ಲೋಕ ಶಾಂತಿ ಅದು ನಿಜವಾಗಿ ಯಾವ ಅರ್ಥದಲ್ಲಿರುವುದು?
ದೇವರು ಉದ್ದೇಶಿಸಿರುವಂಥ ಶಾಂತಿಯು ಜಾಗತಿಕ ಸಮರ-ವಿರಾಮ ಅಥವಾ ಅಣ್ವಸ್ತ್ರಗಳ ಕಟ್ಟರಸಿಗಿಂತ ಎಷ್ಟೋ ಮೇಲಾಗಿದೆ. ಇದು ಬೈಬಲು “ಶಾಂತಿ” ಎಂಬ ಶಬ್ದವನ್ನು ಉಪಯೋಗಿಸುವ ರೀತಿಯಿಂದ ವಿಧಿತವಾಗುತ್ತದೆ.
ಉದಾಹರಣೆಗೆ, ಹಿಬ್ರೂ ಶಾಸ್ತ್ರದಲ್ಲಿ (“ಹಳೇ ಒಡಂಬಡಿಕೆ”) ಶಾಂತಿಗಿರುವ ಶಬ್ದವು ಶಲೋಮ್ ಎಂದಾಗಿದೆ. ಈ ಶಬ್ದದ ಒಂದು ರೂಪವು ಆದಿಕಾಂಡ 37:14ರಲ್ಲಿ ಉಪಯೋಗಿಸಲ್ಪಟ್ಟಿದೆ, ಅಲ್ಲಿ ಮೂಲಪಿತೃ ಯಾಕೋಬನು ತನ್ನ ಮಗ ಯೋಸೇಫನಿಗೆ ಹೇಳುವದು: “ನೀನು ನಿನ್ನ ಅಣ್ಣಂದಿರ ಯೋಗಕ್ಷೇಮವನ್ನೂ ಆಡುಕುರಿಗಳ ಯೋಗಕ್ಷೇಮವನ್ನೂ ವಿಚಾರಿಸಿಕೊಂಡು ಬಾ.”a ಶಲೋಮ್ ಪುನಃ ಆದಿಕಾಂಡ 41:16ರಲ್ಲಿ ಉಪಯೋಗಿಸಲ್ಪಟ್ಟಿದ್ದು, ಅಲ್ಲಿ ಅದು “ಕ್ಷೇಮ” ಎಂದು ತರ್ಜುಮೆಯಾಗಿದೆ.
ಆದ್ದರಿಂದ, ಬೈಬಲಿನ ಅರ್ಥದಲ್ಲಿ, ನಿಜಶಾಂತಿಯಲ್ಲಿ ವೈರತ್ವಗಳ ನಿರ್ಮೂಲನೆ ಮಾತ್ರವಲ್ಲ ಆರೋಗ್ಯ, ಸುರಕ್ಷೆ ಮತ್ತು ಕ್ಷೇಮವೂ ಒಳಗೂಡಿದೆ. ಅಗೋಸ್ತು 1, 1991ರ ನಮ್ಮ ಸಂಚಿಕೆಯು, ಶಾಂತಿಯನ್ನು ತರುವುದು ಹೇಗೆಂಬ ಒಗಟನ್ನು ಮಾನವರು ಬಿಡಿಸಲು ಅಶಕ್ತರೆಂಬದನ್ನು ತೋರಿಸಿತ್ತು. “ಶಾಂತಿಯ ಪ್ರಭು”ವಾದ ಯೇಸು ಕ್ರಿಸ್ತನು ಮಾತ್ರವೇ, ಆ ಎಳೆಗಳನ್ನು ಒಂದುಸೇರಿಸಿ ಆ ನಿಜವಾದ ಶಾಂತಿಯನ್ನು ತರಶಕ್ತನು. (ಯೆಶಾಯ 9:6, 7) ಉದಾಹರಣೆಗೆ, ಆತನ ಆಡಳಿತದ ಕುರಿತು ಬೈಬಲ್ ಪ್ರವಾದನೆಗಳು ಕೀರ್ತನೆ 72:7, 8ರಲ್ಲಿ ಏನನ್ನುತ್ತದೆಂದು ಗಮನಿಸಿರಿ: “ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗುವದು. ಚಂದ್ರನಿರುವ ವರೆಗೂ ಪರಿಪೂರ್ಣ ಸೌಭಾಗ್ಯವಿರುವದು. ಅವನು ಸಮುದ್ರದಿಂದ ಸಮುದ್ರದ ವರೆಗೂ ಮತ್ತು ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳುವನು.” ಆಗ ಲೋಕವ್ಯಾಪಕವಾಗಿ ಇರುವ—ಆರೋಗ್ಯ, ಸುರಕ್ಷೆ ಮತ್ತು ಕ್ಷೇಮವನ್ನು ಊಹಿಸಿಕೊಳ್ಳಿರಿ! ಯಾವ ರಾಜಕೀಯ ಸಂಧಾನವಾದರೂ ಅದನ್ನೆಂದೂ ಪೂರೈಸ ಶಕ್ತವಾಗದು. ದೇವರ ರಾಜ್ಯವು ಮಾತ್ರವೇ ಅದನ್ನು ಶಕ್ಯ ಮಾಡುವದು, ಮತ್ತು ಇನ್ನೂ ಹೆಚ್ಚನ್ನು ಪೂರೈಸುವದು. ಭವಿಷ್ಯತ್ತಿನ ಲೋಕ ಶಾಂತಿಯ ಕುರಿತು ಬೈಬಲು ನಮಗೆ ಹಲವಾರು ರೋಮಾಂಚಕ ಪ್ರವಾದನಾ ಕ್ಷಣನೋಟಗಳನ್ನು ಕೊಡುತ್ತದೆ. ಅವಲ್ಲಿ ಕೆಲವನ್ನು ನಾವು ಗಮನಿಸೋಣ.
ಜಾಗತಿಕ ನಿಶಸ್ತ್ರೀಕರಣ—ದೇವರ ವಿಧಾನ!
ಕೀರ್ತನೆ 46:8, 9 ಹೇಳುವದು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ. ಆತನು ಭೂಲೋಕಕ್ಕೆ ಎಂಥ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗಗಳಲ್ಲೂ ಯುದ್ಧವನ್ನು ನಿಲ್ಲಿಸಿ ಬಿಟ್ಟಿದ್ದಾನೆ. ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದು ಹಾಕಿದ್ದಾನೆ. ರಥಗಳನ್ನು ದಹಿಸಿಬಿಟ್ಟಿದ್ದಾನೆ.” “ಬಿಲ್ಲು,” “ಭಲ್ಲೆಯ,” ಮತ್ತು ‘ರಥ’ ಎಂಬ ಶಬ್ದಗಳು ಯಾವುದೇ ರೀತಿಯ ಯುದ್ಧಶಸ್ತ್ರಗಳ ಅಥವಾ ಯುದ್ಧಾಯುಧಗಳ ಸೂಚಕಗಳಾಗಿವೆ. ಹೀಗೆ ಯೆಹೋವನು ಶಸ್ತ್ರ ಸೀಮಿತಕ್ಕಿಂತ ಅಥವಾ ಪೂರ್ಣ ನಿಶಸ್ತ್ರೀಕರಣಕ್ಕಿಂತಲೂ ಎಷ್ಟೋ ಹೆಚ್ಚನ್ನು ನಡಿಸಲಿರುವನು. ಅಣು ಶಸ್ತ್ರಗಳು, ಗುಂಡುಗಳು, ಫಿರಂಗಿರಥಗಳು, ಕ್ಷಿಪಣಿಗಳು, ಪ್ಲಾಸ್ಟಿಕ್ ಸ್ಫೋಟಕಗಳು, ಬಂದೂಕುಗಳು ಮತ್ತು ಕೋವಿಗಳು—ಜಾಗತಿಕ ಶಾಂತಿಯನ್ನು ಬೆದರಿಸ ಸಾಧ್ಯವಿರುವ ಯಾವುದನ್ನಾದರೂ ಆತನು ಪೂರ್ಣವಾಗಿ ನಿರ್ಮೂಲಿಸುವನು!
ಆದರೂ ಶಸ್ತ್ರಾಸ್ತ್ರಗಳು ಮಾತ್ರವೇ ಯುದ್ಧವನ್ನು ಉಂಟುಮಾಡುವದಿಲ್ಲ. ಸಾಮಾನ್ಯವಾಗಿ ಯುದ್ಧದ ಬೇರುಗಳು ಹರಡುವದು ಅಸಂಪೂರ್ಣ ಮಾನವರ ದ್ವೇಷಪೂರಿತ, ಅತ್ಯಾಶೆಯ ಅಥವಾ ಕ್ರೌರ್ಯದ ಭಾವನೆಗಳಿಂದಲೇ. (ಯಾಕೋಬ 4:1-3, ಹೋಲಿಸಿ.) ಆದ್ದರಿಂದ ದೇವರ ರಾಜ್ಯವು ಜನರಲ್ಲಿರುವ ಅಂಥ ಕೆಟ್ಟ ವ್ಯಕ್ತಿ ಸ್ವಭಾವಗಳನ್ನು ನಿರ್ಮೂಲಗೊಳಿಸುವ ಮೂಲಕ ಈ ಯುದ್ಧದ ಮೂಲ ಕಾರಣವನ್ನೇ ತೆಗೆದು ಹಾಕುವದು. ಹೇಗೆ? ಒಂದು ಜಾಗತಿಕ ಶಿಕ್ಷಣದ ಕಾರ್ಯಕ್ರಮದ ಮೂಲಕವೇ. “ಸಮುದ್ರದಲ್ಲಿ ನೀರು ಹೇಗೋ ಹಾಗೆ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:9.
ಹೀಗೆ, “ಯೆಹೋವನಿಂದ ಶಿಕ್ಷಿತರಾದ” ಮಾನವ ಕುಲವು ಇನ್ನು ಮುಂದೆ ಜಾತೀಯ ಅಂತರಗಳನ್ನು ಹೋರಾಟ, ದ್ವೇಷ ಅಥವಾ ತಿರಸ್ಕಾರದ ಮೂಲವಾಗಿ ನೋಡಲಾರದು. (ಯೋಹಾನ 6:45) “ದೇವರು ಪಕ್ಷಪಾತಿಯಲ್ಲ” ಮತ್ತು ಭೂನಿವಾಸಿಗಳು ಆತನ ನಿಪ್ಪಕ್ಷಪಾತವನ್ನು ಪ್ರತಿಬಿಂಬಿಸುವರು. (ಅಪೋಸ್ತಲರಕೃತ್ಯ 10:34) ಜನಾಂಗಿಕ ಸೀಮೆಗಳನ್ನು ನಿರ್ಮೂಲಗೊಳಿಸುವ ಮೂಲಕ ದೇವರ ರಾಜ್ಯವು ಯಾವುದೇ ರಾಷ್ಟ್ರೀಯ ಹೋರಾಟಗಳ ಸಂಭಾವ್ಯತೆಯನ್ನೂ ತೆಗೆದು ಹಾಕುವದು. “ಸಮುದ್ರದಿಂದ ಸಮುದ್ರದ ವರೆಗೆ ಭೂಮಿಯ ಕಟ್ಟಕಡೆಯ ವರೆಗೆ” ಎಲ್ಲರೂ ಕ್ರಿಸ್ತನ ಆಡಳಿತಕ್ಕೆ ಅಧೀನರಾಗಿ ಕೃತಜ್ಞತಾಪೂರ್ವಕವಾದ ಭಕ್ತಿಯನ್ನು ತೋರಿಸಲು ಪ್ರತಿಜ್ಞೆ ಮಾಡುವರು.”—ಕೀರ್ತನೆ 72:8.
ಅಂಥ ಶಾಂತಿಯು ಬಾಳುವಂತೆ, ಮಾನವ ಇತಿಹಾಸದಲ್ಲಿ ಅತ್ಯಂತ ವಿಭಾಜಕ ಶಕ್ತಿಯಾದ ಸುಳ್ಳುಧರ್ಮವನ್ನೂ ದೇವರ ರಾಜ್ಯವು ಕಿತ್ತುಹಾಕುವುದು. (ಚೆಫನ್ಯ 2:11) ಮಾನವ ಕುಲವು ಒಬ್ಬನೇ ಸತ್ಯ ದೇವರಾದಾತನ ಆರಾಧನೆಯಲ್ಲಿ ಐಕ್ಯವಾಗಿರುವುದು. (ಯೆಶಾಯ 2:2, 3) ಒಂದು ಲೋಕ-ವ್ಯಾಪಕ ಬಾಂಧವ್ಯವು ಅಲ್ಲಿ ಬಾಳುವದು!
ಗೃಹರಂಗದಲ್ಲಿ ಶಾಂತಿ
ಖಾಸಗೀ ಮನೆಗಳು ಸದಾ ಬೈಗಳ, ಮನಚುಚ್ಚುವ ಮಾತುಗಳ ಮತ್ತು ಬೆದರಿಕೆಗಳನ್ನು ಹಾಕುವ ರಣರಂಗವಾಗಿ ಇದ್ದಲ್ಲಿ, ಲೋಕ ಶಾಂತಿಯಿದ್ದು ಯಾವ ಪ್ರಯೋಜನ? ಅನೇಕ ಕುಟುಂಬಗಳ ಪರಿಸ್ಥಿತಿಯು ಇಂದು ಹಾಗೆಯೇ ಇದೆ. ಇತರ ಕುಟುಂಬಗಳಾದರೋ ತಮ್ಮಲ್ಲಿ ಆಳವಾಗಿ ಹುದುಗಿರುವ ಬದ್ದವೈರಗಳನ್ನು ಶೀತಲ ನೀರವತೆಯ ಪರದೆಯ ಹಿಂದೆ ಅಡಗಿಸಿಡುತ್ತವೆ.
ಆದ್ದರಿಂದ ನಿಜ ಶಾಂತಿಯಲ್ಲಿ ಗೃಹಜೀವನದ ಸಮಾಧಾನವೂ ಕೂಡಿರುವದು ಅತ್ಯಾವಶ್ಯಕ. ದೇವರ ರಾಜ್ಯದ ಶಿಕ್ಷಣ ಕಾರ್ಯಕ್ರಮದಲ್ಲಿ, ಗಂಡ ಮತ್ತು ಹೆಂಡತಿಯರು ಒಬ್ಬರೊಂದಿಗೊಬ್ಬರು ಪ್ರೀತಿ ಮತ್ತು ಗೌರವದಲ್ಲಿ ಬೆಳೆಯುವಂತೆ ಕಲಿಸಲ್ಪಡುವರು. (ಕೊಲೊಸ್ಸೆ 3:18, 19) ಮಕ್ಕಳು ‘ತಮ್ಮ ಹೆತ್ತವರಿಗೆ ಎಲ್ಲದರಲ್ಲೂ ವಿಧೇಯರಾಗುವಂತೆ’ ಕಲಿಸಲ್ಪಡುವರು. (ಕೊಲೊಸ್ಸೆ 3:20) ತಮ್ಮ ಹೆತ್ತವರಿಗೆ ಆಶಾಭಂಗವನ್ನೂ ಕಿರುಕುಳವನ್ನೂ ಕೊಡುವ ದಂಗೆಖೋರ ಹದಿಹರೆಯದವರು ಅಲ್ಲಿರಲಾರರು. ಅಲ್ಲಿ ವಿಧೇಯತೆಯೇ ಪ್ರಮಾಣ, ಸಹಕಾರವೇ ನಿಯಮವಾಗಿರುವುದು! ಮಕ್ಕಳು ನೋಟಕ್ಕೆ ಉಲ್ಲಾಸವನ್ನು, ಸಹವಾಸಕ್ಕೆ ಸಂತೋಷವನ್ನು ತರುವರು.
ಇಂದು, ಆರ್ಥಿಕ ಒತ್ತಡಗಳು ಕುಟುಂಬದ ಮಾನಸಿಕ ಉದ್ವೇಗಗಳನ್ನು ಬಹಳಷ್ಟು ಹೆಚ್ಚಿಸುವುದರಿಂದ, ಹೆತ್ತವರಿಬ್ಬರೂ ಐಹಿಕ ಉದ್ಯೋಗದ ಭಾರವಾದ ಹೊರೆಯನ್ನು ಹೊರಲು ಬದ್ಧರಾಗಿದ್ದಾರೆ. ಆದರೆ ಕ್ರಿಸ್ತನ ಆಡಳಿತದ ಕೆಳಗೆ, ಕುಟುಂಬಗಳು ಜಜ್ಜುವ ಆರ್ಥಿಕ ಹೊರೆಗಳಾದ—ಬಾಡಿಗೆಗಳ ಉಬ್ಬು, ಸಾಲದ ಮೇಲಿನ ಅತಿರೇಕ ಬಡ್ಡಿ, ಮಿತಿಮೀರಿದ ತೆರಿಗೆಗಳು, ನಿರುದ್ಯೋಗ ಮುಂತಾದವುಗಳಿಂದ ಬಿಡಿಸಲ್ಪಡುವರು. ಮತ್ತು ಯಾರೊಬ್ಬನೂ ಮನೆಯಿಲ್ಲದವನಾಗಿರುವ ಅಗತ್ಯವಿಲ್ಲ. ಯೆಶಾಯ 65:21-23 ಆ ನಿಜತ್ವಗಳನ್ನು ಹೇಗೆ ಎತ್ತಿಹೇಳುತ್ತದೆಂಬದನ್ನು ಗಮನಿಸಿರಿ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು. ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನ ವಶವಾಗದು. . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದ ಸಂತತಿಯಷ್ಟೇ; ಅವರ ಸಂತತಿಯವರು ಅವರೊಂದಿಗೆ ಬಹುದಿನ ಇರುವರು.”
ನಗರ ಕೊಳೆತದ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳಿಂದ ಆಕ್ರಮಿಸಲ್ಪಡದ ಒಂದು ವಾತಾವರಣದಲ್ಲಿ ಜೀವಿಸುತ್ತಿರುವ ಕುರಿತು ಆಲೋಚಿಸಿರಿ! ಪರಿಪೂರ್ಣವಾದ ವ್ಯವಸಾಯ, ತೋಟಗಾರಿಕೆ ಮತ್ತು ಸೊಗಸುಗಾರಿಕೆಗೆ ಒಳಗಾದ ಹಸಿರು ಬಯಲಲ್ಲಿ—ನಿಮ್ಮದೇ ಅದ ಜಮೀನಿನಲ್ಲಿ—ಜೀವಿಸುವ ಕುರಿತು ಕಲ್ಪಿಸಿಕೊಳ್ಳಿರಿ. ಉಲ್ಲಾಸಕೊಡುವ ಶುದ್ಧವೂ ನಿರ್ಮಲವೂ ಆದ ಗಾಳಿಯನ್ನು ಸೇವಿಸುವುದನ್ನು ಆಲೋಚಿಸಿರಿ; ಆಧುನಿಕ ನಾಗರಿಕತೆಯ ಕರ್ಕಶವಾದ ಅಪಸ್ಪರಗಳ ಬದಲಾಗಿ ಮಧುರವಾದ ನೈಸರ್ಗಿಕ ದ್ವನಿಗಳು ಕೇಳಿಸುವದನ್ನು ಯೋಚಿಸಿರಿ. ಕೆಲವು ಭಾಗ್ಯಶಾಲಿಗಳು ಈವಾಗಲೇ ಇದನ್ನು ಕೊಂಚ ಮಟ್ಟಿಗೆ ಆನಂದಿಸುತ್ತಿದ್ದಾರೆ ನಿಜ. ಆದರೆ ದೇವರ ರಾಜ್ಯದ ಕೆಳಗೆ, ಶಾಂತಿಭರಿತ ಜೀವನ ಪರಿಸ್ಥಿತಿಗಳು ಎಲ್ಲರಿಂದಲೂ ಆನಂದಿಸಲ್ಪಡುವದು. ಅಲ್ಲಿ ಬಡವರು, ಹಸಿದವರು, ಅಡಚಣೆಯುಳ್ಳವರು ಇರಲಾರರು.—ಕೀರ್ತನೆ 72:13, 14, 16.
“ದುಷ್ಟರಾದರೋ ದೇಶದಿಂದ ಕೀಳಲ್ಪಡುವರು” ಎಂಬದಾಗಿಯೂ ಬೈಬಲು ವಾಗ್ದಾನಿಸಿದೆ. (ಜ್ಞಾನೋಕ್ತಿ 2:22) ಪಾತಕದ ನಿರ್ಮೂಲನೆಯೆಂದೇ ಇದರರ್ಥವು. ನಿಮ್ಮ ಚಿಕ್ಕ ಮಗುವು ಆಡಲು ಹೊರಗೆ ಹೋದರೆ, ಮರೆಯಲ್ಲಿ ಅಡಗಿರುವ ಮಕ್ಕಳ ಪೀಡಕರ ಅಥವಾ ಅಪಹರಣೆಗಾರರ ಕುರಿತು, ಹತೋಟಿಯಿಲ್ಲದೆ ಕಾರನ್ನು ಸಿಕ್ಕಾಪಟ್ಟೆ ನಡಿಸುತ್ತಿರುವ ಕುಡಿಕ ಡ್ರೈವರರ ಕುರಿತು, ಇಲ್ಲವೇ ಮಾದಕ ದ್ರವ್ಯದಿಂದಾಗಿ ಮತ್ತೇರಿ ಸುಳಿದಾಡುತ್ತಿರುವ ಯುವಕರ ತಂಡದ ಕುರಿತಾಗಲಿ ನೀವು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮಕ್ಕಳು ಪರಿಪೂರ್ಣ ಸುರಕ್ಷೆ ಮತ್ತು ಭದ್ರತೆಯ ಕೆಳಗೆ ಆಟವಾಡುವರು.
ಶಾಂತಿ ಮತ್ತು ನಿಮ್ಮ ವೈಯಕ್ತಿಕ ಸುಕ್ಷೇಮ
ಕಟ್ಟಕಡೆಗೆ, ವೈಯಕ್ತಿಕ ಸುಕ್ಷೇಮದ ವಿಷಯವೂ ಅಲ್ಲಿರುವುದು. ಪರದೈಸದ ಪರಿಸ್ಥಿತಿಗಳು ಸಹಾ ಕ್ಯಾನ್ಸ್ರಿನ ಬೇನೆಯನ್ನು ಅಥವಾ ಸಂಧಿವಾತದ ಶೂಲೆಗಳನ್ನು ತಣಿಸಲಾರವು. ಆದ್ದರಿಂದ ನಿಜ ಶಾಂತಿಯಲ್ಲಿ ರೋಗ, ಅಸೌಖ್ಯ ಮತ್ತು ಮರಣದ ನಿರ್ಮೂಲನೆಯು ಸಹಾ ಸೇರಿರಬೇಕು. ಅಂಥ ಒಂದು ವಿಷಯವು ಶಕ್ಯವೋ? ಯೇಸು ಕ್ರಿಸ್ತನು ಭೂಮಿಯಲ್ಲಿರುವಾಗ ಮಾನವ ಕಾಯಿಲೆಗಳ ಮೇಲೆ ತನ್ನ ಅಧಿಕಾರವನ್ನು ಪದೆಪದೇ ತೋರಿಸಿದ್ದನು. (ಮತ್ತಾಯ 8:14-17) ತನ್ನ ಸ್ವರ್ಗೀಯ ಅನುಕೂಲ ಸ್ಥಳದಿಂದ, ಕ್ರಿಸ್ತನು ಭೂಲೋಕದಲ್ಲೆಲ್ಲೂ ಅದ್ಭುತಗಳನ್ನು ನಡಿಸಲು ಶಕ್ತನಾಗುವನು! “ಆಗ,” ಬೈಬಲ್ ವಾಗ್ದಾನಿಸುವುದು, “ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷದ್ವನಿಗೈಯುವದು.”—ಯೆಶಾಯ 33:24; 35:5, 6.
ಮಾನವ ದುರವಸ್ಥೆಯ ವಿರುದ್ಧವಾದ ಕ್ರಿಸ್ತನ ಚಟುವಟಿಕೆಯಾದರೋ ಅಲ್ಲಿಗೆ ನಿಲ್ಲಲಾರದು. ಅಪೊಸ್ತಲ ಪೌಲನು ಕ್ರಿಸ್ತನ ರಾಜ್ಯತ್ವದ ಕುರಿತು ವಿವರಿಸುತ್ತಾ ಅನ್ನುವುದು: “ಆತನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.” (1 ಕೊರಿಂಥ 15:25, 26) ಇದರ ಅರ್ಥವು, ಮರಣವು ಆರಂಭದಿಂದಲೇ ಮಾನವ ಕುಲದ ಮೇಲೆ ತಂದಿರುವ ಎಲ್ಲಾ ಹಾವಳಿಯನ್ನು ತೆಗೆದು ಹಾಕುವದಾಗಿದೆ. ಯೇಸು ಕ್ರಿಸ್ತನು ತಾನೇ ವಿವರಿಸಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [ಕ್ರಿಸ್ತನ] ದ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ದುರವಸ್ಥೆಯಲ್ಲಿ ಜೀವಿಸಿ, ಸತ್ತ ಮಿಲ್ಯಾಂತರ ಜನರು ಹೀಗೆ ಬರಲಿರುವ ಲೋಕ ಶಾಂತಿಯಲ್ಲಿ ಪಾಲಿಗರಾಗುವ ಸಂದರ್ಭವನ್ನು ಪಡೆಯುವರು.
ನೀವದರಲ್ಲಿ ಪಾಲಿಗರಾಗುವಿರೋ? ಈ ವಿಷಯವಾಗಿ ಬೈಬಲ್ ಏನು ಕಲಿಸುತ್ತದೋ ಅದರ ಕುರಿತು ಹೆಚ್ಚನ್ನು ಕಲಿಯುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಪ್ರೇರೇಪಿಸುತ್ತಾರೆ.b ಲೋಕ ಶಾಂತಿಯ ಪ್ರತೀಕ್ಷೆಗಳು ದುರ್ಲಕ್ಷಮಾಡಲು ತೀರಾ ಹೆಚ್ಚು ರೋಮಾಂಚಕವೂ ಹೆಚ್ಚು ವಾಸ್ತವಿಕವೂ ಆಗಿರುತ್ತದೆ. ದೇವರ ವಾಕ್ಯವನ್ನು ಕಲಿಯಲು ಮತ್ತು ಅನ್ವಯಿಸಿಕೊಳ್ಳಲು ನೀವು ಪರಿಶ್ರಮ ಪಡುವದಾದರೆ, “ಶಾಂತಿದಾಯಕನಾದ ದೇವರು ನಿಮ್ಮೊಂದಿಗೆ ಇರುವನು” ಎಂಬ ವಿಷಯದಲ್ಲಿ ಆಶ್ವಾಸನೆಯನ್ನು ಪಡೆಯಬಲ್ಲಿರಿ!—ಫಿಲಿಪ್ಪಿ 4:9. (w90 4/15)
[ಅಧ್ಯಯನ ಪ್ರಶ್ನೆಗಳು]
a ಅಕ್ಷರಾರ್ಥವಾಗಿ, “ನಿನ್ನ ಅಣ್ಣಂದಿರ ಶಾಂತಿಯನ್ನು ಮತ್ತು ಆಡುಕುರಿಗಳ ಶಾಂತಿಯನ್ನು ವಿಚಾರಿಸಿಕೊಂಡು ಬಾ.”
b ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯುವ ಮೂಲಕ ಒಂದು ಉಚಿತ ಮನೆ ಬೈಬಲಧ್ಯಯನವನ್ನು ಏರ್ಪಡಿಸ ಸಾಧ್ಯವಿದೆ
[ಪುಟ 5 ರಲ್ಲಿರುವ ಚಿತ್ರ]
ಯೆಹೋವನು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ”
[ಕೃಪೆ]
USAF Official Photo
[ಪುಟ 6 ರಲ್ಲಿರುವ ಚಿತ್ರ]
ಗಂಡಂದಿರು ಮತ್ತು ಹೆಂಡತಿಯರು ಒಬ್ಬರೊಂದಿಗೊಬ್ಬರು ಸಮಾಧಾನದಿಂದ ವ್ಯವಹರಿಸುವಂತೆ ಕಲಿಸಲ್ಪಡುವರು