‘ದೇವರ ಮತ್ತು ಯೇಸುವಿನ ಜ್ಞಾನವನ್ನು ಪಡೆಯುವುದು’
“ಒಬ್ಬನೇ ಸತ್ಯ ದೇವರಾದ ನಿನ್ನನ್ನು ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದೇ ನಿತ್ಯಜೀವವು.” (ಯೋಹಾನ 17:3, NW) ಹೀಗೆಂದು ಯೇಸು ತನ್ನ ಸ್ವರ್ಗೀಯ ತಂದೆಗೆ ಪ್ರಾರ್ಥನೆಯಲ್ಲಿ ಹೇಳಿದನು, ಮತ್ತು ಈ ರೀತಿಯಲ್ಲಿ ನಿತ್ಯಜೀವವನ್ನು ಪಡೆಯುವುದಕ್ಕಾಗಿ ಒಂದು ಪೂರ್ವಾಪೇಕ್ಷಿತ ಆವಶ್ಯಕತೆಯನ್ನು ಆತನು ತೋರಿಸಿದ್ದಾನೆ. ಆದರೆ ನೂ ವರ್ಲ್ಡ್ ಟ್ರಾನ್ಸ್ಲೇಶನ್ ಈ ವಚನವನ್ನು ಹೆಚ್ಚಿನ ಬೇರೆ ಬೈಬಲ್ ಭಾಷಾಂತರಗಳು ವ್ಯಕ್ತಪಡಿಸುವ ಪ್ರಕಾರ, “ದೇವರನ್ನು . . . ತಿಳಿಯುವುದು” ಎಂಬದರ ಬದಲಿಗೆ “ದೇವರ . . . ಜ್ಞಾನವನ್ನು ಪಡೆಯುವುದು” ಎಂದು ತರ್ಜುಮೆ ಮಾಡಿರುವುದೇಕೆ?—ಯೋಹಾನ 17:3ರ ಪಾದಟಿಪ್ಪಣಿ ನೋಡಿರಿ.
‘ಜ್ಞಾನವನ್ನು ಪಡೆಯುವುದು’ ಅಥವಾ ‘ತಿಳಿಯುವುದು’ ಎಂದು ಇಲ್ಲಿ ಭಾಷಾಂತರವಾದ ಗ್ರೀಕ್ ಶಬ್ದ ಗಿನಾಸ್ಕೊ ಒಂದು ಕ್ರಿಯಾಪದದ ರೂಪವಾಗಿದೆ. ಮತ್ತು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನ ತರ್ಜುಮೆಯು ಆ ಶಬ್ದದ ಅರ್ಥವನ್ನು ಸಾಧ್ಯವಾದಷ್ಟು ಪೂರ್ಣವಾಗಿ ಹೊರತರಲು ಪ್ರಯತ್ನಿಸಿದೆ. ಗಿನಾಸ್ಕೊದ ಮೂಲಾರ್ಥವು “ತಿಳಿಯುವುದು” ಎಂದಾಗಿದೆ, ಆದರೆ ಆ ಗ್ರೀಕ್ ಶಬ್ದಕ್ಕೆ ನಾನಾ ಅಭಿಪ್ರಾಯಛಾಯೆಗಳಿವೆ. ಕೆಳಗಿನ ಅರ್ಥವಿವರಣೆಗಳನ್ನು ಗಮನಿಸಿರಿ:
“ಗಿನಾಸ್ಕೊ (γιυωσκω) ಎಂಬ ಶಬ್ದವು ಜ್ಞಾನ ಪಡೆಯುವುದನ್ನು, ಅದನ್ನು ತಿಳಿಯುವ, ಅಂಗೀಕರಿಸುವ, ಗ್ರಹಿಸಿಕೊಳ್ಳುವ ಅಥವಾ ಪೂರಾ ಗ್ರಹಿಸಿಕೊಳ್ಳುವುದನ್ನು ಸೂಚಿಸುತ್ತದೆ.” (ಎಕ್ಸ್ಪೊಸಿಟರಿ ಡಿಕ್ಷೆನೆರಿ ಆಫ್ ನ್ಯೂ ಟೆಸ್ಟಮೆಂಟ್ ವಡ್ಸ್, ಡಬ್ಲ್ಯೂ.ಇ. ವೈನ್) ಆದಕಾರಣ, ಗಿನಾಸ್ಕೊವನ್ನು ‘ಜ್ಞಾನವನ್ನು ಪಡೆಯವು’ದಾಗಿ ಭಾಷಾಂತರಿಸುವುದು, ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ನ ಠೀಕಾಕಾರರು ಹೇಳುವಂ, ‘ಬೈಬಲನ್ನು ಬದಲಾಯಿಸುವುದಲ್ಲ.’ ಆ ಶಬ್ದವು ಒಳಗೊಳ್ಳಬಹುದಾದ ಅರ್ಥಗಳ ವಿವಿಧ ಅಭಿಪ್ರಾಯಛಾಯೆಗಳ ಒಂದು ಚರ್ಚೆಯಲ್ಲಿ, ಪ್ರಖ್ಯಾತ ನಿಘಂಟುಕಾರ ಜೇಮ್ಸ್ ಹೋಪ್ ಮೌಲ್ಟನ್ ಹೇಳುವುದು: “ಪ್ರಸ್ತುತ ಸರಳ ಶಬ್ದ γιυωσκω, ಮುಂದುವರಿಯುವ ಅರ್ಥದಲ್ಲಿ ‘ಜ್ಞಾನವನ್ನು ಪಡೆದುಕೊಳ್ಳುವುದು’ ಎಂದಾಗಿದೆ.”—ಎ ಗ್ರಾಮರ್ ಆಫ್ ನ್ಯೂ ಟೆಸ್ಟಮೆಂಟ್ ಗ್ರೀಕ್.
ಎ ಗ್ರಮ್ಯಾಟಿಕಲ್ ಎನಾಲಿಸಿಸ್ ಆಫ್ ಗ್ರೀಕ್ ನ್ಯೂ ಟೆಸ್ಟಮೆಂಟ್, ಯೋಹಾನ 17:3 ರಲ್ಲಿ ಬರುವ ಗಿನಾಸ್ಕೊವು “ಒಂದು ಮುಂದವರಿಯುವ ಕಾರ್ಯಗತಿಯನ್ನು ಸೂಚಿಸುವುದಾಗಿ’ ವಿವರಿಸುತ್ತದೆ. ಈ ಗ್ರೀಕ್ ಶಬ್ದದ ಮೇಲಣ ಅಧಿಕ ಹೇಳಿಕೆಯು, ಮರಿನ್ವ್ ಆರ್. ವಿನ್ಸೆಂಟರ ವರ್ಡ್ ಸಡ್ಟೀಸ್ ಇನ್ ದ ನ್ಯೂ ಟೆಸ್ಟಮೆಂಟ್ನಲ್ಲಿ ತೋರಿಬರುತ್ತದೆ. ಇದು ಹೇಳುವುದು: “ಅದರ ವರ್ತಮಾನಕಾಲ ರೂಪವು ಒಂದು ಸದಾ ಮಂದುವರಿಯುವ, ಪ್ರಗತಿಪೂರ್ವಕವಾದ ಗ್ರಹಿಸಿಕೊಳ್ಳುವಿಕೆಯನ್ನು ಸೂಚಿಸುವುದರಿಂದ, ನಿತ್ಯಜೀವವು ಜ್ಞಾನದಲ್ಲಿ ಅಥವಾ ಜ್ಞಾನದ ಬೆನ್ನಟ್ಟುವಿಕೆಯಲ್ಲಿ ಸೇರಿಕೊಂಡಿರುತ್ತದೆ.” (ಒತ್ತಕ್ಷರ ಅವರದ್ದು.) ಆ ಶಬ್ದವನ್ನು, “ತಿಳಿಯುತ್ತಾ ಇರಬೇಕು” ಎಂಬದಾಗಿ ಭಾಷಾಂತರಿಸುವಂತೆ, ಎ.ಟಿ. ರಾಬರ್ಟ್ಸನ್ರ ವರ್ಡ್ ಪಿಚ್ಚರ್ಸ್ ಇನ್ ದ ನ್ಯೂ ಟೆಸ್ಟಮೆಂಟ್ ಸೂಚಿಸುತ್ತದೆ.
ಆದ್ದರಿಂದ, ಮೂಲ ಗ್ರೀಕಿನಲ್ಲಿ ಯೋಹಾನ 17:3 ರ ಯೇಸುವಿನ ಮಾತುಗಳು ಸತ್ಯದೇವರನ್ನು ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನನ್ನು ತಿಳಿಯಲು ಸತತವಾಗಿ ಪ್ರಯತ್ನ ಮಾಡುವುದನ್ನು ಸೂಚಿಸುತ್ತದೆ, ಮತ್ತು ಇದನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ತರ್ಜುಮೆಯಲ್ಲಿ ಚೆನ್ನಾಗಿ ಹೊರತರಲಾಗಿದೆ. ನಾವು ಈ ಜ್ಞಾನವನ್ನು ಪಡೆಯುವುದು ದೇವರ ವಾಕ್ಯವನ್ನು ದಕ್ಷತೆಯಿಂದ ಅಭ್ಯಾಸಿಸುವ ಮೂಲಕ ಮತ್ತು ವಿಧೇಯತೆಯಿಂದ ನಮ್ಮ ಜೀವಿತಗಳನ್ನು ಅದರ ಮಟ್ಟಗಳಿಗೆ ಹೊಂದಿಸಿಕೊಳ್ಳುವ ಮೂಲಕ. (ಹೋಶೇಯ 4:1, 2; 8:2; 2 ತಿಮೊಥಿ 3:16, 17 ಹೋಲಿಸಿರಿ.) ದೇವರ ವ್ಯಕ್ತಿತ್ವದ ಮತ್ತು ಆತನ ಮಗನ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಳ್ಳುವವರಿಗೆ ಮತ್ತು ಅನಂತರ ಅವರನ್ನು ಅನುಕರಿಸಲು ಪ್ರಯತ್ನಿಸುವವರಿಗೆ ಯಾವ ಬಹುಮಾನವು ಕಾದಿರುತ್ತದೆ? ನಿತ್ಯಜೀವ! (w92 3/1)