ಯುದ್ಧಗಳು ಯಾವಾಗಲೂ ಇರುವವೋ?
ಜುಲೈ 1, 1916 ರಲ್ಲಿ ಉತ್ತರ ಫ್ರಾನ್ಸಿನ ಅಂದವಾದ ಹೊಲಪ್ರದೇಶದ ಪ್ರಥಮ ಸಮ್ಯುದ್ಧ ಪ್ರಾರಂಭವಾಯಿತು. ಭಯಂಕರವಾದ ಫಿರಂಗಿ ಮತ್ತು ವಿಮಾನ ಧಾಳಿ ನಡೆದ ಬಳಿಕ ಬ್ರಿಟಿಷ್ ಮತ್ತು ಫ್ರೆಂಚ್ ಸೈನ್ಯಗಳು ತಮ್ಮ ಎದುರಿನ ಕಂದಕಗಳಲ್ಲಿ ಸುಭದ್ರವಾಗಿದ್ದ ಜರ್ಮನ್ ಸೈನ್ಯಗಳನ್ನು ನಿರ್ಧಾರಕವಾಗಿ ಭೇದಿಸಿ ಹೋಗುವೆವೆಂದು ನಿರೀಕ್ಷಿಸಿ ಆಕ್ರಮಣಮಾಡಿದರು. ಆದರೆ ಆ ಆಕ್ರಮಣ ಸಫಲವಾಗಲಿಲ್ಲ. ವ್ಯತಿರಿಕ್ತವಾಗಿ ಒಂದನೆಯ ದಿನದಲ್ಲೀ 20 ಸಾವಿರ ಬ್ರಿಟಿಷ್ ಸೈನಿಕರು ಕೊಲ್ಲಲ್ಪಟ್ಟರು. ವಾರಗಳು ಕಳೆದವು. ಆದರೆ ಸೈನ್ಯವ್ಯೂಹವನ್ನು ಭೇದಿಸಲಾಗಲಿಲ್ಲ. ಒಕ್ಟೋಬರ ತಿಂಗಳ ನಿರ್ಭರ ಮಳೆಯಲ್ಲಿ ರಣರಂಗ ಕೆಸರಿನ ಸಾಗರವಾಗಿ ಪರಿಣಮಿಸಿತು. ಮಧ್ಯ ನವಂಬರದಲ್ಲಿ ಮಿತ್ರ ಪಕ್ಷಗಳು ಕೇವಲ ಐದು ಮೈಲು ಮುಂದುವರಿದಿದ್ದವು. ಅಷ್ಟರೊಳಗೆ 450000 ಜರ್ಮನ್ ಸೈನಿಕರು, 200000 ಫ್ರೆಂಚ್ ಸೈನಿಕರು ಮತ್ತು 420000 ಬ್ರಿಟಿಷ್ ಸೈನಿಕರು ಸತ್ತಿದ್ದರು. ಹತ್ತು ಲಕ್ಷಕ್ಕಿಂತಲೂ ಹೆಚ್ಚು ಸೈನಿಕರು, ಅಧಿಕಾಂಶ ಯುವಕರು ಈ ಕದನದಲ್ಲಿ ಸತ್ತರು!
ಪ್ರಥಮ ಜಾಗತಿಕ ಯುದ್ಧದಲ್ಲಿ ಇದು ಕೇವಲ ಒಂದು ಅಡಯ್ಡುದ್ಧವಾಗಿತ್ತು. ಮತ್ತು ಒಂದನೆಯ ಲೋಕಯುದ್ಧವು ಅಷ್ಟರವರೆಗಿನ ಯುದ್ಧಗಳಲ್ಲಿ ಅತಿ ಹೆಚ್ಚು ನಾಶಕರವಾದ್ದಾಗ್ಯೂ ಇತಿಹಾಸದಲ್ಲಿ ನಡೆದ ಅಸಂಖ್ಯಾತ ಯುದ್ಧಗಳಲ್ಲಿ ಕೇವಲ ಒಂದುಯುದ್ಧವಾಗಿತ್ತು. ಮಾನವ ಜೀವದ ಎಷ್ಟೊಂದು ಅವಿವೇಕದ ನಷ್ಟ!
ಮಾನವರು ಹೀಗೆ ಒಬ್ಬರನೊಬ್ಬರು ಕೊಲ್ಲಲು ಪಟ್ಟು ಹಿಡಿಯುವದೇಕೆ? ಇದರಲ್ಲಿ ಅನೇಕ ವಿಷಯಗಳು ಅಡಗಿವೆ. ಆದರೆ ಸ್ವಾರ್ಥ, ಹೆಬ್ಬಯಕೆ, ದುರಾಶೆ ಹಾಗೂ ಅಧಿಕಾರ ಮತ್ತು ಕೀರ್ತಿಯ ಅತ್ಯಾಶೆ ಇವು ಕೆಲವೆಂದು ನಾವು ಹೇಳಬಹುದು. ಇನ್ನೊಂದು ಯುದ್ಧ ಕಾರಣವು ರಾಷ್ಟ್ರೀಯತೆ. ಹೌದು, ಯುದ್ಧಗಳು ಮಾನವ ಇತಿಹಾಸದ ಕುರಿತು ಬೈಬಲಿನ, “ಮನುಷ್ಯನು ಮನುಷ್ಯನ ಮೇಲೆ ಅವನ ಹಾನಿಗಾಗಿ ಅಧಿಕಾರ ನಡಿಸಿದ್ದಾನೆ” ಎಂಬ ಹೇಳಿಕೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.—ಪ್ರಸಂಗಿ 8:9.
ಅನೇಕ ಸಲ ಧರ್ಮವೂ ಯುದ್ಧವನ್ನು ಉತ್ತೇಜಿಸಿದೆ. ಮಧ್ಯಯುಗಗಳ ಧರ್ಮಯುದ್ಧಗಳು ಧಾರ್ಮಿಕ ರಾಷ್ಟ್ರಗಳಿಂದ ಧಾರ್ಮಿಕ ಉದ್ದೇಶಕ್ಕೆಂಬಂತೆ ಹೂಡಲ್ಪಟ್ಟವು. ಕ್ರೈಸ್ತಪ್ರಪಂಚಕ್ಕಾಗಿ ಪಾಲೆಸ್ಟೈನ್ ದೇಶವನ್ನು ಗೆಲ್ಲುವದು ಅದರ ಉದ್ದೇಶವಾಗಿತ್ತು. ಈ ಶತಮಾನದ ಎರಡು ಲೋಕಯುದ್ಧಗಳಲ್ಲಿ ಸಹಾ ವಿವಿಧ ಮತ ಪಂಗಡಗಳ ಪುರೋಹಿತರು ಸೈನಿಕರ ಧಾರ್ಮಿಕ ಮನೋಭಾವವನ್ನು ಅವರು ವಿರೋಧಿ ಪಕ್ಷದವರನ್ನು ಕೊಲ್ಲಲು ಹೆಚ್ಚು ಮನಸ್ಸು ಮಾಡುವಂತೆ ಸಜ್ಜುಗೊಳಿಸಲು ಪ್ರಯತ್ನಿಸಿದ್ದಾರೆ. ಮತ್ತು ಈಗ ನಡಿಯುತ್ತಿರುವ ಕೆಲವು ಹೋರಾಟಗಳಲ್ಲಿ ಬಲವಾದ ಧಾರ್ಮಿಕ ರೂಪ ಕಂಡುಬರುತ್ತದೆ.
ಆಶೆಯ ಕಿರಣಗಳು
ಒಂದಾನೊಂದು ದಿನ ಯುದ್ಧಗಳು ನಿಂತು ಹೋಗುವವೆಂಬದಕ್ಕೆ ಯಾವ ನಿರೀಕ್ಷೆಯಾದರೂ ಇದೆಯೋ? ಹೌದು, ಯೇಸು ಕ್ರಿಸ್ತನನ್ನು “ಸಮಾಧಾನದ ಪ್ರಭು” ಎಂದು ಕರೆಯಲಾಗುತ್ತದೆ. ಭೂಮಿಗೆ ಬಂದಾಗ ಅವನು ಜನರು ತಮ್ಮ ನೆರೆಯವರನ್ನು ತಮ್ಮಂತೆಯೇ ಪ್ರೀತಿಸಬೇಕೆಂದು ಕಲಿಸುತ್ತಾ ಆ ಹೆಸರಿಗೆ ತಕ್ಕಂತೆ ನಡೆದನು. ತಮ್ಮ ವೈರಿಗಳನ್ನೂ ಅವರು ಪ್ರೀತಿಸಬೇಕೆಂದು ಅವನು ಹೇಳಿದನು. (ಯೆಶಾಯ 9:6; ಮತ್ತಾಯ 5:44; 22:39) ಇದರ ಪರಿಣಾಮವಾಗಿ ಪ್ರಥಮ ಶತಕದಲ್ಲಿ ಅವನ ಭೋದನೆಯನ್ನಾಲಿಸಿದವರು ಶಾಂತಿಯ, ಅಂತರಾಷ್ಟ್ರೀಯ ಭ್ರಾತೃತ್ವವಾದರು. ಒಬ್ಬರ ವಿರುದ್ದ ಒಬ್ಬರು ಯುದ್ಧಹೂಡುವದು ಅವರಿಗೆ ಅಚಿಂತ್ಯವಾಗಿತ್ತು. ಆದರೂ, ದುರದೃಷ್ಟವಶಾತ್, ಈ ಆದಿ ಕ್ರೈಸ್ತರ ನಿರ್ಮಲ ನಂಬಿಕೆಯು ಕೊನೆಗೆ ಮಲಿನವಾಯಿತು. ಸಮಯ ಕಳೆಯಲಾಗಿ ಚರ್ಚುಗಳು ರಾಜಕೀಯದಲ್ಲಿ ತಲೆಹಾಕಲಾಗಿ ಅವುಗಳ ಕೈಗಳು ರಾಷ್ಟ್ರಗಳ ಯುದ್ಧಗಳ ರಕ್ತದಲ್ಲಿ ತೊಯ್ದುಹೋದವು.
ಅನೇಕ ಸಮಯಾನಂತರ ಯುರೋಪಿನಲ್ಲಿ ಬದಲಾವಣೆಯ ಮಾರುತ ಬೀಸತೊಡಗಿತು. ಮಾನವ ಸಂತತಿಗೆ ಎಡೆಬಿಡದ ಯುದ್ಧದಿಂದ ಬೇಸರ ಹಿಡಿದುಹೋಯಿತೋ ಎಂದು ಕಂಡಿತು. 1899 ರಲ್ಲಿ ಮತ್ತು ಪುನ: 1907 ರಲ್ಲಿ ನೆದರ್ಲೆಂಡ್ಸ್ನ ಹೇಗ್ನಲ್ಲಿ ಅಂತರಾಷ್ಟ್ರೀಯ ಪರಿಷತ್ತುಗಳು ನಡೆದವು. 1899ರ ಪರಿಷತ್ತಿನಲ್ಲಿ “ಅಂತರಾಷ್ಟ್ರೀಯ ವಾಗ್ವಾದಗಳಿಗೆ ಸಮಾಧಾನಕರವಾದ ತೀರ್ಮಾನ” ಎಂಬ ಕರಾರು ಸ್ವೀಕರಿಸಲ್ಪಟ್ಟಿತು. ಹೀಗೆ, 20ನೇ ಶತಮಾನವು ಉದಯಿಸುತ್ತಿರುವಾಗ ಅನೇಕರು ಲೋಕದ ಯುದ್ಧಪ್ರವೃತಿ ಇಲ್ಲದೆ ಹೋಗುವದೆಂದು ನಿರೀಕ್ಷಿಸಿದರು. ಆದರೆ ಇಂತಹ ನಿರೀಕ್ಷೆಗಳನ್ನು ಒಂದನೆಯ ಜಾಗತಿಕ ಯುದ್ಧದ ಬಂದೂಕುಗಳು ಹೊಡೆದು ದ್ವಂಸಮಾಡಿದವು. ಹಾಗಾದರೆ ಮಾನವಕುಲದ ಶಾಂತಿ ನಿರೀಕ್ಷೆಗಳು ಇನ್ನೆಂದಿಗೂ ನೆರವೇರದೆಂದು ಇದರ ಅರ್ಥವೋ? (w88 11/1)