ಸಂತೋಷಭರಿತ ರಾಷ್ಟ್ರ
ಸಂತೋಷಭರಿತ ರಾಷ್ಟ್ರ! ಇಂದಿನ ಯಾವುದೇ ರಾಷ್ಟ್ರವನ್ನು ಈ ವರ್ಣನೆಯು ಒಪ್ಪುತ್ತದೋ? ಯಾವುದೇ ರಾಷ್ಟ್ರವು ತಾನು, ಹಿಂಸಾಚಾರವನ್ನು, ಪಾತಕವನ್ನು, ದಾರಿದ್ರ್ಯವನ್ನು, ಮಾಲಿನ್ಯತೆಯನ್ನು, ಕುಂಠಿತಗೊಳಿಸುವ ರೋಗಗಳನ್ನು, ರಾಜಕೀಯ ಭ್ರಷ್ಟಾಚಾರವನ್ನು, ಧಾರ್ಮಿಕ ದ್ವೇಷಗಳನ್ನು ನಿರ್ಮೂಲಿಸಿವೆಂದು ಸಂತೋಷದಿಂದ ಘೋಷಿಸಶಕ್ತವೋ? ಯಾವುದೇ ಒಂದು ರಾಷ್ಟ್ರವು ಅಂಥ ಗುರಿಗಳನ್ನು ಮುಟ್ಟುವುದಕ್ಕೆ ನಿಜ ನಿರೀಕ್ಷೆಯನ್ನು ಕೊಡಬಲ್ಲದೋ? ಇಲ್ಲವೇ ಇಲ್ಲ!
ಭೌಗೋಲಿಕ ದೃಶ್ಯವಾದರೂ ಹೇಗಿದೆ? ರಷ್ಯಾದ ಅಧ್ಯಕ್ಷರಾದ ಮಿಕಾಎಲ್ ಗೊರ್ಬಚವ್, ಕಳೆದ ಜುಲೈ 16 ರಂದು, ಅಂದದ್ದು: “ಅಂತರಾಷ್ಟ್ರೀಯ ಸಂಬಂಧಗಳ ಒಂದು ಯುಗವನ್ನು ದಾಟಿ, ಬಲಾಢ್ಯವೂ ದೀರ್ಘಕಾಲಿಕ ಶಾಂತಿಯೂ ಉಳ್ಳ ಇನ್ನೊಂದನ್ನು, ನಾವು ಪ್ರವೇಶಿಸುತ್ತಲಿದ್ದೇವೆಂದು ನನ್ನೆಣಿಕೆ.” ಆದರೂ, ಅದೇ ತಾರೀಕಿನ ಟೈಮ್ ಮ್ಯಾಗಜಿನ್, ಅಮೆರಿಕವು ಇನ್ನೂ 120 ನ್ಯೂಕ್ಲಿಯರ್ ಯುದ್ಧಶಿರಗಳನ್ನು ಮಾಸ್ಕೋಗೆ ಗುರಿಯಾಗಿ ಇಟ್ಟದೆ ಎಂದೂ, ಮತ್ತು ಅವುಗಳಲ್ಲಿ ಯಾವುದಾದರೂ ಒಂದು ಆ ಶಹರವನ್ನು ಪೂರ್ಣವಾಗಿ ಧ್ವಂಸಗೊಳಿಸಬಲ್ಲದೆಂದೂ ಹೇಳಿದೆ. ಮತ್ತು ರಷ್ಯಾದವರೂ ಅದೇ ತರದ ಪ್ರತ್ಯುತ್ತರಕ್ಕಾಗಿ ಸಿದ್ಧರಾಗಿರುವರೆಂಬದಕ್ಕೆ ಯಾವ ಸಂದೇಹವೂ ಇಲ್ಲ. ಸಂಯುಕ್ತ ರಾಷ್ಟ್ರ ಸಂಘದ ಹಲವಾರು ಸದಸ್ಯರು ನ್ಯೂಕ್ಲಿಯರ್ ಶಸ್ತ್ರರಚನಾ ವಿಧಾನವನ್ನು ಈಗ ತಿಳಿದಿರುವುದರಿಂದ, ಮೊದಲು ಗುಂಡುಹಾರಿಸುವವನಾರೆಂದು ಯೋಚಿಸುವುದರಲ್ಲಿ ಕೊಂಚವೂ ಸಂತೋಷವಿರದು.
ನಿಜವಾಗಿ ಸಂತೋಷಿತ ರಾಷ್ಟ್ರ
ಇತಿಹಾಸದಲ್ಲಿ ಒಮ್ಮೆ—ಸುಮಾರು 3,500 ವರ್ಷಗಳ ಹಿಂದೆ—ಅಲ್ಲಿ ನಿಜವಾಗಿ ಸಂತೋಷಭರಿತ ರಾಷ್ಟ್ರವೊಂದಿತ್ತು. ಅದು ಪುರಾತನ ಇಸ್ರಾಯೇಲ್. ಐಗುಪ್ತದ ದಬ್ಬಾಳಿಕೆಯಿಂದ ದೇವರು ಆ ಜನಾಂಗವನ್ನು ಬಿಡುಗಡೆ ಮಾಡಿದಾಗ ಅವರು, ಮೋಶೆಯೊಡಗೂಡಿ, ಒಂದು ಜಯಗೀತೆಯಲ್ಲಿ ಆನಂದಿಸಿದರು, ಮತ್ತು ತಮ್ಮ ದೇವರೂ ವಿಮೋಚಕನೂ ಆದಾತನಿಗೆ ವಿಧೇಯರಾಗಿದ್ದ ಅವಧಿಯಲ್ಲೆಲ್ಲಾ ಅವರು ಸಂತೋಷಪಡುತ್ತಾ ಮುಂದರಿದರು.—ವಿಮೋಚನಕಾಂಡ 15:1-21; ಧರ್ಮೋಪದೇಶಕಾಂಡ 28:1, 2, 15, 47.
ಸೊಲೊಮೋನನ ಆಡಳಿತದ ಕೆಳಗೆ, “ಇಸ್ರಾಯೇಲ್ ಯೆಹೂದ್ಯರು ಸಮುದ್ರ ತೀರದ ಉಸುಬಿನಷ್ಟು ಅಸಂಖ್ಯರಾಗಿದ್ದರು. ಅವರು ಅನ್ನಪಾನಗಳಲ್ಲಿ ತೃಪ್ತರಾಗಿ ಸಂತೋಷದಿಂದಿದ್ದರು.” ಇದು ಮಹಾ ಸಂತೋಷದ ಸಮಯವಾಗಿತ್ತು ಅಲ್ಲದೆ, ಇತಿಹಾಸದಲ್ಲಿ ಪ್ರಾಯಶಃ ಅತ್ಯಂತ ಮಹಿಮಾಯುಕ್ತ ಕಟ್ಟಡವೆನಿಸಿದ, ಯೆರೂಸಲೇಮಿನ ಯೆಹೋವನ ಆರಾಧನಾ ಮಂದಿರದ ಕಟ್ಟುವಿಕೆಯು ಆ ಆನಂದವನ್ನು ಇನ್ನಷ್ಟು ತುತ್ತತುದಿಗೇರಿಸಿತ್ತು.—1 ಅರಸು 4:20; 6:11-14.
ಆಧುನಿಕ ದಿನದ ಹರ್ಷಭರಿತ ರಾಷ್ಟ್ರ
ಪುರಾತನ ಇಸ್ರಾಯೇಲ್ ಒಂದು ಆಧುನಿಕ ರಾಷ್ಟ್ರವನ್ನು ಮುನ್ಸೂಚಿಸಿತ್ತು. ಅದು ಯಾವುದು? ಮಧ್ಯಪೂರ್ವದ ರಾಜಕೀಯ ಇಸ್ರಾಯೇಲೋ? ಹೆಣಗಾಡುತ್ತಿರುವ ಆ ರಾಷ್ಟ್ರವು ಒಂದಿಷ್ಟೂ ಹರ್ಷಭರಿತವಿಲ್ಲವೆಂದು ವಾರ್ತಾವರದಿಗಳು ಸೂಚಿಸುತ್ತವೆ. ಸಂಯುಕ್ತ ರಾಷ್ಟ್ರಗಳೆಂದು ಕರೆಯಲ್ಪಡುವ ಸಂಘವು ತನ್ನ ಸದಸ್ಯ ರಾಜ್ಯಗಳಿಗೆ ನಿಜ ಸಂತೋಷವನ್ನು ತಂದಿದೆಯೋ? ಇಲ್ಲ, ಇಂದಿನ ರಾಜಕೀಯ ರಾಷ್ಟ್ರಗಳಲ್ಲಿ ನಿಜ ಸಂತೋಷವೆಂಬದು ಎಲ್ಲಿಯೂ ಇಲ್ಲ. ಲೋಭ, ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯು ಎಲ್ಲೆಲ್ಲಿಯೂ ತುಂಬಿತುಳುಕುತ್ತಿದೆ. ಅನೇಕ ದೇಶಗಳಲ್ಲಿ ಜನಸಾಮಾನ್ಯರು ಕೇವಲ ಅಸ್ತಿತ್ವಕ್ಕಾಗಿಯೇ, ಅಸಂತೋಷದ ಹೋರಾಟ ನಡಿಸುತ್ತಿದ್ದಾರೆ.—ಜ್ಞಾನೋಕ್ತಿ 28:15; 29:2.
ಆದರೂ, ಉತ್ಕೃಷ್ಟ ಸಂತೋಷವನ್ನು ಅನುಭವಿಸುತ್ತಿರುವ ಒಂದು ಗಮನಾರ್ಹ ರಾಷ್ಟ್ರವು ಇಂದು ಇದೆ. ಅದು ರಾಜಕೀಯವಲ್ಲ, ಯಾಕಂದರೆ ಅದರ ಶಿರಸ್ಸಾದ ಕ್ರಿಸ್ತಯೇಸುವು, ಅದರ ಜನರ ಕುರಿತಾಗಿ ಅಂದದ್ದು: “ನೀವು ಲೋಕದ ಕಡೆಯವರಲ್ಲ.” (ಯೋಹಾನ 15:19) ಸಂಯುಕ್ತ ರಾಷ್ಟ್ರ ಸಂಘವು ಹೆಸರಲ್ಲಿ ಮಾತ್ರವೇ ಸಂಯುಕ್ತವಾಗಿರಲಾಗಿ ಈ ಹರ್ಷಭರಿತ ರಾಷ್ಟ್ರವಾದರೋ, “ಸಕಲ ಜನಾಂಗ, ಕುಲ, ಪ್ರಜೆ ಮತ್ತು ಭಾಷೆ”ಗಳಿಂದ ಶಾಂತಿಪ್ರಿಯ ಅವಲಂಬಿಗಳನ್ನು ಆಕರ್ಷಿಸುತ್ತಿದೆ. (ಪ್ರಕಟನೆ 7:4, 9) ಅದೀಗ ಸಂಖ್ಯೆಯಲ್ಲಿ 40 ಲಕ್ಷಕ್ಕೂ ಮಿಕ್ಕಿರುವುದರಿಂದ, ವಿಶ್ವಸಂಸ್ಥೆಯ 159 ಸದಸ್ಯ ರಾಷ್ಟ್ರಗಳಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಜನಭರಿತವಾಗಿದೆ. ಈ 40 ಲಕ್ಷ ಜನರ ನಾಡ ಭಾಷೆಗಳ ಸಂಖ್ಯೆ ಸುಮಾರು 200; ಆದರೂ, ಅವರೆಲ್ಲರು “ಒಂದೇ ಶುದ್ಧಭಾಷೆಯನ್ನು” ಮಾತಾಡುವುದರಲ್ಲಿ ಐಕ್ಯರಾಗಿದ್ದಾರೆ.—ಚೆಫನ್ಯ 3:9.
ಇಷ್ಟು ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳು ಒಂದೇ ಸಾಮಾನ್ಯ ಭಾಷೆಯನ್ನಾಡುವುದು ಸೋಜಿಗವಲ್ಲವೋ? ನಿಜವಾಗಿ ಅಲ್ಲ. ಯಾಕಂದರೆ ಈ ಒಂದೇ ಐಕ್ಯತೆಯ ಭಾಷೆಯು, ಬರಲಿರುವ ದೇವರ ನೀತಿಯುಳ್ಳ ರಾಜ್ಯದ ಸಂದೇಶವನ್ನೊಳಗೊಂಡಿದೆ. ಈ ಹರ್ಷಭರಿತ ರಾಷ್ಟ್ರವು, “ಭೂಮಿಯ ಕಟ್ಟಕಡೆಯಿಂದ” ಬಂದಿರುತ್ತದೆ ಮತ್ತು ಲೋಕವ್ಯಾಪಕವಾಗಿ ‘ಯೆಹೋವನ ಸಾಕ್ಷಿಗಳು’ ಎಂದು ಖ್ಯಾತವಾಗಿದೆ. (ಯೆಶಾಯ 43:5-7, 10; ಜೆಕರ್ಯ 8:23) ಈ ಭೂಗೋಲದ ಮೇಲೆ ನೀವೆಲ್ಲಿಗೆ ಪಯಣಿಸಿದರೂ ಅಲ್ಲಿ ನೀವವರನ್ನು ಕಾಣುವಿರಿ.
ಯೆಶಾಯ 2:2-4ರಲ್ಲಿ ದೇವರ ಪ್ರವಾದಿಯು, ಎಲ್ಲಾ ಜನಾಂಗಗಳಿಂದ ಪ್ರವಹಿಸುವ ಒಂದು ಜನಸಮೂಹವು ಹೀಗನ್ನುವುದನ್ನು ವರ್ಣಿಸುತ್ತಾನೆ: “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ. ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” ಹುರುಪಿನಿಂದ ಇವರು ಇತರರನ್ನೂ ಕರೆಯುತ್ತಾ, ಯೆಹೋವನ ವಾಕ್ಯವಾದ ಬೈಬಲಿನಿಂದ ಬೋಧನೆಯನ್ನು ಪಡೆದು ಆತನ ಚಿತ್ತವನ್ನು ಮಾಡಲು ಕಲಿಯುವಂತೆ ಆಮಂತ್ರಿಸುತ್ತಾರೆ. ಈ ಒಂದೇ ರಾಷ್ಟ್ರವು ನಿಜ ಶಾಂತಿಯ ಪಥವನ್ನು ಹಿಂಬಾಲಿಸುತ್ತದೆ. ಇದರ ಜನರು ಈವಾಗಲೇ, ‘ತಮ್ಮ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ’ ಬಡೆದಿದ್ದಾರೆ, ‘ಇನ್ನು ಯುದ್ಧವನ್ನು ಅವರು ಕಲಿಯರು.’ ಒಂದು ಹರ್ಷಭರಿತ ರಾಷ್ಟ್ರ ನಿಶ್ಚಯ!
ಈ ಸಂತೋಷದಲ್ಲಿ ನೀವೂ ಭಾಗಿಗಳಾಗ ಸಾಧ್ಯವಿದೆ. ರಾಜ ಕ್ರಿಸ್ತ ಯೇಸುವು ಈ ಭೂಮಿಯ ಧ್ವಂಸಕಾರಕ ಮನುಷ್ಯರನ್ನೂ ಸರಕಾರಗಳನ್ನೂ ತೆಗೆದು ಹಾಕಿ, ಪರದೈಸವನ್ನು ಪುನಃಸ್ಥಾಪಿಸುವ ಆ ತೀವ್ರವಾಗಿ ಧಾವಿಸುತ್ತಿರುವ ಸಮಯದ ಕುರಿತು ನೀವೂ ಕಲಿಯಬಲ್ಲಿರಿ. (ದಾನಿಯೇಲ 2:44; ಮತ್ತಾಯ 6:9, 10) ಈಗಲೂ ಕೂಡ, ಒಂದು ನಿಜವಾಗಿ ಐಕ್ಯವಾದ ರಾಷ್ಟ್ರದೋಪಾದಿ ಯೆಹೋವನ ಸಾಕ್ಷಿಗಳು, ನಿಜ ಶಾಂತಿಯ ಆ ಮಹಿಮಾಭರಿತ ಯುಗಕ್ಕಾಗಿ ತಯಾರಿಸುವ ತಮ್ಮ ಕಾರ್ಯದಲ್ಲಿ ಮಹಾ ಸಂತೋಷವನ್ನು ಕಾಣುತ್ತಿದ್ದಾರೆಂದು ಮುಂದಿನ ಪುಟಗಳು ತೋರಿಸುತ್ತವೆ. (w91 1/1)