ಸೌಮ್ಯತೆಯನ್ನು ಧರಿಸಿಕೊಳ್ಳಿರಿ!
“ದೇವರಿಂದ ಆರಿಸಿಕೊಂಡವರೂ, ಪವಿತ್ರರೂ, ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಬಾವ ಸೌಮ್ಯತೆ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.”—ಕೊಲೊಸ್ಸೆಯ 3:12, NW.
1-3. ಕೊಲೊಸ್ಸೆಯ 3:12-14ರಲ್ಲಿ, ಸೌಮ್ಯತೆ ಮತ್ತು ಇತರ ದೈವಿಕ ಗುಣಗಳ ಕುರಿತು ಅಪೊಸ್ತಲ ಪೌಲನು ಏನಂದನು?
ಯೆಹೋವನು ತನ್ನ ಜನರಿಗೆ ಅತ್ಯಂತ ಉತ್ತಮವಾದ ಸಾಂಕೇತಿಕ ಉಡುಪನ್ನು ಕೊಡುತ್ತಾನೆ. ವಾಸ್ತವದಲ್ಲಿ, ಆತನ ಅನುಗ್ರಹವನ್ನು ಗಳಿಸ ಬಯಸುವವರೆಲ್ಲರೂ ಸೌಮ್ಯತೆಯ ಗಟ್ಟಿಯಾದ ದಾರಗಳುಳ್ಳ ಉಡುಪನ್ನು ಧರಿಸಿದವರಾಗಿರಬೇಕು. ಈ ಗುಣವು ಸಾಂತ್ವನಕಾರಿ ಯಾಕೆಂದರೆ ಅದು ಒತ್ತಡಕರ ಪರಿಸ್ಥಿತಿಗಳಲ್ಲಿ ಉದ್ವೇಗವನ್ನು ಕಡಿಮೆಗೊಳಿಸುತ್ತದೆ. ಅದು ಸಂರಕ್ಷಕವೂ ಆಗಿದೆ ಯಾಕಂದರೆ ಅದು ಕಲಹವನ್ನು ತೊಲಗಿಸಿಬಿಡುತ್ತದೆ.
2 ಅಪೊಸ್ತಲ ಪೌಲನು ಜೊತೆ ಅಭಿಷಿಕ್ತ ಕ್ರೈಸ್ತರಿಗೆ ಬರೆದದ್ದು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪವಿತ್ರರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ (ಸೌಮ್ಯತೆ, NW) ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆಯ 3:12) “ಧರಿಸಿಕೊಳ್ಳಿರಿ” ಎಂದು ತರ್ಜುಮೆಯಾದ ಗ್ರೀಕ್‌ಪದದ ಕಾಲರೂಪವು, ತುರ್ತಿನ ಭಾವದಿಂದ ಕ್ರಮ ಕೈಕೊಳ್ಳುವ ಕ್ರಿಯೆಯನ್ನು ಸೂಚಿಸುತ್ತದೆ. ಆರಿಸಿಕೊಂಡವರೂ, ಪವಿತ್ರರೂ, ದೇವರಿಗೆ ಪ್ರಿಯರೂ ಆಗಿರುವ ಅಭಿಷಿಕ್ತ ಜನರು ಸೌಮ್ಯತೆಯಂಥ ಗುಣಗಳನ್ನು ಧರಿಸಿಕೊಳ್ಳುವುದರಲ್ಲಿ ವಿಳಂಬಿಸಬಾರದಿತ್ತು.
3 ಪೌಲನು ಮತ್ತೂ ಹೇಳಿದ್ದು: “ಮತ್ತೊಬ್ಬರ ಮೇಲೆ ತಪ್ಪು ಹೊರಿಸುವುದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು (ಯೆಹೋವನು, NW) ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆಯ 3:13, 14) ಪ್ರೀತಿ, ದೀನಭಾವ ಮತ್ತು ಇತರ ದೈವಿಕ ಗುಣಗಳು ಯೆಹೋವನ ಸಾಕ್ಷಿಗಳನ್ನು “ಐಕ್ಯತೆಯಲ್ಲಿ ಒಂದಾಗಿರುವಂತೆ” ಶಕ್ಯರನ್ನಾಗಿ ಮಾಡುತ್ತದೆ.—ಕೀರ್ತನೆ 133:1-3.
ಸೌಮ್ಯ-ಚಿತ್ತದ ಕುರುಬರು ಬೇಕಾಗಿದ್ದಾರೆ
4. ನಿಜ ಕ್ರೈಸ್ತರು ಯಾವ ಗುಣಗಳಿಂದ ನೇಯಲ್ಪಟ್ಟ ಸಾಂಕೇತಿಕ ಉಡುಪನ್ನು ಧರಿಸುತ್ತಾರೆ?
4 ನಿಜ ಕ್ರೈಸ್ತರು ‘ಜಾರತ್ವ, ಬಂಡುತನ, ಕಾಮಾಭಿಲಾಷೆ, ದುರಾಶೆ ಮತ್ತು ಲೋಭ ಮುಂತಾದ ಭೂಸಂಬಂಧವಾದ ಭಾವಗಳನ್ನು ಸಾಯಿಸಲು’ ಪ್ರಯಾಸಪಡುತ್ತಾರೆ, ಮತ್ತು ಕ್ರೋಧ, ಕೋಪ, ಕೆಟ್ಟತನ, ದೂಷಣೆ ಮತ್ತು ದುರ್ಭಾಷೆಯ ನೆಯ್ಗೆಯಿರುವ ಯಾವುದೇ ಹಳೇ ಉಡುಪನ್ನು ಕಳಚಿಹಾಕುವುದಕ್ಕೆ ಕಾರ್ಯನಡಿಸುತ್ತಾರೆ. (ಕೊಲೊಸ್ಸೆಯ 3:5-11) ಅವರು “ಹಳೇ ವ್ಯಕ್ತಿತ್ವ” (ಅಕ್ಷರಾರ್ಥವಾಗಿ, “ಹಳೇ ಮನುಷ್ಯ”) ವನ್ನು ತೆಗೆದುಹಾಕುತ್ತಾರೆ ಮತ್ತು “ಹೊಸ ವ್ಯಕ್ತಿತ್ವ” (ಅಥವಾ, “ಹೊಸ ಮನುಷ್ಯ”) ಎಂಬ ಒಪ್ಪುವ ಉಡುಪನ್ನು ಧರಿಸುತ್ತಾರೆ. (ಎಫೆಸ 4:22-24, ಕಿಂಗ್‌ಡಂ ಇಂಟರ್‌ಲಿನಿಯರ್) ಕನಿಕರ, ದಯೆ, ದೀನಭಾವ, ಸೌಮ್ಯತೆ ಮತ್ತು ದೀರ್ಘಶಾಂತಿಯಿಂದ ನೆಯ್ಗೆಗೊಂಡ ಅವರ ಹೊಸ ಉಡುಪು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ದೇವಭಕ್ತಿಯ ಜೀವನವನ್ನು ನಡಿಸಲು ಅವರಿಗೆ ಸಹಾಯ ಮಾಡುವುದು.—ಮತ್ತಾಯ 5:9; 18:33; ಲೂಕ 6:36; ಫಿಲಿಪ್ಪಿಯ 4:2, 3.
5. ಕ್ರೈಸ್ತ ಸಭೆಯ ಭಾಗವಾಗಿರಲು ಅಷ್ಟು ಸಂತೋಷವನ್ನು ಕೊಡುವ ಅದರ ಕಾರ್ಯಕಲಾಪಗಳ ಕುರಿತೇನಿದೆ?
5 ಈ ಲೋಕದಲ್ಲಿ ಸಾಫಲ್ಯಪಡೆದ ಪುರುಷರೆಂದು ಎಣಿಸಲ್ಪಡುವವರು ಹೆಚ್ಚಾಗಿ ಕನಿಕರವಿಲ್ಲದವರು, ಕ್ರೂರಭಾವದವರೂ ಆಗಿರುತ್ತಾರೆ. (ಜ್ಞಾನೋಕ್ತಿ 29:22) ಯೆಹೋವನ ಜನರಲ್ಲಾದರೋ ಚೈತನ್ಯಕರವಾಗಿ ಇದೆಷ್ಟು ಬೇರೆಯಾಗಿದೆ! ಕ್ರೈಸ್ತ ಸಭೆಯ ಕಾರ್ಯಕಲಾಪಗಳು, ಕೆಲವರು ಒಂದು ವ್ಯಾಪಾರವನ್ನು—ನೈಪುಣ್ಯದಿಂದ, ಆದರೆ ಜನರನ್ನು ಅಸಂತೋಷಗೊಳಿಸಬಹುದಾದ ಉಗ್ರ ರೀತಿಯಲ್ಲಿ ನಡಿಸಲ್ಪಡುವದಿಲ್ಲ. ಬದಲಾಗಿ ಒಂದು ಸಭೆಯ ಭಾಗವಾಗಿ ಇರುವುದು ಸಂತೋಷಕರವಾದ ವಿಷಯವು. ಸಾಮಾನ್ಯವಾಗಿ ಕ್ರೈಸ್ತರಿಂದ, ಮತ್ತು ವಿಶೇಷವಾಗಿ ಜತೆ ವಿಶ್ವಾಸಿಗಳಿಗೆ ಕಲಿಸಲು ಯೋಗ್ಯತೆ ಪಡೆದ ಪುರುಷರಿಂದ ಪ್ರದರ್ಶಿಸಲ್ಪಡುವ ವಿವೇಕದ ಒಂದು ಲಕ್ಷಣವಾಗಿರುವ ಸೌಮ್ಯ ಸ್ವಭಾವವೇ ಅದಕ್ಕೆ ಒಂದು ಕಾರಣ. ಹೌದು, “ವಿವೇಕದ ಲಕ್ಷಣವಾಗಿರುವ ಶಾಂತಗುಣ (ಸೌಮ್ಯತೆ, NW) ದಿಂದ” ಕಲಿಸುವ ನೇಮಿತ ಹಿರಿಯರಿಂದ ಕೊಡಲ್ಪಡುವ ಉಪದೇಶ ಮತ್ತು ಸೂಚನೆಗಳಿಂದ ಈ ಸಂತೋಷವು ಲಭಿಸುತ್ತದೆ—ಯಾಕೋಬ 3:13.
6. ಕ್ರೈಸ್ತ ಹಿರಿಯರು ಸೌಮ್ಯ-ಚಿತರ್ತಾಗಿರಬೇಕು ಏಕೆ?
6 ದೇವಜನರ ಆತ್ಮವು ಅಥವಾ ಪ್ರಧಾನ ಗುಣಧರ್ಮವು, ಸಭಾ ಮೇಲ್ವಿಚಾರ ವಹಿಸಲ್ಪಟ್ಟ ಪುರುಷರಿಂದ ಸೌಮ್ಯತೆ, ವಿವೇಚನೆ ಮತ್ತು ತಿಳುವಳಿಕೆಯನ್ನು ಕೇಳಿಕೊಳ್ಳುತ್ತದೆ. (1 ತಿಮೊಥಿ 3:1-3) ಯೆಹೋವನ ಸೇವಕರು ಮೃದು ಸ್ವಭಾವದ ಕುರಿಗಳಂತಿದ್ದಾರೆ, ಹಠಮಾರಿ ಆಡುಗಳಂತೆ, ಮೊಂಡುತನದ ಹೇಸರಗತ್ತೆಗಳಂತೆ ಅಥವಾ ಕೊಳ್ಳೆಹೊಡೆಯುವ ತೋಳಗಳಂತೆ ಅಲ್ಲ. (ಕೀರ್ತನೆ 32:9; ಲೂಕ 10:3) ಕುರಿಸದೃಶರಾದ ಅವರು, ಸೌಮ್ಯತೆ ಮತ್ತು ಕೋಮಲತೆಯಿಂದ ಉಪಚರಿಸಲ್ಪಡಬೇಕು. (ಅಪೊಸ್ತಲರ ಕೃತ್ಯಗಳು 20:28, 29) ಹೌದು, ತಮ್ಮ ಕುರಿಗಳ ಕಡೆಗೆ ಸೌಮ್ಯಚಿತ್ತರೂ, ದಯೆಯುಳ್ಳವರೂ, ಪ್ರೀತಿಯಿರುವವರೂ, ತಾಳ್ಮೆಯುಳ್ಳವರೂ ಆಗಿರುವಂತೆ ಹಿರಿಯರಿಂದ ದೇವರು ಅಪೇಕ್ಷಿಸುತ್ತಾನೆ.—ಯೆಹೆಜ್ಕೇಲ 34:17-24.
7. ಹಿರಿಯರು ಇತರರಿಗೆ ಹೇಗೆ ಉಪದೇಶ ಮಾಡಬೇಕು ಅಥವಾ ಆತ್ಮಿಕ ರೋಗಿಗಳಿಗೆ ಹೇಗೆ ಸಹಾಯಕೊಡಬೇಕು?
7 “ಕರ್ತನ ದಾಸ”ನೋಪಾದಿ ಹಿರಿಯನು, “ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು. ಒಂದುವೇಳೆ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಕೊಟ್ಟಾನು.” (2 ತಿಮೊಥಿ 2:24, 25) ಆತ್ಮಿಕವಾಗಿ ರೋಗಿಗಳಾಗಿರುವವರಿಗೆ ಸಹಾಯ ಮಾಡುವಾಗ ಕ್ರೈಸ್ತ ಕುರುಬರು ಕೋಮಲವಾದ ಪರಿಗಣನೆಯನ್ನು ತೋರಿಸಬೇಕು. ಹಿರಿಯರು ಅವರನ್ನು ಕೂಲಿಯಾಳುಗಳಂತೆ ಉಪಚರಿಸದೆ, ಒಳ್ಳೇ ಕುರುಬನಾದ ಯೇಸು ಕ್ರಿಸ್ತನಂತೆ ಸೌಮ್ಯ-ಚಿತ್ತದಿಂದ ಪಾಲಿಸುವ ಅಗತ್ಯವಿದೆ.—ಯೋಹಾನ 10:11-13.
8. ಸೌಮ್ಯ-ಚಿತನ್ತಾದ ಮೋಶೆಗೆ ಏನು ಸಂಭವಿಸಿತು, ಮತ್ತು ಏಕೆ?
8 ಕೆಲವು ಸಾರಿ ಹಿರಿಯನೊಬ್ಬನಿಗೆ ಒಂದು ಶಾಂತಭಾವವನ್ನು ಉಳಿಸಿಕೊಳ್ಳಲು ಕಷ್ಟವಾದೀತು. “ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು (ಬಹು ದೀನನು, NW)” ಆಗಿದ್ದನು. ಆದರೂ, ಕಾದೇಶಿನಲ್ಲಿ ಇಸ್ರಾಯೇಲ್ಯರು ನೀರಿನ ಅಭಾವವನ್ನು ಎದುರಿಸಿದಾಗ ಅವರು ಮೋಶೆಯೊಂದಿಗೆ ವಾಗ್ವಾದಮಾಡುತ್ತಾ, ಐಗುಪ್ತದಿಂದ ಈ ಮರುಳುಗಾಡಿಗೆ ತಂದದ್ದಕ್ಕಾಗಿ ಅವನನ್ನು ಹಳಿದರು. ಬೇರೆಲ್ಲವನ್ನು ದೀನತೆಯಿಂದ ಸಹಿಸಿಕೊಂಡಿದ್ದಾಗ್ಯೂ ಮೋಶೆಯು ಈಗ ದುಡುಕಿ, ಕಟುವಾಗಿ ಮಾತಾಡಿದನು. ಮೋಶೆಯೂ ಆರೋನನೂ ಜನರ ಮುಂದೆ ನಿಂತು ತಮ್ಮ ಕಡೆಗೇ ಗಮನ ಸೆಳೆದರು, “ದ್ರೋಹಿಗಳೇ, ಈಗ ಕೇಳಿರಿ; ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?” ಎಂದು ಹೇಳಿದನು ಮೋಶೆ. ಅನಂತರ ಮೋಶೆಯು ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು ಮತ್ತು ಜನರಿಗಾಗಿ ಮತ್ತು ಅವರ ಪಶುಗಳಿಗಾಗಿ “ನೀರು ಪ್ರವಾಹವಾಗಿ” ಹೊರಡುವಂತೆ ದೇವರು ಮಾಡಿದನು. ಆದರೆ ಯೆಹೋವನು ಅಪ್ರಸನ್ನನಾದನು ಯಾಕೆಂದರೆ ಮೋಶೆ ಮತ್ತು ಆರೋನರು ಆತನನ್ನು ಪವಿತ್ರೀಕರಿಸಲಿಲ್ಲ, ಆದುದರಿಂದ ಮೋಶೆಯು ಇಸ್ರಾಯೇಲ್ಯರನ್ನು ವಾಗ್ದತ್ತ ದೇಶದೊಳಗೆ ನಡಿಸುವ ಸುಯೋಗವನ್ನು ಪಡೆಯಲಿಲ್ಲ.—ಅರಣ್ಯಕಾಂಡ 20:1-13; ಧರ್ಮೋಪದೇಶಕಾಂಡ 32:50-52; ಕೀರ್ತನೆ 106:32, 33.
9. ಒಬ್ಬ ಹಿರಿಯನ ಸೌಮ್ಯತೆಯು ಹೇಗೆ ಪರೀಕ್ಷಿಸಲ್ಪಡಬಹುದು?
9 ಒಬ್ಬ ಕ್ರೈಸ್ತ ಹಿರಿಯನ ಸೌಮ್ಯ ಗುಣವು ಹಲವಾರು ವಿಧಗಳಲ್ಲಿ ಪರೀಕೆಗ್ಷೆ ಒಳಪಡಲೂ ಬಹುದು. ಉದಾಹರಣೆಗೆ, “ಮದದಿಂದ ಕಣ್ಣುಕಾಣದ” ಮತ್ತು “ವಾಗ್ವಾದಗಳನ್ನು ಮಾಡುವ ಭ್ರಾಂತಿಯುಳ್ಳ” ಯಾರಾದರೂ ಎದ್ದುಬಂದಾನು ಎಂಬದಾಗಿ ಪೌಲನು ತಿಮೊಥಿಗೆ ಎಚ್ಚರಕೊಟ್ಟನು. ಪೌಲನು ಮತ್ತೂ ಕೂಡಿಸಿದ್ದು: “ಇವುಗಳಿಂದ ಹೊಟ್ಟೇಕಿಚ್ಚು, ಜಗಳ, ದೂಷಣೆ, ದುಸ್ಸಂಶಯಗಳು ಉಂಟಾಗುತ್ತವೆ. ಇದಲ್ಲದೆ ಬುದ್ಧಿಗೆಟ್ಟು ಸತ್ಯಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ.” ಮೇಲ್ವಿಚಾರಕ ತಿಮೊಥಿಯು ಉಗ್ರವಾಗಿ ಕ್ರಿಯೆ ನಡಿಸಬಾರದಿತ್ತು ಬದಲಾಗಿ, “ಅವುಗಳಿಗೆ ದೂರವಾಗಿರ” ಬೇಕಿತ್ತು, ಮತ್ತು “ನೀತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ, ಸೌಮ್ಯತೆ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡ” ಬೇಕಿತ್ತು.—1 ತಿಮೊಥಿ 6:4, 5, 11.
10. ತೀತನು ಸಭೆಗೆ ಯಾವುದರ ಜ್ಞಾಪಕವನ್ನು ಕೊಡಬೇಕಿತ್ತು?
10 ಹಿರಿಯರು ಸೌಮ್ಯರಾಗಿರಬೇಕಾಗಿದ್ದರೂ, ಯಾವುದು ಯೋಗ್ಯವೂ ಆ ವಿಷಯದಲ್ಲಿ ದೃಢಚಿತ್ತರಾಗಿರಬೇಕು. ತೀತನು ಆ ರೀತಿಯಲ್ಲಿದ್ದವನು, ಕ್ರೇತದಲ್ಲಿನ ಸಭೆಗಳಲ್ಲಿ ಸಹವಹಿಸುತ್ತಿದ್ದವರಿಗೆ ಅವನು ಜ್ಞಾಪಕಕೊಡುತ್ತಾ, “ಯಾರನ್ನೂ ದೂಷಿಸದೆ ಕುತರ್ಕ ಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣ ಸಾಧುಗುಣವನ್ನು ತೋರಿಸುತ್ತಾ ಸೌಮ್ಯರಾಗಿರಬೇಕು” ಎಂದು ಅವನು ಬೋಧಿಸಿದನು. (ತೀತ 3:1, 2) ಕ್ರೈಸ್ತರೇಕೆ ಎಲ್ಲರ ಕಡೆಗೆ ಸೌಮ್ಯ-ಚಿತರ್ತಾಗಿರಬೇಕೆಂದು ತೋರಿಸುತ್ತಾ, ಯೆಹೋವನು ಹೇಗೆ ದಯೆವುಳ್ಳವನೂ ಪ್ರೀತಿಯುಳ್ಳವನೂ ಆಗಿದ್ದಾನೆಂಬ ಸಂಗತಿಗೆ ತೀತನು ಗಮನ ಸೆಳೆದನು. ದೇವರು ವಿಶ್ವಾಸಿಗಳನ್ನು ರಕ್ಷಿಸಿದ್ದು ಅವರು ಮಾಡಿರಬಹುದಾದ ಪುಣ್ಯಕ್ರಿಯೆಗಳ ನಿಮಿತ್ತದಿಂದಲ್ಲ, ಯೇಸು ಕ್ರಿಸ್ತನ ಮೂಲಕವಾಗಿ ಆತನು ತೋರಿಸಿದ ಕರುಣೆಯಿಂದಲೇ ರಕ್ಷಿಸಿದನು. ಯೆಹೋವನ ಸೌಮ್ಯತೆ ಮತ್ತು ತಾಳ್ಮೆಯು ನಮಗೂ ರಕ್ಷಣೆಯ ಅರ್ಥದಲ್ಲಿದೆ. ಆದುದರಿಂದ ತೀತನಂತೆ ಇಂದಿನ ಹಿರಿಯರು, ಸಭೆಯು ದೇವರಿಗೆ ಅಧೀನವಾಗಿರುವಂತೆ ಜ್ಞಾಪಕಕೊಡಬೇಕು, ಇತರರನ್ನು ಸೌಮ್ಯತೆಯಿಂದ ಉಪಚರಿಸುವ ಮೂಲಕ ದೇವರನ್ನು ಅನುಕರಿಸಬೇಕು.—ತೀತ 3:3-7; 2 ಪೇತ್ರ 3:9, 15.
ವಿವೇಕಿ ಸಲಹೆಗಾರನನ್ನು ಸೌಮ್ಯತೆ ಮಾರ್ಗದರ್ಶಿಸುತ್ತದೆ
11. ಗಲಾತ್ಯ 6:1, 2ಕ್ಕೆ ಅನುಸಾರವಾಗಿ, ಸೂಚನೆಯನ್ನು ಹೇಗೆ ಕೊಡಬೇಕು?
11 ಒಂದು ಸಾಂಕೇತಿಕ ಕುರಿಯು ತಪ್ಪು ಮಾರ್ಗವನ್ನು ಹಿಡಿದಲ್ಲಿ, ಆಗೇನು? ಪೌಲನು ಅಂದದ್ದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮದಿಂದ ನಡಿಸಿಕೊಳ್ಳುವ ನೀವು ಶಾಂತಭಾವ (ಸೌಮ್ಯತೆ, NW) ದಿಂದ ತಿದ್ದಿ ಸರಿಮಾಡಿರಿ. ನೀನಾದರೋ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರವಾಗಿರು. ಒಬ್ಬರು ಮತ್ತೊಬ್ಬನ ಭಾರವನ್ನು ಹೊತ್ತುಕೊಳ್ಳಿರಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.” (ಗಲಾತ್ಯ 6:1, 2) ಸೌಮ್ಯ-ಚಿತ್ತದಿಂದ ಕೊಡಲ್ಪಡುವ ಸೂಚನೆಯು ಅಧಿಕ ಪರಿಣಾಮಕಾರಿಯಾಗಿರುವುದು. ಒಬ್ಬ ಕುಪಿತನಾದ ವ್ಯಕ್ತಿಗೆ ಸೂಚನೆಕೊಡಲು ಪ್ರಯತ್ನಿಸುವಾಗಲೂ ಹಿರಿಯರು, “ಮೃದು ವಚನವು ಎಲುಬನ್ನು ಮುರಿಯುವದು” ಎಂಬ ಮನವರಿಕೆಯುಳ್ಳವರಾಗಿ ಆತ್ಮಸಂಯಮವನ್ನು ತೋರಿಸಬೇಕು. (ಜ್ಞಾನೋಕ್ತಿ 25:15) ಎಲುಬಿನಂತೆ ಕಠಿಣ ವ್ಯಕ್ತಿತ್ವದ ವ್ಯಕ್ತಿಯೂ ಒಂದು ಮೃದು ಮಾತಿನಿಂದ ಕರಗಬಹುದು ಮತ್ತು ಅವನ ಕಠೋರತೆಯು ಮೆತ್ತಗಾಗಬಹುದು.
12. ಸೌಮ್ಯ ಸ್ವಭಾವವು ಒಬ್ಬ ಸಲಹೆಗಾರನಿಗೆ ಹೇಗೆ ಸಹಾಯ ಮಾಡುತ್ತದೆ?
12 ಯೆಹೋವನು ಸೌಮ್ಯ-ಚಿತ್ತದ ಸಲಹೆಗಾರನು, ಮತ್ತು ಸಭೆಯಲ್ಲಿ ಕಲಿಸುವ ಅವನ ಸೌಮ್ಯ ವಿಧಾನವು ಕಾರ್ಯಸಾಧಕವಾಗಿದೆ. ಇದು ವಿಶೇಷವಾಗಿ ಆತ್ಮಿಕ ಸಹಾಯದ ಅಗತ್ಯವಿರುವವರಿಗೆ ಸೂಚನೆಕೊಡುವ ಆವಶ್ಯಕತೆಯನ್ನು ಹಿರಿಯರು ಕಾಣುವಾಗ ಪರಿಣಾಮಕಾರಿಯು. ಶಿಷ್ಯ ಯಾಕೋಬನು ಬರೆದದ್ದು: “ನಿಮ್ಮಲ್ಲಿ ವಿವೇಕಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ವಿವೇಕದ ಲಕ್ಷಣವಾಗಿರುವ ಶಾಂತ (ಸೌಮ್ಯ) ಗುಣದಿಂದ ಅದನ್ನು ತೋರಿಸಲಿ.” “ಮೇಲಣಿಂದ ಬಂದ ವಿವೇಕ”ಕ್ಕಾಗಿ ಗೌರವ ಮತ್ತು ಕೃತಜ್ಞತೆ, ಹಾಗೂ ಒಬ್ಬನ ಸ್ವಂತ ಸೀಮಿತಗಳ ಕುರಿತು ಮಿತವಾದ ಮನವರಿಕೆಯಿಂದ ಸೌಮ್ಯತೆಯು ಹೊರಹುಮ್ಮುತ್ತದೆ. ಒಂದು ಸೌಮ್ಯ ಮತ್ತು ದೀನಭಾವವು ಸಲಹೆಗಾರನನ್ನು ಹಾನಿಕರವಾದ ನುಡಿಗಳನ್ನು ಆಡದಂತೆ ಮತ್ತು ತಪ್ಪುಗಳನ್ನು ಮಾಡದಂತೆ ಕಾಪಾಡುತ್ತದೆ, ಮತ್ತು ಕೊಡುವ ಸೂಚನೆಗಳು ಸ್ವೀಕರಿಸಲು ಸುಲಭವಾಗುತ್ತವೆ..—ಯಾಕೋಬ 3:13, 17, NW.
13. ಸಲಹೆಯು ಕೊಡಲ್ಪಡುವ ವಿಧಾನದ ಮೇಲೆ “ವಿವೇಕದ ಲಕ್ಷಣವಾದ ಸೌಮ್ಯತೆಯು,” ಹೇಗೆ ಪರಿಣಾಮ ಬೀರುತ್ತದೆ?
13 “ವಿವೇಕದ ಲಕ್ಷಣವಾಗಿರುವ ಸೌಮ್ಯ ಗುಣವು” ಸಲಹೆಗಾರನನ್ನು, ನಿರ್ದಾಕ್ಷಿಣ್ಯದಿಂದ ಒರಟಾಗಿ ಅಥವಾ ಕಠಿಣವಾಗಿ ಮಾತಾಡುವದರಿಂದ ಪ್ರತಿಬಂಧಿಸುತ್ತದೆ. ಆದರೂ ಮಿತ್ರತ್ವದ ಕುರಿತಾದ ಚಿಂತೆ ಅಥವಾ ಒಬ್ಬನ ಅನುಗ್ರಹವನ್ನು ಗಳಿಸಲಿಕ್ಕಾಗಿ ಹಿರಿಯನು, ಮೆಚ್ಚಿಸುವ ಮಾತುಗಳನ್ನಾಡಲು ಪ್ರೇರಿಸಲ್ಪಡಬಾರದು, ಸೌಮ್ಯತೆಯಿಂದ ದೇವರ ವಾಕ್ಯದಲ್ಲಿ ಆಧರಿಸಿರುವ ಸೂಚನೆಯನ್ನೇ ಅವನು ಸರಳವಾಗಿ ಕೊಡಬೇಕು. (ಜ್ಞಾನೋಕ್ತಿ 24:24-26; 28:23) ಅಮ್ನೋನನು ತನ್ನ ಸೋದರನಂಟನಿಂದ ಪಡೆದ ಸೂಚನೆಯು ಅವನ ಅಪೇಕ್ಷೆಯನ್ನು ತೃಪ್ತಿಪಡಿಸಿತು, ಆದರೆ ಅದು ಅವನ ಜೀವ ನಷ್ಟಕ್ಕೆ ನಡಿಸಿತು. (2 ಸಮುವೇಲ 13:1-19, 28, 29) ಇಂದಿನ ಕಾಲದ ಹಿರಿಯರು ಸಹಾ, ಬೇರೊಬ್ಬರ ಮನಸ್ಸಾಕ್ಷಿಯನ್ನು ನಿಶ್ಚಿಂತಗೊಳಿಸಲು ಬೈಬಲಿನ ತತ್ವಗಳ ತೀವ್ರತೆಯನ್ನು ತೆಳುವು ಮಾಡಬಾರದು, ಹಾಗೆ ಮಾಡುವುದು ಅವನ ಜೀವವನ್ನು ಗಂಡಾಂತರಕ್ಕೆ ಹಾಕಬಹುದು. ಹಿರಿಯರು ಪೌಲನಂತೆ, “ದೇವರ ಸಂಕಲ್ಪವನ್ನೆಲ್ಲಾ” ಮರೆಮಾಡದೆ ಇತರರಿಗೆ ತಿಳಿಸಬೇಕು. (ಅಪೊಸ್ತಲರ ಕೃತ್ಯಗಳು 20:26, 27; 2 ತಿಮೊಥಿ 4:1-4) ಒಬ್ಬ ಬಲಿತ ಕ್ರೈಸ್ತ ಸಲಹೆಗಾರನು ದೇವ ಭಯವನ್ನು ತೋರಿಸುವವನಾಗಿ ವಿವೇಕದ ಲಕ್ಷಣವಾಗಿರುವ ಸೌಮ್ಯತೆಯಿಂದ ನೀತಿಯುಕ್ತ ಸೂಚನೆಯನ್ನು ಕೊಡುತ್ತಾನೆ.
14. ಇತರರು ತಾವಾಗಿಯೇ ಮಾಡಬೇಕಾದ ನಿರ್ಣಯಗಳನ್ನು ಹಿರಿಯನು ತಾನು ಮಾಡದಂತೆ ಏಕೆ ಜಾಗ್ರತೆ ವಹಿಸಬೇಕು?
14 ಸೌಮ್ಯತೆಯೊಡಗೂಡಿದ ಮೇಲಣಿಂದ ಬಂದ ವಿವೇಕವು ಹಿರಿಯನನ್ನು ಕಟುವಾದ ನಿರ್ಬಂಧಗಳನ್ನು ಮಾಡದಂತೆ ತಡೆಯುವುದು. ಇನ್ನೊಬ್ಬ ವ್ಯಕ್ತಿಯು ತನಗಾಗಿ ತಾನೇ ಮಾಡಬೇಕಾದ ನಿರ್ಣಯವನ್ನು ಹಿರಿಯನು ಮಾಡುವದು ಅಯೋಗ್ಯವೂ, ಅಸಮಂಜಸವೂ ಆಗಿದೆ ಎಂದು ಅವನು ಮನಗಾಣಬೇಕು. ಬೈಬಲು ಏನನ್ನುತ್ತದೆ ಎಂಬದಕ್ಕೆ ಹಿರಿಯನು ಗಮನ ಸೆಳೆಯಬಹುದು, ಆದರೆ ಒಂದು ವಿಷಯದ ಮೇಲೆ ಯಾವ ಶಾಸ್ತ್ರೀಯ ನಿಯಮವೂ ಇರದಿದ್ದಲ್ಲಿ, ವ್ಯಕ್ತಿಯ ಸ್ವಂತ ತೀರ್ಮಾನ ಮತ್ತು ಮನಸ್ಸಾಕ್ಷಿ ತಾನೇನು ಮಾಡಬೇಕು ಅಥವಾ ಮಾಡಬಾರದು ಎಂಬದನ್ನು ತಾನಾಗಿಯೇ ನಿರ್ಧರಿಸಬೇಕು. ಪೌಲನು ಅಂದಂತೆ, “ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾತ್ಯ 6:5; ರೋಮಾಪುರ 14:12) ಇತರರಿಗಾಗಿ ನಿರ್ಣಯವನ್ನು ಹಿರಿಯನು ಮಾಡಿದ್ದಲ್ಲಿ ಅದರಿಂದಾಗುವ ಫಲಿತಾಂಶಕ್ಕೂ ಅವನು ಜವಾಬ್ದಾರನಾಗುವನು ಮತ್ತು ಯಾವುದೇ ಕೆಟ್ಟ ಫಲಿತಾಂಶದ ದೋಷದಲ್ಲೂ ಪಾಲಿಗನಾಗುವನು. ಆದರೂ, ವಿಚಾರಿಸುವವನಿಗೆ ತೆರೆದಿರಬಹುದಾದ ಆಯ್ಕೆಯ ಮಾರ್ಗಗಳಿಗೆ ಸಂಬಂಧಿಸಿದ ಶಾಸ್ತ್ರವಚನಗಳ ಮೇಲೆ ವಿವೇಚನೆ ಮಾಡುವಂತೆ ಸಹಾಯವಾಗುವ ಪ್ರಶ್ನೆಗಳನ್ನು ಹಾಕುವ ಮೂಲಕ ಹಿರಿಯನು ಆ ವ್ಯಕ್ತಿಗೆ ನೆರವಾಗ ಸಾಧ್ಯವಿದೆ.
15. ಒಬ್ಬ ಹಿರಿಯನಿಗೆ ಒಂದು ಪ್ರಶ್ನೆಯ ಉತ್ತರವು ಗೊತ್ತಿರದಿದ್ದರೆ ಏನು ಮಾಡಬೇಕು?
15 ಒಂದು ಪ್ರಶ್ನೆಯ ಉತ್ತರವು ಹಿರಿಯನಿಗೆ ಗೊತ್ತಿಲ್ಲವಾದರೆ, ಕೇವಲ ಮರ್ಯಾದೆ ಉಳಿಸಲು ಏನಾದರೂ ಹೇಳಿಬಿಡಬಾರದು. ವಿವೇಕದ ಲಕ್ಷಣವಾಗಿರುವ ಸೌಮ್ಯತೆಯು ಅವನನ್ನು ಕಲ್ಪಿಸಿಹೇಳುವುದರಿಂದ ಅಥವಾ ತರುವಾಯ ಸಂಕಟಕ್ಕೆ ಹಾಕಬಲ್ಲ ತಪ್ಪು ಉತ್ತರವನ್ನು ಕೊಡುವುದರಿಂದ ತಡೆಯುವುದು. “ಸುಮ್ಮನಿರುವ ಸಮಯ, ಮಾತಾಡುವ ಸಮಯ” ಅಲ್ಲಿರುತ್ತದೆ. (ಪ್ರಸಂಗಿ 3:7; ಜ್ಞಾನೋಕ್ತಿ 21:23ಕ್ಕೆ ಹೋಲಿಸಿ.) ಒಂದು ಪ್ರಶ್ನೆಗೆ ಉತ್ತರವು ತಿಳಿದಿರುವಾಗ ಅಥವಾ ನಿಷ್ಕೃಷ್ಟ ಉತ್ತರವನ್ನು ಕೊಡಲು ಸಾಕಷ್ಟು ಸಂಶೋಧನೆ ಮಾಡಿರುವಾಗ ಮಾತ್ರವೇ ಹಿರಿಯನು “ಮಾತಾಡ”ಬೇಕು. ಊಹಾಪೋಹಕ ಪ್ರಶ್ನೆಗಳನ್ನು ಉತ್ತರಿಸದೇ ಬಿಡುವದು ವಿವೇಕಪ್ರದವು.—ಜ್ಞಾನೋಕ್ತಿ 12:8; 17:27; 1 ತಿಮೊಥಿ 1:3-7; 2 ತಿಮೊಥಿ 2:14.
ಬಹು ಮಂದಿ ಸಲಹೆಗಾರರ ಬೆಲೆ
16, 17. ಹಿರಿಯರು ಒಬ್ಬರನ್ನೊಬ್ಬರು ಸಂಪರ್ಕಿಸುವುದು ಏಕೆ ಯೋಗ್ಯವಾಗಿದೆ?
16 ಪ್ರಾರ್ಥನೆ ಮತ್ತು ಅಧ್ಯಯನವು ಪ್ರಶ್ನೆಗಳನ್ನು ಉತ್ತರಿಸಲು ಮತ್ತು ಕಷ್ಟದ ಸಮಸ್ಯೆಗಳನ್ನು ನಿಭಾಯಿಸಲು ಹಿರಿಯರಿಗೆ ಸಹಾಯ ಮಾಡುವುದು, ಆದರೆ, “ಬಹುಮಂದಿ ಸಲಹೆಗಾರರು ಇರುವಲ್ಲಿ ಈಡೇರಿಕೆ ಇರುವುದು” ಎಂಬದನ್ನು ನೆನಪಿಡಬೇಕು. (ಜ್ಞಾನೋಕ್ತಿ 15:22, NW) ಬೇರೆ ಹಿರಿಯರೊಂದಿಗೆ ಸಂಪರ್ಕ ನಡಿಸುವ ಮೂಲಕ ಬೆಲೆಯುಳ್ಳ ವಿವೇಕವು ಒಟ್ಟುಗೂಡಿಸಲ್ಪಡುವುದು. (ಜ್ಞಾನೋಕ್ತಿ 13:20) ಹಿರಿಯರೆಲ್ಲರಿಗೆ ಸರಿಸಮಾನವಾದ ಅನುಭವ ಅಥವಾ ಬೈಬಲ್ ಜ್ಞಾನವು ಇರುವುದಿಲ್ಲ. ಆದಕಾರಣ, ವಿವೇಕದ ಲಕ್ಷಣವಾಗಿರುವ ಸೌಮ್ಯತೆಯು ಒಬ್ಬ ಕಡಿಮೆ ಅನುಭವದ ಹಿರಿಯನನ್ನು, ವಿಶೇಷವಾಗಿ ಒಂದು ಗಂಭೀರ ವಿಷಯವನ್ನು ನಿರ್ವಹಿಸುವ ಸಮಯದಲ್ಲಿ, ಹೆಚ್ಚಿನ ಜ್ಞಾನ ಮತ್ತು ಹೆಚ್ಚು ಅನುಭವವಿರುವ ಬೇರೆ ಹಿರಿಯರನ್ನು ಸಂಪರ್ಕಿಸುವಂತೆ ಪ್ರೇರಿಸಬೇಕು.
17 ಒಂದು ಗಂಭೀರವಾದ ವಿಷಯವನ್ನು ನಿರ್ವಹಿಸಲು ಹಿರಿಯರು ಆರಿಸಲ್ಪಡುವಾಗ, ಅವರಿನ್ನೂ ಗುಟ್ಟಿನಲ್ಲಿ ಸಹಾಯವನ್ನು ಕೋರಬಹುದು. ಇಸ್ರಾಯೇಲ್ಯರಿಗೆ ನ್ಯಾಯ ತೀರಿಸಲು ತನಗೆ ನೆರವಾಗುವಂತೆ ಮೋಶೆಯು, “ಸಮರ್ಥರೂ ದೇವಭಕ್ತರೂ ನಂಬಿಗಸ್ತರೂ ಲಂಚಮುಟ್ಟದವರೂ ಆಗಿರುವ ಪುರುಷರನ್ನು” ಆರಿಸಿಕೊಂಡನು. ಅವರು ಹಿರಿಯರಾಗಿದ್ದಾಗ್ಯೂ, ಮೋಶೆಗಿದ್ದಷ್ಟು ಜ್ಞಾನ ಮತ್ತು ಅನುಭವವು ಅವರಿಗಿದ್ದಿರಲಿಲ್ಲ. ಆದಕಾರಣ ಅವರು, “ಕಠಿಣವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ ಸುಲಭವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.” (ವಿಮೋಚನಕಾಂಡ 18:13-27) ಹೀಗಿರಲಾಗಿ ಅವಶ್ಯಬಿದ್ದಲ್ಲಿ, ಒಂದು ಕಠಿಣ ಮೊಕದ್ದಮೆಯನ್ನು ನಿರ್ವಹಿಸುವ ಹಿರಿಯರು, ಕೊನೆಯ ತೀರ್ಮಾನವನ್ನು ತಾವೇ ಮಾಡುತ್ತಾರಾದರೂ, ಅನುಭವಸ್ಥ ಮೇಲ್ವಿಚಾರಕರ ಸಹಾಯವನ್ನು ಇಂದು ಯೋಗ್ಯವಾಗಿ ಕೇಳಿಕೊಳ್ಳ ಸಾಧ್ಯವಿದೆ.
18. ನ್ಯಾಯ ವಿಧಾಯಕ ವಿಷಯಗಳನ್ನು ನಿರ್ವಹಿಸುವಲ್ಲಿ, ಯೋಗ್ಯ ತೀರ್ಮಾನಗಳಿಗೆ ಖಾತ್ರಿಕೊಡುವ ನಿರ್ಣಾಯಕ ಮೂಲಗಳು ಯಾವುವು?
18 ಇಸ್ರಾಯೇಲಿನ ಹಳ್ಳಿಗಳಲ್ಲಿದ್ದ ನ್ಯಾಯಸ್ಥಾನಗಳಲ್ಲಿ ಕೂಡಿರುವವರು ಮೊಕದ್ದಮೆಯ ಘೋರತೆಗನುಸಾರ ಹಲವಾರು ಸಂಖ್ಯೆಯಲ್ಲಿರುತ್ತಿದ್ದರು ಎಂದು ಯೆಹೂದಿ ಮಿಶ್ನ ಹೇಳುತ್ತದೆ. ಬಹು ಮಂದಿ ಸಲಹೆಗಾರರಲ್ಲಿ ನಿಜ ಬೆಲೆಯು ಇರುತ್ತದಾದರೂ, ಸಂಖ್ಯೆಯು ಮಾತ್ರವೇ ಅದರ ಸತ್ಯತೆಗೆ ಋಜುವಲ್ಲ, ಯಾಕಂದರೆ ಅಧಿಕಸಂಖ್ಯಾತರು ತಪ್ಪಾಗ ಸಾಧ್ಯವಿದೆ. (ವಿಮೋಚನಕಾಂಡ 23:2) ಯೋಗ್ಯ ತೀರ್ಮಾನವು ಮಾಡಲ್ಪಡುವದೆಂಬ ಖಾತರಿಯ ನಿರ್ಣಾಯಕ ಮೂಲಗಳು ದೇವರ ವಾಕ್ಯ ಮತ್ತು ದೇವರ ಆತ್ಮವೇ. ಅವುಗಳಿಗೆ ಅಧೀನರಾಗುವಂತೆ ವಿವೇಕ ಮತ್ತು ಸೌಮ್ಯತೆಯು ಕ್ರೈಸ್ತರನ್ನು ಪ್ರೇರೇಪಿಸುವುದು.
ಸೌಮ್ಯತೆಯಿಂದ ಸಾಕ್ಷಿಕೊಡುವುದು
19. ಇತರರಿಗೆ ಸಾಕ್ಷಿಕೊಡಲು ಸೌಮ್ಯತೆಯು ಯೆಹೋವನ ಜನರಿಗೆ ಹೇಗೆ ಸಹಾಯ ಮಾಡುತ್ತದೆ?
19 ಸೌಮ್ಯತೆಯು ವಿವಿಧ ಮನೋಧರ್ಮಗಳ ಜನರಿಗೆ ಸಾಕ್ಷಿಕೊಡುವುದಕ್ಕೆ ಸಹಾ ಯೆಹೋವನ ಸೇವಕರಿಗೆ ಸಹಾಯ ಮಾಡುತ್ತದೆ. (1 ಕೊರಿಂಥ 9:22, 23) ಯೇಸು ಶಾಂತ ಭಾವದಿಂದ ಕಲಿಸಿದ್ದ ಕಾರಣ ದೀನಜನರು, ಕಠೋರ ವೃತ್ತಿಯ ಧಾರ್ಮಿಕ ಮಖಂಡರಿಗೆ ಭಯಪಟ್ಟಂತೆ ಯೇಸುವಿಗೆ ಭಯಪಡಲಿಲ್ಲ. (ಮತ್ತಾಯ 9:36) ನಿಶ್ಚಯವಾಗಿಯೂ ಅವನ ಸೌಮ್ಯ ವಿಧಾನಗಳು ದುಷ್ಟ “ಆಡು”ಗಳನ್ನಲ್ಲ, “ಕುರಿ”ಗಳನ್ನು ಆಕರ್ಷಿಸಿದವು. (ಮತ್ತಾಯ 25:31-46; ಯೋಹಾನ 3:16-21) ಆಡುಸದೃಶ್ಯರಾದ ಕಪಟಿಗಳೊಂದಿಗೆ ವ್ಯವಹರಿಸುವಲ್ಲಿ ಯೇಸು ಕಟುವಾದ ಮಾತುಗಳನ್ನಾಡಿದ್ದರೂ, ಇಂದು ದೇವರ ತೀರ್ಪಿನ ಸಂದೇಶವನ್ನು ಸಾರುವಾಗ ಯೆಹೋವನ ಸಾಕ್ಷಿಗಳು ಸೌಮ್ಯ ಭಾವದವರಾಗಿರಬೇಕು ಯಾಕೆಂದರೆ ಯೇಸುವಿಗಿದ್ದಂಥ ಅದೇ ಒಳನೋಟ ಮತ್ತು ಅಧಿಕಾರ ಅವರಿಗಿರುವುದಿಲ್ಲ. (ಮತ್ತಾಯ 23:13-36) ರಾಜ್ಯದ ಸಂದೇಶವು ಸೌಮ್ಯತೆಯಿಂದ ಸಾರಲ್ಪಡುವುದನ್ನು ಕೇಳುವಾಗ, ಯೇಸುವಿನ ಸಾರುವಿಕೆಗೆ ಕಿವಿಗೊಟ್ಟ ಆ ಕುರಿಸದೃಶ್ಯರಂತೆ, ‘ನಿತ್ಯಜೀವಕ್ಕಾಗಿ ಯೋಗ್ಯ ಮನೋಭಾವವಿದ್ದವರೆಲ್ಲರೂ ನಂಬುವವರಾಗುತ್ತಾರೆ.’—ಅಪೊಸ್ತಲರ ಕೃತ್ಯಗಳು 13:48.
20. ಶಾಂತಭಾವದಿಂದ ಕಲಿಸಲ್ಪಡುವಾಗ, ಬೈಬಲ್ ವಿದ್ಯಾರ್ಥಿ ಹೇಗೆ ಪ್ರಯೋಜನ ಪಡೆಯುತ್ತಾನೆ?
20 ಇತರರಿಗೆ ಸೌಮ್ಯತೆಯಿಂದ ಸಾಕ್ಷಿಕೊಡುವಾಗ ಮತ್ತು ಉಪದೇಶಿಸುವಾಗ ಹಾಗೂ ತರ್ಕಬದ್ಧತೆ, ಬೈಬಲ್ ತತ್ವಗಳು ಮತ್ತು ಸತ್ಯದ ಆಧಾರದಲ್ಲಿ ಅವರಿಗೆ ಅಪ್ಪೀಲು ಮಾಡುವಾಗ, ಒಳ್ಳೇ ಫಲಿತಾಂಶಗಳು ಫಲಿಸುತ್ತವೆ. “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ,” ಎಂದು ಬರೆದನು ಪೇತ್ರನು. “ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧರಾಗಿರಿ, ಆದರೆ ಅದನ್ನು ಸಾತ್ವಿಕತ್ವ ಮತ್ತು ಮನೋಭೀತಿ (ಸೌಮ್ಯತೆ ಮತ್ತು ಆಳವಾದ ಗೌರವ, NW) ಯಿಂದ ಮಾಡಿರಿ.” (1 ಪೇತ್ರ 3:15) ನಿರ್ದಯೆಯಿಂದ, ವಾದಾತ್ಮಕ ರೀತಿಯಲ್ಲಿ ಕಲಿಸಿ ವಿದ್ಯಾರ್ಥಿಯನ್ನು ಅಪಕರ್ಷಿಸುವ ಅಥವಾ ಮುಗ್ಗರಿಸುವಂತೆಯೂ ಮಾಡುವ ಬದಲಾಗಿ ಶಾಂತ ಭಾವದಿಂದ ಕಲಿಸುವುದಾದರೆ, ಅವನು ವಿಷಯದ ಮೇಲೆ ಮನಸ್ಸನ್ನು ಕೆಂದ್ರೀಕರಿಸಶಕ್ತನು. ಪೌಲನಂತೆ, ಸೌಮ್ಯತೆಯಿಂದ ಉಪದೇಶ ಮಾಡುವ ಶುಶ್ರೂಷಕರು, ಹೀಗನ್ನಶಕ್ತರು: “ನಿಂದೆಗೆ (ಮುಗ್ಗರಿಸುವಿಕೆಗೆ, NW) ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂಥ 6:3) ಸೌಮ್ಯತೆಯಿಂದ ಬೋಧಿಸುವವರಿಗೆ ವಿರೋಧಕರು ಸಹಾ ಕೆಲವೊಮ್ಮೆ ಒಳ್ಳೆಯ ಪ್ರತಿಕ್ರಿಯೆ ತೋರಿಸುತ್ತಾರೆ.
ಸೌಮ್ಯತೆಯು ಎಲ್ಲರಿಂದ ಅಪೇಕ್ಷಿಸಲ್ಪಡುತ್ತದೆ
21, 22. ಯೆಹೋವನ ಜನರೆಲ್ಲರಿಗೆ ಸೌಮ್ಯತೆಯು ಹೇಗೆ ಪ್ರಯೋಜನಕಾರಿಯಾಗಿದೆ?
21 ಕ್ರಿಸ್ತೀಯ ಸೌಮ್ಯತೆಯು ಯೆಹೋವನ ಸಂಸ್ಥೆಯ ಹೊರಗಿನವರನ್ನು ಕೇವಲ ಪ್ರಭಾವಿಸುವುದಕ್ಕಾಗಿ ಧರಿಸಲ್ಪಡಬಾರದು. ದೇವಜನರ ನಡುವಣ ಸಂಬಂಧಗಳಲ್ಲೂ ಈ ಗುಣವು ಅತ್ಯಾವಶ್ಯಕವು. (ಕೊಲೊಸ್ಸೆಯ 3:12-14; 1 ಪೇತ್ರ 4:8) ಸೌಮ್ಯ-ಚಿತ್ತದ ಹಿರಿಯರು ಮತ್ತು ಶುಶ್ರೂಷೆ ಸೇವಕರು ಒಟ್ಟುಗೂಡಿ ಹೊಂದಿಕೆಯಲ್ಲಿ ಕಾರ್ಯನಡಿಸುವಾಗ, ಸಭೆಗಳು ಆತ್ಮಿಕವಾಗಿ ಬಲಪಡಿಸಲ್ಪಡುತ್ತವೆ. ಸೌಮ್ಯತೆಯನ್ನು ಮತ್ತು ಇತರ ದೈವಿಕ ಗುಣಗಳನ್ನು ಪ್ರದರ್ಶಿಸುವುದು ಯೆಹೋವನ ಜನರಲ್ಲಿ ಪ್ರತಿಯೊಬ್ಬನಿಗೆ ಪ್ರಾಮುಖ್ಯವಾಗಿದೆ ಯಾಕೆಂದರೆ ಎಲ್ಲರಿಗೂ “ಒಂದೇ ನಿಯಮವಿಧಿ” ಇದೆ.—ವಿಮೋಚನಕಾಂಡ 12:49; ಯಾಜಕಕಾಂಡ 24:22.
22 ಸೌಮ್ಯತೆಯು ದೇವಜನರ ಶಾಂತಿ ಮತ್ತು ಸಂತೋಷಕ್ಕೆ ನೆರವಾಗುತ್ತದೆ. ಆದುದರಿಂದ ಅದು, ಕ್ರೈಸ್ತರೆಲ್ಲರಿಂದ ಮನೆಯಲ್ಲಿ, ಸಭೆಯಲ್ಲಿ ಮತ್ತು ಬೇರೆ ಕಡೆಗಳಲ್ಲಿ ಧರಿಸಲ್ಪಡುವ ಉಡುಪಿಗೆ ನೆಯ್ದಿರುವ ಗುಣವಾಗಿರಬೇಕು. ಹೌದು, ಯೆಹೋವನ ಸೇವಕರೆಲ್ಲರೂ ಸೌಮ್ಯತೆಯೆಂಬ ಉಡುಪನ್ನು ಧರಿಸಿದವರಾಗಿರಬೇಕು. (w91 10/15)
ನೀವು ಹೇಗೆ ಉತ್ತರಿಸುವಿರಿ?
◻ ಕ್ರೈಸ್ತ ಹಿರಿಯರು ಸೌಮ್ಯ-ಚಿತರ್ತಾಗಿರಬೇಕು ಏಕೆ?
◻ ವಿವೇಕಿ ಸಲಹೆಗಾರನನ್ನು ಸೌಮ್ಯತೆಯು ಹೇಗೆ ಮಾರ್ಗದರ್ಶಿಸುತ್ತದೆ?
◻ ಬಹು ಮಂದಿ ಸಲಹೆಗಾರರ ಬೆಲೆಯೇನು?
◻ ಸೌಮ್ಯತೆಯಿಂದ ಸಾಕ್ಷಿಕೊಡುವದು ಏಕೆ ಪ್ರಯೋಜನಕಾರಿಯು?
[ಪುಟ 15 ರಲ್ಲಿರುವ ಚಿತ್ರ]
ಯೆಹೋವನ ಜನರು ಕುರಿಸದೃಶ್ಯರು ಮತ್ತು ಸೌಮ್ಯತೆಯಿಂದ ಉಪಚರಿಸಲ್ಪಡುವ ಅಗತ್ಯವಿರುವವರು
[ಕೃಪೆ]
Garo Nalbandian
[ಪುಟ 17 ರಲ್ಲಿರುವ ಚಿತ್ರ]
ವಿವಿಧ ಮನೋಧರ್ಮಗಳ ಜನರಿಗೆ ಸಾಕ್ಷಿಕೊಡುವುದಕ್ಕೆ ಸೌಮ್ಯತೆಯು ಯೆಹೋವನ ಜನರನ್ನು ಶಕ್ತರಾಗಿ ಮಾಡುತ್ತದೆ