ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 9/8 ಪು. 15-19
  • ಹಿಮಪಾತದಿಂದಾದ ದುರ್ಘಟನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಮಪಾತದಿಂದಾದ ದುರ್ಘಟನೆ
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಒಂದು ಸುಂದರವಾದ ಯುದ್ಧ ಮೈದಾನ”
  • ಹತ್ತಿರದಲ್ಲಿದ್ದ ವಿಪತ್ತುಗಳು
  • ಅವರು ಪರಸ್ಪರ ಸಹಾಯ ಮಾಡಿದರು
  • ಇದರಿಂದ ನಮಗೆ ಯಾವ ಪಾಠಗಳು?
  • ಧ್ವಂಸಗಳ ಮಧ್ಯೆ ಪರಿಹಾರವನ್ನು ಒದಗಿಸುವುದು
    ಕಾವಲಿನಬುರುಜು—1996
  • ಸೃಷ್ಟಿಯ ಅದ್ಭುತಗಳು ಯೆಹೋವನನ್ನು ಮಹೋನ್ನತೆಗೇರಿಸುತ್ತವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಸಮುದ್ರದ ಸ್ಫಟಿಕ ಭವನಗಳು
    ಎಚ್ಚರ!—1996
  • ಚಂಡಮಾರುತ ಆ್ಯಂಡ್ರುವಿಗೆ ನಾಶಮಾಡಲು ಆಗದ್ದಿದ ವಿಷಯಗಳು
    ಎಚ್ಚರ!—1993
ಇನ್ನಷ್ಟು
ಎಚ್ಚರ!—1998
g98 9/8 ಪು. 15-19

ಹಿಮಪಾತದಿಂದಾದ ದುರ್ಘಟನೆ

“ರಾಷ್ಟ್ರದ ಇತಿಹಾಸದಲ್ಲೇ ನಡೆದ ಅತ್ಯಂತ ಭಯಂಕರ ನೈಸರ್ಗಿಕ ದುರ್ಘಟನೆ.” ಈ ಜನವರಿ ತಿಂಗಳಿನಲ್ಲಿ ಸಂಭವಿಸಿದ ನೀರ್ಗಲ್ಲ ಬಿರುಗಾಳಿಯನ್ನು, ದ ಟೊರಾಂಟೊ ಸ್ಟಾರ್‌ ವಾರ್ತಾಪತ್ರಿಕೆಯು ಹೀಗೆಂದು ವರ್ಣಿಸಿತು. ಆ ಬಿರುಗಾಳಿಯು ಕೆನಡದ ಪ್ರಾಂತಗಳಾದ ಆಂಟೇರಿಯೊ, ಕ್ಯೂಬೆಕ್‌, ಮತ್ತು ನ್ಯೂ ಬ್ರೂನ್ಸ್‌ವಿಕ್‌ಗಳನ್ನು ಧ್ವಂಸಮಾಡಿತು. ಅಮೆರಿಕದಲ್ಲಿ, ಮೇನ್‌ ಮತ್ತು ನ್ಯೂ ಹ್ಯಾಂಪ್‌ಶೈಅರ್‌, ಅಲ್ಲದೆ ವರ್ಮೌಂಟ್‌ ಹಾಗೂ ಗ್ರಾಮೀಣ ನ್ಯೂ ಯಾರ್ಕ್‌ನ ಕೆಲವು ಭಾಗಗಳನ್ನು, ರಾಷ್ಟ್ರಾಧ್ಯಕ್ಷರಾದ ಬಿಲ್‌ ಕ್ಲಿಂಟನ್‌ ಅವರು ವಿಪತ್ತಿನ ಕ್ಷೇತ್ರಗಳೆಂದು ಘೋಷಿಸಿದರು.

ಐದು ದಿನಗಳ ವರೆಗೆ ಹೆಪ್ಪುಗಟ್ಟುವ ಮಳೆಯನ್ನು ಒಳಗೊಂಡ ಬಿರುಗಾಳಿಯು, ಸುಮಾರು 35 ಮರಣಗಳಿಗೆ ಕಾರಣವಾಗಿತ್ತೆಂದು ಹೇಳಲಾಯಿತು. ಸಾಮಾನ್ಯವಾಗಿ ಅಂತಹ ಮಳೆಯು ಕೆಲವೊಂದು ತಾಸುಗಳ ವರೆಗೆ ಮಾತ್ರ ಇರುವುದಾದರೂ, ಈ ಸಂದರ್ಭದಲ್ಲಿ ದಟ್ಟವಾದ ತಣ್ಣನೆಯ ಗಾಳಿಯ ಮೇಲೆ, ಬೆಚ್ಚನೆಯ ಗಾಳಿಯ ಮೇಲ್ಪದರವು ಸ್ಥಾಯಿಯಾಗಿ ಉಳಿದಿತ್ತು. ಆದಕಾರಣ, ಮಳೆಯು ನೆಲವನ್ನು ತಾಕಿದ ಕೂಡಲೇ ಹೆಪ್ಪುಗಟ್ಟಿತು. ಇದರಿಂದ, ಎಂಟು ಸೆಂಟಿಮೀಟರುಗಳಷ್ಟು ದಟ್ಟವಾದ ನೀರ್ಗಲ್ಲಿನ ಪದರಗಳು ಶೇಖರಗೊಂಡವು. ನೀರ್ಗಲ್ಲಿನ ಭಾರದಿಂದಾಗಿ, ಅನೇಕ ಮರಗಳು, ವಿದ್ಯುತ್‌ ಕಂಬಗಳು ಹಾಗೂ ತಂತಿಗಳು, ಮತ್ತು ಟ್ರಾನ್ಸ್‌ಮಿಷನ್‌ ಟವರ್‌ಗಳು, ಅನೇಕ ವೇಳೆ ಭಯಂಕರವಾದ ಪರಿಣಾಮಗಳೊಂದಿಗೆ ಕುಸಿದುಬಿದ್ದವು.

ಕ್ಯೂಬೆಕ್‌ ನಗರದಲ್ಲಿ, ಉಕ್ಕಿನಿಂದ ನಿರ್ಮಿಸಲ್ಪಟ್ಟ ಬೃಹದಾಕಾರದ ನೂರಾರು ಟ್ರಾನ್ಸ್‌ಮಿಷನ್‌ ಟವರ್‌ಗಳು, ಟಿನ್‌ಫೈಲ್‌ (ತವರದ ಹಾಳೆ)ಯಿಂದ ಮಾಡಲ್ಪಟ್ಟಿದ್ದವೊ ಎಂಬಂತೆ ಉರುಳಿಬಿದ್ದವು. ಕಳವಳಗೊಂಡ ಒಬ್ಬ ಪ್ರಯಾಣಿಕನು ವರದಿಸಿದ್ದು: “ನನ್ನ ಮುಂದೆ ಒಂದು [ಟವರ್‌] ಪ್ಲ್ಯಾಸ್ಟಿಕ್‌ನಂತೆ ಮುದುರಿ ಬೀಳುವುದನ್ನು ನಾನು ನೋಡಿದೆ. ಅದು ಎರಡಾಗಿ ಮುದುರಿ, ಒಂದು ಚೆಂಡಿನಂತಾಗಿ, ನಂತರ ಚೂರು ಚೂರಾಯಿತು. ಹೆದ್ದಾರಿಯ ಉದ್ದಕ್ಕೂ ವಿದ್ಯುತ್ತಿನ ತಂತಿಗಳು ಅಲ್ಲಲ್ಲಿ ಬಿದ್ದುಕೊಂಡಿದ್ದವು. ಒಂದು ಟವರ್‌ ಬಿದ್ದ ಕೂಡಲೇ, ಅದರ ಹಿಂದೆ ಇದ್ದ ಮೂರು ಟವರ್‌ಗಳು ಕುಸಿದುಬಿದ್ದವು.”

ಭೂಮಿಯನ್ನು ಮೂರು ಬಾರಿ ಸುತ್ತುವರಿಯಲು ಸಾಕಾಗುವಷ್ಟು, ಅಂದರೆ, 1,20,000 ಕಿಲೊಮೀಟರ್‌ ಉದ್ದದ ವಿದ್ಯುತ್ತಿನ ತಂತಿಗಳನ್ನು ನೀರ್ಗಲ್ಲಿನ ಶೇಖರಣೆಯು ಕಿತ್ತೊಗೆಯಿತು! ಕೆನಡದಲ್ಲಿ 30ರಿಂದ 40 ಲಕ್ಷ ಜನರು, ಅವರಲ್ಲಿ ಕೆಲವರು ಮೂರು ವಾರಗಳು ಮತ್ತು ಅದಕ್ಕಿಂತಲೂ ಹೆಚ್ಚಿನ ಕಾಲದ ವರೆಗೆ, ವಿದ್ಯುಚ್ಛಕ್ತಿ ಮತ್ತು ಶಾಖದ ಸೌಲಭ್ಯವಿಲ್ಲದೆ ಇದ್ದರು.

ಮೇನ್‌ನಲ್ಲಿ, ರಾಜ್ಯಪಾಲರಾದ ಆ್ಯಂಗ್‌ಸ್‌ ಕಿಂಗ್‌ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅಲ್ಲಿ 2,00,000ಕ್ಕಿಂತಲೂ ಹೆಚ್ಚಿನ ಜನರಿಗೆ ವಿದ್ಯುಚ್ಛಕ್ತಿಯ ಸರಬರಾಯಿ ಇರಲಿಲ್ಲ. “ಈ ರಾಜ್ಯವನ್ನು ಇದುವರೆಗೂ ಬಾಧಿಸಿರುವ ವಿಪತ್ತುಗಳಲ್ಲೇ, ಇದು ಅತ್ಯಂತ ದೊಡ್ಡ ವಿಪತ್ತಾಗಿದೆ” ಎಂದು ರಾಜ್ಯಪಾಲರು ಹೇಳಿದರು. ನ್ಯೂ ಯಾರ್ಕ್‌ನ ರಾಜ್ಯಪಾಲರಾದ ಜಾರ್ಜ್‌ ಪಟಾಕೀ ಪ್ರಕಟಿಸಿದ್ದು: “ಇಡೀ ನಗರಗಳೇ ವಿದ್ಯುತ್‌ಶೂನ್ಯವಾಗಿದ್ದವು.”

ಸೆಂಟ್‌ ಲಾರೆನ್ಸ್‌ ನದಿಯ ದಕ್ಷಿಣ ದಡದ ಉದ್ದಕ್ಕೂ, ಬಿರುಗಾಳಿಯ ಸಮಯದಲ್ಲಿ ಸುಮಾರು 30,000ದಷ್ಟು ಮರದ ವಿದ್ಯುತ್‌ ಕಂಬಗಳು ಬುಡಮೇಲಾದವು. 17 ತಾಸುಗಳ ಹೆಪ್ಪುಗಟ್ಟುವ ಮಳೆಯ ನಂತರ, ಉತ್ತರ ನ್ಯೂ ಯಾರ್ಕ್‌ನಲ್ಲಿ, ಆ ನದಿ ಬಳಿ ವಾಸಿಸುವ ಜಿಮ್‌ ಕೆಲೀ ಬರೆದುದು: “ಕಿಟಿಕಿಯ ಆಚೆಗೆ ನಾವು ಏನನ್ನೂ ನೋಡಸಾಧ್ಯವಿರಲಿಲ್ಲ. ಅಲ್ಲಿರುವುದು ಕೇವಲ ಘನಹಿಮ ಅಥವಾ ಹಬೆಯಲ್ಲ, ಗಟ್ಟಿಯಾದ ನೀರ್ಗಲ್ಲಾಗಿದೆ. ಮನೆಯ ಪ್ರತಿ ದಿಕ್ಕಿನಿಂದಲೂ ಶಬ್ದಗಳು ಕೇಳಿಬರುತ್ತವೆ.”

ಕೆಲೀ ವಿವರಿಸಿದ್ದು: “ದೂರದಲ್ಲಿ ಬಂದೂಕು ಹಾರಿಸುವ ಶಬ್ದದಂತಹ ಒಂದು ಶಬ್ದವನ್ನು ನೀವು ಕೇಳಿಸಿಕೊಳ್ಳಸಾಧ್ಯವಿದೆ. ಢಮಾರ್‌! ಮೌನ. ಢಮಾರ್‌! ಮೌನ. ಢಮಾರ್‌, ಢಮಾರ್‌!” ಆ ಸದ್ದು, ಮುರಿದುಬೀಳುತ್ತಿದ್ದ ಮರಗಳಿಂದ ಮತ್ತು ಟೆಲಿಫೋನ್‌ ಕಂಬಗಳ ಬೀಳುವಿಕೆಯಿಂದ ಉಂಟಾಯಿತೆಂದು ಅವನು ತರುವಾಯ ತಿಳಿದುಕೊಂಡನು.

ಹಾಸ್ಯದ ವಿಷಯವೇನೆಂದರೆ, ಭೂಮಿಯು ಧ್ವಂಸಮಾಡಲ್ಪಟ್ಟಿದ್ದರೂ, ಭೂದೃಶ್ಯವು ಕಣ್ಣುಕುಕ್ಕಿಸುವ ಸೌಂದರ್ಯವನ್ನು ಪಡೆದಿತ್ತು. ಆಂಟೇರಿಯೊ ನಗರದ ಮೇಪಲ್‌ ಸಿರಪ್‌ ಉದ್ಯಮವನ್ನು ಬಹಳವಾಗಿ ಬಾಧಿಸುತ್ತಾ, ಎರಡು ಕೋಟಿಯಷ್ಟು ಮೇಪಲ್‌ ಮರಗಳು ಬಿದ್ದುಹೋಗಿರಬಹುದೆಂಬ ಸಂಶಯವನ್ನು ಉಂಟುಮಾಡಿತು. ಮೇಪಲ್‌ ಮರಗಳನ್ನು ಬೆಳೆಸುವ ಸ್ತ್ರೀಯೊಬ್ಬಳು ಪ್ರಲಾಪಿಸಿದ್ದು: “ಮರಗಳು, ಆಕಾಶದ ಕಡೆಗೆ ಚಾಚುತ್ತಿರುವ ಚೂಪಾದ ಕಡ್ಡಿಗಳಂತಾಗಿಬಿಟ್ಟಿವೆ.”

“ಒಂದು ಸುಂದರವಾದ ಯುದ್ಧ ಮೈದಾನ”

ಮೇಲಿನ ಬರಹವು, ಟೊರಾಂಟೊ ಸ್ಟಾರ್‌ ಪತ್ರಿಕೆಯಲ್ಲಿ ಕಂಡುಬಂದ ತಲೆಬರಹವಾಗಿತ್ತು. ಅದು, ಕೆನಡದ ಎರಡನೆಯ ಅತ್ಯಂತ ದೊಡ್ಡ ನಗರವಾದ ಮಾಂಟ್ರೀಅಲ್‌ ಅನ್ನು ಮೇಲಿನಂತೆ ವರ್ಣಿಸಿತು. “ಇಲ್ಲಿನ ರಸ್ತೆಗಳು, ಬಾಂಬು ಸಿಡಿದ ರಸ್ತೆಗಳಂತೆ ಕಾಣುತ್ತವೆ!” ಎಂದು ಒಬ್ಬ ನಿವಾಸಿಯು ಉದ್ಘೋಷಿಸಿದಳು. ಮಾಂಟ್ರೀಅಲ್‌ ಕ್ಷೇತ್ರದಲ್ಲಿ ಮಾತ್ರ ಆದ ಹಾನಿಯ ಕುರಿತ ಮುಂಚಿತವಾದ ಅಂದಾಜು, 50 ಕೋಟಿ ಡಾಲರುಗಳಿಗಿಂತಲೂ ಹೆಚ್ಚಾಗಿತ್ತು.

ಆಂಟೇರಿಯೊದ ಬ್ಲೆಲ್‌ವಿಲ್ಲ್‌ಯಲ್ಲಿ ವಾಸಿಸುವ ವ್ಯಕ್ತಿಯೊಬ್ಬನು ಹೇಳಿದ್ದು: “ಪರಮಾಣು ಯುದ್ಧವೊಂದು ಸಂಭವಿಸಿದೆಯೊ ಎಂಬಂತೆ ಅದು ತೋರುತ್ತದೆ. ಎಲ್ಲೆಲ್ಲಿಯೂ ಬಿಳಿ ಧೂಳಿದೆ. ಅದು ವಿಕಟವಾಗಿದೆ.” ಅದನ್ನು ಅವನು “ವಿಕಟ ಚೆಲುವು” ಎಂದು ಕರೆದನು.

ಬಿರುಗಾಳಿ ಸಂಭವಿಸಿದ ಮುಂದಿನ ವಾರ, ಲಕ್ಷಾಂತರ [ಜನರಿಗೆ] ವಿದ್ಯುಚ್ಛಕ್ತಿ ಇನ್ನೂ ಇಲ್ಲದಿದ್ದಾಗ, ಮತ್ತು ಚಳಿಯು ತೀಕ್ಷ್ಣವಾಗಿದ್ದಾಗ, ಪೊಲೀಸರು ಜನರನ್ನು ಆಶ್ರಯಸ್ಥಾನಗಳಿಗೆ ಸ್ಥಳಾಂತರಿಸತೊಡಗಿದರು. “ನಾವು ಅವರಲ್ಲಿ ವಿನಂತಿಸಿಕೊಳ್ಳಬೇಕೊ ಆರ್ಡರ್‌ ಮಾಡಬೇಕೊ?” ಎಂದು ಒಬ್ಬ ಅಧಿಕಾರಿಯು ಕೇಳಿದನು.

“ಅವರು ಅಲ್ಲಿಂದ ಹೊರಬರಲೇಬೇಕು” ಎಂದು ಮೇಲ್ವಿಚಾರಣೆ ನಡೆಸುತ್ತಿದ್ದವನು ಉತ್ತರಿಸಿದನು. “ಆದರೆ ಜಾಣ್ಮೆಯಿಂದ ಅದನ್ನು ಮಾಡಿರಿ.” ಅವನು ಕೂಡಿಸಿಹೇಳಿದ್ದು: “ನಾವು ಯುದ್ಧದ ಸಮಯದಲ್ಲಿದ್ದೆವೆಂದು ನೀವು ನೆನಸಬಹುದು.”

ಹತ್ತಿರದಲ್ಲಿದ್ದ ವಿಪತ್ತುಗಳು

ಮಾಂಟ್ರೀಅಲ್‌ನ ಹೆಚ್ಚಿನ ಭಾಗದಲ್ಲಿ ವಿದ್ಯುಚ್ಛಕ್ತಿ ಇಲ್ಲದಿದ್ದ ಕಾರಣ, ಟ್ರಾಫಿಕ್‌ ಬೆಳಕುಗಳು ಇಲ್ಲವಾದವು ಮತ್ತು ಸುರಂಗ ರೈಲುದಾರಿಯು ಮುಚ್ಚಲ್ಪಟ್ಟಿತು. ಬಿರುಗಾಳಿಯ ಕೊನೆಯ ದಿನದಂದು, ನಗರಕ್ಕೆ ವಿದ್ಯುಚ್ಛಕ್ತಿಯನ್ನು ಸರಬರಾಯಿ ಮಾಡುತ್ತಿದ್ದ ಐದು ಟ್ರಾನ್ಸ್‌ಮಿಷನ್‌ ಕೇಂದ್ರಗಳಲ್ಲಿ ನಾಲ್ಕು ಕೆಟ್ಟುಹೋಗಿದ್ದವು ಇಲ್ಲವೆ ಕಾರ್ಯಸ್ತಗಿತವಾಗಿದ್ದವು. ಯಾವ ಸಂಭಾವ್ಯ ಪರಿಣಾಮಗಳೊಂದಿಗೆ?

“ಮಾಂಟ್ರೀಅಲ್‌ನ ಕ್ಷೇತ್ರವು ಮಧ್ಯಾಹ್ನದ ಹೊತ್ತಿನಲ್ಲಿ ಸಂಪೂರ್ಣ ಕತ್ತಲೆಯಲ್ಲಿದ್ದು, ನೀರು ಸಹ ಇಲ್ಲದೆ ಪರಿತಪಿಸುತ್ತಿದ್ದೆವು” ಎಂದು ಕ್ಯೂಬೆಕ್‌ನ ಪ್ರಧಾನ ಮಂತ್ರಿ ಲ್ಯೂಸ್ಯನ್‌ ಬೂಶಾರ್‌ ವಿವರಿಸಿದರು. “ನೀರಿನ ಸರಬರಾಯಿಯ ಎರಡು ಕೇಂದ್ರಗಳು ನಿಂತುಹೋಗಿದ್ದ ಕಾರಣ, ಎರಡು ತಾಸಿನಷ್ಟು ನೀರಿನ ಸರಬರಾಯಿ ಮಾತ್ರ ಉಳಿದಿತ್ತು.’ ಒಂದಿಷ್ಟೂ ನೀರಿಲ್ಲದ ಪರಿಸ್ಥಿತಿಯೊಂದಿಗೆ, ಮೇಣದ ಬತ್ತಿಗಳ ಉಪಯೋಗವು ಬೆಂಕಿಯ ಅಪಾಯವನ್ನು ಹೆಚ್ಚಿಸಸಾಧ್ಯವಿತ್ತು.

ಎರಡು ವಾರಗಳ ತರುವಾಯ ಜನವರಿ 24ರಂದು, 1,889 ಮಂದಿಯ ಗುಂಪು, ಯೆಹೋವನ ಸಾಕ್ಷಿಗಳ ಮಾಂಟ್ರೀಅಲ್‌ ಸಮ್ಮೇಳನ ಗೃಹದಲ್ಲಿ ಸರ್ಕಿಟ್‌ ಸಮ್ಮೇಳನಕ್ಕಾಗಿ ನೆರದುಬಂದಾಗ, ಮತ್ತೊಂದು ವಿಪತ್ತನ್ನು ತಪ್ಪಿಸಲಾಯಿತು. ಹಿಂದಿನ ರಾತ್ರಿಯಂದು, 20 ಸೆಂಟಿಮೀಟರುಗಳಷ್ಟು ತೇವವಾದ ಹಿಮವು ಮಾಂಟ್ರೀಅಲ್‌ ನಗರವನ್ನು ಆವರಿಸಿತ್ತು, ಮತ್ತು ಸಮ್ಮೇಳನದ ಬೆಳಗ್ಗಿನ ಕಾರ್ಯಕ್ರಮದ ಸಮಯದಲ್ಲಿ, ಗೋಡೆಗಳಲ್ಲಿ ಮತ್ತು ಛಾವಣಿಯ ಒಳಭಾಗದಲ್ಲಿ ಬಿರುಕುಗಳು ಕಂಡುಬಂದವು. ಮಧ್ಯಾಹ್ನದ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು. ಹಾಜರಾಗಿದ್ದವರು ಮನೆಗಳಿಗೆ ಹಿಂದಿರುಗಿ, ತಮ್ಮ ಬಟ್ಟೆಗಳನ್ನು ಬದಲಾಯಿಸಿಕೊಂಡು, ಕೆಲಸಮಾಡಲು ಅದೇ ನಿವೇಶನಕ್ಕೆ ಬರಬೇಕೆಂಬ ವಿನಂತಿಯು ಮಾಡಲಾಯಿತು.

ಒಂದೇ ತಾಸಿನೊಳಗೆ, ಮೊರಗುದ್ದಲಿ, ಪಿಕಾಸಿ, ಮತ್ತು ಇತರ ಸಲಕರಣೆಗಳೊಂದಿಗೆ ಸಜ್ಜಾಗಿ ಬಂದ 300 ಸ್ವಯಂಸೇವಕರು, ವಿಶಾಲವಾದ 7,100 ಚದರ ಮೀಟರಿನ ಛಾವಣಿಯನ್ನು ಸ್ವಚ್ಛಗೊಳಿಸತೊಡಗಿದರು. ಮೇಲಿನ ಹಿಮವನ್ನು ತೆಗೆದ ಬಳಿಕ, ಹಲವಾರು ಸ್ಥಳಗಳಲ್ಲಿದ್ದ ನೀರ್ಗಲ್ಲು 60 ಸೆಂಟಿಮೀಟರುಗಳಿಗಿಂತಲೂ ದಟ್ಟವಾಗಿತ್ತೆಂದು ಕಂಡುಕೊಳ್ಳಲಾಯಿತು! ಸರಪಣಿ ಗರಗಸಗಳನ್ನು ಬಳಸಿ, ನೀರ್ಗಲ್ಲನ್ನು ಚೌಕಾಕಾರದಲ್ಲಿ ತುಂಡರಿಸಿದ ನಂತರ, ಅವುಗಳನ್ನು ಛಾವಣಿಯ ಅಂಚಿಗೆ ಎಳೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ಎಸೆಯಲಾಯಿತು. ಸುಮಾರು 1,600 ಟನ್ನುಗಳಷ್ಟು ಹಿಮ ಮತ್ತು ನೀರ್ಗಲ್ಲನ್ನು ತೆಗೆಯಲಾಯಿತು! ಈ ಕಾರಣ, ಛಾವಣಿಯ ಒಳಭಾಗ ಅದರ ಸ್ಥಾನಕ್ಕೆ ಹಿಂದಿರುಗಿತು ಮತ್ತು ಗೋಡೆಗಳಲ್ಲಿದ್ದ ಬಿರುಕುಗಳು ಕೂಡಿಕೊಂಡವೆಂದು ತದನಂತರದ ಪರಿಶೀಲನೆಯು ಪ್ರಕಟಪಡಿಸಿತು. ರವಿವಾರ ಬೆಳಗ್ಗಿನ ಕಾರ್ಯಕ್ರಮವು ಯಾವ ಅಪಾಯವೂ ಇಲ್ಲದೆ ಮುಂದುವರಿಯಿತು.

ಅವರು ಪರಸ್ಪರ ಸಹಾಯ ಮಾಡಿದರು

ಆ ವಿಪತ್ತಿನ ಕ್ಷೇತ್ರದಲ್ಲಿದ್ದ ಕೆಲವರು ಇತರರ ಸಂಕಟದಿಂದ ಲಾಭಪಡೆಯಲು ಪ್ರಯತ್ನಿಸಿದರೂ, ಪ್ರಥಮ ಶತಮಾನದಲ್ಲಿ ಇದ್ದಂತೆ, ಅನೇಕರು ಮಳೆ ಹಾಗೂ ಚಳಿಯ ಸಮಯದಲ್ಲಿ ‘ಅಸಾಧಾರಣ ಮಾನವೀಯ ದಯೆಯನ್ನು’ ತೋರಿಸಿದರು. (ಅ. ಕೃತ್ಯಗಳು 28:2) ಜನರಿಗೆ ಸಹಾಯದ ಹಸ್ತನೀಡಲು ಮುಂದೆ ಬಂದ ಯೆಹೋವನ ಸಾಕ್ಷಿಗಳ ಕುರಿತು, ನ್ಯೂ ಯಾರ್ಕ್‌ನ ಡೇಲಿ ಸೆಂಟಿನಲ್‌ ಆಫ್‌ ರೋಮ್‌ ಹೇಳಿದ್ದು: “ಸಂಘಟಿತರಾಗಲು ಆ ಪುರುಷರು ಮೊದಲು ವಾಟರ್‌ಟೌನ್‌ನಲ್ಲಿರುವ ರಾಜ್ಯ ಸಭಾಗೃಹದಲ್ಲಿ ಕೂಡಿಬಂದರು, ಮತ್ತು ಅಲ್ಲಿಂದ ವಿಭಿನ್ನ ಸದಸ್ಯರ ಮನೆಗಳಿಗೆ ಹೋಗುವಂತೆ ನೇಮಿಸಲ್ಪಟ್ಟರು. ಆದರೆ ಅವರು ಆ ದಾರಿಯ ಉದ್ದಕ್ಕೂ ಇದ್ದ ತಮ್ಮ ನೆರೆಯವರಿಗೂ ಸಹಾಯ ಮಾಡುತ್ತಿದ್ದರು.”

ಈ ಪರಿಹಾರಗಳು, “ಆ್ಯಡಮ್ಸ್‌, ಪಾಟ್ಸ್‌ಡಮ್‌, ಮಲೋನ್‌, ಒಗ್‌ಡನ್ಸ್‌ಬರ್ಗ್‌, ಪ್ಲ್ಯಾಟ್ಸ್‌ಬರ್ಗ್‌, ಮಸಿನ, ಗವರ್‌ನೇರ್‌, ಮತ್ತು ಎಲನ್‌ಬರ್ಗ್‌ ಪ್ರಾಂತದಲ್ಲಿರುವ” ಜನರಿಗಾಗಿ ಸಂಯೋಜಿಸಲ್ಪಟ್ಟಿತ್ತೆಂದು ಆ ಲೇಖನವು ಹೇಳಿತು. ಬೆಂಕಿಯ ಕುಲುಮೆಗಳು ಕೆಲಸಮಾಡುವಂತೆ ಅವುಗಳಿಗೆ ಜನರೇಟರ್‌ಗಳನ್ನು ಅಳವಡಿಸುವ ಮೂಲಕ, ಮನೆಗಳಿಗೆ ಕೆಲವೊಂದು ತಾಸುಗಳ ವರೆಗೆ ಶಾಖವನ್ನು ಕೆಲವು ಸ್ವಯಂಸೇವಕರು ಒದಗಿಸಿದರು. ಆದರೆ ದುಃಖಕರವಾಗಿ, ಬಿರುಗಾಳಿಯ ನಂತರ ಅನೇಕ ಕ್ಷೇತ್ರಗಳಲ್ಲಿನ ತಾಪಮಾನವು ಶೂನ್ಯಕ್ಕಿಂತಲೂ ಕಡಿಮೆಯಾಗಿತ್ತು.

ಒಂದು ಸಂದರ್ಭದಲ್ಲಿ, ಸಾಕ್ಷಿಗಳು ಮನೆಗಳನ್ನು ಭೇಟಿಮಾಡುತ್ತಿದ್ದುದ್ದನ್ನು ಪೊಲೀಸರು ಕಂಡು, ಅವರನ್ನು ಕಳ್ಳರೆಂದು ತಪ್ಪಾಗಿ ಭಾವಿಸಿದರು. ತಾವು ಮಾಡುತ್ತಿರುವ ಕೆಲಸವನ್ನು ಸಾಕ್ಷಿಗಳು ವಿವರಿಸಿದ ಬಳಿಕ, ಅವರಲ್ಲಿ ಒಬ್ಬ ಪೊಲೀಸನು ತನ್ನ ತಂದೆಯ ಕುರಿತು ಹೇಳಿದನು. ಮಾಂಟ್ರೀಅಲ್‌ನಲ್ಲಿ ಜೀವಿಸುತ್ತಿರುವ ಅವನ ತಂದೆ ಒಬ್ಬ ಸಾಕ್ಷಿಯಾಗಿರದಿದ್ದರೂ, ಬಿರುಗಾಳಿಯ ನಂತರ ಯೆಹೋವನ ಸಾಕ್ಷಿಗಳಿಂದ ನೆರವನ್ನು ಪಡೆದುಕೊಂಡಿದ್ದನು. ನೀಡಲ್ಪಟ್ಟ ಸಹಾಯಕ್ಕಾಗಿ ಆ ಮಗನು ಗಣ್ಯತೆಯನ್ನು ವ್ಯಕ್ತಪಡಿಸಿದನು.

ಮಾಂಟ್ರೀಅಲ್‌ನ ದಕ್ಷಿಣಕ್ಕಿರುವ, “ಕತ್ತಲೆಯ ತ್ರಿಕೋನ” ಎಂಬುದಾಗಿ ಕರೆಯಲ್ಪಡುವ ಪ್ರದೇಶದಲ್ಲಿ, ಸುಮಾರು 100 ಪಟ್ಟಣಗಳು ಬಿರುಗಾಳಿಯಿಂದ ತೀವ್ರವಾಗಿ ಬಾಧಿಸಲ್ಪಟ್ಟವು. ಬಿರುಗಾಳಿ ಬಡಿದು ಹತ್ತು ದಿನಗಳು ಕಳೆದುಹೋಗಿದ್ದರೂ, ಈ ಪಟ್ಟಣಗಳಲ್ಲಿ ವಿದ್ಯುಚ್ಛಕ್ತಿ ಇರಲಿಲ್ಲ. ವಾಸ್ತವದಲ್ಲಿ, ಅನೇಕ ಜನರಿಗೆ, ಒಂದು ತಿಂಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ವಿದ್ಯುಚ್ಛಕ್ತಿಯ ಸರಬರಾಯಿ ಇರಲಿಲ್ಲ! ಈ ಕ್ಷೇತ್ರದಲ್ಲಿರುವವರಿಗೆ ಸಹಾಯ ನೀಡಲಿಕ್ಕಾಗಿ ವಿಶೇಷ ಭೇಟಿಗಳನ್ನು ಮಾಡುವಂತೆ, ಟೊರಾಂಟೊದ ಬಳಿಯಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು ಏರ್ಪಾಡುಗಳನ್ನು ಮಾಡಿತು. ದೀಪದ ಎಣ್ಣೆ, ಬ್ಯಾಟರಿಗಳು, ಮತ್ತು ಮಿಂಚುಬೆಳಕುಗಳನ್ನು ಒಳಗೊಂಡ ಸರಬರಾಯಿಗಳು, ನಿಗದಿತ ವಿತರಣಾ ಕೇಂದ್ರಕ್ಕೆ ಟ್ರಕ್ಕಿನ ಮೂಲಕ ರವಾನಿಸಲ್ಪಟ್ಟು, ಅಲ್ಲಿಂದ ಅಗತ್ಯದಲ್ಲಿರುವವರಿಗೆ ಕಳುಹಿಸಲ್ಪಟ್ಟವು.

ಈ ಕ್ಷೇತ್ರಗಳಲ್ಲಿ ಜೀವಿಸುತ್ತಿರುವವರ ಅಗತ್ಯಗಳನ್ನು ಕ್ರೈಸ್ತ ಹಿರಿಯರು ಕಂಡುಹಿಡಿಯುವಂತಹ ಏರ್ಪಾಡುಗಳು ಮಾಡಲ್ಪಟ್ಟವು. ಹಿರಿಯರ ಒಂದು ಗುಂಪು, ಅನೇಕ ಉತ್ತೇಜನದಾಯಕ ಕೂಟಗಳನ್ನು ನಡೆಸುತ್ತಾ, ಒಂದೇ ವಾರದೊಳಗೆ 11 ಸಭೆಗಳನ್ನು ಸಂದರ್ಶಿಸಿತು. ಆತ್ಮಿಕ ಉತ್ತೇಜನವು ನೀಡಲ್ಪಟ್ಟ ಈ ಕೂಟಗಳಿಂದ ಮನೆಗೆ ಹಿಂದಿರುಗಲು ಯಾರೂ ಬಯಸಲಿಲ್ಲ. ಜನರು ಸಹೋದರ ಸಾಹಚರ್ಯದಲ್ಲಿ ಆನಂದಿಸುತ್ತಾ, ಮಾತಾಡುತ್ತಾ ಕಥೆಗಳನ್ನು ಹೇಳಿಕೊಳ್ಳುತ್ತಾ ಅಲ್ಲೇ ಉಳಿದರು. ವಾಸ್ತವದಲ್ಲಿ, ಬಿರುಗಾಳಿಯ ನಂತರದ ವಾರಗಳಲ್ಲಿನ ಕೂಟದ ಹಾಜರಿಯು, ಎಲ್ಲ ಸಮಯಕ್ಕಿಂತಲೂ ಹೆಚ್ಚಾಗಿತ್ತು.

ಸೌದೆ ಉರಿಸುವ ಸ್ಟೌವ್‌ ಇಲ್ಲವೆ ವಿದ್ಯುತ್ತನ್ನು ಒದಗಿಸಲಿಕ್ಕಾಗಿ ಜನರೇಟರ್‌ನಂತಹ ಶಾಖದ ಮೂಲವಿದ್ದ ಅನೇಕರು, ಈ ಸೌಲಭ್ಯವಿರದಿದ್ದ ಅನೇಕರನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಂಡರು. ಕೆಲವು ಸಾಕ್ಷಿಗಳ ಮನೆಗಳಲ್ಲಿ 20ರಷ್ಟು ಜನರು ತಂಗಿರುತ್ತಿದ್ದರು. ವಿದ್ಯುತ್‌ ಇರದಿದ್ದ ಕ್ಷೇತ್ರದ ಹೊರಗಡೆ ಇದ್ದ ಅನೇಕರೂ ವಸತಿಗಳನ್ನು ಒದಗಿಸಿದರು. ಉದಾಹರಣೆಗೆ, “ಕತ್ತಲೆಯ ತ್ರಿಕೋನ”ದಿಂದ ಸುಮಾರು 800 ಕಿಲೊಮೀಟರುಗಳ ದೂರದಲ್ಲಿರುವ ಸೆಪ್ಟ್‌ ಐಲ್ಸ್‌ ಎಂಬ ನಗರದಲ್ಲಿರುವ ಸಾಕ್ಷಿಗಳು, 85 ಕುಟುಂಬಗಳಿಗೆ ವಸತಿ ನೀಡಲು ಒಪ್ಪಿಕೊಂಡರು.

ರಿಮೋಸ್ಕೀ ಎಂಬ ದೂರದ ಗ್ರಾಮಿಣ ಕ್ಷೇತ್ರಗಳಲ್ಲಿದ್ದ ಸಾಕ್ಷಿಗಳು, ಸೌದೆಯನ್ನು ಕಡಿದು ರವಾನಿಸಿದರು. ಅವರು ಕಳುಹಿಸಿದಂತಹ ಸೌದೆಗಳ ಮೇಲೆ ಶಾಸ್ತ್ರವಚನಗಳನ್ನು ಬರೆಯಲು ಕೆಲವರು ಸಮಯ ತೆಗೆದುಕೊಂಡರು. ಸಾಕ್ಷಿಯೊಬ್ಬನು ಸಾಕ್ಷಿಯಲ್ಲದ ನೆರೆಯವನಿಗೆ ಸೌದೆಯ ಕೊಡುಗೆಯನ್ನು ನೀಡಿದಾಗ, ಅದರ ಮೇಲೆ ಕೀರ್ತನೆ 55:16 ಬರೆಯಲ್ಪಟ್ಟಿತ್ತು: ‘ಯೆಹೋವನು ನನ್ನನ್ನು ರಕ್ಷಿಸುವನು.’ ಕೈಯಲ್ಲಿ ಸೌದೆಯನ್ನು ಹಿಡಿದುಕೊಂಡು, ಆ ನೆರೆಯವನು ಮೇಲಕ್ಕೆ ನೋಡಿ, “ಉಪಕಾರ ಯೆಹೋವ” ಎಂದು ಹೇಳಿದನು.

ಇದರಿಂದ ನಮಗೆ ಯಾವ ಪಾಠಗಳು?

ಅನೇಕರು ವಿದ್ಯುಚ್ಛಕ್ತಿಯ ನಾಜೂಕತೆ ಮತ್ತು ಅದರ ಮೇಲೆ ತಮ್ಮ ಅವಲಂಬನೆಯ ವಿಷಯದಲ್ಲಿ ತಲ್ಲಣಗೊಂಡಿದ್ದರು. ಒಬ್ಬ ವ್ಯಕ್ತಿಯು ಹೇಳಿದ್ದು: “ನಾವು ಒಂದು ಹೊಸ ಮನೆಯನ್ನು ಕಟ್ಟುವಾಗ, ಒಂದು ಸೌದೆ ಉರಿಸುವ ಸ್ಟೌವ್‌, ಒಂದು ಜನರೇಟರ್‌ . . . ಮತ್ತು ಒಂದು ಗ್ಯಾಸ್‌ ಸ್ಟೌವ್‌ ಇದ್ದೇ ಇರುವುದೆಂದು ನಾನು ಖಂಡಿತವಾಗಿ ಹೇಳುತ್ತೇನೆ.”

ಬಿರುಗಾಳಿಯ ಸುಮಾರು ಆರು ವಾರಗಳ ನಂತರ, ಒಬ್ಬ ವ್ಯಾಖ್ಯಾನಕಾರನು ಪ್ರತಿಕ್ರಿಯಿಸಿದ್ದು: “ಹೇರಳವಾದ ನೀರ್ಗಲ್ಲು, ಗಾಢವಾದ ಕತ್ತಲೆ, ಮತ್ತು ಯೋಚಿಸಲು ಬಹಳಷ್ಟು ಸಮಯವಿತ್ತು. ಟೆಲಿವಿಷನ್‌ ಇರದಿದ್ದ ಕಾರಣ ಇದನ್ನು ಸುಲಭವಾಗಿ ಮಾಡಸಾಧ್ಯವಿತ್ತು.” ತದನಂತರ ಅವನು ಅವಲೋಕಿಸಿದ್ದು: “ನಿಸರ್ಗದ ಶಕ್ತಿಗಳಿಗೆ ಸುಲಭಭೇದ್ಯರಾಗಿರುವ ಸಂಗತಿಯಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ.”

ಸೃಷ್ಟಿಕರ್ತನು ಈ ಮೊದಲು ಒಮ್ಮೆ ಮಾಡಿದಂತೆಯೇ, ಈ ವಿಷಯಗಳ ವ್ಯವಸ್ಥೆಯನ್ನು ತೆಗೆದುಹಾಕಿದ ನಂತರ, ಭೂಮಿಯನ್ನು ಭೌಗೋಲಿಕ ಪ್ರಮೋದವನವಾಗಿ ಪುನಸ್ಥಾಪಿಸುವ ಆತನ ವಾಗ್ದಾನದ ಮೇಲೆ ಬೈಬಲ್‌ ವಿದ್ಯಾರ್ಥಿಗಳು ಪರ್ಯಾಲೋಚಿಸುತ್ತಾರೆ. (ಮತ್ತಾಯ 24:37-39; 2 ಪೇತ್ರ 2:5) ಈ ಭಾವೀ ಶಸ್ತ್ರಾಗಾರವನ್ನು ಸೂಚಿಸುತ್ತಾ, ದೇವರು ಕೇಳುವುದು: “ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೆಯೋ? ಕಲ್ಮಳೆಯ ಬೊಕ್ಕಸಗಳನ್ನು [ಹೆಪ್ಪುಗಟ್ಟುವ ಮಳೆಯನ್ನು ಸೇರಿಸಿ] ನೋಡಿದ್ದೆಯಾ?”—ಯೋಬ 38:22, 23.

[ಪುಟ 16 ರಲ್ಲಿರುವ ಚಿತ್ರ]

ತವರದ ಹಾಳೆಯಂತೆ ಮುದುರಿಹೋದ ಟ್ರಾನ್ಸ್‌ಮಿಷನ್‌ ಟವರ್‌ಗಳು

[ಪುಟ 17 ರಲ್ಲಿರುವ ಚಿತ್ರ]

ಸ್ವಯಂಸೇವಕರು ಸಮ್ಮೇಳನ ಗೃಹದ ಛಾವಣಿಯಿಂದ ಹಿಮ ಮತ್ತು ನೀರ್ಗಲ್ಲನ್ನು ತೆಗೆದುಹಾಕಿದಾಗ, ಭಾವೀ ವಿಪತ್ತನ್ನು ತಪ್ಪಿಸಲಾಯಿತು

[ಪುಟ 27 ರಲ್ಲಿರುವ ಚಿತ್ರ]

ಬಿರುಗಾಳಿಗೆ ಬಲಿಯಾದವರಿಗಾಗಿ ಸೌದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ