ನಿಮ್ಮ ಕುಟುಂಬವನ್ನು ದೇವರ ನೂತನ ಲೋಕದೊಳಗೆ ಸಂರಕ್ಷಿಸಲು ಕ್ರಿಯೆಗೈಯಿರಿ
“ಯೆಹೋವನೇ, ನೀನು ಸ್ವತಃ ಅವರನ್ನು ರಕ್ಷಿಸುವಿ; ಈ ಸಂತತಿಯ ಪ್ರತಿಯೊಬ್ಬರನ್ನು ನೀನು ಸದಾಕಾಲವೂ ಕಾಪಾಡುವಿ.”—ಕೀರ್ತನೆ 12:7, NW.
1, 2. (ಎ) ಕಡೇ ದಿವಸಗಳ ಒತ್ತಡಗಳ ಕೆಳಗೆ ಕೆಲವು ಕುಟುಂಬಗಳು ಹೇಗೆ ನಿರ್ವಹಣೆ ಮಾಡುತ್ತವೆ? (ಬಿ) ಕ್ರೈಸ್ತ ಕುಟುಂಬಗಳು ಪಾರಾಗಲು ಹೇಗೆ ಹುಡುಕಬಹುದು?
“ಇಂದು ನನ್ನ ಹೃದಯವು ಆನಂದದಿಂದ ತುಂಬಿದೆ!” ಜೋನ್ ಹೆಸರಿನ ಒಬ್ಬ ಕ್ರೈಸ್ತ ಹಿರಿಯನು ಉದ್ಗರಿಸಿದನು. ಈ ತುಂಬಿತುಳುಕುವ ಉತ್ಸಾಹಕ್ಕೆ ಕಾರಣವೇನು? “ನನ್ನ 14-ವರ್ಷ ಪ್ರಾಯದ ಮಗನು ಮತ್ತು 12-ವರ್ಷ ಪ್ರಾಯದ ಮಗಳು ದೀಕ್ಷಾಸ್ನಾನ ಹೊಂದಿದರು,” ಎಂದವನು ತಿಳಿಸುತ್ತಾನೆ. ಆದರೆ ಅವನ ಆನಂದವು ಅಲ್ಲಿಗೆ ಮುಕ್ತಾಯಗೊಳ್ಳಲಿಲ್ಲ. “ನನ್ನ 17-ವರ್ಷ ಪ್ರಾಯದ ಮಗನು ಮತ್ತು 16-ವರ್ಷ ಪ್ರಾಯದ ಮಗಳು, ಇಬ್ಬರೂ ಕಳೆದ ವರ್ಷ ಸಹಾಯಕ ಪಯನೀಯರರಾಗಿದ್ದರು,” ಎಂದವನು ಕೂಡಿಸುತ್ತಾನೆ.
2 ಬೈಬಲ್ ಸೂತ್ರಗಳನ್ನು ಅವರು ಅನ್ವಯಿಸಿದ್ದರಿಂದ ತದ್ರೀತಿಯ ಉತ್ತಮ ಫಲಿತಾಂಶಗಳನ್ನು ಪಡೆದ ಅನೇಕ ಕುಟುಂಬಗಳು ನಮ್ಮ ನಡುವೆ ಇವೆ. ಆದರೂ, ಕೆಲವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕ್ರೈಸ್ತ ದಂಪತಿ ಬರೆಯುವುದು, “ನಮಗೆ ಐವರು ಮಕ್ಕಳಿದ್ದಾರೆ, ಮತ್ತು ಅವರೊಂದಿಗೆ ವ್ಯವಹರಿಸುವುದು ದಿನಕಳೆದಂತೆ ಕಠಿಣಕರವಾಗಿ ಬೆಳೆಯುತ್ತಿದೆ. ಈಗಾಗಲೇ ಈ ಹಳೇ ವ್ಯವಸ್ಥೆಯಲ್ಲಿ ನಮ್ಮ ಒಂದು ಮಗುವನ್ನು ಕಳೆದುಕೊಂಡಿದ್ದೇವೆ. ಈಗ ಸದ್ಯದಲ್ಲಿ ನಮ್ಮ ಹದಿವಯಸ್ಕರು ಸೈತಾನನ ಧಾಳಿಯ ಆದ್ಯತೆಯ ಕ್ಷೇತ್ರವೆಂಬಂತೆ ಭಾಸವಾಗುತ್ತದೆ.” ತೀವ್ರತಮ ವೈವಾಹಿಕ ತಿಕ್ಕಾಟಗಳನ್ನು ಅನುಭವಿಸುತ್ತಿರುವ ದಂಪತಿಗಳು ಕೂಡ ಇದ್ದು, ಕೆಲವೊಮ್ಮೆ ಪ್ರತ್ಯೇಕಗೊಳ್ಳುವಿಕೆ ಯಾ ವಿವಾಹವಿಚ್ಛೇದವನ್ನು ಫಲಿಸುತ್ತವೆ. ಆದಾಗ್ಯೂ, ಕ್ರಿಸ್ತೀಯ ಗುಣಗಳನ್ನು ಉತ್ಪಾದಿಸುವ ಕುಟುಂಬಗಳು “ಮಹಾ ಸಂಕಟ”ದಿಂದ ಪಾರಾಗಬಹುದು ಮತ್ತು ದೇವರ ಬರಲಿರುವ ನೂತನ ಲೋಕದೊಳಗೆ ಸಂರಕ್ಷಿಸಲ್ಪಡಬಹುದು. (ಮತ್ತಾಯ 24:21; 2 ಪೇತ್ರ 3:13) ಹಾಗಿರುವಲ್ಲಿ, ನಿಮ್ಮ ಕುಟುಂಬದ ಸಂರಕ್ಷಣೆಯನ್ನು ಖಚಿತಗೊಳಿಸಲು ನೀವೇನು ಮಾಡಬಲ್ಲಿರಿ?
ಸಂಸರ್ಗವನ್ನು ಅಭಿವೃದ್ಧಿಗೊಳಿಸುವುದು
3, 4. (ಎ) ಕುಟುಂಬ ಜೀವನದಲ್ಲಿ ಸಂಸರ್ಗವು ಎಷ್ಟು ಪ್ರಾಮುಖ್ಯ, ಮತ್ತು ಕೆಲವೊಮ್ಮೆ ಅದರೊಂದಿಗೆ ಸಮಸ್ಯೆಗಳು ಯಾಕೆ ಏಳುತ್ತವೆ? (ಬಿ) ಕೆಲವು ಗಂಡಂದಿರು ಒಳ್ಳೇ ಆಲಿಸುವವರಾಗಿರಲು ಪ್ರಯತ್ನಿಸತಕ್ಕದ್ದು ಯಾಕೆ?
3 ಒಳ್ಳೇ ಸಂಸರ್ಗವು ಒಂದು ಸ್ವಸ್ಥಕರ ಕುಟುಂಬದ ಜೀವರಕ್ತವಾಗಿದೆ; ಅದರ ಕೊರತೆಯಿರುವಲ್ಲಿ, ಬಿಗುಪುತನ ಮತ್ತು ಒತ್ತಡವು ಹೆಚ್ಚುತ್ತದೆ. “ಅಂತರಂಗದ ಮಾತುಕತೆಯಿಲ್ಲದಿರುವಲ್ಲಿ ಯೋಜನೆಗಳು ನೆರವೇರವು,” ಅನ್ನುತ್ತದೆ ಜ್ಞಾನೋಕ್ತಿ 15:22. ಆಸಕ್ತಿಕರವಾಗಿಯೇ, ವಿವಾಹ ಸಲಹೆಗಾರ್ತಿಯೊಬ್ಬಳು ವರದಿಸುವುದು: “ನಾನು ಸಲಹೆ ನೀಡುವ ಹೆಚ್ಚಿನ ಪತ್ನಿಯರಿಂದ ನಾನು ಆಲಿಸುವ ಅತಿ ಪರಿಚಿತವಾದ ದೂರು ‘ಅವನು ನನ್ನೊಂದಿಗೆ ಮಾತಾಡುವುದಿಲ್ಲ,’ ಮತ್ತು ‘ಅವನು ನನಗೆ ಕಿವಿಗೊಡುವುದಿಲ್ಲ.’ ಮತ್ತು ಅವರ ಗಂಡಂದಿರೊಂದಿಗೆ ಈ ದೂರನ್ನು ಹೇಳುವಾಗ, ಅವರು ನನಗೂ ಕಿವಿಗೊಡುವುದಿಲ್ಲ.”
4 ಸಂಸರ್ಗದ ಕೊರತೆಗೆ ಕಾರಣಗಳೇನು? ಒಂದು ಸಂಗತಿಯೇನಂದರೆ, ಪುರುಷರು ಮತ್ತು ಸ್ತ್ರೀಯರು ಭಿನ್ನರಾಗಿದ್ದಾರೆ, ಮತ್ತು ಸಂಸರ್ಗದ ಶೈಲಿಗಳಲ್ಲಿ ಗಮನಾರ್ಹವಾದ ರೀತಿಯಲ್ಲಿ ಅವರು ಆಗಿಂದಾಗ್ಗೆ ಭಿನ್ನರಾಗಿರುತ್ತಾರೆ. ಒಂದು ಲೇಖನ ಗಮನಿಸಿದ್ದೇನಂದರೆ, ಗಂಡನೊಬ್ಬನು ಅವನ ಸಂಭಾಷಣೆಯಲ್ಲಿ “ನೇರವಾಗಿಯೂ, ವ್ಯಾವಹಾರಿಕವಾಗಿಯೂ ಇರುವ ಪ್ರವೃತ್ತಿಯುಳ್ಳನಾಗಿರುವುದಾದರೆ,” “[ಹೆಂಡತಿಯು] ಬೇರೆಲ್ಲಾದ್ದಕ್ಕಿಂತಲೂ ಹೆಚ್ಚಾಗಿ ಅನುಭೂತಿಯುಳ್ಳ ಆಲಿಸುವವನನ್ನು ಬಯಸುತ್ತಾಳೆ.” ನಿಮ್ಮ ಮದುವೆಯಲ್ಲಿ ಇದು ಒಂದು ಸಮಸ್ಯೆಯನ್ನು ಪ್ರಸ್ತುತಪಡಿಸುವುದಾದರೆ, ವಿಷಯಗಳನ್ನು ಪ್ರಗತಿಗೊಳಿಸುವುದರಲ್ಲಿ ಕಾರ್ಯವೆಸಗಿರಿ. ಒಬ್ಬ ಒಳ್ಳೆಯ ಆಲಿಸುವವನಾಗಲು ಕ್ರೈಸ್ತ ಗಂಡನೊಬ್ಬನು ಕಠಿಣವಾಗಿ ಕೆಲಸಮಾಡಲಿಕ್ಕಿರಬಹುದು. “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವುದರಲ್ಲಿ ನಿಧಾನವಾಗಿಯೂ ಇರಲಿ” ಎನ್ನುತ್ತಾನೆ ಯಾಕೋಬನು. (ಯಾಕೋಬ 1:19) ನಿಮ್ಮ ಹೆಂಡತಿ ಕೇವಲ “ಸುಖದುಃಖಗಳಲ್ಲಿ ಸೇರುವವರಾಗಿ”ರುವಂತೆ ಬಯಸುವಾಗ, ಆಜ್ಞಾಪಿಸುವದರಿಂದ, ಗದರಿಸುವುದರಿಂದ, ಯಾ ಭಾಷಣ ಬೀಗುವುದರಿಂದ ತಡೆಹಿಡಿಯಲು ಕಲಿಯಿರಿ. (1 ಪೇತ್ರ 3:8) “ಹಿಡಿದು ಮಾತಾಡುವವನು ಜ್ಞಾನಿ” ಎಂದು ಜ್ಞಾನೋಕ್ತಿ 17:27 ಹೇಳುತ್ತದೆ.
5. ತಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಗಂಡಂದಿರು ಪ್ರಗತಿಗೊಳಿಸುವ ಕೆಲವು ಮಾರ್ಗಗಳು ಯಾವುವು?
5 ಇನ್ನೊಂದು ಪಕ್ಕದಲ್ಲಿ, “ಮಾತಾಡುವ ಸಮಯವೊಂದು” ಇರುತ್ತದೆ, ಮತ್ತು ನಿಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಹೆಚ್ಚು ವ್ಯಕ್ತವಾಗುವ ರೀತಿಯಲ್ಲಿ ಹೇಳಲು ಕಲಿಯುವ ಆವಶ್ಯಕತೆ ನಿಮಗಿರಬಹುದು. (ಪ್ರಸಂಗಿ 3:7) ಉದಾಹರಣೆಗೆ, ನಿಮ್ಮ ಹೆಂಡತಿಯ ನಿರ್ವಹಣೆಗಳ ಪ್ರಶಂಸೆಯಲ್ಲಿ ನೀವು ಉದಾರತೆಯುಳ್ಳವರಾಗಿದ್ದೀರೋ? (ಜ್ಞಾನೋಕ್ತಿ 31:28) ನಿಮ್ಮನ್ನು ಬೆಂಬಲಿಸುವುದರಲ್ಲಿ ಮತ್ತು ಗೃಹಕೃತ್ಯಗಳ ಪರಾಮರಿಕೆಯನ್ನು ಮಾಡುವುದರಲ್ಲಿ ಅವಳು ಮಾಡುವ ಕಠಿಣ ದುಡಿಮೆಗಾಗಿ ನೀವು ಸ್ವತಃ ಉಪಕಾರಿಗಳಾಗಿದ್ದೀರೋ? (ಹೋಲಿಸಿರಿ ಕೊಲೊಸ್ಸೆ 3:15.) ಯಾ ಬಾಯಿಮಾತಿನ “ಲಾಲನೆ”ಯನ್ನು ಮಾಡುವುದರಲ್ಲಿ ಪ್ರಾಯಶಃ ನೀವು ಪ್ರಗತಿಮಾಡಲಿಕ್ಕಿರಬಹುದು. (ಪರಮಗೀತ 1:2) ಹಾಗೆ ಮಾಡುವುದು ಮೊದಮೊದಲು ಮುಜುಗರದ್ದಾಗಿ ಭಾಸವಾಗಬಹುದು, ಆದರೆ ಅವಳಿಗಾಗಿರುವ ನಿಮ್ಮ ಪ್ರೀತಿಯಲ್ಲಿ ನಿಮ್ಮ ಹೆಂಡತಿಯು ಭದ್ರತೆಯ ಭಾವನೆಯುಳ್ಳವಳಾಗುವಂತೆ ಮಾಡುವುದರಲ್ಲಿ ಸಹಾಯಕರವಾಗಿರಬಲ್ಲದು.
6. ಕುಟುಂಬ ಸಂಸರ್ಗವನ್ನು ಪ್ರಗತಿಗೊಳಿಸಲು ಹೆಂಡತಿಯರು ಏನು ಮಾಡಸಾಧ್ಯವಿದೆ?
6 ಕ್ರೈಸ್ತ ಹೆಂಡತಿಯರ ಕುರಿತಾಗಿ ಏನು? ತಾನು ಗಂಡನನ್ನು ಮೆಚ್ಚುತ್ತೇನೆಂದು ತನ್ನ ಗಂಡನಿಗೆ ತಿಳಿದದೆ, ಆದುದರಿಂದ ಅದನ್ನವಳು ಅವನಿಗೆ ಹೇಳುವ ಜರೂರಿಯೇನೂ ಇಲ್ಲ ಎಂದು ಒಬ್ಬ ಹೆಂಡತಿಯು ಹೇಳುವುದು ಉಲ್ಲೇಖಿಸಲ್ಪಟ್ಟಿದೆ. ಆದಾಗ್ಯೂ, ಪುರುಷರು ಕೂಡ ಗಣ್ಯತೆ, ಪ್ರಶಂಸೆ ಮತ್ತು ಹೊಗಳುವಿಕೆಯಲ್ಲಿ ಏಳಿಗೆ ಹೊಂದುತ್ತಾರೆ. (ಜ್ಞಾನೋಕ್ತಿ 12:8) ಈ ವಿಷಯದಲ್ಲಿ ನೀವು ಹೆಚ್ಚು ವ್ಯಕ್ತಪಡಿಸುವ ಅಗತ್ಯವಿದೆಯೇ? ಇನ್ನೊಂದು ಪಕ್ಕದಲ್ಲಿ, ನೀವು ಹೇಗೆ ಕಿವಿಗೊಡುತ್ತೀರಿ ಎಂಬ ವಿಷಯದಲ್ಲಿ ಪ್ರಾಯಶಃ ಹೆಚ್ಚು ಗಮನಹರಿಸುವ ಜರೂರಿಯಿರಬಹುದು. ಅವನ ಸಮಸ್ಯೆಗಳನ್ನು, ಭೀತಿಗಳನ್ನು, ಯಾ ವ್ಯಾಕುಲತೆಗಳನ್ನು ತೆರೆದ ಮನದಿಂದ ನಿಮ್ಮೊಂದಿಗೆ ಮಾತಾಡಲು ಅವನಿಗೆ ಕಷ್ಟವಾಗುವುದಾದರೆ, ದಯೆಯಿಂದಲೂ, ಜಾಣತನದಿಂದಲೂ ನಿಮ್ಮೊಂದಿಗೆ ಮಾತಾಡಲು ಅವನನ್ನು ಹೇಗೆ ನಡಿಸಬಹುದೆಂದು ನೀವು ಕಲಿತಿದ್ದೀರೋ?
7. ವೈವಾಹಿಕ ಜಗಳಗಳು ಸ್ಫೋಟಿಸುವಂತೆ ಯಾವುದು ಕಾರಣವಾಗಬಲ್ಲದು, ಮತ್ತು ಅವುಗಳನ್ನು ಹೇಗೆ ತಡೆಗಟ್ಟಬಹುದು?
7 ಸಾಮಾನ್ಯವಾಗಿ ಒಳ್ಳೆಯ ರೀತಿಯಲ್ಲಿ ಹೊಂದಾಣಿಸಿಕೊಂಡುಹೋಗುವ ದಂಪತಿಗಳು ಕೂಡ, ಕೆಲವೊಮ್ಮೆ ಸಂಸರ್ಗದ ಮುರಿತವನ್ನು ಅನುಭವಿಸುವುದು ಸಹಜವೇ. ಭಾವನೆಗಳು ವಿವೇಚನೆಯನ್ನು ಮಬ್ಬುಗವಿಸಬಹುದು, ಯಾ ಶಾಂತತೆಯ ಒಂದು ಚರ್ಚೆಯು ಬಿಸಿಯೇರಿದ ವಾಗ್ವಾದವಾಗಿ ಪರಿಣಮಿಸಬಹುದು. (ಜ್ಞಾನೋಕ್ತಿ 15:1) “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು”; ಆದಾಗ್ಯೂ, ವೈವಾಹಿಕ ಅಲ್ಪ ಕಲಹವು ಮದುವೆಯನ್ನೇ ಅಂತ್ಯಗೊಳಿಸುವ ಪರ್ಯವಸಾನಕ್ಕೆ ನಡಿಸುವುದು ವಿರಳವೇ. (ಯಾಕೋಬ 3:2) ಆದರೆ, ಯಾವುದೇ ಸಂಬಂಧದಲ್ಲಿ “ಕಲಹ ದೂಷಣೆ”ಯು ಅಸಮಂಜಸವಾದದ್ದೂ, ವಿನಾಶಕಾರಿಯೂ ಆಗಿದೆ. (ಎಫೆಸ 4:31) ನೋಯಿಸುವಂತಹ ನುಡಿಗಳು ಪರಸ್ಪರ ಹೇಳಲ್ಪಟ್ಟಾಗ, ಶೀಘ್ರವಾಗಿ ಸಮಾಧಾನ ಮಾಡಿಕೊಳ್ಳಿರಿ. (ಮತ್ತಾಯ 5:23, 24) ಎಫೆಸ 4:26ರ ಪೌಲನ ಮಾತುಗಳನ್ನು ನೀವಿಬ್ಬರೂ ಅನ್ವಯಿಸಿಕೊಂಡರೆ, ಜಗಳಗಳನ್ನು ಮೊದಲ ಹಂತದಲ್ಲಿಯೇ ತಡೆಗಟ್ಟಬಹುದು: “ಸೂರ್ಯನು ಮುಳುಗುವದಕ್ಕಿಂತ ಮೊದಲು ನಿಮ್ಮ ಸಿಟ್ಟು ತೀರಲಿ.” ಹೌದು, ಸಮಸ್ಯೆಗಳು ಚಿಕ್ಕದೂ, ನಿರ್ವಹಿಸಲು ಸಾಧ್ಯವಾಗಿರುವುದೂ ಆಗಿರುವಾಗ, ಅವುಗಳನ್ನು ಮಾತಾಡಿ ಸರಿಪಡಿಸಿರಿ; ನಿಮ್ಮ ಭಾವನೆಗಳು ಸಿಟ್ಟು-ಸಿಡಿಯುವ ಬಿಂದುವಿಗೆ ತಲುಪುವ ತನಕ ಕಾಯಬೇಡಿರಿ. ಪರಸ್ಪರ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲು ಪ್ರತಿದಿನ ಕೆಲವು ನಿಮಿಷಗಳನ್ನು ಕಳೆಯುವುದು, ಸಂಸರ್ಗವನ್ನು ಬಲಗೊಳಿಸಲು ಮತ್ತು ತಪ್ಪು ಅಭಿಪ್ರಾಯಗಳನ್ನು ತಡೆಗಟ್ಟಲು ಬಹಳಷ್ಟು ನೆರವಾಗುತ್ತದೆ.
‘ಯೆಹೋವನ ಮಾನಸಿಕ ಕ್ರಮಗೊಳಿಸುವಿಕೆ’
8. ಸತ್ಯದಿಂದ ಕೆಲವು ಯುವಕರು ದೂರ ಹೋಗುವದು ಯಾಕಾಗಿರಬಹುದು?
8 ಅಲೆದಾಡುವಂತೆ ತಮ್ಮ ಮಕ್ಕಳನ್ನು ಅನುಮತಿಸುವುದರಲ್ಲಿ ಕೆಲವು ಹೆತ್ತವರು ತೃಪ್ತಿಗೊಳ್ಳುತ್ತಾರೆಂದು ಕಂಡುಬರುತ್ತದೆ. ಮಕ್ಕಳು ಕೂಟಗಳಿಗೆ ಹಾಜರಾಗುತ್ತಾರೆ ಮತ್ತು ಕ್ಷೇತ್ರ ಸೇವೆಯಲ್ಲಿ ಸ್ವಲ್ಪ ಪಾಲು ತಕ್ಕೊಳ್ಳುತ್ತಾರೆ, ಆದರೆ ಅವರು ಕೆಲವೊಮ್ಮೆ ದೇವರೊಂದಿಗೆ ತಮ್ಮ ಸ್ವಂತ ಸಂಬಂಧವನ್ನು ಕಟ್ಟಿಕೊಂಡಿರುವುದಿಲ್ಲ. ಸಮಯಾನಂತರ, “ಶರೀರದಾಶೆ ಕಣ್ಣಿನಾಶೆ”ಯು ಅಂಥವರಲ್ಲಿ ಅನೇಕ ಯುವಕರನ್ನು ಸತ್ಯದಿಂದ ದೂರ ಕೊಂಡೊಯ್ಯಬಲ್ಲದು. (1 ಯೋಹಾನ 2:16) ಆದರೆ ಅವರ ಗತಕಾಲದ ಅಲಕ್ಷ್ಯತೆಯಿಂದ ಆಹುತಿಗಳಾಗಿ ಮಕ್ಕಳನ್ನು ಹಿಂದೆ ಬಿಟ್ಟು ಹೋಗುತ್ತಾ, ಹೆತ್ತವರು ಅರ್ಮಗೆದೋನ್ನಲ್ಲಿ ಪಾರಾಗುವುದು ಎಷ್ಟು ವಿಷಾದನೀಯವಾಗಿರಬಲ್ಲದು!
9, 10. (ಎ) “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಗೊಳಿಸುವಿಕೆ”ಯಲ್ಲಿ ಮಕ್ಕಳನ್ನು ಪೋಷಿಸುವುದರಲ್ಲಿ ಏನು ಒಳಗೂಡಿರುತ್ತದೆ? (ಬಿ) ಮಕ್ಕಳು ತಮ್ಮ ಅನಿಸಿಕೆಗಳನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸಲು ಬಿಡುವುದು ಯಾಕೆ ಪ್ರಾಮುಖ್ಯವಾಗಿದೆ?
9 ಆದಕಾರಣ ಪೌಲನು ಹೀಗೆ ಬರೆದನು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಯೆಹೋವನ ಶಿಕ್ಷೆಯಲ್ಲಿ ಮತ್ತು ಮಾನಸಿಕ ಕ್ರಮಗೊಳಿಸುವಿಕೆಯಲ್ಲಿ ಸಾಕಿ ಸಲಹಿರಿ.” (ಎಫೆಸ 6:4, NW) ಹಾಗೆ ಮಾಡಲು, ಯೆಹೋವನ ಮಟ್ಟಗಳ ಸಮಗ್ರವಾದ ಪರಿಚಯವನ್ನು ನೀವಾಗಿಯೇ ಮಾಡಿಕೊಳ್ಳತಕ್ಕದ್ದು. ಮನೋರಂಜನೆಯ ನಿಮ್ಮ ಆಯ್ಕೆ, ವೈಯಕ್ತಿಕ ಅಭ್ಯಾಸ, ಕೂಟಗಳಿಗೆ ಹಾಜರಿ, ಮತ್ತು ಕ್ಷೇತ್ರ ಸೇವೆಯಂತಹ ವಿಷಯಗಳಿಗೆ ಬರುವಾಗ ಒಂದು ಯೋಗ್ಯ ಮಾದರಿಯನ್ನು ನೀವು ಇಡತಕ್ಕದ್ದು. ಪೌಲನ ಮಾತುಗಳಲ್ಲಿ ಇದು ಕೂಡ ಒಳಗೂಡಿದೆ ಏನಂದರೆ ಹೆತ್ತವನೊಬ್ಬನು (1) ಅವನ ಮಕ್ಕಳ ಅವಲೋಕನೆ ಚಾಣಾಕ್ಷತನದಿಂದ ಮಾಡುವವನಾಗಿರಬೇಕು ಮತ್ತು ಅವನು (2) ಅವರೊಂದಿಗೆ ಒಳ್ಳೆಯ ಸಂಸರ್ಗವನ್ನು ಕಾದುಕೊಂಡಿರಬೇಕು. ಹಾಗಿದ್ದಲ್ಲಿ ಮಾತ್ರವೇ, ಅವರಿಗೆ ಎಲ್ಲಿ “ಮಾನಸಿಕ ಕ್ರಮಗೊಳಿಸುವಿಕೆ”ಯು ಬೇಕಾಗಿದೆ ಎಂದು ತಿಳಿದುಕೊಳ್ಳಬಲ್ಲಿರಿ.
10 ಹದಿವಯಸ್ಕರು ಸ್ವಲ್ಪ ಮಟ್ಟಿನ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸುವುದು ಸ್ವಾಭಾವಿಕವೇ. ಆದರೂ, ಅವರ ಮಾತುಕತೆಗಳಲ್ಲಿ, ಯೋಚನೆಗಳಲ್ಲಿ, ಉಡುಪುಗಳಲ್ಲಿ ಮತ್ತು ಕೇಶಾಲಂಕಾರಗಳಲ್ಲಿ ಲೌಕಿಕ ಪ್ರಭಾವದ ಸ್ಪಷ್ಟವಾಗಿದ ಸೂಚನೆಗಳನ್ನು ಕಂಡುಕೊಳ್ಳಲು ನೀವು ಸಚೇತಕರಾಗಿರತಕ್ಕದ್ದು. ಜ್ಞಾನೋಕ್ತಿ 23:26 ರಲ್ಲಿ ದಾಖಲಿಸಿದಂತೆ ಒಬ್ಬ ವಿವೇಕಿಯಾದ ತಂದೆಯು ಅಂದದ್ದು: “ಕಂದಾ, ನನ್ನ ಕಡೆಗೆ ಮನಸ್ಸುಕೊಡು.” ಅವರ ಆಲೋಚನೆಗಳನ್ನು ಮತ್ತು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಿಮ್ಮ ಮಕ್ಕಳು ತಡೆಯಿಲ್ಲದ ಭಾವನೆಯುಳ್ಳವರಾಗಿದ್ದಾರೋ? ಫಕ್ಕನೆ ಖಂಡನೆಯ ಭೀತಿ ಇಲ್ಲದಿರುವಾಗ, ಅವರು ವ್ಯಾಸಂಗಕ್ರಮಕ್ಕಿಂತ ಹೊರಗಿನ ಚಟುವಟಿಕೆಗಳ, ವಿಹಾರದಿನಾಂಕ, ಉನ್ನತ ಶಿಕ್ಷಣ, ಯಾ ಸ್ವತಃ ಬೈಬಲ್ ಸತ್ಯತೆಯಂಥ ಸಂಗತಿಗಳ ಕುರಿತಾಗಿ ಅವರ ಅನಿಸಿಕೆಗಳನ್ನು ಪ್ರಕಟಿಸಲು ಹೆಚ್ಚು ಒಲವು ಉಳ್ಳವರಾಗಿರಬಹುದು.
11, 12. (ಎ) ಕುಟುಂಬ ಸಂಸರ್ಗವನ್ನು ವರ್ಧಿಸಲು ಊಟದ ಸಮಯಗಳನ್ನು ಹೇಗೆ ಬಳಸಬಹುದು? (ಬಿ) ತನ್ನ ಮಕ್ಕಳೊಂದಿಗೆ ಸಂಸರ್ಗವನ್ನು ವರ್ಧಿಸಲು ಹೆತ್ತವನೊಬ್ಬನ ಪಟ್ಟುಹಿಡಿದು ಮಾಡುವ ಪ್ರಯತ್ನಗಳಿಂದ ಯಾವ ಫಲಿತಾಂಶವುಂಟಾಗಬಹುದು?
11 ಅನೇಕ ದೇಶಗಳಲ್ಲಿ ಕುಟುಂಬಗಳು ಒಟ್ಟಾಗಿ ಉಣ್ಣುವದು ಒಂದು ಪದ್ಧತಿಯಾಗಿರುತ್ತದೆ. ಈ ರೀತಿಯಲ್ಲಿ, ದಿನದ ಮುಖ್ಯ ಊಟವು ಕಟ್ಟುವಂತಹ ಸಂಭಾಷಣೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಪಾಲುಗೊಳ್ಳುವಂತೆ ಒಂದು ಉತ್ತಮ ಸಂದರ್ಭವನ್ನು ಒದಗಿಸುತ್ತದೆ. ಅಧಿಕಾಂಶ ಸಮಯಗಳಲ್ಲಿ ಕುಟುಂಬದ ಭೋಜನವು ಟೀವಿ ಮತ್ತು ಇತರ ಅಪಕರ್ಷಣೆಗಳಿಂದ ಮುತ್ತಿಕೊಂಡಿರುತ್ತದೆ. ಹಲವಾರು ತಾಸುಗಳ ತನಕ ನಿಮ್ಮ ಮಕ್ಕಳು ಶಾಲೆಯಲ್ಲಿ ಕಾರ್ಯತಃ ಒತ್ತೆಯಲ್ಲಿಡಲ್ಪಟ್ಟಿದ್ದಾರೊ ಎಂಬಂತೆ ಇರುತ್ತಾರೆ ಮತ್ತು ಲೌಕಿಕ ಯೋಚನೆಗಳಿಗೆ ಒಡ್ಡಲ್ಪಟ್ಟಿರುತ್ತಾರೆ. ಊಟದ ಸಮಯವು ನಿಮ್ಮ ಮಕ್ಕಳೊಂದಿಗೆ ಸಂಸರ್ಗಮಾಡಲು ಒಂದು ಉತ್ತಮ ಸಮಯವಾಗಿದೆ. “ಆ ದಿವಸ ಎದ್ದಂತಹ ವಿಷಯಗಳ ಕುರಿತು ಮಾತಾಡಲು ನಾವು ಊಟದ ಸಮಯವನ್ನು ಬಳಸುತ್ತೇವೆ” ಎನ್ನುತ್ತಾನೆ ಒಬ್ಬ ಹೆತ್ತವನು. ಆದರೂ, ಊಟದ ಸಮಯಗಳು ಪೇಚಾಟಕ್ಕೊಳಪಡಿಸುವ ಶಿಸ್ತುಪಾಟಿನ ಅಧಿವೇಶನಗಳಾಗಿ ಯಾ ಪಾಟೀಸವಾಲುಗಳ ವಿಚಾರಣೆಗಳಾಗಿ ಮಾರ್ಪಡಿಸುವ ಅಗತ್ಯವೇನೂ ಇಲ್ಲ. ಸಂದರ್ಭವನ್ನು ವಿಶ್ರಾಂತಿಯದ್ದಾಗಿ ಮತ್ತು ಆನಂದಿಸುವಂತಹದ್ದಾಗಿ ಇಡಿರಿ!
12 ಮಕ್ಕಳು ನಿಮ್ಮೊಂದಿಗೆ ಸ್ವಚ್ಛಂದವಾಗಿ ಸಂಸರ್ಗಮಾಡುವಂತೆ ಪ್ರಯತ್ನಿಸುವುದು ಪಂಥಾಹ್ವಾನಕರವಾಗಿದೆ ಮತ್ತು ಅಪಾರ ತಾಳ್ಮೆಯನ್ನು ಆವಶ್ಯಕಪಡಿಸಬಹುದು. ಆದರೂ, ಸಮಯಾನಂತರ ನೀವು ಹೃದಯವನ್ನು ಬೆಚ್ಚಗೆಗೊಳಿಸುವ ಫಲಿತಾಂಶಗಳನ್ನು ಕಾಣುವಿರಿ. “ನಮ್ಮ 14-ವರ್ಷ ಪ್ರಾಯದ ಮಗನು ನಿರಾಶೆಗೊಂಡಿದ್ದನು ಮತ್ತು ಅಂತರ್ಮುಖಿಯಾಗಿದ್ದನು,” ಎಂದು ಒಂದು ಚಿಂತಾಗ್ರಸ್ತ ತಾಯಿಯು ನೆನಪಿಸುತ್ತಾಳೆ. “ನಮ್ಮ ಪ್ರಾರ್ಥನೆಗಳ ಮತ್ತು ಪಟ್ಟುಹಿಡಿಯುವಿಕೆಯ ಮೂಲಕ, ಅವನು ಸಂಸರ್ಗಮಾಡಲು ಮತ್ತು ಮಾತಾಡಲು ಆರಂಭಿಸುತ್ತಿದ್ದಾನೆ!”
ಭಕ್ತಿವೃದ್ಧಿಮಾಡುವ ಕುಟುಂಬ ಅಭ್ಯಾಸ
13. ಮಕ್ಕಳ ಆರಂಭಿಕ ತರಬೇತಿಯು ಅಷ್ಟೊಂದು ಪ್ರಾಮುಖ್ಯ ಯಾಕೆ, ಮತ್ತು ಅದನ್ನು ಹೇಗೆ ಈಡೇರಿಸಬಹುದು?
13 “ಮಾನಸಿಕ ಕ್ರಮಗೊಳಿಸುವಿಕೆ”ಯಲ್ಲಿ ದೇವರ ವಾಕ್ಯದ ವಿಧಿವತ್ತಾದ ಉಪದೇಶವು ಕೂಡ ಸೇರಿರುತ್ತದೆ. ತಿಮೊಥಿಯಂತೆಯೇ, ಅಂತಹ ತರಬೇತಿಯು “ಚಿಕ್ಕಂದಿನಿಂದಲೂ” ಆರಂಭಗೊಳ್ಳತಕ್ಕದ್ದು. (2 ತಿಮೊಥೆಯ 3:15) ಅವರ ಶಾಲಾ ವರ್ಷಗಳಲ್ಲಿ ಬರಬಹುದಾದ—ಜನ್ಮದಿನಾಚರಣೆಗಳು, ರಾಷ್ಟ್ರಭಕ್ತಿಯ ಆಚರಣೆಗಳು, ಯಾ ಧಾರ್ಮಿಕ ರಜಾದಿನಗಳು—ಅಂತಹ ನಂಬಿಕೆಯ ಶೋಧನೆಗಳಿಗಾಗಿ ಆರಂಭಿಕ ತರಬೇತಿಯು ಮಕ್ಕಳನ್ನು ಬಲಗೊಳಿಸುತ್ತದೆ. ಅಂಥ ಶೋಧನೆಗಳಿಗಾಗಿ ತಯಾರಿ ಇಲ್ಲದಿರುವುದಾದರೆ, ಮಗುವಿನ ನಂಬಿಕೆಯು ಜಜ್ಜಲ್ಪಡಬಹುದು. ಆದುದರಿಂದ ಚಿಕ್ಕ ಮಕ್ಕಳಿಗಾಗಿ ವಾಚ್ ಟವರ್ ಸೊಸೈಟಿಯು ತಯಾರಿಸಿದ ಮಹಾಬೋಧಕನಿಗೆ ಕಿವಿಕೊಡುವುದು, ಮತ್ತು ಮೈ ಬುಕ್ ಆಫ್ ಬೈಬಲ್ ಸ್ಟೊರೀಸ್ ಪುಸ್ತಕಗಳಂತಹ ಸಾಧನಗಳ ಸದುಪಯೋಗವನ್ನು ಮಾಡಿರಿ.a
14. ಕುಟುಂಬ ಅಭ್ಯಾಸವನ್ನು ಕ್ರಮಾನುಗತವಾಗಿ ಹೇಗೆ ಇಡಬಹುದು, ಮತ್ತು ಕ್ರಮದ ಕುಟುಂಬ ಅಭ್ಯಾಸವಿರಲು ನೀವೇನು ಮಾಡಿದ್ದೀರಿ?
14 ಗಮನಕೊಡಬೇಕಾದ ಇನ್ನೊಂದು ವಿಭಾಗವು ಯಾವುದೆಂದರೆ ಕುಟುಂಬ ಅಭ್ಯಾಸ, ಅದು ಸುಲಭವಾಗಿಯೇ ಅಕ್ರಮವಾಗಬಹುದು ಯಾ ನಿರಾಸಕ್ತಿಯ, ಕೇವಲ ಯಾಂತ್ರಿಕ ವ್ಯವಹಾರವಾಗಿ ಹೆತ್ತವರಿಗೂ, ಮಕ್ಕಳಿಗೂ ಒಂದು ಶೋಧನೆಯದ್ದಾಗಿ ಪರಿಣಮಿಸಬಹುದು. ವಿಷಯಗಳನ್ನು ನೀವು ಹೇಗೆ ಪ್ರಗತಿಗೊಳಿಸಸಾಧ್ಯವಿದೆ? ಮೊದಲನೆಯದ್ದಾಗಿ, ನೀವು ಅಭ್ಯಾಸಕ್ಕಾಗಿ ಸಮಯವನ್ನು ‘ಖರೀದಿಸುವ’ ಅಗತ್ಯವಿದೆ, ಅಲ್ಲದೆ ಟೀವೀ ಪ್ರದರ್ಶನಗಳು ಯಾ ಇತರ ಮಾರ್ಗಾಂತರಣಗಳು ಆಕ್ರಮಿಸಲು ಬಿಡಬಾರದು. (ಎಫೆಸ 5:15-17) “ನಮ್ಮ ಕುಟುಂಬದ ಅಭ್ಯಾಸವನ್ನು ಕ್ರಮವಾಗಿಡಲು ನಮಗೆ ಕಷ್ಟವಾಗುತ್ತಿತ್ತು,” ಎಂದು ಒಪ್ಪುತ್ತಾನೆ ಕುಟುಂಬದ ಒಬ್ಬ ಶಿರಸ್ಸು. “ನಾವು ಬೇರೆ ಬೇರೆ ಸಮಯಗಳನ್ನು ಪ್ರಯತ್ನಿಸಿ ನೋಡಿದೆವು, ಕಟ್ಟಕಡೆಗೆ ನಮಗೆಲ್ಲರಿಗೆ ಸಮರ್ಪಕವಾದ ಸಾಯಂಕಾಲದ ಸ್ವಲ್ಪ ತಡವಾದ ಸಮಯ ಕಂಡುಕೊಂಡೆವು. ಈಗ ನಮ್ಮ ಕುಟುಂಬ ಅಭ್ಯಾಸವು ಕ್ರಮತೆಯದ್ದಾಗಿದೆ.”
15. ನಿಮ್ಮ ಕುಟುಂಬದ ಆವಶ್ಯಕತೆಗಳಿಗನುಗುಣವಾಗಿ ನಿಮ್ಮ ಕುಟುಂಬ ಅಭ್ಯಾಸವನ್ನು ನೀವು ಹೇಗೆ ಜೋಡಿಸಿಕೊಂಡಿದ್ದೀರಿ?
15 ನಂತರ, ನಿಮ್ಮ ಕುಟುಂಬದ ನಿರ್ದಿಷ್ಟ ಆವಶ್ಯಕತೆಗಳನ್ನು ಪರಿಗಣಿಸಿರಿ. ಅನೇಕ ಕುಟುಂಬಗಳು ತಮ್ಮ ವಾರದ ಕಾವಲಿನಬುರುಜು ಪಾಠವನ್ನು ಒಟ್ಟಿಗೆ ತಯಾರಿಸುವುದರಲ್ಲಿ ಸಂತೋಷಿಸುತ್ತಾರೆ. ಆದರೂ, ಸಮಯ ಸಮಯಕ್ಕೆ, ಶಾಲೆಯಲ್ಲಿ ಎದುರಿಸುವಂತಹ ಸಮಸ್ಯೆಗಳ ಸಹಿತವಾಗಿ, ಚರ್ಚಿಸುವ ಆವಶ್ಯಕತೆಯಿರುವ ನಿರ್ದಿಷ್ಟ ವಿಷಯಗಳು ನಿಮ್ಮ ಕುಟುಂಬಕ್ಕೆ ಇರಬಹುದು. ಈ ಆವಶ್ಯಕತೆಯನ್ನು ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದ್ಯಾಟ್ ವರ್ಕ್ ಪುಸ್ತಕ ಮತ್ತು ಕಾವಲಿನಬುರುಜು ಮತ್ತು ಎಚ್ಚರ!ದ ಲೇಖನಗಳು ಭರ್ತಿಮಾಡಬಲ್ಲವು. “ಸರಿಪಡಿಸಬೇಕಾದ ಯಾವುದೇ ಮನೋಭಾವಗಳನ್ನು ನಮ್ಮ ಹುಡುಗರಲ್ಲಿ ನಾವು ಕಂಡುಕೊಂಡಲ್ಲಿ,” ಎನ್ನುತ್ತಾರೆ ತಂದೆಯೊಬ್ಬರು, “ಯಂಗ್ ಪೀಪಲ್ ಆಸ್ಕ್ ಪುಸ್ತಕದಲ್ಲಿ ಅದನ್ನು ಆವರಿಸುವ ನಿರ್ದಿಷ್ಟ ಅಧ್ಯಾಯದ ಮೇಲೆ ಕೇಂದ್ರೀಕರಿಸುತ್ತೇವೆ.” ಅವನ ಹೆಂಡತಿಯು ಕೂಡಿಸುವುದು: “ನಾವು ಮಣಿಯುವವರಾಗಿರಲು ಪ್ರಯತ್ನಿಸುತ್ತೇವೆ. ನಮ್ಮ ಅಭ್ಯಾಸಕ್ಕೆ ನಾವೇನಾದರೂ ಯೋಜಿಸಿದ್ದಲ್ಲಿ, ಮತ್ತು ಬೇರೇನಾದರೂ ಚರ್ಚಿಸುವಂತಹ ಆವಶ್ಯಕತೆ ಎದ್ದಲ್ಲಿ, ಆವಶ್ಯಕತೆಗನುಸಾರ ನಾವು ಬದಲಾಯಿಸುತ್ತೇವೆ.”
16. (ಎ) ನಿಮ್ಮ ಮಕ್ಕಳು ಏನನ್ನು ಕಲಿಯುತ್ತಾರೋ ಅದು ಅವರಿಗೆ ಅರ್ಥವಾಗುತ್ತದೆಂದು ನೀವು ಹೇಗೆ ಖಚಿತಪಡಿಸಿಕೊಳ್ಳಬಹುದು? (ಬಿ) ಕುಟುಂಬ ಅಭ್ಯಾಸವೊಂದನ್ನು ನಡಿಸುವಾಗ ಸಾಮಾನ್ಯವಾಗಿ ಯಾವುದನ್ನು ಹೋಗಲಾಡಿಸತಕ್ಕದ್ದು?
16 ನಿಮ್ಮ ಮಕ್ಕಳು ಏನನ್ನು ಕಲಿಯುತ್ತಾರೋ ಅದು ಅವರಿಗೆ ಅರ್ಥವಾಗಿದೆ ಎಂದು ನೀವು ಹೇಗೆ ಖಚಿತಮಾಡಿಕೊಳ್ಳುತ್ತೀರಿ? ಕುಶಲ ಬೋಧಕನಾದ ಯೇಸು, “ನಿನಗೆ ಹೇಗೆ ತೋರುತ್ತದೆ?” ಎಂಬಂತಹ ದೃಷ್ಟಿಕೋನ ಪ್ರಶ್ನೆಗಳನ್ನು ಹಾಕಿದನು. (ಮತ್ತಾಯ 17:25) ಅದನ್ನೇ ಮಾಡುವುದರ ಮೂಲಕ, ನಿಮ್ಮ ಮಕ್ಕಳು ನಿಜವಾಗಿ ಏನನ್ನು ಯೋಚಿಸುತ್ತಾರೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿರಿ. ಅವನ ಯಾ ಅವಳ ಸ್ವಂತ ಮಾತುಗಳಲ್ಲಿ ಉತ್ತರಿಸುವಂತೆ ಪ್ರತಿಯೊಂದು ಮಗುವನ್ನು ಉತ್ತೇಜಿಸಿರಿ. ನಿಸ್ಸಂದೇಹವಾಗಿ, ಅವರ ಪ್ರಾಮಾಣಿಕ ವ್ಯಕ್ತಪಡಿಸುವಿಕೆಗಳಿಗೆ ಕೋಪದಿಂದ ಯಾ ಗಾಬರಿಯಿಂದ ನೀವು ವಿಶೇಷ ರೀತಿಯಲ್ಲಿ ಪ್ರತಿವರ್ತಿಸುವುದಾದರೆ, ಇನ್ನೊಮ್ಮೆ ಅವರು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡುವ ಮೊದಲು ಎರಡು ಬಾರಿ ಯೋಚಿಸಬಹುದು. ಆದುದರಿಂದ ಶಾಂತರಾಗಿ ಇರ್ರಿ. ಕುಟುಂಬದ ಅಭ್ಯಾಸವನ್ನು ದಂಡನೆಯ ವೇದಿಕೆಯನ್ನಾಗಿ ಮಾರ್ಪಡಿಸಬೇಡಿರಿ. ಅದು ಆನಂದದಾಯಕವೂ, ಭಕ್ತಿವೃದ್ಧಿಯನ್ನುಂಟುಮಾಡುವಂತಹದ್ದೂ ಆಗಿರತಕ್ಕದ್ದು. “ನಮ್ಮ ಮಕ್ಕಳಲ್ಲಿ ಒಬ್ಬರಿಗೆ ಸಮಸ್ಯೆಯಿದೆ ಎಂದು ನಾನು ಕಂಡುಕೊಂಡಾಗ,” ತಂದೆಯೊಬ್ಬನು ಹೇಳುವುದು, “ನಾನದನ್ನು ಇನ್ನೊಂದು ಸಮಯ ನಿರ್ವಹಿಸುತ್ತೇನೆ.” “ಪ್ರತ್ಯೇಕವಾಗಿ ಮಗುವಿನೊಡನೆ ವ್ಯವಹರಿಸಿದಾಗ,” ತಾಯಿಯು ಕೂಡಿಸಿದ್ದು, “ಮಗುವು ಪೇಚಾಟದಲ್ಲಿ ಸಿಲುಕಿರುವುದಿಲ್ಲ ಮತ್ತು ಕುಟುಂಬ ಅಭ್ಯಾಸದ ಸಮಯದಲ್ಲಿ ಬುದ್ಧಿವಾದವನ್ನೀಯುವುದಕ್ಕಿಂತ, ಮಾತಾಡಲು ಹೆಚ್ಚು ಸ್ವತಂತ್ರತೆಯ ಪ್ರವೃತ್ತಿಯುಳ್ಳವನಾಗಿರುತ್ತಾನೆ.”
17. ಕುಟುಂಬ ಅಭ್ಯಾಸವು ಆಸಕ್ತಿಕರವಾಗಿರುವಂತೆ ಏನನ್ನು ಮಾಡಬಹುದು, ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಒಳ್ಳೆಯದಾಗಿ ಕಾರ್ಯವೆಸಗಿದೆ?
17 ಕುಟುಂಬ ಅಭ್ಯಾಸದಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡುವುದು, ವಿಶೇಷವಾಗಿ ನೀವು ಭಿನ್ನಭಿನ್ನ ವಯಸ್ಸಿನ ಮಕ್ಕಳೊಂದಿಗೆ ವ್ಯವಹರಿಸಲು ಇರುವುದಾದರೆ, ಒಂದು ಪಂಥಾಹ್ವಾನವಾಗಬಲ್ಲದು. ಎಳೇ ಮಕ್ಕಳು ಚಡಪಡಿಸುತ್ತಿರುವ, ತಳಮಳಿಸುತ್ತಿರುವ, ಯಾ ಕೊಂಚ ಸಮಯಾವಧಿಯ ಗಮನಕೊಡುವವರಾಗಿರುವ ಪ್ರವೃತ್ತಿಯವರಾಗಿರಬಹುದು. ನೀವೇನು ಮಾಡಬಲ್ಲಿರಿ? ಅಭ್ಯಾಸದ ವಾತಾವರಣವನ್ನು ಆರಾಮವಾಗಿಡಲು ಪ್ರಯತ್ನಿಸಿರಿ. ನಿಮ್ಮ ಮಕ್ಕಳು ಕೊಂಚ ಸಮಯಾವಧಿಯ ಗಮನಕೊಡುವವರಾಗಿರುವುದಾದರೆ, ಕೊಂಚ ಕಾಲದ, ಆದರೆ ಹೆಚ್ಚು ಬಾರಿಯ ಅಧಿವೇಶನಗಳನ್ನು ನಡಿಸಲು ಪ್ರಯತ್ನಿಸಿರಿ. ನೀವು ಉತ್ಸಾಹಭರಿತರಾಗಿರುವುದಾದರೆ, ಅದು ಕೂಡ ನೆರವಾಗುತ್ತದೆ. “ಹಿರೀತನ ನಡಿಸುವವನು ಆಸಕ್ತಿಯಿಂದ ನಡಿಸಲಿ.” (ರೋಮಾಪುರ 12:8) ಎಲ್ಲರನ್ನೂ ಒಳಗೂಡಿಸಿರಿ. ಚಿಕ್ಕ ಮಕ್ಕಳು ಚಿತ್ರಗಳ ಮೇಲೆ ಹೇಳಿಕೆಯನ್ನು ನೀಡಲು ಯಾ ಸರಳ ಪ್ರಶ್ನೆಗಳಿಗೆ ಉತ್ತರಿಸಲು ಶಕ್ತರಾಗಿರಬಹುದು. ಹದಿವಯಸ್ಕರಿಗೆ ಹೆಚ್ಚು ಸಂಶೋಧನೆ ಮಾಡುವಂತೆ ಯಾ ಪರಿಗಣಿಸುತ್ತಿರುವ ಸಮಾಚಾರವನ್ನು ವ್ಯಾವಹಾರಿಕವಾಗಿ ಅನ್ವಯಿಸುವಂತೆ ಕೇಳಿಕೊಳ್ಳಬಹುದು.
18. ಪ್ರತಿಯೊಂದು ಸಂದರ್ಭದಲ್ಲಿ ಹೆತ್ತವರು ದೇವರ ವಾಕ್ಯವನ್ನು ಹೇಗೆ ಬೇರೂರಿಸಬಹುದು, ಮತ್ತು ಯಾವ ಫಲಿತಾಂಶದೊಂದಿಗೆ?
18 ಆದಾಗ್ಯೂ, ಆತ್ಮಿಕ ಉಪದೇಶವನ್ನು ವಾರವೊಂದಕ್ಕೆ ಒಂದು ತಾಸಿಗೆ ಸೀಮಿತಗೊಳಿಸಬೇಡಿರಿ. ನಿಮ್ಮ ಮಕ್ಕಳಲ್ಲಿ ದೇವರ ವಾಕ್ಯವನ್ನು ಪ್ರತಿ ಸಂದರ್ಭದಲ್ಲಿ ಬೇರೂರಿಸಿರಿ. (ಧರ್ಮೋಪದೇಶಕಾಂಡ 6:7) ಅವರಿಗೆ ಕಿವಿಕೊಡಲು ಸಮಯ ತಕ್ಕೊಳ್ಳಿರಿ. ಅಗತ್ಯವಿದ್ದಾಗ ಎಚ್ಚರಿಸಿರಿ ಮತ್ತು ಸಮಾಧಾನಪಡಿಸಿರಿ. (ಹೋಲಿಸಿರಿ 1 ಥೆಸಲೊನೀಕ 2:11.) ಕನಿಕರವೂ, ದಯಾಭರಿತರೂ ಆಗಿರ್ರಿ. (ಕೀರ್ತನೆ 103:13; ಮಲಾಕಿಯ 3:17) ಹಾಗೆ ಮಾಡುವುದರಿಂದ, ನಿಮ್ಮ ಮಕ್ಕಳಲ್ಲಿ ನೀವು ‘ಆನಂದವನ್ನು ಕಾಣುವಿರಿ’ ಮತ್ತು ದೇವರ ನೂತನ ಲೋಕದೊಳಗೆ ಅವರ ಸಂರಕ್ಷಣೆಯನ್ನು ಬೆಂಬಲಿಸುವಿರಿ.—ಜ್ಞಾನೋಕ್ತಿ 29:17.
“ನಗುವ ಸಮಯ”
19, 20. (ಎ) ಕುಟುಂಬ ಜೀವನದಲ್ಲಿ ಆಟಪಾಟಗಳು ಯಾವ ಪಾತ್ರಗಳನ್ನು ಆಡುತ್ತವೆ? (ಬಿ) ತಮ್ಮ ಕುಟುಂಬಕ್ಕಾಗಿ ಆಟಪಾಟಗಳನ್ನು ಹೆತ್ತವರು ಏರ್ಪಡಿಸಬಹುದಾದ ಕೆಲವು ರೀತಿಗಳು ಯಾವುವು?
19 “ನಗುವ ಸಮಯ . . . , ಕುಣಿದಾಡುವ ಸಮಯ”ವು ಇದೆ. (ಪ್ರಸಂಗಿ 3:4) “ನಗು” ಎಂಬ ಹೀಬ್ರು ಪದವನ್ನು “ಆಚರಿಸುವುದು,” “ವಿನೋದ,” “ಸರಸವನ್ನಾಡುವುದು,” ಯಾ “ಒಂದು ಒಳ್ಳೇ ಸಮಯವಿರುವದು” ಎಂದು ಕೂಡ ತರ್ಜುಮಿಸಬಹುದಾಗಿದೆ. (2 ಸಮುವೇಲ 6:21; ಯೋಬ 41:5; ನ್ಯಾಯಸ್ಥಾಪಕರು 16:25; ವಿಮೋಚನಕಾಂಡ 32:6; ಆದಿಕಾಂಡ 26:8) ಆಟವು ಒಂದು ಪ್ರಯೋಜನಕರ ಉದ್ದೇಶವನ್ನು ಪೂರೈಸಶಕ್ಯವಾಗಿದೆ, ಮತ್ತು ಇದು ಮಕ್ಕಳಿಗೆ ಮತ್ತು ಯುವಕರಿಗೆ ಪ್ರಾಮುಖ್ಯವಾಗಿದೆ. ಬೈಬಲ್ ಸಮಯಗಳಲ್ಲಿ, ಹೆತ್ತವರು ತಮ್ಮ ಕುಟುಂಬಗಳಿಗಾಗಿ ಮನೋರಂಜನೆ ಮತ್ತು ಆಟಪಾಟಗಳನ್ನು ಏರ್ಪಡಿಸುತ್ತಿದ್ದರು. (ಹೋಲಿಸಿರಿ ಲೂಕ 15:25.) ನೀವು ಹಾಗೆಯೇ ಮಾಡುತ್ತೀರೋ?
20 “ನಾವು ಸಾರ್ವಜನಿಕ ಉದ್ಯಾನಗಳ ಲಾಭವನ್ನು ದೊರಕಿಸಿಕೊಳ್ಳುತ್ತೇವೆ,” ಎನ್ನುತ್ತಾನೆ ಒಬ್ಬ ಕ್ರೈಸ್ತ ಗಂಡನು. “ನಾವು ಕೆಲವು ಎಳೆಯ ಸಹೋದರರನ್ನು ಆಮಂತ್ರಿಸುತ್ತೇವೆ ಮತ್ತು ಒಂದು ಚೆಂಡಾಟ ಮತ್ತು ಪಿಕ್ನಿಕ್ ಮಾಡುತ್ತೇವೆ. ಅವರಿಗೆ ಒಂದು ಒಳ್ಳೆಯ ಸಮಯವಿರುತ್ತದೆ ಮತ್ತು ಆರೋಗ್ಯಕರವಾದ ಸಹವಾಸದಲ್ಲಿ ಅವರು ಆನಂದಿಸುತ್ತಾರೆ.” ಇನ್ನೊಬ್ಬ ಹೆತ್ತವನು ಕೂಡಿಸುವುದು: “ನಮ್ಮ ಹುಡುಗರೊಂದಿಗೆ ಮಾಡುವ ವಿಷಯಗಳನ್ನು ಒಟ್ಟಿಗೆ ಯೋಜಿಸುತ್ತೇವೆ. ನಾವು ಈಜಾಟಕ್ಕೆ ಹೋಗುತ್ತೇವೆ, ಚೆಂಡಾಟ ಆಡುತ್ತೇವೆ, ರಜೆಗಳನ್ನು ತಕ್ಕೊಳ್ಳುತ್ತೇವೆ. ಆದರೆ ನಮ್ಮ ಮನೋರಂಜನೆಗಳನ್ನು ತಕ್ಕ ಸ್ಥಾನದಲ್ಲಿ ನಾವು ಇಡುತ್ತೇವೆ. ಸಮತೂಕವೊಂದನ್ನು ಇಡುವ ಆವಶ್ಯಕತೆಯನ್ನು ನಾನು ಒತ್ತಿಹೇಳುತ್ತೇನೆ.” ತಕ್ಕದ್ದಾಗಿರುವ ಗೋಷ್ಠಿಗಳು ಯಾ ಪ್ರಾಣಿ ಮತ್ತು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವಂತಹ ಆರೋಗ್ಯಕರ ಆಟಪಾಟಗಳು ಲೋಕದ ವಿನೋದಗಳಿಗೆ ಆಕರ್ಷಿಸಲ್ಪಡುವುದರಿಂದ ಮಗುವನ್ನು ತಡೆಗಟ್ಟುವುದರಲ್ಲಿ ಬಹಳಷ್ಟನ್ನು ಮಾಡಬಲ್ಲದು.
21. ಲೌಕಿಕ ರಜಾದಿನಗಳನ್ನು ಆಚರಿಸದೇ ಇರುವುದರ ಕಾರಣ ವಂಚಿತರಾಗಿದ್ದೇವೆಂಬ ಅನಿಸಿಕೆಯು ಅವರ ಮಕ್ಕಳಲ್ಲಿ ಬಾರದಂತೆ ಹೆತ್ತವರು ಹೇಗೆ ತಡೆಯಬಹುದು?
21 ಅವರು ಜನ್ಮದಿನಾಚರಣೆಯನ್ನು ಯಾ ಅಕ್ರೈಸ್ತ ರಜಾದಿನಗಳನ್ನು ಆಚರಿಸುವುದಿಲವ್ಲಾದುದರಿಂದ ತಾವು ವಂಚಿತರಾಗಿದ್ದೇವೆ ಎಂದು ನಿಮ್ಮ ಮಕ್ಕಳು ಭಾವಿಸದಿರುವುದು ಕೂಡ ಪ್ರಾಮುಖ್ಯವಾಗಿದೆ. ನಿಮ್ಮ ವತಿಯಿಂದ ಕೆಲವೊಂದು ಸಂಸ್ಥಾಪನೆಯ ಮೂಲಕ, ವರ್ಷದಲ್ಲಿಲ್ಲಾ ಅನೇಕ ಆನಂದಮಯ ಸಮಯಗಳಿಗಾಗಿ ಅವರು ಮುನ್ನೋಡಶಕ್ತರು. ಪ್ರಾಪಂಚಿಕ ರೀತಿಯಲ್ಲಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನೆವನವಾಗಿ, ಒಳ್ಳೆಯ ಹೆತ್ತವನಿಗೆ ಕೆಲವೊಂದು ರಜಾದಿನದ ಜರೂರಿಯೇನೂ ಇಲ್ಲ. ತನ್ನ ಸ್ವರ್ಗೀಯ ತಂದೆಯೋಪಾದಿ, ಅವನು ‘ತನ್ನ ಮಕ್ಕಳಿಗೆ ಒಳ್ಳೆಯ ವರಗಳನ್ನು ಕೊಡಲು ತಿಳಿದಿದ್ದಾನೆ’—ಆತ್ಮ ಸಂತೋಷದಿಂದ.—ಮತ್ತಾಯ 7:11.
ನಿಮ್ಮ ಕುಟುಂಬಕ್ಕೆ ನಿತ್ಯ ಭವಿಷ್ಯವೊಂದನ್ನು ಭದ್ರಪಡಿಸುವುದು
22, 23. (ಎ) ಮಹಾ ಸಂಕಟವು ಸನ್ನಿಹಿತವಾಗುತ್ತಿರುವಂತೆ, ದೇವ-ಭೀರು ಕುಟುಂಬಗಳಿಗೆ ಯಾವ ಆಶ್ವಾಸನೆ ಇರಸಾಧ್ಯವಿದೆ? (ಬಿ) ದೇವರ ನೂತನ ಲೋಕದೊಳಗೆ ಸಂರಕ್ಷಿಸಲ್ಪಡುವ ದಿಸೆಯಲ್ಲಿ ಕುಟುಂಬಗಳು ಏನನ್ನು ಮಾಡಶಕ್ತವಾಗಿವೆ?
22 ಕೀರ್ತನೆಗಾರನು ಪ್ರಾರ್ಥಿಸಿದ್ದು: “ಯೆಹೋವನೇ, ನೀನು ಸ್ವತಃ ಅವರನ್ನು ರಕ್ಷಿಸುವಿ; ಈ ಸಂತತಿಯ ಪ್ರತಿಯೊಬ್ಬರನ್ನು ನೀನು ಸದಾಕಾಲವೂ ಕಾಪಾಡುವಿ.” (ಕೀರ್ತನೆ 12:7, NW) ಸೈತಾನನಿಂದ ಒತ್ತಡವು ಖಂಡಿತವಾಗಿಯೂ ಹೆಚ್ಚಿಸಲ್ಪಡುವುದು—ವಿಶೇಷವಾಗಿ ಯೆಹೋವನ ಸಾಕ್ಷಿಗಳ ಕುಟುಂಬಗಳ ವಿರುದ್ಧವಾಗಿ. ಆದರೂ, ಏರುತ್ತಾ ಇರುವ ಆಕ್ರಮಣವನ್ನು ಎದುರಿಸಿ ನಿಲ್ಲಲು ಸಾಧ್ಯವಿದೆ. ಯೆಹೋವನ ಸಹಾಯದಿಂದ ಮತ್ತು ಗಂಡಂದಿರ, ಹೆಂಡತಿಯರ, ಮತ್ತು ಮಕ್ಕಳ ಕಡೆಯಿಂದ ಉಗ್ರವಾದ ನಿರ್ಧಾರ ಮತ್ತು ಕಠಿಣತಮ ಕೆಲಸದೊಂದಿಗೆ ಕುಟುಂಬಗಳು—ನಿಮ್ಮ ಕುಟುಂಬವೂ ಸೇರಿ—ಮಹಾ ಸಂಕಟದ ಸಮಯದಲ್ಲಿ ಸಜೀವವಾಗಿ ಪಾರಾಗಿ ಉಳಿಯುವ ನಿರೀಕ್ಷೆಯುಳ್ಳವರಾಗಿರಸಾಧ್ಯವಿದೆ.
23 ಗಂಡಂದಿರೇ ಮತ್ತು ಹೆಂಡತಿಯರೇ, ನಿಮ್ಮ ದೇವ-ನೇಮಿತ ಪಾತ್ರಗಳನ್ನು ನೆರವೇರಿಸುವುದರ ಮೂಲಕ ನಿಮ್ಮ ವಿವಾಹದಲ್ಲಿ ಶಾಂತಿ ಮತ್ತು ಹೊಂದಾಣಿಕೆಯನ್ನು ತನ್ನಿರಿ. ಹೆತ್ತವರೇ, ನಿಮ್ಮ ಮಕ್ಕಳಿಗೆ ಯೋಗ್ಯವಾದ ಒಂದು ಮಾದರಿಯನ್ನು ಇಡುವುದನ್ನು ಮುಂದರಿಸಿರಿ, ಅವರಿಗೆ ತೀವ್ರವಾಗಿ ಆವಶ್ಯಕವಾಗಿರುವ ತರಬೇತಿ ಮತ್ತು ಶಿಸ್ತುಪಾಟನ್ನು ಕೊಡಲು ಸಮಯವನ್ನು ಖರೀದಿಸಿರಿ. ಅವರೊಂದಿಗೆ ಮಾತಾಡಿರಿ. ಅವರಿಗೆ ಕಿವಿಗೊಡಿರಿ. ಅವರ ಜೀವಗಳು ಗಂಡಾಂತರದಲ್ಲಿವೆ! ಮಕ್ಕಳೇ, ನಿಮ್ಮ ಹೆತ್ತವರಿಗೆ ಕಿವಿಗೊಡಿರಿ ಮತ್ತು ವಿಧೇಯರಾಗಿರ್ರಿ. ಯೆಹೋವನ ಸಹಾಯದಿಂದ, ನೀವು ಯಶಸ್ವಿಯಾಗುವಿರಿ ಮತ್ತು ಬರಲಿರುವ ದೇವರ ನೂತನ ಲೋಕದಲ್ಲಿ ನಿತ್ಯ ಭವಿಷ್ಯವೊಂದನ್ನು ನೀವಾಗಿಯೇ ಭದ್ರಪಡಿಸಿಕೊಳ್ಳುವಿರಿ.
[ಅಧ್ಯಯನ ಪ್ರಶ್ನೆಗಳು]
a ಆಡಿಯೋ ಕ್ಯಾಸೆಟ್ಟುಗಳು ಕೂಡ ಕೆಲವು ಭಾಷೆಗಳಲ್ಲಿ ದೊರಕುತ್ತವೆ.
ನಿಮಗೆ ನೆನಪಿದೆಯೇ?
▫ ಗಂಡಂದಿರು ಮತ್ತು ಹೆಂಡತಿಯರು ತಮ್ಮ ಸಂಸರ್ಗವನ್ನು ಹೇಗೆ ಉತ್ತಮಗೊಳಿಸಬಲ್ಲರು?
▫ “ಯೆಹೋವನ ಮಾನಸಿಕ ಕ್ರಮಗೊಳಿಸುವಿಕೆ”ಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬಲ್ಲರು? (ಎಫೆಸ 6:4)
▫ ಕುಟುಂಬ ಅಭ್ಯಾಸವನ್ನು ಭಕ್ತಿವೃದ್ಧಿಯದ್ದೂ, ಹೆಚ್ಚು ಆಸಕ್ತಿಕರವಾದದ್ದೂ ಆಗಿ ಮಾಡುವ ಕೆಲವು ವಿಧಗಳು ಯಾವುವು?
▫ ತಮ್ಮ ಕುಟುಂಬಗಳಿಗೆ ಆಟಪಾಟಗಳನ್ನು ಮತ್ತು ಮನೋರಂಜನೆಯನ್ನು ಏರ್ಪಡಿಸುವುದರಲ್ಲಿ ಹೆತ್ತವರು ಏನನ್ನು ಮಾಡಬಹುದು?
[ಪುಟ 16 ರಲ್ಲಿರುವ ಚೌಕ]
ಸಂಗೀತ—ಒಂದು ಶಕ್ತಿಶಾಲೀ ಪ್ರಭಾವ
ಶಿಶು ಪಾಲನೆಯ ಮೇಲಿನ ಒಂದು ಪುಸ್ತಕದ ಲೇಖಕನು ಹೇಳುವುದು: “ಸಭಿಕರ ಮುಂದೆ ನಾನು ನಿಲ್ಲಬೇಕಾದಲ್ಲಿ . . . ಮತ್ತು ಪಾನಮತ್ತ ಹುಚ್ಚು ಕುಣಿತದ, ಕೋಕೆಯ್ನ್, ಪಾಟ್ ಯಾ ಮನಸ್ಸನ್ನು ತಿರುಗಿಸುವ ಇತರ ಯಾವುದೇ ಮಾದಕೌಷಧದಿಂದ ಮತ್ತನಾಗುವುದರ ಪಕ್ಷಹಿಡಿದು ಮಾತಾಡುವುದಾದರೆ, ಅವರು ದಿಗ್ಭ್ರಮೆಗೊಳಿಸುವ ಬೆರಗಿನಿಂದ ನನ್ನನ್ನು ನೋಡುವರು. . . . [ಆದರೂ] ಇವೇ ವಿಷಯಗಳನ್ನು ಮುಚ್ಚುಮರೆಯಿಲ್ಲದೆ ಸಮರ್ಥಿಸುವ ರೆಕಾರ್ಡುಗಳನ್ನು ಯಾ ಕ್ಯಾಸೆಟ್ ರೆಕಾರ್ಡಿಂಗ್ಗಳನ್ನು ಖರೀದಿಸುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಹಣವನ್ನು ಒದಗಿಸುತ್ತಾರೆ.” (ರೆಯ್ಸಿಂಗ್ ಪಾಸಿಟಿವ್ ಕಿಡ್ಸ್ ಇನ್ ಎ ನೆಗೆಟಿವ್ ವರ್ಲ್ಡ್, ಜಿಗ್ ಜಿಗ್ಲರ್) ಉದಾಹರಣೆಗೆ, ಅಮೆರಿಕದಲ್ಲಿ ಅನೇಕ ಯುವಕರ ತುಟಿಗಳಿಂದ ಮುಚ್ಚುಮರೆಯಿಲ್ಲದ ಲೈಂಗಿಕ ಲಹರಿಗಳು ಉಚ್ಛರಿಸಲ್ಪಡುತ್ತಾ ಇರುತ್ತವೆ. ಅಂತಹ ಪೈಶಾಚಿಕ ಪಾಶಗಳನ್ನು ಹೋಗಲಾಡಿಸಲು ಸಂಗೀತದ ತಮ್ಮ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರುವಂತೆ ನಿಮ್ಮ ಮಕ್ಕಳಿಗೆ ನೀವು ಸಹಾಯ ಮಾಡುತ್ತಿದ್ದೀರೋ?
[ಪುಟ 15 ರಲ್ಲಿರುವ ಚಿತ್ರ]
ಕುಟುಂಬದ ಐಕ್ಯತೆ ಮತ್ತು ಸಂಸರ್ಗವನ್ನು ವರ್ಧಿಸಲು ಊಟದ ಸಮಯಗಳು ಆನಂದಮಯ ಸಂದರ್ಭಗಳಾಗಿರಸಾಧ್ಯವಿದೆ