ಬೂಕನ್ವೊಲ್ಡ್ನ ನಂತರ ನಾನು ಸತ್ಯವನ್ನು ಕಂಡುಕೊಂಡೆನು
ನಾನು ಫ್ರಾನ್ಸಿನ ಗ್ರೆನೊಬಲ್ನಲ್ಲಿ 1930 ರುಗಳಲ್ಲಿ ಬೆಳೆದೆನು. ನನ್ನ ಜರ್ಮನ್ ಭಾಷೆಯ ಶಿಕ್ಷಕನು ಒಬ್ಬ ಫ್ರೆಂಚ್ ಮನುಷ್ಯನಾಗಿದ್ದು, ನಾಝೀ ಉನ್ಮತ್ತಾಭಿಮಾನಿಯಾಗಿದ್ದನು. ಶಾಲೆಯಲ್ಲಿ ಆತನು ಯಾವಾಗಲೂ ಜರ್ಮನರು ಒಂದಾನೊಂದು ಸಮಯ “ಪ್ರಯೋಜನಕಾರಿಗಳಾಗಲಿರುವರು” ಎಂದು ಪಟ್ಟುಹಿಡಿಯುತ್ತಿದ್ದನು. ಆದಾಗ್ಯೂ, ನಮ್ಮ ಶಿಕ್ಷಕರಲ್ಲಿ ಹೆಚ್ಚಿನವರು ಮೊದಲನೆಯ ಲೋಕ ಯುದ್ಧದಲ್ಲಿ ಅನುಭವಸ್ಥರಾಗಿದ್ದು, ಜರ್ಮನಿಯಲ್ಲಿ ನಾಝೀ ತತ್ವದ ಏರುವಿಕೆಯಿಂದ ಚಿಂತಿತರಾಗಿದ್ದರು. ಯುದ್ಧವು ಸನ್ನಿಹಿತವಾಗುತ್ತದೆ ಎಂದು ಹೆಚ್ಚೆಚ್ಚು ಸ್ಫುಟವಾಗುತ್ತಿದ್ದಂತೆ, ನಾನೂ ಚಿಂತಿತನಾದೆನು.
ಎರಡನೆಯ ಲೋಕ ಯುದ್ಧದ ಆರಂಭದಲ್ಲಿ ಅಂದರೆ 1940 ರಲ್ಲಿ ಸಾಮ್ ನದಿಯ ಕಠಿಣ ಕಾಳಗದಲ್ಲಿ ನನ್ನ ಪ್ರೀತಿಯ ಮಾವನ ನಷ್ಟ ನನಗುಂಟಾಯಿತು. ನಾನು ಅತಿ ಕಹಿ ಮನಸ್ಕನಾದೆ, ಆದರೆ ಫ್ರೆಂಚ್ ಸೇನೆಯಲ್ಲಿ ಸೇರಲು ನಾನು ಇನ್ನೂ ಎಳೆಯನಾಗಿದ್ದೆನು. ಆದರೂ ಮೂರು ವರ್ಷಗಳ ನಂತರ, ಜರ್ಮನರಿಂದ ಫ್ರಾನ್ಸ್ ವಶಪಡಿಸಿಕೊಳ್ಳಲ್ಪಟ್ಟಾಗ, ಫ್ರೆಂಚ್ ಪ್ರತಿಭಟನೆಗಾಗಿ ಒಬ್ಬ ಕರಡುಪ್ರತಿ ತಯಾರಕನೋಪಾದಿ ನನ್ನ ನಿಪುಣತೆಯನ್ನು ಬಳಸಲು ಒಂದು ಅವಕಾಶವು ಕೊಡಲ್ಪಟ್ಟಿತು. ನಾನು ಸಹಿಗಳನ್ನು ನಕಲು ಮಾಡುವದರಲ್ಲಿ ಉತ್ಕೃಷ್ಟತೆಯನ್ನು ಪಡೆದೆನು ಮತ್ತು ಜರ್ಮನ್ ರಬ್ಬರ್ ಸ್ಟಾಂಪ್ಗಳನ್ನು ಕಲ್ಪಿಸುವದರಲ್ಲಿಯೂ ಕೂಡ ಕೆಲಸ ಮಾಡಿದೆನು. ಈ ರೀತಿಯಲ್ಲಿ ದೇಶಾಕ್ರಮಿಸಿದ್ದ ಶತ್ರುಗಳ ಸೇನೆಯ ವಿರುದ್ಧ ಹೋರಾಡುವದರಲ್ಲಿ ನನಗೆ ಎಷ್ಟೊಂದು ತೃಪ್ತಿ ಸಿಕ್ಕಿತೆಂದರೆ, ಆ ಸಮಯದಲ್ಲಿ ನನ್ನ ಸಂಗಾತಿಗಳ ಕಾಮ್ಯೂನಿಸ್ಟ್ ಅಭಿಪ್ರಾಯಗಳು ನನಗೇನೂ ಪ್ರಾಮುಖ್ಯವಾಗಿರಲಿಲ್ಲ.
ಕೈದುಮಾಡಲ್ಪಟ್ಟೆನು
ನವಂಬರ 11, 1943 ರಲ್ಲಿ, ಸ್ಥಳೀಯ ಪ್ರತಿಭಟನೆಯು ಮೊದಲನೆಯ ಲೋಕ ಯುದ್ಧದ ತಾತ್ಕಾಲಿಕ ಸಂಧಿಯನ್ನು ಆಚರಿಸಲು ಒಂದು ಪ್ರದರ್ಶನಕ್ಕಾಗಿ ಕರೆಯನ್ನಿತಿತ್ತು. ಆದರೆ ಫ್ರೆಂಚ್ ವಾಹಕ ಕಾದಾಳುಗಳು ಯುದ್ಧ ಸ್ಮಾರಕಕ್ಕೆ ನಡಿಸುವ ಸೇತುವೆಗೆ ಸಮೀಪಿಸದಂತೆ ತಡೆಯನ್ನು ಹಾಕಿದ್ದರು, ಮತ್ತು ನಾವು ಪುನಃ ಮನೆಗೆ ಹಿಂತೆರಳುವಂತೆ ಅವರು ಉತ್ತೇಜಿಸಿದರು. ಬದಲಿಗೆ ನಮ್ಮ ಮೆರವಣಿಗೆಯು ನಗರದೊಳಗಿರುವ ಇನ್ನೊಂದು ಯುದ್ಧ ಸ್ಮಾರಕಕ್ಕೆ ಮುಂದೊತ್ತಲು ನಿರ್ಧರಿಸಿತು. ಆದರೆ ನಾವು ಒಂದು ವಿಷಯವನ್ನು ಮರೆತೆವು. ಗೆಸ್ಟಾಪೋ ಆಫೀಸಿನ ಹತ್ತಿರವೇ ಕಲ್ಲು ಎಸೆಯುವಷ್ಟೇ ದೂರದಲ್ಲಿ ಆ ಸ್ಮಾರಕವು ಇತ್ತು.
ಸಶಸ್ತ್ರ ಸೈನಿಕರು ನಮ್ಮ ಗುಂಪನ್ನು ಕೂಡಲೇ ಸುತ್ತುವರಿದರು, ಮತ್ತು ಗೋಡೆಯ ವಿರುದ್ಧ ಮುಖಮಾಡಿ ನಮ್ಮನ್ನು ಸಾಲಾಗಿ ನಿಲ್ಲಿಸಿದರು. ಸೈನಿಕರು ನಮ್ಮನ್ನು ಅತ್ತ ಚಲಿಸಿದಾಗ, ನೆಲದ ಮೇಲೆ ಅನೇಕ ಪಿಸ್ತೂಲುಗಳನ್ನು ಅವರು ಕಂಡರು. ಯಾರೂ ಅದು ತಮ್ಮದೆಂದು ಹೇಳಲು ಬಯಸದ್ದರಿಂದ, ಸೈನಿಕರು ಕೇವಲ ಸ್ತ್ರೀಯರನ್ನು ಮತ್ತು 16 ವರ್ಷಗಳು ಯಾ ಅದಕ್ಕಿಂತ ಕಡಿಮೆ ವಯಸ್ಸಿನವರನ್ನು ಮಾತ್ರ ಬಿಡುಗಡೆಗೊಳಿಸಿದರು. ಹೀಗೆ, ನನ್ನ 18 ನೆಯ ವಯಸ್ಸಿನಲ್ಲಿ, ಇತರ 450 ಕೈದಿಗಳೊಂದಿಗೆ ನಾನು ಬಂಧಿಸಲ್ಪಟ್ಟೆನು. ಕೆಲವು ದಿನಗಳ ನಂತರ, ಉತ್ತರ ಫ್ರಾನ್ಸ್ನ ಕೋಂಪ್ಯಾನ್ ಹತ್ತಿರದ ವರ್ಗಾಯಿಸುವ ಶಿಬಿರಕ್ಕೆ ನಮ್ಮನ್ನು ಸ್ಥಳಾಂತರಿಸಿದರು.
ಜರ್ಮನಿಗೆ ಹೋಗುವ ದಾರಿಯಲ್ಲಿ
ಜನವರಿ 17, 1944 ರಲ್ಲಿ ನನ್ನ ಮೊತ್ತಮೊದಲ ಸಂಪರ್ಕ—ಆದರೆ ದೌರ್ಭಾಗ್ಯವಶಾತ್ ಅದು ಕೊನೆಯದ್ದಲ್ಲ—ಜರ್ಮನ್ ಸೈನಿಕರೊಂದಿಗೆ ಆಯಿತು, ಅವರ ಶಿರಸ್ತ್ರಾಣಗಳ ಎಡಬದಿಯಲ್ಲಿ ಸ್ವಸ್ತಿಕದಿಂದ ಮತ್ತು ಬಲಬದಿಯಲ್ಲಿ ಸಂಕೇತ ಶಬ್ದಗಳಾದ SS (Schutzstaffel) ಎಂಬವುಗಳಿಂದ ಅಲಂಕರಿಸಲ್ಪಟ್ಟಿತ್ತು. ಅವರು ನೂರಾರು ಕೈದಿಗಳನ್ನು ಜಮಾಯಿಸಿದರು, ಮತ್ತು ನಾವು ಕೋಂಪ್ಯಾನ್ ಸೇಶ್ಟನ್ನಿಗೆ ನಡೆದು ಹೋಗಬೇಕಿತ್ತು. ರೈಲ್ವೇ ಬಂಡಿಗಳಿಗೆ ಅಕ್ಷರಶಃ ಒದ್ದು ನಮ್ಮನ್ನು ಒಳಗೆ ಹಾಕಿದರು. ನನ್ನ ರೈಲ್ವೇ ಬಂಡಿಯೊಂದರಲ್ಲಿಯೇ 125 ಕೈದಿಗಳಿದ್ದರು. ಮೂರು ದಿನಗಳು ಮತ್ತು ಎರಡು ರಾತ್ರಿಗಳಲ್ಲಿ ನಮಗೆ ತಿನ್ನಲಿಕ್ಕಾಗಲಿ ಯಾ ಕುಡಿಯಲಿಕ್ಕಾಗಲಿ ಏನೂ ಇರಲಿಲ್ಲ. ಈಗಾಗಲೇ ನಿರ್ಬಲರಾಗಿದವ್ದರು ಕೆಲವೇ ತಾಸುಗಳಲ್ಲಿ ಆಗಲೇ ಮೂರ್ಛೆಹೊಂದಿದ್ದರು, ಮತ್ತು ತುಳಿಯಲ್ಪಟ್ಟಿದ್ದರು. ಎರಡು ದಿನಗಳ ನಂತರ ನಾವು ಜರ್ಮನಿಯ ಒಳಪ್ರದೇಶದಲ್ಲಿರುವ ವೀಮಾರ್ ಹತ್ತಿರದ ಬೂಕನ್ವೊಲ್ಡ್ಗೆ ಆಗಮಿಸಿದೆವು.
ಸೋಂಕುನಿವಾರಣೆಯ ಮತ್ತು ನನ್ನ ತಲೆಯನ್ನು ಬೋಳಿಸಿದ ನಂತರ, ನನಗೆ ಒಂದು ದಾಖಲಾತಿ ನಂಬ್ರ 41,101 ಕೊಡಲ್ಪಟ್ಟಿತು ಮತ್ತು “ಕಾಮ್ಯೂನಿಸ್ಟ್ ಭಯಗ್ರಸ್ತವಾದಿ” ಎಂದು ವರ್ಗೀಕರಿಸಲಾಯಿತು. ಸೋಂಕು ನಿವಾರಣೆಯ ಸಮಯದಲ್ಲಿ, ನಾನೊಬ್ಬ ಡೊಮಿನಿಕನ್ ಪಾದ್ರಿ ಮೈಕಲ್ ರೀಕ ಎಂಬವರನ್ನು ಭೇಟಿಯಾದೆನು, ಇವನು ಯುದ್ಧದ ನಂತರ ಪ್ಯಾರಿಸ್ನ ನೊಟ್ರೆ ಡಾಮ್ ಕಥೀಡ್ರಲ್ನಲ್ಲಿ ಅವನ ಪ್ರಸಂಗಗಳಿಗಾಗಿ ಪ್ರಖ್ಯಾತನಾದನು. ನನ್ನ ವಯಸ್ಸಿನ ಇತರ ಯುವಕರೊಂದಿಗೆ ನಾನು ಅವನಿಗೆ, ಇಂತಹ ಭಯಂಕರತೆಗಳನ್ನು ದೇವರು ಯಾಕೆ ಅನುಮತಿಸಿದ್ದಾನೆ ಎಂದು ಕೇಳಿದೆ. ಅವನು ಉತ್ತರಿಸಿದ್ದು: “ಪರಲೋಕಕ್ಕೆ ಹೋಗಲು ಅರ್ಹನಾಗಬೇಕಾದರೆ ನೀವು ಬಹಳಷ್ಟು ಸಂಕಟಗಳನ್ನು ದಾಟಿ ಹೋಗಬೇಕು.”
ಪ್ರತಿದಿನದ ಜೀವಿತ
ಎಲ್ಲಾ 61 ಬ್ಲಾಕುಗಳ ನಿವಾಸಿಗಳು ಬೆಳಿಗ್ಗೆ ನಾಲ್ಕೂವರೆ ಗಂಟೆಗೆ ಏಳಬೇಕಿತ್ತು. ಸೊಂಟದ ತನಕ ನಮ್ಮ ಬಟ್ಟೆಗೆಳನ್ನು ಕಳಚುತ್ತಾ ಹೊರಬರುತ್ತಿದ್ದೆವು ಮತ್ತು ಕೆಲವೊಮ್ಮೆ ತೊಳೆದು ಕೊಳ್ಳಲಿಕ್ಕಾಗಿ ಮಂಜುಗಡ್ಡೆಯನ್ನು ಒಡೆಯಬೇಕಿತ್ತು. ಒಳ್ಳೆಯ ಆರೋಗ್ಯದಲ್ಲಿರಲಿ ಯಾ ಇಲ್ಲದಿರಲಿ, ಪ್ರತಿಯೊಬ್ಬನು ಇದನ್ನು ಪರಿಪಾಲಿಸಬೇಕಿತ್ತು. ಅನಂತರ ಬ್ರೆಡ್ ವಿತರಣೆ ಆಗುತ್ತಿತ್ತು—ಪ್ರತಿದಿನ 200 ರಿಂದ 300 ಗ್ರಾಮ್ಸ್ನ ರುಚಿಯಿಲ್ಲದ ಬ್ರೆಡ್ಗೆ ಕೃತಕಬೆಣ್ಣೆಯ ಲೇಪ ಮತ್ತು ಜಾಮ್ನಂತೆ ತೋರುವ ಏನನ್ನೋ ಹಚ್ಚಲಾಗುತ್ತಿತ್ತು. ಬೆಳಿಗ್ಗೆ 5:30 ಗಂಟೆಗೆ ಪ್ರತಿಯೊಬ್ಬರನ್ನು ಹಾಜರಿ ಕೂಗುವಿಕೆಗಾಗಿ ಜಮಾಯಿಸಲಾಗುತ್ತಿತ್ತು. ರಾತ್ರಿ ಸಮಯದಲ್ಲಿ ಸತ್ತವರನ್ನು ನಮ್ಮ ಬೆನ್ನ ಮೇಲೆ ಹಾಕಿ ಕೊಂಡೊಯ್ಯುವದು ಎಂಥ ಒಂದು ಭಯಂಕರ ಅನುಭವ! ಹೆಣಗಳನ್ನು ಸುಡುತ್ತಿರುವಾಗ ಹೊರಡುವ ಹೊಗೆಯ ಕಾರ್ಷಕ ವಾಸನೆಯು ನಮ್ಮ ಸಂಗಾತಿಗಳನ್ನು ನೆನಪಿಗೆ ತರುತ್ತಿತ್ತು. ಹೇವರಿಕೆಯ, ನಿರಾಶೆಯ, ಮತ್ತು ದ್ವೇಷದ ಭಾವನೆಗಳಿಗೆ ನಾವು ತೀರಾ ಅಧೀನರಾದೆವು, ಹೇಗಂದರೆ ನಾವು ಕೂಡ ಒಂದು ದಿನ ಅದೇ ರೀತಿಯಲ್ಲಿ ಅಂತ್ಯಕೊಳ್ಳಬಹುದೆಂದು ನಮಗೆ ತಿಳಿದಿತ್ತು.
ಬೌ II ಕೊಮ್ಯಾಂಡೊದಲ್ಲಿ ನನ್ನ ಕೆಲಸವು ಯಾವುದೇ ಉದ್ದೇಶವಿಲ್ಲದೆ ಹೊಂಡಗಳನ್ನು ತೋಡುವದಾಗಿತ್ತು. ಎರಡು ಮೀಟರುಗಳಷ್ಟು ಆಳವಾಗಿ ಹೊಂಡವನ್ನು ತೋಡಿದ ನಂತರ, ಅದನ್ನು ಜಾಗ್ರತೆಯಿಂದ ಪುನಃ ತುಂಬಿಸಬೇಕಿತ್ತು. ಕೆಲಸವು ಬೆಳಿಗ್ಗೆ 6:00 ಗಂಟೆಗೆ ಆರಂಭಗೊಂಡು, ಮಧ್ಯಾಹ್ನ ಅರ್ಧಗಂಟೆಯ ವಿರಾಮವಿದ್ದು, ಅನಂತರ ಸಾಯಂಕಾಲ 7:00 ಗಂಟೆಯ ತನಕ ಮುಂದರಿಯುತ್ತಿತ್ತು. ಸಾಯಂಕಾಲದ ಹಾಜರಿ ಕೂಗುವದು ಕೊನೆಗೊಳ್ಳುವದಿಲ್ಲವೋ ಎಂದು ತೋರುತ್ತಿತ್ತು. ರಶ್ಯನ್ ಭಾಗದಲ್ಲಿ ಜರ್ಮನ್ ಸೈನಿಕರು ಅಧಿಕವಾಗಿ ನಷ್ಟಹೊಂದಿದಾಗ, ಅದು ಕೆಲವೊಮ್ಮೆ ಮಧ್ಯರಾತ್ರಿಯ ತನಕ ಮುಂದರಿಯುತ್ತಿತ್ತು.
ಒಂದು ಭಿನ್ನವಾದ ಗುಂಪು
ಶಿಬಿರದಿಂದ ಪಲಾಯನ ಮಾಡಲು ಯಾರಾದರೂ ಪ್ರಯತ್ನಿಸಿದರೆ, ಅವನನ್ನು ಸುಲಭವಾಗಿ ಕಂಡುಕೊಳ್ಳಬಹುದಿತ್ತು. ಯಾಕಂದರೆ ನಮ್ಮೆಲ್ಲರಿಗೆ ಸಮತೆಯಿಲ್ಲದ ಕೂದಲಿನ ಸ್ಟೈಲ್ ಇತ್ತು. ನಮ್ಮ ಕೂದಲುಗಳನ್ನು ಒಂದು ಸಾಲಿನಂತೆ ಕತ್ತರಿಸಲಾಗುತ್ತಿತ್ತು ಯಾ ಮಧ್ಯದಲ್ಲಿ ಯಾ ಪಕ್ಕಗಳಲ್ಲಿ ಅತಿ ಗಿಡ್ಡವಾಗಿ ಕತ್ತರಿಸಲಾಗುತ್ತಿತ್ತು. ಆದರೂ ಕೆಲವು ಕೈದಿಗಳಿಗೆ ಸಾಮಾನ್ಯವಾದ ಕೂದಲಿನ ಸ್ಟೈಲ್ ಇತ್ತು. ಅವರು ಯಾರು? ನಮ್ಮ ಆತುರತೆಯನ್ನು ನಮ್ಮ ಬ್ಲಾಕಿನ ಮುಖ್ಯಸ್ಥನು ತೃಪ್ತಿಗೊಳಿಸಿದನು. “ಅವರು ಬೀಬಲ್ಫೊರ್ಶರ್ (ವೇದವಿದ್ಯಾರ್ಥಿಗಳು),” ಅಂದನು ಅವನು. “ಆದರೆ ವೇದ ವಿದ್ಯಾರ್ಥಿಗಳು ಕೂಟಶಿಬಿರದಲ್ಲಿ ಏನು ಮಾಡುತ್ತಿದ್ದಾರೆ?” ಎಂದು ನಾನು ಅಚ್ಚರಿಪಟ್ಟೆ. “ಅವರು ಇಲ್ಲಿದ್ದಾರೆ ಯಾಕಂದರೆ ಅವರು ಯೆಹೋವನನ್ನು ಆರಾಧಿಸುತ್ತಾರೆ,” ಎಂದು ನನಗೆ ತಿಳಿಸಲಾಯಿತು. ಯೆಹೋವ! ನಾನು ದೇವರ ಹೆಸರನ್ನು ಮೊದಲ ಬಾರಿ ಕೇಳುವದಾಗಿತ್ತು.
ವೇದ ವಿದ್ಯಾರ್ಥಿಗಳ ಕುರಿತಾಗಿ ನಾನು ಕಟ್ಟಕಡೆಗೆ ಸ್ವಲ್ಪ ಹೆಚ್ಚನ್ನು ತಿಳಿಯಲು ಶಕ್ತನಾದೆನು. ಅವರಲ್ಲಿ ಹೆಚ್ಚಿನವರು ಜರ್ಮನರಾಗಿದ್ದರು. ಅವರಲ್ಲಿ ಕೆಲವರು ಕೂಟಶಿಬಿರದಲ್ಲಿ 1930 ರುಗಳ ಮಧ್ಯಭಾಗದಿಂದ ಇದ್ದರು, ಯಾಕಂದರೆ ಅವರು ಹಿಟ್ಲರ್ನಿಗೆ ವಿಧೇಯರಾಗಲು ನಿರಾಕರಿಸಿದರು. ಅವರು ಸ್ವತಂತ್ರರಾಗಿ ಹೋಗಬಹುದಿತ್ತು, ಆದರೆ ಅವರು ಶರಣಾಗತರಾಗಲು ನಿರಾಕರಿಸಿದರು. SS ಸೈನಿಕರು ಅವರನ್ನು ಅವರ ವೈಯಕ್ತಿಕ ಕ್ಷೌರಿಕರನ್ನಾಗಿ ಇಟ್ಟಿದ್ದರು ಮತ್ತು ಅವರನ್ನು ಭರವಸಲರ್ಹವಾದ ಕಾರ್ಮಿಕರೋಪಾದಿ, ಆಡಳಿತದ ಹುದ್ದೆಗಳಲ್ಲಿ ಅವರಿಗೆ ವಿಶೇಷ ಕೆಲಸಗಳನ್ನು ಕೊಡುತ್ತಿದ್ದರು. ಅವರ ಶಾಂತತೆ, ಪೂರ್ಣವಾಗಿ ದ್ವೇಷವು ಇಲ್ಲದಿರುವದು, ಯಾ ಪ್ರತಿಭಟನೆಯ ಮತ್ತು ಪ್ರತೀಕಾರದ ಆತ್ಮವಿಲ್ಲದಿರುವದು, ನಮಗೆ ಕುತೂಹಲದ್ದಾಗಿತ್ತು. ನನಗೆ ಅದು ಅರ್ಥವಾಗುತ್ತಿರಲಿಲ್ಲ. ದೌರ್ಭಾಗ್ಯವೇನಂದರೆ ಅವರೊಡನೆ ಆ ಸಮಯದಲ್ಲಿ ಸಂಭಾಷಿಸಲು ನನಗೆ ಅಷ್ಟು ಜರ್ಮನ್ ಭಾಷೆ ಬರುತ್ತಿರಲಿಲ್ಲ.
ಮರಣದ ಟ್ರೈನ್
ಒಕ್ಕೂಟದ ದೇಶಗಳು ಮುಂದರಿದಂತೆ, ಕೈದಿಗಳನ್ನು ಇನ್ನಷ್ಟು ಒಳಪ್ರದೇಶದ ಶಿಬಿರಗಳಿಗೆ ಕಳುಹಿಸಲಾಯಿತು, ಆದರೆ ಇದು ಭಯಂಕರವಾಗಿ ಹೆಚ್ಚು ಜನರಿಂದ ತುಂಬಿಕೊಂಡಿತ್ತು. ಏಪ್ರಿಲ್ 6, 1945 ರ ಬೆಳಿಗ್ಗೆ, SS ಸೈನಿಕರು ನಮ್ಮಲ್ಲಿ 5,000 ಮಂದಿಯನ್ನು ತಕ್ಕೊಂಡು 9 ಕಿಲೊಮೀಟರುಗಳಷ್ಟು ದೂರದ ನಡಗೆಯನ್ನು ವೀಮಾರ್ಗೆ ರಸ್ತೆಯಲ್ಲಿ ಮಾಡುವಂತೆ ಬಲಾತ್ಕರಿಸಿದರು. ಯಾರು ಈ ವೇಗದಲ್ಲಿ ನಡೆಯಲು ಅಶಕ್ಯರಾಗಿದ್ದರೋ, ಅವರನ್ನು ಕೊರಳಲ್ಲಿ ಗುಂಡಿಕ್ಕಿ ನಿರ್ದಯವಾಗಿ ಕೊಲಲ್ಲಾಯಿತು. ಕೊನೆಗೂ ನಾವು ವೀಮಾರ್ ಸೇಶ್ಟನ್ಗೆ ತಲುಪಿದಾಗ, ನಾವು ತೆರೆದ ಬಂಡಿಗಳಲ್ಲಿ ಹತ್ತಿದೆವು ಮತ್ತು ಟ್ರೈನ್ ಹೊರಟಿತು. 20 ದಿನಗಳ ತನಕ ಜರ್ಮನಿಯನ್ನು ದಾಟಿ ಒಂದು ರೈಲ್ವೇ ಸೇಶ್ಟನ್ನಿಂದ ಇನ್ನೊಂದಕ್ಕೆ ತೆರಳುತ್ತಾ ಹೋಯಿತು ಮತ್ತು ಅನಂತರ ಚೆಕೊಸ್ಲೊವಾಕಿಯಕ್ಕೆ ಹೋಯಿತು.
ಒಂದು ಬೆಳಿಗ್ಗೆ, ನಮ್ಮ ಟ್ರೈನ್ನ ಒಂದು ಭಾಗವನ್ನು ಕವಲುದಾರಿಗೆ ಕೊಂಡೊಯ್ಯಲಾಯಿತು. ಸೈನಿಕರು ಮಶೀನ್ ಗನ್ಗಳನ್ನು ಬಿಚ್ಚಿ, ಒಂದು ಟ್ರೈನ್ನ ಬಂಡಿಯನ್ನು ತೆರೆದು, ಅದರೊಳಗಿದ್ದ ಎಲ್ಲಾ ರಶ್ಯನ್ ಕೈದಿಗಳನ್ನು ಹತಿಸಿದರು. ಕಾರಣ? ಒಂದು ಡಜನ್ನಷ್ಟು ಕೈದಿಗಳು ಅವರ ಸೈನಿಕರನ್ನು ಕೊಂದು, ರಾತ್ರಿಯಲ್ಲಿ ಪರಾರಿಯಾಗಿದ್ದರು. ಇಂದು ಕೂಡ ಬಂಡಿಯಿಂದ ರೈಲು ಪಟ್ಟೆಗಳ ಮೇಲೆ ರಕ್ತವು ಸುರಿಯುವದನ್ನು ನಾನು ಕಾಣಬಲ್ಲೆನು.
ಕೊನೆಗೆ, ಡಕೌವ್ಗೆ ಟ್ರೈನ್ ಆಗಮಿಸಿತು, ಇಲ್ಲಿ ಎರಡು ದಿನಗಳ ನಂತರ ಅಮೆರಿಕನ್ ಸೇನೆಯು ನಮ್ಮನ್ನು ಬಿಡುಗಡೆಗೊಳಿಸಿತು. 20 ದಿನಗಳ ಈ ಪ್ರಯಾಣದಲ್ಲಿ, ನಮ್ಮ ಪೋಷಣೆಗೆ ಕೆಲವು ಹಸಿಯಾದ ಬಟಾಟೆಗಳು ಮತ್ತು ಸ್ವಲ್ಪ ನೀರು ಇತ್ತು. ನಾವು ಆರಂಭಿಸಿದಾಗ 5,000 ಮಂದಿ ಇದ್ದರು, ಆದರೆ ಕೇವಲ 800 ಮಂದಿ ಪಾರಾಗಿ ಉಳಿದರು. ಇತರ ಅನೇಕರು ಕೆಲವು ದಿನಗಳ ನಂತರ ಸತ್ತರು. ನಾನಾದರೋ, ಪ್ರಯಾಣದ ಹೆಚ್ಚಿನ ಭಾಗವನ್ನು ಒಂದು ಶವದ ಮೇಲೆ ಕುಳಿತುಕೊಂಡು ಕಳೆದೆನು.
ಒಂದು ಹೊಸ ಹೆಜ್ಜೆ
ಬಿಡುಗಡೆಯ ನಂತರ, ಫ್ರೆಂಚ್ ಕಾಮ್ಯೂನಿಸ್ಟ್ ಪಾರ್ಟಿಗೆ ಸಕ್ರಿಯವಾಗಿ ಬೆಂಬಲಿಸುವದೇ ಹೊರತು ಬೇರೆ ಯಾವುದೂ ಸ್ವಾಭಾವಿಕವಾಗಿರಲಿಲ್ಲ, ಯಾಕಂದರೆ ನಾನು ಬೂಕನ್ವೊಲ್ಡ್ನಲ್ಲಿ ಅದರ ಅನೇಕ ಸದಸ್ಯರುಗಳೊಂದಿಗೆ—ಅವರಲ್ಲಿ ಪ್ರಮುಖರಾಗಿದವ್ದರ ಸಹಿತ—ಒತ್ತಾಗಿ ಸಹವಸಿಸುತ್ತಿದ್ದೆನು. ಗ್ರೆನೊಬಲ್ನಲ್ಲಿ ನಾನು ಸಹಾಯಕ ಸೆಲ್ ಸೆಕ್ರಿಟರಿಯಾದೆನು ಮತ್ತು ಪ್ಯಾರಿಸ್ನಲ್ಲಿ ಕಾರ್ಯನಿರ್ವಾಹಕರಿಗಾಗಿ ಇದ್ದ ತರಬೇತಿಯಲ್ಲಿ ಸೇರುವಂತೆ ಉತ್ತೇಜಿಸಲ್ಪಟ್ಟೆನು.
ಆದಾಗ್ಯೂ, ನನಗೆ ಬಲುಬೇಗನೆ ನಿರಾಶೆಯುಂಟಾಯಿತು. ನೊವೆಂಬರ್ 11, 1945 ರಲ್ಲಿ ಪ್ಯಾರಿಸಿನ ಒಂದು ಪಥಪ್ರದರ್ಶನದಲ್ಲಿ ಪಾಲಿಗರಾಗಲು ನಮ್ಮನ್ನು ಆಮಂತ್ರಿಸಲಾಯಿತು. ನಮ್ಮ ವಸತಿಗಾಗಿ ನಮ್ಮ ಗುಂಪಿನ ಕಾಮರಾಡ್ ಒಂದಿಷ್ಟು ಹಣವನ್ನು ಪಡೆದನು, ಆದರೆ ಅವನು ನಮ್ಮ ಪರವಾಗಿ ಬಳಸಲು ಇಚ್ಛೆವುಳ್ಳವನಂತೆ ತೋರಿಬರಲಿಲ್ಲ. ನಮ್ಮನ್ನು ಐಕ್ಯಗೊಳಿಸುತ್ತದೆಂದು ಕಾಣುವ ಪ್ರಾಮಾಣಿಕತೆ ಮತ್ತು ಸ್ನೇಹತನದ ಸೂತ್ರಗಳನ್ನು ನಾವು ಅವನಿಗೆ ತಿಳಿಸಬೇಕಾದ ಹಂಗಿಗೆ ಬಿದ್ದೆವು. ನಾನು ತಿಳಿದಂಥ ಅನೇಕ ಪ್ರಮುಖ ಪುರುಷರ ಹತ್ತಿರ ಲೋಕದ ಸಮಸ್ಯೆಗಳಿಗೆ ಪರಿಹಾರವೊಂದು ಇರಲೇ ಇಲ್ಲ ಎಂದು ಕೂಡ ನಾನು ತಿಳಿದುಕೊಂಡೆನು. ಇನ್ನು ಹೆಚ್ಚಾಗಿ, ಅವರಲ್ಲಿ ಅಧಿಕಾಂಶ ಜನರು ನಾಸ್ತಿಕರಾಗಿದ್ದರು, ಮತ್ತು ನಾನು ದೇವರನ್ನು ನಂಬುತ್ತಿದ್ದೆನು.
ಅನಂತರ ನಾನು ಲಿಯೊನ್ಸ್ಗೆ ಹೋದೆನು, ಅಲ್ಲಿ ಕರಡುಪ್ರತಿ ತಯಾರಕನೋಪಾದಿ ಕೆಲಸವನ್ನು ಮುಂದರಿಸಿದೆನು. ಇಬ್ಬರು ಯೆಹೋವನ ಸಾಕ್ಷಿಗಳು ನನಗೆ 1954 ರಲ್ಲಿ ಭೇಟಿಯಾದರು, ಮತ್ತು ನಾನು ಎಚ್ಚರ! ಪತ್ರಿಕೆಗೆ ಚಂದಾ ಮಾಡಿದೆನು. ಎರಡು ದಿನಗಳ ನಂತರ, ನನ್ನ ಬಾಗಲನ್ನು ತಟ್ಟಿದ ಹೆಂಗಸರಲ್ಲಿ ಒಬ್ಬಳು ಒಬ್ಬ ಪುರುಷನೊಂದಿಗೆ ನನ್ನನ್ನು ಸಂದರ್ಶಿಸಲು ಬಂದರು. ನನ್ನ ಹೆಂಡತಿ ಮತ್ತು ನಾನು ಒಮ್ಮೆಲೇ ಆತ್ಮಿಕ ವಿಷಯಗಳಲ್ಲಿ ನಾವಿಬ್ಬರೂ ಆಸಕ್ತರಾಗಿದ್ದೇವೆ ಎಂಬ ತಿಳಿವಳಿಕೆ ಬಂತು.
ಅನಂತರ ಹಿಂಬಾಲಿಸಿದ ಚರ್ಚೆಯಲ್ಲಿ, ಬೂಕನ್ವೊಲ್ಡ್ನಲ್ಲಿ ಅವರ ನಂಬಿಕೆಗೆ ನಿಷ್ಠರಾಗಿದ್ದ ಬೀಬಲ್ಫೊರ್ಶರ್ ರನ್ನು ನಾನು ನೆನಪಿಸಿದೆ. ಬೀಬಲ್ಫೊರ್ಶರ್ ಮತ್ತು ಯೆಹೋವನ ಸಾಕ್ಷಿಗಳು ಒಂದೇ ಮತ್ತು ಅದೇ ಜನರಾಗಿದ್ದಾರೆ ಎಂದು ಆಗಲೇ ನನಗೆ ತಿಳಿದು ಬಂತು. ಬೈಬಲ್ ಅಧ್ಯಯನದ ಫಲವಾಗಿ ಉಪಕಾರಗಳು, ನನ್ನ ಹೆಂಡತಿ ಮತ್ತು ನಾನು ಯೆಹೋವನ ಪರವಾಗಿ ನಮ್ಮ ನಿಲುವನ್ನು ತಕ್ಕೊಂಡೆವು ಮತ್ತು 1955 ಏಪ್ರಿಲ್ನಲ್ಲಿ ದೀಕ್ಷಾಸ್ನಾನ ಪಡೆದೆವು.
ನಿನ್ನೆಯೇ ಎಲ್ಲಾ ಸಂಗತಿಗಳು ಜರುಗಿದವೋ ಎಂಬಂತೆ ನನ್ನ ನೆನಪುಗಳು ಹೊಚ್ಚಹೊಸತಾಗಿ ಇವೆ. ನನ್ನ ಗತಕಾಲದ ಕಠಿಣ ಪರೀಕೆಗ್ಷಳಿಗಾಗಿ ನಾನೇನೂ ವಿಷಾಧಪಡುತ್ತಿಲ್ಲ. ಅವು ನನ್ನನ್ನು ಬಲಗೊಳಿಸಿವೆ ಮತ್ತು ಈ ಲೋಕದ ಸರಕಾರಗಳ ಹತ್ತಿರ ನೀಡಲು ಇರುವದು ಕೊಂಚವೆ ಎಂದು ನೋಡಲು ನನಗೆ ಸಹಾಯಮಾಡಿವೆ. ವೈಯಕ್ತಿಕ ಅನುಭವಗಳು ಕೆಲವು ನಿರ್ದಿಷ್ಟ ಮಟ್ಟದ ತನಕ ಇತರರಿಗೆ ಸಹಾಯಮಾಡಲು ಸಾಧ್ಯವಿರುವದಾದರೂ, ನನ್ನದು ಈ ಲೋಕದ ಕಪಟತನವನ್ನು ಎಳೆಯರಿಗೆ ನೋಡಲು ಸಹಾಯಮಾಡುವದಾದರೆ ಮತ್ತು ಅದರ ಫಲಿತಾಂಶವಾಗಿ ಯೇಸುವಿನಿಂದ ಕಲಿಸಲ್ಪಟ್ಟ ನಿಜ ಕ್ರೈಸ್ತತ್ವದ ಒಳ್ಳೆಯ, ಉಚ್ಛಮಟ್ಟದ ಮೌಲ್ಯಗಳನ್ನು ಹುಡುಕುವದಾದರೆ ನಾನು ಸಂತೋಷಿಯಾಗುವೆನು.
ಇಂದು, ಬಾಧೆಪಡುವಿಕೆ ಮತ್ತು ಅನ್ಯಾಯವು ದೈನಂದಿನ ಜೀವಿತದ ಒಂದು ಭಾಗವಾಗಿರುತ್ತದೆ. ಕೂಟಶಿಬಿರದಲ್ಲಿದ್ದ ಬೀಬಲ್ಫೊರ್ಶರ್ ರಂತೆ, ನಾನು ಕೂಡ ಒಂದು ಉತ್ತಮ ಲೋಕವು ಬರಲಿರುವದನ್ನು ಮುನ್ನೋಡುತ್ತಿದ್ದೇನೆ, ಅಲ್ಲಿ ಬಲಾತ್ಕಾರ ಮತ್ತು ಉನ್ಮತ್ತಾಭಿಮಾನದ ಆದರ್ಶವಾದದ ಬದಲಿಗೆ ಸಹೋದರ ಪ್ರೀತಿ ಮತ್ತು ನ್ಯಾಯ ಇರುವುದು. ತನ್ಮಧ್ಯೆ ನನಗೆ ದೇವರನ್ನು ಮತ್ತು ಕ್ರಿಸ್ತನನ್ನು, ನನ್ನ ಹೆಂಡತಿ, ಮಕ್ಕಳು, ಮತ್ತು ಮೊಮ್ಮಕ್ಕಳೊಂದಿಗೆ ಕ್ರೈಸ್ತ ಸಭೆಯಲ್ಲಿ ಹಿರಿಯನೋಪಾದಿ ಸಾಧ್ಯವಿದ್ದಷ್ಟು ಸೇವಿಸಲು ಪ್ರಯತ್ನಿಸುತ್ತಾ ಇದ್ದೇನೆ. (ಕೀರ್ತನೆ 112:7, 8)—ರೆನೆ ಸೇಗ್ಲಾ ರಿಂದ ಹೇಳಲ್ಪಟ್ಟದ್ದು.
[ಪುಟ 28 ರಲ್ಲಿರುವ ಚಿತ್ರಗಳು]
ಮೇಲೆ: ಶಿಬಿರದಲ್ಲಿ ಹಾಜರಿಕರೆಯುವಿಕೆ
ಎಡ: ಬೂಕನ್ವೊಲ್ಡ್ನ ಪ್ರವೇಶ ದ್ವಾರ. ಅಲ್ಲಿಯ ಶಿಲಾಶಾಸನ ಓದುವದು: “ಪ್ರತಿಯೊಬ್ಬನಿಗೆ ಯಾವುದು ತಕ್ಕದ್ದೂ ಅದು”
[ಪುಟ 29 ರಲ್ಲಿರುವ ಚಿತ್ರಗಳು]
ಮೇಲೆ: ಬೂಕನ್ವೊಲ್ಡ್ನಲ್ಲಿ ಶವ ಚಿತಾಗಾರ
ಎಡ: ಪ್ರತಿಯೊಂದು ಪಂಕ್ತಿಗೆ 16 ಕೈದಿಗಳು