ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
ಯೆಹೋವ ದೇವರು ಸುಳ್ಳು ಹೇಳುವುದಿಲ್ಲ. (ತೀತ 1:2; ಇಬ್ರಿಯ 6:18) ಆದದರಿಂದ, ಆತನ ವಾಕ್ಯವಾದ ಬೈಬಲಿನ ಪ್ರವಾದನೆಗಳು, ನಂಬಲರ್ಹವೂ ಸತ್ಯವೂ ಆಗಿರುತ್ತವೆ. ಅವು ನಿಶ್ಚಯವಾಗಿಯೂ ನೆರವೇರಲಿವೆ.
ಈ ದೈವ ಪ್ರೇರಿತವಾದ ಪ್ರವಾದನೆಗಳಲ್ಲಿ ಹಿಬ್ರೂ ಪ್ರವಾದಿ ಮೋಶೆಯಿಂದ ದಾಖಲೆಯಾದ ಮೆಸ್ಸೀಯನ ಕುರಿತ ಪ್ರವಾದನೆಯು ಒಂದಾಗಿದೆ. ಯೆಹೋವನನ್ನು ಉಲ್ಲೇಖಿಸುತ್ತಾ, ಮೋಶೆಯು ಹೇಳಿದ್ದು: “ಇವರ ಸ್ವದೇಶದವರಲ್ಲಿ ನಿನ್ನಂಥ [ಮೋಶೆಯಂಥ] ಪ್ರವಾದಿಯನ್ನು ಅವರಿಗೋಸ್ಕರ [ಇಸ್ರಾಯೇಲ್ಯರಿಗೆ] ಏರ್ಪಡಿಸುವೆನು. ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.”—ಧರ್ಮೋಪದೇಶಕಾಂಡ 18:17, 18.
ಅಪೊಸ್ತಲ ಪೇತ್ರನು ಈ ಪ್ರವಾದನೆಯನ್ನು ಯೇಸು ಕ್ರಿಸ್ತನಿಗೆ ಅನ್ವಯಿಸುತ್ತಾ, ಬರೆದದ್ದು: “ಮೋಶೆಯು ಹೇಳಿದ್ದೇನಂದರೆ—ದೇವರಾದ ಯೆಹೋವನು ನನ್ನನ್ನು ಏರ್ಪಡಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸಿಕೊಡುವನು, ಆತನು ನಿಮಗೆ ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು.” (ಅಪೊಸ್ತಲರ ಕೃತ್ಯಗಳು 3:22, NW) ವಾಸ್ತವದಲ್ಲಿ, ಯೇಸು ತಾನೇ ಹೇಳಿದ್ದು: “ಅವನು ನನ್ನ ವಿಷಯದಲ್ಲಿ ಬರೆದನು; ಆದದರಿಂದ ನೀವು ಮೋಶೆಯ ಮಾತನ್ನು ನಂಬುವವರಾಗಿದ್ದರೆ ನನ್ನ ಮಾತನ್ನೂ ನಂಬುತ್ತಿದ್ದಿರಿ.” (ಯೋಹಾನ 5:46) ಯಾವ ರೀತಿಯಲ್ಲಿ ಮೋಶೆ ಮತ್ತು ಯೇಸು ಹೋಲಿಕೆಯುಳ್ಳವರಾಗಿದ್ದರು?
ಆರಂಭದ ಜೀವನಕ್ರಮದಿಂದಲೇ ಸಾಮ್ಯತೆ
ಮೋಶೆ ಮತ್ತು ಯೇಸು ಇಬ್ಬರೂ ಚಿಕ್ಕಂದಿನಲ್ಲೆ ಗಂಡು ಕೂಸುಗಳಾಗಿರುವಾಗ ಸಂಹಾರವನ್ನು ಪಾರಾದರು. ಮೋಶೆ ಮಗುವಾಗಿದ್ದಾಗ ನೈಲ್ ನದೀ ದಡದಲ್ಲಿ ಜಂಬು ಹುಲ್ಲಿನಲ್ಲಿ ಅಡಗಿಸಲ್ಪಟ್ಟು, ಇಜಿಪ್ಟಿನ ಫರೋಹನಿಂದ ಆಜ್ಞಾಪಿಸಲ್ಪಟ್ಟ ಇಸ್ರಾಯೇಲ್ಯರ ಗಂಡುಕೂಸುಗಳ ಸಂಹಾರವನ್ನು ಪಾರಾದನು. ಚಿಕ್ಕ ಕೂಸಾಗಿದ್ದಾಗ ಯೇಸು ಸಹಾ, ಬೇತ್ಲೆಹೇಮ್ ಮತ್ತು ಅದರ ಪ್ರಾಂತ್ಯಗಳಲ್ಲಿದ್ದ ಎರಡು ವರ್ಷದೊಳಗಿನ ಗಂಡುಕೂಸುಗಳ ಸಂಹಾರವನ್ನು ಪಾರಾದನು. ಈ ಸಂಹಾರವು ಅರಸನಾಗಿದ್ದ ಮಹಾ ಹೆರೋದನಿಂದ ಆಜ್ಞಾಪಿಸಲ್ಪಟ್ಟಿತ್ತು, ಇವನೂ ಫರೋಹನಂತೆ, ದೇವರ ಮತ್ತು ಆತನ ಜನರ ವೈರಿಯಾಗಿದ್ದನು.—ವಿಮೋಚನಕಾಂಡ 1:22–2:10; ಮತ್ತಾಯ 2:13-18.
ಸೌಮ್ಯತೆ ಅಥವಾ ದೀನಭಾವವು, ಮೋಶೆ ಮತ್ತು ಯೇಸು ಇಬ್ಬರಿಂದಲೂ ಪ್ರದರ್ಶಿಸಲ್ಪಟ್ಟಿತ್ತು. ಮೋಶೆಯು ಇಜಿಪ್ಟಿನ ಬಲಾಢ್ಯ ಅರಸನ ಅರಮನೆಯಲ್ಲಿ ಪುತ್ರನೋಪಾದಿ ಬೆಳೆಸಲ್ಪಟ್ಟಿದ್ದರೂ, ಅವನು “ಭೂಮಿಯ ಮೇಲಿನ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು (ದೀನನು, NW)” ಆಗಿ ಪರಿಣಮಿಸಿದನು. (ಅರಣ್ಯಕಾಂಡ 12:3) ತುಲನಾತ್ಮಕವಾಗಿ ಯೇಸು, ಪರಲೋಕದಲ್ಲಿ ಪರಾಕ್ರಮಿ ರಾಜಕುವರ ಮೀಕಾಯೇಲನಾಗಿ ಸೇವೆ ಮಾಡಿದ್ದರೂ ದೀನನಾಗಿ ಕೆಳಗೆ ಭೂಮಿಗೆ ಬಂದನು. (ದಾನಿಯೇಲ 10:13; ಪಿಲಿಪ್ಪಿಯ 2:5-8) ಅಷ್ಟಲ್ಲದೆ, ಯೇಸುವಿಗೆ ಜನರ ಮೇಲೆ ಕರುಣೆಯಿತ್ತು, ಅವನು ಹೀಗೆ ಹೇಳಶಕ್ತನಾದನು: “ನಾನು ಸೌಮ್ಯನೂ ದೀನಮನಸ್ಸಿನವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು.”—ಮತ್ತಾಯ 11:29; 14:14.
ಯೆಹೋವನ ಸೇವೆಯ ಪರವಾಗಿ, ಯೇಸು ಮತ್ತು ಮೋಶೆ ಇಬ್ಬರೂ ಪ್ರಮುಖ ಸ್ಥಾನಗಳನ್ನು ಮತ್ತು ಮಹಾ ಸಂಪತ್ತನ್ನು ಬಿಟ್ಟುಕೊಟ್ಟರು. ಯೆಹೋವನ ಮತ್ತು ಆತನ ಜನರ ಸೇವೆ ಮಾಡಲಿಕ್ಕಾಗಿ ಮೋಶೆಯು ಇಜಿಪ್ಟಿನ ಸಕಲ ಐಶ್ವರ್ಯವನ್ನು ಮತ್ತು ಪ್ರತಿಷ್ಠಿತ ಸ್ಥಾನವನ್ನು ತ್ಯಜಿಸಿಬಿಟ್ಟನು. (ಇಬ್ರಿಯ 11:24-26) ಅದೇ ರೀತಿ ಯೇಸು ಕೂಡಾ, ದೇವರ ಮತ್ತು ಭೂಮಿಯಲ್ಲಿದ್ದ ಆತನ ಜನರ ಸೇವೆ ಮಾಡುವದಕ್ಕಾಗಿ ಪರಲೋಕದ ಮಹಾ ಅನುಗ್ರಹಿತ ಸ್ಧಾನವನ್ನು ಮತ್ತು ವೈಭವವನ್ನು ಬಿಟ್ಟುಕೊಟ್ಟನು.—2 ಕೊರಿಂಥ 8:9.
ಮೋಶೆ ಮತ್ತು ಯೇಸು ಇಬ್ಬರೂ ದೇವರ ಅಭಿಷಿಕ್ತರಾಗಿದ್ದರು. ಪ್ರವಾದಿ ಮೋಶೆಯು ಇಸ್ರಾಯೇಲ್ ಜನಾಂಗಕ್ಕೆ ಯೆಹೋವನ ಅಭಿಷಿಕ್ತನಾಗಿ ಕಾರ್ಯನಡಿಸಿದನು. ಅಪೊಸ್ತಲ ಪೌಲನು ಹೇಳಿದ ಪ್ರಕಾರ, “ಐಗುಪ್ತ ದೇಶದ ಸರ್ವೈಶ್ವರ್ಯಕ್ಕಿಂತ ಕ್ರಿಸ್ತನಾಗಿ [ಅಭಿಷಿಕ್ತನಾಗಿ] ಉಂಟಾಗುವ ನಿಂದೆಯೇ ಶ್ರೇಷ್ಠಭಾಗ್ಯವೆಂದೆಣಿಸಿಕೊಂಡನು.” (ಇಬ್ರಿಯ 11:26 NW; ವಿಮೋಚನಕಾಂಡ 3:1–4:17) ಯೇಸುವು—ಕ್ರಿಸ್ತನು ಅಥವಾ ಅಭಿಷಿಕ್ತನು ಆದದ್ದು ಯಾವಾಗ? ಅದು ಅವನ ದೀಕ್ಷಾಸ್ನಾನದ ವೇಳೆ ದೇವರ ಪವಿತ್ರಾತ್ಮದಿಂದ ಅಥವಾ ಕಾರ್ಯಶೀಲ ಶಕಿಯ್ತಿಂದ ಅಭಿಷೇಕವನ್ನು ಹೊಂದಿದಾಗ ಅದು ಸಂಭವಿಸಿತು. ತಾನು ಮೆಸ್ಸೀಯನು ಅಥವಾ ಕ್ರಿಸ್ತನು ಎಂಬದಾಗಿ ಸುಖರೆಂಬ ಊರಿನ ಯಾಕೋಬನ ಬುಗ್ಗೆಯ ಬಳಿಯಿದ್ದ ಸಮಾರ್ಯದ ಸ್ತ್ರೀಗೆ ಮತ್ತು ವಿಚಾರಣೆಗಾಗಿ ಇಸ್ರಾಯೇಲ್ಯ ಮಹಾಯಾಜಕನ ಮುಂದೆ ನಿಂತಿದ್ದಾಗ ಅವನು ಸಾಕ್ಷಿಕೊಟ್ಟಿದ್ದನು.—ಮಾರ್ಕ 14:61, 62; ಯೋಹಾನ 4:25, 26.
ಮೋಶೆ ಮತ್ತು ಯೇಸು ಇಬ್ಬರೂ 40 ದಿನಗಳ ಉಪವಾಸವನ್ನು ಮಾಡಿದ್ದರು. ದೇವರ ಪ್ರತಿನಿಧಿಯೋಪಾದಿ ಮೋಶೆಯು ತನ್ನ ಕಾರ್ಯದ ಆರಂಭದಲ್ಲಿ, ಸೀನಾಯಿ ಪರ್ವತದಲ್ಲಿದ್ದಾಗ 40 ದಿನ ಉಪವಾಸ ಮಾಡಿದ್ದನು. (ವಿಮೋಚನಕಾಂಡ 34:28) ಯೇಸು ನಾಲ್ವತ್ತು ದಿನಗಳ ಉಪವಾಸವನ್ನು ಅರಣ್ಯದಲ್ಲಿ ಕೈಕೊಂಡಿದ್ದನು ಮತ್ತು ಅನಂತರ, ವಾಗ್ದತ್ತ ಮೆಸ್ಸೀಯನೋಪಾದಿ ತನ್ನ ಕಾರ್ಯದಾರಂಭದಲ್ಲೇ ಸೈತಾನನ ಶೋಧನೆಯನ್ನು ಎದುರಿಸಿದ್ದನು.—ಮತ್ತಾಯ 4:1-11.
ಇಬ್ಬರೂ ಯೆಹೋವನನ್ನು ಘನಪಡಿಸಿದ್ದರು
ಯೆಹೋವನು ತನ್ನ ಪವಿತ್ರ ನಾಮವನ್ನು ಮಹಿಮೆಪಡಿಸಲು ಮೋಶೆ ಮತ್ತು ಯೇಸು ಇಬ್ಬರನ್ನೂ ಉಪಯೋಗಿಸಿದನು. ‘ಅವರ ಪಿತೃಗಳ ದೇವರಾದ ಯೆಹೋವನ’ ಹೆಸರಿನಲ್ಲಿ ಇಸ್ರಾಯೇಲ್ಯರ ಬಳಿಗೆ ಹೋಗುವಂತೆ ದೇವರು ಮೋಶೆಗೆ ಹೇಳಿದನು. (ವಿಮೋಚನಕಾಂಡ 3:13-16) ಮೋಶೆಯು ಫರೋಹನ ಮುಂದೆ ದೇವರ ಪ್ರತಿನಿಧಿಯಾಗಿ ನಿಂತನು, ಯೆಹೋವನ ಶಕ್ತಿಯು ತೋರಿಸಲ್ಪಡುವಂತೆ ಮತ್ತು ಆತನ ನಾಮವು ಭೂಮಿಯಲ್ಲೆಲ್ಲೂ ಪ್ರಕಟಿಸಲ್ಪಡುವಂತೆ ಫರೋಹನು ಅಸ್ತಿತ್ವದಲ್ಲಿ ಇಡಲ್ಪಟ್ಟನು. (ವಿಮೋಚನಕಾಂಡ 9:16) ಅದೇ ರೀತಿ ಯೇಸು ಕೂಡಾ ಯೆಹೋವನ ಹೆಸರಿನಲ್ಲಿ ಬಂದನು. ದೃಷ್ಟಾಂತಕ್ಕಾಗಿ ಆತನಂದದ್ದು: “ನಾನು ನನ್ನ ತಂದೆಯ ಹೆಸರಿನ ಮೇಲೆ ಬಂದಿದ್ದೇನೆ; ಆದರೆ ನೀವು ನನ್ನನ್ನು ಒಪ್ಪಿಕೊಳ್ಳುವದಿಲ್ಲ.” (ಯೋಹಾನ 5:43) ಯೇಸು ತನ್ನ ತಂದೆಯನ್ನು ಮಹಿಮೆ ಪಡಿಸಿದನು, ದೇವರು ಅವನಿಗೆ ಕೊಟ್ಟ ಮನುಷ್ಯರಿಗೆ ಯೆಹೋವನ ನಾಮವನ್ನು ಪ್ರಕಟಪಡಿಸಿದನು, ಮತ್ತು ಭೂಮಿಯಲ್ಲಿ ಅದನ್ನು ಪ್ರಖ್ಯಾತಿಗೆ ತಂದನು.—ಯೋಹಾನ 17:4, 6, 26.
ದೈವಿಕ ಶಕಿಯ್ತಿಂದ ಮೋಶೆ ಮತ್ತು ಯೇಸು ಇಬ್ಬರೂ ದೇವರನ್ನು ಘನಪಡಿಸಿದ ಅದ್ಭುತಗಳನ್ನು ನಡಿಸಿದರು. ತಾನು ಯೆಹೋವನಿಂದ ನೇಮಕವನ್ನು ಪಡೆದಿದ್ದನೆಂದು ರುಜುಪಡಿಸಲಿಕ್ಕಾಗಿ ಮೋಶೆಯು ಅದ್ಭುತಗಳನ್ನು ನಡಿಸಿದ್ದನು. (ವಿಮೋಚನಕಾಂಡ 4:1-31) ಕೆಂಪು ಸಮುದ್ರವನ್ನು ವಿಭಾಗಿಸಲು ಉಪಯೋಗಿಸಲ್ಪಟ್ಟ ಮೋಶೆಯು, ಯೆಹೋವನನ್ನು ಘನಪಡಿಸಿದ ಅದ್ಭುತಗಳನ್ನು ತನ್ನ ಕಾರ್ಯಾವಧಿಯಲ್ಲೆಲ್ಲಾ ಮಾಡುತ್ತಾ ಹೋದನು. (ವಿಮೋಚನಕಾಂಡ 5:1–12:36; 14:21-31; 16:11-18; 17:5-7; ಕೀರ್ತನೆ 78:12-54) ಯೇಸು ಸಹಾ ಅದೇ ರೀತಿ ಅನೇಕಾನೇಕ ಅದ್ಭುತಗಳನ್ನು ನಡಿಸಿದ ಮೂಲಕ ದೇವರನ್ನು ಮಹಿಮೆ ಪಡಿಸಿದನು. ವಿಷಯವು ಎಷ್ಟರ ಮಟ್ಟಿಗೆ ಹಾಗಿತ್ತೆಂದರೆ, ಯೇಸು ಹೀಗೆ ಹೇಳಶಕ್ತನಾದನು: “ನಾನು ತಂದೆಯಲ್ಲಿ ಇದ್ದೇನೆ, ತಂದೆಯು ನನ್ನಲ್ಲಿ ಇದ್ದಾನೆಂಬ ಮಾತನ್ನು ನಂಬಿರಿ; ಇಲ್ಲವಾದರೆ ಆ ಕ್ರಿಯೆಗಳನ್ನೇ ನೋಡಿ ನನ್ನ ಮಾತನ್ನು ನಂಬಿರಿ.” (ಯೋಹಾನ 14:11) ಅವನ ಅದ್ಭುತಗಳಲ್ಲಿ ಭಯಂಕರ ಚಂಡಮಾರುತವನ್ನು ನಿಲ್ಲಿಸಿ ಗಲಿಲಾಯ ಸಮುದ್ರವನ್ನು ಶಾಂತವಾಗುವಂತೆ ಮಾಡಿದ್ದು ಒಂದಾಗಿತ್ತು.—ಮಾರ್ಕ 4:35-41; ಲೂಕ 7:18-23.
ಇತರ ಪ್ರಾಮುಖ್ಯ ಹೋಲಿಕೆಗಳು
ಮೋಶೆ ಮತ್ತು ಯೇಸು ಇಬ್ಬರೂ ಆಹಾರದ ಒಂದು ಅದ್ಭುತಕರವಾದ ಒದಗಿಸುವಿಕೆಯೊಂದಿಗೆ ಜತೆಗೂಡಿದ್ದರು. ಇಸ್ರಾಯೇಲ್ಯರಿಗೆ ಆಹಾರವು ಅದ್ಭುತಕರವಾಗಿ ಒದಗಿಸಲ್ಪಟ್ಟಾಗ ಮೋಶೆಯು ಯೆಹೋವನ ಪ್ರವಾದಿಯಾಗಿದ್ದನು. (ವಿಮೋಚನಕಾಂಡ 16:11-36) ಅದೇ ರೀತಿ ಯೇಸು ಸಹಾ ಎರಡು ಸಂದರ್ಭಗಳಲ್ಲಿ ಜನಸಮುದಾಯಕ್ಕೆ ಭೌತಿಕ ಆಹಾರವನ್ನು ಅದ್ಭುತಕರವಾಗಿ ಉಣಿಸಿದನೆಂಬ ದಾಖಲೆಯನ್ನು ಬೈಬಲ್ ಕೊಟ್ಟಿದೆ.—ಮತ್ತಾಯ 14:14-21; 15:32-38.
ಪರಲೋಕದಿಂದ ಬಂದ ಮನ್ನಾವು ಮೋಶೆ ಮತ್ತು ಯೇಸು ಇಬ್ಬರ ಸೇವೆಯಲ್ಲೂ ಸಂಮಿಳಿತವಾಗಿದೆ. ಮೋಶೆಯು ಇಸ್ರಾಯೇಲ್ಯರನ್ನು ನಡಿಸುತ್ತಿದ್ದಾಗ ಮನ್ನಾವು ಪರಲೋಕದಿಂದಲೋ ಎಂಬಂತೆ ಅವರಿಗೆ ಒದಗಿಸಲ್ಪಟ್ಟಿತ್ತು. (ವಿಮೋಚನಕಾಂಡ 16:11-27; ಅರಣ್ಯಕಾಂಡ 11:4-9; ಕೀರ್ತನೆ 78:25) ಯೇಸು ತುಲನಾತ್ಮಕವಾಗಿ, ಆದರೆ ಅತಿ ಪ್ರಾಮುಖ್ಯ ರೀತಿಯಲ್ಲಿ, ವಿಧೇಯ ಮಾನವರ ಜೀವಕ್ಕಾಗಿ ತನ್ನ ಸ್ವಂತ ದೇಹವನ್ನು ಪರಲೋಕದಿಂದ ಬಂದ ಮನ್ನಾದ ರೂಪದಲ್ಲಿ ಒದಗಿಸಿಕೊಟ್ಟನು.—ಯೋಹಾನ 6:48-51.
ಮೋಶೆ ಮತ್ತು ಯೇಸು ಇಬ್ಬರೂ ಜನರನ್ನು ಬಂಧಿವಾಸದಿಂದ ಮುಕ್ತತೆಗೆ ನಡಿಸಿದರು. ಇಸ್ರಾಯೇಲ್ಯರನ್ನು ಐಗುಪ್ತ್ಯರ ಬಂಧಿವಾಸದಿಂದ ಬಿಡಿಸಿ ಆತನ ಜನರಾಗಿ ಹೊರಗೆ ಸ್ವಾತಂತ್ರ್ಯಕ್ಕೆ ನಡಿಸಲು ದೇವರು ಮೋಶೆಯನ್ನು ಉಪಯೋಗಿಸಿದನು. (ವಿಮೋಚನಜಕಾಂಡ 12:37-42) ತದ್ರೀತಿಯಲ್ಲಿ, ಯೇಸು ಕ್ರಿಸ್ತನು ಅವನ ಹಿಂಬಾಲಕರನ್ನು ಸ್ವಾತಂತ್ರ್ಯದೊಳಗೆ ನಡಿಸಿದನು. ಕ್ರಿಸ್ತನು ವಿಧೇಯ ಮಾನವರನ್ನು ಪಿಶಾಚನಾದ ಸೈತಾನನ ಸಂಘಟನೆಗೆ ಬಂಧಿಗಳಾಗಿರುವುದನ್ನು ಹಾಗೂ ಪಾಪ ಮತ್ತು ಮರಣದಿಂದಲೂ ಬೇಗನೇ ಮುಕ್ತಗೊಳಿಸಲಿರುವನು.—1 ಕೊರಿಂಥ 15:24-26; ಕೊಲೊಸ್ಸೆಯ 1:13; 1 ಯೋಹಾನ 5:19.
ಮೋಶೆ ಮತ್ತು ಯೇಸು ಇಬ್ಬರೂ ಒಡಂಬಡಿಕೆಗಳ ಮಧ್ಯಸ್ಥರಾಗಿದ್ದರು. ಯೆಹೋವ ದೇವರ ಮತ್ತು ಇಸ್ರಾಯೇಲ್ಯರ ನಡುವೆ ಮೋಶೆಯು ನಿಯಮದೊಡಂಬಡಿಕೆಗೆ ಮಧ್ಯಸ್ಥನಾಗಿದ್ದನು. (ವಿಮೋಚನಕಾಂಡ 19:3-9) ಯೇಸುವು ದೇವರ ಮತ್ತು ಆತ್ಮಿಕ ಇಸ್ರಾಯೇಲ್ಯರ ನಡುವೆ ಹೊಸ ಒಡಂಬಡಿಕೆಯ ಮಧ್ಯಸ್ಥನಾಗಿದ್ದಾನೆ.—ಯೆರೆಮೀಯ 31:31-34; ಲೂಕ 22:20; ಇಬ್ರಿಯ 8:6-13.
ನ್ಯಾಯ ತೀರಿಸುವಿಕೆಯು ಮೋಶೆ ಮತ್ತು ಯೇಸು ಕ್ರಿಸ್ತ ಇಬ್ಬರಿಗೂ ನೇಮಿಸಲ್ಪಟ್ಟಿತ್ತು. ಮೋಶೆಯು ಮಾಂಸಿಕ ಇಸ್ರಾಯೇಲ್ಯರಿಗೆ ನ್ಯಾಯಾಧಿಪತಿ ಮತ್ತು ನೇಮವಿಧಾಯಕನಾಗಿ ಸೇವೆ ಮಾಡಿದನು. (ವಿಮೋಚನಕಾಂಡ 18:13. ಮಲಾಕಿಯ 4:4) ಯೇಸುವೂ ನ್ಯಾಯತೀರ್ಪು ಮಾಡುವವನಾಗಿ ಸೇವೆಮಾಡುತ್ತಾನೆ ಮತ್ತು ಆತ್ಮಿಕ “ದೇವರ ಇಸ್ರಾಯೇಲಿಗೆ” ಅದರ ನಿಯಮಗಳನ್ನೂ, ಆಜ್ಞೆಗಳನ್ನೂ ಕೊಟ್ಟಿರುತ್ತಾನೆ. (ಗಲಾತ್ಯ 6:16. ಯೋಹಾನ 15:10) ಕ್ರಿಸ್ತನು ತಾನೇ ಹೇಳಿದ್ದು: “ತಂದೆಯು ಯಾರಿಗೂ ತೀರ್ಪು ಮಾಡುವದೂ ಇಲ್ಲ; ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ; ಎಲ್ಲರು ತನಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನಕೊಡಬೇಕೆಂದು ಇಚ್ಛೈಸುತ್ತಾನೆ. ಮಗನಿಗೆ ಮಾನಕೊಡದವನು ಅವನನ್ನು ಕಳುಹಿಸಿದ ತಂದೆಗೂ ಮಾನಕೊಡದವನಾಗಿದ್ದಾನೆ.”—ಯೋಹಾನ 5:22, 23.
ಮೋಶೆ ಮತ್ತು ಯೇಸು ಇಬ್ಬರ ವಶಕ್ಕೂ ದೇವರ ಮನೆವಾರ್ತೆಯ ತಲೆತನವು ಕೊಡಲ್ಪಟ್ಟಿತ್ತು. ಮೋಶೆ ಪುರಾತನ ಇಸ್ರಾಯೇಲಿನಲ್ಲಿ ದೇವರ ಮನೆಯ ಮೇಲೆ ನಂಬಿಗಸ್ತ ತಲೆಯಾಗಿ ಕಾರ್ಯನಡಿಸಿದನು. (ಅರಣ್ಯಕಾಂಡ 12:7) ತುಲನಾತ್ಮಕವಾಗಿ, ಯೇಸು ಯೆಹೋವನ ಮಕ್ಕಳ ಆತ್ಮಿಕ ಮನೆಯ ತಲೆಯಾಗಿ ಮಾಡಲ್ಪಟ್ಟನು ಮತ್ತು ಆತನು ಅದಕ್ಕೆ ನಂಬಿಗಸ್ತನೆಂದು ರುಜುವಾದನು. ನಿಶ್ಚಯವಾಗಿಯೂ, “ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸುವೂ ತನ್ನನ್ನು ನೇಮಿಸಿದಾತನಿಗೆ ನಂಬಿಗಸ್ತನಾಗಿದ್ದಾನೆ. ಮನೆಗಿಂತ ಮನೇ ಕಟ್ಟಿದವನಿಗೆ ಹೆಚ್ಚು ಮಾನವಿರುವದರಿಂದ ಮೋಶೆಗಿಂತ ಯೇಸು ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. . . . ಮೋಶೆಯು ಸೇವಕನಾಗಿ ದೇವರ ಮನೆಯಲ್ಲಿಲ್ಲಾ ನಂಬಿಗಸ್ತನಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದ ಸಂಗತಿಗಳಿಗೆ ಸಾಕ್ಷಿಯಾಗಿದ್ದನು. ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಧೈರ್ಯವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇತನಕ ದೃಢವಾಗಿ ಹಿಡುಕೊಂಡವರಾದರೆ ನಾವೇ ದೇವರ ಮನೆಯವರು.”—ಇಬ್ರಿಯ 3:2-6.
ಮರಣದಲ್ಲೂ ಮೋಶೆ ಮತ್ತು ಯೇಸುವು ಸದೃಶ್ಯರಾಗಿದ್ದರು. ಅದು ಹೇಗೆ? ಒಳ್ಳೇದು, ಯೆಹೋವನು ಮೋಶೆಯ ಶವವನ್ನು ತೆಗೆದುಬಿಟ್ಟನು, ಹೀಗೆ ಮನುಷ್ಯರು ಅದನ್ನು ಭ್ರಷ್ಟಗೊಳಿಸದಂತೆ ಇಲ್ಲವೇ ಪೂಜಿಸದಂತೆ ತಡೆದುಬಿಟ್ಟನು. (ಧರ್ಮೋಪದೇಶಕಾಂಡ 34:5, 6; ಯೂದ 9) ತದ್ರೀತಿಯಲ್ಲಿ ದೇವರು ಯೇಸುವಿನ ಶವವನ್ನು ಇಲ್ಲದಂತೆ ಮಾಡಿದನು ಮತ್ತು ಅದು ನಶಿಸುವಿಕೆಯನ್ನು ಕಾಣದಂತೆ ಮತ್ತು ಹೀಗೆ ನಂಬಿಕೆಗೆ ಎಡವುಕಲ್ಲಾಗಿ ಪರಿಣಮಿಸದಂತೆ ಮಾಡಿದನು.—ಕೀರ್ತನೆ 16:10; ಅಪೊಸ್ತಲರ ಕೃತ್ಯಗಳು 2:29-31; 1 ಕೊರಿಂಥ 15:50.
ಪ್ರವಾದನೆಗೆ ಲಕ್ಷ್ಯಕೊಡಿರಿ
ಈ ಎಲ್ಲಾ ರೀತಿಗಳಲ್ಲಿ ಯೇಸು ಕ್ರಿಸ್ತನು ಪ್ರವಾದಿಯಾಗಿದ್ದ ಮೋಶೆಯಂಥವನೆಂದು ರುಜುವಾದನು. ಆ ಪ್ರವಾದಿಯ ಬರುವಿಕೆಯ ಕುರಿತು ದೇವರು ಮೋಶೆಗೆ ಹೇಳಿದ ಮಾತುಗಳು ಎಷ್ಟು ಆಶ್ಚರ್ಯಕರವಾಗಿ ನೆರವೇರಿಕೆಯನ್ನು ಪಡೆದವು!
ಮೋಶೆಯಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವದಕ್ಕಾಗಿ ಮಾಡಿದ ತನ್ನ ಪ್ರವಾದನಾ ವಾಗ್ದಾನವನ್ನು ಯೆಹೋವನು ನಿರ್ವಹಿಸಿದನೆಂಬದಕ್ಕೆ ಯಾವ ಸಂಶಯವೂ ಇಲ್ಲ. ಧರ್ಮೋಪದೇಶಕಾಂಡ 18:18ರ ಮಾತುಗಳು ಯೇಸು ಕ್ರಿಸ್ತನ ಜೀವನದಲ್ಲಿ ಮತ್ತು ಅನುಭವಗಳಲ್ಲಿ ನೆರವೇರಿಕೆ ಪಡೆದವು. ಮತ್ತು ಅಂಥ ನೆರವೇರಿಕೆಯು ದೇವರ ವಾಕ್ಯದ ಇತರ ಪ್ರವಾದನಾ ವೈಶಿಷ್ಟ್ಯಗಳ ಬಗ್ಗೆಯೂ ಭರವಸದಿಂದಿರಲು ನಮಗೆ ಸಕಾರಣವನ್ನು ಕೊಡುತ್ತದೆ. ಆದುದರಿಂದ ನಾವು ಯಾವಾಗಲೂ ಬೈಬಲ್ ಪ್ರವಾದನೆಗೆ ಲಕ್ಷ್ಯವನ್ನು ಕೊಡೋಣ. (w91 11/15)