ನರಕದ ಮೂಲ
“ನರಕವು,” ನ್ಯೂ ಕ್ಯಾಥಲಿಕ್ ಎನ್ಸೈಕ್ಲೊಪೀಡಿಯಾವು ವಿವರಿಸುವದು “ಶಾಪಗ್ರಸ್ತರ ಸ್ಥಳವನ್ನು ಸೂಚಿಸಲು ಬಳಸಲ್ಪಟ್ಟ” ಒಂದು ಶಬ್ದವಾಗಿದೆ. ಒಂದು ಪ್ರಾಟೆಸ್ಟಂಟ್ ವಿಶ್ವಕೋಶವು ನರಕವು “ದುಷ್ಟರ ಭವಿಷ್ಯದ ಶಿಕ್ಷೆಯ ಸ್ಥಳ”ದೋಪಾದಿ ಅರ್ಥವಿವರಣೆ ಕೊಡುತ್ತದೆ.a ಆದರೆ ಮರಣಾನಂತರದ ಶಿಕ್ಷೆಯ ಸ್ಥಳದ ಕುರಿತಾಗಿರುವ ಇಂಥ ನಂಬಿಕೆಯು ಕೇವಲ ಪ್ರಧಾನ ಕ್ರೈಸ್ತಧರ್ಮದ ಚರ್ಚುಗಳಿಗೆ ಸೀಮಿತವಾಗಿಲ್ಲ. ಕ್ರೈಸ್ತತ್ವವು ಅಸ್ತಿತ್ವಕ್ಕೆ ಬರುವ ಹಲವಾರು ಶತಮಾನಗಳ ಮೊದಲೇ ಇದು ಆರಂಭಗೊಂಡಿತ್ತು.
ಮೆಸಪೊಟೆಮಿಯದ ನರಕ
ಯೇಸುವಿನ ಜನನದ ಸುಮಾರು 2,000 ವರ್ಷಗಳ ಮುಂಚೆ, ಸುಮೇರಿಯನರು ಮತ್ತು ಬಬಿಲೋನ್ಯರು ಹಿಂದೆ ಬರಲಾಗದ ನಾಡು ಎಂದವರು ಕರೆಯುತ್ತಿದ್ದ ಪಾತಾಳವೊಂದರಲ್ಲಿ ನಂಬುತ್ತಿದ್ದರು. ಈ ಪುರಾತನ ನಂಬಿಕೆಯು ಸುಮೇರಿಯನ್ಯರ ಮತು ಅಕ್ಕಾಡಿಯರ “ಗಿಲ್ಗಾಮೇಶನ ಪುರಾಣ ಕಥೆ” ಮತ್ತು “ಪಾತಾಳಲೋಕಕ್ಕೆ ಇಷ್ಟಾರಳ ಇಳಿತ” ಎಂಬ ಖ್ಯಾತ ಕವನಗಳಲ್ಲಿ ಪ್ರತಿಬಿಂಬವಾಗಿರುತ್ತದೆ. ಅವರು ಮೃತರ ಈ ಬೀಡನ್ನು ಕತ್ತಲೆಯ ಮನೆ ಎಂದು ವರ್ಣಿಸುತ್ತಾರೆ, “ಅದರೊಳಗೆ ಪ್ರವೇಶಿಸಿದ ಯಾರೂ ಅಲ್ಲಿಂದ ಹೊರಬರಲಾಗದ ಮನೆ.”
ಅಲ್ಲಿನ ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಕುರಿತು, ಒಂದು ಅಶ್ಶೂರ್ಯ ಗ್ರಂಥವು ತಿಳಿಸುವದೇನಂದರೆ “ಅಧೋಲೋಕವು ಭೀತಿಯಿಂದ ತುಂಬಿಕೊಂಡಿತ್ತು.” ತನಗೆ ಭೂಮಿಯ ಕೆಳಗಿನ ಮೃತರ ಬೀಡಿನ ಒಂದು ದರ್ಶನವು ನೀಡಿಲ್ಪಟ್ಟಿತ್ತು ಎಂದು ನಂಬುವ ಅಶ್ಶೂರ್ಯ ರಾಜಕುವರನು ತಿಳಿಸಿದ್ದೇನಂದರೆ ಅವನು ನೋಡಿದ ವಿಷಯಗಳಿಂದ ಅವನ “ಕಾಲು ತತ್ತರಿಸಿತು.” ಅಧೋಲೋಕದ ಅರಸನಾದ ನೆರ್ಗಲ್ನನ್ನು ವರ್ಣಿಸುತ್ತಾ, ಅವನು ನಮೂದಿಸಿದ್ದು: “ಒಂದು ಭಯಂಕರ ಬಿರುಗಾಳಿಯೋಪಾದಿ, ಅವನು ನನ್ನಡೆಗೆ ಕೋಪೋದ್ರಿಕ್ತನಾಗಿ ಕ್ರೂರ ಕೂಗಿನಿಂದ ಚೀತ್ಕರಿಸಿದನು.”
ಐಗುಪ್ತ್ಯರ ಮತ್ತು ಪೌರಸ್ತ್ಯರ ಧರ್ಮಗಳು
ಪುರಾತನ ಐಗುಪ್ತ್ಯರು ಆತ್ಮದ ಅಮರತ್ವದಲ್ಲಿ ನಂಬುತ್ತಿದ್ದರು ಮತ್ತು ನಂತರದ ಲೋಕದ ಕುರಿತಾಗಿ ಅವರಲ್ಲಿ ತಮ್ಮದೇ ಆದ ಒಂದು ಕಲ್ಪನೆ ಇತ್ತು. ದ ಎನ್ಸೈಕ್ಲೊಪೀಡಿಯಾ ಬ್ರಿಟಾನಿಕ ತಿಳಿಸುವದು: “ಐಗುಪ್ತರ ಶವ ಸಂಸ್ಕಾರದ ಗ್ರಂಥಗಳು, ಮುಂದಿನ ಲೋಕಕ್ಕೆ ಹೋಗುವ ದಾರಿಯು ಅತಿರೇಕ ಅಪಾಯಗಳಿಂದ ಆವರಿಸಲ್ಪಟ್ಟಿದೆ ಎಂದು ಚಿತ್ರಿಸುತ್ತವೆ: ಭೀತಿಹುಟ್ಟಿಸುವ ರಾಕ್ಷಸರು, ಬೆಂಕಿಯ ಕೆರೆಗಳು, ಮಾಯಾವಿದ್ಯೆಯ ಜಾಲ ಸೂತ್ರಗಳನ್ನು ಉಪಯೋಗಿಸದೆ ದಾಟಲಾಗದ ದ್ವಾರಗಳು,ಮತ್ತು ಯಾವನ ಕೆಟ್ಟ ಹೇತುವನ್ನು ಮಾಯಾವಿದ್ಯೆಯಿಂದ ಭಂಗಗೊಳಿಸಬಹುದೋ, ಅಂಥ ಒಬ್ಬ ಕುಟಿಲ ಅಂಬಿಗನು.”
ಇಂಡೊ-ಇರಾನಿಯನ್ ಧರ್ಮಗಳು ಮರಣಾನಂತರದ ಶಿಕ್ಷೆಯ ಮೇಲೆ ಹಲವಾರು ನಂಬಿಕೆಗಳನ್ನು ಆರಂಭಿಸಿದವು, ಹಿಂದುತ್ವದ ಕುರಿತಾಗಿ, ಫ್ರೆಂಚ್ ಎನ್ಸೈಕ್ಲೊಪೀಡಿಯಾ ಯುನಿವರ್ಸಲಿಸ್ (ವಿಶ್ವ ಶಬ್ದಕೋಶ) ತಿಳಿಸುವದು: “ಹಿಂದುಗಳು ಕಲ್ಪಿಸಿಕೊಂಡ 21 ನರಕಗಳ ಬಗ್ಗೆ ಅಸಂಖ್ಯಾತ ವಿವರಣೆಗಳಿವೆ. ಪಾಪಿಗಳು ಕಾಡುಮೃಗಗಳಿಂದ ಮತ್ತು ಹಾವುಗಳಿಂದ ನುಂಗಲ್ಪಡುತ್ತಾರೆ, ಕಷ್ಟಪಟ್ಟು ಸುಡಲಾಗುತ್ತದೆ, ಗರಗಸದಿಂದ ತುಂಡುಗಳನ್ನಾಗಿ ಮಾಡಲಾಗುತ್ತದೆ, ಬಾಯಾರಿಕೆ ಮತ್ತು ಹಸಿವಿನಿಂದ ಹಿಂಸಿಸಲ್ಪಡುತ್ತಾರೆ, ಎಣ್ಣೆಯಲ್ಲಿ ಕುದಿಸಲಾಗುತ್ತದೆ, ಯಾ ಕಬ್ಬಿಣದ ಅಥವಾ ಕಲ್ಲಿನ ಪಾತ್ರೆಗಳಲ್ಲಿ ಪುಡಿಯಾಗಿ ಅರೆಯಲ್ಪಡುತ್ತಾರೆ.”
ಜೈನ ಮತ್ತು ಬೌದ್ಧ ಮತಗಳಲ್ಲಿ, ಎರಡರಲ್ಲಿಯೂ ಪಶ್ಚಾತ್ತಾಪಪಡದ ಪಾಪಿಗಳು ಹಿಂಸಿಸಲ್ಪಡುವ ಕುರಿತಾಗಿ ತಮ್ಮದೇ ವಿವರಣೆಯನ್ನು ಹೊಂದಿವೆ. ಇರಾನ್ ಅಥವಾ ಪರ್ಸಿಯಾದಲ್ಲಿ ಸ್ಥಾಪಿಸಲ್ಪಟ್ಟ ಜೊರೊಸ್ಟ್ರಿಯನಿಸಂನಲ್ಲೂ ಒಂದು ನರಕವಿದೆ—ಪಾಪಿಗಳ ಆತ್ಮಗಳು ಹಿಂಸಿಸಲ್ಪಡುವ ಒಂದು ತಣ್ಣನೆಯ, ದುರ್ಗಂಧದ ತಾಣವಾಗಿದೆ.
ಆಸಕ್ತಿಕರವಾಗಿ, ಐಗುಪ್ತ್ಯ, ಹಿಂದೂ, ಜೈನ, ಬೌದ್ಧ ಮತ್ತು ಜೊರೊಸ್ಟ್ರಿಯನಿಸಂ ವೃತ್ತಾಂತಗಳಲ್ಲಿ ನರಕದ ಯಾತನೆಯು ನಿತ್ಯತೆಯದ್ದಾಗಿರುವದಿಲ್ಲ. ಈ ಧರ್ಮಗಳಿಗನುಸಾರ, ನರಳುವಿಕೆಯ ಒಂದು ಅವಧಿಯ ನಂತರ, ಪಾಪಿಗಳ ಆತ್ಮಗಳು ಇನ್ನೊಂದು ಸ್ಥಳಕ್ಕೆ ಅಥವಾ ಸ್ಥಿತಿಗೆ ಹೋಗುತ್ತವೆ, ಇದು ಮಾನವನ ಅಂತ್ಯಾವಸ್ಥೆಯ ಕುರಿತು ಆ ನಿರ್ದಿಷ್ಟ ಧರ್ಮದ ಕಲ್ಪನೆಗಳ ಮೇಲೆ ಹೊಂದಿಕೊಂಡಿದೆ. ನರಕದ ಕುರಿತಾದ ಅವರ ಅಭಿಪ್ರಾಯಗಳು ಕ್ಯಾಥಲಿಕ್ರ ಶುದ್ಧಿಲೋಕಕ್ಕೆ (ಪರ್ಗೆಟರಿ) ಸರಿದೂಗುತ್ತದೆ.
ಗ್ರೀಕ್, ಇಟ್ರುಸ್ಕಾನ್ ಮತ್ತು ರೋಮನ್ ನರಕಗಳು
ಪುರಾತನ ಗ್ರೀಕರು ಆತ್ಮದ ಒಂದು ಪಾರಾಗುವಿಕೆಯಲ್ಲಿ ನಂಬುತ್ತಿದ್ದರು. (ಸೈಕೇ, ಈ ಶಬ್ದವನ್ನು ಅವರು ಚಿಟ್ಟೆಗೂ ಬಳಸಿದ್ದರು.) ಅವರು ಹೇಡಿಸ್ನ್ನು ಮೃತರ ಒಂದು ರಾಜ್ಯವೆಂದು ಕರೆಯುತ್ತಿದ್ದರು ಮತ್ತು ಅದೇ ಹೆಸರಿನ ಒಬ್ಬ ದೇವನು ಅದರ ಮೇಲೆ ಪ್ರಭುತ್ತ ನಡಿಸುತ್ತಿದ್ದನು ಎಂದುವರು ನಂಬುತ್ತಿದ್ದರು. ಫ್ರೆಂಚ್ ವಿದ್ವಾಂಸ ಸಾಲೊಮೋನ್ ರಿನಾಕ್, ಒರ್ಪಿಯುಸ್—ಎ ಜನರಲ್ ಹಿಸ್ಟರಿ ಆಫ್ ರಿಲಿಜನ್ಸ್ ಎಂಬ ಅವನ ಪುಸ್ತಕದಲ್ಲಿ ಅವನು ಗ್ರೀಕರ ವಿಷಯದಲ್ಲಿ ಬರೆದದ್ದು: “ವಿಸ್ತಾರವಾಗಿ ಹಬ್ಬಿರುವ ಒಂದು ನಂಬಿಕೆ ಅಂದರೆ ಮೃತ ವ್ಯಕ್ತಿಯ ನಾಲಗೆಯ ಮೇಲೆ ಇಡಲ್ಪಟ್ಟ ಒಬೊಲಸ್ [ನಾಣ್ಯ] ವನ್ನು ಬಾಡಿಗೆಯಾಗಿ ವಸೂಲು ಮಾಡುತ್ತಿದ್ದ ಚಾರೊನ್ ಎಂಬ ಮುದಿ ಅಂಬಿಗನ ದೋಣಿಯಲ್ಲಿ ಸ್ಟೈಕ್ಸ್ ನದಿಯನ್ನು ದಾಟಿದ ನಂತರ [ಆತ್ಮವು] ಅಧೋಲೋಕದಲ್ಲಿ ಪ್ರವೇಶ ಪಡೆಯುತ್ತಿತ್ತು. ಆ ಅಧೋಲೋಕದ ಪ್ರದೇಶಗಳಲ್ಲಿ ಅದು ಆ ಸ್ಥಳದ ಮೂರು ನ್ಯಾಯಾಧಿಪತಿಗಳ ಮುಂದೆ ಹಾಜರಾಗುತ್ತಿತ್ತು. . . . ಅದರ ದುಷ್ಕಾರ್ಯಗಳಿಗೆ ದಂಡಿಸಲ್ಪಟ್ಟರೆ, ಅದು ಟಾರ್ಟರಸ್ನಲ್ಲಿ ನರಳಬೇಕಾಗುತ್ತಿತ್ತು. . . . ಬಾಲ್ಯದಲ್ಲಿ ಸತ್ತ ಮಕ್ಕಳ ಲಿಂಬೋ ಎಂಬ ಒಂದು ಬೀಡನ್ನು ಮತ್ತು ಪರ್ಗೆಟರಿಯೆಂಬ, ಆತ್ಮಗಳನ್ನು ಶುದ್ಧೀಕರಿಸುವ ಒಂದು ನಿಯತ ದಂಡನೆಯು ನೀಡಲ್ಪಡುವ ಸ್ಥಳವನ್ನು ಸೃಷ್ಟಿಸಿದರು.” ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯಾಕ್ಕನುಸಾರ, ಟಾರ್ಟರಸ್ನಲ್ಲಿ ಕೊನೆಗೊಳ್ಳುವ ಆತ್ಮಗಳು “ನಿತ್ಯ ಯಾತನೆಯನ್ನು ಅನುಭವಿಸುವವು.”
ಇಟೆಲಿಯಲ್ಲಿ ರೋಮನರ ನಾಗರಿಕತೆಯ ಮೊದಲು ಇದ್ದ ಇಟ್ರಸ್ಕನರು ಮರಣಾನಂತರದ ಶಿಕ್ಷೆಯಲ್ಲಿ ನಂಬುತ್ತಿದ್ದರು. ಡಿಕ್ಷನೆಯರ್ ಡಇಸ್ ರಿಲಿಜನ್ಸ್ (ಧರ್ಮಗಳ ಶಬ್ದಕೋಶ) ತಿಳಿಸುವದು: “ತಮ್ಮ ಸತ್ತವರ ಕುರಿತಾಗಿ, ಇಟ್ರಸ್ಕನರು ತಕ್ಕೊಳ್ಳುತ್ತಿದ್ದ ವಿಪರೀತ ಪರಾಮರಿಕೆಯನ್ನು, ಅಧೋಲೋಕದ ಅವರ ಕಲ್ಪನೆಯಿಂದ ವಿವರಿಸ ಸಾಧ್ಯವಿದೆ. ಬಬಿಲೋನ್ಯರಂತೆ, ಇವುಗಳನ್ನು ಪ್ರೇತ [ಸತ್ತವರ ಪ್ರಾಣಗಳು] ಗಳಿಗಾಗಿರುವ ಯಾತನೆಯ ಮತ್ತು ಹತಾಶೆಯ ಸ್ಥಳಗಳೆಂದು ಅವರು ಪರಿಗಣಿಸುತ್ತಿದ್ದರು. ಅವರ ವಂಶಜರಿಂದ ಕೊಡಲ್ಪಡುವ ಪ್ರಾಯಶ್ಚಿತ್ತಾರ್ಥ ಅರ್ಪಣೆಗಳಿಂದ ಮಾತ್ರವೇ ಅವರಿಗೆ ಉಪಶಮನ ಬರಸಾಧ್ಯವಿತ್ತು.” ಪರಾಮರ್ಶೆಯ ಇನ್ನೊಂದು ಕೃತಿ ಘೋಷಿಸುವದು: “ನರಕದ ಕುರಿತಾದ ಕ್ರಿಸ್ತೀಯ ವರ್ಣಚಿತ್ರಗಳನ್ನು ಪ್ರೇರಿಸಿದ ಭಯಂಕರ ದೃಶ್ಯಗಳನ್ನು ಇಟ್ರಸ್ಕನ್ ಸಮಾಧಿಗಳು ತೋರಿಸುತ್ತವೆ.”
ರೋಮನರು ಇಟ್ರಸ್ಕನರ ನರಕವನ್ನು ದತ್ತಪಡೆದುಕೊಂಡು, ಅದನ್ನು ಒರ್ಕಸ್ ಯಾ ಇನ್ಫರ್ನಸ್ ಎಂದು ಕರೆದರು. ಅಧೋಲೋಕದ ಅರಸನಾದ ಹೇಡಿಸ್ನ ಕುರಿತಾದ ಗ್ರೀಕ್ ಮಿಥ್ಯೆಗಳನ್ನೂ ಅವರು ಎರವು ಪಡೆದರು, ಅವನನ್ನು ಒರ್ಕಸ್ ಯಾ ಪ್ಲುಟೋ ಎಂದು ಕರೆದರು.
ಯೆಹೂದ್ಯರು ಮತ್ತು ಇಬ್ರಿಯ ಶಾಸ್ತ್ರಗ್ರಂಥಗಳು
ಯೇಸುವಿನ ಸಮಯಕ್ಕಿಂತಲೂ ಮೊದಲಿನ ಯೆಹೂದ್ಯರ ಕುರಿತಾಗಿ ಏನು? ಅವರ ಕುರಿತಾಗಿ ನಾವು ಎನ್ಸೈಕ್ಲೊಪೀಡಿಯಾ ಬ್ರಿಟಾನಿಕ (1970) ರಲ್ಲಿ ಓದುವದು: “ಸಾ.ಶ.ಪೂ 5ನೇ ಶತಮಾನದಿಂದ, ಯೆಹೂದ್ಯರು, ಪರ್ಸಿಯನ್ ಮತ್ತು ಗ್ರೀಕರ ಹತ್ತಿರದ ಹೊಕ್ಕುಬಳಕೆ ಹೊಂದಿದ್ದರು, ಇವರಿಬ್ಬರಲ್ಲೂ ಈ ಲೋಕದ ನಂತರದ ಕುರಿತು ಸಾಕಷ್ಟು ಚಲೋ ರೀತಿಯಲ್ಲಿ ಬೆಳೆದಿರುವ ಅಭಿಪ್ರಾಯಗಳಿದ್ದವು. . . . ಯೇಸುವು ಬರುವದರೊಳಗೆ, ದುಷ್ಟ ಆತ್ಮಗಳು ಮರಣಾನಂತರ ಗೆಹೆನ್ನಾದಲ್ಲಿ ಶಿಕ್ಷಿಸಲ್ಪಡುವವು ಎಂಬ ನಂಬಿಕೆಯನ್ನು ಪಡೆದುಕೊಂಡಿದ್ದರು.” ಆದಾಗ್ಯೂ, ಎನ್ಸೈಕ್ಲೊಪೀಡಿಯಾ ಜುಡೆಯಿಕಾ ತಿಳಿಸಿದ್ದು: “ಗೆಹೆನ್ನಾದ ಕುರಿತಾದ ಇತ್ತೀಚಿಗಿನ ಕಲ್ಪನೆಯ ಕುರಿತಾಗಿ ಶಾಸ್ತ್ರವಚನದಲ್ಲಿ ಯಾವ ಸಲಹೆಯೂ ಸಿಗುವದಿಲ್ಲ.”
ಈ ಕೊನೆಯ ಹೇಳಿಕೆಯು ಸರಿಯಾಗಿದೆ. ಸತ್ತ ಮೇಲೆ ಆತ್ಮವೊಂದಕ್ಕೆ ಉರಿಯುತ್ತಿರುವ ನರಕದಲ್ಲಿನ ಶಿಕ್ಷೆಯ ಕುರಿತಾಗಿ ಶಾಸ್ತ್ರವಚನದಲ್ಲಿ ಯಾವ ಸೂಚನೆಯೂ ಇಲ್ಲ. ಈ ಭಯಂಕರ ಬೋಧನೆಯು ಜಲಪ್ರಲಯದ ನಂತರದ, ಅಷ್ಟು ಹಿಂದಿನ ಬಬಿಲೋನ್ಯದ ಧರ್ಮಗಳಿಗೆ ಹೋಗುತ್ತದೆಯೇ ಹೊರತು, ಬೈಬಲಿಗಲ್ಲ. ನರಕದಲ್ಲಿನ ಶಿಕ್ಷೆಯ ಕ್ರೈಸ್ತಧರ್ಮದ ಬೋಧನೆಯು ಪುರಾತನ ಬಬಿಲೋನ್ಯರೊಂದಿಗೆ ಆರಂಭಗೊಂಡಿತು. ಪರ್ಗೆಟರಿಯಲ್ಲಿ ಪರಿಹಾರಕ ನರಳುವಿಕೆಯ ಕ್ಯಾಥಲಿಕರ ಅಭಿಪ್ರಾಯವು ಪುರಾತನ ಐಗುಪ್ತ್ಯರ ಮತ್ತು ಪೌರಸ್ತ್ಯರ ಧರ್ಮಗಳಿಗೆ ತೆರಳುತ್ತದೆ. ಲಿಂಬೊ ಗ್ರೀಕ್ ಪುರಾಣ ಕಥೆಗಳಿಂದ ನಕಲು ಮಾಡಿಲಾಗಿದೆ. ಸತ್ತವರಿಗಾಗಿ ಪ್ರಾರ್ಥನೆಗಳು ಮತ್ತು ಅರ್ಪಣೆಗಳು ಇಟ್ರಸ್ಕನರಿಂದ ಆಚರಿಸಲ್ಪಡುತಿದ್ತವ್ದು.
ಆದರೆ ಮರಣಾನಂತರ ಪ್ರಜ್ಞೆಯಿರುವ ಶಿಕ್ಷೆಯ ಕುರಿತಾದ ಈ ಬೋಧನೆಗಳು ಯಾವ ಮೂಲಭೂತ ಊಹೆಯ ಮೇಲೆ ಆಧರಿತವಾಗಿವೆ? (w89 10/1)
[ಅಧ್ಯಯನ ಪ್ರಶ್ನೆಗಳು]
a ಮೆಕ್ಲಿಂಟಕ್ ಆ್ಯಂಡ್ ಸ್ಟ್ರೊಂಗ್ಸ್ ಎನ್ಸೈಕ್ಲೊಪೀಡಿಯಾ ಆಫ್ ಬಿಬ್ಲಿಕಲ್, ಥಿಯೊಲೊಜಿಕಲ್ ಆ್ಯಂಡ್ ಎಕೀಸ್ಲಿಯಾಸ್ಟಿಕಲ್ ಲಿಟ್ರೆಚರ್, ಸಂಪುಟ 4, ಪುಟ 165.
[ಪುಟ 5 ರಲ್ಲಿರುವ ಚಿತ್ರ]
ಡಾಂಟೆಯ “ಇನ್ಫರ್ನೊ”ನಲ್ಲಿ ವಿವರಿಸಲ್ಪಟ್ಟಂತೆ ಸ್ಟೈಕ್ಸ್ನ್ನು ದಾಟುವದು
[ಕೃಪೆ]
Dover Publications, Inc.