ಮಲೇರಿಯದ ವಿರುದ್ಧ ಹೋರಾಟದಲ್ಲಿ ಪುನಃ ಪ್ರಾಥಮಿಕತೆಗೆ
ಲೋಕದ ಗಮನವು ಆಂತರಿಕ ಯುದ್ಧಗಳು, ಪಾತಕ, ನಿರುದ್ಯೋಗ, ಹಾಗೂ ಇತರ ಬಿಕ್ಕಟ್ಟುಗಳ ಮೇಲೆ ಕೇಂದ್ರೀಕರಿತವಾಗಿರುವುದರಿಂದ, ಮಲೇರಿಯ ಮರಣಗಳು ಸಂಧ್ಯಾಕಾಲದ ವಾರ್ತೆಗಳಾಗಿರುವುದೇ ವಿರಳ. ಆದರೂ, ಲೋಕದ ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಮಲೇರಿಯದ ಬೆದರಿಕೆಯ ಕೆಳಗೆ ಜೀವಿಸುತ್ತದೆ ಹಾಗೂ ಮಲೇರಿಯವನ್ನು “ಉಷ್ಣವಲಯದ ವ್ಯಾಧಿಗಳಲ್ಲಿಯೇ ಅತ್ಯಂತ ವ್ಯಾಪಕ ವ್ಯಾಧಿ ಹಾಗೂ ಅತ್ಯಂತ ಮಾರಕ ವ್ಯಾಧಿ”ಯಾಗಿ ಮಾಡುತ್ತಾ, ಪ್ರತಿ ವರ್ಷ ಸುಮಾರು 30ರಿಂದ 50 ಕೋಟಿ ಜನರು ಅದನ್ನು ಸೋಂಕಿಸಿಕೊಳ್ಳುತ್ತಾರೆ ಎಂದು ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್ಓ) ಹೇಳುತ್ತದೆ. ಅದು ಎಷ್ಟು ಮಾರಕ?
ಪ್ರತಿ 20 ಸೆಕೆಂಡುಗಳಿಗೆ ಯಾರಾದರೊಬ್ಬರು ಮಲೇರಿಯದಿಂದ ಸಾಯುತ್ತಾರೆ. ಆ ಸಂಖ್ಯೆಯು ಪ್ರತಿ ವರ್ಷ 15 ಲಕ್ಷಕ್ಕಿಂತಲೂ ಹೆಚ್ಚು ಪೀಡಿತರ ಮೃತ ಸಂಖ್ಯೆಯ ಒಟ್ಟು ಮೊತ್ತವಾಗುತ್ತದೆ—ಆಫ್ರಿಕ ರಾಷ್ಟ್ರದ ಬಾಟ್ಸ್ವಾನದ ಇಡೀ ಜನಸಂಖ್ಯೆಗೆ ಸರಿಸಮಾನವಾದ ಒಂದು ಸಂಖ್ಯೆ. ಉಷ್ಣವಲಯದ ಆಫ್ರಿಕದಲ್ಲಿ ಹತ್ತು ಜನರಲ್ಲಿ ಒಂಬತ್ತು ಜನರು ಮಲೇರಿಯದಿಂದ ಮೃತರಾಗುತ್ತಾರೆ. ಇವರಲ್ಲಿ ಪೀಡಿತರಾಗಿರುವವರು ಹೆಚ್ಚಾಗಿ ಎಳೆಯ ಮಕ್ಕಳು. ಅಮೆರಿಕದಲ್ಲಿ, ಅಮೆಸಾನ್ ಕ್ಷೇತ್ರದಲ್ಲಿ ಮಲೇರಿಯದ ಉಚ್ಚಮಟ್ಟದ ವ್ಯಾಪ್ತಿಯನ್ನು ಡಬ್ಲ್ಯೂಏಚ್ಓ ದಾಖಲುಮಾಡಿತು. ಲೋಕದ ಆ ಭಾಗದಲ್ಲಿ ಅರಣ್ಯನಾಶ ಹಾಗೂ ಇತರ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಪರಿವರ್ತನೆಗಳು, ಮಲೇರಿಯ ಪೀಡಿತರಿಗೆ ವರ್ಧಿಸುತ್ತಿರುವ ಪರಿಣಾಮಗಳನ್ನು ಬಿಟ್ಟುಹೋಗಿವೆ. ಕೆಲವು ಬ್ರೆಸಿಲ್ ಅಮೆಸಾನಿನ ಸಮುದಾಯಗಳಲ್ಲಿ, ಸಮಸ್ಯೆಯು ಈಗ ಎಷ್ಟು ಗಂಭೀರವಾಗಿದೆಯೆಂದರೆ, ಪ್ರತಿ 1,000 ನಿವಾಸಿಗಳಲ್ಲಿ 500ಕ್ಕಿಂತಲೂ ಹೆಚ್ಚು ನಿವಾಸಿಗಳು ಸೋಂಕಿತರಾಗಿದ್ದಾರೆ.
ಆಫ್ರಿಕ, ಅಮೆರಿಕ, ಏಷ್ಯಾ ಅಥವಾ ಇನ್ನೆಲ್ಲಿಯೇ ಆಗಲಿ, ಮಲೇರಿಯವು ಮುಖ್ಯವಾಗಿ ಕಡುಬಡವ ಜನಸಂಖ್ಯಾ ಗುಂಪುಗಳನ್ನು ಬಾಧಿಸುತ್ತದೆ. ಈ ಜನರಿಗೆ, “ಅತ್ಯಂತ ಕಡಿಮೆ ಆರೋಗ್ಯ ಸೇವೆಗಳಿಗೆ ಮಾರ್ಗವಿದ್ದು, ವೈಯಕ್ತಿಕ ರಕ್ಷಣೆಯನ್ನು ಪಡೆದುಕೊಳ್ಳುವ ತೀರ ಕಡಿಮೆ ಶಕ್ಯತೆಯಿದೆ ಹಾಗೂ ಸಂಸ್ಥಾಪಿತ ಮಲೇರಿಯ ನಿಯಂತ್ರಣ ಚಟುವಟಿಕೆಗಳಿಂದ ತುಂಬ ದೂರದಲ್ಲಿ ವಾಸಿಸುವವರಾಗಿದ್ದಾರೆ” ಎಂಬುದನ್ನು ಡಬ್ಲ್ಯೂಏಚ್ಓ ಗಮನಿಸುತ್ತದೆ. ಆದರೂ ಆ ಬಡಜನರ ಪಾಡು ನಿರೀಕ್ಷೆಗೆ ಅತೀತವಾಗಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಉಷ್ಣವಲಯ-ವ್ಯಾಧಿಗಳ ಸಂಶೋಧನೆಯ ಕುರಿತಾದ ಒಂದು ಸುದ್ದಿಪತ್ರವು ಟಿಡಿಆರ್ ನ್ಯೂಸ್—ಮಲೇರಿಯ ಮರಣಗಳನ್ನು ತಡೆಗಟ್ಟಲಿಕ್ಕಾಗಿರುವ ವಿಧಾನಗಳಲ್ಲಿಯೇ ಅತ್ಯಂತ ಭರವಸೆಯೋಗ್ಯವಾದ ವಿಧಾನವೊಂದು—ಹೆಚ್ಚು ಲಭ್ಯವಾಗಿ ಪರಿಣಮಿಸಿದೆ ಎಂದು ಹೇಳುತ್ತದೆ. ಆ ಜೀವರಕ್ಷಕದ ಹೆಸರೇನು? ಕೀಟನಾಶಕ-ಪೂರಿತ ಹಾಸಿಗೆಪರದೆಗಳು.
ನಿವ್ವಳ ಲಾಭ
ಹಾಸಿಗೆ ಪರದೆಗಳನ್ನು ಉಪಯೋಗಿಸುವುದು ಪುನಃ ಪ್ರಾಥಮಿಕತೆ ಪರಿಹಾರವಾಗಿರುವುದಾದರೂ, ಮಲೇರಿಯದ ವಿರುದ್ಧದ ಹೋರಾಟದಲ್ಲಿ ಹಾಸಿಗೆ ಪರದೆಗಳ ಪರಿಣಾಮಕಾರತೆಯನ್ನು ಪರೀಕ್ಷಿಸಲು ಮಾಡಲ್ಪಟ್ಟ ಪ್ರಯೋಗಗಳು “ತುಂಬ ರೋಮಾಂಚಕವಾದ ಫಲಿತಾಂಶಗಳನ್ನು” ತೋರಿಸಿವೆ ಎಂಬುದಾಗಿ ಡಬ್ಲ್ಯೂಏಚ್ಓದ ಆಫ್ರಿಕ ಆಫೀಸಿನ ಡೈರೆಕ್ಟರ್ ಆದ, ಡಾ. ಇಬ್ರಾಹಿಂ ಸಾಂಬ, ಪಾನೊಸ್ ಇನ್ಸ್ಟಿಟ್ಯೂಟ್ನ ಸುದ್ದಿಪತ್ರವೊಂದಕ್ಕೆ, ಪಾನೊಸ್ ಫೀಚರ್ಸ್ಗೆ ಹೇಳಿದರು. ಉದಾಹರಣೆಗೆ ಕೆನ್ಯದಲ್ಲಿ, ಜೈವಿಕ ವಿಘಟನೀಯ ಕ್ರಿಮಿನಾಶಕಗಳೊಂದಿಗೆ ತುಂಬಿರುವ ಹಾಸಿಗೆ ಪರದೆಗಳನ್ನು ಬಳಸುವುದು, ಐದು ವರ್ಷ ಪ್ರಾಯದ ಕೆಳಗಿರುವ ಮಕ್ಕಳ ನಡುವೆ ಎಲ್ಲ ಮರಣಗಳನ್ನು—ಮಲೇರಿಯ ಮರಣಗಳನ್ನು ಮಾತ್ರವಲ್ಲ—ಮೂರನೇ ಒಂದಂಶಕ್ಕೆ ಇಳಿಸಿವೆ. ಜೀವಗಳನ್ನು ಉಳಿಸುವುದರ ಜೊತೆಗೆ, “ಪರದೆಗಳು ಆರೋಗ್ಯ ಸೇವೆಗಳ ಮೇಲೆ ಬೀಳುವ ಹೊರೆಯನ್ನು ಅಮೂಲಾಗ್ರವಾಗಿ ಕಡಿಮೆಗೊಳಿಸಸಾಧ್ಯವಿದೆ” ಏಕೆಂದರೆ ಕೇವಲ ಕೆಲವೇ ರೋಗಿಗಳಿಗೆ ಮಲೇರಿಯಕ್ಕಾಗಿ ಆಸ್ಪತ್ರೆಯ ಚಿಕಿತ್ಸೆಯು ಅಗತ್ಯವಿರುವುದು.
ಆದರೂ, ಒಂದು ಸಮಸ್ಯೆಯು ಇನ್ನೂ ಪರಿಹರಿಸಲ್ಪಡಬೇಕಾಗಿದೆ: ಪರದೆಗಳಿಗಾಗಿ ಯಾರು ಹಣ ತೆರುತ್ತಾರೆ? ಆಫ್ರಿಕದ ಒಂದು ರಾಷ್ಟ್ರದ ಜನರು ದಾನಮಾಡಲು ಕೇಳಿಕೊಳ್ಳಲ್ಪಟ್ಟಾಗ, ಹೆಚ್ಚಿನವರು ವಿಮುಖರಾದರು. ಆರೋಗ್ಯ ಆರೈಕೆಯ ಮೇಲೆ ಒಂದು ವರ್ಷಕ್ಕೆ ಒಬ್ಬ ವ್ಯಕ್ತಿಯ ಮೇಲೆ 5ಕ್ಕಿಂತಲೂ ಕಡಿಮೆ ಡಾಲರನ್ನು (ಅಮೆರಿಕ) ವ್ಯಯಮಾಡುವ ದೇಶಗಳಲ್ಲಿ ಜೀವಿಸುವ ಜನರಿಗೆ—ಕೀಟನಾಶಕಗಳಿಂದ ಕೂಡಿದ ಇಲ್ಲವೇ ಕೂಡಿರದ—ಒಂದು ಸೊಳ್ಳೆ ಪರದೆ ಕೂಡ ಭೋಗವಸ್ತುವಾಗಿದೆ ಎಂಬುದು ಆಶ್ಚರ್ಯಪಡಿಸುವಂಥ ಸಂಗತಿಯಾಗಿರುವುದಿಲ್ಲ. ಆದರೂ, ತಡೆಗಟ್ಟುವಿಕೆಯ ಈ ವಿಧಾನವು ಸರಕಾರಗಳಿಗೆ ಮಲೇರಿಯ ರೋಗಿಗಳನ್ನು ಉಪಚರಿಸುವುದಕ್ಕಿಂತಲೂ ಕಡಿಮೆ ಖರ್ಚನ್ನು ತರುವುದರಿಂದ, ವಿಶ್ವಸಂಸ್ಥೆಯ ಪರಿಣತರು ಗಮನಿಸುವುದೇನೆಂದರೆ, “ಅದು ಪೂರಿತ ಹಾಸಿಗೆಪರದೆಗಳನ್ನು ವಿತರಿಸಲು ಹಾಗೂ ಅದಕ್ಕೆ ಹಣ ನೀಡುವುದಕ್ಕೆ ಕಡಿಮೆ ಸರಕಾರ ಧನಗಳ ಒಂದು ಬೆಲೆ-ಪರಿಣಾಮಕಾರಿ ಉಪಯೋಗವಾಗಿರುವುದು.” ಹಾಸಿಗೆ ಪರದೆಗಳನ್ನು ಒದಗಿಸುವುದು ಸರಕಾರಗಳಿಗೆ ಹಣವನ್ನು ಉಳಿತಾಯಮಾಡುವ ಒಂದು ವಿಧವಾಗಿರಬಹುದು ಎಂಬುದು ನಿಜ. ಅವುಗಳ ಲಕ್ಷಾಂತರ ಬಡ ನಾಗರಿಕರಿಗಾದರೋ, ಇದು ಅದಕ್ಕಿಂತಲೂ ಹೆಚ್ಚಿನ ವಿಷಯವಾಗಿದೆ—ಅದು ತಮ್ಮ ಜೀವಗಳನ್ನು ಉಳಿಸಿಕೊಳ್ಳುವ ಒಂದು ಮಾಧ್ಯಮವಾಗಿದೆ.
[ಪುಟ 42 ರಲ್ಲಿರುವ ಚಿತ್ರ ಕೃಪೆ]
CDC, Atlanta, Ga.