53 ಪೌಲ
“ಧೈರ್ಯ ತಂದ್ಕೊಳ್ಳಿ ಅಂತ ಬೇಡ್ಕೊಳ್ತೀನಿ”
ಸಿಹಿಸುದ್ದಿ ಸಾರೋದ್ರಿಂದ ತಾರ್ಸದ ಸೌಲನಿಗೆ ತುಂಬ “ಕಷ್ಟ ಬರುತ್ತೆ” ಅಂತ ಯೇಸು ಮೊದ್ಲೇ ಹೇಳಿದ್ದನು. ಯೇಸು ಹೇಳಿದ್ದು ನಿಜ ಆಯ್ತಾ? ಈ ಸೌಲ ಮುಂದೆ ಅಪೊಸ್ತಲ ಪೌಲ ಅಂತ ಹೆಸರುವಾಸಿಯಾದ. ಅವನು ಕ್ರೈಸ್ತನಾಗಿ ಸುಮಾರು 20 ವರ್ಷ ಆದ್ಮೇಲೆ ಕೊರಿಂಥ ಸಭೆಯವ್ರಿಗೆ ಎರಡನೇ ಪತ್ರ ಬರೆದ. ಅಷ್ಟೊತ್ತಿಗಾಗಲೇ, ಅವನು ‘ಲೆಕ್ಕ ಇಲ್ಲದಷ್ಟು ಏಟು ತಿಂದಿದ್ದ, ತುಂಬ ಸಲ ಸಾವಿನ ದವಡೆಯಲ್ಲಿ ಸಿಕ್ಕಿಬಿದ್ದಿದ್ದ.’ ಈಗಾಗ್ಲೇ ಮೂರು ಸಲ ಅವನಿದ್ದ ಹಡಗು ಒಡೆದು ಹೋಗಿತ್ತು. ಒಂದ್ಸಲ ಅಂತೂ ಅವನು ಇಡೀ ದಿನ ಅಂದ್ರೆ ಒಂದು ರಾತ್ರಿ, ಒಂದು ಹಗಲು ಸಮುದ್ರ ಮಧ್ಯದಲ್ಲೇ ಕಳೆದಿದ್ದ. ಇನ್ನು ಕೆಲವು ವರ್ಷಗಳಲ್ಲೇ ಇನ್ನೊಂದು ಸಲ ಅವನಿದ್ದ ಹಡಗು ಒಡೆದು ಹೋಗೋಕಿತ್ತು.
ಪೌಲ ಎರಡು ವರ್ಷಕ್ಕಿಂತ ಜಾಸ್ತಿ ಸಮಯ ಕೈಸರೈಯದ ರೋಮನ್ ಜೈಲಲ್ಲಿದ್ದ. ಅಲ್ಲಿದ್ದ ಭ್ರಷ್ಟ ಅಧಿಕಾರಿ ಪೌಲನಿಂದ ಲಂಚ ತಗೊಳೋಕೆ ನೋಡ್ತಿದ್ದ. ಆ ಅಧಿಕಾರಿಯ ಜಾಗಕ್ಕೆ ಇನ್ನೊಬ್ಬ ಅಧಿಕಾರಿ ಬಂದಾಗ ಪೌಲ, ‘ನಾನು ನೇರವಾಗಿ ಕೈಸರನಿಗೇ ಮನವಿ ಮಾಡ್ತೀನಿ’ ಅಂತ ಹೇಳಿದ. ಕೊನೆಗೂ ಪೌಲನನ್ನ ಬೇರೆ ಕೈದಿಗಳ ಜೊತೆ ಹಡಗು ಹತ್ತಿಸಿದ್ರು. ಇವ್ರನ್ನ ಕರ್ಕೊಂಡು ಹೋಗೋ ಜವಾಬ್ದಾರಿನ ರೋಮನ್ ಸೇನಾಪತಿಯಾದ ಯೂಲ್ಯನಿಗೆ ಒಪ್ಪಿಸಿದ್ರು. ಹೀಗೆ ಸುಮಾರು 3,000 ಕಿಲೋಮೀಟರ್ ದೂರದಲ್ಲಿದ್ದ ರೋಮಿಗೆ ಪೌಲನ ಕಷ್ಟದ ಪ್ರಯಾಣ ಶುರುವಾಯ್ತು. ಆ ಹಡಗಲ್ಲಿ ಪೌಲನ ಜೊತೆ ಅವನ ಇಬ್ರು ಸ್ನೇಹಿತರು ಅಂದ್ರೆ ಅರಿಸ್ತಾರ್ಕ ಮತ್ತು ‘ಪ್ರಿಯ ವೈದ್ಯನಾಗಿದ್ದ’ ಲೂಕ ಕೂಡ ಇದ್ರು.—ಕೊಲೊ. 4:14.
ಹಡಗು ಏಷ್ಯಾ ಮೈನರ್‌ನ ಮುರಾ ಅನ್ನೋ ಬಂದರಿಗೆ ಬಂತು. ಆಗ ಯೂಲ್ಯ ಎಲ್ಲಾ ಕೈದಿಗಳನ್ನ ದವಸಧಾನ್ಯ ತುಂಬಿದ್ದ ಈಜಿಪ್ಟಿನ ಹಡಗಿಗೆ ಹತ್ತಿಸಿದ. ಈ ಹಡಗು ಇಟಲಿಗೆ ಹೋಗ್ತಿತ್ತು. ಪ್ರಯಾಣಿಕರೆಲ್ಲಾ ಹತ್ತಿದ ಮೇಲೆ ಹಡಗು ಮುಂದೆ ಸಾಗೋಕೆ ಶುರುವಾಯ್ತು. ಆದ್ರೆ ಸ್ವಲ್ಪ ದೂರ ಹೋದ್ಮೇಲೆ ಜೋರಾಗಿ ಗಾಳಿ ಬೀಸೋಕೆ ಶುರುವಾಗಿದ್ರಿಂದ ಹಡಗಿಗೆ ಮುಂದೆ ಹೋಗೋಕೆ ಕಷ್ಟ ಆಯ್ತು. ಅದಕ್ಕೆ ಹಡಗು “ಕಷ್ಟಪಟ್ಟು” ಮುಂದೆ ಸಾಗ್ತಿತ್ತು ಅಂತ ಲೂಕ ಎರಡು ಸಲ ಬರೆದಿದ್ದಾನೆ. ಆಮೇಲೆ ಹಡಗು ಚಂದರೇವು ಅನ್ನೋ ಬಂದರಿಗೆ ಬಂತು. ಆಗ ಪೌಲನಿಗೆ, ‘ಒಂದುವೇಳೆ ನಾವು ಈ ಚಳಿಗಾಲನ ಈ ಬಂದರಲ್ಲಿ ಕಳೆಯದೇ ಪ್ರಯಾಣ ಮುಂದುವರೆಸಿದ್ರೆ ಒಂದು ದೊಡ್ಡ ಅನಾಹುತ ಆಗುತ್ತೆ’ ಅಂತ ಅನಿಸ್ತು.
ಆಗ ಪೌಲ ಧೈರ್ಯವಾಗಿ, ‘ನಾವೇನಾದ್ರೂ ಈ ಪ್ರಯಾಣ ಮುಂದುವರೆಸಿದ್ರೆ ದೊಡ್ಡ ಅಪಾಯ ಆಗುತ್ತೆ, ತುಂಬ ನಷ್ಟಾನೂ ಆಗುತ್ತೆ’ ಅಂತ ರೋಮನ್ ಸೇನಾಪತಿಯಾದ ಯೂಲ್ಯನನ್ನ ಎಚ್ಚರಿಸಿದ. ಆದ್ರೆ ಯೂಲ್ಯ ಪೌಲನ ಮಾತು ಕೇಳದೇ ಹಡಗು ನಡೆಸೋ ನಾವಿಕನ ಮತ್ತು ಅದ್ರ ಯಜಮಾನನ ಮಾತು ಕೇಳಿ ಪ್ರಯಾಣ ಮುಂದುವರೆಸಿದ. ಆದ್ರೆ ಆಮೇಲೆ ‘ನಾನು ಪೌಲನ ಮಾತು ಕೇಳಬೇಕಿತ್ತು’ ಅಂತ ಅವನಿಗೆ ಖಂಡಿತ ಅನಿಸಿರುತ್ತೆ. ಯಾಕಂದ್ರೆ ಸ್ವಲ್ಪ ಹೊತ್ತಲ್ಲೇ ‘ಒಂದು ದೊಡ್ಡ ಬಿರುಗಾಳಿ ಬೀಸಿತು, ಆ ಗಾಳಿಗೆ ಹಡಗು ಸಿಕ್ಕಿಹಾಕೊಂಡಿತು’ ಅಂತ ಲೂಕ ಬರೆದಿದ್ದಾನೆ. ಆ ಗಾಳಿ ಜಾಸ್ತಿ ಆಗ್ತಾ-ಆಗ್ತಾ ಹೋಯ್ತು, ಇದ್ರಿಂದ ಸಮುದ್ರದಲ್ಲಿ ದೊಡ್ಡ-ದೊಡ್ಡ ಅಲೆಗಳು ಏಳೋಕೆ ಶುರುವಾಯ್ತು. ಗಂಟೆಗಳು ಕಳೀತು, ದಿನಗಳು ಉರುಳಿದವು, “ಆದ್ರೆ ಬಿರುಗಾಳಿಯ ರಭಸ ಕಡಿಮೆ ಆಗಲಿಲ್ಲ.” ಆಗ ನಾವಿಕರು ಹಡಗನ್ನ ಹಗುರ ಮಾಡೋಕೆ ಅದ್ರಲ್ಲಿದ್ದ ಸಾಮಾನುಗಳನ್ನೆಲ್ಲಾ ನೀರಿಗೆ ಎಸೆದ್ರು. ತುಂಬ ದಿನಗಳು ಯಾರೂ ಏನೂ ತಿನ್ನಲಿಲ್ಲ. ಬಿರುಗಾಳಿ ಶುರುವಾಗಿ ಸುಮಾರು ಎರಡು ವಾರ ಆದ್ಮೇಲೆ, ‘ನಾವಿನ್ನು ಬದುಕಿ ಉಳಿಯೋದು ಬರೀ ಕನಸು ಅಂತನಿಸ್ತು’ ಅಂತ ಲೂಕ ಬರೆದಿದ್ದಾನೆ.
ಪೌಲ ಇದ್ದ ಹಡಗು ಬಿರುಗಾಳಿಗೆ ಸಿಕ್ಕಿ ಅಪಾಯದಲ್ಲಿತ್ತು, ಆಗ ಅವನು ಹಡಗಲ್ಲಿದ್ದವ್ರಿಗೆ ತಮ್ಮ ಪ್ರಾಣ ಉಳಿಸ್ಕೊಳ್ಳೋಕೆ ಸಹಾಯ ಮಾಡಿದ
ಆದ್ರೆ ಪೌಲ ಆ ಜನ್ರಿಗೆ “ಧೈರ್ಯ ತಂದ್ಕೊಳ್ಳಿ ಅಂತ ಬೇಡ್ಕೊಳ್ತೀನಿ” ಅಂತ ಹೇಳಿದ. ಆಮೇಲೆ ಅವನು “ನಾವು ಹಡಗನ್ನ ಮಾತ್ರ ಕಳ್ಕೊಳ್ತೀವಿ. ಆದ್ರೆ ನಮ್ಮಲ್ಲಿ ಒಬ್ರೂ ಸಾಯಲ್ಲ” ಅಂತ ಭವಿಷ್ಯವಾಣಿ ಹೇಳಿದ. ಆದ್ರೆ ಕೆಲವು ನಾವಿಕರು ಚಿಕ್ಕ ದೋಣಿಯನ್ನ ಸಮುದ್ರಕ್ಕೆ ಇಳಿಸಿ ಅದ್ರಲ್ಲಿ ತಪ್ಪಿಸ್ಕೊಂಡು ಹೋಗೋಕೆ ಪ್ರಯತ್ನ ಮಾಡ್ತಿದ್ರು. ಆಗ ಪೌಲ, ‘ನಾವಿಕರು ಈ ಹಡಗಲ್ಲಿ ಇಲ್ಲಾಂದ್ರೆ ತುಂಬ ಜನ್ರ ಪ್ರಾಣ ಹೋಗುತ್ತೆ’ ಅಂತ ಎಚ್ಚರಿಸಿದ. ಆಗ ಸೈನಿಕರು ಆ ಚಿಕ್ಕ ದೋಣಿಯ ಹಗ್ಗಗಳನ್ನ ಕತ್ತರಿಸಿ ಆ ದೋಣಿನ ಸಮುದ್ರಕ್ಕೆ ಬಿಟ್ಟುಬಿಟ್ರು.
ಬೆಳಕು ಹರಿಯೋ ಮುಂಚೆ ಇನ್ನೂ ಕತ್ತಲಿರುವಾಗ್ಲೇ ಪೌಲ ಹಡಗಲ್ಲಿದ್ದವ್ರಿಗೆ, ಏನೂ ಚಿಂತೆ ಮಾಡದೇ ಹಡಗಲ್ಲಿ ಏನಿದ್ಯೋ ಅದನ್ನ ತಿನ್ನೋಕೆ ಹೇಳಿದ. ಆಮೇಲೆ ಅವನು ಅವ್ರಿಗೆ, “ನಿಮ್ಮಲ್ಲಿ ಯಾರಿಗೂ ಏನೂ ಆಗಲ್ಲ. ನಿಮ್ಮಲ್ಲಿ ಒಬ್ರೂ ಸಾಯಲ್ಲ” ಅಂತ ಧೈರ್ಯ ತುಂಬಿದ. ಆಮೇಲೆ ಅವನು ಅವ್ರೆಲ್ರ ಮುಂದೆ ಯೆಹೋವನಿಗೆ ಧನ್ಯವಾದ ಹೇಳಿದ. ಪೌಲ ತೋರಿಸಿದ ಧೈರ್ಯ ಹಡಗಲ್ಲಿ ಇದ್ದವ್ರಿಗೆಲ್ಲಾ ತುಂಬ ಪ್ರೋತ್ಸಾಹ ಕೊಡ್ತು. “ಅವ್ರೆಲ್ಲ ಧೈರ್ಯ ತಂದ್ಕೊಂಡ್ರು” ಅಂತ ಲೂಕ ಬರೆದಿದ್ದಾನೆ. ಅವ್ರೆಲ್ರೂ ಹೊಟ್ಟೆ ತುಂಬ ತಿಂದ್ರು. ಆಮೇಲೆ ಹಡಗಲ್ಲಿ ಉಳಿದಿದ್ದ ಗೋದಿನ ಸಮುದ್ರಕ್ಕೆ ಎಸೆದು ಅದನ್ನ ಹಗುರ ಮಾಡಿದ್ರು. ಬೆಳಗ್ಗೆನೇ ಹಡಗು ಒಂದು ಮರಳಿನದಿಬ್ಬಕ್ಕೆ ಡಿಕ್ಕಿ ಹೊಡಿತು. ಅಲೆಗಳು ಹಡಗಿಗೆ ಜೋರಾಗಿ ಬಡಿತಾ ಇದ್ದಿದ್ರಿಂದ ಹಡಗು ಒಡೆದು ಚೂರು-ಚೂರಾಯ್ತು. ಆದ್ರೂ ಪೌಲ ಹೇಳಿದ ಮಾತು ನಿಜ ಆಯ್ತು. “ಎಲ್ರೂ ಸುರಕ್ಷಿತವಾಗಿ ತೀರ ಮುಟ್ಟಿದ್ರು.” ಹೀಗೆ ಕೊನೆಗೂ ಅವ್ರೆಲ್ರ ಪ್ರಾಣ ಉಳೀತು.
ಅವರೆಲ್ರೂ ಮಾಲ್ಟ ಅನ್ನೋ ದ್ವೀಪಕ್ಕೆ ಬಂದು ತಲುಪಿದ್ರು. ಸ್ವಲ್ಪ ಸಮಯದಲ್ಲೇ ಪೌಲ ಮತ್ತು ಅವನ ಸ್ನೇಹಿತರು ಸಿಹಿಸುದ್ದಿ ಸಾರೋಕೆ ಶುರು ಮಾಡಿದ್ರು. ದೇವರು ಪೌಲನಿಗೆ ಅಲ್ಲಿ ಅದ್ಭುತಗಳನ್ನ ಮಾಡೋ ಶಕ್ತಿನೂ ಕೊಟ್ಟನು. ಇದ್ರಿಂದ ಮಾಲ್ಟದ ತುಂಬ ಜನ್ರು ಪೌಲ ಮತ್ತು ಅವನ ಜೊತೆಗಿದ್ದವ್ರನ್ನ ಪ್ರೀತಿಯಿಂದ ಚೆನ್ನಾಗಿ ನೋಡ್ಕೊಂಡ್ರು ಮತ್ತು ಅವ್ರಿಗೆ ಉಡುಗೊರೆಗಳನ್ನೂ ಕೊಟ್ರು.
ಪೌಲ ಯಾವತ್ತೂ ಧೈರ್ಯ ತೋರಿಸೋದನ್ನ ನಿಲ್ಲಿಸಲಿಲ್ಲ. ಕೆಲವು ತಿಂಗಳಾದ್ಮೇಲೆ ಕೊನೆಗೂ ಅವನು ರೋಮ್‌ಗೆ ಬಂದು ತಲುಪಿದ. ಅದು ವಸಂತ ಕಾಲ ಆಗಿತ್ತು. ಅಲ್ಲಿ ಅವನು ಸೈನಿಕರ ಕಾವಲಲ್ಲಿ ಹೆಚ್ಚು ಕಮ್ಮಿ ಎರಡು ವರ್ಷ ಬಂಧಿಯಾಗಿದ್ದ. ಆದ್ರೆ ಅಲ್ಲೂ ಅವನು ಸಿಹಿಸುದ್ದಿ ಸಾರ್ತಿದ್ದ, ದೇವಪ್ರೇರಣೆಯಿಂದ ಸಭೆಗಳಿಗೆ ಪತ್ರಗಳನ್ನ ಬರೀತಿದ್ದ. ಅಲ್ಲಿಂದ ಅವನಿಗೆ ಬಿಡುಗಡೆ ಆದ್ಮೇಲೆ ಸಿಹಿಸುದ್ದಿ ಸಾರೋದನ್ನ ಇನ್ನೂ ಜಾಸ್ತಿ ಮಾಡಿದ. ಆದ್ರೆ ಕೆಲವು ವರ್ಷಗಳಾದ್ಮೇಲೆ ಮತ್ತೆ ಅವನನ್ನ ರೋಮ್‌ನಲ್ಲಿ ಜೈಲಿಗೆ ಹಾಕಿದ್ರು. ಅವನು ಕೈದಿಯಾಗಿದ್ದಿದ್ದು ಇದೇ ಕೊನೇ ಸಲ. ದೇವ್ರಿಗೆ ನಿಯತ್ತಾಗಿದ್ದ, ಧೈರ್ಯ ತೋರಿಸ್ತಿದ್ದ ಪೌಲನನ್ನ ಬಹುಶಃ ರೋಮಿನವರು ಕೊಂದುಬಿಟ್ರು. ಆದ್ರೆ ಪೌಲ ಸಾವಿಗೆ ಹೆದರಲಿಲ್ಲ. ಅವನು ಸಾವನ್ನ “ಕೊನೇ ಶತ್ರು” ಅಂತ ಕರೆದ, ಯಾಕಂದ್ರೆ ಯೆಹೋವ ದೇವರು ಸಾವನ್ನ ಸರ್ವನಾಶ ಮಾಡ್ತಾನೆ ಅಂತ ಅವನಿಗೆ ಗೊತ್ತಿತ್ತು. (1 ಕೊರಿಂ. 15:26) ದೇವರು ಸರಿಯಾದ ಸಮಯದಲ್ಲಿ ಪೌಲನಿಗೆ ಬಹುಮಾನ ಕೊಡ್ತಾನೆ, ಅಂದ್ರೆ ಸ್ವರ್ಗದಲ್ಲಿ ಅಮರವಾದ ಜೀವನ ಕೊಡ್ತಾನೆ. ಆಗ ಅವನು ಯೇಸು ಕ್ರಿಸ್ತನ ಜೊತೆ ರಾಜನಾಗಿ ಮತ್ತು ಪುರೋಹಿತನಾಗಿ ಸೇವೆ ಮಾಡ್ತಾನೆ.
ಈ ಘಟನೆ ಬಗ್ಗೆ ಬೈಬಲಲ್ಲಿ ಓದಿ:
ಉತ್ರ ಹುಡುಕಿ:
ಈ ಘಟನೆಗಳಲ್ಲಿ ಪೌಲ ಹೇಗೆಲ್ಲಾ ಧೈರ್ಯ ತೋರಿಸಿದ?
ಉತ್ರ ಹುಡುಕಿ:
1. ಸೌಲ ಯಾಕೆ ಪೌಲ ಅನ್ನೋ ರೋಮನ್ ಹೆಸ್ರನ್ನ ಬಳಸೋಕೆ ಇಷ್ಟ ಪಟ್ಟ? (w08 3/1 ಪುಟ 12 ಪ್ಯಾರ 4-5-wcgr)
2. ಪೌಲ ತಾರ್ಸಕ್ಕೆ ವಾಪಸ್ ಬಂದಾಗಿಂದ ಹಿಡಿದು ಅವನು ಅಂತಿಯೋಕ್ಯಕ್ಕೆ ಹೋಗೋ ತನಕ ಮಧ್ಯದಲ್ಲಿ ಒಂಬತ್ತು ವರ್ಷಗಳಿತ್ತು. ಈ ವರ್ಷಗಳನ್ನ ಅವನ “ಅಜ್ಞಾತ ವರ್ಷಗಳು” ಅಥವಾ ಮೌನವಾಗಿದ್ದ ವರ್ಷಗಳು ಅಂತ ಕರೀತಾರೆ. ಆ ಸಮಯದಲ್ಲಿ ಅವನಿಗೆ ಯಾವ ಕಷ್ಟಗಳು ಬಂದಿರಬಹುದು? (w00 7/15 ಪುಟ 26-27, ಚೌಕ ಪ್ಯಾರ 3-4)
3. ಪೌಲ ತಮ್ಮ ಪ್ರಯಾಣನ ಸ್ವಲ್ಪ ಸಮಯ ನಿಲ್ಲಿಸೋಣ ಅಂತ ಯೂಲ್ಯನಿಗೆ ಯಾಕೆ ಹೇಳಿದ? (ಅ. ಕಾ. 27:9, 10; wp17.5 ಪುಟ 9 ಪ್ಯಾರ 3-4-wcgr) ಎ
ಚಿತ್ರ ಎ: ಇದು ಒಂದನೇ ಶತಮಾನದಲ್ಲಿ ಸರಕು ಸಾಗಿಸ್ತಿದ್ದ ಹಡಗು, ಇಂಥದ್ದೇ ಒಂದು ಹಡಗನ್ನ ಪೌಲ ಮುರ ಬಂದರಿನಲ್ಲಿ ಹತ್ತಿದ
4. ಮಾಲ್ಟದ ಜನ್ರು ಪೌಲನ ಬಗ್ಗೆ “ಇವನು ಕೊಲೆಗಾರ ಆಗಿರಬೇಕು” ಅಂತ ಯಾಕೆ ಹೇಳಿದ್ರು? (ಅ. ಕಾ. 28:4; w15 10/1 ಪುಟ 9 ಪ್ಯಾರ 5-6-wcgr)
ನಮಗೇನು ಪಾಠ?
ಪೌಲ ತನ್ನ ಜೊತೆ ಹಡಗಲ್ಲಿ ಇದ್ದವ್ರಿಗೆ, ದೇವರ ಸಹಾಯದಿಂದ “ನಿಮ್ಮಲ್ಲಿ ಯಾರಿಗೂ ಏನೂ ಆಗಲ್ಲ. ನಿಮ್ಮಲ್ಲಿ ಒಬ್ರೂ ಸಾಯಲ್ಲ” ಅಂತ ಹೇಳಿದ. (ಅ. ಕಾ. 27:22, 34) ಇದು ಯೆಹೋವ ದೇವರಿಗಿರೋ ಶಕ್ತಿ ಬಗ್ಗೆ ನಿಮಗೆ ಏನು ಕಲಿಸುತ್ತೆ ಮತ್ತು ಈ ವಿಷ್ಯ ಸಿಹಿಸುದ್ದಿ ಸಾರೋದ್ರ ಬಗ್ಗೆ ನಿಮಗೆ ಏನು ಕಲಿಸುತ್ತೆ?
ಪೌಲ ಪ್ರಾರ್ಥನೆ ಮಾಡಿದ ಮೇಲೆ ಹಡಗಲ್ಲಿ ಇದ್ದವರು “ಧೈರ್ಯ ತಂದ್ಕೊಂಡ್ರು.” (ಅ. ಕಾ. 27:35, 36) ನಾವು ಯಾವ ಸನ್ನಿವೇಶಗಳಲ್ಲಿ ಮಾಡೋ ಪ್ರಾರ್ಥನೆಗಳು ಬೇರೆಯವ್ರಿಗೆ ಪ್ರೋತ್ಸಾಹ ಕೊಡುತ್ತೆ? ಬಿ
ಚಿತ್ರ ಬಿ
ಈ ಘಟನೆಯಲ್ಲಿ ಪೌಲ ಧೈರ್ಯ ತೋರಿಸಿದ ತರ ನೀವು ಹೇಗೆಲ್ಲಾ ಧೈರ್ಯ ತೋರಿಸಬೇಕಂತ ಇದ್ದೀರಾ?
ಇದ್ರ ಬಗ್ಗೆ ಯೋಚ್ನೆ ಮಾಡಿ
ಈ ಘಟನೆ ಯೆಹೋವನ ಬಗ್ಗೆ ನಂಗೇನು ಕಲಿಸುತ್ತೆ?
ಈ ಘಟನೆಗೂ ಯೆಹೋವನ ಉದ್ದೇಶಕ್ಕೂ ಏನ್ ಸಂಬಂಧ?
ಈ ಘಟನೆಲಿ ಪೌಲನ ಬಗ್ಗೆ ನೀವೇನು ಕಲಿತ್ರಿ? ಇದ್ರಿಂದ ಪೌಲನಿಗೆ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಆಳ್ವಿಕೆ ಮಾಡೋ ಅವಕಾಶ ಸಿಕ್ಕಿದ್ರ ಬಗ್ಗೆ ನಿಮಗೆ ಯಾಕೆ ಖುಷಿಯಾಗುತ್ತೆ?
ಇದನ್ನೂ ನೋಡಿ
ಒಂದನೇ ಶತಮಾನದಲ್ಲಿ ಸಮುದ್ರ ಪ್ರಯಾಣ ಎಷ್ಟು ಮುಖ್ಯವಾಗಿತ್ತು ಮತ್ತು ಕ್ರೈಸ್ತ ಧರ್ಮವನ್ನ ಹಬ್ಬಿಸೋಕೆ ಅದೆಷ್ಟು ಸಹಾಯ ಮಾಡ್ತು ಅಂತ ನೋಡಿ.
ಪೌಲನಲ್ಲಿದ್ದ ಸಹನೆ ಮತ್ತು ಸ್ವನಿಯಂತ್ರಣನ ಯೆಹೋವನಿಗೆ ನಿಯತ್ತಾಗಿರೋ ಹಿರಿಯರು ಹೇಗೆ ತೋರಿಸಿದ್ದಾರೆ ಅಂತ ನೋಡಿ.