ದಯಾಪರನಾದ ರೋಮನ್ ಶತಾಧಿಪತಿ
ರೋಮನ್ ಶತಾಧಿಪತಿಗಳಿಗೆ ದಯಾಪರರೆಂಬ ಕೀರ್ತಿಯು ಇರಲಿಲ್ಲ. ಕಾದಾಟದಿಂದ ಗಟ್ಟಿಸಿದ ಒಂದು-ನೂರು ಸೈನಿಕ ಪಡೆಯನ್ನು ನಡಿಸಲು ನೇಮಕವನ್ನು ಪಡೆದ ಶತಾಧಿಪತಿಯು ಗಡುಸಾದ ಕವಾಯತು-ಅಧಿಕಾರಿ, ಶಿಸ್ತು-ಪಾಲಕ ಮತ್ತು ಕೆಲವೊಮ್ಮೆ ಸಂಹಾರಕನೂ ಆಗಿರಬೇಕಿತ್ತು. ಆದರೂ, ಅಪೊಸ್ತಲ ಪೌಲನಿಗೆ ನಿಜ ಔದಾರ್ಯವನ್ನೂ ಕರುಣೆಯನ್ನೂ ತೋರಿಸಿದ್ದ ಅಗಸಸ್ಟ್‌ನ ತಂಡದ ಒಬ್ಬ ರೋಮನ್ ಶತಾಧಿಪತಿಯ ಕುರಿತು ಬೈಬಲ್ ನಮಗೆ ತಿಳಿಸುತ್ತದೆ. ಆವನ ಹೆಸರು? ಜೂಲಿಯಸ್ (ಯೂಲ್ಯ).
ಅಪೊಸ್ತಲರ ಕೃತ್ಯಗಳು 27ನೇ ಅಧ್ಯಾಯದಲ್ಲಿ ಈ ಮನುಷ್ಯನ ಪರಿಚಯವನ್ನು ಬೈಬಲ್ ನಮಗೆ ಮಾಡಿಸುತ್ತದೆ. ಕೈಸರನಿಗೆ ರೋಮಿನಲ್ಲಿ ತನ್ನ ಅಪ್ಪೀಲನ್ನು ಮಾಡುವಂತೆ ಪೌಲನು ವಿನಂತಿಯನ್ನು ಮಾಡಿದ್ದನು. ಹೀಗೆ, ಪೌಲನನ್ನು ಹಲವಾರು ಬೇರೆ ಸೆರೆವಾಸಿಗಳೊಂದಿಗೆ “(ಅಗಸಸ್ಟ್) ಚಕ್ರವರ್ತಿಯ ಪಟಾಲಮಿಗೆ ಸೇರಿದ ಯೂಲ್ಯನೆಂಬ ಶತಾಧಿಪತಿಗೆ ಒಪ್ಪಿಸಿದರು.” ಅವರು ಯೆರೂಸಲೇಮಿನ ವಾಯುವ್ಯದಲ್ಲಿದ್ದ ರೇವು-ಶಹರವಾದ ಕೈಸರೈಯದಿಂದ ಸಮುದ್ರಯಾನ ಮಾಡಿದರು, ಅದು ರೋಮೀಯ ಸೇನೆಯ ಮುಖ್ಯ ಕಾರ್ಯಾಲಯವಾಗಿಯೂ ಬಳಸಲ್ಪಡುತ್ತಿತ್ತು. ಇತಿಹಾಸಕಾರ ಲೂಕನು ಹೇಳುವದು: “ಮರುದಿನ ನಾವು ಸೀದೋನಿಗೆ ಮುಟ್ಟಿದೆವು. ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸುವವನಾಗಿ ಅವನನ್ನು ಸ್ನೇಹಿತರ ಬಳಿಗೆ ಹೋಗಿ ಸತ್ಕಾರ ಹೊಂದುವದಕ್ಕೆ ಬಿಟ್ಟನು.”—ಅಪೊಸ್ತಲರ ಕೃತ್ಯಗಳು 27:1-3.
ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸಲು ಪ್ರೇರಿತನಾದದ್ದು ಏಕೆಂಬದನ್ನು ಬೈಬಲ್ ತಿಳಿಸುವದಿಲ್ಲ. ಪೌಲನಿಗೆ ವಿಶೇಷವಾದ ಉಪಚಾರವನ್ನು ನೀಡುವಂತೆ ಗವರ್ನರ್ ಫೆಸ್ತನ ಅಪ್ಪಣೆಯು ಅವನಿಗೆ ಸಿಕ್ಕಿದ್ದಿರಲೂಬಹುದು. ಅಥವಾ ಪೌಲನು ಕೈದು ಮಾಡಲ್ಪಟ್ಟ ಪರಿಸ್ಥಿತಿಗಳ ಪರಿಚಯವಿದದ್ದರಿಂದ, ಅವನ ಧೈರ್ಯ ಮತ್ತು ಸಮಗ್ರತೆಯನ್ನು ಯೂಲ್ಯನು ಕೇವಲ ಮೆಚ್ಚಿರಲೂಬಹುದು. ಹೇಗಿದ್ದರೂ, ಪೌಲನು ಒಬ್ಬ ಸಾಮಾನ್ಯ ಸೆರೆವಾಸಿಯಲ್ಲವೆಂಬದನ್ನು ಯೂಲ್ಯನು ಗಣ್ಯಮಾಡಿದ್ದನೆಂದು ತೋರುತ್ತದೆ.
ಆದರೂ, ಚಂದರೇವಿನಿಂದ ಸಮುದ್ರಯಾನ ಮಾಡುವ ವಿರುದ್ಧ ಪೌಲನು ಎಚ್ಚರಿಸಿದಾಗ ಯೂಲ್ಯನು ಅದಕ್ಕೆ ಲಕ್ಷ್ಯಕೊಡಲು ಬಯಸಲಿಲ್ಲ. ಒಂದು ಪ್ರಚಂಡ ಬಿರುಗಾಳಿಯು ಹೊಡೆದು ಹಡಗವನ್ನು ಆಫ್ರಿಕದ ಉತ್ತರ ಕರಾವಳಿಯಾಚೆಯ ಮರಳುತೀರದಲ್ಲಿ ನೆಲಹತ್ತಿಸುವ ಬೆದರಿಕೆ ಹಾಕಿತು. (ಅಪೊಸ್ತಲರ ಕೃತ್ಯಗಳು 27:8-17) ಆ ಬಿರುಗಾಳಿಯ ಮಧ್ಯೆ ಪೌಲನು ಎದ್ದುನಿಂತು, ಹೆದರಿಹೋಗಿದ್ದ ಪ್ರಯಾಣಿಕರಿಗೆ, ‘ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ’ ಎಂಬ ಆಶ್ವಾಸನೆಯಿಂದ ಸಂತೈಸಿದನು. ಆದರೂ ಕೆಲವು ನಾವಿಕರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರು. ಆಗ ಪೌಲನು ಯೂಲ್ಯನಿಗೆ ಹೇಳಿದ್ದು: “ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವದಕ್ಕಾಗುವದಿಲ್ಲ.”—ಅಪೊಸ್ತಲರ ಕೃತ್ಯಗಳು 27:21, 22, 30, 31.
ಈ ಸಾರಿ ಯೂಲ್ಯನು ಪೌಲನಿಗೆ ಕಿವಿಗೊಟ್ಟನು, ಮತ್ತು ನಾವಿಕರ ತಪ್ಪಿಸಿಕೊಳ್ಳುವ ಪ್ರಯತ್ನವು ನಿಷ್ಫಲಗೊಂಡಿತು. ಪೌಲನು ಮುನ್ಸೂಚಿಸಿದ ಪ್ರಕಾರವೇ, ಹಡಗವು ಒಂದು ಮರಳುದಿಬ್ಬದ ಮೇಲೆ ನೆಲಹತ್ತಿತು ಮತ್ತು ಒಡೆದು ಹೋಗುತ್ತಾ ಬಂತು. ಸೆರೆಯವರು ತಪ್ಪಿಸಿಕೊಂಡಾರೆಂದು ಹೆದರಿ ಅವರೆಲ್ಲರನ್ನು ಕೊಂದುಬಿಡಲು ಸಿಪಾಯಿಗಳು ನಿರ್ಧರಿಸಿದರು. ಪುನಃ ಯೂಲ್ಯನು ಮಧ್ಯೆ ಬಂದು ತನ್ನ ಸಿಪಾಯಿಗಳನ್ನು ತಡೆದನು, ಹೀಗೆ ಪೌಲನ ಜೀವವು ಉಳಿಯಿತು.—ಅಪೊಸ್ತಲರ ಕೃತ್ಯಗಳು 27:32, 41-44.
ಈ ದಯಾಪರನಾದ ಶತಾಧಿಪತಿಗೆ ಕೊನೆಗೆ ಏನಾಯಿತೆಂದಾಗಲಿ, ಅವನು ಕ್ರೈಸ್ತ ನಂಬಿಕೆಯನ್ನು ಎಂದಾದರೂ ಅವಲಂಬಿಸಿದನೋ ಇಲ್ಲವೋ ಎಂದಾಗಲಿ ಬೈಬಲ್ ನಮಗೆ ತಿಳಿಸುವದಿಲ್ಲ. ಅವನು ತೋರಿಸಿದ್ದ ಯಾವದೇ ದಯಾಪರತೆಯು ಒಂದು ದೇವ-ದತ್ತ ಮನಸ್ಸಾಕ್ಷಿಯ ಕಾರ್ಯಗಳೆಂಬದು ಪ್ರತ್ಯಕ್ಷ. (ರೋಮಾಪುರ 2:14, 15) ಕ್ರೈಸ್ತರಾದರೋ ಕೇವಲ ಮಾನವ ದಯಾಪರತೆಯನ್ನಲ್ಲ, ಅದಕ್ಕಿಂತ ಹೆಚ್ಚಿನದನ್ನು, ದೇವರಾತ್ಮದ ಫಲವಾದ ದೈವಿಕ ದಯೆಯನ್ನು ತೋರಿಸುತ್ತಾರೆ. (ಗಲಾತ್ಯ 5:22) ನಿಶ್ಚಯವಾಗಿ, ದೇವರನ್ನು ತಿಳಿಯದ ಒಬ್ಬ ವಿಧರ್ಮಿ ಸೈನಿಕನು ದಯೆಯನ್ನು ತೋರಿಸಶಕ್ತನಾಗಿದನ್ದಾದರೆ, ದೇವ ಜನರಾದರೋ ಹಾಗೆ ಮಾಡಲು ಅದೆಷ್ಟು ಹೆಚ್ಚಾಗಿ ಪ್ರೇರಿಸಲ್ಪಡಬೇಕು! (w91 11/15)