ವಾಗ್ದಾನದ ದೇಶದ ದೃಶ್ಯಗಳು
ದೇಶವನ್ನು ಸಂದರ್ಶಿಸಿರಿ, ಕುರಿಗಳನ್ನು ಸಂದರ್ಶಿಸಿರಿ!
ಸಾವಿರಾರು ಕ್ರೈಸ್ತರು ವಾಗ್ದಾನ ದೇಶವನ್ನು ಸಂದರ್ಶಿಸಿರುವುದು—ಎಲ್ಲಿ ಆ ಘಟನೆಗಳು ಸಂಭವಿಸಿದ್ದವೋ ಅವನ್ನು ನೋಡುವುದರಿಂದ ಬೈಬಲನ್ನು ತಿಳಿಯಲು ತಮಗೆ ಸಹಾಯವಾದೀತು, ಅದನ್ನು ಹೆಚ್ಚು ಅರ್ಥಭರಿತವನ್ನಾಗಿ ಮಾಡೀತು ಎಂಬ ಅನಿಸಿಕೆಯಿಂದಲೇ. ಮತ್ತು ಅದು ಹಾಗೆ ಮಾಡಿದೆ.
ಒಂದುವೇಳೆ ನೀವದನ್ನು ಅಕ್ಷರಾರ್ಥವಾಗಿ ಸಂದರ್ಶಿಸಿದ್ದರೂ ಅಥವಾ ದೇಶದ ಕುರಿತಾದ ಪುಸ್ತಕಗಳನ್ನು ಮತ್ತು ಲೇಖನಗಳನ್ನು ಅಭ್ಯಾಸಿಸುವ ಮೂಲಕ ಮಾನಸಿಕವಾಗಿ ಸಂದರ್ಶಿಸಿದ್ದರೂ, ಕುರಿಗಳನ್ನು ಸಂದರ್ಶಿಸುವ ಕುರಿತಾಗಿ ಏನು? ‘ವಾಗ್ದಾನ ದೇಶದೊಂದಿಗೆ ಕುರಿಗಳಿಗಿರುವ ಸಂಬಂಧವೇನು?’ ಎಂದು ನೀವು ಯೋಚಿಸಬಹುದು. ವಾಸ್ತವದಲ್ಲಿ, ಬೈಬಲ್ ಕಾಲದಲ್ಲಿ ಕುರಿಗಳು ಜೀವಿತದ ಎಷ್ಟೊಂದು ಭಾಗವಾಗಿದ್ದವೆಂದರೆ ವಾಗ್ದಾನ ದೇಶದ ಒಂದು ಸಂದರ್ಶನದಲ್ಲಿ ಕುರಿಗಳು ಕೂಡಿರದೆ ಇದ್ದಲ್ಲಿ, ಅದು ಒಂದು ರೀತಿಯಲ್ಲಿ ಅಪೂರ್ಣವೇ ಸರಿ.
ನೀವಿಲ್ಲಿ ನೋಡುತ್ತಿರುವ ಚಿತ್ರಗಳು ನಿಮ್ಮ ಸಂದರ್ಶನವು ಒಂದು ಭಾಗವಾಗಿರಬಲ್ಲದು, ಯಾಕಂದರೆ ಇಂದು ಆ ಪ್ರದೇಶದಲ್ಲಿ ಕಂಡು ಬರಬಹುದಾದ ಕುರಿಗಳು ಸಾಮಾನ್ಯವಾಗಿ ಬೈಬಲ್ ಕಾಲಾವಧಿಯಲ್ಲಿ ಇದ್ದಂಥವುಗಳು.a ಅವುಗಳ ಅಗಲವಾದ ಬಾಲವು ಕೊಬ್ಬಿನಿಂದ ತುಂಬಿರುತ್ತದೆ. (ಯಾಜಕಕಾಂಡ 7:3; 9:19) ದಪ್ಪವಾದ ಉಣ್ಣೆ ಸಾಮಾನ್ಯವಾಗಿ ಬಿಳಿಬಣ್ಣದ್ದು. ಆದರೆ ಯಾಕೋಬನ ದೊಡ್ಡ ಹಿಂಡಿನಲ್ಲಿ “ವಿಕಾರ ವರ್ಣವುಳ್ಳವುಗಳು . . . ಅಂದರೆ ಕುರಿಗಳಲ್ಲಿ ಕಪ್ಪಾಗಿರುವವುಗಳೂ” ಸೇರಿದವ್ದೆಂಬದನ್ನು ನೆನಪಿಡಿರಿ.—ಆದಿಕಾಂಡ 30:32.
ಇದೇ ವೃತ್ತಾಂತವು ಒಂದು ದೊಡ್ಡ ಕುರೀ ಹಿಂಡು ಇರುವ ಮನುಷ್ಯನು ಐಶ್ವರ್ಯವಂತನಾಗಿ ಪರಿಗಣಿಸಲ್ಪಡುತ್ತಾನೆ ಎಂದು ಚಿತ್ರಿಸುತ್ತದೆ. (ಆದಿಕಾಂಡ 30:43) ಯೋಬನ ಕುರಿತು ನಾವು ಓದುವುದು: “ಅವನಿಗೆ ಏಳು ಸಾವಿರ ಕುರಿಗಳೂ ಮೂರು ಸಾವಿರ ಒಂಟೆಗಳೂ ಐನೂರು ಜೋಡಿ ಎತ್ತುಗಳೂ ಐನೂರು ಹೆಣ್ಣು ಕತ್ತೆಗಳೂ ಇದ್ದವು . . . ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವಾಸ್ತ್ಯವುಳ್ಳವನಾಗಿದ್ದನು.” (ಯೋಬ 1:3; 42:12) ಅಥವಾ, ನಾಬಾಲನಿಗೆ 3,000 ಕುರಿಗಳೂ 1,000 ಆಡುಗಳೂ ಇದ್ದದ್ದನ್ನು ನೆನಪಿಗೆ ತನ್ನಿರಿ. ದಾವೀದನ ದಿನಗಳಲ್ಲಿ ಅವನ ದರ್ಜೆ ಮತ್ತು ಪ್ರಾಬಲ್ಯವು ಹೇಗಿತ್ತೆಂದು ನೀವು ನೆನಸುತ್ತೀರಿ? (1 ಸಮುವೇಲ 25:2) ಆದರೆ ಒಂದು ದೊಡ್ಡ ಕುರೀ ಹಿಂಡು ಮಹಾ ಐಶ್ವರ್ಯವನ್ನು ಒಳಗೊಳ್ಳುತ್ತಿದ್ದದ್ದು ನಿಜವಾಗಿಯೂ ಏಕೆ?
ಏಕೆಂದರೆ ಕುರಿಗಳು ತಮ್ಮ ಕುರುಬನಿಗೆ ಅಥವಾ ಯಜಮಾನನಿಗೆ ಮೌಲ್ಯವುಳ್ಳ ಉತ್ಪಾದನೆಗಳನ್ನು ಒದಗಿಸುತ್ತಿದ್ದವು. ಉಣ್ಣೆಯು ತಾನೇ ಮರಳಿ ಮರಳಿ ಸಿಗುವ ಒಂದು ಸೊತ್ತು. ಒಬ್ಬ ವಿವೇಕಿಯೂ ಉದ್ಯೋಗಶೀಲೆಯೂ ಆದ ಪತ್ನಿಯು ಅವನ್ನು ಕುಟುಂಬದ ಬಟ್ಟೆಬರೆಗಾಗಿ ಅಥವಾ ಮಾರಾಟದ ಉಡುಪುಗಳಾಗಿ ಬಳಸಬಲ್ಲಳೆಂದು ಕಾಣಲು ಜ್ಞಾನೋಕ್ತಿ 31:13, 21, 22 ನಮಗೆ ಸಹಾಯ ಮಾಡುತ್ತದೆ. (ಯೋಬ 31:20) ಉಣ್ಣೆಯು ಒಂದು ಪ್ರಾಮುಖ್ಯ ವ್ಯಾಪಾರದ ಸರಕಾಗಿದೆ. ಒಬ್ಬ ಮೋವಾಬ್ಯದ ಅರಸನು “ಕುರೀ ಹಿಂಡುಳ್ಳವನಾಗಿದ್ದು . . . ಇಸ್ರಾಯೇಲ್ಯರ ಅರಸನಿಗೆ ಲಕ್ಷ ಕುರಿಗಳ ಮತ್ತು ಲಕ್ಷ ಉಣ್ಣೆಕತ್ತರಿಸದ ಟಗರುಗಳನ್ನು ಕಪ್ಪವಾಗಿ ಕೊಡುತ್ತಿದ್ದನು” ಎಂಬ ಹೇಳಿಕೆಯಲ್ಲಿ ಅದು ಸೂಚಿಸಲ್ಪಟ್ಟಿದೆ. (2 ಅರಸು 3:4) ಹೌದು, ಅವು “ಉಣ್ಣೆ ಕತ್ತರಿಸದ” ಕುರಿಗಳು; ಅವುಗಳ ದಟ್ಟವಾದ ಉಣ್ಣೆಯು ಅವುಗಳ ಬೆಲೆಯನ್ನು ಹೆಚ್ಚಿಸುತ್ತಿತ್ತು.
ಗಂಡು ಕುರಿಗಳಿಗೆ, ಟಗರುಗಳಿಗೆ ಬಲಗಡೆಯ ಚಿತ್ರದಲ್ಲಿರುವಂತೆ ಚಿತ್ತವೇಧಕ ಕೊಂಬುಗಳಿರ ಸಾಧ್ಯವಿದೆ. ಟಗರಿನ ಕೊಂಬನ್ನು ಜ್ಯೂಬಿಲಿಯನ್ನು ಪ್ರಕಟಿಸಲಿಕ್ಕಾಗಿ ಬಳಸಲಾಗುತ್ತಿತ್ತು ಎಂಬದನ್ನು ಇದು ನಿಮ್ಮ ನೆನಪಿಗೆ ತರುತ್ತದೋ? (ಯಾಜಕಕಾಂಡ 25:8-10) ತದ್ರೀತಿಯ ಟೊಳ್ಳಾದ ಕೊಂಬುಗಳನ್ನು ಅಪಾಯ ಸೂಚಕ ಸಂಜ್ಞೆಗಳನ್ನು ಕೊಡುವುದರಲ್ಲಿ ಅಥವಾ ಯುದ್ಧ ವ್ಯೂಹಗಳನ್ನು ನಡಿಸುವುದರಲ್ಲಿ ಉಪಯೋಗಿಸಲಾಗುತ್ತಿತ್ತು.—ನ್ಯಾಯಸ್ಥಾಪಕರು 6:34; 7:18, 19; ಯೋವೇಲ 2:1.
ನಿಮಗೊಂದು ಕುರೀ ಹಿಂಡು ಇದದ್ದಾದರೆ, ನಿಮಗೊಂದು ಆಹಾರದ ಉಗಮವಿರುವುದು ನಿಶ್ಚಯ ಯಾಕಂದರೆ ಇಸ್ರಾಯೇಲ್ಯರು ತಿನ್ನ ಶಕ್ತರಾಗಿದ್ದ ಶುದ್ಧ ಪಶುಗಳಲ್ಲಿ ಕುರಿಗಳು ಸೇರಿದ್ದವು. (ಧರ್ಮೋಪದೇಶಕಾಂಡ 14:4) (ಆಡಿನ ಅಥವಾ ಕುರಿಯ) ಮಾಂಸವನ್ನು ಬೇಯಿಸ ಅಥವಾ ಹುರಿಯ ಸಾಧ್ಯವಿತ್ತು. ಸುಟ್ಟ ಮಾಂಸವು ವಾರ್ಷಿಕ ಪಸ್ಕದಲ್ಲಿ ಒಂದು ಪ್ರಧಾನ ಘಟಕವಾಗಿತ್ತು. (ವಿಮೋಚನಕಾಂಡ 12:3-9) ಕುರಿಗಳು ಕ್ರಮದ ಹಾಲಿನ ಮೂಲವೂ ಆಗಿದ್ದವು, ಕುಡಿಯಲು ಮತ್ತು ಗಿಣ್ಣುಮಾಡಲು ಅದನ್ನುಪಯೋಗಿಲಾಗುತ್ತಿತ್ತು.—1 ಸಮುವೇಲ 17:17, 18; ಯೋಬ 10:10; ಯೆಶಾಯ 7:21, 22.
ಹಿಂಡಿನ ಮತ್ತು ಅದರ ಕುರುಬನ ನಡುವಣ ಆಪ್ತ ಸಂಬಂಧವನ್ನು ಗಮನಿಸದ ಹೊರತು ಕುರಿಗಳ ಯಾವ ಸಂದರ್ಶನವೂ ಪೂರ್ತಿಯಾಗದು. ಒಬ್ಬ ನಂಬಿಗಸ್ತ ಕುರುಬನು ತನ್ನ ಕುರಿಗಳ ಪರಾಮರಿಕೆ ಮಾಡುತ್ತಾನೆ. ಯೇಸು ತಿಳಿಸಿದ ಮೇರೆಗೆ, ಅವು ತಮ್ಮ ಕುರುಬನ ಸರ್ವವನ್ನು ಗುರುತಿಸುತ್ತವೆ ಮತ್ತು ತಮ್ಮ ಹೆಸರನ್ನು ಕರೆಯುವಾಗ ಪ್ರತಿಕ್ರಿಯೆಯನ್ನು ತೋರಿಸುತ್ತವೆ. (ಯೋಹಾನ 10:3, 4) ಅವುಗಳಲ್ಲಿ ಒಂದಾದರೂ ಕಳೆದು ಹೋದರೆ ಆಸಕ್ತ ಕುರುಬನು ಅದಕ್ಕಾಗಿ ಹುಡುಕುವನು. ಕಳೆದು ಹೋದ ಕುರಿಯು ಸಿಕ್ಕುವಾಗ ಅವನದನ್ನು ತನ್ನ ಹೆಗಲ ಮೇಲೆ ಹಾಕಿ ಮಂದೆಯೆಡೆಗೆ ಹಿಂದೆ ಒಯ್ಯುವನು.—ಲೂಕ 15:4, 5.
ದಾವೀದನು ತನ್ನನ್ನು ಯೆಹೋವನು ಕುರುಬನಾಗಿರುವ ಒಂದು ಕುರಿಗೆ ಹೋಲಿಸಿದಾಗ, ಮಂದೆಯೊಂದಿಗಿನ ತನ್ನ ವೈಯಕ್ತಿಕ ಅನುಭವವನ್ನು ಉಪಯೋಗಿಸಿದನು. ಆಕ್ರಮಿಸುವ ಪ್ರಾಣಿಗಳಿಂದ ಕುರಿಗಳು ಸಂರಕ್ಷಿಸಲ್ಪಟ್ಟ ಹಾಗೆ, ದಾವೀದನು ಸಂರಕ್ಷಿಸಲ್ಪಟ್ಟನು. ತಮ್ಮ ಪರಿಪಾಲಕ ಕುರುಬನ ನಾಯಕತ್ವವನ್ನು ಕುರಿಗಳು ಅನುಸರಿಸಶಕ್ತವಾಗಿವೆ. ಅವು ಗಾಯಗೊಂಡರೆ ಅವನು ಅವುಗಳ ಗಾಯವನ್ನು ಪ್ರಾಯಶಃ ಶಾಮಕ ಎಣ್ಣೆಯನ್ನು ಹಚ್ಚಿ ಕಟ್ಟುವನು. ಯೆಹೆಜ್ಕೇಲ 34:3-8 ರಲ್ಲಿ ವರ್ಣಿಸಲ್ಪಟ್ಟ ಇಸ್ರಾಯೇಲ್ಯ ಮುಖಂಡರ ಸ್ವಾರ್ಥಪರ ಕ್ರಿಯೆಗಳು ಇದಕ್ಕೆಷ್ಟು ಪ್ರತಿವಿರುದ್ಧವಾಗಿವೆ!
ಬೈಬಲ್ನಲ್ಲಿ ಕುರಿಗಳಿಗೆ ಸೂಚಿಸಿದ ಹಲವಾರು ಪ್ರವಾದನಾ ಮತ್ತು ಸಾಂಕೇತಿಕ ನಿರ್ದೇಶನೆಗಳು ಅಡಕವಾಗಿವೆ. ಹೀಗೆ ವಾಗ್ದಾನ ದೇಶದ ಕುರಿಗಳನ್ನು ಸಂದರ್ಶನೆ ಮತ್ತು ಅವುಗಳ ಪರಿಚಯವು “ಚಿಕ್ಕ ಹಿಂಡು,” ಮತ್ತು “ದೇವರ ಕುರಿಮರಿ,” ಮತ್ತು “ಬೇರೆ ಕುರಿಗಳು” ಎಂಬ ಪದಸರಣಿಗಳ ನಿಮ್ಮ ತಿಳುವಳಿಕೆಯನ್ನು ಆಳಗೊಳಿಸಬಲ್ಲದು.—ಲೂಕ 12:32; ಯೋಹಾನ 1:36; 10:16. (w92 3⁄1)
[ಅಧ್ಯಯನ ಪ್ರಶ್ನೆಗಳು]
a ಯೂದಾಯದ ಅರಣ್ಯದಲ್ಲಿ ಕುರಿಗಳ ಈ ಮೇಲಿನ ಚಿತ್ರವನ್ನು ಯೆಹೋವನ ಸಾಕ್ಷಿಗಳ 1992ರ ಕ್ಯಾಲೆಂಡ್ರ್ನಲ್ಲಿ ಅಧ್ಯಯನಿಸಬಹುದು.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Garo Nalbandian