ನೂತನ ಲೋಕ—ಪ್ರಮೋದವನ ಪುನ: ಸಂಪಾದಿಸಲ್ಪಡುತ್ತದೆ
ಒಬ್ಬ ನವ ವಿವಾಹ ದಂಪತಿಗಳಿಗೆ ಒಂದು ಸುಂದರವಾದ ಬೀಡು ಇತ್ತು. ಹೂಗಳು ತುಂಬಿದ ದೊಡ್ಡ ತೋಟ, ಮರಗಳು, ಪಕ್ಷಿಗಳು ಮತ್ತು ಪ್ರಾಣಿಗಳು—ಇವೆಲ್ಲ ಅಲ್ಲಿದ್ದವು. ಅದೊಂದು ಪ್ರಮೋದವನವಾಗಿತ್ತು. ಅವರು ಪ್ರೀತಿಸುತ್ತಿದ್ದ ತಂದೆಯ ಉದಾರ ದಾನವದಾಗಿತ್ತು! ಆದರೆ ಅವರು ಅಂದಿನಿಂದ ಎಂದೆಂದಿಗೂ ಸಂತೋಷದಿಂದ ಜೀವಿಸಿದರೋ? ಇಲ್ಲ. ಸ್ವಲ್ಪ ಸಮಯದಲ್ಲಿ ಅವರು ತಮ್ಮ ಬೀಡನ್ನು ಕಳಕೊಂಡರು. ಆದರೆ ಏಕೆ?
ಆ ಪ್ರಮೋದವನವಾದ ಬೀಡಿನ ನಷ್ಟಕ್ಕೆ ಕಾರಣ ಅವರು ತಮ್ಮ ಪಿತನು ತಮಗಾಗಿ ಮಾಡಿದ ವಿಷಯಗಳನ್ನು ಗಣ್ಯಮಾಡದೆ ಇದ್ದದ್ದೇ. ಇನ್ನೂ ಕೆಟ್ಟ ವಿಷಯವೇನಂದರೆ ಅವರು ಅವಿಧೇಯತೆ ತೋರಿಸಿದರು. ಅವರ ಸಮಗ್ರತೆಯನ್ನು ಪರೀಕ್ಷಿಸಲಿಕ್ಕಾಗಿ ಅವರ ಪಿತನು ಅವರು ಒಂದನ್ನು ಬಿಟ್ಟು ಬೇರೆ ಪ್ರತಿಯೊಂದು ಮರದ ಹಣ್ಣನ್ನು ತಿನ್ನ ಬಹುದೆಂದು ಹೇಳಿದನು. ಆದರೆ ಅವರು ಪ್ರತಿಭಟನೆಯಿಂದ ಅವಿಧೇಯತೆ ತೋರಿಸಿ ಆ ಹಣ್ಣನ್ನು ತಿಂದರು.—ಆದಿಕಾಂಡ 2:15-17; 3.6, 7.
ಒಂದು ಚಿಕ್ಕ ಪಾತಕವೆಂದು ತೋರಿಬರುವ ಆ ವಿಷಯಕ್ಕೆ ಇಂತಹ ಶಿಕ್ಷೆಯೇಕೆ? ಪ್ರಾಯಶ: ಒಂದು ದೃಷ್ಟಾಂತ ಆ ಪ್ರಶ್ನೆಗೆ ಉತ್ತರ ನೀಡಲು ಸಹಾಯ ಮಾಡೀತು. ಒಬ್ಬ ದೊಡ್ಡ ಅಂಗಡಿಯ ಯಜಮಾನನು ಅವಶ್ಯ ಯೋಗ್ಯತೆಗಳಿರುವ ಒಬ್ಬ ಮ್ಯಾನೇಜರನನ್ನು ಕೆಲಸಕ್ಕೆ ಹಿಡಿಯುತ್ತಾನೆ. ಈ ಹೊಸ ಕೆಲಸಗಾರನು ಭರವಸಯೋಗ್ಯನೆಂದು ನಿಶ್ಚಯ ಮಾಡಲು ಯಜಮಾನನು ಅವನಿಗೆ ಬೀಗದ ಕೈಗಳನ್ನು ಕೊಟ್ಟು ಯಾವುದೇ ಪರಿಸ್ಥಿತಿ ಬಂದರೂ ಒಂದು ಡ್ರಾವರನ್ನು ತೆರೆಯಲೇ ಬಾರದೆಂದು ಹೇಳುತ್ತಾನೆ. ತೆರೆಯುವಲ್ಲಿ ಅವನನ್ನು ಕೆಲಸದಿಂದ ತೆಗೆಯಲಾಗುವದು. ಒಬ್ಬನೇ ಇರುವಾಗ ಮ್ಯಾನೇಜರನು ಕುತೂಹಲದಿಂದ ಆ ಡ್ರಾವರನ್ನು ತೆರೆಯುತ್ತಾನೆ. ಯಜಮಾನನು ಅವನನ್ನು ಆ ಕೃತ್ಯಮಾಡುವಾಗಲೇ ಹಿಡಿದು ಕೆಲಸದಿಂದ ತೆಗೆದು ಬಿಡುತ್ತಾನೆ.
ಪ್ರಮೋದವನದ ನಷ್ಟ
ಇದು ಹೊಸ ದಂಪತಿಗಳಿಗೆ ಹೇಗೆ ಸಂಬಂಧಿಸುತ್ತದೆ? ಅವರು ನಿಶೇಧಿತ ಫಲವನ್ನು ತಿಂದ ಕಾರಣ ಅವರ ತಂದೆ ಅವರನ್ನು ಆ ಸುಂದರ ಬೀಡಿನಿಂದ ಹೊರಡಿಸಿಬಿಟ್ಟನು. ಆ ಪ್ರಮೋದವನದ ಹೊರಗಡೆ ಮುಳ್ಳು ಗಿಡಗಳು ಆ ದಂಪತಿಗಳಾದ ಆದಾಮ ಮತ್ತು ಹವ್ವರನ್ನು ಎದುರಿಸಿದವು. ಪರಿಪೂರ್ಣರಾಗಿರುವ ಬದಲಿಗೆ ಅವರೀಗ ಅಪೂರ್ಣರಾದರು. ಸಾರ್ವಕಾಲಿಕವಾಗಿ ಜೀವಿಸುವ ಬದಲಿಗೆ ಅವರು ಸಾಯತೊಡಗಿದರು. ಅವರ ಮಕ್ಕಳು ಅವರ ಅಪೂರ್ಣತೆ, ಪಾಪಪೂರ್ಣತೆ ಮತ್ತು ಮರಣವನ್ನು ಅನುವಂಶಿಕವಾಗಿ ಪಡೆದರು.—ರೋಮಾಪುರ 5:12.
ಕ್ರಮೇಣ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನು. . .ಯೆಹೋವನು” ಕಂಡನು. ಹೀಗೆ, ನೋಹನ ದಿನಗಳಲ್ಲಿ ಭೂಮಿಯನ್ನು ಶುದ್ಧೀಕರಿಸಲು ದೇವರು ಜಲಪ್ರಲಯವನ್ನು ಉಪಯೋಗಿಸಿದನು. ಅದರಲ್ಲಿ ಯಾವ ಮಾನವರಾದರೋ ಪಾರಾದರೋ? ಕೇವಲ ಎಂಟು ಜನ—ನೋಹ, ಅವನ ಪುತ್ರರು ಮತ್ತು ಅವರ ಪತ್ನಿಯರು ಮಾತ್ರ ಪಾರಾದರು. ಯಾವುದನ್ನು ಬೇರೊಂದು ಲೋಕಕ್ಕೆ ಮಾಡಿದ ಪ್ರಯಾಣವೆಂದು ಕರೆಯಬಹುದೋ ಅದಕ್ಕೆ ಸಿದ್ಧರಾಗಲು ಅವರು ದೇವರ ನಿಯಮಗಳನ್ನನುಸರಿಸಿ, ಅನೇಕ ತರದ ಪ್ರಾಣಿಗಳನ್ನು ಮತ್ತು ಸಾಕಷ್ಟು ಆಹಾರ ಸಾಮಗ್ರಿಗಳನ್ನು ಹೊರುವಷ್ಟು ದೊಡ್ಡದಾದ ಒಂದು ತೇಲು ಪೆಟ್ಟಿಗೆಯನ್ನು ಕಟ್ಟಿದರು. (ಆದಿಕಾಂಡ 6:5-7, 13-22) ಆದಾಮ ಮತ್ತು ಹವ್ವರು ಸಂತೋಷಿಸಿದ್ದ ಉದ್ಯಾನವನ ಜಲಪ್ರಲಯದಲ್ಲಿ ನಾಶವಾಯಿತು. ಹೀಗೆ, ಪ್ರಮೋದವನ ನಷ್ಟವಾಯಿತು; ಆದರೆ ಇದು ಸಾರ್ವಕಾಲಿಕ ನಷ್ಟವಾಗಿರಲಿಲ್ಲ!
ಪ್ರಮೋದವನವನ್ನು ಪುನ: ಸಂಪಾದಿಸುವುದು
ಶತಮಾನಗಳ ಬಳಿಕ ದೇವರು ತನ್ನ ಏಕಜಾತ ಪುತ್ರನನ್ನು ಅವನು ಮಾನವ ಸಂತತಿಯನ್ನು ಪಾಪ ಮತ್ತು ಮರಣದಿಂದ ವಿಮೋಚಿಸುವರೆ ಭೂಮಿಗೆ ಕಳುಹಿಸಿದನು. ಇದರಿಂದ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರು ನಿತ್ಯಜೀವವನ್ನು ಸಂಪಾದಿಸುವರೆ ಸಾಧ್ಯವಾಯಿತು. (ಯೋಹಾನ 3.16) ಪ್ರಮೋದವನ ಪುನ: ಸಂಪಾದಿಸಲ್ಪಡುವದೆಂದೂ ಯೇಸು ಮುಂತಿಳಿಸಿದ್ದನು. ಯಾತನೆಯ ಕಂಭದ ಮೇಲೆ ಸಾಯುತ್ತಿದ್ದಾಗ ಯೇಸು ತನ್ನ ಪಕ್ಕದಲ್ಲಿ ತೂಗಹಾಕಿದ್ದ ಪಾತಕಿಗೆ “ನೀನು ನನ್ನ ಸಂಗಡ ಪರದೈಸಿ (ಪ್ರಮೋದವನ) ನಲ್ಲಿರುವಿ” ಎಂದು ಹೇಳಿದನು.—ಲೂಕ 23:43.
ಈ ಪ್ರಮೋದವನದ ಪುನ: ಸಂಪಾದನೆಯು ಯೇಸು ಮುಂತಿಳಿಸಿದ ಮತ್ತು ಯಾವುದನ್ನು ಅನೇಕಸಲ ಲೋಕಾಂತ್ಯವೆಂದು ಕರೆಯಲಾಗುತ್ತದೋ ಅದನ್ನು ಅನುಸರಿಸಿ ನಡಿಯುವದು. “ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” ಎಂದು ಶಿಷ್ಯರು ಕೇಳಿದಕ್ಕೆ ಉತ್ತರವಾಗಿ ಯೇಸು ಯುದ್ಧ, ಆಹಾರದ ಕೊರತೆ, ಭೂಕಂಪ, ಸೋಂಕುರೋಗ, ನಿಯಮರಾಹಿತ್ಯದ ವರ್ಧನ ಮತ್ತು ರಾಜ್ಯ ಸಾರುವಿಕೆಯ ಲೋಕವ್ಯಾಪಕ ಚಳುವಳಿಯನ್ನು ಮುಂತಿಳಿಸಿದನು. ಈ ಚಿಹ್ನೆಗಳೂ ಸೂಚನೆಯ ಇತರ ಭಾಗಗಳೂ 1914 ರಿಂದ ಕಂಡುಬರುತ್ತಿವೆ. (ಮತ್ತಾಯ 24:3-14) ಇವು ಈ ವ್ಯವಸ್ಥೆಯ ಅಂತ್ಯದ ಮತ್ತು ಭೂಮಿಯ ಮೇಲೆ ಪ್ರಮೋದವನದ ಪುನ:ಸ್ಥಾಪನೆಗೆ ಮುನ್ ಸೂಚಕವಾಗಿವೆ.
ಅದೇ ಪ್ರವಾದನೆಯಲ್ಲಿ ಯೇಸು ಹೀಗೆ ಸಹ ಹೇಳಿದನು: “ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿ ಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹಾ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ರವದೆ, ಬಾಗಲಲ್ಲೀ ಅದೆ ಎಂದು ತಿಳುಕೊಳ್ಳಿರಿ. ಇದೆಲ್ಲಾ ಆಗುವ ತನಕ ಈ ಸಂತತಿ ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 24:32-35) ಪ್ರಮೋದವನದ ಪುನ:ಸಂಪಾದನೆ ಅಥವಾ ಜೀರ್ಣೋದ್ಧಾರ ಬಹು ಹತ್ತಿರವದೆ. ಹೊಸಲೋಕ ದಿಗಂತದಲ್ಲೀ ಇದೆ ಎಂಬದನ್ನು ಇತರ ಬೈಬಲ್ ಪ್ರವಾದನೆಗಳೂ ಸೂಚಿಸುತ್ತವೆ.
ಹೊಸ ಲೋಕ—ತೀರಾ ವಿಭಿನ್ನ
ಈ ದಿನಗಳ ಸರಕಾರಗಳ ಸ್ಥಾನದಲ್ಲಿ ದೇವರ ರಾಜ್ಯ ನಿಲ್ಲುವದು. (ದಾನಿಯೇಲ 2:44) “ಸಮಾಧಾನದ ಪ್ರಭುವಾದ” ಯೇಸು ಕ್ರಿಸ್ತನ ರಾಜ್ಯದಾಳಿಕೆಯ ನೂತನ ಲೋಕದಲ್ಲಿ ಎಲ್ಲರಿಗೆ ನ್ಯಾಯ ಮತ್ತು ಬಾಳಿಕೆ ಬರುವ ಶಾಂತಿ ದೊರಕುವದು. (ಯೆಶಾಯ 9:6,7) ಈ ಮಾನವಕುಲದ ಮೇಲೆ ದಬ್ಬಾಳಿಕೆ ನಡಿಸುವ ದುಷ್ಟರನ್ನೂ ನಿಯಮರಾಹಿತ್ಯರನ್ನೂ ಅವನು ನಾಶಪಡಿಸುವುದರಿಂದ ನೀತಿಪ್ರಿಯರಾದ “ನಿರ್ದೋಷಿಗಳು” ಮಾತ್ರ ಅಲ್ಲಿ ಬಾಕಿ ಉಳಿಯುವರು. (ಜ್ಞಾನೋಕ್ತಿ 2:21, 22; ಪ್ರಕಟನೆ 19:11-21; 16:14-16) ಹೌದು, ನಮ್ರರೂ ಶಾಂತಿಪ್ರಿಯರೂ ಬದುಕಿ ಉಳಿಯುವರು. ಅದೆಷ್ಟು ನೆಮ್ಮದಿಯ ವಿಷಯ!
ಕುಲಸಂಬಂಧವಾದ ಮತ್ತು ಇತರ ವಿಧದ ಅವಿಚಾರಾಭಿಪ್ರಾಯಗಳೂ ನೂತನ ಲೋಕದಲ್ಲಿ ಇಲ್ಲದೆ ಹೋಗುವದು. ವಾಸ್ತವವೇನಂದರೆ ಇಂತಹ ವಿಷಯಗಳನ್ನು ಜಯಿಸುವದರಲ್ಲಿ ದೊಡ್ಡ ಜನರ ಗುಂಪೊಂದು ಆಗಲೇ ಬಹು ಮುಂದರಿದದೆ. ಇವರಾರು? ಯೆಹೋವನ ಸಾಕ್ಷಿಗಳೇ. ಮತ್ತು ಇವರೇಕೆ ಅಷ್ಟು ಭಿನ್ನ? ಅವರು ಬೈಬಲನ್ನು ಶ್ರದ್ಧೆಯಿಂದ ಅಭ್ಯಸಿಸಿ ಜೀವನದಲ್ಲಿ ಅನ್ವಯಿಸಿಕೊಂಡು ತಮ್ಮೊಳಗೆ ಪ್ರೀತಿ ತೋರಿಸುವದರಿಂದಲೇ. (ಯೋಹಾನ 13:34, 35; ಅಪೋಸ್ತಲರ ಕೃತ್ಯ 10:34, 35) ಈಗ ಈ ಸಾಕ್ಷಿಗಳು ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಇರುವದಾದರೂ ಬೈಬಲು ಯೆಹೋವನ ಭೂಮಿಯ ಆರಾಧಕರು ಕ್ರಮೇಣ, “ಪ್ರತಿಯೊಂದು ಜನಾಂಗ, ಕುಲ, ವಂಶ, ಭಾಷೆಗಳಿಂದ ಬಂದು ದೊಡ್ಡ ಸಂಖ್ಯೆಯ ಲೆಕ್ಕಿಸಲಾಗದಷ್ಟು” ಜನರಾಗುವರೆಂದು ಮುಂತಿಳಿಸಿತು.—ಪ್ರಕಟನೆ 7:9, ದಿ ಜೆರೂಸಲೆಮ್ ಬೈಬಲ್.
ಯುದ್ಧವು ಇನ್ನೆಂದೂ ಮಾನವ ಜೀವವನ್ನು ಆಹುತಿ ತಕ್ಕೊಳ್ಳದು. ನ್ಯೂಕ್ಲಿಯರ್ ಶಸ್ತ್ರ, ಇತರ ಆಯುಧ ಮತ್ತು ಮಿಲಿಟರಿ ಸೈನ್ಯಗಳ ಮೇಲೆ ಇನ್ನು ಕೋಟ್ಯಾಂತರ ಹಣವನ್ನು ಖರ್ಚುಮಾಡಲಾಗುವದಿಲ್ಲ. ಕ್ರಾಂತಿ, ಕುಲಸಂಬಂಧವಾದ ಹೋರಾಟ, ಮತಿತ್ತರ ವಿಧದ ಹಿಂಸಾತ್ಮಕ ಕೃತ್ಯಗಳು ಇನ್ನಿರವು. (ಯೆಶಾಯ 2:4) ಮಿಲಿಟರಿ ತರಬೇತು ಮತ್ತು ಸೈನ್ಯಭರ್ತಿ ಅಲ್ಲಿರವು. ಏಕೆಂದರೆ ಅವು ಅನಾವಶ್ಯಕ. ದೇವರು ಯುದ್ಧಗಳಿಗೆ ಅಂತ್ಯ ತರುವ ದಿನವು ಅದೆಷ್ಟು ಸಂತೋಷದ ದಿನವಾಗಿರುವದು!—ಕೀರ್ತನೆ 46:8, 9.
ನಿಜಶಾಂತಿ ಅಲ್ಲಿರುವದು. ಕೀರ್ತನೆಗಾರನು ಹೇಳಿದ್ದು: “ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು. . .ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾ ಸೌಖ್ಯದಿಂದ ಆನಂದಿಸುವರು.—37:10, 11.
ಆಹಾರ ಅಭಾವದ ಬದಲಿಗೆ ಸಮೃದ್ಧಯು ಅಲ್ಲಿರುವದು. ಅನೇಕ ಸ್ಥಳಗಳಲ್ಲಿ ಇಂದು ಬಡ ರೈತರು ಮುಳ್ಳುಗಿಡ, ಸಾರಹೀನವಾದ ಮಣ್ಣು, ಆಕ್ರಮಿಸುವ ಮರುಭೂಮಿ, ಒಣಕಲುಸ್ಥಿತಿ, ಮತ್ತು ಮಿಡಿತೆಗಳ ಹಾಳುಗೆಡಿಸುವ ಆಕ್ರಮಣದೊಂದಿಗೆ ಹೆಣಗಾಡುತ್ತಾರೆ. ಇವೆಲ್ಲ ಹಿಮ್ಮೊಗವಾಗುವದು. (ಯೆಶಾಯ 35:1, 7) ಇದರ ಪರಿಣಾಮವೋ? ಉತ್ಪನ್ನದಲ್ಲಿ ದೊಡ್ಡ ವೃದ್ಧಿಯಾಗುವದು! (ಕೀರ್ತನೆ 72:16) ಆಹಾರ ಮತ್ತು ಪಾನೀಯದ ಅಭಾವವನ್ನು ತೆಗೆದು ಹಾಕಿ ಯೆಹೋವನು ಒಂದು “ಔತಣವನ್ನು” ಒದಗಿಸುವನು.—ಯೆಶಾಯ 25:6.
ಎಲ್ಲರೂ ಪ್ರತಿಫಲದಾಯಕ ಕೆಲಸವನ್ನು ಅನುಭವಿಸುವರು. ಮನೆ ಕಟ್ಟುವ, ಫಲವೃಕ್ಷಗಳನ್ನು ನೆಡುವ ಮತ್ತು ತೋಟವನ್ನು ನೋಡಿಕೊಳ್ಳುವ ಕೆಲಸ ಎಷ್ಟು ತೃಪ್ತಿಕರ! ಮತ್ತು ನಿಮ್ಮ ಸ್ವಂತ ಅಂಜೂರದ ಮರದ ಕೆಳಗೆ ಕೂತು ಅದರ ಮಧುರ ಹಣ್ಣನ್ನು ತಿನ್ನುವದು ಎಷ್ಟು ಸಂತೋಷಕರ!—ಮೀಕ 4:4.
ಅತ್ಯುತ್ಕೃಷ್ಟ ದರ್ಜೆಯ ವಸತಿ ಪ್ರತಿಯೊಬ್ಬನಿಗೂ ಒದಗಿಸಲ್ಪಡುವದು. ಇಂದು ಕೋಟಿಗಟ್ಟಲೆ ಜನರು ಕೊಳೆಗೇರಿ ಅಥವಾ ಹೊಲಸುಗೇರಿಯಲ್ಲಿ ವಾಸಿಸುತ್ತಾರೆ. ಎಷ್ಟು ಅಸಂತುಷ್ಟ ಜೀವನ! ಉದಾಹರಣೆಗೆ, ಆಫ್ರಿಕದಲ್ಲಿ ಕೋಟ್ಯಾಂತರ ಕಪ್ಪು ಜನರು ಗ್ರಾಮೀಣ ಪ್ರದೇಶವನ್ನು ಬಿಟ್ಟುಹೋಗುತ್ತಾರೆ. ಆದರೆ ಅನೇಕ ವೇಳೆ ಅವರು ಮಣ್ಣಿನ ಅಥವಾ ಜೇಡಿಮಣ್ಣಿನ, ತಗಡು ಮಾಡಿನ, ಆರೋಗ್ಯ ವ್ಯವಸ್ಥೆಗಳಿಲ್ಲದ ಮತ್ತು ಏಕಾಂತತೆ ಇಲ್ಲದ ಮನೆಗಳಲ್ಲಿವಾಸಮಾಡಬೇಕಾಗುತ್ತದೆ. ಆದರೆ ನೂತನ ಲೋಕದಲ್ಲಿ ಜನರು ಉತ್ಕೃಷ್ಟ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವರು.—ಯೆಶಾಯ 65:21, 22.
ಅಸ್ವಸ್ಥತೆ ಮತ್ತು ಏಯ್ಡ್ಸ್ ನಂತಹ ಕಾಯಿಲೆಗಳ ಬದಲು ಸಂಪೂರ್ಣ ಆರೋಗ್ಯ ತುಂಬಿರುವದು. “ತಾನು ಅಸ್ವಸ್ಥನು” ಎಂದು ಯಾರೂ ಹೇಳರೆಂದು ಪ್ರವಾದಿಯು ಮುಂತಿಳಿಸಿದ್ದಾನೆ. ಇದಲ್ಲದೆ, ಹತ್ತಿರವಿರುವ ನೂತನ ಲೋಕದಲ್ಲಿ, “ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವದು. ಕುಂಟನು ಜಿಂಕೆಯಂತೆ ಹಾರುವನು, ಮೂಕರ ನಾಲಿಗೆಯು ಹರ್ಷದ್ವನಿಗೈಯುವದು.”—ಯೆಶಾಯ 33:24; 35:5, 6.
ಮರಣ, ಕಣ್ಣೀರು ಮತ್ತು ಶವಗೃಹಗಳು ಇಲ್ಲದೆ ಹೋಗುವವು. (ಪ್ರಕಟನೆ 21:4) ಆದರೆ ಆಗಲೇ ಸತ್ತಿರುವ ಕೋಟ್ಯಾಂತರ ಜನರ ವಿಷಯದಲ್ಲೇನು? ಯೇಸು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ಅನೇಕರನ್ನು ಪುನರುತ್ಥಾನಗೊಳಿಸಿದ್ದನು. ಉದಾಹರಣೆಗೆ ಅವನೊಮ್ಮೆ ನಾಯಿನ್ ಊರಿನಲ್ಲಿ ಸತ್ತಿದ್ದ ಯುವಕನೊಬ್ಬನ ಹೆಣದ ಮೆರವಣಿಗೆಯನ್ನು ಭೇಟಿಯಾದನು. ವಿಧವೆಯಾಗಿದ್ದ ತಾಯಿಗೆ ದು:ಖೋಪಶಮನದ ನುಡಿಗಳನ್ನಾಡಿದ ಮೇಲೆ ಯೇಸು “ಯೌವನಸ್ಥನೇ ಏಳು ಎಂದು ನಿನಗೆ ಹೇಳುತ್ತೇನೆ” ಅಂದನು. (ಲೂಕ 7:11-17) ಇನ್ನೊಂದು ಸಂದರ್ಭದಲ್ಲಿ ಈ ಆಶ್ವಾಸನೆಯನ್ನು ಯೇಸು ನೀಡಿದನು: “ಸಮಾಧಿಗಳಲ್ಲಿರುವವರೆಲ್ಲರು. . .ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ದೇವರು ಅಗಣಿತ ಸಂಖ್ಯೆಯಲ್ಲಿ ನಕ್ಷತ್ರಗಳನ್ನೂ ಇತರ ಆಕಾಶಸ್ಥ ಕಾಯಗಳನ್ನೂ ಸೃಷ್ಟಿಸಿ ಅವುಗಳನ್ನು ಹೆಸರೆತ್ತಿ ಕರೆಯುವದರಿಂದ ಕೆಲವು ಸಾವಿರ ಕೋಟಿ ಮೃತ ಮಾನವರನ್ನು ಎಬ್ಬಿಸುವದು ಏನೂ ಸಮಸ್ಯೆಯಾಗಿರದು.—ಯೆಶಾಯ 40:26.
ಅದು ನಿಮಗಾಗಿದೆಯೋ?
ಮಾನವ ಸಂತತಿ ಸಾಯಬಾರದು, ತಾನು ಒದಗಿಸುವ ಉತ್ತಮ ವಿಷಯಗಳನ್ನು ಸರ್ವದಾ ಅನುಭವಿಸಬೇಕೆಂಬದು ಯೆಹೋವ ದೇವರ ಮೂಲ ಉದ್ದೇಶವಾಗಿತ್ತು. ಹೊಸ ಲೋಕದಲ್ಲಿ ಸಂತುಷ್ಟ ಕುಟುಂಬದೊಂದಿಗೆ ಜೀವನದಲ್ಲಿ ದೊರೆಯುವ ಆಶೀರ್ವಾದಗಳನ್ನು ಭಾವಿಸಿರಿ. ಈಗ ಅಪಾಯಕಾರಿಯಾಗಿರುವ ಪ್ರಾಣಿಗಳೊಂದಿಗೆ ಮಕ್ಕಳು ಸುರಕ್ಷಿತರಾಗಿ ಆಡಸಾಧ್ಯವಾಗುವದನ್ನು ಯೋಚಿಸಿರಿ. (ಯೆಶಾಯ 11:6-9) ಶಾಂತಿ, ಉತ್ತಮ ವಸತಿ, ಪ್ರತಿಫಲದಾಯಕ ಕೆಲಸ, ಸಮೃದ್ಧಿಯಾದ ಆಹಾರ—ಇವುಗಳ ಆಶೀರ್ವಾದವನ್ನು ನೆನಸಿರಿ. ಹೌದು, ಭೂಪ್ರಮೋದವನದಲ್ಲಿ ನಿತ್ಯವಾಗಿ ಜೀವಿಸುವದರ ಕುರಿತು ಯೋಚಿಸಿರಿ.
ನೀವು ಅಲ್ಲಿರಬಲ್ಲಿರೋ? ಹೌದು, ದೇವರ ವಾಕ್ಯದ ಸೂಕ್ಷ್ಮ ಪರಿಜ್ಞಾನವನ್ನು ತಕ್ಕೊಂಡು ಅದರಂತೆ ವರ್ತಿಸುವಲ್ಲಿ ನೀವೂ ಅಲ್ಲಿರುವಿರಿ. ದೇವರ ವಿಫಲಗೊಳ್ಳದ ಉದ್ದೇಶಗಳಲ್ಲಿ ನೀವು ನಂಬಿಕೆಯಿಡುವಂತೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸದಾ ಸಿದ್ಧರು. ಈ ಪ್ರಮೋದವನ ಬೇಗನೇ ಪುನ: ಸಂಪಾದಿಸಲ್ಪಡಲಿಕ್ಕದೆ ಎಂಬದರ ಕುರಿತು ನೀವು ಭರವಸವಿಡಬಲ್ಲಿರಿ, ಏಕೆಂದರೆ ನೂತನ ಲೋಕ ಅತಿ ಹತ್ತಿರವಿದೆ! (w88 11/15)