ದೀಕ್ಷಾಸ್ನಾತ ಕ್ರೈಸ್ತರಾಗಿ ದಿವ್ಯಭಕ್ತಿಯನ್ನು ಬಿಡದೆ ಅನುಸರಿಸಿರಿ
“ದೇವರ ಮನುಷ್ಯನೇ, ನೀನಾದರೋ . . . ನೀತಿ, ದಿವ್ಯಭಕ್ತಿ . . . ಇವುಗಳನ್ನು ಬಿಡದೆ ಅನುಸರಿಸು.”—1 ತಿಮೋಥಿ 6:11, NW.
1. ನಿಮ್ಮ ಜೀವನದ ಅತಿ ಪ್ರಾಮುಖ್ಯ ದಿನವಾವುದು ಎಂಬ ಪ್ರಶ್ನೆಗೆ ನೀವು ಹೇಗೆ ಉತ್ತರಕೊಡುವಿರಿ? ಹಾಗೆ ಏಕೆ?
ನಿಮ್ಮ ಜೀವಿತದ ಅತಿ ಪ್ರಾಮುಖ್ಯ ದಿನವಾವುದು? ಯೆಹೋವನ ದೀಕ್ಷಾಸ್ನಾತ ಸಾಕ್ಷಿ ನೀವಾಗಿರುವಲ್ಲಿ “ನಾನು ದೀಕ್ಷಾಸ್ನಾನ ಹೊಂದಿದ ದಿನವೇ!” ಎಂದು ನೀವು ಉತ್ತರ ಕೊಡುವಿರೆಂಬದು ನಿಸ್ಸಂಶಯ. ನಿಶ್ಚಯಕ್ಕೂ ದೀಕ್ಷಾಸ್ನಾನವು ನಿಮ್ಮ ಜೀವಿತದ ಅತ್ಯಂತ ಮಹತ್ವದ ಹೆಜ್ಜೆ. ನೀವು ಯೆಹೋವನಿಗೆ ಆತನ ಚಿತ್ತಮಾಡಲು ಸಂಪೂರ್ಣವಾದ ಮತ್ತು ಮೀಸಲಲ್ಲದ ಸಮರ್ಪಣೆಯನ್ನು ಮಾಡಿದ್ದೀರಿ ಎಂಬದಕ್ಕೆ ಇದು ಬಾಹ್ಯ ಚಿಹ್ನೆಯಾಗಿದೆ. ಈ ಸ್ನಾನ, ಸರ್ವೋನ್ನತ ದೇವರಾದ ಯೆಹೋವನ ಸೇವಕರಾಗಲು ನೀವು ದೀಕ್ಷೆಪಡೆದಿರುವ ದಿನವನ್ನು ಗುರುತಿಸುತ್ತದೆ.
2. (ಎ) ದೀಕ್ಷಾಸ್ನಾನವು ನಿಮ್ಮ ಕ್ರೈಸ್ತ ಜೀವನದ ಕೊನೆಯ ಹೆಜ್ಜೆಯಲ್ಲ ಎಂಬದನ್ನು ಹೇಗೆ ಚಿತ್ರಿಸಬಹುದು? (ಬಿ) ದೀಕ್ಷಾಸ್ನಾನ ಹೊಂದುವ ಮೊದಲು ಯಾವ ಪ್ರಾಮುಖ್ಯ ಪೂರ್ವಭಾವಿ ಹೆಜ್ಜೆಗಳನ್ನು ನೀವು ಇಟ್ಟಿರಿ?
2 ಆದರೆ ಈ ದೀಕ್ಷಾಸ್ನಾನ ಕ್ರೈಸ್ತ ದಾರಿಯಲ್ಲಿ ನೀವು ಹಾಕುವ ಕೊನೆಯ ಹೆಜ್ಜೆಯೋ? ಎಂದಿಗೂ ಅಲ್ಲ! ದೃಷ್ಟಾಂತ: ಅನೇಕ ದೇಶಗಳಲ್ಲಿ ವಿವಾಹ ಸಂಸ್ಕಾರವು, ಏರ್ಪಾಡು ಮತ್ತು ಸಿದ್ಧತೆ (ಮತ್ತು ಸಾಧಾರಣವಾಗಿ ಪ್ರಣಯಾಚರಣೆ) ಯ ಸಮಯದ ಅಂತ್ಯವನ್ನು ಸೂಚಿಸುತ್ತದೆ. ಆದರೆ ಅದೇ ಸಮಯ, ವೈವಾಹಿಕ ಜೊತೆಯು ಜೊತೆಯಾಗಿ ಜೀವನ ನಡಿಸುವುದರ ಪ್ರಾರಂಭವನ್ನೂ ಅದು ಗುರುತಿಸುತ್ತದೆ. ತದ್ರೀತಿ, ನಿಮ್ಮ ದೀಕ್ಷಾಸ್ನಾನವೂ ಒಂದು ಸಿದ್ದತೆಯ ಸಮಯದ ಅಂತ್ಯವಾಗಿದೆ. ಈ ಸಮಯದಲ್ಲಿ ನೀವು ಅನೇಕ ಪೂರ್ವಭಾವೀ ಹೆಜ್ಜೆಗಳನ್ನು ಇಟ್ಟಿದ್ದೀರಿ. ನೀವು ದೇವರ ಮತ್ತು ಕ್ರಿಸ್ತನ ಜ್ಞಾನ ಸಂಪಾದಿಸಿದಿರಿ. (ಯೋಹಾನ 17:3) ಯೆಹೋವನು ಸತ್ಯದೇವರೆಂದೂ ಕ್ರಿಸ್ತನು ನಿಮ್ಮ ರಕ್ಷಕನೆಂದೂ, ಬೈಬಲ್ ದೇವರ ವಾಕ್ಯವೆಂದೂ ನೀವು ನಂಬತೊಡಗಿದಿರಿ. (ಅಪೋ. 4:12; 1 ಥೆಸಲೋನಿಕ 2:13; ಇಬ್ರಿಯ 11:6) ನಿಮ್ಮ ಹಿಂದಿನ ವರ್ತನೆಗೆ ಪಶ್ಚಾತ್ತಾಪಪಟ್ಟು ನೀತಿಯ ಮಾರ್ಗಕ್ಕೆ ಪುನ: ಪರಿವರ್ತನೆ ಮಾಡುತ್ತಾ ನೀವು ಈ ನಂಬಿಕೆಯನ್ನು ಪ್ರದರ್ಶಿಸಿದಿರಿ. (ಅಪೋ. 3:19) ಆ ಬಳಿಕ ನೀವು, ಯೆಹೋವನ ಚಿತ್ತ ಮಾಡಲಿಕ್ಕಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳುವ ನಿರ್ಧಾರ ಮಾಡಿದಿರಿ. (ಮತ್ತಾಯ 16:24) ಕೊನೆಗೆ ದೀಕ್ಷಾಸ್ನಾನ ಹೊಂದಿದಿರಿ.—ಮತ್ತಾಯ 28:19, 20.
3. (ಎ) ದೀಕ್ಷಾಸ್ನಾನವು ದೇವರ ಸಮರ್ಪಿತ ಸೇವೆಯ ಆರಂಭವೆಂಬದನ್ನು ನಾವು ಹೇಗೆ ತೋರಿಸಬಲ್ಲೆವು? (ಬಿ) ಯಾವ ಪ್ರಶ್ನೆಗಳು ಏಳುತ್ತವೆ ಮತ್ತು ಇದರ ಉತ್ತರ ನಮಗೆ ತೀವ್ರಾಸಕ್ತಿಯುಳ್ಳದ್ದಾಗಿರಬೇಕು ಏಕೆ?
3 ಆದರೆ ನಿಮ್ಮ ದೀಕ್ಷಾಸ್ನಾನ ದೇವರಿಗೆ ನಿಮ್ಮ ಪವಿತ್ರಸೇವೆ ಸಲ್ಲಿಸುವ ಜೀವನದ ಅಂತ್ಯವಾಗಿರದೆ ಆರಂಭವಾಗಿದೆ. ಒಬ್ಬ ಬೈಬಲ್ ತಜ್ನರು ಗಮನಿಸಿರುವಂತೆ, ಕ್ರೈಸ್ತ ಜೀವಿತ ಆರಂಭದ ಸೆಡೆತವನ್ನು ಅನುಸರಿಸಿ ಬರುವ ಅಸ್ಥಿಗತ ಜಡತೆಯಾಗಿರಬಾರದು. ಹಾಗಾದರೆ ನಿಮ್ಮ ಸಂಬಂಧದಲ್ಲಿ ಈ ದೀಕ್ಷಾಸ್ನಾನ ಕೇವಲ ‘ಆರಂಭದ ಸೆಡೆತ’ ವಲ್ಲವೆಂದು ನೀವು ಹೇಗೆ ಪ್ರದರ್ಶಿಸುವಿರಿ? ಜೀವಾದ್ಯಂತ ದಿವ್ಯಭಕ್ತಿಯ ಹಾದಿಯನ್ನು ಬಿಡದೆ ಅನುಸರಿಸಿಯೇ. ಆದರೆ ಈ ದಿವ್ಯಭಕ್ತಿ ಎಂದರೇನು? ಅದನ್ನು ಬಿಡದೆ ಹಿಂಬಾಲಿಸುವ ಅವಶ್ಯವೇನಿದೆ? ನಿಮ್ಮ ಜೀವನದಲ್ಲಿ ಅದನ್ನು ಹೆಚ್ಚು ಪೂರ್ಣವಾಗಿ ನೀವು ಹೇಗೆ ಬೆಳೆಸಬಲ್ಲಿರಿ? ಇವುಗಳಿಗೆ ಉತ್ತರವು ನಮಗೆ ತೀವ್ರಾಸಕ್ತಿಯವುಗಳಾಗಿರಬೇಕು. ಏಕೆಂದರೆ, ಯೆಹೋವನ ಸಮೀಪಿಸುತ್ತಿರುವ ತೀರ್ಪಿನ ದಿನವನ್ನು ಪಾರಾಗಬೇಕಾದರೆ ನಾವು “ದಿವ್ಯಭಕ್ತಿಯ ನಡೆವಳಿಕೆ” ಗಳಿಂದ ಗುರುತಿಸಲ್ಪಡುವ ವ್ಯಕ್ತಿಗಳಾಗಬೇಕು.—2 ಪೇತ್ರ 3:11, 12.
ದಿವ್ಯ ಭಕ್ತಿಯ ಅರ್ಥ
4. ತಿಮೋಥಿಯ ಏನು ಮಾಡುವಂತೆ ಪೌಲನು ಬುದ್ಧಿಹೇಳಿದನು, ಮತ್ತು ತಿಮೋಥಿಯ ಆಗಿನ ಸ್ಥಿತಿಗತಿ ಏನಾಗಿತ್ತು?
4 ಸಾ.ಶ. 61 ರಿಂದ 64 ರ ಮಧ್ಯೆ, ಅಪೋಸ್ತಲ ಪೌಲನು ತಿಮೋಥಿಗೆ ತನ್ನ ಮೊದಲನೆಯ ಪ್ರೇರಿತ ಪತ್ರವನ್ನು ಬರೆದನು. ಹಣದಾಸೆಯಿಂದ ಬರುವ ಅಪಾಯಗಳನ್ನು ವರ್ಣಿಸಿದ ನಂತರ ಪೌಲನು, “ದೇವರ ಮನುಷ್ಯನೇ, ನೀನಾದರೂ ಇವುಗಳಿಂದ ಓಡಿಹೋಗು. ಆದರೆ . . . ದಿವ್ಯಭಕ್ತಿ ಇವುಗಳನ್ನು ಬಿಡದೆ ಅನುಸರಿಸು” ಎಂದು ಬರೆದನು. (1 ತಿಮೋಥಿ 6:9-11) ಅಭಿರುಚಿಯ ವಿಷಯವೇನಂದರೆ, ಆಗ ತಿಮೋಥಿ ಪ್ರಾಯಶ: 30ಕ್ಕೆ ಮೇಲಿನ ವಯಸ್ಸಿನವನಾಗಿದ್ದನು. ಅವನು ಅಪೋಸ್ತಲ ಪೌಲನೊಂದಿಗೆ ಆವಾಗಲೇ ವ್ಯಾಪಕವಾಗಿ ಸಂಚರಿಸಿದ್ದು, ಸಭೆಗಳಲ್ಲಿ ಮೇಲ್ವಿಚಾರಕರನ್ನೂ ಶುಶ್ರೂಷಾ ಸೇವಕರನ್ನೂ ನೇಮಿಸುವ ಅಪ್ಪಣೆಯನ್ನು ಪಡೆದಿದ್ದನು. (ಅಪೋ. 16:3; 1 ತಿಮೋಥಿ 5:22) ಆದರೂ, ಸಮರ್ಪಿತನೂ ಸ್ನಾನಿತನೂ ಆದ ಈ ಪಕ್ವತೆಯ ಕ್ರೈಸ್ತ ಪುರುಷನು ದಿವ್ಯಭಕ್ತಿಯನ್ನು ಅನುಸರಿಸುವಂತೆ ಪೌಲನು ಬುದ್ಧಿ ಹೇಳಿದನು.
5. “ದಿವ್ಯ ಭಕ್ತಿ” ಎಂಬ ಪದದ ಅರ್ಥವೇನು?
5 ಈ ದಿವ್ಯ ಭಕ್ತಿಯನ್ನು ಪೌಲನು ಯಾವ ಅರ್ಥದಲ್ಲಿ ನುಡಿದನು? ಈ ಮೂಲ ಗ್ರೀಕ್ ಪದ ಯುಸೇಬಿಯ ವನ್ನು ಅಕ್ಷರಾರ್ಥಕವಾಗಿ “ಉತ್ತಮ ಪೂಜ್ಯ ಭಾವನೆ” ಎಂದು ಭಾಷಾಂತರಿಸಬಹುದು. ಅದರ ಅರ್ಥದ ಕುರಿತು ನಾವು ಹೀಗೆ ಓದುತ್ತೇವೆ: “ಸಮಕಾಲೀನ ಕೆತ್ತನೆಯ ಲಿಪಿಗಳಲ್ಲಿ ಯುಸೇಬಿಯ ಒಮ್ಮೊಮ್ಮೆ ವೈಯಕ್ತಿಕ ಧರ್ಮಭಕ್ತಿಯನ್ನು ಸೂಚಿಸುತ್ತದೆ. . . ಆದರೆ ರೋಮನ್ ಕಾಲಗಳ ಜನಪ್ರಿಯ ಗ್ರೀಕಿನಲ್ಲಿ ಅದರ ಹೆಚ್ಚು ರೂಢಿಯಾದ ಅರ್ಥವು ‘ಕರ್ತವ್ಯನಿಪ್ಟೆ’ ಯಾಗಿದೆ. . . . ಕ್ರೈಸ್ತರ ಸಂಬಂಧದಲ್ಲಿ ಯುಸೇಬಿಯ ದೇವರಿಗೆ ತೋರಿಸುವ ಅತ್ಯಂತ ಶ್ರೇಷ್ಟ ರೀತಿಯ ಭಕ್ತಿಯು. (ಕ್ರಿಶ್ಚನ್ ವರ್ಡ್ಸ್, ನೈಜಲ್ ಟರ್ನ್ರ್ ಇವರಿಂದ) ಹೀಗೆ ಶಾಸ್ತ್ರದಲ್ಲಿ “ದಿವ್ಯ ಭಕ್ತಿ” ಎಂಬ ಪದಕ್ಕೆ ಯೆಹೋವ ದೇವರಿಗೆ ವೈಯಕ್ತಿಕವಾಗಿ ನಿಷ್ಟೆಯುಳ್ಳ ಪೂಜ್ಯಭಾವ ಅಥವಾ ಭಕ್ತಿಯನ್ನು ತೋರಿಸುವುದು ಎಂಬರ್ಥವಿದೆ.
6. ಕ್ರೈಸ್ತನು ತನ್ನ ದಿವ್ಯ ಭಕ್ತಿಯ ರುಜುವಾತನ್ನು ಹೇಗೆ ಕೊಡುತ್ತಾನೆ?
6 ಆದರೆ ಈ ದಿವ್ಯ ಭಕ್ತಿ ಕೇವಲ ಒಂದು ಆರಾಧನಾ ಭಾವವಲ್ಲ. “ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದು” ಆಗಿರುವಂತೆ ದಿವ್ಯ ಭಕ್ತಿಯೂ ಒಬ್ಬನ ಜೀವನದಲ್ಲಿ ವ್ಯಕ್ತವಾಗಬೇಕು. (ಯಾಕೋಬ 2:26) ನ್ಯೂ ಟೆಸ್ಟಮೆಂಟ್ ವರ್ಡ್ಸ್ ಎಂಬ ಪುಸ್ತಕದಲ್ಲಿ ವಿಲ್ಯಂ ಬಾರ್ಕ್ಲೇ ಬರೆದದ್ದು: [ಯುಸೇಬಿಯ ಮತ್ತು ಸಂಬಂಧಿತ ಪದಗಳು] ಭಯಭಕ್ತಿ ಮತ್ತು ಪೂಜ್ಯ ಭಾವನೆಯನ್ನಷ್ಟೇ ಅಲ್ಲ, ಆ ಭಯಭಕ್ತಿಗೆ ಯೋಗ್ಯವಾದ ಆರಾಧನೆ ಮತ್ತು ಪೂಜ್ಯ ಭಾವನೆಗೆ ಯೋಗ್ಯವಾದ ವಿಧೇಯತೆಯ ಬದುಕನ್ನೂ ವಕ್ತಪಡಿಸುತ್ತವೆ. ಇದಲ್ಲದೆ, ಯುಸೇಬಿಯ ಎಂಬ ಪದಕ್ಕೆ “ಜೀವನದ ಪ್ರತಿಯೊಂದು ಭಾಗದಲ್ಲಿ ದೇವರ ಅತಿ ಪ್ರಾಯೋಗಿಕ ಅರಿವು” ಎಂಬರ್ಥವೂ ಇದೆ. (ಮೈಕಲ್ ಗ್ರೀನ್ ಬರೆದ ದ ಸೆಕೆಂಡ್ ಎಪಿಸ್ಟಲ್ ಜನರಲ್ ಆಫ್ ಪೀಟರ್ ಎಂಡ್ ಜನರಲ್ ಎಪಿಸ್ಟಲ್ ಆಫ್ ಜೂಡ್) ಹಾಗಾದರೆ, ಒಬ್ಬನು ಕ್ರೈಸ್ತನು ತಾನು ಜೀವಿಸುವ ರೀತಿಯಲ್ಲಿ, ಯೆಹೋವನಿಗೆ ವೈಯಕ್ತಿಕವಾಗಿ ಅಂಟಿಕೊಂಡಿದ್ದೇನೆಂಬದಕ್ಕೆ ಸಾಕ್ಷಿಯನ್ನು ಒದಗಿಸತಕ್ಕದ್ದು.—1 ತಿಮೋಥಿ 2:2; 2 ಪೇತ್ರ 3:11.
ಶ್ರಮದ ಪ್ರಯತ್ನ ಅಗತ್ಯ
7. ತಿಮೋಥಿಗೆ ದೀಕ್ಷಾಸ್ನಾನವಾಗಿದ್ದರೂ ದಿವ್ಯ ಭಕ್ತಿಯನ್ನು “ಬಿಡದೆ ಅನುಸರಿಸು” ಎಂದು ಪೌಲನು ಪ್ರೋತ್ಸಾಹಿಸಿದ್ದು ಯಾವ ಅರ್ಥದಲ್ಲಿ?
7 ಆದ್ರೆ ದಿವ್ಯಭಕ್ತಿಯನ್ನು ಬೆಳೆಸಿ ಪ್ರದರ್ಶಿಸುವುದರಲ್ಲಿ ಏನೆಲ್ಲಾ ಸೇರಿದೆ? ಕೇವಲ ದೀಕ್ಷಾಸ್ನಾನ ಮಾತ್ರವೋ? ತಿಮೋಥಿಗೆ ದೀಕ್ಷಾಸ್ನಾನವಾಗಿದ್ದರೂ ದಿವ್ಯ ಭಕ್ತಿಯನ್ನು “ಬಿಡದೆ ಅನುಸರಿಸು [ಅಕ್ಷರಾರ್ಥವಾಗಿ ‘ನೀನು ಬೆನ್ನಟ್ಟುತ್ತಿರು’]” ವಂತೆ ಪ್ರೋತ್ಸಾಹಿಸಲ್ಪಟ್ಟನು.a (1 ತಿಮೋಥಿ 6:11, ಕಿಂಗ್ಡಂ ಇಂಟರ್ಲಿನಿಯರ್) ಆದರೆ ಶಿಷ್ಯ ತಿಮೋಥಿಯು ದಿವ್ಯಭಕ್ತಿಯಲ್ಲಿ ಕೊರತೆಯುಳ್ಳವನಾಗಿದ್ದನೆಂದು ಪೌಲನು ಇಲ್ಲಿ ತೋರಿಸುವದಿಲ್ಲವೆಂಬದು ವ್ಯಕ್ತ. ಬದಲಿಗೆ, ಅದನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಬಿಡದೆ ಅನುಸರಿಸುವ ಅಗತ್ಯವನ್ನು ಪೌಲನು ಅವನ ಮನಸ್ಸಿನಲ್ಲಿ ಒತ್ತುವಂತೆ ಹೇಳಿದನು. (ಫಿಲಿಪ್ಪಿ 3:14 ಹೋಲಿಸಿ.) ಇದು ಜೀವಾವಧಿಯ ಹವ್ಯಾಸವಾಗಿರಬೇಕಿತ್ತು. ಇತರ ಎಲ್ಲಾ ದೀಕ್ಷಾಸ್ನಾತ ಕ್ರೈಸ್ತರಂತೆಯೇ ತಿಮೋಥಿಯು ದಿವ್ಯ ಭಕ್ತಿ ತೋರಿಸುವುದರಲ್ಲಿ ಪ್ರಗತಿಯನ್ನು ಮಾಡುತ್ತಾ ಇರಸಾಧ್ಯವಿತ್ತು.
8. ಸಮರ್ಪಿತ, ದೀಕ್ಷಾಸ್ನಾತ ಕ್ರೈಸ್ತನು ದಿವ್ಯ ಭಕ್ತಿಯನ್ನು ಅನುಸರಿಸಬೇಕಾದರೆ ಶ್ರಮದ ಪ್ರಯತ್ನ ಅಗತ್ಯವೆಂದು ಪೇತ್ರನು ಹೇಗೆ ತೋರಿಸಿದ್ದಾನೆ?
8 ದಿವ್ಯ ಭಕ್ತಿಯನ್ನು ಬಿಡದೆ ಅನುಸರಿಸಬೇಕಾದರೆ ಸಮರ್ಪಿತ, ಸ್ನಾನಿತ ಕ್ರೈಸ್ತನು ಶ್ರಮದ ಪ್ರಯತ್ನವನ್ನು ಮಾಡುವುದು ಅತ್ಯಾವಶ್ಯಕ. ‘ದೈವಿಕ ಪಕೃತಿಯಲ್ಲಿ ಭಾಗಿಗಳಾಗುವ’ ಪ್ರತೀಕ್ಷೆಯಿದ್ದ ದೀಕ್ಷಾಸ್ನಾನ ಪಡೆದ ಕ್ರೈಸ್ತರಿಗೆ ಬರೆಯುತ್ತಾ ಅಪೋಸ್ತಲ ಪೇತ್ರನು ಹೇಳಿದ್ದು: “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ, ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ, ತಾಳ್ಮೆಗೆ [ದಿವ್ಯ] ಭಕ್ತಿಯನ್ನೂ ಕೂಡಿಸಿರಿ.” (2 ಪೇತ್ರ 1:4-6) ದೀಕ್ಷಾಸ್ನಾನಕ್ಕೆ ನಮ್ಮನ್ನು ಒಪ್ಪಿಸಿಕೊಡುವಾಗ ನಮಗೆ ನಂಬಿಕೆ ಇರಬೇಕೆಂಬದು ಸುವ್ಯಕ್ತ. ಆದರೂ ದೀಕ್ಷಾಸ್ನಾನಾನಂತರ ನಾವು ಕೇವಲ ಸಾಂಕೇತಿಕ ಕ್ರೈಸ್ತತ್ವದಿಂದ ತೃಪ್ತಿಪಡೆಯುತ್ತಾ ತೀರ ಸಂಚಾರಿಗಳಾಗ ಸಾಧ್ಯವಿಲ್ಲ. ಬದಲಿಗೆ, ನಾವು ಕ್ರೈಸ್ತ ಜೀವಿತದಲ್ಲಿ ಪ್ರಗತಿ ಹೊಂದುತ್ತಿರುವಂತೆ, ನಮ್ಮ ನಂಬಿಕೆಗೆ ಕೂಡಿಸಲು ದಿವ್ಯಭಕ್ತಿ ಸೇರಿರುವ ಇತರ ಉತ್ತಮ ಗುಣಗಳನ್ನು ಬೆಳೆಸುತ್ತಾ ಮುಂದುವರಿಯುವ ಅಗತ್ಯವಿದೆ. ಇದಕ್ಕೆ ನಮ್ಮ ಶ್ರದ್ಧಾಪೂರ್ವಕ ಪ್ರಯತ್ನ ಅಗತ್ಯವೆಂದು ಪೇತ್ರನು ಅನ್ನುತ್ತಾನೆ.
9. (ಎ) “ಕೂಡಿಸು” ಎಂಬುದರ ಗ್ರೀಕ್ ಪದವು ದಿವ್ಯ ಭಕ್ತಿಯನ್ನು ಬೆಳೆಸಲು ಬೇಕಾಗುವ ಪ್ರಯತ್ನದ ಪರಿಮಾಣವನ್ನು ಹೇಗೆ ಚಿತ್ರಿಸುತ್ತದೆ? (ಬಿ) ನಾವೇನು ಮಾಡುವಂತೆ ಪೇತ್ರನು ಪ್ರೋತ್ಸಾಹಿಸುತ್ತಾನೆ?
9 ಪೇತ್ರನು ಉಪಯೋಗಿಸಿದ “ಕೂಡಿಸಿರಿ” ಇಂಪಿಕೊರೀಜಿಯ ಎಂಬ ಗ್ರೀಕ್ ಪದಕ್ಕೆ ರಸಕರವಾದ ಹಿನ್ನೆಲೆಯಿದ್ದು, ಅದು ಅಗತ್ಯವಿರುವ ಪರಿಮಾಣವನ್ನು ಚಿತ್ರಿಸುತ್ತದೆ. ಇದು ಒಂದು ನಾಮಪದವಾದ ಕೊರೀಗೊಸ್ದಿಂದ ಬಂದಿದ್ದು ಅದಕ್ಕೆ “ಮೇಳ ಗೀತದ ನಾಯಕ” ಎಂಬ ಅಕ್ಷರಾರ್ಥವಿದೆ. ನಾಟಕ ಮಾಡುವುದರಲ್ಲಿ ಮೇಳ ಗೀತ ತಂಡವನ್ನು ತರಬೇತುಗೊಳಿಸಿ ಅದರ ಎಲ್ಲಾ ಖರ್ಚು ನೋಡಿಕೊಳ್ಳುವವನಿಗೆ ಇದು ಸೂಚಿತವಾಗಿದೆ. ಇಂಥವರು ತಮ್ಮ ನಗರದ ಮೇಲಿನ ಪ್ರೇಮದಿಂದ ಸ್ವಯಂ ಪ್ರೇರಿತರಾಗಿ ಈ ಜವಾಬ್ದಾರಿಯನ್ನು ತಕ್ಕೊಂಡು ತಮ್ಮ ಹಣದಿಂದ ಇದರ ಖರ್ಚನ್ನು ತೆರುತ್ತಿದ್ದರು. ಇಂಥ ಘನ ಪ್ರದರ್ಶನೆಗೆ ಬೇಕಾಗುವುದನ್ನು ಒದಗಿಸುವುದಕ್ಕಾಗಿ ಧಾರಾಳ ಖರ್ಚುಮಾಡುವುದು ಇಂಥ ಜನರಿಗೆ ಅಭಿಮಾನದ ಕೆಲ್ಸವಾಗಿತ್ತು. ಹೀಗೆ ಈ ಪದ “ಕೂಡಿಸು, ಧಾರಾಳವಾಗಿ ಒದಗಿಸು” ಎಂಬ ಅರ್ಥಪೂರ್ಣತೆಯನ್ನು ಹೊಂದಿತು. (2 ಪೇತ್ರ 1:11ನ್ನು ಹೋಲಿಸಿ.) ಆದ್ದರಿಂದ ಪೇತ್ರನು, ನಾವು ನಮ್ಮನ್ನು ಸ್ವಲ್ಪ ದಿವ್ಯಭಕ್ತಿಯಿಂದ ಕೂಡಿಸಿಕೊಳ್ಳಬೇಕೆಂದಷ್ಟೇ ಅಲ್ಲ, ಈ ಅಮೂಲ್ಯ ಗುಣವನ್ನು ಅತ್ಯಂತ ಅತ್ಯಂತ ಧಾರಾಳವಾಗಿ ಕೂಡಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸುತ್ತಾನೆ.
10, 11. (ಎ) ದಿವ್ಯ ಭಕ್ತಿಯನ್ನು ಬೆಳೆಸಲು ಮತ್ತು ತೋರಿಸಲು ಪ್ರಯತ್ನ ಏಕೆ ಅಗತ್ಯ? (ಬಿ) ನಾವು ಈ ಹೋರಾಟವನ್ನು ಹೇಗೆ ಜಯಿಸಬಲ್ಲೆವು
10 ಆದರೆ ಈ ದಿವ್ಯ ಭಕ್ತಿಯನ್ನು ಬೆಳೆಸಿ ಪ್ರದರ್ಶಿಸಲು ಇಂಥ ಪ್ರಯತ್ನದ ಅಗತ್ಯವೇಕೆ? ಒಂದನೇದಾಗಿ ನಮಗೆ ಪಾಪಪೂರ್ಣ ಶರೀರದೊಂದಿಗೆ ಹೋರಾಡಲಿಕ್ಕದೆ. “ಮನುಷ್ಯರ ಮನಸ್ಸಂಕಲ್ಪ ಚಿಕ್ಕಂದಿನಿಂದಲೇ ಕೆಟ್ಟದ್ದು” ಆಗಿರುವುದರಿಂದ ದೇವರಿಗೆ ಕ್ರಿಯಾಶೀಲ ವಿಧೇಯತೆಯನ್ನು ತೋರಿಸುವ ಜೀವನವನ್ನು ಅನುಸರಿಸುವುದು ಸುಲಭವಲ್ಲ. (ಆದಿಕಾಂಡ 8:21; ರೋಮಾಪುರ 7:21-23) ಅಪೋಸ್ತಲ ಪೌಲನು ಹೇಳುವುದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೋಥಿ 3:12) ಹೌದು, ದೇವರನ್ನು ಮೆಚ್ಚಿಸುವಂತೆ ಜೀವಿಸ ಬಯಸುವ ಕ್ರೈಸ್ತನು ಲೋಕದಿಂದ ಪ್ರತ್ಯೇಕನಾಗಿರಬೇಕು. ಅವನ ಮಟ್ಟಗಳೂ ಗುರಿಗಳೂ ಭಿನ್ನವಾಗಿವೆ. ಹೀಗೆ, ಯೇಸು ಎಚ್ಚರಿಸಿದಂತೆ, ಇದು ದುಷ್ಟ ಲೋಕದಿಂದ ದ್ವೇಷವನ್ನು ಎಬ್ಬಿಸುತ್ತದೆ.—ಯೋಹಾನ 15:19; 1 ಪೇತ್ರ 4:4.
11 ಹೀಗಿದ್ದರೂ ನಾವು ಹೋರಾಟವನ್ನು ಜಯಿಸಬಲ್ಲೆವು ಏಕೆಂದರೆ, “ಯೆಹೋವನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ. (2 ಪೇತ್ರ 2:9) ಆದರೆ ನಾವು ದಿವ್ಯ ಭಕ್ತಿಯನ್ನು ಬಿಡದೆ ಅನುಸರಿಸುತ್ತಾ ನಮಗಿರುವ ಭಾಗವನ್ನು ಮಾಡತಕ್ಕದ್ದು.
ದಿವ್ಯ ಭಕ್ತಿಯನ್ನು ಬೆಳೆಸುವುದು
12. ದಿವ್ಯಭಕ್ತಿಯನ್ನು ಹೆಚ್ಚು ಪೂರ್ಣವಾಗಿ ಬೆಳೆಸಲು ಏನು ಬೇಕೆಂದು ಪೇತ್ರನು ಹೇಗೆ ಸೂಚಿಸುತ್ತಾನೆ?
12 ಹಾಗಾದರೆ ಈ ದಿವ್ಯ ಭಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ಹೇಗೆ ಬೆಳೆಸಬಲ್ಲಿರಿ? ಅಪೋಸ್ತಲ ಪೇತ್ರನು ಇದಕ್ಕೆ ಸುಳಿವನ್ನು ಕೊಡುತ್ತಾನೆ. 2 ಪೇತ್ರ 1.5, 6 ರಲ್ಲಿ ನಮ್ಮ ನಂಬಿಕೆಗೆ ಕೂಡಿಸಬೇಕಾದ ವಿಷಯಗಳ ಪಟ್ಟಿಯನ್ನು ಕೊಡುವಾಗ ಅವನು ಜ್ಞಾನವನ್ನು ಭಕ್ತಿಗೆ ಮುಂಚಿತವಾಗಿ ಕೊಟ್ಟಿದ್ದಾನೆ. ಇದಕ್ಕೆ ಮೊದಲು ಅದೇ ಅಧ್ಯಾಯದಲ್ಲಿ ಅವನು ಬರೆದದ್ದು: “ಆತನ ದೈವಿಕ ಶಕ್ತಿ, ಜೀವ ಮತ್ತು ದಿವ್ಯ ಭಕ್ತಿಗೆ ಸಂಬಂಧಪಟ್ಟಿರುವ ಸಕಲ ವಿಷಯಗಳನ್ನು ನಮ್ಮನ್ನು ಕರೆದಾತನ ನಿಷ್ಕೃಷ್ಟ ಜ್ಞಾನದ ಮೂಲಕ ನಮಗೆ ಕೊಟ್ಟಿದ್ದಾನೆ.” (2 ಪೇತ್ರ 1:3 NW) ಹೀಗೆ ಪೇತ್ರನು ಯೆಹೋವನ ನಿಷ್ಕೃಷ್ಟ ಜ್ಞಾನದೊಂದಿಗೆ ದಿವ್ಯ ಭಕ್ತಿಯನ್ನು ಜತೆಗೂಡಿಸುತ್ತಾನೆ.
13. ದಿವ್ಯ ಭಕ್ತಿಯನ್ನು ಬೆಳೆಸಲು ನಿಷ್ಕೃಷ್ಟ ಜ್ಞಾನ ಅಗತ್ಯವೇಕೆ?
13 ವಾಸ್ತವವೇನಂದರೆ, ನಿಷ್ಕೃಷ್ಟ ಜ್ಞಾನವಿಲ್ಲದಿದ್ದರೆ ದಿವ್ಯಭಕ್ತಿಯನ್ನು ಬೆಳೆಸುವುದು ಅಸಾಧ್ಯ. ಏಕೆ? ಏಕೆಂದರೆ, ದಿವ್ಯಭಕ್ತಿ ಯೆಹೋವನಿಗೆ ವೈಯಕ್ತಿಕವಾಗಿ ತೋರಿಸುವ ಭಕ್ತಿಯೆಂಬದು ಜ್ಞಾಪಕವಿರಲಿ ಮತ್ತು ಇದು ನಮ್ಮ ಜೀವನ ರೀತಿಯಿಂದ ಪ್ರತ್ಯಕ್ಷವಾಗುತ್ತದೆ. ಆದ್ದರಿಂದ ಯೆಹೋವನ ನಿಷ್ಕೃಷ್ಟ ಜ್ಞಾನ ಅಗತ್ಯ ಏಕೆಂದರೆ ಆತನನ್ನು ವ್ಯಕ್ತಿಪರರಾಗಿ, ಆತ್ಮೀಯವಾಗಿ ತಿಳಿಯುವುದು ಮತ್ತು ಆತನ ಗುಣ ಮತ್ತು ರೀತಿಗಳನ್ನು ತೀರಾ ಪರಿಚಯಿಸಿಕೊಳ್ಳುವುದು ಇದರಲ್ಲಿ ಸೇರಿದೆ. ಇದಕ್ಕೂ ಮಿಗಿಲಾಗಿ, ಆತನನ್ನು ಅನುಕರಿಸಲು ಪ್ರಯತ್ನಿಸುವುದೂ ಇದರಲ್ಲಿ ಸೇರಿದೆ. (ಎಫೆಸ 5:1) ಯೆಹೋವನ ಕುರಿತು ಕಲಿತು ಆತನ ಮಾರ್ಗ ಮತ್ತು ಗುಣಗಳನ್ನು ನಮ್ಮ ಜೀವಿತದಲ್ಲಿ ಪ್ರತಿಬಿಂಬಿಸುವುದರಲ್ಲಿ ನಾವು ಎಷ್ಟು ಹೆಚ್ಚು ಪ್ರಗತಿ ಹೊಂದುತ್ತೇವೂ ಅಷ್ಟು ಹೆಚ್ಚು ನಾವು ಆತನ ಪರಿಚಯವನ್ನು ಮಾಡಿಕೊಳ್ಳುತ್ತೇವೆ. (2 ಕೊರಿಂಥ 3:18; 1 ಯೋಹಾನ 2:3-6 ಹೋಲಿಸಿ.) ಇದು, ಸರದಿಯಾಗಿ, ಯೆಹೋವನ ಮೂಲ ಗುಣಗಳಿಗೆ ಆಳವಾದ ಮಾನ್ಯತೆಯನ್ನು, ಹೆಚ್ಚು ಪೂರ್ಣವಾದ ದಿವ್ಯಭಕ್ತಿಯನ್ನು ಉಂಟುಮಾಡುತ್ತದೆ.
14. ನಿಷ್ಕೃಷ್ಟ ಜ್ಞಾನ ಸಂಪಾದಿಸಲು ನಮ್ಮ ವ್ಯಕ್ತಿಪರ ಅಧ್ಯಯನ ಕಾರ್ಯಕ್ರಮದಲ್ಲಿ ಏನು ಸೇರಿರಬೇಕು ಮತ್ತು ಏಕೆ?
14 ಇಂಥ ನಿಷ್ಕೃಷ್ಟ ಜ್ಞಾನವನ್ನು ನೀವು ಹೇಗೆ ಹೊಂದುವಿರಿ? ಇದಕ್ಕೆ ಸೀಳು ದಾರಿಗಳಿಲ್ಲ. ನಿಷ್ಕೃಷ್ಟ ಜ್ಞಾನವನ್ನು ಸಂಪಾದಿಸಲು ನಾವು ದೇವರ ವಾಕ್ಯವನ್ನೂ ಬೈಬಲಾಧರಿತ ಸಾಹಿತ್ಯಗಳನ್ನೂ ಅಧ್ಯಯನ ಮಾಡುವುದರಲ್ಲಿ ಶ್ರದ್ಧೆ ತೋರಿಸತಕ್ಕದ್ದು. ಇಂಥ ವ್ಯಕ್ತಿಪರ ಅಧ್ಯಯನದಲ್ಲಿ, ದೇವಪ್ರಭುತ್ವ ಶುಶ್ರೂಷೆ ಶಾಲೆಯಲ್ಲಿರುವಂತೆ ಕ್ರಮದ ಬೈಬಲ್ ವಾಚನ ಸೇರಿರಬೇಕು. (ಕೀರ್ತನೆ 1:2) ಬೈಬಲ್ ಯೆಹೋವನು ನಮಗೆ ಕೊಟ್ಟಿರುವ ದಾನವಾಗಿರುವುದರಿಂದ, ವೈಯಕ್ತಿಕ ಬೈಬಲ್ ಅಧ್ಯಯನದ ವಿಷಯದಲ್ಲಿ ನಾವೇನನ್ನು ಮಾಡುತ್ತೇವೂ ಅದು, ನಾವು ಆ ಕೊಡುಗೆಯನ್ನು ಎಷ್ಟು ಮಾನ್ಯಮಾಡುತ್ತೇವೆಂದು ತೋರಿಸುವುದು. ನಿಮ್ಮ ವೈಯಕ್ತಿಕ ಅಧ್ಯಯನದ ರೀತಿಗಳು ಯೆಹೋವನ ಆತ್ಮಿಕ ಒದಗಿಸುವಿಕೆಗಳಿಗೆ ನಿಮಗಿರುವ ಮಾನ್ಯತೆಯ ಆಳದ ಕುರಿತೇನು ತೋರಿಸುತ್ತವೆ?
15, 16. (ಎ) ವ್ಯಕ್ತಿಪರ ಅಧ್ಯಯನಕ್ಕೆ ಆತ್ಮಿಕ ಹಸಿವೆಯನ್ನು ಹೆಚ್ಚಿಸಲು ನಮಗೆ ಯಾವುದು ಸಹಾಯ ಮಾಡಬಲ್ಲದು? (ಬಿ) ವೈಯಕ್ತಿಕ ಬೈಬಲ್ ಅಧ್ಯಯನ ದಿವ್ಯ ಭಕ್ತಿಯ ಬೆಳವಣಿಗೆಯನ್ನು ಫಲಿಸಬೇಕಾದರೆ ದೇವರ ವಾಕ್ಯದ ಭಾಗವನ್ನು ಓದುವಾಗ ನಾವೇನು ಮಾಡಬೇಕು?
15 ಕೆಲವರಿಗೆ ವಾಚನ ಮತ್ತು ಅಧ್ಯಯನ ಸುಲಭವಲ್ಲವೆಂಬದು ಒಪ್ಪತಕ್ಕ ವಿಷಯ. ಆದರೆ ಸಮಯ ಮತ್ತು ಪ್ರಯತ್ನವನ್ನು ವ್ಯಯಿಸುವಲ್ಲಿ, ನೀವು ವೈಯಕ್ತಿಕ ಬೈಬಲ್ ಅಧ್ಯಯನಕ್ಕಾಗಿ ಆತ್ಮಿಕ ಹಸಿವನ್ನು ವರ್ಧಿಸಬಲ್ಲಿರಿ. (1 ಪೇತ್ರ 2:2) ಯೆಹೋವನು ನಿಮ್ಮ ಪರವಾಗಿ ಮಾಡಿರುವುದನ್ನು, ಮಾಡುತ್ತಿರುವುದನ್ನು ಮತ್ತು ಮುಂದೆ ಮಾಡಲಿರುವ ಎಲ್ಲಾ ವಿಷಯಗಳನ್ನೂ ಗಣ್ಯತೆಯಿಂದ ಸ್ಮರಿಸುವಾಗ ಆತನ ವಿಷಯ ಸಾಧ್ಯವಿರುವದೆಲ್ಲವನ್ನು ಕಲಿಯಲು ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುವುದು.—ಕೀರ್ತನೆ 25:4.
16 ಇಂಥ ವ್ಯಕ್ತಿಪರ ಬೈಬಲ್ ಅಧ್ಯಯನ ನಿಮ್ಮ ದಿವ್ಯ ಭಕ್ತಿಯನ್ನು ಬೆಳೆಸಬೇಕಾದರೆ ಕೇವಲ ಪುಟಗಳನ್ನು ಓದಿ ಮುಗಿಸುವದು ಅಥವಾ ಸಮಾಚಾರವನ್ನು ಮನಸ್ಸಿನಲ್ಲಿ ತುಂಬಿಸುವುದು ನಿಮ್ಮ ಅಧ್ಯಯನದ ಗುರಿಯಾಗಬಾರದು. ಬದಲಿಗೆ, ದೇವರ ವಾಕ್ಯದ ಭಾಗವನ್ನು ನೀವು ಓದುವಾಗ ಆ ಭಾಗದ ವಿಷಯ ಚಿಂತಿಸಲು ಸಮಯ ತಕ್ಕೊಂಡು, ‘ಯೆಹೋವನ ಕೋಮಲ ಗುಣಗಳ ಕುರಿತು ಅದೇನು ಕಲಿಸುತ್ತದೆ? ಈ ವಿಷಯಗಳಲ್ಲಿ ನಾನು ಇನ್ನೂ ಹೆಚ್ಚಾಗಿ ಯೆಹೋವನಂತೆ ಹೇಗೆ ವರ್ತಿಸಬಹುದು?’ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳತಕ್ಕದ್ದು.
17. (ಎ) ಹೋಶೇಯನ ಪುಸ್ತಕದಿಂದ ಯೆಹೋವನ ಕರುಣೆಯ ಕುರಿತು ನಾವೇನು ಕಲಿಯತ್ತೇವೆ? (ಬಿ) ಯೆಹೋವನ ಕರುಣೆಯ ಕುರಿತು ಯೋಚಿಸುವುದು ನಮ್ಮ ಮೇಲೆ ಹೇಗೆ ಪರಿಣಾಮ ಬೀರಬೇಕು?
17 ಒಂದು ಉದಾಹರಣೆ ತೆಗೆದುಕೊಳ್ಳಿ. ಸ್ವಲ್ಪ ಸಮಯದ ಹಿಂದೆ, ನಮಗೆ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನೇಮಕವಾದ ಬೈಬಲ್ ವಾಚನ ಹೊಶೇಯ ಪುಸ್ತಕವನ್ನು ಆವರಿಸಿತ್ತು. ಈ ಬೈಬಲ್ ಪುಸ್ತಕವನ್ನು ಓದಿದ ಬಳಿಕ ನೀವು ಹೀಗೆ ಪ್ರಶ್ನಿಸಿಕೊಳ್ಳಬಹುದು: ‘ಈ ಪುಸ್ತಕದಿಂದ ನಾನು ವ್ಯಕ್ತಿಯಾದ ಯೆಹೋವನ ಕುರಿತು, ಆತನ ಗುಣ ಮತ್ತು ರೀತಿಗಳ ಕುರಿತು ಏನನ್ನು ಕಲಿಯುತ್ತೇನೆ?’ ಆ ಬಳಿಕ ಬಂದ ಬೈಬಲ್ ಲೇಖಕರು ಅದನ್ನು ಉಪಯೋಗಿಸಿದ ವಿಧವನ್ನು ನೋಡುವಾಗ, ಹೊಶೇಯನ ಪುಸ್ತಕದಿಂದ ನಾವು ಯೆಹೋವನ ಕರುಣೆಯ ವಿಷಯ ಹೆಚ್ಚು ಕಲಿಯಬಲ್ಲೆವೆಂದು ತೋರಿಸುತ್ತದೆ. (ಮತ್ತಾಯ 9:13ನ್ನು ಹೊಶೇಯ 6:6 ಕ್ಕೆ ಹೋಲಿಸಿ; ರೋಮಾಪುರ 9:22-26ನ್ನು ಹೊಶೇಯ 1:10 ಮತ್ತು 2:21-23ಕ್ಕೆ ಹೋಲಿಸಿ.) ಹೊಶೇಯನು ತನ್ನ ಹೆಂಡತಿ ಗೋಮರಳೊಂದಿಗೆ ವ್ಯವಹರಿಸಿದ ವಿಧಾನ ಯೆಹೋವನು ಇಸ್ರಾಯೇಲ್ಯರಿಗೆ ಕರುಣೆ ತೋರಿಸಲು ಇಚ್ಛೈಸಿದನ್ನು ಚಿತ್ರಿಸುತ್ತದೆ. (ಹೊಶೇಯ 1:2; 3:1-5) ರಕ್ತಪಾತ, ಕಳ್ಳತನ, ಹಾದರ ಮತ್ತು ವಿಗ್ರಹಾರಾಧನೆ ಇಸ್ರಾಯೇಲಿನಲ್ಲಿ ಧಾರಾಳವಾಗಿದ್ದರೂ ಯೆಹೋವನು ‘ಇಸ್ರಾಯೇಲಿನ ಹೃದಯಕ್ಕೆ ಮಾತಾಡಿದನು.’ (ಹೊಶೇಯ 2:13, 14; 4:2) ಯೆಹೋವನು ಕರುಣೆ ತೋರಿಸಲು ಹಂಗಿನವನಾಗಿರದಿದ್ದರೂ ಇಸ್ರಾಯೇಲ್ಯರು ಹೃತ್ಪೂರ್ವಕವಾಗಿ ಪಶ್ಚಾತ್ತಾಪ ತೋರಿಸಿ ತಮ್ಮ ಪಾಪ ಮಾರ್ಗದಿಂದ ತಿರುಗುವಲ್ಲಿ ಅವರಿಗೆ “ಮನ:ಪೂರ್ವಕವಾಗಿ” ಕರುಣೆ ತೋರಿಸುವನು. (ಹೊಶೇಯ 14:4; ಹೊಶೇಯ 3:3 ಹೋಲಿಸಿ.) ನೀವು ಈ ರೀತಿ ಯೆಹೋವನ ಅಸಾಮಾನ್ಯ ಕರುಣೆಯ ಕುರಿತು ಚಿಂತಿಸುವಾಗ ಅದು ನಿಮ್ಮ ಹೃದಯವನ್ನು ಪ್ರೇರಿಸಿ ಆತನಿಗೂ ನಿಮಗೂ ಇರುವ ವೈಯಕ್ತಿಕ ಸಂಬಂಧವನ್ನು ಬಲಪಡಿಸುವುದು.
18. ಹೊಶೇಯ ಪುಸ್ತಕದಲ್ಲಿ ಒತ್ತಿ ಹೇಳಿರುವ ಯೆಹೋವನ ಕರುಣೆಯ ವಿಷಯ ಯೋಚಿಸಿದ ಮೇಲೆ ನೀವೇನು ಪ್ರಶ್ನಿಸಿಕೊಳ್ಳಬಹುದು?
18 ಆದರೆ ಇದಕ್ಕೂ ಹೆಚ್ಚಿನದ್ದು ಅಗತ್ಯ. “ಕರುಣೆಯುಳ್ಳವರು ಧನ್ಯರು. ಅವರು ಕರುಣೆಹೊಂದುವರು” ಎಂದು ಯೇಸು ನುಡಿದನು. (ಮತ್ತಾಯ 5:7) ಆದುದರಿಂದ, ಹೊಶೇಯನ ಪುಸ್ತಕದಲ್ಲಿ ವಿಶೇಷತೆ ಕೊಟ್ಟಿರುವ ಯೆಹೋವನ ಕರುಣೆಯ ಕುರಿತು ಯೋಚಿಸಿದ ಬಳಿಕ ಹೀಗೆ ಪ್ರಶ್ನಿಸಿಕೊಳ್ಳಿರಿ: ‘ನಾನು ಇತರರೊಂದಿಗೆ ವ್ಯವಹರಿಸುವಾಗ ಯೆಹೋವನ ಕರುಣೆಯನ್ನು ಹೇಗೆ ಹೆಚ್ಚು ಉತ್ತಮವಾಗಿ ಅನುಕರಿಸಬಹುದು? ನನ್ನ ವಿರುದ್ಧ ಪಾಪ ಮಾಡಿದ ಅಥವಾ ನನ್ನ ಮನನೋಯಿಸಿದ ಸಹೋದರ ಯಾ ಸಹೋದರಿ ಕ್ಷಮೆ ಕೇಳುವಲ್ಲಿ ನಾನು “ಸಂತೋಷದಿಂದ” ಕ್ಷಮಿಸುತ್ತೇನೋ?’ (ರೋಮಾಪುರ 12:8; ಎಫೆಸ 4:32) ನೀವು ಸಭೆಯಲ್ಲಿ ನೇಮಿತ ಹಿರಿಯನ ಸೇವೆ ಮಾಡುವಲ್ಲಿ ಹೀಗೆ ಪ್ರಶ್ನಿಸಿಕೊಳ್ಳಬಹುದು: ‘ತೀರ್ಮಾನ ನೀಡಬೇಕಾದಾಗ, ಮತ್ತು ಒಬ್ಬನು ಹೃತ್ಪೂರ್ವಕ ಪಶ್ಚಾತ್ತಾಪದ ನಿಜ ಸೂಚನೆಯನ್ನು ತೋರಿಸುವಾಗ “ಕ್ಷಮಿಸಲು ಸಿದ್ಧನಾಗಿರುವ” ಯೆಹೋವನನ್ನು ನಾನು ಹೇಗೆ ಹೆಚ್ಚು ಉತ್ತಮವಾಗಿ ಅನುಕರಿಸಬಲ್ಲೆನು?’ (ಕೀರ್ತನೆ 86:5; ಜ್ಞಾನೋಕ್ತಿ 28:13) ‘ಕರುಣೆಯನ್ನು ತೋರಿಸಲು ಆಧಾರಕ್ಕಾಗಿ ನಾನು ಯಾವುದನ್ನು ಕಂಡುಹಿಡಿಯಬೇಕು?’—ಹೊಶೇಯ 5:4 ಮತ್ತು 7:14 ಹೋಲಿಸಿ.
19, 20. (ಎ) ಬೈಬಲ್ ಅಧ್ಯಯನವನ್ನು ಪೂರ್ಣ ರೀತಿ ಮಾಡುವಲ್ಲಿ ಏನು ಫಲಸಿಗುತ್ತದೆ? (ಬಿ) ದಿವ್ಯ ಭಕ್ತಿಯನ್ನು ಬೆಳೆಸಲು ಇನ್ನೊಂದು ಸಹಾಯ ಯಾವುದು?
19 ಇಂಥ ಪೂರ್ಣ ರೀತಿಯಲ್ಲಿ ಸ್ವಂತ ಬೈಬಲಧ್ಯಯನ ಮಾಡುವಲ್ಲಿ ಅದೆಷ್ಟು ಪ್ರತಿಫಲದಾಯಕ! ಆಗ, ಯೆಹೋವನ ಅಮೂಲ್ಯ ಗುಣಗಳ ನಿಮಿತ್ತ ನಿಮ್ಮ ಹೃದಯವು ಉಬ್ಬುವದು. ಮತ್ತು ಈ ಗುಣಗಳನ್ನು ನಿಮ್ಮ ಜೀವನದಲ್ಲಿ ಎಡೆಬಿಡದೆ ಅನುಕರಿಸಲು ಪ್ರಯತ್ನಿಸುವಾಗ ಆತನಿಗೂ ನಿಮಗೂ ಇರುವ ವೈಯಕ್ತಿಕ ಸಂಬಂಧವನ್ನು ನೀವು ಬಲಗೊಳಿಸುವಿರಿ. ಈ ರೀತಿ ಯೆಹೋವನ ಸಮರ್ಪಿತ, ಸ್ನಾನಿತ ಸೇವಕರಾಗಿ ನೀವು ದಿವ್ಯಭಕ್ತಿಯನ್ನು ಬಿಡದೆ ಅನುಸರಿಸುವಿರಿ.—1 ತಿಮೋಥಿ 6:11.
20 ಈ ಅಮೂಲ್ಯ ಗುಣಗಳನ್ನು ಬೆಳೆಸಲು ಇನ್ನೊಂದು ಸಹಾಯವು ದಿವ್ಯಭಕ್ತಿಯ ಪರಿಪೂರ್ಣ ಮಾದರಿಯಾದ ಯೇಸು ಕ್ರಿಸ್ತನಲ್ಲಿ ಕಂಡು ಬರುತ್ತದೆ. ಯೇಸುವಿನ ಮಾದರಿಯನ್ನು ಅನುಸರಿಸುವದು ದಿವ್ಯ ಭಕ್ತಿಯನ್ನು ಬೆಳೆಸಿ, ತೋರಿಸುವುದರಲ್ಲಿ ಹೇಗೆ ಸಹಾಯ ಮಾಡುವುದು? ಹಿಂಬಾಲಿಸುವ ಲೇಖನವು ಇದನ್ನೂ ಸಂಬಂಧಿತ ಪ್ರಶ್ನೆಗಳನ್ನೂ ಚರ್ಚಿಸುವುದು. (w90 3/1)
[ಅಧ್ಯಯನ ಪ್ರಶ್ನೆಗಳು]
a ಡಿಯೊಕೊ (“ಬಿಡದೆ ಅನುಸರಿಸು”) ಎಂಬ ಗ್ರೀಕ್ ಪದದ ಕುರಿತು, ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನೆರಿ ಆಫ್ ನ್ಯೂ ಟೆಸ್ಟ್ಮೆಂಟ್ ಥಿಯಾಲಜಿ ಹೇಳುವುದೇನಂದರೆ, ಫ್ರೌಢ ಪ್ರಾಚೀನ ಬರಹಗಳಲ್ಲಿ ಈ ಪದಕ್ಕೆ ಅಕ್ಷರಾರ್ಥವಾಗಿ, “ಬೆನ್ನಟ್ಟು, ಬೆಂಬತ್ತಿ ಹೋಗು, ಹಿಂದೆ ಓಡು, ಎಂದೂ . . . ಸಾಂಕೇತಿಕವಾಗಿ, ಆಸಕ್ತಿಯಿಂದ ಒಂದು ವಸ್ತುವನ್ನು ಹಿಂಬಾಲಿಸು, ಸಾಧಿಸಲು ಪ್ರಯತ್ನಿಸು, ಸಂಪಾದಿಸಲು ಪ್ರಯತ್ನಿಸು ಎಂಬ ಅರ್ಥವಿದೆ.”
ನಿಮ್ಮ ಉತ್ತರವೇನು?
◻ ಕ್ರೈಸ್ತ ಜೀವನದಲ್ಲಿ ದೀಕ್ಷಾಸ್ನಾನವು ನೀವು ತಕ್ಕೊಳ್ಳುವ ಕೊನೆಯ ಹೆಜ್ಜೆಯಲ್ಲವೇಕೆ?
◻ “ದಿವ್ಯ ಭಕ್ತಿ” ಯ ಅರ್ಥವೇನು ಮತ್ತು ನೀವದನ್ನು ಹೇಗೆ ರುಜುಪಡಿಸುವಿರಿ?
◻ ದಿವ್ಯ ಭಕ್ತಿಯನ್ನು ಬೆಳೆಸಲು ಶ್ರಮದ ಪ್ರಯತ್ನ ಏಕೆ ಅಗತ್ಯ?
◻ ದಿವ್ಯ ಭಕ್ತಿಯನ್ನು ಹೆಚ್ಚಿನ ಪರಿಮಾಣದಲ್ಲಿ ನೀವು ಹೇಗೆ ಬೆಳೆಸಬಲ್ಲಿರಿ?