ರಾಜ್ಯ ನಿರೀಕ್ಷೆಯಲ್ಲಿಉಲ್ಲಾಸವಾಗಿರ್ರಿ!
“ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರಿ.”—ರೋಮಾಪುರ 12:12, NW.
1. ಯೆಹೋವನೊಂದಿಗಿನ ಸಹವಾಸದಲ್ಲಿ ನಾವು ಸಂತೋಷವನ್ನು ಕಂಡುಕೊಳ್ಳಬಲ್ಲೆವೇಕೆ ಮತ್ತು ಅಪೊಸ್ತಲ ಪೌಲನು ಏನು ಮಾಡುವಂತೆ ಕ್ರೈಸ್ತರನ್ನು ಪ್ರೇರೇಪಿಸಿದನು?
“ಸಂತೋಷವುಳ್ಳ ದೇವರು.” (1 ತಿಮೊಥಿ 1:11, NW) ಇದು ಯೆಹೋವನನ್ನು ಎಷ್ಟು ಚೆನ್ನಾಗಿ ವರ್ಣಿಸುತ್ತದೆ! ಏಕೆ? ಏಕಂದರೆ ಆತನ ಕೆಲಸಗಳೆಲ್ಲವೂ ಆತನಿಗೆ ಮಹಾ ಸಂತೋಷವನ್ನು ತರುತ್ತವೆ. ಎಲ್ಲಾ ಒಳ್ಳೆಯ ಮತ್ತು ಸಂತೋಷಗೊಳಿಸುವ ವಿಷಯಗಳ ಮೂಲನು ಯೆಹೋವನಾಗಿರುವುದರಿಂದ, ಬುದ್ಧಿಶಕ್ತಿಗಳುಳ್ಳ ಜೀವಿಗಳೆಲ್ಲಾ ಆತನೊಂದಿಗಿನ ತಮ್ಮ ಸಹವಾಸದಲ್ಲಿ ಸಂತೋಷವನ್ನು ಕಂಡುಕೊಳ್ಳಸಾಧ್ಯವಿದೆ. ತಕ್ಕದಾಗಿಯೆ ಅಪೊಸ್ತಲ ಪೌಲನು, ಕ್ರೈಸ್ತರು ಯೆಹೋವ ದೇವರನ್ನು ತಿಳಿಯುವ ತಮ್ಮ ಹರ್ಷಕರ ಸುಯೋಗವನ್ನು ಗಣ್ಯಮಾಡುವಂತೆ ಮತ್ತು ಆತನ ಸೃಷ್ಟಿಯ ಆಶ್ಚರ್ಯಕರ ಸುವರಗಳಿಗಾಗಿ ಕೃತಜ್ಞರಾಗಿರುವಂತೆ ಹಾಗೂ ಆತನು ತೋರಿಸುವ ಕೃಪಾತಿಶಯದಲ್ಲಿ ಆನಂದಿಸುವಂತೆ ಪ್ರೇರೇಪಿಸಿದ್ದಾನೆ. ಪೌಲನು ಬರೆದದ್ದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ.”—ಫಿಲಿಪ್ಪಿ 4:4; ಕೀರ್ತನೆ 104:31.
2. ಯಾವ ನಿರೀಕ್ಷೆಯು ಮಹಾ ಸಂತೋಷವನ್ನು ತರುತ್ತದೆ, ಮತ್ತು ಈ ನಿರೀಕ್ಷೆಗೆ ಸಂಬಂಧದಲ್ಲಿ ಕ್ರೈಸ್ತರು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ?
2 ಪೌಲನು ನೀಡಿದ ಈ ಬುದ್ಧಿವಾದವನ್ನು ಕ್ರೈಸ್ತರು ಪಾಲಿಸುತ್ತಿದ್ದಾರೊ? ನಿಶ್ಚಯವಾಗಿಯೂ ಪಾಲಿಸುತ್ತಿದ್ದಾರೆ! ಯೇಸು ಕ್ರಿಸ್ತನ ಆತ್ಮಿಕ ಸಹೋದರರು ದೇವರು ತಮಗಾಗಿ ತೆರೆದಿರುವ ಮಹಿಮಾಭರಿತ ನಿರೀಕ್ಷೆಯಲ್ಲಿ ಉಲ್ಲಾಸಪಡುತ್ತಿದ್ದಾರೆ. (ರೋಮಾಪುರ 8:19-21; ಫಿಲಿಪ್ಪಿ 3:20, 21) ಹೌದು, ಕ್ರಿಸ್ತನೊಂದಿಗೆ ಆತನ ಸ್ವರ್ಗೀಯ ರಾಜ್ಯ ಸರಕಾರದಲ್ಲಿ ಸೇವೆಮಾಡುವ ಮೂಲಕ, ಜೀವಂತರೂ ಸತ್ತವರೂ ಆದ ಮಾನವ ಕುಲದ ಭವಿಷ್ಯತ್ತಿನ ಮಹಾ ನಿರೀಕ್ಷೆಯನ್ನು ಪೂರೈಸುವುದರಲ್ಲಿ ತಾವು ಪಾಲಿಗರಾಗುವರೆಂದು ಅವರಿಗೆ ಗೊತ್ತಿದೆ. ಸಹಬಾಧ್ಯರಾಗಿ, ರಾಜರೂ ಯಾಜಕರೂ ಆಗಿ ಸೇವೆ ಮಾಡುವ ತಮ್ಮ ಸುಯೋಗದಲ್ಲಿ ಅವರೆಷ್ಟು ಉಲ್ಲಾಸಪಡುವರೆಂಬದನ್ನು ಕಲ್ಪಿಸಿಕೊಳ್ಳಿರಿ! (ಪ್ರಕಟನೆ 20:6) ನಂಬಿಗಸ್ತ ಮಾನವ ಕುಲವು ಪರಿಪೂರ್ಣತೆಗೇರುವಂತೆ ಅವರು ಸಹಾಯ ಮಾಡುವಾಗ ಮತ್ತು ನಮ್ಮ ಭೂಮಿಗೆ ಪರದೈಸದ ಪುನಃಸ್ಥಾಪನೆಯನ್ನು ತರಲು ನೆರವಾಗುವಾಗ ಅವರಿಗಾಗುವ ಸಂತೋಷವೆಷ್ಟು! ನಿಜವಾಗಿಯೂ ದೇವರ ಸೇವಕರೆಲ್ಲರಿಗೆ ಆ “ನಿತ್ಯಜೀವದ ನಿರೀಕ್ಷೆಯೇ ಆಧಾರವಾಗಿದೆ. ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನ ಮಾಡಿದ್ದಾನೆ.” (ತೀತ 1:2) ಈ ಮಹಾ ನಿರೀಕ್ಷೆಯ ನೋಟದಲ್ಲಿ, ಅಪೊಸ್ತಲ ಪೌಲನು ಎಲ್ಲಾ ಕ್ರೈಸ್ತರನ್ನು ಹುರಿದುಂಬಿಸುವುದು: “ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ.”—ರೋಮಾಪುರ 12:12.a
ನಿಜ ಸಂತೋಷ—ಹೃದಯದ ಒಂದು ಗುಣ
3, 4. (ಎ) “ಸಂತೋಷಪಡಿರಿ” ಎಂಬ ಮಾತಿನ ಅರ್ಥವೇನು, ಮತ್ತು ಕ್ರೈಸ್ತರು ಎಷ್ಟು ಸಾರಿ ಸಂತೋಷಪಡಬೇಕು? (ಬಿ) ನಿಜ ಸಂತೋಷವು ಯಾವುದು, ಮತ್ತು ಅದು ಯಾವುದರ ಮೇಲೆ ಆಧರಿಸಿದೆ?
3 “ಸಂತೋಷಪಡಿರಿ” ಅಂದರೆ ಸಂತೋಷವನ್ನು ಅನುಭವಿಸುವುದು ಮತ್ತು ವ್ಯಕ್ತಪಡಿಸುವುದು ಆಗಿದೆ; ಅದು ಸದಾ ಸುಖಾನುಭವದಿಂದ ತುಂಬಿತುಳುಕುವ ಸ್ಥಿತಿಯಲ್ಲ. ಬೈಬಲಲ್ಲಿ “ಸಂತೋಷ,” “ಅತ್ಯಾನಂದ,” ಮತ್ತು “ಉಲ್ಲಾಸ” ಎಂಬದಾಗಿ ಉಪಯೋಗಿಸಲ್ಪಟ್ಟ ಹಿಬ್ರೂ ಮತ್ತು ಗ್ರೀಕ್ ಪದಗಳಿಗೆ ಅನುರೂಪವಾದ ಕ್ರಿಯಾಪದಗಳು, ಸಂತೋಷದ ಅಂತರ್ಯ ಮತ್ತು ಬಾಹ್ಯ ಪ್ರದರ್ಶನೆ ಎರಡನ್ನೂ ವ್ಯಕ್ತಪಡಿಸುತ್ತವೆ. “ಸಂತೋಷಪಡಿರಿ” “ಯಾವಾಗಲೂ ಸಂತೋಷಿಸಿರಿ” ಎಂಬ ಪ್ರೋತ್ಸಾಹನೆಯನ್ನು ಕ್ರೈಸ್ತರಿಗೆ ಕೊಡಲಾಗಿದೆ.—2 ಕೊರಿಂಥ 13:11; 1 ಧೆಸಲೊನೀಕ 5:16.
4 ಆದರೆ ಒಬ್ಬನು ಯಾವಾಗಲೂ ಸಂತೋಷ ಪಡುತ್ತಿರಲು ಹೇಗೆ ಸಾಧ್ಯ? ಇದು ಶಕ್ಯವು ಏಕೆಂದರೆ ನಿಜ ಸಂತೋಷವು ಹೃದಯದ ಒಂದು ಗುಣವಾಗಿದೆ, ಅಂತರ್ಯದಾಳದ, ಆತ್ಮಿಕ ಗುಣವಾಗಿರುತ್ತದೆ. (ಧರ್ಮೋಪದೇಶಕಾಂಡ 28:47; ಜ್ಞಾನೋಕ್ತಿ 15:13; 17:22) ಅದು ಆತ್ಮದ ಒಂದು ಫಲವಾಗಿದೆ, ಪ್ರೀತಿಯನ್ನು ಅನುಸರಿಸಿಯೆ ಪೌಲನಿಂದ ಇದು ನಮೂದಿಸಲ್ಪಟ್ಟಿದೆ. (ಗಲಾತ್ಯ 5:22) ಅದೊಂದು ಅಂತರ್ಯದ ಗುಣವಾಗಿರುವುದರಿಂದ, ಬಾಹ್ಯ ವಿಷಯಗಳ ಮೇಲೆ, ನಮ್ಮ ಸಹೋದರರ ಮೇಲೂ ಅದು ಆಧಾರಿತವಲ್ಲ. ಆದರೆ ಅದು ದೇವರ ಆತ್ಮದ ಮೇಲೆ ಆಧಾರಿತವಾಗಿದೆ. ಸತ್ಯವು ನಿಮಗೆ ದೊರಕಿದೆ, ರಾಜ್ಯದ ನಿರೀಕ್ಷೆ ನಿಮಗಿದೆ ಮತ್ತು ಯೆಹೋವನು ಮೆಚ್ಚುವದನ್ನೆ ನೀವು ಮಾಡುತ್ತಿದ್ದೀರಿ ಎಂಬ ತಿಳುವಳಿಕೆಯ ಆಳವಾದ ಅಂತರಿಕ ತೃಪ್ತಿಯಿಂದ ಅದು ಹೊರಬರುತ್ತದೆ. ಆದಕಾರಣ, ಸಂತೋಷವು ನಮ್ಮೊಂದಿಗೆ ಹುಟ್ಟಿಬಂದ ಕೇವಲ ವೈಯಕ್ತಿಕ ಪ್ರವೃತ್ತಿಯಲ್ಲ; ಅದು “ಹೊಸ ವ್ಯಕ್ತಿತ್ವದ” ಒಂದು ಭಾಗ, ಯೇಸು ಕ್ರಿಸ್ತನನ್ನು ಬೇರೆಯವರಿಂದ ಪ್ರತ್ಯೇಕವಾಗಿ ತೋರಿಸಿದ ಗುಣಗಳಲ್ಲಿ ಒಟ್ಟುಸೇರಿದ ಗುಣ.—ಎಫೆಸ 4:24; ಕೊಲೊಸ್ಸೆ 3:10.
5. ಯಾವಾಗ ಮತ್ತು ಹೇಗೆ ಸಂತೋಷದ ಬಾಹ್ಯ ಪ್ರದರ್ಶನೆಯು ಅಲ್ಲಿರಬಹುದು?
5 ಸಂತೋಷವು ಹೃದಯದ ಒಂದು ಗುಣವಾಗಿದ್ದರೂ, ಕೆಲವು ಸಂದರ್ಭದಲ್ಲಿ ಅದು ಬಾಹ್ಯದಲ್ಲೂ ತೋರಿಸಲ್ಪಡಬಹುದು. ಈ ಸಂದರ್ಭೋಚಿತವಾಗಿ ತೋರಿಸಲ್ಪಡುವ ಸಂತೋಷದ ಬಾಹ್ಯ ವ್ಯಕ್ತಪಡಿಸುವಿಕೆಗಳು ಯಾವುವು? ಅವು ಪ್ರಸನ್ನ ಮುಖಭಾವದಿಂದ ಹಿಡಿದು ಕಾರ್ಯತಃ ಉಲ್ಲಾಸದಿಂದ ನಲಿಯುವ ತನಕದ ಯಾವುದೆ ಒಂದು ವಿಷಯವಾಗಿರಬಹುದು. (1 ಅರಸು 1:40; ಲೂಕ 1:44; ಅಪೊಸ್ತಲರ ಕೃತ್ಯಗಳು 3:8; 6:15) ಹಾಗಾದರೆ ಹೆಚ್ಚು ಮಾತನಾಡದ ಮತ್ತು ಯಾವಾಗಲೂ ನಗಾಡದಿರದ ಜನರಿಗೆ ಸಂತೋಷವಿಲ್ಲವೆಂದು ಅರ್ಥವೊ? ಅಲ್ಲ! ನಿಜ ಸಂತೋಷವು ಸದಾ ವಟವಟ ಮಾತು, ನಗು, ಮಂದಹಾಸ ಅಥವಾ ಹಲ್ಲುಕಿರಿಯುವುದರಲ್ಲಿ ತಾನೆ ಅಭಿವ್ಯಂಜಕವಲ್ಲ. ಪರಿಸ್ಥಿತಿಗಳು ಸಂತೋಷವನ್ನು ಹಲವಾರು ವಿಧಗಳಲ್ಲಿ ವ್ಯಕ್ತಪಡಿಸಲು ಕಾರಣವಾಗುತ್ತವೆ. ರಾಜ್ಯ ಸಭಾಗೃಹದಲ್ಲಿ ನಮ್ಮನ್ನು ಒಗ್ಗುವಂತೆ ಮಾಡುವದು ಸಂತೋಷವು ಮಾತ್ರವೇ ಅಲ್ಲ, ಬದಲಿಗೆ ನಮ್ಮ ಸಹೋದರ ಪ್ರೀತಿ ಮತ್ತು ಮಮತೆಯೆ.
6. ಅಹಿತಕರವಾದ ಪರಿಸ್ಥಿತಿಗಳನ್ನು ಎದುರಿಸುವಾಗಲೂ ಕ್ರೈಸ್ತರು ಯಾವಾಗಲೂ ಸಂತೋಷಿಸಬಲ್ಲರೇಕೆ?
6 ಕ್ರೈಸ್ತನ ಹೊಸ ವ್ಯಕ್ತಿತ್ವದ ಹೃದಯಪೂರ್ವಕ ವೈಶಿಷ್ಟ್ಯವಾಗಿ ಸಂತೋಷವು ಸದಾ ನೆಲೆಸಿರುವುದು ಅದರ ಅಂತರ್ಯದ ಸ್ಥಿರತೆಯಲ್ಲಿ. ಯಾವಾಗಲೂ ಸಂತೋಷ ಪಡುವುದನ್ನು ಶಕ್ಯವಾಗಿ ಮಾಡುವುದು ಇದೇ. ನಿಶ್ಚಯವಾಗಿ ಕೆಲವು ಸಾರಿ ನಾವು ಯಾವುದಾದರೊಂದು ವಿಷಯದಲ್ಲಿ ತೊಂದರೆಗೀಡಾಗಬಹುದು, ಇಲ್ಲವೆ ಅಹಿತಕರವಾದ ಸ್ಥಿತಿಗತಿಗಳನ್ನು ಎದುರಿಸಬಹುದು. ಆದರೂ ನಾವು ಹೃದಯದಾಳದಲ್ಲಿ ಸಂತೋಷ ಉಳ್ಳವರಾಗಬಹುದು. ಕೆಲವು ಆರಂಭದ ಕ್ರೈಸ್ತರು ದಾಸರಾಗಿದ್ದರು, ಮೆಚ್ಚಿಸಲು ಕಷ್ಟವಾದ ಯಜಮಾನರು ಅವರಿಗಿದ್ದರು. (1 ಪೇತ್ರ 2:18) ಅಂಥ ಕ್ರೈಸ್ತರು ಯಾವಾಗಲೂ ಸಂತೋಷ ಪಡಸಾಧ್ಯವಿತ್ತೊ? ಹೌದು, ರಾಜ್ಯ ನಿರೀಕ್ಷೆಯ ಕಾರಣದಿಂದ ಮತ್ತು ಅವರ ಹೃದಯಗಳಲ್ಲಿದ್ದ ಸಂತೋಷದ ಕಾರಣದಿಂದ.—ಯೋಹಾನ 15:11; 16:24; 17:13.
7. (ಎ)ಹಿಂಸೆಯ ಕೆಳಗೆ ಸಂತೋಷಪಡುವ ಕುರಿತು ಯೇಸು ಹೇಳಿದ್ದೇನು? (ಬಿ) ಹಿಂಸೆಯನ್ನು ತಾಳಿಕೊಳ್ಳುವಂತೆ ನಮಗೆ ಯಾವುದು ಸಹಾಯ ಮಾಡುತ್ತದೆ, ಮತ್ತು ಈ ವಿಷಯದಲ್ಲಿ ಅತ್ಯುತ್ತಮ ಮಾದರಿಯನ್ನು ಯಾರು ಇಟ್ಟರು?
7 “ನಿರೀಕ್ಷೆಯಲ್ಲಿ ಉಲ್ಲಾಸಿಸಿರಿ” ಎಂದು ಅಪೊಸ್ತಲ ಪೌಲನು ಹೇಳಿದ ತರುವಾಯವೆ ಕೂಡಿಸಿದ್ದು: “ಉಪದ್ರವದಲ್ಲಿ ಸೈರಣೆಯುಳ್ಳವರಾಗಿರಿ.” (ರೋಮಾಪುರ 12:12) ಹಿಂಸೆಯ ಕೆಳಗೆ ಸಂತೋಷ ಪಡುವ ಕುರಿತಾಗಿ ಯೇಸು ಕೂಡಾ ಮತ್ತಾಯ 5:11, 12ರಲ್ಲಿ ತಿಳಿಸುತ್ತಾ ಅಂದದ್ದು: “ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿದರೆ ನೀವು ಧನ್ಯರು. . . . ಸಂತೋಷಪಡಿರಿ, ಉಲ್ಲಾಸಪಡಿರಿ (ಹರ್ಷದಿಂದ ನಲಿದಾಡಿರಿ, NW); ಪರಲೋಕದಲ್ಲಿ ನಿಮಗೆ ಬಹಳ ಫಲಸಿಕ್ಕುವದು.” ಇಲ್ಲಿ ತಿಳಿಸಿರುವ ಸಂತೋಷ ಪಡುವಿಕೆ ಮತ್ತು ಹರ್ಷದಿಂದ ನಲಿದಾಡುವಿಕೆಯು ಒಂದು ಅಕ್ಷರಶಃ ಬಾಹ್ಯ ಪ್ರದರ್ಶನೆಯಾಗಿರುವ ಅಗತ್ಯವಿಲ್ಲ; ಅದು ಮುಖ್ಯವಾಗಿ ಹಿಂಸೆಯ ಕೆಳಗೆ ದೃಢವಾಗಿ ನಿಂತಾಗ ಯೆಹೋವನನ್ನು ಮತ್ತು ಯೇಸು ಕ್ರಿಸ್ತನನ್ನು ಮೆಚ್ಚಿಸಿದರ್ದಲ್ಲಿ ಒಬ್ಬನಿಗಾಗುವ ಅಂತರ್ಯದಾಳದ ಸಂತೃಪ್ತಿಯಾಗಿರುತ್ತದೆ. (ಅಪೊಸ್ತಲರ ಕೃತ್ಯಗಳು 5:41) ಹಿಂಸೆಯ ಕೆಳಗಿರುವಾಗ ನಮ್ಮನ್ನು ತಾಳಿಕೊಳ್ಳುವಂತೆ ಮಾಡುವುದು ಕಾರ್ಯತಃ ಆ ಸಂತೋಷವೆ. (1 ಥೆಸಲೊನೀಕ 1:6) ಇದರಲ್ಲಿ ಯೇಸು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾನೆ. ಶಾಸ್ತ್ರವಚನಗಳು ನಮಗೆ ಹೇಳುವದು: “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಶಿಲುಬೆಯ ಮರಣವನ್ನು (ಯಾತನೆಯ ಕಂಭವನ್ನು, NW) ಸಹಿಸಿಕೊಂಡನು.”—ಇಬ್ರಿಯ 12:2.
ಸಮಸ್ಯೆಗಳ ನಡುವೆಯೂ ನಿರೀಕ್ಷೆಯಲ್ಲಿ ಉಲ್ಲಾಸಿಸುವುದು
8. ಕ್ರೈಸ್ತರು ಯಾವ ಸಮಸ್ಯೆಗಳನ್ನು ಎದುರಿಸಬಹುದು, ಆದರೆ ಸಮಸ್ಯೆಗಳು ಒಬ್ಬ ಕ್ರೈಸ್ತನ ಸಂತೋಷವನ್ನು ಅಪಹರಿಸಲಾರವು ಏಕೆ?
8 ಯೆಹೋವನ ಸೇವಕನಾಗಿರುವುದು ಒಬ್ಬನನ್ನು ಸಮಸ್ಯೆಗಳಿಂದ ಮುಕ್ತನನ್ನಾಗಿ ಮಾಡುವುದಿಲ್ಲ. ಕುಟುಂಬ ಸಮಸ್ಯೆಗಳು, ಅರ್ಥಿಕ ಬಿಕ್ಕಟ್ಟುಗಳು, ಅನಾರೋಗ್ಯ ಅಥವಾ ಪ್ರಿಯಜನರ ಮರಣವೇ ಮುಂತಾದವುಗಳು ಅಲ್ಲಿರಬಹುದು. ಇಂಥ ವಿಷಯಗಳು ದುಃಖವನ್ನು ತರಬಹುದಾದರೂ, ರಾಜ್ಯ ನಿರೀಕ್ಷೆಯಲ್ಲಿ ಆನಂದಿಸುವದಕ್ಕೆ ನಮಗಿರುವ ಮೂಲಾಧಾರವನ್ನು, ನಮ್ಮ ಹೃದಯದಲ್ಲಿ ನಮಗಿರುವ ಆಂತರಿಕ ಸಂತೋಷವನ್ನು ಅಪಹರಿಸಲಾರವು.—1 ಥೆಸಲೊನೀಕ 4:13.
9. ಯಾವ ಸಮಸ್ಯೆಗಳು ಅಬ್ರಹಾಮನಿಗೆ ಇದ್ದವು, ಮತ್ತು ಅವನಿಗೆ ಹೃದಯ ಸಂತೋಷವಿತ್ತೆಂದು ನಮಗೆ ತಿಳಿದಿರುವುದು ಹೇಗೆ?
9 ದೃಷ್ಟಾಂತಕ್ಕಾಗಿ ಅಬ್ರಹಾಮನನ್ನು ತಕ್ಕೊಳ್ಳಿರಿ. ಜೀವಿತವು ಅವನಿಗೆ ಯಾವಾಗಲೂ ಸುಖಕರವೇ ಆಗಿರಲಿಲ್ಲ. ಅವನ ಉಪಪತ್ನಿಯಾದ ಹಾಗರ್ ಮತ್ತು ಪತ್ನಿ ಸಾರ, ಹೊಂದಿಕೆಯಲ್ಲಿ ಜೀವಿಸಲಿಲ್ಲ. ಜಗಳಗಳು ನಡೆಯುತ್ತಿದ್ದವು. (ಆದಿಕಾಂಡ 16:4, 5) ಇಷ್ಮಾಯೇಲನು ಇಸಾಕನಿಗೆ ಗೇಲಿ ಮಾಡಿದ್ದನು, ಹಿಂಸಿಸಿದ್ದನು. (ಆದಿಕಾಂಡ 21:8, 9; ಗಲಾತ್ಯ 4:29) ಕೊನೆಗೆ ಅಬ್ರಹಾಮನ ಅತಿಪ್ರಿಯ ಪತ್ನಿ ಸಾರಳು ಸತ್ತಳು. (ಆದಿಕಾಂಡ 23:2) ಈ ಎಲ್ಲಾ ಸಮಸ್ಯೆಗಳ ನಡುವೆಯೂ ಅವನು ರಾಜ್ಯದ ಸಂತಾನದ ನಿರೀಕ್ಷೆಯಲ್ಲಿ, ಯಾರ ಮೂಲಕವಾಗಿ ಭೂಮಿಯ ಕುಟುಂಬಗಳೆಲ್ಲವೂ ತಮ್ಮನ್ನು ಆಶೀರ್ವದಿಸಿಕೊಳ್ಳಲಿದ್ದವೊ ಆ ಅಬ್ರಹಾಮನ ಸಂತಾನವಾದಾತನ ನಿರೀಕ್ಷೆಯಲ್ಲಿ ಉಲ್ಲಾಸಪಟ್ಟನು. (ಆದಿಕಾಂಡ 22:15-18) ತನ್ನ ಸ್ವದೇಶವಾದ ಊರ್ನ್ನು ಬಿಟ್ಟು ಒಂದು ನೂರು ವರ್ಷಗಳ ತನಕ ಯೆಹೋವನ ಸೇವೆಯಲ್ಲಿ ಅವನು ಹೃದಯ ಸಂತೋಷದಿಂದ ತಾಳಿಕೊಂಡನು. ಆದುದರಿಂದ ಅವನ ಕುರಿತು ಹೀಗೆ ಬರೆಯಲ್ಪಟ್ಟಿತು: “ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.” ಮೆಸ್ಸೀಯನ ರಾಜ್ಯದಲ್ಲಿ ಅಬ್ರಹಾಮನಿಗಿದ್ದ ನಂಬಿಕೆಯಿಂದಾಗಿ, ದೇವರಿಂದ ರಾಜನಾಗುವ ನೇಮಕವನ್ನು ಆವಾಗಲೆ ಪಡೆದಿದ್ದ ಕರ್ತನಾದ ಯೇಸುವು ಹೀಗೆ ಹೇಳಶಕ್ತನಾದನು: “ಅಬ್ರಹಾಮನು ನನ್ನ ದಿನವನ್ನು ತಾನು ನೋಡೇನೆಂದು ಉಲ್ಲಾಸಪಟ್ಟನು; ಅದನ್ನು ನೋಡಿ ಸಂತೋಷಗೊಂಡನು.”—ಇಬ್ರಿಯ 11:10; ಯೋಹಾನ 8:56.
10, 11. (ಎ) ಕ್ರೈಸ್ತರೋಪಾದಿ ನಮಗೆ ಯಾವ ಹೋರಾಟವಿದೆ, ಮತ್ತು ನಾವು ಹೇಗೆ ಬಿಡಿಸಲ್ಪಟ್ಟೆವು? (ಬಿ) ನಮ್ಮ ಪಾಪಪೂರ್ಣ ಮಾಂಸಿಕ ಶರೀರದ ವಿರುದ್ಧ ಪರಿಪೂರ್ಣ ಹೋರಾಟ ನಡಿಸುವ ನಮ್ಮ ಅಶಕ್ತತೆಯನ್ನು ಯಾವುದು ಶಕವ್ತನ್ನಾಗಿ ಮಾಡುತ್ತದೆ?
10 ಅಪೂರ್ಣ ಮನುಷ್ಯರಾದ ನಮಗೆಲ್ಲರಿಗೂ ನಮ್ಮ ಪಾಪಪೂರ್ಣ ಮಾಂಸಿಕ ಶರೀರವನ್ನು ಎದುರಿಸಲಿಕ್ಕದೆ, ಮತ್ತು ಯಾವುದು ಸರಿಯೊ ಅದನ್ನು ಮಾಡುವ ಈ ಹೋರಾಟವು ಅತ್ಯಂತ ತ್ರಾಸದಾಯಕವಾಗಬಹುದು. ನಮ್ಮ ಬಲಹೀನತೆಗಳ ವಿರುದ್ಧವಾದ ನಮ್ಮ ಈ ಹೋರಾಟವಾದರೊ, ನಮಗೆ ನಿರೀಕ್ಷೆ ಇಲ್ಲ ಎಂಬರ್ಥದಲ್ಲಲ್ಲ. ಈ ಹೋರಾಟದ ವಿಷಯ ಪೌಲನು ವ್ಯಥೆಪಟ್ಟಿದ್ದನು, ಅವನಂದದ್ದು: “ಇಂಥ ಮರಣಕ್ಕೊಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು? ಬಿಡಿಸುವವನು ಇದ್ದಾನೆ ಎಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮಾಪುರ 7:24, 25) ಯೇಸು ಕ್ರಿಸ್ತನ ಮೂಲಕವಾಗಿ ಮತ್ತು ಅವನು ಒದಗಿಸಿದ ವಿಮೋಚನೆಯ ಮೂಲಕವಾಗಿ, ನಾವು ಬಿಡಿಸಲ್ಪಟ್ಟೆವು.—ರೋಮಾಪುರ 5:19-21.
11 ಪರಿಪೂರ್ಣವಾಗಿ ಹೋರಾಟನಡಿಸಲು ನಮಗಿರುವ ಅಶಕ್ತತೆಯನ್ನು ಕ್ರಿಸ್ತನ ವಿಮೋಚನಾ ಯಜ್ಞವು ಶಕವ್ತನ್ನಾಗಿ ಮಾಡುತ್ತದೆ. ನಾವು ಈ ವಿಮೋಚನೆಯಲ್ಲಿ ಉಲ್ಲಾಸಪಡಲು ಸಾಧ್ಯವಿದೆ ಯಾಕಂದರೆ ಅದು ಒಂದು ಶುದ್ಧ ಮನಸ್ಸಾಕ್ಷಿಯನ್ನು ಮತ್ತು ನಮ್ಮ ಪಾಪಗಳ ಕ್ಷಮೆಯನ್ನು ಶಕ್ಯವನ್ನಾಗಿ ಮಾಡುತ್ತದೆ. ಇಬ್ರಿಯ 9:14ರಲ್ಲಿ, “ಕ್ರಿಸ್ತನ ಜೀವ ರಕ್ತವು ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ . . . ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ” ಎಂದು ಪೌಲನು ಹೇಳಿದ್ದಾನೆ. ಹೀಗೆ, ಕ್ರೈಸ್ತರ ಮನಸ್ಸಾಕ್ಷಿಗಳು ಶಾಪದಿಂದಾಗಿ ಮತ್ತು ದೋಷಭಾವದಿಂದಾಗಿ ಭಾರವಾಗಿರಬಾರದು. ಇದು, ಮತ್ತು ಇದರೊಂದಿಗೆ ನಮಗಿರುವ ನಿರೀಕ್ಷೆಯು ಕೂಡಿ, ಹರ್ಷಯುಕ್ತ ಸಂತೋಷಕ್ಕಾಗಿ ನಮಗೆ ಬಲವಾದ ಶಕ್ತಿಯನ್ನು ಒದಗಿಸುವುದು. (ಕೀರ್ತನೆ 103:8-14; ರೋಮಾಪುರ 8:1, 2, 32) ನಮ್ಮ ನಿರೀಕ್ಷೆಯ ಕುರಿತು ಧ್ಯಾನಿಸುತ್ತಾ ಇರುವುದರಿಂದ ನಾವೆಲ್ಲರೂ ನಮ್ಮ ಹೋರಾಟವನ್ನು ಸಾಫಲ್ಯದಿಂದ ನಡಿಸಲು ಪ್ರೋತ್ಸಾಹಿಸಲ್ಪಡುವೆವು.
ನಮ್ಮ ನಿರೀಕ್ಷೆಯನ್ನು ಒತ್ತಾಗಿ ಮನಸ್ಸಿನಲ್ಲಿಡುವುದು
12. ಯಾವ ನಿರೀಕ್ಷೆಯ ಕುರಿತು ಅಭಿಷಿಕ್ತ ಕ್ರೈಸ್ತರು ಧ್ಯಾನಿಸಬಲ್ಲರು?
12 ಆತ್ಮಾಭಿಷಿಕ್ತ ಉಳಿಕೆಯವರಿಗೆ ಮತ್ತು ಬೇರೆ ಕುರಿಗಳಿಗೆ ಇಬ್ಬರಿಗೂ ತಮ್ಮ “ರಕ್ಷಣೆಯ ನಿರೀಕ್ಷೆಯನ್ನು” ಮನಸ್ಸಿನಲ್ಲಿಡುವುದು, ಸುರಕ್ಷೆಯ ಶಿರಸ್ತ್ರಾಣದೋಪಾದಿ ಅದನ್ನು ಸದಾ ಧರಿಸುವುದು ಅತ್ಯಾವಶ್ಯಕವು. (1 ಥೆಸಲೊನೀಕ 5:8) ಅಭಿಷಿಕ್ತ ಕ್ರೈಸ್ತರು ಪರಲೋಕದಲ್ಲಿ ಅಮರತ್ವವನ್ನು ಪಡೆಯುವ ಮತ್ತು ಯೆಹೋವನ ಸನ್ನಿಧಾನಕ್ಕೇರುವ ಹಾಗೂ ಮಹಿಮಾಭರಿತ ಯೇಸು ಕ್ರಿಸ್ತನೊಂದಿಗೆ ಮತ್ತು ಅಪೊಸ್ತಲರೊಂದಿಗೆ ಮತ್ತು ಶತಮಾನಗಳಲ್ಲೆಲ್ಲಾ ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡ 1,44,000 ಮಂದಿಯಲ್ಲಿ ಬೇರೆ ಎಲ್ಲರೊಂದಿಗಿನ ವೈಯಕ್ತಿಕ ಸಹವಾಸವನ್ನು ಆನಂದಿಸುವ ಆ ಆಶ್ಚರ್ಯಕರ ಸೌಭಾಗ್ಯದ ಕುರಿತು ಧ್ಯಾನಮಾಡ ಸಾಧ್ಯವಿದೆ. ಎಂಥ ಅವರ್ಣನೀಯ ಮೌಲ್ಯದ ಸಹವಾಸವು ಅದಾಗಿರುವುದು!
13. ಇನ್ನೂ ಭೂಮಿಯಲ್ಲಿರುವ ಅಭಿಷಿಕ್ತರಿಗೆ ತಮ್ಮ ನಿರೀಕ್ಷೆಯ ಕುರಿತು ಹೇಗೆನಿಸುತ್ತದೆ?
13 ಭೂಮಿಯಲ್ಲಿ ಇನ್ನೂ ಇರುವ ಕೆಲವೆ ಅಭಿಷಿಕ್ತರಿಗೆ ತಮ್ಮ ರಾಜ್ಯದ ನಿರೀಕ್ಷೆಯ ಕುರಿತು ಹೇಗೆನಿಸುತ್ತದೆ? 1913 ರಲ್ಲಿ ದೀಕ್ಷಾಸ್ನಾನವಾದ ಒಬ್ಬರ ಮಾತುಗಳಿಂದ ಅದನ್ನು ಹೀಗೆ ಸಾರಾಂಶವಾಗಿ ತಿಳಿಸಬಹುದು: “ನಮ್ಮದು ಒಂದು ದೃಢ ನಿರೀಕ್ಷೆಯು, ಮತ್ತು ಅದು ಚಿಕ್ಕ ಮಂದೆಯ 1,44,000 ಮಂದಿಯಲ್ಲಿ ಪ್ರತಿ ಕೊನೆಯ ಸದಸ್ಯನ ತನಕ ನಮ್ಮ ಕಲ್ಪನೆಗೂ ಮೀರಿದ ಮಟ್ಟಿಗೆ ಪೂರ್ಣವಾಗಿ ನೆರವೇರುವದು. 1914 ರಲ್ಲಿ ಹಾಜರಿದ್ದ ಉಳಿಕೆಯವರಾದ ನಾವು, ಆಗ ಪರಲೋಕಕ್ಕೆ ಹೋಗುವೆವೆಂದು ಎಲ್ಲರೂ ನೆನಸಿದ್ದರೂ, ನಮ್ಮ ನಿರೀಕ್ಷೆಯ ಅದರ ಮೂಲ್ಯತೆಯ ಅರ್ಥವನ್ನು ಕಳಕೊಂಡಿಲ್ಲ. ನಾವಿನ್ನೂ ಅದಕ್ಕೆ ಎಂದಿನಂತೆ ದೃಢವಾಗಿ ನಿಂತಿರುತ್ತೇವೆ. ಮತ್ತು ಇನ್ನೂ ಹೆಚ್ಚು ಕಾಯಲಿರುವ ಆ ಸಂಗತಿಯನ್ನು ನಾವು ಇನ್ನಷ್ಟು ಹೆಚ್ಚು ಗಣ್ಯಮಾಡುತ್ತಿದ್ದೇವೆ. ಅದು ಕಾಯಲು ಪೂರಾ ಪಾತ್ರತೆ ಉಳ್ಳದ್ದು, ಇನ್ನೊಂದು ದಶಲಕ್ಷ ವರ್ಷ ಕಾಯಬೇಕಾದರೂ ಸರಿಯೆ. ನಾನು ನಮ್ಮ ನಿರೀಕ್ಷೆಯನ್ನು ಎಂದಿಗಿಂತಲೂ ಅಧಿಕ ಬೆಲೆಯುಳ್ಳದ್ದಾಗಿ ಪರಿಗಣಿಸುತ್ತೇನೆ ಮತ್ತು ಅದಕ್ಕಾಗಿ ಗಣ್ಯತೆ ಕಳಕೊಳ್ಳಲು ನಾನು ಎಂದೂ ಬಯಸಲಾರೆ. ಚಿಕ್ಕ ಹಿಂಡಿನ ನಿರೀಕ್ಷೆಯು ಈ ಅಶ್ವಾಸನೆಯನ್ನೂ ಕೊಡುತ್ತದೆ ಏನಂದರೆ ಬೇರೆ ಕುರಿಗಳ ಮಹಾ ಸಮೂಹದ ನಿರೀಕ್ಷೆಯು ಸಹಾ ಯಾವ ಸೋಲಿನ ಸಂಭವವೂ ಇಲ್ಲದೆ, ನಮ್ಮ ಭವ್ಯ ಕಲ್ಪನೆಗೂ ಮೀರಿದ ರೀತಿಯಲ್ಲಿ ನೆರವೇರಲಿದೆ. ಆದುದರಿಂದಲೆ ನಾವು ಈ ಕಡೆ ಗಳಿಗೆಯ ತನಕ ದೃಢವಾಗಿ ನಿಂತಿರುತ್ತೇವೆ, ಮತ್ತು ದೇವರು ತನ್ನ ‘ಅಮೂಲ್ಯವಾಗಿಯೂ ಉತ್ಕೃಷ್ಟವಾಗಿಯೂ ಇರುವ ವಾಗ್ದಾನಗಳಿಗೆ’ ಸತ್ಯವಂತನೆಂದು ಕಾರ್ಯತಃ ರುಜುಪಡಿಸುವ ತನಕ ದೃಢವಾಗಿಯೆ ನಿಂತಿರುವೆವು.”—2 ಪೇತ್ರ 1:4; ಅರಣ್ಯಕಾಂಡ 23:19; ರೋಮಾಪುರ 5:5.
ಪರದೈಸದ ನಿರೀಕ್ಷೆಯಲ್ಲಿ ಈಗ ಉಲ್ಲಾಸಿಸುವುದು
14. ಯಾವ ನಿರೀಕ್ಷೆಯನ್ನು ಮಹಾ ಸಮೂಹದವರು ಮನಸ್ಸಿನಲ್ಲಿಡುವ ಅಗತ್ಯವಿದೆ?
14 ನಂಬಿಕೆಯ ಇಂಥ ಹಿರಿಹಿಗ್ಗಿನ ವ್ಯಕ್ತಪಡಿಸುವಿಕೆಯು ಬೇರೆ ಕುರಿಗಳ ಮಹಾ ಸಮೂಹದವರಲ್ಲಿ ಉಲ್ಲಾಸಪಡುವದಕ್ಕೆ ಮಹಾ ಕಾರಣವನ್ನು ತುಂಬುತ್ತದೆ. (ಪ್ರಕಟನೆ 7:15, 16) ಅಂಥವರು ಹರ್ಮಗೆದೋನ್ದನ್ನು ಪಾರಾಗುವ ನಿರೀಕ್ಷೆಯನ್ನು ಮನಸ್ಸಿನಲ್ಲಿಡುವ ಅಗತ್ಯವಿದೆ. ಹೌದು, ದೇವರ ರಾಜ್ಯವು ಯೆಹೋವ ದೇವರ ವಿಶ್ವದ ಪರಮಾಧಿಕಾರವನ್ನು ನಿರ್ದೋಷೀಕರಿಸುವುದನ್ನು ಮತ್ತು ಮಹಾ ಸಂಕಟವನ್ನು ತರುವ ಮೂಲಕ ತನ್ನ ಮಹಿಮೆಯುಳ್ಳ ನಾಮವನ್ನು ಪವಿತ್ರೀಕರಿಸುವುದನ್ನು ಕಾಣಲು ಮುನ್ನೋಡಿರಿ. ಅದು ಯಾರಿಗೆ ಪಿಶಾಚನು ದೇವರಾಗಿದ್ದಾನೊ, ಆ ದುಷ್ಟ ಜನರೆಲ್ಲರನ್ನು ಭೂಮಿಯಿಂದ ತೆಗೆದು ಹಾಕುವುದು. ಆ ಮಹಾ ಸಂಕಟವನ್ನು ಪಾರಾಗುವುದು ಅದೆಷ್ಟು ಸಂತೋಷದ ಸಂಗತಿಯು!—ದಾನಿಯೇಲ 2:44; ಪ್ರಕಟನೆ 7:14.
15. (ಎ) ಯೇಸು ಭೂಮಿಯಲ್ಲಿರುವಾಗ ಯಾವ ವಾಸಿಕಾರಕ ಕೆಲಸವನ್ನು ಮಾಡಿದನು, ಮತ್ತು ಏಕೆ? (ಬಿ) ಹರ್ಮಗೆದ್ದೋನನ್ನು ಪಾರಾಗುವವರ ಆರೋಗ್ಯದ ಅಗತ್ಯತೆಗಳೇನಾಗಿರುವುದು, ಮತ್ತು ಅವರು ಪುನರುತ್ಥಾನವಾಗಿ ಬರುವವರಿಗಿಂತ ಬೇರೆಯಾಗಿರುವುದು ಹೇಗೆ?
15 ಮಹಾ ಸಮೂಹದ ಕುರಿತು ಪ್ರಕಟನೆ 7:17 ಹೇಳುವದು: “ಯಜ್ಞದ ಕುರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಈ ಪ್ರವಾದನೆಗೆ ಈಗ ಒಂದು ಆತ್ಮಿಕ ನೆರವೇರಿಕೆಯು ಇರುವುದಾದರೂ, ಹರ್ಮಗೆದೋನ್ದನ್ನು ಪಾರಾದವರು ಅದು ಅಕ್ಷರಶಃ ನೆರವೇರುವುದನ್ನು ಕಾಣುವರು. ಹೇಗೆ? ಒಳ್ಳೆದು, ಯೇಸು ಈ ಭೂಮಿಯಲ್ಲಿರುವಾಗ ಮಾಡಿದ್ದೇನು? ಅವನು ಅಂಗಹೀನರನ್ನು ವಾಸಿಮಾಡಿದನು, ಕುಂಟರು ನಡೆಯುವಂತೆ ಮಾಡಿದನು, ಕಿವುಡರ ಕಿವಿಗಳನ್ನು ಮತ್ತು ಕುರುಡರ ಕಣ್ಣುಗಳನ್ನು ತೆರೆದನು, ಕುಷ್ಠರೋಗವನ್ನು, ಪಕ್ಷವಾತವನ್ನು, “ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ” ವಾಸಿಮಾಡಿದನು. (ಮತ್ತಾಯ 9:35; 15:30, 31) ಕ್ರೈಸ್ತರಿಗೆ ಇಂದು ಬೇಕಾಗಿರುವುದು ಇದೇ ಅಲ್ಲವೆ? ಮಹಾ ಸಮೂಹದವರು ಹಳೆ ಲೋಕದ ನ್ಯೂನತೆಗಳನ್ನು ಮತ್ತು ದೌರ್ಬಲ್ಯಗಳನ್ನು ಹೊಸ ಲೋಕದೊಳಗೆ ಒಯ್ಯುವರು. ಆ ಕುರಿತು ಯಜ್ಞದ ಕುರಿಯಾದಾತನು ಏನನ್ನು ಮಾಡುವಂತೆ ನಾವು ಅಪೇಕ್ಷೆಪಡುತ್ತೇವೆ? ಹರ್ಮಗೆದೋನ್ದನ್ನು ಪಾರಾಗುವವರ ಅಗತ್ಯತೆಗಳು ಪುನರುತ್ಥಾನವಾಗಿ ಎದ್ದು ಬರುವವರ ಅಗತ್ಯತೆಗಳಿಗಿಂತ ತೀರಾ ಬೇರೆಯಾಗಿರುವವು. ಪುನರುತ್ಥಾನವಾಗಿ ಬರುವವರು, ಇನ್ನೂ ಮಾನವ ಪರಿಪೂರ್ಣತೆ ಪಡೆಯದಿದ್ದರೂ, ಪೂರ್ಣವೂ ಸ್ವಸ್ಥವೂ ಆರೋಗ್ಯಕರವೂ ಆದ ಶರೀರದಿಂದ ಪುನಃನಿರ್ಮಾಣವಾಗಿ ಬರುವ ಸಂಭವವಿದೆ. ಪುನರುತ್ಥಾನದ ಅದ್ಭುತದ ಕಾರಣ, ಅವರಿಗೆ ಆ ಮೇಲೆ ಹಿಂದಣ ಯಾವುದೇ ನ್ಯೂನತೆಗಳನ್ನು ಪರಿಹರಿಸಲು ಅದ್ಭುತ ವಾಸಿಮಾಡುವಿಕೆ ಬೇಕಾಗಿಲ್ಲ. ಇನ್ನೊಂದು ಕಡೆ, ಹರ್ಮಗೆದ್ದೋನನ್ನು ಪಾರಾಗುವ ಅವರ ಅಸದೃಶ ಅನುಭವದ ಕಾರಣ, ಮಹಾ ಸಮೂಹದ ಅನೇಕರಿಗೆ ಆ ಅದ್ಭುತ ವಾಸಿಮಾಡುವಿಕೆ ಬೇಕಾಗಿದೆ ಮತ್ತು ಅವರದನ್ನು ಪಡೆಯುವರು. ಹೀಗೆ ಪಾರಾಗುವಿಕೆಯನ್ನು ಮಾತ್ರವಲ್ಲ, ಅನಂತರ ಅದ್ಭುತಕರ ವಾಸಿಯನ್ನೂ ಅನುಭವಿಸುವ ಹರ್ಷಕರ ಪ್ರತೀಕ್ಷೆಯನ್ನು ಮಹಾ ಸಮೂಹದ ಉತ್ತೇಜನಕ್ಕಾಗಿ ಚಿತ್ರಿಸಲಿಕ್ಕಾಗಿಯೆ ಯೇಸುವಿನ ವಾಸಿಮಾಡುವಿಕೆಯು ಒಂದು ಮುಖ್ಯ ಸೂಚಕವಾಗಿತ್ತೆಂಬದು ವ್ಯಕ್ತ.
16. (ಎ) ಹರ್ಮಗೆದ್ದೋನ್ ಪಾರಾಗುವವರ ಅದ್ಭುತ ವಾಸಿಯು ಯಾವಾಗ ಸಂಭವಿಸಬಹುದು, ಯಾವ ಫಲಿತಾಂಶಗಳೊಂದಿಗೆ? (ಬಿ) ಸಹಸ್ರ ವರ್ಷಗಳ ಸಮಯದಲ್ಲಿ ಯಾವ ನಿರೀಕ್ಷೆಯಲ್ಲಿ ನಾವು ಉಲ್ಲಾಸಿಸುತ್ತಾ ಇರುವೆವು?
16 ಹರ್ಮಗೆದೋನ್ದನ್ನು ಪಾರಾಗುವವರಲ್ಲಿ ಅಂಥ ಅದ್ಭುತಕರ ವಾಸಿಮಾಡುವಿಕೆಯು ಹರ್ಮಗೆದೋನ್ದಿನ ನಂತರ ಬಲು ಬೇಗನೆ ಮತ್ತು ಪುನರುತ್ಥಾನಕ್ಕೆ ಸಾಕಷ್ಟು ಮುಂಚೆ ಸಂಭವಿಸುವುದು ನ್ಯಾಯಸಮ್ಮತ. (ಯೆಶಾಯ 33:24; 35:5, 6; ಪ್ರಕಟನೆ 21:4; ಮಾರ್ಕ 5:25-29ಕ್ಕೆ ಹೋಲಿಸಿ.) ಆಗ ಜನರು ಕನ್ನಡಕಗಳನ್ನು, ಊರುಗೋಲುಗಳನ್ನು, ಗಾಲಿಬಂಡಿಗಳನ್ನು, ಕೃತಕ ದಂತಪಂಕ್ತಿಗಳನ್ನು, ಶ್ರವಣ ಸಾಧನಗಳೇ ಮುಂತಾದವುಗಳನ್ನು ಬಿಸಾಡಿಬಿಡುವರು. ಇದು ಹರ್ಷಿಸುವುದಕ್ಕೆಂಥಾ ಮೂಲವು! ಯೇಸುವಿನಿಂದ ಆ ಆರಂಭದ ಪುನರಾರೋಗ್ಯದಾಯಕ ಕ್ರಿಯೆಯು, ಹೊಸ ಭೂಮಿಯ ಅಸ್ತಿವಾರವಾಗಿ ಪಾತ್ರವಹಿಸುವ ಹರ್ಮಗೆದ್ದೋನ್ ಪಾರಾಗುವವರಿಗೆ ಎಷ್ಟು ಒಪ್ಪುವಂಥಾದಾಗಿರುವುದು! ದೌರ್ಬಲ್ಯಗೊಳಿಸುವ ಬೇನೆಗಳು ಇಲ್ಲದೆ ಹೋಗುವುದರಿಂದ ಈ ಪಾರಾಗುವವರು ತಮ್ಮ ಮುಂದಿರುವ ಸಹಸ್ರಾರು ವರ್ಷಗಳ ಆಶ್ಚರ್ಯಕರ ಚಟುವಟಿಕೆಯನ್ನು ಆತುರದಿಂದ ಮುನ್ನೋಡುತ್ತಾ, ಹಳೆ ಲೋಕವು ಅವರ ಮೇಲೆ ತಂದಿರಬಹುದಾದ ಬಾಧೆಗಳಿಂದ ನಿಧಾನಿತರಾಗದೆ, ಉತ್ಸಾಹದಿಂದ ಮುಂದೊತ್ತ ಶಕ್ತರಾಗುವರು. ಹೌದು, ಹರ್ಮಗೆದ್ದೋನಿನ ಅನಂತರವೂ, ಮಹಾ ಸಮೂಹವು ಸಹಸ್ರ ವರ್ಷದಂತ್ಯದಲ್ಲಿ ಪರಿಪೂರ್ಣ ಮಾನವ ಜೀವವನ್ನು ಪಡೆಯುವ ಈ ಆಶ್ಚರ್ಯಕರ ನಿರೀಕ್ಷೆಯಲ್ಲಿ ಉಲ್ಲಾಸಿಸುತ್ತಾ ಮುಂದರಿಯುವುದು. ಸಹಸ್ರ ವರ್ಷಗಳ ಕಾಲದಲ್ಲೆಲ್ಲಾ ಆ ಸಂತೋಷದ ಗುರಿಯನ್ನು ಮುಟ್ಟುವ ತಮ್ಮ ನಿರೀಕ್ಷೆಯಲ್ಲಿ ಅವರು ಉಲ್ಲಾಸಿಸುತ್ತಾ ಇರುವರು.
17. ಪರದೈಸವನ್ನು ಪುನಃಸ್ಥಾಪಿಸುವ ಕೆಲಸವು ಮುಂದುವರಿಯುವಾಗ ಯಾವ ಸಂತೋಷಗಳು ಅಲ್ಲಿರುವವು?
17 ಅದು ನಿಮ್ಮ ನಿರೀಕ್ಷೆಯಾಗಿದ್ದಲ್ಲಿ, ಭೂಮಿಯ ಮೇಲೆ ಪರದೈಸವನ್ನು ಪುನಃಸ್ಥಾಪಿಸುವುದರಲ್ಲಿ ಭಾಗಿಗಳಾಗುವ ಸಂತೋಷವನ್ನು ಸಹಾ ಧ್ಯಾನಿಸಿರಿ. (ಲೂಕ 23:42, 43) ಹರ್ಮಗೆದ್ದೋನನ್ನು ಪಾರಾಗುವವರು ಭೂಮಿಯನ್ನು ಶುಚಿಮಾಡುವುದರಲ್ಲಿ ಸಹಾಯ ಮಾಡುವರು ಮತ್ತು ಹೀಗೆ ಮೃತರು ಪುನರುತ್ಥಾನವಾಗುವಲ್ಲಿ ಹಿತಕರವಾದ ಸ್ಥಳಗಳನ್ನು ಒದಗಿಸುವರೆಂಬದು ನಿಸ್ಸಂಶಯ. ಮೃತರಾಗಿರುವ ನಮ್ಮ ಸ್ವಂತ ಪ್ರಿಯ ಜನರೂ ಸೇರಿರುವ, ಈ ಪುನರುತ್ಥಾನದಲ್ಲಿ ಎದ್ದು ಬರುವವರಿಗಾಗಿ ಸ್ವಾಗತ ಸಮಾರಂಭಗಳು ಶವಸಂಸ್ಕಾರವನ್ನು ಸ್ಥಾನಪಲ್ಲಟ ಮಾಡಬಹುದು. ಗತ ಶತಮಾನಗಳ ನಂಬಿಗಸ್ತ ಪುರುಷ ಮತ್ತು ಸ್ತ್ರೀಯರೊಂದಿಗೆ ನಮಗೆ ದೊರಕಬಲ್ಲ ಬಲವರ್ಧಕ ಸಹವಾಸದ ಕುರಿತಾಗಿಯೂ ಯೋಚಿಸಿರಿ! ವಿಶೇಷವಾಗಿ ಯಾರೊಂದಿಗೆ ಮಾತಾಡಲು ನೀವು ಇಷ್ಟಪಡುವಿರಿ? ಹೇಬೆಲನೊಂದಿಗೊ, ಹಾನೋಕ, ನೋಹ, ಯೋಬ, ಅಬ್ರಹಾಮ, ಸಾರ, ಇಸಾಕ, ಯಾಕೋಬ, ಯೋಸೇಫ, ಮೋಶೆ, ಯೆಹೋಶುವ, ರಾಹಾಬ, ದೆಬೋರ, ಸಂಸೋನ, ದಾವೀದ, ಎಲೀಯ, ಎಲೀಷ, ಯೆರೆಮೀಯ, ಯೆಹೆಜ್ಕೇಲ, ದಾನಿಯೇಲ ಅಥವಾ ಸ್ನಾನಿಕನಾದ ಯೋಹಾನನೊಂದಿಗೊ? ಒಳ್ಳೆದು, ಈ ಹರ್ಷಕರ ಪ್ರತೀಕ್ಷೆಯು ಸಹಾ ನಿಮ್ಮ ನಿರೀಕ್ಷೆಯ ಒಂದು ಭಾಗವಾಗಿದೆ. ನೀವು ಅವರೊಂದಿಗೆ ಸಂಭಾಷಿಸ ಶಕ್ತರಾಗುವಿರಿ, ಅವರಿಂದ ಕಲಿಯಬಲ್ಲಿರಿ, ಮತ್ತು ಈ ಇಡೀ ಭೂಮಿಯನ್ನು ಪರದೈಸವಾಗಿ ಮಾಡುವುದರಲ್ಲಿ ಅವರೊಂದಿಗೆ ಜತೆಗೂಡಿ ಕೆಲಸ ಮಾಡಬಲ್ಲಿರಿ.
18. ಯಾವ ಅಧಿಕ ಸಂತೋಷಗಳನ್ನು ನಾವು ಆಲೋಚಿಸ ಸಾಧ್ಯವಿದೆ?
18 ನಮ್ಮ ಭೂಮಿಯು ಯೆಹೋವನು ಅದನ್ನು ನಿರ್ಮಿಸಿದ ರೀತಿಯಲ್ಲಿ ಅದರ ಪರಿಪೂರ್ಣ ಜೀವಿಪರಿಸ್ಥಿತಿ ಸಮತೆಗೆ ಪುನಃಸ್ಥಾಪಿಸಲ್ಪಡುವುದರೊಂದಿಗೆ ಪುಷ್ಟಿಕರವಾದ ಆಹಾರ, ಶುದ್ಧನೀರು, ಶುಚಿಯಾದ ಗಾಳಿಯ ಕುರಿತೂ ಯೋಚಿಸಿರಿ. ಆಗ ಜೀವಿತವು ಪರಿಪೂರ್ಣತೆಯ ಕೇವಲ ನಿಷ್ಕ್ರಿಯ ಆನಂದವಲ್ಲ, ಬದಲಿಗೆ ಸಂತೋಷಕರ ಚಟುವಟಿಕೆಗಳಲ್ಲಿ ಅರ್ಥಭರಿತವಾದ ಮತ್ತು ಕ್ರಿಯಾಶೀಲ ಭಾಗವಹಿಸುವಿಕೆ ಆಗಿರುವುದು. ಪಾತಕ, ಸ್ವಾಭಿಮಾನ, ಅಸೂಯೆ, ಕಚ್ಚಾಟಗಳಿಂದ ಮುಕ್ತರಾದ—ಎಲ್ಲರಿಂದಲೂ ಆತ್ಮದ ಫಲಗಳು ಅಭ್ಯಾಸಿಸಲ್ಪಡುವ ಮತ್ತು ಉತ್ಪಾದಿಸಲ್ಪಡುವ ಒಂದು ಸಹೋದರತ್ವವುಳ್ಳ ಜನರ ಒಂದು ಜಗದ್ವ್ಯಾಪಕ ಸಮಾಜದ ಕುರಿತು ತುಸು ಧ್ಯಾನಿಸಿರಿ. ಅದೆಷ್ಟು ರೋಮಾಂಚಕರ!—ಗಲಾತ್ಯ 5:22, 23.
ಜೀವಿತವನ್ನು ಜೀವಿಸಲರ್ಹವಾಗಿ ಮಾಡುವ ನಿರೀಕ್ಷೆ
19. (ಎ) ರೋಮಾಪುರ 12:12ರಲ್ಲಿ ತಿಳಿಸಿರುವ ಸಂತೋಷವು ಯಾವಾಗ ಅನುಭವಿಸಲ್ಪಡುವದು? (ಬಿ) ಜೀವಿತದ ಹೊರೆಗಳು ನಮ್ಮ ನಿರೀಕ್ಷೆಯನ್ನು ಪಕ್ಕಕ್ಕೆ ತಳ್ಳಲು ಬಿಡದಂತೆ ನಾವೇಕೆ ನಿರ್ಧಾರ ಮಾಡಬೇಕು?
19 ಪೂರೈಸಲ್ಪಟ್ಟ ಅಪೇಕ್ಷೆಗಳು ಇನ್ನು ಮುಂದೆ ನಿರೀಕ್ಷೆಗಳಾಗಿರುವುದಿಲ್ಲ, ಆದ್ದರಿಂದ ರೋಮಾಪುರ 12:12 ರಲ್ಲಿ ಪೌಲನಿಂದ ಉತ್ತೇಜಿಸಲ್ಪಟ್ಟ ಉಲ್ಲಾಸ ಪಡುವಿಕೆಯು ಈಗಲೇ ಅನುಭವಿಸಲ್ಪಡಬೇಕು. (ರೋಮಾಪುರ 8:24) ದೇವರ ರಾಜ್ಯವು ತರಲಿರುವ ಭವಿಷ್ಯತ್ತಿನ ಆಶೀರ್ವಾದಗಳ ಕುರಿತು ಕೇವಲ ಆಲೋಚಿಸುವದೆ ನಾವು ಆ ನಿರೀಕ್ಷೆಯಲ್ಲಿ ಈಗ ಉಲ್ಲಾಸಪಡುವ ಒಂದು ಕಾರಣವು. ಆದ್ದರಿಂದ ಈ ಭ್ರಷ್ಟ ಲೋಕದಲ್ಲಿನ ಜೀವಿತದ ಭಾರಗಳು ನಿಮ್ಮ ಮಹಿಮೆಯುಳ್ಳ ನಿರೀಕ್ಷೆಯನ್ನು ಪಕ್ಕಕ್ಕೆ ತಳ್ಳುವಂತೆ ಬಿಟ್ಟುಕೊಡದಿರ್ರಿ. ಬೇಸರದಿಂದ ದಣಿದು ಹೋಗಿ ನಿಮ್ಮ ಮುಂದಿರುವ ನಿರೀಕ್ಷೆಯನ್ನು ಕಳಕೊಳ್ಳದಿರ್ರಿ. (ಇಬ್ರಿಯ 12:3) ಕ್ರೈಸ್ತ ಮಾರ್ಗವನ್ನು ತೊರೆಯುವದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಲಾರವು. ಜೀವಿತದ ಎಲ್ಲಾ ಹೊರೆಗಳಿಂದಾಗಿ ಈಗ ಒಬ್ಬನು ದೇವರ ಸೇವೆಯನ್ನು ತೊರೆದುಬಿಟ್ಟರೆ, ಅವನಿನ್ನೂ ಆ ಹೊರೆಗಳೊಂದಿಗೆ ಸಿಕ್ಕಿರುವನು; ಆದರೆ ನಿರೀಕ್ಷೆಯನ್ನು ಮಾತ್ರ ಕಳಕೊಳ್ಳುವನು ಮತ್ತು ಹೀಗೆ, ಮುಂದಿರುವ ಆಶ್ಚರ್ಯಕರವಾದ ಪ್ರತೀಕ್ಷೆಗಳಲ್ಲಿ ಉಲ್ಲಾಸಿಸುವ ಸಂಭಾವ್ಯತೆಯನ್ನು ನಷ್ಟಪಡಿಸುತ್ತಾನೆ.
20. ರಾಜ್ಯ ನಿರೀಕ್ಷೆಯು ಅದನ್ನು ಸ್ವೀಕರಿಸುವವರ ಮೇಲೆ ಯಾವ ಪರಿಣಾಮ ಬೀರುವುದು, ಮತ್ತು ಏಕೆ?
20 ಯೆಹೋವನ ಜನರಿಗೆ ಸಂತೋಷದ ಜೀವಿತಗಳನ್ನು ನಡಿಸಲು ಸಕಾರಣವದೆ. ಅವರ ಭವ್ಯವಾದ ಪ್ರೇರಕ ನಿರೀಕ್ಷೆಗಳು ಜೀವಿತಾರ್ಹವಾಗಿವೆ. ಮತ್ತು ಅವರು ಈ ನಿರೀಕ್ಷೆಯನ್ನು ತಮಗಾಗಿ ತಾವೇ ಇಟ್ಟುಕೊಳ್ಳುವದಿಲ್ಲ. ಇಲ್ಲ, ಅವರು ಅದನ್ನು ಇತರರೊಂದಿಗೆ ಪಾಲಿಗರಾಗಲು ಸಂತೋಷಪಡುತ್ತಾರೆ. (2 ಕೊರಿಂಥ 3:12) ಹೀಗೆ ರಾಜ್ಯ ನಿರೀಕ್ಷೆಯನ್ನು ಸ್ವೀಕರಿಸುವ ಜನರು ಆತ್ಮ ವಿಶ್ವಾಸವುಳ್ಳ ಜನರಾಗಿರುವರು, ಮತ್ತು ದೇವರ ಸುವಾರ್ತೆಯನ್ನು ತಿಳಿಸುವ ಮೂಲಕ ಇತರರನ್ನು ಉತ್ತೇಜಿಸಲು ಪ್ರಯತ್ನಿಸುತ್ತಾರೆ. ಇದು ಆ ಸಂದೇಶವನ್ನು ಸ್ವೀಕರಿಸುವವರ ಜೀವಿತಗಳನ್ನು, ಸಾಮಾನ್ಯ ಮಾನವ ಕುಲಕ್ಕೆ ಕೊಡಲ್ಪಟ್ಟವುಗಳಲ್ಲಿ ಅತ್ಯಂತ ಆಶ್ಚರ್ಯಕರ ನಿರೀಕ್ಷೆಯಾದ— ಪರದೈಸವನ್ನು ಭೂಮಿಗೆ ಪುನಃಸ್ಥಾಪಿಸುವ ರಾಜ್ಯ ನಿರೀಕ್ಷೆಯಿಂದ ತುಂಬಿಸುತ್ತದೆ. ಜನರು ಅದನ್ನು ಸ್ವೀಕರಿಸದಿದ್ದರೆ, ನಾವಿನ್ನೂ ಉಲ್ಲಾಸಿಸುತ್ತಾ ಮುಂದರಿಯುವೆವು ಯಾಕಂದರೆ ನಮಗೆ ಆ ನಿರೀಕ್ಷೆ ಇದೆ. ಕಿವಿಗೊಡದೆ ಇರುವವರು ನಷ್ಟಹೊಂದುವರು; ನಾವಲ್ಲ.—2 ಕೊರಿಂಥ 4:3, 4.
21. ಯಾವುದು ಸಮೀಪದಲ್ಲಿ ಇದೆ ಮತ್ತು ನಾವು ನಮ್ಮ ನಿರೀಕ್ಷೆಗೆ ಹೇಗೆ ಬೆಲೆಕಟ್ಟಬೇಕು?
21 “ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ” ಎಂದು ದೇವರು ವಾಗ್ದಾನಿಸಿದ್ದಾನೆ. (ಪ್ರಕಟನೆ 21:5) ಆ ಹೊಸ ಲೋಕವು ತನ್ನೆಲ್ಲಾ ಮೈಮರಸುವ ಮತ್ತು ಅನಂತ ಆಶೀರ್ವಾದಗಳೊಂದಿಗೆ ಈಗ ಸಮೀಪದಲ್ಲೇ ಇದೆ. ನಮ್ಮ ನಿರೀಕ್ಷೆಯು—ಪರಲೋಕದಲ್ಲಿ ಅಥವಾ ಪರದೈಸ ಭೂಮಿಯ ಮೇಲಿನ ಜೀವಿತಕ್ಕಾಗಿರಲಿ—ಅತ್ಯಮೂಲ್ಯವಾದದ್ದು. ಅದನ್ನು ದೃಢವಾಗಿ ಹಿಡಿದುಕೊಳ್ಳಿರಿ. ಅದನ್ನು ಈ ಕಠಿಣವಾದ ಕಡೇ ದಿನಗಳಲ್ಲಿ, ಎಂದಿಗಿಂತಲೂ ಹೆಚ್ಚಾಗಿ, “ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಯೋಗ್ಯವೂ ಸ್ಥಿರವಾದದ್ದೂ” ಆಗಿ ವೀಕ್ಷಿಸಿರಿ. “ಶಾಶ್ವತಗಿರಿಯೂ” ನಿತ್ಯ ಬಂಡೆಯೂ ಆದ ಯೆಹೋವನಲ್ಲಿ ನಮ್ಮ ನಿರೀಕ್ಷೆಯನ್ನು ಆಸರೆಯಾಗಿಡುವ ಮೂಲಕ ನಮ್ಮ ಮುಂದಿರುವ “ನಿರೀಕ್ಷೆಯಲ್ಲಿ ಉಲ್ಲಾಸಪಡಲು” ಈಗ ನಮಗೆ ನಿಶ್ಚಯವಾಗಿಯೂ ಬಲವಾದ ಮತ್ತು ಆತ್ಯಾನಂದಕರವಾದ ಕಾರಣವಿದೆ.—ಇಬ್ರಿಯ 6:19; ಯೆಶಾಯ 26:4, ದಿ ಆ್ಯಂಪಿಫ್ಲೈಡ್ ಬೈಬಲ್. (w91 12/15)
[ಅಧ್ಯಯನ ಪ್ರಶ್ನೆಗಳು]
a ಜಗದ್ವ್ಯಾಪಕವಾಗಿ ಯೆಹೋವನ ಸಾಕ್ಷಿಗಳ 1992 ರ ವರ್ಷವಚನವು ಇದಾಗಿದೆ: “ನಿರೀಕ್ಷೆಯಲ್ಲಿ ಉಲ್ಲಾಸವಾಗಿರ್ರಿ. . . . ಪ್ರಾರ್ಥನೆಯಲ್ಲಿ ನಿರತರಾಗಿರಿ.”—ರೋಮಾಪುರ 12:12.
ಪುನರ್ವಿಮರ್ಶೆಗೆ ಪ್ರಶ್ನೆಗಳು
▫ ಮಾನವ ಕುಲದ ಮಹಾ ನಿರೀಕ್ಷೆಯು ಯಾವುದು?
▫ ನಿಜ ಸಂತೋಷವು ಯಾವುದು?
▫ ಹರ್ಮಗೆದ್ದೋನ್ ಪಾರಾಗುವವರ ಅದ್ಭುತಕರ ವಾಸಿಯು ಯಾವಾಗ ಸಂಭವಿಸ ಸಾಧ್ಯವಿದೆ?
▫ ನಮ್ಮ ಜೀವಿತದ ಹೊರೆಗಳು ನಮ್ಮ ನಿರೀಕ್ಷೆಯನ್ನು ಪಕ್ಕಕ್ಕೆ ತಳ್ಳಲು ನಾವೇಕೆ ಬಿಡಬಾರದು?
▫ ಹೊಸ ಲೋಕದಲ್ಲಿ ನೀವು ಯಾವ ಸಂತೋಷಗಳನ್ನು ಮುನ್ನೋಡುವಿರಿ?
[ಪುಟ 9 ರಲ್ಲಿರುವ ಚಿತ್ರ]
ಯೇಸು ನಡಿಸಿದ ಈ ರೀತಿಯ ವಾಸಿಮಾಡುವಿಕೆಗಳನ್ನು ಕಾಣುವಾಗ ಅದು ನಿಮ್ಮ ಹೃದಯವನ್ನು ಸಂತೋಷದಿಂದ ತುಂಬದೇ?
[ಪುಟ 10 ರಲ್ಲಿರುವ ಚಿತ್ರ]
ರಾಜ್ಯದಲ್ಲಿ ಉಲ್ಲಾಸಿಸುವವರು ತಮ್ಮ ನಿರೀಕ್ಷೆಯನ್ನು ಹಂಚುವ ಮೂಲಕ ಇತರರನ್ನು ಉತ್ತೇಜಿಸುತ್ತಾರೆ