ನೀವು ಆತ್ಮಿಕ ಪ್ರಗತಿಯನ್ನು ಮಾಡಬಲ್ಲಿರಿ
ನಿಜ ಮೌಲ್ಯವನ್ನು ಗುರುತಿಸುವುದು ಕಷ್ಟಕರವಾಗಿರಬಲ್ಲದು. ವಜ್ರಗಳ ವಿಷಯದಲ್ಲಿ ಇದು ಸತ್ಯವಾಗಿದೆ. ಪಾಲಿಶ್ ಮಾಡಿದ ವಜ್ರವು ಥಳಥಳಿಸುತ್ತದಾದರೂ, ಪಾಲಿಶ್ ಮಾಡದ ವಜ್ರವು ಕೇವಲ ಮಂದವಾಗಿ ಮಿನುಗುತ್ತದೆ. ಆದರೂ, ಪಾಲಿಶ್ ಮಾಡದ ವಜ್ರದ ಅಡಿಯಲ್ಲಿ, ಒಂದು ಸುಂದರವಾದ ರತ್ನದ ಸುಸ್ಪಷ್ಟವಾದ ನಿರೀಕ್ಷೆಯು ಅಡಗಿರುತ್ತದೆ.
ಕ್ರೈಸ್ತರು ಅನೇಕ ವಿಧಗಳಲ್ಲಿ ಪಾಲಿಶ್ ಮಾಡದ ವಜ್ರಗಳಂತಿದ್ದಾರೆ. ನಾವು ಪರಿಪೂರ್ಣತೆಯಿಂದ ಬಹಳ ದೂರವಿರುವುದಾದರೂ, ಯೆಹೋವನು ಅಮೂಲ್ಯವೆಂದೆಣಿಸುವ ಮೂಲಭೂತ ಯೋಗ್ಯತೆಯು ನಮ್ಮಲ್ಲಿದೆ. ವಜ್ರಗಳಂತೆ, ನಮಗೆಲ್ಲರಿಗೂ ನಮ್ಮದೇ ಆದ ವಿಭಿನ್ನ ಗುಣಗಳಿವೆ. ಮತ್ತು ಹೆಚ್ಚಿನ ಆತ್ಮಿಕ ಪ್ರಗತಿಯನ್ನು ಮಾಡುವುದು ನಮ್ಮ ಹೃತ್ಪೂರ್ವಕ ಬಯಕೆಯಾಗಿರುವಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಹಾಗೆ ಮಾಡಬಲ್ಲೆವು. ನಮ್ಮ ವ್ಯಕ್ತಿತ್ವಗಳನ್ನು ಸಂಸ್ಕರಿಸಸಾಧ್ಯವಿದೆ, ಇದರಿಂದಾಗಿ ಯೆಹೋವನಿಗೆ ಮಹಿಮೆ ತರುವಂತಹ ರೀತಿಯಲ್ಲಿ ಅವು ಹೆಚ್ಚು ಉಜ್ವಲವಾಗಿ ಹೊಳೆಯುತ್ತವೆ.—1 ಕೊರಿಂಥ 10:31.
ವಜ್ರವೊಂದನ್ನು ಕತ್ತರಿಸಿ ಅದನ್ನು ಪಾಲಿಶ್ ಮಾಡಿದ ಮೇಲೆ, ಪ್ರತಿಫಲಿಸುವ ಅದರ ಗುಣಗಳನ್ನು ವರ್ಧಿಸುವ ಒಂದು ಚೌಕಟ್ಟಿನಲ್ಲಿ ಇರಿಸಲಾಗುತ್ತದೆ. ತದ್ರೀತಿಯಲ್ಲಿ, ನಾವು ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ, ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟ ನೂತನಸ್ವಭಾವವನ್ನು ಧರಿಸಿ’ಕೊಳ್ಳುವುದಾದರೆ, ಯೆಹೋವನು ನಮ್ಮನ್ನು ಭಿನ್ನವಾದ ಸನ್ನಿವೇಶಗಳಲ್ಲಿ ಇಲ್ಲವೆ ನೇಮಕಗಳಲ್ಲಿ ಉಪಯೋಗಿಸಬಲ್ಲನು.—ಎಫೆಸ 4:20-24.
ತನ್ನ ಸ್ವಾಭಾವಿಕ ಸ್ಥಿತಿಯಲ್ಲಿರುವ ವಜ್ರವು ಒಂದು ರತ್ನದಂತೆ ಥಳಥಳಿಸುವುದು ವಿರಳವಾಗಿರುವಂತೆಯೇ, ಅಂತಹ ಆತ್ಮಿಕ ಪ್ರಗತಿಯು ಸ್ವಾಭಾವಿಕವಾಗಿ ಬಾರದೆ ಇರಬಹುದು. ದೀರ್ಘ ಸಮಯದಿಂದ ನಮ್ಮಲ್ಲಿರುವಂತಹ ಯಾವುದೊ ಬಲಹೀನತೆಯನ್ನು ದೂರಮಾಡುವ, ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದರ ಕಡೆಗೆ ನಮ್ಮ ಮನೋಭಾವವನ್ನು ಅಳವಡಿಸಿಕೊಳ್ಳುವ, ಇಲ್ಲವೆ ಏಕರೀತಿಯ ಆತ್ಮಿಕ ದಿನಚರಿಯಿಂದ ಹೊರಬರಲು ಸ್ವತಃ ಪ್ರಯಾಸಪಡುವ ಅಗತ್ಯ ನಮಗಿರಬಹುದು. ಆದರೆ ನಾವು ನಿಜವಾಗಿಯೂ ಬಯಸುವಲ್ಲಿ ಪ್ರಗತಿಯನ್ನು ಮಾಡಬಲ್ಲೆವು, ಏಕೆಂದರೆ ಯೆಹೋವ ದೇವರು ನಮಗೆ “ಬಲಾಧಿಕ್ಯ”ವನ್ನು ಕೊಡಬಲ್ಲನು.—2 ಕೊರಿಂಥ 4:7; ಫಿಲಿಪ್ಪಿ 4:13.
ಯೆಹೋವನು ತನ್ನ ಸೇವಕರನ್ನು ಬಲಪಡಿಸುತ್ತಾನೆ
ವಜ್ರಗಳ ಕೆತ್ತನೆಯು, ನಿಖರವಾದ ಜ್ಞಾನದಿಂದ ಬರುವ ಆತ್ಮವಿಶ್ವಾಸವನ್ನು ಅಗತ್ಯಪಡಿಸುತ್ತದೆ, ಏಕೆಂದರೆ ಪಾಲಿಶ್ ಮಾಡಲ್ಪಟ್ಟಿರದ ವಜ್ರದಿಂದ ಒಂದು ಭಾಗವನ್ನು ಒಮ್ಮೆ ಕತ್ತರಿಸಿಹಾಕಿದರೆ, ಅದನ್ನು ಪುನಃ ಪಡೆಯಸಾಧ್ಯವಿಲ್ಲ. ಬೇಕಾದ ಆಕಾರವನ್ನು ಪಡೆದುಕೊಳ್ಳಲು, ಕೆಲವೊಮ್ಮೆ 50 ಪ್ರತಿಶತದಷ್ಟು ಅಪರಿಷ್ಕೃತ ಕಲ್ಲನ್ನು—ದುಬಾರಿ ಸಾಮಗ್ರಿಯನ್ನು—ಕತ್ತರಿಸಿಹಾಕಬೇಕಾಗುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮತ್ತು ಆತ್ಮಿಕವಾಗಿ ಪ್ರಗತಿಮಾಡಲು, ನಿಷ್ಕೃಷ್ಟ ಜ್ಞಾನದಿಂದ ಬರುವ ವಿಶ್ವಾಸದ ಅಗತ್ಯ ನಮಗೂ ಇದೆ. ವಿಶೇಷವಾಗಿ, ಯೆಹೋವನು ನಮ್ಮನ್ನು ಶಕ್ತಗೊಳಿಸುವನೆಂಬ ಭರವಸೆ ನಮಗಿರಬೇಕಾಗಿದೆ.
ಆದರೆ, ನಾವು ಅಸಮರ್ಥರೆಂಬ ಭಾವನೆ ನಮಗಾಗಬಹುದು, ಇಲ್ಲವೆ ಹೆಚ್ಚನ್ನು ಮಾಡಲು ಅಶಕ್ತರೆಂದು ನಾವು ಯೋಚಿಸಬಹುದು. ಗತಕಾಲದಲ್ಲಿ ದೇವರ ನಂಬಿಗಸ್ತ ಸೇವಕರು ಕೆಲವೊಮ್ಮೆ ಹಾಗೆ ಭಾವಿಸಿದರು. (ವಿಮೋಚನಕಾಂಡ 3:11, 12; 1 ಅರಸು 19:1-4) “ಜನಾಂಗಗಳಿಗೆ ಪ್ರವಾದಿ”ಯಾಗಿ ದೇವರಿಂದ ನೇಮಿಸಲ್ಪಟ್ಟಾಗ, ಯೆರೆಮೀಯನು ಉದ್ಗಾರವೆತ್ತಿದ್ದು: “ನಾನು ಮಾತು ಬಲ್ಲವನಲ್ಲ, ಬಾಲಕನು.” (ಯೆರೆಮೀಯ 1:5, 6) ಯೆರೆಮೀಯನು ತನ್ನ ಮಿತಭಾಷಿತ್ವದ ಎದುರಿನಲ್ಲೂ, ದ್ವೇಷಬದ್ಧ ಜನಾಂಗಕ್ಕೆ ಮುಚ್ಚುಮರೆಯಿಲ್ಲದೆ ಸಂದೇಶಗಳನ್ನು ನೀಡಿದ ಒಬ್ಬ ಧೈರ್ಯವಂತ ಪ್ರವಾದಿಯಾದನು. ಇದು ಹೇಗೆ ಸಾಧ್ಯವಾಯಿತು? ಅವನು ಯೆಹೋವನ ಮೇಲೆ ಆತುಕೊಳ್ಳಲು ಕಲಿತುಕೊಂಡನು. ಯೆರೆಮೀಯನು ತದನಂತರ ಬರೆದುದು: “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು.”—ಯೆರೆಮೀಯ 17:7; 20:11.
ತದ್ರೀತಿಯಲ್ಲಿ ಇಂದು ಯೆಹೋವನು, ಯಾರು ತನ್ನಲ್ಲಿ ಭರವಸವಿಡುತ್ತಾರೊ ಅವರನ್ನು ಬಲಪಡಿಸುತ್ತಾನೆ. ಆತ್ಮಿಕ ಪ್ರಗತಿಯನ್ನು ಮಾಡುವುದರಲ್ಲಿ ನಿಧಾನಿಯಾಗಿದ್ದ ನಾಲ್ಕು ಮಕ್ಕಳ ತಂದೆಯಾದ ಎಡ್ವರ್ಡ್,a ಇದನ್ನು ಸತ್ಯವೆಂದು ಕಂಡುಕೊಂಡನು. ಅವನು ವಿವರಿಸುವುದು: “ನಾನು ಒಂಬತ್ತು ವರ್ಷಗಳಿಂದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ, ಆದರೆ ಆತ್ಮಿಕವಾಗಿ ಯಾವ ಪ್ರಗತಿಯನ್ನೂ ನಾನು ಮಾಡಿರುವಂತೆ ತೋರುವುದಿಲ್ಲ. ಕಡಿಮೆ ಪ್ರಚೋದನೆ ಹಾಗೂ ವಿಶ್ವಾಸದ ಕೊರತೆಯೇ ನನ್ನ ಸಮಸ್ಯೆಯಾಗಿತ್ತು. ಸ್ಪೆಯ್ನ್ಗೆ ಸ್ಥಳಾಂತರಿಸಿದ ತರುವಾಯ, ಕೇವಲ ಒಬ್ಬ ಹಿರಿಯ ಹಾಗೂ ಒಬ್ಬ ಶುಶ್ರೂಷಾ ಸೇವಕನಿದ್ದ ಒಂದು ಚಿಕ್ಕ ಸಭೆಗೆ ನಾನು ಹೋಗತೊಡಗಿದೆ. ಅಗತ್ಯವಿದ್ದ ಕಾರಣ, ಅನೇಕ ನೇಮಕಗಳನ್ನು ನಾನು ನಿರ್ವಹಿಸುವಂತೆ ಹಿರಿಯನು ನನ್ನನ್ನು ಕೇಳಿಕೊಂಡನು. ನನ್ನ ಪ್ರಥಮ ಭಾಷಣಗಳನ್ನೂ ಕೂಟದ ಭಾಗಗಳನ್ನೂ ಕೊಡುವಾಗ ನಾನು ನಡುಗಿದೆ. ಆದರೂ, ನಾನು ಯೆಹೋವನ ಮೇಲೆ ಆತುಕೊಳ್ಳಲು ಕಲಿತೆ. ಆ ಹಿರಿಯನು ನನ್ನನ್ನು ಸದಾ ಪ್ರಶಂಸಿಸಿ, ಸುಧಾರಣೆಗಾಗಿ ಜಾಣ್ಮೆಯ ಸೂಚನೆಗಳನ್ನು ನೀಡಿದನು.
“ಅದೇ ಸಮಯದಲ್ಲಿ, ನಾನು ನನ್ನ ಕ್ಷೇತ್ರ ಸೇವಾ ಚಟುವಟಿಕೆಯನ್ನು ಹೆಚ್ಚಿಸಿ, ಕುಟುಂಬದಲ್ಲಿ ಉತ್ತಮ ಆತ್ಮಿಕ ನಾಯಕತ್ವವನ್ನು ವಹಿಸಿದೆ. ಫಲಸ್ವರೂಪವಾಗಿ, ಕುಟುಂಬದಲ್ಲಿರುವ ಎಲ್ಲರಿಗೆ ಸತ್ಯವು ಹೆಚ್ಚಿನ ಅರ್ಥವುಳ್ಳದ್ದಾಗಿತ್ತು, ಮತ್ತು ನನಗೆ ಹೆಚ್ಚಿನ ಸಂತೃಪ್ತಿಯಾಯಿತು. ನಾನೀಗ ಒಬ್ಬ ಶುಶ್ರೂಷಾ ಸೇವಕನಾಗಿದ್ದೇನೆ, ಮತ್ತು ಒಬ್ಬ ಕ್ರೈಸ್ತ ಮೇಲ್ವಿಚಾರಕನ ಗುಣಗಳನ್ನು ವಿಕಸಿಸಿಕೊಳ್ಳಲು ಕಷ್ಟಪಟ್ಟು ಕೆಲಸಮಾಡುತ್ತಿದ್ದೇನೆ.”
‘ಪೂರ್ವಸ್ವಭಾವವನ್ನು ಕಳಚಿಹಾಕಿರಿ’
ಎಡ್ವರ್ಡ್ ಗ್ರಹಿಸಿದಂತೆ, ಆತ್ಮಿಕ ಪ್ರಗತಿಯು ಯೆಹೋವನಲ್ಲಿನ ಭರವಸೆಯನ್ನು ಅಗತ್ಯಪಡಿಸುತ್ತದೆ. ಕ್ರಿಸ್ತಸದೃಶವಾದ “ನೂತನಸ್ವಭಾವವನ್ನು” ವಿಕಸಿಸಿಕೊಳ್ಳುವುದು ಸಹ ಅತ್ಯಾವಶ್ಯಕವಾಗಿದೆ. ಇದನ್ನು ಹೇಗೆ ಮಾಡಸಾಧ್ಯವಿದೆ? ಮೊದಲನೆಯ ಹೆಜ್ಜೆಯು, ಪೂರ್ವಸ್ವಭಾವದ ಭಾಗವಾಗಿರುವ ಆ ಗುಣಗಳನ್ನು “ಕಳಚಿಹಾಕುವುದೇ” ಆಗಿದೆ. (ಕೊಲೊಸ್ಸೆ 3:9, 10, NW) ಪಾಲಿಶ್ ಮಾಡದ ವಜ್ರವನ್ನು ಥಳಥಳಿಸುವ ರತ್ನವಾಗಿ ಮಾಡಲು ಅದರಿಂದ ಅಪೂರ್ಣತೆಗಳನ್ನು—ಬೇರೆ ಖನಿಜಗಳನ್ನು—ತೆಗೆದುಹಾಕಬೇಕಾಗಿರುವಂತೆಯೇ, ನಮ್ಮ ನೂತನ ಸ್ವಭಾವವು ಎದ್ದುಕಾಣಲಿಕ್ಕಾಗಿ, ‘ಲೋಕಕ್ಕೆ ಸಂಬಂಧಪಟ್ಟ’ ಮನೋಭಾವಗಳನ್ನು ತ್ಯಜಿಸಬೇಕಾಗಿದೆ.—ಗಲಾತ್ಯ 4:3.
ಅಂತಹ ಒಂದು ಮನೋಭಾವವು, ನಮ್ಮಿಂದ ಅತ್ಯಧಿಕವಾದದ್ದು ಕೇಳಿಕೊಳ್ಳಲ್ಪಡುವುದೆಂಬ ಭಯದಿಂದ ಜವಾಬ್ದಾರಿಯನ್ನು ಸ್ವೀಕರಿಸುವ ಇಚ್ಛೆಯಿಲ್ಲದಿರುವುದೇ ಆಗಿದೆ. ನಿಜ, ಜವಾಬ್ದಾರಿಯು ಕೆಲಸವನ್ನು ಅರ್ಥೈಸುತ್ತದೆ, ಆದರೆ ಅದು ತೃಪ್ತಿದಾಯಕ ಕೆಲಸವಾಗಿದೆ. (ಹೋಲಿಸಿ ಅ. ಕೃತ್ಯಗಳು 20:35.) ನಾವು ‘ಕಷ್ಟಪಟ್ಟು ಕೆಲಸಮಾಡಿ ಸ್ವತಃ ಪ್ರಯಾಸಪಡುವುದನ್ನು’ ದೈವಿಕ ಭಕ್ತಿಯು ಕೇಳಿಕೊಳ್ಳುತ್ತದೆಂದು ಪೌಲನು ಒಪ್ಪಿಕೊಂಡನು. ನಾವು ಆನಂದದಿಂದ ಹಾಗೆ ಮಾಡುತ್ತೇವೆ, ಏಕೆಂದರೆ ನಾವು “ಜೀವವುಳ್ಳ ದೇವರ ಮೇಲೆ . . . ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.” ನಮ್ಮ ಜೊತೆ ಕ್ರೈಸ್ತರು ಹಾಗೂ ಇತರರ ಪರವಾಗಿ ನಾವು ಮಾಡುವಂತಹ ಕೆಲಸವನ್ನು ಆತನು ಎಂದಿಗೂ ಮರೆಯುವುದಿಲ್ಲ.—1 ತಿಮೊಥೆಯ 4:9, 10; ಇಬ್ರಿಯ 6:10.
ಕೆಲವು ವಜ್ರಗಳು ತಮ್ಮ ರಚನೆಯ ಸಮಯದಲ್ಲಿ ಉಂಟಾದ “ದುರ್ಬಲತೆ”ಗಳಿಂದ ಹಾನಿಗೊಳ್ಳುತ್ತವೆ ಮತ್ತು ಅವನ್ನು ಜಾಗರೂಕವಾಗಿ ನಿರ್ವಹಿಸುವ ಅಗತ್ಯವಿದೆ. ಆದರೆ ಪೋಲಾರಿಸ್ಕೋಪ್ ಎಂಬ ಹೆಸರಿನ ಸಲಕರಣೆಯ ಸಹಾಯದಿಂದ, ಪಾಲಿಶ್ ಮಾಡುವವನು ದುರ್ಬಲ ಭಾಗವನ್ನು ಗುರುತಿಸಿ, ಆ ಕಲ್ಲಿನ ಮೇಲೆ ಯಶಸ್ವಿಕರವಾಗಿ ಕೆಲಸಮಾಡಬಲ್ಲನು. ನಾವು ನಮ್ಮ ಹಿನ್ನೆಲೆ ಇಲ್ಲವೆ ವೇದನಾಮಯ ಅನುಭವದ ಕಾರಣ, ಒಂದು ಆಂತರಿಕ ದೌರ್ಬಲ್ಯ, ಇಲ್ಲವೆ ವ್ಯಕ್ತಿತ್ವದ ಕೊರತೆಯಿಂದ ಕಷ್ಟಾನುಭವಿಸುತ್ತಿರಬಹುದು. ನಾವು ಏನು ಮಾಡಬಲ್ಲೆವು? ಪ್ರಥಮವಾಗಿ, ನಾವು ಸಮಸ್ಯೆಯನ್ನು ಸ್ವತಃ ಒಪ್ಪಿಕೊಳ್ಳಬೇಕು ಮತ್ತು ಸಾಧ್ಯವಿರುವಷ್ಟರ ಮಟ್ಟಿಗೆ ಅದನ್ನು ಜಯಿಸಲು ನಿಶ್ಚಯಿಸಬೇಕು. ನಾವು ಖಂಡಿತವಾಗಿಯೂ ಯೆಹೋವನ ಮುಂದೆ ಪ್ರಾರ್ಥನೆಯಲ್ಲಿ ನಮ್ಮ ಹೃದಯವನ್ನು ತೋಡಿಕೊಳ್ಳಬೇಕು, ಸಾಧ್ಯವಾದಲ್ಲಿ ಒಬ್ಬ ಕ್ರೈಸ್ತ ಹಿರಿಯನಿಂದಲೂ ಆತ್ಮಿಕ ಸಹಾಯವನ್ನು ಕೋರಬೇಕು.—ಕೀರ್ತನೆ 55:22; ಯಾಕೋಬ 5:14, 15.
ಅಂತಹ ಆಂತರಿಕ ದೌರ್ಬಲ್ಯವು, ನಿಕಲಸ್ನನ್ನು ಬಾಧಿಸಿತು. “ನನ್ನ ತಂದೆ ಒಬ್ಬ ಮದ್ಯವ್ಯಸನಿಯಾಗಿದ್ದು, ನನಗೂ ನನ್ನ ತಂಗಿಗೂ ತುಂಬ ಕಷ್ಟಕೊಟ್ಟರು,” ಎಂದು ಅವನು ವಿವರಿಸುತ್ತಾನೆ. “ನಾನು ಶಾಲೆಯನ್ನು ಬಿಟ್ಟ ತರುವಾಯ ಸೇನೆಯಲ್ಲಿ ಭರ್ತಿಯಾದೆ, ಆದರೆ ನನ್ನ ದಂಗೆಕೋರ ಪ್ರವೃತ್ತಿಯು ನನ್ನನ್ನು ಬೇಗನೆ ತೊಂದರೆಯಲ್ಲಿ ಸಿಕ್ಕಿಸಿತು. ಅಮಲೌಷಧಗಳ ಮಾರಾಟಮಾಡಿದುದಕ್ಕಾಗಿ ಸೇನೆಯ ಅಧಿಕಾರಿಗಳು ನನ್ನನ್ನು ಜೈಲಿನಲ್ಲಿ ಹಾಕಿದರು ಮತ್ತು ಇನ್ನೊಂದು ಸಂದರ್ಭದಲ್ಲಿ ನಾನು ನನ್ನ ಕೆಲಸವನ್ನು ಬಿಟ್ಟುಬಿಟ್ಟೆ. ಕೊನೆಯದಾಗಿ ನಾನು ಸೇನೆಯನ್ನು ಬಿಟ್ಟಾಗಲೂ ಇನ್ನೂ ತೊಂದರೆಯಲ್ಲಿದ್ದೆ. ಅಮಲೌಷಧದ ದುರುಪಯೋಗ ಮತ್ತು ವಿಪರೀತ ಕುಡಿತದ ಕಾರಣ ನನ್ನ ಜೀವನ ಅಸ್ತವ್ಯಸ್ತವಾಗಿದ್ದರೂ, ನನಗೆ ಬೈಬಲಿನಲ್ಲಿ ಆಸಕ್ತಿಯಿತ್ತು ಮತ್ತು ಜೀವನದಲ್ಲಿ ಒಂದು ಉದ್ದೇಶವನ್ನು ಹೊಂದಿರಲು ನಾನು ಹಾತೊರೆದೆ. ಕಟ್ಟಕಡೆಗೆ, ನಾನು ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ, ನನ್ನ ಜೀವನ ಶೈಲಿಯನ್ನು ಬದಲಾಯಿಸಿ, ಸತ್ಯವನ್ನು ಸ್ವೀಕರಿಸಿದೆ.
“ಹಾಗಿದ್ದರೂ, ನನ್ನ ವ್ಯಕ್ತಿತ್ವದಲ್ಲಿನ ಕುಂದನ್ನು ಸ್ವೀಕರಿಸಿ, ಅದರೊಂದಿಗೆ ವ್ಯವಹರಿಸುವ ಮೊದಲು ಅನೇಕ ವರ್ಷಗಳು ಉರುಳಿಹೋದವು. ಅಧಿಕಾರದ ವಿಷಯದಲ್ಲಿ ನನಗೆ ಗಾಢವಾದ ದ್ವೇಷವಿತ್ತು ಮತ್ತು ನನಗೆ ಸಲಹೆಯು ಕೊಡಲ್ಪಟ್ಟಾಗ ನಾನು ರೇಗುತ್ತಿದ್ದೆ. ನಾನು ಯೆಹೋವನಿಂದ ಪೂರ್ಣವಾಗಿ ಉಪಯೋಗಿಸಲ್ಪಡುವಂತೆ ಬಯಸುತ್ತಿದ್ದೆನಾದರೂ, ಈ ಬಲಹೀನತೆಯು ನನ್ನನ್ನು ತಡೆದುಹಿಡಿಯುತ್ತಿತ್ತು. ಕೊನೆಯದಾಗಿ, ನನ್ನನ್ನು ಅರ್ಥಮಾಡಿಕೊಂಡ ಇಬ್ಬರು ಹಿರಿಯರ ಸಹಾಯದಿಂದ, ನಾನು ನನ್ನ ಸಮಸ್ಯೆಯನ್ನು ಒಪ್ಪಿಕೊಂಡು, ಅವರ ಪ್ರೀತಿಪೂರ್ಣ ಶಾಸ್ತ್ರೀಯ ಸಲಹೆಯನ್ನು ಅನ್ವಯಿಸಲಾರಂಭಿಸಿದೆ. ಆಗಾಗ ಒಂದಿಷ್ಟು ಅಸಮಾಧಾನವು ಉಂಟಾಗುತ್ತದಾದರೂ, ಈಗ ನಾನು ನನ್ನ ದಂಗೆಕೋರ ಸ್ವಭಾವವನ್ನು ನಿಯಂತ್ರಿಸಿದ್ದೇನೆ. ಯೆಹೋವನು ತಾಳ್ಮೆಯಿಂದ ನನ್ನೊಂದಿಗೆ ವ್ಯವಹರಿಸಿದ್ದಕ್ಕಾಗಿ ಮತ್ತು ಹಿರಿಯರ ಪ್ರೀತಿಪೂರ್ಣ ಸಹಾಯಕ್ಕಾಗಿ ನಾನು ಬಹಳ ಆಭಾರಿಯಾಗಿದ್ದೇನೆ. ನನ್ನ ಆತ್ಮಿಕ ಪ್ರಗತಿಯ ಕಾರಣ, ನಾನು ಇತ್ತೀಚೆಗೆ ಒಬ್ಬ ಶುಶ್ರೂಷಾ ಸೇವಕನಾಗಿ ನೇಮಿಸಲ್ಪಟ್ಟಿದ್ದೇನೆ.”
ನಿಕಲಸ್ ಕಂಡುಹಿಡಿದಂತೆ, ಆಳವಾಗಿ ಬೇರೂರಿರುವ ಮನೋಭಾವಗಳನ್ನು ಬದಲಾಯಿಸುವುದು ಸುಲಭವಲ್ಲ. ನಾವೂ ತದ್ರೀತಿಯ ಪಂಥಾಹ್ವಾನವನ್ನು ಎದುರಿಸಬಹುದು. ನಾವು ವಿಪರೀತ ಸೂಕ್ಷ್ಮಮತಿಗಳಾಗಿರಬಹುದು. ನಾವು ಒಂದು ಅಸಮಾಧಾನವನ್ನು ಮನಸ್ಸಿನಲ್ಲಿ ಬೆಳೆಸಿಕೊಳ್ಳುತ್ತಿರಬಹುದು, ಇಲ್ಲವೆ ಸ್ವತಂತ್ರಭಾವದ ಮೇಲೆ ಬಹಳಷ್ಟು ಒತ್ತನ್ನು ನೀಡುತ್ತಿರಬಹುದು. ಹೀಗೆ, ನಮ್ಮ ಕ್ರೈಸ್ತ ಪ್ರಗತಿಯು ಸೀಮಿತವಾಗಿರಬಹುದು. ವಜ್ರವನ್ನು ಪಾಲಿಶ್ ಮಾಡುವವರು, ನಾಟ್ಗಳು ಎಂದು ಕರೆಯಲ್ಪಡುವ ಕಲ್ಲುಗಳಲ್ಲಿ ತದ್ರೀತಿಯ ಅನುಭವವನ್ನು ಪಡೆದುಕೊಳ್ಳುತ್ತಾರೆ. ಇವು ನಿಜವಾಗಿಯೂ ವಜ್ರದ ರಚನೆಯ ಸಮಯದಲ್ಲಿ ಒಂದಾಗಿ ಕರಗಿಸಲ್ಪಟ್ಟ ಎರಡು ಕಲ್ಲುಗಳಾಗಿವೆ. ಫಲಸ್ವರೂಪವಾಗಿ, ನಾಟ್ಗಳು ಘರ್ಷಿಸುವಂತಹ ಬೆಳೆವಣಿಗೆಯ ನಮೂನೆಗಳನ್ನು ಪಡೆದಿರುವುದರಿಂದ, ಅವುಗಳನ್ನು ಕಣರಚನೆಗನುಸಾರ ಕೆತ್ತುವುದು ಬಹಳ ಕಷ್ಟಕರವಾಗಿರುತ್ತದೆ. ನಮ್ಮ ವಿಷಯದಲ್ಲಿ, ಮನಃಪೂರ್ವಕವಾದ ಮನೋಭಾವದ “ಕಣರಚನೆ”ಯು ಅಪರಿಪೂರ್ಣ ಶರೀರದ “ಕಣರಚನೆ”ಯ ವಿರುದ್ಧ ಹೋರಾಡುವುದನ್ನು ನಾವು ನೋಡುತ್ತೇವೆ. (ಮತ್ತಾಯ 26:41; ಗಲಾತ್ಯ 5:17) ಕೆಲವೊಮ್ಮೆ, ನಮ್ಮ ವ್ಯಕ್ತಿತ್ವದಲ್ಲಿರುವ ಅಪರಿಪೂರ್ಣತೆಗಳು ಅಷ್ಟೇನೂ ಪ್ರಾಮುಖ್ಯವಲ್ಲವೆಂದು ತರ್ಕಿಸುತ್ತಾ, ಆ ಹೋರಾಟವನ್ನು ಪೂರ್ತಿಯಾಗಿ ಬಿಟ್ಟುಬಿಡುವ ಅನಿಸಿಕೆ ನಮಗಾಗಬಹುದು. ‘ಎಷ್ಟೆಂದರೂ, ನನ್ನ ಕುಟುಂಬದವರು ಮತ್ತು ಮಿತ್ರರು ನನ್ನನ್ನು ಇನ್ನೂ ಪ್ರೀತಿಸುತ್ತಾರೆ’ ಎಂದು ನಾವು ಹೇಳಬಹುದು.
ಆದರೆ, ನಾವು ನಮ್ಮ ಸಹೋದರರ ಸೇವೆಯನ್ನು ಮಾಡಿ, ನಮ್ಮ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸಬೇಕಾದರೆ, ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವ ಮೂಲಕ ‘ನಮ್ಮ ಆಂತರ್ಯದಲ್ಲಿ ಹೊಸಬರಾಗಿ ಮಾಡಲ್ಪಡ’ಬೇಕಾಗಿದೆ. ನಿಕಲಸ್ ಮತ್ತು ಇತರ ಅಸಂಖ್ಯಾತ ವ್ಯಕ್ತಿಗಳು ಪ್ರಮಾಣೀಕರಿಸುವಂತೆ, ಪ್ರಯತ್ನವು ಸಾರ್ಥಕವಾಗಿದೆ. ಒಂದು ದೋಷವು ಇಡೀ ವಜ್ರದ ತೋರಿಕೆಯನ್ನು ಕೆಡಿಸಬಲ್ಲದೆಂದು ಪಾಲಿಶ್ ಮಾಡುವವನಿಗೆ ಗೊತ್ತಿದೆ. ತದ್ರೀತಿಯಲ್ಲಿ, ನಮ್ಮ ವ್ಯಕ್ತಿತ್ವದ ಒಂದು ಬಲಹೀನ ಅಂಶವನ್ನು ಕಡೆಗಣಿಸುವ ಮೂಲಕ, ನಾವು ನಮ್ಮ ಆತ್ಮಿಕ ತೋರಿಕೆಯನ್ನು ಕೆಡಿಸಿಕೊಳ್ಳಬಲ್ಲೆವು. ಇದಕ್ಕಿಂತಲೂ ಕೆಟ್ಟದಾಗಿ, ಗಂಭೀರವಾದೊಂದು ಬಲಹೀನತೆಯು ನಮ್ಮ ಆತ್ಮಿಕ ಅಧಃಪತನಕ್ಕೆ ನಡೆಸಬಲ್ಲದು.—ಜ್ಞಾನೋಕ್ತಿ 8:33.
ನಮ್ಮೊಳಗಿನ ಒಂದು ‘ಹೊಳಪಿ’ನಂತೆ
ವಜ್ರವನ್ನು ಪಾಲಿಶ್ ಮಾಡುವವನು ಆ ವಜ್ರದೊಳಗಿರುವ ಹೊಳಪನ್ನು ಕಾಪಾಡಲು ಪ್ರಯತ್ನಿಸುತ್ತಾನೆ. ಪಾರ್ಶ್ವಗಳನ್ನು—ಅವು ಕಾಮನಬಿಲ್ಲಿನ ಪರಿಣಾಮವನ್ನು ಉಂಟುಮಾಡುವಂತೆ—ಹೊಂದಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ವಜ್ರದೊಳಗೆ ಬಹುವರ್ಣದ ಬೆಳಕು ಹಿಂದಕ್ಕೆ ಮುಂದಕ್ಕೆ ಪ್ರತಿಬಿಂಬಿಸಿ, ವಜ್ರಗಳನ್ನು ಹೊಳೆಯುವಂತೆ ಮಾಡುವ ಹೊಳಪನ್ನು ಉಂಟುಮಾಡುತ್ತದೆ. ತದ್ರೀತಿಯಲ್ಲಿ, ದೇವರ ಆತ್ಮವು ನಮ್ಮಲ್ಲಿ ಒಂದು ‘ಹೊಳಪಿ’ನಂತೆ ಇರಬಲ್ಲದು.—1 ಥೆಸಲೊನೀಕ 5:19; ಅ. ಕೃತ್ಯಗಳು 18:25; ರೋಮಾಪುರ 12:11.
ಆತ್ಮಿಕವಾಗಿ ಪ್ರಚೋದಿಸಲ್ಪಡುವ ಅಗತ್ಯವನ್ನು ನಾವು ಮನಗಾಣುವಲ್ಲಿ ಆಗೇನು? ಇದನ್ನು ಹೇಗೆ ಮಾಡಸಾಧ್ಯವಿದೆ? ನಾವು ‘ನಮ್ಮ ನಡತೆಯನ್ನು ಶೋಧಿಸುವ’ ಅಗತ್ಯವಿದೆ. (ಕೀರ್ತನೆ 119:59, 60) ಇದು ನಾವು ಆತ್ಮಿಕವಾಗಿ ನಿಧಾನಿಗಳಾಗುವಂತೆ ಮಾಡುವಂತಹ ವಿಷಯಗಳನ್ನು ಗುರುತಿಸಿ, ಯಾವ ದೇವಪ್ರಭುತ್ವ ಚಟುವಟಿಕೆಗಳನ್ನು ನಾವು ಹೆಚ್ಚು ಹುರುಪಿನಿಂದ ಬೆನ್ನಟ್ಟಬೇಕೆಂದು ನಿರ್ಧರಿಸುವುದನ್ನು ಒಳಗೊಳ್ಳುವುದು. ಕ್ರಮವಾದ ವೈಯಕ್ತಿಕ ಅಧ್ಯಯನ ಮತ್ತು ಶ್ರದ್ಧಾಪೂರ್ವಕವಾದ ಪ್ರಾರ್ಥನೆಯ ಮೂಲಕ ನಾವು ಆತ್ಮಿಕ ಗಣ್ಯತಾಭಾವವನ್ನು ಆಳಗೊಳಿಸಬಲ್ಲೆವು. (ಕೀರ್ತನೆ 119:18, 32; 143:1, 5, 8, 10) ಅಲ್ಲದೆ, ನಂಬಿಕೆಯಲ್ಲಿ ಕಷ್ಟಪಟ್ಟು ಕೆಲಸಮಾಡುವವರೊಂದಿಗೆ ಸಹವಾಸಿಸುವ ಮೂಲಕ, ಯೆಹೋವನಿಗೆ ಹುರುಪಿನಿಂದ ಸೇವೆಸಲ್ಲಿಸುವ ನಮ್ಮ ನಿರ್ಧಾರವನ್ನು ನಾವು ಇನ್ನೂ ಬಲಗೊಳಿಸುವೆವು.—ತೀತ 2:14.
ಒಬ್ಬ ಯುವ ಕ್ರೈಸ್ತ ಸ್ತ್ರೀಯಾದ ಲವೀಸ್ ಒಪ್ಪಿಕೊಂಡದ್ದು: “ನಾನು ಒಬ್ಬ ಪಯನೀಯರ್ ಇಲ್ಲವೆ ಪೂರ್ಣ ಸಮಯದ ರಾಜ್ಯ ಘೋಷಕಳಾಗಿ ನಮೂದಿಸಿಕೊಳ್ಳುವ ಮೊದಲು, ಎರಡು ವರ್ಷಗಳ ಕಾಲ ಕ್ರಮದ ಪಯನೀಯರ್ ಸೇವೆಯ ಕುರಿತು ಪರ್ಯಾಲೋಚಿಸಿದೆ. ಯಾವ ವಿಷಯವೂ ನನ್ನನ್ನು ತಡೆಯುತ್ತಿರಲಿಲ್ಲ, ಆದರೆ ನನಗೆ ಅನುಕೂಲಕರವಾದ ದಿನಚರಿಯಿತ್ತು, ಮತ್ತು ಅದರಿಂದ ಹೊರಬರುವ ಪ್ರಯತ್ನವನ್ನು ನಾನು ಮಾಡಲೇ ಇಲ್ಲ. ತರುವಾಯ ನನ್ನ ತಂದೆಯವರು ಇದ್ದಕ್ಕಿದ್ದಹಾಗೆ ಮೃತಪಟ್ಟರು. ಜೀವನವು ಎಷ್ಟೊಂದು ನಶ್ವರವಾಗಿದೆಯೆಂದು ಮತ್ತು ನಾನು ನನ್ನ ಜೀವಿತದ ಸದುಪಯೋಗವನ್ನು ಮಾಡುತ್ತಿರಲಿಲ್ಲವೆಂಬುದನ್ನು ನಾನು ಗ್ರಹಿಸಿದೆ. ಆದುದರಿಂದ ನಾನು ನನ್ನ ಆತ್ಮಿಕ ದೃಷ್ಟಿಕೋನವನ್ನು ಬದಲಾಯಿಸಿ, ನನ್ನ ಸೇವೆಯನ್ನು ಹೆಚ್ಚಿಸಿ, ಕ್ರಮದ ಪಯನೀಯರಳಾದೆ. ಕ್ಷೇತ್ರ ಸೇವಾ ಏರ್ಪಾಡುಗಳನ್ನು ಸದಾ ಬೆಂಬಲಿಸಿದ ಮತ್ತು ಕ್ರಮವಾಗಿ ಶುಶ್ರೂಷೆಯಲ್ಲಿ ನನ್ನೊಂದಿಗೆ ಜೊತೆಗೂಡಿದ ಆ ನನ್ನ ಆತ್ಮಿಕ ಸಹೋದರ ಸಹೋದರಿಯರು, ಈ ವಿಷಯದಲ್ಲಿ ವಿಶೇಷ ಸಹಾಯವನ್ನು ನೀಡಿದರು. ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ನಾವು ನಮ್ಮ ಸಹವಾಸಿಗಳ ಮೌಲ್ಯಗಳು ಮತ್ತು ಗುರಿಗಳಲ್ಲಿ ಪಾಲಿಗರಾಗುತ್ತೇವೆಂಬುದನ್ನು ನಾನು ಕಲಿತುಕೊಂಡಿದ್ದೇನೆ.”
ಕಬ್ಬಿಣದಿಂದಲೊ ಎಂಬಂತೆ ಹರಿತಮಾಡಲ್ಪಟ್ಟದ್ದು
ಭೂಮಿಯ ಮೇಲೆ ನೈಸರ್ಗಿಕವಾಗಿ ಕಂಡುಕೊಳ್ಳಲ್ಪಡುವ ಅತ್ಯಂತ ಗಟ್ಟಿಯಾದ ವಸ್ತುಗಳು ವಜ್ರಗಳಾಗಿವೆ. ಆದಕಾರಣ, ಒಂದು ವಜ್ರವನ್ನು ಕೆತ್ತಲು ಮತ್ತೊಂದು ವಜ್ರದ ಅಗತ್ಯವಿದೆ. ಇದು “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು,” ಎಂದು ಹೇಳುವ ಜ್ಞಾನೋಕ್ತಿಯನ್ನು ಬೈಬಲ್ ವಿದ್ಯಾರ್ಥಿಗಳಿಗೆ ಜ್ಞಾಪಕಹುಟ್ಟಿಸಬಹುದು. (ಜ್ಞಾನೋಕ್ತಿ 27:17) ವ್ಯಕ್ತಿಯೊಬ್ಬನು “ಹರಿತ”ಗೊಳಿಸಲ್ಪಡುವುದು ಹೇಗೆ? ಕಬ್ಬಿಣದಿಂದಲೇ ಮಾಡಲ್ಪಟ್ಟ ಬ್ಲೇಡನ್ನು ಹರಿತಗೊಳಿಸಲು ಕಬ್ಬಿಣದ ಒಂದು ತುಂಡನ್ನು ಉಪಯೋಗಿಸುವಂತೆಯೇ, ವ್ಯಕ್ತಿಯೊಬ್ಬನು ಮತ್ತೊಬ್ಬನ ಬುದ್ಧಿಶಕ್ತಿ ಹಾಗೂ ಆತ್ಮಿಕ ಸ್ಥಿತಿಯನ್ನು ಹರಿತಗೊಳಿಸುವುದರಲ್ಲಿ ಸಫಲನಾಗಬಹುದು. ದೃಷ್ಟಾಂತಕ್ಕೆ, ಯಾವುದೊ ನಿರಾಶೆಯ ಕಾರಣ ನಾವು ಖಿನ್ನರಾದಲ್ಲಿ, ಮತ್ತೊಬ್ಬ ವ್ಯಕ್ತಿಯ ಉತ್ತೇಜನವು ಬಹಳ ಪ್ರೋತ್ಸಾಹದಾಯಕವಾಗಿರಬಲ್ಲದು. ನಮ್ಮ ಕಾಂತಿಹೀನ ಮುಖಭಾವವು ಕಾಂತಿಯುತವಾಗಬಲ್ಲದು, ಮತ್ತು ನಾವು ನವೀಕರಿಸಲ್ಪಟ್ಟ ಹುರುಪಿನ ಚಟುವಟಿಕೆಗೆ ಹುರಿದುಂಬಿಸಲ್ಪಡಸಾಧ್ಯವಿದೆ. (ಜ್ಞಾನೋಕ್ತಿ 13:12) ವಿಶೇಷವಾಗಿ ಸಭೆಯ ಹಿರಿಯರು, ಸುಧಾರಣೆಗಾಗಿ ಶಾಸ್ತ್ರೀಯ ಉತ್ತೇಜನವನ್ನು ಮತ್ತು ಸಲಹೆಯನ್ನು ಒದಗಿಸುವ ಮೂಲಕ, ನಮ್ಮನ್ನು ಹರಿತಗೊಳಿಸಲು ಸಹಾಯ ಮಾಡಬಲ್ಲರು. ಅವರು ಸೊಲೊಮೋನನಿಂದ ತಿಳಿಸಲ್ಪಟ್ಟ ತತ್ವವನ್ನು ಅನುಸರಿಸುತ್ತಾರೆ: “ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳುವಳಿಕೆಯನ್ನು ಪಡೆಯುವನು.”—ಜ್ಞಾನೋಕ್ತಿ 9:9.
ನಿಶ್ಚಯವಾಗಿಯೂ, ಆತ್ಮಿಕ ತರಬೇತಿಗೆ ಸಮಯವು ಹಿಡಿಯುತ್ತದೆ. ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ, ಅಪೊಸ್ತಲ ಪೌಲನು ತಿಮೊಥೆಯನೊಂದಿಗೆ, ತನ್ನ ಅನುಭವ ಹಾಗೂ ಕಲಿಸುವ ವಿಧಾನಗಳನ್ನು ಹಂಚಿಕೊಂಡನು. (1 ಕೊರಿಂಥ 4:17; 1 ತಿಮೊಥೆಯ 4:6, 16) ಮೋಶೆಯು ಯೆಹೋಶುವನಿಗೆ 40 ವರ್ಷಾವಧಿಯ ಉದ್ದಕ್ಕೂ ನೀಡಿದ ದೀರ್ಘವಾದ ತರಬೇತಿಯು, ಬಹಳ ಸಮಯದ ವರೆಗೆ ಇಸ್ರಾಯೇಲ್ ಜನಾಂಗಕ್ಕೆ ಪ್ರಯೋಜನವನ್ನು ತಂದಿತು. (ಯೆಹೋಶುವ 1:1, 2; 24:29, 31) ಎಲೀಷನು ಸುಮಾರು 6 ವರ್ಷಗಳ ಕಾಲ ಪ್ರವಾದಿಯಾದ ಎಲೀಯನನ್ನು ಜೊತೆಗೂಡಿದ್ದಿರಬಹುದು. ಆ ಸಮಯದಲ್ಲಿ ಸುಮಾರು 60 ವರ್ಷಗಳ ಕಾಲ ಮಾಡಲಿಕ್ಕಿದ್ದ ತನ್ನ ಸ್ವಂತ ಶುಶ್ರೂಷೆಗೆ ಒಂದು ಉತ್ತಮ ಆಧಾರವನ್ನು ಅವನು ಪಡೆದುಕೊಂಡನು. (1 ಅರಸು 19:21; 2 ಅರಸು 3:11) ಮುಂದುವರಿಯುವ ತರಬೇತಿಯನ್ನು ತಾಳ್ಮೆಯಿಂದ ಒದಗಿಸುವ ಮೂಲಕ, ಹಿರಿಯರು ಪೌಲ, ಮೋಶೆ, ಮತ್ತು ಎಲೀಯರ ಮಾದರಿಯನ್ನು ಅನುಸರಿಸುತ್ತಾರೆ.
ಪ್ರಶಂಸಿಸುವುದು ತರಬೇತಿಯ ಒಂದು ಅತ್ಯಾವಶ್ಯಕ ಭಾಗವಾಗಿದೆ. ಚೆನ್ನಾಗಿ ನಿರ್ವಹಿಸಲ್ಪಟ್ಟ ನೇಮಕಗಳು ಇಲ್ಲವೆ ಸ್ತುತಿಯೋಗ್ಯ ಕೃತ್ಯಗಳಿಗಾಗಿ ಕೊಡಲ್ಪಡುವ ಗಣ್ಯತೆಯ ಯಥಾರ್ಥ ಅಭಿವ್ಯಕ್ತಿಗಳು, ದೇವರನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ಬಯಸುವಂತೆ ಇತರರನ್ನು ಪ್ರೇರಿಸಬಹುದು. ಪ್ರಶಂಸೆಯು ಭರವಸೆಯನ್ನು ಕಟ್ಟುತ್ತದೆ, ಪ್ರತಿಯಾಗಿ ಅದು ಬಲಹೀನತೆಗಳನ್ನು ಜಯಿಸಲು ಪ್ರಯತ್ನಿಸುವ ಪ್ರೇರಣೆಯನ್ನು ಒದಗಿಸುತ್ತದೆ. (ಹೋಲಿಸಿ 1 ಕೊರಿಂಥ 11:2.) ಸತ್ಯದಲ್ಲಿ ಪ್ರಗತಿಮಾಡುವಂತೆ ಕೊಡಲ್ಪಡುವ ಉತ್ತೇಜನವು, ರಾಜ್ಯ ಸಾರುವಿಕೆಯಲ್ಲಿ ಮತ್ತು ಇತರ ಸಭಾ ಚಟುವಟಿಕೆಗಳಲ್ಲಿ ಅತಿಯಾಗಿ ಕಾರ್ಯಮಗ್ನರಾಗಿ ಇರುವುದರಿಂದಲೂ ಬರುತ್ತದೆ. (ಅ. ಕೃತ್ಯಗಳು 18:5) ಹಿರಿಯರು ಸಹೋದರರಿಗೆ ಅವರ ಆತ್ಮಿಕ ಪ್ರಗತಿಗನುಸಾರ ಜವಾಬ್ದಾರಿಯನ್ನು ನೇಮಿಸುವಾಗ, ಇದು ಈ ಪುರುಷರಿಗೆ ಅಮೂಲ್ಯವಾದ ಅನುಭವವನ್ನು ಕೊಡುತ್ತದೆ ಮತ್ತು ಆತ್ಮಿಕವಾಗಿ ಪ್ರಗತಿಮಾಡುತ್ತಾ ಇರುವ ಬಯಕೆಯನ್ನು ಬಲಗೊಳಿಸುತ್ತದೆ.—ಫಿಲಿಪ್ಪಿ 1:8, 9.
ಆತ್ಮಿಕ ಪ್ರಗತಿಯನ್ನು ಮಾಡುವುದಕ್ಕಾಗಿರುವ ಸಕಾರಣ
ವಜ್ರಗಳು ಅಮೂಲ್ಯವೆಂದೆಣಿಸಲ್ಪಡುತ್ತವೆ. ಯೆಹೋವನ ಆರಾಧಕರ ಲೋಕವ್ಯಾಪಕ ಕುಟುಂಬದೊಂದಿಗೆ ಈಗ ಸಹವಾಸಿಸುತ್ತಿರುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ವಾಸ್ತವದಲ್ಲಿ, ಸ್ವತಃ ದೇವರೇ ಅವರನ್ನು ಎಲ್ಲ ಜನಾಂಗಗಳಿಂದ ಬಂದ “ಇಷ್ಟವಸ್ತುಗಳು,” ಇಲ್ಲವೆ “ಅಮೂಲ್ಯ” ವಸ್ತುಗಳು ಎಂದು ಕರೆಯುತ್ತಾನೆ. (ಹಗ್ಗಾಯ 2:7, NW ಪಾದಟಿಪ್ಪಣಿ) ಕಳೆದ ವರ್ಷ 3,75,923 ಮಂದಿ ಯೆಹೋವನ ಸ್ನಾತ ಸಾಕ್ಷಿಗಳಾದರು. ಈ ಬೆಳವಣಿಗೆಗೆ ಎಡೆಮಾಡಿಕೊಡಲು, ‘ಗುಡಾರದ ಸ್ಥಳವನ್ನು ವಿಸ್ತರಿಸುವ’ ಅಗತ್ಯವಿದೆ. ಆತ್ಮಿಕವಾಗಿ ಪ್ರಗತಿಮಾಡುವ ಮೂಲಕ, ಮತ್ತು ಕ್ರೈಸ್ತ ಸೇವಾ ಸುಯೋಗಗಳಿಗಾಗಿ ಪ್ರಯತ್ನಿಸುವ ಮೂಲಕ, ಈ ವಿಸ್ತರಣೆಯನ್ನು ಪರಾಮರಿಸುವ ಕಾರ್ಯದಲ್ಲಿ ಭಾಗವಹಿಸಸಾಧ್ಯವಿದೆ.—ಯೆಶಾಯ 54:2; 60:22.
ನಮ್ಮ ಆತ್ಮಿಕ ಮೌಲ್ಯವು, ಬ್ಯಾಂಕಿನಲ್ಲಿ ಇಡಲ್ಪಟ್ಟ ಮತ್ತು ಅಪರೂಪವಾಗಿ ಕಾಣಬರುವ ಅನೇಕ ಅಮೂಲ್ಯ ವಜ್ರಗಳಂತಿರದೆ, ಉಜ್ವಲವಾಗಿ ಪ್ರಕಾಶಿಸಬಲ್ಲದು. ನಮ್ಮ ಕ್ರೈಸ್ತ ಗುಣಗಳನ್ನು ನಾವು ಕ್ರಮವಾಗಿ ಪಾಲಿಶ್ ಮಾಡಿ, ಪ್ರದರ್ಶಿಸುವುದಾದರೆ, ನಾವು ಯೆಹೋವ ದೇವರನ್ನು ಮಹಿಮೆಪಡಿಸುತ್ತೇವೆ. ಯೇಸು ತನ್ನ ಹಿಂಬಾಲಕರಿಗೆ ಉತ್ತೇಜನ ನೀಡಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾಯ 5:16) ಖಂಡಿತವಾಗಿಯೂ, ಆತ್ಮಿಕ ಪ್ರಗತಿಯನ್ನು ಮಾಡಲು ಅದು ನಮಗೆ ಸಕಾರಣವನ್ನು ಕೊಡುತ್ತದೆ.
[ಪಾದಟಿಪ್ಪಣಿ]
a ಈ ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.