“ಮೇಲ್ವಿಚಾರಕನು . . . ಆತ್ಮ-ಸಂಯಮಿ ಆಗಿರಬೇಕು”
“ಮೇಲ್ವಿಚಾರಕನು . . . ಆತ್ಮ-ಸಂಯಮಿ ಆಗಿರಬೇಕು.”—ತೀತ 1:7, 8, NW.
1, 2. ವಿಲ್ಯಂ ಆಫ್ ಆರೆಂಜ್ ಆತ್ಮನಿಗ್ರಹದ ಯಾವ ಮಾದರಿಯನ್ನು ಒದಗಿಸಿದನು, ಯಾವ ಉಪಯುಕ್ತ ಫಲಿತಾಂಶಗಳೊಂದಿಗೆ?
ಬಾವೂದ್ರೇಕತೆಗಳ ಆತ್ಮನಿಗ್ರಹವನ್ನು ಒಳಗೊಂಡಿರುವ ಅತ್ಯಂತ ಗಮನಾರ್ಹವಾದ ಒಂದು ಮಾದರಿಯನ್ನು ಇತಿಹಾಸವು ಒದಗಿಸುತ್ತದೆ. 16ನೇ ಶತಮಾನದ ಕೊನೆಯಲ್ಲಿ, ಯುವ ಡಚ್ ರಾಜಕುವರ ವಿಲ್ಯಂ ಆಫ್ ಆರೆಂಜ್, ಫ್ರಾನ್ಸಿನ ಅರಸ ಹೆನ್ರಿ II ಜೊತೆಯಲ್ಲಿ ಒಂದು ಬೇಟೆ-ಸಂಚಾರವನ್ನು ಕೈಕೊಂಡಿದ್ದನು. ಅರಸನು ವಿಲ್ಯಂನಿಗೆ ತಾನು ಮತ್ತು ಸ್ಪೈನ್ನ ಅರಸನು, ಪ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ—ವಾಸ್ತವವಾಗಿ ಇಡೀ ಕ್ರೈಸ್ತ ಪ್ರಪಂಚದಲ್ಲೇ ಇರುವ ಪ್ರಾಟೆಸ್ಟಂಟರನ್ನು ನಿರ್ಮೂಲಗೊಳಿಸಲು ಒಳಸಂಚು ಹೂಡಿದ್ದೇವೆ—ಎಂಬದನ್ನು ಹೊರಗೆಡಹಿದನು. ಅರಸ ಹೆನ್ರಿಯು ವಿಲ್ಯಂ ತನ್ನಂತೆ ಒಬ್ಬ ದೇವಭಕ್ತ ಕ್ಯಾಥ್ಲಿಕನೆಂದು ನೆನಸಿದ್ದನಾದ್ದರಿಂದ ಆ ಒಳಸಂಚಿನ ಎಲ್ಲಾ ಗುಟ್ಟನ್ನು ಬಯಲು ಮಾಡಿದ್ದನು. ತಾನು ಕೇಳಿದ ಸಂಗತಿಯು ವಿಲ್ಯಂನಲ್ಲಿ ಭೀಕರ ನಡುಕವನ್ನು ಹುಟ್ಟಿಸಿತು ಯಾಕೆಂದರೆ ಅವನ ಅತ್ಯಾಪ್ತ ಸ್ನೇಹಿತರಲ್ಲಿ ಹೆಚ್ಚಿನವರು ಪ್ರಾಟೆಸ್ಟಂಟರಾಗಿದ್ದರು, ಆದರೂ ಅವನು ತನ್ನ ಭಾವನೆಗಳನ್ನು ಹೊರಗೆಡಹಲಿಲ್ಲ; ಬದಲಾಗಿ, ಅರಸನು ತನಗೆ ತಿಳಿಸಿದ ಎಲ್ಲಾ ವಿವರಗಳಲ್ಲಿ ಅತ್ಯಾಸಕ್ತಿಯನ್ನು ತೋರಿಸಿದನು.
2 ಆದರೂ, ವಿಲ್ಯಂ ತನಗೆ ಶಕ್ತನಾದ ಕೂಡಲೇ, ಆ ಒಳಸಂಚನ್ನು ನಿಷ್ಫಲಗೊಳಿಸಲಿಕ್ಕಾಗಿ ಕ್ರಿಯೆಕೈಕೊಂಡನು, ಮತ್ತು ಅದು ಕಟ್ಟಕಡೆಗೆ ನೆದರ್ಲ್ಯಾಂಡ್ಸ್ನ್ನು ಸ್ಪಾನಿಷ್ ಕ್ಯಾಥ್ಲಿಕ್ ದಬ್ಬಾಳಿಕೆಯಿಂದ ಸ್ವತಂತ್ರಗೊಳಿಸುವುದಕ್ಕೆ ನಡಿಸಿತು. ಆ ಒಳಸಂಚನ್ನು ಮೊದಲಾಗಿ ಕೇಳಿದಾಗ ವಿಲ್ಯಂ ಆತ್ಮ-ಸಂಯಮವನ್ನು ತೋರಿಸಲು ಶಕ್ತನಾದ ಕಾರಣ, ಅವನಿಗೆ “ವಿಲ್ಯಂ ದಿ ಸೈಲೆಂಟ್” (ಮೌನಿ ವಿಲ್ಯಂ) ಎಂಬ ಹೆಸರು ಬಂತು. ಈ ವಿಲ್ಯಂ ಆಫ್ ಆರೆಂಜ್ ಎಷ್ಟು ಸಾಫಲ್ಯ ಪಡೆದನೆಂದರೆ, “ಡಚ್ ಪ್ರಜಾಧಿಪತ್ಯದ ಸ್ವಾತಂತ್ರ್ಯ ಮತ್ತು ದೊಡ್ಡಸ್ತಿಕೆಯ ನಿಜ ಸ್ಥಾಪಕನು ಆತನು” ಎಂದು ಹೇಳಲ್ಪಟ್ಟಿದೆ.
3. ಕ್ರೈಸ್ತ ಹಿರಿಯರು ಆತ್ಮ-ಸಂಯಮನ್ನು ತೋರಿಸುವಾಗ ಯಾರು ಪ್ರಯೋಜನ ಹೊಂದುತ್ತಾರೆ?
3 ಅವನ ಆತ್ಮ-ನಿಗ್ರಹದ ಕಾರಣದಿಂದಾಗಿ, ವಿಲ್ಯಂ ದಿ ಸೈಲೆಂಟ್ ತನಗೂ ತನ್ನ ಜನರಿಗೂ ಮಹತ್ತಾದ ಪ್ರಯೋಜನವನ್ನು ತಂದನು. ತುಲನಾತ್ಮಕವಾಗಿ ಇಂದು, ಪವಿತ್ರಾತ್ಮದ ಫಲವಾದ ಆತ್ಮ-ಸಂಯಮವು ಕ್ರೈಸ್ತ ಹಿರಿಯರಿಂದ, ಯಾ ಮೇಲ್ವಿಚಾರಕರಿಂದ ಪ್ರದರ್ಶಿಸಲ್ಪಡಬೇಕು. (ಗಲಾತ್ಯ 5:22, 23) ಈ ಗುಣವನ್ನು ತೋರಿಸುವ ಮೂಲಕ ಅವರು ತಮಗೆ ಮತ್ತು ಸಭೆಗಳಿಗೆ ಇಬ್ಬರಿಗೂ ಪ್ರಯೋಜನವನ್ನು ತಂದುಕೊಳ್ಳುವರು. ಇನ್ನೊಂದು ಕಡೆ, ಆತ್ಮ-ಸಂಯಮವನ್ನು ತೋರಿಸಲು ಅವರು ತಪ್ಪುವದಾದರೆ ಅಗಣ್ಯ ಹಾನಿಯು ಉಂಟಾಗ ಸಾಧ್ಯವಿದೆ.
ಆತ್ಮ-ಸಂಯಮ—ಹಿರಿಯರ ಒಂದು ಆವಶ್ಯಕತೆ
4. ಅಪೊಸ್ತಲ ಪೌಲನ ಯಾವ ಸೂಚನೆಯು ಹಿರಿಯರು ಆತ್ಮ-ಸಂಯಮವನ್ನು ತೋರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ?
4 ಸ್ವತಃ ಹಿರಿಯನಾಗಿದ್ದ ಪೌಲನು ಆತ್ಮ-ಸಂಯಮದ ಮಹತ್ವವನ್ನು ಗಣ್ಯ ಮಾಡಿದ್ದನು. ಎಫೆಸದಿಂದ ಅವನ ಬಳಿಗೆ ಬಂದ ಹಿರಿಯರಿಗೆ ಸೂಚನೆ ಕೊಡುವಾಗ, ಅವನು ಅವರಿಗೆ ಹೇಳಿದ್ದು: “ನಿಮ್ಮ ವಿಷಯದಲ್ಲಿಯೂ, ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರವಾಗಿರ್ರಿ (ಲಕ್ಷ್ಯಕೊಡಿರಿ, NW).” ತಮ್ಮ ಕಡೆಗೆ ಗಮನ ಕೊಡುವದರಲ್ಲಿ, ಬೇರೆ ವಿಷಯಗಳೊಂದಿಗೆ, ಆತ್ಮ-ಸಂಯಮ ತೋರಿಸುವ, ತಮ್ಮ ನಡವಳಿಕೆಯಲ್ಲಿ ಎಚ್ಚರವಿರುವ ಆವಶ್ಯಕತೆಯ ಕುರಿತೂ ಸೇರಿತ್ತು. ತಿಮೊಥಿಗೆ ಬರೆಯುವಲ್ಲಿ, ಪೌಲನು ಇದೇ ವಿಷಯವನ್ನು ತಿಳಿಸುತ್ತಾ, ಹೇಳಿದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲೂ ಎಚ್ಚರಿಕೆಯಾಗಿರು (ಲಕ್ಷ್ಯಕೊಡು, NW).” ಇಂಥ ಸೂಚನೆಗಳು, ಕೆಲವರಿಗೆ ತಾವು ಹೇಳುವುದನ್ನು ಸ್ವತಃ ಕಾರ್ಯರೂಪಕ್ಕೆ ಹಾಕುವದಕ್ಕಿಂತ ಬೇರೆಯವರಿಗೆ ಸಾರುವುದಕ್ಕೇ ಅಧಿಕ ಲಕ್ಷ್ಯ ಕೊಡುವ ಮಾನುಷ ಪ್ರವೃತ್ತಿಯಿದ್ದದ್ದು ಪೌಲನಿಗೆ ತಿಳಿದಿತ್ತೆಂದು ತೋರಿಸುತ್ತವೆ. ಆದ್ದರಿಂದ, ಅವರು ತಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರುವ ಅಗತ್ಯವನ್ನು ಅವನು ಮೊದಲು ಒತ್ತಿಹೇಳಿದನು.—ಅಪೊಸ್ತಲರ ಕೃತ್ಯಗಳು 20:28; 1 ತಿಮೊಥಿ 4:16.
5. ಕ್ರೈಸ್ತ ಹಿರಿಯರು ಹೇಗೆ ನೇಮಕ ಹೊಂದುತ್ತಾರೆ, ಮತ್ತು ಅವರ ಯೋಗ್ಯತೆಗಳು ಬೈಬಲಿನಲ್ಲಿ ಎಲ್ಲಿ ದಾಖಲೆಯಾಗಿವೆ?
5 ವರ್ಷಗಳಲ್ಲೆಲ್ಲಾ ಹಿರಿಯರ ಶಾಸ್ತ್ರೀಯ ಪಾತ್ರವು ಕ್ರಮೇಣ ಸ್ಪಷ್ಟವಾಗಿಗುತ್ತಾ ಬಂತು. ಇಂದು, ಹಿರೀತನವು ಒಂದು ನೇಮಿಸಲ್ಪಡುವ ಸ್ಥಾನವಾಗಿದೆ. ಹಿರಿಯರು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಅಥವಾ ಅದರ ನೇರವಾದ ಪ್ರತಿನಿಧಿಗಳಿಂದ ನೇಮಿಸಲ್ಪಡುತ್ತಾರೆ. ಆ ಮಂಡಲಿಯು ಸರದಿಯಲ್ಲಿ “ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು” ಪ್ರತಿನಿಧಿಸುತ್ತದೆ. (ಮತ್ತಾಯ 24:45-47) ಕ್ರೈಸ್ತ ಮೇಲ್ವಿಚಾರಕ, ಅಥವಾ ಹಿರಿಯನಾಗುವ ಯೋಗ್ಯತೆಗಳು ಮುಖ್ಯವಾಗಿ ಅಪೊಸ್ತಲ ಪೌಲನಿಂದ 1 ತಿಮೊಥಿ 3:1-7ರಲ್ಲಿ ಮತ್ತು ತೀತ 1:5-9ರಲ್ಲಿ ಕೊಡಲ್ಪಟ್ಟಿವೆ.
6, 7. ಹಿರಿಯರ ಯಾವ ವಿಶಿಷ್ಟ ಯೋಗ್ಯತೆಗಳು ಆತ್ಮ-ಸಂಯಮವನ್ನು ಕೇಳಿಕೊಳ್ಳುತ್ತವೆ?
6 ಒಬ್ಬ ಮೇಲ್ವಿಚಾರಕನು ಮಿತ ಸ್ವಭಾವಿಯಾಗಿರಬೇಕೆಂದು 1 ತಿಮೊಥಿ 3:2, 3ರಲ್ಲಿ ಪೌಲನು ಹೇಳುತ್ತಾನೆ. ಇದಕ್ಕೆ ಮತ್ತು ಹಿರಿಯನು ಕ್ರಮಬದ್ಧನಾಗಿರುವುದಕ್ಕೆ ಆತ್ಮ-ಸಂಯಮದ ಅವಶ್ಯಕತೆ ಇದೆ. ಮೇಲ್ವಿಚಾರಕನ ಸ್ಥಾನಕ್ಕೆ ಯೋಗ್ಯತೆ ಪಡೆಯುವ ಪುರುಷನು ಹೊಡೆದಾಡುವವನಲ್ಲ ಮತ್ತು ಸ್ವೇಚ್ಛಾಪರನಲ್ಲ. ಈ ಯೋಗ್ಯತೆಗಳು ಸಹಾ ಹಿರಿಯನು ಆತ್ಮ-ಸಂಯಮಿಯಾಗಿರಬೇಕೆಂದು ಕೇಳಿಕೊಳ್ಳುತ್ತವೆ. ಅದಲ್ಲದೆ ಹಿರಿಯನು ಮದ್ಯದ ದುರುಪಯೋಗ ಮಾಡಿ ಕುಡಿದು ರಂಪು ಎಬ್ಬಿಸುವವನಾಗದಿರಲಿಕ್ಕೆ ಆವನು ಆತ್ಮ-ಸಂಯಮವನ್ನು ತೋರಿಸಲೇ ಬೇಕು.—1 ತಿಮೊಥಿ 3:2 ಪಾದಟಿಪ್ಪಣಿಗಳನ್ನು ಸಹಾ ನೋಡಿರಿ.
7 ತೀತ 1:7ರಲ್ಲಿ, ಮೇಲ್ವಿಚಾರಕನು ಆತ್ಮ-ಸಂಯಮಿಯಾಗಿರಲೇ ಬೇಕು ಎಂದು ಪೌಲನು ವಿಶಿಷ್ಟವಾಗಿ ತಿಳಿಸಿರುತ್ತಾನೆ. ಆದರೂ ಈ ವಚನಗಳಲ್ಲಿ ನಮೂದಿಸಲ್ಪಟ್ಟ ಬೇರೆ ಎಷ್ಟು ಆವಶ್ಯಕತೆಗಳು ಆತ್ಮ-ಸಂಯಮವನ್ನು ಒಳಗೂಡಿವೆಯೆಂದು ಗಮನಿಸಿರಿ. ಉದಾಹರಣೆಗಾಗಿ, ಮೇಲ್ವಿಚಾರಕನು ನಿಂದಾರಹಿತನು ಆಗಿರಲೇಬೇಕು, ಹೌದು, ದೋಷವಿರಹಿತನು ಆಗಿರಬೇಕು. ಆತ್ಮ-ಸಂಯಮವನ್ನು ಅಭ್ಯಾಸಿಸದ ಹೊರತು ಒಬ್ಬ ಹಿರಿಯನು ಈ ಎಲ್ಲಾ ಆವಶ್ಯಕತೆಗಳನ್ನು ಮುಟ್ಟಲಾರನು ನಿಶ್ಚಯ.
ಇತರರೊಂದಿಗೆ ವ್ಯವಹರಿಸುವಲ್ಲಿ
8. ಸೂಚನೆಯನ್ನು ಕೊಡುವದರಲ್ಲಿ ಹಿರಿಯರಿಗೆ ಬೇಕಾದ ಯಾವ ಗುಣಗಳು ಆತ್ಮ-ಸಂಯಮದ ಅಗತ್ಯವನ್ನು ಒತ್ತಿಹೇಳುತ್ತವೆ?
8 ಅದಲ್ಲದೇ, ಮೇಲ್ವಿಚಾರಕನು ಜೊತೆ ವಿಶ್ವಾಸಿಗಳೊಂದಿಗೆ ವ್ಯವಹರಿಸುವಲ್ಲಿ ತಾಳ್ಮೆಯುಳ್ಳವನೂ ದೀರ್ಘಶಾಂತನೂ ಆಗಿರಬೇಕು ಮತ್ತು ಇದು ಆತ್ಮ-ಸಂಯಮವನ್ನು ಅಪೇಕ್ಷಿಸುತ್ತದೆ. ಉದಾಹರಣೆಗೆ, ಗಲಾತ್ಯ 6:1ರಲ್ಲಿ ನಾವು ಓದುವುದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕ ಯೋಗ್ಯತೆಗಳುಳ್ಳ ನೀವು [ಮುಖ್ಯವಾಗಿ ಹಿರಿಯರು] ಸೌಮ್ಯಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರವಾಗಿರು.” ಸೌಮ್ಯಭಾವವನ್ನು ಪ್ರದರ್ಶಿಸಬೇಕಾದರೆ ಆತ್ಮ-ಸಂಯಮದ ಅಗತ್ಯವಿದೆ. ಹಾಗಿದ್ದರೆ, ಆತ್ಮ-ಸಂಯಮದಲ್ಲಿ ತಮ್ಮ ವಿಷಯವಾಗಿ ಎಚ್ಚರದಿಂದಿರುವುದೂ ಕೂಡಿರುವುದು. ಅದೇ ರೀತಿ, ಸಂಕಟಕ್ಕೊಳಗಾದ ವ್ಯಕ್ತಿಯೊಬ್ಬನಿಂದ ಹಿರಿಯನು ಸಹಾಯಕ್ಕಾಗಿ ಕರೆಯಲ್ಪಡುವಾಗ, ಆತ್ಮ-ಸಂಯಮವು ಅತ್ಯಾವಶ್ಯಕವಾಗಿ ಬೇಕು. ವ್ಯಕ್ತಿಯ ಕುರಿತು ಹಿರಿಯನು ಏನೇ ಯೋಚಿಸಲಿ, ಅವನು ದಯೆ, ತಾಳ್ಮೆ ಮತ್ತು ತಿಳುವಳಿಕೆಯನ್ನು ತೋರಿಸಲೇ ಬೇಕು. ಸಲಹೆಯನ್ನು ಕೊಡಲು ತರ್ವೆಪಡುವ ಬದಲಾಗಿ, ಆ ವ್ಯಕ್ತಿಯನ್ನು ಬಾಧಿಸುವ ನಿಜವಾದ ತೊಂದರೆಯೇನೆಂಬದನ್ನು ತಿಳುಕೊಳ್ಳಲು ಅವನು ಕಿವಿಗೊಡಬೇಕು ಮತ್ತು ಮನಸ್ಸಿನ ವಿಷಯಗಳನ್ನು ಹೊರತೆಗೆಯ ಪ್ರಯತ್ನಿಸಬೇಕು.
9. ಅತಿ ಕ್ಷೋಭೆಗೊಂಡ ಸಹೋದರರೊಂದಿಗೆ ವ್ಯವಹರಿಸುವಲ್ಲಿ ಯಾವ ಸೂಚನೆಯನ್ನು ಹಿರಿಯರು ಮನಸ್ಸಿನಲ್ಲಿಡಬೇಕು?
9 ಅತಿ ಕ್ಷೋಭೆಗೊಂಡ ವ್ಯಕ್ತಿಗಳೊಂದಿಗೆ ವ್ಯವಹರಿಸುವಲ್ಲಿ ಯಾಕೋಬ 1:19ರ ಸೂಚನೆಯು ಅತಿ ಯುಕ್ತವು: “ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬರು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” ವಿಶೇಷವಾಗಿ ಕೋಪದ ಮತ್ತು ಭಾವುಕತೆಯ ಪ್ರತಿಕ್ರಿಯೆಗಳನ್ನು ಎದುರಿಸುವಾಗ ಹಿರಿಯನು ಅದೇ ರೀತಿಯಿಂದ ಪ್ರತಿಕ್ರಿಯೆಯನ್ನು ಹಿಂದೆಕೊಡಬಾರದು. ಭಾವೋದ್ರೇಕ ತುಂಬಿದ ಮಾತುಗಳನ್ನು ಬಾವೋದ್ರೇಕ ತುಂಬಿದ ಮಾತುಗಳಿಂದ ಎದುರಿಸದೇ ಇರುವುದಕ್ಕೆ, “ಅಪಕಾರಕ್ಕೆ ಅಪಕಾರವನ್ನು” ಮಾಡದೇ ಇರಲು ಆತ್ಮ-ಸಂಯಮವು ಬೇಕು. (ರೋಮಾಪುರ 12:17) ಪ್ರತಿಗೆ ಪ್ರತಿಯನ್ನು ಕೊಡುವದು ಕೆಟ್ಟ ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಕೆಡಿಸುತ್ತದೆ. ಹೀಗೆ ಇಲ್ಲಿ ಪುನಃ ದೇವರ ವಾಕ್ಯವು ಹಿರಿಯರಿಗೆ ಒಳ್ಳೇ ಸಲಹೆಯನ್ನು ಕೊಡುತ್ತಾ, “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು” ಎಂಬದರ ಜ್ಞಾಪಕವನ್ನು ಕೊಡುತ್ತದೆ.—ಜ್ಞಾನೋಕ್ತಿ 15:1.
ಹಿರಿಯರ ಕೂಟಗಳಲ್ಲಿ ಮತ್ತು ನ್ಯಾಯನಿರ್ಣಾಯಕ ವಿಚಾರಣೆಗಳಲ್ಲಿ
10, 11. ಹಿರಿಯರ ಕೂಟಗಳಲ್ಲಿ ಸಂಭವಿಸಿದ ಯಾವ ವಿಷಯಗಳು ಆ ಸಂದರ್ಭಗಳಲ್ಲಿ ಆತ್ಮ-ಸಂಯಮದ ಅಗತ್ಯವನ್ನು ತೋರಿಸುತ್ತವೆ?
10 ಕ್ರೈಸ್ತ ಮೇಲ್ವಿಚಾರಕರು ಆತ್ಮ-ಸಂಯಮ ತೋರಿಸಲು ಎಚ್ಚರವಿರಬೇಕಾದ ಇನ್ನೊಂದು ಕ್ಷೇತ್ರವು ಹಿರಿಯರ ಕೂಟಗಳ ಸಮಯದಲ್ಲಿ. ಸತ್ಯ ಮತ್ತು ನ್ಯಾಯದ ಹಿತಾಸಕ್ತಿಯ ಪರವಾಗಿ ಶಾಂತಭಾವದಿಂದ ಮಾತಾಡಲು ಕೆಲವೊಮ್ಮೆ ಮಹಾ ಆತ್ಮ-ಸಂಯಮವು ಬೇಕಾಗುತ್ತದೆ. ಒಂದು ಚರ್ಚೆಯ ಮೇಲೆ ಪ್ರಾಬಲ್ಯ ಗಳಿಸ ಪ್ರಯತ್ನಿಸುವುದನ್ನು ವರ್ಜಿಸಲಿಕ್ಕೂ ಆತ್ಮ-ಸಂಯಮ ಬೇಕು. ಎಲ್ಲಿ ಹಿರಿಯನೊಬ್ಬನಿಗೆ ಇಂಥ ಪ್ರವೃತ್ತಿಯು ಇದೆಯೋ ಅಲ್ಲಿ ಇನ್ನೊಬ್ಬ ಹಿರಿಯನು ಅವನಿಗೆ ಸೂಚನೆ ಕೊಡುವದು ದಯೆಯುಳ್ಳ ವಿಷಯವಾಗಿರುವುದು.— 3 ಯೋಹಾನ 9ಕ್ಕೆ ಹೋಲಿಸಿ.
11 ಪುನಃ, ಅದೇ ಹಿರಿಯರ ಕೂಟದಲ್ಲಿ, ಅತಿಶ್ರದ್ಧಾಳು ಹಿರಿಯನೊಬ್ಬನು ಭಾವೋದ್ರೇಕಕ್ಕೆ ಒಳಗಾಗಿ, ಸರ್ವವೆತ್ತಿ ಮಾತಾಡುವ ಶೋಧನೆಗೆ ಬೀಳಲೂಬಹುದು. ಅಂಥ ಕ್ರಿಯೆಗಳು ಆತ್ಮ-ಸಂಯಮದ ಕೊರತೆಯನ್ನು ಎಷ್ಟು ಮಹತ್ತಾಗಿ ಬಯಲುಪಡಿಸುತ್ತವೆ! ಅವು ನಿಜವಾಗಿಯೂ ಇಮ್ಮಡಿ ಆತ್ಮ-ಸೋಲಿನ ಗುರುತು. ಒಂದನೆಯದಾಗಿ, ಎಷ್ಟರ ಮಟ್ಟಿಗೆ ಆ ವ್ಯಕ್ತಿಯು ಆತ್ಮ-ಸಂಯಮವನ್ನು ಕಳಕೊಳ್ಳುತ್ತಾನೋ ಅಷ್ಟರ ಮಟ್ಟಿಗೆ, ಅವನು ತನ್ನ ತರ್ಕಬದ್ಧತೆಯನ್ನು ಭಾವೋದ್ರೇಕದಿಂದ ಮಬ್ಬುಗವಿಸಿ ತನ್ನ ತರ್ಕವನ್ನು ನಿರ್ಬಲಗೊಳಿಸುತ್ತಾನೆ. ಇನ್ನೊಂದು ಕಡೆ, ಅವನು ತೋರಿಸುವ ಹೆಚ್ಚು ಭಾವೋದ್ರೇಕವು, ಜೊತೆ ಹಿರಿಯರನ್ನು ಸಂಕೋಚಕ್ಕೆ ಹಾಕ ಸಾಧ್ಯವಿದೆ ಅಥವಾ ಅವನನ್ನು ವಿರೋಧಿಸುವಂತೆ ನಡಿಸಲೂ ಬಹುದು. ಅದಲ್ಲದೆ, ಹಿರಿಯರು ಎಚ್ಚರವಾಗಿರದ ಹೊರತು, ತೀವ್ರ ಅಭಿಪ್ರಾಯ ಭಿನ್ನತೆಗಳು ಅವರಲ್ಲಿ ಪಕ್ಷಭೇದವನ್ನು ಉಂಟುಮಾಡಲೂ ಬಹುದು. ಇದು ಅವರ ಸ್ವಂತ ಹಾನಿಗೆ ಮತ್ತು ಸಭಾ ಹಾನಿಗೆ ಕಾರ್ಯನಡಿಸುವದು.—ಅಪೊಸ್ತಲರ ಕೃತ್ಯಗಳು 15:36-40ಕ್ಕೆ ಹೋಲಿಸಿ.
12. ಯಾವ ಪರಿಸ್ಥಿತಿಗಳನ್ನು ವ್ಯವಹರಿಸುವಲ್ಲಿ ಹಿರಿಯರು ಆತ್ಮ-ಸಂಯಮವನ್ನು ತೋರಿಸಲು ಜಾಗ್ರತೆ ವಹಿಸಬೇಕು?
12 ಪಕ್ಷಪಾತಿಗಳಾಗದೆ ಇರಲು ಮತ್ತು ತಮ್ಮ ಅಧಿಕಾರದ ದುರುಪಯೋಗ ಮಾಡದಿರಲು ಸಹಾ ಹಿರಿಯರಿಗೆ ಆತ್ಮ-ಸಂಯಮದ ಅಗತ್ಯವಿದೆ. ಶೋಧನೆಗಳಿಗೆ ಬಲಿಬೀಳುವದು, ಒಬ್ಬನು ನುಡಿಯುವ ಮತ್ತು ಮಾಡುವ ವಿಷಯಗಳ ಮೇಲೆ ಅಪೂರ್ಣ ಮಾನವ ದಾಕ್ಷಿಣ್ಯಗಳು ಪ್ರಭಾವಿಸುವಂತೆ ಬಿಡುವದು ಅತಿ ಸುಲಭ! ಅನೇಕ ವೇಳೆ, ಅವರ ಮಕ್ಕಳಲ್ಲಿ ಒಬ್ಬರು ಅಥವಾ ಸಂಬಂಧಿಕರಲ್ಲಿ ಒಬ್ಬರು ದುರ್ನಡತೆಗೆ ಅಪರಾಧಿಗಳಾಗಿ ಕಂಡು ಬಂದಾಗ, ನಿರ್ಣಾಯಕವಾಗಿ ಕ್ರಿಯೆಗೈಯಲು ಹಿರಿಯರು ತಪ್ಪಿದ್ದಾರೆ. ಅಂಥ ಪರಿಸ್ಧಿತಿಗಳಲ್ಲಿ ರಕ್ತ-ಸಂಬಂಧವು ನ್ಯಾಯ ಕ್ರಿಯೆಗೆ ಅಡಿಮ್ಡಾಡದಂತೆ ಆತ್ಮ-ಸಂಯಮವು ಬೇಕಾಗಿದೆ.—ಧರ್ಮೋಪದೇಶಕಾಂಡ 10:17.
13. ನ್ಯಾಯನಿರ್ಣಾಯಕ ವಿಚಾರಣೆಗಳಲ್ಲಿ ಆತ್ಮ-ಸಂಯಮವು ಹಿರಿಯರಿಗೆ ವಿಶೇಷವಾಗಿ ಬೇಕಾಗಿದೆ ಏಕೆ?
13 ಆತ್ಮ-ಸಂಯಮವು ಅತಿ ಮಹತ್ವವಿರುವ ಇನ್ನೊಂದು ಪರಿಸ್ಥಿತಿಯು ಒಂದು ನ್ಯಾಯ ನಿರ್ಣಾಯಕ ವಿಚಾರಣೆ ನಡಿಯುವಾಗ. ಭಾವೋದ್ರೇಕದಿಂದ ಅಯುಕ್ತವಾಗಿ ಪ್ರಭಾವಿತರಾಗದಂತೆ ಹಿರಿಯರು ಮಹಾ ಆತ್ಮ-ಸಂಯಮವನ್ನು ಪ್ರದರ್ಶಿಸಲೇಬೇಕು. ಕಣ್ಣೀರಿನಿಂದಾಗಿ ಅವರು ಅತಿ ಸುಲಭವಾಗಿ ಪ್ರಭಾವಿತರಾಗಿ ಒಲೆದಾಡಬಾರದು. ಅದೇ ಸಮಯದಲ್ಲಿ, ಹಿರಿಯನ ಮೇಲೆ ದೋಷಾರೋಪಗಳು ಮತ್ತು ದೂಷಣೆಗಳು ಹೊರಿಸಲ್ಪಡುವಾಗ ಹಿರಿಯನು ತನ್ನ ಚಿತ್ತಸ್ವಾಸ್ಥ್ಯವನ್ನು ಕಳಕೊಳ್ಳಬಾರದು; ಧರ್ಮಭ್ರಷ್ಟರೊಂದಿಗೆ ವ್ಯವಹರಿಸುವಾಗ ಒಂದುವೇಳೆ ಹಾಗಾಗಬಹುದು. ಇಲ್ಲಿ ಪೌಲನ ಮಾತುಗಳು ಅತ್ಯಂತ ಯುಕ್ತವಾಗಿವೆ. “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ . . . ಆಗಿರಬೇಕು.” ಒತ್ತಡದ ಕೆಳಗೆ ಸಾಧುತ್ವ ತೋರಿಸಲು ಆತ್ಮ-ಸಂಯಮವು ಬೇಕು. ಪೌಲನು ಮುಂದರಿಸುತ್ತಾ, “ಕರ್ತನ ದಾಸನು,” “ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ಸೌಮ್ಯತೆಯಿಂದ ತಿದ್ದುವವನೂ” ಆಗಿರಬೇಕು ಎಂದು ಹೇಳುತ್ತಾನೆ. ಸೌಮ್ಯತೆಯನ್ನು ತೋರಿಸಲು ಮತ್ತು ವಿರೋಧಿಗಳೊಂದಿಗೆ ವ್ಯವಹರಿಸುವಾಗ ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮಹಾ ಆತ್ಮ-ಸಂಯಮದ ಅಗತ್ಯವಿದೆ.—2 ತಿಮೊಥಿ 2:24, 25.
ವಿರುದ್ಧಲಿಂಗದೊಂದಿಗೆ ಆತ್ಮ-ಸಂಯಮ
14. ವಿರುದ್ಧಲಿಂಗದವರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಯಾವ ಉತ್ತಮ ಸೂಚನೆಯನ್ನು ಹಿರಿಯರು ಪಾಲಿಸಬೇಕು?
14 ವಿರುದ್ಧಲಿಂಗದವರೊಂದಿಗೆ ವ್ಯವಹರಿಸಬೇಕಾದ ಸಂದರ್ಭಗಳಲ್ಲಿ ಹಿರಿಯರು ಆತ್ಮ-ಸಂಯಮ ತೋರಿಸಲು ತೀವ್ರ ಎಚ್ಚರಿಕೆಯಿಂದಿರಬೇಕು. ತನ್ನ ಕುರಿಪಾಲನೆ ಸಂದರ್ಶನೆಯಲ್ಲಿ ಒಬ್ಬಾಕೆ ಸಹೋದರಿಯನ್ನು ಒಂಟಿಯಾಗಿ ಸಂದರ್ಶಿಸುವದು ಹಿರಿಯನಿಗೆ ಯೋಗ್ಯವಲ್ಲ. ಹಿರಿಯನೊಂದಿಗೆ ಇನ್ನೊಬ್ಬ ಹಿರಿಯನು ಅಥವಾ ಒಬ್ಬ ಶುಶ್ರೂಷೆ ಸೇವಕನು ಜತೆಗೂಡಿರಬೇಕು. ಈ ಸಮಸ್ಯೆಯನ್ನು ಸಂಭವನೀಯವಾಗಿ ಗಣ್ಯಮಾಡುತ್ತಾ, ಪೌಲನು ತಿಮೊಥಿಗೆ ಸೂಚನೆ ಕೊಟ್ಟದ್ದು: “ವೃದ್ಧ ಸ್ತ್ರೀಯರನ್ನು ತಾಯಿಗಳೆಂದೂ ಯೌವನ ಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ಬುದ್ಧಿಹೇಳು.” (1 ತಿಮೊಥಿ 5:1, 2) ಕೆಲವು ಹಿರಿಯರು ಪಿತೃವಾತ್ಸಲ್ಯದಿಂದಲೋ ಎಂಬಂತೆ ಸಹೋದರಿಯೊಬ್ಬಳ ಮೇಲೆ ಕೈಯಿಡುವುದು ತೋರಿಬಂದಿದೆ. ಆದರೆ ಅವರು ತಮ್ಮನ್ನು ತಾವೇ ಮೋಸಗೊಳಿಸುತ್ತಿರಬಹುದು, ಯಾಕೆಂದರೆ ನಿಜಕ್ರೈಸ್ತ ಬಂಧುವಾತ್ಸಲ್ಯದ ಬದಲಾಗಿ ಒಂದು ಪ್ರಣಯಾಚರಣೆಯ ಪ್ರವೃತ್ತಿಯು ಅಂಥ ಒಂದು ಭಾವಾಭಿನಯವನ್ನು ಪ್ರೇರೇಪಿಸಲೂಬಹುದು.—1 ಕೊರಿಂಥ 7:1 ಹೋಲಿಸಿ.
15. ಹಿರಿಯನು ಆತ್ಮ-ಸಂಯಮವನ್ನು ತೋರಿಸದಾಗ ಯೆಹೋವನ ನಾಮಕ್ಕೆ ಉಂಟಾಗಬಲ್ಲ ನಿಂದೆಯನ್ನು ಒಂದು ನಿರ್ದಿಷ್ಟ ಫಟನೆಯು ಹೇಗೆ ಎತ್ತಿಹೇಳುತ್ತದೆ?
15 ಸಭೆಯ ತಮ್ಮ ಸಹೋದರಿಯರೊಂದಿಗಿನ ವ್ಯವಹಾರಗಳಲ್ಲಿ ಕೆಲವು ಹಿರಿಯರು ಆತ್ಮ-ಸಂಯಮವನ್ನು ತೋರಿಸದೆ ಹೋದ ಕಾರಣ ಸತ್ಯಕ್ಕೆ ಅದೆಷ್ಟು ಹಾನಿಯುಂಟಾಗಿರುತ್ತದೆ! ಕೆಲವು ವರ್ಷಗಳ ಹಿಂದೆ, ಒಬ್ಬ ಹಿರಿಯನು ಬಹಿಷ್ಕರಿಸಲ್ಪಟ್ಟನು ಯಾಕೆಂದರೆ ಸಾಕ್ಷಿಯಲ್ಲದ ಗಂಡನಿದ್ದ ಒಬ್ಬಾಕೆ ಕ್ರೈಸ್ತ ಸಹೋದರಿಯೊಂದಿಗೆ ಅವನು ವ್ಯಭಿಚಾರಗೈದದರಿಂದಲೇ. ಆ ಮಾಜಿ ಹಿರಿಯನ ಬಹಿಷ್ಕಾರವು ಪ್ರಕಟಿಸಲ್ಪಟ್ಟ ಅದೇ ರಾತ್ರಿಯಲ್ಲಿ, ಆ ಉದ್ರೇಕಿತ ಗಂಡನು ತನ್ನ ಕೋವಿಯನ್ನು ಹಿಡಿದುಕೊಂಡು ರಾಜ್ಯ ಸಭಾಗೃಹವನ್ನು ನುಗ್ಗಿ ಆ ಇಬ್ಬರು ಅಪರಾಧಿಗಳಿಗೆ ಗುಂಡು ಹೊಡೆದನು. ಅವರಿಬ್ಬರೂ ಬದುಕಿದರು, ಮತ್ತು ಅವನನ್ನು ಆ ಕೂಡಲೇ ನಿರಾಯುಧನನ್ನಾಗಿ ಮಾಡಲಾಯಿತು, ಆದರೆ ಮಾರಣೇದಿನ ವಾರ್ತಾಪತ್ರದಲ್ಲಿ ಮುಖಪುಟದ ಸುದ್ದಿಯು, ‘ಚರ್ಚಿನಲ್ಲಿ ಗುಂಡುಹೊಡೆತ’ ಎಂಬದಾಗಿ ಛಾಪಿಸಿತ್ತು. ಆ ಹಿರಿಯನ ಆತ್ಮ-ಸಂಯಮದ ಕೊರತೆಯು ಸಭೆಯ ಮೇಲೆ ಮತ್ತು ಯೆಹೋವನ ನಾಮದ ಮೇಲೆ ಎಂಥಾ ನಿಂದೆಯನ್ನು ಬರಮಾಡಿತು!
ಬೇರೆ ಕ್ಷೇತ್ರಗಳಲ್ಲಿ ಆತ್ಮ-ಸಂಯಮ
16. ಬಹಿರಂಗ ಭಾಷಣಗಳನ್ನು ಕೊಡುವಾಗ ಹಿರಿಯರು ಆತ್ಮ-ಸಂಯಮ ತೋರಿಸಲು ಜಾಗ್ರತೆ ವಹಿಸಬೇಕು ಏಕೆ?
16 ಒಬ್ಬ ಹಿರಿಯನು ಬಹಿರಂಗ ಭಾಷಣ ಕೊಡುವಾಗಲೂ ಆತ್ಮ-ಸಂಯಮವು ಅತಿ ಹೆಚ್ಚಾಗಿ ಬೇಕಾಗಿದೆ. ಬಹಿರಂಗ ಭಾಷಣಗಾರನು ಆತ್ಮವಿಶ್ವಾಸ ಮತ್ತು ಸಮಚಿತ್ತದ ಒಂದು ಆದರ್ಶ ನಮೂನೆಯಾಗಿರಬೇಕು. ಕೆಲವರು ಸಭಿಕರಿಂದ ನಗೆಯನ್ನು ಗಳಿಸುವ ಉದ್ದೇಶ ಮಾತ್ರಕ್ಕಾಗಿ ಅನೇಕ ಸರಸೋಕ್ತಿಗಳನ್ನು ನುಡಿಯುತ್ತಾರೆ. ಇದು ಸಭಿಕರನ್ನು ಮೆಚ್ಚಿಸುವ ಒಂದು ಶೋಧನೆಗೆ ಒಳಗಾಗಿರುವದನ್ನು ಬಯಲುಪಡಿಸಬಹುದು. ಶೋಧನೆಗೆ ಎಲ್ಲಾ ರೀತಿಯ ಬಲಿಯಾಗುವಿಕೆಯು ಆತ್ಮ-ಸಂಯಮದ ಕೊರತೆಯಿಂದಲೇ ಎಂಬುದು ನಿಶ್ಚಯ. ಭಾಷಣಕೊಡುವಾಗ ವೇಳೆಮೀರುವುದೂ ಆತ್ಮ-ಸಂಯಮದ ಕೊರತೆಯನ್ನು, ಹಾಗೂ ಸಾಕಷ್ಟು ತಯಾರಿ ಇಲ್ಲದ್ದನ್ನು ಹೊರಗೆಡಹುತ್ತದೆ.
17, 18. ತನ್ನ ವಿವಿಧ ಜವಾಬ್ದಾರಿಕೆಗಳನ್ನು ಹಿರಿಯನು ಸಮತೂಕದಲ್ಲಿಡುವದರಲ್ಲಿ ಆತ್ಮ-ಸಂಯಮವು ಯಾವ ಪಾತ್ರವನ್ನು ವಹಿಸುತ್ತದೆ?
17 ಕಷ್ಟಪಟ್ಟು ಕೆಲಸ ಮಾಡುವ ಪ್ರತಿಯೊಬ್ಬ ಹಿರಿಯನು ಅವನ ಶಕ್ತಿ ಮತ್ತು ಸಮಯದ ಮೇಲೆ ಮಾಡಲ್ಪಡುವ ವಿವಿಧ ಕೇಳಿಕೆಗಳನ್ನು ಸಮತೂಕದಲ್ಲಿಡುವ ಪಂಥಾಹ್ವಾನವನ್ನು ಎದುರಿಸಬೇಕು. ಒಂದರಲ್ಲಿ ಅಥವಾ ಇನ್ನೊಂದರಲ್ಲಿ ಅತಿರೇಕಕ್ಕೆ ಹೋಗದಂತೆ ಆತ್ಮ-ಸಂಯಮವು ಅಗತ್ಯ. ಕೆಲವು ಹಿರಿಯರು ತಮ್ಮ ಸಭಾ ಕೇಳಿಕೆಗಳಲ್ಲಿ ಎಷ್ಟು ಮಗ್ನರಾಗಿರುತ್ತಾರೆಂದರೆ ತಮ್ಮ ಕುಟುಂಬಗಳನ್ನು ಅವರು ಅಲಕ್ಷಿಸಿರುತ್ತಾರೆ. ಹೀಗೆ, ಒಬ್ಬ ಸಹೋದರಿಯು ಹಿರಿಯನ ಹೆಂಡತಿಗೆ ಅವನು ತನಗೆ ಮಾಡಿದ ಉತ್ತಮ ಕುರಿಪಾಲನೆಯ ಸಂದರ್ಶನೆಯ ಕುರಿತು ತಿಳಿಸಿದಾಗ, ಆ ಹಿರಿಯನ ಪತ್ನಿ ಉದ್ಗರಿಸಿದ್ದು: “ಕೆಲವೊಮ್ಮೆ ಅವನು ನನಗೂ ಕುರಿಪಾಲನೆಯ ಸಂದರ್ಶನೆ ಮಾಡಿದ್ದರೆ ಎಷ್ಟು ಒಳ್ಳೇದಿತ್ತು!”—1 ತಿಮೊಥಿ 3:2, 4, 5.
18 ವೈಯಕ್ತಿಕ ಅಭ್ಯಾಸದಲ್ಲಿ ಕಳೆಯುವ ಸಮಯವನ್ನು ಕ್ಷೇತ್ರಸೇವೆಯಲ್ಲಿ ಹಾಗೂ ಕುರಿಪಾಲನೆಯ ಸಂದರ್ಶನೆಯಲ್ಲಿ ಕಳೆಯುವ ಸಮಯದೊಂದಿಗೆ ಸಮತೂಕದಲ್ಲಿಡಲಿಕ್ಕೂ ಹಿರಿಯನಿಗೆ ಆತ್ಮ-ಸಂಯಮ ಬೇಕು. ಮಾನುಷ ಹೃದಯದ ವಂಚಕ ಪ್ರವೃತ್ತಿಯಿಂದಾಗಿ, ತನಗೆ ಯಾವುದು ಹೆಚ್ಚು ಹಿತಕರವಾಗಿ ಕಾಣುತ್ತದೋ ಅದರಲ್ಲಿ ಬೇಕಾದ್ದಕ್ಕಿಂತ ಹೆಚ್ಚು ಸಮಯವನ್ನು ಕಳೆಯುವುದು ಒಬ್ಬ ಹಿರಿಯನಿಗೆ ಅತಿ ಸುಲಭ. ಪುಸ್ತಕಗಳು ಅವನಿಗಿಷ್ಟವಿದ್ದರೆ, ವೈಯಕಿಕ್ತ ಅಭ್ಯಾಸದಲ್ಲಿ ಅವನು ಬೇಕಾದ್ದಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತಿರಬಹುದು. ಮನೆ ಮನೆಯ ಸೇವೆಯು ಅವನಿಗೆ ಸ್ವಲ್ಪ ಕಷ್ಟವೆಂದು ಕಂಡರೆ, ಕುರಿಪಾಲನೆಯ ಸಂದರ್ಶನೆಯ ಹಿತಾಸಕ್ತಿಯಲ್ಲಿ ಅದನ್ನು ಅಲಕ್ಷಿಸುವದಕ್ಕೆ ಅವನು ನೆವನವನ್ನು ಕಾಣಬಹುದು.
19. ಆತ್ಮ-ಸಂಯಮದ ಅಗತ್ಯವನ್ನು ಒತ್ತಿಹೇಳುವ ಯಾವ ಹಂಗು ಹಿರಿಯರಿಗಿದೆ?
19 ಗುಟ್ಟನ್ನು ಕಾಪಾಡಿಕೊಳ್ಳಲು ಹಿರಿಯನಿಗಿರುವ ಹಂಗು ಸಹಾ ಅವನು ಆತ್ಮ-ಸಂಯಮವನ್ನು ತೋರಿಸುವದಕ್ಕೆ ಎಚ್ಚರವಿರುವದನ್ನು ಅವಶ್ಯಪಡಿಸುತ್ತದೆ. “ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ” ಎಂಬ ಸೂಚನೆಯು ಇಲ್ಲಿ ಅನ್ವಯಿಸುತ್ತದೆ. (ಜ್ಞಾನೋಕ್ತಿ 25:9) ಹಿರಿಯರಿಂದ ಅತ್ಯಂತ ವಿಸ್ತಾರ್ಯವಾಗಿ ಉಲ್ಲಂಘಿಸಲ್ಪಡುವ ಆವಶ್ಯಕತೆಯು ಇದಾಗಿರಬಹುದು ಎಂದು ಅನುಭವವು ಸೂಚಿಸುತ್ತದೆ. ಒಳ್ಳೇ ಸಂಸರ್ಗ ಮಾಡಶಕ್ತಳಾದ ಬುದ್ಧಿವಂತೆಯೂ ಪ್ರಿಯಳೂ ಆದ ಪತ್ನಿಯು ಒಬ್ಬ ಹಿರಿಯನಿಗಿರುವುದಾದರೆ, ಒಂದು ಗುಟ್ಟಿನ ವಿಷಯವನ್ನು ಅವಳೊಂದಿಗೆ ಚರ್ಚಿಸುವ ಯಾ ತಿಳಿಸುವ ಪ್ರವೃತ್ತಿಯು ಅವನಲ್ಲಿ ಉಂಟಾದೀತು. ಆದರೆ ಇದು ಅಯೋಗ್ಯವು ಮತ್ತು ಅತ್ಯಂತ ಅವಿವೇಕತನ. ಒಂದನೇದಾಗಿ, ಅದು ಒಂದು ವಿಶ್ವಾಸ ಘಾತಕತನವು. ವಿಷಯಗಳು ಕಟ್ಟುನಿಟ್ಟಾಗಿ ಗುಪ್ತವಾಗಿಡಲ್ಪಡುವವೆಂಬ ಭರವಸದಿಂದ ನಮ್ಮ ಆತ್ಮಿಕ ಸಹೋದರ ಮತ್ತು ಸಹೋದರಿಯರು ಹಿರಿಯರ ಬಳಿಗೆ ಬರುತ್ತಾರೆ ಮತ್ತು ಗುಟ್ಟಿನ ವಿಷಯಗಳನ್ನು ತಿಳಿಸುತ್ತಾರೆ. ಆ ಗುಟ್ಟಿನ ವಿಷಯಗಳನ್ನು ಒಬ್ಬನು ತನ್ನ ಪತ್ನಿಗೆ ತಿಳಿಸುವುದು ತಪ್ಪು, ಅವಿವೇಕತನ, ಹಾಗೂ ಪ್ರೀತಿರಹಿತವು ಯಾಕೆಂದರೆ ಇದು ಆಕೆಯ ಮೇಲೆ ಅನಾವಶ್ಯಕ ಹೊರೆಯನ್ನು ಹಾಕುತ್ತದೆ.—ಜ್ಞಾನೋಕ್ತಿ 10:19; 11:13.
20. ಹಿರಿಯರು ಆತ್ಮ-ಸಂಯಮವನ್ನು ಅಭ್ಯಾಸಿಸುವದು ಯಾಕೆ ಅಷ್ಟು ಮಹತ್ವಪೂರ್ಣವು?
20 ಹೀಗೆ ಆತ್ಮ-ಸಂಯಮವು ಎಷ್ಟೋ ಮಹತ್ವಪೂರ್ಣವೆಂಬದಕ್ಕೆ ಯಾವ ಸಂದೇಹವೂ ಇರುವದಿಲ್ಲ, ಮತ್ತು ವಿಶೇಷವಾಗಿ ಹಿರಿಯರಿಗೆ! ಯೆಹೋವನ ಜನರ ನಡುವೆ ನಾಯಕತ್ವವನ್ನು ವಹಿಸುವ ಸುಯೋಗವನ್ನು ಅವರ ವಶಕ್ಕೆ ಕೊಟ್ಟಿರಲಾಗಿ, ಅವರಿಗೆ ಹೆಚ್ಚಿನ ಹೊಣೆಗಾರಿಕೆಯು ಇದೆ. ಅವರಿಗೆ ಬಹಳವಾಗಿ ಕೊಡಲ್ಪಟ್ಟಿರುವುದರಿಂದ, ಬಹಳವಾಗಿಯೇ ನಿರೀಕ್ಷಿಸಲ್ಪಡುವದು. (ಲೂಕ 12:48; 16:10; ಯಾಕೋಬ 3:1ಕ್ಕೆ ಹೋಲಿಸಿ.) ಇತರರಿಗಾಗಿ ಉತ್ತಮ ಮಾದರಿಯನ್ನು ಇಡುವುದು ಹಿರಿಯರ ಸುಯೋಗವೂ ಕರ್ತವ್ಯವೂ ಆಗಿದೆ. ಅದಲ್ಲದೆ, ನೇಮಿತ ಹಿರಿಯರು ಇತರರಿಗಿಂತ ಹೆಚ್ಚು ಒಳ್ಳೆದನ್ನು ಅಥವಾ ಹೆಚ್ಚು ಕೆಟ್ಟದ್ದನ್ನು ಮಾಡುವ ಸ್ಥಾನದಲ್ಲಿದ್ದಾರೆ, ಇದು ಹೆಚ್ಚಾಗಿ ಅವರು ಆತ್ಮ-ಸಂಯಮವನ್ನು ಅಭ್ಯಾಸಿಸುತ್ತಾರೋ ಇಲ್ಲವೋ ಎಂಬದರ ಮೇಲೆ ಹೊಂದಿಕೊಂಡಿದೆ. ಆದುದರಿಂದ, “ಮೇಲ್ವಿಚಾರಕನು . . . ಆತ್ಮ-ಸಂಯಮಿ ಆಗಿರಬೇಕು” ಎಂದು ಪೌಲನು ಹೇಳಿದ್ದರಲ್ಲೇನೂ ಆಶ್ಚರ್ಯವಿಲ್ಲ. (w91 11/15)
ನಿಮಗೆ ನೆನಪಿದೆಯೇ?
▫ ಹಿರಿಯರ ಯಾವ ಶಾಸ್ತ್ರೀಯ ಆವಶ್ಯಕತೆಗಳು ಅವರು ಆತ್ಮ-ಸಂಯಮವನ್ನು ಅಭ್ಯಾಸಿಸಬೇಕೆಂದು ತೋರಿಸುತ್ತವೆ?
▫ ಜೊತೆ ವಿಶ್ವಾಸಿಗಳೊಂದಿಗೆ ವ್ಯವಹರಿಸುವಲ್ಲಿ ಹಿರಿಯರಿಂದ ಆತ್ಮ-ಸಂಯಮ ತೋರಿಸಲ್ಪಡಬೇಕು ಏಕೆ?
▫ ಹಿರಿಯರ ಕೂಟಗಳಲ್ಲಿ ಆತ್ಮ-ಸಂಯಮವು ಹೇಗೆ ತೋರಿಸಲ್ಪಡಬೇಕು?
▫ ಹಿರಿಯರು ಗುಟ್ಟನ್ನು ಕಾಪಾಡುವ ಅಗತ್ಯವಿರುವರಿಂದ ಯಾವ ಪಂಥಾಹ್ವಾನವು ನೀಡಲ್ಪಡುತ್ತದೆ?
[ಪುಟ 20 ರಲ್ಲಿರುವ ಚಿತ್ರ]
ಹಿರಿಯರ ಕೂಟಗಳಲ್ಲಿ ಆತ್ಮ-ಸಂಯಮವನ್ನು ಪ್ರದರ್ಶಿಸುವುದು ಅತ್ಯಾವಶ್ಯಕವು
[ಪುಟ 23 ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರು ಆತ್ಮ-ಸಂಯಮವನ್ನು ಅಭ್ಯಾಸಿಸಬೇಕು ಮತ್ತು ಗುಟ್ಟನ್ನು ಕಾಪಾಡಿಕೊಳ್ಳಬೇಕು