ದೇವರ ಕರುಣೆಯನ್ನು ಇಂದು ಅನುಕರಿಸಿರಿ
“ನಾವು ಯೆಹೋವನ ಕೈಯಲ್ಲಿ ಬೀಳೋಣ, ಯಾಕಂದರೆ ಆತನು ಕರುಣಾಪೂರ್ಣನು.”—2 ಸಮುವೇಲ 24:14, NW.
1. ದೇವರ ಕರುಣೆಯ ಕುರಿತು ದಾವೀದನ ಅನಿಸಿಕೆ ಏನಾಗಿತ್ತು ಮತ್ತು ಏಕೆ?
ಯೆಹೋವನು ಮಾನವರಿಗಿಂತ ಹೆಚ್ಚು ಕರುಣಾಪೂರ್ಣನೆಂದು ಅರಸ ದಾವೀದನಿಗೆ ಅನುಭವದಿಂದ ತಿಳಿದಿತ್ತು. ದೇವರ ಮಾರ್ಗಗಳು ಅಥವಾ ದಾರಿಗಳು ಅತ್ಯುತ್ತಮವೆಂಬ ಆತ್ಮ ವಿಶ್ವಾಸವುಳ್ಳವನಾಗಿ ದಾವೀದನು ಆತನ ಮಾರ್ಗಗಳನ್ನು ಕಲಿಯಲು ಮತ್ತು ಆತನ ಸತ್ಯತೆಯಲ್ಲಿ ನಡೆಯಲು ಅಪೇಕ್ಷೆಪಟ್ಟನು. (1 ಪೂರ್ವಕಾಲ 21:13; ಕೀರ್ತನೆ 25:4, 5) ದಾವೀದನಂತೆ ನಿಮ್ಮ ಅನಿಸಿಕೆಯೂ ಆಗಿದೆಯೇ?
2. ಗಂಭೀರವಾದ ಪಾಪವನ್ನು ನಿರ್ವಹಿಸುವ ಕುರಿತು ಮತ್ತಾಯ 18:15-17ರಲ್ಲಿ ಯೇಸು ಯಾವ ಸಲಹೆಯನ್ನು ಕೊಟ್ಟನು?
2 ಬೈಬಲು ನಮಗೆ ದೇವರ ಆಲೋಚನೆಗಳ ಒಳನೋಟವನ್ನು ಕೊಡುತ್ತದೆ, ಒಬ್ಬನು ನಮ್ಮ ವಿರುದ್ಧವಾಗಿ ಪಾಪ ಮಾಡಿದಾಗ ನಾವೇನು ಮಾಡಬೇಕೆಂಬಂಥ ವಿಷಯಗಳನ್ನೂ ತಿಳಿಸುತ್ತದೆ. ಮುಂದಕ್ಕೆ ಕ್ರೈಸ್ತ ಮೇಲ್ವಿಚಾರಕರಾಗಲಿದ್ದ ತನ್ನ ಅಪೊಸ್ತಲರಿಗೆ ಯೇಸು ಅಂದದ್ದು: “ಇದಲ್ಲದೆ ನಿನ್ನ ಸಹೋದರನು ತಪ್ಪು ಮಾಡಿದರೆ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. ಅವನು ಕೇಳದೆ ಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು. ಅವನು ಅವರ ಮಾತುಗಳನ್ನು ಕೇಳದೆ ಹೋದರೆ ಸಭೆಗೆ ಹೇಳು. ಅವನು ಸಭೆಯ ಮಾತನ್ನೂ ಕೇಳದೆ ಹೋದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.”—ಮತ್ತಾಯ 18:15-17.
3. ಪಶ್ಚಾತ್ತಾಪಪಡದ ತಪ್ಪಿತಸ್ಥನು “ಅನ್ಯನಂತೆಯೂ ಸುಂಕದವನಂತೆಯೂ” ಇರಲಿ ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ?
3 ಒಬ್ಬ ಪಾಪಿಯನ್ನು “ಅನ್ಯನಂತೆಯೂ ಸುಂಕದವನಂತೆಯೂ” ನೋಡುವುದರ ಅರ್ಥವೇನೆಂದು ಯೆಹೂದ್ಯರಾಗಿದ್ದ ಅಪೊಸ್ತಲರಿಗೆ ತಿಳಿದಿತ್ತು. ಅನ್ಯ ಜನರ ಸಹವಾಸವನ್ನು ಯೆಹೂದ್ಯರು ವರ್ಜಿಸಿದ್ದರು, ಮತ್ತು ರೋಮೀಯರ ಸುಂಕ ವಸೂಲಿಯ ಕೆಲಸವನ್ನು ಮಾಡುತ್ತಿದ್ದ ಯೆಹೂದ್ಯರನ್ನು ಅವರು ಹೇಸಿದ್ದರು.a (ಯೋಹಾನ 4:9; ಅಪೊಸ್ತಲರ ಕೃತ್ಯಗಳು 10:28) ಹೀಗೆ ಸಭೆಯು ಒಬ್ಬ ಪಾಪಿಯನ್ನು ತಿರಸ್ಕರಿಸಿದ್ದಾದರೆ, ಅವರು ಅವನೊಂದಿಗಿನ ಸಹವಾಸವನ್ನು ನಿಲ್ಲಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಸೂಚಿಸಿದ್ದನು. ಹೀಗಿರಲಾಗಿ ಯೇಸು ಕೆಲವೊಮ್ಮೆ ಸುಂಕದವರೊಂದಿಗೆ ಇದ್ದದ್ದು ಇದಕ್ಕೆ ಹೇಗೆ ಹೊಂದಿಕೆಯಾಗಿರುವುದು?
4. ಮತ್ತಾಯ 18:17ರ ಆತನ ಮಾತುಗಳ ನೋಟದಲ್ಲಿ, ಯೇಸು ಸುಂಕದವರೊಂದಿಗೆ ಮತ್ತು ಪಾಪಿಗಳೊಂದಿಗೆ ವ್ಯವಹರಿಸಶಕ್ತನಿದ್ದನೇಕೆ?
4 ಲೂಕ 15:1 ಹೇಳುವುದು: “ಎಲ್ಲಾ ಸುಂಕದವರೂ ಪಾಪಿಗಳೂ ಆತನಿಗೆ ಕಿವಿಗೊಡಲು ಆತನ ಬಳಿಗೆ ಬರುತ್ತಾ ಇದ್ದರು.” ಸುಂಕದವರಲ್ಲಿ ಅಥವಾ ಪಾಪಿಗಳಲ್ಲಿ ಪ್ರತಿಯೊಬ್ಬನೂ ಅಲ್ಲಿದ್ದನು ಎಂದಿದರ ಅರ್ಥವಲ್ಲ, “ಎಲ್ಲಾ” ಎಂಬದು ಅನೇಕರು ಎಂಬರ್ಥದಲ್ಲಿ ಹೇಳಲ್ಪಟ್ಟಿದೆ. (ಲೂಕ 4:40ಕ್ಕೆ ಹೋಲಿಸಿ.) ಅವರು ಯಾರು? ತಮ್ಮ ಪಾಪಗಳು ಕ್ಷಮಿಸಲ್ಪಡುವದರಲ್ಲಿ ಆಸಕ್ತರಿದ್ದವರೇ. ಅಂಥವರಲ್ಲಿ ಕೆಲವರು ಸ್ನಾನಿಕನಾದ ಯೋಹಾನನ ಆರಂಭದ ಪಶ್ಚಾತ್ತಾಪದ ಸಂದೇಶಕ್ಕೆ ಸೆಳೆಯಲ್ಪಟ್ಟವರಾಗಿದ್ದರು. (ಲೂಕ 3:12; 7:29) ಹೀಗೆ ಇತರರು ಯೇಸುವಿನ ಬಳಿಗೆ ಬಂದಾಗ ಆತನು ಅವರಿಗೆ ಬೋಧಿಸಿದ್ದು, ಮತ್ತಾಯ 18:17ರ ಅವನ ಸೂಚನೆಯ ಉಲ್ಲಂಘನೆಯಾಗಿರಲಿಲ್ಲ. “ಬಹು ಮಂದಿ ಸುಂಕದವರೂ ಪಾಪಿಗಳೂ [ಯೇಸುವಿಗೆ ಕಿವಿಗೊಟ್ಟರು] ಮತ್ತು ಅವರು ಅವನನ್ನು ಹಿಂಬಾಲಿಸ ತೊಡಗಿದರು” ಎಂಬದನ್ನು ಗಮನಿಸಿರಿ. (ಮಾರ್ಕ 2:15) ತಮ್ಮ ಕೆಟ್ಟ ಜೀವನ ಮಾರ್ಗದಲ್ಲೇ ಮುಂದರಿಯಲು ಬಯಸುತ್ತಾ, ಯಾವುದೇ ಸಹಾಯವನ್ನು ನಿರಾಕರಿಸಿದವರು ಅವರಲ್ಲ. ಪ್ರತಿಯಾಗಿ ಅವರು ಯೇಸುವಿನ ಸಂದೇಶಕ್ಕೆ ಕಿವಿಗೊಟ್ಟರು ಮತ್ತು ಅವರ ಹೃದಯಗಳು ಸ್ವರ್ಶಿಸಲ್ಪಟ್ಟಿದ್ದವು. ಒಂದುವೇಳೆ ಅವರಿನ್ನೂ ಪಾಪ ಮಾಡುತ್ತಿದ್ದಿರಬಹುದಾಗಿದ್ದರೂ, ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರೆಂಬದು ಸಂಭವನೀಯ. “ಒಳ್ಳೇ ಕುರುಬನು” ಅವರಿಗೆ ಬೋಧಿಸುವ ಮೂಲಕ ತನ್ನ ಕರುಣಾಪೂರ್ಣ ತಂದೆಯನ್ನು ಅನುಕರಿಸುತ್ತಿದ್ದನು.—ಯೋಹಾನ 10:14.
ಕ್ಷಮೆ, ಒಂದು ಕ್ರಿಸ್ತೀಯ ಹಂಗು
5. ಕ್ಷಮೆಯ ಸಂಬಂಧದಲ್ಲಿ ದೇವರ ಮೂಲಭೂತ ಸ್ಥಾನವೇನು?
5 ಕ್ಷಮಿಸುವದಕ್ಕೆ ನಮ್ಮ ತಂದೆಗಿರುವ ಸಿದ್ಧಮನಸ್ಸಿನ ಕುರಿತಾದ ಈ ಬೆಚ್ಚನೆಯ ಆಶ್ವಾಸನೆಯು ನಮಗಿದೆ: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು.” “ನೀವು ಪಾಪ ಮಾಡದಂತೆ ಈ ಮಾತುಗಳನ್ನು ಬರೆಯುತ್ತೇನೆ. ಯಾವನಾದರೂ ಪಾಪ ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 1:9; 2:1) ಬಹಿಷ್ಕೃತನಾದ ಒಬ್ಬ ವ್ಯಕ್ತಿಗೆ ಕ್ಷಮೆಯು ದೊರಕುವುದು ಶಕ್ಯವೋ?
6. ಬಹಿಷ್ಕೃತನಾದ ವ್ಯಕ್ತಿಯೊಬ್ಬನು ಹೇಗೆ ಕ್ಷಮಿಸಲ್ಪಡುತ್ತಾನೆ ಮತ್ತು ಪುನಃಸ್ಥಾಪಿಸಲ್ಪಡುತ್ತಾನೆ?
6 ಹೌದು, ಶಕ್ಯವು. ಪಶ್ಚಾತ್ತಾಪ ಪಡದ ಪಾಪಕ್ಕಾಗಿ ಒಬ್ಬನು ಬಹಿಷ್ಕಾರ ಹೊಂದುವ ಸಮಯದಲ್ಲಿ, ಸಭೆಯನ್ನು ಪ್ರತಿನಿಧಿಸುವ ಹಿರಿಯರು ಅವನಿಗೆ ಪಶ್ಚಾತ್ತಾಪ ಪಡುವುದಕ್ಕೆ ಮತ್ತು ದೇವರ ಕ್ಷಮೆಯನ್ನು ಹೊಂದುವದಕ್ಕೆ ಶಕ್ಯತೆ ಇದೆ ಎಂಬದನ್ನು ವಿವರಿಸುತ್ತಾರೆ. ಅವನು ರಾಜ್ಯ ಸಭಾ ಗೃಹದ ಕೂಟಗಳಿಗೆ ಹಾಜರಾಗಬಹುದು, ಅಲ್ಲಿ ಅವನ ಪಶ್ಚಾತ್ತಾಪಕ್ಕೆ ನೆರವಾಗುವ ಬೈಬಲ್ ಉಪದೇಶಕ್ಕೆ ಅವನು ಕಿವಿಗೊಡಬಹುದು. (1 ಕೊರಿಂಥ 14:23-25 ಹೋಲಿಸಿ.) ಸಮಯಾನಂತರ ಅವನು ಶುದ್ಧ ಸಭೆಯಲ್ಲಿ ಪುನಃಸ್ಥಾಪನೆಯನ್ನು ಕೋರಬಹುದಾಗಿದೆ. ಅನಂತರ ಹಿರಿಯರು ಅವನನ್ನು ಭೇಟಿಯಾದಾಗ, ಅವನು ಪಶ್ಚಾತ್ತಾಪ ಪಟ್ಟಿದ್ದಾನೋ ಮತ್ತು ತನ್ನ ಪಾಪಪೂರ್ಣ ಮಾರ್ಗವನ್ನು ಬಿಟ್ಟಿದ್ದಾನೋ ಎಂದು ತೀರ್ಮಾನಿಸಲು ಪ್ರಯತ್ನಿಸುವರು. (ಮತ್ತಾಯ 18:18) ವಿಷಯವು ಹಾಗಿದ್ದರೆ ಅವನನ್ನು 2 ಕೊರಿಂಥ 2:5-8ರ ನಮೂನೆಗೆ ಹೊಂದಿಕೆಯಲ್ಲಿ ಪುನಃಸ್ಥಾಪನೆ ಮಾಡಬಹುದು. ಅವನು ಅನೇಕ ವರ್ಷಗಳಿಂದ ಬಹಿಷ್ಕೃತನಾಗಿದ್ದ ಪಕ್ಷದಲ್ಲಿ, ಪ್ರಗತಿ ಮಾಡಲು ಅವನಿಗೆ ನಿಶ್ಚಿತ ಪ್ರಯತ್ನಗಳನ್ನು ಮಾಡುವ ಅಗತ್ಯವಿರಬಹುದು. ತದನಂತರ ತನ್ನ ಬೈಬಲ್ ಜ್ಞಾನವನ್ನು ಮತ್ತು ಗಣ್ಯತೆಯನ್ನು ಬೆಳೆಸಿ ಆತ್ಮಿಕ ಬಲವುಳ್ಳ ಕ್ರೈಸ್ತನಾಗಬೇಕಾದರೆ ಗಮನಾರ್ಹವಾದ ಸಹಾಯದ ಅಗತ್ಯವೂ ಅವನಿಗಿರಬಹುದು.
ಯೆಹೋವನ ಬಳಿಗೆ ತಿರುಗಿ ಬರುವುದು
7, 8. ದೇಶಭ್ರಷ್ಟರಾಗಿದ್ದ ತನ್ನ ಜನರ ಸಂಬಂಧದಲ್ಲಿ ದೇವರು ಯಾವ ಮಾದರಿಯನ್ನು ಇಟ್ಟನು?
7 ಆದರೆ ಒಬ್ಬ ಬಹಿಷ್ಕೃತ ವ್ಯಕ್ತಿಯನ್ನು ಗೋಚರಿಸುವದಕ್ಕೆ ಹಿರಿಯರು ತಾವೇ ಯಾವುದಾದರೂ ಮೊದಲ ಹೆಜ್ಜೆಯನ್ನು ತಕ್ಕೊಳ್ಳಬಹುದೋ? ಹೌದು, ತಕ್ಕೊಳ್ಳಬಹುದು. ಹೆಚ್ಚಾಗಿ ಕರುಣೆಯು ಶಿಕ್ಷೆಯನ್ನು ನಕಾರಾತ್ಮಕವಾಗಿ ಬಿಗಿಹಿಡಿಯುವ ಮೂಲಕವಾಗಿ ಅಲ್ಲ ಬದಲಿಗೆ ಸಕಾರಾತ್ಮಕ ಕ್ರಿಯೆಗಳ ಮೂಲಕವಾಗಿ ವ್ಯಕ್ತಪಡಿಸಲ್ಪಡುತ್ತದೆಂದು ಬೈಬಲ್ ತೋರಿಸುತ್ತದೆ. ನಮಗೆ ಯೆಹೋವನ ಮಾದರಿಯು ಇದೆ. ತನ್ನ ನಂಬಿಗಸ್ತ ಜನರನ್ನು ದೇಶಭ್ರಷ್ಟರಾಗಿ ಹೋಗಲು ಕಳುಹಿಸುವ ಮುಂಚಿತವಾಗಿ, ಪ್ರವಾದನಾರೂಪವಾಗಿ, ಅವರ ತಿರಿಗಿಕೊಳ್ಳುವಿಕೆಯ ಪ್ರತೀಕ್ಷೆಯನ್ನೂ ಆತನು ಎತ್ತಿಹಿಡಿದನು: “ಯಾಕೋಬೇ, ಇಸ್ರಾಯೇಲೇ, ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನನ್ನ ಸೇವಕನಾಗಿದ್ದೀಯಲ್ಲವೇ; . . . ನಿನ್ನ ದ್ರೋಹಗಳನ್ನು ಮಂಜಿನಂತೆ ಪರಿಹರಿಸುವೆನು, ನಿನ್ನ ಪಾಪಗಳನ್ನು ಮೋಡದಂತೆ ಹಾರಿಸುವೆನು. ನಿನ್ನನ್ನು ವಿಮೋಚಿಸುವೆನು, ನನ್ನ ಕಡೆಗೆ ತಿರುಗಿಕೋ.”—ಯೆಶಾಯ 44:21, 22.
8 ಅನಂತರ ದೇಶಭ್ರಷ್ಟರಾದ ಅವಧಿಯಲ್ಲಿ, ಯೆಹೋವನು ಅಧಿಕ ಹೆಜ್ಜೆಗಳನ್ನು ತಕ್ಕೊಂಡನು, ಸಕಾರಾತ್ಮಕ ರೀತಿಯಲ್ಲಿ ಕ್ರಿಯೆಗೈದನು. ತನ್ನ ಪ್ರವಾದಿಗಳನ್ನು, ತನ್ನ ಪ್ರತಿನಿಧಿಗಳನ್ನು ಕಳುಹಿಸಿ, ‘ತನ್ನನ್ನು ಹುಡುಕಿ ಕಂಡುಕೊಳ್ಳುವಂತೆ’ ಇಸ್ರಾಯೇಲನ್ನು ಆಮಂತ್ರಿಸಿದನು. (ಯೆರೆಮೀಯ 29:1, 10-14) ಯೆಹೆಜ್ಕೇಲ 34:16ರಲ್ಲಿ, ಅವನು ತನ್ನನ್ನು ಕುರುಬನನ್ನಾಗಿಯೂ ಮತ್ತು ಇಸ್ರಾಯೇಲ್ ಜನಾಂಗದ ಜನರನ್ನು ಕಳೆದುಹೋದ ಕುರಿಗಳಾಗಿಯೂ ಹೋಲಿಸಿದ್ದಾನೆ: “ತಪ್ಪಿಸಿಕೊಂಡದ್ದನ್ನು ಹುಡುಕುವೆನು, ಚದರಿಹೋದದ್ದನ್ನು ಮಂದೆಗೆ ಸೇರಿಸುವೆನು.” ಯೆರೆಮೀಯ 31:10ರಲ್ಲಿ, ಯೆಹೋವನು ತಾನು ಇಸ್ರಾಯೇಲ್ಯರ ಕುರುಬನಾಗಿರುವ ಶಬ್ದಚಿತ್ರವನ್ನು ಸಹಾ ಉಪಯೋಗಿಸಿದನು. ಇಲ್ಲ, ಕಳೆದು ಹೋದ ಕುರಿಯು ಹಿಂದೆ ಬರುವುದನ್ನು ಕಾಯುತ್ತಾ ಕುರೀಹಟ್ಟಿಯಲ್ಲಿ ಕುಳಿತಿರುವ ಕುರುಬನಾಗಿ ತನ್ನನ್ನು ಚಿತ್ರಿಸಿಕೊಳ್ಳಲಿಲ್ಲ. ಬದಲಿಗೆ ತಪ್ಪಿಸಿಕೊಂಡಿರುವ ಕುರಿಗಳಿಗಾಗಿ ಹುಡುಕುವ ಕುರುಬನಾಗಿ ತನ್ನನ್ನು ತೋರಿಸಿಕೊಂಡನು. ಸಾಮಾನ್ಯವಾಗಿ ಜನರು ಪಶ್ಚಾತ್ತಾಪ ಪಡದವರೂ ದೇಶಭ್ರಷ್ಟರು ಆಗಿದ್ದರೂ ಕೂಡಾ, ಅವರು ತಿರುಗಿ ಬರುವಂತೆ ದೇವರು ತಾನೇ ಮೊದಲ ಪ್ರಯತ್ನಗಳನ್ನು ಮಾಡಿದ್ದನೆಂಬದನ್ನು ಗಮನಿಸಿರಿ. ಮತ್ತು ಮಲಾಕಿಯ 3:6ಕ್ಕೆ ಹೊಂದಿಕೆಯಲ್ಲಿ, ಕ್ರೈಸ್ತ ಏರ್ಪಾಡಿನಲ್ಲಿ ತನ್ನ ವ್ಯವಹಾರದ ಈ ರೀತಿಯನ್ನು ದೇವರು ಬದಲಾಯಿಸಲಾರನು.
9. ದೇವರ ಈ ಮಾದರಿಯು ಕ್ರೈಸ್ತ ಸಭೆಯಲ್ಲಿ ಹೇಗೆ ಹಿಂಬಾಲಿಸಲ್ಪಟ್ಟಿತು?
9 ಇದು ಬಹಿಷ್ಕೃತರಾಗಿರುವ ಮತ್ತು ಈಗ ಪಶ್ಚಾತ್ತಾಪ ಪಟ್ಟಿರಬಹುದಾದ ಕೆಲವರ ಕಡೆಗೆ ಮೊದಲ ಹೆಜ್ಜೆಯನ್ನು ತಕ್ಕೊಳ್ಳಲು ಒಂದು ಕಾರಣವಿರ ಸಾಧ್ಯವಿದೆ ಎಂಬದನ್ನು ಸೂಚಿಸುವುದಿಲ್ಲವೇ? ಕೊರಿಂಥ ಸಭೆಯಿಂದ ಆ ದುಷ್ಟ ಮನುಷ್ಯನನ್ನು ತೆಗೆದು ಹಾಕಬೇಕೆಂದು ಅಪೊಸ್ತಲ ಪೌಲನು ಕೊಟ್ಟ ಮಾರ್ಗದರ್ಶನೆಯನ್ನು ನೆನಪಿಗೆ ತನ್ನಿರಿ. ತದನಂತರ ಆ ಮನುಷ್ಯನ ಪಶ್ಚಾತ್ತಾಪದ ಕಾರಣ ಅವನ ಕಡೆಗೆ ಅವರು ತಮ್ಮ ಪ್ರೀತಿಯನ್ನು ನಿಶ್ಚಯಪಡಿಸುವಂತೆ ಪೌಲನು ಸಭೆಯನ್ನು ಪ್ರಬೋಧಿಸಿದನು, ತರುವಾಯ ಇದು ಸಭೆಯಲ್ಲಿ ಅವನ ಪುನಃಸ್ಥಾಪನೆಯ ಕಡೆಗೆ ನಡಿಸಿತು.—1 ಕೊರಿಂಥ 5:9-13; 2 ಕೊರಿಂಥ 2:5-11.
10. (ಎ) ಬಹಿಷ್ಕೃತರಾದ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಲು ಯಾವುದೇ ಪ್ರಯತ್ನಗಳನ್ನು ಯಾವ ಹೇತುವು ಪ್ರೇರಿಸಬೇಕು? (ಬಿ) ಕ್ರೈಸ್ತ ಸಂಬಂಧಿಕರು ಸಂಪರ್ಕ ಮಾಡಲು ಮೊದಲ ಹೆಜ್ಜೆಯನ್ನಿಡುವವರಲ್ಲ ಏಕೆ?
10 ಆರಂಭದಲ್ಲಿ ಉಲ್ಲೇಖಿತವಾದ ಆ ಎನ್ಸೈಕ್ಲೊಪೀಡಿಯ ಹೇಳಿದ್ದು: ‘ಬಹಿಷ್ಕಾರಕ್ಕೆ ಮೂಲಭೂತ ತತ್ವಾಧಾರವು ಗುಂಪಿನ ನೀತಿಮಟ್ಟಗಳನ್ನು ಕಾಪಾಡುವುದಕ್ಕಾಗಿದೆ: “ಸ್ವಲ್ಪ ಹುಳಿ ಕಲಸಿದರೆ ಕಣಿಕವೆಲ್ಲಾ ಹುಳಿಯಾಗುವದು.” (1 ಕೊರಿ. 5:6). ಈ ಹೇತುವು ಹೆಚ್ಚಿನ ಬೈಬಲ್ ವಚನಗಳಲ್ಲಿ ಮತ್ತು ಸಪ್ರಮಾಣ್ಯಾತೀತ ಸಾಹಿತ್ಯಗಳಲ್ಲಿ ಸ್ಪಷ್ಟವಾಗಿಗಿದೆ, ಆದರೆ ಆ ವ್ಯಕ್ತಿಯ ಕಡೆಗೆ, ಬಹಿಷ್ಕಾರದ ನಂತರವೂ, ಚಿಂತನೆ ತೋರಿಸುವದು 2 ಕೊರಿ. 2:7-10ರ ಪೌಲನ ಹೇಳಿಕೆಗೆ ಮೂಲಾಧಾರವಾಗಿತ್ತು. (ಒತ್ತು ನಮ್ಮದು.) ಆದಕಾರಣ, ಈ ರೀತಿಯ ಚಿಂತನೆಯು ಹಿಂಡಿನ ಕುರುಬರಿಂದ ಇಂದು ತೋರಿಸಲ್ಪಡಬೇಕಾದದ್ದು ನ್ಯಾಯಸಮ್ಮತವು. (ಅಪೊಸ್ತಲರ ಕೃತ್ಯಗಳು 20:28; 1 ಪೇತ್ರ 5:2) ಹಿಂದಣ ಮಿತ್ರರು ಮತ್ತು ಸಂಬಂಧಿಕರು ಬಹಿಷ್ಕೃತನಾದಾತನು ತಿರುಗಿ ಬರುವನೆಂದು ನಿರೀಕ್ಷಿಸುತ್ತಿರಬಹುದು; ಆದರೂ 1 ಕೊರಿಂಥ 5:11ರ ಅಪ್ಪಣೆಯನ್ನು ಮಾನ್ಯಮಾಡಿ ಅವರು ಬಹಿಷ್ಕಾರವಾದ ವ್ಯಕ್ತಿಯೊಂದಿಗೆ ಸಹವಸಿಸುವದಿಲ್ಲ.b ಅಂಥ ಒಬ್ಬ ವ್ಯಕ್ತಿಯು ಹಿಂತಿರುಗಿ ಬರುವುದರಲ್ಲಿ ಆಸಕ್ತನಿದ್ದಾನೋ ಎಂದು ನೋಡಲು ಮೊದಲ ಹೆಜ್ಜೆಯನ್ನು ತಕ್ಕೊಳ್ಳುವಂತೆ ನೇಮಿತ ಕುರುಬರಿಗೆ ಅವರು ಬಿಟ್ಟುಕೊಡುತ್ತಾರೆ.
11, 12. ಯಾವ ರೀತಿಯ ಬಹಿಷ್ಕೃತರನ್ನು ಹಿರಿಯರು ಕೂಡಾ ಸಂಪರ್ಕಿಸ ಬಯಸಲಾರರು, ಮತ್ತು ಯಾವ ರೀತಿಯವರನ್ನು ಅವರು ಸಂದರ್ಶಿಸಬಹುದು?
11 ‘ವ್ಯತ್ಯಾಸ ಬೋಧನೆಯನ್ನು ಮಾಡಿ ಶಿಷ್ಯರನ್ನು ತಮ್ಮ ಕಡೆಗೆ ಎಳಕೊಳ್ಳುವ’ ಧರ್ಮಭ್ರಷ್ಟರೇ ಮುಂತಾದ ನಿರ್ದಿಷ್ಟ ಬಹಿಷ್ಕೃತರ ಕಡೆಗೆ ಮೊದಲ ಹೆಜ್ಜೆಯನ್ನು ತಕ್ಕೊಳ್ಳುವುದು ಹಿರಿಯರಿಗೆ ಸಹಾ ಯೋಗ್ಯವಾಗಿರಲಾರದು. ಅಂಥವರು “ಸುಳ್ಳು ಬೋಧಕರೂ ನಾಶಕರವಾದ ಮತಬೇಧಗಳನ್ನು ಹುಟ್ಟಿಸುವವರೂ ಕಲ್ಪನೆಯ ಮಾತುಗಳನ್ನು ಹೇಳುತ್ತಾ ಸಭೆಯನ್ನು ದೋಚುವವರೂ’ ಆಗಿದ್ದಾರೆ. (ಅಪೊಸ್ತಲರ ಕೃತ್ಯಗಳು 20:30; 2 ಪೇತ್ರ 2:1, 3) ಕಲಹವೆಬ್ಬಿಸುವವರೂ ಅಥವಾ ಕೆಟ್ಟತನವನ್ನು ಕಾರ್ಯಥ ಪ್ರೇರೇಪಿಸುವರೂ ಆಗಿರುವ ಬಹಿಷ್ಕೃತರನ್ನು ಹುಡುಕಿ ತರುವುದಕ್ಕೆ ಸಹಾ ಬೈಬಲು ಯಾವ ಆಧಾರವನ್ನೂ ಕೊಡುವುದಿಲ್ಲ.—2 ಥೆಸಲೊನೀಕ 2:3; 1 ತಿಮೊಥಿ 4:1; 2 ಯೋಹಾನ 9-11; ಯೂದ 4, 11.
12 ಆದರೂ ಹೆಚ್ಚಿನ ಬಹಿಷ್ಕೃತರು ಆ ರೀತಿಯವರಲ್ಲ. ಯಾವುದಕ್ಕಾಗಿ ಅವರು ಬಹಿಷ್ಕೃತರಾಗಿದ್ದರೋ ಆ ಗಂಭೀರ ದುರ್ನಡತೆಯನ್ನು ಅವರೀಗ ಬಿಟ್ಟಿರಬಹುದು. ಇನ್ನೊಬ್ಬನು ಹಿಂದೆ ತಂಬಾಕು ಉಪಯೋಗಿಸಿದಿರ್ದಬಹುದು ಅಥವಾ ಹಿಂದೆ ಅವನು ಮಿತಿಮೀರಿ ಕುಡಿಯುವವನಾಗಿದ್ದಿರಬಹುದು, ಆದರೆ ಈಗ ಅವನು ಇತರರನ್ನು ದುರ್ನಡತೆಗೆ ನಡಿಸ ಪ್ರಯತ್ನಿಸುವುದಿಲ್ಲ. ದೇಶಭ್ರಷ್ಟರಾದ ಇಸ್ರಾಯೇಲ್ಯರು ದೇವರ ಕಡೆಗೆ ತಿರುಗಿಕೊಳ್ಳುವ ಮೊದಲೇ, ಆತನು ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಅವರು ಹಿಂದೆಬರುವಂತೆ ಪ್ರೇರಿಸಿದ್ದನ್ನು ನೆನಪು ಮಾಡಿರಿ. ಪೌಲನಾಗಲಿ ಅಥವಾ ಕೊರಿಂಥ ಸಭೆಯ ಹಿರಿಯರಾಗಲಿ ಕೆಲವು ಮೊದಲ ಹೆಜ್ಜೆಯನ್ನು ತಕ್ಕೊಂಡು ಆ ಬಹಿಷ್ಕೃತನನ್ನು ಪರೀಕ್ಷಿಸಿದ್ದರೋ ಇಲ್ಲವೋ ಬೈಬಲು ತಿಳಿಸುವುದಿಲ್ಲ. ಆ ಮನುಷ್ಯನು ಪಶ್ಚಾತ್ತಾಪ ಪಟ್ಟಾಗ ಮತ್ತು ತನ್ನ ಅನೈತಿಕತೆಯನ್ನು ಬಿಟ್ಟುಬಿಟ್ಟಾಗ, ಅವನನ್ನು ಪುನಃಸ್ಥಾಪಿಸುವಂತೆ ಪೌಲನು ಸಭೆಗೆ ಮಾರ್ಗದರ್ಶನೆಯನ್ನು ಕೊಟ್ಟನು.
13, 14. (ಎ) ಬಹಿಷ್ಕೃತರಾದ ಕೆಲವರು ಕರುಣಾಪೂರ್ಣ ಹೆಜ್ಜೆಗೆ ಪ್ರತಿಕ್ರಿಯೆ ತೋರಿಸ್ಯಾರು ಎಂಬದನ್ನು ಯಾವುದು ಸೂಚಿಸುತ್ತದೆ? (ಬಿ) ಅವರ ಸಂಪರ್ಕಕ್ಕಾಗಿ ಹಿರಿಯ ಮಂಡಲಿಯು ಹೇಗೆ ಏರ್ಪಡಿಸ ಸಾಧ್ಯವಿದೆ?
13 ಇತ್ತೀಚಿಗಿನ ಸಮಯಗಳಲ್ಲಿ ಒಬ್ಬ ಹಿರಿಯನು ಬಹಿಷ್ಕೃತ ವ್ಯಕ್ತಿಯನ್ನು ಭೇಟಿಯಾಗಿರುವ ಸಂದರ್ಭಗಳು ಸಂಭವಿಸಿವೆ.c ಎಲ್ಲಿ ಯುಕ್ತವೋ ಅಲ್ಲಿ, ಆ ಕುರುಬನು ಪುನಸ್ಥಾಪನೆಗಾಗಿ ತಕ್ಕೊಳ್ಳುವ ಹೆಜ್ಜೆಗಳನ್ನು ಸಂಕ್ಷೇಪವಾಗಿ ತಿಳಿಸಿರುತ್ತಾನೆ. ಇಂಥ ಕೆಲವು ವ್ಯಕ್ತಿಗಳು ಪಶ್ಚಾತ್ತಾಪ ಪಟ್ಟಿದ್ದಾರೆ ಮತ್ತು ಪುನಃಸ್ಥಾಪನೆಯನ್ನು ಪಡೆದಿದ್ದಾರೆ. ಅಂಥ ಸಂತೋಷಭರಿತ ಫಲಿತಾಂಶಗಳು, ಬಹಿಷ್ಕೃತರು ಯಾ ಬೇರ್ಪಡಿಸಿಕೊಂಡವರು ಕುರುಬರಿಂದ ಮಾಡಲ್ಪಡುವ ಕರುಣಾಪೂರ್ಣ ಗೋಚರಕ್ಕೆ ಒಳ್ಳೇ ಪ್ರತಿವರ್ತನೆ ತೋರಿಸಬಹುದೆಂಬದನ್ನು ಸೂಚಿಸುತ್ತದೆ. ಆದರೆ ಹಿರಿಯರು ಈ ವಿಷಯವನ್ನು ಹೇಗೆ ನಿರ್ವಹಿಸಬಹುದು? ಹೆಚ್ಚೆಂದರೆ ವರ್ಷಕ್ಕೊಮ್ಮೆ, ಹಿರಿಯ ಮಂಡಲಿಯು ಅಂಥ ವ್ಯಕ್ತಿಗಳು ಅವರ ಕ್ಷೇತ್ರದಲ್ಲಿ ವಾಸಿಸುತ್ತಾರೋ ಎಂಬದನ್ನು ಪರಿಗಣಿಸತಕ್ಕದ್ದು.d ಬಹಿಷ್ಕಾರವಾಗಿ ಒಂದು ವರ್ಷ ದಾಟಿರುವವರ ಮೇಲೆ ಹಿರಿಯರು ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವರು. ಪರಿಸ್ಥಿತಿಗಳಿಗನುಸಾರ, ಯುಕ್ತವಾಗಿದ್ದ ಪಕ್ಷದಲ್ಲಿ, ಆ ವ್ಯಕ್ತಿಯನ್ನು ಸಂದರ್ಶಿಸಲು ಇಬ್ಬರು ಹಿರಿಯರನ್ನು (ಪರಿಸ್ಥಿತಿಯ ಪರಿಚಯವಿದವ್ದರಾಗಿದ್ದರೆ ಒಳ್ಳೆಯದು) ಅವರು ನೇಮಿಸುವರು. ಒಂದು ಠೀಕಾತ್ಮಕ, ಅಪಾಯಕಾರಿ ಮನೋಭಾವದ ಅಥವಾ ತಮಗೆ ಯಾವ ಸಹಾಯವೂ ಬೇಡ ಎಂದು ಸ್ಪಷ್ಟವಾಗಿಗಿ ತಿಳಿಯಪಡಿಸುವ ಯಾರಿಗಾದರೂ ಯಾವ ಸಂದರ್ಶನೆಯನ್ನೂ ಮಾಡಲಾಗುವದಿಲ್ಲ.—ರೋಮಾಪುರ 16:17, 18; 1 ತಿಮೊಥಿ 1:20; 2 ತಿಮೊಧಿ 2:16-18.
14 ಆ ಇಬ್ಬರು ಕುರುಬರು ಒಂದು ಸಂಕ್ಷಿಪ್ತ ಸಂದರ್ಶನ ಮಾಡುವ ಕುರಿತು ಟೆಲಿಫೋನಿನಲ್ಲಿ ಕೇಳಬಹುದು ಅಥವಾ ಒಂದು ಯುಕ್ತ ಸಮಯದಲ್ಲಿ ಅಲ್ಲಿಗೆ ಹೋಗಬಹುದು. ಸಂದರ್ಶನೆಯ ಸಮಯದಲ್ಲಿ ಅವರು ಕಟ್ಟುನಿಟ್ಟಿನ ಯಾ ತೀರಾತಣ್ಣಗಿನ ಭಾವವನ್ನು ತೋರಿಸದೆ ತಮ್ಮ ಕರುಣಾಪೂರ್ಣ ಚಿಂತನೆಯನ್ನು ಬೆಚ್ಚಗಾಗಿ ಪ್ರತಿಬಿಂಬಿಸುವವರಾಗಬೇಕು. ಹಿಂದಣ ಕೇಸನ್ನು ಪುನರಾವರ್ತಿಸಲು ಹೋಗುವ ಬದಲಿಗೆ, ಯೆಶಾಯ 1:18 ಮತ್ತು 55:6, 7 ಮತ್ತು ಯಾಕೋಬ 5:20 ಮುಂತಾದ ಬೈಬಲ್ ವಚನಗಳನ್ನು ಅವರು ಚರ್ಚಿಸಬಹುದು. ಆ ವ್ಯಕ್ತಿಯು ದೇವರ ಮಂದೆಗೆ ತಿರುಗಿ ಬರುವುದರಲ್ಲಿ ಆಸಕ್ತನಿದ್ದರೆ, ಅವನು ಯಾವ ಹೆಜ್ಜೆಗಳನ್ನು ತಕ್ಕೊಳ್ಳಬೇಕೆಂದು ಅವರು ದಯೆಯಿಂದ ವಿವರಿಸ ಸಾಧ್ಯವಿದೆ, ಬೈಬಲನ್ನು ಮತ್ತು ವಾಚ್ ಟವರ್ ಸೊಸೈಟಿಯ ಸಾಹಿತ್ಯಗಳನ್ನು ಓದುವುದು ಮತ್ತು ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗುವುದೇ ಮುಂತಾದ ಹೆಜ್ಜೆಗಳಾಗಿವೆ.
15. ಬಹಿಷ್ಕೃತನಾಗಿರುವ ವ್ಯಕ್ತಿಯೊಂದಿಗೆ ಸಂಪರ್ಕಮಾಡುವ ಹಿರಿಯರು ಏನನ್ನು ಮನಸ್ಸಿನಲ್ಲಿಡಬೇಕು?
15 ಅಲ್ಲಿ ಪಶ್ಚಾತ್ತಾಪದ ಸೂಚನೆ ಇದೆಯೇ ಅಥವಾ ಇನ್ನೊಂದು ಮರುಸಂದರ್ಶನವು ಯುಕ್ತವೋ ಎಂದು ತೀರ್ಮಾನಿಸಲು ಈ ಹಿರಿಯರು ವಿವೇಕವೂ ವಿವೇಚನೆಯೂ ಉಳ್ಳವರಾಗಬೇಕು. ಕೆಲವು ಬಹಿಷ್ಕೃತ ವ್ಯಕ್ತಿಗಳಲ್ಲಿ ‘ಮಾನಸಾಂತರವನ್ನು ಹುಟ್ಟಿಸುವುದು’ ಅಸಾಧ್ಯವೆಂಬದನ್ನೂ ಅವರು ಮನಸ್ಸಿನಲ್ಲಿಡಬೇಕು, ನಿಶ್ಚಯ. (ಇಬ್ರಿಯ 6:4-6; 2 ಪೇತ್ರ 2:20-22) ಸಂದರ್ಶನೆಯ ನಂತರ, ಆ ಇಬ್ಬರು ಸಭಾ ಸೇವಾ ಕಮಿಟಿಗೆ ಒಂದು ಸಂಕ್ಷಿಪ್ತ ಬಾಯಿಮಾತಿನ ವರದಿಯನ್ನು ತಿಳಿಸುವರು. ಸೇವಾ ಕಮಿಟಿಯು ಅನಂತರ ಅದನ್ನು ತಮ್ಮ ಮುಂದಿನ ಹಿರಿಯ ಮಂಡಲಿಯ ಕೂಟದಲ್ಲಿ ತಿಳಿಯಪಡಿಸುವರು. ಹಿರಿಯರ ಕರುಣಾಪೂರ್ಣ ಮೊದಲ ಹೆಜ್ಜೆಯು ದೇವರ ನೋಟವನ್ನು ಪ್ರತಿಬಿಂಬಿಸುವುದು: “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.”—ಮಲಾಕಿಯ 3:7.
ಇತರ ಕರುಣಾಪೂರ್ಣ ಸಹಾಯ
16, 17. ಬಹಿಷ್ಕೃತನಾದ ವ್ಯಕ್ತಿಯ ಕ್ರೈಸ್ತ ಸಂಬಂಧಿಕರನ್ನು ನಾವು ಹೇಗೆ ವೀಕ್ಷಿಸಬೇಕು?
16 ಮೇಲ್ವಿಚಾರಕರಾಗಿರದಿರುವ ಮತ್ತು ಬಹಿಷ್ಕೃತ ವ್ಯಕ್ತಿಗಳ ಕಡೆಗೆ ಅಂಥ ಮೊದಲ ಹೆಜ್ಜೆಗಳನ್ನು ತಕ್ಕೊಳ್ಳಲಾರದ ನಮ್ಮ ಕುರಿತಾಗಿ ಏನು? ಈ ಏರ್ಪಾಡಿಗೆ ಹೊಂದಿಕೆಯಲ್ಲಿ ಮತ್ತು ಯೆಹೋವನ ಅನುಕರಣೆಯಲ್ಲಿ, ನಾವೇನು ಮಾಡಸಾಧ್ಯವಿದೆ?
17 ಎಷ್ಟರ ತನಕ ಒಬ್ಬನು ಬಹಿಷ್ಕೃತನಾಗಿ ಯಾ ಬೇರ್ಪಡಿಸಿಕೊಂಡವನಾಗಿ ಇರುತ್ತಾನೋ ಆ ತನಕ, ಈ ಸೂಚನೆಯನ್ನು ನಾವು ಪಾಲಿಸುವ ಅಗತ್ಯವಿದೆ: “ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡುಕನಾದರೂ ಸುಲುಕೊಳ್ಳುವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು.” (1 ಕೊರಿಂಥ 5:11) ಆದರೆ ಈ ಬೈಬಲ್ ಮಾರ್ಗದರ್ಶಕವು ಬಹಿಷ್ಕೃತನೊಂದಿಗೆ ಜೀವಿಸುವ ಕ್ರೈಸ್ತ ಕುಟುಂಬ ಸದಸ್ಯರ ಮೇಲಣ ನಮ್ಮ ನೋಟವನ್ನು ಬಾಧಿಸಬಾರದು. ಪ್ರಾಚೀನ ಯೆಹೂದ್ಯರು ಸುಂಕದವರ ಕಡೆಗೆ ಎಷ್ಟು ಕಟುವಾಗಿ ಪ್ರತಿಕ್ರಿಯಿಸಿದ್ದರೆಂದರೆ ಅವರ ದ್ವೇಷವು ಸುಂಕದವರ ಕುಟುಂಬಕ್ಕೂ ವಿಸ್ತರಿಸಿತ್ತು. ಯೇಸುವು ಅದನ್ನು ಅಂಗೀಕರಿಸಲಿಲ್ಲ. ಸಹಾಯವನ್ನು ನಿರಾಕರಿಸುವ ಒಬ್ಬ ಪಾಪಿಯನ್ನು “ಅನ್ಯನಂತೆಯೂ ಸುಂಕದವನಂತೆಯೂ” ಉಪಚರಿಸಬೇಕೆಂದು ಆತನು ಹೇಳಿದನು; ಕ್ರೈಸ್ತ ಕುಟುಂಬದವರನ್ನು ಅದೇ ರೀತಿ ಉಪಚರಿಸಬೇಕೆಂದು ಆತನು ಹೇಳಲಿಲ್ಲ.—ಮತ್ತಾಯ 18:17.
18, 19. ಬಹಿಷ್ಕೃತ ವ್ಯಕ್ತಿಯ ನಂಬಿಗಸ್ತ ಸಂಬಂಧಿಕರ ಕಡೆಗೆ ನಮ್ಮ ಕ್ರಿಸ್ತೀಯತೆಯನ್ನು ಪ್ರದರ್ಶಿಸುವ ಕೆಲವು ವಿಧಾನಗಳು ಯಾವುವು?
18 ನಂಬಿಗಸ್ತ ಕ್ರೈಸ್ತರಾದ ಆ ಕುಟುಂಬ ಸದಸ್ಯರಿಗೆ ನಾವು ವಿಶೇಷವಾಗಿ ಬೆಂಬಲವನ್ನು ನೀಡತಕ್ಕದ್ದು. ಅವರ ಆತ್ಮಿಕ ಬೆನ್ನಟ್ಟುವಿಕೆಗಳನ್ನು ಕಾರ್ಯಥ ನಿರುತ್ತೇಜಿಸಬಹುದಾದ ಒಬ್ಬ ಬಹಿಷ್ಕೃತ ವ್ಯಕ್ತಿಯೊಂದಿಗೆ ಮನೆಯಲ್ಲಿ ವಾಸಿಸುವ ಕಾರಣ ಅವರು ಈವಾಗಲೇ ಅಡಚಣೆಗಳನ್ನು ಮತ್ತು ನೋವನ್ನು ಎದುರಿಸಿರಬಹುದು. ತಮ್ಮ ಮನೆಯನ್ನು ಕ್ರೈಸ್ತರು ಸಂದರ್ಶಿಸಬಾರದು ಎಂದವನು ಇಚ್ಛೈಸಲೂಬಹುದು; ಅಥವಾ ನಿಷ್ಠೆಯುಳ್ಳ ಕುಟುಂಬ ಸದಸ್ಯರನ್ನು ಅವರು ನೋಡಲು ಬಂದರೆ ಸಂದರ್ಶಕರಿಂದ ದೂರವಿರುವ ಸಭ್ಯತೆಯು ಅವನಲ್ಲಿಲ್ಲದಿರಬಹುದು. ಎಲ್ಲಾ ಕ್ರೈಸ್ತ ಕೂಟಗಳಿಗೆ ಮತ್ತು ಸಮ್ಮೇಳನಗಳಿಗೆ ಹಾಜರಾಗುವ ಕುಟುಂಬದ ಪ್ರಯತ್ನಗಳಿಗೂ ಅವನು ಅಡ್ಡಿಮಾಡುತ್ತಿರಬಹುದು. (ಮತ್ತಾಯ 23:13 ಹೋಲಿಸಿ.) ಈ ರೀತಿಯಲ್ಲಿ ಅನಾನುಕೂಲಕ್ಕೆ ಒಡ್ಡಲ್ಪಟ್ಟ ಕ್ರೈಸ್ತರು ನಮ್ಮ ಕರುಣೆಗೆ ನಿಜವಾಗಿಯೂ ಅರ್ಹರಾಗಿದ್ದಾರೆ.—2 ಕೊರಿಂಥ 1:3, 4.
19 ಕೋಮಲ ಕರುಣೆಯನ್ನು ತೋರಿಸುವ ಒಂದು ವಿಧಾನವು ‘ಸಾಂತ್ವನಕರವಾದ ಮಾತುಗಳನ್ನಾಡುವುದು’ ಮತ್ತು ಮನೆವಾರ್ತೆಯ ಅಂಥ ನಂಬಿಗಸ್ತ ಜನರೊಂದಿಗೆ ಪ್ರೋತ್ಸಾಹನೀಯ ಸಂಭಾಷಣೆಗಳನ್ನು ನಡಿಸುವುದೇ. (1 ಥೆಸಲೊನೀಕ 5:14) ಕೂಟಗಳ ಮುಂಚೆ ಮತ್ತು ಅನಂತರ, ಕ್ಷೇತ್ರ ಸೇವೆಯಲ್ಲಿರುವಾಗ, ಅಥವಾ ಬೇರೆ ಸಮಯದಲ್ಲಿ ಒಟ್ಟಾಗಿ ಕೂಡಿಬರುವಾಗ ಅವರಿಗೆ ಬೆಂಬಲವನ್ನು ಕೊಡುವ ಒಳ್ಳೇ ಸಂದರ್ಭಗಳೂ ಅಲ್ಲಿವೆ. ಅವರೊಡನೆ ಬಹಿಷ್ಕಾರದ ಕುರಿತು ಮಾತಾಡುವ ಅಗತ್ಯ ನಮಗಿಲ್ಲ ಬದಲಿಗೆ ಅನೇಕ ಭಕ್ತಿವೃದ್ಧಿಯ ವಿಷಯಗಳನ್ನು ನಾವು ಚರ್ಚಿಸ ಸಾಧ್ಯವಿದೆ. (ಜ್ಞಾನೋಕ್ತಿ 25:11; ಕೊಲೊಸ್ಸೆ 1:2-4) ಕುಟುಂಬದ ಕ್ರೈಸ್ತರನ್ನು ಪರಿಪಾಲಿಸುವುದನ್ನು ಹಿರಿಯರು ಮುಂದರಿಸುತ್ತಾರಾದರೂ, ಬಹಿಷ್ಕೃತ ವ್ಯಕ್ತಿಯೊಂದಿಗೆ ಯಾವ ವ್ಯವಹಾರವೂ ಇಲ್ಲದೆ, ನಾವು ಸಹಾ ಕುಟುಂಬವನ್ನು ಸಂದರ್ಶಿಸಲು ಶಕ್ತರಾಗಬಹುದು. ನಾವು ಸಂದರ್ಶಿಸುವಾಗ ಯಾ ಫೋನ್ ಮಾಡುವಾಗ ಬಹಿಷ್ಕೃತನ ಸಂಪರ್ಕವು ಸಂಭವಿಸಿದರೆ, ನಮಗೆ ಬೇಕಾದ ಕ್ರೈಸ್ತ ಸಂಬಂಧಿಕರ ಕುರಿತು ನಾವು ಬರೇ ಕೇಳಬಹುದು ಅಷ್ಟೆ. ಕೆಲವು ಸಾರಿ ಆ ಕ್ರೈಸ್ತ ಕುಟುಂಬ ಸದಸ್ಯರು ಸಹವಾಸಕ್ಕಾಗಿ ನಮ್ಮ ಮನೆಗೆ ಬರುವ ಆಮಂತ್ರಣವನ್ನು ಸ್ವೀಕರಿಸಲೂ ಶಕ್ತರಾಗಬಹುದು. ಮುಖ್ಯ ವಿಷಯವೇನಂದರೆ: ಅವರು—ಎಳೆಯರು ಮತ್ತು ವೃದ್ಧರು—ನಮ್ಮ ಜೊತೆ ಸೇವಕರು, ದೇವರ ಸಭೆಯ ಪ್ರಿಯರಾದ ಸದಸ್ಯರು, ಅವರನ್ನು ಒಂಟಿಗರಾಗಿ ದೂರವಿರಿಸಬಾರದು.—ಕೀರ್ತನೆ 10:14.
20, 21. ಒಬ್ಬನು ಪುನಃಸ್ಥಾಪನೆ ಹೊಂದಿದಾಗ ನಮ್ಮ ಭಾವನೆ ಮತ್ತು ಕ್ರಿಯೆಯು ಹೇಗಿರಬೇಕು?
20 ಕರುಣೆಯನ್ನು ತೋರಿಸುವ ಇನ್ನೊಂದು ಕ್ಷೇತ್ರವು—ಬಹಿಷ್ಕೃತನೊಬ್ಬನು ಪುನಃಸ್ಥಾಪಿಸಲ್ಪಡುವಾಗ ತೆರೆಯುತ್ತದೆ. ‘ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ’ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ಯೇಸುವಿನ ದೃಷ್ಟಾಂತಗಳು ಎತ್ತಿ ತೋರಿಸುತ್ತವೆ. (ಲೂಕ 15:7, 10) ಬಹಿಷ್ಕೃತನಾಗಿದ್ದ ಆ ವ್ಯಕ್ತಿಯ ಕುರಿತು ಪೌಲನು ಕೊರಿಂಥದವರಿಗೆ ಬರೆದದ್ದು: “ಇನ್ನೂ ಅವನನ್ನು ಶಿಕ್ಷಿಸದೆ ಸಂತೈಸಿರಿ, ಮನ್ನಿಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿ ಹೋದಾನು. ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (2 ಕೊರಿಂಥ 2:7, 8) ನಾವು ಆ ಸಲಹೆಯನ್ನು ವ್ಯಕ್ತಿಯು ಪುನಃಸ್ಥಾಪಿಸಲ್ಪಟ್ಟ ನಂತರದ ದಿನಗಳಲ್ಲಿ ಮತ್ತು ವಾರಗಳಲ್ಲಿ ಸ್ತಿಮಿತವಾಗಿ ಮತ್ತು ಪ್ರೀತಿಯಿಂದ ಅನ್ವಯಿಸೋಣ.
21 ತಪ್ಪಿಹೋದ ಮಗನ ಕುರಿತಾದ ಯೇಸುವಿನ ಸಾಮ್ಯವು ನಾವು ವರ್ಜಿಸಬೇಕಾದ ಒಂದು ಅಪಾಯವನ್ನು ಮುಂದೆ ತರುತ್ತದೆ. ತಪ್ಪಿಹೋದವನು ಹಿಂದೆ ಬಂದಾಗ ಅವನ ಅಣ್ಣನು ಸಂತೋಷ ಪಡಲಿಲ್ಲ ಬದಲಿಗೆ ಕ್ರೋಧಿತನಾದನು. ನಾವು ಆ ರೀತಿಯಲ್ಲಿ ಆಗದಿರೋಣ, ಹಿಂದೆ ನಡೆದು ಹೋದ ಒಂದು ಕೆಟ್ಟತನಕ್ಕಾಗಿ ಮನಸ್ತಾಪಕ್ಕೆ ಇಂಬುಕೊಡದೆ ಅಥವಾ ಅವನು ಪುನಃಸ್ಥಾಪನೆ ಹೊಂದಿದಕ್ಕಾಗಿ ಅಸೂಯೆಪಡದೆ ಇರೋಣ. ಬದಲಿಗೆ ನಮ್ಮ ಗುರಿಯು ಯೆಹೋವನ ಪ್ರತಿಕ್ರಿಯೆಯನ್ನು ಚಿತ್ರಿಸಿದ ಅವನ ತಂದೆಯಂತಿರಲಿ. ಅವನು ತಪ್ಪಿಹೋಗಿದ್ದ ಮತ್ತು ಸತ್ತಂತೆಯೇ ತೋರಿದ್ದ ತನ್ನ ಮಗನು ಸಿಕ್ಕಿದ್ದಕ್ಕಾಗಿ ಅಥವಾ ಜೀವಿತನಾದದ್ದಕ್ಕಾಗಿ ಸಂತೋಷ ಪಟ್ಟನು. (ಲೂಕ 15:25-32) ಇದಕ್ಕನುಸಾರ, ನಾವು ಪುನಃಸ್ಥಾಪಿತ ಸಹೋದರನೊಂದಿಗೆ ಸರಾಗವಾಗಿ ಮಾತಾಡುವೆವು ಹಾಗೂ ಉತ್ತೇಜನವನ್ನೂ ಕೊಡುವೆವು. ಹೌದು, ನಮ್ಮ ಕರುಣಾಪೂರ್ಣ ಮತ್ತು ಕ್ಷಮಾಶೀಲ ಸ್ವರ್ಗೀಯ ತಂದೆಯು ತೋರಿಸುವ ಪ್ರಕಾರ ನಾವೂ ಕರುಣೆಯನ್ನು ತೋರಿಸುತ್ತೇವೆಂಬ ನಾವು ರುಜುವಾತನ್ನು ಕೊಡಬೇಕು.—ಮತ್ತಾಯ 5:7.
22. ಯೆಹೋವ ದೇವರನ್ನು ನಾವು ಅನುಕರಿಸುವುದರಲ್ಲಿ ಏನೆಲ್ಲಾ ಒಳಗೂಡಿದೆ?
22 ನಾವು ನಮ್ಮ ತಂದೆಯನ್ನು ಅನುಕರಿಸಬೇಕಾದರೆ, ಆತನ ಅಪ್ಪಣೆಗಳಿಗೆ ಮತ್ತು ನ್ಯಾಯಕ್ಕೆ ಹೊಂದಿಕೆಯಲ್ಲಿ ನಾವು ಕರುಣೆಯನ್ನು ತೋರಿಸಲೇ ಬೇಕು ಎಂಬ ಯಾವ ಪ್ರಶ್ನೆಯೂ ಇಲ್ಲ. ಕೀರ್ತನೆಗಾರನು ಆತನನ್ನು ಹೀಗೆ ವರ್ಣಿಸುತ್ತಾನೆ: “ಯೆಹೋವನು ದಯೆಯೂ ಕನಿಕರವೂ ಉಳ್ಳವನು; ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ. ಯೆಹೋವನು ಸರ್ವೂಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವವನೂ ಆಗಿದ್ದಾನೆ.” (ಕೀರ್ತನೆ 145:8, 9) ಕ್ರೈಸ್ತರಿಗೆ ಅನುಕರಿಸಲು ಎಂಥಾ ಪ್ರೀತಿಪೂರ್ಣವಾದ ಮಾದರಿಯಿದು! (w91 4/15)
[ಅಧ್ಯಯನ ಪ್ರಶ್ನೆಗಳು]
a “ಸುಂಕದವರು ಪಲೆಸ್ತೀನದ ಯೆಹೂದಿ ನಿವಾಸಿಗಳಿಂದ ವಿಶೇಷವಾಗಿ ಹೇಸಲ್ಪಡುತ್ತಿದ್ದದ್ದು ಹಲವಾರು ಕಾರಣಗಳಿಂದಾಗಿ: (1) ಇಸ್ರಾಯೇಲ್ ದೇಶವನ್ನು ಆಕ್ರಮಿಸಿದ ಒಂದು ವಿದೇಶಿ ಅಧಿಕಾರಕ್ಕಾಗಿ ಅವರು ಹಣ ವಸೂಲು ಮಾಡುತ್ತಿದ್ದರು, ಹೀಗೆ ಆ ಅತಿಕ್ರಮಣಕ್ಕೆ ಅಪರೋಕ್ಷ ಬೆಂಬಲವನ್ನು ನೀಡುವವರಾಗಿದ್ದರು; (2) ಅವರು ತಮ್ಮ ಸಜ್ವನರಲ್ಲಿ ಇತರರ ದುರುಪಯೋಗ ಮಾಡಿಯಾದರೂ ಧನವಂತರಾಗಲು ಹೇಸದಕ್ಕೆ ಕುಪ್ರಸಿದ್ಧರಾಗಿದ್ದರು; ಮತ್ತು (3) ಅವರ ಕೆಲಸವು ಅವರನ್ನು ಅನ್ಯರೊಂದಿಗೆ ಕ್ರಮದ ಸಂಪರ್ಕಕ್ಕೆ ತರುತ್ತಿದದ್ದರಿಂದ ಅವರು ವಿಧಿವತ್ತಾಗಿ ಅಶುದ್ಧರಾಗಿರುತ್ತಿದ್ದರು. ಸುಂಕದವರಿಗಾಗಿ ತಿರಸ್ಕಾರವು ಹೊಸ ಒಡಂಬಡಿಕೆಯಲ್ಲಿ ಮತ್ತು ಯೆಹೂದ್ಯ ಧರ್ಮಪಂಡಿತರ ಸಾಹಿತ್ಯದಲ್ಲಿ ಎರಡರಲ್ಲೂ ಕಂಡುಬರುತ್ತದೆ. . . . ಎರಡನೆಯದಕ್ಕೆ ಅನುಸಾರವಾಗಿ, ಆ ಸುಂಕದವನ ಕುಟುಂಬದ ಕಡೆಗೂ ದ್ವೇಷವನ್ನು ವಿಸ್ತರಿಸಬೇಕಿತ್ತು.”—ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ.
b ಒಬ್ಬ ಕ್ರೈಸ್ತನ ಮನೆವಾರ್ತೆಯಲ್ಲಿ ಬಹಿಷ್ಕೃತ ಸಂಬಂಧಿಕನೊಬ್ಬನು ಇರುವುದಾದರೆ, ಆ ವ್ಯಕ್ತಿಯು ಸಾಮಾನ್ಯವಾಗಿ ಇನ್ನೂ, ಮನೆಯ ದಿನ-ದಿನದ ವ್ಯವಹಾರಗಳ ಮತ್ತು ಚಟುವಟಿಕೆಗಳ ಭಾಗವಾಗಿರುವನು. ಇದರಲ್ಲಿ ಕುಟುಂಬವಾಗಿ ಆತ್ಮಿಕ ಸಮಾಚಾರವನ್ನು ಚರ್ಚಿಸುವಾಗ ಹಾಜರಿರುವದೂ ಸೇರಿರ ಸಾಧ್ಯವಿದೆ.— ದಿ ವಾಚ್ಟವರ್ ನವಂಬರ 15, 1988, ಪುಟ 19-20ನ್ನು ನೋಡಿ.
c 1991ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ ನೋಡಿರಿ, ಪುಟ 53-4.
d ಯಾವನೇ ಸಾಕ್ಷಿಗೆ, ಮನೆಮನೆಯ ಸೇವೆಯಲ್ಲಿ ಅಥವಾ ಬೇರೆ ವಿಧಾನದಲ್ಲಿ, ಒಬ್ಬ ಬಹಿಷ್ಕೃತ ವ್ಯಕ್ತಿಯು ಆ ಕ್ಷೇತ್ರದಲ್ಲಿ ವಾಸಿಸುತ್ತಾನೆಂದು ತಿಳಿದು ಬಂದರೆ ಅವನು ಆ ಮಾಹಿತಿಯನ್ನು ಹಿರಿಯರಿಗೆ ತಿಳಿಸಬೇಕು.
ಈ ವಿಷಯಗಳನ್ನು ನೀವು ಗಮನಿಸಿದ್ದಿರೋ?
▫ ಸುಂಕದವರನ್ನು ಮತ್ತು ಪಾಪಿಗಳನ್ನು ಯೆಹೂದ್ಯರು ಹೇಗೆ ಉಪಚರಿಸಿದ್ದರು, ಆದರೆ ಅಂಥ ಕೆಲವರೊಂದಿಗೆ ಯೇಸು ವ್ಯವಹರಿಸಿದ್ದೇಕೆ?
▫ ತಪ್ಪಿಹೋಗಿರುವ ಅನೇಕರ ಕಡೆಗೆ ಕರುಣಾಪೂರ್ಣ ಮೊದಲ ಹೆಜ್ಜೆಯಿಡುವುದಕ್ಕೆ ಯಾವ ಶಾಸ್ತ್ರೀಯ ಆಧಾರವು ಇದೆ?
▫ ಹಿರಿಯ ಮಂಡಲಿಯವರು ಅಂಥ ಹೆಜ್ಜೆಯನ್ನು ಹೇಗೆ ತಕ್ಕೊಳ್ಳಬಹುದು, ಮತ್ತು ಯಾರ ಕಡೆಗೆ?
▫ ಪುನಃಸ್ಥಾಪಿತರಾದವರ ಕಡೆಗೆ ಮತ್ತು ಬಹಿಷ್ಕೃತರಾದವರ ಕುಟುಂಬಗಳ ಕಡೆಗೆ ನಾವು ಹೇಗೆ ಕರುಣೆಯನ್ನು ತೋರಿಸಬೇಕು?
[ಪುಟ 21 ರಲ್ಲಿರುವ ಚೌಕ]
ಒಮ್ಮೆ ದೇವರ ಶುದ್ಧ ಮತ್ತು ಸಂತೋಷಿತ ಸಭೆಯ ಭಾಗವಾಗಿದ್ದ ಯಾವನಾದರೂ, ಈಗ ಬಹಿಷ್ಕೃತನೂ ಯಾ ಬೇರ್ಪಡಿಕೊಂಡವನೂ ಆಗಿದ್ದಲ್ಲಿ, ಅವನು ಅಂಥಾ ಒಂದು ಸ್ಥಿತಿಯಲ್ಲೇ ಉಳಿಯುವ ಅಗತ್ಯವಿಲ್ಲ. ಬದಲಿಗೆ ಅವನು ಪಶ್ಚಾತ್ತಾಪಪಟ್ಟು ಸಭಾ ಹಿರಿಯರೊಂದಿಗೆ ಸಂಪರ್ಕಮಾಡಲು ಮೊದಲಹೆಜ್ಜೆ ತಕ್ಕೊಳ್ಳಸಾಧ್ಯವಿದೆ. ಹಿಂದಿರುಗುವ ಮಾರ್ಗವು ತೆರೆದೇ ಇದೆ.
[ಪುಟ 22 ರಲ್ಲಿರುವ ಚಿತ್ರ ಕೃಪೆ]
Garo Nalbandian