ಒಂದು ಆದರ್ಶರೂಪದ ಹೀಬ್ರು ಬೈಬಲ್ ಹಸ್ತಪ್ರತಿ
ಮೃತ ಸಮುದ್ರದ ಸುರುಳಿಗಳ ಅನ್ವೇಷಣೆಯು 1947 ರಲ್ಲಿ ಆಗುವ ಮೊದಲು, ಅತಿ ಪ್ರಾಚೀನ ಜ್ಞಾತ ಹೀಬ್ರು ಬೈಬಲ್ ಹಸ್ತಪ್ರತಿಯು—ಕೆಲವು ಚೂರುಗಳ ಹೊರತಾಗಿ—ಸಾ.ಶ. ಒಂಬತ್ತನೆಯ ಶತಕದ ಅಂತ್ಯದಿಂದ ಹನ್ನೊಂದನೆಯ ಶತಕದವುಗಳಾಗಿದ್ದವು. ಅದು ಬರಿ ಒಂದು ಸಾವಿರ ವರ್ಷಗಳಷ್ಟು ಹಿಂದಿನವು ಅಷ್ಟೇ. ಅದರ ಅರ್ಥ 1947ರ ಮೊದಲು ಬೈಬಲಿನ ಹೀಬ್ರು ಮೂಲಪಾಠವು ಅನಿಶ್ಚಿಯತೆಯದ್ದಾಗಿತ್ತು ಎಂದೋ? ಮತ್ತು ಕೇವಲ ಅತಿ ಸ್ವಲ್ಪವೇ ಪ್ರಾಚೀನ ಹೀಬ್ರು ಹಸ್ತಪ್ರತಿಗಳು ಯಾಕೆ ಇವೆ?
ಆ ಕೊನೆಯ ಪ್ರಶ್ನೆಯನ್ನು ಮೊದಲಾಗಿ ಪರಿಗಣಿಸಲು, ಸಂಪ್ರದಾಯಸ್ಥ ಯೆಹೂದಿ ವ್ಯವಸ್ಥೆಯ ಕೆಳಗೆ, ಇನ್ನು ಮುಂದೆ ಉಪಯೋಗಿಸಲಾಗದಷ್ಟು ಹರಿದುಹೋಗಿರುವ ಯಾವುದೇ ಹೀಬ್ರು ಬೈಬಲಿನ ಹಸ್ತಪ್ರತಿಯನ್ನು ಸಭಾಮಂದಿರದ ದಾಸ್ತಾನುಕೋಣೆ—ಗೆನೀಜಾ—ಒಂದರಲ್ಲಿ ಹಾಕಿ ಬೀಗಹಾಕಲ್ಪಡುತ್ತಿತ್ತು. ನಂತರ, ಹರಿದುಹೋದ ಹಸ್ತಪ್ರತಿಗಳ ರಾಶಿಯನ್ನು ಹೊರಗೆ ತೆಗೆದು, ಹೂಣಿಡಲಾಗುತ್ತಿತ್ತು. ಅವರ ಶಾಸ್ತ್ರಗ್ರಂಥಗಳು ಅಪವಿತ್ರಗೊಳಿಸಲ್ಪಡುವುದನ್ನು ಯಾ ದುರುಪಯೋಗವಾಗುವುದನ್ನು ತಡೆಯಲು ಯೆಹೂದ್ಯರು ಅದನ್ನು ಮಾಡುತ್ತಿದ್ದರು. ಯಾಕೆ? ಕಾರಣವೇನಂದರೆ ಅದರಲ್ಲಿ ದೇವರ ಪವಿತ್ರ ಹೆಸರನ್ನು ಪ್ರತಿನಿಧಿಸುವ ಹೀಬ್ರು ಅಕ್ಷರಗಳಾದ ಟೆಟ್ರಗ್ರಾಮಟನ್ [ನಾಲ್ಕಕ್ಷರಗಳು] ಇರುತ್ತಿತ್ತು, ಇದನ್ನು ಸಾಮಾನ್ಯವಾಗಿ ಇಂಗ್ಲಿಷಿನಲ್ಲಿ “ಜೆಹೋವ” ಎಂದು ಪ್ರತಿನಿಧಿಸಲಾಗಿದೆ.
“ಮುಕುಟ”
ಅಧಿಕಾಂಶವಾಗಿ, ಪುರಾತನ ಹೀಬ್ರು ಶಾಸ್ತ್ರಗ್ರಂಥವನ್ನು ಆರಂಭದ ಸಮಯದಿಂದಲೇ ನಂಬಿಗಸ್ತಿಕೆಯಿಂದ ದಾಟಿಸಲ್ಪಟ್ಟಿತ್ತು. ಉದಾಹರಣೆಗೆ, ಕೆಟರ್ “ಮುಕುಟ” ಎಂದು ಕರೆಯಲ್ಪಡುತ್ತಿದ್ದ ಒಂದು ಪ್ರಮುಖ ಹೀಬ್ರು ಹಸ್ತಪ್ರತಿ ಅಲ್ಲಿತ್ತು, ಅದರಲ್ಲಿ ಇಡೀ ಹೀಬ್ರು ಶಾಸ್ತ್ರಗ್ರಂಥಗಳು ಯಾ “ಹಳೇ ಒಡಂಬಡಿಕೆ” ಮೂಲದಲ್ಲಿ ಸೇರಿತ್ತು. ಅದನ್ನು ಬಹುಸಂಖ್ಯಾತ ಮುಸ್ಲಿಮ್ ನಗರವಾದ ಸಿರಿಯದ ಅಲೆಪ್ಪೊನಲ್ಲಿ ವಾಸಿಸುತ್ತಿದ್ದ ಯೆಹೂದ್ಯರ ಒಂದು ಹಳೆಯ, ಸಣ್ಣ ಸಮಾಜದ ಅತ್ಯಂತ ಪುರಾತನ ಸಭಾಮಂದಿರದಲ್ಲಿ ಸುರಕ್ಷಿತವಾಗಿಡಲಾಗಿತ್ತು. ಮೊದಲು, ಈ ಹಸ್ತಪ್ರತಿಯು ಯೆರೂಸಲೇಮಿನ ಕರೈಟ್ ಯೆಹೂದ್ಯರಿಗೆ ಬಿಡಲ್ಪಟ್ಟಿತ್ತು, ಆದರೆ ಅದು 1099 ರಲ್ಲಿ ಕ್ರುಸೇಡರುಗಳಿಂದ ವಶಮಾಡಿಕೊಳ್ಳಲ್ಪಟ್ಟಿತು. ತದನಂತರ, ಈ ಹಸ್ತಪ್ರತಿಯನ್ನು ಪುನಃ ಪಡೆಯಲಾಯಿತು ಮತ್ತು ಈಜಿಪ್ಟಿನ ಒಲ್ಡ್ ಕೈರೋಗೆ ಕೊಂಡೊಯ್ಯಲಾಯಿತು. ಅದು ಅಲೆಪ್ಪೊಗೆ ಕಡಿಮೆ ಪಕ್ಷ 15 ನೆಯ ಶತಮಾನದಲ್ಲಿ ತಲುಪಿರಬೇಕು ಮತ್ತು ಅದು ತರುವಾಯ ಅಲೆಪ್ಪೊ ಕೋಡೆಕ್ಸ್ ಎಂದು ಪ್ರಖ್ಯಾತವಾಯಿತು. ಈ ಹಸ್ತಪ್ರತಿಯು ಕಡಿಮೆಪಕ್ಷ ಸಾ.ಶ. 930 ರಷ್ಟು ತಾರೀಕಿನದ್ದಾಗಿದ್ದು, ಅದರ ಹೆಸರು ತಾನೇ ಸೂಚಿಸುವಂತೆ, ಅದು ಮಸೊರೆಟಿಕ್ ಪಾಂಡಿತ್ಯತನದ ಮುಕುಟವಾಗಿ ಪರಿಗಣಿಸಲ್ಪಟ್ಟಿತ್ತು. ಅದು ಬೈಬಲಿನ ಮೂಲಪಾಠವನ್ನು ದಾಟಿಸುವುದರಲ್ಲಿ ತಕ್ಕೊಂಡ ಜಾಗರೂಕತೆಯನ್ನು ಉದಾಹರಿಸುವ ಒಂದು ಉತ್ತಮ ನಿದರ್ಶನವಾಗಿತ್ತು ಮತ್ತು ಖಂಡಿತವಾಗಿಯೂ ಅದು ಆದರ್ಶರೂಪದ ಹೀಬ್ರು ಹಸ್ತಪ್ರತಿಯಾಗಿತ್ತು.
ಇತ್ತೀಚೆಗಿನ ಆಧುನಿಕ ಸಮಯಗಳಲ್ಲಿ, ಈ ಎದ್ದುಕಾಣುವ ಹಸ್ತಪ್ರತಿಯ ಸಂರಕ್ಷಕರು, ಅವರ ಪವಿತ್ರ ವಸ್ತುವಿನ ಹೊಲೆಗೆಡಿಸುವಿಕೆಯ ಅಂಧವಿಶ್ವಾಸದ ಭೀತಿಯಿಂದ, ವಿದ್ವಾಂಸರು ಅದನ್ನು ಪರಾಮರ್ಶಿಸಿ ನೋಡಲು ಅನುಮತಿಸಲಿಲ್ಲ. ಅದು ಅಲ್ಲದೆ, ಕೇವಲ ಒಂದು ಹಾಳೆಯ ಛಾಯಾಚಿತ್ರವನ್ನು ತಕ್ಕೊಂಡಿರುವುದರಿಂದ, ಅಧ್ಯಯನಕ್ಕಾಗಿ ಪಡಿಯಚ್ಚನ್ನು ತಕ್ಕೊಳ್ಳಲು ಸಾಧ್ಯವಾಗಲಿಲ್ಲ.
ಬ್ರಿಟಿಷರು 1948 ರಲ್ಲಿ ಪ್ಯಾಲೆಸ್ತೀನ್ನಿಂದ ಹಿಂದಕ್ಕೆ ಹೋದಾಗ, ಅಲೆಪ್ಪೊನಲ್ಲಿ ಯೆಹೂದ್ಯರ ವಿರುದ್ಧ ದೊಂಬಿಗಳು ಸ್ಫೋಟಿಸಿದವು. ಅವರ ಸಭಾಮಂದಿರವನ್ನು ಸುಡಲಾಯಿತು; ಅಮೂಲ್ಯವಾದ ಕೋಡೆಕ್ಸ್ಗಳು ಕಾಣೆಯಾಗಿ ಹೋದವು ಮತ್ತು ನಾಶಗೊಳಿಸಲ್ಪಟ್ಟವು ಎಂದು ಎಣಿಸಲ್ಪಟ್ಟಿತು. ಹಾಗಾದರೆ, ಹೆಚ್ಚುಕಡಿಮೆ ಹತ್ತು ವರ್ಷಗಳ ನಂತರ, ಅವುಗಳಲ್ಲಿ ನಾಲ್ಕರಲ್ಲಿ ಮೂರು ಭಾಗವು ಉಳಿಸಲ್ಪಟ್ಟಿದೆ ಮತ್ತು ಸಿರಿಯದಿಂದ ಯೆರೂಸಲೇಮಿಗೆ ಕಳ್ಳತನದಿಂದ ಕೊಂಡೊಯ್ಯಲಾಗಿದೆ ಎಂದು ತಿಳಿಯಲಾದದ್ದು ಎಂತಹ ಒಂದು ಆಶ್ಚರ್ಯ! ಕೊನೆಗೂ 1976 ರಲ್ಲಿ 500 ಪ್ರತಿಗಳ ಪೂರ್ಣ ವರ್ಣದೊಂದಿಗಿನ ಉತ್ತಮವಾದ ಪಡಿಯಚ್ಚು ಮುದ್ರಣವು ಹೊರಡಿಸಲ್ಪಟ್ಟಿತು.
ಕುಶಲಕರ್ಮಿಯೊಬ್ಬನ ಕೃತಿ
ಈ ಹಸ್ತಪ್ರತಿಯು ಅಷ್ಟೊಂದು ಪ್ರಾಮುಖ್ಯವಾಗಿದೆ ಯಾಕೆ? ಕಾರಣ, ಹೀಬ್ರು ಬೈಬಲನ್ನು ನಕಲುಮಾಡುವುದರಲ್ಲಿ ಮತ್ತು ದಾಟಿಸುವುದರಲ್ಲಿ ತರಬೇತಿಗೊಂಡ ಅತಿ ಪ್ರಖ್ಯಾತ ವಿದ್ವಾಂಸರುಗಳಲ್ಲಿ ಒಬ್ಬನಾದ ಆರೋನ್ ಬೆನ್ ಆಶೇರ್ನಿಂದ ಸಾ.ಶ. 930 ರಲ್ಲಿ ಅದರ ವ್ಯಂಜನಯುಕ್ತ ಮೂಲಪಾಠವು ಸರಿಪಡಿಸಲ್ಪಟ್ಟಿತು ಮತ್ತು ವಿರಾಮ ಚಿಹ್ನೆಗಳು ಹಾಕಲ್ಪಟ್ಟವು. ಆದಕಾರಣ ಅದೊಂದು ಆದರ್ಶ ಕೋಡೆಕ್ಸ್ ಆಗಿದ್ದು, ಕಡಿಮೆ ನಿಪುಣ ಶಾಸ್ತ್ರಿಗಳಿಂದ ಮಾಡಲ್ಪಡಲಿದ್ದ ಭವಿಷ್ಯತ್ತಿನ ಪ್ರತಿಗಳಿಗೆ ಒಂದು ಮಟ್ಟವನ್ನು ಇಟ್ಟಿತು.
ಮೂಲತಃ ಇದರಲ್ಲಿ 380 ಹಾಳೆಗಳು (760 ಪುಟಗಳು) ಇದ್ದವು ಮತ್ತು ಚರ್ಮಕಾಗದದ ಹಾಳೆಗಳ ಮೇಲೆ ಸಾಮಾನ್ಯವಾಗಿ ಮೂರು ಅಂಕಣಗಳಲ್ಲಿ ಬರೆಯಲ್ಪಟ್ಟಿತ್ತು. ಈಗ ಅದು 294 ಹಾಳೆಗಳನ್ನು ಹೊಂದಿದೆ ಮತ್ತು ಪಂಚಮಭಾಗಗಳಲ್ಲಿ ಹೆಚ್ಚಿನ ಭಾಗ ಮತ್ತು ಪ್ರಲಾಪಗಳು, ಸೊಲೊಮೋನನ ಪರಮಗೀತ, ದಾನಿಯೇಲ, ಎಸ್ತೇರ್, ಎಜ್ರ, ಮತ್ತು ನೆಹೆಮೀಯವನ್ನು ಒಳಗೊಂಡ ಕೊನೆಯ ವಿಭಾಗ ಇಲ್ಲದ್ದಾಗಿದೆ. ಇದನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದಿ ಹೋಲಿ ಸ್ಕ್ರಿಪ್ಚರ್ಸ್—ರೆಫರನ್ಸ್ ಬೈಬಲ್ನಲ್ಲಿ (ಯೆಹೋಶುವ 21:37 ಪಾದಟಿಪ್ಪಣಿ ನೋಡಿರಿ.) “Al” ಎಂದು ಉಲ್ಲೇಖಿಸಲಾಗಿದೆ. ಸಾ.ಶ. 12 ನೆಯ ಶತಕದ ಸುಪ್ರಸಿದ್ಧ ಮಧ್ಯಕಾಲೀನ ಯೆಹೂದಿ ವಿದ್ವಾಂಸನಾದ ಮೋಸೆಸ್ ಮೈಮೊನೈಡಿಸ್ (ಇಲ್ಲಿ ಚಿತ್ರಿಸಲ್ಪಟ್ಟಿದ್ದಾನೆ), ಅಲೆಪ್ಪೊ ಕೋಡೆಕ್ಸ್ನ್ನು ತಾನು ಕಂಡಿರುವುದರಲ್ಲಿಯೇ ಅತಿ ಉತ್ತಮವಾದದ್ದು ಎಂದು ಹೇಳಿರುತ್ತಾನೆ.a
ಹದಿಮೂರನೆಯ ಶತಮಾನದಿಂದ 15 ನೆಯ ಶತಮಾನದ ತನಕ ಕೈಯಿಂದ ನಕಲುಮಾಡಲ್ಪಡುತ್ತಿದ್ದ ಹೀಬ್ರು ಮೂಲಪಾಠವು ಬೆನ್ ಆಶೇರ್ ಮತ್ತು ಬೆನ್ ನಪ್ತಾಲಿ ಎಂಬ ಎರಡು ಪ್ರಧಾನ ಮಸೊರೆಟಿಕ್ ಕುಟುಂಬಗಳಿಂದ ತೆಗೆಯಲ್ಪಟ್ಟ ಒಂದು ಮಿಶ್ರಣವಾಗಿದೆ. ಹದಿನಾರನೆಯ ಶತಮಾನದಲ್ಲಿ, ಜೇಕಬ್ ಬೆನ್ ಹಯೀಮ್ ಈ ಮಿಶ್ರಣ ಸಂಪ್ರದಾಯದಿಂದ ಹೊರಬಂದ ಒಂದು ಮುದ್ರಿತ ಹೀಬ್ರು ಬೈಬಲಿಗಾಗಿ ಮೂಲಪಾಠವನ್ನು ಉತ್ಪಾದಿಸಿದನು, ಮತ್ತು ಮುಂದಿನ 400 ವರ್ಷಗಳಿಗೆ ಮುದ್ರಿಸಲ್ಪಟ್ಟ ಅಧಿಕಾಂಶ ಎಲ್ಲಾ ಹೀಬ್ರು ಬೈಬಲ್ಗಳಿಗೆ ಇದು ಆಧಾರವಾಯಿತು.
ಬಿಬಿಯ್ಲಾ ಹೆಬ್ರೇಯಿಕಾ (ಮುದ್ರಿತ ಹೀಬ್ರು ಮೂಲಪಾಠ)ದ 1937ರ ಮೂರನೆಯ ಮುದ್ರಣದೊಂದಿಗೆ, ಬೆನ್ ಆಶೇರ್ ಸಂಪ್ರದಾಯವನ್ನು ಪರಾಮರ್ಶಿಸಲಾಯಿತು, ಅದು ಹಸ್ತಪ್ರತಿಯ ರೂಪದಲ್ಲಿ ಲೆನಿನ್ಗ್ರಾಡ್ B19A ಎಂದು ಪರಿಚಿತವಾಗಿದ್ದು, ರಶ್ಯಾದಲ್ಲಿ ಸಂರಕ್ಷಿಸಲ್ಪಟ್ಟಿದೆ. ಲೆನಿನ್ಗ್ರಾಡ್ B19A ಸಾ.ಶ. 1008ರ ತೇದಿಯದ್ದಾಗಿದೆ. ಯೆರೂಸಲೇಮಿನಲ್ಲಿರುವ ಹೀಬ್ರು ಯೂನಿವರ್ಸಿಟಿಯು ಅಲೆಪ್ಪೊ ಹೀಬ್ರು ಮೂಲಪಾಠವನ್ನು, ಮೃತ ಸಮುದ್ರದ ಸುರುಳಿಗಳ ಸಹಿತ ಇತರ ಎಲ್ಲಾ ಪ್ರಮುಖ ಹಸ್ತಪ್ರತಿಗಳ ಮತ್ತು ತರ್ಜುಮೆಗಳ ವಾಚನದೊಂದಿಗೆ ಪೂರ್ಣವಾಗಿ ಒಂದು ಸಮಯಾವಧಿಯ ತನಕ ಪ್ರಕಾಶಿಸಲು ಯೋಜಿಸುತ್ತದೆ.
ಇಂದು ನಾವು ಉಪಯೋಗಿಸುವ ಬೈಬಲ್ ಮೂಲಪಾಠವು ಭರವಸರ್ಹವಾಗಿದೆ. ಅದು ದೈವಿಕವಾಗಿ ಪ್ರೇರಿತವಾಗಿತ್ತು ಮತ್ತು ಅತಿ ನೆಚ್ಚಿನ ನಿಪುಣತೆಯಿಂದ ಶಾಸ್ತ್ರಿಗಳಾಗಿದ್ದ ನಕಲುತೆಗೆಯುವವರು ಕೆಲಸಮಾಡಿ ಶತಮಾನಗಳಿಂದ ದಾಟಿಸಲ್ಪಟ್ಟಿತ್ತು. ಈ ನಕಲುತೆಗೆಯುವವರ ಅತಿ ಜಾಗರೂಕತೆಯ ಗಮನವು, 1947 ರಲ್ಲಿ ಮೃತ ಸಮುದ್ರದ ಬಳಿಯಲ್ಲಿ ಸಿಕ್ಕಿದ ಯೆಶಾಯ ಸುರುಳಿ ಮತ್ತು ಮಸೊರೆಟಿಕ್ ಮೂಲಪಾಠಗಳ ನಡುವಿನ ಸರಿಹೋಲಿಕೆಯಲ್ಲಿ, ವಿಶೇಷವಾಗಿ ಅತಿ ಪ್ರಾಚೀನ ಮಸೊರೆಟಿಕ್ ಬೈಬಲಿನ ಪ್ರತಿಗಿಂತ ಸತ್ತ ಸಮುದ್ರದ ಸುರುಳಿಯು ಒಂದು ಸಾವಿರದಷ್ಟು ಅಧಿಕ ಹಳೆಯದಾಗಿರುವುದಾದರೂ, ಆಶ್ಚರ್ಯಭರಿತವಾಗಿ ಕೊಂಚವೇ ಭಿನ್ನತೆಯನ್ನು ತೋರಿಸುತ್ತದೆ. ಅದಲ್ಲದೆ, ಈಗ ಅಲೆಪ್ಪೊ ಕೋಡೆಕ್ಸ್ ವಿದ್ವಾಂಸರಿಗೆ ದೊರಕಿರುವುದರಿಂದ, ಹೀಬ್ರು ಶಾಸ್ತ್ರಗ್ರಂಥಗಳ ಮೂಲಪಾಠದ ಪ್ರಾಮಾಣ್ಯದ ಮೇಲೆ ಭರವಸವನ್ನು ಇಡಲು ಅದು ಇನ್ನಷ್ಟು ಕಾರಣವನ್ನು ಒದಗಿಸುತ್ತದೆ. ನಿಜವಾಗಿಯೂ, “ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”—ಯೆಶಾಯ 40:8.
[ಅಧ್ಯಯನ ಪ್ರಶ್ನೆಗಳು]
a ಅಲೆಪ್ಪೊ ಕೋಡೆಕ್ಸ್ ಬೆನ್ ಆಶೇರ್ನಿಂದ ವಿರಾಮ ಚಿಹ್ನೆ ಹಾಕಲ್ಪಟ್ಟ ಹಸ್ತಪ್ರತಿ ಎನ್ನುವುದರ ಕುರಿತು ಕೆಲವು ವರ್ಷಗಳ ತನಕ ನಿರ್ದಿಷ್ಟ ವಿದ್ವಾಂಸರು ಸಂದೇಹದಿಂದಿದ್ದರು. ಆದಾಗ್ಯೂ, ಅಧ್ಯಯನಕ್ಕಾಗಿ ಕೋಡೆಕ್ಸ್ ದೊರಕಿರುವುದರಿಂದ, ಮೈಮೊನೈಡಿಸ್ನಿಂದ ಉಲ್ಲೇಖಿಸಲ್ಪಟ್ಟದ್ದು ನಿಜವಾಗಿಯೂ ಬೆನ್ ಆಶೇರ್ನ ಹಸ್ತಪ್ರತಿ ಎಂಬುದಕ್ಕೆ ರುಜುವಾತು ಹೊರಬರುತ್ತಾ ಇದೆ.
[ಪುಟ 28 ರಲ್ಲಿರುವ ಚಿತ್ರ ಕೃಪೆ]
Bibelmuseum, Münster
[ಪುಟ 29 ರಲ್ಲಿರುವ ಚಿತ್ರ ಕೃಪೆ]
Jewish Division / The New York Public Library / Astor, Lenox, and Tilden Foundations