ಯೆಹೋವನ ಸೇವೆಯಲ್ಲಿ ಒಂದು ಸಮೃದ್ಧ, ಪ್ರತಿಫಲದಾಯಕ ಜೀವನ
ಲಿಯೋ ಕಾಲ್ಯೊ ಹೇಳಿದಂತೆ
ಅದು ಇಸವಿ 1914 ಆಗಿತ್ತು, ಮತ್ತು ಫಿನ್ಲೆಂಡಿನಲ್ಲಿ ಒಂದು ನಗರವಾಗಿದ್ದ ಟುರ್ಕು ಎಂಬ ನಮ್ಮ ಉಪನಗರದಲ್ಲಿ, ಬೇಸಿಗೆಯ ಕೊನೆಯ ಭಾಗದ ಸುಂದರವಾದೊಂದು ದಿನವು ಕೊನೆಗೊಳ್ಳುತ್ತಿತ್ತು. ಇದ್ದಕ್ಕಿದ್ದಹಾಗೆ, ಸ್ಫೋಟಗೊಂಡಿದ್ದ ಒಂದು ಮಹಾ ಯುದ್ಧದ ವಾರ್ತೆಗಳಿಂದ ಪ್ರಶಾಂತತೆಯು ಭಗ್ನಗೊಂಡಿತು. ಕೂಡಲೇ ಬೀದಿಗಳು ಘಟನೆಗಳ ಅರ್ಥವನ್ನು ಪರ್ಯಾಲೋಚಿಸುವವರಿಂದ ತುಂಬಿದವು. ವಯಸ್ಕರ ಗಂಭೀರ ಮುಖಗಳು, ಏನು ಸಂಭವಿಸಲಿರುವುದೆಂಬುದರ ಕುರಿತು ಮಕ್ಕಳಾದ ನಾವು ಆಶ್ಚರ್ಯಗೊಳ್ಳುವಂತೆ ಮಾಡಿದವು. ನಾನು ಒಂಬತ್ತು ವರ್ಷ ಪ್ರಾಯದವನಾಗಿದ್ದೆ, ಮತ್ತು ಮಕ್ಕಳ ಶಾಂತಿಭರಿತ ಆಟವು ಯುದ್ಧದ ಕ್ರೀಡೆಗಳಾಗಿ ಪರಿವರ್ತಿಸಿದವೆಂದು ನಾನು ಜ್ಞಾಪಿಸಿಕೊಳ್ಳುತ್ತೇನೆ.
ಫಿನ್ಲೆಂಡ್ ಒಂದನೆಯ ಲೋಕ ಯುದ್ಧ (1914-18)ದ ಹೊರಗೆ ಇತ್ತಾದರೂ, 1918 ರಲ್ಲಿ ನಡೆದ ಅಂತರ್ಯುದ್ಧದ ಮೂಲಕ ದೇಶವು ಧ್ವಂಸಮಾಡಲ್ಪಟ್ಟಿತ್ತು. ಭಿನ್ನವಾದ ರಾಜಕೀಯ ದೃಷ್ಟಿಕೋನಗಳ ಕಾರಣದಿಂದ ಸಂಬಂಧಿಕರು ಮತ್ತು ಮಾಜಿ ಮಿತ್ರರು, ಒಬ್ಬರು ಇನ್ನೊಬ್ಬರ ವಿರುದ್ಧವಾಗಿ ಆಯುಧಗಳನ್ನು ಎತ್ತಿಕೊಂಡರು. ಏಳು ಜನರಿದ್ದ ನಮ್ಮ ಕುಟುಂಬವು ಈ ದ್ವೇಷವನ್ನು ಅನುಭವಿಸಿತು. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ನೇರವಾಗಿದ್ದ ನನ್ನ ತಂದೆಯು, ದಸ್ತಗಿರಿಮಾಡಲ್ಪಟ್ಟು ಏಳು ವರ್ಷಗಳ ಸೆರೆಮನೆಯ ಶಿಕ್ಷೆಗೊಳಗಾದರು. ತದನಂತರ ಅವರನ್ನು ಬಿಡುಗಡೆ ಮಾಡಲಾಯಿತು, ಆದರೆ ಅಷ್ಟರೊಳಗಾಗಿ ಅವರ ಆರೋಗ್ಯವು ಹಾಳಾಗಿತ್ತು.
ಭಯಂಕರವಾದ ಈ ಅವಧಿಯಲ್ಲಿ ನಮ್ಮ ಕುಟುಂಬವು ಹಸಿವೆ ಮತ್ತು ಅನಾರೋಗ್ಯದಿಂದ ಕಷ್ಟಾನುಭವಿಸಿತು. ನನ್ನ ಕಿರಿಯ ಸಹೋದರಿಯರಲ್ಲಿ ಮೂವರು ತೀರಿಹೋದರು. ಟ್ಯಾಂಪರೆ ನಗರದಲ್ಲಿ ಜೀವಿಸುತ್ತಿದ್ದ ನನ್ನ ತಂದೆಯ ಅಣ್ಣ, ನಮ್ಮ ಸಂಕಟದ ವಿಷಯವಾಗಿ ಕೇಳಿದರು ಮತ್ತು ನನ್ನ ತಂದೆ ಹಾಗೂ ತಾಯಿ ಮತ್ತು ಉಳಿದಿರುವ ಇಬ್ಬರು ಮಕ್ಕಳಾದ ನಮ್ಮನ್ನು ಅವರೊಂದಿಗೆ ತಂಗಲು ಆಮಂತ್ರಿಸಿದರು.
ವರ್ಷಗಳಾನಂತರ, ಇನ್ನು ಟ್ಯಾಂಪರೆಯಲ್ಲಿಯೇ ಜೀವಿಸುತ್ತಿದಾಗ, ಸಿಲ್ವಿ ಎಂಬ ಹೆಸರಿನ ಒಬ್ಬಾಕೆ ಮನಮೋಹಿಸುವ ಹುಡುಗಿಯನ್ನು ನಾನು ಸಂಧಿಸಿದೆ. ನನ್ನ ಹಿನ್ನೆಲೆಗೆ ಸಮನಾದ ಹಿನ್ನೆಲೆ ಆಕೆಗಿತ್ತು. ಆಕೆಯ ತಂದೆ ಅಂತರ್ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದರು, ಮತ್ತು ತದನಂತರ ಪೋರಿ ಊರಿನ ಆಕೆಯ ಕುಟುಂಬದ ಒಬ್ಬ ಹತ್ತಿರದ ಮಿತ್ರರಾದ, ಕಾರ್ಲೊ (ಕಾಲಿ) ವೆಸಾಂಟೊ, ಆಕೆಯನ್ನು, ಆಕೆಯ ಸಹೋದರಿಯನ್ನು, ಮತ್ತು ಆಕೆಯ ತಾಯಿಯನ್ನು ತಮ್ಮ ಮನೆಗೆ ಕರೆಸಿಕೊಂಡರು. ಸಿಲ್ವಿಯ ತಾಯಿಗೆ ಕೆಲಸವೊಂದು ಸಿಗುವಂತೆ ಮತ್ತು ಹುಡುಗಿಯರು ಶಾಲೆಗೆ ಹೋಗುವಂತೆ ಏರ್ಪಾಡುಗಳನ್ನು ಅವರು ಮಾಡಿದರು. ತದನಂತರ ಕೆಲಸವನ್ನು ಪಡೆಯಲು ಸಿಲ್ವಿ ಟ್ಯಾಂಪರೆ ನಗರಕ್ಕೆ ಬಂದಳು, ಮತ್ತು ನಾವು ಸಂಧಿಸಿದ್ದು ಅಲ್ಲಿಯೇ.
ನನ್ನ ಜೀವನವನ್ನು ಬದಲಾಯಿಸಿದ ಒಂದು ಸಂಜೆ
ಇಸವಿ 1928 ರಲ್ಲಿ ಸಿಲ್ವಿ ನನ್ನ ವಧುವಾದಳು, ಮತ್ತು ಒಂದು ದಿನ ನಾವು ಪೋರಿಗೆ, ಕಾಲಿ ವೆಸಾಂಟೊ ಮತ್ತು ಅವರ ಕುಟುಂಬವನ್ನು ಸಂದರ್ಶಿಸಲು ಪ್ರಯಾಣಿಸಿದೆವು. ಬೇರೆ ಯಾವ ಘಟನೆಯೂ ನನ್ನ ಜೀವನವನ್ನು ಇಷ್ಟು ನಿರ್ಣಾಯಕವಾಗಿ ಪ್ರಭಾವಿಸಿರಲಿಲ್ಲ. ಕಾಲಿ, ಕುಕ್ಕುಲೋಟದ ಕುದುರೆಗಳ ಯಜಮಾನರೂ ಜೂಜುಗಾರರೂ ಆಗಿದ್ದರು ಆದರೆ ಆ ವ್ಯಾಪಾರವನ್ನು ಬಿಟ್ಟುಬಿಟ್ಟಿದ್ದರು. ಅವರು ಮತ್ತು ಅವರ ಹೆಂಡತಿಯು ದೇವರ ರಾಜ್ಯದ ಸುವಾರ್ತೆಯ ಹುರುಪುಳ್ಳ ಪ್ರಚಾರಕರಾಗಿದ್ದರು. ಅವರ ಎರಡು ಅಂತಸ್ತಿನ ಮನೆಯ ಹೊರಗಿನ ಒಂದು ಗೋಡೆಯ ಮೇಲೆ, “ಈಗ ಜೀವಿಸುತ್ತಿರುವ ಮಿಲ್ಯಾಂತರ ಜನರು ಎಂದೂ ಸಾಯುವುದಿಲ್ಲ” ಎಂಬ ಶಬ್ದಗಳಿಗೆ ಬಣ್ಣ ಹಚ್ಚಲು ಆಳುಗಳನ್ನು ಹೇಗೆ ಕೂಲಿಗೆ ಇಟ್ಟುಕೊಂಡರೆಂದು 1990 ಯಿಯರ್ಬುಕ್ ಆಫ್ ಜಿಹೋವಸ್ ವಿಟ್ನೆಸಸ್ ವರ್ಣಿಸುತ್ತದೆ. ವಿಷಯವು, ವೇಗವಾಗಿ ಚಲಿಸುವ ರೈಲುಗಳಿಂದಲೂ ಸರಳವಾಗಿ ಓದುವಷ್ಟು ದೊಡ್ಡದಾಗಿತ್ತು.
ಆ ರಾತ್ರಿ ಕಾಲಿ ಮತ್ತು ನಾನು ನಸುಕಿನ ವರೆಗೆ ಮಾತಾಡಿದೆವು. “ಯಾಕೆ? ಯಾಕೆ? ಯಾಕೆ?” ಎಂದು ನಾನು ಕೇಳಿದೆ ಮತ್ತು ಕಾಲಿ ವಿವರಿಸಿದರು. ಅಕ್ಷರಾರ್ಥಕವಾಗಿ ನಾನು ಮೂಲಭೂತ ಬೈಬಲ್ ಸತ್ಯಗಳನ್ನು ಒಂದೇ ರಾತ್ರಿಯಲ್ಲಿ ಕಲಿತೆ. ವಿಭಿನ್ನ ಬೋಧನೆಗಳನ್ನು ವಿವರಿಸಿದ ವಚನಗಳನ್ನು ನಾನು ಬರೆದುಕೊಂಡೆ. ತದನಂತರ, ಮನೆಗೆ ಹಿಂದಿರುಗಿದಾಗ ನಾನು ಟಿಪ್ಪಣಿ ಪುಸ್ತಕವೊಂದನ್ನು ಪಡೆದು ಆ ಎಲ್ಲಾ ವಚನಗಳನ್ನು ಪದಶಃ ಬರೆದುಕೊಂಡೆ. ನಾನು ಬೈಬಲಿಗೆ ಇನ್ನೂ ಅಪರಿಚಿತನಾಗಿದ್ದ ಕಾರಣದಿಂದ, ನಾನು ಕೆಲಸಮಾಡುತ್ತಿದ್ದ ಕಟ್ಟಡ ರಚನೆಯ ಸ್ಥಳದಲ್ಲಿರುವವರಿಗೆ ಸಾಕ್ಷಿನೀಡಲು ಈ ಟಿಪ್ಪಣಿ ಪುಸ್ತಕವನ್ನು ಉಪಯೋಗಿಸಿದೆ. ಸುಳ್ಳು ಧರ್ಮದ ಬೋಧನೆಗಳನ್ನು ನಾನು ಬಯಲು ಮಾಡಿದಂತೆ, “ಸಂಗಾತಿಗಳೆ, ನೀವು ನಿಜವಾಗಿಯೂ ವಂಚಿಸಲ್ಪಟ್ಟಿದ್ದೀರಿ!” ಎಂಬ ಕಾಲಿಯ ಮಾತುಗಳನ್ನು ಅನೇಕ ವೇಳೆ ನಾನೇ ಪುನರುಚ್ಚರಿಸುವುದಾಗಿ ಕಂಡುಕೊಂಡೆ.
ಟ್ಯಾಂಪರೆಯಲ್ಲಿ ಸುಮಾರು 30 ಬೈಬಲ್ ವಿದ್ಯಾರ್ಥಿಗಳು ತಮ್ಮ ಕೂಟಗಳನ್ನು ನಡೆಸುತ್ತಿದ್ದ ಒಂದು ಸಣ್ಣ ಮನೆಯ ವಿಳಾಸವನ್ನು ಕಾಲಿ ನನಗೆ ಕೊಟ್ಟರು. ಆ ಮನೆಯ ಯಜಮಾನನಾದ ಸಹೋದರ ಆ್ಯಂಡರ್ಸನರ ಪಕ್ಕದಲ್ಲಿ, ಬಾಗಿಲಿನ ಹತ್ತಿರ ಒಂದು ಮೂಲೆಯಲ್ಲಿ ನಾನು ಮುದುರಿಕೊಂಡಿರುತ್ತಿದ್ದೆ. ನನ್ನ ಹಾಜರಿಯು ಅಕ್ರಮವಾಗಿತ್ತು, ಆದರೆ ಪ್ರಾರ್ಥನೆಯು ಸಹಾಯಕಾರಿಯಾಗಿ ಪರಿಣಮಿಸಿತು. ಕೆಲಸದಲ್ಲಿ ಗಂಭೀರವಾದ ತೊಂದರೆಗಳಿದ್ದಾಗ, ನಾನು ಒಮ್ಮೆ ಪ್ರಾರ್ಥಿಸಿದ್ದು: “ದೇವರೇ, ದಯವಿಟ್ಟು ಈ ಕಷ್ಟಗಳಿಂದ ಪಾರಾಗಲು ನೀನು ನನಗೆ ಸಹಾಯ ಮಾಡಿದರೆ, ಪ್ರತಿಯೊಂದು ಕೂಟವನ್ನು ಹಾಜರಾಗುವ ವಚನಕೊಡುತ್ತೇನೆ.” ಆದರೆ ವಿಷಯಗಳು ಇನ್ನೂ ಹೆಚ್ಚು ಕೆಟ್ಟವು. ಯೆಹೋವನೊಂದಿಗೆ ಷರತ್ತುಗಳನ್ನು ನಾನು ಇಡುತ್ತಿದ್ದೇನೆಂದು ನಾನು ಆಮೇಲೆ ಗ್ರಹಿಸಿ, ನನ್ನ ಪ್ರಾರ್ಥನೆಯನ್ನು, “ಏನೇ ಆಗಲಿ, ಪ್ರತಿಯೊಂದು ಕೂಟವನ್ನು ಹಾಜರಾಗುವ ವಚನವನ್ನು ನಾನು ಕೊಡುತ್ತೇನೆ” ಎಂದು ಬದಲಾಯಿಸಿದೆ. ಆಗ ನನ್ನ ಆಪತ್ತುಗಳು ಶಮನವಾದವು, ಮತ್ತು ನಾನು ಕೂಟಗಳನ್ನು ಕ್ರಮವಾಗಿ ಹಾಜರಾಗುವವನಾದೆ.—1 ಯೋಹಾನ 5:14.
ಮೊದಲಿನ ವರ್ಷಗಳಲ್ಲಿ ನಮ್ಮ ಶುಶ್ರೂಷೆ
ಇಸವಿ 1929 ರಲ್ಲಿ ಸಿಲ್ವಿ ಮತ್ತು ನಾನು ಮದುವೆಯಾದೆವು, ಮತ್ತು 1934 ರಲ್ಲಿ ನಾವಿಬ್ಬರೂ ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆವು. ಆ ದಿನಗಳಲ್ಲಿ ನಮ್ಮ ಶುಶ್ರೂಷೆಯು, ಒಂದು ಫೋನೊಗ್ರಾಫ್ ಮತ್ತು ರೆಕಾರ್ಡ್ಗಳನ್ನು ಜನರ ಮನೆಗಳಿಗೆ ತೆಗೆದುಕೊಂಡು ಹೋಗುವುದನ್ನು ಮತ್ತು ಬೈಬಲ್ ಭಾಷಣವೊಂದನ್ನು ಉಚಿತವಾಗಿ ನಾವು ಸಾದರಪಡಿಸಬಹುದೊ ಎಂದು ನಯವಾಗಿ ಕೇಳುವುದನ್ನು ಒಳಗೊಂಡಿತ್ತು. ಅನೇಕ ವೇಳೆ ಜನರು ನಮ್ಮನ್ನು ಮನಃಪೂರ್ವಕವಾಗಿ ಒಳಗೆ ಆಮಂತ್ರಿಸಿದರು, ಮತ್ತು ರೆಕಾರ್ಡ್ ಮಾಡಲಾದ ಭಾಷಣವನ್ನು ಆಲಿಸಿದ ಬಳಿಕ, ಒಂದು ಸಂಭಾಷಣೆಯಲ್ಲಿ ಅವರು ಭಾಗವಹಿಸಿದರು ಮತ್ತು ನಮ್ಮ ಸಾಹಿತ್ಯಗಳಲ್ಲಿ ಕೆಲವನ್ನು ಸ್ವೀಕರಿಸಿದರು.
ಅಧಿಕಾರಿಗಳ ಅನುಮತಿಯಿಂದ, ಇದೇ ಬೈಬಲ್ ಭಾಷಣಗಳನ್ನು ಉದ್ಯಾನಗಳಲ್ಲಿ ನಾವು ವಿದ್ಯುದರ್ಧ್ವಕಗಳ ಮುಖಾಂತರ ನುಡಿಸಿದೆವು. ಮತ್ತು ಉಪನಗರಗಳಲ್ಲಿ ನಾವು ಧ್ವನಿವರ್ಧಕವನ್ನು ಒಂದು ಮಾಳಿಗೆಗೆ ಅಥವಾ ಹೊಗೆ ಕೊಳವೆಯ ಚಾವಣಿಗೆ ಜೋಡಿಸುತ್ತಿದ್ದೆವು. ಬೇರೆ ಸಮಯಗಳಲ್ಲಿ ಊರಿನ ಜನರು ದೊಡ್ಡ ಗುಂಪುಗಳಲ್ಲಿ ಕೂಡಿಬರುತ್ತಿದ್ದ ಸರೋವರಗಳ ಮುಂದೆ ಅವುಗಳನ್ನು ನುಡಿಸುತ್ತಿದ್ದೆವು. ವಿದ್ಯುದರ್ಧ್ವಕಗಳನ್ನು ನಾವೆಯಲ್ಲಿ ತೆಗೆದುಕೊಂಡು ಹೋಗಿ ದಡದ ಉದ್ದಕ್ಕೂ ನಿಧಾನವಾಗಿ ವಿಹರಿಸಿದೆವು. ಆದಿತ್ಯವಾರಗಳಂದು, ನಮ್ಮ ಅಮೂಲ್ಯ ವಿದ್ಯುದರ್ಧ್ವಕಗಳು ಮತ್ತು ಬಹಳಷ್ಟು ಸಾಹಿತ್ಯದೊಂದಿಗೆ ಸಜ್ಜಿತರಾಗಿ ಹಳ್ಳಿ ಪ್ರದೇಶಗಳಲ್ಲಿ ಸಾರಲು ಬಸ್ಸಿನ ಮೂಲಕ ನಾವು ಪ್ರಯಾಣಿಸುತ್ತಿದ್ದೆವು.
ನಮ್ಮ ನಂಬಿಕೆಯನ್ನು ಪರೀಕ್ಷಿಸುವ ಒಂದು ಬದಲಾವಣೆ
ಇಸವಿ 1938 ರಲ್ಲಿ, ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಒಬ್ಬ ಪಯನೀಯರನಂತೆ ಪ್ರವೇಶಿಸಿದೆನಾದರೂ, ಇಟ್ಟಿಗೆ ಕಟ್ಟುವವನಾಗಿ ಕೆಲಸಮಾಡುವುದನ್ನು ಸಹ ಮುಂದುವರಿಸಿದೆ. ಮುಂದಿನ ವಸಂತಕಾಲ, ಈಗ ಸರ್ಕಿಟ್ ಮೇಲ್ವಿಚಾರಕನೆಂದು ಕರೆಯಲ್ಪಡುವ ಸಂಚರಣ ಸೇವಕನಾಗಲು ಸೊಸೈಟಿಯ ಬ್ರಾಂಚ್ ಆಫೀಸಿನಿಂದ ಆಮಂತ್ರಣವೊಂದನ್ನು ನಾನು ಪಡೆದೆ. ಟ್ಯಾಂಪರೆಯಲ್ಲಿ ನಮ್ಮ ಸಭೆಯೊಂದಿಗೆ ಕೆಲಸಮಾಡುವುದರಲ್ಲಿ ನಾನು ಆನಂದಿಸಿದ ಕಾರಣ ಒಪ್ಪಿಕೊಳ್ಳುವ ನಿರ್ಣಯವು ಸರಳವಾದ ನಿರ್ಣಯವಾಗಿರಲಿಲ್ಲ. ಅಲ್ಲದೆ, ನಮಗೆ ನಮ್ಮ ಸ್ವಂತ ಮನೆಯಿತ್ತು; ಶಾಲೆಗೆ ಹೋಗುವುದನ್ನು ಶೀಘ್ರದಲ್ಲೇ ಆರಂಭಿಸಲಿದ್ದ ಆರು ವರ್ಷ ಪ್ರಾಯದ ಮಗ, ಆರ್ಟೊ ನಮಗಿದ್ದ; ಮತ್ತು ಅಂಗಡಿಯ ಸಹಾಯಕಳಂತೆ ತನ್ನ ಕೆಲಸದಲ್ಲಿ ಸಿಲ್ವಿ ಆನಂದಿಸಿದಳು. ಆದರೂ, ಒಟ್ಟಾಗಿ ಆಲೋಚನೆ ಮಾಡಿದ ತರುವಾಯ, ರಾಜ್ಯ ಸೇವೆಯ ಈ ಹೆಚ್ಚಿನ ಸುಯೋಗವನ್ನು ನಾನು ಸ್ವೀಕರಿಸಿದೆ.—ಮತ್ತಾಯ 6:33.
ಆಮೇಲೆ ಇನ್ನೊಂದು ಕಷ್ಟಕರ ಅವಧಿಯು ಆರಂಭಿಸಿತು. ಫಿನ್ಲೆಂಡ್ನೊಳಗೆ ಸೋವಿಯಟ್ ದಂಡುಗಳು ಪ್ರಯಾಣಿಸಿದಾಗ, ನವಂಬರ 30, 1939 ರಂದು ಯುದ್ಧವು ಆರಂಭವಾಯಿತು. ಶೀತಲ ಯುದ್ಧ ಎಂಬುದಾಗಿ ಕರೆಯಲ್ಪಟ್ಟ ಯುದ್ಧವು, ಮಾರ್ಚ್ 1940ರ ವರೆಗೆ—ಶಾಂತಿ ಸಂಧಾನಕ್ಕೆ ಫಿನ್ಲೆಂಡ್ ಒಪ್ಪಲೇಬೇಕಾದ ಸಮಯದ ವರೆಗೆ ಮುಂದುವರಿಯಿತು. ನಿಸರ್ಗವು ಕೂಡ ಯುದ್ಧಕ್ಕೆ ಹೋದಂತೆ ತೋರಿತು, ಯಾಕೆಂದರೆ ನಾನು ಸ್ಮರಿಸಿಕೊಳ್ಳಬಲ್ಲ ಚಳಿಗಾಲಗಳಲ್ಲಿಯೆ ಅತಿಯಾದ ಚಳಿಗಾಲವು ಅದಾಗಿತ್ತು. ಶಾಖಮಾಪಕವು ಶೂನ್ಯ ಸೆಂಟಿಗ್ರೇಡ್ಗಿಂತ 30 ಡಿಗ್ರಿಗಳು ಕೆಳಗಿಳಿದಂತೆ ನಾನು ಒಂದು ಸಭೆಯಿಂದ ಇನ್ನೊಂದಕ್ಕೆ ಸೈಕಲಿನ ಮೂಲಕ ಸಂಚರಿಸಿದೆ!
ಇಸವಿ 1940 ರಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ಫಿನ್ಲೆಂಡ್ನಲ್ಲಿ ನಿಷೇಧಿಸಲ್ಪಟ್ಟಿತು. ಅದಾದನಂತರ, ಅನೇಕ ಯುವ ಫಿನಿಷ್ ಸಾಕ್ಷಿಗಳನ್ನು ಸೆರೆಮನೆಯಲ್ಲಿ ಹಾಕಲಾಯಿತು ಮತ್ತು ಅಮಾನುಷ ಪರಿಸ್ಥಿತಿಗಳ ಕೆಳಗೆ ಅಲ್ಲಿ ಉಳಿಯುವಂತೆ ಒತ್ತಯಾ ಪಡಿಸಲಾಯಿತು. ಇಸವಿ 1939 ರಿಂದ 1945ರ ವರೆಗೆ ಎರಡನೆಯ ಲೋಕ ಯುದ್ಧದ ಉದ್ದಕ್ಕೂ ಸಭೆಗಳಲ್ಲಿ ಸೇವೆ ಮಾಡಲು ನನಗೆ ಸಾಧ್ಯವಾಗಿತ್ತು. ಇದು ಅನೇಕ ವೇಳೆ, ನಾನು ಸಿಲ್ವಿ ಮತ್ತು ಆರ್ಟೊ ವಿನಿಂದ ಕೆಲವೊಮ್ಮೆ ತಿಂಗಳುಗಳ ವರೆಗೆ ದೂರ ಇರುವಂತೆ ಅವಶ್ಯಪಡಿಸಿತು. ಅಷ್ಟೇ ಅಲ್ಲದೆ, ಕಾನೂನು ವಿರುದ್ಧವಾದೊಂದು ಕೆಲಸದಲ್ಲಿ ತೊಡಗಿರುವುದಕ್ಕಾಗಿ ಸೆರೆ ಹಿಡಿಯಲ್ಪಡುವ ಸಂತತ ಬೆದರಿಕೆ ಅಲ್ಲಿತ್ತು.
ಒಂದು ಸೂಟ್ಕೇಸ್, ಸಾಹಿತ್ಯದ ಒಂದು ಚೀಲ, ಮತ್ತು ಒಂದು ಫೋನೊಗ್ರಾಫ್ ಮತ್ತು ರೆಕಾರ್ಡ್ಗಳಿಂದ ಹೇರಲ್ಪಟ್ಟ ಸೈಕಲನ್ನು ಓಡಿಸುತ್ತಿದ್ದ ನಾನು, ವಿಚಿತ್ರವಾದೊಂದು ದೃಶ್ಯವಾಗಿದ್ದಿರಬೇಕು. ಫೋನೊಗ್ರಾಫ್ ರೆಕಾರ್ಡ್ಗಳನ್ನು ತೆಗೆದುಕೊಂಡು ಹೋಗುವ ಒಂದು ಕಾರಣವು, ಸೆರೆಹಿಡಿಯಲ್ಪಟ್ಟ ವಿದ್ಯಮಾನದಲ್ಲಿ, ರಶ್ಯನರಿಗಾಗಿ ಸ್ಥಳ ಶೋಧಕ ದಳದ ಪ್ಯಾರಷೂಟ್ ಗೂಢಚಾರನು ನಾನಾಗಿರಲಿಲ್ಲವೆಂಬುದನ್ನು ರುಜುಮಾಡುವುದೇ ಆಗಿತ್ತು. ನಾನು ದುಮುಕುವವನಾಗಿದ್ದರೆ ದುಮುಕುವ ಸಮಯದಲ್ಲಿ ರೆಕಾರ್ಡ್ಗಳು ಮುರಿಯುತ್ತಿದ್ದವು ಎಂದು ನಾನು ವಾದಿಸಬಹುದಿತ್ತು, ನೋಡಿ.
ಆದರೂ, ಒಬ್ಬ ಗೂಢಚಾರನ ಕುರಿತು ಎಚ್ಚರಿಸಲಾಗಿದ್ದ ಒಂದು ನೆರೆಹೊರೆಯನ್ನು ಒಮ್ಮೆ ಸಂದರ್ಶಿಸುತ್ತಿದ್ದಾಗ, ಸಾಕ್ಷಿಗಳ ಒಂದು ಕುಟುಂಬವು ನನ್ನನ್ನು ಗೂಢಚಾರನೆಂದು ತಪ್ಪಾಗಿ ಗ್ರಹಿಸಿತು. ಚಳಿಗಾಲದ ಕತ್ತಲೆಯ ಒಂದು ರಾತ್ರಿ ನಾನು ಅವರ ಬಾಗಿಲನ್ನು ತಟ್ಟಿದೆ, ಅದನ್ನು ತೆರೆಯಲು ಅವರು ತುಂಬ ಹೆದರಿದರು. ಆದುದರಿಂದ ನಾನು ರಾತ್ರಿಯನ್ನು ಒಂದು ಕೊಟ್ಟಿಗೆಯಲ್ಲಿ, ಬೆಚ್ಚಗೆ ಇರಲು ಪ್ರಯತ್ನಿಸುತ್ತಾ ಒಣ ಹುಲ್ಲಿನಲ್ಲಿ ಹುಗಿದುಕೊಂಡು ಕಳೆದೆ. ಮರುದಿನ ಬೆಳಗ್ಗೆ ತಪ್ಪಾದ ಗುರುತು ಸೃಷ್ಟಗೊಳಿಸಲ್ಪಟ್ಟಿತು, ಮತ್ತು ನನ್ನ ಸಂದರ್ಶನದ ಉಳಿದ ಸಮಯದಲ್ಲಿ ಆ ಮನೆವಾರ್ತೆಯ ಸದಸ್ಯರು ನನಗೆ ವಿಶೇಷಾತೀತ ಆತಿಥ್ಯವನ್ನು ತೋರಿಸಿದರೆಂಬುದನ್ನು ನಾನು ಒತ್ತಿಹೇಳಲೇಬೇಕು!
ಯುದ್ಧದ ವರ್ಷಗಳಲ್ಲಿ, ಸಹೋದರ ಯೋಹನೆಸ್ ಕೊಸ್ಕೀನೆನ್ ಮತ್ತು ನಾನು ಮಾತ್ರ ಮಧ್ಯ ಹಾಗೂ ಉತ್ತರ ಫಿನ್ಲೆಂಡ್ನಲ್ಲಿದ್ದ ಸಭೆಗಳಲ್ಲಿ ಸೇವೆ ಮಾಡಿದೆವು. ನಮ್ಮಲ್ಲಿ ಪ್ರತಿಯೊಬ್ಬನಿಗೆ ನೋಡಿಕೊಳ್ಳಲು ಬಹು ದೊಡ್ಡ ಪ್ರದೇಶಗಳು, ಸುಮಾರು 600 ಕಿಲೊಮೀಟರ್ ಉದ್ದವಾದ ಪ್ರದೇಶಗಳು ಇದ್ದವು. ಸಂದರ್ಶಿಸಲಿಕ್ಕೆ ನಮಗೆ ಎಷ್ಟೊಂದು ಸಭೆಗಳಿದ್ದವೆಂದರೆ, ಪ್ರತಿಯೊಂದು ಸಭೆಯೊಂದಿಗೆ ನಾವು ಕೇವಲ ಎರಡು ಅಥವಾ ಮೂರು ದಿನಗಳು ಮಾತ್ರ ತಂಗಲು ಶಕ್ತರಾಗಿದ್ದೆವು. ರೈಲುಗಾಡಿಗಳು ಸಕಾಲಕ್ಕೆ ವಿರಳವಾಗಿ ಬರುತ್ತಿದ್ದವು, ಮತ್ತು ಬಸ್ಸುಗಳು ಕೊಂಚವಾಗಿದ್ದು ಎಷ್ಟು ತುಂಬಿರುತ್ತಿದ್ದವೆಂದರೆ, ನಾವು ನಮ್ಮ ಗಮ್ಯ ಸ್ಥಾನವನ್ನು ತಲಪುತ್ತಿದ್ದದ್ದು ಆಶ್ಚರ್ಯದ ಸಂಗತಿಯಾಗಿತ್ತು.
ಅಲ್ಪ ಅಂತರದ ಪಾರಾಗುವಿಕೆಗಳು
ಒಮ್ಮೆ, ಶೀತಲ ಯುದ್ಧದ ಆದಿ ಭಾಗದಲ್ಲಿ, ನಾನು ಹೆಲ್ಸಿಂಕಿನಲ್ಲಿದ್ದ ಬ್ರಾಂಚ್ ಆಫೀಸಿಗೆ ಹೋಗಿ, ಸಭೆಗಳಿಗೆ ನೀಡಲಿಕ್ಕಾಗಿ ನನ್ನೊಂದಿಗೆ ರೈಲುಗಾಡಿಯಲ್ಲಿ ತೆಗೆದುಕೊಂಡು ಹೋಗಲು ನಿಷೇಧಿಸಲ್ಪಟ್ಟ ಸಾಹಿತ್ಯದ ನಾಲ್ಕು ಭಾರವಾದ ಪೆಟ್ಟಿಗೆಗಳನ್ನು ತೆಗೆದುಕೊಂಡು ಬಂದೆ. ರೀಹೀಮಾಕಿ ರೈಲು ನಿಲ್ದಾಣದಲ್ಲಿರುವಾಗ, ವಿಮಾನದಾಳಿಯ ಅಪಾಯ ಸೂಚನೆಯು ಮೊಳಗಿತು. ರೈಲುಗಾಡಿಯಲ್ಲಿದ್ದ ಸೈನಿಕರು ತಮ್ಮ ಹಿಮವಸ್ತ್ರಗಳನ್ನು ಧರಿಸಿಕೊಂಡರು, ಮತ್ತು ಪ್ರಯಾಣಿಕರು ರೈಲುಗಾಡಿಯನ್ನು ಕೂಡಲೇ ಬಿಟ್ಟು ನಿಲ್ದಾಣದ ಎದುರು ಬದಿಯಲ್ಲಿದ್ದ ಬರಿದಾದ ಪ್ರದೇಶದ ಕಡೆಗೆ ಧಾವಿಸುವಂತೆ ಹೇಳಲ್ಪಟ್ಟರು.
ಪೆಟ್ಟಿಗೆಗಳ ಪ್ರಮುಖತೆಯನ್ನು ಸೈನಿಕರಿಗೆ ಹೇಳುತ್ತಾ, ಅವುಗಳನ್ನು ಎತ್ತಿಕೊಳ್ಳುವಂತೆ ನಾನು ಅವರನ್ನು ಕೇಳಿಕೊಂಡೆ. ಅವರಲ್ಲಿ ನಾಲ್ವರು ಒಂದೊಂದು ಪೆಟ್ಟಿಗೆಯನ್ನು ಎತ್ತಿಕೊಂಡರು, ಮತ್ತು ನಾವು ಹಿಮಾವೃತ ಪ್ರದೇಶದ ಮೇಲೆ 200 ಮೀಟರುಗಳಷ್ಟು ದೂರ ಓಡಿದೆವು. ನಾವು ನೆಲದ ಮೇಲೆ ನಮ್ಮನ್ನು ಬೀಳಿಸಿಕೊಂಡೆವು, ಮತ್ತು ಯಾರೊ ನನಗೆ ಕೂಗಿ ಹೇಳಿದರು: “ಹೇ, ಅಯೋಧನೇ, ಲೇಶ ಮಾತ್ರವೂ ಕದಲಬೇಡ! ಬಾಂಬ್ ವಿಮಾನಗಳು ಯಾವುದೇ ಚಲನೆಯನ್ನು ನೋಡಿದರೆ, ನಮ್ಮ ಕಡೆಗೆ ಬಾಂಬ್ಗಳನ್ನು ಗುರಿಮಾಡುವುವು.” ಆಕಾಶದ ಕಡೆಗೆ ಜಾಗರೂಕತೆಯಿಂದ ನೋಡಲು ನನ್ನ ಮುಖವನ್ನು ತಿರುಗಿಸುವಷ್ಟು ನಾನು ಕುತೂಹಲವುಳ್ಳವನಾಗಿದ್ದೆ, ಮತ್ತು ಅಲ್ಲಿ ನಾನು 28 ವಿಮಾನಗಳನ್ನು ಎಣಿಸಿದೆ!
ಥಟ್ಟನೆ ನೆಲವು ಸಿಡಿಯುವ ಬಾಂಬ್ಗಳಿಂದ ನಡುಗಿತು. ನಿಲ್ದಾಣವನ್ನು ಉಳಿಸಲಾಯಿತಾದರೂ, ನಾವು ಬಂದು ತಲಪಿದ ಗಾಡಿಯ ಮೇಲೆ ಬಾಂಬ್ ಬಿತ್ತು. ಭಗ್ನವಾದ ರೈಲುಗಾಡಿ ಮತ್ತು ತಿರುಚಲ್ಪಟ್ಟ ಹಳಿಗಳು ಎಂತಹ ವಿಕಾರವಾದ ದೃಶ್ಯವನ್ನು ರಚಿಸಿದವು! ಮರುದಿನ ಬೆಳಗ್ಗೆ ಪೆಟ್ಟಿಗೆಗಳೊಂದಿಗೆ ನನ್ನ ಪ್ರಯಾಣವನ್ನು ಮುಂದುವರಿಸಲು ನಾನು ಶಕ್ತನಾದೆ, ಮತ್ತು ಸೈನಿಕರು ಇನ್ನೊಂದು ಗಾಡಿಯಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರಲ್ಲಿ ಒಬ್ಬನು ಯುದ್ಧದ ತರುವಾಯ ಸಾಕ್ಷಿಯಾದನು, ಮತ್ತು ಪೆಟ್ಟಿಗೆಗಳೊಂದಿಗೆ ಇದ್ದ ಆ ವಿಚಿತ್ರವಾದ ಅಯೋಧನ ಕುರಿತು ಸೈನಿಕರು ತದನಂತರ ಮಾತಾಡಿದ್ದರೆಂದು ಅವನು ನನಗೆ ಹೇಳಿದನು.
ಸ್ವಲ್ಪ ಸಮಯದ ಬಳಿಕ, ಉತ್ತರ ಫಿನ್ಲೆಂಡ್ನಲ್ಲಿ ರೋವನೀಅಮಿನಲ್ಲಿದ್ದ ಸಣ್ಣ ಸಭೆಯಲ್ಲಿ ಸೇವೆಮಾಡಲು ಪ್ರಯಾಣಿಸುತ್ತಿದ್ದ ಸಹೋದರ ಕೊಸ್ಕೀನೆನ್, ರೈಲುಗಾಡಿಯಿಂದ ಇಳಿಯುವ ಮೊದಲೇ ಸೆರೆಹಿಡಿಯಲ್ಪಟ್ಟರು. ಅವರನ್ನು ಸೆರೆಮನೆಯಲ್ಲಿ ಹಾಕಲಾಯಿತು, ಅಲ್ಲಿ ಅವರನ್ನು ಕ್ರೂರವಾಗಿ ಅಪವರ್ತನೆಗೊಳಪಡಿಸಲಾಯಿತು. ಅದೇ ಸಭೆಯಲ್ಲಿ ಸೇವೆ ಮಾಡುವ ಸಮಯ ನನಗೆ ಬಂದಾಗ, ಕಾಯ್ವು ಎಂಬ ಸಣ್ಣ ನಿಲ್ದಾಣದಲ್ಲಿ ರೈಲುಗಾಡಿಯಿಂದ ಕೆಳಗಿಳಿಯುವ ಏರ್ಪಾಡುಗಳನ್ನು ನಾನು ಮಾಡಿದೆ. ಅಲ್ಲಿ ದಾರಿಯ ಉಳಿದ ಭಾಗವನ್ನು ಒಂದು ಹಾಲಿನ ಗಾಡಿಯಲ್ಲಿ ಮುಂದುವರಿಸುವಂತೆ ಸಹೋದರಿ ಹೆಲ್ಮಿ ಪಾಲಾರಿ ನನಗಾಗಿ ಏರ್ಪಡಿಸಿದರು. ರೋವನೀಅಮಿ ಸಭೆಗೆ ನೀಡಿದ ನನ್ನ ಸಂದರ್ಶನವು ಯಶಸ್ವಿಯಾಗಿತ್ತು. ಹಾಗಿದ್ದರೂ, ಅಲ್ಲಿಂದ ಹೋಗುವಾಗ ನಾನು ಕಷ್ಟಗಳನ್ನು ಅನುಭವಿಸಿದೆ.
ರೈಲು ನಿಲ್ದಾಣಕ್ಕೆ ಹೋಗುವ ನಮ್ಮ ದಾರಿಯಲ್ಲಿ, ಎಲ್ಲಾ ದಾರಿಹೋಕರ ದಾಖಲೆಗಳನ್ನು ಪರಿಶೋಧಿಸುತ್ತಿದ್ದ ಇಬ್ಬರು ಸೈನಿಕ ಸಿಬ್ಬಂದಿಯವರನ್ನು ನನ್ನ ಸಂಗಾತಿ ಮತ್ತು ನಾನು ಎದುರಿಸಿದೆವು. “ಅವರನ್ನು ನೋಡಬೇಡ. ನಿನ್ನ ಕಣ್ಣುಗಳನ್ನು ನೆಟ್ಟಗೆ ಮುಂದಕ್ಕಿಡು,” ಎಂದು ನಾನು ಹೇಳಿದೆ. ಅವರು ಅಸ್ತಿತ್ವದಲ್ಲಿಯೇ ಇಲ್ಲವೆಂಬಂತೆ ನಾವು ಅವರ ನಡುವೆ ನಡೆದೆವು. ಆಗ ಅವರು ನಮ್ಮನ್ನು ಬೆನ್ನಟಲ್ಟು ಆರಂಭಿಸಿದರು. ಕೊನೆಯದಾಗಿ, ರೈಲು ನಿಲ್ದಾಣದಲ್ಲಿ, ಗುಂಪಿನಲ್ಲಿ ಅವರಿಂದ ತಪ್ಪಿಸಿಕೊಳ್ಳಲು ಮತ್ತು ಸಾಗುತ್ತಿರುವ ಗಾಡಿಯೊಳಕ್ಕೆ ಜಿಗಿಯಲು ನಾನು ಶಕ್ತನಾದೆ. ಆ ದಿನಗಳಲ್ಲಿ ಸಂಚರಣ ಕೆಲಸದಲ್ಲಿ ಭಾವೋದ್ವಿಗ್ನತೆಯ ಕೊರತೆಯೇ ಇರಲಿಲ್ಲ!
ಒಮ್ಮೆ ನಾನು ಬಂಧಿಸಲ್ಪಟ್ಟೆ ಮತ್ತು ನನ್ನನ್ನು ಕಡ್ಡಾಯ ಸೈನ್ಯ ಸೇವಾ ಮಂಡಲಿಯ ಮುಂದೆ ಕೊಂಡ್ಯೊಯಲಾಯಿತು. ಉದ್ದೇಶವು ನನ್ನನ್ನು ಯುದ್ಧಕ್ಕೆ ಕಳುಹಿಸುವುದಾಗಿತ್ತು. ಆದರೆ ಫೋನಿನ ಕರೆಗಂಟೆಯು ಬಾರಿಸಿತು, ಮತ್ತು ನನ್ನ ಇಂಟರ್ವ್ಯೂ ತೆಗೆದುಕೊಳ್ಳಲ್ಲಿದ್ದ ಸೇನಾಧಿಕಾರಿಯು ಉತ್ತರಿಸಿದನು. ಆ ಕಡೆಯಿಂದ ಬರುತ್ತಿದ್ದ ಧ್ವನಿಯು ಹೀಗೆ ಅರಚುವುದನ್ನು ನಾನು ಕೇಳಬಹುದಿತ್ತು: “ಈ ಅಸ್ವಸ್ಥರಾದ, ಉಪಯೋಗವಿಲ್ಲದ ಪುರುಷರನ್ನು ನೀನು ಏತಕ್ಕೆತಾನೇ ಕಳುಹಿಸುತ್ತಿ? ನಾವು ಅವರನ್ನು ಕೇವಲ ಹಿಂದಕ್ಕೆ ಕಳುಹಿಸುತ್ತೇವೆ ಅಷ್ಟೆ. ಕೆಲಸಕ್ಕೆ ತಕ್ಕದಾದ ಪುರುಷರ ಅಗತ್ಯ ನಮಗಿದೆ!” ಕೃತಜ್ಞತಾ ಸೂಚಕವಾಗಿ, ನನಗಿದ್ದ ಒಂದು ಆರೋಗ್ಯ ಸಮಸ್ಯೆಯ ಕುರಿತು ತಿಳಿಸಿದ ವೈದ್ಯಕೀಯ ಪ್ರಮಾಣಪತ್ರವೊಂದು ನನ್ನಲ್ಲಿತ್ತು. ಇದನ್ನು ಸಾದರಪಡಿಸಿದಾಗ, ಹೋಗುವ ಅನುಮತಿ ನನಗೆ ನೀಡಲಾಯಿತು ಮತ್ತು ಆದುದರಿಂದ ಸಭೆಗಳಲ್ಲಿ ನನ್ನ ಕೆಲಸವನ್ನು ಯಾವ ತಡೆಯೂ ಇಲ್ಲದೆ ಮುಂದುವರಿಸಿದೆ!
ವಿಚಾರಣೆಯ ಸಮಯದಲ್ಲಿ ನೆರವಾಗುವುದು
ಯುದ್ಧ ಕ್ಷೋಭೆಯು ಅತ್ಯುಗ್ರವಾಗುತ್ತಾ ಮುಂದುವರಿಯಿತು, ಮತ್ತು ನನ್ನ ಮಿತ್ರನಾದ ಆಟಿ ಲಾಎಸ್ಟೆ, ಸೆರೆಹಿಡಿಯಲ್ಪಟ್ಟನು. ಅವನ ಹೆಂಡತಿ ನನ್ನನ್ನು ಕರೆದಳು. ನಾನು ಅವರ ಮನೆಗೆ ಹೋದಾಗ, ಅವನ ದಾಖಲೆಗಳೊಳಗೆ, ನಗರದ ಸಾರ್ವಜನಿಕ ಉದ್ಯಾನಗಳಲ್ಲಿ ರೆಕಾರ್ಡ್ ಮಾಡಲಾದ ಭಾಷಣಗಳನ್ನು ಸಾದರಪಡಿಸಲು ಸ್ಥಳಿಕ ಪೊಲೀಸಿನಿಂದ ಆಟಿಗೆ ಅನುಮತಿ ಕೊಟ್ಟ ಒಂದು ದಾಖಲೆಯನ್ನು ಕಂಡೆ. ನಾವು ದಾಖಲೆಯೊಂದಿಗೆ ನ್ಯಾಯಾಲಯವನ್ನು ತಲಪಿದೆವು. ಅವರು ಆಪಾದನ ಪತ್ರವನ್ನು ಓದಿಯಾದ ಮೇಲೆ, ದಾಖಲೆಯನ್ನು ನಾನು ಸಹೋದರ ಲಾಎಸ್ಟೆಗೆ ನೀಡಿದೆ. ನ್ಯಾಯಾಲಯವು ಕೇಳುವಂತೆ ಒಂದು ಫೋನೊಗ್ರಾಫ್ ಮತ್ತು ಹಲವಾರು ರೆಕಾರ್ಡ್ ಮಾಡಲಾದ ಬೈಬಲ್ ನಿರೂಪಣೆಗಳನ್ನು ಒಬ್ಬ ಸೈನಿಕನು ತರುವಂತೆ ನ್ಯಾಯಾಧೀಶನು ಆಜ್ಞಾಪಿಸಿದನು. ಪ್ರತಿಯೊಂದು ನಿರೂಪಣೆಯನ್ನು ಆಲಿಸಿದ ಬಳಿಕ, ಹೇಳಲಾದ ಸಂಗತಿಯಲ್ಲಿ ಯಾವುದೇ ಅಸಂಬದ್ಧ ವಿಷಯವನ್ನು ನೋಡಲು ಸಾಧ್ಯವಾಗಲಿಲ್ಲವೆಂದು ನ್ಯಾಯಾಧೀಶನು ಹೇಳಿದನು.
ಆಮೇಲೆ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಲು, ಆಟಿ, ಅವನ ಹೆಂಡತಿ, ಮತ್ತು ನನ್ನನ್ನು ಮೊಗಸಾಲೆಗೆ ಕಳುಹಿಸಲಾಯಿತು. ಅಲ್ಲಿ ನಾವು ಕಾತರದಿಂದ ಕಾಯುತ್ತಿದ್ದೆವು. ಕೊನೆಗೆ, “ಪ್ರತಿವಾದಿ, ದಯವಿಟ್ಟು ನ್ಯಾಯಾಲಯವನ್ನು ಪ್ರವೇಶಿಸು,” ಎಂಬುದಾಗಿ ಹೇಳಿದ ಧ್ವನಿಯೊಂದನ್ನು ನಾವು ಕೇಳಿದೆವು. ಸಹೋದರ ಲಾಎಸ್ಟೆಯನ್ನು ಬಿಡುಗಡೆ ಮಾಡಲಾಯಿತು! ನಾವು ನಮ್ಮ ಕೆಲಸದೊಂದಿಗೆ—ಸಹೋದರ ಮತ್ತು ಸಹೋದರಿ ಲಾಎಸ್ಟೆ ಸ್ಥಳಿಕ ಸಭೆಯಲ್ಲಿ ಅವರ ಕೆಲಸದೊಂದಿಗೆ, ಮತ್ತು ನಾನು ನನ್ನ ಸಂಚರಣ ಕೆಲಸದೊಂದಿಗೆ—ಮುಂದುವರಿದಾಗ, ನಮ್ಮ ಹೃದಯಗಳು ಯೆಹೋವನಿಗೆ ನಿಜವಾಗಿಯೂ ಕೃತಜ್ಞತೆಯಿಂದ ತುಂಬಿದ್ದವು.
ಯುದ್ಧವು ಕೊನೆಗೊಳ್ಳುತ್ತದೆ—ನಮ್ಮ ಸೇವೆಯು ಮುಂದುವರಿಯುತ್ತದೆ
ಯುದ್ಧವು ಕೊನೆಗೊಂಡಾಗ, ನಮ್ಮ ಸಾರುವ ಕೆಲಸದ ಮೇಲ್ಲಿದ್ದ ನಿಷೇಧವನ್ನು ತೆಗೆಯಲಾಯಿತು ಮತ್ತು ಸಹೋದರರು ಸೆರೆಮನೆಯಿಂದ ಬಿಡುಗಡೆ ಹೊಂದಿದರು. ನನ್ನ ಸೇವೆಯ ಅನೇಕ ವರ್ಷಗಳ ಅವಧಿಯಲ್ಲಿ, ರಾಜ್ಯದ ಕೆಲಸ ಮತ್ತು ತಮ್ಮ ಗಂಡಂದಿರನ್ನು ಬೆಂಬಲಿಸುವುದರಲ್ಲಿ ಕ್ರೈಸ್ತ ಸಹೋದರಿಯರು ನಿರ್ವಹಿಸಿದ ಪಾತ್ರದಿಂದ ನಾನು ಆಳವಾಗಿ ಪ್ರಭಾವಿಸಲ್ಪಟ್ಟಿದ್ದೇನೆ. ವಿಶೇಷವಾಗಿ ನಾನು ಸಿಲ್ವಿಯ ತ್ಯಾಗಗಳು ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯುಳ್ಳವನಾಗಿದ್ದೇನೆ. ಫಲಿತಾಂಶವಾಗಿ, ತಡೆಯಿಲ್ಲದೆ 33 ವರ್ಷಗಳಿಗೆ ಸಂಚರಣ ಕೆಲಸದಲ್ಲಿ ಮುಂದುವರಿಯಲು ಮತ್ತು ತದನಂತರ ಒಬ್ಬ ವಿಶೇಷ ಪಯನೀಯರನಂತೆ ಸೇವೆ ಮಾಡಲು ನಾನು ಶಕ್ತನಾದೆ.
ಆರ್ಟೊ ಶಾಲೆಯನ್ನು ಮುಗಿಸಿದ ಮೇಲೆ ಪಯನೀಯರ ಸೇವೆಯನ್ನು ಆರಂಭಿಸಲು, ಇಂಗ್ಲಿಷನ್ನು ಕಲಿಯಲು, ಮತ್ತು ಅಮೆರಿಕದಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಅನ್ನು ಹಾಜರಾಗಲು ಸಿಲ್ವಿ ಮತ್ತು ನಾನು, ಇಬ್ಬರೂ, ಅವನನ್ನು ಪ್ರೋತ್ಸಾಹಿಸಿದೆವು. ಗಿಲ್ಯಡ್ ನಿಂದ 1953 ರಲ್ಲಿ ಅವನು ಪದವಿಯನ್ನು ಪಡೆದನು. ತದನಂತರ ಅವನು ಏವಾಳನ್ನು ಮದುವೆಯಾದನು, ಮತ್ತು ಒಟ್ಟಿಗೆ ಅವರು ಸರ್ಕಿಟ್ ಕೆಲಸ, ಬೆತೆಲ್ ಸೇವೆ, ಮತ್ತು ವಿಶೇಷ ಪಯನೀಯರ ಸೇವೆಯನ್ನು ಸೇರಿ, ಪೂರ್ಣ ಸಮಯದ ವಿಭಿನ್ನ ರೀತಿಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ವಿಶೇಷ ಪಯನೀಯರರಂತೆ ಸೇವಿಸುವುದನ್ನು ಮುಂದುವರಿಸಿದಂತೆ, ಸಿಲ್ವಿ ಮತ್ತು ನನ್ನನ್ನು ನೋಡಿಕೊಳ್ಳುವುದರಲ್ಲಿ ಸಹಾಯಮಾಡಲು, ನಮ್ಮ ನಿವಾಸದ ನಗರವಾದ ಟ್ಯಾಂಪರೆಗೆ ಅವರು 1988 ರಲ್ಲಿ ಸ್ಥಳ ಬದಲಾಯಿಸಿದರು.
ನಮ್ಮ ಬಲವು ಈಗ ಬಹಳವಾಗಿ ಕುಗ್ಗಿರತ್ತದಾದರೂ, ನಮ್ಮನ್ನು ಉತ್ತೇಜಿಸಲು ಬಹಳಷ್ಟು ನೆನಪುಗಳೊಂದಿಗೆ ಕೂಡಿದ ಸಮೃದ್ಧವಾದ ಮತ್ತು ಆಶೀರ್ವದಿತ ಜೀವನದಲ್ಲಿ ಸಿಲ್ವಿ ಮತ್ತು ನಾನು ಆನಂದಿಸಿದ್ದೇವೆ. ನಾವು ಕಂಡಂಥ ಬೆಳವಣಿಗೆಯ ಕುರಿತು ಯೋಚಿಸುವುದು ಅತ್ಯಂತ ಫಲದಾಯಕವಾಗಿದೆ. ಇಸವಿ 1939 ರಲ್ಲಿ ನಾನು ಸಭೆಗಳನ್ನು ಸಂದರ್ಶಿಸುವುದನ್ನು ಆರಂಭಿಸಿದಾಗ, ಫಿನ್ಲೆಂಡ್ನಲ್ಲಿ 865 ರಾಜ್ಯ ಪ್ರಚಾರಕರಿದ್ದರು, ಆದರೆ ಈಗ 18,000 ಕ್ಕಿಂತಲೂ ಅಧಿಕ ಪ್ರಚಾರಕರಿದ್ದಾರೆ!
ಇಸವಿ 1938 ರಲ್ಲಿ ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದಾಗ, 55 ವರ್ಷಗಳಾನಂತರ ಅದರಲ್ಲಿ ಒಂದು ಪಾಲನ್ನು ಇನ್ನೂ ಅನುಭವಿಸುತ್ತಾ ಇರುವೆನೆಂದು ನಾನು ಆಗ ಗ್ರಹಿಸಲಿಲ್ಲ. ಮುಂದುವರಿಯುತ್ತಿರುವ ವಯಸ್ಸಿನ ಹೊರತೂ, ನಮ್ಮ ವಾಗ್ದಾನಿತ ಪ್ರತಿಫಲದ ಕಡೆಗೆ ಎದುರುನೋಡುತ್ತಾ ನಾವು ಯೆಹೋವನ ಶಕ್ತಿಯಲ್ಲಿ ಮುಂದೆ ಸಾಗುತ್ತಾ ಇದ್ದೇವೆ. ಕೀರ್ತನೆಗಾರನ ಮಾತುಗಳಲ್ಲಿ ನಾವು ಭರವಸೆ ಇಡುತ್ತೇವೆ: “ಯೆಹೋವನು ಒಳ್ಳೆಯವನು; ಆತನ ಕೃಪೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.”—ಕೀರ್ತನೆ 100:5.
[ಪುಟ 21 ರಲ್ಲಿರುವ ಚಿತ್ರ]
ಲಿಯೋ ಮತ್ತು ಸಿಲ್ವಿ ಕಾಲ್ಯೊ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು 1934 ರಲ್ಲಿ ಸಂಕೇತಿಸಿದರು
[ಪುಟ 23 ರಲ್ಲಿರುವ ಚಿತ್ರ]
ಸಮರ್ಪಿತ ಸೇವೆಯ 60 ವರ್ಷಗಳನ್ನು ಅವರು ಸಮೀಪಿಸಿದಾಗ ಲಿಯೋ ಮತ್ತು ಸಿಲ್ವಿಯ ಇತ್ತೀಚೆಗಿನ ಛಾಯಾಚಿತ್ರ