ಕ್ರೈಸ್ತ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಯುದ್ಧ-ಛಿದ್ರ—ಲೈಬೀರಿಯದಲ್ಲಿ
ಒಬ್ಬ ಪ್ರತ್ಯಕ್ಷದರ್ಶಿಯಿಂದ ಹೇಳಲ್ಪಟ್ಟದ್ದು
“ಆನೆಗಳು ಜಗಳಾಡುವಾಗ, ಹುಲ್ಲು ಸಹಾ ಬಾಧೆಪಡುತ್ತದೆ.” ಈ ಪಶ್ಚಿಮ ಆಫ್ರಿಕದ ಗಾದೆಯು ಲೈಬೀರಿಯದಲ್ಲಿ ಇತ್ತೀಚೆಗೆ ನಡೆದ ಯುದ್ಧದಲ್ಲಿ ಏನು ಸಂಭವಿಸಿತೋ ಅದನ್ನು ಎಷ್ಟು ಚೆನ್ನಾಗಿ ವಿವರಿಸುತ್ತದೆ! ಸುಮಾರು 20,000 ಮಂದಿ ತಮ್ಮ ಪ್ರಾಣವನ್ನು ಕಳಕೊಂಡರು, ಮತ್ತು ದೇಶದ ಜನಸಂಖ್ಯೆಯಾದ 26 ಲಕ್ಷ ಜನರಲ್ಲಿ ಅರ್ಧಪಾಲಷ್ಟು ನಿರ್ಗತಿಕರಾದರು. ಬಾಧಿತರಾದವರಲ್ಲಿ ಹೆಚ್ಚಿನವರು ಸೈನಿಕರಲ್ಲ, ಅವರು “ಆ ಹುಲ್ಲಿ”ನಂತೆ ನಿರುಪದ್ರವಿಗಳಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಆಗಿದ್ದರು.
ಡಿಸೆಂಬರ್ 1989 ರಲ್ಲಿ ಯುದ್ಧವು ಆರಂಭಿಸಿದಾಗ, ಲೈಬೀರಿಯದ ಸುಮಾರು 2,000 ಯೆಹೋವನ ಸಾಕ್ಷಿಗಳು ಸಂಖ್ಯೆಯಲ್ಲಿ ಏಕಪ್ರಕಾರವಾದ ಅಭಿವೃದ್ಧಿಯನ್ನು ಆನಂದಿಸುತ್ತಿದ್ದರು ಮತ್ತು ಭವಿಷ್ಯವನ್ನು ಆತ್ಮ ವಿಶ್ವಾಸದಿಂದ ಮುನ್ನೋಡುತ್ತಿದ್ದರು. ಖೇದಕರವಾಗಿ, “ಬಾಧಿತವಾದ ಆ ಹುಲ್ಲಿನ” ಒಂದು ಭಾಗವು ಅವರಾಗಿದ್ದರು.
ಯುದ್ಧದ ಹಬ್ಬುವಿಕೆ
ಯುದ್ಧವು ಲೈಬೀರಿಯದ ಮೇರೆಯ ಉದ್ದಕ್ಕೂ ಕಾಟ್ ಡಿವೊಯಿರ್ನೊಂದಿಗೆ ಆರಂಭಿಸಿತು ಮತ್ತು ನಿರಾಶ್ರಿತರು ಬೇಗನೇ ಐದು ಲಕ್ಷಕ್ಕಿಂತಲೂ ಹೆಚ್ಚು ನಿವಾಸಿಗಳಿದ್ದ ರಾಜಧಾನಿ ಮರ್ನೊವಿಯಕ್ಕೆ ಓಡಿಹೋಗಲಾರಂಭಿಸಿದರು. 1990ರ ಮಾರ್ಚ್ನಿಂದ ಮೇ ತನಕ, ಯುದ್ಧವು ದಕ್ಷಿಣದ ಕಡೆಗೆ ಮುಂದೊತ್ತುತ್ತಾ ಬಂದಂತೆ, ಯೆಹೋವನ ಸಾಕ್ಷಿಗಳ ಮಿಶನೆರಿಗಳನ್ನು ಮೊದಲು ಗಾಂಟಾದಿಂದ ಮತ್ತು ಅನಂತರ ಬಾಂಗಾದಿಂದ ತೆರವು ಮಾಡಲಾಯಿತು. ಅವರು ಆ ಪಟ್ಟಣಗಳನ್ನು ಬಿಟ್ಟುಹೋದವರಲ್ಲಿ ಕೊನೆಯವರಾಗಿದ್ದರು. ಜೂಲೈ 2, 1990ರಲ್ಲಿ ಶಸ್ತ್ರಸಜ್ಜಿತ ಸೈನ್ಯವು ಮರ್ನೊವಿಯದೊಳಗೆ ನುಗ್ಗಿದಾಗ ಯುದ್ಧವು ತುತ್ತತುದಿಗೇರಿತು.
ಹಿಂಬಾಲಿಸಿ ಬಂದ ಭೀಕರತೆಗಳಿಗೆ ಯಾರೂ ಸಿದ್ಧರಾಗಿರಲಿಲ್ಲ. ಮೂರು ಪ್ರತ್ಯೇಕ ಸೇನೆಗಳು ಭಾರಿ ಫಿರಂಗಿ ದಳ, ಕ್ಷಿಪಣಿಗಳು ಮತ್ತು ಸಿಡಿಗುಂಡುಗಳ ಎಸೆತಗಳೊಂದಿಗೆ ಬೀದಿಗಳಲ್ಲಿ ಒಬ್ಬರೊಂದಿಗೊಬ್ಬರು ಹೋರಾಟಕ್ಕಿಳಿದಿದ್ದರು. ಯಾರು ಒಂದು ದ್ವೇಷಿತ ಕುಲದ ಸದಸ್ಯರಾಗಿದ್ದ ಕಾರಣ ಕೊಲ್ಲಲ್ಪಡಲಿಲ್ಲವೋ ಅವರು ಸದಾ ಪೀಡನೆ ಮತ್ತು ತಲಾಷುಗಳಿಗೆ ಗುರಿಯಾಗುತ್ತಿದ್ದರು. ಆಗಸ್ಟಿನ ಒಂದು ರಾತ್ರಿಯಲ್ಲಿ, ಸೈಂಟ್ ಪೀಟರ್ಸ್ ಲುಥರನ್ ಚರ್ಚ್ಲ್ಲಿ ಆಶ್ರಯ ಪಡೆದಿದ್ದ 600 ಕ್ಕಿಂತಲೂ ಹೆಚ್ಚು ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಯುದ್ಧೋನ್ಮತ್ತ ಮೃತ್ಯು-ದಳದಿಂದ ಸಂಹರಿಸಲ್ಪಟ್ಟರು.
ನೂರಾರು ಮಂದಿ ತಾವು ಉಟ್ಟ ಬಟ್ಟೆಯಲ್ಲೇ ಹೊರತು ಬೇರೇನೂ ಇಲ್ಲದೆ ಪಲಾಯನಗೈದರು. ಕುಟುಂಬಗಳು ಬೇರ್ಪಡಿಸಲ್ಪಟ್ಟವು ಮತ್ತು ತಿಂಗಳುಗಳ ನಂತರವೂ ಅವರು ಒಂದುಗೂಡ ಶಕ್ತರಾಗಲಿಲ್ಲ. ಮರ್ನೊವಿಯದ ಇಡೀ ಜನಸಂಖ್ಯೆಯೇ ಸ್ಥಳಾಂತರ ಮಾಡಿದ್ದಾಗಿ ತೋರುತ್ತಿತ್ತು. ಖಾಲಿ ಮನೆಗಳು ಸೈನಿಕರಿಂದ ಮತ್ತು ಶಹರದ ಬೇರ ಭಾಗಗಳಿಂದ ಪಲಾಯನ ಮಾಡಿದ್ದ ನಿರಾಶ್ರಿತರಿಂದ ತುಂಬಲ್ಪಟ್ಟವು. ಮರ್ನೊವಿಯದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ಸ್ಥಳತಪ್ಪಿಸಲ್ಪಟ್ಟರು. ಹೆಚ್ಚಿನವರು ತಮಗಿದ್ದ ಎಲ್ಲವನ್ನು ಹಾಗೂ ಕಡಿಮೆಪಕ್ಷ ಒಬ್ಬ ಸಂಬಂಧಿಕನನ್ನಾದರೂ ಮರಣದಲ್ಲಿ ಕಳಕೊಂಡರು. ಕೆಲವರು ಎಷ್ಟೋ ಹೆಚ್ಚು ಮಂದಿಯನ್ನು ಕಳಕೊಂಡರು.
ಪರಿಸ್ಥಿತಿಯು ಎಷ್ಟು ವಿಷಮ ಬಿಂದುವಿಗೇರಿತೆಂದರೆ, ಬೇರೆ ಐದು ಪಶ್ಚಿಮ ಆಫ್ರಿಕನ್ ದೇಶದವರು ಶಾಂತಿ ಪುನಃಸ್ಥಾಪಿಸುವ ಪ್ರಯತ್ನದಲ್ಲಿ ಸೈನಿಕರನ್ನು ಕಳುಹಿಸಿಕೊಟ್ಟರು. 1990 ರ ಅಕ್ಟೋಬರದೊಳಗೆ, ಹೆಚ್ಚಿನ ಹೋರಾಟಗಳು ಮುಗಿದಿದ್ದವು. ಆದರೆ ಕ್ಷಾಮದ ಕರೀಛಾಯೆಯು ಉರಿ-ತಪ್ತ ದೇಶವನ್ನು ಶವವಸ್ತ್ರದಂತೆ ಆವರಿಸಿತು. ಒಂದು ಬಿಂದುವಲ್ಲಿ ಮರ್ನೊವಿಯದ ಐದು ವಯಸ್ಸಿಗೆ ಕೆಳಗಿನ ಮಕ್ಕಳಲ್ಲಿ ಮೂರನೆ ಒಂದಂಶ ನ್ಯೂನಪೋಷಣೆಗೆ ಗುರಿಯಾಗಿದ್ದವೆಂದು ಮತ್ತು ನೂರಕ್ಕಿಂತಲೂ ಹೆಚ್ಚು ಜನರು ಪ್ರತಿದಿನ ಸಾಯುತ್ತಿದ್ದರೆಂದೂ ಪರಿಹಾರಕ ಏಜೆನ್ಸಿಗಳು ವರದಿ ಮಾಡಿದ್ದವು. ಲಾಭದ ಕೊಳ್ಳೆಹೊಡೆಯುವವರಿಂದ ಪರಿಸ್ಥಿತಿಗಳೇನೂ ಸುಲಭ ಮಾಡಲ್ಪಡಲಿಲ್ಲ. ಅನೇಕರು ಪರಿಹಾರಕ್ಕಾಗಿ ನೀಡಲ್ಪಟ್ಟ ಅಕ್ಕಿಯನ್ನು ಕದ್ದರು ಮತ್ತು ಅನಂತರ ಅದನ್ನು ಒಂದು ಕಪ್ಪ್ಗೆ 20 ಡಾಲರು (ಸುಮಾರು ರೂ.500)ಅಥವಾ ಅದಕ್ಕಿಂತ ಹೆಚ್ಚು ಹಣಕ್ಕೆ ಮಾರಿದರು. ವ್ಯಾಧಿಯು ಅಲ್ಲಿ ಸದಾ ಹಾಜರಿತ್ತು ವಿಶೇಷವಾಗಿ ಕೊಲೆರಾ ರೋಗವು, ಯಾಕಂದರೆ ಶಹರದ ನೀರಿನ ಸರಬರಾಯಿ, ನಿರ್ಮಲೀಕರಣ ಮತ್ತು ವಿದ್ಯುತ್ಚ್ಛಕ್ತಿಯ ವ್ಯವಸ್ಥೆಗಳು ಪೂರಾ ನಷ್ಟಗೊಂಡಿದ್ದವು.
ಮರ್ನೊವಿಯದಲ್ಲಿ ವಾಸಿಸಿದ್ದ ಸುಮಾರು ಒಂದು ಸಾವಿರ ಯೆಹೋವನ ಸಾಕ್ಷಿಗಳು ಸಹಾ ಭೀಕರವಾಗಿ ಬಾಧಿತರಾಗಿದ್ದರು. ಹೆಚ್ಚಿನವರು ಶಹರದಿಂದ ಪಲಾಯನ ಮಾಡಿ ಗ್ರಾಮೀಣ ಪ್ರದೇಶಕ್ಕೆ ಹೋಗಿದ್ದರು, ಬೇರೆಯವರು ಹಡಗಿನ ಮೂಲಕ ಘಾನ ಮತ್ತು ನೈಜೀರಿಯಕ್ಕೆ ಅಥವಾ ರಸ್ತೆಯ ಮೂಲಕ ಕಾಟ್ ಡಿವೊಯಿರ್ ಯಾ ಸಿಯರ ಲಿಯೋನ್ಗೆ ಹೋದರು. ಜೂಲೈಯಿಂದ ಡಿಸೆಂಬರ 1990 ರ ತನಕ 30 ಮಂದಿ ಸಾಕ್ಷಿಗಳು ತಮ್ಮ ಪ್ರಾಣ ಕಳಕೊಂಡರು. ಕೆಲವರು ಗುಂಡಿನೇಟಿನಿಂದ ಕೊಲ್ಲಲ್ಪಟ್ಟರು. ಇತರರು ರೋಗ ಮತ್ತು ಹಸಿವೆಯ ಫಲಿತಾಂಶವಾಗಿ ಸತ್ತರು. ಮಿನಿಸ್ಟ್ರಿಯಲ್ ಟ್ರೈನಿಂಗ್ ಸ್ಕೂಲ್ನ ಅಮೆರಿಕನ್ ಮಿಶನೆರಿ ಗ್ರಾಜುವೇಟ್ಗಳಾದ, ಎಲನ್ ಬೇಟ್ ಮತ್ತು ಆರ್ಥರ್ ಲಾಸನ್ ಇವರೂ ಕೊಲ್ಲಲ್ಪಟ್ಟವರಲ್ಲಿ ಸೇರಿದ್ದರೆಂದು ವ್ಯಕ್ತ. ಆ ಭೀಕರ ಸಮಯದಲ್ಲಿ ಸಂಬಂಧಿಕರನ್ನು ಅಥವಾ ಮಿತ್ರರನ್ನು ಕಳಕೊಂಡಿರಬಹುದಾದ ನಮಗೆ ಬೈಬಲಾಧಾರಿತವಾದ ಆ ಪುನರುತ್ಥಾನದ ನಿರೀಕ್ಷೆಯು ಎಷ್ಟು ಸಾಂತ್ವನಕಾರಿಯು!
ಕ್ರೈಸ್ತ ಸಹೋದರತ್ವ ಕ್ರಿಯೆಯಲ್ಲಿ
ಯುದ್ಧವು ಮುಂದರಿದಷ್ಟಕ್ಕೆ, ಅನೇಕ ಸ್ಥಳತಪ್ಪಿದ ಸಾಕ್ಷಿಗಳು ಆಶ್ರಯಕ್ಕಾಗಿ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನ ಮತ್ತು ಶಹರದ ಆಚೇಕಡೆಯಿದ್ದ ಮಿಶನೆರಿ ಮನೆಯ ಮರೆಹೊಕ್ಕರು. ಕೆಲವರು ಆಶ್ರಯವನ್ನು ಹುಡುಕಿದ್ದು ಯಾಕಂದರೆ ಸೈನಿಕರು ಆ ಕ್ಷೇತ್ರದಲ್ಲಿ ಕೊಲ್ಲುತ್ತಿದ್ದ ಒಂದು ಕುಲದ ಸದಸ್ಯರು ಅವರಾಗಿದ್ದ ಕಾರಣದಿಂದಲೇ. ಹೆಚ್ಚಿನವರಿಗೆ ಬ್ರಾಂಚ್ ಆಫೀಸಿನಲ್ಲಿ ನೇಮಕಗಳನ್ನು ಕೊಡಲಾಯಿತು ಮತ್ತು ಅಡಿಗೆ ಮತ್ತು ಶುಚಿ ಮಾಡುವಿಕೆಯಲ್ಲಿ ಅವರು ಬೆಲೆಯುಳ್ಳ ನೆರವನ್ನಿತ್ತರು ಮತ್ತು ಇನ್ನಿತರರು ಹೊರಗಿನ ಪರಿಸ್ಥಿತಿಗಳು ಅನುಮತಿಸಿದಾಗ ಸಮೀಪದ ಜವುಗುಗಳಲ್ಲಿ ಭಕ್ಷಯೋಗ್ಯ ಹಸುರು ಸಸ್ಯವನ್ನು ಆಹಾರಕ್ಕಾಗಿ ಹುಡುಕುವಂತೆ ನೇಮಿಸಲ್ಪಟ್ಟರು.
ಎಲ್ಲೆಲ್ಲಿಯೂ ಜನರು ಮಲಗುತ್ತಿದ್ದರು, ಮಿಶನೆರಿಗಳ ಶಯ್ಯಾಗೃಹದಲ್ಲಿ, ಮೊಗಸಾಲೆಯಲ್ಲಿ, ಶಿಪ್ಪಿಂಗ್ ವಿಭಾಗದಲ್ಲಿ ಮತ್ತು ಆಫೀಸುಗಳಲ್ಲಿಯೂ. ಶೌಚಕೂಪಗಳನ್ನು ಅಗೆದು ಅವನ್ನು ಬಳಸಲಾಯಿತು. ಸ್ತ್ರೀಯರನ್ನು ದಾದಿಗಳಾಗಿ ಸೇವೆ ಮಾಡಲು ನೇಮಿಸಲಾಯಿತು ಮತ್ತು ಅವರು ಮಲೇರಿಯ ಮತ್ತು ಜ್ವರಗಳ ಅನೇಕ ರೋಗಿಗಳನ್ನು ಸಾಫಲ್ಯದಿಂದ ಪರಾಮರಿಕೆ ಮಾಡಿದರು. ಅತಿಭೇದಿಯು ಹೆಚ್ಚಿನ ಸಮಸ್ಯೆಯಾಗಿತ್ತು.
ಬಾಂಬ್ ಡ್ರಿಲ್ ಮಂತಾದ ವಿಶೇಷ ಗೃಹ ಕಾರ್ಯವಿಧಾನಗಳನ್ನು ನಾವು ಏರ್ಪಡಿಸಿದೆವು. ಹೀಗೆ ವಿರುದ್ಧ ಸೇನೆಗಳು ಭಾರಿ ಸಿಡಿಗುಂಡುಗಳನ್ನು ಎಸೆದಾಗ, ಬೇಗನೇ ಬ್ರಾಂಚ್ನ ಸುರಕ್ಷಿತ ಕ್ಷೇತ್ರಗಳಿಗೆ ಮುಟ್ಟಲು ತರಬೇತು ಹೊಂದಿದೆವು. ನಮ್ಮ 3 ಮೀಟರ್ ಎತ್ತರದ ಗೋಡೆಯು ತುಸು ಭದ್ರತೆಯಾಗಿದ್ದರೂ ಕುಪ್ಪಳೇಟು ಹೊಡೆಯಲ್ಪಡುತ್ತಿರುವ ಗುಂಡುಗಳನ್ನು ತಡೆಯಲು ಅದು ಸಾಕಾಗಿರಲಿಲ್ಲ. ತರ್ವೆಯಾಗಿ ನಮ್ಮ ಮೇಲ್ಚಾವಣಿ ತಡೆದುಕೊಂಡ ಎಲ್ಲಾ ತೂತುಗಳಿಂದಾಗಿ ಕರಿಮೆಣಸಿನ ಹುಡಿಯನ್ನುದುರಿಸುವ ರಂಧ್ರಗಳುಳ್ಳ ಡಬ್ಬಿಯಂತೆ ತೋರತೊಡಗಿತು.
ಒಂದು ದ್ವೇಷಿತ ಕುಲಕ್ಕೆ ಸೇರಿದ್ದ ಕಾರಣ ಕೊಲ್ಲಲು ಹುಡುಕುತ್ತಿದ್ದವರಿಂದ ಜೊತೆ ಸಾಕ್ಷಿಗಳನ್ನು ಕಾಪಾಡಲು ಅನೇಕರು ತಮ್ಮ ಜೀವವನ್ನು ಕೇಡಿಗೆ ಒಡ್ಡಿದರು. ಒಂದು ದಿನ ಒಬ್ಬಾಕೆ ಕ್ರೈಸ್ತ ಸಹೋದರಿಯು ಅಳುತ್ತಾ, ಪಾರಾಗಿ ಉಳಿದ ತನ್ನ ಮಕ್ಕಳನ್ನು ಹಿಡುಕೊಂಡು ಬ್ರಾಂಚ್ ಆಫೀಸಿಗೆ ಬಂದಳು, ಅದರಲ್ಲೊಂದು ಮಗು ಎರಡು ವಾರದ್ದು. ಅವಳ ಗಂಡ ಮತ್ತು ಹದಿಹರೆಯದ ಮಗನು ಆಗಲೇ ಆಕೆಯ ಕಣ್ಣ ಮುಂದೆ ಗುಂಡಿನೇಟಿಗೆ ಬಲಿಯಾಗಿದ್ದರು. ಕೊಲೆಗಾರರು ಅವರನ್ನು ಹುಡುಕುತ್ತಾ ಹಿಂದಿರುಗಿ ಬಂದಾಗ ಅವಳನ್ನು ಮತ್ತು ಅವಳ ಮಕ್ಕಳನ್ನು ಇನ್ನೊಬ್ಬ ಸಾಕ್ಷಿಯು ಯಶಸ್ವಿಯಾಗಿ ಮರೆಮಾಡಿದ್ದನು.
ಇನ್ನೊಂದು ಕುಟುಂಬವು ಸ್ನಾತಳಲ್ಲದ ಪ್ರಚಾರಕಳೊಂದಿಗೆ ಬ್ರಾಂಚ್ ಆಫೀಸಿಗೆ ಬಂತು, ಆಕೆಯ ಕುಲದವರಿಂದ ಆ ಕುಟುಂಬವು ಕೊಲ್ಲಲ್ಪಡದಂತೆ ಆಕೆ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಳು. ಅನಂತರ, ಪರಿಸ್ಥಿತಿಯು ಬದಲಾದಾಗ ಮತ್ತು ಆ ಅಸ್ನಾನಿತ ಪ್ರಚಾರಕಳು ಅಪಾಯಕ್ಕೆ ಗುರಿಯಾದಾಗ, ಕುಟುಂಬವು ಅವಳನ್ನು ತಮ್ಮ ಕುಲದವರ ಕೈಯೊಳಗಿಂದ ರಕ್ಷಿಸಿತ್ತು.
ಬ್ರಾಂಚ್ ಆಫೀಸಿನ ಗೇಟಿನ ಬಳಿಯಿದ್ದ ಶಸ್ತ್ರಸಜ್ಜಿತ ಪುರುಷರೊಂದಿಗೆ ಮಿಶನೆರಿಗಳು ಪದೇ ಪದೇ ಸಂಭಾಷಣೆ ಮಾಡುತ್ತಾ, ಕಟ್ಟಡವನ್ನು ಅವರು ತಲಾಷು ಮತ್ತು ಸೂರೆ ಮಾಡದಂತೆ ತಡೆಹಿಡಿಯಲು ಪ್ರಯತ್ನಿಸುತ್ತಿದ್ದರು. ಒಮ್ಮೆ ಒಂದು ಕ್ರೋಧಿತ ಗುಂಪು ನಮ್ಮೆಡೆಗೆ ಪಿಸ್ತೂಲನ್ನು ಗುರಿಯಿಡುತ್ತಾ ಒಳನುಗ್ಗಿತು, ಒಂದು ವಿಶಿಷ್ಟ ಕುಲದ ಸದಸ್ಯರನ್ನು ನಾವು ಅಡಗಿಸಿಟಿದ್ಟೇವ್ದೆಂದು ಅವರು ಪಟ್ಟುಹಿಡಿದಿದ್ದರು. ಸ್ಥಳೀಕ ಸಾಕ್ಷಿಗಳು ಶಾಂತವಾಗಿ ವರ್ತಿಸುವುದನ್ನು ಮತ್ತು ಅಲ್ಲಿ ನಡಿಸಲ್ಪಡುತ್ತಿದ್ದ ಕ್ರೈಸ್ತ ಕೂಟಗಳಲ್ಲಿ ಮೌನವಾಗಿ ಕೂತು ಕಿವಿಗೊಡುತ್ತಿದ್ದದ್ದನ್ನು ಕಂಡು ಅವರಿಗೆ ಅಚ್ಚರಿ. ಅವರು ಮನೆಯ ತಲಾಷು ಮಾಡಿದರು ಆದರೆ ಅವರು ಯಾವುದಕ್ಕಾಗಿ ಹುಡುಕುತ್ತಿದ್ದರೋ ಅದು ಅವರಿಗೆ ಸಿಕ್ಕಲಿಲ್ಲ. ನಾವು ಯಾವ ಸೈನಿಕರನ್ನಾಗಲಿ ಮತ್ತು ಅವರ ಶತ್ರುಗಳನ್ನಾಗಲಿ ಅಡಗಿಸಿಟಿಲ್ಟವ್ಲೆಂಬ ಆಶ್ವಾಸನೆಯನ್ನು ಆಕ್ರಮಣಗಾರರಿಗೆ ಯಾವಾಗಲೂ ಕೊಡ ಶಕ್ತರಾದೆವು. ಕ್ರೈಸ್ತರೋಪಾದಿ ನಾವು ತಟಸ್ಥರಾಗಿದೆವ್ದು.
ಒಮ್ಮೆ ಒಂದು ಭಾರಿ ಹೋರಾಟದ ಸಮಯದಲ್ಲಿ, ಸಾಕ್ಷಿಗಳ ಒಂದು ಗುಂಪು ಅಂತಿಮ ಕ್ಯಾನ್ಸರ್ನಿಂದ ಬಳಲುತ್ತಿದ್ದ ಒಬ್ಬ ಸಹೋದರನನ್ನು ಹೊತ್ತು ತಂದರು. ಖೇದಕರವಾಗಿ, ಅವನು ಸ್ವಲ್ಪ ಹೊತ್ತಿನಲ್ಲೇ ಸತ್ತನು. ವಠಾರದಲ್ಲೇ ಒಂದು ಸಮಾಧಿಯನ್ನು ಅಗೆಯಲಾಯಿತು, ಮತ್ತು ಎಂಥಾ ಭಾವಾವೇಶದ ಶವ ಸಂಸ್ಕಾರವು ಅಲ್ಲಿ ನಡೆಯಿತು! ಆ ಸಹೋದರನು ನಮ್ಮ ಅತ್ಯುತ್ತಮ ಹಿರಿಯರಲ್ಲಿ ಒಬ್ಬನಾಗಿದ್ದನು, ಅನೇಕ ವರ್ಷಗಳ ನಂಬಿಗಸ್ತ ಸೇವೆಯು ಅವನ ಹಿಂದಿತ್ತು. ಸುಮಾರು ನೂರು ಮಂದಿ ನಿರಾಶ್ರಿತರು ಮೊಗಸಾಲೆಯಲ್ಲಿ ಅವನ ಸ್ಮಾರಕ ಭಾಷಣಕ್ಕಾಗಿ ಕೂಡಿಬಂದರು, ಗುಂಡಿನೇಟುಗಳ ಸದ್ದಿನ ಹಿನ್ನೆಲೆಗೆ ಎದುರಾಗಿ ಅದು ಕೊಡಲ್ಪಟ್ಟಿತು.
ಆಹಾರ ಮತ್ತು ನೀರನ್ನು ದೊರಕಿಸಿಕೊಂಡದ್ದು
ಆಹಾರ ಸಂಗ್ರಹವು ಬಹು ಸೀಮಿತವಾಗಿತ್ತು. ಯುದ್ಧವು ಪ್ರಾರಂಭಿಸುವ ಮುಂಚೆಯೇ, ವ್ಯಾಪಾರಿಗಳು ಆಹಾರ ಧಾನ್ಯಗಳ ಆಮದನ್ನು ನಿಲ್ಲಿಸಿದ್ದರು. ಬ್ರಾಂಚ್ನ ನಮ್ಮ ಆಹಾರ ಸಂಗ್ರಹವು ನಮ್ಮ 12 ಕುಟುಂಬ ಸದಸ್ಯರಿಗೆ ಅನೇಕ ತಿಂಗಳುಗಳಿಗೆ ಸಾಕಿತ್ತು, ಆದರೆ ಕೆಲವೊಮ್ಮೆ 200 ರಷ್ಟು ಜನರು ನಮ್ಮೊಂದಿಗೆ ಇರುತ್ತಿದ್ದರು, ಸಹಾಯದ ತೀವ್ರಾಗತ್ಯವಿದ್ದ ಸಾಕ್ಷಿಗಳಲ್ಲದ ನಮ್ಮ ನೆರೆಯವರೂ ಅಲಿದ್ದರು. ಪ್ರತಿಯೊಬ್ಬನು ದಿನಕ್ಕೆ ಒಂದು ಚಿಕ್ಕ ಊಟಕ್ಕೆ ನಿರ್ಬಂಧಿತನಾಗಿದ್ದನು; ಅಂಥ ಭತ್ಯಗಳಿಂದಾಗಿ ನಾವು ಹಲವಾರು ತಿಂಗಳು ಬದುಕಿ ಉಳಿದೆವು. ಎಲ್ಲರೂ ಹಸಿವೆಯಿಂದಿದ್ದರು. ಮಕ್ಕಳು ತೀರಾ ಕಯ್ಷಿಸಿಹೋಗಿ, ತಮ್ಮ ಹೆತ್ತವರ ತೋಳುಗಳಲ್ಲಿ ಶಕಿಹ್ತೀನವಾಗಿ ಜೋತಾಡುತ್ತಿದ್ದವು.
ಶೀಘ್ರದಲ್ಲೇ ನಮ್ಮ ಆಹಾರ ಸಂಗ್ರಹವು ಮುಗಿಯುತ್ತಾ ಬಂತು. ಹೆಚ್ಚನ್ನು ತರುವುದು ಎಲ್ಲಿಂದ? ಮರ್ನೊವಿಯದಲ್ಲಿ ಒಂದು ಅಂಗಡಿಯೂ ತೆರೆದಿಲ್ಲ. ಎತ್ತ ಕಡೆ ನೋಡಿದರೂ, ಆಹಾರವನ್ನು ಹುಡುಕುತ್ತಾ ತಿರುಗುತ್ತಿರುವ ಹಸಿದ ಜನರು. ಜನರು ಏನನ್ನಾದರೂ ತಿನ್ನುತ್ತಿದ್ದರು—ನಾಯಿ, ಬೆಕ್ಕು, ಇಲಿಗಳನ್ನು ಸಹಾ. ಬ್ರಾಂಚ್ನ ಇಬ್ಬರು ಮಿಶನೆರಿಗಳು ಯುದ್ಧ ನಿಂತಿದ್ದ ಸುಮಾರು 60 ಕಿಲೊ ಮೀಟರ್ ದೂರದ ಕಕಾಟ ಶಹರಕ್ಕೆ ಹೋಗುವ ಯತ್ನಮಾಡಲು ನಿರ್ಣಯಿಸಿದರು.
ತಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಿಕೊಳ್ಳಲು ಅವರು ತಮ್ಮ ಕಾರಿನ ಕಿಟಿಕಿಗಳಿಗೆ ವಾಚ್ಟವರ್ ಪತ್ರಿಕೆಗಳನ್ನು ಮತ್ತು ಗುರುತು ಪಟ್ಟಿಗಳನ್ನು ಹಚ್ಚಿದರು. ಹಲವಾರು ಪ್ರತಿಬಂಧಕಗಳನ್ನು ಹಾದುಹೋದನಂತರ, ಎದೆಯ ಮೇಲೆ ಸಿಡಿಗುಂಡಿನ ಮಾಲೆ ಮತ್ತು ಪಕ್ಕದಲ್ಲಿ ಪಿಸ್ತೂಲು ಜೋತಾಡುತ್ತಿದ್ದ ಒಬ್ಬ ದೊಡ್ಡ ಧಾಂಡಿಗ ವ್ಯಕ್ತಿ ಅವರನ್ನು ನಿಲ್ಲಿಸಿ, ಪ್ರಶ್ನಿಸಿದನು. ಅವರು ತಮ್ಮನ್ನು ಯೆಹೋವನ ಸಾಕ್ಷಿಗಳಾಗಿ ಪರಿಚಯಿಸಿಕೊಂಡರು ಮತ್ತು ಸ್ವಲ್ಪ ಅಹಾರವನ್ನು ತರಲು ಕಕಾಟಕ್ಕೆ ಹೋಗ ಬಯಸುತ್ತೇವೆ ಅಂದರು.
“ನನ್ನ ಹಿಂದೆ ಬನ್ನಿರಿ” ಎಂದನವನು. “ನಾನು ಇಲ್ಲಿನ ಯುದ್ಧಾಧಿಕಾರಿ.” ಅವನು ಅವರನ್ನು ತನ್ನ ಮುಖ್ಯ ಕಾರ್ಯಾಲಯಕ್ಕೊಯ್ದನು. ಸ್ಥಳವಿಲ್ಲದ ಜನರಿಗೆ ಅವರು ಆಶ್ರಯ ಕೊಟ್ಟದ್ದನ್ನು ಕೇಳಿದಾಗ, ಅವನು ಬ್ರಾಂಚ್ಗೆ ಪ್ರತಿಯೊಂದು 45 ಕಿಲೊ ಗ್ರಾಮ್ ಭಾರದ 20 ಗೋಣಿ ಅಕ್ಕಿಯನ್ನು ಕೊಡುವಂತೆ ತನ್ನ ಜನರಿಗೆ ಅಪ್ಪಣೆಕೊಟ್ಟನು. ಕಕಾಟಕ್ಕೆ ಹೋಗುವಂತೆ ಅವರಿಗೆ ಪರ್ಮಿಟನ್ನು ಕೊಡಲಾಯಿತು ಮತ್ತು ಉಳಿದ ಪ್ರತಿಬಂಧಕಗಳಲ್ಲಿ ಅವರನ್ನು ಸುರಕ್ಷಿತವಾಗಿ ನಡಿಸುವಂತೆ ಶಸ್ತ್ರಸಜ್ಜಿತ ಕಾವಲನ್ನೂ ನೀಡಲಾಯಿತು.
ಕಕಾಟದಲ್ಲಿ ಒಂದು ಅಂಗಡಿಯಿದ್ದ ನಮ್ಮ ಕ್ರೈಸ್ತ ಸಹೋದರ ಅಬ್ರಹಾಮನನ್ನು ಅವರು ಕಂಡರು. ಅವನು —ಹಾಲು, ಸಕ್ಕರೆ, ಕಾಯಿಪಲ್ಯ ಮತ್ತು ಇತರ ಆವಶ್ಯಕ ಆಹಾರ ಪದಾರ್ಥಗಳ ಮೂಟೆಗಳನ್ನೇ ಕಟ್ಟಿಕೊಟ್ಟನು. ಸಹೋದರರು ತಮ್ಮ ಪ್ರಯಾಣದಲ್ಲಿ ಈ ರೀತಿ ಪರಾಮರಿಕೆ ಮಾಡಲ್ಪಟ್ಟದ್ದನ್ನು ಕಾಣುವುದು ನಿಜವಾಗಿಯೂ ಆಶ್ಚರ್ಯಕರ. ನಾವು ನಮ್ಮ ಆಹಾರವನ್ನು ನಮ್ಮ ಮಿತ್ರರು ಮತ್ತು ನೆರೆಯವರೊಂದಿಗೆ ಪಾಲಿಗರಾದದ್ದಕ್ಕಾಗಿ ಯೆಹೋವನು ಪ್ರಸನ್ನನಾಗಿದ್ದಿರಬೇಕು, ಯಾಕಂದರೆ ಈಗ ನಮ್ಮ ಸಂಗ್ರಹವು ಮತ್ತೆ ಭರ್ತಿಯಾಯಿತು.—ಜ್ಞಾನೋಕ್ತಿ 11:25.
ಮರ್ನೊವಿಯದ ಆಚೆಗಡೆಯಲ್ಲಿ, ಮಿಶನೆರಿಗಳು ತಮ್ಮ ಮಿಶನೆರಿ ಮನೆಯಲ್ಲಿ ಸ್ಥಳವಿಲ್ಲದವರಿಗೆ ಆಶ್ರಯ ನೀಡಿ ಪರಾಮರಿಕೆ ಮಾಡಿದ್ದರು ಮತ್ತು ಅವರಿಗೆ ಸಹಾ ಅನಿರೀಕ್ಷಿತ ಮೂಲಗಳಿಂದ ನೆರವು ಸಿಕ್ಕಿತು. ಉದಾಹರಣೆಗೆ, ಒಬ್ಬ ಮಿಶನೆರಿಗೆ ಒಬ್ಬ ಸೈನಿಕನಿಂದ ಮೂರು ಗೋಣಿ ಅಕ್ಕಿ ಸಿಕ್ಕಿತು, ಸುಮಾರು 16 ವರ್ಷಗಳ ಹಿಂದೆ ಅವನು ಆ ಸೈನಿಕನ ಕ್ಷೇತ್ರದಲ್ಲಿ ಸೇವೆ ಮಾಡಿದ್ದನ್ನು ಅವನು ನೆನಪಿಗೆ ತಂದುಕೊಂಡನು. ಇನ್ನೊಬ್ಬ ಮಿಶನೆರಿಯು ಹೋರಾಟದ ಗುಂಪುಗಳ ಒಬ್ಬ ಮುಖ್ಯಸ್ಥನೊಂದಿಗೆ ಮಾಡಿದ ವೈಯಕ್ತಿಕ ಸಂದರ್ಶನೆಯ ನಂತರ ನಾಲ್ಕು ಗೋಣಿ ಅಕ್ಕಿಯನ್ನು ಪಡೆಯಶಕ್ತನಾದನು.
ಒಂದು ಸಂದರ್ಭದಲ್ಲಿ ನೀರಿನ ಅಭಾವವು ನಮ್ಮನ್ನು ತಟ್ಟಿದ ಕಾರಣ ಬ್ರಾಂಚನ್ನು ಖಾಲಿ ಮಾಡಬೇಕಾದೀತೋ ಎಂದು ತೋರಿಬಂತು. ಸ್ವಲ್ಪ ಸಮಯದ ತನಕ ನಮ್ಮ ಬಾವಿಯು ಸಮಾಜದ ಅನೇಕರಿಗೆ ಕುಡಿಯುವ ನೀರಿನ ಏಕಮಾತ್ರ ಮೂಲವಾಗಿತ್ತು. ಆದರೆ ನಮ್ಮ ಪಂಪನ್ನು ನಡಿಸಲು ಬೇಕಾದ ವಿದ್ಯುತ್ ಉತ್ಪಾದನಾ ಯಂತ್ರಕ್ಕೆ ಇಂಧನ ಸಂಗ್ರಹವು ಈಗ ಮುಗಿಯ ತೊಡಗಿತ್ತು. ಆದರೆ ಹೋರಾಟದ ಮೊದಲ ಕೆಲವು ದಿನಗಳಲ್ಲಿ ನಮ್ಮ ಬ್ರಾಂಚ್ನಲ್ಲಿ ಸುರಕ್ಷೆಯನ್ನು ಪಡೆದ ಒಬ್ಬ ಮನುಷ್ಯನು ನಮ್ಮ ಸಮಸ್ಯೆಯ ಕುರಿತು ಕೇಳಿದಾಗ, ನಾವಾತನಿಗೆ ಮಾಡಿದ ಸಹಾಯಕ್ಕೆ ಗಣ್ಯತೆಯಲ್ಲಿ ನಮಗೆ ಇಂಧನವನ್ನು ಒದಗಿಸಿಕೊಟ್ಟನು, ಹೀಗೆ ನಮ್ಮ ನೀರಿನ ಸಂಗ್ರಹವು ಎಂದೂ ಬತ್ತಿಹೋಗಲಿಲ್ಲ.
ಆತ್ಮಿಕ ಬಲವನ್ನು ಕಾಪಾಡುವುದು
ಅಕ್ಟೋಬರ 1990 ರಲ್ಲಿ ಮಿಶನೆರಿಗಳಲ್ಲಿ ಕೊನೆಯವರಾಗಿದ್ದ ನಾವು ಲೈಬೀರಿಯವನ್ನು ಬಿಟ್ಟು ಹೋಗುವಂತೆ ಒತ್ತಾಯಿಸಲ್ಪಟ್ಟಾಗ, ನಮ್ಮ ಮನಸ್ಸಿನಲ್ಲಿದ್ದ ಮುಖ್ಯ ಚಿಂತೆಯು ಯಾವುದೆಂದರೆ ನಮ್ಮ ಸಹೋದರ ಮತ್ತು ಸಹೋದರಿಯರು ಹೇಗೆ ನಿಭಾಯಿಸ್ಯಾರು ಎಂಬದೇ. ಆ ಸಮಯದಿಂದ ನಮಗೆ ಸಿಕ್ಕಿದ ವರದಿಗಳಿಂದ, ಅವರು ತಮ್ಮ ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿದ್ದಾರೆಂಬದು ವ್ಯಕ್ತವಾಗಿದೆ.
ಯುದ್ಧಕ್ಕೆ ಮೊದಲು ಪ್ರತಿ ಸಾಕ್ಷಿಯು ತಿಂಗಳಿಗೆ ಶುಶ್ರೂಷೆಯಲ್ಲಿ ಕಳೆದ ತಾಸುಗಳ ಸಂಖ್ಯೆಯು 17. ಆದರೂ ಯುದ್ಧದ ಸಮಯದಲ್ಲಿ, ಪೊದೆಗಳಲ್ಲಿ ಆಹಾರಕ್ಕಾಗಿ ಹುಡುಕುವ ನಿತ್ಯದ ಅಗತ್ಯತೆಯು ಅಲ್ಲಿದ್ದರೂ, ಕೆಲವು ಸಭೆಗಳ ಸಾಕ್ಷಿಗಳು ಪ್ರತಿ ಪ್ರಚಾರಕನ ಹಿಂದೆ 20 ಕ್ಕಿಂತಲೂ ಹೆಚ್ಚು ತಾಸುಗಳನ್ನು ಹಾಕಿದ್ದರು! ಅದಲ್ಲದೆ, ವಾಚ್ಟವರ್ ಪತ್ರಿಕೆಗಳ ಅಭಾವ ಉಂಟಾದದ್ದಿಂದ, ನಮ್ಮ ಸಹೋದರಿಯರಲ್ಲಿ ಅನೇಕರು ಭಾನುವಾರದ ಅಭ್ಯಾಸಕ್ಕಾಗಿ ಹೆಚ್ಚು ಪ್ರತಿಗಳು ದೊರಕುವಂತೆ ಅಧ್ಯಯನ ಲೇಖನಗಳನ್ನು ಕೈಬರಹದಿಂದ ನಕಲು ಮಾಡುತ್ತಿದ್ದರು.
ಮರ್ನೊವಿಯಕ್ಕೆ ಅತಿ ಹತ್ತಿರದ ನಾಲ್ಕು ಸಭೆಗಳು ಶಹರದಲ್ಲಿ ಹೋರಾಟ ನಡೆದಾಗ ಪಲಾಯನ ಗೈದಿದ್ದ ಸಾಕ್ಷಿಗಳಿಂದ ತುಂಬಿತುಳುಕಿದ್ದವು. ಈ ಸ್ನೇಹಿತರು ತಮಗಿದ್ದ ಎಲ್ಲವನ್ನು ಕಳಕೊಂಡರು ಯಾಕಂದರೆ ತಮ್ಮ ಮನೆಗೆ ಹಿಂತಿರುಗಿ ಏನನ್ನಾದರೂ ಒಯ್ಯಲು ಅವರು ಶಕ್ತರಾಗಿರಲಿಲ್ಲ. ವಾಸ್ತವದಲ್ಲಿ, ಅವರು ತಿಂಗಳುಗಳ ತನಕ ತಮ್ಮ ಸ್ವಂತ ಮಕ್ಕಳು ಮತ್ತು ಹೆತ್ತವರಿಂದ ಯುದ್ಧ ರೇಖೆಗಳ ವಿರುದ್ದ ಪಕ್ಕಗಳಲ್ಲೂ ಇದ್ದರು! ಮಾರ್ಚ್ 30 ರ ಯೇಸುವಿನ ಮರಣದ ಸ್ಮಾರಕಕ್ಕೆ ಈ ನಾಲ್ಕು ಸಭೆಗಳಲ್ಲಿ ಒಟ್ಟಿಗೆ 1,473 ಮಂದಿ ಹಾಜರಾದರು.
ಕೆಲವೇ ವಾರಗಳ ಹಿಂದೆ ಹಸಿವೆಯಿಂದಾಗಿ ನಡೆಯಲೂ ತ್ರಾಣವಿಲ್ಲದಷ್ಟು ದೈಹಿಕ ಬಲಹೀನತೆಯಿಂದಿದ್ದರೂ, ಮರ್ನೊವಿಯದಲ್ಲಿ ಉಳಿದಿದ್ದ ಸುಮಾರು 300 ಸಾಕ್ಷಿಗಳು ಸ್ಮಾರಕಾಚರಣೆಯ ಆ ತಿಂಗಳಲ್ಲಿ ಆಕ್ಸಿಲರಿ ಪಯನೀಯರ ಸೇವೆಗಿಳಿಯಲು ವಿಶೇಷ ಪ್ರಯತ್ನ ಮಾಡಿದರು. ಜನರನ್ನು ಸ್ಮಾರಕಕ್ಕೆ ಆಮಂತ್ರಿಸಲು ಅವರು ಪ್ರಯಾಸದಿಂದ ದುಡಿದರು, ಮತ್ತು 1,116 ಹಾಜರಿ ಸಿಕ್ಕಿತು.
ಮರ್ನೊವಿಯದ ಒಬ್ಬ ಕ್ರೈಸ್ತ ಹಿರಿಯನು ವಿವರಿಸಿದ್ದು: “ಡಿಸೆಂಬರ್ 1990 ರಿಂದ ಆರಂಭಿಸಿ ಪುನಃ ನಮ್ಮ ರಾಜ್ಯ ಸಭಾಗೃಹದಲ್ಲಿ ಕೂಡಿಬರಲು ನಾವು ನಿರ್ಧರಿಸಿದೆವು. ನಮ್ಮ ಪ್ರಥಮ ಹಾಜರಿ 17. ಅನಂತರ ಅದು 40 ಕ್ಕೇರಿತು, ಮತ್ತು ತುಸು ಸಮಯದ ತನಕ 40ರಲ್ಲೇ ಉಳಿಯಿತು. ತರುವಾಯ ಫೆಬ್ರವರಿ 24ಕ್ಕೆ ನಮ್ಮ ಹಾಜರಿ 65ಕ್ಕೆ ಮತ್ತು ಒಂದು ವಾರದ ನಂತರ 85ಕ್ಕೇರಿತು. ಅಲ್ಲದೆ, ಸಭೆಯಲ್ಲಿ ಬಹುಮಟ್ಟಿಗೆ ಎಲ್ಲರೂ ಮಾರ್ಚ್ನಲ್ಲಿ ಆಕ್ಸಿಲರಿ ಪಯನೀಯರ ಸೇವೆಯ ಕರೆಗೆ ಪ್ರತಿಕ್ರಿಯೆ ತೋರಿಸಿದರು.”
ಇತರರಿಗಾಗಿ ಚಿಂತೆ
“ನಮ್ಮ ಚರ್ಚಿನ ಸಹೋದರರು ಯುದ್ಧದ ಸಮಯದಲ್ಲಿ ಒಬ್ಬರನ್ನೊಬ್ಬರು [ವಿರುದ್ಧ ಕುಲಗಳು] ಕೊಲ್ಲುವುದರಲ್ಲಿ ಕಾರ್ಯಮಗ್ನರಾಗಿದ್ದರು,” ಎಂದು ಗಮನಿಸಿದನು ಒಬ್ಬ ಸಾಕ್ಷಿಯ ಸಾಕ್ಷ್ಯೇತರ ಸಂಬಂಧಿಕನು, “ಜೊತೆ ವಿಶ್ವಾಸಿಗಳಿಗಾಗಿ ಅವರಿಗೆ ಎಂದೂ ಸಮಯವಿರಲಿಲ್ಲ.” ಆದರೆ ಯೆಹೋವನ ಸಾಕ್ಷಿಗಳಲ್ಲಿ ಪರಿಸ್ಥಿತಿಯು ಅದೆಷ್ಟು ಭಿನ್ನವಾಗಿತ್ತು!
ನೆರೆಕರೆಯ ಪರಿಹಾರಕ ತಂಡದ ಅಧ್ಯಕ್ಷನು, ಉದಾಹರಣೆಗಾಗಿ, ಫೆಬ್ರವರಿ 1991ರಲ್ಲಿ ಬ್ರಾಂಚನ್ನು ನೋಡಿಕೊಂಡಿದ್ದ ಸಹೋದರರಿಗೆ ಬರೆದದ್ದು: “ನೀವು ಮತ್ತು ನಿಮ್ಮ ಸಂಘಟನೆಯು ನಮ್ಮ ಜನರಿಗೆ ಆಹಾರ ವಿತರಣೆಯ ಸಮಯದಲ್ಲಿ ಕೊಡುತ್ತಾ ಇರುವ ಸಂಗ್ರಹಣ ಸೌಕರ್ಯಗಳಿಗಾಗಿ ಗಣ್ಯತೆ ಮತ್ತು ಉಪಕಾರ ಸೂಚಕವಾಗಿ ಈ ಪತ್ರವು ಇದೆ. ನಿಮ್ಮ ಮಾನವ ಹಿತೋತ್ಸಾಹ ಭಾವವು ಈ ದೇಶಕ್ಕೆ ಶಾಂತಿ ಮತ್ತು ಸದ್ಭಾವನೆಗಳನ್ನು ತರಲು ನಿಮ್ಮ ಸಮಾಜಕ್ಕಿರುವ ಸಿದ್ಧಮನಸ್ಸನ್ನು ತೋರಿಸುತ್ತದೆ. ನಿಮ್ಮ ಸತ್ಕಾರ್ಯಗಳನ್ನು ದಯವಿಟ್ಟು ಮುಂದುವರಿಸುತ್ತಾ ಇರ್ರಿ.”
ಬೇರೆ ದೇಶಗಳ ಯೆಹೋವನ ಸಾಕ್ಷಿಗಳು ಲೈಬೀರಿಯದ ತಮ್ಮ ಸಹೋದರರ ಅಗತ್ಯತೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಪರಿಹಾರಕ ಸಹಾಯವು ಪಶ್ಚಿಮ ಆಫ್ರಿಕದ ಸಿಯರ ಲಿಯೋನ್ ಮತ್ತು ಕಾಟ್ ಡಿವೊಯಿರ್, ಯೂರೋಪಿನ ನೆದರ್ಲೆಂಡ್ ಮತ್ತು ಇಟೆಲಿ, ಮತ್ತು ಅಮೆರಿಕ ಮುಂತಾದ ದೇಶಗಳಿಂದ ಒದಗಿಸಲ್ಪಟ್ಟವು.
ಯಾರ ತಾಯಿಯು ಒಂದು ದ್ವೇಷಿತ ಕುಲದ ಸದಸ್ಯೆಯಾಗಿದ್ದ ಕಾರಣ ಕೊಲ್ಲಲ್ಪಟ್ಟಳೋ ಆ ಚಿಕ್ಕ ಹುಡುಗಿ, ತನಗೆ ದೊರೆತ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದಳು. ಅವಳು ಬರೆದದ್ದು: “ನೀವು ಕಳುಹಿಸುವ ವಸ್ತುಗಳಿಗಾಗಿ ತುಂಬಾ ಉಪಕಾರ. ನನ್ನ ತಾಯಿ ನನ್ನ ಹತ್ತಿರವಿರುವ ಅನಿಸಿಕೆಯನ್ನು ನೀವು ನನಗೆ ಕೊಡುತ್ತೀರಿ. ನನ್ನ ತಾಯಿಯನ್ನು ಮತ್ತು ಚಿಕ್ಕ ತಮ್ಮನನ್ನು ನಾನು ಯುದ್ಧದಲ್ಲಿ ಕಳೆಕೊಂಡೆ. ಯೆಹೋವನು ನಿಮ್ಮೆಲ್ಲರನ್ನು ಆಶೀರ್ವದಿಸುವಂತೆ ನಾನು ಬೇಡುತ್ತೇನೆ. ನನ್ನ ವಯಸ್ಸು 11 ವರ್ಷ.”
ಯಾರ ಪತ್ನಿಯು ಕುಲ ಮೂಲದ ಕಾರಣದಿಂದಾಗಿ ತಿಂಗಳುಗಳ ತನಕ ಅಡಗಬೇಕಾಗಿತ್ತೋ ಆ ಆರು ಮಂದಿ ಕುಟುಂಬ ಸದಸ್ಯರಿರುವ ಒಬ್ಬ ಸಹೋದರನೂ ತನಗೆ ದೊರೆತ ಸಹಾಯಕ್ಕಾಗಿ ಕೃತಜ್ಞನಾಗಿ ಬರೆದದ್ದು: “ನಾವು ಜನರ ಮನೆಗಳಿಗೆ ಕನ್ನಾಹಾಕಿರುವುದಿಲ್ಲ ಮತ್ತು ಅವರ ಸೊತ್ತುಗಳನ್ನು ಸೂರೆಮಾಡಿ ಮಾರಿರುವುದೂ ಇಲ್ಲ, ಆದರೂ, ನಮ್ಮ ನೆರೆಯವರಿಗಿಂತ ಹೆಚ್ಚಾಗಿ ನಮಗೆ ದಿನದಿನವೂ ತಿನ್ನಲು ಏನಾದರೂ ಇದೆ ಯಾಕಂದರೆ ನಮಗಿರುವ ಕೊಂಚವನ್ನು ವಿವೇಕದಿಂದ ಬಳಸುವುದು ಹೇಗೆಂದು ನಮಗೆ ತಿಳಿದದೆ. ಇದನ್ನು ನಾವು ಕಲಿತಿರುವುದು ಯೆಹೋವನಿಂದ.”
ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾಟ್ ಡಿವೊಯಿರಿಗೆ ಪಲಾಯನಗೈದಿದ್ದ ಒಬ್ಬ ಸಹೋದರನ ಭಾವವು ಸಹಾ ಅತಿ ಭಾವೋತ್ಪಾದಕ. ಅವನು ಒಂದು ಅತ್ಯುತ್ತಮ ಮನೆಯನ್ನು ಬಿಟ್ಟು ಓಡಿಬಂದಿದ್ದನು, ಫಲಿತಾಂಶವಾಗಿ ಅದನ್ನು ಪೂರಾ ಸುಟ್ಟುಹಾಕಲಾಯಿತು. ಆದರೂ ಅವನು ಅತ್ಯಂತ ನೊಂದದ್ದು ಮನೆಯ ನಷ್ಟಕ್ಕಾಗಿ ಅಲ್ಲ, ಅವನ ದೇವಪ್ರಭುತ್ವ ಲೈಬ್ರೆರಿಯ ನಷ್ಟಕ್ಕಾಗಿ!
ಕಲಿತ ಮೂಲ್ಯ ಪಾಠಗಳು
ಮರುಕಳಿಸಿ ನೋಡುವಲ್ಲಿ, ಯೆಹೋವನು ನಮಗೆ ಅನೇಕ ಮೂಲ್ಯ ಪಾಠಗಳನ್ನು ಕಲಿಸಿದನೆಂಬದನ್ನು ನಾನು ಗಣ್ಯಮಾಡಬಲ್ಲೆ. ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡು ಪಾರಾದ ಹಾಗೂ ಸಮಗ್ರತೆಯನ್ನು ಕಾಪಾಡುತ್ತಾ ಮೃತರಾದ ಅನೇಕರನ್ನು ವೈಯಕ್ತಿಕವಾಗಿ ತಿಳಿದ ಮೂಲಕ, ಅಪೊಸ್ತಲ ಪೌಲನಂಥ ಮನೋಭಾವವನ್ನು ಇಡುವ ಮಹತ್ವವನ್ನು ನಾನು ಗಣ್ಯ ಮಾಡಲು ಕಲಿತೆನು, ಅವನು ಬರೆದದ್ದು: “ನಾವು ಬದುಕಿದರೆ ಯೆಹೋವನಿಗಾಗಿ ಬದುಕುತ್ತೇವೆ; ಸತ್ತರೆ ಯೆಹೋವನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಯೆಹೋವನವರೇ.”—ರೋಮಾಪುರ 14:8.
ಇನ್ನೊಬ್ಬ ದೀರ್ಘಕಾಲದ ಮಿಶನೆರಿ ಗಮನಿಸಿದ್ದು: “ಇವೆಲ್ಲವುಗಳ ಮೂಲಕ, ಯೆಹೋವನು ಒಬ್ಬ ಅಸದೃಶ ಸಹಾಯಕನೆಂಬದನ್ನು ನಾವು ಕಲಿತೆವು. ಪೌಲನು ಹೇಳಿದ ಪ್ರಕಾರ: ‘ಮರಣವಾಗುತ್ತದೆಂಬ ನಿಶ್ಚಯವು ನಮ್ಮೊಳಗೆ ಉಂಟಾಯಿತು. ನಾವು ನಮ್ಮೊಳಗೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡಬೇಕೆಂದು ಹೀಗಾಯಿತು.’” (2 ಕೊರಿಂಥ 1:9; ಕೀರ್ತನೆ 30:10) ಅವನು ಕೂಡಿಸಿದ್ದು: “ಯೆಹೋವನ ಜನರು ನಿಶ್ಚಯವಾಗಿ ಯೇಸು ಎತ್ತಿಹೇಳಿದ ಆತ್ಮ-ತ್ಯಾಗದ ಪ್ರೀತಿಯನ್ನು ಧರಿಸಿರುವ ಒಂದು ಸಹೋದರತ್ವವಾಗಿದ್ದಾರೆ ಎಂಬದನ್ನು ಆ ಯುದ್ಧವು ಮನವರಿಕೆ ಮಾಡಿದೆ.”—ಯೋಹಾನ 13:35.
ಅಕ್ಟೋಬರ 1990 ರಲ್ಲಿ ಯುದ್ಧವು ನಡಿಯುತ್ತಿದ್ದಾಗ ದೇಶವನ್ನು ಬಿಟ್ಟುಹೋಗಲೇ ಬೇಕಾದ ಕೆಲವು ಮಿಶನೆರಿಗಳಾದ ನಮಗೆ ಒಬ್ಬಾಕೆ ಲೈಬೀರಿಯನ್ ಸಹೋದರಿಯು ಬರೆದ ಪತ್ರವು ನಮ್ಮ ಕ್ರಿಸ್ತೀಯ ಸಹೋದರತ್ವದ ಬಲವನ್ನು ಚೆನ್ನಾಗಿ ಚಿತ್ರಿಸುತ್ತದೆ: “ನೀವೆಲ್ಲರೂ ಲೈಬೀರಿಯಕ್ಕೆ ಪುನಃ ಬೇಗನೇ ಹಿಂದೆ ಬರಬೇಕೆಂದು ಮತ್ತು ನಮ್ಮ ಒಂದು ಸಮ್ಮೇಳನ ನಡೆಯಬೇಕೆಂದು ನನ್ನ ಪ್ರಾರ್ಥನೆಯಾಗಿದೆ,” ಎಂದು ಬರೆದಳಾಕೆ. “ಓ, ನಾನು ಆ ದಿನಕ್ಕಾಗಿ ಅದೆಷ್ಟು ಕಾಯುತ್ತಿರುವೆನು. ಅದರ ಆಲೋಚನೆಯೇ ನನ್ನನ್ನು ಹರ್ಷಗೊಳಿಸುತ್ತದೆ.”
ಹೌದು, ಲೈಬೀರಿಯದಲ್ಲಿ ಕ್ರೈಸ್ತ ಚಟುವಟಿಕೆಯು ಅದರ ಸಾಮಾನ್ಯ ಸ್ಥಿತಿಗೆ ಪೂರ್ಣವಾಗಿ ಪುನಃಸ್ಥಾಪಿಸಲ್ಪಡುವುದನ್ನು ಕಾಣಲು ಮುನ್ನೋಡುವುದು ಆಶ್ಚರ್ಯಕರವು. ನಮ್ಮ ಸಹೋದರಿ ಹೇಳಿದ್ದು ಸತ್ಯ: ಮಿಶನೆರಿಗಳ ಮತ್ತು ಇತರ ನಿರಾಶ್ರಿತರ ಹಿಂತಿರುಗಿ ಬರುವಿಕೆಯ ನಂತರ ಮರ್ನೊವಿಯದ ಮೊದಲನೆ ಸಮ್ಮೇಲನವು ಹರ್ಷಕರವಾಗಿರಬಲ್ಲದು. ಆ ಕುರಿತು ಯಾವ ಸಂದೇಹವೂ ಇಲ್ಲ! (w92 1/1)
[Map on page 27]
(For fully formatted text, see publication.)
ಲೈಬೀರಿಯ
ಮರ್ನೊವಿಯ
ಕಕಾಟ
ಬಾಂಗ
ಗಾಂಟ
ಸಿಯರ ಲಿಯೋನ್
ಗಿನಿಯ
ಕಾಟ್ ಡಿವೊಯಿರ್
ಅಟ್ಲಾಂಟಿಕ್ ಸಾಗರ
[ಪುಟ 28 ರಲ್ಲಿರುವ ಚಿತ್ರ]
ಯುದ್ಧದ ಸಮಯದಲ್ಲಿ ಸ್ಥಳತಪ್ಪಿದ ಸಾಕ್ಷಿಗಳ ಮಕ್ಕಳು ಬ್ರಾಂಚ್ ಆಫೀಸಿನಲ್ಲಿ
[ಪುಟ 31 ರಲ್ಲಿರುವ ಚಿತ್ರ]
ಲೈಬೀರಿಯನ್ ನಿರಾಶ್ರಿತರು ಸಾಕ್ಷಿಗಳಿಂದ ದಾನಮಾಡಲ್ಪಟ್ಟ ಬಟ್ಟೆಗೆಳನ್ನು ಆಯ್ದು ತೆಗೆಯುವುದು ಕಾಟ್ ಡಿವೊಯಿರ್ನಲ್ಲಿ