ಭುವಿಗಾಗಿರುವ ನನ್ನೊಲುಮೆಯು ಅನಂತಕಾಲಕ್ಕೂ ತಣಿಸಲ್ಪಡುವುದು
ಡಾರಥೀ ಕಾನೆಲೀ ಅವರಿಂದ ಹೇಳಲ್ಪಟ್ಟಂತೆ
ನಾನು ಬುಡಕಟ್ಟು ಜನಾಂಗದವಳಾಗಿದ್ದುದರಿಂದ ನರಕಕ್ಕೆ ಹೋಗುವೆನೆಂದು, ನಾನು ಚಿಕ್ಕಹುಡುಗಿಯಾಗಿದ್ದಾಗ ನನಗೆ ಹೇಳಲಾಗುತ್ತಿತ್ತು. ವರ್ಷಗಳು ಕಳೆದ ನಂತರ, 1936ರಲ್ಲಿ ನಾನು ಒಂದು ಬೈಬಲ್ ಭಾಷಣದ ರೆಕಾರ್ಡನ್ನು ಕೇಳಿಸಿಕೊಂಡೆ, ಇದು ನರಕಕ್ಕೆ ನೀರೆರೆದು, ನನ್ನ ಹೃದಯದಲ್ಲಿ ಜ್ಯೋತಿಯನ್ನು ಬೆಳಗಿಸಿತು. ಆ ಜ್ಯೋತಿಯು, ಈಗ ಹಿಂದಿನದ್ದಕ್ಕಿಂತಲೂ ಹೆಚ್ಚು ದೇದೀಪ್ಯಮಾನವಾಗಿ ಬೆಳಗುತ್ತಿದೆ. ಅದೇಕೆ ಎಂಬುದನ್ನು ಹೇಳುವ ಮುಂಚೆ, ನಾನು ನನ್ನ ಕುರಿತಾಗಿ ಹೇಳಲು ಇಷ್ಟಪಡುತ್ತೇನೆ.
ಸುಮಾರು 1911ರ ಇಸವಿಯಲ್ಲಿ ನಾನು ಜನಿಸಿದೆ. ನಾನು “ಸುಮಾರು” ಎಂದು ಹೇಳುವ ಕಾರಣವೇನೆಂದರೆ, ಆಗಿನ ಸಮಯಗಳಲ್ಲಿ ಬುಡಕಟ್ಟಿನವರು ತಾರೀಖುಗಳು ಮತ್ತು ಜನ್ಮ ಪ್ರಮಾಣಪತ್ರಗಳ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನನ್ನ ಹೆತ್ತವರು ಪರಿಶ್ರಮಿಗಳೂ ದೈವಭಕ್ತರೂ ಆದ ಜನರಾಗಿದ್ದರು. ಆಸ್ಟ್ರೇಲಿಯದ ಸೆಂಟ್ರಲ್ ಕ್ವೀನ್ಸ್ಲ್ಯಾಂಡ್ನಲ್ಲಿರುವ, ಕಗ್ಗಾಡೂ ಸುಂದರವೂ ಆದ ಕಾರ್ನಾರ್ವನ್ ಪರ್ವತ ಪ್ರದೇಶದ ಹತ್ತಿರದಲ್ಲಿರುವ, ಸ್ಪ್ರಿಂಶುರ್ ಎಂಬ ಚಿಕ್ಕ ಪಟ್ಟಣದಲ್ಲಿ ನಾವು ವಾಸಿಸಿದೆವು.
ನನ್ನ ತಂದೆಯು ಬಿಳಿಯರ ಕುಟುಂಬದಿಂದ ರೋಮನ್ ಕ್ಯಾಥೊಲಿಕರಾಗಿ ಬೆಳಸಲ್ಪಟ್ಟಿದ್ದರು. ಆದರೂ ನನ್ನ ಬುಡಕಟ್ಟಿನ ಹೆತ್ತವರು ನನ್ನಲ್ಲಿ, ತಮ್ಮ ಸ್ಥಳಿಕ ಸಂಪ್ರದಾಯಗಳನ್ನು ಮತ್ತು ಭುವಿಗಾಗಿರುವ ಒಲುಮೆಯನ್ನು ನನ್ನ ಮನದಲ್ಲಿ ತುಂಬಿಸಿದರು. ನಾವು ಕಾಂಗರೂ, ಎಮು ಪಕ್ಷಿ, ಆಮೆ ಮತ್ತು ಹಾವುಗಳನ್ನು ಬೇಟೆಯಾಡುತ್ತಿದ್ದೆವು. ಅಷ್ಟಲ್ಲದೆ ಮೀನು ಮತ್ತು ಕಂಬಳಿಹುಳುಗಳನ್ನು (ದೊಡ್ಡ ಭಕ್ಷ್ಯ ಕಂಬಳಿಹುಳುಗಳು) ಹಿಡಿಯುತ್ತಿದ್ದೆವು. ಆದರೆ ನಾನು ಎಮು ಪಕ್ಷಿಯನ್ನು ಮಾತ್ರ ತಿನ್ನುತ್ತಿರಲಿಲ್ಲ. ನಮ್ಮ ಕುಟುಂಬದಲ್ಲಿ, ನನಗೆ ಮಾತ್ರ ಅದನ್ನು ತಿನ್ನುವುದನ್ನು ನಿಷೇಧಿಸಲಾಗಿತ್ತು ಏಕೆಂದರೆ, ಅದು ನನ್ನ ವೈಯಕ್ತಿಕ ಕುಲದೇವತೆಯಾಗಿತ್ತು. ಬುಡಕಟ್ಟಿನ ಸಂಪ್ರದಾಯಕ್ಕನುಸಾರ, ಅಥವಾ “ಡ್ರೀಮ್ಟೈಮ್”ಗನುಸಾರ, ಕುಲದ ಪ್ರತಿ ಸದಸ್ಯನಿಗೂ, ಅವನಿಗೆ ಅಥವ ಅವಳಿಗೆ ಆದಂಥ ಒಂದು ಸ್ವಂತ ಕುಲದೇವತೆಯಿದೆ. ಅಂಥ ಒಂದು ಪದಾರ್ಥದ ಮೇಲಿನ ನಿಷೇಧವು, ಕುಟುಂಬ ಮತ್ತು ಕುಲದಿಂದ ನಿರ್ಬಂಧಿಸಲ್ಪಡುತ್ತಿತ್ತು.
ಕುಲದೇವತಾ ಪದ್ಧತಿಯು ಮೂಢನಂಬಿಕೆಯಲ್ಲಿ ಬಲವಾಗಿ ಬೇರೂರಿದ್ದರೂ, ಈ ನಿಷೇಧವು ಜೀವದ ಪವಿತ್ರತೆಯನ್ನು ಮರುಜ್ಞಾಪಿಸುತ್ತಿತ್ತು. ಬುಡಕಟ್ಟಿನವರು ವಿನೋದಕ್ಕಾಗಿ ಕೊಲ್ಲುತ್ತಿರಲಿಲ್ಲ. ನಾನು ಚಿಕ್ಕಹುಡುಗಿಯಾಗಿದ್ದಾಗ, ಜೀವಂತ ಮಿಡತೆಗಳ ಅಂಗಚ್ಛೇದಿಸುವುದನ್ನು ನೋಡಿ, ನನ್ನ ತಂದೆಯು ಅಬ್ಬರಿಸಿದಾಗ, ನಾನು ಭಯದಿಂದ ನಡುಗುತ್ತಿದ್ದುದು ಈಗಲೂ ನನಗೆ ಜ್ಞಾಪಕವಿದೆ. “ಓಹ್ ಭಯಂಕರ!” ಎಂದು ಅವರು ಕೂಗಿಕೊಂಡರು. “ಕ್ರೂರತೆಯನ್ನು ದೇವರು ದ್ವೇಷಿಸುತ್ತಾನೆಂದು ನಿನಗೆ ತಿಳಿದಿಲ್ಲವೋ? ಯಾರಾದರೂ ನಿನಗೆ ಆ ರೀತಿಯಲ್ಲಿ ಮಾಡಿದರೆ ಆಗ ಹೇಗಾಗಬಹುದು?”
ನಮಗೆ ಅನೇಕ ಮೂಢನಂಬಿಕೆಗಳಿದ್ದವು. ಉದಾಹರಣೆಗೆ, ವಿಲಿ ವ್ಯಾಗ್ಟೇಲ್ (ಒಂದು ಪುಟ್ಟ ಪಕ್ಷಿ) ನಮ್ಮ ಬಿಡಾರದ ಬಳಿಯಲ್ಲಿ ಆಟವಾಡುತ್ತಿದ್ದರೆ, ಅದು ಕೆಟ್ಟ ಸುದ್ದಿಯನ್ನು ಅರ್ಥೈಸಿತು; ಅಥವಾ ದಿನದ ಸಮಯದಲ್ಲಿ ಗೂಬೆಯೊಂದು ಹತ್ತಿರದಲ್ಲಿರುವ ಮೋಟು ಮರದ ಮೇಲೆ ಕುಳಿತುಕೊಂಡಿದ್ದರೆ, ಯಾರಾದರೂ ಸಾಯಲಿದ್ದಾರೆ ಎಂದು ನಾವು ನಂಬಿದೆವು. ನಿರ್ದಿಷ್ಟ ಕನಸುಗಳು ಸಹ ಅಪಶಕುನವಾಗಿದ್ದವು. ಉದಾಹರಣೆಗೆ, ಕನಸಿನಲ್ಲಿ ಕೆಸರು ತುಂಬಿದ ನೀರನ್ನು ನೋಡಿದರೆ, ಕುಟುಂಬದಲ್ಲಿ ಯಾರಾದರೂ ಖಾಯಿಲೆ ಬಿದ್ದಿದ್ದಾರೆಂಬುದನ್ನು ಅರ್ಥೈಸಿತು. ಆದರೆ ನೀರು ಕೆಸರಿನಿಂದ ಜಿನುಗುತ್ತಿದ್ದರೆ, ಯಾರೋ ಒಬ್ಬರು ಸತ್ತುಹೋಗಿದ್ದರು ಎಂದು ನೆನಸಲಾಗುತ್ತಿತ್ತು. ನಿಜ, ನಾವು ಕ್ಯಾಥೊಲಿಕರಾಗಿದ್ದೆವು, ಆದರೆ ಇದು ನಮ್ಮ ಕುಲದ ಮೂಢನಂಬಿಕೆಗಳೆಲ್ಲವನ್ನು ಹೋಗಲಾಡಿಸಲಿಲ್ಲ.
ನನ್ನ ಕುಟುಂಬವು ನಮ್ಮ ಬುಡಕಟ್ಟಿನ ಭಾಷೆಯನ್ನು ಮಾತಾಡುವುದನ್ನು ಬಿಟ್ಟುಬಿಡಲಿಲ್ಲ. ಅದು ಈಗ ವಿನಾಶದ ಅಂಚಿನಲ್ಲಿರುವ ಅನೇಕ ಭಾಷೆಗಳಲ್ಲಿ ಒಂದಾಗಿದೆ. ಆದರೂ, ಬೈಬಲಿನ ಬಗ್ಗೆ ಇತರರೊಂದಿಗೆ ಮಾತಾಡುತ್ತಿರುವಾಗ ಯಾವಾಗಲಾದರೊಮ್ಮೆ ಆ ಭಾಷೆಯನ್ನು ಮಾತಾಡಲು ನಾನು ಶಕ್ತಳಾಗಿದ್ದೇನೆ. ಆದರೆ ಹೆಚ್ಚಾಗಿ ನಾನು ಇಂಗ್ಲಿಷ್ ಅಥವಾ ಸ್ಥಳಿಕ ಭಾಷೆಯಾದ ಪಿಜಿನ್ ಅನ್ನು ಮಾತಾಡುತ್ತೇನೆ.
ಬಹುಮೂಲ್ಯವಾದ ಆರಂಭದ ತರಬೇತಿ
ನಾನು ಹತ್ತು ವರ್ಷದವಳಾಗಿದ್ದಾಗ, ಸ್ಪ್ರಿಂಶುರ್ನಿಂದ ಸುಮಾರು 30 ಕಿಲೊಮೀಟರುಗಳ ದೂರದಲ್ಲಿರುವ, ದನಕರು ಫಾರ್ಮ್ ಅಥವಾ ಪಶುಪಾಲನ ಕ್ಷೇತ್ರದಲ್ಲಿ ನಮ್ಮ ಕುಟುಂಬವು ನೆಲೆಸಿತು. ಪ್ರತಿ ದಿನ ನಾನು ನನ್ನ ಮನೆಗೆಲಸಗಳನ್ನು ಮಾಡಲು ಫಾರ್ಮ್ನ ಮನೆಯಿಂದ ಒಂದೆರಡು ಕಿಲೊಮೀಟರುಗಳು ನಡೆಯುತ್ತಿದ್ದೆ. ಒಂದು ಡಬ್ಬ (ಚಿಕ್ಕ ಕ್ಯಾನ್) ಹಾಲು ಮತ್ತು ಒಂದು ಲೋಫ್ ಬ್ರೆಡ್ ನನ್ನ ದಿನದ ಸಂಬಳವಾಗಿತ್ತು. ನಮ್ಮ ಕುಟುಂಬವು ತೊಗಟೆಯಿಂದ ಮಾಡಿದ, ಸಾಂಪ್ರದಾಯಿಕ ಬುಡಕಟ್ಟಿನ ಮನೆಗಳಲ್ಲಿ ವಾಸಿಸಿತು. ಮಳೆಬಂದಾಗ, ನಾವು ಹತ್ತಿರದಲ್ಲಿದ್ದ ಗುಹೆಗಳಲ್ಲಿ ರಾತ್ರಿ ನಿದ್ರಿಸುತ್ತಿದ್ದೆವು. ನಾನು ಈ ಸರಳ ಜೀವನವನ್ನು ಕಷ್ಟಕರವಾಗಿ ಕಂಡುಕೊಂಡೆನೋ? ಇಲ್ಲ. ಇದು ಶತಮಾನಗಳಿಂದ ಬಂದ ಬುಡಕಟ್ಟಿನ ಜೀವನ ರೀತಿಯಾಗಿತ್ತು ಮತ್ತು ಅದನ್ನು ನಾವು ಅಂಗೀಕರಿಸಿದೆವು.
ಸಾಂಕೇತಿಕವಾಗಿ ಹೇಳಬೇಕಾದರೆ, ನಾನು ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಲಿಲ್ಲ ಎಂಬುದಕ್ಕೆ ನಾನು ಸಂತೋಷಿಸುತ್ತೇನೆ, ಮತ್ತು ನನ್ನ ಪ್ರೀತಿಯ ಹೆತ್ತವರು, ನನ್ನನ್ನು ಶಿಸ್ತುಗೊಳಿಸಿ, ನನ್ನನ್ನು ಪರಿಶ್ರಮಿಯನ್ನಾಗಿ ಮಾಡಿ, ಜಮೀನಿನಿಂದ ಜೀವನಾಧಾರವನ್ನು ಹೇಗೆ ಪಡೆದುಕೊಳ್ಳಬೇಕೆಂದು ಕಲಿಸಿದರು. 1934ರಲ್ಲಿ, ನಾವು ಕ್ವೀನ್ಸ್ಲ್ಯಾಂಡ್ನ ವೂರ್ಬಿಂಡದ ಹತ್ತಿರವಿರುವ ಕಾದಿರಿಸಲ್ಪಟ್ಟ ಭೂಪ್ರದೇಶಕ್ಕೆ ಸ್ಥಳಾಂತರಿಸಿದ ಸ್ವಲ್ಪ ಸಮಯದ ಅನಂತರ, ನಾನು ಪ್ರಥಮ ಬಾರಿಗೆ ಮನೆಯನ್ನು ಬಿಟ್ಟು, ದನಕರುಗಳು ಮತ್ತು ಕುರಿಗಳ ಫಾರ್ಮ್ಗಳಲ್ಲಿ, ಹೆಣ್ಣಾಳು ಮತ್ತು ಕೈಕೆಲಸಕ್ಕಾಗಿ ಪಶ್ಚಿಮದ ಕಡೆಗೆ ಹೋದೆ. ಕೆಲಸವು ಕಟ್ಟಕಡೆಗೆ, ರಾಕ್ಹ್ಯಾಮ್ಟನ್ನ ಕರಾವಳಿ ನಗರದ ಸ್ವಲ್ಪ ಹೊರಗೆ ಅಂದರೆ, ಪೂರ್ವಕ್ಕೆ ಹೋಗುವಂತೆ ಮಾಡಿತು. ಅಲ್ಲಿ ನನ್ನ ಕಾಲವಾದ ಪತಿ, ಐರಿಷ್ ವ್ಯಕ್ತಿಯ ಪುತ್ರನಾದ ಮಾರ್ಟಿನ್ ಕಾನೆಲೀಯನ್ನು ಭೇಟಿಯಾದೆ. ನಾವು 1939ರಲ್ಲಿ ಮದುವೆಯಾದೆವು.
ಬೈಬಲ್ ಸತ್ಯವನ್ನು ಕಲಿಯುವುದು
ನಾನು ಯಾವಾಗಲೂ ಬೈಬಲಿಗಾಗಿ ಆಳವಾದ ಗೌರವವನ್ನು ಹೊಂದಿದ್ದೆ. ನಾನು ಯುವತಿಯಾಗಿದ್ದಾಗ, ದನಕರುಗಳ ಫಾರ್ಮ್ನ ಒಡತಿಯು, ಮಕ್ಕಳಾದ ನಮ್ಮನ್ನು—ಬುಡಕಟ್ಟು ಮತ್ತು ಬಿಳಿಯರನ್ನು—ಸೇರಿಸಿಕೊಂಡು, ಯೇಸುವಿನ ಕುರಿತಾಗಿ ಕಥೆಗಳನ್ನು ಹೇಳುತ್ತಿದ್ದಳು. ಒಮ್ಮೆ ಅವಳು ಯೇಸುವಿನ ಈ ಮಾತುಗಳ ಅರ್ಥವನ್ನು ವಿವರಿಸಿದಳು, ಅದು ಹೇಳುವುದು: ‘ಚಿಕ್ಕ ಮಕ್ಕಳು ನನ್ನ ಬಳಿ ಬರುವುದನ್ನು ತಡೆಯಬೇಡಿರಿ.’ (ಮತ್ತಾಯ 19:14, ಕಿಂಗ್ ಜೇಮ್ಸ್ ವರ್ಷನ್) ನಾನು ನರಕಕ್ಕೆ ಹೋಗುತ್ತೇನೆಂದು ಹೇಳಲ್ಪಟ್ಟಿದ್ದ ಸಮಯದಂದಿನಿಂದ ಹಿಡಿದು, ಇದೇ ಮೊದಲ ಬಾರಿಗೆ ಆಶಾಕಿರಣವೊಂದು ನನಗೆ ಕಾಣಿಸಿತು.
ಈ ಹಿಂದೆ ತಿಳಿಸಲ್ಪಟ್ಟಂತೆ, ನರಕವು ಬಿಸಿಯಾಗಿಲ್ಲವೆಂಬ ರೆಕಾರ್ಡ್ ಮಾಡಲ್ಪಟ್ಟ ಭಾಷಣವನ್ನು ನಾನು ಕೇಳಿಸಿಕೊಂಡೆ. ಅದು ನನ್ನನ್ನು ಆಲೋಚಿಸುವಂತೆ ಮಾಡಿತಾದರೂ, ನನಗೆ 1949ರ ತನಕ ಯೆಹೋವನ ಸಾಕ್ಷಿಗಳೊಡನೆ ಯಾವ ಸಂಪರ್ಕವೂ ಇರಲಿಲ್ಲ. ನಾವು ಆಗ ರಾಕ್ಹ್ಯಾಮ್ಟನ್ನಿಂದ ಸುಮಾರು 150 ಮೈಲುಗಳ ದೂರದಲ್ಲಿರುವ ಎಮರಾಲ್ಡ್ನಲ್ಲಿ ವಾಸಿಸುತ್ತಿದ್ದೆವು. ನಮ್ಮನ್ನು ಭೇಟಿಮಾಡಿದ, ಆರ್. ಬೆನೆಟ್ ಬ್ರಿಕಲ್a ಬೈಬಲಿನ ಕುರಿತಾಗಿ ನಮ್ಮೊಂದಿಗೆ ಮಾತಾಡಿದರು. ಆಮೇಲೆ, ಬೆನ್ ನಮ್ಮ ಕ್ಷೇತ್ರದಲ್ಲಿರುವಾಗಲೆಲ್ಲ ನಮ್ಮ ಮನೆಯು ಬೆನ್ನ ಮನೆಯಾಗಿಬಿಡುತ್ತಿತ್ತು. ಮಾರ್ಟಿನ್ ಮತ್ತು ನಮ್ಮ ನಾಲ್ಕು ಮಕ್ಕಳಿಗೂ, ಅವರ ಬಗ್ಗೆ ತುಂಬ ಗೌರವವಿತ್ತು. ಮಾರ್ಟಿನ್ ಬೈಬಲಿನ ಸಂದೇಶಕ್ಕೆ ಆಸಕ್ತಿಯನ್ನು ತೋರಿಸಲಿಲ್ಲವಾದರೂ, ಸಾಕ್ಷಿಗಳ—ವಿಶೇಷವಾಗಿ ಬೆನ್—ಕಡೆಗೆ ಅವರು ದಯಾಪರರೂ ಅತಿಥಿಸತ್ಕಾರವನ್ನು ತೋರಿಸುವವರೂ ಆಗಿದ್ದರು.
ನನಗೆ ಬೆನ್ ಅನೇಕ ಬೈಬಲ್ ಅಧ್ಯಯನದ ಪುಸ್ತಕಗಳನ್ನು ಕೊಟ್ಟರು, ಆದರೆ ನನಗೊಂದು ದೊಡ್ಡ ಸಮಸ್ಯೆಯಿತ್ತು, ಅದೇನೆಂದರೆ ನನಗೆ ಓದಲು ಬರುತ್ತಿರಲಿಲ್ಲ. ಆದುದರಿಂದ, ಬೆನ್ ತಾಳ್ಮೆಯಿಂದ ಬೈಬಲ್ ಮತ್ತು ಬೈಬಲ್ ಆಧಾರಿತ ಸಾಹಿತ್ಯವನ್ನು ಮಕ್ಕಳಿಗೆ ಮತ್ತು ನನಗೆ ಓದಿಹೇಳುತ್ತಿದ್ದರು. ಮತ್ತು ಅವರು ಓದಿದಂತೆ ಅದನ್ನು ವಿವರಿಸುತ್ತಿದ್ದರು. ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಿದ ಅನಂತರ, ಹೇಗೆ ಓದಬೇಕೆಂಬುದನ್ನು ನಮಗೆ ಕಲಿಸಲು ಐದು ನಿಮಿಷಗಳನ್ನು ಸಹ ಕಳೆಯದ ಪಾದ್ರಿಗಳಿಗಿಂತ ಅವರು ಎಷ್ಟು ಭಿನ್ನರಾಗಿದ್ದರು! ನನ್ನ ಸ್ವಂತ ಜನರನ್ನು ಸೇರಿಸಿ, ಮಾನವಕುಲವನ್ನು ಸಂಕೋಲೆಯಲ್ಲಿ ಬಂಧಿಸಿರುವ ಅನೇಕ ಮೂಢನಂಬಿಕೆಗಳಿಗೆ ಸೈತಾನನು ಮತ್ತು ಅವನ ಪಿಶಾಚಿಗಳು ಕಾರಣರೆಂದು ಬೈಬಲಿನಿಂದ ನಮಗೆ ಬೆನ್ ವಿವರಿಸಿದರು. “ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” ಎಂಬ ಯೇಸುವಿನ ಮಾತುಗಳನ್ನು ಎಷ್ಟೊಂದು ಗಣ್ಯಮಾಡಲಾರಂಭಿಸಿದೆ!—ಯೋಹಾನ 8:32.
ದೇವರಿಗೆ ವಿಧೇಯರಾಗುವವರಿಗಾಗಿ ಒಂದು ಭೌಮಿಕ ಪ್ರಮೋದವನವನ್ನು ಪಡೆದುಕೊಳ್ಳುವ ದೇವರ ಉದ್ದೇಶವನ್ನು ಕಲಿತುಕೊಳ್ಳುವುದಕ್ಕೆ ನಾನು ರೋಮಾಂಚಿತಳಾಗಿದ್ದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಮೃತರ ಪುನರುತ್ಥಾನಕ್ಕಾಗಿ ನಾನು ಹಂಬಲಿಸಲು ಪ್ರಾರಂಭಿಸಿದೆ; ತಾಯಿಯು 1939ರಲ್ಲಿ ಮತ್ತು ತಂದೆಯು 1951ರಲ್ಲಿ ತೀರಿಹೋಗಿದ್ದರು. ಅವರನ್ನು ಅಪ್ಪಿಕೊಂಡು, ಅವರು ಅಷ್ಟೊಂದು ಪ್ರೀತಿಸಿದ್ದ ಈ ಭೂಮಿಗೆ ಪುನಃ ಅವರನ್ನು ಸ್ವಾಗತಿಸುವ ದಿನಕ್ಕಾಗಿ ನಾನು ಎದುರುನೋಡುತ್ತೇನೆ. ಮತ್ತು ಅವರಿಗೆ ಯೆಹೋವ ದೇವರ ಮತ್ತು ಆತನ ರಾಜ್ಯದ ಬಗ್ಗೆ ಕಲಿಸುವುದು ಎಂಥ ಒಂದು ರೋಮಾಂಚನೀಯ ವಿಷಯವಾಗಿರುವುದು!
ಒಬ್ಬ ಅನಕ್ಷರಸ್ಥ ಸೌವಾರ್ತಿಕಳು
ನನ್ನ ಬೈಬಲ್ ಜ್ಞಾನವು ಹೆಚ್ಚಿದಂತೆ, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಟ್ಟೆ. ನಾನು ಸಂಬಂಧಿಕರ ಮತ್ತು ಸ್ನೇಹಿತರೊಡನೆ ಮಾತಾಡಲು ಪ್ರಾರಂಭಿಸಿದೆನಾದರೂ, ಅದನ್ನು ನಾನು ಇನ್ನೂ ವಿಸ್ತರಿಸಲು ಇಷ್ಟಪಟ್ಟೆ. ಆದುದರಿಂದ ಬೆನ್ ಮತ್ತೇ ಎಮರಾಲ್ಡ್ಗೆ ಬಂದಾಗ, ನಾನು ಮಕ್ಕಳನ್ನು ಅವಸರ ಅವಸರವಾಗಿ ತಯಾರುಮಾಡಿ, ನಾವೆಲ್ಲರೂ ಅವರೊಂದಿಗೆ ಸಾರಲಿಕ್ಕೆ ಹೋದೆವು. ಅವರು ನನಗೆ ಸರಳವಾದ ಪ್ರಸ್ತಾವನೆಗಳನ್ನು ಪ್ರತ್ಯಕ್ಷಾಭಿನಯಿಸಿ ತೋರಿಸಿದರು ಮತ್ತು ಪ್ರಾರ್ಥನೆಯ ಮೂಲಕ ಯೆಹೋವನ ಮೇಲೆ ಆತುಕೊಳ್ಳುವಂತೆ ನನಗೆ ಕಲಿಸಿದರು. ನನ್ನ ಪ್ರಸ್ತಾವನೆಯು, ಅಷ್ಟೇನೂ ಚೆನ್ನಾಗಿದ್ದಿರಲಿಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕು, ಆದರೆ ಅದು ನನ್ನ ಹೃದಯದಾಳದಿಂದ ಬಂದಿತ್ತು.
ಮೊದಲು, ನಾನು ಮನೆಯವರಿಗೆ ನನಗೆ ಓದಲು ಬರುವುದಿಲ್ಲವೆಂದು ಹೇಳುತ್ತಿದ್ದೆ, ಮತ್ತು ಎರಡನೆಯದಾಗಿ, ನಾನು ಅವರಿಗೆ ತೋರಿಸುತ್ತಿದ್ದ ಬೈಬಲ್ ವಚನಗಳನ್ನು ಓದುವಂತೆ, ನಾನು ಅವರನ್ನು ಕೇಳಿಕೊಳ್ಳುತ್ತಿದ್ದೆ. ನಾನು ಈ ವಚನಗಳನ್ನು ಬಾಯಿಪಾಠಮಾಡಿಕೊಂಡಿದ್ದೆ. ಮುಖ್ಯವಾಗಿ ಬಿಳಿಯರೇ ಇದ್ದ ಈ ಪಟ್ಟಣದಲ್ಲಿ ಕೆಲವರು ನನ್ನನ್ನು ಆಶ್ಚರ್ಯದಿಂದ ನೋಡಿದರಾದರೂ, ಜನರು ಒರಟಾಗಿ ನಡೆದುಕೊಂಡಿದ್ದೇ ವಿರಳ. ಸಕಾಲದಲ್ಲಿ, ನಾನು ಓದಲು ಕಲಿತುಕೊಂಡೆ. ಇದು ನನ್ನ ಆತ್ಮವಿಶ್ವಾಸವನ್ನು ಮತ್ತು ನನ್ನ ಆತ್ಮಿಕತೆಯನ್ನು ಎಷ್ಟೊಂದು ಹೆಚ್ಚಿಸಿತು!
ನನ್ನ ಮೊದಲ ಅಧಿವೇಶನ
ಮಾರ್ಚ್ 1951ರಲ್ಲಿ, ಯೆಹೋವನಿಗೆ ನನ್ನ ಜೀವಿತವನ್ನು ಸಮರ್ಪಿಸಿಕೊಂಡಿದ್ದು, ನನ್ನ ಜೀವಿತದಲ್ಲಿನ ಮುಂದಿನ ಎರಡು ಮೈಲಿಗಲ್ಲುಗಳನ್ನು ಮುಟ್ಟಿದೆ: ಒಂದು ನೀರಿನ ದೀಕ್ಷಾಸ್ನಾನ ಮತ್ತು ಇನ್ನೊಂದು ಯೆಹೋವನ ಸಾಕ್ಷಿಗಳ ನನ್ನ ಪ್ರಥಮ ಅಧಿವೇಶನದ ಹಾಜರಿಯೇ. ಆದರೆ ಇದು ದೊಡ್ಡ ನಗರವಾದ ಸಿಡ್ನಿಗೆ ಪ್ರಯಾಣಿಸುವುದನ್ನು ಕೇಳಿಕೊಂಡಿತ್ತು. ಅದೂ ಒಬ್ಬ ಹಳ್ಳಿಯ ಹೆಂಗಸಿಗೆ ದಿಗಿಲುಗೊಳಿಸುವ ವಿಚಾರ. ಅಷ್ಟುಮಾತ್ರವಲ್ಲದೆ, ಟ್ರೇನಿನಲ್ಲಿ ಹೋಗಲು ನನ್ನ ಬಳಿ ಟಿಕೇಟ್ಗಾಗಿ ಹಣವಿರಲಿಲ್ಲ. ನಾನೇನು ಮಾಡಸಾಧ್ಯವಿತ್ತು!
ಟಿಕೇಟಿನ ಹಣವನ್ನು ಪಡೆದುಕೊಳ್ಳಲು ನಾನು ಜೂಜಾಡಲು ನಿಶ್ಚಯಿಸಿದೆ. ‘ನಾನು ಯೆಹೋವನಿಗಾಗಿ ಇದನ್ನು ಮಾಡುತ್ತಿದ್ದೇನೆ, ಆದುದರಿಂದ ನಾನು ಗೆಲ್ಲುವಂತೆ ಆತನು ನನಗೆ ಖಂಡಿತವಾಗಿಯೂ ಸಹಾಯಮಾಡುವನು’ ಎಂದು ನಾನು ಸಮರ್ಥಿಸಿಕೊಂಡೆ. ಇಸ್ಪೀಟುಗಳನ್ನು ಆಡಿದ ಕೆಲವೊಂದು ಸುತ್ತಿನ ಕೊನೆಯಲ್ಲಿ, ಆತನು ನನಗೆ ಸಹಾಯಮಾಡಿದ್ದನು ಎಂದು ನೆನಸಿದೆ, ಏಕೆಂದರೆ ಹೋಗಿಬರಲಿಕ್ಕಾಗಿ ಸಾಕಷ್ಟು ಹಣವು ನನಗೆ ಸಿಕ್ಕಿತ್ತು.
ಸಿಡ್ನಿಗೆ ಹೋಗಲಿಕ್ಕಾಗಿ ನಾನು ಮಾಡಿದ್ದ ಯೋಜನೆಗಳ ಬಗ್ಗೆ ಬೆನ್ಗೆ ತಿಳಿದಿತ್ತಾದದ್ದರಿಂದ, ಅವರು ಮುಂದಿನ ಸಲ ಭೇಟಿಯಾದಾಗ, ನನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಕೇಳಿದರು. “ಓ, ನನ್ನ ಹತ್ತಿರ ಇದೆ! ನಾನು ಜೂಜಾಡುವ ಮೂಲಕ ಟ್ರೇನಿನ ಹಣವನ್ನು ಪಡೆದುಕೊಂಡೆ” ಎಂದು ನಾನು ಉತ್ತರಿಸಿದೆ. ಆ ಕ್ಷಣವೇ, ಅವರ ಮುಖವು ಕೆಂಪಾಯಿತು ಮತ್ತು ನಾನೇನೋ ತಪ್ಪಾಗಿ ಮಾತಾಡಿದ್ದೆನೆಂದು ನನಗೆ ಗೊತ್ತಾಯಿತು. ಆದುದರಿಂದ ನಾನು ತಕ್ಷಣವೇ, ಹೀಗೆ ಸಮರ್ಥಿಸಿಕೊಳ್ಳುತ್ತಾ ಹೇಳಿದ್ದು: “ಅದರಿಂದೇನಾಯಿತು? ನಾನು ಅದನ್ನು ಕದಿಯಲಿಲ್ಲವಲ್ಲಾ!”
ಬೆನ್ ಶಾಂತಗೊಂಡಾಗ, ಕ್ರೈಸ್ತರು ಏಕೆ ಜೂಜಾಡುವುದಿಲ್ಲವೆಂದು ದಯಾಪರವಾಗಿ ವಿವರಿಸಿದರು. ಮತ್ತು ಅವರು ಪುನರಾಶ್ವಾಸನೆಯನ್ನು ನೀಡುತ್ತಾ ಹೇಳಿದ್ದು: “ಅದು ನಿನ್ನ ತಪ್ಪಲ್ಲ. ಏಕೆಂದರೆ ನಾನು ನಿನಗೆ ಮೊದಲೇ ಹೇಳಲಿಲ್ಲ.”
ಸ್ವೀಕರಿಸಲ್ಪಟ್ಟ ಭಾವನೆಯನ್ನು ನನ್ನಲ್ಲಿ ಮೂಡಿಸಿದ್ದು
1951, ಮಾರ್ಚ್ 22-25ರ ಆ ನಾಲ್ಕು ದಿವಸಗಳ ಸಮ್ಮೇಳನದಲ್ಲಿಯೇ, ನಾನು ಮೊದಲ ಬಾರಿಗೆ ಅಷ್ಟೊಂದು ಅನೇಕ ಸಾಕ್ಷಿಗಳನ್ನು ಭೇಟಿಯಾದೆ. ಬೆನ್ ಮತ್ತು ಸ್ವಲ್ಪ ಜನರು ಮಾತ್ರ ನನಗೆ ಗೊತ್ತಿದ್ದದರಿಂದ, ನನ್ನನ್ನು ಹೇಗೆ ಸ್ವಾಗತಿಸುವರೋ ಎಂಬ ವಿಷಯದಲ್ಲಿ ನಾನು ಅನಿಶ್ಚಿತಳಾಗಿದ್ದೆ. ಒಂದಿಷ್ಟೂ ಪೂರ್ವಕಲ್ಪಿತ ಅಭಿಪ್ರಾಯವನ್ನು ತೋರಿಸದ, ನನ್ನ ಭವಿಷ್ಯತ್ತಿನ ಸಹೋದರ ಸಹೋದರಿಯರಿಂದ ಹೃತ್ಪೂರ್ವಕವಾಗಿ ಸ್ವಾಗತಿಸಲ್ಪಟ್ಟಾಗ ನಾನು ಎಷ್ಟೊಂದು ರೋಮಾಂಚಿತಳಾಗಿದ್ದೆ ಎಂಬುದನ್ನು ನೀವು ಊಹಿಸಿಕೊಳ್ಳಸಾಧ್ಯವಿದೆ. ನನ್ನ ಸ್ವಂತ ಮನೆಯಲ್ಲೇ ಇದ್ದೇನೆಂಬ ಹಾಯಾದ ಅನಿಸಿಕೆಯಾಯಿತು.
ಆ ಅಧಿವೇಶನವು ನನ್ನ ನೆನಪಿನಲ್ಲಿ ಇನ್ನೂ ಹಾಗೆ ಅಚ್ಚಳಿಯದೇ ಉಳಿದಿದೆ. ವಿಶೇಷವಾಗಿ, ಬಾಟನೀ ಬೇ ಅಲ್ಲಿ ದೀಕ್ಷಾಸ್ನಾನಗೊಂಡ 160 ಮಂದಿಯಲ್ಲಿ ನಾನೂ ಒಬ್ಬಳಾಗಿದ್ದೆ. ಸ್ಪಷ್ಟವಾಗಿಯೇ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗುವುದರಲ್ಲಿ, ನಾನು ಆಸ್ಟ್ರೇಲಿಯದ ಬುಡಕಟ್ಟಿನ ಜನಾಂಗದವರಲ್ಲಿಯೇ ಮೊದಲಿಗಳಾಗಿದ್ದೆ. ನನ್ನ ಚಿತ್ರವು ಭಾನುವಾರದ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟಿತು ಮತ್ತು ಥಿಯೆಟರುಗಳಲ್ಲಿ ತೋರಿಸಲ್ಪಟ್ಟ ವಾರ್ತೆಯಲ್ಲಿ ಸಹ ಪ್ರದರ್ಶಿಸಲಾಯಿತು.
ಪಟ್ಟಣದಲ್ಲಿ ಏಕಮಾತ್ರ ಸಾಕ್ಷಿ
ನಾನು ಸಿಡ್ನಿಯಿಂದ ಹಿಂತಿರುಗಿದ ಒಂದು ತಿಂಗಳ ಅನಂತರ, ನಮ್ಮ ಕುಟುಂಬವು, ವಾಯವ್ಯದ ಕ್ವೀನ್ಸ್ಲ್ಯಾಂಡ್ನಲ್ಲಿರುವ ಒಂದು ಗಣಿಗಾರಿಕೆ ಪಟ್ಟಣವಾದ, ಮೌಂಟ್ ಐಸಕ್ಕೆ ಹೋಯಿತು. ಪಟ್ಟಣದ ಹೊರಗೆ ಇರುವ ಒಂದು ದೊಡ್ಡ ಜಮೀನನ್ನು ನೋಡಿಕೊಳ್ಳುವವರೋಪಾದಿ ಷೆಡ್ನಲ್ಲಿ ಆರು ವರ್ಷಗಳ ವರೆಗೆ ನಾವು ವಾಸಿಸಿದೆವು. ಹತ್ತಿರದಲ್ಲಿದ್ದ ಕಾಡಿನಿಂದ ಕತ್ತರಿಸಿ ತಂದ ಮರದ ದಿಮ್ಮಿಯಿಂದ ನಾವು ನಮ್ಮ ಷೆಡ್ಡಿನ ಗೋಡೆಗಳನ್ನು ಕಟ್ಟಿದೆವು. ನಾವು ಹಳೆಯ ಬಿಟ್ಯುಮನ್ ಡಬ್ಬಗಳ ಬದಿಯನ್ನು ಸೀಳಿ, ಸಮತಟ್ಟುಮಾಡಿ ಅದರಿಂದ ನಾವು ಮೇಲ್ಚಾವಣಿಯನ್ನು ಮಾಡಿದೆವು. ಮಾರ್ಟಿನ್ಗೆ ರೈಲ್ವೆಯಲ್ಲಿ ಕೆಲಸ ಸಿಕ್ಕಿತಾದರೂ ಅವರ ಕುಡಿತದ ಅಭ್ಯಾಸವು, ಕೊನೆಗೆ ಅವರ ಆರೋಗ್ಯವನ್ನು ಹಾಳುಮಾಡಿತು. ಆಗ, ನಾನು ನಮ್ಮ ಕುಟುಂಬದ ಏಕಮಾತ್ರ ಬೆಂಬಲಿಗಳಾದೆ. ಅವರು 1971ರಲ್ಲಿ ಮೃತಪಟ್ಟರು.
ಮೊದಮೊದಲು, ನಾನು ಮೌಂಟ್ ಐಸದಲ್ಲಿ ಏಕಮಾತ್ರ ಸಾಕ್ಷಿಯಾಗಿದ್ದೆ. ಬೆನ್ ಪ್ರತಿ ಆರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ನಂತರ ಬರುತ್ತಿದ್ದರು, ಏಕೆಂದರೆ ಮೌಂಟ್ ಐಸವು ಅವರ ವ್ಯಾಪಕವಾದ ಸಾಕ್ಷಿಕಾರ್ಯದ ಟೆರಿಟೊರಿಯ ಒಂದು ಭಾಗವಾಗಿತ್ತು. ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಸಮಯದಲ್ಲಿ ಅವರು ಪಟ್ಟಣದಲ್ಲಿರುತ್ತಿದ್ದರೆ, ಅವರು ನನ್ನ ಕುಟುಂಬದೊಂದಿಗೆ, ಕೆಲವೊಮ್ಮೆ ಮರವೊಂದರ ಕೆಳಗೆ ಅದನ್ನು ಆಚರಿಸುತ್ತಿದ್ದರು. ಇದು ಬೆನ್ಗೆ ಒಂದು ವಿಶೇಷವಾದ ಸಂದರ್ಭವಾಗಿತ್ತು, ಏಕೆಂದರೆ ಅವರಿಗೆ ಸ್ವರ್ಗೀಯ ಜೀವಿತದ ನಿರೀಕ್ಷೆಯಿತ್ತು.
ಸಾಮಾನ್ಯವಾಗಿ ಬೆನ್ ತುಂಬ ಕಾಲ ಅಲ್ಲಿ ಇರುತ್ತಿರಲಿಲ್ಲವಾದುದರಿಂದ, ನಾವೇ—ನನ್ನ ಮಕ್ಕಳು ಮತ್ತು ನಾನು— ಹೆಚ್ಚಿನ ಸಾಕ್ಷಿಕಾರ್ಯವನ್ನು ಮಾಡುತ್ತಿದ್ದೆವು. ನಿಜ, ನಾವು ಒಬ್ಬಂಟಿಗರಾದ್ದೆವು, ಆದರೆ ಯೆಹೋವನ ಆತ್ಮವು ನಮ್ಮನ್ನು ಬಲಪಡಿಸಿತು ಮತ್ತು ಆತನ ಪ್ರೀತಿಪರ ಸಂಸ್ಥೆಯು ಸಹ ಸಹಾಯಮಾಡಿತು. ನಮ್ಮ ಗುಂಪು ಅನೇಕ ವರ್ಷಗಳ ವರೆಗೆ ಚಿಕ್ಕದ್ದಾಗಿತ್ತಾದರೂ, ನಮ್ಮನ್ನು ಉತ್ತೇಜಿಸಲಿಕ್ಕಾಗಿ ನಂಬಿಗಸ್ತ ಸಂಚರಣ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯರು ಮೌಂಟ್ ಐಸಕ್ಕೆ ಬರುತ್ತಿದ್ದಾಗ, ಅವರು ಅತಿಯಾದ ಬಿಸಿಲಿನ ಧಗೆ, ನೊಣಗಳು, ಮತ್ತು ಧೂಳುತುಂಬಿದ ಅಡ್ಡಾದಿಡ್ಡಿ ರಸ್ತೆಗಳೊಂದಿಗೆ ಹೋರಾಡುತ್ತಿದ್ದರು. ಹಾಗೂ 1,200 ಕಿಲೊಮೀಟರುಗಳಿಗಿಂತಲೂ ದೂರವಿರುವ, ಡಾರ್ವಿನ್ನಲ್ಲಿರುವ ಹೊಸದಾಗಿ ಸ್ಥಾಪಿಸಲ್ಪಟ್ಟ ನೆರೆಯ ಸಭೆಯು, ಯಾವಾಗಲಾದರೊಮ್ಮೆ ಇಲ್ಲಿಗೆ ಬರುತ್ತಿತ್ತು.
ಒಂದು ಸಭೆಯು ಸ್ಥಾಪಿಸಲ್ಪಟ್ಟದ್ದು
ಡಿಸೆಂಬರ್ 1953ರಲ್ಲಿ, ಮೌಂಟ್ ಐಸದಲ್ಲಿ ಒಂದು ಸಭೆಯು ಸ್ಥಾಪಿಸಲ್ಪಟ್ಟಿತು. ಬೆನ್ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟರು ಮತ್ತು ನನ್ನ ಪುತ್ರಿಯಾದ ಆ್ಯನ್ ಮತ್ತು ನಾನು ಮಾತ್ರವೇ ಆಗ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದವರಾಗಿದ್ದೆವು. ಆದರೆ ಬೇಗನೆ ಇತರ ಸಾಕ್ಷಿಗಳು ಸಹ ಪಟ್ಟಣದಲ್ಲಿ ಬಂದು ನೆಲೆಸಿದರು. ನಮ್ಮ ಟೆರಿಟೊರಿಯು, ಅನೇಕ ಬುಡಕಟ್ಟಿನ ಜನರನ್ನು ಸೇರಿಸಿ, ಅನೇಕರನ್ನು ಶಿಷ್ಯರನ್ನಾಗಿ ಮಾಡಲು ಪ್ರಾರಂಭಿಸಿತು.
ಸಭೆಯು ಬೆಳೆಯುತ್ತಾ ಹೋಯಿತು ಮತ್ತು ಬೇಗನೆ ನಮ್ಮ ಕೂಟಗಳನ್ನು ನಡೆಸಲಿಕ್ಕಾಗಿ ನಮಗೆ ಒಂದು ರಾಜ್ಯ ಸಭಾಗೃಹವನ್ನು ಬೇಕಾಯಿತು. 1960ರ ಮೇ ತಿಂಗಳಿನಲ್ಲಿ, ತುಂಬ ಕಷ್ಟಪಟ್ಟು ಕೆಲಸಮಾಡಿದ ಅನಂತರ, ನಾವು ನಮ್ಮ ಸ್ವಂತ ಹೊಸ ಸಭಾಗೃಹವನ್ನು ಕಟ್ಟಿಮುಗಿಸಿದೆವು. ಮುಂದಿನ 15 ವರ್ಷಗಳ ಕಾಲದಲ್ಲಿ, ಅದು ಎರಡರಷ್ಟು ದೊಡ್ಡದಾಯಿತು. ಆದರೆ 1970ರ ಮಧ್ಯಭಾಗದಲ್ಲಿ ಸಾರ್ವಜನಿಕ ಶುಶ್ರೂಷೆಯಲ್ಲಿ ಸುಮಾರು 120 ಜನರು ಪಾಲ್ಗೊಳ್ಳುತ್ತಿದ್ದೆವು ಮತ್ತು ಸಭಾಗೃಹವು ಪುನಃ ತೀರ ಚಿಕ್ಕದಾಗಿತ್ತು. ಆದಕಾರಣ, ಒಂದು ಒಳ್ಳೆಯ, 250 ಆಸನಗಳುಳ್ಳ ರಾಜ್ಯ ಸಭಾಗೃಹವನ್ನು ಕಟ್ಟಲಾಯಿತು. ಮತ್ತು ಅದನ್ನು 1981ರಲ್ಲಿ ಸಮರ್ಪಿಸಲಾಯಿತು. ಆದರೆ ಅದರಲ್ಲಿ ತುಂಬ ಜನರು ಕುಳಿತುಕೊಳ್ಳಸಾಧ್ಯವಿರುವುದರಿಂದ, ಆ ಕಟ್ಟಡವು ಸರ್ಕಿಟ್ ಸಮ್ಮೇಳನದಂಥ ದೊಡ್ಡ ಒಟ್ಟುಗೂಡುವಿಕೆಗಳಿಗೂ ಉಪಯೋಗಿಸಲ್ಪಟ್ಟಿದೆ.
ಬುಡಕಟ್ಟಿನವರ ಮಧ್ಯೆ ಬೆಳವಣಿಗೆ
ಮೌಂಟ್ ಐಸ ಸಭೆಯೊಂದಿಗೆ ಜೊತೆಗೂಡಿರುವ ಬುಡಕಟ್ಟಿನ ಮತ್ತು ದ್ವೀಪನಿವಾಸಿಗಳ ಒಂದು ಗುಂಪು 1996ರಲ್ಲಿ ಸ್ಥಾಪನೆಯಾದದ್ದು ನನಗೆ ರೋಮಾಂಚಕಾರಿಯಾದ ವಿಷಯವಾಗಿತ್ತು. ದ್ವೀಪನಿವಾಸಿಗಳು, ಆಸ್ಟ್ರೇಲಿಯನ್ ಭೂಭಾಗದ ಹತ್ತಿರದಲ್ಲಿರುವ ದ್ವೀಪಗಳಿಂದ ಬಂದ ಬುಡಕಟ್ಟಿನ ಜನರಾಗಿದ್ದಾರೆ. ಈ ಗುಂಪಿನ ಮುಖ್ಯ ಗುರಿಯು, ಕೆಲವು ಬುಡಕಟ್ಟಿನ ಜನರಿಗೆ—ಅವರಲ್ಲಿ ಕೆಲವರಿಗೆ ಬಿಳಿಯರ ಬಗ್ಗೆ ಸ್ವಲ್ಪ ಮುಜುಗರದ ಭಾವನೆಯಿದೆ—ಒಂದು ಒಳ್ಳೆಯ ಸಾಕ್ಷಿಯನ್ನು ನೀಡುವುದೇ ಆಗಿದೆ.
ಆಸ್ಟ್ರೇಲಿಯದ ಸುತ್ತಮುತ್ತಲೂ ಬುಡಕಟ್ಟು ಜನರ ಸುಮಾರು 20 ಇತರ ಗುಂಪುಗಳು ಚದರಿವೆ. ಇದಕ್ಕೆ ಕೂಡಿಸಿ, ಬುಡಕಟ್ಟು ಜನರ ಸಭೆಗಳು ಅಡಲೇಡ್, ಕಾರ್ನ್ಸ್, ಇಪ್ಸ್ವಿಚ್, ಪರ್ತ್ ಮತ್ತು ಟಾನ್ಸ್ವಿಲ್ಗಳಲ್ಲೂ ಸ್ಥಾಪಿಸಲ್ಪಟ್ಟಿವೆ. ನನ್ನ ಕುಟುಂಬದ ಕೆಲವರನ್ನು ಸೇರಿಸಿ, ಸುಮಾರು 500 ಜನರು ಈ ಗುಂಪುಗಳಿಗೆ ಮತ್ತು ಸಭೆಗಳಿಗೆ ಹಾಜರಾಗುತ್ತಾರೆ. ಹೆಚ್ಚುಕಡಿಮೆ ಶೇಕಡ 10ರಷ್ಟು ಬುಡಕಟ್ಟು ಪ್ರಚಾರಕರು, ಪಯನೀಯರರು ಇಲ್ಲವೇ ಪೂರ್ಣಸಮಯದ ಸೇವಕರಾಗಿದ್ದಾರೆ!
1975ರಲ್ಲಿ ನನಗೆ ಸಿಹಿಮೂತ್ರ ರೋಗವಿದೆ ಎಂದು ಗೊತ್ತಾಯಿತು ಮತ್ತು ಅನೇಕ ಬುಡಕಟ್ಟಿನ ಜನರನ್ನು ಬಾಧಿಸುವ ಈ ರೋಗವು ನನಗೆ ವರ್ಷಗಳಿಂದ ಕಷ್ಟವನ್ನು ಕೊಟ್ಟಿದೆ. ಓದುವುದು ತುಂಬ ಕಷ್ಟವಾಗುತ್ತಾ ಇದೆ. ಆದರೂ ಯೆಹೋವನು ನನ್ನನ್ನು ಪೋಷಿಸುತ್ತಾ, ಆನಂದವನ್ನು ನೀಡುತ್ತಾ ಇದ್ದಾನೆ.
ನನ್ನ ಕುಟುಂಬಕ್ಕೆ ಮತ್ತು ನನಗೆ ಸೇವೆಮಾಡಿದ ಧೈರ್ಯಶಾಲಿ ಶುಶ್ರೂಷಕರಿಗಾಗಿ ನಾನು ಆಭಾರಿಯಾಗಿದ್ದೇನೆ. ಅವರ ಅದಮ್ಯ ಹುರುಪು, ಪ್ರೀತಿಯ ಕಾರಣ, ಮತ್ತು ಆ ಧೂಳು ತುಂಬಿದ, ನಿರ್ಜನ ರಸ್ತೆಗಳ ಹಾಗೂ ಕ್ವೀನ್ಸ್ಲ್ಯಾಂಡಿನ ದೂರದೂರದಲ್ಲಿರುವ ಹಳ್ಳಿಗಾಡುಗಳ ಹಾದಿಗಳಲ್ಲಿ ಸೈಕಲುಗಳಲ್ಲಿ ಅವರು ಆತ್ಮಿಕ ನಿಧಿಯನ್ನು ಎಲ್ಲರಿಗೂ ತಲಪಿಸಿದ ಕಾರಣ, ನಾವು ಈಗ ಬೈಬಲಿನ ಸತ್ಯವನ್ನು ಕಲಿತುಕೊಂಡಿದ್ದೇವೆ. ಈಗ ನಾನು ಭುವಿಗಾಗಿರುವ ನನ್ನೊಲುಮೆಯು ಅನಂತಕಾಲಕ್ಕೂ ತಣಿಸಲ್ಪಡುವ ಸಮಯಕ್ಕಾಗಿ ದೃಢಭರವಸೆಯಿಂದ ಕಾಯುತ್ತಿದ್ದೇನೆ.
[ಅಧ್ಯಯನ ಪ್ರಶ್ನೆಗಳು]
a ಬೆನ್ ಬ್ರಿಕಲ್ರವರ ಗಮನಾರ್ಹವಾದ ಜೀವನ ಕಥೆಯು, ಸೆಪ್ಟೆಂಬರ್ 1, 1972ರ ದ ವಾಚ್ಟವರ್ ಪತ್ರಿಕೆಯ 533-6ರ ಪುಟಗಳಲ್ಲಿ ನೀಡಲ್ಪಟ್ಟಿತು.
[ಪುಟ 13ರಲ್ಲಿರುವಚಿತ್ರ]
ಪರ್ತ್
ಇಂದು ಡಾರಥೀ
ಡಾರ್ವಿನ್
ಕಾರ್ನ್ಸ್
ಟಾನ್ಸ್ವಿಲ್
ಮೌಂಟ್ ಐಸ
ರಾಕ್ಹ್ಯಾಮ್ಟನ್
ಎಮರಾಲ್ಡ್
ಸ್ಪ್ರಿಂಶುರ್
ವೂರ್ಬಿಂಡ
ಇಪ್ಸ್ವಿಚ್
ಅಡಲೇಡ್
ಸಿಡ್ನಿ
[ಪುಟ 11 ರಲ್ಲಿರುವ ಚಿತ್ರ]
1950ಗಳ ಮಧ್ಯಭಾಗದಲ್ಲಿ ಬೆನ್ ಅವರೊಟ್ಟಿಗೆ ಪ್ರ್ಯಾಕ್ಟಿಸ್ ಸೆಶನ್