ನೂತನ ಲೋಕ—ಅತಿ ಹತ್ತಿರ!
ಈ ಲೋಕ ಮರಣ ಯಾತನೆ ಪಡುತ್ತಿದೆ! ಇದು ಸತ್ಯವಾಗಿರಬಲ್ಲದೋ ಲೋಕ ಪರಿಸ್ಥಿತಿಗಳನ್ನು ಜಾಗ್ರತೆಯಿಂದ ಪರ್ಯಾಲೋಚಿಸಿರಿ.
ಭೂಮಿಯ ಪೂರ್ತಿ ಜನಸಂಖ್ಯೆಯನ್ನು ಅನೇಕಸಲ ನಾಶಮಾಡಲು ಸಾಕಾಗುವಷ್ಟು ನ್ಯೂಕ್ಲಿಯರ್ ಆಯುಧಗಳಿವೆ. ಅಂಗೋಲ ಮತ್ತು ಮೊಸಾಂಬಿಕ್‌ಗಳಂತಹ ದೇಶಗಳಲ್ಲಿ ಅಂತರಿಕ ಯುದ್ಧಗಳು ನಡೆಯುತ್ತಿವೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತಿತ್ತರ ದೇಶಗಳಲ್ಲಿ ಕುಲಸಂಬಂಧವಾದ ಹೋರಾಟಗಳು ನಡಿಯುತ್ತವೆ. ಭಯವಾದ ಮತ್ತು ಕ್ಷಾಮ ಮಾನವ ಜೀವಗಳನ್ನು ಭಯಂಕರವಾಗಿ ಆಹುತಿ ತೆಗೆದುಕೊಂಡಿದೆ.
ಏಯ್ಡ್ಸ್ (AIDS) ವ್ಯಾಧಿಯ ವಿಷಯವೇನು? ದಕ್ಷಿಣ ಆಫ್ರಿಕಾದ ಸಂಡೇ ಟೈಮ್ಸ್ ಒಕ್ಟೋಬರ 25, 1987 ರಲ್ಲಿ ಇದನ್ನು “ಹೊಸ ಪ್ಲೇಗು ವ್ಯಾಧಿ” ಎಂದು ಕರೆಯುತ್ತಾ ಹೇಳಿದ್ದು: “ಈಗ ಆಫ್ರಿಕನ್ ಏಯ್ಡ್ಸ್‌ನ .ಪೂರ್ಣ ಭಯಂಕರತೆ ಬಹಿರಂಗವಾಗಿದೆ. ಕೆಲವು ದೇಶಗಳಲ್ಲಿ 1994 ರೊಳಗೆ ಪ್ರತಿ ಹತ್ತರಲ್ಲಿ ಆರು ಜನರು ಸಾಯುವ ಸಂಭವವಿದೆ.”
ಇಂತಹ ಪರಿಸ್ಥಿತಿಗಳಿಂದಾಗಿ ಭಯಕ್ಕೆ ಈಗ ಮೇಲುಗೈಯಿದೆ. ನೊಬೇಲ್ ಪಾರಿತೋಷಕ ಪಡೆದ ಹ್ಯಾರಲ್ಡ್ ಸಿ. ಯೂರಿ ಕೆಲವು ವರ್ಪಗಳ ಹಿಂದೆ ಹೇಳಿದಂತೆ, “ನಾವು ಭಯವನ್ನು ತಿಂದು, ಭಯದಲ್ಲಿ ಮಲಗಿ, ಭಯದಿಂದ ಜೀವಿಸಿ, ಭಯದಲ್ಲಿ ಸಾಯುವೆವು.” ಭೂಮಿಯ ಮೇಲಿದ್ದ ಪ್ರವಾದಿಗಳಲ್ಲಿ ಅತ್ಯಂತ ಮಹಾ ಪ್ರವಾದಿಯಾದ ಯೇಸುಕ್ರಿಸ್ತನು ಗಮನಾರ್ಹವಾಗಿ, ಈ ಜಗತ್ತಿನ ಕೊನೆ ದಿನಗಳಲ್ಲಿ “ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು” ಎಂದು ಮುಂತಿಳಿಸಿದನು.—ಲೂಕ 21.26.
ಆದರೆ ಅನೇಕರಲ್ಲಿ ಈ ಭಯವಿಲ್ಲ. ಬದಲಾಗಿ ಅವರು ಸಂತೋಷಿಸುತ್ತಾರೆ. ಏಕೆ? ಯಾಕೆಂದರೆ ಈ ಲೋಕ ವ್ಯವಸ್ಥೆ (ಭೂಗ್ರಹವಲ್ಲ) ತನ್ನ ಅಂತ್ಯವನ್ನು ಸಮೀಪಿಸಿದೆಯೆಂದೂ ಆದರೆ ಒಂದು ಹೊಸ ಜಗತ್ತು ತೀರಾ ಹತ್ತಿರವಿದೆಯೆಂದೂ ಅವರು ತಿಳಿದಿದ್ದಾರೆ. ಅವರು ಅಷ್ಟು ಖಾತ್ರಿಯಿಂದಿರುವದು ಹೇಗೆ? ಅನೇಕ ಬೈಬಲ್ ಪ್ರವಾದನೆಗಳ ನೆರವೇರಿಕೆಯ ಕಾರಣದಿಂದಲೇ.
ದೃಷ್ಟಾಂತಕ್ಕೆ, ಯೇಸು ಕ್ರಿಸ್ತನ ಸಾನಿಧ್ಯ ಮತ್ತು ಲೋಕಾಂತ್ಯದ ಸೂಚನೆಯನ್ನು ಕೇಳಿದಾಗ ಅವನಂದದ್ದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.” 1914 ರಲ್ಲಿ 1ನೇ ಲೋಕ ಯುದ್ಧವು ಸಿಡಿದು ಮೇಲೇರಿತು. ಯುದ್ಧದಲ್ಲಿ ಅಷ್ಟರ ತನಕ ನಡೆದಿದ್ದ ಜೀವನಷ್ಟದಲ್ಲಿ ಅದು ಅತ್ಯಂತ ದೊಡ್ಡದಾಗಿತ್ತು. ಸೈನಿಕರ ನಷ್ಟವೂ? ಸುಮಾರು 90 ಲಕ್ಷ ಮತ್ತು ಅನೇಕ ಲಕ್ಷ ಅಯೋಧರೂ ಮೃತರಾದರು! ಆದರೆ 2ನೇ ಲೋಕಯುದ್ಧವು ಅದಕ್ಕಿಂತಲೂ ಹೆಚ್ಚು ನಾಶಕರವಾಗಿದ್ದು 5 ಕೋಟಿ 50 ಲಕ್ಷ ಜನರನ್ನು ಆಹುತಿ ತಕ್ಕೊಂಡಿತು. ಇವೆಲ್ಲವುಗಳ ಜೊತೆಯಲ್ಲಿ ಆಹಾರದ ಅಭಾವ, ಭೂಕಂಪ, ಸೋಂಕು ರೋಗ ಮತ್ತು ನಿಯಮರಾಹಿತ್ಯವು ಬರುವದೆಂದು ಯೇಸು ತೋರಿಸಿದನು.—ಮತ್ತಾಯ 24.7-13; ಲೂಕ 21:10, 11.
ಕ್ರೈಸ್ತ ಅಪೋಸ್ತಲ ಪೌಲನು ಸಹಾ ಇಂದಿನ ಲೋಕ ಪರಿಸ್ಥಿತಿಗಳನ್ನು ಸ್ಪಷ್ಟವಾಗಿ ಮುಂತಿಳಿಸಿದನು. ಅವನು ಬರೆದದ್ದು: “ಕಡೇ ದಿವಸಗಳಲ್ಲಿ ಕಠಿಣಕಾಲಗಳು ಬರುವವೆಂದು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರ ನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಶವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂತವರ ಸಹವಾಸವನ್ನು ಮಾಡದಿರು.” (2 ತಿಮೋಥಿ 3:1-5) ಪೌಲನು ಈ ದಿನಗಳ ಲೋಕ ಪರಿಸ್ಥಿತಿಯನ್ನು ಅಷ್ಟು ಸೂಕ್ಷ್ಮವಾಗಿ ಮುಂತಿಳಿಸಲು ಸಮರ್ಥನಾದದ್ದು ದೇವರು ಈ ಮಾತುಗಳನ್ನು ಬರೆಯಲು ಅವನನ್ನು ಪ್ರೇರಿಸಿದರಿಂದಲೇ.
ಅಂತ್ಯಕಾಲದ ಕುರಿತು ತನ್ನ ಸ್ವಂತ ಮಾತುಗಳ ಸಂಬಂಧದಲ್ಲಿ ಯೇಸು ಹೇಳಿದ್ದು: “ನೀವು ಸಹಾ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಿದೆ ಎಂದು ತಿಳುಕೊಳ್ಳಿರಿ.” (ಲೂಕ 21.31) ಕೋಟ್ಯಾಂತರ ಜನರು ಯೇಸುವಿನ ಮಾದರಿ ಪ್ರಾರ್ಥನೆಯನ್ನು ಉಪಯೋಗಿಸಿ ದೇವರ ರಾಜ್ಯಕ್ಕಾಗಿ ಬೇಡುತ್ತಿದ್ದಾರೆ. (ಮತ್ತಾಯ 6:9,10) ಆದರೆ ಈ ರಾಜ್ಯ ವಾಸ್ತವವಾಗಿ ಏನು ಮಾಡುವದು?” ಎಂದು ಕೇಳುವಲ್ಲಿ ಅವರಲ್ಲಿ ಉತ್ತರವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲನ್ನು ಶ್ರದ್ಧೆಯಿಂದ ಅಭ್ಯಸಿಸಿರುವ ಲಕ್ಷಾಂತರ ಜನರು ಈ ರಾಜ್ಯ ಈ ಹಳೇ ಲೋಕಕ್ಕೆ ಅಂತ್ಯ ತರಲಿದೆ ಮತ್ತು ಅಗಣಿತ ಆಶೀರ್ವಾದಗಳನ್ನು ಮಾನವ ಸಂತತಿಗೆ ತರಲಿರುವ ನೂತನ ಜಗತ್ತನ್ನು ಸ್ಥಿರವಾಗಿ ಸ್ಥಾಪಿಸುವದು ಎಂದು ಕಲಿತಿದ್ದಾರೆ. ಆದರೆ ಹೇಗೆ? ಯಾವಾಗ? (w88 11/15)