ನಾವು ಯೆಹೋವನಿಗೆ ಹೇಗೆ ಹಿಂದೆ ಕೊಡಬಲ್ಲೆವು?
ಯೆಹೋವ ದೇವರು ಕೊಡುವುದರಲ್ಲಿ ಅತ್ಯುತ್ತಮ ಮಾದರಿಯನ್ನು ಒದಗಿಸುತ್ತಾನೆ. ಆತನು ಮಾನವ ಕುಲದವರೆಲ್ಲರಿಗೆ “ಜೀ, ಶ್ವಾಸ ಮುಂತಾದೆಲವ್ಲನ್ನು” ದಯಪಾಲಿಸಿದ್ದಾನೆ. (ಅಪೊಸ್ತಲರ ಕೃತ್ಯಗಳು 17:25) ದೇವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ. (ಮತ್ತಾಯ 5:45) ನಿಶ್ಚಯವಾಗಿಯೂ ಯೆಹೋವನು, ‘ಆಕಾಶದಿಂದ ನಮಗೆ ಮಳೆಯನ್ನು ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಮ್ಮ ಮನಸ್ಸುಗಳನ್ನು [ಹೃದಯಗಳನ್ನು, NW ] ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ ಬಂದವನು.’ (ಅಪೊಸ್ತಲರ ಕೃತ್ಯಗಳು 14:15-17) ಏಕೆ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳು ಮೇಲಣಿಂದ ಸಕಲ ವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ”!—ಯಾಕೋಬ 1:17.
ದೇವರ ಈ ಐಹಿಕ ದಾನಗಳಲ್ಲದೆ, ಆತ್ಮಿಕ ಸತ್ಯ ಮತ್ತು ಬೆಳಕನ್ನೂ ಆತನು ಕಳುಹಿಸುತ್ತಾನೆ. (ಕೀರ್ತನೆ 43:3) “ನಂಬಿಗಸ್ತನೂ ವಿವೇಕಿಯೂ ಆದ ಆಳಿನ” ಮೂಲಕ ಆತನು ಹೊತ್ತು ಹೊತ್ತಿಗೆ ಒದಗಿಸುವ ಆತ್ಮಿಕ ಆಹಾರದಿಂದ ಯೆಹೋವನ ನಿಷ್ಠೆಯುಳ್ಳ ಸೇವಕರು ಹೇರಳವಾಗಿ ಆಶೀರ್ವದಿಸಲ್ಪಟ್ಟಿರುತ್ತಾರೆ. (ಮತ್ತಾಯ 24:45-47) ದೇವರ ಆತ್ಮಿಕ ಒದಗಿಸುವಿಕೆಗಳ ಮೂಲಕ ನಾವು ಪ್ರಯೋಜನ ಪಡೆಯಬಹುದು ಯಾಕೆಂದರೆ ಆತನು ಪಾಪಿಗಳೂ ಮೃತ್ಯರೂ ಆದ ಮಾನವರಿಗೆ ಆತನೊಂದಿಗೆ ಸಮಾಧಾನವಾಗುವುದನ್ನು ಸಾಧ್ಯಮಾಡಿದ್ದಾನೆ. ಹೇಗೆ? ಅನೇಕರಿಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಟ್ಟ ಆತನ ಮಗನಾದ ಯೇಸು ಕ್ರಿಸ್ತನ ಮರಣದ ಮೂಲಕವೇ. (ಮತ್ತಾಯ 20:28; ರೋಮಾಪುರ 5:8-12) ಪ್ರೀತಿಯುಳ್ಳ ದೇವರಾದ ಯೆಹೋವನಿಂದ ಎಂಥ ವರದಾನವು!—ಯೋಹಾನ 3:16.
ಏನನ್ನಾದರೂ ಹಿಂದೆ ಕೊಡಶಕ್ಯವೊ?
ವಿಮೋಚನಾ ಯಜ್ಞವು ನೀಡಲ್ಪಟ್ಟ ಶತಮಾನಗಳ ಮುಂಚೆ, ದೇವದತ್ತ ಕರುಣೆ, ಬಿಡುಗಡೆ ಮತ್ತು ಸಹಾಯವನ್ನು ಒಬ್ಬ ಪ್ರೇರಿತ ಕೀರ್ತನೆಗಾರನು ಎಷ್ಟು ಗಣ್ಯ ಮಾಡಿದ್ದನೆಂದರೆ, ಅವನಂದದ್ದು: “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ? ರಕ್ಷಣಾ ಪಾತ್ರೆಯನ್ನು ತೆಗೆದುಕೊಂಡು ಯೆಹೋವ ನಾಮವನ್ನು ಪ್ರಖ್ಯಾತಪಡಿಸುವೆನು. ಯೆಹೋವನಿಗೆ ಹೊತ್ತ ಹರಕೆಗಳನ್ನು ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು.”—ಕೀರ್ತನೆ 116:12-14.
ನಾವು ಯೆಹೋವನಿಗೆ ಪೂರ್ಣ ಹೃದಯದಿಂದ ಸಮರ್ಪಿತರಾಗಿದ್ದರೆ, ಆತನ ಹೆಸರನ್ನು ನಂಬಿಕೆಯಿಂದ ಹೇಳಿಕೊಳ್ಳುವೆವು ಮತ್ತು ಆತನಿಗೆ ಮಾಡಿದ ಹರಕೆಗಳನ್ನು ಸಲ್ಲಿಸುವೆವು. ಯೆಹೋವನ ಸಾಕ್ಷಿಗಳೋಪಾದಿ ನಾವು, ಎಲ್ಲಾ ಸಮಯದಲ್ಲಿ ಆತನ ಗುಣಗಾನ ಮಾಡುತ್ತಾ ಆತನನ್ನು ಕೀರ್ತಿಸುವೆವು ಮತ್ತು ಆತನ ರಾಜ್ಯದ ಸಂದೇಶವನ್ನು ಸಾರುವೆವು. (ಕೀರ್ತನೆ 145:1, 2, 10-13; ಮತ್ತಾಯ 24:14) ಆದರೆ ಸಮಸ್ತವೂ ಯೆಹೋವನದ್ದೆ ಆಗಿರುವುದರಿಂದ ನಾವು ಆತನನ್ನು ಸಂಪದ್ಯುಕ್ತನಾಗಿ ಮಾಡಲಾರೆವು ಯಾ ಆತನು ನಮಗೆ ಮಾಡಿರುವ ಎಲ್ಲಾ ಉಪಕಾರಗಳಿಗಾಗಿ ಹಿಂದೆ ಕೊಡಲಾರೆವು.—1 ಪೂರ್ವಕಾಲ 29:14-17.
ರಾಜ್ಯಾಭಿರುಚಿಗಳ ವೃದ್ಧಿಗಾಗಿ ದಾನಗಳನ್ನು ಕೊಡುವದು ಯೆಹೋವನಿಗೆ ಹಿಂದೆ ಕೊಡುವ ಅಥವಾ ಆತನನ್ನು ಸಂಪದ್ಯುಕ್ತನಾಗಿ ಮಾಡುವ ಒಂದು ವಿಧಾನವಲ್ಲ. ಆದರೂ ಅಂಥ ಕೊಡುವಿಕೆಗಳು ದೇವರೆಡೆಗೆ ನಮ್ಮ ಪ್ರೀತಿಯನ್ನು ಪ್ರದರ್ಶಿಸುವ ಸಂದರ್ಭಗಳನ್ನು ಕೊಡುತ್ತವೆ. ಸ್ವಾರ್ಥ ಪ್ರೇರಣೆಗಳಿಂದಾಗಿ ಅಥವಾ ಬಹಿರಂಗ ಪ್ರಕಟನೆ ಯಾ ಸ್ತುತಿಗಾಗಿ ಕೊಡುವ ಬದಲಾಗಿ ಒಂದು ಔದಾರ್ಯದ ಆತ್ಮದಿಂದ ಮತ್ತು ಸತ್ಯ ಆರಾಧನೆಯ ವೃದ್ಧಿಗಾಗಿ ಕೊಡಲ್ಪಡುವ ಕಾಣಿಕೆಯು, ಕೊಡುವವನಿಗೆ ಸಂತೋಷವನ್ನು ಮತ್ತು ಯೆಹೋವನ ಆಶೀರ್ವಾದವನ್ನು ತರುತ್ತದೆ. (ಮತ್ತಾಯ 6:1, 4; ಅಪೊಸ್ತಲರ ಕೃತ್ಯಗಳು 20:35) ಸತ್ಯಾರಾಧನೆಗಾಗಿ ಮತ್ತು ಅರ್ಹರಾದವರಿಗೆ ಸಹಾಯ ಕೊಡುವದಕ್ಕಾಗಿ ಒಬ್ಬ ವ್ಯಕ್ತಿಯು ತನ್ನ ಐಹಿಕ ಸ್ವತ್ತುಗಳಿಂದ ಕ್ರಮವಾಗಿ ಏನನ್ನಾದರೂ ಬದಿಗಿಟ್ಟಲ್ಲಿ, ಅಂಥ ಕೊಡುವಿಕೆಯಲ್ಲಿ ಮತ್ತು ಅದರಿಂದ ದೊರೆಯುವ ಸಂತೋಷದಲ್ಲಿ ಪಾಲಿಗನಾಗುವ ಆಶ್ವಾಸನೆಯಿದೆ. (1 ಕೊರಿಂಥ 16:1, 2) ಇದನ್ನು ದಶಮಾಂಶ ಕೊಡುವ ಮೂಲಕ ಮಾಡಬೇಕೊ?
ನೀವು ದಶಮಾಂಶ ಕೊಡಬೇಕೊ?
ಯೆಹೋವನು ತನ್ನ ಪ್ರವಾದಿ ಮಲಾಕಿಯನ ಮೂಲಕ ಹೇಳಿದ್ದು: “ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾಗದಷ್ಟು ಸುವರಗಳನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ.” (ಮಲಾಕಿಯ 3:10) ಇನ್ನೊಂದು ಭಾಷಾಂತರವು ಓದುವುದು: “ಇಡೀ ದಶಮಾಂಶವನ್ನು ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ.”—ಎನ್ ಅಮೆರಿಕನ್ ಟ್ರಾನ್ಸ್ಲೇಷನ್.
ದಶಮಾಂಶವು ಒಂದು ವಸ್ತುವಿನ ಹತ್ತನೆಯ ಒಂದಂಶ. ಅದು ಕಂದಾಯವಾಗಿ ಕೊಡಲ್ಪಡುವ ಯಾ ಸಲ್ಲಿಸಲ್ಪಡುವ 10 ಪ್ರತಿಶತವಾಗಿದೆ. ದಶಮಾಂಶ ಕೊಡುವಿಕೆಯು ವಿಶೇಷವಾಗಿ ಧಾರ್ಮಿಕ ಉದ್ದೇಶಗಳಿಗಾಗಿ ಇದೆ. ಒಬ್ಬನ ಆದಾಯದ ಹತ್ತನೆಯ ಒಂದಂಶವನ್ನು ಆರಾಧನೆಯ ಪ್ರವರ್ಧನೆಗಾಗಿ ಕೊಡುವದು ಎಂದು ಅದರರ್ಥ.
ಪೂರ್ವಜನಾದ ಅಬ್ರಹಾಮ (ಅಬ್ರಾಮ)ನು, ಕೆದೂರ್ಲಗೋಮರ ಮತ್ತು ಅವನ ಮಿತ್ರರಾಜರನ್ನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ರಾಜ-ಯಾಜಕನಾಗಿದ್ದ ಸಾಲೇಮಿನ ಮೆಲ್ಕೇಚೆದಕನಿಗೆ ಕೊಟ್ಟಿದ್ದನು. (ಆದಿಕಾಂಡ 14:18-20; ಇಬ್ರಿಯ 7:4-10) ತದನಂತರ, ಯಾಕೋಬನೂ ತನ್ನ ಲೌಕಿಕ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುವದಾಗಿ ಹರಕೆ ಮಾಡಿಕೊಂಡನು. (ಅದಿಕಾಂಡ 28:20-22) ಪ್ರತಿಯೊಂದು ಸಂದರ್ಭದಲ್ಲಿ, ಈ ಹತ್ತರಲ್ಲೊಂದು ಪಾಲನ್ನು ಕೊಡುವದು ಸ್ವಯಂಪ್ರೇರಿತವಾಗಿತ್ತು, ಯಾಕೆಂದರೆ ಆ ಆರಂಭದ ಇಬ್ರಿಯರಿಗೆ ದಶಮಾಂಶಗಳನ್ನು ಕೊಡಬೇಕೆಂದು ಬದ್ಧಪಡಿಸುವ ನಿಯಮಗಳಿರಲಿಲ್ಲ.
ನಿಯಮಶಾಸ್ತ್ರದ ಕೆಳಗೆ ದಶಮಾಂಶ ಕೊಡುವುದು
ಯೆಹೋವನ ಜನರೋಪಾದಿ ಇಸ್ರಾಯೇಲ್ಯರಿಗೆ ದಶಮಾಂಶದ ನಿಯಮಗಳು ಕೊಡಲ್ಪಟ್ಟವು. ಇದರಲ್ಲಿ ವಾರ್ಷಿಕ ಆದಾಯದ ಹತ್ತರಲ್ಲಿ ಎರಡು ಪಾಲು ಕೂಡಿತ್ತೆಂದು ತೋರುತ್ತದೆ, ಆದರೂ ವರ್ಷದಲ್ಲಿ ಒಂದೇ ಒಂದು ದಶಮಾಂಶ ಕೊಡುವಿಕೆ ಇತ್ತೆಂದು ಕೆಲವು ಪಂಡಿತರು ಅಭಿಪ್ರಾಯ ಪಡುತ್ತಾರೆ. ಸಬ್ಬತ್ ವರ್ಷದಲ್ಲಿ ಯಾವ ದಶಮಾಂಶವೂ ಸಲ್ಲಿಸಲ್ಪಡುತ್ತಿರಲಿಲ್ಲ, ಯಾಕೆಂದರೆ ಆ ಅವಧಿಯಲ್ಲಿ ಯಾವ ಆದಾಯದ ನಿರೀಕ್ಷಣೆಯೂ ಇರಲಿಲ್ಲ. (ಯಾಜಕಕಾಂಡ 25:1-12) ದಶಮಾಂಶಗಳಲ್ಲದೆ ದೇವರಿಗೆ ಬೆಳೆಯ ಪ್ರಥಮ ಫಲಗಳೂ ಅರ್ಪಿಸಲ್ಪಡುತ್ತಿದ್ದವು.—ವಿಮೋಚನಕಾಂಡ 23:19.
ಹೊಲದ ಬೆಳೆಯಲ್ಲಿ ಮತ್ತು ತೋಟದ ಹಣ್ಣುಗಳಲ್ಲಿ ಮತ್ತು ದನ ಕುರಿಗಳಲ್ಲಿ ವೃದ್ಧಿಯು ಆದಂತೆ ದಶಮಾಂಶವನ್ನು ಪವಿತ್ರಾಲಯಕ್ಕೆ ತಂದು ಲೇವ್ಯರಿಗೆ ಕೊಡಬೇಕಿತ್ತು ಯಾಕೆಂದರೆ ದೇಶದಲ್ಲಿ ಯಾವ ಸ್ವಾಸ್ಥ್ಯವೂ ಅವರ ಪಾಲಿಗಿರಲಿಲ್ಲ. ಸರದಿಯಲ್ಲಿ ಅವರು, ತಾವು ಏನನ್ನು ಪಡೆದರೊ ಅದರ ಹತ್ತನೆಯ ಒಂದಂಶವನ್ನು ಆರೋನನ ಯಾಜಕತ್ವದ ಬೆಂಬಲಕ್ಕಾಗಿ ಕೊಡುತ್ತಿದ್ದರು. ದಶಮಾಂಶ ಕೊಡುವ ಮುಂಚೆ ತೆನೆಯನ್ನು ದವಸವಾಗಿ ಬಡೆದು ಮತ್ತು ದ್ರಾಕ್ಷೆಬಳ್ಳಿ ಮತ್ತು ಆಲಿವ್ ಮರದ ಹಣ್ಣನ್ನು ದ್ರಾಕ್ಷಾರಸ ಮತ್ತು ಎಣ್ಣೆಯಾಗಿ ಮಾಡಿ ಕೊಡುತ್ತಿದ್ದರೆಂದು ವ್ಯಕ್ತವಾಗುತ್ತದೆ. ಇಸ್ರಾಯೇಲ್ಯನೊಬ್ಬನು ಹೊಲದ ಬೆಳೆಯ ಬದಲಾಗಿ ಹಣವನ್ನು ಕೊಡಲು ಇಚ್ಛಿಸಿದರೆ, ಅದರ ಬೆಲೆಯ ಐದನೆಯ ಒಂದು ಪಾಲನ್ನು ಹೆಚ್ಚಾಗಿ ಸೇರಿಸಿ ಕೊಡಬೇಕಿತ್ತು.—ಯಾಜಕಕಾಂಡ 27:30-33; ಅರಣ್ಯಕಾಂಡ 18:21-30.
ಇನ್ನೊಂದು ದಶಮಾಂಶವು ಸಹಾ ಬದಿಗಿಡಲ್ಪಡುತ್ತಿದ್ದಂತೆ ಕಾಣುತ್ತದೆ. ಜನರು ಹಬ್ಬಗಳಿಗಾಗಿ ಕೂಡಿಬರುವಾಗ ಅದು ಸಾಮಾನ್ಯವಾಗಿ ಒಂದು ಕುಟುಂಬದಿಂದ ಉಪಯೋಗಿಸಲ್ಪಡುತ್ತಿತ್ತು. ಆದರೆ ಈ ದಶಮಾಂಶವನ್ನು ಸರಾಗವಾಗಿ ಒಯ್ಯಲು ಯೆರೂಸಲೇಮಿಗೆ ತುಂಬಾ ದೂರವಿದ್ದರೆ ಆಗೇನು? ಆಗ ದವಸವನ್ನು, ಹೊಸ ದ್ರಾಕ್ಷಾರಸವನ್ನು ಮತ್ತು ಪಶುಗಳನ್ನು ಸುಲಭವಾಗಿ ಒಯ್ಯಲಾಗುವ ಹಣವಾಗಿ ಮಾರ್ಪಡಿಸಲಾಗುತ್ತಿತ್ತು. (ಧರ್ಮೋಪದೇಶಕಾಂಡ 12:4-18; 14:22-27) ಏಳು ವರ್ಷಗಳ ಸಬ್ಬತ್ ಕ್ರಮದ ಮೂರನೆಯ ಮತ್ತು ಆರನೆಯ ವರ್ಷಗಳಂತ್ಯದಲ್ಲಿ ದಶಮಾಂಶವನ್ನು ಲೇವ್ಯರಿಗಾಗಿ, ಪರದೇಶಸ್ಥರಿಗಾಗಿ, ವಿಧವೆಯರಿಗಾಗಿ, ತಂದೆಯಿಲ್ಲದ ಮಕ್ಕಳಿಗಾಗಿ ಬದಿಗಿಡಲಾಗುತ್ತಿತ್ತು.—ಧರ್ಮೋಪದೇಶಕಾಂಡ 14:28, 29; 26:12.
ದಶಮಾಂಶ ಕೊಡಲು ತಪ್ಪಿದ್ದಲ್ಲಿ ನಿಯಮ ಶಾಸ್ತ್ರದ ಕೆಳಗೆ ಯಾವ ಶಿಕ್ಷೆಯೂ ಇರಲಿಲ್ಲ. ಬದಲಾಗಿ ಯೆಹೋವನು ತನ್ನ ಜನರನ್ನು ದಶಮಾಂಶಗಳನ್ನು ಒದಗಿಸುವ ಬಲವಾದ ನೈತಿಕ ಹಂಗಿನ ಕೆಳಗೆ ಇಟ್ಟಿದ್ದನು. ತಾವು ದಶಮಾಂಶವನ್ನು ಪೂರ್ತಿಯಾಗಿ ಸಲ್ಲಿಸಿದ್ದೇವೆಂದು ಅವರಿಗೆ ಕೆಲವೊಮ್ಮೆ ಆತನ ಮುಂದೆ ಪ್ರಕಟವಾಗಿ ಹೇಳಲಿಕ್ಕೂ ಇತ್ತು. (ಧರ್ಮೋಪದೇಶಕಾಂಡ 26:13-15) ತಪ್ಪಾಗಿ ಏನನ್ನಾದರೂ ಉಳಿಸಿಕೊಂಡಿದ್ದರೆ ಅದು ದೇವರಿಂದ ಕದ್ದದ್ದಾಗಿ ನೋಡಲ್ಪಡುತ್ತಿತ್ತು.—ಮಲಾಕಿಯ 3:7-9.
ದಶಮಾಂಶ ಕೊಡುವಿಕೆಯು ಒಂದು ಹೊರೆಯಾಗಿದ್ದ ಏರ್ಪಾಡಲ್ಲ. ವಾಸ್ತವದಲ್ಲಿ ಇಸ್ರಾಯೇಲ್ಯರು ಈ ನಿಯಮಗಳನ್ನು ಪಾಲಿಸಿದಾಗ ಅಧಿಕ ಸಮೃದ್ಧಿಯನ್ನು ಪಡೆದಿದ್ದರು. ದಶಮಾಂಶವು ಸತ್ಯಾರಾಧನೆಯನ್ನು ಪ್ರವರ್ಧಿಸಿತ್ತು, ಅದಕ್ಕಾಗಿ ಐಹಿಕ ಒದಗಿಸುವಿಕೆಯನ್ನು ಮಾಡುವದು ಹೇಗೆಂಬ ವಿಷಯವಾಗಿ ಅಯುಕ್ತ ಸರ್ವಭಾರವನ್ನು ಹಾಕಬೇಕಿರಲಿಲ್ಲ. ಆದಕಾರಣ, ದಶಮಾಂಶದ ಏರ್ಪಾಡು ಇಸ್ರಾಯೇಲ್ಯರೆಲ್ಲರ ಹಿತಕ್ಕಾಗಿ ಕಾರ್ಯ ನಡಿಸಿತು. ಆದರೆ ಕ್ರೈಸ್ತರಿಗೆ ದಶಮಾಂಶ ಕೊಡಲಿಕ್ಕಿದೆಯೆ?
ಕ್ರೈಸ್ತರು ದಶಮಾಂಶ ಕೊಡಬೇಕೊ?
ಕೆಲವು ಕಾಲದ ತನಕ ಕ್ರೈಸ್ತ ಪ್ರಪಂಚದ ಕ್ಷೇತ್ರದಲ್ಲಿ ದಶಮಾಂಶ ಕೊಡುವದು ಸರ್ವಸಾಮಾನ್ಯವಾಗಿತ್ತು. ದಿ ಎನ್ಸೈಕ್ಲೊಪೀಡಿಯ ಅಮೆರಿಕಾನ ಹೇಳುವದು: “ಅದು . . . ಕ್ರಮೇಣ 6ನೆಯ ಶತಮಾನದೊಳಗೆ ಸರ್ವ ಸಾಮಾನ್ಯವಾಗಿ ಪರಿಣಮಿಸಿತು. 567ರ ಕೌನ್ಸಿಲ್ ಆಫ್ ಟೂರ್ಸ್ ಮತ್ತು 585ರ ಎರಡನೆಯ ಕೌನ್ಸಿಲ್ ಆಫ್ ಮ್ಯಾಕನ್ನಲ್ಲಿ ದಶಮಾಂಶವನ್ನು ಪ್ರತಿಪಾದಿಸಲಾಯಿತು. . . . ದುರುಪಯೋಗವು ಸಾಮಾನ್ಯವಾಗ ತೊಡಗಿದವು ವಿಶೇಷವಾಗಿ ದಶಮಾಂಶವನ್ನು ಎತ್ತುವ ಹಕ್ಕು ಹೆಚ್ಚಾಗಿ ಸಾಮಾನ್ಯ ಜನರಿಗೆ ವಹಿಸಲ್ಪಟ್ಟಾಗ ಯಾ ಮಾರಲ್ಪಟ್ಟಾಗ. ಪೋಪ್ ಗ್ರೆಗರಿ VII ನಿಂದಾರಂಭಿಸಿ ಈ ಪದ್ಧತಿಯು ನ್ಯಾಯಬಾಹಿರವೆಂದು ಘೋಷಿಸಲ್ಪಟ್ಟಿತು. ಅಗ ಹೆಚ್ಚಿನ ಜನಸಾಮಾನ್ಯರು ತಮ್ಮ ದಶಮಾಂಶ ಎತ್ತುವ ಹಕ್ಕನ್ನು ಕ್ರೈಸ್ತ ಮಠಗಳಿಗೆ ಮತ್ತು ಕತೀಡ್ರಲ್ ಪಾದ್ರಿಮಂಡಲಿಗಳಿಗೆ ನೀಡಿದರು. ಮತಸುಧಾರಣೆಯು ದಶಮಾಂಶವನ್ನು ರದ್ದುಮಾಡಲಿಲ್ಲ, ಮತ್ತು ಆ ಪದ್ಧತಿಯು ರೋಮನ್ ಕ್ಯಾಥ್ಲಿಕ್ ಚರ್ಚು ಮತ್ತು ಪ್ರಾಟೆಸ್ಟಂಟ್ ದೇಶಗಳಲ್ಲಿ ಮುಂದುವರಿದಿತ್ತು.” ಕ್ರಮೇಣ ದಶಮಾಂಶವು ನಿಲ್ಲಿಸಲ್ಪಟ್ಟಿತು ಅಥವಾ ಹಲವಾರು ದೇಶಗಳಲ್ಲಿ ಸ್ಥಲಾಂತರವನ್ನು ಹೊಂದಿತು, ಮತ್ತು ಈಗ ಕೆಲವೇ ಧರ್ಮಗಳು ಅದನ್ನು ಪಾಲಿಸುತ್ತಿವೆ.
ಹೀಗಿರಲಾಗಿ, ಕ್ರೈಸ್ತರು ದಶಮಾಂಶ ಕೊಡುವಂತೆ ಕೇಳಲ್ಪಡುತ್ತಾರೊ? ಅಲೆಕ್ಸಾಂಡರ್ ಕ್ರುಡೆನ್ ತನ್ನ ಬೈಬಲ್ ಕನ್ಕಾರ್ಡೆನ್ಸ್ನಲ್ಲಿ ಹೇಳಿದ್ದು: “ಈ ದಶಮಾಂಶದ ವಿಷಯದಲ್ಲಿ ನಮ್ಮ ಕರ್ತನಾಗಲಿ ಆತನ ಅಪೊಸ್ತಲರಾಗಲಿ ಏನನ್ನೂ ಆಜ್ಞಾಪಿಸಿರುವುದಿಲ್ಲ.” ಕ್ರೈಸ್ತರು ದಶಮಾಂಶ ಕೊಡುವಂತೆ ಆಜ್ಞಾಪಿತರಾಗಿಲ್ಲ, ನಿಶ್ಚಯ. ದೇವರು ತಾನೇ ಮೋಶೆಯ ಧರ್ಮಶಾಸ್ತ್ರವನ್ನು, ಅದರ ದಶಮಾಂಶಿಕ ಏರ್ಪಾಡುಗಳೊಂದಿಗೆ, ಯೇಸುವಿನ ಯಾತನೆಯ ಕಂಭಕ್ಕೆ ಜಡಿದ ಮೂಲಕ ಅಂತ್ಯಗೊಳಿಸಿದ್ದನು. (ರೋಮಾಪುರ 6:14; ಕೊಲೊಸ್ಸೆಯ 2:13, 14) ಆದ್ದರಿಂದ, ಸಭಾ ಖರ್ಚುಗಳನ್ನು ನಿರ್ವಹಿಸಲು ಇಂತಿಷ್ಟು ಹಣವನ್ನು ಕೊಡಬೇಕೆಂದು ಅವಶ್ಯಪಡಿಸುವ ಬದಲಾಗಿ, ಕ್ರೈಸ್ತರು ಸ್ವಯಂ ಪ್ರೇರಿತರಾಗಿ ಕಾಣಿಕೆಗಳನ್ನು ಕೊಡಬೇಕು.
ನಿನ್ನ ಬೆಲೆಯುಳ್ಳ ವಸ್ತುಗಳಿಂದ ಯೆಹೋವನನ್ನು ಗೌರವಿಸು
ಒಬ್ಬ ಕ್ರೈಸ್ತನು ಸ್ವಯಂಪ್ರೇರಿತನಾಗಿ ಸತ್ಯಾರಾಧನೆಯ ಪ್ರವರ್ಧನೆಗಾಗಿ ತನ್ನ ಆದಾಯದ ಹತ್ತನೆಯ ಒಂದಂಶವನ್ನು ಕೊಡಲು ಆರಿಸುತ್ತಾನಾದರೆ, ಅಂಥಾ ದಾನವನ್ನು ಅವನು ಮಾಡಲು ಯಾವ ಶಾಸ್ತ್ರೀಯ ಆಕ್ಷೇಪವೂ ಇರುವುದಿಲ್ಲ. ತನ್ನ ಕಾಣಿಕೆಯನ್ನು ಜತೆಗೂಡಿಸಿದ ಪತ್ರದಲ್ಲಿ, ಪಪುವ ನ್ಯೂಗಿನಿಯ ಒಬ್ಬ 15-ವಯಸ್ಸಿನ ಬಾಲಕನು ಬರೆದದ್ದು: “ನಾನು ಚಿಕ್ಕವನಿದ್ದಾಗ ನನ್ನ ತಂದೆ ನನಗೆ, ‘ನೀನು ಕೆಲಸ ಮಾಡ ತೊಡಗುವಾಗ, ಪ್ರಥಮ ಫಲವನ್ನು ಯೆಹೋವನಿಗೆ ಕೊಡಬೇಕು.’ ಎಂದು ಹೇಳುತ್ತಿದ್ದರು. ಯೆಹೋವನ ಗೌರವಕ್ಕಾಗಿ ಆತನಿಗೆ ಪ್ರಥಮ ಫಲಗಳನ್ನು ಸಲ್ಲಿಸಬೇಕೆಂದು ಜ್ಞಾನೋಕ್ತಿ 3:1, 9ರ ಮಾತುಗಳು ಹೇಳುವುದು ನನಗೆ ನೆನಪಿದೆ. ಆದುದರಿಂದ, ಅದನ್ನು ಮಾಡಲು ನಾನು ವಚನಕೊಟ್ಟೆ, ಮತ್ತು ಆ ವಚನವನ್ನು ನಾನು ಪೂರೈಸಬೇಕು. ರಾಜ್ಯದ ಕಾರ್ಯಕ್ಕಾಗಿ ನೆರವಾಗುವಂತೆ ಈ ಹಣವನ್ನು ಕಳುಹಿಸಲು ನಾನು ಬಹು ಸಂತೋಷಿಸುತ್ತೇನೆ.” ಅಂಥ ಒಂದು ವಚನವನ್ನು ಕೊಡುವಂತೆ ಬೈಬಲು ಕ್ರೈಸ್ತರನ್ನು ಅವಶ್ಯಪಡಿಸುವುದಿಲ್ಲ. ಆದರೂ ಉದಾರವಾಗಿ ದಾನಮಾಡುವುದು, ಸತ್ಯಾರಾಧನೆಯನ್ನು ವೃದ್ಧಿಸುವುದಲ್ಲಿ ತೀವ್ರಾಸಕ್ತಿಯನ್ನು ಪ್ರದರ್ಶಿಸುವ ಒಂದು ಉತ್ತಮ ಮಾರ್ಗವಾಗಿದೆ.
ಒಬ್ಬ ಕ್ರೈಸ್ತನು ಯೆಹೋವನ ಆರಾಧನೆಯ ಪ್ರವರ್ಧನೆಗಾಗಿ ಮಾಡುವ ದಾನಗಳ ಮೇಲೆ ಯಾವ ವಿಶಿಷ್ಟ ಸೀಮಿತವನ್ನೂ ಇಡದಿರಲು ಆರಿಸಿಕೊಳ್ಳಬಹುದು. ದೃಷ್ಟಾಂತ: ಯೆಹೋವನ ಸಾಕ್ಷಿಗಳ ಒಂದು ಸಮ್ಮೇಳನದಲ್ಲಿ ಇಬ್ಬರು ವೃದ್ಧ ಸಹೋದರಿಯರು ರಾಜ್ಯಕಾರ್ಯಕ್ಕೆ ಮಾಡಬಹುದಾದ ದಾನಗಳ ಕುರಿತು ಚರ್ಚಿಸುತ್ತಿದ್ದರು. ಸಮ್ಮೇಳನ ಕ್ಷೇತ್ರದಲ್ಲಿ ಊಟ ಪಡೆಯುವ ವಿಷಯದಲ್ಲಿ, ಅವರಲ್ಲಿ 87 ವಯಸ್ಸಿನ ಒಬ್ಬ ಸಹೋದರಿ, ತಾನು ದಾನ ಕೊಡಲು ಸಾಧ್ಯವಾಗುವಂತೆ ಅದರ ಬೆಲೆಯೆಷ್ಟಾಗಬಹುದೆಂದು ವಿಚಾರಿಸಿದಳು. ಆಗ 90 ವಯಸ್ಸಿನ ಆ ಇನ್ನೊಬ್ಬ ಸಹೋದರಿ ಅಂದದ್ದು: ‘ಅದೆಷ್ಟಕ್ಕೆ ಅರ್ಹವೆಂದು ನೀನು ತಿಳಿಯುತ್ತಿಯೊ ಅಷ್ಟನ್ನು—ಮತ್ತು ಸ್ವಲ್ಪ ಹೆಚ್ಚನ್ನು ಕೊಟ್ಟುಬಿಡು.’ ಈ ವಯಸ್ಕ ಸಹೋದರಿ ಎಂಥ ಉತ್ತಮ ಮನೋಭಾವ ಪ್ರದರ್ಶಿಸಿದಳು!
ಯೆಹೋವನ ಜನರು ತಮ್ಮೆಲ್ಲವನ್ನು ಆತನಿಗೆ ಸಮರ್ಪಿಸಿರುವುದರಿಂದ, ಸತ್ಯಾರಾಧನೆಯ ಬೆಂಬಲಕ್ಕಾಗಿ ಸಂತೋಷದಿಂದ ಹಣ ದಾನಗಳನ್ನು ಮತ್ತು ಇತರ ಕಾಣಿಕೆಗಳನ್ನು ಕೊಡುತ್ತಾರೆ. (2 ಕೊರಿಂಥ 8:12 ಹೋಲಿಸಿ.) ವಾಸ್ತವದಲ್ಲಿ, ಕ್ರಿಸ್ತೀಯ ಕೊಡುವಿಕೆಯ ವಿಧಾನವು ಯೆಹೋವನ ಆರಾಧನೆಗಾಗಿ ಆಳವಾದ ಗಣ್ಯತೆಯನ್ನು ಪ್ರದರ್ಶಿಸುವದಕ್ಕೆ ಸಂದರ್ಭಗಳನ್ನು ಕೊಡುತ್ತದೆ. ಅಂಥ ಕೊಡುವಿಕೆಯು ದಶಮಾಂಶಕ್ಕೆ, ಹತ್ತನೆಯ ಒಂದು ಪಾಲಿಗೆ ನಿರ್ಬಂಧಿತವಲ್ಲ, ರಾಜ್ಯಾಭಿರುಚಿಗಳ ವೃದ್ಧಿಗಾಗಿ ವ್ಯಕ್ತಿಯು ಹೆಚ್ಚನ್ನು ಕೊಡುವಂತೆ ಪ್ರೇರಿಸಲ್ಪಡುವ ಸಂದರ್ಭಗಳೂ ಅಲ್ಲಿರಬಹುದು.—ಮತ್ತಾಯ 6:33.
ಅಪೊಸ್ತಲ ಪೌಲನು ಹೇಳಿದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು. ಯಾಕೆಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಸತ್ಯಾರಾಧನೆಯ ಬೆಂಬಲಕ್ಕಾಗಿ ನೀವು ಸಂತೋಷದಿಂದ ಮತ್ತು ಉದಾರವಾಗಿ ಕೊಡುವದಾದರೆ, ನಿಮಗೆ ಶುಭವಾಗುವದು, ಯಾಕೆಂದರೆ ಒಂದು ಸುಜ್ಞ ಜ್ಞಾನೋಕ್ತಿ ಅನ್ನುವದು: “ನಿನ್ನ ಆದಾಯದಿಂದಲೂ (ಬೆಲೆಯುಳ್ಳ ವಸ್ತುಗಳಿಂದ, NW) ಬೆಳೆಯ ಪ್ರಥಮ ಫಲದಿಂದಲೂ ಯೆಹೋವನನ್ನು ಸನ್ಮಾನಿಸು. ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿತುಳುಕುವದು.”—ಜ್ಞಾನೋಕ್ತಿ 3:9, 10.
ಮಹೋನ್ನತ ದೇವರನ್ನು ನಾವು ಸಂಪದ್ಯುಕ್ತಗೊಳಿಸ ಶಕ್ತರಲ್ಲ. ಬೆಳ್ಳಿ ಬಂಗಾರಗಳೆಲ್ಲವು, ಸಾವಿರಾರು ಬೆಟ್ಟಗಳ ಮೇಲಿರುವ ಸರ್ವಮೃಗಗಳು, ಸಕಲ ಬೆಲೆಭರಿತ ವಸ್ತುಗಳು ಆತನವೇ. (ಕೀರ್ತನೆ 50:10-12) ದೇವರು ನಮಗೆ ಮಾಡಿರುವ ಪ್ರಯೋಜನಗಳಿಗಾಗಿ ನಾವೆಂದೂ ಹಿಂದೆ ಕೊಡಶಕ್ತರಲ್ಲ. ಆದರೆ ನಾವಾತನಿಗಾಗಿ ಮತ್ತು ಆತನ ಸ್ತುತಿಗಾಗಿ ಪವಿತ್ರ ಸೇವೆಯನ್ನು ಸಲ್ಲಿಸುವ ಸುಯೋಗಕ್ಕಾಗಿ ನಮ್ಮ ಆಳವಾದ ಗಣ್ಯತೆಯನ್ನು ತೋರಿಸಬಲ್ಲೆವು. ಮತ್ತು ಶುದ್ಧಾರಾಧನೆಯ ಪ್ರವರ್ಧನೆಗಾಗಿ ಮತ್ತು ಪ್ರೀತಿಯ ಮತ್ತು ಔದಾರ್ಯ ದೇವರಾದ ಯೆಹೋವನ ಗೌರವಕ್ಕಾಗಿ ಯಾರು ಉದಾರವಾಗಿ ಕೊಡುತ್ತಾರೋ ಅವರ ಮೇಲೆ ಹೇರಳವಾದ ಆಶೀರ್ವಾದಗಳು ಸುರಿಸಲ್ಪಡುವವು ಎಂಬ ನಿಶ್ಚಯತೆ ನಮಗಿರ ಸಾಧ್ಯವಿದೆ.—2 ಕೊರಿಂಥ 9:11. (w91 12/1)
[ಪುಟ 30 ರಲ್ಲಿರುವ ಚೌಕ]
ಕೆಲವರು ರಾಜ್ಯ ಕಾರ್ಯಕ್ಕೆ ದಾನ ನೀಡುವ ವಿಧ
▫ ಜಗದ್ವ್ಯಾಪಕ ಕಾರ್ಯಕ್ಕಾಗಿ ಕಾಣಿಕೆಗಳು: ಅನೇಕರು ಒಂದು ಮೊಬಲಗನ್ನು ಬದಿಗಿಟ್ಟು ಅಥವಾ ಆಯವ್ಯಯ ಪಟ್ಟಿ ಮಾಡಿ, ಈ ಗುರುತುಪಟ್ಟಿಯ ಪೆಟ್ಟಿಗೆಗಳಿಗೆ ಹಾಕುತ್ತಾರೆ: “ಸೊಸೈಟಿಯ ಜಗದ್ವ್ಯಾಪಕ ಕಾರ್ಯಕ್ಕೋಸ್ಕರ ಕಾಣಿಕೆಗಳು—ಮತ್ತಾಯ 24:14.” ಪ್ರತಿ ತಿಂಗಳು ಸಭೆಗಳು ಈ ಮೊಬಲಗನ್ನು ವಾಚ್ಟವರ್ ಸೊಸೈಟಿಯ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
▫ ಕೊಡುಗೆಗಳು: ಸ್ವ-ಇಷ್ಟದಿಂದ ಮಾಡುವ ಹಣದಾನವನ್ನು ನೇರವಾಗಿ, Watch Tower Bible and Tract Society of India, H-58 Old Khandala Road, Lonavla, 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಯುಳ್ಳ ವಸ್ತುಗಳನ್ನೂ ದಾನ ಕೊಡಬಹುದು. ಇಂಥ ದಾನಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಒಂದು ಚಿಕ್ಕ ಪತ್ರವು ಜತೆಗೂಡಿರಬೇಕು.
▫ ಷರತ್ತು-ದಾನದ ಏರ್ಪಾಡು: ವಾಚ್ ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನೂ ಕೊಡಬಹುದು, ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆಕೊಡುವ ಷರತ್ತಿನೊಂದಿಗೆ.
▫ ವಿಮೆ: ಜೀವವಿಮಾ ಪಾಲಿಸಿ ಅಥವಾ ನಿವೃತ್ತಿ ⁄ ಪೆನ್ಶನ್ ಯೋಜನೆಯಲ್ಲಿ ವಾಚ್ ಟವರ್ ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಬಹುದು. ಇಂಥ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದು.
▫ ಬ್ಯಾಂಕ್ ಅಕೌಂಟ್ಗಳು: ಬ್ಯಾಂಕ್ ಅಕೌಂಟ್ಗಳು, ಡಿಪಾಸಿಟ್ ಸರ್ಟಿಫಿಕೇಟ್ಗಳು ಅಥವಾ ವೈಯಕ್ತಿಕ ನಿವೃತ್ತಿ ಅಕೌಂಟ್ಗಳನ್ನು ಸ್ಥಳೀಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂಥ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸಬೇಕು.
▫ ಸ್ಟಾಕ್ ಮತ್ತು ಬಾಂಡ್: ಸಾಕ್ಟ್ ಮತ್ತ ಬಾಂಡ್ಗಳನ್ನು ನೇರವಾದ ದಾನಗಳಾಗಿ ಇಲ್ಲವೆ ಆದಾಯವು ದಾನಿಗೆ ಸಲ್ಲುತ್ತಾ ಇರುವಂಥ ಒಂದು ಏರ್ಪಾಡಿನೊಂದಿಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
▫ ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ದಾನವಾಗಿ ಅಥವಾ ದಾನಿಯು ಅವನ ⁄ ಅವಳ ಜೀವಮಾನಕಾಲ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
▫ ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ದವಾಗಿ ನಿರ್ವಹಿಸಿದ ಇಚ್ಛಾ-ಪತ್ರಗಳ ಮೂಲಕವಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿ ಇವರಿಗೆ ಬಿಟ್ಟುಬಿಡಬಹುದು ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಒಪ್ಪಿಗೆ-ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನಕಾರಿಯಾದ ಒಂದು ಟ್ರಸ್ಟ್ ನಿರ್ದಿಷ್ಟ ತೆರಿಗೆ ಸವಲತ್ತನ್ನು ಒದಗಿಸಬಲ್ಲದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆಪತ್ರದ ನಕಲುಪ್ರತಿಯನ್ನು ಸೊಸೈಟಿಗೆ ಕಳುಹಿಸಬೇಕು.
ಇಂಥ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, Watch Tower Bible and Tract Society of India, H-58 Old Khandala Road, Lonavla, 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.