ಹಿಂದೂ ಸಾಗರದ ದ್ವೀಪಗಳು ಸುವಾರ್ತೆಯನ್ನು ಕೇಳುತ್ತವೆ
ಮಡಗಾಸ್ಕರಕ್ಕೆ ಸಂಬಂಧಿಸಿದ ವೃತ್ತಖಂಡದಲ್ಲಿ ಏರ್ಪಡಿಸಲ್ಪಟ್ಟು ಪಶ್ಚಿಮ ಹಿಂದೂ ಸಾಗರದ 39 ಲಕ್ಷ ಚದರ ಕಿಲೊಮೀಟರ್ ವಿಸ್ತ್ರೀರ್ಣಕ್ಕೆ ರಾಡ್ರಿಗಸ್, ಮರೀಶಿಯಸ್, ರೆಯೂನ್ಯನ್, ಸೀಷೆಲ್ಸ್, ಮಯೋಟ್ ಮತ್ತು ಕಾಮೊರಸ್ ದ್ವೀಪಗಳು ಹರಡಿವೆ. ಅಂಥ ಒಂದು ವಿಶಾಲವಾದ ಕ್ಷೇತ್ರವನ್ನು ಆವರಿಸಿವೆಯಾದರೂ, ಈ ದ್ವೀಪಗಳ ನೆಲಪ್ರದೇಶವು ಸುಮಾರು 7,300 ಚದರ ಕಿಲೊಮೀಟರ್ ಅಷ್ಟೇ. 23 ಲಕ್ಷ ಜನಸಂಖ್ಯೆಯೊಂದಿಗೆ, ಅವು ಲೋಕದಲ್ಲೇ ಅತ್ಯಂತ ಜನನಿಬಿಡ ನಿವಾಸಿತ ದ್ವೀಪಗಳಾಗಿರುತ್ತವೆ.
ಈ ಜನಸಂಖ್ಯೆಯಲ್ಲಿ ಸುಮಾರು 2,900 ಯೆಹೋವನ ಸಾಕ್ಷಿಗಳು ದ್ವೀಪವಾಸಿಗಳಿಗೆ ದೇವರ ರಾಜ್ಯದ ಸುವಾರ್ತೆಯನ್ನು ಉತ್ಸಾಹದಿಂದ ಸಾರುವ ಕಾರ್ಯದಲ್ಲಿ ಸೇರಿರುತ್ತಾರೆ. ಒಂಟಿಯಾದ ಸ್ಥಳದಲ್ಲಿ ಇರುವುದರಿಂದ ಈ ಸಾಕ್ಷಿಗಳು ಸಂಚಾರ ಮೇಲ್ವಿಚಾರಕರ ಸಂದರ್ಶನೆಗಳನ್ನು ಮತ್ತು ಮರೀಶಿಯಸ್ನ ವೆಕಾಯಸ್ನಲ್ಲಿ ವಾಚ್ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಿಂದ ಏರ್ಪಡಿಸಲ್ಪಡುವ ವಾರ್ಷಿಕ ಸಮ್ಮೇಲನಗಳನ್ನು ವಿಶೇಷವಾಗಿ ಗಣ್ಯಮಾಡುತ್ತಾರೆ. ಈ ಸಂದರ್ಭಗಳು ಯೆಶಾಯ 42:10ರ ಮಾತುಗಳಲ್ಲಿ ಅವರು ನಿಜವಾಗಿಯೂ ಉಲ್ಲಾಸಿಸುವ ಸಮಯಗಳಾಗಿವೆ: “ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನ ಗೀತವನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.”
ಇತ್ತೀಚೆಗೆ ಬ್ರಾಂಚ್ ಆಫೀಸಿನ ಪ್ರತಿನಿಧಿಗಳು ಸಭೆಗಳನ್ನು ಸಂದರ್ಶಿಸಲು ಮತ್ತು ವಿಶೇಷ ಒಂದು-ದಿನದ ಸಮ್ಮೇಲಗಳ ವಾರ್ಷಿಕ ಶ್ರೇಣಿಯನ್ನು ನಡಿಸುವುದಕ್ಕಾಗಿ ಈ ದ್ವೀಪಗಳಿಗೆ ಪ್ರಯಾಣ ಮಾಡಿದರು, ಈ ಸಮ್ಮೇಲನದ ಮುಖ್ಯ ವಿಷಯವು 1 ಪೇತ್ರ 1:15ರಲ್ಲಿ ಆಧಾರಿತವಾದ “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರ್ರಿ” ಎಂದಾಗಿತ್ತು. ಸಾಗರದ ವಿಶಾಲವಾದ ಕ್ಷೇತ್ರವನ್ನು ಆವರಿಸಲಿಕ್ಕಾಗಿ ಹೆಚ್ಚಾಗಿ ವಿಮಾನದ ಮೂಲಕ—ಕೆಲವೊಮ್ಮೆ ಆಧುನಿಕ ಜಂಬೊ ಜೆಟ್ಗಳ ಮೂಲಕ ಆದರೆ ಆಗಿಂದಾಗ್ಯೆ ಚಿಕ್ಕದಾದ ಚಾಲಕದಂಡದಿಂದ ನಡಿಸಲ್ಪಡುವ ನಾವೆಯ ಮೂಲಕ ಪಯಣಿಸಲಾಗುತ್ತದೆ. ಕೂವೆ ಹಡಗುಗಳನ್ನು ಮತ್ತು ಚಿಕ್ಕ ಹಾಯಿ ಹಡಗಗಳನ್ನು ಸಹಾ ಬಳಸಲಾಯಿತು. ಈ ದೂರದ ಹಿಂದೂ ಸಾಗರದ ದ್ವೀಪಗಳು ಸುವಾರ್ತಾ ಸಾರುವಿಕೆಗೆ ಹೇಗೆ ಕಿವಿಗೊಡುತ್ತಾ ಇವೆ ಎಂದು ನೋಡಲು ನಮ್ಮೊಂದಿಗೆ ಬನ್ನಿರಿ!
ಮೊದಲ ನಿಲುಗಡೆ—ರಾಡ್ರಿಗಸ್
ಮರೀಶಿಯಸ್ನಿಂದ ಒಂದೂವರೆ ತಾಸಿನ ವಿಮಾನ ಯಾನದ ಅನಂತರ ನಮಗೊಂದು ಹವಳದ ದಿಬ್ಬ ಸಿಕ್ಕುತ್ತದೆ. ಹಿಂದೂ ಸಾಗರದಲ್ಲಿ ಒಂದು ಚಿಕ್ಕ ಚುಕ್ಕೆಯಂಥ ನೆಲಪ್ರದೇಶವನ್ನು ಸುತ್ತುವರಿದ ಒಂದು ದೊಡ್ಡ ಜಲಭಾಗದ ಹೊರಗಣ ಅಂಚನ್ನು ಅದು ಗುರುತಿಸುತ್ತದೆ. ಇದು ನಮ್ಮ ಮೊದಲನೆಯ ನಿಲುಗಡೆಯಾದ ರಾಡ್ರಿಗಸ್ ದ್ವೀಪವು.
ವಿಮಾನ ನಿಲ್ದಾಣವು ನೆಲಪ್ರದೇಶದಿಂದ ಮುಂದಕ್ಕೆ ಚಾಚಿರುವ ಪ್ವಾಂಟ್ ಕಾರೈಲ್ ಎಂದು ಕರೆಯಲ್ಪಡುವ ಒಂದು ಹವಳ ಪ್ರಲಂಬನದಲ್ಲಿ ಕಟ್ಟಲ್ಪಟ್ಟಿದೆ. ಈ ಕ್ಷೇತ್ರದಲ್ಲಿ ಹವಳವು ಎಷ್ಟು ದಪ್ಪವಾಗಿದೆಯೆಂದರೆ ಕಟ್ಟಡ ಕಟ್ಟುವುದರಲ್ಲಿ ಉಪಯೋಗಿಸಲು ದಿಮ್ಮಿಯಾಗಿ ಅದನ್ನು ಸಿಗಿಯ ಸಾಧ್ಯವಿದೆ. ಒಂದು ಚಿಕ್ಕ ಮೋಟಾರು ನಮ್ಮನ್ನು ವಿಮಾನ ನಿಲ್ದಾಣದಿಂದ ಅಗಲಕಿರಿದಾದ ಹಾದಿಯಲ್ಲಿ ಸುತ್ತುಸುತ್ತಾಗಿ ತಂದು ಮುಖ್ಯ ಊರಾದ ಪೋರ್ ಮಟುರನ್ಗೆ ತರುತ್ತದೆ. ಒಂದು ಕಡೆಯಿಂದ ನಾವು ದ್ವೀಪದ ತೀರಾ ಆಚೇಕಡೆಯಲ್ಲಿರುವ ದೂರದ ಹವಳ ದಿಬ್ಬಗಳನ್ನು, ನೀಲ ಜಲಭಾಗವನ್ನು ಮತ್ತು ಕಲ್ಲುಬಂಡೆಯ ಕಡಲತೀರವನ್ನು ಕಾಣಬಹುದು. ಮಳೆಗಾಲವು ಆಗಲೇ ಮುಗಿದಿರುವುದರಿಂದ, ಗುಡ್ಡ ಪ್ರದೇಶಗಳು ಒರಟಾದ ಪಾಚಿಯಂಥ ಹುಲ್ಲಿನಿಂದ ಮತ್ತು ಮೇಯುತ್ತಿರುವ ದನ, ಕುರಿ ಮತ್ತು ಆಡುಗಳ ಚುಕ್ಕೆಗಳಿಂದ ಆವರಿತವಾಗಿದ್ದವು.
ಪೋರ್ ಮಟುರನ್ನ ಮಧ್ಯೆ ಇದ್ದ ಒಂದು ಚಿಕ್ಕ, ನೀಟಾದ ರಾಜ್ಯ ಸಭಾಗೃಹವೇ ನಮ್ಮ ಒಂದು-ದಿನದ ವಿಶೇಷ ಸಮ್ಮೇಲನದ ಸ್ಥಳವಾಗಿತ್ತು. ರಾಡ್ರಿಗಸ್ನಲ್ಲಿ ನಮ್ಮ ಕಾರ್ಯವು ಮೊದಲು ತೆರೆಯಲ್ಪಟ್ಟದ್ದು 1964ರಲ್ಲಿ. ಈಗ 37,000 ಜನಸಂಖ್ಯೆಯ ನಡುವೆ 36 ಸುವಾರ್ತೆಯ ಪ್ರಚಾರಕರು ಇದ್ದಾರೆ. 53 ಜನರ ಹಾಜರಿಯನ್ನು ಮತ್ತು 18 ವರ್ಷ-ಪ್ರಾಯದ ಒಬ್ಬ ಯುವಕನು ಸ್ನಾನಪಡೆದದ್ದನ್ನು ಕಂಡದ್ದು ಎಷ್ಟು ಸಂತೋಷ! ಅವನ ತಾಯಿ ಓದುಬರಹ ಬಲ್ಲವಳಲ್ಲವಾದರೂ, 1969ರಲ್ಲಿ ಸತ್ಯ ಸ್ವೀಕರಿಸಿದಳು ಮತ್ತು ಕುಟುಂಬ ವಿರೋಧದ ಮಧ್ಯೆಯೂ ಆಕೆ ಯೆಹೋವನ ಸೇವೆಯನ್ನು ಮುಂದುವರಿಸಿದಳು. ಈಗ ಅವಳ ಮಕ್ಕಳಲ್ಲಿ ಇಬ್ಬರು ಯೆಹೋವನಿಗೆ ಸಮರ್ಪಿತರಾಗಿದ್ದಾರೆ.
ಸಮ್ಮೇಲನದ ಅನಂತರ ಒಂದು ವಾರವನ್ನು ನಾವು ದ್ವೀಪದಲ್ಲಿ ಸಾರುವುದರಲ್ಲಿ ಕಳೆದೆವು. ನಮ್ಮ ಮರೀಶಿಯನ್ ಕ್ರಿಯಾಲ್ನ್ನು ನಾವು ಮಾತಾಡುತ್ತೇವೆ ಯಾಕಂದರೆ ಇಲ್ಲಿ ರಾಡ್ರಿಗಸ್ನಲ್ಲಿಯೂ ಆ ಭಾಷೆಯು ಆಡಲ್ಪಡುತ್ತದೆ. ಒಂದು ಬಸ್ ಪ್ರಯಾಣ ಮತ್ತು ನಡಿಗೆಯು ನಮ್ಮನ್ನು ನಮ್ಮ ಕ್ಷೇತ್ರಕ್ಕೆ—ಒಳನಾಡಿನ ಹಾದಿಯಿಂದ ಸಮುದ್ರದ ಕಡೆಗೆ ಚಾಚಿರುವ ಒಂದು ಹಸುರಾದ ತಗ್ಗುಪ್ರದೇಶಕ್ಕೆ ನಡಿಸುತ್ತದೆ. ಎಂಥ ನಯನ ಮನೋಹರ ನೋಟವದು—ನೀಲಹಸುರು ಜಲನೀರು, ಬೆಳ್ಳಗಿನ ಹವಳ ದಿಬ್ಬ ಮತ್ತು ಹಿನ್ನೆಲೆಯಲ್ಲಿ ಕಡುನೀಲ ಸಾಗರ! ತಿಳಿಯಾದ ಮಾಲಿನ್ಯರಹಿತ ಗಾಳಿಯಿಂದ ಚೈತನ್ಯಹೊಂದಿದವರಾಗಿ, ನಾವು ಹೊರಡಲು ಸಿದ್ಧವಾದೆವು.
ತಗ್ಗು ಪ್ರದೇಶದ ಅನೇಕ ಚಿಕ್ಕ ಮನೆಗಳನ್ನು ಮುಟ್ಟಲು ನಾವು ಹೊಲಗಳ ನಡುವಿನ ಚಿಕ್ಕ ಒಳದಾರಿಗಳನ್ನು ಹಿಂಬಾಲಿಸುತ್ತಾ ಜವುಗು ತೊರೆಯನ್ನು ಅಡಾದ್ಡಿಡಿಯ್ಡಾಗಿ ಹಾದು ಬಂದೆವು. ಪ್ರತಿಯೊಂದು ಮನೆಯಲ್ಲಿ ನಮಗೆ ಸಪ್ರೇಮ ಸ್ವಾಗತವು ದೊರೆಯುತ್ತದೆ ಮತ್ತು ಶೀಘ್ರದಲ್ಲೇ ಬರುವ ರಾಜ್ಯದ ಆಶೀರ್ವಾದಗಳ ಕುರಿತು ನಾವು ಮನೆಯವರೊಂದಿಗೆ ಮಾತಾಡ ಶಕ್ತರಾಗುತ್ತೇವೆ. ಸ್ವಲ್ಪ ಹೊತ್ತಿನೊಳಗೇ ತಗ್ಗಿನಲ್ಲಿ ಬಹುದೂರಕ್ಕೆ ಬಂದಿದ್ದೆವು ಮತ್ತು ಅದು ಮನೆಗೆ ಹಿಂತಿರುಗುವ ಸಮಯವಾಗಿತ್ತು. ಇದರ ಅರ್ಥ ಪುನಃ ಹತ್ತುವಿಕೆ ಮತ್ತು ತಾಸುಗಳ ನಡೆದಾಟ, ಆದರೆ ಸ್ಥಳೀಕ ಸತ್ಕಾರವು ನಮ್ಮ ರಕ್ಷಣೆಗೆ ಬರುತ್ತದೆ—ಒಂದು ಜೀಪಿನ ಹಿಂದೆ ಕೂತುಕೊಳ್ಳಲು ನಮಗೆ ಸ್ಥಳಸಿಗುತ್ತದೆ.
ಆ ಪರಿಶ್ರಮದ ಸಂಚಾರದ ನಂತರ ವಕೋಸದ ಸುಂದರವಾದ ಬೆತೆಲ್ ಮನೆಗೆ ಹಿಂತಿರುಗಲು ನಾವು ಸಂತೋಷ ಪಟ್ಟೆವು. ಎರಡು ವಿಶೇಷ ಸಮ್ಮೇಲನ ದಿನಗಳು ಮ್ಯುನಿಸಿಪಲ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದವು. ಮೊದಲನೆಯ ದಿನ 760 ಜನರು ಬಂದಿದ್ದರು. ದ್ವೀಪದಲ್ಲಿದ್ದ 12 ಸಭೆಗಳಲ್ಲಿ ಅರ್ಧದಿಂದ ಅವರು ಬಂದಿದ್ದರು. ಮರುದಿನ, ಅದೇ ಕಾರ್ಯಕ್ರಮವನ್ನು ಬೇರೆ ಆರು ಸಭೆಗಳ 786 ವ್ಯಕ್ತಿಗಳೊಂದಿಗೆ ಪಾಲುಗಾರರಾದೆವು. ವಾರಾಂತ್ಯದಲ್ಲಿ ನಾಲ್ವರು ಹೊಸಬರಿಗೆ ದೀಕ್ಷಾಸ್ನಾನವಾಯಿತು. ದ್ವೀಪವಾಸಿಗಳಿಗೆ ಶುಭವಾರ್ತೆಯನ್ನು ತರುವುದರಲ್ಲಿ ಪಾಲಿಗರಾಗುವ 30 ವಿಶೇಷ ಪಯನೀಯರರು ಮತ್ತು 50 ಕ್ರಮದ ಪಯನೀಯರರು ಅಲ್ಲಿದ್ದಾರೆ.
ದೂರದ ಸೀಷೆಲ್ಸ್
ಕ್ರಿಯಾಲ್ ಭಾಷೆಯಲ್ಲಿ ಝೊಲ್ಲ್ ಎಲ್ವಾನೆನ್ ಸೆಸೆಲ್ ಎಂದು ಕರೆಯಲ್ಪಟ್ಟು “ದೂರದ ಸೀಷೆಲ್ಸ್ ದ್ವೀಪಗಳು” ಎಂಬರ್ಥದ ಸೀಷೆಲ್ಸ್ನ ಮಾಹೆ ದ್ವೀಪಕ್ಕೆ, 1,600 ಕಿಲೊಮೀಟರ್ ದೂರದ ಸಾಗರ ಚಾಚಿನ ಮೇಲಿನಿಂದ ತೀರಾ ಉತ್ತರಕ್ಕೆ ನೇರವಾಗಿ ವಿಮಾನ ಪಯಣಕ್ಕೆ ಅದು ಪುನಃ ಸಮಯವಾಗಿತ್ತು. ಅಷ್ಟು ದೂರವಿರುವ ಕಾರಣ ಬ್ರಾಂಚ್ ಆಫೀಸು ವರ್ಷಕ್ಕೆ ಕೇವಲ ಎರಡೇ ಸಂದರ್ಶನೆಗಳನ್ನು ಏರ್ಪಡಿಸ ಶಕವ್ತಾಗಿದೆ. ವಿಶೇಷ ಸಮ್ಮೇಲನ ದಿನ ಮತ್ತು ಸರ್ಕಿಟ್ ಸಮ್ಮೇಳನವು ವಸಂತ ಕಾಲದಲ್ಲಿ ಮೂರು ಅನುಕ್ರಮ ದಿನಗಳಲ್ಲಿ ನಡೆಯುತ್ತಿತ್ತು. ಜಿಲ್ಲಾ ಅಧಿವೇಶನವು ವರ್ಷದಲ್ಲಿ ಅನಂತರ ನಡೆಯಲಿಕ್ಕಿತ್ತು. ಈಗ ಒಕ್ಟೋಬರದ ಮಧ್ಯದಲ್ಲಿ ನಾವು ಜಿಲ್ಲಾ ಅಧಿವೇಶನಕ್ಕಾಗಿ ಇಲ್ಲಿದ್ದೇವೆ, ಇದನ್ನು ಹಿಂಬಾಲಿಸಿ ಸಭೆಗೆ ಒಂದು ವಾರದ ಸಂದರ್ಶನೆ ಇದೆ. ಇಲ್ಲಿ ಪುನಃ ನಾವು ನಮ್ಮ ಮರೀಶಿಯನ್ ಕ್ರಿಯಾಲನ್ನು ಉಪಯೋಗಿಸಬಲ್ಲೆವು.
ಸಮೀಪದ ಪ್ರಾಲನ್ ಮತ್ತು ಲಾ ಡೆಗ್ ದ್ವೀಪಗಳ ಸಹೋದರರು ಆವಾಗಲೇ ಬಂದಿದ್ದರು. ಹನ್ನೆರಡು ಜನಾಂಗಗಳ ಜನರು ಅಲ್ಲಿ ಪ್ರತಿನಿಧಿಸಲ್ಪಟ್ಟದ್ದು ಅದೆಷ್ಟು ಪ್ರಚೋದಕವು! ಸಮ್ಮೇಲನ ಸ್ಥಳವು ಸ್ಥಳೀಕ ರಾಜ್ಯ ಸಭಾಗೃಹವಾಗಿತ್ತು, ಅದು ಸಾಕ್ಷಿಗಳಲ್ಲೊಬ್ಬನ ಮನೆಯ ಹಿಂಬಾಗದ ದೊಡ್ಡ ಗ್ಯಾರೆಜನ್ನು ಪರಿವರ್ತಿಸಿ ಮಾಡಲ್ಪಟ್ಟಿತ್ತು. ಸಂದರ್ಶಕರು ಕೂಡಿ ಕೇವಲ ಆರು ಸಹೋದರರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗ್ಯತೆ ಪಡೆದಿದ್ದರಿಂದ, ಆ ನಾಲ್ಕು ದಿನಗಳಲ್ಲಿ ಕೆಲವರಿಗೆ ಹಲವಾರು ಭಾಷಣಗಳನ್ನು ಕೊಡುವ ಸುಯೋಗವು ಸಿಕ್ಕಿತು. ಅಧಿವೇಶನದ ಕೊನೆಯ ದಿನದಲ್ಲಿ 216 ಮಂದಿ ಹಾಜರಾದದ್ದನ್ನು ಕಂಡು 81 ಮಂದಿ ಪ್ರಚಾರಕರು ಪುಳಕಿತಗೊಂಡರು.
ಸಮ್ಮೇಳನದ ಅನಂತರ ನಾವು ಕೂವೆ ಹಡಗವನ್ನು ಹಿಡಿದು 40 ಕಿಲೊಮೀಟರ್ ದೂರದ ಮಾಹೆಯ ಈಶಾನ್ಯದಲ್ಲಿರುವ ಪ್ರಾಲನ್ಗೆ ಹೊರಟೆವು. ಈ 18 ಮೀಟರ್ ಉದ್ದದ ಹಡಗವು ಗುಗ್ಗುಲ ಮರದಿಂದ ಮಾಡಲ್ಪಟ್ಟಿತ್ತು. ಈ ನೀಳವಾದ ಹಡಗವು 50 ಪ್ರಯಾಣಿಕರನ್ನು ಮತ್ತು ಸುಮಾರು 40 ಟನ್ ಸಾಮಾನನ್ನು ಒಯ್ಯಶಕ್ತವಾಗಿತ್ತು. ನಾವು ಮಾಹೆಯ ಬಂದರನ್ನು ಬಿಟ್ಟು ದೂರದ ದಿಗಂತದಲ್ಲಿ ಪ್ರಾಲನ್ ಹೊರಮೇರೆಯ ಕಡೆಗೆ ನಮ್ಮ ಮೂತಿಯನ್ನು ತಿರುಗಿಸಿದಾಗ, ಇಕ್ಕೂವೆಗಳಿಂದ ಬಿಳೀ ಹಾಯಿಗಳ ಹೊಡೆತದ ರಭಸದೊಂದಿಗೆ ಡೀಸೆಲ್ ಎಂಜಿನಿನ ದಬ್ಬನ್ನು ಅನುಭವಿಸ ಶಕ್ತರಾದೆವು.
ಎರಡೂವರೆ ತಾಸುಗಳ ಅನಂತರ, ಸುಂದರವಾದ ಸೈಂಟ್ ಆ್ಯನ್ ಕೊಲಿಯ್ಲ ಶಾಂತ ಜಲಪ್ರವಾಹವನ್ನು ಪ್ರವೇಶಿಸಲು ಕಲ್ಬಂಡೆಯ ಭೂಶಿರವನ್ನು ಸುತ್ತುತ್ತೇವೆ. ಉದ್ದವಾದ ದಕ್ಕೆಗೆ ಇಳಿದಾಗ, ನಮ್ಮ ಸಹೋದರರು ಕಾಯುತ್ತಿರುವುದು ನಮಗೆ ಕಾಣಿಸುತ್ತದೆ. ಆ ಚಿಕ್ಕ ದ್ವೀಪದಲ್ಲಿ 13 ಪ್ರಚಾರಕರು ಇದ್ದಾರೆ, ಮತ್ತು 8 ಸಂದರ್ಶಕರು ಬೇರೆ ಭಾಗಗಳಿಂದ ಬಂದಿದ್ದರು. ಹೀಗೆ ವಿಶೇಷ ಭಾಷಣಕ್ಕೆ ಆ ಚಿಕ್ಕ ಹಾಲ್ 39 ಜನರಿಂದ ತುಂಬಲ್ಪಟ್ಟದ್ದನ್ನು ಕಂಡಾಗ ನಾವು ಬಹಳಷ್ಟು ಪ್ರಚೋದಿತರಾದೆವು. ಬೆಳವಣಿಗಾಗಿ ಎಂಥ ಉತ್ತಮ ಸಂಭಾವ್ಯತೆ ಅಲ್ಲಿದೆ!
ಇಲ್ಲಿ ಪ್ರಾಲನ್ನಲ್ಲಿರುವಾಗ, ನಾವು ಸುಂದರವಾದ ವೇಲ್ ಡಿಮಾವನ್ನು ನೋಡಲೇ ಬೇಕು. ಇದು ಕೊಕೊಡಿಮಾರ್ ತಾಳೆಯ ಬೀಡು, ಇದು ಫಲಿಸುವ ಕಾಯಿ ಇಡೀ ಲೋಕದಲ್ಲಿ ಅತ್ಯಂತ ದೊಡ್ಡ ಗಾತ್ರದ್ದು, ಪ್ರತಿಯೊಂದು 20 ಕಿಲೊ ಭಾರವಿದೆ. ಅರಣ್ಯದ ತಂಪಾದ ಹಸುರು ನೆರಳಲ್ಲಿ ನಾವೀ ತಾಳೆಗಳನ್ನು ಅವುಗಳ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ನೋಡುತ್ತೇವೆ. 1968ರಲ್ಲಿ ಕೊನೆಯ ಅಳತೆಯನ್ನು ತೆಗೆದಾಗ, ಅತ್ಯಂತ ಎತ್ತರದ ಮರ 31 ಮೀಟರ್ ಎಂಬದಾಗಿ ಸಂದರ್ಶಕರಿಗಾಗಿ ಒದಗಿಸಲಾದ ಅಧಿಕೃತ ಪಟ್ಟಿಯು ವಿವರಿಸುತ್ತದೆ. ಇವುಗಳಲ್ಲಿ ಕೆಲವು ಮರಗಳು 800 ವರ್ಷ ಪ್ರಾಯದ್ದು ಎಂದು ಅಂದಾಜು ಮಾಡಲಾಗಿದೆ. ಮರವು ಫಲಕೊಡಲಿಕ್ಕೆ 25 ವರ್ಷ ಕಳೆಯಬೇಕು ಮತ್ತು ಕಾಯಿ ಪಕ್ವವಾಗಲು 7 ವರ್ಷ ತಗಲುತ್ತದೆ. ಬ್ರೊಷರ್ ಹೀಗೆ ಎಚ್ಚರಿಸುವುದರಲ್ಲಿ ಆಶ್ಚರ್ಯವೇನಿಲ್ಲ: “ಫೋಟೋ ಮಾತ್ರ ತೆಗೆಯಿರಿ, ಹೆಜ್ಜೆಗುರುತನ್ನು ಮಾತ್ರ ಬಿಟ್ಟುಹೋಗಿರಿ!”
ಮರುದಿನ ಬೆಳಿಗ್ಗೆ ಏಳು ಗಂಟೆಗೆ ನಾವು ಒಂದು ದೋಣಿಯ ಮೂಲಕ ಚಿಕ್ಕ ದ್ವೀಪವಾದ ಲಾ ಡಿಗ್ಯುಗೆ ಹೊರಡುತ್ತೇವೆ. ದಕ್ಕೆಯ ಸುತ್ತಲೂ ಅನೇಕ ಚಿಕ್ಕ ಚಿಕ್ಕ ದೋಣಿಗಳು ಗುಂಪುಗೂಡಿವೆ. ಅವು ಸುಮಾರು 2,000 ನಿವಾಸಿಗಳ ಮತ್ತು ಹೊರಗಿನ ಲೋಕದ ಸಂಪರ್ಕಕ್ಕೆ ಜೀವಾಳ. 1975ರಿಂದ ಈ ದ್ವೀಪಗಳಲ್ಲಿ ವಾಸಿಸಿದ್ದ ಒಬ್ಬ ಸ್ವಿಟ್ಸ್ರ್ಲೆಂಡಿನ ವೃದ್ಧ ದಂಪತಿಗಳು ನಮ್ಮನ್ನು ಭೇಟಿಯಾದರು. ಎತ್ತಿನಗಾಡಿ “ಟ್ಯಾಕ್ಸಿ”ಯನ್ನು ತಕ್ಕೊಳ್ಳುವ ಬದಲಿಗೆ, ನಾವು ಸಮುದ್ರ ಮತ್ತು ಮಳೆಯಿಂದ ಸವೆತು ನುಣುಪಾದ ಗುಲಾಬಿ ಬಣ್ಣದ ಚಿತ್ತವೇಧಕ ಬೆಣಚುಕಲ್ಲಿನಿಂದ ತುಂಬಿದ ಕಡಲ ತೀರದಲ್ಲಿ ನಡೆದು ಹೋದೆವು. ಪಿಕ್ನಿಕ್ ಉಪಹಾರದ ನಂತರ, ಎಲ್ಲಿ ಅಪೂರ್ವವಾದ ಕರಿಯ ನೊಣಹಿಡುಕ ಪಕ್ಷಿಯು ಪೋಷಿಸಲ್ಪಡುತ್ತದೋ ಆ ಚಿಕ್ಕ ನಿಲಯದ ಮಾರ್ಗವಾಗಿ ಕೆಲವು ಆಸಕ್ತ ಜನರ ಮನೆಗೆ ಮುಟ್ಟಿದೆವು. ಕ್ರಿಯಾಲ್ನಲ್ಲಿ ಕೊಡಲ್ಪಟ್ಟ ಆ ಭಾಷಣವನ್ನು ಕೇಳಲು ಹದಿಮೂರು ಮಂದಿ ಹಾಜರಿದ್ದರು. ಆತ್ಮಿಕವಾಗಿ ಪ್ರಗತಿ ಮಾಡಲಾಗುವಂತೆ ತಮ್ಮ ವಿವಾಹವನ್ನು ಕಾನೂನುಬದ್ಧ ಮಾಡಲು ಎಲ್ಲಾ ಏರ್ಪಾಡುಗಳನ್ನು ಮಾಡಿದ್ದ ಒಬ್ಬ ದಂಪತಿಗಳನ್ನು ನಾವು ಭೇಟಿಯಾದೆವು. ನಿಜವಾಗಿಯೂ ಯೆಹೋವನು ಜನಾಂಗಗಳ ಇಷ್ಟ ವಸ್ತುಗಳನ್ನು ಈ ಅತಿದೂರದ ದ್ವೀಪಗಳಿಂದಲೂ ಒಳತರುತ್ತಿದ್ದಾನೆ.
ರೆಯೂನ್ಯನ್ಗೆ ಪುನಃ ಹಿಂದೆ
ಈ ಸಂಚಾರದಲ್ಲಿ ನಾವು ಸಂದರ್ಶಿಸುವ ರೆಯೂನ್ಯನ್ ಅತ್ಯಂತ ವಿಕಸಿತ ದ್ವೀಪವಾಗಿದೆ. ನೆಲಪ್ರದೇಶಕ್ಕೆ ಹತ್ತಿರವಾದಂತೆ, ನಾಲ್ಕು ಪಥಗಳ ಹೆದ್ದಾರಿ ಮುಖ್ಯಪಟ್ಟಣವಾದ ಸೈಂಟ್-ಡೆನಿಸ್ನಿಂದ ಬರುವ ವಾಹನ ಸಂದಣಿಯಿಂದ ತುಂಬಿರುವುದು ಕಾಣಿಸುತ್ತದೆ. ಸಮುದ್ರ ಮತ್ತು ಬೆಟ್ಟಗಳ ನಡುವಣ ಸ್ಥಳವನ್ನು ಎತ್ತರವಾದ ಕಟ್ಟಡಗಳು ತುಂಬಿವೆ. ಈ ದ್ವೀಪವು ಸುಮಾರು 5,80,000 ಜನರ ಬೀಡಾಗಿರುತ್ತದೆ ಮತ್ತು ರಾಜ್ಯ ಸಾಕ್ಷಿಗಾಗಿ ಫಲದಾಯಕ ಹೊಲವಾಗಿ ರುಜುವಾಗಿದೆ. (ಮತ್ತಾಯ 9:37, 38) ಅಲ್ಲಿ ಈಗ ಇರುವ 21 ಸಭೆಗಳಲ್ಲಿ ಸುಮಾರು 2,000 ಉತ್ಸಾಹಿ ಸುವಾರ್ತಾ ಪ್ರಚಾರಕರು ಇದ್ದಾರೆ.
ವಿಶೇಷ ಸಮ್ಮೇಲನ ದಿನವು ಒಂದು ದೊಡ್ಡ ಆವರಿತ ಸ್ಟೇಡಿಯಂನಲ್ಲಿ ನಡೆಯುತ್ತದೆ. 3,332 ಜನರು ಹಾಜರಾದದ್ದನ್ನು ಕಂಡು ನಾವು ಅನಂದಗೊಂಡೆವು ಮತ್ತು 67 ಹೊಸಬರು ತಮ್ಮನ್ನು ದೀಕ್ಷಾಸ್ನಾನಕ್ಕಾಗಿ ನೀಡಿಕೊಂಡಾಗ ಆದ ಸಂತಸವೆಷ್ಟು! ದ್ವೀಪದ ಮಿಶನೆರಿಗಳೊಂದಿಗೆ ಸಹವಾಸವನ್ನು ಆನಂದಿಸಿದ ಮೇಲೆ ನಾವು ನಮ್ಮ ಮುಂದಿನ ಗಮ್ಯಸ್ಥಾನಕ್ಕೆ ಹೊರಟೆವು.
ಮಯೋಟ್—ಸುಗಂಧ ದ್ವೀಪ
ಎರಡು ತಾಸುಗಳ ವಾಯುಯಾನದ ನಂತರ ನಮ್ಮ 40-ಸೀಟಿನ ಜೆಟ್ ಪಮಾಂಜೆ ವಿಮಾನ ನಿಲ್ದಾಣದಲ್ಲಿ ತಂಗಲು ಇಳಿಯುತ್ತದೆ, ಇದು ಒಂದು ಚಿಕ್ಕ ದ್ವೀಪದಲ್ಲಿದ್ದು ಮಯೋಟ್ನ ಮುಖ್ಯ ಪಟ್ಟಣವಾದ ಝವುಡಿಗ್ಜೆ 1.9 ಕಿಲೊಮೀಟರ್ ಉದ್ದದ ಕಾಲುದಾರಿಯಿಂದ ಜೋಡಿಸಲ್ಪಟ್ಟಿದೆ. ನೀಲ ಆಕಾಶ, ಬಿಳಿಯ ಮೋಡಗಳು, ಹುಲುಸಾದ ಬೆಟ್ಟಪ್ರದೇಶಗಳು ಮತ್ತು ಕಡುನೀಲ ಸಾಗರ ಎಲ್ಲಾ ಕೂಡಿ ಒಂದು ಶಾಂತಮಯ ಉಷ್ಣವಲಯದ ಪ್ರಮೋದವನವನ್ನು ಚಿತ್ರಿಸುತ್ತವೆ. ಯೋಗ್ಯವಾಗಿಯೇ, ಮಯೋಟ್ ಸುಗಂಧ ದ್ವೀಪವೆಂಬ ಅಡ್ಡ ಹೆಸರನ್ನು ಹೊಂದಿದೆ ಯಾಕಂದರೆ ಇಲಂಗ್-ಇಲಂಗ್ ವೃಕ್ಷದ ಆಹ್ಲಾದಕರ ಸುವಾಸನೆಯಿಂದಾಗಿಯೇ. ಇದರ ಪುಷ್ಪಗಳ ಸಾರವನ್ನು ಲೋಕ-ವಿಖ್ಯಾತ ಸುವಾಸನೆಗಳ ಮೂಲವಾಗಿ ಫ್ರಾನ್ಸಿಗೆ ಕಳುಹಿಸಲಾಗುತ್ತದೆ.
ಮುಖ್ಯ ದ್ವೀಪಕ್ಕೆ ಹರಿಗೋಲಿನ ಮೇಲೆ ಕೇವಲ 15 ನಿಮಿಷಗಳ ಸವಾರಿ ಇತ್ತು. ಮಿಶನೆರಿ ಮನೆಯಲ್ಲಿ ತುಸು ಅಲ್ಪಾಹಾರವನ್ನು ತಕ್ಕೊಂಡ ಮೇಲೆ, 19 ಕಿಲೊಮೀಟರ್ ದೂರದ ದ್ವೀಪದ ಇನ್ನೊಂದು ಕಡೆ ಒಂದು ಪುಸ್ತಕಭ್ಯಾಸಕ್ಕೆ ನಮ್ಮನ್ನು ಆಮಂತ್ರಿಸಲಾಯಿತು. ಒಂದು ಆರಾಮಕರವಾದ ಸಂದರ್ಶನೆಯ ನಮ್ಮ ನಿರೀಕ್ಷೆಯನ್ನು ಅದು ಕೊನೆಗೊಳಿಸಿತು! ತೆರಪಿನ ಜೀಪನ್ನು ಹತ್ತಿ ಅಗಲಕಿರಿದಾದ ಹಾದಿಯಲ್ಲಿ ನವಿರೇಳಿಸುವ ಸವಾರಿ ಮಾಡಿದೆವು. ಜನರನ್ನು, ದನಗಳನ್ನು, ಮತ್ತು ಇತರ ವಾಹನಗಳನ್ನು ಅಪಾಯಕರವಾಗುವಷ್ಟು ಹತ್ತಿರದಿಂದ ಹಾದುಹೋಗುತ್ತಿರುವಂತೆ ತೋರುತ್ತಿತ್ತು. ಆದರೆ ನಮ್ಮ ಫ್ರೆಂಚ್ ಡ್ರೈವರನಿಗೆ ಹಾದಿ ತಿಳಿದದೆ. ಬೇಗನೇ ನಾವು ಶಿಕೋನಿಗೆ ಆಗಮಿಸಿದೆವು ಮತ್ತು ಯಾರ ಮನೆಯಲ್ಲಿ ಅಭ್ಯಾಸ ನಡಿಯುತ್ತಿತ್ತೋ ಆ ಕುಟುಂಬವನ್ನು ಭೇಟಿಯಾದೆವು.
ಹಿಂದೆ ಒಬ್ಬ ಮುಸ್ಲಿಮನಾಗಿದ್ದ ತಂದೆ ತನ್ನ ಎಂಟು ಮಂದಿ ಮಕ್ಕಳ ಪರಿಚಯವನ್ನು ಮಾಡಿಸುತ್ತಾನೆ. ನಾಲ್ಕು ವರ್ಷ ವಯಸ್ಸಿನ ಅವನ ಕಿರಿಯ ಮಗ, ವಾಡಿಕೆಯ ವಂದನೆಯೆಂದು ನಮಗೆ ಅನಂತರ ತಿಳಿದು ಬಂದ ಒಂದು ನಮಸ್ಕಾರವನ್ನು ಮಾಡುತ್ತಾನೆ. ಅವನು ಒಂದು ಕೈಯ ಹಿಂಭಾಗವನ್ನು ಇನ್ನೊಂದರ ಅಂಗೈಯಲ್ಲಿಟ್ಟು ಬಟ್ಟಲಾಕಾರದಲ್ಲಿ ಹಿಡಿದು ನಮ್ಮ ಮುಂದೆ ನಿಲ್ಲುತ್ತಾನೆ. ನಾವು ಮೊದಲು ಅವನ ಕೈಕುಲುಕಿಸಲು ಪ್ರಯತ್ನಿಸುತ್ತೇವೆ, ಅನಂತರ ನನ್ನ ಪತ್ನಿ ಅವನ ಕೈಗಳನ್ನು ತನ್ನ ತಲೆಯ ಮೇಲಿಡಲು ಪ್ರಯತ್ನಿಸುತ್ತಾಳೆ. ನಾವೇನು ಮಾಡುತ್ತಿದ್ದೇವೆಂದು ಯೋಚಿಸುತ್ತಾ ಆ ಪುಟ್ಟನು ತನ್ನ ದೊಡ್ಡ ದುಂಡು ದುಂಡಾದ ಕಣ್ಣುಗಳನ್ನರಳಿಸಿ ತಾಳ್ಮೆಯಿಂದ ಕಾಯುತ್ತಾನೆ. ಕೊನೆಗೆ ನಮಗೆ ತಿಳಿಯುತ್ತದೆ—ನಾವು ಅವನ ಕೈಗಳನ್ನು ಅವನ ತಲೆಯ ಮೇಲೆ ಇಡುತ್ತೇವೆ. 14 ಹಾಜರಿಯೊಂದಿಗೆ ಅಭ್ಯಾಸ ಆರಂಭಿಸುತ್ತದೆ. ಅಭ್ಯಾಸದ ಅರ್ಧದಲ್ಲಿ ಒಬ್ಬ ಆಸಕ್ತ ವ್ಯಕ್ತಿ ಬರುತ್ತಾನೆ ಮತ್ತು ಪ್ರತಿಯೊಬ್ಬನ ಕೈಕುಲುಕಿಸುತ್ತಾನೆ. ಅದು ಸಹ ಅವರ ಪದ್ಧತಿಗಳಲ್ಲಿ ಒಂದಾಗಿ ತೋರುತ್ತದೆ.
ಈಗ ಕತ್ತಲಾಗುತ್ತಾ ಬರುತ್ತಿರುವ ಗ್ರಾಮೀಣದಲ್ಲಿ ನಾವು ಮರಳುತ್ತಿದ್ದಾಗ, ತಮ್ಮ ರಾತ್ರಿಯೂಟಕ್ಕಾಗಿ ಮರಗಳ ಬಳಿ ಧಾವಿಸುವ ಹಣ್ಣು ಬಾವಲಿಗಳನ್ನು ನಾವು ಕಾಣುತ್ತೇವೆ. ಸುತ್ತುಬಳಸುವ ದಾರಿಯಲ್ಲಿ ಬಿದ್ದಿರುವ ಹಲಸಿನಹಣ್ಣಿನ ಕಡು ಪರಿಮಳ, ಮಾವು, ಪಪ್ಪಾಯ ಮತ್ತು ಪೇರಳೆ ಹಣ್ಣುಗಳ ಸುವಾಸನೆಯನ್ನು ಸಹ ನಾವು ಆಘ್ರಾಣಿಸುತ್ತೇವೆ. ಇದು ನರಿಯಂಥ ಮುಖಗಳುಳ್ಳ ಮತ್ತು ಉದ್ದವಾದ, ಸುರುಳಿಯಾಗಿ ಸಂಧಿಗೂಡಿದ ಬಾಲಗಳುಳ್ಳ ವಾನರಜಾತಿಯ ಚಿಕ್ಕ ಪ್ರಾಣಿಯಾದ ಕಾಡುಪಾಪಗಳ ಬೀಡು. ಒಂದು ಗುಡ್ಡದ ಶಿಕರಕ್ಕೆ ಸುತ್ತಾಗಿ ಹೋಗುವಾಗ, ಒಂದು ಬೆರಗುಗೊಳಿಸುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಕಿತಲ್ತೆ-ಗೆಂಪು ಪೂರ್ಣಚಂದ್ರನು ಆಗಲೇ ಕೊಲ್ಲಿಯಿಂದ ಮೇಲೇರುತ್ತಾ, ನೀರವ ಜಲಗಳ ಮೇಲೆ ತನ್ನ ಮಿರುಗುವ ಪ್ರತಿಬಿಂಬವನ್ನು ಚೆಲ್ಲುತ್ತಿದ್ದನು. ನಮ್ಮ ಡ್ರೈವರನು ಸಹ ಅದನ್ನು ಮೆಚ್ಚಿ ಗಾಡಿಯ ವೇಗವನ್ನು ನಿಧಾನಿಸುತ್ತಾನೆ. ನಮ್ಮ ಉಳಿದ ಸಂಚಾರದಲ್ಲಿ, ಪ್ರತಿ ದಾರಿಯ ತಿರುಚಿನಲ್ಲಿ ನಾವು ಅದಕ್ಕಾಗಿ ಮುನ್ನೋಡುತ್ತಲಿದ್ದೆವು.
ಮರುದಿನ ಬೆಳಿಗ್ಗೆ ನಾವು ಮಿಶನೆರಿಗಳೊಂದಿಗೆ ಸಾರಲು ಹೋಗುತ್ತೇವೆ. ಮೊದಲಾಗಿ ನಮಗೆ ಒಳ್ಳೇ ಫ್ರೆಂಚ್ ಮಾತಾಡುವ ಒಬ್ಬ ಅಧ್ಯಾಪಕನು ಸಿಗುತ್ತಾನೆ. ಅವನು ನೆಲದ ಮೇಲೆ ಕೂಡ್ರುತ್ತಾನೆ ಮತ್ತು ನಾವು ಅವನ ಹಾಸಿಗೆಯ ಮೇಲೆ ಕೂತುಕೊಳ್ಳುತ್ತೇವೆ. ಅನಂತರದ ಅಭ್ಯಾಸ ಸಹ ಒಬ್ಬ ಯುವಕನೊಂದಿಗೆ ನಡೆಯಿತು, ಅವನು ತನ್ನ ಚಿಕ್ಕ ಕೋಣೆಯಲ್ಲಿ ನೆಲದ ಮೇಲೆ ಹಾಸಲ್ಪಟ್ಟ ಹಾಸಿಗೆಯ ಮೇಲೆ ಕೂತುಕೊಳ್ಳುವಂತೆ ನಮ್ಮನ್ನು ಆಮಂತ್ರಿಸುತ್ತಾನೆ. ತುಸು ಹೊತ್ತಿನ ನಂತರ ನಮ್ಮ ಕಾಲುಗಳ ಸೆಡೆತವನ್ನು ಅಲಕ್ಷಿಸ ಪ್ರಯತ್ನಿಸಿದರೂ ಮತ್ತು ಬೆನ್ನಿನಿಂದ ಬೆವರಹನಿ ಸುರಿಯ ಹತ್ತಿದರೂ ನಾವು ಮಿಲಿಮಿಲಿ ಒದ್ದಾಡ ತೊಡಗಿದೆವು. ನೆರೆಮನೆಯ ರೇಡಿಯೋ ಹೊಚ್ಚಹೊಸ ಪಾಪ್ ಗಾನಗಳನ್ನು ಮೊಳಗಿಸುತ್ತಿದದ್ದರಿಂದ, ಅರ್ಧ ಫ್ರೆಂಚ್ ಮತ್ತು ಅರ್ಧ ಮಹೊರಿಯನ್ ಭಾಷೆಯಲ್ಲಿ ನಡಿಸಲಾಗುತ್ತಿದ್ದ ಅಭ್ಯಾಸದಲ್ಲಿ ಏಕಾಗ್ರತೆ ಇಡಲು ಸುಲಭವಿರಲಿಲ್ಲ.
ನಮ್ಮ ಕೊನೆಯ ಸಂದರ್ಶನೆಯ ವ್ಯಕ್ತಿ ನೆರೆಕರೆಯ ಕಾಮರೋಝ್ ದ್ವೀಪದ ಒಬ್ಬ ಯುವಕನು. ಅಷ್ಟು ಒಳ್ಳೆ ಫ್ರೆಂಚ್ ಮಾತಾಡಲಾಗದಕ್ಕಾಗಿ ಅವನು ಕ್ಷಮೆ ಯಾಚಿಸುತ್ತಾ, ಬ್ರೊಷರನ್ನು ಹೊರತೆಗೆಯುತ್ತಾನೆ, ಆರಂಭಿಸಲು ಸಿದ್ಧನಾಗುತ್ತಾನೆ. ಮಿಶನೆರಿಯು ನನಗೆ ಏನನ್ನೋ ವಿವರಿಸುತ್ತಿದ್ದಂತೆ, ಅವನು ಮಧ್ಯೆ ತಡೆದು ತಾನು ಪಾರಾವನ್ನು ಓದುತ್ತೇನೆ ಎನ್ನುತ್ತಾನೆ. ನಮ್ಮನ್ನು ಮೌನವಾಗುವಂತೆ ವಿನಯವಾಗಿ ಹೇಳುವ ರೀತಿ ಅದು. ಈ ಜನರೆಲ್ಲರೂ ಮುಸ್ಲಿಮರು, ಆದರೆ ಬೈಬಲಿನಿಂದ ಏನನ್ನು ಕಲಿಯುತ್ತಾರೋ ಅವರದನ್ನು ನಿಜವಾಗಿ ಗಣ್ಯಮಾಡುತ್ತಾರೆ.
ಅಷ್ಟು ಮಂದಿ ಯುವಕರು ಕಲಿಯುವಾಗ, ಕಲಿಯುವ ಹೆಂಗಸರು ಅಥವಾ ಹುಡುಗಿಯರು ಅಷ್ಟು ಕೊಂಚವೇಕೆ ಎಂದು ನಾವು ಯೋಚಿಸುತ್ತೇವೆ. ಕುಟುಂಬ ಮತ್ತು ಸಾಮಾಜಿಕ ಸಂಪ್ರದಾಯಗಳ ಫಲಿತಾಂಶವದು ಎಂದು ನಮಗೆ ಹೇಳಲ್ಪಡುತ್ತದೆ. ಬಹುಪತ್ನೀತ್ವವು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕರಿಸಲ್ಪಡುವುದರಿಂದ ಮತ್ತು ಪ್ರತಿ ಪತ್ನಿಯು ತನ್ನ ಸ್ವಂತ ಮನೆಯಲ್ಲಿ ಜೀವಿಸುವುದರಿಂದ, ತಂದೆಯ ವರ್ಚಸ್ವವು ಕನಿಷ್ಠತಮ; ಅಧಿಕಾರ ನಡಸುವವಳು ತಾಯಿ. ಹೆಣ್ಣುಮಕ್ಕಳು ವಾಡಿಕೆಯಾಗಿ ಮದುವೆಯ ತನಕ ತಮ್ಮ ತಾಯಿಯ ಮನೆಯಲ್ಲೇ ಉಳಿಯುತ್ತಾರೆಂದು ನಾವು ಕೇಳಿದೆವು. ಗಂಡು ಮಕ್ಕಳಾದರೋ ಪ್ರಾಯಕ್ಕೆ ಬಂದಾಗ ಮನೆಬಿಡುತ್ತಾರೆ ಮತ್ತು ತಮ್ಮ ಸ್ವಂತ ಬಾನ ಅಥವಾ ಗುಡಿಸಲನ್ನು ಕಟ್ಟುತ್ತಾರೆ, ಅಥವಾ ಇತರ ಹುಡುಗರೊಂದಿಗೆ ಒಂದು ಬಾನದಲ್ಲಿ ವಾಸಿಸುತ್ತಾರೆ. ಈ ಪರಿಸ್ಥಿತಿಗಳ ಕೆಳಗೆ ಯುವ ಜನರು ಇಷ್ಟಪಟ್ಟರೆ ಅಭ್ಯಾಸ ಮಾಡಲು ಸ್ವತಂತ್ರರಿದ್ದಾರೆ, ಆದರೆ ಅಂಥ ಸ್ವಾತಂತ್ರ್ಯವಿರುವ ಹುಡುಗಿಯರು ಕಡಿಮೆ.
ಆದಿತ್ಯವಾರವು ವಿಶೇಷ ಸಮ್ಮೇಳನ ದಿನವಾಗಿರಲಿತ್ತು. ಹವಾಮಾನವು ಉತ್ತಮವಾಗಿ ಆರಂಭಿಸಿತ್ತು, ಆದರೆ ಮಧ್ಯಾಹ್ನದೊಳಗೆ ಮೋಡಕವಿಯ ತೊಡಗಿತು, ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ಯಾರೂ ಅದನ್ನು ಹೆಚ್ಚು ಲಕ್ಷ್ಯಮಾಡುವಂತೆ ಕಾಣುವುದಿಲ್ಲ, ಯಾಕಂದರೆ ಅದೆಲ್ಲವನ್ನು ತಂಪಾಗಿ ಮಾಡುತ್ತದೆ. ಇಲ್ಲಿರುವ 36 ಪ್ರಚಾರಕರು ಮತ್ತು ಪಯನೀಯರರು 83 ಹಾಜರಿಯನ್ನು ಮತ್ತು 3 ಮಂದಿ ಹೊಸಬರು ದೀಕ್ಷಾಸ್ನಾನ ಪಡೆದದ್ದನ್ನು ಕಂಡು ಉಲ್ಲಾಸ ಪಟ್ಟಾಗ ಪುನಃ ಹೇರಳವಾದ ಆತ್ಮಿಕ ಐಶ್ವರ್ಯವನ್ನು ನಾವು ಕಂಡುಕೊಳ್ಳುತ್ತೇವೆ.
ಅವರ ಭಾಷೆಯಲ್ಲಿ ಎಂಜಾಯ್ ಲೈಫ್ ಆನ್ ಅರ್ಥ್ ಫಾರೆವರ್ ಬ್ರೊಷರ್ ಹೊರಡಿಸಲ್ಪಟ್ಟದ್ದು ಒಂದು ದೊಡ್ಡ ಸಂದರ್ಭವಾಗಿತ್ತು. ಅದು ಮಹೋರಿಯನ್ ಭಾಷೆಯ ಒಂದೇ ವಾಚ್ಟವರ್ ಪ್ರಕಾಶನ ಮಾತ್ರವಲ್ಲದೆ, ಆ ಭಾಷೆಯಲ್ಲಿ ಆ ತನಕ ಇದ್ದ ಪ್ರಕಾಶನ ಅದೊಂದೇ. ಅದರಲ್ಲಿ ರೋಮನ್ ವಚನದ ಕೆಳಗೆ ಅರಬ್ಬೀ ಲಿಪಿಯು ಬರೆಯಲ್ಪಟ್ಟಿದೆ. ಜನರು ಶಾಲೆಯಲ್ಲಿ ಅರಬ್ಬೀ ಲಿಪಿಯನ್ನು ಕಲಿಯುತ್ತಾರೆ ಆದರೆ ಅರಬ್ಬೀ ಭಾಷೆಯನ್ನಲ್ಲ. ಅರಬ್ಬೀ ಭಾಷೆಯಲ್ಲಿ ಅವರು ಪ್ರಾರ್ಥನೆಗಳನ್ನು ಜಪಿಸಶಕ್ತರು ಮತ್ತು ಅರಬ್ಬೀ ಭಾಷೆಯ ಕೊರಾನ್ ಓದಶಕ್ತರು; ಆದರೂ ತಾವೇನು ಉಚ್ಚಾರ ಮಾಡುತ್ತಾರೆಂದು ಅವರಿಗೆ ತಿಳಿಯುವುದಿಲ್ಲ. ಬ್ರೊಷರ್ನಲ್ಲಿ ಅರಬ್ಬೀ ಲಿಪಿಯನ್ನು ಅವರು ಓದುವಾಗ, ಅದು ತಮಗೆ ತಿಳಿಯುವುದನ್ನು ಕಾಣುವಾಗ ಅವರಿಗೆ ಅಚ್ಚರಿಯಾಗುತ್ತದೆ. ಅವರು ಕಾರ್ಯತಃ ಓದುವುದು ತಮ್ಮ ಸ್ವಂತ ಮಹೋರಿಯನ್ ಭಾಷೆಯನ್ನು ಅರಬ್ಬೀ ಲಿಪಿಯ ದ್ವನಿನಿರೂಪಕದಲ್ಲಿ. ತಾವೇನನ್ನು ಓದುತ್ತಾರೋ ಅದರ ಅರ್ಥವು ಅವರಿಗಾಗುವಾಗ ಅವರ ಮುಖಗಳು ಬೆಳಗುವುದನ್ನು ಕಾಣುವುದು ಅದೆಷ್ಟು ಸಂತೋಷಕರ.
ಬ್ರೊಷರುಗಳು ಜನರೊಂದಿಗೆ ಸುಲಭವಾಗಿ ನೀಡಲ್ಪಡುತ್ತವೆ. ಹೊರಗಣ ಹಳ್ಳಿಯೊಂದರಲ್ಲಿ ಒಬ್ಬ ಹೆಂಗಸಿಗೆ ನಾವು ಸಾರುತ್ತಿದ್ದಾಗ ಒಬ್ಬ ಮನುಷ್ಯನು ನಮ್ಮ ಬಳಿಗೆ ಬರುತ್ತಾನೆ. ನಮ್ಮ ಸಹೋದರನೊಂದಿಗೆ ಮಹೋರಿಯನ್ ಭಾಷೆಯಲ್ಲಿ ಅತಿ ರಭಸದಿಂದ ಮಾತಾಡುತ್ತಾನೆ. ನಮ್ಮನ್ನು ತುಂಬಾ ವಿರೋಧಿಸುವವನಂತೆ ಕಂಡು ಬರುತ್ತಾನೆ. ತೀವ್ರ ಭಾವಾಭಿನಯ ಮಾಡುತ್ತಾ, ಸ್ವಲ್ಪ ಹೊತ್ತು ಮಾತಾಡುತ್ತಾ ಇರುತ್ತಾನೆ. ಆ ಮನುಷ್ಯನು ಹೀಗೆ ದೂರುತ್ತಿದ್ದನೆಂದು ಅನಂತರ ಸಹೋದರನು ನಮಗೆ ವಿವರಿಸಿದನು. “ನೀವು ವರ್ಷಕ್ಕೊಮ್ಮೆ ಮಾತ್ರವೇ ನಮ್ಮನ್ನು ಸಂದರ್ಶಿಸುವುದಾದರೆ, ನೀವು ಹೇಳಿದ ಸಂಗತಿಗಳನ್ನು ನಾವು ನೆನಪಿಡುವಂತೆ ನೀವು ಅಪೇಕ್ಷಿಸುವುದಾದರೂ ಹೇಗೆ? ಅದು ಹೇಗೆ ಸಾಧ್ಯ? ಈ ವಿಷಯಗಳ ಕುರಿತು ನಮಗೆ ತಿಳಿಸಲು ನೀವು ಹೆಚ್ಚು ಸಲ ಬರುತ್ತಿರಬೇಕು.”
ಆ ಕೊನೆಯ ಮಾತುಗಳು ನಮ್ಮ ಭಾವಾತಿರೇಕವನ್ನೂ ವ್ಯಕ್ತಪಡಿಸುತ್ತವೆ. ರಾಜ್ಯ ಸಂದೇಶದ ಮೂಲಕ ಸಮಸ್ತ ಜನಾಂಗಗಳ ಇಷ್ಟವಸ್ತುಗಳನ್ನು ಯೆಹೋವನು ನಿಶ್ಚಯವಾಗಿಯೂ ಒಟ್ಟುಗೂಡಿಸುತ್ತಿದ್ದಾನೆ. ಸಾಗರದ ವಿಶಾಲವಾದ ಹರವಿನಿಂದ ಪ್ರತ್ಯೇಕಿಸಲ್ಪಟ್ಟರೂ, ನಿರ್ಮಾಣಿಕನೂ ಸ್ವರ್ಗೀಯ ತಂದೆಯೂ ಆದ ಯೆಹೋವ ದೇವರಿಗೆ ಅರ್ಪಿಸಲ್ಪಡುತ್ತಿರುವ ಮಹಾ ಸ್ತುತಿಘೋಷದಲ್ಲಿ ದ್ವೀಪವಾಸಿಗಳು ತಮ್ಮ ದ್ವನಿಯನ್ನೂ ಜತೆಗೂಡಿಸುತ್ತಿದ್ದಾರೆ.—ಹಗ್ಗಾಯ 2:7. (w92 2/15)
[ಪುಟ 21ರಲ್ಲಿರುವಚಿತ್ರ]
(For fully formatted text, see publication.)
ಸೀಷೆಲ್ಸ್
ಹಿಂದೂ ಸಾಗರ
ಕಾಮೊರಾಸ್
ಮಯೋಟ್
ಮಡಗಾಸ್ಕರ್
ಮರೀಶಿಯಸ್
ರೆಯೂನ್ಯನ್
ರಾಡ್ರಿಗಸ್
[ಪುಟ 23 ರಲ್ಲಿರುವ ಚಿತ್ರ]
ಸೈಂಟ್ ಆ್ಯನ್ ಕೊಲಿಯ್ಲ ಪ್ರಾಲನ್ನಲ್ಲಿ ಕಲ್ಬಂಡೆ ಭೂಶಿರ
[ಪುಟ 24 ರಲ್ಲಿರುವ ಚಿತ್ರ]
ಸೀಷೆಲ್ಸ್ನ ಲಾ ಡಿಗ್ಯೂನಲ್ಲಿ ಎತ್ತಿನಗಾಡಿ “ಟ್ಯಾಕ್ಸಿ”
[ಪುಟ 25 ರಲ್ಲಿರುವ ಚಿತ್ರ]
ಮಯೋಟ್ನಲ್ಲಿ ಹೊಸ ಬ್ರೋಷರ್ನೊಂದಿಗೆ ಸಾರುವುದು