ಜೋತಿರ್ಮಂಡಲಗಳೋಪಾದಿ ಲೋಕದೊಳಗೆ ಹೊಳೆಯುವುದು
ನೈತಿಕ ಮೋಸ ಮತ್ತು ವಕ್ರತೆಯಿಂದ ಭ್ರಷ್ಟಗೊಂಡ ಲೋಕವೊಂದರಲ್ಲಿ, ನಿಜ ಕ್ರೈಸ್ತರು ಲೋಕವ್ಯಾಪಕವಾಗಿ ಬೆಳಕಿನ ಉಗಮಗಳಾಗಿರತಕ್ಕದ್ದು. ಅವರು ಕತ್ತಲೆಯ ಲೋಕವೊಂದರಲ್ಲಿ ಜ್ಯೋತಿರ್ಮಂಡಲಗಳಾಗಿರಬೇಕು. (ಫಿಲಿಪ್ಪಿ 2:15) ಪಯನೀಯರರುಗಳಾಗಿ, ಯಾ ಪೂರ್ಣ ಸಮಯದ ಸಾರುವವರಾಗಿ ಅನೇಕ ಸಾವಿರಾರು ಮಂದಿ ಇದನ್ನು ಮಾಡಲು ಇಚ್ಛೆಯುಳ್ಳವರಾಗಿದ್ದಾರೆ. ಅವರಲ್ಲಿ ಒಂದು ದೊಡ್ಡ ಸಂಖ್ಯೆಯವರು ಈ ಸೇವೆಯಲ್ಲಿ ಬಹಳ ವರುಷಗಳನ್ನು ವ್ಯಯಿಸಿದ್ದಾರೆ ಮತ್ತು ಯೇಸು ಕ್ರಿಸ್ತನ ಸಾಚಾ ಶಿಷ್ಯರಾಗಲು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿದ ಎಲ್ಲಾ ವಿಧದ ಜನರನ್ನು ನೋಡುವುದರಿಂದ ಬಹುಮಾನಿಸಲ್ಪಟ್ಟಿದ್ದಾರೆ.—ಮತ್ತಾಯ 28:19.
ಪಯನೀಯರರು ಈ ಪವಿತ್ರ ಸೇವೆಯಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಲು ಮತ್ತು ಅವರ ಕಲಿಸುವ ಕೌಶಲ್ಯಗಳಲ್ಲಿ ಪ್ರಗತಿಮಾಡಲು, ಯೆಹೋವನ ಸಾಕ್ಷಿಗಳು ಪಯನೀಯರ್ ಸೇವಾ ಶಾಲೆಗಳನ್ನು ಸಂಸ್ಥಾಪಿಸಿರುತ್ತಾರೆ. ಮೂರು ವಿಭಾಗಗಳಲ್ಲಿ ಪಯನೀಯರರಿಗೆ ಸಹಾಯವಾಗುವಂತೆ ರೂಪಿಸಲ್ಪಟ್ಟ ಇದು ಹತ್ತು ದಿನಗಳ ಬೈಬಲಾಧಾರಿತ ಪಾಠಕ್ರಮವಾಗಿದೆ: ಯೇಸು ಕ್ರಿಸ್ತನ ಹಿಂಬಾಲಕರೋಪಾದಿ ಯೆಹೋವನೊಂದಿಗೆ ನಡೆಯುವುದು; ಸಹೋದರರ ಇಡೀ ಬಳಗಕ್ಕೋಸ್ಕರ ಪ್ರೀತಿಯಲ್ಲಿ ವರ್ಧಿಸುವುದು; ಜೋತಿರ್ಮಂಡಲಗಳೋಪಾದಿ ಲೋಕದೊಳಗೆ ಹೊಳೆಯುವುದ.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಪಯನೀಯರ್ ಶಾಲೆ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ನ ರಾಜಧಾನಿಯಾದ ಬಂಗ್ಯೂನಲ್ಲಿ, 1991ರ ಆಗಸ್ಟ್ನಲ್ಲಿ 48 ವಿದ್ಯಾರ್ಥಿಗಳು ಮತ್ತು 2 ಉಪದೇಶಕರು ಒಟ್ಟಾಗಿ ಕೂಡಿಬಂದರು. ಅವರ ಕಾರ್ಯಕ್ಕಾಗಿ ವಿದ್ಯಾರ್ಥಿಗಳು ಉಪದೇಶಗಳನ್ನು ಮತ್ತು ವ್ಯಾವಹಾರಿಕ ಸಲಹೆಗಳನ್ನು ಪಡೆಯಲಿಕ್ಕಿದ್ದರು. ಈ ಬಂಗ್ಯೂವಿನ ತರಗತಿಯ ಕುರಿತು ಅಷ್ಟೊಂದು ಸಡಗರವೇನಾಗಿತ್ತು?
ಒಂದು ಸಂಗತಿಯೆಂದರೆ, ವಿದ್ಯಾರ್ಥಿಗಳಲ್ಲಿ 21 ಮಂದಿ ಇನ್ನೂ ಲೌಕಿಕ ಶಾಲೆಗಳಿಗೆ ಹಾಜರಾಗುತ್ತಿದ್ದರು. ಶಾಲೆಯಲ್ಲಿರುವಾಗಲೇ, ಕ್ರಮದ ಪಯನೀಯರ್ ಸೇವೆಯಲ್ಲಿ ಆನಂದಿಸಲು ಅವರು ಕಾರ್ಯತಖ್ತೆಯನ್ನು ಏರ್ಪಡಿಸಲು ಶಕ್ತರಾಗಿದ್ದರು. ಅವರ ರಜಾ ತಿಂಗಳುಗಳನ್ನು, ಅವರ ಬಿಡುವಿನ ವಾರಾಂತ್ಯಗಳನ್ನು ಮತ್ತು ಅಪರಾಹ್ನಗಳನ್ನು ಸಾರಲು ಮತ್ತು ಕಲಿಸಲು ಅವರು ಬಳಸಿದರು.
ಅವರ ಸೃಷ್ಟಿಕರ್ತನನ್ನು ಈಗಲೇ ಸೇವಿಸುವ ಮಹತ್ವವನ್ನು ಈ ಯುವಜನರು ಕಂಡಿದ್ದಾರೆ. (ಪ್ರಸಂಗಿ 12:1; ಹೋಲಿಸಿ 1 ಕೊರಿಂಥ 7:29.) ಇವರಲ್ಲಿ 12 ಮಂದಿಗೆ ಅವಿಶ್ವಾಸಿ ಹೆತ್ತವರಿದ್ದರು ಎಂಬುದು ಒಂದು ಗಮನಾರ್ಹ ನಿಜಾಂಶವಾಗಿತ್ತು. ಮನೆಯಲ್ಲಿ ಸತ್ಯದಲ್ಲಿರುವವರೆಂದರೆ ಅವರೊಬ್ಬರೇ. ಇಬ್ಬರು ಎಳೇ ಹುಡುಗರು, ಮಾಂಸಿಕ ಸಹೋದರರು, ಅವರ ನಂಬಿಕೆಯ ಕಾರಣ ಮನೆಯನ್ನು ತೊರೆದು ಹೋಗುವಂತೆ ಅವರ ತಂದೆಯಿಂದ ಬಲಾತ್ಕರಿಸಲ್ಪಟ್ಟವರಾಗಿದ್ದರು. ಸಭೆಯ ಒಂದು ಯುವ ದಂಪತಿಗಳು ಈ ಇಬ್ಬರು ಹುಡುಗರಿಗೆ ತಮ್ಮ ಮನೆಯಲ್ಲಿ ನಿಲ್ಲುವಂತೆ ಅನುಮತಿಯನ್ನಿತ್ತರು.
ಮಿಕ ಮತ್ತು ಸ್ಯುಲಮಟ್ ಕಾಲೆಬ್ರಿಗಾದರೋ, ವಿದ್ಯಮಾನಗಳು ಭಿನ್ನವಾಗಿದ್ದವು. ಇಬ್ಬರೂ ಪಯನೀಯರರಾಗಿದ್ದರು ಮತ್ತು ಅವರೂ ಶಾಲೆಗೆ ಹೋಗುತ್ತಿದ್ದರು, ಆದರೆ ಅವರ ಹೆತ್ತವರು ಯೆಹೋವನ ಸಾಕ್ಷಿಗಳಾಗಿದ್ದರು. ವಾಸ್ತವತೆಯೇನಂದರೆ ಅವರ ತಂದೆಯು ಅದೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಯಾಗಿದ್ದನು!
ಬಂಗ್ಯೂವಿನ ಸಭೆಗಳು ಕೂಡ, ಭಿನ್ನವಾದ ತೆರದಲ್ಲಿ ಈ ಶಾಲೆಯಲ್ಲಿ ಸಹಭಾಗಿಗಳಾದರು. ಅವರು ಆಹಾರದಂತಹ ಐಹಿಕ ಆವಶ್ಯಕತೆಗಳ ಜಾಗ್ರತೆ ವಹಿಸಿಕೊಂಡರು. ಈ ತರಗತಿಯಲ್ಲಿರುವವರಿಗೆ ಉಣಿಸಲು ಹಣ, ಕೋಳಿಗಳು, ಸಕ್ಕರೆ, ಅಕ್ಕಿ, ಮತ್ತು ಮನಿಯೊಕ್ ಕಾಣಿಕೆಯನ್ನಿತ್ತರು.
ಸರಳವಾದ ಆದರೂ ರುಚಿಕರ ಊಟಗಳನ್ನು ತಯಾರಿಸಲು ಹತ್ತಿರದ ಸಭೆಗಳಿಂದ ಅಡಿಗೆಯ ಕಾರ್ಮಿಕರು ಸಂಸ್ಥಾಪಿಸಲ್ಪಟ್ಟರು. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿ ಎಲ್ಲರೂ ಮೆಚ್ಚುವಂತಹ ಒಂದು ಭಕ್ಷ್ಯ, ಎನ್ಗುನ್ಸ ಎಂಬದು ಪ್ರಖ್ಯಾತವಾಗಿದೆ. ಅದರ ಪಾಕವಿಧಾನ? ಮನಿಯೊಕ್ ಎಲೆಗಳು, ತಾಳೆ ಎಣ್ಣೆ, ನೀರುಳ್ಳಿಗಳು, ಯಥೇಷ್ಟ ಬೆಳ್ಳುಳ್ಳಿ, ಬಹಳಷ್ಟು ನೆಲಗಡಲೆಯ ಬೆಣ್ಣೆ, ಮತ್ತು ಚೆನ್ನಾಗಿ ಬೇಯಿಸಲು ಬೇಕಾಗುವಷ್ಟು ತಾಳ್ಮೆ. ಪ್ರತಿಯೊಂದು ಅಡಿಗೆ ತಂಡ ಅದನ್ನು ತನ್ನದೆ ವಿಶೇಷ ವಿಧಾನದಲ್ಲಿ ತಯಾರಿಸುತ್ತಿತ್ತು. ಅದು ಬಹಳ ಯಶಸ್ವಿಯಾಯಿತು; ರುಚಿ ಅಷ್ಟೊಂದು ಆಗಿದ್ದುದರಿಂದ, ಯಾರೂ ಅದನ್ನು ತಿನ್ನದೆ ಇರಲು ಸಾಧ್ಯವಿರಲಿಲ್ಲ.
ಬಂಗ್ಯೂವಿನ ಬಾಹ್ಯ ಪ್ರದೇಶದಲ್ಲೂ ಎರಡು ಇತರ ತರಗತಿಗಳು ಜರುಗಿದವು, ಒಂದು ಬ್ವಾರ್ನಲ್ಲಿ, ಮತ್ತೊಂದು ಬಂಬರಾದಲ್ಲಿ, ಹೀಗೆ ಎಲ್ಲಾ ವಿದ್ಯಾರ್ಥಿಗಳ ಜುಮ್ಲಾ ಸಂಖ್ಯೆ 68 ಆಯಿತು. ಕಳೆದ ಎರಡು ವರ್ಷಗಳಲ್ಲಿ, ಪಯನೀಯರರ ಸಂಖ್ಯೆಯಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ ಅಭಿವೃದ್ಧಿಯನ್ನು ಕಂಡಿದೆ. ಜನವರಿ 1992 ರಲ್ಲಿ, ಅಲ್ಲಿ 149 ಕ್ರಮದ ಪಯನೀಯರರು ಮತ್ತು 17 ವಿಶೇಷ ಪಯನೀಯರರೊಂದಿಗೆ, 78 ಸಹಾಯಕ ಪಯನೀಯರರಿದ್ದರು. ಇದರಿಂದ ಏರಿದ ಕಾರ್ಯಚಟುವಟಿಕೆಯ ಫಲಿತಾಂಶವಾಗಿ, ಇಡೀ ದೇಶದಲ್ಲಿ ಪ್ರಚಾರಕರ, ತಾಸುಗಳ, ಪುನರ್ಭೇಟಿಗಳ ಮತ್ತು ಬೈಬಲ್ ಅಧ್ಯಯನಗಳಲ್ಲಿ ಹೊಸ ಉಚ್ಚಾಂಕವನ್ನು ಕಾಣುವಂತಾಯಿತು. ಹೆಚ್ಚು ಕೆಲಸಗಾರರಿರುವಾಗ, ಕೊಯ್ಲು ಅಭಿವೃದ್ಧಿಗೊಳ್ಳುತ್ತದೆ.—ಯೆಶಾಯ 60:21, 22; ಮತ್ತಾಯ 9:37, 38.
ಈ ಒದಗಿಸುವಿಕೆಗಳನ್ನು ಮಾಡಿರುವುದಕ್ಕಾಗಿ ಯೆಹೋವ ದೇವರಿಗೆ ಮತ್ತು ಈ ತರಗತಿಗಳನ್ನು ಏರ್ಪಡಿಸಿದ್ದಕ್ಕಾಗಿ ಆತನ ಐಹಿಕ ಸಂಸ್ಥಾಪನೆಗೆ ನಮ್ಮ ಉಪಕಾರಗಳು ಸಲ್ಲುತ್ತವೆ. ಕತ್ತಲೆಯ ಲೋಕದಲ್ಲಿ ಜ್ಯೋತಿರ್ಮಂಡಲಗಳೋಪಾದಿ ಹೊಳೆಯಲು ವಿದ್ಯಾರ್ಥಿಗಳಿಗೂ, ಉಪದೇಶಕರಿಗೂ ಏಕಪ್ರಕಾರವಾಗಿ ಅವು ಸಹಾಯ ನೀಡುತ್ತವೆ. (w92 10⁄1)
[ಪುಟ 20 ರಲ್ಲಿರುವ ಚಿತ್ರ]
ಇಪ್ಪತ್ತೊಂದು ಪಯನೀಯರ್-ಶಾಲಾ ವಿದ್ಯಾರ್ಥಿಗಳು ಇನ್ನೂ ಹೈಸ್ಕೂಲಿನಲ್ಲಿ
[ಪುಟ 21 ರಲ್ಲಿರುವ ಚಿತ್ರ]
ಸತ್ಯದ ಕಾರಣ ಈ ಇಬ್ಬರು ಹುಡುಗರಿಗೆ ತಮ್ಮ ಮನೆಯನ್ನು ತ್ಯಜಿಸಬೇಕಾಗಿಬಂತು