ವಜ್ರಗಳು ಅಷ್ಟು ದುಬಾರಿಯಾಗಿರುವುದೇಕೆ?
ಸ್ಪೆಯ್ನ್ನ ಎಚ್ಚರ! ಸುದ್ದಿಗಾರರಿಂದ
ಕೆಲವೊಮ್ಮೆ ಸೌಂದರ್ಯವು ಕಂಡುಹಿಡಿಯಲ್ಪಡಸಾಧ್ಯವಿದೆ. ಬೇರೆ ಸಮಯಗಳಲ್ಲಿ ಅದನ್ನು ಸೃಷ್ಟಿಸಬೇಕಾಗುತ್ತದೆ. ಆದರೆ ಒಂದು ವಜ್ರವು, ಕಂಡುಹಿಡಿಯಲ್ಪಡಲೂಬೇಕು, ಸೃಷ್ಟಿಸಲ್ಪಡಲೂಬೇಕು.
ಕಚ್ಚಾ ವಜ್ರಗಳು, ನಿಸರ್ಗದ ಒಂದು ಸುಂದರ ಸೃಷ್ಟಿಯಾಗಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಭೂಮಿಯ ಹೊರಪದರದ ಕೆಳಗಿರುವ ತೀಕ್ಷ್ಣ ಒತ್ತಡ ಹಾಗೂ ಉಚ್ಚಮಟ್ಟದ ಶಾಖಗಳು, ಸರಳವಾದ ಇಂಗಾಲವನ್ನು ಗಟ್ಟಿಯಾದ, ಪಾರದೀಪಕ ಹರಳುಗಳಾಗಿ ಮಾರ್ಪಡುವಂತೆ ನಿಧಾನವಾಗಿ ಆಕಾರಕೊಡುತ್ತವೆ. ಆದರೆ ಈ ವಿರಳ ಅನರ್ಘ್ಯ ರತ್ನಗಳು ಅನೇಕ ವೇಳೆ ಕಂಡುಹಿಡಿತವನ್ನು ಅಸಾಧ್ಯವನ್ನಾಗಿ ಮಾಡುತ್ತವೆ. ಭೂಮಿಯ ಮೇಲೆ ಮಾಡಲ್ಪಟ್ಟಿರುವ ಅತಿ ದೊಡ್ಡದಾದ ಮಾನವ ನಿರ್ಮಿತ ರಂಧ್ರಗಳಲ್ಲಿ—ಆಸ್ಟ್ರೇಲಿಯ, ಸೈಬೀರಿಯ, ಹಾಗೂ ದಕ್ಷಿಣ ಆಫ್ರಿಕದ ಭೂದೃಶ್ಯಗಳನ್ನು ವೈವಿಧ್ಯಗೊಳಿಸುವ—ಕೆಲವು ರಂಧ್ರಗಳು ಈ ಅನರ್ಘ್ಯ ರತ್ನಗಳ ಅನ್ವೇಷಣೆಯಲ್ಲಿ ಅಗೆಯಲ್ಪಟ್ಟಿವೆ. ಬರೀ ಆರು ಗ್ರ್ಯಾಮ್ಗಳಷ್ಟು ತೂಕವುಳ್ಳ ಕೆಲವೊಂದು ವಜ್ರಗಳನ್ನು ಹುಡುಕಿತೆಗೆಯಲು, ಒಂದು ನೂರು ಟನ್ಗಳ ನೆಲವನ್ನು ಗಣಿತೋಡಿ, ಜಲ್ಲಡಿ ಆಡಿಸಬೇಕಾಗಿರಬಹುದು!
ಒಮ್ಮೆ ವಜ್ರವು ಕಂಡುಹಿಡಿಯಲ್ಪಟ್ಟಿತೆಂದರೆ, ನಿಪುಣ ಕರಕುಶಲಿಗಳು, ಅದು ಒಂದು ಉಂಗುರ ಇಲ್ಲವೇ ಒಂದು ನೆಕ್ಲೇಸ್ ಅನ್ನು ಚಿತ್ತಾಕರ್ಷಕವಾಗಿ ಮಾಡುವ ಮೊದಲು, ಅದರ ಸುಪ್ತ ಸೌಂದರ್ಯಕ್ಕೆ ಶ್ರಮಪಟ್ಟು ಆಕೃತಿಕೊಡಬೇಕು.
ಸಹಜವಾಗಿಯೇ, ಈ ಎಲ್ಲ ಪರಿಶ್ರಮ ಹಾಗೂ ಕಾರ್ಯನಿಪುಣತೆಯ ಉತ್ಪಾದನೆಯು ಅಗ್ಗದ ಬೆಲೆಯದ್ದಾಗಿರುವುದಿಲ್ಲ. ಆದರೆ ಹೆಚ್ಚಿನ ಮಹಿಳೆಯರು—ಹಾಗೂ ಪುರುಷರು—ಅದಕ್ಕೆ ತಗಲುವ ಖರ್ಚು ಸಾರ್ಥಕ ಎಂದು ಭಾವಿಸುತ್ತಾರೆ. ವಿಶೇಷವಾಗಿ ವಜ್ರವು ಒಬ್ಬ ಪತಿ/ಪತ್ನಿಗೋ ಇಲ್ಲವೇ ಒಬ್ಬ ನಿಶ್ಚಯವಾದ ವಧುವಿಗೋ ಒಂದು ಕೊಡುಗೆಯಾಗಿ ನೀಡಲ್ಪಡುವಾಗ ಅವರು ಹಾಗೆ ಭಾವಿಸುತ್ತಾರೆ. ವಜ್ರದ ಸೌಂದರ್ಯ ಹಾಗೂ ಪ್ರೇಮ ವ್ಯವಹಾರವು, ವಜ್ರವನ್ನು ಭೂಮಿಯಲ್ಲೇ ಅತ್ಯಂತ ಹೆಚ್ಚಾಗಿ ಮೆಚ್ಚಲ್ಪಟ್ಟ ಹರಳನ್ನಾಗಿ ಮಾಡಿದೆ.a
ಆ್ಯನ್ಟ್ವರ್ಪ್ಗೆ ಒಂದು ಭೇಟಿ
ಬೆಲ್ಜಿಯಮ್ನ ಆ್ಯನ್ಟ್ವರ್ಪ್ಗೆ—ಯಾವುದರ ಸಂಪತ್ತು ಹೆಚ್ಚಾಗಿ ವಜ್ರಗಳ ಮೇಲೆ ಆಧಾರಿತವಾಗಿದೆಯೋ ಆ ನಗರಕ್ಕೆ—ಭೇಟಿನೀಡಿದಾಗ ಈ ಅಪೂರ್ವ ಹರಳುಗಳಲ್ಲಿನ ನನ್ನ ಆಸಕ್ತಿಯು ಕೆರಳಿಸಲ್ಪಟ್ಟಿತು. ‘ವಜ್ರವೊಂದನ್ನು ಯಾವುದು ಅಷ್ಟೊಂದು ಆಕರ್ಷಕವನ್ನಾಗಿ ಮಾಡುತ್ತದೆ? ವಜ್ರವೊಂದನ್ನು ಮಾಡುವುದರ ಹಿಂದೆ ಯಾವ ರಹಸ್ಯವಿದೆ?’ ಎಂದು ನಾನು ಸೋಜಿಗಪಟ್ಟೆ.
ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ, ಯಾರ ಕುಟುಂಬವು ಮೂರು ತಲೆಮಾರುಗಳಿಂದ ವಜ್ರದ ವ್ಯಾಪಾರದಲ್ಲಿ ಕೆಲಸಮಾಡಿದೆಯೋ ಆ ಡರ್ಕ್ ಲೊಟ್ಸ್ ಅವರೊಂದಿಗೆ ನಾನು ಮಾತಾಡಿದೆ. “ಈ ನಗರವು ವಿಶ್ವದ ಮುಖ್ಯ ವಜ್ರ ಕೇಂದ್ರಗಳಲ್ಲಿ ಒಂದು ಕೇಂದ್ರವಾಗಿರುವುದರಿಂದ ನಾವು ಆ್ಯನ್ಟ್ವರ್ಪ್ ಅನ್ನು ವಜ್ರದ ಆಪ್ತ ಸ್ನೇಹಿತನೆಂದು ಕರೆಯುತ್ತೇವೆ. ಆದುದರಿಂದ ವಜ್ರವನ್ನು ಮಾಡುವವನ ಕುರಿತಾದ ರಹಸ್ಯಗಳನ್ನು ಕಂಡುಹಿಡಿಯಲಿಕ್ಕಾಗಿ ನೀವು ಒಂದು ಆದರ್ಶಪ್ರಾಯವಾದ ಸ್ಥಳಕ್ಕೇ ಬಂದಿದ್ದೀರಿ” ಎಂದು ಅವರು ವಿವರಿಸಿದರು.
ಮೊಟ್ಟಮೊದಲು, ಅವರು ಆಗ ತಾನೇ ಖರೀದಿಸಿದ್ದ ಒಂದು ಹಿಡಿ ಕಚ್ಚಾ ವಜ್ರಗಳನ್ನು ನನಗೆ ತೋರಿಸಿದರು. ಅವು 3,50,000 ಡಾಲರುಗಳಷ್ಟು ಬೆಲೆಯುಳ್ಳದ್ದಾಗಿದ್ದರೂ, ಪ್ರಥಮ ನೋಟದಲ್ಲಿ ಅವು ಅಷ್ಟೇನೂ ಮನತಟ್ಟುವಂತಹದ್ದಾಗಿರಲಿಲ್ಲ—ಬದಲಾಗಿ ಅವು ಒಂದು ಹಿಡಿ ಗಾಜಿನ ಚೂರುಗಳನ್ನು ಹೋಲಿದವು. ಆದರೆ ನಿಕಟ ನೋಟವೊಂದು ವಜ್ರವನ್ನು ಕತ್ತರಿಸುವವನು ಅನಾವರಣಗೊಳಿಸಸಾಧ್ಯವಿರುವ, ಸೌಂದರ್ಯವನ್ನು ತೋರಿಸುವ ಒಳಪ್ರಭೆಯನ್ನು ಹೊರಗೆಡಹಿತು. ಅವುಗಳ ಆಕರ್ಷಣೆಯನ್ನು ನಾನು ಅರ್ಥಮಾಡಿಕೊಳ್ಳಲಾರಂಭಿಸಿದೆ.
“ಯಾವಾಗಲಾದರೊಮ್ಮೆ, ಒಂದು ದೊಡ್ಡ ಕಚ್ಚಾ ವಜ್ರವನ್ನು ನೋಡುವಾಗ, ನನಗೆ ಒಂದು ರೀತಿಯಲ್ಲಿ ಮಂತ್ರಮುಗ್ಧಗೊಳಿಸಲ್ಪಟ್ಟಿರುವ ಭಾವನೆಯಾಗುತ್ತದೆ—ಬಹುಮಟ್ಟಿಗೆ ಭಾವನಾತ್ಮಕ ಒಲವಿನಂತೆ” ಎಂದು ಡರ್ಕ್ ನಿವೇದಿಸಿಕೊಂಡರು. “ಸಹಜಪ್ರವೃತ್ತಿಯಿಂದಲೇ, ನನಗೆ ಆ ಹರಳನ್ನು ಖರೀದಿಸಲು ಇಷ್ಟವಾಗುತ್ತದೆ. ಇದು ಅತ್ಯುತ್ಕೃಷ್ಟವಾದ ಮುತ್ತನ್ನು ಕಂಡುಕೊಂಡ—ಆ ಮುತ್ತು ಎಷ್ಟು ಪರಿಪೂರ್ಣವಾಗಿತ್ತೆಂದರೆ ಅದನ್ನು ಖರೀದಿಸುವ ಸಲುವಾಗಿ ಅವನು ತನ್ನಲ್ಲಿದ್ದ ಪ್ರತಿಯೊಂದನ್ನೂ ಮಾರಿಬಿಡಲು ಸಿದ್ಧನಿದ್ದ—ಒಬ್ಬ ಮನುಷ್ಯನ ಕುರಿತಾದ ಯೇಸುವಿನ ದೃಷ್ಟಾಂತವನ್ನು ನನಗೆ ಜ್ಞಾಪಿಸುತ್ತದೆ. ಅಷ್ಟು ದೂರಕ್ಕೆ ನಾನೆಂದೂ ಹೋಗಿಲ್ಲ” ಎಂದು ಅವರು ನಸುನಕ್ಕರು. “ಆದರೂ ಕೆಲವೊಂದು ಉತ್ಕೃಷ್ಟ ಗುಣಮಟ್ಟದ ಹರಳುಗಳು—ಅವುಗಳನ್ನು ಕೊಂಡು, ಮಾರುವುದರಲ್ಲಿ ನಮ್ಮ ಜೀವಿತವನ್ನು ವಿನಿಯೋಗಿಸುವ ನಮಗೂ—ವಿಶೇಷವಾದೊಂದು ಆಕರ್ಷಣೆಯನ್ನು ಹೊರಸೂಸುತ್ತದೆ ಎಂಬ ವಿಷಯವನ್ನು ನಾನು ಒಪ್ಪಲೇಬೇಕು. ಕಚ್ಚಾ ಹರಳಿನಿಂದ ಒಂದು ರತ್ನವನ್ನು ಮಾಡುವುದು ಎಷ್ಟೇ ಮನತಟ್ಟುವ ವಿಷಯವಾಗಿರಬಹುದಾದರೂ, ಅದಕ್ಕೆ ತನ್ನದೇ ಆದ ಗುಪ್ತ ಅಪಾಯಗಳಿರುತ್ತವೆ ಎಂಬದು ನಿಶ್ಚಯ.”
ಒಂದು ಕಚ್ಚಾ ವಜ್ರವನ್ನು ನಯಗೊಳಿಸುವುದು
ಅಮೂಲ್ಯವಾದೊಂದು ಹರಳನ್ನು ಒಬ್ಬ ಬೇಜವಾಬ್ದಾರಿ ವಜ್ರ ಕತ್ತರಿಸುವವನು ಭಗ್ನಗೊಳಿಸಸಾಧ್ಯವಿದೆ ಎಂಬುದನ್ನು ನಾನು ಕೇಳಿಸಿಕೊಂಡಿದ್ದೆ. ಅದು ಅನೇಕವೇಳೆ ಸಂಭವಿಸಿತೋ ಎಂದು ನಾನು ಸೋಜಿಗಪಟ್ಟೆ. “ಇದು ಅಷ್ಟು ವಿರಳವಾಗಿ ಸಂಭವಿಸುವ ವಿಷಯವಾಗಿರುವುದಿಲ್ಲ”ವೆಂಬ ಸಂಗತಿಯನ್ನು ಡರ್ಕ್ ಒಪ್ಪಿಕೊಂಡರು. “ಮತ್ತು ಇದು ಕೇವಲ ಹರಳು ಸೀಳಲ್ಪಡುತ್ತಿರುವಾಗ ಮಾತ್ರ ಸಂಭವಿಸುವುದಿಲ್ಲ. ವಜ್ರಕ್ಕೆ ಮೆರುಗುಕೊಡುವವನೂ ಕೆಲವೊಮ್ಮೆ ಒಂದು ಗ್ಲೆಟ್ಸ್ ಅಥವಾ ಆಂತರಿಕ ನ್ಯೂನತೆಯನ್ನು ಸೋಕಿಸಿ, ಹರಳನ್ನು ನಾಶಮಾಡಬಲ್ಲನು. ನಾವು ಯಾವಾಗಲೂ ಕಚ್ಚಾ ಹರಳನ್ನು ಪೋಲರೈಸ್ಡ್ ಬೆಳಕಿನ ಮುಖಾಂತರ ತುಂಬ ಜಾಗ್ರತೆಯಿಂದ ಪರೀಕ್ಷಿಸುತ್ತೇವೆ, ಇದು ಸಮಸ್ಯೆಯಿರುವ ಕ್ಷೇತ್ರಗಳನ್ನು ತೋರಿಸುತ್ತದಾದರೂ ವಿಷಾದನೀಯವಾಗಿ, ಯಾವ ಕಾರ್ಯವಿಧಾನವೂ ತಪ್ಪು ಅಭೇದ್ಯವಾಗಿರುವುದಿಲ್ಲ.
“ಭಗ್ನಗೊಳಿಸಲ್ಪಟ್ಟ ಒಂದು ಹರಳು ನಮ್ಮ ಭಯಂಕರ ಸ್ವಪ್ನವಾಗಿರುವದಾದರೂ ಅದೊಂದೇ ಕಷ್ಟಕರವಾದ ವಿಷಯವಾಗಿರುವುದಿಲ್ಲ. ವಜ್ರದ ಪಟ್ಟೆಗಳನ್ನು ಕತ್ತರಿಸಿ, ಮೆರುಗುನೀಡಿದ ಅನಂತರ ಕೆಲವೊಮ್ಮೆ ಹರಳಿನ ಬಣ್ಣವು ಕಪ್ಪಾಗಿಬಿಡುತ್ತದೆ ಮತ್ತು ಅದರ ಮೌಲ್ಯವು ಕಡಿಮೆಯಾಗುತ್ತದೆ. ಮತ್ತು ಅದನ್ನು ಒಂದು ಅತ್ಯುತ್ಕೃಷ್ಟ ಗುಣಮಟ್ಟದ ರತ್ನವನ್ನಾಗಿ ಮಾಡುವ ಸಲುವಾಗಿ ನಾವು ಅನೇಕವೇಳೆ ಕಚ್ಚಾ ಹರಳಿನ 60 ಪ್ರತಿಶತ ಅಥವಾ ಅದಕ್ಕಿಂತಲೂ ಹೆಚ್ಚನ್ನು ಕತ್ತರಿಸಬೇಕು ಎಂಬುದನ್ನು ನೀವು ನೆನಪಿನಲ್ಲಿಡತಕ್ಕದ್ದು.”
ವಜ್ರವೊಂದನ್ನು ಮಾಡುವುದರಲ್ಲಿ ಒಳಗೂಡಿರುವ ವಿಷಯಗಳೆಲ್ಲವನ್ನು ನಾನು ಗ್ರಹಿಸಿದಾಗ ಅದಕ್ಕೆ ತುಂಬ ಹಣವು ಪೋಲಾಗುತ್ತಿದೆ ಎಂದು ನನಗೆ ತೋರಿತು. ಆಗ ತಾನೇ ಕತ್ತರಿಸಿ, ಮೆರಗುನೀಡಲ್ಪಟ್ಟಿದ್ದ ಹೃದಯಾಕಾರದ ಒಂದು ಬೃಹತ್ ವಜ್ರವನ್ನು ನನಗೆ ಡರ್ಕ್ ತೋರಿಸಿದರು. “ಅದು ಹೇಗೆ ಮಿರುಗುತ್ತದೆ ಎಂಬುದನ್ನು ನೀವು ನೋಡಬಲ್ಲಿರೋ?” ಎಂದು ಅವರು ನನಗೆ ಕೇಳಿದರು. “ಹರಳಿನ ಒಳಗಿರುವ ಆ ‘ಹೊಳಪು’ ನಿಜವಾಗಿಯೂ ಬೆಳಕಿನ ಪ್ರತಿಫಲನೆಯಾಗಿದೆ.
“ಕರಕುಶಲಿಯು ಮಾಡಬೇಕಾದ ವಿಷಯವೇನೆಂದರೆ, ಹರಳಿನ ಒಳಗೆ ಬೆಳಕು ಮುಚ್ಚಿಡಲ್ಪಟ್ಟು, ಅನಂತರ ನೋಡುವವನ ಕಡೆಗೆ ಪುನಃ ಪ್ರತಿಫಲಿಸುವಂಥ ರೀತಿಯಲ್ಲಿ ಎಲ್ಲ ಪಟ್ಟೆಗಳನ್ನು ಕತ್ತರಿಸಬೇಕು. ಗೋಳಾಕಾರದಂಥ ಕೆಲವು ಸಾಂಪ್ರದಾಯಿಕ ಆಕಾರಗಳು ಇದನ್ನು ಹೆಚ್ಚು ಪರಿಣಾಮಕಾರಿಯಾದ ವಿಧದಲ್ಲಿ ಮಾಡುತ್ತವೆ. ಆದರೆ ಈ ಹೃದಯಾಕಾರದಂಥ ಅಲಂಕಾರಿಕ ಡಿಸೈನ್ಗಳೂ ಸಾಧ್ಯವಾದಷ್ಟು ಹೆಚ್ಚು ಬೆಳಕಿನ ಪ್ರಮಾಣವನ್ನು ಪ್ರತಿಫಲಿಸಲು ಗುರಿಯಿಡುತ್ತವೆ. ಅದು ವಜ್ರವನ್ನು ಮಾಡುವವನ ಅತ್ಯಾವಶ್ಯಕ ಕಲೆಯಾಗಿದೆ. ವಾಸ್ತವದಲ್ಲಿ, ಒಬ್ಬ ಸುಪ್ರಸಿದ್ಧ ವಜ್ರ ತಯಾರಕನು, ‘ವಿನ್ಯಾಸದ ಕಲೆಯಲ್ಲಿಯೇ ಮೋಡಿಯು ಅಡಗಿದೆ’ ಎಂಬ ವಿಷಯವನ್ನು ತನ್ನ ಸೂಕ್ತಿಯನ್ನಾಗಿ ಆರಿಸಿಕೊಂಡಿದ್ದಾನೆ.”
“ವಜ್ರವನ್ನು ಯಾವ ಆಕಾರದಲ್ಲಿ ಕತ್ತರಿಸಬೇಕೆಂಬುದನ್ನು ನೀವು ಹೇಗೆ ನಿರ್ಧರಿಸುತ್ತೀರಿ?” ಎಂದು ನಾನು ಡರ್ಕ್ ಅವರಿಗೆ ಕೇಳಿದೆ. “ನಾವು ಖರೀದಿಸುವ ಅಸಲು ಹರಳನ್ನು ನಾವು ಬಹು ಜಾಗ್ರತೆಯಿಂದ ಪರೀಕ್ಷಿಸುವುದರಿಂದ ಕೆಲಸವನ್ನು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದರು. “ಅಂದರೆ ನನ್ನ ಅರ್ಥ ತುಂಬ ಜಾಗ್ರತೆಯಿಂದ! ಅದು ಹೇಗೆ ಕತ್ತರಿಸಲ್ಪಡಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಮಾಡುವುದಕ್ಕೆ ಮುಂಚೆ ಒಂದು ತಿಂಗಳಿನ ವರೆಗೆ ನಾವು ಪರೀಕ್ಷಿಸಿದ ಒಂದು ದೊಡ್ಡ ಹರಳಿನ ಬಗ್ಗೆ ನನಗೆ ಜ್ಞಾಪಕವಿದೆ. ಕೆಲವೊಮ್ಮೆ ಇದು ಬಹು ಸುಲಭ ಏಕೆಂದರೆ ಕಚ್ಚಾ ಹರಳು ತಾನೇ ನಿರ್ದಿಷ್ಟವಾದೊಂದು ಆಕಾರದಲ್ಲಿ ಕತ್ತರಿಸಲ್ಪಡುವುದಕ್ಕೆ ಸರಿಹೊಂದಿಕೊಳ್ಳುತ್ತದೆ. ಪ್ರತಿಯೊಂದು ವಿದ್ಯಮಾನದಲ್ಲಿಯೂ, ಆ ನಿರ್ದಿಷ್ಟ ಹರಳಿಗೆ ಅತ್ಯುತ್ತಮ ಆಕಾರವನ್ನು ಕೊಡುವುದೇ ಗುರಿಯಾಗಿರುತ್ತದೆ. ನಾವು ತೀರ ಅತ್ಯಲ್ಪ ಪ್ರಮಾಣದ ಹರಳನ್ನು ಕಳೆದುಕೊಳ್ಳುತ್ತೇವೆ. ಆದರೆ ನಾವು ಕತ್ತರಿಸುವ ಪ್ರತಿಯೊಂದು ಪಟ್ಟೆಯು—ಮತ್ತು ಒಂದು ಪಕ್ಕಾ ವಜ್ರಕ್ಕೆ 50ಕ್ಕಿಂತ ಹೆಚ್ಚು ಪಟ್ಟೆಗಳಿರುತ್ತವೆ—ತೂಕದ ನಷ್ಟವನ್ನು ಅರ್ಥೈಸುತ್ತದೆ.”
ಬಳಿಕ ಡರ್ಕ್ ನನಗೆ ಒಂದು ನಿರ್ದಿಷ್ಟ ಹರಳನ್ನು ತುಂಬ ಜಾಗರೂಕತೆಯಿಂದ ನೋಡಲು ಹೇಳಿದರು. ನನ್ನ ಕೈಗೆ ರತ್ನವ್ಯಾಪಾರಿಯ ಬೂದುಕನ್ನಡಿ, ಮಸೂರವನ್ನು ಕೊಡುತ್ತಾ, “ಹರಳಿನ ಬಲಬದಿಯಲ್ಲಿ ಅಲ್ಲಿ ಮೇಲೆ ಕಾಣುವ ದೋಷವನ್ನು ನೀವು ನೋಡಬಲ್ಲಿರೋ?” ಎಂದು ಅವರು ಕೇಳಿದರು. ರತ್ನದ ಒಂದು ಮೂಲೆಯೊಳಗೆ, ಬಿರುಕುಬಿಟ್ಟ ಕನ್ನಡಿಯಲ್ಲಿ ಕಾಣಿಸುವಂತೆ, ನಾನು ಕೋಚುಕೋಚಾದ ಕೆಲವೊಂದು ಗೆರೆಗಳನ್ನು ನೋಡಿದೆ. “ಅಂಥ ರೀತಿಯ ನ್ಯೂನತೆಯು ವಜ್ರದ ಮೌಲ್ಯವನ್ನು ಮಹತ್ತರವಾಗಿ ಕಡಿಮೆಮಾಡುತ್ತದೆ. ಅದನ್ನು ನಾವು ಕತ್ತರಿಸಸಾಧ್ಯವಿದೆ ಎಂಬುದೇನೋ ನಿಜ ಆದರೆ, ಅದು ತುಂಬ ಪ್ರಮಾಣದ ಹರಳಿನ ನಷ್ಟವನ್ನು ಅರ್ಥೈಸಬಹುದು. ಆ ಒಡಕು ಬರೀ ಕಣ್ಣಿಗೆ ಕಾಣಿಸದೆ ಇರುವುದಾದರೆ, ನಾವು ಆಗಲೂ ಆ ಹರಳನ್ನು ಸ್ವಲ್ಪ ಕಡಿಮೆ ಬೆಲೆಗೆ ಮಾರಸಾಧ್ಯವಿದೆ.”
ಅಂಥ ಪುಟ್ಟ ವಜ್ರಗಳು ಏಕೆ ಅಷ್ಟೊಂದು ಬೆಲೆಯುಳ್ಳದ್ದಾಗಿವೆ ಎಂಬುದನ್ನು ತಿಳಿದುಕೊಳ್ಳಲು ನಾನು ಆಸಕ್ತನಾಗಿದ್ದೆ. ಸ್ಫುಟವಾಗಿ, ಅದರಲ್ಲಿ ಹಲವಾರು ಅಂಶಗಳು ಒಳಗೂಡಿವೆ.
“ಚರ್ವಿತ ಚರ್ವಣ ‘ವಜ್ರವು ಅನಂತಕಾಲ’—ಒಂದು ಜಾಹೀರಾತು ಗುರಿನುಡಿಯಾಗಿರುವುದಾದರೂ—ಸಾಮಾನ್ಯವಾಗಿ ನಿಜವಾಗಿದೆ” ಎಂದು ಡರ್ಕ್ ಹೇಳಿದರು. “ವಜ್ರಗಳು ನಿಷ್ಪ್ರಯೋಜಕವಾಗುವುದಿಲ್ಲ ಹಾಗೂ ಅವುಗಳ ಹೊಳಪು ಮಾಸುವುದಿಲ್ಲ. ಅವು ಮುಂಚೆ ಇದ್ದಷ್ಟು ಅಪೂರ್ವವಾಗಿಲ್ಲದಿದ್ದರೂ ಅವು ಅನುಪಮವೂ ಸುಂದರವೂ ಆದವುಗಳಾಗಿವೆ ಎಂಬುದರಲ್ಲಿ ಸಂದೇಹವೇ ಇಲ್ಲ! ಆದರೆ ಅವುಗಳ ಮೌಲ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ತ್ವದ ಒಂದು ಅಂಶವು ಪ್ರಾಯಶಃ ವಜ್ರಗಳಿಗಿರುವ ವಿಶ್ವದಾದ್ಯಂತ ಬೇಡಿಕೆಯೇ ಆಗಿದೆ. ಇದು ಹೆಚ್ಚಾಗಿ ಜಾಹೀರಾತು ಪಡಿಸುವಿಕೆಯ ಮೇಲೆ ಅವಲಂಬಿಸುತ್ತದೆ.
“ಮಹಿಳೆಯೊಬ್ಬಳು ವಜ್ರದುಂಗರವನ್ನೇ ಏಕೆ ಇಷ್ಟಪಡುತ್ತಾಳೋ?” ಎಂದು ಡರ್ಕ್ ಆಲೋಚನಾಪರರಾಗಿ ಕೇಳಿದರು. “ಪ್ರಾಯಶಃ ಅವಳು ವಜ್ರಗಳನ್ನು ಪ್ರೀತಿ ಹಾಗೂ ಪ್ರೇಮ ವ್ಯವಹಾರದೊಂದಿಗೆ ಬಾಂಧವ್ಯ ಕಲ್ಪಿಸುತ್ತಾಳೆ. ವಜ್ರವು ಒಂದು ವಿಶೇಷವಾದ ವಸ್ತು, ಚಿರಂತನವಾಗಿ ನಿಧಿಯಂತೆ ಕಾಪಿಡಲ್ಪಡುವ, ಆಶಾಪೂರ್ವಕವಾಗಿ ವಜ್ರದಷ್ಟು ಕಾಲ ಬಾಳುವ ಒಂದು ಪ್ರೇಮವನ್ನು ಅವಳಿಗೆ ಜ್ಞಾಪಿಸುವ ಒಂದು ವಿಷಯವಾಗಿದೆ. ಕೆಲವರು ಇದನ್ನು ಕರೆಯುವಂತೆ, ಈ ವಿಚಾರ ಅಥವಾ ರಹಸ್ಯಾರ್ಥವು ಕೌಶಲಭರಿತವಾಗಿ ಬೆಳೆಸಿಕೊಳ್ಳಲ್ಪಟ್ಟಿದೆ. ಈ ಸಂದೇಶವನ್ನು—ಲೋಕದಾದ್ಯಂತವಿರುವ ಜನರು ವಜ್ರಗಳನ್ನು ಖರೀದಿಸುತ್ತಾ ಇರುವಂತೆ ಮಾಡುವ ಸಂದೇಶವನ್ನು—ಜಾಹೀರಾತುಗೊಳಿಸಲು 1995ರಲ್ಲಿ ಸುಮಾರು 18,00,00,000 ಡಾಲರುಗಳನ್ನು ವ್ಯಯಮಾಡಲಾಯಿತು.”
ವಜ್ರವೊಂದರ ಮೌಲ್ಯ
“ಪರಿಷ್ಕರಿಸಿದ ರತ್ನದ ಮೌಲ್ಯವು ಅದರ ಗಾತ್ರದ ಮೇಲೆ ಅವಲಂಬಿಸುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂಬುದಾಗಿ ನಾನು ಹೇಳಿದೆ. “ಇದು ಹೇಳುವಷ್ಟು ಸುಲಭವಾಗಿರುವುದಿಲ್ಲ” ಎಂದು ಡರ್ಕ್ ಪ್ರತ್ಯುತ್ತರಿಸಿದರು. “ವಜ್ರದ ಮೌಲ್ಯವು ನಾಲ್ಕು ಅಂಶಗಳ ಮೇಲೆ ಅವಲಂಬಿಸುತ್ತದೆ ಎಂದು ಹೇಳಲು ವಜ್ರದ ವ್ಯಾಪಾರಿಗಳು ಒಲವುಳ್ಳವರಾಗಿರುತ್ತಾರೆ: ಕತ್ತರಿಸುವಿಕೆ, ಕ್ಯಾರಟ್ಟು, ಬಣ್ಣ, ಮತ್ತು ಶುಭ್ರತೆ. ಹರಳಿನ ಸೌಂದರ್ಯದ—ಹೀಗೆ ಅದರ ಮೌಲ್ಯದ—ಮೇಲೆ ಪ್ರತಿಯೊಂದಕ್ಕೂ ಅದರದ್ದೇ ಆದ ಪ್ರಭಾವವಿದೆ.
“ನಾವು ಮೊದಲಾಗಿ ಕತ್ತರಿಸುವುದರ ಬಗ್ಗೆ ಚರ್ಚಿಸೋಣ. ಒಂದು ಒಳ್ಳೆಯ ಕತ್ತರಿಸುವಿಕೆಯು, ಒಂದು ಕಲಾಕೃತಿ, ಸೂಕ್ಷ್ಮಪ್ರತಿರೂಪದಲ್ಲಿನ ಒಂದು ಕೆತ್ತನೆಯ ಕೆಲಸ ಎಂದು ನೀವು ಹೇಳಬಹುದು. ನೀವು ಮೆಚ್ಚುತ್ತಿದ್ದ ಆ ಹೃದಯಾಕಾರದ ವಜ್ರದ ಕಡೆಗೆ ಒಂದು ನಿಕಟ ನೋಟವನ್ನು ಹಾಯಿಸಿರಿ. ಆ ಆಕಾರವನ್ನು ತಯಾರಿಸುವುದು ಬಹಳ ಸುಲಭವಲ್ಲ, ಮತ್ತು ಇತರ ಆಕಾರಗಳಿಗೆ ನಷ್ಟವಾಗುವ ಅಸಲು ಹರಳುಗಳಿಗಿಂತ ಹೆಚ್ಚು ನಷ್ಟವು ಇದಕ್ಕೆ ಆಗುತ್ತದೆ. ರತ್ನದ ಸೌಂದರ್ಯವನ್ನು ಹೆಚ್ಚಿಸಲಿಕ್ಕಾಗಿ ಹೇಗೆ ಎಲ್ಲ ಪಟ್ಟೆಗಳು ಸಾಮಂಜಸ್ಯವಾಗಿ ಇಡಲ್ಪಟ್ಟಿವೆ ಎಂಬುದನ್ನು ಗಮನಿಸಿರಿ. ಈ ನಿರ್ದಿಷ್ಟವಾದ ವಜ್ರಕ್ಕೆ ಉತ್ತಮವಾದ ಒಂದು ಕತ್ತರಿಸುವಿಕೆಯಿದೆ ಎಂದು ನಾವು ಹೇಳಬಹುದು.
“ನೀವು ಮೊದಲು ಅದರ ಗಾತ್ರದಿಂದ ಪ್ರಭಾವಿಸಲ್ಪಟ್ಟಿರಿ ಹಾಗೂ ಅದು ಒಂದು ದೊಡ್ಡ 8-ಕ್ಯಾರಟ್ಟು ಹರಳಾಗಿರುವುದರಿಂದ ಪ್ರಭಾವಿಸಲ್ಪಟ್ಟದ್ದು ಗ್ರಾಹ್ಯವೇ. ಅನುಗತವಾಗಿಯೇ, ಒಂದು ಕ್ಯಾರಟ್ಟು 0.2 ಗ್ರ್ಯಾಮ್ಗೆ ಸಮವಾಗಿರುವುದರಿಂದ ನಾವು ಕೇವಲ ಹರಳನ್ನು ತೂಕಮಾಡುವ ಮೂಲಕ ಕ್ಯಾರಟ್ಟಿನ ಮೌಲ್ಯವನ್ನು ನಿರ್ಧರಿಸುತ್ತೇವೆ. ಸಾಮಾನ್ಯವಾಗಿ ಹೇಳುವುದಾದರೆ, ಹೆಚ್ಚು ಕ್ಯಾರಟ್ಟುಗಳು ಎಂದರೆ ಹೆಚ್ಚು ಮೌಲ್ಯವುಳ್ಳದ್ದು ಎಂಬುದನ್ನು ಅರ್ಥೈಸುವುದಾದರೂ ಅದರ ಮೌಲ್ಯವು ಬಣ್ಣ ಹಾಗೂ ಶುಭ್ರತೆಯಿಂದಲೂ ಪ್ರಭಾವಿಸಲ್ಪಡುವುದು.
“ಈ ಹಿಂದೆ ಉಲ್ಲೇಖಿಸಲ್ಪಟ್ಟ ಒಂದು ಹಿಡಿ ಕಚ್ಚಾ ಹರಳುಗಳ ವಿಷಯವಾಗಿ ನೀವು ಗಮನಿಸಿರುವಂತೆ, ವಜ್ರಗಳು ಎಲ್ಲ ರೀತಿಯ ಆಕಾರ ಹಾಗೂ ಬಣ್ಣಗಳಲ್ಲಿ ಬರುತ್ತವೆ. ನಾವು ಮಾಡುವ ಮೊದಲ ವಿಷಯವು, ಅವುಗಳನ್ನು ಬಣ್ಣಕ್ಕನುಸಾರವಾಗಿ ಆಯ್ದುತೆಗೆಯುವುದೇ. ಏಕೆಂದರೆ ಬಿಳಿಯ ಬಣ್ಣದ ಹರಳುಗಳು ಹೆಚ್ಚು ಮೌಲ್ಯವುಳ್ಳದ್ದಾಗಿರುತ್ತವೆ. ಆದರೂ, ನಾವು ಯಾವುದನ್ನು ಅಲಂಕಾರಿಗಳ ಬಣ್ಣಗಳೆಂದು ಕರೆಯುತ್ತೇವೋ ಆ ಎಳೆಗೆಂಪು, ನೀಲಿ ಅಥವಾ ಕೆಂಪು ಬಣ್ಣಗಳುಳ್ಳ ಕೆಲವೊಂದು ಹರಳುಗಳಿವೆ; ಮತ್ತು ಇವು ತೀರ ವಿರಳವಾಗಿರುವುದರಿಂದ ಬಿಳಿಯ ಬಣ್ಣದ ಹರಳುಗಳಿಗಿಂತಲೂ ಹೆಚ್ಚು ಬೆಲೆಯನ್ನು ತರುತ್ತವೆ.
“ಕಡೆಯದಾಗಿ, ನಾವು ಹರಳಿಗೆ ಅದರ ಶುಭ್ರತೆಗನುಸಾರ ದರ್ಜೆನೀಡಬೇಕು. ಹರಳು ಒಡಕುರಹಿತವಾಗಿ ವರ್ಗೀಕರಿಸಲ್ಪಟ್ಟಲ್ಲಿ, ಅಂದರೆ ನೀವು ಹರಳಿನೊಳಕ್ಕೆ—ಮಸೂರದಿಂದಲೂ—ನೋಡುವಾಗ ನೀವು ಯಾವುದೇ ನ್ಯೂನತೆಗಳನ್ನು ನೋಡಲಾರಿರಿ. ಹೀಗೆ ವಜ್ರದ ಕತ್ತರಿಸುವಿಕೆ, ಶುಭ್ರತೆ, ಹಾಗೂ ಬಣ್ಣವು, ಕ್ಯಾರಟ್ಟುಗಳಲ್ಲಿನ ಅದರ ತೂಕದಷ್ಟೇ ಮಹತ್ತ್ವದ್ದಾಗಿರಸಾಧ್ಯವಿದೆ. ನಿಮಗೆ ಉದಾಹರಣೆಯೊಂದನ್ನು ನೀಡಲು, 1995ರಲ್ಲಿ ಯಾವುದನ್ನು ಮೆರುಗುನೀಡಲ್ಪಟ್ಟದ್ದರಲ್ಲಿಯೇ ಅತ್ಯಂತ ದೊಡ್ಡ ವಜ್ರ (546.67 ಕ್ಯಾರಟ್ಟುಗಳು) ಎಂದು ಹೇಳಬಹುದೋ ಅದನ್ನು ಪ್ರದರ್ಶನಕ್ಕಿಡಲಾಗಿತ್ತು. ಆದರೆ ಅದರ ಗಾತ್ರ—ಹತ್ತಿರ ಹತ್ತಿರ ಗಾಲ್ಫ್ ಚೆಂಡಿನಷ್ಟು—ಇದ್ದರೂ ಅದರ ಕೀಳ್ಮಟ್ಟದ ಶುಭ್ರತೆ ಹಾಗೂ ಅದರ ಹಳದಿ-ಕಂದು ಬಣ್ಣದ ಕಾರಣ, ಇದು ವಿಶ್ವದ ಅತ್ಯಂತ ಬೆಲೆಬಾಳುವ ವಜ್ರವಾಗಿರುವುದಿಲ್ಲ.”
ಆ್ಯನ್ಟ್ವರ್ಪ್ ಅನ್ನು ಬಿಟ್ಟುಬರುವ ಮುಂಚೆ, 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ವಜ್ರದ ಕಸಬಿನಲ್ಲಿ ಒಳಗೂಡಿರುವ ಹ್ಯಾನ್ಸ್ ವಿನ್ಸ್ ಅವರೊಂದಿಗೆ ನಾನು ಮಾತಾಡಿದೆ. ನನಗೆ ಕೊನೆಯ ಒಂದು ಪ್ರಶ್ನೆಯನ್ನು ಕೇಳಲಿಕ್ಕಿತು, ವಜ್ರವೊಂದನ್ನು ಅಷ್ಟೊಂದು ವಿಶೇಷವಾಗಿ ಮಾಡುವಂಥದ್ದು ಯಾವುದು?
“ನಾನು ಪುಟ್ಟ ವಜ್ರಗಳನ್ನು ಅಷ್ಟೊಂದು ಕುತೂಹಲ ಕೆರಳಿಸುವಂತಹದ್ದಾಗಿ ಕಂಡುಕೊಳ್ಳುವುದಿಲ್ಲ—ಅವುಗಳಿಗೆ ಯಂತ್ರದಿಂದಲೂ ರೂಪುಕೊಡಸಾಧ್ಯವಿದೆ” ಎಂದು ಅವರು ಉತ್ತರಿಸಿದರು. “ಆದರೆ ದೊಡ್ಡ ವಜ್ರಗಳು ನನ್ನನ್ನು ಮೋಹಗೊಳಿಸುತ್ತವೆ. ಪ್ರತಿಯೊಂದು ಹರಳು ಭಿನ್ನವಾಗಿದೆ—ಕೋಟಿಗಟ್ಟಲೆ ವರ್ಷಗಳ ಜ್ವಾಲಾಮುಖಿಯಿಂದಾದ ಒತ್ತಡದ ಮೂಲಕ ಇಂಗಾಲದಿಂದ ಹೊರಡಿಸಲ್ಪಟ್ಟ ಒಂದು ಅಪೂರ್ವ ಸೃಷ್ಟಿ. ನೀವು ಹರಳಿನ ಬಗ್ಗೆ ಅಧ್ಯಯನಮಾಡುವಾಗ, ಒಂದು ರೀತಿಯಲ್ಲಿ ಮರದ ಕಾಂಡದಲ್ಲಿನ ಗೆರೆಗಳಂತೆ, ನೀವು ವಾಸ್ತವವಾಗಿ ಬೆಳೆವಣಿಗೆಯ ಗೆರೆಗಳನ್ನು ನೋಡಬಲ್ಲಿರಿ. ಅನುಭವಿ ವ್ಯಾಪಾರಸ್ಥನೊಬ್ಬನು ಅದು ಯಾವ ಗಣಿಯಿಂದ ಬಂತು ಎಂಬುದನ್ನೂ ನಿಮಗೆ ಹೇಳಬಲ್ಲನು.
“ಒಬ್ಬ ವಜ್ರದ ತಯಾರಕನು, ಶಿಲ್ಪಿಯೊಬ್ಬನು ಅಮೃತಶಿಲೆಯ ಸೌಧವನ್ನು ಪರೀಕ್ಷಿಸುವಂತೆ, ಅಂಥ ಒಂದು ಹರಳನ್ನು ಪರೀಕ್ಷಿಸುತ್ತಾನೆ. ಅವನು ಮೊದಲೇ ತನ್ನ ಮನೋನೇತ್ರದಲ್ಲಿ ತಾನೇನನ್ನು ಸೃಷ್ಟಿಸಸಾಧ್ಯವಿದೆ ಎಂಬುದನ್ನು ನೋಡುತ್ತಾನೆ. ಅವನು ತನ್ನ ಕಲ್ಪನೆಯಲ್ಲಿ, ವಜ್ರವನ್ನು ಕತ್ತರಿಸಿ, ಮೆರುಗುನೀಡುತ್ತಿದ್ದಾನೆ ಮತ್ತು ಒಂದು ಅತ್ಯುತ್ಕೃಷ್ಟವಾದ ರತ್ನವು ಗೋಚರವಾಗುತ್ತಿದೆ. ವಜ್ರವೊಂದು ಉಂಗುರ ಅಥವಾ ಒಂದು ನೆಕ್ಲೆಸಿನಲ್ಲಿ ತನ್ನ ಅಂತಿಮ ಸ್ಥಾನವನ್ನು ಕಂಡುಕೊಳ್ಳುವಾಗ, ಅದನ್ನು ತಮ್ಮದಾಗಿಸಿಕೊಳ್ಳುವ ವ್ಯಕ್ತಿಗಳಿಗೂ ಅದೇ ರೀತಿಯ ಆಹ್ಲಾದತೆಯನ್ನು ನೀಡುವುದು ಎಂಬುದನ್ನು ನಾನು ಯೋಚಿಸಲು ಇಷ್ಟಪಡುತ್ತೇನೆ.”
ಪ್ರತಿಯೊಂದು ವಿಷಯವು ಪರಿಗಣಿಸಲ್ಪಟ್ಟ ಅನಂತರ ದೊರೆಯುವ ಆ ಆಹ್ಲಾದತೆಯು, ಒಂದು ವಜ್ರವನ್ನು ಮಾಡುವುದನ್ನು ಸಾರ್ಥಕಗೊಳಿಸುತ್ತದೆ.
[ಪಾದಟಿಪ್ಪಣಿ]
a ವಜ್ರಗಳ ಅತ್ಯುಚ್ಚ ಬೆಲೆಗೆ ಒಂದು ಪ್ರಧಾನ ಕಾರಣವು, ಏಕಸ್ವಾಮ್ಯವನ್ನು ಪಡೆದಿರುವ ಕೇಂದ್ರೀಯ ವ್ಯಾಪಾರ ಸಂಘಟನೆಯ ಹತೋಟಿಯೇ ಆಗಿದೆ.
[ಪುಟ 34 ರಲ್ಲಿರುವ ಚಿತ್ರಗಳು]
8 ಕ್ಯಾರಟ್ಟುಗಳ ಹೃದಯಾಕಾರದ ವಜ್ರ (ತೂಕಮಾಡಲ್ಪಡಬೇಕಾಗಿರದ ಹರಳುಗಳು)
ಅಂಡಾಕಾರ
“ಕಾರ್ಡಿನಲ್ನ ಟೊಪ್ಪಿ”ಯಾಕಾರ
ಕತ್ತರಿಸಲ್ಪಡದ ಹರಳುಗಳ ಕ್ಯಾರಟ್ ತೂಕವನ್ನು ನಿರ್ಧರಿಸುವುದು
ಬಣ್ಣಕ್ಕನುಸಾರವಾಗಿ ಕಚ್ಚಾ ವಜ್ರಗಳನ್ನು ವರ್ಗೀಕರಿಸುವುದು
ಹೆಚ್ಚು ಮೆರುಗುಗೊಳಿಸುವಿಕೆಯು ಅಗತ್ಯವೋ ಎಂಬುದನ್ನು ನಿರ್ಧರಿಸಲಿಕ್ಕಾಗಿ ಪಟ್ಟೆಗಳನ್ನು ಪರೀಕ್ಷಿಸುವುದು