ಯೆಹೋವನಿಗೆ ಸಮೀಪವಾಗಿ ಉಳಿಯಿರಿ
“ಪ್ರಾರ್ಥನೆಯಲ್ಲಿ ನಿರತರಾಗಿರ್ರಿ.”—ರೋಮಾಪುರ 12:12, NW.
1. ಪ್ರಾರ್ಥನೆಯ ಕುರಿತು ಯೆಹೋವನ ಚಿತ್ತವೇನು, ಮತ್ತು ಪ್ರಾರ್ಥಿಸುವ ಕುರಿತು ಅಪೊಸ್ತಲ ಪೌಲನು ಯಾವ ಪ್ರೋತ್ಸಾಹನೆಯನ್ನು ಕೊಟ್ಟನು?
ಯೆಹೋವನು ತನ್ನ ನಂಬಿಗಸ್ತ ಜನರಿಗೆಲ್ಲಾ “ನಿರೀಕ್ಷೆಯನ್ನು ಕೊಡುವಾತನಾದ ದೇವರು.” “ಪ್ರಾರ್ಥನೆಯನ್ನು ಕೇಳುವವ”ನಾದ ಆತನು, ಅವರ ಮುಂದೆ ತಾನಿಟ್ಟಿರುವ ಹರ್ಷಕರ ನಿರೀಕ್ಷೆಯನ್ನು ಅವರು ಗಳಿಸುವಂತೆ ಸಹಾಯಕ್ಕಾಗಿ ಮಾಡುವ ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. (ರೋಮಾಪುರ 15:13; ಕೀರ್ತನೆ 65:2) ಮತ್ತು ಆತನ ವಾಕ್ಯವಾದ ಬೈಬಲಿನ ಮೂಲಕ ಆತನು ತನ್ನ ಸೇವಕರನ್ನೆಲ್ಲಾ ಅವರು ಬಯಸುವ ಯಾವುದೆ ಸಮಯದಲ್ಲಿ ಆತನನ್ನು ಗೋಚರಿಸುವಂತೆ ಪ್ರೋತ್ಸಾಹಿಸುತ್ತಾನೆ. ಅವರ ಅಂತರ್ಯದಾಳದ ಚಿಂತೆಗಳನ್ನು ಸ್ವೀಕರಿಸ ಬಯಸುತ್ತಾ ಆತನು ಯಾವಾಗಲೂ ಅಲ್ಲಿದ್ದಾನೆ. ವಾಸ್ತವದಲ್ಲಿ, “ಪ್ರಾರ್ಥನೆಯಲ್ಲಿ ನಿರತರಾಗಿರಿ” ಮತ್ತು “ಎಡೆಬಿಡದೆ ಪ್ರಾರ್ಥನೆ” ಮಾಡುವಂತೆ ಆತನು ಅವರನ್ನು ಉತ್ತೇಜಿಸುತ್ತಾನೆ.a (ರೋಮಾಪುರ 12:12; 1 ಥೆಸಲೊನೀಕ 5:17) ಕ್ರೈಸ್ತರೆಲ್ಲರೂ ಸದಾ ಪ್ರಾರ್ಥನೆಯಲ್ಲಿ ಆತನಿಗೆ ಕರೆಕೊಡುವಂತೆ, ತಮ್ಮ ಹೃದಯದಾಳಗಳನ್ನು ಆತನಿಗೆ ತೆರೆಯುವಂತೆ, ಮತ್ತು ಅದನ್ನು ಆತನ ಪ್ರಿಯ ಕುಮಾರನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಮಾಡುವುದೆ ಯೆಹೋವನ ಚಿತ್ತವಾಗಿದೆ.—ಯೋಹಾನ 14:6, 13, 14.
2, 3. (ಎ) “ಪ್ರಾರ್ಥನೆಯಲ್ಲಿ ನಿರತರಾಗಿರಿ” ಎಂದು ದೇವರು ನಮಗೆ ಬೋಧಿಸಿರುವದೇಕೆ? (ಬಿ) ನಾವು ಪ್ರಾರ್ಥಿಸುವಂತೆ ದೇವರು ಬಯಸುತ್ತಾನೆಂಬ ಯಾವ ಆಶ್ವಾಸನೆ ನಮಗಿದೆ?
2 ದೇವರು ಈ ಬುದ್ಧಿವಾದವನ್ನು ನಮಗೆ ಕೊಡುವದು ಏಕೆ? ಏಕಂದರೆ ಜೀವಿತದ ಒತ್ತಡಗಳು ಮತ್ತು ಜವಾಬ್ದಾರಿಕೆಗಳು ನಮ್ಮನ್ನು ಎಷ್ಟು ಹೆಚ್ಚಾಗಿ ದಬ್ಬಬಲ್ಲವೆಂದರೆ ನಾವು ಪ್ರಾರ್ಥನೆ ಮಾಡುವುದನ್ನು ಸಹಾ ಮರೆತುಬಿಡ ಸಾಧ್ಯವಿದೆ. ಅಥವಾ ನಮ್ಮ ಸಮಸ್ಯೆಗಳು ನಮ್ಮನ್ನು ಜಜ್ಜಿ ಬಿಡಲೂಬಹುದು ಮತ್ತು ನಿರೀಕ್ಷೆಯಲ್ಲಿ ಉಲ್ಲಾಸಪಡುವುದನ್ನು ಮತ್ತು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿಬಿಡಲೂಬಹುದು. ಈ ವಿಷಯಗಳ ನೋಟದಲ್ಲಿ, ಪ್ರಾರ್ಥನೆ ಮಾಡಲು ಪ್ರೋತ್ಸಾಹಿಸುವ ಮತ್ತು ಎಲ್ಲಾ ಸಹಾಯ ಮತ್ತು ಆದರಣೆಯ ಮೂಲನಾದ ನಮ್ಮ ದೇವರಾದ ಯೆಹೋವನ ಅತಿ ಸಮೀಪಕ್ಕೆ ಬರುವ ಮರುಜ್ಞಾಪಕಗಳು ನಮಗೆ ಬೇಕು.
3 ಶಿಷ್ಯ ಯಾಕೋಬನು ಬರೆದದ್ದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಹೌದು, ನಮ್ಮ ಅಪೂರ್ಣ ಪರಿಸ್ಥಿತಿಯ ನಡುವೆಯೂ, ನಮ್ಮ ವಿಜ್ಞಾಪನೆಗಳನ್ನು ಕೇಳಲು ದೇವರು ತೀರಾ ಮಹೋನ್ನತನೂ ಅಲ್ಲ, ದೂರವಾದವನೂ ಅಲ್ಲ. (ಅಪೊಸ್ತಲರ ಕೃತ್ಯಗಳು 17:27) ಅದಲ್ಲದೆ, ಅವನು ಯಾವ ಗಮನಕೊಡದವನೂ ಪರಿಗಣನೆ ಇಲ್ಲದವನೂ ಅಲ್ಲ. ಕೀರ್ತನೆಗಾರನು ಹೇಳುವದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ. ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.”—ಕೀರ್ತನೆ 34:15; 1 ಪೇತ್ರ 3:12.
4. ಪ್ರಾರ್ಥನೆಗೆ ಯೆಹೋವನ ಗಮನ ಕೊಡುವಿಕೆಯನ್ನು ಹೇಗೆ ಚಿತ್ರಿಸಬಹುದು?
4 ಯೆಹೋವನು ಪ್ರಾರ್ಥನೆಯನ್ನು ಆಮಂತ್ರಿಸುತ್ತಾನೆ. ಹಲವಾರು ಜನರು ಒಟ್ಟುಗೂಡಿ ಮಾತಾಡುವ ಒಂದು ಕೂಟಕ್ಕೆ ನಾವಿದನ್ನು ಹೋಲಿಸಬಹುದು. ನೀವಲ್ಲಿ ಇದ್ದೀರಿ, ಬೇರೆಯವರು ಮಾತಾಡುವುದಕ್ಕೆ ಕಿವಿಗೊಡುತ್ತೀರಿ. ನಿಮ್ಮ ಪಾತ್ರವು ಒಬ್ಬ ಪ್ರೇಕ್ಷಕನದ್ದು. ಆಗ ಒಬ್ಬನು ನಿಮ್ಮ ಕಡೆಗೆ ತಿರುಗಿ, ನಿಮ್ಮ ಹೆಸರು ಹೇಳಿ, ನಿಮ್ಮನ್ನುದ್ದೇಶಿಸಿ ಮಾತನಾಡುತ್ತಾನೆ. ಇದು ನಿಮ್ಮ ಗಮನವನ್ನು ಒಂದು ವಿಶೇಷ ರೀತಿಯಲ್ಲಿ ಸೆಳೆಯುತ್ತದೆ. ಅದೇ ರೀತಿಯಲ್ಲಿ, ದೇವರು ಯಾವಾಗಲೂ ತನ್ನ ಜನರೆಡೆಗೆ ಅವರೆಲ್ಲೆ ಇರಲಿ, ಲಕ್ಷ್ಯಕೊಡುತ್ತಾನೆ. (2 ಪೂರ್ವಕಾಲವೃತ್ತಾಂತ 16:9; ಜ್ಞಾನೋಕ್ತಿ 15:3) ಹೀಗೆ ಸಂರಕ್ಷೆಯಿಂದ ಮತ್ತು ಆಸಕ್ತಿಯಿಂದ ಅವಲೋಕಿಸಿಯೊ ಎಂಬಂತೆ ನಮ್ಮ ಮಾತುಗಳನ್ನು ಆತನು ಕೇಳುತ್ತಾನೆ. ಪ್ರಾರ್ಥನೆಯಲ್ಲಿ ನಾವಾತನ ಹೆಸರನ್ನು ಕರೆಯುವಾಗ, ಆತನ ಗಮನವು ಸೆಳೆಯಲ್ಪಡುತ್ತದೆ, ಮತ್ತು ಒಂದು ಸ್ಪಷ್ಟವಾಗಿದ ರೀತಿಯಲ್ಲಿ ನಮ್ಮ ಮೇಲೆ ಆತನು ಕೇಂದ್ರೀಕರಿಸುತ್ತಾನೆ. ಯೆಹೋವನು ತನ್ನ ಶಕಿಯ್ತಿಂದ ಮನುಷ್ಯನ ಹೃದಯ ಮತ್ತು ಮನದಾಳದ ಮರೆಯಲ್ಲಿ ಮಾಡಲ್ಪಟ್ಟ ನಿಶಬ್ದ ವಿಜ್ಞಾಪನೆಯನ್ನೂ ತಿಳಿಯಶಕ್ತನು. ಯಾರು ಆತನ ನಾಮವನ್ನು ಪ್ರಾಮಾಣಿಕತೆಯಿಂದ ಕರೆಯುತ್ತಾರೊ ಮತ್ತು ಆತನಿಗೆ ಸಮೀಪವಾಗಿ ಉಳಿಯಲು ಹಾರೈಸುತ್ತಾರೊ ಅವರ ಸಮೀಪಕ್ಕೆ ತಾನು ಬರುವೆನೆಂದು ದೇವರು ಆಶ್ವಾಸನೆ ಕೊಟ್ಟಿರುತ್ತಾನೆ.—ಕೀರ್ತನೆ 145:18.
ದೇವರ ಉದ್ದೇಶಕ್ಕೆ ಅನುಸಾರವಾಗಿ ಪ್ರತಿಕ್ರಿಯೆ
5. (ಎ) “ಪ್ರಾರ್ಥನೆಯಲ್ಲಿ ನಿರತರಾಗಿರಿ” ಎಂಬ ಸೂಚನೆಯು ನಮ್ಮ ಪ್ರಾರ್ಥನೆಗಳ ಕುರಿತು ಏನನ್ನು ಸೂಚಿಸುತ್ತದೆ? (ಬಿ) ದೇವರು ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆ?
5 ಪ್ರಾರ್ಥನೆಯಲ್ಲಿ ನಿರತರಾಗಿರಿ ಎಂಬ ಸೂಚನೆಯು, ಕೆಲವೊಮ್ಮೆ ಯೆಹೋವನು ಆತನ ಪ್ರತಿಕ್ರಿಯೆಯು ತೋರಿಬರುವ ಮುಂಚೆ ನಮ್ಮನ್ನು ಒಂದು ವಿಷಯದ ಮೇಲೆ ಸ್ವಲ್ಪ ಸಮಯ ಪ್ರಾರ್ಥನೆ ಮಾಡುತ್ತಾ ಇರುವಂತೆ ಬಿಟ್ಟುಬಿಡುತ್ತಾನೆಂಬದನ್ನು ಸೂಚಿಸುತ್ತದೆ. ಅತಿ ತೀವ್ರವಾಗಿ ಬೇಕಾದ ಆದರೆ ತೀರಾ ವಿಳಂಬವಾಗಿ ತೋರುವ ಆತನ ಅನುಗ್ರಹ ಮತ್ತು ಕೃಪೆಗಾಗಿ ನಾವು ವಿಜ್ಞಾಪಿಸುತ್ತಾ ಕೊನೆಗೆ ಬೇಸತ್ತು ಹೋಗುವ ಪ್ರವೃತ್ತಿಯೂ ನಮ್ಮಲ್ಲಿ ಉಂಟಾಗಬಹುದು. ಆದ್ದರಿಂದ ಅಂಥ ಯಾವುದೆ ಓಲಿಕೆಗೆ ಬಲಿಯಾಗದೆ ಪ್ರಾರ್ಥಿಸುತ್ತಾ ಇರುವಂತೆ ಯೆಹೋವನು ನಮ್ಮನ್ನು ಕೇಳಿಕೊಳ್ಳುತ್ತಾನೆ. ಆತನು ನಮ್ಮ ಪ್ರಾರ್ಥನೆಯನ್ನು ಗೌರವಿಸುತ್ತಾನೆ ಮತ್ತು ನಾವು ವಿವೇಚಿಸಿರಬಹುದಾದವುಗಳನ್ನು ಕೇವಲವಲ್ಲದೆ, ನಮ್ಮ ನಿಜ ಅಗತ್ಯತೆಗಳನ್ನೂ ಆತನು ಪೂರೈಸುತ್ತಾನೆ ಎಂಬ ಆತ್ಮವಿಶ್ವಾಸದಿಂದ ನಾವು ನಮ್ಮ ಚಿಂತೆಗಳ ಕುರಿತು ಆತನಿಗೆ ವಿಜ್ಞಾಪನೆ ಮಾಡುತ್ತಾ ಇರಬೇಕಾಗಿದೆ. ಯೆಹೋವ ದೇವರು ನಮ್ಮ ಮೊರೆಗಳನ್ನು ತನ್ನ ಉದ್ದೇಶಕ್ಕನುಸಾರ ಸಮತೆಯಲ್ಲಿಡುತ್ತಾನೆ. ದೃಷ್ಟಾಂತಕ್ಕಾಗಿ, ನಮ್ಮ ವಿನಂತಿಗಳಿಂದಾಗಿ ಬೇರೆಯವರ ಮೇಲೆ ಪರಿಣಾಮ ಬೀರಲೂಬಹುದು. ನಾವೀ ವಿಷಯವನ್ನು ಯಾರ ಮಗನು ಒಂದು ಸೈಕಲಿಗಾಗಿ ಕೇಳುತ್ತಾನೊ ಆ ಒಬ್ಬ ತಂದೆಗೆ ಹೋಲಿಸಬಹುದು. ಆ ಮಗನಿಗೆ ಒಂದು ಸೈಕಲ್ ಖರೀದಿಸಿದರೆ ತನ್ನ ಇನ್ನೊಬ್ಬ ಮಗನೂ ಅದಕ್ಕಾಗಿ ಕೇಳುವನು ಎಂದು ತಂದೆಗೆ ಗೊತ್ತು. ಒಬ್ಬ ಮಗನು ಸೈಕಲಿಗೆ ತೀರಾ ಚಿಕ್ಕವನಾಗಿರಬಹುದಾದರಿಂದ, ಯಾವುದೆ ಸೈಕಲನ್ನು ಆ ನಿರ್ದಿಷ್ಟ ಸಮಯದಲ್ಲಿ ಖರೀದಿಸದಿರುವಂತೆ ತಂದೆಯು ನಿರ್ಣಯಿಸಬಹುದು. ಅದೇ ರೀತಿಯಲ್ಲಿ, ತನ್ನ ಉದ್ದೇಶದ ಬೆಳಕಿನಲ್ಲಿ ಮತ್ತು ವಿಷಯಗಳ ಸಮಯದ ನೋಟದಲ್ಲಿ, ನಮ್ಮ ಸ್ವರ್ಗೀಯ ತಂದೆಯು ನಮಗೆ ಮತ್ತು ಇತರರಿಗೆ ನಿಜವಾಗಿಯೂ ಯಾವುದು ಅತ್ಯುತ್ತಮವೆಂಬದನ್ನು ನಿರ್ಣಯಿಸುತ್ತಾನೆ.
6. ಪ್ರಾರ್ಥನೆಯ ಸಂಬಂಧದಲ್ಲಿ ಯೇಸು ಯಾವ ಸಾಮ್ಯವನ್ನು ಕೊಟ್ಟನು, ಮತ್ತು ಎಡೆಬಿಡದೆ ಪ್ರಾರ್ಥನೆ ಮಾಡುವಿಕೆ ಏನನ್ನು ತೋರಿಸುತ್ತದೆ?
6 ತನ್ನ ಶಿಷ್ಯರು “ಯಾವಾಗಲೂ ಬಿಡದೆ ಪಾರ್ಥನೆ ಮಾಡುವ” ಅಗತ್ಯದ ಕುರಿತು ಯೇಸು ಕೊಟ್ಟ ಒಂದು ಸಾಮ್ಯವು ಗಮನಾರ್ಹವಾಗಿದೆ. ನ್ಯಾಯವನ್ನು ಪಡೆಯಲಾರದ ಒಬ್ಬಾಕೆ ವಿಧವೆ ಒಬ್ಬ ಮಾನವ ನ್ಯಾಯಾಧಿಪತಿಗೆ, ಕೊನೆಗೆ ನ್ಯಾಯವು ತನಗೆ ದೊರೆಯುವ ತನಕ ವಿನಂತಿಯನ್ನು ಎಡೆಬಿಡದೆ ಮಾಡುತ್ತಾ ಹೋದಳು. ಯೇಸು ಕೂಡಿಸಿದ್ದು: “ಹೀಗಿರಲಾಗಿ, ನಿಶ್ಚಯವಾಗಿ, ತಾನಾದುಕೊಂಡವರಿಗೆ ಆತನು ನ್ಯಾಯವನ್ನು ಕೊಡದೆ ಇರುವನೆ?” (ಲೂಕ 18:1-7, NW) ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತರಾಗಿರುವುದು ನಮ್ಮ ನಂಬಿಕೆಯನ್ನು ತೋರಿಸುತ್ತದೆ, ಯೆಹೋವನಲ್ಲಿ ನಮ್ಮ ಆತುಕೊಳ್ಳುವಿಕೆಯನ್ನು, ಆತನಿಗೆ ಸಮೀಪವಾಗಿ ಉಳಿಯುವ ಮತ್ತು ಫಲಿತಾಂಶವನ್ನು ಆತನ ಹಸ್ತದಲ್ಲಿ ಬಿಟ್ಟು ನಮ್ಮ ವಿಜ್ಞಾಪನೆಗಳನ್ನು ಮಾಡುವ ಸಿದ್ಧಮನಸ್ಸನ್ನು ತೋರಿಸುತ್ತದೆ.—ಇಬ್ರಿಯ 11:6.
ಯೆಹೋವನಿಗೆ ಸಮೀಪವಾಗಿ ಉಳಿದವರ ಮಾದರಿಗಳು
7. ಯೆಹೋವನಿಗೆ ಸಮೀಪವಾಗಿ ಉಳಿಯುವುದರಲ್ಲಿ ಹೇಬೆಲನ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು?
7 ದೇವರ ಸೇವಕರಿಂದ ನುಡಿಯಲ್ಪಟ್ಟ ಪ್ರಾರ್ಥನಾ ದಾಖಲೆಗಳಿಂದ ಬೈಬಲ್ ತುಂಬಿಹೋಗಿದೆ. “ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಯೆಹೋವನಿಗೆ ಸಮೀಪವಾಗಿ ಉಳಿದ ಕೆಲವರ ಮಾದರಿಗಳನ್ನು ನಾವು ಚರ್ಚಿಸುವ ಮೂಲಕ ನಮ್ಮ ನಿರೀಕ್ಷೆಯು ಬಲಗೊಳ್ಳುವುದು. ಹೇಬೆಲನು ದೇವರಿಗೆ ಒಂದು ಸ್ವೀಕರಣೀಯವಾದ ಯಜ್ಞವನ್ನು ನೀಡಿದನು, ಯಾವ ಪ್ರಾರ್ಥನೆಯಾದರೂ ಅಲ್ಲಿ ವರದಿಯಾಗಿರದಿದ್ದರೂ, ತನ್ನ ಅರ್ಪಣೆಯು ಸ್ವೀಕರಿಸಲ್ಪಡೋಣವಾಗಲಿ ಎಂದವನು ಯೆಹೋವನಿಗೆ ಪ್ರಾರ್ಥನೆಯಲ್ಲಿ ಅಪ್ಪೀಲು ಮಾಡಿರಬೇಕೆಂಬುದು ನಿಸ್ಸಂದೇಹ. ಇಬ್ರಿಯ 11:4 ಹೇಳುವುದು: “ನಂಬಿಕೆಯಿಂದಲೆ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು, ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು.” ಆದಿಕಾಂಡ 3:15ರ ದೇವರ ವಾಗ್ದಾನವು ಹೇಬೆಲನಿಗೆ ತಿಳಿದಿತ್ತು, ಅದರೆ ನಮಗಿಂದು ಏನು ತಿಳಿದಿದೆಯೆ ಅದಕ್ಕೆ ಹೋಲಿಕೆಯಲ್ಲಿ, ಅವನಿಗೆ ತಿಳಿದಿದ್ದದ್ದು ಕೊಂಚವೆ. ಆದರೂ ಹೇಬೆಲನು ತನ್ನಲ್ಲಿದ್ದ ಆ ಜ್ಞಾನದ ಆಧಾರದಲ್ಲಿ ಕ್ರಿಯೆಗೈದನು. ಅದೇ ರೀತಿ ಇಂದು ದೇವರ ಸತ್ಯದಲ್ಲಿ ಹೊಸ್ತಾಸಕರಾದ ಕೆಲವರಿಗೆ ಇನ್ನೂ ಹೆಚ್ಚು ಜ್ಞಾನವಿರುವುದಿಲ್ಲ. ಆದರೂ ಅವರು ಪ್ರಾರ್ಥಿಸುತ್ತಾರೆ ಮತ್ತು ತಮಗಿದ್ದ ಜ್ಞಾನದ ಪೂರಾ ಉಪಯೋಗವನ್ನು, ಹೇಬೆಲನಂತೆ ಮಾಡುತ್ತಾರೆ. ಹೌದು, ಅವರು ನಂಬಿಕೆಯಲ್ಲಿ ಕ್ರಿಯೆಗೈಯುತ್ತಾರೆ.
8. ಅಬ್ರಹಾಮನು ದೇವರಿಗೆ ಸಮೀಪವಾಗಿ ಉಳಿದನೆಂಬ ನಿಶ್ಚಯತೆ ನಮಗಿರಬಲ್ಲದೇಕೆ, ಮತ್ತು ನಾವು ಯಾವ ಪ್ರಶ್ನೆಯನ್ನು ನಮಗೆ ಕೇಳಿಕೊಳ್ಳಬೇಕು?
8 ದೇವರ ಇನ್ನೊಬ್ಬ ನಂಬಿಗಸ್ತ ಸೇವಕನು, “ನಂಬುವವರೆಲ್ಲರಿಗೂ ಮೂಲತಂದೆಯಾದ” ಅಬ್ರಹಾಮನು. (ರೋಮಾಪುರ 4:11) ಅಬ್ರಹಾಮನಂತೆ, ಎಂದಿಗಿಂತಲೂ ಅಧಿಕವಾಗಿ ಇಂದು, ನಮಗೆ ಬಲವಾದ ನಂಬಿಕೆ ಬೇಕು, ಮತ್ತು ನಂಬಿಕೆಯಲ್ಲಿ ಪ್ರಾರ್ಥಿಸುವ ಅಗತ್ಯ ನಮಗಿದೆ. ಅವನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ “ಆತನ ಹೆಸರನ್ನು ಹೇಳಿಕೊಂಡು ಆರಾಧಿಸಿದನು” ಎಂದು ಆದಿಕಾಂಡ 12:8 ಹೇಳುತ್ತದೆ. ಅಬ್ರಹಾಮನಿಗೆ ದೇವರ ಹೆಸರು ತಿಳಿದಿತ್ತು ಮತ್ತು ಅವನದನ್ನು ಪ್ರಾರ್ಥನೆಯಲ್ಲಿ ಉಪಯೋಗಿಸಿದನು. ಪದೇ ಪದೇ ಅವನು “ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು” ಪ್ರಾಮಾಣಿಕತೆಯಿಂದ ಪಟ್ಟುಹಿಡಿದು ಪ್ರಾರ್ಥಿಸಿದನು. (ಆದಿಕಾಂಡ 13:4; 21:33) ನಂಬಿಕೆಯಿಂದ ದೇವರಿಗೆ ಪ್ರಾರ್ಥಿಸುವುದಕ್ಕೆ ಅಬ್ರಹಾಮನು ಪ್ರಖ್ಯಾತನೆನಿಸಿದನು. (ಇಬ್ರಿಯ 11:17-19) ರಾಜ್ಯ ನಿರೀಕ್ಷೆಯಲ್ಲಿ ಬಹಳವಾಗಿ ಉಲ್ಲಾಸಿಸುತ್ತಾ ಮುಂದರಿಯಲು ಅವನಿಗೆ ಪ್ರಾರ್ಥನೆಯು ಸಹಾಯಮಾಡಿತು. ಪ್ರಾರ್ಥನೆಯಲ್ಲಿ ನಿರತರಾಗಿರುವುದರಲ್ಲಿ ನಾವು ಅಬ್ರಹಾಮನ ಮಾದರಿಯನ್ನು ಅನುಸರಿಸುತ್ತೇವೊ?
9. (ಎ) ದಾವೀದನ ಪ್ರಾರ್ಥನೆಗಳು ಇಂದು ದೇವಜನರಿಗೆ ಅಷ್ಟು ಪ್ರಯೋಜನದಾಯಕವೇಕೆ? (ಬಿ) ಯೆಹೋವನಿಗೆ ಸಮೀಪವಾಗಿ ಉಳಿಯಲು ದಾವೀದನಂತೆ ನಾವು ಪ್ರಾರ್ಥನೆ ಮಾಡುವುದರಿಂದ ಏನು ಫಲಿಸಬಹುದು?
9 ಎಡೆಬಿಡದೆ ಪ್ರಾರ್ಥನೆಯನ್ನು ಮಾಡುವ ವಿಷಯದಲ್ಲಿ ದಾವೀದನು ಖ್ಯಾತನಾಗಿದ್ದನು ಮತ್ತು ಪ್ರಾರ್ಥನೆಗಳು ಹೇಗಿರಬೇಕೆಂಬದನ್ನು ಅವನ ಕೀರ್ತನೆಗಳು ಚೆನ್ನಾಗಿ ದೃಷ್ಟಾಂತಿಸುತ್ತವೆ. ಉದಾಹರಣೆಗೆ, ದೇವರ ಸೇವಕರು ಯೋಗ್ಯವಾಗಿ ರಕ್ಷಣೆ ಯಾ ಬಿಡುಗಡೆಗಾಗಿ (3:7, 8; 60:5), ಮಾರ್ಗದರ್ಶನೆಗಾಗಿ (25:4, 5), ಭದ್ರತೆಗಾಗಿ (17:8), ಪಾಪಗಳ ಕ್ಷಮೆಗಾಗಿ (25:7, 11, 18), ಮತ್ತು ಶುದ್ಧ ಹೃದಯ (51:10) ಮುಂತಾದವುಗಳಿಗಾಗಿ ಪ್ರಾರ್ಥಿಸಬಹುದು. ದಾವೀದನು ಬಾಧೆಗೊಳಗಾದಾಗ, ಪ್ರಾರ್ಥನೆ ಮಾಡಿದ್ದು: “ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು.” (86:4) ತದ್ರೀತಿ, ನಾವು ನಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸುವಂತೆ ಯೆಹೋವನು ಬಯಸುವುದರಿಂದ, ನಾವೂ ಹೃದಯಾನಂದಕ್ಕಾಗಿ ಪ್ರಾರ್ಥನೆ ಮಾಡ ಸಾಧ್ಯವಿದೆ. ದಾವೀದನು ದೇವರಿಗೆ ಸಮೀಪವಾಗಿ ಉಳಿದು ಪ್ರಾರ್ಥನೆ ಮಾಡಿದ್ದು: “ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸಿರುವದು; ನಿನ್ನ ಬಲಗೈ ನನಗೆ ಆಧಾರವಾಗಿರುವುದು.” (63:8) ದಾವೀದನಂತೆ ನಾವೂ ದೇವರಿಗೆ ಸಮೀಪವಾಗಿ ಉಳಿಯುವೆವೊ? ಉಳಿದರೆ, ಆತನು ನಮಗೂ ಆಧಾರವನ್ನು ಕೊಡುವನು.
10. ಒಂದು ಬಿಂದುವಿನಲ್ಲಿ ಕೀರ್ತನೆಗಾರ ಆಸಾಫನಲ್ಲಿ ಯಾವ ತಪ್ಪು ಭಾವನೆಗಳು ಇದ್ದವು, ಆದರೆ ಅವನು ಏನನ್ನು ಮನಗಂಡನು?
10 ನಾವು ಯೆಹೋವನಿಗೆ ಸಮೀಪವಾಗಿ ಉಳಿಯಬೇಕಾದರೆ, ದುಷ್ಟರ ಬಗ್ಗೆ ಅವರ ನಿಶ್ಚಿಂತೆಯ ಮತ್ತು ಪ್ರಾಪಂಚಿಕ ಜೀವನಕ್ರಮಕ್ಕಾಗಿ ಅಸೂಯೆ ಪಡುವುದನ್ನು ವರ್ಜಿಸಬೇಕು. ಕೀರ್ತನೆಗಾರ ಆಸಾಫನು ಒಂದು ಸಮಯದಲ್ಲಿ ಯೆಹೋವನ ಸೇವೆಯಲ್ಲಿ ಯಾವ ಪ್ರಯೋಜನವೂ ಇಲ್ಲವೆಂದು ಭಾವಿಸಿದ್ದನು ಯಾಕಂದರೆ “ದುಷ್ಟರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ” ಇರುತ್ತಿದ್ದರು. ಆದರೂ ತನ್ನ ವಿವೇಚನೆಯು ತಪ್ಪೆಂದೂ ಮತ್ತು ದುಷ್ಟರು “ಅಪಾಯಕರ ಸ್ಥಳದಲ್ಲಿ” ಇದ್ದಾರೆಂದೂ ಅವನಿಗೆ ತಿಳಿದುಬಂತು. ಆದ್ದರಿಂದ ಯೆಹೋವನಿಗೆ ಸಮೀಪವಾಗಿರುವುದಕ್ಕಿಂತ ಹೆಚ್ಚಿನದ್ದು ಬೇರೇನೂ ಇಲ್ಲ ಎಂದವನು ಮನಗಂಡನು ಮತ್ತು ದೇವರಿಗೆ ಈ ರೀತಿಯಲ್ಲಿ ಅರಿಕೆ ಮಾಡಿಕೊಂಡನು: “ಆದರೂ ಸದಾ ನಿನ್ನ ಸನ್ನಿಧಿಯಲ್ಲೆ ಇದ್ದೇನೆ. ಇಗೋ, ನಿನ್ನನ್ನು ಬಿಟ್ಟವರು ನಾಶವಾಗುವರು. . . . ನನಗಾದರೊ ದೇವರ ಸಾನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡವನಾಗಿ ನಿನ್ನ ಮಹತ್ಕಾರ್ಯಗಳನ್ನು ಪ್ರಕಟಿಸುವೆನು.” (ಕೀರ್ತನೆ 73:12, 13, 18, 23, 27, 28) ನಿರೀಕ್ಷೆರಹಿತರಾದ ದುಷ್ಟರ ನಿರಾತಂಕ ಜೀವನಕ್ಕಾಗಿ ಉರಿಗೊಳ್ಳುವ ಬದಲಿಗೆ, ಯೆಹೋವನಿಗೆ ಸಮೀಪವಾಗಿ ಉಳಿಯುವುದರಲ್ಲಿ ನಾವು ಆಸಾಫನನ್ನು ಅನುಕರಿಸೋಣ.
11. ಯೆಹೋವನಿಗೆ ಸಮೀಪವಾಗಿ ಉಳಿಯುವುದಕ್ಕೆ ದಾನಿಯೇಲನೇಕೆ ಉತ್ತಮ ಮಾದರಿಯು, ಮತ್ತು ನಾವು ಅವನನ್ನು ಹೇಗೆ ಅನುಕರಿಸಬಹುದು?
11 ಪ್ರಾರ್ಥನೆಯ ಬಗ್ಗೆ ಹಾಕಲ್ಪಟ್ಟ ಅಧಿಕೃತ ನಿರ್ಬಂಧಗಳನ್ನು ದುರ್ಲಕ್ಷಿಸಿದ ಕಾರಣ ಸಿಂಹಗಳ ಗವಿಗೆ ಎಸೆಯಲ್ಪಡುವ ಅಪಾಯ ಅಲ್ಲಿದ್ದಾಗ್ಯೂ, ದಾನಿಯೇಲನು ದೃಢಚಿತ್ತದಿಂದ ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತನಾದನು. ಆದರೆ ಯೆಹೋವನು “ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯನ್ನು ಬಂಧಿಸಿ” ದಾನಿಯೇಲನನ್ನು ಕಾಪಾಡಿದನು. (ದಾನಿಯೇಲ 6:7-10, 22, 27) ಪ್ರಾರ್ಥನೆಯಲ್ಲಿ ನಿರತನಾಗಿದದ್ದರಿಂದ ದಾನಿಯೇಲನು ಬಹಳವಾಗಿ ಆಶೀರ್ವದಿಸಲ್ಪಟ್ಟನು. ನಾವು ಸಹಾ, ವಿಶೇಷವಾಗಿ ನಮ್ಮ ರಾಜ್ಯ ಸಾರುವಿಕೆಗೆ ವಿರೋಧವನ್ನು ಎದುರಿಸುವಾಗ, ಪ್ರಾರ್ಥನೆಯಲ್ಲಿ ನಿರತರಾಗಿ ಇರುತ್ತೇವೊ, ?
ಯೇಸು, ನಮ್ಮ ಮಾದರಿ
12. (ಎ) ತನ್ನ ಶುಶ್ರೂಷೆಯ ಆರಂಭದಲ್ಲಿ, ಪ್ರಾರ್ಥನೆಯ ಸಂಬಂಧದಲ್ಲಿ ಯಾವ ಮಾದರಿಯನ್ನು ಯೇಸು ಇಟ್ಟನು, ಮತ್ತು ಇದು ಕ್ರೈಸ್ತರಿಗೆ ಹೇಗೆ ಪ್ರಯೋಜನಕಾರಿಯಾಗಬಲ್ಲದು? (ಬಿ) ಯೇಸುವಿನ ಮಾದರಿ ಪ್ರಾರ್ಥನೆಯು ಪ್ರಾರ್ಥನೆಯ ಕುರಿತು ಏನನ್ನು ತಿಳಿಯಪಡಿಸುತ್ತದೆ?
12 ತನ್ನ ಭೂ ಸುವಾರ್ತಾ ಶುಶ್ರೂಷೆಯ ಆರಂಭದಿಂದಲೂ ಯೇಸು ಪ್ರಾರ್ಥನೆ ಮಾಡುತ್ತಾ ಇದ್ದದ್ದು ಅವಲೋಕಿಸಲ್ಪಟ್ಟಿದೆ. ದೀಕ್ಷಾಸ್ನಾನ ಪಡೆಯುತ್ತಿದ್ದಾಗ ಆತನ ಪ್ರಾರ್ಥನಾಪೂರ್ವಕ ಮನೋಭಾವವು ಆಧುನಿಕ ಸಮಯದಲ್ಲಿ ನೀರಿನ ದೀಕ್ಷಾಸ್ನಾನ ಪಡೆಯುವವರಿಗೆ ಒಂದು ಉತ್ತಮ ಮಾದರಿಯನ್ನು ಇಟ್ಟಿದೆ. (ಲೂಕ 3:21, 22) ನೀರಿನ ದೀಕ್ಷಾಸ್ನಾನದಿಂದ ಏನು ಸೂಚಿಸಲ್ಪಡುತ್ತದೊ ಅದನ್ನು ನಿರ್ವಹಿಸಲು ದೇವರ ಸಹಾಯಕ್ಕಾಗಿ ಒಬ್ಬನು ಪ್ರಾರ್ಥಿಸ ಸಾಧ್ಯವಿದೆ. ಪ್ರಾರ್ಥನೆಯಲ್ಲಿ ಯೆಹೋವನನ್ನು ಗೋಚರಿಸಲು ಯೇಸು ಇತರರಿಗೆ ಸಹಾ ಸಹಾಯ ಮಾಡಿದನು. ಒಂದು ಸಂದರ್ಭದಲ್ಲಿ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಾ ಇದ್ದಾಗ, ಅವನ ಶಿಷ್ಯರಲ್ಲೊಬ್ಬನು ಅನಂತರ ಅವನಿಗೆ ಹೇಳಿದ್ದು: “ಸ್ವಾಮೀ, ನಮಗೂ ಪ್ರಾರ್ಥನೆ ಮಾಡುವುದನ್ನು ಕಲಿಸು.” ಆಗ ಯೇಸು ಸಾಮಾನ್ಯವಾಗಿ ಮಾದರಿ ಪ್ರಾರ್ಥನೆಯೆಂದು ಕರೆಯಲ್ಪಡುವ ಒಂದನ್ನು ಕಲಿಸಿದನು, ಅದರಲ್ಲಿರುವ ವಿಷಯಗಳ ಕ್ರಮಾನುಗತಿಯು ದೇವರ ನಾಮ ಮತ್ತು ರಾಜ್ಯಕ್ಕೆ ಪ್ರಥಮತೆಯನ್ನು ಕೊಡಬೇಕೆಂದು ತೋರಿಸುತ್ತದೆ. (ಲೂಕ 11:1-4) ಹೀಗೆ, ನಮ್ಮ ಪ್ರಾರ್ಥನೆಯಲ್ಲಿ ಪರಸ್ಪರ ಸಂಬಂಧ ಮತ್ತು ಸಮತೂಕವನ್ನು ಇಡಬೇಕಾಗಿದೆ, “ಅತಿ ಮಹತ್ವದ ವಿಷಯಗಳನ್ನು” ದುರ್ಲಕ್ಷಿಸಬಾರದು. (ಫಿಲಿಪ್ಪಿ 1:9, 10) ಕೆಲವೊಮ್ಮೆ ವಿಶೇಷವಾದ ಅಗತ್ಯತೆ ಅಥವಾ ಒಂದು ವಿಶಿಷ್ಟ ಸಮಸ್ಯೆಯನ್ನು ತಿಳಿಸಬೇಕಾಗುತ್ತದೆ, ನಿಶ್ಚಯ. ಯೇಸುವಿನಂತೆ, ನಿರ್ದಿಷ್ಟ ನೇಮಕಗಳನ್ನು ನಿರ್ವಹಿಸುವುದಕ್ಕಾಗಿ ಅಥವಾ ವಿಶಿಷ್ಟ ಶೋಧನೆಗಳನ್ನು ಯಾ ಅಪಾಯಗಳನ್ನು ಎದುರಿಸಲು ಬೇಕಾದ ಬಲಕ್ಕಾಗಿ ಕ್ರೈಸ್ತರು ಪ್ರಾರ್ಥನೆಯಲ್ಲಿ ದೇವರನ್ನು ಯಾಚಿಸಬಹುದು. (ಮತ್ತಾಯ 26:36-44) ವಾಸ್ತವದಲ್ಲಿ, ವೈಯಕ್ತಿಕ ಪ್ರಾರ್ಥನೆಯು ಅಕ್ಷರಶಃ ಜೀವಿತದ ಎಲ್ಲಾ ಮುಖಗಳನ್ನು ಆವರಿಸಬಹುದು.
13. ಇತರರಿಗಾಗಿ ಪ್ರಾರ್ಥಿಸುವ ಮಹತ್ವವನ್ನು ಯೇಸು ತೋರಿಸಿದ್ದು ಹೇಗೆ?
13 ಯೇಸು ತನ್ನ ಉತ್ತಮ ಮಾದರಿಯಿಂದ ಇತರರ ಪರವಾಗಿ ಪ್ರಾರ್ಥಿಸುವ ಮಹತ್ವವನ್ನು ತೋರಿಸಿಕೊಟ್ಟನು. ತನ್ನಂತೆ ತನ್ನ ಶಿಷ್ಯರು ಸಹಾ ದ್ವೇಷಿಸಲ್ಪಡುವರು ಮತ್ತು ಹಿಂಸಿಸಲ್ಪಡುವರೆಂದು ಯೇಸುವಿಗೆ ತಿಳಿದಿತ್ತು. (ಯೋಹಾನ 15:18-20. 1 ಪೇತ್ರ 5:9) ಆದ್ದರಿಂದ ಆತನು, “ಇವರನ್ನು . . . ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು” ದೇವರಿಗೆ ಭಿನ್ನಹ ಮಾಡಿದನು. (ಯೋಹಾನ 17:9, 11, 15, 20) ಮತ್ತು ಪೇತ್ರನ ಮುಂದಿದ್ದ ವಿಶೇಷ ಸಂಕಟವನ್ನು ತಿಳಿದವನಾಗಿ, ಯೇಸು ಅವನಿಗೆ ಹೇಳಿದ್ದು: “ನಿನ್ನ ನಂಬಿಕೆ ಕುಂದಿ ಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು.” (ಲೂಕ 22:32) ನಾವು ಸಹಾ ನಮ್ಮ ಸಹೋದರರಿಗಾಗಿ ಪ್ರಾರ್ಥನೆ ಮಾಡುವುದರಲ್ಲಿ ಪಟ್ಟುಹಿಡಿಯುವುದು, ಕೇವಲ ನಮ್ಮ ಸ್ವಂತ ಸಮಸ್ಯೆಗಳನ್ನು ಮತ್ತು ಅಭಿರುಚಿಗಳನ್ನಲ್ಲದೆ ಬೇರೆಯವರ ಕುರಿತೂ ಯೋಚಿಸುವುದು ಅದೆಷ್ಟು ಪ್ರಯೋಜನಕಾರಿಯಾಗಿದೆ!—ಫಿಲಿಪ್ಪಿ 2:4; ಕೊಲೊಸ್ಸೆ 1:9, 10.
14. ತನ್ನ ಭೂ ಶುಶ್ರೂಷೆಯ ಕಾಲದಲ್ಲೆಲ್ಲಾ ಯೇಸು ಯೆಹೋವನಿಗೆ ಅತಿ ಸಮೀಪವಾಗಿ ಉಳಿದನೆಂದು ನಮಗೆ ತಿಳಿದಿರುವದು ಹೇಗೆ, ಮತ್ತು ನಾವು ಅವನನ್ನು ಅನುಕರಿಸುವದು ಹೇಗೆ?
14 ಯೇಸು ತನ್ನ ಸುವಾರ್ತಾ ಶುಶ್ರೂಷೆಯಲ್ಲೆಲ್ಲಾ ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತನಾಗಿದ್ದನು, ಯೆಹೋವನಿಗೆ ಅತಿ ಹತ್ತಿರವಾಗಿ ಉಳಿದನು. (ಇಬ್ರಿಯ 5:7-10) ಅಪೊಸ್ತಲ ಪೇತ್ರನು, ಅಪೊಸ್ತಲರ ಕೃತ್ಯಗಳು 2:25-28ರಲ್ಲಿ ಕೀರ್ತನೆ 16:8ನ್ನು ಉಲ್ಲೇಖಿಸಿ, ಅದನ್ನು ಕರ್ತನಾದ ಯೇಸು ಕ್ರಿಸ್ತನಿಗೆ ಅನ್ವಯಿಸುತ್ತಾನೆ: “‘ಯೆಹೋವನು ಯಾವಾಗಲೂ ನನ್ನೆದುರಿನಲ್ಲಿರುವದನ್ನು ನಾನು ನೋಡುತ್ತಿದ್ದೆನು. ನಾನು ಕದಲದಂತೆ ಆತನು ನನ್ನ ಬಲಗಡೆಯಲ್ಲಿಯೆ ಇದ್ದಾನೆ’ ಎಂದು ಆತನ ವಿಷಯದಲ್ಲಿ ದಾವೀದನು ಹೇಳಿದ್ದಾನೆ.” ನಾವು ಸಹಾ ಇದೇ ರೀತಿ ಮಾಡಬಹುದು. ದೇವರು ನಮ್ಮ ಸಮೀಪಕ್ಕೆ ಬರುವಂತೆ ನಾವು ಪ್ರಾರ್ಥಿಸ ಸಾಧ್ಯವಿದೆ ಮತ್ತು ಆತನನ್ನು ಸದಾ ಮಾನಸಿಕವಾಗಿ ನಮ್ಮ ಕಣ್ಣಮುಂದೆ ಇರಿಸಿಕೊಳ್ಳುವ ಮೂಲಕ ಯೆಹೋವನಲ್ಲಿ ನಮ್ಮ ಭರವಸವನ್ನು ತೋರಿಸ ಸಾಧ್ಯವಿದೆ. (ಕೀರ್ತನೆ 110:5 ಕ್ಕೆ ಹೋಲಿಸಿ; ಯೆಶಾಯ 41:10, 13) ಆಗ ನಾವು ಎಲ್ಲಾ ತರದ ತೊಂದರೆಗಳಿಂದ ದೂರವಾಗಿರಬಲ್ಲೆವು ಯಾಕಂದರೆ ಯೆಹೋವನು ನಮಗೆ ಬೆಂಬಲವಾಗಿರುವನು ಮತ್ತು ನಾವೆಂದೂ ಅಲುಗಾಡದೆ ಇರುವೆವು.
15. (ಎ) ಯಾವ ಸಂಬಂಧದಲ್ಲಿ ನಾವು ಪ್ರಾರ್ಥನೆಯಲ್ಲಿ ನಿರತರಾಗಲು ಎಂದೂ ತಪ್ಪಬಾರದು? (ಬಿ) ನಮ್ಮ ಉಪಕಾರಸ್ಮರಣೆಯ ಸಂಬಂಧದಲ್ಲಿ ಯಾವ ಎಚ್ಚರಿಕೆ ಕೊಡಲ್ಪಟ್ಟಿದೆ?
15 ಯೆಹೋವನು ನಮಗೆ ತೋರಿಸಿದ ಎಲ್ಲಾ ಒಳ್ಳೇತನಕ್ಕಾಗಿ, ಹೌದು, ನಮ್ಮ ಪಾಪಗಳಿಗಾಗಿ ತನ್ನ ಮಗನನ್ನು ವಿಮೋಚನಾ ಯಜ್ಞವಾಗಿ ಕೊಟ್ಟ ದಾನವೂ ಸೇರಿರುವ “ಆತನ ಅತಿಶಯವಾದ ಕೃಪೆಗಾಗಿ,” ಆತನಿಗೆ ಉಪಕಾರ ಹೇಳಲು ನಾವೆಂದೂ ತಪ್ಪದಿರೋಣ. (2 ಕೊರಿಂಥ 9:14, 15; ಮಾರ್ಕ 10:45; ಯೋಹಾನ 3:16; ರೋಮಾಪುರ 8:32; 1 ಯೋಹಾನ 4:9, 10) ನಿಶ್ಚಯವಾಗಿ, ಯೇಸುವಿನ ಹೆಸರಿನಲ್ಲಿ, “ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ” ಇರ್ರಿ. (ಎಫೆಸ 5:19, 20; ಕೊಲೊಸ್ಸೆ 4:2. 1 ಥೆಸಲೊನೀಕ 5:18) ನಮಗೆ ಇಲ್ಲದ ವಿಷಯಗಳಿಗಾಗಿ ಅಥವಾ ನಮ್ಮ ವೈಯಕ್ತಿಕ ಸಮಸ್ಯೆಗಳಲ್ಲಿ ತೀರಾ ಹೆಚ್ಚು ಮಗ್ನರಾಗಿರುವ ಕಾರಣ, ನಮಲ್ಲಿ ಇರುವ ವಿಷಯಗಳಿಗಾಗಿ ನಮ್ಮ ಕೃತಜ್ಞತೆಯು ಹುಳಿಸುವಂತೆ ಬಿಡದಿರಲು ನಾವು ಜಾಗ್ರತೆ ವಹಿಸಬೇಕು.
ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವುದು.
16. ಕೆಲವು ಚಿಂತಾಭಾರಗಳು ನಮ್ಮನ್ನು ತೊಂದರೆಗೊಳಿಸುವಾಗ, ನಾವೇನು ಮಾಡಬೇಕು?
16 ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತರಾಗಿರುವುದು ನಮ್ಮ ಭಕ್ತಿಯಾಳವನ್ನು ತೋರಿಸುತ್ತದೆ. ನಾವು ದೇವರಿಗೆ ಭಿನ್ನಹ ಮಾಡುವಾಗ, ಆತನಿಂದ ಉತ್ತರವು ಬರುವುದಕ್ಕೆ ಮುಂಚೆಯೆ ನಮ್ಮ ಮೇಲೆ ಹಿತಕರ ಪರಿಣಾಮವುಂಟಾಗುತ್ತದೆ. ಯಾವುದೆ ಚಿಂತಾಭಾರದಿಂದ ನಮ್ಮ ಮನಸ್ಸು ಭಾರವಾಗಿ ತೊಂದರೆಗೆ ಒಳಗಾಗಿದ್ದರೆ, ಈ ಸೂಚನೆಯನ್ನು ಅನುಸರಿಸುವ ಮೂಲಕ ನಾವು ಯೆಹೋವನಿಗೆ ಹತ್ತಿರವಾಗಿ ಉಳಿಯಬಲ್ಲೆವು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರ ಮಾಡುವನು.” (ಕೀರ್ತನೆ 55:22) ದೇವರಲ್ಲಿ ಪೂರ್ಣ ನಂಬಿಕೆಯುಳ್ಳವರಾಗಿ, ನಮ್ಮೆಲ್ಲಾ ಭಾರಗಳನ್ನು—ಚಿಂತೆಗಳು, ತೊಂದರೆಗಳು, ನಿರಾಶೆಗಳು, ಭಯಗಳೇ ಮುಂತಾದವುಗಳನ್ನು—ಆತನ ಮೇಲೆ ಹಾಕುವ ಮೂಲಕವಾಗಿ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯನ್ನು,” ಒಂದು ಪ್ರಶಾಂತ ಹೃದಯವನ್ನು ನಾವು ಪಡೆಯುವೆವು.—ಫಿಲಿಪ್ಪಿ 4:4, 7; ಕೀರ್ತನೆ 68:19; ಮಾರ್ಕ 11:24; 1 ಪೇತ್ರ 5:7.
17. ನಾವು ದೇವರ ಶಾಂತಿಯನ್ನು ಪಡೆದುಕೊಳ್ಳುವದು ಹೇಗೆ?
17 ದೇವರ ಈ ಶಾಂತಿಯು ಥಟ್ಟನೆ ಬರುವುದೊ? ಆ ಕೂಡಲೆ ತುಸು ಪರಿಹಾರವು ನಮಗೆ ದೊರೆತರೂ, ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವ ಕುರಿತು ಯೇಸು ಏನು ಹೇಳಿದ್ದನೊ ಅದು ಇಲ್ಲಿ ಕೂಡಾ ಸತ್ಯವಾಗಿದೆ: “ಬೇಡಿಕೊಳ್ಳುತ್ತಾ ಇರ್ರಿ, ನಿಮಗೆ ದೊರೆಯುವದು; ಹುಡುಕುತ್ತಾ ಇರ್ರಿ, ನಿಮಗೆ ಸಿಕ್ಕುವದು; ತಟ್ಟುತ್ತಾ ಇರ್ರಿ, ನಿಮಗೆ ತೆರೆಯುವದು.” (ಲೂಕ 11:9-13, NW) ಪವಿತ್ರಾತ್ಮವು ನಮ್ಮ ಚಿಂತೆಯನ್ನು ಪರಿಹರಿಸುವ ಸಾಧನವಾಗಿರಲಾಗಿ, ದೇವರ ಶಾಂತಿಗಾಗಿ ಮತ್ತು ನಮ್ಮ ಚಿಂತಾಭಾರಗಳ ಸಂಬಂಧದಲ್ಲಿ ಆತನ ಸಹಾಯಕ್ಕಾಗಿ ನಾವು ಎಡೆಬಿಡದೆ ಬೇಡುತ್ತಾ ಇರುವ ಅಗತ್ಯವಿದೆ. ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತರಾಗಿರುವ ಮೂಲಕ, ಬೇಕಾದ ಪರಿಹಾರ ಮತ್ತು ಹೃದಯ ಶಾಂತಿಯು ನಮಗೆ ಸಿಗುವುದು ಎಂಬ ನಿಶ್ಚಯತೆಯನ್ನು ನಾವು ಪಡೆಯಸಾಧ್ಯವಿದೆ.
18. ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ವಿಶಿಷ್ಟವಾಗಿ ಏನು ಪ್ರಾರ್ಥನೆ ಮಾಡಬೇಕೆಂದು ನಮಗೆ ತಿಳಿಯದೆ ಇದ್ದರೆ ಯೆಹೋವನು ನಮಗಾಗಿ ಏನು ಮಾಡುತ್ತಾನೆ?
18 ಆದರೆ ವಿಶಿಷ್ಟವಾಗಿ ಯಾವದಕ್ಕಾಗಿ ಪ್ರಾರ್ಥಿಸಲಿ ಎಂಬದು ನಮಗೆ ತಿಳಿಯದೆ ಇದ್ದಾಗ ಆಗೇನು? ನಮ್ಮ ಸ್ವಂತ ಸ್ಥಿತಿಗತಿಯು ನಮಗೆ ಪೂರ್ಣವಾಗಿ ತಿಳಿಯದೆ ಇರುವಾಗ ಅಥವಾ ಯೆಹೋವನಿಗೆ ಏನನ್ನು ಭಿನ್ನವಿಸಲಿ ಎಂದು ಹೊಳೆಯದೆ ಇರುವಾಗ, ನಮ್ಮ ಅಂತರ್ಯದ ನರಳಿಕೆಗಳು ಅಭಿವ್ಯಂಜಕವಾಗದೆ ಉಳಿಯುತ್ತವೆ. ಈಗ ಇಲ್ಲಿ ನಮಗಾಗಿ ಪವಿತ್ರಾತ್ಮನು ಬೇಡಿಕೊಳ್ಳಸಾಧ್ಯವಿದೆ. ಪೌಲನು ಬರೆದದ್ದು: “ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದರ್ದಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ.” (ರೋಮಾಪುರ 8:26) ಅದು ಹೇಗೆ? ದೇವರ ವಾಕ್ಯದಲ್ಲಿ ನಮ್ಮ ಸ್ಥಿತಿಗತಿಗೆ ಸಂಬಂಧಿಸಿದ ಪ್ರೇರಿತ ಪ್ರವಾದನೆಗಳು ಮತ್ತು ಪ್ರಾರ್ಥನೆಗಳು ಇವೆ. ಅವು ನಮ್ಮ ಪರವಾಗಿ ಮಾತಾಡುತ್ತವೊ ಎಂಬಂತೆ ಆತನು ಬಿಡುತ್ತಾನೆ. ನಮ್ಮ ಸ್ಥಿತಿಯಲ್ಲಿ ಅವುಗಳ ಅರ್ಥವನ್ನು ನಾವು ತಿಳಿದಿದ್ದರೆ ಮಾತ್ರವೆ ಆತನು ಅವನ್ನು ನಮ್ಮ ಪ್ರಾರ್ಥನೆಯ ಬೇಡಿಕೆಗಳಾಗಿ ಸ್ವೀಕರಿಸುತ್ತಾನೆ, ಮತ್ತು ಅಂತೆಯೇ ಅವನು ಅವುಗಳನ್ನು ನೆರವೇರಿಸುತ್ತಾನೆ.
ಪ್ರಾರ್ಥನೆ ಮತ್ತು ನಿರೀಕ್ಷೆ ಮುಂದುವರಿಯುವವು
19. ಪ್ರಾರ್ಥನೆ ಮತ್ತು ನಿರೀಕ್ಷೆಯು ನಿರಂತರವಾಗಿ ಮುಂದರಿಯುವವೇಕೆ?
19 ನಮ್ಮ ಸ್ವರ್ಗೀಯ ತಂದೆಗೆ ಪ್ರಾರ್ಥನೆಯು, ವಿಶೇಷವಾಗಿ ಹೊಸ ಲೋಕ ಮತ್ತು ಅದರ ಎಲ್ಲಾ ಆಶೀರ್ವಾದಗಳಿಗಾಗಿ ಕೃತಜ್ಞತೆಯ ಸಂಬಂಧದಲ್ಲಿ, ನಿರಂತರವಾಗಿ ಮುಂದರಿಯುವುದು. (ಯೆಶಾಯ 65:24; ಪ್ರಕಟನೆ 21:5) ನಾವು ನಿರೀಕ್ಷೆಯಲ್ಲಿ ಉಲ್ಲಾಸಿಸುವುದನ್ನೂ ಮುಂದುವರಿಸುತ್ತಾ ಇರುವೆವು, ಯಾಕಂದರೆ ಒಂದಲ್ಲ ಒಂದು ರೂಪದಲ್ಲಿ ನಿರೀಕ್ಷೆಯು ಸದಾ ಅಲ್ಲಿರುವದು. (1 ಕೊರಿಂಥ 13:13 ಕ್ಕೆ ಹೋಲಿಸಿ.) ಯೆಹೋವನು ಭೂಮಿಯ ಕಡೆಗೆ ತನ್ನ ಸ್ವಯಂ-ಕೃತ ಸಬ್ಬತ್‌ದಿನ ವಿಶ್ರಾಂತಿಯ ಕೆಳಗೆ ಇನ್ನುಮುಂದೆ ಇಲ್ಲದಾಗ, ಆತನು ಇನ್ನಾವ ಹೊಸ ವಿಷಯಗಳನ್ನು ಉಂಟುಮಾಡುವನೊ ಎಂಬದನ್ನು ನಾವು ಊಹಿಸಲೂ ಶಕ್ತರಲ್ಲ. (ಆದಿಕಾಂಡ 2:2, 3) ನಿರಂತರಕ್ಕೂ ಆತನು ತನ್ನ ಜನರಿಗಾಗಿ ಪ್ರೀತಿಯುಳ್ಳ ಬೆರಗುಗಳನ್ನು ಬರಮಾಡುವನು ಮತ್ತು ಭವಿಷ್ಯವು ಅವರಿಗಾಗಿ ಆತನ ಚಿತ್ತವನ್ನು ಮಾಡುವುದರಲ್ಲಿ ಮಹತ್ತಾದ ಸಂಗತಿಗಳನ್ನು ತೋರಿಸಲಿದೆ.
20. ನಮ್ಮ ನಿರ್ಧಾರವು ಏನಾಗಿರಬೇಕು ಮತ್ತು ಯಾಕೆ?
20 ಇಂಥ ರೋಮಾಂಚಕರ ನಿರೀಕ್ಷೆಗಳು ನಮ್ಮ ಮುಂದಿರಲಾಗಿ, ನಾವೆಲ್ಲರೂ ಎಡೆಬಿಡದೆ ಪ್ರಾರ್ಥನೆಯಲ್ಲಿ ನಿರತರಾಗುವ ಮೂಲಕ ಯೆಹೋವನಿಗೆ ಸಮೀಪವಾಗಿ ಉಳಿಯೋಣ. ನಮ್ಮೆಲ್ಲಾ ಆಶೀರ್ವಾದಗಳಿಗಾಗಿ ನಮ್ಮ ಸ್ವರ್ಗೀಯ ತಂದೆಗೆ ಉಪಕಾರ ಹೇಳುವುದನ್ನು ನಾವೆಂದೂ ನಿಲ್ಲಿಸದಿರೋಣ. ತಕ್ಕ ಸಮಯದಲ್ಲಿ ನಮ್ಮೆಲ್ಲಾ ಅಪೇಕ್ಷೆಗಳು, ನಮ್ಮ ಕಲ್ಪನೆಗೆ ಮತ್ತು ಪೂರ್ವನಿರೀಕ್ಷಣೆಗೂ ಮೀರಿ, ಸಂತೋಷಕರವಾಗಿ ಪೂರೈಸಲ್ಪಡುವವು ಯಾಕಂದರೆ ಯೆಹೋವನು “ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು” ಶಕ್ತನಾಗಿದ್ದಾನೆ. (ಎಫೆಸ 3:20) ಹಾಗಾದರೆ ಈ ನೋಟದಲ್ಲಿ, ನಾವು ನಮ್ಮೆಲ್ಲಾ ಸ್ತುತಿಯನ್ನು, ಘನವನ್ನು ಮತ್ತು ಉಪಕಾರಗಳನ್ನು “ಪ್ರಾರ್ಥನೆಯನ್ನು ಕೇಳುವವನಾದ” ನಮ್ಮ ದೇವರಾದ ಯೆಹೋವನಿಗೆ ನಿತ್ಯ ನಿರಂತರವೂ ಸಲ್ಲಿಸುತ್ತಿರೋಣ! (w91 12/15)
[ಅಧ್ಯಯನ ಪ್ರಶ್ನೆಗಳು]
a ವೆಬ್ಸ್‌ಟರ್ಸ್ ನ್ಯೂ ಡಿಕ್ಷೆನೆರಿ ಆಫ್ ಸಿನೋನಿಮ್ಸ್‌ಗೆ ಅನುಸಾರವಾಗಿ, “ನಿರತನಾಗಿರು ಎಂಬದು ಸಾಧಾರಣ ಯಾವಾಗಲೂ ಒಂದು ಶ್ಲಾಘನೀಯ ಗುಣಕ್ಕೆ ಅನ್ವಯಿಸುತ್ತದೆ; ಸೋಲಿನಿಂದ, ಸಂದೇಹ ಮತ್ತು ಕಷ್ಟಗಳಿಂದಾಗಿ ನಿರಾಶೆಗೊಳ್ಳಲು ನಿರಾಕರಿಸುವುದು ಮತ್ತು ಒಂದು ವಿಷಯವು ಅಥವಾ ಕೈಕೊಂಡ ಕೆಲಸವು ಕೊನೆಮುಟ್ಟುವ ತನಕ ದೃಢತೆಯಿಂದ ಅಥವಾ ಜಗ್ಗದೆ ಬೆನ್ನಟ್ಟುವುದನ್ನು ಅದು ಸೂಚಿಸುತ್ತದೆ.”
ನೀವು ಹೇಗೆ ಉತ್ತರಿಸುವಿರಿ?
▫ ನಮಗೆ ಪ್ರಾರ್ಥನೆಯಲ್ಲಿ ನಿರತರಾಗಿರುವ ಅಗತ್ಯವಿದೆಯೇಕೆ?
▫ ಪ್ರಾರ್ಥನೆಗಳ ಕ್ರೈಸ್ತಪೂರ್ವ ಮಾದರಿಗಳಿಂದ ನಾವೇನನ್ನು ಕಲಿಯುತ್ತೇವೆ?
▫ ಪ್ರಾರ್ಥನೆಯ ಕುರಿತು ಯೇಸುವಿನ ಮಾದರಿ ನಮಗೇನನ್ನು ಕಲಿಸುತ್ತದೆ?
▫ ಹೇಗೆ ನಾವು ಯೆಹೋವನ ಮೇಲೆ ನಮ್ಮ ಚಿಂತಾಭಾರಗಳನ್ನು ಹಾಕಬಹುದು ಮತ್ತು ಯಾವ ಫಲಿತಾಂಶದೊಂದಿಗೆ?
[ಪುಟ 17 ರಲ್ಲಿರುವ ಚಿತ್ರ]
ದಾನಿಯೇಲನು ಸಿಂಹದ ಗವಿಗೆ ಎಸೆಯಲ್ಪಡುವ ಬೆದರಿಕೆಯ ಮಧ್ಯೆಯೂ ಪ್ರಾರ್ಥನೆಯಲ್ಲಿ ನಿರತನಾಗಿದ್ದನು