಬಿಕೆದ್ರೋಹ ಮಾಡಿದ ರಾತ್ರಿಯಲ್ಲಿ ಅವನು ಪದೇ ಪದೇ ಪ್ರಾರ್ಥಿಸಿದನು: “ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.”—ಮತ್ತಾಯ 26:39, 42, 44; ಇದನ್ನೂ ನೋಡಿರಿ ಯೋಹಾನ 7:28; 8:28, 42.
ದೇವಾಧೀನತೆಯ ಪುರಾತನ ಉದಾಹರಣೆಗಳು
14. ನೋಹನು ಯಾವ ರೀತಿಗಳಲ್ಲಿ ದೇವಾಧೀನತೆಯನ್ನು ತೋರಿಸಿದನು?
14 ದೇವಾಧೀನತೆಯ ಆದಿಯ ಮಾನವ ಉದಾಹರಣೆಗಳಲ್ಲಿ ನೋಹನು ಇದ್ದನು. ಅವನು ಮೂರು ವಿಧಗಳಲ್ಲಿ ತನ್ನ ಅಧೀನತೆಯನ್ನು ತೋರಿಸಿದನು. ಮೊದಲನೆಯದಾಗಿ, ತನ್ನ ಸಮಕಾಲೀನರಲ್ಲಿ ನಿರ್ದೋಷಿಯಾಗಿದ್ದ ಒಬ್ಬ ಸುನೀತಿಯ ಮನುಷ್ಯನಾಗಿದ್ದು, ಸತ್ಯ ದೇವರೊಂದಿಗೆ ನಡೆದ ಮೂಲಕ. (ಆದಿಕಾಂಡ 6:9) ಎರಡನೆಯದಾಗಿ, ನಾವೆಯನ್ನು ಕಟ್ಟುವುದರ ಮೂಲಕ. ಅವನು “ದೇವರು ಅಪ್ಪಣೆಕೊಟ್ಟ ಪ್ರಕಾರವೇ . . . ಮಾಡಿದನು.” (ಆದಿಕಾಂಡ 6:22) ಮೂರನೆಯದಾಗಿ, “ಸುನೀತಿಯನ್ನು ಸಾರುವವ”ನೋಪಾದಿ ಬರಲಿರುವ ಜಲಪ್ರಲಯದ ಎಚ್ಚರಿಕೆಯನ್ನು ನೀಡುವುದರ ಮೂಲಕ.—2 ಪೇತ್ರ 2:5.
15, 16. (ಎ) ದೇವಾಧೀನತೆಯಲ್ಲಿ ಅಬ್ರಹಾಮನು ಯಾವ ಉತ್ತಮ ಉದಾಹರಣೆಯನ್ನು ಇಟ್ಟನು? (ಬಿ) ಸಾರಳು ಅಧೀನತೆಯನ್ನು ಹೇಗೆ ತೋರಿಸಿದಳು?
15 ದೇವಾಧೀನತೆಯಲ್ಲಿ ಇನ್ನೊಂದು ಎದ್ದುಕಾಣುವ ಉದಾಹರಣೆ ಅಬ್ರಹಾಮನು. “ನಿನ್ನ ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು” ಎಂಬ ದೇವರ ಅಪ್ಪಣೆಗೆ ವಿಧೇಯನಾಗುವುದರ ಮೂಲಕ ಅವನು ಅಧೀನತೆಯನ್ನು ವ್ಯಕ್ತಪಡಿಸಿದನು. (ಆದಿಕಾಂಡ 12:1) ಅದು ಊರ್ನಲ್ಲಿರುವ (ಭೂಅಗಿತಶಾಸ್ತ್ರದ ಅನ್ವೇಷಣೆಗಳಿಂದ ಸೂಚಿಸಲ್ಪಟ್ಟಂತೆ, ಅದೇನೂ ಅನಾಮಧೇಯ ನಗರವಾಗಿರಲಿಲ್ಲ) ಸೌಕರ್ಯಗಳಿರುವ ಸುತ್ತುಗಟ್ಟುಗಳನ್ನು ತೊರೆದು, ನೂರು ವರ್ಷಗಳ ತನಕ ಪರದೇಶವೊಂದರಲ್ಲಿ ಡೇರೆವಾಸಿಯಾಗಿ ಅಲೆದಾಡುವ ಅರ್ಥದಲ್ಲಿತ್ತು. ತನ್ನ ಮಗನಾದ ಇಸಾಕನನ್ನು ಬಲಿಕೊಡಲು ಇಚ್ಛೆಯುಳ್ಳವನಾಗಿರುವುದರಲ್ಲಿ ಒಂದು ಮಹಾ ಪರೀಕ್ಷೆಯನ್ನು ಎದುರಿಸುವುದರ ಮೂಲಕ ಅಬ್ರಹಾಮನು ವಿಶಿಷ್ಟವಾಗಿ ದೇವಾಧೀನತೆಯನ್ನು ತೋರಿಸಿದನು.—ಆದಿಕಾಂಡ 22:1-12.
16 ದೇವಾಧೀನತೆಯ ಮತ್ತೊಂದು ಉತ್ತಮ ಉದಾಹರಣೆಯನ್ನು ಅಬ್ರಹಾಮನ ಹೆಂಡತಿಯಾದ ಸಾರಳು ನಮಗೆ ಒದಗಿಸುತ್ತಾಳೆ. ಅಪರಿಚಿತ ದೇಶವೊಂದರಲ್ಲಿ ಅಲೆದಾಡುವುದು ನಿಸ್ಸಂದೇಹವಾಗಿ ಅದರೊಟ್ಟಿಗೆ ಅನೇಕ ಅನಾನುಕೂಲತೆಗಳನ್ನು ತಂದಿದ್ದೀತು, ಆದರೆ ಅವಳು ದೂರುವುದನ್ನು ನಾವೆಲಿಯ್ಲೂ ಓದುವುದಿಲ್ಲ. ಅವಳು ತನ್ನ ತಂಗಿಯಾಗಿದ್ದಾಳೆಂದು ವಿದೇಶಿ ಅಧಿಪತಿಗಳಿಗೆ ಅಬ್ರಹಾಮನು ಎರಡಾವರ್ತಿ ಅವಳನ್ನು ಸಾದರಪಡಿಸಿದಾಗ ಅವಳು ದೇವಾಧೀನತೆಯ ಉತ್ತಮ ಉದಾಹರಣೆಯನ್ನು ಇಟ್ಟಳು. ಫಲಿತಾಂಶವಾಗಿ, ಅವಳು ಬಹುಮಟ್ಟಿಗೆ ಅವರ ಅಂತಃಪುರದ ಸ್ತ್ರೀಯರ ಒಬ್ಬ ಸದಸ್ಯೆಯಾಗುವಂತಿದ್ದರೂ ಕೂಡ, ಅವಳು ಎರಡೂ ಸಂದರ್ಭಗಳಲ್ಲೂ ಸಹಕರಿಸಿದಳು. ತನ್ನ ಪತಿಯಾದ ಅಬ್ರಹಾಮನನ್ನು ಸ್ವತಃ ತನ್ನೊಳಗೆ “ನನ್ನ ಯಜಮಾನ” ಎಂದು ನಿರ್ದೇಶಿಸಿದ ರೀತಿಯು, ಅವಳ ದೇವಾಧೀನತೆಗೆ ರುಜುವಾತನ್ನೀಯುತ್ತಾ, ಅದು ಅವಳ ಹೃದಯದ ಅಪ್ಪಟ ಮನೋಭಾವವಾಗಿತ್ತು ಎಂದು ತೋರಿಸಿತು.—ಆದಿಕಾಂಡ 12:11-20; 18:12; 20:2-18; 1 ಪೇತ್ರ 3:6.
17. ಇಸಾಕನು ದೇವಾಧೀನತೆಯನ್ನು ತೋರಿಸಿದನು ಎಂದು ಏಕೆ ಹೇಳಸಾಧ್ಯವಿದೆ?
17 ಅಬ್ರಹಾಮನ ಮಗನಾದ ಇಸಾಕನಿಂದ ಒದಗಿಸಲ್ಪಟ್ಟ ದೇವಾಧೀನತೆಯ ಉದಾಹರಣೆಯನ್ನು ನಾವು ಅಲಕ್ಷಿಸದಿರೋಣ. ಒಂದು ಯಜ್ಞದೋಪಾದಿ ಅವನನ್ನು ಅರ್ಪಿಸಲು ಅವನ ತಂದೆಯಾದ ಅಬ್ರಹಾಮನಿಗೆ ಯೆಹೋವನು ಅಪ್ಪಣೆಯಿತ್ತಾಗ, ಇಸಾಕನು ಸುಮಾರು 25 ವರ್ಷ ಪ್ರಾಯದವನಾಗಿದ್ದನು ಎಂದು ಯೆಹೂದ್ಯ ಸಂಪ್ರದಾಯ ಸೂಚಿಸುತ್ತದೆ. ಇಸಾಕನು ಬಯಸಿದ್ದರೆ, ಅವನಿಗಿಂತಲೂ ನೂರು ವರ್ಷ ಹೆಚ್ಚು ವಯಸ್ಸಿನ ತಂದೆಯನ್ನು ಅವನು ಸುಲಭವಾಗಿ ಪ್ರತಿರೋಧಿಸಸಾಧ್ಯವಿತ್ತು. ಆದರೆ ಇಲ್ಲ. ಯಜ್ಞಕ್ಕಾಗಿ ಪ್ರಾಣಿಯೊಂದು ಇಲ್ಲದಿರುವುದರ ಕುರಿತು ಇಸಾಕನು ಆಶ್ಚರ್ಯಗೊಂಡರೂ, ಅವನನ್ನು ವೇದಿಯ ಮೇಲೆ ಅವನ ತಂದೆಯು ಇಟ್ಟಾಗ ಮತ್ತು ಹತಿಸುವ ಕತ್ತಿಯು ಬಳಸಲ್ಪಟ್ಟಿದ್ದರೆ ಸಂಭವಿಸಬಹುದಾದ ಅನೈಚ್ಛಿಕ ಪ್ರತಿಕ್ರಿಯೆಗಳನ್ನು ತಡೆಗಟ್ಟಲು ಯಾ ಹತೋಟಿಯಲ್ಲಿಡಲು, ಅವನ ಕೈಕಾಲುಗಳನ್ನು ಬಿಗಿದು ಕಟ್ಟುವಾಗ, ಅವನು ನಮ್ರತೆಯಿಂದ ಅಧೀನನಾದನು.—ಆದಿಕಾಂಡ 22:7-9.
18. ಮೋಶೆ ಆದರ್ಶಪ್ರಾಯ ದೇವಾಧೀನತೆಯನ್ನು ಹೇಗೆ ತೋರಿಸಿದನು?
18 ವರ್ಷಗಳ ನಂತರ, ದೇವಾಧೀನತೆಯ ಒಂದು ಉತ್ತಮ ಉದಾಹರಣೆಯನ್ನು ಮೋಶೆಯು ನಮಗಾಗಿ ಇಟ್ಟನು. ಅದು ಅವನನ್ನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಎಂದು ವರ್ಣಿಸಲ್ಪಟ್ಟಿರುವುದರ ಮೂಲಕ ಖಂಡಿತವಾಗಿ ಸೂಚಿಸಲ್ಪಟ್ಟಿದೆ. (ಅರಣ್ಯಕಾಂಡ 12:3) ಅವನಿಗೆ ಇಪ್ಪತ್ತು ಯಾ ಮೂವತ್ತು ಲಕ್ಷದಷ್ಟು ಸಂಖ್ಯೆಯ ದಂಗೆಕೋರ ಜನರ ಮೇಲೆ ಮೇಲ್ವಿಚಾರಣೆ ಮಾಡಲಿಕ್ಕಿದ್ದರೂ ಕೂಡ, ಅರಣ್ಯದಲ್ಲಿ 40 ವರ್ಷಗಳ ತನಕ ಯೆಹೋವನ ಅಪ್ಪಣೆಗಳನ್ನು ವಿಧೇಯತೆಯಿಂದ ಪರಿಪಾಲಿಸಿರುವುದು ಅವನ ದೇವಾಧೀನತೆಗೆ ಇನ್ನಷ್ಟು ಸಾಕ್ಷ್ಯವನ್ನೀಯುತ್ತದೆ. ಈ ಕಾರಣ ದಾಖಲೆಯು ಹೇಳುವುದು: “ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.”—ವಿಮೋಚನಕಾಂಡ 40:16.
19. ಯೋಬನು ಯಾವ ವ್ಯಕ್ತಪಡಿಸುವಿಕೆಗಳ ಮೂಲಕ ಯೆಹೋವನಿಗೆ ತನ್ನ ಅಧೀನತೆಯನ್ನು ತೋರಿಸಿದನು?
19 ನಮಗೆ ದೇವಾಧೀನತೆಯ ಶ್ರೇಷ್ಠ ಉದಾಹರಣೆಯನ್ನಿಟ್ಟ ಮಗದೊಂದು ಎದ್ದುಕಾಣುವ ವ್ಯಕ್ತಿ ಯೋಬನು ಆಗಿದ್ದಾನೆ. ಯೋಬನ ಎಲ್ಲಾ ಸೊತ್ತುಗಳನ್ನು ಅಳಿಸಿಹಾಕಲು, ಅವನ ಮಕ್ಕಳನ್ನು ಕೊಲ್ಲಲು ಮತ್ತು ಅವನನ್ನು “ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟ ಕುರುಗಳನ್ನು ಹುಟ್ಟಿಸಿ” ಅವನನ್ನು ಬಾಧಿಸಲು ಸೈತಾನನಿಗೆ ಯೆಹೋವನು ಅನುಮತಿಯನ್ನಿತ್ತ ನಂತರ, ಯೋಬನ ಹೆಂಡತಿಯು ಅವನಿಗಂದದ್ದು: “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ.” ಆದಾಗ್ಯೂ, ಅವಳಿಗೆ ಹೀಗನ್ನುವುದರ ಮೂಲಕ ಯೋಬನು ತನ್ನ ದೇವಾಧೀನತೆಯನ್ನು ತೋರಿಸಿದನು: “ಮೂರ್ಖಳು ಮಾತಾಡಿದಂತೆ ನೀನು ಮಾತಾಡುತ್ತೀ; ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ.” (ಯೋಬ 2:7-10) ಅದೇ ಮಾನಸಿಕ ಮನೋಭಾವವನ್ನು ಯೋಬ 13:15 ರಲ್ಲಿ ದಾಖಲಿಸಲ್ಪಟ್ಟ ಅವನ ಮಾತುಗಳು ತೋರಿಸುತ್ತವೆ: “ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ.” ವಾಸ್ತವದಲ್ಲಿ, ಅವನು ಸ್ವಂತ ಸ್ವಸಮರ್ಥನೆಯ ಕುರಿತು ಬಹಳವಾಗಿ ಚಿಂತಿತನಾಗಿದ್ದರೂ ಕೂಡ, ಅವನ ಸಾಂತ್ವನಕಾರರೆಂದು ಹೇಳಿಕೊಳ್ಳುತ್ತಿದ್ದವರಲ್ಲಿ ಒಬ್ಬನಿಗೆ ಯೆಹೋವನು ಕೊನೆಯಲ್ಲಿ ಹೇಳಿದ್ದನ್ನು ನಾವು ಅಲಕ್ಷಿಸಕೂಡದು: “ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ.” ನಿಸ್ಸಂದೇಹವಾಗಿ, ಯೋಬನು ದೇವಾಧೀನತೆಯ ಒಂದು ಉತ್ತಮ ಉದಾಹರಣೆಯನ್ನು ನಮಗೆ ಒದಗಿಸಿದ್ದಾನೆ.—ಯೋಬ 42:7.
20. ದಾವೀದನು ಯಾವ ವಿಧಗಳಲ್ಲಿ ದೇವಾಧೀನತೆಯನ್ನು ತೋರಿಸಿದನು?
20 ಹೀಬ್ರು ಶಾಸ್ತ್ರಗ್ರಂಥದಿಂದ ಕೇವಲ ಇನ್ನೊಂದು ಉದಾಹರಣೆಯನ್ನು ಹೇಳುವುದಾದರೆ, ದಾವೀದನಿದ್ದಾನೆ. ಪ್ರಾಣಿಯೋಪಾದಿ ದಾವೀದನನ್ನು ಸೌಲನು ಬೇಟೆಯಾಡುತ್ತಿದ್ದಾಗ, ಸೌಲನನ್ನು ಹತಿಸುವುದರ ಮೂಲಕ ತನ್ನ ತೊಂದರೆಗಳನ್ನು ಕೊನೆಗಾಣಿಸಲು ದಾವೀದನಿಗೆ ಎರಡು ಅವಕಾಶಗಳಿದ್ದವು. ಆದರೂ, ದಾವೀದನ ದೇವಾಧೀನತೆಯು ಹಾಗೆ ಮಾಡುವುದರಿಂದ ಅವನನ್ನು ತಡೆಯಿತು. ಅವನ ಮಾತುಗಳು 1 ಸಮುವೇಲ 24:6 ರಲ್ಲಿ [NW] ದಾಖಲಿಸಲ್ಪಟ್ಟಿವೆ: “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿರುವುದರಿಂದ, ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಅಂತಹ ಒಂದು ಸಂಗತಿಯನ್ನು ಮಾಡಲು ಯೆಹೋವನ ದೃಷ್ಟಿಯಲ್ಲಿ ನನ್ನ ವತಿಯಿಂದ ಅದನ್ನು ಯೋಚಿಸಲೂ ಅಸಾಧ್ಯವಾಗಿದೆ.” (ಇದನ್ನೂ ನೋಡಿರಿ 1 ಸಮುವೇಲ 26:9-11.) ಅವನು ತಪ್ಪುಗಳನ್ನು ಮಾಡಿದಾಗ ಯಾ ಪಾಪಗೈದಾಗ, ತಪ್ಪು ಮನಗಾಣಿಸುವಿಕೆಯನ್ನು ಸ್ವೀಕರಿಸುವುದರ ಮೂಲಕ ಅವನು ತದ್ರೀತಿಯಲ್ಲಿ ತನ್ನ ದೇವಾಧೀನತೆಯನ್ನು ತೋರಿಸಿದನು.—2 ಸಮುವೇಲ 12:13; 24:17; 1 ಪೂರ್ವಕಾಲವೃತ್ತಾಂತ 15:13.
ಪೌಲನ ಅಧೀನತೆಯ ಉದಾಹರಣೆ
21-23. ಅಪೊಸ್ತಲ ಪೌಲನು ಯಾವ ವಿವಿಧ ಸಂಭವಗಳಲ್ಲಿ ದೇವಾಧೀನತೆಯನ್ನು ತೋರಿಸಿದನು?
21 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ, ದೇವಾಧೀನತೆಯ ಗಮನಾರ್ಹ ಉದಾಹರಣೆಯು ಅಪೊಸ್ತಲ ಪೌಲನಲ್ಲಿ ನಮಗಿದೆ. ಅವನು ತನ್ನ ಧಣಿಯಾದ ಯೇಸು ಕ್ರಿಸ್ತನನ್ನು, ಅವನ ಅಪೊಸ್ತಲಿಕ ಶುಶ್ರೂಷೆಯ ಬೇರೆಲ್ಲಾ ವಿಭಾಗಗಳಲ್ಲಿ ಮಾಡಿದಂತೆಯೆ, ಇದರಲ್ಲೂ ಅನುಕರಿಸಿದನು. (1 ಕೊರಿಂಥ 11:1) ಇತರ ಅಪೊಸ್ತಲರಿಗಿಂತ ಹೆಚ್ಚು ಪ್ರಬಲ ರೀತಿಯಲ್ಲಿ ಅವನನ್ನು ಯೆಹೋವ ದೇವರು ಉಪಯೋಗಿಸಿದರೂ ಕೂಡ, ಪೌಲನೆಂದೂ ಸ್ವತಂತ್ರವಾಗಿ ವರ್ತಿಸಲಿಲ್ಲ. ಮತಾಂತರಿ ಅನ್ಯಜನರು ಸುನ್ನತಿಮಾಡಿಸಿಕೊಳ್ಳಬೇಕೋ ಬೇಡವೋ ಎಂಬ ಪ್ರಶ್ನೆಯು ಎದ್ದಾಗ, ಲೂಕನು ನಮಗೆ ಹೇಳುವುದು, “ಭೇದವೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಸಹೋದರರು ಪೌಲ ಬಾರ್ನಬರನ್ನೂ ತಮ್ಮಲ್ಲಿ ಬೇರೆ ಕೆಲವರನ್ನೂ ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ ಹೋಗಬೇಕೆಂದು [ಅಂತಿಯೋಕ್ಯದ ಸಹೋದರರು] ನೇಮಿಸಿದರು.”—ಅ. ಕೃತ್ಯಗಳು 15:2.
22 ಪೌಲನ ಮಿಷನೆರಿ ಚಟುವಟಿಕೆಯ ಕುರಿತಾಗಿಯಾದರೋ, ಗಲಾತ್ಯ 2:9 ರಲ್ಲಿ ನಮಗೆ ಹೇಳಿರುವುದು: “ಸಭಾಸ್ತಂಭಗಳೆಂದು ಹೆಸರುಗೊಂಡಿರುವ ಯಾಕೋಬ ಕೇಫ ಯೋಹಾನರು ಕಂಡು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳುಕೊಂಡು ಐಕ್ಯವನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬನಿಗೂ ಬಲಗೈ ಕೊಟ್ಟು—ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.” ಸ್ವತಂತ್ರವಾಗಿ ವರ್ತಿಸುವುದರ ಬದಲಾಗಿ, ಪೌಲನು ಮಾರ್ಗದರ್ಶನವನ್ನು ಕೋರಿದನು.
23 ತದ್ರೀತಿಯಲ್ಲಿ, ಕೊನೆಯ ಬಾರಿ ಪೌಲನು ಯೆರೂಸಲೇಮಿನಲ್ಲಿದ್ದಾಗ, ಮೋಶೆಯ ನಿಯಮಶಾಸ್ತ್ರದ ಕುರಿತಾದರೋ ಅವನು ಧರ್ಮಭ್ರಷ್ಟನಲ್ಲವೆಂದು ಎಲ್ಲರೂ ನೋಡಶಕ್ತರಾಗುವಂತೆ ದೇವಾಲಯಕ್ಕೆ ಹೋಗುವ ಮತ್ತು ನಿಯಮಶಾಸ್ತ್ರದ ಕ್ರಮವಿಧಾನಗಳನ್ನು ಪರಿಪಾಲಿಸುವ ಸಂಬಂಧದಲ್ಲಿ ಅಲ್ಲಿನ ಹಿರಿಯರಿಂದ ಕೊಡಲ್ಪಟ್ಟ ಬುದ್ಧಿವಾದವನ್ನು ಅವನು ಸ್ವೀಕರಿಸಿದನು. ಅವನು ಹಾಗೆ ಮಾಡುವಿಕೆಯು ಅವನ ವಿರುದ್ಧವಾಗಿ ಕೆರಳಿಸಲ್ಪಟ್ಟ ಗುಂಪುದೊಂಬಿಯೊಂದಿಗೆ ಅದು ವಿಪತ್ಕಾರಕವಾಗಿ ಕೊನೆಗೊಳ್ಳುತ್ತದೆಂಬಂತೆ ಭಾಸವಾದಾಗ, ಆ ಹಿರಿಯರಿಗೆ ಅವನು ಅಧೀನನಾಗಿದ್ದದ್ದು ಒಂದು ತಪ್ಪಾಗಿತ್ತೋ? ಎಂದಿಗೂ ಇಲ್ಲ, ಇದು ಅ. ಕೃತ್ಯಗಳು 23:11 ರಲ್ಲಿ ನಾವೇನು ಓದುತ್ತೇವೊ ಅದರಿಂದ ವ್ಯಕ್ತವಾಗುತ್ತದೆ: “ಆ ದಿನದ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು—ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು ಅಂದನು.”
24. ಮುಂದಿನ ಲೇಖನದಲ್ಲಿ ಅಧೀನತೆಯ ಯಾವ ಅಧಿಕ ವಿಭಾಗಗಳು ಚರ್ಚಿಸಲ್ಪಡುವುವು?
24 ನಿಜವಾಗಿಯೂ, ನಾವು ಅಧೀನತೆಯಲ್ಲಿರಲು ಶಾಸ್ತ್ರಗ್ರಂಥವು ನಮಗೆ ಬಲವಾದ ಕಾರಣಗಳನ್ನು ಮತ್ತು ಅಂತಹ ಅಧೀನತೆಯನ್ನು ಪ್ರದರ್ಶಿಸಿದವರ ಮನತಟ್ಟುವ ಉದಾಹರಣೆಗಳನ್ನು ಕೊಡುತ್ತದೆ. ಮುಂದಿನ ಲೇಖನದಲ್ಲಿ, ನಾವು ಯೆಹೋವ ದೇವರಿಗೆ ಅಧೀನರಾಗಿರಸಾಧ್ಯವಿರುವ ವಿವಿಧ ವಿಭಾಗಗಳು, ನಾವು ಹಾಗಿರಲು ಸಹಾಯಕಗಳು, ಮತ್ತು ಫಲಿಸುವ ಬಹುಮಾನಗಳನ್ನು ನಾವು ಪರಿಗಣಿಸಲಿರುವೆವು.
ನೀವು ಹೇಗೆ ಉತ್ತರಿಸುವಿರಿ?
▫ ಯಾವ ವಿಧದ ಸ್ವಾತಂತ್ರ್ಯವು ಅಪೇಕ್ಷಣೀಯವಲ್ಲ?
▫ ಅಧೀನರಾಗಿರಲು ನಿರಾಕರಿಸುವುದರ ಮೂಲಕಾರಣ ಏನು?
▫ ಯಾವ ಕಾರಣಗಳಿಗಾಗಿ ನಾವು ಯೆಹೋವನಿಗೆ ಅಧೀನತೆಯನ್ನು ಸಲ್ಲಿಸಬೇಕು?
▫ ದೇವಾಧೀನತೆಯ ಯಾವ ಉತ್ತಮ ಉದಾಹರಣೆಗಳನ್ನು ಶಾಸ್ತ್ರಗ್ರಂಥವು ಕೊಡುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ನಿಮ್ರೋದನು, ದೇವಾಧೀನತೆಗೆ ದಂಗೆಯೇಳುವುದರಲ್ಲಿ ಜಲಪ್ರಲಯಾನಂತರದ ಮೊದಲ ಅಧಿಪತಿ
[ಪುಟ 13 ರಲ್ಲಿರುವ ಚಿತ್ರ]
ನೋಹನು, ದೇವಾಧೀನತೆಯ ದೋಷರಹಿತ ಉದಾಹರಣೆ.—ಆದಿಕಾಂಡ 6:14, 22