ಮನದಲ್ಲಿಯೂ ದೇಹದಲ್ಲಿಯೂ ಶುದ್ಧರಾಗಿರ್ರಿ
“ನೀವು ನಿಮ್ಮ ದೇಹಗಳನ್ನು ದೇವರಿಗೆ ಪವಿತ್ರವಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ.”—ರೋಮಾಪುರ 12:1.
1. ಅಪೊಸ್ತಲ ಪೌಲನಿಗನುಸಾರ, ಮನಸ್ಸಿನ ಮತ್ತು ದೇಹದ ಶುದ್ಧತೆಯು ಯಾಕೆ ಆವಶ್ಯವು?
ಪವಿತ್ರ ದೇವರಾದ ಯೆಹೋವನನ್ನು ಸೇವಿಸ ಬಯಸುವ ವ್ಯಕ್ತಿಯು ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧವಾಗಿರಲೇಬೇಕು. ಸಮಂಜಸವಾಗಿಯೇ, ಮನಸ್ಸಿನಲ್ಲಿ ಮತ್ತು ದೇಹದಲ್ಲಿ ಶುದ್ಧರಾಗಿರುವುದಕ್ಕೂ ಇದು ಅನ್ವಯಿಸುತ್ತದೆ. ಸದ್ಯದ ವಿಷಯ ವ್ಯವಸ್ಥೆಯ ಇರುವ ಸ್ಥಿತಿಗತಿಯನ್ನು ನೋಡುವಲ್ಲಿ, ಯೆಹೋವನನ್ನು ಸೇವಿಸಲು ಅದರಿಂದ ಹೊರಬರುವ ಜನರು ತಮ್ಮ ಆಲೋಚನೆಗಳಲ್ಲಿ ಮಾತ್ರವಲ್ಲ ವೈಯಕ್ತಿಕ ಹವ್ಯಾಸಗಳಲ್ಲೂ ಬದಲಾವಣೆಗಳನ್ನು ಮಾಡಬೇಕಾಗಿದೆ. ಅಪೊಸ್ತಲ ಪೌಲನು ರೋಮಿನಲ್ಲಿದ್ದ ಕ್ರೈಸ್ತರಿಗೆ ಬರೆದದ್ದು: “ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ—ನೀವು ನಿಮ್ಮ ದೇಹಗಳನ್ನು ದೇವರಿಗೆ ಪವಿತ್ರವಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಗೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳಿರಿ.” (ರೋಮಾಪುರ 12:1, 2) ಮನಸ್ಸು ಮತ್ತು ದೇಹದ ಶುದ್ಧತೆಯಲ್ಲಿ ಯಾವುದೆಲ್ಲಾ ಒಳಗೂಡಿದೆ?
ಮಾನಸಿಕ ಶುದ್ಧತೆ
2. ದುರ್ನಡತೆಯನ್ನು ನಡಿಸಲು ನಮ್ಮ ಕಣ್ಣುಗಳು ಮತ್ತು ಹೃದಯವು ಹೇಗೆ ಕಾರಣವಾಗಬಹುದು, ಮತ್ತು ಇದರಿಂದ ದೂರವಿರಲು ಯಾವುದು ಆವಶ್ಯಕ?
2 ಧರ್ಮಶಾಸ್ತ್ರವು ಕೊಡಲ್ಪಡುವ ಮುಂಚೆಯೂ ನಂಬಿಗಸ್ತ ಯೋಬನು, ನಮ್ಮ ಕಣ್ಣುಗಳು ಮತ್ತು ಹೃದಯವು, ನಾವದನ್ನು ಅಂಕೆಯಲ್ಲಿಡದೆ ಹೋದರೆ, ನಮ್ಮನ್ನು ದುರಾಚಾರಕ್ಕೆ ನಡಿಸಬಲ್ಲವು ಎಂದು ತೋರಿಸಿದ್ದನು. ಅವನಂದದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು? . . . ಒಂದುವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮರುಳುಗೊಂಡಲ್ಲಿ, . . . ಅದು ದುಷ್ಕಾರ್ಯವೇ ಸರಿ. ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.” (ಯೋಬ 31:1, 9-11) ಅಲೆದಾಡುವ ಕಣ್ಣುಗಳೂ ಚಂಚಲತೆಯ ಹೃದಯವೂ ನಮಗಿರುವುದಾದರೆ, ಮಾನಸಿಕ ಶಿಸ್ತು ನಮಗೆ ಬೇಕು, “ಒಳನೋಟವನ್ನು ಉಂಟುಮಾಡುವ ಶಿಕ್ಷೆಯು” ಬೇಕು.—ಜ್ಞಾನೋಕ್ತಿ 1:3.
3, 4. (ಎ) ದಾವೀದ ಮತ್ತು ಬೆತ್ಶೀಬರ ದೃಷ್ಟಾಂತವು ಏನನ್ನು ತೋರಿಸುತ್ತದೆ, ಮತ್ತು ದುರಾಲೋಚನೆಗಳ ಹವ್ಯಾಸವನ್ನು ಬದಲಾಯಿಸಲು ಯಾವುದು ಅತ್ಯಾವಶ್ಯಕ? (ಬಿ) ಕ್ರೈಸ್ತ ಹಿರಿಯರು ವಿಶೇಷವಾಗಿ ಜಾಗರೂಕರಾಗಿರಬೇಕು ಏಕೆ?
3 ಅರಸ ದಾವೀದನ ಕಣ್ಣುಗಳು ಬೆತ್ಶೀಬಳೊಂದಿಗೆ ವ್ಯಭಿಚಾರ ನಡಿಸುವಂತೆ ಅವನನ್ನು ನಡಿಸಿತು. (2 ಸಮುವೇಲ 11:2, 4) ಈ ಉದಾಹರಣೆ ತೋರಿಸುವುದೇನಂದರೆ, ಯೆಹೋವನಿಂದ ಪ್ರಾಮುಖ್ಯವಾಗಿ ಉಪಯೋಗಿಸಲ್ಪಟ್ಟ ಮನುಷ್ಯರು ಸಹಾ, ತಮ್ಮ ಮನಸ್ಸುಗಳನ್ನು ಶಿಸ್ತುಗೊಳಿಸದೆ ಹೋದಲ್ಲಿ, ಪಾಪಕ್ಕೆ ಬೀಳಬಲ್ಲರು. ನಮ್ಮ ಯೋಚನೆ ಹವ್ಯಾಸಗಳನ್ನು ಬದಲಾಯಿಸಲು ಪರಿಶ್ರಮದ ಪ್ರಯತ್ನಗಳು ಬೇಕಾದಾವು. ಅಂಥಾ ಒಂದು ಪ್ರಯತ್ನದಲ್ಲಿ ಯೆಹೋವನ ಸಹಾಯಕ್ಕಾಗಿ ಎಡೆಬಿಡದ ಪ್ರಾರ್ಥನೆಯು ಸೇರಿರತಕ್ಕದ್ದು. ಬೆತ್ಶೀಬಳೊಂದಿಗೆ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪ ಪಟಮ್ಟೇಲೆ, ದಾವೀದನು ಪ್ರಾರ್ಥಿಸಿದ್ದು: “ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.”—ಕೀರ್ತನೆ 51:10.
4 ಕ್ರೈಸ್ತ ಹಿರಿಯರು, ತಮ್ಮನ್ನು ಗಂಭೀರವಾದ ಪಾಪದೊಳಗೆ ಬೀಳಿಸುವ ಕೆಟ್ಟ ಅಭಿಲಾಶೆಗಳಿಗೆ ಇಂಬುಕೊಡದಂತೆ ವಿಶೇಷವಾಗಿ ಜಾಗ್ರತೆ ವಹಿಸಬೇಕು. (ಯಾಕೋಬ 1:14, 15) ಕ್ರೈಸ್ತ ಹಿರಿಯ ತಿಮೊಥಿಗೆ ಪೌಲನು ಬರೆದದ್ದು: “ಶುದ್ಧ ಹೃದಯ, ಒಳ್ಳೇ ಮನಸ್ಸಾಕ್ಷಿ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವ ವಾಕ್ಯೋಪದೇಶದ ಗುರಿಯಾಗಿದೆ.” (1 ತಿಮೊಥಿ 1:5) ಹಿರಿಯನೊಬ್ಬನು ತನ್ನ ಆತ್ಮಿಕ ಕರ್ತವ್ಯಗಳನ್ನು ನಿರ್ವಹಿಸುವುದೂ ಮತ್ತು ಅದೇ ಸಮಯದಲ್ಲಿ, ತನ್ನ ಹೃದಯದಲ್ಲಿ ಅಶುದ್ಧತೆಗಳನ್ನು ನಡಿಸಲು ಪ್ರಚೋದಿಸುವಂತೆ ಕಣ್ಣುಗಳನ್ನು ಅಲೆದಾಡಲು ಬಿಡುವುದೂ ಖಂಡಿತವಾಗಿ ಕಪಟಾಚರಣೆಯು.
5. ಮನಸ್ಸಿನ ಶುದ್ಧತೆಯನ್ನು ಕಾಪಾಡಲಿಕ್ಕಾಗಿ ಯಾವುದರಿಂದ ದೂರವಿರಬೇಕು?
5 ಕ್ರೈಸ್ತರಾದ ನಾವೆಲ್ಲರೂ ಮನಸ್ಸಿನಲ್ಲಿ ಶುದ್ಧರಾಗಿರುವಂತೆ ಕೈಲಾದ ಪ್ರಯತ್ನಗಳನ್ನು ಮಾಡಬೇಕು. ಇದರ ಅರ್ಥ ನಮ್ಮ ಮೇಲೆ ಭ್ರಷ್ಟ ಪ್ರಭಾವವನ್ನು ಹಾಕಬಲ್ಲ ಯಾವುದೇ ಚಲನ ಚಿತ್ರಗಳು, ಟೀವಿ ಕಾರ್ಯಕ್ರಮಗಳು ಮತ್ತು ಪುಸ್ತಕಗಳನ್ನು ದೂರವಿಡುವುದೇ ಅಗಿದೆ. ಮಾನಸಿಕ ಆರೋಗ್ಯದಲ್ಲಿ, ಯಾವುವು “ಸತ್ಯವೂ . . . ನ್ಯಾಯವೂ . . . ಶುದ್ಧವೂ” ಆಗಿವೆಯೋ ಅವುಗಳಲ್ಲಿ ನಿರತರಾಗಿರಲು ಮನಃಪೂರ್ವಕ ಪ್ರಯತ್ನಗಳನ್ನು ಮಾಡುವುದು ಒಳಗೂಡಿದೆ. ಅಪೊಸ್ತಲ ಪೌಲನು ಕೂಡಿಸುವುದು: “ಯಾವುದು ಸದ್ಗುಣವಾಗಿದೆಯೋ ಯಾವುದು ಕೀರ್ತಿಗೆ ಯೋಗ್ಯವೂ ಅವೆಲ್ಲವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.”—ಫಿಲಿಪ್ಪಿಯ 4:8.
ವೈಯಕ್ತಿಕ ನೈರ್ಮಲ್ಯ
6. (ಎ) ವೈಯಕ್ತಿಕ ಹಾಗೂ ಸಾಮೂಹಿಕ ನೈರ್ಮಲ್ಯವು ಇಸ್ರಾಯೇಲಲ್ಲಿ ಅವಶ್ಯವಾಗಿತ್ತೆಂಬದಕ್ಕೆ ಯಾಜಕಕಾಂಡ ಪುಸ್ತಕದಿಂದ ದೃಷ್ಟಾಂತಗಳನ್ನು ಕೊಡಿರಿ. (ಬಿ) ಅಂತಹ ನಿಯಮಗಳ ಉದ್ದೇಶವು ಏನಾಗಿತ್ತು?
6 “ನೈರ್ಮಲ್ಯವು ದೇವತ್ವಕ್ಕೇ ದ್ವಿತೀಯ” ಎಂದು ಹೇಳುವದಿದೆ. ನೈತಿಕವಾಗಿ ಮತ್ತು ದೈಹಿಕವಾಗಿ ಶುದ್ಧನಾಗಿರುವಾತನು ದೈವಿಕನಾಗಿ ಇರದಿರಲೂ ಬಹುದು ನಿಜ. ಆದರೆ, ದೈವಿಕ ವ್ಯಕ್ತಿಯು ಅವಶ್ಯವಾಗಿ, ನೈತಿಕವಾಗಿಯೂ ದೈಹಿಕವಾಗಿಯೂ ಶುದ್ಧವಾಗಿರಲೇ ಬೇಕು. ಮೋಶೆಯ ಧರ್ಮ ಶಾಸ್ತ್ರವು ರೋಗಪೀಡಿತ ಮನೆಗಳ ಶುದ್ಧತೆಯನ್ನು ಮತ್ತು ಹಲವಾರು ವಿಧದ ಅಶುದ್ಧತೆಗಳಲ್ಲಿ ವೈಯಕ್ತಿಕ ಸ್ನಾನದ ವಿಷಯದಲ್ಲಿ ನಿಖರವಾದ ಸೂಚನೆಗಳನ್ನು ಕೊಟ್ಟಿದೆ. (ಯಾಜಕಕಾಂಡ ಅಧ್ಯಾಯ 14 ಮತ್ತು 15 ನೋಡಿ.) ಇಸ್ರಾಯೇಲ್ಯ ಸಮೂಹದವರೆಲ್ಲರೂ ತಮ್ಮನ್ನು ಪರಿಶುದ್ಧರಾಗಿಡುವಂತೆ ಆವಶ್ಯಕ ಮಾಡಲ್ಪಟ್ಟಿತ್ತು. (ಯಾಜಕಕಾಂಡ 19:2) ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಪುಸ್ತಕವು ಹೇಳುವುದು: “ದೇವರು (ಇಸ್ರಾಯೇಲ್ಯರಿಗೆ) ಕೊಟ್ಟ ಆಹಾರಪಥ್ಯ, ನೈರ್ಮಲ್ಯ ಮತ್ತು ನೈತಿಕತೆಯ ವಿಷಯವಾದ ನಿಯಮಗಳು, ಅವರು ದೇವರಿಗೆ ಪ್ರತ್ಯೇಕಿತರೂ ಪವಿತ್ರರೂ ಆಗಿದ್ದ ನೆನಪನ್ನು ಸದಾ ಕೊಟ್ಟಿತ್ತು.”—ಸಂಪುಟ 1, ಪುಟ 1128.
7. ಜನರೋಪಾದಿ ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಏನು ಸತ್ಯ, ಆದರೆ ಕೆಲವು ಸಂಚಾರ ಮೇಲ್ವಿಚಾರಕರು ಏನನ್ನು ವರದಿಸಿದ್ದಾರೆ?
7 ಯೆಹೋವನ ಸಾಕ್ಷಿಗಳು ಒಂದು ಜನರೋಪಾದಿ, ಬಬಿಲೋನ್ಯ ಸುಳ್ಳು ಧರ್ಮದ ಯಾವುದೇ ಅಶುದ್ಧತೆಯಿಂದ ಮುಕ್ತರೂ, ತಮ್ಮ ನಡುವೆ ನೈತಿಕ ಅಶುದ್ಧತೆಯನ್ನು ಮನ್ನಿಸದವರೂ ಆಗಿದ್ದರೂ ಕೆಲವರು ತಮ್ಮ ವೈಯಕ್ತಿಕ ನೈರ್ಮಲ್ಯವನ್ನು ಮತ್ತು ಶುಚಿರುಚಿಯನ್ನು ದುರ್ಲಕ್ಷ್ಯ ಮಾಡುತ್ತಾರೆಂದು ಸಂಚಾರ ಮೇಲ್ವಿಚಾರಕರ ವರದಿಗಳು ಸೂಚಿಸುತ್ತವೆ. ಈ ಸಂಬಂಧದಲ್ಲಿಯೂ ನಾವು ಶುದ್ಧರೆಂದು ಹೇಗೆ ಖಚಿತಪಡಿಸಬಲ್ಲೆವು? ಎಲ್ಲಾ ಕ್ರೈಸ್ತ ಮನೆಗಳಿಗಾಗಿ ಒಂದು ಆದರ್ಶ ನಮೂನೆಯು, “ದೇವರ ಮನೆ” ಎಂದರ್ಥವಿರುವ ಬೇತೇಲ್ ಆಗಿರುತ್ತದೆ.
8, 9. (ಎ) ಬೇತೇಲ್ ಕುಟುಂಬದ ಎಲ್ಲಾ ಹೊಸ ಸದಸ್ಯರಿಗೆ ಯಾವ ಸೂಚನೆಯನ್ನು ಕೊಡಲಾಗಿದೆ? (ಬಿ) ಬೇತೇಲ್ ಮನೆಗಳಲ್ಲಿ ಅನುಸರಿಸಲಾಗುವ ಯಾವ ತತ್ವಗಳು ಪ್ರತಿಯೊಂದು ಕ್ರೈಸ್ತ ಮನೆವಾರ್ತೆಯನ್ನು ಆಳಬೇಕು?
8 ವಾಚ್ಟವರ್ ಸೊಸೈಟಿಯ ಮುಖ್ಯ ಕಾರ್ಯಾಲಯದ ಬೇತೇಲ್ ಕುಟುಂಬದಲ್ಲಿ ಅಥವಾ ಲೋಕದಾದ್ಯಂತವಿರುವ ಅದರ ಯಾವುದೇ ಶಾಖೆಗಳಲ್ಲಿನ ಬೇತೇಲ್ ಕುಟುಂಬದಲ್ಲಿ ವ್ಯಕ್ತಿಯೊಬ್ಬನು ಸದಸ್ಯನಾಗಿ ಪರಿಣಮಿಸುವಾಗ, ಆಡಳಿತಾ ಮಂಡಲಿಯಿಂದ ತಯಾರಿಸಲ್ಪಟ್ಟ ಒಂದು ಬ್ರೊಷೂರ್ ಅವನಿಗೆ ಕೊಡಲಾಗುತ್ತದೆ. ಅವನ ವೈಯಕ್ತಿಕ ಹವ್ಯಾಸಗಳಲ್ಲಿ ಮತ್ತು ಕೆಲಸದ ಹವ್ಯಾಸಗಳಲ್ಲಿ ಅವನಿಂದ ಏನನ್ನು ಅಪೇಕ್ಷಿಸಲಾಗುತ್ತದೆಂದು ಆ ಪುಸ್ತಕವು ವಿವರಿಸುತ್ತದೆ. “ಕೋಣೆಯ ಪರಾಮರಿಕೆ ಮತ್ತು ಸ್ವಚ್ಛತೆ” ಮೇಲ್ಬರಹದ ಕೆಳಗೆ ಅದನ್ನುವುದು: “ಬೇತೇಲ್ ಜೀವಿತವು ಉತ್ಕೃಷ್ಟವಾದ ದೈಹಿಕ, ನೈತಿಕ ಮತ್ತು ಆತ್ಮಿಕ ಮಟ್ಟಗಳನ್ನು ಕಾಪಾಡುವಂತೆ ಕೇಳಿಕೊಳ್ಳುತ್ತದೆ. ಬೇತೇಲಿನಲ್ಲಿರುವ ಪ್ರತಿಯೊಬ್ಬನು ತನ್ನನ್ನು ಮತ್ತು ತನ್ನ ಕೋಣೆಯನ್ನು ಶುದ್ಧವಾಗಿಡುವದಕ್ಕೆ ಲಕ್ಷ್ಯಕೊಡಬೇಕು. ಇದು ಒಳ್ಳೇ ಆರೋಗ್ಯಕ್ಕೆ ನೆರವಾಗುತ್ತದೆ. ಅಶುಚಿಯಾಗಿರಲು ಯಾವನಿಗೂ ಯಾವ ಕಾರಣವೂ ಇರುವುದಿಲ್ಲ. ದಿನದಿನವೂ ಸ್ನಾನಮಾಡುವುದು ಒಳ್ಳೇ ಅಭ್ಯಾಸ. . . . ಊಟಕ್ಕೆ ಮುಂಚೆ ಕೈತೊಳೆಯುವುದು ಅತ್ಯಾವಶ್ಯಕ ಮತ್ತು ಇದು ಎಲ್ಲರಿಂದ ಅಪೇಕ್ಷಿಸಲ್ಪಡುತ್ತದೆ. ನಿಮ್ಮ ರೂಮ್ ಸಂಗಾತಿ ಮತ್ತು ಗೃಹಕಾರ್ಯಸ್ಥನ ಪರಿಗಣನೆಯಲ್ಲಿ, ವಾಶ್ಬೇಸಿನ್ ಅಥವಾ ಟಬ್ನ್ನು ಪ್ರತಿ ಉಪಯೋಗದ ನಂತರ ತೊಳೆದಿಡಬೇಕು.
9 ಬೇತೇಲ್ ಮನೆಗಳಲ್ಲಿ ಕಕ್ಕಸುಗಳ ಶುಚಿಗೆ ಅತ್ಯಂತ ಹೆಚ್ಚಿನ ಗಮನ ಕೊಡಲಾಗುತ್ತದೆ, ಮತ್ತು ಅವನ್ನುಪಯೋಗಿಸುವವರು ತಮ್ಮ ಕೈಗಳನ್ನು ಕೂಡಲೇ ತೊಳೆಯ ಶಕ್ತರಾಗುವಂತೆ ಏರ್ಪಾಡು ಇದೆ. ಕುಟುಂಬದ ಸದಸ್ಯರು ಕಕ್ಕಸನ್ನು ಬಳಸಿದ ಬಳಿಕ ಶುಚಿಯಾಗಿ ಬಿಟ್ಟುಹೋಗುವಂತೆ ಅಪೇಕ್ಷಿಸಲ್ಪಡುತ್ತಾರೆ, ಕಕ್ಕಸಿಗೆ ಸರಿಯಾಗಿ ನೀರು ಹರಿಸಿದೆಯೇ ಎಂದು ಪರೀಕ್ಷಿಸಿ ನೋಡುವುದೆಂದು ಇದರರ್ಥ. ಇದು ನಂತರ ಬಳಸುವವನಿಗೆ ಅಥವಾ ಗೃಹಕಾರ್ಯಸ್ಥರಿಗೆ ಪರಿಗಣನೆಯನ್ನು ತೋರಿಸುತ್ತದೆ. ಇಂತಹ ಉತ್ತಮವಾದ, ಪ್ರೀತಿಯುಕ್ತ ತತ್ವಗಳು ಪ್ರತಿಯೊಂದು ಕ್ರೈಸ್ತ ಮನೆವಾರ್ತೆಯನ್ನು ಆಳಬೇಡವೇ?
10. (ಎ) ಒಬ್ಬನು ತನ್ನನ್ನು ಮತ್ತು ತನ್ನ ಮಕ್ಕಳನ್ನು ನಿರ್ಮಲವಾಗಿಡಲು ಒಂದು ಪರಿಷ್ಕಾರ ಸ್ನಾನಗೃಹದ ಅವಶ್ಯವಿಲ್ಲವೇಕೆ? (ಬಿ) ಇಸ್ರಾಯೇಲಿನಲ್ಲಿ ಯಾವ ನಿಯಮಗಳು ಒಳ್ಳೇ ಆರೋಗ್ಯಕ್ಕೆ ಹಿತಕರವಾಗಿದ್ದವು, ಮತ್ತು ಯೆಹೋವನ ಜನರು ಇದರಿಂದ ಯಾವ ಪಾಠವನ್ನು ಕಲಿಯಬಹುದು?
10 ಸಹಜವಾಗಿಯೇ ದೇಶ ದೇಶಗಳಲ್ಲಿ ಪರಿಸ್ಥಿತಿಗಳು ಬೇರೆ ಬೇರೆಯಾಗಿವೆ ನಿಜ. ಕೆಲವು ಸ್ಥಳಗಳಲ್ಲಿ ಸ್ನಾನದ ತೊಟ್ಟಿ ಅಥವಾ ವೃಷ್ಟಿಸ್ನಾನದ ಏರ್ಪಾಡು ಸಹಾ ಮನೆಗಳಲ್ಲಿ ಇರುವುದಿಲ್ಲ. ಆದರೂ, ಸಾಮಾನ್ಯವಾಗಿ ಕ್ರೈಸ್ತ ಪುರುಷರು ಮತ್ತು ಸ್ತ್ರೀಯರು ತಮ್ಮ ಸ್ವಂತ ದೇಹಗಳನ್ನು ಮತ್ತು ತಮ್ಮ ಮಕ್ಕಳನ್ನು ಶುಚಿಯಾಗಿಡಲು ಸಾಕಷ್ಟು ಸಾಬೂನನ್ನು ಮತ್ತು ನೀರನ್ನು ಪಡೆಯಶಕ್ತರು.a ಲೋಕದಲ್ಲೆಲ್ಲೂ ಇರುವ ಬಹಳಷ್ಟು ಮನೆಗಳಿಗೆ ಚರಂಡಿ ವ್ಯವಸ್ಥೆಯ ಜೋಡಿತವಿಲ್ಲ. ಆದರೆ ರೊಚ್ಚನ್ನು ಸುರಕ್ಷಿತವಾಗಿ ಮಣ್ಣಿನಿಂದ ಮುಚ್ಚಿಬಿಡಬಹುದು, ಯುದ್ಧ ಪಾಳೆಯದಲ್ಲಿರುವಾಗಲೂ ಹಾಗೆ ಮಾಡುವಂತೆ ಇಸ್ರಾಯೇಲ್ಯರನ್ನು ಅವಶ್ಯಪಡಿಸಲಾಗಿತ್ತು. (ಧರ್ಮೋಪದೇಶಕಾಂಡ 23:12, 13) ಅದಲ್ಲದೆ ಪದೇ ಪದೇ ಬಟ್ಟೆಗೆಳ ಒಗೆತ ಮತ್ತು ಸ್ನಾನಗಳನ್ನು, ತೀವ್ರವಾದ ರೋಗ ಪರೀಕ್ಷೆ ಮತ್ತು ಚಿಕಿತ್ಸೆಯನ್ನು, ಶವಗಳ ಯೋಗ್ಯ ಸಂಸ್ಕಾರಗಳನ್ನು ಮತ್ತು ಶುದ್ಧವಾದ ನೀರು ಮತ್ತು ಆಹಾರ ಸಂಗ್ರಹಗಳನ್ನು ಕಾಪಾಡಲು ಯೆಹೋವನ ಪಾಳೆಯ ನೇಮವು ಅವಶ್ಯಪಡಿಸಿತ್ತು. ಈ ಎಲ್ಲಾ ನಿಯಮಗಳು ರಾಷ್ಟ್ರದ ಆರೋಗ್ಯಕ್ಕೆ ನೆರವಾದವು. ಇಂದಿನ ಯೆಹೋವನ ಜನರು ತಮ್ಮ ವ್ಯಕ್ತಿಪರ ಹವ್ಯಾಸಗಳಲ್ಲಿ ಏನೂ ಕಡಿಮೆ ನೈರ್ಮಲ್ಯವುಳ್ಳವರಾಗಿರಬೇಕೇ?—ರೋಮಾಪುರ 15:4.
ಚೊಕ್ಕ ಮನೆಗಳು ಮತ್ತು ಕಾರುಗಳು
11. (ಎ) ಅತ್ಯಂತ ದೈನ್ಯವಾದ ಕ್ರೈಸ್ತ ಮನೆಯ ವಿಷಯದಲ್ಲೂ ಯಾವುದು ಸತ್ಯವಾಗಿರಬೇಕು? (ಬಿ) ಬೇತೇಲ್ ಕುಟುಂಬದ ಎಲ್ಲಾ ಸದಸ್ಯರಿಂದ ಯಾವ ಸಹಕಾರವು ಆವಶ್ಯಕವಾಗಿದೆ?
11 ನಮ್ಮ ಮನೆಗಳು, ಅವೆಷ್ಟೇ ದೈನ್ಯವಾಗಿದ್ದರೂ, ಓರಣವಾಗಿಯೂ ಶುಚಿಯಾಗಿಯೂ ಇರಬಲ್ಲವು. ಆದರೆ ಇದಕ್ಕೆ ಕುಟುಂಬ ಮಟ್ಟದಲ್ಲೇ ಒಳ್ಳೇ ವ್ಯವಸ್ಥಾಪನೆ ಆವಶ್ಯಕ. ಒಬ್ಬ ಕ್ರೈಸ್ತ ಮಾತೆಯು ಸಾರುವ ಕಾರ್ಯವೇ ಮುಂತಾದ ಆತ್ಮಿಕ ಕಾರ್ಯಗಳಲ್ಲಿ ಆದಷ್ಟು ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತಾಳೆ, ಆದ್ದರಿಂದ, ಕುಟುಂಬ ಸದಸ್ಯರು ಸುತ್ತಲೂ ಚೆಲ್ಲಾಪಿಲ್ಲಾಯಾಗಿ ಬಿಸಾಡುವ ಬಟ್ಟೆಬರೆ, ಪುಸ್ತಕಗಳು, ಪೇಪರು, ಪತ್ರಿಕೆ ಮುಂತಾದವನ್ನು ಪ್ರತಿದಿನವೂ ಅಣಿಗೊಳಿಸುವುದರಲ್ಲಿ ಆಕೆ ಸಮಯ ಕಳೆಯುವಂತಿರಬಾರದು. ಬೇತೇಲಿನಲ್ಲಿ, ಮನೆಯನ್ನು ಶುಚಿಮಾಡುವ ಗೃಹಕಾರ್ಯಸ್ಥರು ಇದ್ದಾರಾದರೂ, ಕುಟುಂಬದ ಪ್ರತಿ ಸದಸ್ಯನು ಬೆಳಿಗ್ಗೆ ತನ್ನ ಹಾಸಿಗೆಯನ್ನು ಸರಿಯಾಗಿ ಹಾಸಿ, ಕೋಣೆಯನ್ನು ಚೊಕ್ಕವಾಗಿ ಬಿಟ್ಟುಹೋಗುವಂತೆ ಅಪೇಕ್ಷಿಸಲ್ಪಡುತ್ತಾನೆ. ನಮ್ಮ ಶುಚಿಯಾದ ಮತ್ತು ನೀಟಾದ ರಾಜ್ಯ ಸಭಾಗೃಹಗಳನ್ನು ಮತ್ತು ಎಸೆಂಬ್ಲಿ ಹೋಲ್ಗಳನ್ನು ನಾವೆಲ್ಲರೂ ಗಣ್ಯಮಾಡುತ್ತೇವೆ. ನಮ್ಮ ಮನೆಗಳು ಸಹಾ ನಾವು ಯೆಹೋವನ ಶುದ್ಧ ಮತ್ತು ಪವಿತ್ರಜನರ ಒಂದು ಭಾಗವೆಂಬದನ್ನು ರುಜುಪಡಿಸುವಂತಾಗಲಿ!
12, 13. (ಎ) ಯೆಹೋವನ ಸೇವೆಯಲ್ಲಿ ಉಪಯೋಗಿಸಲಾಗುವ ಮೋಟಾರುಕಾರುಗಳ ಕುರಿತು ಯಾವ ಸೂಚನೆ ಕೊಡಲಾಗಿದೆ, ಇದಕ್ಕಾಗಿ ಬಹಳ ಸಮಯ ವ್ಯಯಿಸುವ ಅಗತ್ಯವಿಲ್ಲವೇಕೆ? (ಬಿ) ದೈಹಿಕವಾಗಿ ಶುದ್ಧರಾಗಿರಲು ಹಾಗೂ ಚೊಕ್ಕಟವಾದ ಮನೆಗಳೂ ಕಾರುಗಳೂ ಇರುವುದಕ್ಕೆ ಯಾವ ಶಾಸ್ತ್ರೀಯ ಕಾರಣ ಅಲ್ಲಿದೆ?
12 ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚಿನವರು, ಇಂದು ಕೂಟಗಳಿಗೆ ಮತ್ತು ಕ್ಷೇತ್ರಸೇವೆಗೆ ಹೋಗುವಾಗ ಮೋಟಾರು ಕಾರುಗಳನ್ನು ಉಪಯೋಗಿಸುತ್ತಾರೆ. ಕೆಲವು ದೇಶಗಳಲ್ಲಾದರೋ ಒಂದು ಕಾರು ಯೆಹೋವನ ಸೇವೆಗಾಗಿ ಅತ್ಯಾವಶ್ಯಕವಾಗಿ ಬೇಕು. ಹಾಗಿರುವಲ್ಲಿ ಅದನ್ನು, ನಮ್ಮ ಮನೆಯನ್ನು ಹೇಗೋ ಹಾಗೆ ನೀಟಾಗಿ ಮತ್ತು ಶುಚಿಯಾಗಿ ಇಡತಕ್ಕದ್ದು. ಆದರೆ ಕೆಲವು ಲೌಕಿಕ ಜನರು ಮಾಡುವಂತೆ ಕ್ರೈಸ್ತರು ತಮ್ಮ ಕಾರುಗಳನ್ನು ಮುದ್ದಿಸುವುದರಲ್ಲಿ ಅತಿರೇಕ ಸಮಯ ಕಳೆಯ ಸಾಧ್ಯವಿಲ್ಲ. ಆದರೂ ಅತಿರೇಕಕ್ಕೆ ಹೋಗದೆಯೇ ಯೆಹೋವನ ಸೇವಕರು ತಮ್ಮ ಮೋಟಾರುಗಳನ್ನು ಸಮಂಜಸ ಶುಚಿಯಾಗಿ ಮತ್ತು ಒಳ್ಳೇ ಕ್ರಮದಲ್ಲಿ ಇಡಲು ಪ್ರಯತ್ನಿಸತಕ್ಕದ್ದು. ಕೆಲವು ದೇಶಗಳ ಪೆಟ್ರೋಲ್ ಅಂಗಡಿಗಳಲ್ಲಿ ಕಾರುಗಳ ತೊಳೆತಕ್ಕೆ ಹೆಚ್ಚು ಖರ್ಚೂ ಇಲ್ಲ, ಸಮಯವೂ ತಗಲದು. ಹತ್ತೇ ನಿಮಿಷಗಳ ಕೆಲಸವು ಕಾರಿನ ಒಳಭಾಗವನ್ನು ಶುಚಿಮಾಡಿ ಶುಭ್ರಗೊಳಿಸಲು ಸಾಕು. ಹಿರಿಯರು ಮತ್ತು ಶುಶ್ರೂಷೆ ಸೇವಕರು ವಿಶೇಷವಾಗಿ ಈ ವಿಷಯದಲ್ಲಿ ಮಾದರಿಗಳಾಗಿರಬೇಕು. ಯಾಕಂದರೆ ಪ್ರಚಾರಕ ಗುಂಪುಗಳನ್ನು ಕ್ಷೇತ್ರಸೇವೆಗೆ ಸಾಗಿಸಲು ಅವರು ಹೆಚ್ಚಾಗಿ ತಮ್ಮ ಕಾರುಗಳನ್ನು ಉಪಯೋಗಿಸುತ್ತಾರೆ. ಒಬ್ಬ ಆಸಕ್ತ ವ್ಯಕ್ತಿಯನ್ನು ಕೂಟಕ್ಕೊಯ್ಯಲು ಪ್ರಚಾರಕನು ತನ್ನ ಕಾರನ್ನುಪಯೋಗಿಸುವಾಗ ಕಾರು ಕೊಳೆಯಾಗಿಯೂ ಅಸ್ತವ್ಯಸ್ತವಾಗಿಯೂ ಇದ್ದಲ್ಲಿ, ಖಂಡಿತವಾಗಿಯೂ ಅದು ಒಳ್ಳೇ ಸಾಕ್ಷಿಯಲ್ಲ.
13 ಹೀಗೆ ದೈಹಿಕವಾಗಿ ಶುದ್ಧವಾಗಿರುವ ಹಾಗೂ ಶುಚಿಯೂ ಚೊಕ್ಕಟವೂ ಆದ ಮನೆ ಮತ್ತು ವಾಹನಗಳಿರುವ ನಮ್ಮ ಪ್ರಯತ್ನದಲ್ಲಿ ನಾವು ಯೆಹೋವನನ್ನು, ಆತನ ಶುದ್ಧ ಸಂಸ್ಥೆಯ ಸದಸ್ಯರೋಪಾದಿ ಗೌರವಿಸುವೆವು.
ಆತ್ಮಿಕ ಬಲಿಗಳನ್ನು ಅರ್ಪಿಸುವಾಗ ಶುದ್ಧತೆ
14. ಇಸ್ರಾಯೇಲಿನಲ್ಲಿ ವಿಧಿವತ್ತಾದ ಶುದ್ಧತೆಯನ್ನು ಯಾವ ನಿಯಮಗಳು ಆಳಿದವು ಮತ್ತು ಈ ನಿಯಮಗಳು ಏನನ್ನು ಸೂಚಿಸುತ್ತವೆ?
14 ಇಸ್ರಾಯೇಲ್ಯರಲ್ಲಿ ಆರಾಧನೆಯ ಸಂಬಂಧದಲ್ಲಿ ವಿಧಿವತ್ತಾದ ಶುದ್ಧತೆಯು ಅವಶ್ಯವಾಗಿತ್ತು, ಇಲ್ಲವಾದರೆ ಮರಣ ಶಿಕ್ಷೆಯು ವಿಧಿಸಲ್ಪಡುತ್ತಿತ್ತು. ಯೆಹೋವನು ಮೋಶೆ ಮತ್ತು ಆರೋನನಿಗೆ ಹೇಳಿದ್ದು: “ಇಸ್ರಾಯೇಲ್ಯರು ಅಶುದ್ಧತೆಗೆ ದೂರವಾಗಿರುವಂತೆ ನೀನು ಅವರನ್ನು ಈ ರೀತಿಯಾಗಿ ಕಾಪಾಡಬೇಕು. ಅವರು ಅಪವಿತ್ರರಾಗಿದ್ದು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡಿದರೆ ನಾಶವಾದಾರು.” (ಯಾಜಕಕಾಂಡ 15:31) ದೋಷ ಪರಿಹಾರಕ ದಿನದಲ್ಲಿ ಮಹಾ ಯಾಜಕನು ಎರಡು ಸಾರಿ ಸ್ನಾನ ಮಾಡಬೇಕಾಗಿತ್ತು. (ಯಾಜಕಕಾಂಡ 16:4, 23, 24) ಗುಡಾರದ ಬಳಿಯಲ್ಲಿದ್ದ ತಾಮ್ರದ ಬೋಗುಣಿಯು ಮತ್ತು ಅನಂತರ, ದೇವಾಲಯದಲ್ಲಿ ಇಡಲ್ಪಟ್ಟ ತಾಮ್ರದ ಗಂಗಾಳ, ಯಾಜಕರು ಯೆಹೋವನಿಗೆ ಬಲಿಯನ್ನರ್ಪಿಸುವ ಮುಂಚೆ ಕೈಕಾಲುಗಳನ್ನು ತೊಳೆಯಲಿಕ್ಕಾಗಿ ನೀರನ್ನು ಒದಗಿಸಿತ್ತು. (ವಿಮೋಚನಕಾಂಡ 30:17-21; 2 ಪೂರ್ವಕಾಲ 4:6) ಸರ್ವ ಸಾಮಾನ್ಯ ಇಸ್ರಾಯೇಲ್ಯ ಜನತೆಯ ಕುರಿತೇನು? ಅವರು ಯಾವುದೇ ಕಾರಣದಿಂದಾಗಿ ವಿಧಿವತ್ತಾಗಿ ಅಶುದ್ಧರಾದರೆ ಶುದ್ಧೀಕರಣದ ಆವಶ್ಯಕತೆಗಳನ್ನು ನೆರವೇರಿಸುವ ತನಕ ಆರಾಧನೆಯಲ್ಲಿ ಭಾಗ ವಹಿಸಲು ಬರ ಬಾರದಿತ್ತು. (ಅರಣ್ಯಕಾಂಡ 19:11-22) ಪರಿಶುದ್ಧ ದೇವರಾದ ಯೆಹೋವನನ್ನು ಆರಾಧಿಸುವವರೆಲ್ಲರಿಂದ ದೈಹಿಕ ಶುದ್ಧತೆಯು ಅವಶ್ಯ ಪಡಿಸಲ್ಪಟ್ಟಿತ್ತೆದು ಇವೆಲ್ಲವೂ ಒತ್ತಿ ಹೇಳುತ್ತವೆ.
15. ಪ್ರಾಣಿ ಬಲಿಗಳು ಇನ್ನು ಮುಂದೆ ಆವಶ್ಯವಿಲ್ಲವೇಕೆ, ಆದರೆ ಯಾವ ಪ್ರಶ್ನೆಗಳು ಏಳುತ್ತವೆ?
15 ಯೆಹೋವನ ಜನರು ಇಂದು ಐಹಿಕ ದೇವಾಲಯಗಳಲ್ಲಿ ಪ್ರಾಣಿ ಬಲಿಗಳನ್ನು ಅರ್ಪಿಸಲು ಕೇಳಲ್ಪಡುವದಿಲ್ಲ ನಿಜ. ಧರ್ಮಶಾಸ್ತ್ರದ ಕೆಳಗಿನ ಬಲಿಗಳು, “ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆ ಮಾಡಿದ” ಮೂಲಕ ಸ್ಥಾನಪಲ್ಲಟಗೊಂಡವು. (ಇಬ್ರಿಯ 10:8-10) ನಾವು “ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತೇವೆ.” (ಯೋಹಾನ 4:23, 24) ಆದರೆ ಇದರ ಅರ್ಥವು ನಮ್ಮ ಪವಿತ್ರ ದೇವರಾದ ಯೆಹೋವನಿಗೆ ಯಾವ ಬಲಿಗಳನ್ನೂ ನಮಗೆ ಅರ್ಪಿಸಲಿಕ್ಕಿಲ್ಲವೆಂದೋ? ಮತ್ತು ಇಸ್ರಾಯೇಲ್ಯರಿಂದ ಅವಶ್ಯಪಡಿಸಲ್ಪಟ್ಟ ಶುದ್ಧತೆಗಿಂತ ತುಸುವಾದರೂ ಕಡಿಮೆ ನಮ್ಮಿಂದ ಕೇಳಲ್ಪಡುತ್ತದೋ?
16. ಮಲಾಕಿಯ 3:3, 4ರ ಪ್ರವಾದನೆಯು ಅಭಿಷಿಕ್ತ ಕ್ರೈಸ್ತರ ಮೇಲೆ 1918 ರಿಂದ ಹೇಗೆ ನೆರವೇರುತ್ತದೆ, ಮತ್ತು ಯಾವ ಸಮರ್ಪಕವಾದ ಅರ್ಪಣೆಗಳನ್ನು ಅವರು ಯೆಹೋವನಿಗೆ ಅರ್ಪಿಸಶಕ್ತರು?
16 ಅಂತ್ಯಕಾಲದಲ್ಲಿ ಭೂಮಿಯಲ್ಲಿರುವ ಅಭಿಷಿಕ್ತ ಉಳಿಕೆಯವರು ಆಲಯದ ಸೇವೆಗಾಗಿ ಶೋಧಿತರಾಗಿ, ಶುದ್ಧೀಕರಣಕ್ಕೆ ಒಳಪಡುವರೆಂದು ಮಲಾಕಿಯನ ಪ್ರವಾದನೆಯು ತೋರಿಸುತ್ತದೆ. ಈ ಶುದ್ಧೀಕರಣವು 1918 ರಲ್ಲಿ ಆರಂಭಿಸಿತೆಂದು ಇತಿಹಾಸವು ತೋರಿಸುತ್ತದೆ. 1919ರಿಂದ ಅಭಿಷಿಕ್ತ ಉಳಿಕೆಯವರು, “ಸದ್ಧರ್ಮಿಗಳಾಗಿ ಯೆಹೋವನಿಗೆ ನೈವೇದ್ಯವನ್ನು ತಂದೊಪ್ಪಿಸುವರು” ಮತ್ತು ಅವರ ನೈವೇದ್ಯಗಳು “ಯೆಹೋವನಿಗೆ ಮೆಚ್ಚಿಕೆಯಾಗಿದ್ದದ್ದು” ಆಗಿರುತ್ತವೆ. (ಮಲಾಕಿಯ 3:3, 4) ಹೀಗೆ ಅವರು, “ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯ ಯಜ್ಞಗಳನ್ನು ಅರ್ಪಿಸುವುದಕ್ಕೆ” ಶಕ್ತರಾಗಿದ್ದಾರೆ. (1 ಪೇತ್ರ 2:5) ಅಪೊಸ್ತಲ ಪೌಲನು ಬರೆದದ್ದು: “ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನ ನಾಮವನ್ನು ಬಾಯಿಂದ ಬಹಿರಂಗ ಅರಿಕೆ ಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.”—ಇಬ್ರಿಯರಿಗೆ 13:15.
17. “ಮಹಾ ಸಮೂಹ”ದವರು ರಾಜ ಯಾಜಕತ್ವದ ಒಂದು ಭಾಗವಾಗಿರದಿದ್ದರೂ ಅವರು, ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧರಾಗಿರಬೇಕು ಏಕೆ?
17 ಅಭಿಷಿಕ್ತ ಉಳಿಕೆಯವರಂತೆ ಆಲಯದ ಸೇವೆಗಾಗಿ “ಮಹಾ ಸಮೂಹದವರು” ಕರೆಯಲ್ಪಡದಿದ್ದರೂ, ಆತ್ಮಿಕ ಆಲಯದ ಐಹಿಕ ಅಂಗಣದಲ್ಲಿ ಅವರು “ಹಗಲು ರಾತ್ರಿ [ಯೆಹೋವನಿಗೆ] ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ. (ಪ್ರಕಟನೆ 7:9, 10, 15) ಗುಡಾರದ ಆರಾಧನೆಯಲ್ಲಿ, ಅನಂತರ, ದೇವಾಲಯದ ಆರಾಧನೆಯಲ್ಲಿ ಭಾಗವಹಿಸಬೇಕಾದರೆ ಯಾಜಕ್ಯೇತರ ಇಸ್ರಾಯೇಲ್ಯರು ವಿಧಿವತ್ತಾಗಿ ಶುದ್ಧರಾಗಿರಬೇಕಿತ್ತೆಂಬದನ್ನು ನೆನಪಿನಲ್ಲಿಡಿರಿ. ತದ್ರೀತಿಯಲ್ಲಿ ಬೇರೆ ಕುರಿಗಳ ಮಹಾ ಸಮೂಹವು, ಆಲಯದಲ್ಲಿ ಸೇವೆ ಮಾಡ ಬಯಸುವುದಾದರೆ ಮತ್ತು “ಆತನ ನಾಮದ ಬಹಿರಂಗ ಅರಿಕೆಯನ್ನು” ಮಾಡುವ ಮೂಲಕ ‘ದೇವರಿಗೆ ಸ್ತುತಿಯಜ್ಞವನ್ನು ಅರ್ಪಿಸುವುದರಲ್ಲಿ’ ಉಳಿಕೆಯವರೊಂದಿಗೆ ಜತೆಗೂಡ ಬಯಸುವುದಾದರೆ ಅವರು ಶಾರೀರಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧರಾಗಿರಲೇಬೇಕು.
ಕೂಟಗಳಿಗೆ ಮತ್ತು ಕ್ಷೇತ್ರಸೇವೆಗಾಗಿ ಶುದ್ಧತೆ ಮತ್ತು ನೀಟು
18. ಬಹಿರಂಗ ಸಾಕ್ಷಿ ಕಾರ್ಯದಲ್ಲಿ ಭಾಗವಹಿಸುವಾಗ ಮತ್ತು ಕೂಟಗಳಿಗೆ ಹಾಜರಾಗುವಾಗ ವೈಯಕ್ತಿಕ ನೈರ್ಮಲ್ಯ, ಉಡುಪು ಮತ್ತು ಪಾದರಕ್ಷೆಯ ಕುರಿತು ನಾವು ಯಾವ ಲಕ್ಷ್ಯಕೊಡಬೇಕು?
18 ವ್ಯಾವಹಾರ್ಯ ರೀತಿಯಲ್ಲಿ ಇದರ ಅರ್ಥವೇನು? ಏನಂದರೆ, ದೈಹಿಕ ಶುದ್ಧತೆಯೂ ಯೋಗ್ಯವಾದ ಉಡುಪೂ ಇಲ್ಲದೆ ಮನೆ ಮನೆಯ ಶುಶ್ರೂಷೆಯಲ್ಲಿ, ಬೀದಿಗಳಲ್ಲಿ ಅಥವಾ ಬೇರೊಬ್ಬರ ಮನೆಯಲ್ಲಿ ನಾವು ಯೆಹೋವನನ್ನು ಪ್ರತಿನಿಧಿಸುವುದು ಅತನಿಗೆ ಅತ್ಯಂತ ಅನುಚಿತವೂ ಅವಮಾನಕರವೂ ಆಗಿದೆ. ಆದ್ದರಿಂದ ಅಂಥಾ ವಿಷಯಗಳಲ್ಲಿ ನಾವು ಕ್ರಮತಪ್ಪಬಾರದು. ಯೆಹೋವನ ನಾಮವನ್ನು ಧರಿಸಿರುವ ಶುಶ್ರೂಷಕರಿಗೆ ಒಪ್ಪುವ ರೀತಿಯಲ್ಲಿ ನಾವು ಕ್ರಿಯೆಗೈಯುವಂತೆ, ನಾವದಕ್ಕೆ ಜಾಗರೂಕತೆಯ ಗಮನವನ್ನು ಕೊಡಬೇಕು. ನಮ್ಮ ಉಡುಪುಗಳು ಬೆಲೆಯುಳ್ಳದ್ದಾಗಿರುವ ಅಗತ್ಯವಿಲ್ಲ, ಆದರೆ ಅವು ಶುಚಿಯೂ, ರುಚಿಕರವೂ ಸಭ್ಯವೂ ಆಗಿರತಕ್ಕದ್ದು. ನಮ್ಮ ಪಾದರಕ್ಷೆಯು ಸಹಾ ಒಳ್ಳೇ ದುರುಸ್ತಿಯೂ ಒಳ್ಳೇ ತೋರಿಕೆಯೂ ಇರುವಂಥಾದ್ದಾಗಿರಬೇಕು. ತದ್ರೀತಿಯಲ್ಲಿ ಎಲ್ಲಾ ಕೂಟಗಳಲ್ಲಿ, ಸಭಾ ಪುಸ್ತಕಭ್ಯಾಸದಲ್ಲಿ ಕೂಡಾ, ನಮ್ಮ ದೇಹವು ನಿರ್ಮಲವಾಗಿರಬೇಕು, ಮತ್ತು ನಮ್ಮ ಉಡುಪು ಸಭ್ಯವೂ ನೀಟೂ ಆಗಿರತಕ್ಕದ್ದು.
19. ಕ್ರೈಸ್ತ ಶುಶ್ರೂಷಕರೋಪಾದಿ ನಮ್ಮ ನಿರ್ಮಲವೂ ನೀಟೂ ಆದ ತೋರಿಕೆಯಿಂದ ಯಾವ ಆತ್ಮಿಕ ಪ್ರಯೋಜನಗಳು ಫಲಿಸುತ್ತವೆ?
19 ಸಾಕ್ಷಿಕೊಡುವ ಕಾರ್ಯದಲ್ಲಿ ಮತ್ತು ನಮ್ಮ ಕೂಟಗಳಲ್ಲಿ ನಮ್ಮ ನಿರ್ಮಲವಾದ ಮತ್ತು ನೀಟಾದ ತೋರಿಕೆಯು, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಅಲಂಕಾರವಾಗಿರುವ” ಒಂದು ವಿಧಾನವು. (ತೀತ 2:10) ಅದು ತಾನೇ ಒಂದು ಸಾಕ್ಷಿಯಾಗಿರುವುದು. ನಮ್ಮ ಶುದ್ಧತೆ ಮತ್ತು ನೀಟುತನದಿಂದ ಅನೇಕರು ಪ್ರಭಾವಿತರಾಗಿದ್ದಾರೆ ಮತ್ತು ಇದು ಅವರನ್ನು ನೀತಿಯ ಹೊಸ ಆಕಾಶ ಮತ್ತು ಶುದ್ಧೀಕರಿಸಿದ ಹೊಸ ಭೂಮಿಯ ಕುರಿತಾದ ಯೆಹೋವನ ಆಶ್ಚರ್ಯಕರ ಉದ್ದೇಶಗಳ ನಮ್ಮ ಸಂದೇಶಕ್ಕೆ ಕಿವಿಗೊಡುವಂತೆ ಪ್ರೇರೇಪಿಸಿದೆ.—2 ಪೇತ್ರ 3:13.
20. ಮನದಲ್ಲಿಯೂ ದೇಹದಲ್ಲಿಯೂ ಶುದ್ಧರಾಗಿರುವುದರಿಂದ ಇನ್ನು ಯಾವ ಒಳ್ಳೇ ಫಲವು ಫಲಿಸುತ್ತದೆ?
20 ಯೆಹೋವನ ಶುದ್ಧವಾದ ಹೊಸ ವ್ಯವಸ್ಥೆಯ ಸಮೀಪಿಸುತ್ತಿರಲಾಗಿ ನಾವೆಲ್ಲರೂ, ನಮ್ಮ ಯೋಚನೆಗಳಲ್ಲಿ ಮತ್ತು ವೈಯಕ್ತಿಕ ಹವ್ಯಾಸಗಳಲ್ಲಿ ಬದಲಾವಣೆ ಮಾಡುವ ಅಗತ್ಯವಿದೆಯೇ ಎಂದು ನೋಡುವುದಕ್ಕೆ ನಮ್ಮನ್ನು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. ಪೌಲನು ಬರೆದದ್ದು: “ನಮ್ಮ ನರಭಾವದ ಬಲಹೀನತೆಯ ದೆಸೆಯಿಂದ ಲೋಕ ರೀತಿಯಾಗಿ ಮಾತಾಡುತ್ತೇನೆ. ಅಧರ್ಮ ಮಾಡುವದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ ಅಧರ್ಮಕ್ಕೂ ದಾಸರಾಗಿ ಒಪ್ಪಿಸಿಕೊಟ್ಟಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರಾಗುವುದಕ್ಕಾಗಿ ಒಪ್ಪಿಸಿಕೊಡಿರಿ.” (ರೋಮಾಪುರ 6:19) ಆತ್ಮಿಕ ಶುದ್ಧತೆ ಮತ್ತು ಶಾರೀರಿಕ ಶುದ್ಧತೆಯು ಒಳ್ಳೇ ಫಲವನ್ನು ಈಗಲೂ, “ಪರಿಶುದ್ಧರಾಗುವ ಫಲವನ್ನು . . . ಮತ್ತು ಕಡೆಗೆ ನಿತ್ಯಜೀವವನ್ನು, ಒದಗಿಸುತ್ತದೆ.” (ರೋಮಾಪುರ 6:22) ಹೀಗೆ ನಾವು, ‘ನಮ್ಮ ದೇಹಗಳನ್ನು ದೇವರಿಗೆ ಪವಿತ್ರವಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸುವಾಗ’ ಮನಸ್ಸಿನಲ್ಲಿಯೂ ದೇಹದಲ್ಲಿಯೂ ಶುದ್ಧರಾಗಿ ಇರೋಣ.—ರೋಮಾಪುರ 12:1. (w89 6/1)
[ಅಧ್ಯಯನ ಪ್ರಶ್ನೆಗಳು]
a ಕಷ್ಟದ ಪರಿಸ್ಥಿತಿಗಳ ಕೆಳಗೆ ನೈರ್ಮಲ್ಯದ ಕುರಿತಾದ ವ್ಯಾವಹಾರ್ಯ ಸಲಹೆಗಳಿಗಾಗಿ ಸಪ್ಟಂಬರ 22, 1988ರ ಅವೇಕ್!ನ ಪುಟ 8—11ರಲ್ಲಿರುವ ಲೇಖನ “ನೈರ್ಮಲ್ಯದ ಪಂಥಾಹ್ವಾನವನ್ನು ನಿಭಾಯಿಸುವುದು” ನೋಡಿರಿ.
ನೆನಪು ಕೊಡುವ ವಿಷಯಗಳು
◻ ದುರ್ನಡತೆಯನ್ನು ನಡಿಸಲು ನಮ್ಮ ಕಣ್ಣುಗಳು ಮತ್ತು ಹೃದಯವು ಹೇಗೆ ಕಾರಣವಾಗಬಹುದು?
◻ ಸಾಮುದಾಯಿಕ ಮತ್ತು ವೈಯಕ್ತಿಕ ನೈರ್ಮಲ್ಯದಲ್ಲಿ ಯೆಹೋವನ ನಿಯಮವನ್ನು ಪಾಲಿಸಿದಾಗ ಇಸ್ರಾಯೇಲ್ಯರು ಯಾವ ಪ್ರಯೋಜನವನ್ನು ಪಡೆದರು?
◻ ಬೇತೇಲ್ ಮನೆಗಳಲ್ಲಿ ಪಾಲಿಸಲ್ಪಡುವ ಯಾವ ತತ್ವಗಳು ಪ್ರತಿಯೊಂದು ಕ್ರೈಸ್ತ ಮನೆವಾರ್ತೆಯನ್ನು ಆಳಬೇಕು?
◻ ವಿಶೇಷವಾಗಿ ಯಾವಾಗ, ನಮ್ಮ ತೋರಿಕೆಯ ಕುರಿತು ನಾವು ಜಾಗ್ರತೆ ವಹಿಸಬೇಕು?
◻ ತಮ್ಮ ಮನೆಗಳನ್ನೂ ಕಾರುಗಳನ್ನೂ ಶುಚಿಯಾಗಿಯೂ ಚೊಕ್ಕಟವಾಗಿಯೂ ಇಡಲು ಯೆಹೋವನ ಸೇವಕರಿಗೆ ಯಾವ ಆತ್ಮಿಕ ಕಾರಣಗಳಿವೆ?
[ಪುಟ 15 ರಲ್ಲಿರುವ ಚಿತ್ರ]
“ಬೇತೇಲ್ ಜೀವಿತವು ಉತ್ಕೃಷ್ಟ ಶಾರೀರಿಕ, ನೈತಿಕ ಮತ್ತು ಆತ್ಮಿಕ ಮಟ್ಟಗಳನ್ನು ಕೇಳಿಕೊಳ್ಳುತ್ತದೆ”
[ಪುಟ 16 ರಲ್ಲಿರುವ ಚಿತ್ರ]
ತಾಯಿಯೊಬ್ಬಳು ಪ್ರತಿದಿನ ಅವಿಚಾರಿ ಕುಟುಂಬ ಸದಸ್ಯರ ಹಿಂದುಗಡೆ ಪ್ರತಿದಿನ ಶುಚಿಮಾಡುತ್ತಾ ಇರಲು ಸಮಯ ಕಳೆಯಬೇಕೋ?
[ಪುಟ 17 ರಲ್ಲಿರುವ ಚಿತ್ರ]
ಹತ್ತೇ ನಿಮಿಷಗಳಲ್ಲಿ, ಕಾರಿನ ಒಳಗಡೆಯನ್ನು ಶುಚಿಮಾಡುವದರಲ್ಲಿ ಬಹಳಷ್ಟನ್ನು ಸಾಧಿಸಬಹುದು