ನಂಬಿಕೆಯಲ್ಲಿ ಸ್ವಸ್ಥರಾಗಿ ಉಳಿಯಿರಿ!
ತೀತನಿಗೆ ಬರೆದ ಪತ್ರದ ಮುಖ್ಯಾಂಶಗಳು
ಮೆಡಿಟರೇನಿಯನ್ ದ್ವೀಪವಾದ ಕ್ರೇತದಲ್ಲಿನ ಕ್ರೈಸ್ತ ಸಭೆಗಳಿಗೆ ಆತ್ಮಿಕ ಗಮನದ ಅಗತ್ಯವಿತ್ತು. ಅವರಿಗೆ ಯಾರು ಸಹಾಯ ಮಾಡಶಕ್ತರು? ಅಪೊಸ್ತಲ ಪೌಲನ ಜತೆಕೆಲಸಗಾರ ತೀತನೇ! ಅವನು ಧೈರ್ಯವಂತನು, ಕಲಿಸಲು ಯೋಗ್ಯತೆ ಪಡೆದವನು, ಸತ್ಕಾರ್ಯದಲ್ಲಿ ಉತ್ಸಾಹೀ ಮತ್ತು ನಂಬಿಕೆಯಲ್ಲಿ ಸುಸ್ವಸ್ಥನು.
ಪೌಲನು ಕ್ರೇತವನ್ನು ಸಂದರ್ಶಿಸಿದ್ದು ರೋಮಿನಲ್ಲಿ ಒಂದನೇ ಮತ್ತು ಎರಡನೇ ಸೆರೆವಾಸದ ನಡುವಣ ಸಮಯದಲ್ಲಿ. ಕೆಲವು ವಿಷಯಗಳನ್ನು ಸರಿಪಡಿಸಲು ಮತ್ತು ಸಭಾ ಹಿರಿಯರನ್ನು ನೇಮಿಸಲು ಅವನು ತೀತನನ್ನು ದ್ವೀಪದಲ್ಲಿ ಬಿಟ್ಟುಹೋಗಿದ್ದನು. ಸುಳ್ಳು ಬೋಧಕರನ್ನು ಗದರಿಸಲು ಮತ್ತು ಒಂದು ಒಳ್ಳೇ ಮಾದರಿಯನ್ನಿಡಲು ಸಹಾ ತೀತನನ್ನು ಕೇಳಲಾಗಿತ್ತು. ಇವೆಲ್ಲವೂ, ಪೌಲನು ತೀತನಿಗೆ ಬರೆದ ಪತ್ರಿಕೆಯಲ್ಲಿ ತಿಳಿಸಲ್ಪಟ್ಟಿದೆ, ಇದು ಸಾ.ಶ. 61 ಮತ್ತು 64ರ ನಡುವಿನ ಸಮಯದಲ್ಲಿ ಮಕೆದೋನ್ಯದಿಂದ ಕಳುಹಿಸಲ್ಪಟ್ಟಿರುವ ಸಂಭಾವ್ಯತೆ ಇದೆ. ಅಪೊಸ್ತಲನ ಸೂಚನೆಯನ್ನು ಅನ್ವಯಿಸುವುದರಿಂದ ಪ್ರಚಲಿತ ದಿನದ ಮೇಲ್ವಿಚಾರಕರಿಗೆ ಮತ್ತು ಜೊತೆ ವಿಶ್ವಾಸಿಗಳಿಗೆ ಧೈರ್ಯವಂತರೂ, ಉತ್ಸಾಹಿಗಳೂ ಮತ್ತು ಆತ್ಮಿಕವಾಗಿ ಸ್ವಸ್ಥರೂ ಆಗಿರುವಂತೆ ಸಹಾಯವಾಗಬಲ್ಲದು.
ಮೇಲ್ವಿಚಾರಕರಿಂದ ಏನು ಆವಶ್ಯಕ?
ಮೇಲ್ವಿಚಾರಕರನ್ನು ನೇಮಿಸುವುದು ಮತ್ತು ಕೆಲವು ಗಂಭೀರವಾದ ಸಮಸ್ಯೆಗಳನ್ನು ನಿರ್ವಹಿಸುವುದು ಅಗತ್ಯವಾಗಿತ್ತು. (ತೀತ 1:1-16) ಒಬ್ಬ ಪುರುಷನು ಮೇಲ್ವಿಚಾರಕನಾಗಿ ನೇಮಕ ಹೊಂದ ಬೇಕಾದರೆ ಅವನು, ದೋಷಾರೋಪವಿಲ್ಲದವನೂ, ವೈಯಕ್ತಿಕವಾಗಿ ಮತ್ತು ತನ್ನ ಕುಟುಂಬ ಜೀವನದಲ್ಲಿ ಆದರ್ಶನೂ, ಸಮತೆಯುಳ್ಳವನೂ ಮತ್ತು ಆತ್ಮ ಸಂಯಮಿಯೂ ಆಗಿರಬೇಕು. ಯಾವುದು ಸತ್ಯವೂ ಅದನ್ನು ಅವನು ಕಲಿಸಬೇಕು ಮತ್ತು ವಿರೋಧಾತ್ಮಕ ನೋಟಗಳನ್ನು ವ್ಯಕ್ತಪಡಿಸುವವರನ್ನು ಎಚ್ಚರಿಸಬೇಕು ಮತ್ತು ಗದರಿಸಬೇಕು. ಧೈರ್ಯವು ಬೇಕಿತ್ತು ಯಾಕಂದರೆ, ಸಭೆಯಲ್ಲಿರುವ ಸ್ವಚ್ಛಂದಿ ಪುರುಷರ ಬಾಯಿಮುಚ್ಚಿಸಬೇಕಿತ್ತು. ವಿಶೇಷವಾಗಿ ಸುನ್ನತಿಯನ್ನು ಪಾಲಿಸುತ್ತಿದ್ದವರ ವಿಷಯದಲ್ಲಿ ಇದು ಸತ್ಯವಿತ್ತು ಯಾಕಂದರೆ ಅವರು ಕುಟುಂಬ ಕುಟುಂಬಗಳನ್ನೇ ಹಾಳು ಮಾಡುತ್ತಿದ್ದರು. ಸಭೆಗಳು ಆತ್ಮಿಕವಾಗಿ ಸ್ವಸ್ಥವಾಗಿರ ಬೇಕಾದರೆ ಕಠಿಣ ಗದರಿಕೆಯು ಅತ್ಯಾವಶ್ಯಕವಾಗಿತ್ತು. ಇಂದು ಕ್ರೈಸ್ತ ಮೇಲ್ವಿಚಾರಕರಿಗೂ ಧೈರ್ಯದ ಅಗತ್ಯವಿದೆ ಯಾಕಂದರೆ ಸಭೆಯ ಭಕ್ತಿವೃದ್ಧಿಗಾಗಿ ಗದರಿಕೆ ಮತ್ತು ಬುದ್ಧಿವಾದವನ್ನು ಅವರಿಗೆ ಕೊಡಲಿಕ್ಕದೆ.
ಸ್ವಸ್ಥ ಬೋಧನೆಯನ್ನು ಅನ್ವಯಿಸು
ತೀತನು ಆತ್ಮಿಕವಾದ ಸ್ವಸ್ಥ ಬೋಧನೆಯನ್ನು ಕೊಡಬೇಕಿತ್ತು. (2:1-15) ವೃದ್ಧ ಪುರುಷರು ಹದಹಾಳತದಲ್ಲಿ, ಗಂಭೀರತೆಯಲ್ಲಿ, ಮನೋಸ್ವಾಸ್ಥ್ಯದಲ್ಲಿ, ನಂಬಿಕೆ, ಪ್ರೀತಿ ಮತ್ತು ತಾಳ್ಮೆಯಲ್ಲಿ ಆದರ್ಶ ಮಾದರಿಗಳಾಗಿರಬೇಕು. ವೃದ್ಧ ಸ್ತ್ರೀಯರು “ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರಾಗಿರ” ಬೇಕಿತ್ತು. “ಸದ್ಬೋಧನೆ ಹೇಳುವವರಾಗಿ” ಅವರು, ಯೌವನಸ್ಥೆಯರಾದ ಹೆಂಗಸರಿಗೆ, ಪತ್ನಿ ಮತ್ತು ತಾಯಂದಿರೋಪಾದಿ ತಮ್ಮ ಕರ್ತವ್ಯಗಳ ಕಡೆಗೆ ಯೋಗ್ಯ ನೋಟವಿಡುವಂತೆ ಸಹಾಯ ಮಾಡಬಹುದಿತ್ತು. ಯುವ ಪುರುಷರು ಜಿತೇಂದ್ರಿಯರಾಗಿರಬೇಕಿತ್ತು, ಮತ್ತು ದಾಸರು ದೇವರ ಉಪದೇಶಕ್ಕೆ ಎಲ್ಲಾ ವಿಧದಲ್ಲಿ ಅಲಂಕಾರವಾಗಿರುವಂತೆ ತಮ್ಮ ಯಜಮಾನರಿಗೆ ಅಧೀನರಾಗಿರಬೇಕಿತ್ತು. ಕ್ರೈಸ್ತರೆಲ್ಲರೂ ಭಕ್ತಿಹೀನತೆಯನ್ನು ವಿಸರ್ಜಿಸಿ ಈ ವ್ಯವಸ್ಥೆಯಲ್ಲಿ ಸ್ವಸ್ಥಚಿತ್ತರಾಗಿ ಬದುಕುತ್ತಾ, “ಸಕಲ ಅಧರ್ಮದಿಂದ ವಿಮೋಚಿಸುವುದಕ್ಕೂ ಸಕಲ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸಕ್ವೀಯ ಜನರನ್ನು ತನಗಾಗಿ ಪರಿಶುದ್ಧ ಮಾಡುವುದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟ” ಕ್ರಿಸ್ತ ಯೇಸುವಿನ ಮತ್ತು ಮಹಾ ದೇವರ ಭಾಗ್ಯಕರವಾದ ಸಾನಿಧ್ಯವನ್ನು ಎದುರು ನೋಡಬೇಕಿತ್ತು. ಇಂತಹ ಸ್ವಸ್ಥ ಸೂಚನೆಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಾವು, ದೇವರ ಉಪದೇಶಕ್ಕೆ ಅಲಂಕಾರವಾಗಿರೋಣ.’
ಪೌಲನ ಕಡೇ ಸೂಚನೆಗಳು ಆತ್ಮಿಕ ಸ್ವಸ್ಥತೆಯನ್ನು ಪ್ರವರ್ಧಿಸುತ್ತವೆ. (3:1-15) ಅಧಿಪತಿಗಳಿಗೆ ಯೋಗ್ಯವಾದ ಅಧೀನತೆಯನ್ನು ತೋರಿಸುವುದು ಮತ್ತು ಯುಕ್ತಾಯುಕ್ತ ಪರಿಜ್ಞಾನವನ್ನು ಬೆಳೆಸುವುದು ಆವಶ್ಯಕವು. ಕ್ರೈಸ್ತರಿಗೆ ಅನಂತ ಜೀವನದ ನಿರೀಕ್ಷೆ ಇದೆ, ಮತ್ತು ಅವರ ಮನಸ್ಸುಗಳನ್ನು ಸತ್ಕಾರ್ಯಗಳಲ್ಲಿ ಇಡುವಂತೆ ಅವರಿಗೆ ಉತ್ತೇಜನ ಕೊಡಲು ಪೌಲನ ಮಾತುಗಳನ್ನು ಒತ್ತಿಹೇಳಬೇಕಾಗಿತ್ತು. ಬುದ್ಧಿಯಿಲ್ಲದ ವಿತರ್ಕಗಳನ್ನು ಮತ್ತು ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳನ್ನು ವಿಸರ್ಜಿಸಬೇಕಿತ್ತು. ಸಭೆಯಲ್ಲಿ ಬೇಧಹುಟ್ಟಿಸುವವನನ್ನು ಎರಡು ಸಾರಿ ಬುದ್ಧಿಹೇಳಿದ ಮೇಲೆ ತಿರಸ್ಕರಿಸಬೇಕು. ಇಂಥ ಸೂಚನೆಗಳನ್ನು ಇಂದು ಹಿರಿಯರು ಅನ್ವಯಿಸುತ್ತಾ ಇದ್ದರೆ, ಅವರೂ ಮತ್ತು ಅವರ ಜತೆ ವಿಶ್ವಾಸಿಗಳೂ ನಂಬಿಕೆಯಲ್ಲಿ ಸ್ವಸ್ಥರಾಗಿ ಉಳಿಯುವರು. (w91 2/15)
[ಪುಟ 10 ರಲ್ಲಿರುವ ಚೌಕ/ಚಿತ್ರಗಳು]
ಮದ್ಯಕ್ಕೆ ಗುಲಾಮರು ಆಗಿರದೆ: ಸ್ತ್ರೀಯರು ಸಭೆಯಲ್ಲಿ ಪುರುಷರಿಗೆ ಕಲಿಸಬಾರದಾದರೂ ವೃದ್ಧ ಸ್ತ್ರೀಯರು, ಯುವ ಹೆಂಗಸರಿಗೆ ಖಾಸಗಿಯಾಗಿ ಬುದ್ಧಿ ಹೇಳಬಹುದು. ಆದರೆ ಈ ವಿಷಯದಲ್ಲಿ ಪರಿಣಾಮಕಾರಿಯಾಗುವಂತೆ ವೃದ್ಧ ಸ್ತ್ರೀಯರು, ಪೌಲನ ಈ ಮಾತುಗಳನ್ನು ಪಾಲಿಸಲೇ ಬೇಕು: “ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಗುಲಾಮರೂ ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಸದ್ಬೋಧನೆ ಹೇಳುವವರೂ ಆಗಿರಬೇಕು.” (ತೀತ 2:1-5; 1 ತಿಮೊಥಿ 2:11-14) ಮದ್ಯಪಾನದ ಪರಿಣಾಮಗಳ ಕುರಿತು ಚಿಂತಿತರಾಗಿರುವುದರಿಂದ, ಮೇಲ್ವಿಚಾರಕರು, ಶುಶ್ರೂಷೆ ಸೇವಕರು ಮತ್ತು ವೃದ್ಧೆಯರಾದ ಸ್ತ್ರೀಯರು ಬಹಳ ಮದ್ಯಪಾನಿಗಳಾಗಿರದೆ, ಮಿತದಲ್ಲಿರಬೇಕು. (1 ತಿಮೊಥಿ 3:2, 3, 8, 11) ಕ್ರೈಸ್ತರೆಲ್ಲರೂ ಕುಡಿಕತನವನ್ನು ವಿಸರ್ಜಿಸಬೇಕು ಮತ್ತು ಸುವಾರ್ತೆಯನ್ನು ಸಾರುವ “ಪವಿತ್ರ ಕೆಲಸವನ್ನು” ಮಾಡುವಾಗ ಮದ್ಯಸಾರ ಪಾನೀಯಗಳನ್ನು ಕುಡಿಯುವುದರಿಂದ ದೂರವಿರಬೇಕು.—ರೋಮಾಪುರ 15:16; ಜ್ಞಾನೋಕ್ತಿ 23:20, 21.