ಮನೋರಂಜನೆಗೆ ಏನು ಸಂಭವಿಸಿದೆ?
ಪ್ರಾಚೀನ ರೋಮ್ ಪಟ್ಟಣದವರು—ಯಾರು ತಮ್ಮ ಸಂಸ್ಕೃತಿಯ ಉಚ್ಛ್ರಾಯ ಸ್ಥಿತಿಯಲ್ಲಿದ್ದರೆಂದು ಭಾವಿಸಲಾಗಿತ್ತೋ ಅವರು—ಜೊತೆ ಮಾನವರ ಕಡು ಬೇಗುದಿಯನ್ನು ಮನೋರಂಜನೆಯಾಗಿ ಹೇಗೆ ವೀಕ್ಷಿಸಸಾಧ್ಯವಿತ್ತು? “ಅದು ನವೀನ ಹಾಗೂ ಹೆಚ್ಚು ಶಕ್ತಿಶಾಲಿಯಾದ ಉತ್ತೇಜಕಗಳಿಗಾಗಿರುವ ಕಟ್ಟಾಸೆಯಿಂದ ಮಾತ್ರ ವಿವರಿಸಲ್ಪಡಸಾಧ್ಯವಿದೆ” ಎಂಬುದಾಗಿ ವಿಧರ್ಮದೊಂದಿಗೆ ಕ್ರೈಸ್ತತ್ವದ ಸಂಘರ್ಷ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಗೆರ್‌ಹಾರ್ಟ್ ಯೂಲ್‌ಹೊರ್ನ್ ಬರೆಯುತ್ತಾರೆ. “ಎಲ್ಲ ಸಂಭಾವ್ಯ ಸುಖಗಳಿಂದ ತೃಪ್ತರಾಗಿದ್ದ ಜನರು, . . . ತಾವು ಇನ್ನು ಮುಂದೆ ಬೇರೆಲ್ಲಿಯೂ ಕಂಡುಕೊಳ್ಳದ ಉದ್ರೇಕಕ್ಕಾಗಿ ಹುಡುಕಿದರು.”
ಇಂದು ಅನೇಕ ಜನರು, “ನವೀನ ಹಾಗೂ ಹೆಚ್ಚು ಶಕ್ತಿಶಾಲಿಯಾದ ಉತ್ತೇಜಕಗಳಿಗಾಗಿ” ಅದೇ ಪ್ರಕಾರದ “ಕಟ್ಟಾಸೆ”ಯನ್ನು ಪ್ರದರ್ಶಿಸುತ್ತಾರೆ. ಅವರು ನಿಜ ಜೀವನದ ಕಗ್ಗೊಲೆ ಅಥವಾ ಕಾಮುಕತೆಯನ್ನು ವೀಕ್ಷಿಸಲು ಒಟ್ಟುಗೂಡದಿರಬಹುದು ನಿಜ. ಆದರೆ ಮನೋರಂಜನೆಯ ವಿಷಯದಲ್ಲಿ ಅವರ ಆಯ್ಕೆಯು, ಹಿಂಸಾಚಾರ ಹಾಗೂ ಲೈಂಗಿಕತೆಯ ವಿಷಯವಾಗಿ ತದ್ರೀತಿಯ ಗೀಳನ್ನು ಪ್ರಕಟಪಡಿಸುತ್ತದೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಚಲನ ಚಿತ್ರಗಳು. ಇತ್ತೀಚಿನ ವರ್ಷಗಳಲ್ಲಿ ಚಿತ್ರ ತಯಾರಕರು, “ವಕ್ರತೆಯ ಕಡೆಗೆ ಒಂದು ಒಲವನ್ನು” ಪ್ರದರ್ಶಿಸಿದ್ದಾರೆಂದು ಚಲನ ಚಿತ್ರ ವಿಮರ್ಶಕ ಮೈಕಲ್ ಮೆಡ್ವೆಡ್ ಪ್ರತಿಪಾದಿಸುತ್ತಾರೆ. ಅವರು ಕೂಡಿಸುವುದು, “ಚಲನ ಚಿತ್ರ ಕ್ಷೇತ್ರದಿಂದ ಬರುವ ಸಂದೇಶವೇನೆಂದರೆ, ಉದಾತ್ತ ಗುಣ ಇಲ್ಲವೆ ಒಳ್ಳೆಯತನವನ್ನು ತಿಳಿಯಪಡಿಸುವ ಯಾವುದೇ ಪ್ರಯತ್ನಗಳಿಗಿಂತ, ಕ್ರೌರ್ಯ ಮತ್ತು ಚಿತ್ತವೈಕಲ್ಯದ ಚಿತ್ರಣಗಳು ಹೆಚ್ಚು ಗಂಭೀರವಾದ ಪರಿಗಣನೆಗೆ, ಹೆಚ್ಚು ವಿಶೇಷವಾದ ಗಮನಕ್ಕೆ ಅರ್ಹವಾಗಿರುವಂತೆ ತೋರುತ್ತದೆ.”
ಟೆಲಿವಿಷನ್‌ನೊಂದಿಗಿನ ಸ್ಪರ್ಧೆಯು, ಜನರನ್ನು ಚಲನ ಚಿತ್ರ ಮಂದಿರದೊಳಗೆ ಆಕರ್ಷಿಸಲು ಕಾರ್ಯತಃ ಯಾವುದೇ ಮಟ್ಟಕ್ಕೆ ಹೋಗುವಂತೆ ಚಿತ್ರ ತಯಾರಕರನ್ನು ಒತ್ತಾಯಿಸಿದೆ. “ನಮಗೆ ಶಕ್ತಿಶಾಲಿಯೂ ತೀಕ್ಷ್ಣವೂ ಆದ, ಕಠೋರವಾಗಿರುವ, ಜನರು ಟಿವಿಯ ಮೇಲೆ ನೋಡುವ ಎಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿರುವ ಚಿತ್ರಗಳ ಅಗತ್ಯವಿದೆ,” ಎಂದು ಚಲನ ಚಿತ್ರ ಸ್ಟುಡಿಯೊವೊಂದರ ಅಧ್ಯಕ್ಷನು ಹೇಳುತ್ತಾನೆ. “ವಾಸ್ತವವಾಗಿ, ನಾವು ರಕ್ತಸಿಕ್ತ ದೃಶ್ಯಗಳನ್ನು ತೋರಿಸುವ ಮತ್ತು [ಹೊಲಸು] ಭಾಷೆಯನ್ನು ಬಳಸುವ ವಿಷಯಕ್ಕೆ ಬದ್ಧರಾಗಿರುವುದಿಲ್ಲ, ಆದರೆ ಇಂದು ಚಿತ್ರವೊಂದನ್ನು ತೆಗೆಯಲು ಬೇಕಾದ ಸಂಗತಿಗಳು ಅವೇ ಆಗಿವೆ.” ನಿಶ್ಚಯವಾಗಿಯೂ, ಅನೇಕರು ಅತ್ಯಂತ ಸ್ಪಷ್ಟವಾದ ಸಿನೆಮಾ ಹಿಂಸಾಚಾರದಿಂದ ಇನ್ನು ಮುಂದೆ ತಲ್ಲಣಗೊಳ್ಳುವುದಿಲ್ಲ. ಚಲನ ಚಿತ್ರ ನಿರ್ದೇಶಕರಾದ ಆ್ಯಲನ್ ಜೆ. ಪಾಕೂಲ ಹೇಳುವುದು, “ಜನರು ಹಿಂಸಾತ್ಮಕ ಚಲನ ಚಿತ್ರ ದೃಶ್ಯಗಳಿಗೆ ವಿಸಂವೇದಿಗಳಾಗುತ್ತಿದ್ದಾರೆ. ಮರಣ ಪ್ರಮಾಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ, ಸ್ಫೋಟನೆಯ ಶಕ್ತಿ ತೀವ್ರವಾಗಿ ವೃದ್ಧಿಯಾಗುತ್ತಿದೆ ಮತ್ತು ಅವರು ಅದಕ್ಕೆ ಕಿವುಡರಾಗುತ್ತಿದ್ದಾರೆ. ಅವರು ಕ್ರೂರ ಸಂವೇದನೆಗೆ ಒಂದು ಹೇರಾಸೆಯನ್ನು ಬೆಳೆಸಿಕೊಂಡಿದ್ದಾರೆ.”
ಟೆಲಿವಿಷನ್. ಟಿವಿಯ ಮೇಲೆ ಲೈಂಗಿಕತೆಯ ಲಜ್ಜಾಹೀನ ಚಿತ್ರಣಗಳು, ಜಪಾನ್, ಬ್ರೆಸಿಲ್, ಮತ್ತು ಯೂರೋಪ್ ಅನ್ನು ಸೇರಿಸಿ, ಲೋಕದ ಅನೇಕ ಭಾಗಗಳಲ್ಲಿ ಈಗ ಸಾಮಾನ್ಯವಾಗಿವೆ. ಅಮೆರಿಕದಲ್ಲಿರುವ ಸರಾಸರಿ ಟಿವಿ ವೀಕ್ಷಕನು, ಒಂದೇ ಒಂದು ವರ್ಷದಲ್ಲಿ ಸುಮಾರು 14,000 ಲೈಂಗಿಕ ಚಿತ್ರಣಗಳನ್ನು ನೋಡುತ್ತಾನೆ. “ಲೈಂಗಿಕ ಮುಖ್ಯವಿಷಯಗಳು ಮತ್ತು ಸ್ಪಷ್ಟತೆಯಲ್ಲಿನ ಹೆಚ್ಚಳವು, ಕಡಮೆಯಾಗುವ ಯಾವ ಸೂಚನೆಯನ್ನೂ ತೋರಿಸುವುದಿಲ್ಲ,” ಎಂಬುದಾಗಿ ಒಂದು ಸಂಶೋಧನಾ ತಂಡವು ವರದಿಸುತ್ತದೆ. “ಹಿಂದೆ ನಿಷಿದ್ಧ ವಿಷಯಗಳಾಗಿದ್ದ ಅಗಮ್ಯ ಗಮನ, ಕ್ರೌರ್ಯ ರತಿ, ಮತ್ತು ಪಶುಗಮನಗಳು, ಸಾಯಂಕಾಲದ ಟಿವಿ ಕಾರ್ಯಕ್ರಮಗಳಿಗೆ ಲಾಭದ ಒಂದು ಮಾಧ್ಯಮವಾಗಿವೆ.”
ಅಮೆರಿಕವನ್ನು ವೀಕ್ಷಿಸುವುದು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ಟಿವಿ ಕಾರ್ಯಕ್ರಮದಲ್ಲಿರುವ ಸ್ವಚ್ಛಂಧತೆಗೆ ಒಂದು ಕಾರಣವಿದೆ. ಅದು ಹೇಳುವುದು: “ಲೈಂಗಿಕ ಚಟುವಟಿಕೆಯನ್ನು ಚಿತ್ರಿಸುವುದು ಲಾಭದಾಯಕವಾಗಿದೆ. . . . ತಾವು ಸಿಟ್ಟಿಗೆಬ್ಬಿಸುತ್ತಿರುವ ವೀಕ್ಷಕರಿಗಿಂತ ಹೆಚ್ಚು ವೀಕ್ಷಕರನ್ನು ಉದ್ದೀಪನಗೊಳಿಸುತ್ತಿದ್ದೇವೆಂದು ನೆಟ್‌ವರ್ಕ್ ಹಾಗೂ ಉತ್ಪಾದನಾ ಕಂಪನಿಗಳವರು ಕಂಡುಹಿಡಿದಂತೆ, ಹೆಚ್ಚೆಚ್ಚು ನಿಷಿದ್ಧ ವಿಷಯಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾದ ವಿಧದಲ್ಲಿ ಭೇದಿಸುವಂತೆ ಅನುಮತಿಸುವ ಮೂಲಕ, ತಮ್ಮ ಉತ್ಪಾದನೆಯ ವಿಕ್ರಯ ಸಂಭಾವ್ಯವನ್ನು ಕ್ರಮೇಣ ಹೆಚ್ಚಿಸಿದ್ದಾರೆ.”
ವಿಡಿಯೊ ಆಟಗಳು. ಪ್ಯಾಕ್-ಮ್ಯಾನ್ ಮತ್ತು ಡಾಂಕಿ ಕಾಂಗ್ ಎಂಬ ವಿಡಿಯೊ ಆಟಗಳ ತುಲನಾತ್ಮಕ ಮುಗ್ಧ ಯುಗವು, ಭಯಂಕರವಾದ ಹಿಂಸಾನಂದದ ಆಟಗಳ ಒಂದು ಹೊಸ ಶಕಕ್ಕೆ ಎಡೆಮಾಡಿಕೊಟ್ಟಿದೆ. ಪ್ರೊಫೆಸರ್ ಮಾರ್ಷಾ ಕಿಂಡರ್ ಈ ಆಟಗಳನ್ನು, “ಟಿವಿ ಅಥವಾ ಒಂದು ಚಲನ ಚಿತ್ರಕ್ಕಿಂತಲೂ ಕೀಳಾದದ್ದು” ಎಂದು ವರ್ಣಿಸುತ್ತಾರೆ. “ನಿಯಂತ್ರಣ ಇಲ್ಲವೆ ಶಕ್ತಿಯನ್ನು ಪಡೆಯುವ ಏಕೈಕ ಮಾರ್ಗವು ಹಿಂಸಾಚಾರದ ಮೂಲಕವೇ ಎಂಬ ಸಂದೇಶವನ್ನು” ಅವು ತಿಳಿಯಪಡಿಸುತ್ತವೆ.
ಸಾರ್ವಜನಿಕ ಹಿತಾಸಕ್ತಿಯ ಕಾರಣ, ಅಮೆರಿಕದಲ್ಲಿರುವ ಒಂದು ಪ್ರಧಾನ ಉತ್ಪಾದಕ ಕಂಪನಿಯು, ತನ್ನ ವಿಡಿಯೊ ಆಟಗಳ ಮೇಲೆ ಈಗ ಒಂದು ಗುಣಮಟ್ಟ ಮಾಪನ ವ್ಯವಸ್ಥೆಯನ್ನು ಉಪಯೋಗಿಸುತ್ತದೆ. “ಎಮ್‌ಎ-17” ಎಂಬ ಹೆಸರುಪಟ್ಟಿಯು—ಈ “ಪ್ರೌಢ” ಆಟವು, 17ಕ್ಕಿಂತ ಕಡಿಮೆ ಪ್ರಾಯದವರಿಗೆ ಅಯೋಗ್ಯವೆಂದು ಸೂಚಿಸುತ್ತಾ—ತೀವ್ರವಾದ ಹಿಂಸಾಚಾರ, ಲೈಂಗಿಕ ಮುಖ್ಯವಿಷಯಗಳು, ಮತ್ತು ಹೊಲಸು ನುಡಿಯನ್ನು ಒಳಗೊಂಡಿರಬಹುದು. ಹಾಗಿದ್ದರೂ, “ಪ್ರೌಢ” ಎಂಬ ವರ್ಗೀಕರಣವು, ಆಟದ ಆಕರ್ಷಣೆಗೆ ಹೆಚ್ಚನ್ನು ಕೂಡಿಸುವುದೆಂದು ಕೆಲವರು ಭಯಪಡುತ್ತಾರೆ. ವಿಡಿಯೊ ಆಟದ ಉತ್ಸಾಹಿಯಾಗಿರುವ ಒಬ್ಬ ಯುವಕನು ಹೇಳುವುದು, “ನಾನು 15 ವರ್ಷ ಪ್ರಾಯದವನಾಗಿದ್ದು, ಒಂದು ಎಮ್‌ಎ-17 ಸ್ಟಿಕ್ಕರನ್ನು ನೋಡುವುದಾದರೆ, ಏನೇ ಆಗಲಿ ಆ ಆಟವನ್ನು ಕೊಂಡುಕೊಳ್ಳುತ್ತಿದ್ದೆ.”
ಸಂಗೀತ. ಜನಪ್ರಿಯ ಸಂಗೀತದ ಒಳವಿಷಯವನ್ನು ಪರಿಶೀಲಿಸುವ ಒಂದು ಪತ್ರಿಕೆಯು ಪ್ರತಿಪಾದಿಸುವುದೇನೆಂದರೆ, 1995ರ ಕೊನೆಯಲ್ಲಿ, ಅತ್ಯಂತ ಪ್ರಸಿದ್ಧವಾದ 40 ಆಲ್ಬಮ್‌ಗಳಲ್ಲಿ ಕೇವಲ 10 ಆಲ್ಬಮ್‌ಗಳು, ಹೊಲಸು ನುಡಿ ಇಲ್ಲವೆ ಅಮಲೌಷಧಗಳು, ಹಿಂಸಾಚಾರ, ಇಲ್ಲವೆ ಲೈಂಗಿಕತೆಯ ವಿಷಯಗಳಿಂದ ಮುಕ್ತವಾಗಿದ್ದವು. “ಪ್ರೌಢಾವಸ್ಥೆಗೆ ತಲಪಿರದ ಎಳೆಯರಿಗೆ ಲಭ್ಯವಿರುವ ಸಂಗೀತವು ಅತಿ ತಲ್ಲಣಗೊಳಿಸುವಂತಹದ್ದಾಗಿದ್ದು, ಅದರಲ್ಲಿ ಹೆಚ್ಚಿನಾಂಶವು ನೈತಿಕ ವಿಷಯಗಳಲ್ಲಿ ರೂಢಿಯ ನಂಬಿಕೆಗಳನ್ನೆಲ್ಲ ಸಂಪೂರ್ಣವಾಗಿ ತಿರಸ್ಕರಿಸುವಂತಹದ್ದಾಗಿದೆ,” ಎಂದು ಸೆಂಟ್ ಲೂಯಿಸ್ ಪೋಸ್ಟ್-ಡಿಸ್‌ಪ್ಯಾಚ್ ವರದಿಸುತ್ತದೆ. “ಕೆಲವು ತರುಣತರುಣಿಯರಿಗೆ ಆಕರ್ಷಕವಾಗಿರುವ [ಸಂಗೀತವು], ಕೋಪ ಮತ್ತು ಆಶಾಹೀನತೆಯಿಂದ ತುಂಬಿದೆ ಮತ್ತು ಲೋಕವು ಹಾಗೂ ಕೇಳುಗನು ವೈಯಕ್ತಿಕವಾಗಿ ನಾಶಕ್ಕೆ ಗುರಿಯಾಗಿದ್ದಾರೆ ಎಂಬ ಅನಿಸಿಕೆಗಳನ್ನು ಉತ್ತೇಜಿಸುತ್ತದೆ.”
ಡೆತ್ ಮೆಟಲ್, “ಗ್ರಂಜ್” ರಾಕ್, ಮತ್ತು “ಗ್ಯಾಂಗ್‌ಸ್ಟ” ರ್ಯಾಪ್, ಹಿಂಸಾಚಾರದಲ್ಲಿ ಸುಖಾನುಭವಿಸುವಂತೆ ತೋರುತ್ತದೆ. ಮತ್ತು ಸ್ಯಾನ್ ಫ್ರ್ಯಾನ್‌ಸಿಸ್ಕೊ ಕ್ರಾನಿಕಲ್‌ನ ಒಂದು ವರದಿಗನುಸಾರ, “ಮನೋರಂಜನೆ ಉದ್ಯಮಕ್ಕೆ ಸೇರಿದ ಅನೇಕರು ಮುನ್‌ಸೂಚಿಸುವುದೇನೆಂದರೆ, ಅತ್ಯಂತ ಭಯಹುಟ್ಟಿಸುವ ಗುಂಪುಗಳು ಅಗ್ರಸ್ಥಾನಕ್ಕೇರುವ ಮಾರ್ಗದಲ್ಲಿವೆ.” ಕೋಪ ಮತ್ತು ಮರಣದ ಸ್ತುತಿಗೀತೆಗಳು ಈಗ ಆಸ್ಟ್ರೇಲಿಯ, ಜಪಾನ್ ಮತ್ತು ಯೂರೋಪ್‌ನಲ್ಲಿ ಜನಪ್ರಿಯವಾಗಿವೆ. ನಿಜ, ಕೆಲವು ತಂಡಗಳು ಹೆಚ್ಚು ಒಳ್ಳೆಯ ಸಂದೇಶವನ್ನು ಆಯ್ದುಕೊಳ್ಳಲು ಪ್ರಯತ್ನಿಸಿವೆ. ಆದರೂ, ಕ್ರಾನಿಕಲ್ ಗಮನಿಸುವುದು: “ಮುಗ್ಧ ಸಂಗೀತಕ್ಕೆ ಹೆಚ್ಚಿನ ಬೇಡಿಕೆ ಇರುವುದಿಲ್ಲವೆಂದು ಪ್ರಮಾಣವು ಸೂಚಿಸುತ್ತದೆ.”
ಕಂಪ್ಯೂಟರ್‌ಗಳು. ಇವು ಅನೇಕ ಸಕಾರಾತ್ಮಕ ಉಪಯೋಗಗಳಿರುವ ಅಮೂಲ್ಯವಾದ ಸಾಧನಗಳು. ಆದರೂ, ಅವುಗಳು ಸಹ ಅಶ್ಲೀಲ ವಿಷಯವನ್ನು ಹಂಚಲು ಕೆಲವರಿಂದ ಉಪಯೋಗಿಸಲ್ಪಟ್ಟಿವೆ. ಉದಾಹರಣೆಗೆ, ಮ್ಯಾಕ್ಲೀನ್ಸ್ ಪತ್ರಿಕೆಯು ವರದಿಸುವುದೇನೆಂದರೆ, ಇದು “ವಿಚಿತ್ರವಾದ ಕಾಮೋದ್ದೀಪಕಗಳಿಂದ ವೇಶ್ಯಾವಾಟಿಕೆಯಿಂದ ಮಕ್ಕಳಕಾಮದ ವರೆಗೆ, ಸಕಲ ವಿಷಯದ ಕುರಿತಾದ ಚಿತ್ರಗಳು ಮತ್ತು ಉಲ್ಲೇಖವನ್ನು—ಅವರ ಮಕ್ಕಳ ಮಾತಿರಲಿ ಅನೇಕ ವಯಸ್ಕರನ್ನೇ ತಲ್ಲಣಗೊಳಿಸುವಂತಹ ವಿಷಯವನ್ನು”—ಒಳಗೊಳ್ಳುತ್ತದೆ.
ಓದುವ ವಿಷಯ. ಅನೇಕ ಜನಪ್ರಿಯ ಪುಸ್ತಕಗಳು ಲೈಂಗಿಕತೆ ಮತ್ತು ಹಿಂಸಾಚಾರದಿಂದ ತುಂಬಿತುಳುಕುತ್ತಿವೆ. ಅಮೆರಿಕ ಮತ್ತು ಕೆನಡದಲ್ಲಿನ ಇತ್ತೀಚಿನ ಗೀಳು, “ತಲ್ಲಣಿಸುವ ಕಲ್ಪನಾ ಕಥೆ”—ಎಂಟು ವರ್ಷ ಪ್ರಾಯದಷ್ಟು ಎಳೆಯ ಯುವ ಜನರನ್ನು ಗುರಿಯನ್ನಾಗಿ ಮಾಡುವ ಭಯಂಕರವಾದ ಭೀತಿಯ ಕಥೆಗಳು—ಎಂಬುದಾಗಿ ಕರೆಯಲ್ಪಟ್ಟಿದೆ. ನ್ಯೂ ಯಾರ್ಕ್ ಶಿಕ್ಷಕ (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿ ಬರೆಯುತ್ತಾ, ಡೈಅನಾ ವೆಸ್ಟ್ ಪ್ರತಿಪಾದಿಸುವುದೇನೆಂದರೆ, ಈ ಪುಸ್ತಕಗಳು “ಬಹಳಷ್ಟು ಎಳೆಯ ಮಕ್ಕಳನ್ನು ವಿಸಂವೇದಿಸುತ್ತಾ, ಮಾನಸಿಕ ಸಾಮರ್ಥ್ಯವು ಆರಂಭವಾಗುವ ಮೊದಲೇ ಅದನ್ನು ಕುಂಠಿತಗೊಳಿಸು”ತ್ತಿವೆ.
ಅಮೆರಿಕ, ಜಪಾನ್, ಮತ್ತು ಹಾಂಗ್ ಕಾಂಗ್‌ನಲ್ಲಿ ಪ್ರಕಾಶಿಸಲ್ಪಟ್ಟ ಅನೇಕ ಕಾಮಿಕ್ ಪುಸ್ತಕಗಳು, “ತೀವ್ರ ಹಾಗೂ ಕ್ರೂರವಾದ ಯುದ್ಧದ ಮುಖ್ಯ ವಿಷಯಗಳು, ನರಭಕ್ಷಣೆ, ಶಿರಚ್ಛೇದನ, ಸೈತಾನವಾದ, ಬಲಾತ್ಕಾರ ಸಂಭೋಗ, ಮತ್ತು ಹೊಲಸು ನುಡಿಯನ್ನು” ಪ್ರದರ್ಶಿಸುತ್ತವೆ ಎಂದು, ನ್ಯಾಷನಲ್ ಕೊಅಲಿಷನ್ ಆನ್ ಟೆಲಿವಿಷನ್ ವೈಅಲನ್ಸ್ (ಎನ್‌ಸಿಟಿವಿ) ಇಂದ ನಡೆಸಲ್ಪಟ್ಟ ಒಂದು ಅಧ್ಯಯನವು ವರದಿಸುತ್ತದೆ. “ಈ ಪತ್ರಿಕೆಗಳಲ್ಲಿರುವ ಹಿಂಸಾಚಾರದ ತೀಕ್ಷ್ಣತೆ ಮತ್ತು ಕೀಳ್ಮಟ್ಟದ ಲೈಂಗಿಕ ವಿಷಯವು ತಲ್ಲಣಗೊಳಿಸುವಂತಹದ್ದಾಗಿದೆ,” ಎಂದು ಎನ್‌ಸಿಟಿವಿಯ ಸಂಶೋಧನಾ ನಿರ್ದೇಶಕರಾದ ಡಾ. ಥಾಮಸ್ ರಾಡೆಕಿ ಹೇಳುತ್ತಾರೆ. “ನಾವು ನಮ್ಮನ್ನು ಎಷ್ಟರ ಮಟ್ಟಿಗೆ ವಿಸಂವೇದಿಗಳಾಗುವಂತೆ ಬಿಟ್ಟುಕೊಟ್ಟಿದ್ದೇವೆಂದು ಇದು ತೋರಿಸುತ್ತದೆ.”
ಎಚ್ಚರವಹಿಸುವ ಅಗತ್ಯ
ಸ್ಪಷ್ಟವಾಗಿ, ಇಂದಿನ ಲೋಕದಲ್ಲಿ ಲೈಂಗಿಕತೆ ಮತ್ತು ಹಿಂಸಾಚಾರದ ವಿಷಯದಲ್ಲಿ ಒಂದು ಆಕರ್ಷಣೆಯಿದೆ, ಮತ್ತು ಅದು ಮನೋರಂಜನೆಯ ಉದ್ಯಮದಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ. ಸನ್ನಿವೇಶವು ಕ್ರೈಸ್ತ ಅಪೊಸ್ತಲ ಪೌಲನಿಂದ ವರ್ಣಿಸಲ್ಪಟ್ಟ ಸನ್ನಿವೇಶಕ್ಕೆ ಸದೃಶವಾಗಿದೆ: “ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.” (ಎಫೆಸ 4:19) ಸಕಾರಣದಿಂದಲೇ ಇಂದು ಅನೇಕರು ಉತ್ತಮವಾದ ಯಾವುದೊ ವಿಷಯಕ್ಕಾಗಿ ಹುಡುಕುತ್ತಿದ್ದಾರೆ. ನೀವೂ ಹುಡುಕುತ್ತಿದ್ದೀರೊ? ಹಾಗಿರುವಲ್ಲಿ ಮುಂದಿನ ಲೇಖನವು ತೋರಿಸಲಿರುವಂತೆ, ಹಿತಕರವಾದ ಮನೋರಂಜನೆಯನ್ನು ನೀವು ಕಂಡುಕೊಳ್ಳಸಾಧ್ಯವೆಂದು ಅರಿತುಕೊಳ್ಳಲು ನೀವು ಸಂತೋಷಿಸುವಿರಿ.
[ಪುಟ 6 ರಲ್ಲಿರುವ ಚೌಕ/ಚಿತ್ರಗಳು]
ಟೆಲಿವಿಷನ್ ಅಪಾಯಕರವಾಗಿ ಇರಸಾಧ್ಯವಿದೆ
ಅಮೆರಿಕದಲ್ಲಿ ಟೆಲಿವಿಷನ್ ಅದರ ರಂಗಪ್ರವೇಶವನ್ನು, 1939ರಲ್ಲಿ, ನ್ಯೂ ಯಾರ್ಕ್‌ನಲ್ಲಿ ನಡೆದ ಲೋಕ ಪ್ರದರ್ಶನದಲ್ಲಿ ಮಾಡಿತು. ಅಲ್ಲಿ ಉಪಸ್ಥಿತನಿದ್ದ ಒಬ್ಬ ಪತ್ರಕರ್ತನು, ಈ ಹೊಸ ಕಲ್ಪನೆಯ ಭವಿಷ್ಯತ್ತಿನ ಕುರಿತಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದನು. ಅವನು ಬರೆದುದು: “ಟೆಲಿವಿಷನ್‌ನೊಂದಿಗಿರುವ ಸಮಸ್ಯೆಯೇನೆಂದರೆ, ಜನರು ಕುಳಿತುಕೊಂಡು, ತಮ್ಮ ಕಣ್ಣುಗಳನ್ನು ಪರದೆಯ ಮೇಲೆ ನೆಟ್ಟಿರಬೇಕು; ಅಮೆರಿಕದ ಒಂದು ಸಾಮಾನ್ಯ ಕುಟುಂಬಕ್ಕೆ ಅದಕ್ಕಾಗಿ ಸಮಯವಿಲ್ಲ.”
ಅವನ ಅಭಿಪ್ರಾಯವು ಎಷ್ಟೊಂದು ತಪ್ಪಾಗಿತ್ತು! ವಾಸ್ತವದಲ್ಲಿ, ಒಬ್ಬ ಸಾಮಾನ್ಯ ಅಮೆರಿಕನ್ ಹುಡುಗನು ಶಾಲೆಯಿಂದ ಪದವಿಪಡೆಯುವ ಸಮಯದೊಳಗೆ, ಅವನು ಶಾಲೆಯ ತರಗತಿಕೋಣೆಯಲ್ಲಿ ಕಳೆದಂತಹ ಸಮಯಕ್ಕಿಂತಲೂ 50 ಪ್ರತಿಶತ ಹೆಚ್ಚಿನ ಸಮಯವನ್ನು ಒಂದು ಟಿವಿಯ ಮುಂದೆ ಕಳೆದಿರುತ್ತಾನೆ ಎಂಬುದಾಗಿ ಹೇಳಲಾಗಿದೆ. “ಟೆಲಿವಿಷನ್‌ನ ಭಾರಿ ವೀಕ್ಷಕರಾಗಿರುವ ಮಕ್ಕಳು, ಹೆಚ್ಚು ಆಕ್ರಮಣಶೀಲರು, ಹೆಚ್ಚು ನಿರಾಶಾವಾದಿಗಳು, ಹೆಚ್ಚು ತೂಕವುಳ್ಳವರು, ಕಡಮೆ ಊಹಾತ್ಮಕರು, ಕಡಮೆ ಸಹಾನುಭೂತಿಯುಳ್ಳವರು, ಮತ್ತು ಟಿವಿಯನ್ನು ಹೆಚ್ಚುಕಾಲ ವೀಕ್ಷಿಸದ ವಿದ್ಯಾರ್ಥಿಗಳಿಗೆ ಹೋಲಿಸುವಾಗ ಕಡಮೆ ಸಾಮರ್ಥ್ಯವುಳ್ಳವರಾಗಿರುತ್ತಾರೆ,” ಎಂಬುದಾಗಿ ಹಿಂಸಾಚಾರವನ್ನು ವೀಕ್ಷಿಸುವುದು (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಡಾ. ಮ್ಯಾಡಲೆನ್ ಲೆವೈನ್ ಪ್ರತಿಪಾದಿಸುತ್ತಾರೆ.
ಆಕೆಯ ಬುದ್ಧಿವಾದವೇನಾಗಿದೆ? “ಟೆಲಿವಿಷನ್‌ಗೆ, ಮನೆಯಲ್ಲಿರುವ ಇತರ ಸಾಧನಗಳಂತೆಯೇ ಒಂದು ನಿರ್ದಿಷ್ಟ ಕಾರ್ಯವಿದೆ ಎಂಬುದಾಗಿ ಮಕ್ಕಳಿಗೆ ಕಲಿಸುವ ಅಗತ್ಯವಿದೆ. ನಮ್ಮ ಕೂದಲು ಒಣಗಿದ ಅನಂತರ ನಾವು ಕೂದಲನ್ನು ಒಣಗಿಸುವ ಯಂತ್ರವನ್ನು ಇಲ್ಲವೆ ರೊಟ್ಟಿಯು ಸುಟ್ಟ ಬಳಿಕ ಟೋಸ್ಟರನ್ನು ಆಫ್‌ಮಾಡದೆ ಇರುವುದಿಲ್ಲ. ಈ ಸಾಧನಗಳ ನಿರ್ದಿಷ್ಟ ಉಪಯೋಗಗಳನ್ನು ನಾವು ಗ್ರಹಿಸುತ್ತೇವೆ ಮತ್ತು ಅವುಗಳನ್ನು ಯಾವಾಗ ಆಫ್‌ಮಾಡಬೇಕೆಂದು ನಮಗೆ ಗೊತ್ತಿದೆ. ಟೆಲಿವಿಷನ್‌ನ ವಿಷಯವಾಗಿ ನಮ್ಮ ಮಕ್ಕಳು ತದ್ರೀತಿಯಲ್ಲಿ ಬೋಧಿಸಲ್ಪಡುವುದು ಅಗತ್ಯ.”
[Box/Pictures on page 7]
ಲೋಕದಾದ್ಯಂತವಿರುವ ಮನೋರಂಜನೆ
ಎಚ್ಚರ! ಪತ್ರಿಕೆಯು ಲೋಕದ ವಿಭಿನ್ನ ಭಾಗಗಳಲ್ಲಿರುವ ತನ್ನ ಸುದ್ದಿಗಾರರನ್ನು, ತಮ್ಮ ಪ್ರದೇಶದಲ್ಲಿರುವ ಮನೋರಂಜನೆಯಲ್ಲಿನ ಪ್ರವೃತ್ತಿಗಳನ್ನು ವರ್ಣಿಸುವಂತೆ ಕೇಳಿಕೊಂಡಿತು. ಕೆಳಗಿನ ವಿಷಯಗಳು ಅವರ ಹೇಳಿಕೆಗಳಲ್ಲಿ ಕೆಲವಾಗಿವೆ.
ಬ್ರೆಸಿಲ್: “ಟಿವಿ ಕಾರ್ಯಕ್ರಮಗಳು ಹೆಚ್ಚೆಚ್ಚು ಕೀಳ್ಮಟ್ಟದವುಗಳಾಗಿ ಪರಿಣಮಿಸಿವೆ. ಆದರೂ, ಅನೇಕ ಹೆತ್ತವರು ಮನೆಯ ಹೊರಗೆ ಕೆಲಸಮಾಡುವುದರಿಂದ, ಟಿವಿಯ ಸಹಾಯದಿಂದ ಸ್ವತಃ ತಮ್ಮ ಮನೋರಂಜನೆ ಪಡೆದುಕೊಳ್ಳುವಂತೆ ಮಕ್ಕಳು ಅನೇಕವೇಳೆ ಬಿಡಲ್ಪಡುತ್ತಾರೆ. ರಹಸ್ಯವಾದದ ಮುಖ್ಯವಿಷಯಗಳಿರುವ ಸಿಡಿ-ರಾಮ್‌ಗಳು ಮತ್ತು ಘೋರ ಹಿಂಸಾಚಾರವನ್ನು ಪ್ರದರ್ಶಿಸುವ ವಿಡಿಯೊ ಆಟಗಳು ಜನಪ್ರಿಯವಾಗಿವೆ.”
ಚೆಕ್ ರಿಪಬ್ಲಿಕ್: “ಸಮತಾವಾದದ ಪತನದ ಸಮಯದಿಂದ, ಪಾಶ್ಚಾತ್ಯದಿಂದ ಬರುವ ಟಿವಿ ಕಾರ್ಯಕ್ರಮಗಳು ಮತ್ತು ಲಂಪಟ ಸಾಹಿತ್ಯದ ಅಂಗಡಿಗಳನ್ನು ಸೇರಿಸಿ, ದೇಶವು ಇಲ್ಲಿ ಈ ಹಿಂದೆ ಎಂದೂ ಕಾಣದ ಮನೋರಂಜನೆಯಿಂದ ಮುಳುಗಿಸಲ್ಪಟ್ಟಿದೆ. ಯುವ ಜನರು ಡಿಸ್ಕೊಗಳಿಗೆ, ಬಿಲ್ಯರ್ಡ್ ಕ್ಲಬ್‌ಗಳಿಗೆ ಮತ್ತು ಮದ್ಯದಂಗಡಿಗಳಿಗೆ ಆಗಿಂದಾಗ್ಗೆ ಹೋಗುತ್ತಿರುತ್ತಾರೆ. ಅತಿಯಾದ ಪ್ರಚಾರ ಮತ್ತು ಸಮಾನಸ್ಥರ ಒತ್ತಡವು ಅನೇಕವೇಳೆ ಅವರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ.”
ಜರ್ಮನಿ: “ಅಸಂತೋಷಕರವಾಗಿ, ಅನೇಕ ಹೆತ್ತವರು ತಮ್ಮ ಮಕ್ಕಳಿಗಾಗಿ ಮನೋರಂಜನೆಯನ್ನು ಏರ್ಪಡಿಸಲು ತೀರ ದಣಿದಿರುತ್ತಾರೆ, ಆದುದರಿಂದ ಸುಸಮಯವನ್ನು ಅನುಭವಿಸಲು ಯುವ ಜನರು ಅನೇಕವೇಳೆ ಒಬ್ಬರ ಮೇಲೆ ಒಬ್ಬರು ಅವಲಂಬಿಸುತ್ತಾರೆ. ಕೆಲವರು ಕಂಪ್ಯೂಟರ್ ಆಟಗಳ ಕಾರಣ ತಮ್ಮನ್ನು ಬೇರ್ಪಡಿಸಿಕೊಳ್ಳುತ್ತಾರೆ. ಇತರರು, ರೇವ್ಸ್ ಎಂಬುದಾಗಿ ಕರೆಯಲ್ಪಡುವ ಇಡೀ ರಾತ್ರಿಯ ನೃತ್ಯ ಅವಧಿಗಳಿಗೆ ಹಾಜರಾಗುತ್ತಾರೆ, ಅಲ್ಲಿ ಅಮಲೌಷಧಗಳು ಹೇರಳವಾಗಿ ಸಿಗುತ್ತವೆ.”
ಜಪಾನ್: “ಕಾಮಿಕ್ ಪುಸ್ತಕಗಳು ಯುವ ಜನರಿಗೆ ಹಾಗೂ ವಯಸ್ಕರಿಗೆ ಒಂದು ಅಚ್ಚುಮೆಚ್ಚಿನ ಕಾಲಕ್ಷೇಪವಾಗಿವೆ. ಆದರೆ ಅನೇಕವೇಳೆ ಇವು ಹಿಂಸಾಚಾರ, ಅನೈತಿಕತೆ, ಮತ್ತು ದುರ್ಭಾಷೆಯಿಂದ ತುಂಬಿರುತ್ತವೆ. ಜೂಜಾಟವೂ ಸಾಮಾನ್ಯವಾಗಿದೆ. ಕ್ಷೋಭೆಗೊಳಿಸುವ ಮತ್ತೊಂದು ಪ್ರವೃತ್ತಿ ಯಾವುದೆಂದರೆ, ಅನೈತಿಕ ಉದ್ದೇಶಗಳುಳ್ಳ ಪುರುಷರಿಗೆ ನೆರವು ನೀಡಲಿಕ್ಕಾಗಿ ವ್ಯಾಪಕವಾಗಿ ಪ್ರಚಾರಮಾಡಲ್ಪಟ್ಟ ಟೆಲಿಫೋನ್ ಕ್ಲಬ್‌ಗಳಿಗೆ ಕೆಲವು ಯುವತಿಯರು ಟೆಲಿಫೋನ್ ಮಾಡುತ್ತಿದ್ದಾರೆ. ಕೆಲವರು ಕೇವಲ ವಿನೋದಕ್ಕಾಗಿ ಟೆಲಿಫೋನ್ ಮಾಡುತ್ತಾರಾದರೂ, ಇತರರು ಹಣಕ್ಕಾಗಿ ಡೇಟಿಂಗ್‌ಮಾಡುವ ಮಟ್ಟಿಗೂ ಹೋಗುತ್ತಾರೆ, ಇದು ಕೆಲವು ವಿದ್ಯಮಾನಗಳಲ್ಲಿ ವೇಶ್ಯಾವಾಟಿಕೆಗೆ ನಡೆಸುತ್ತದೆ.”
ನೈಜೀರಿಯ: “ವಿಧಿಬದ್ಧಗೊಳಿಸಲ್ಪಡದ ವಿಡಿಯೊ ಮಂದಿರಗಳು ಪಶ್ಚಿಮ ಆಫ್ರಿಕದ ಉದ್ದಕ್ಕೂ ಹರಡುತ್ತಿವೆ. ಈ ತಾತ್ಕಾಲಿಕ ಗುಡಾರಗಳು—ಮಕ್ಕಳನ್ನು ಸೇರಿಸಿ—ಯಾವುದೇ ವಯಸ್ಸಿನ ಜನರಿಗೆ ತೆರೆದಿರುತ್ತವೆ. ಲಂಪಟ ಸಾಹಿತ್ಯ ಮತ್ತು ಘೋರ ವಿಡಿಯೊಗಳು ಕ್ರಮವಾಗಿ ಪ್ರದರ್ಶಿಸಲ್ಪಡುತ್ತವೆ. ಇದಕ್ಕೆ ಕೂಡಿಸಿ, ಟಿವಿಯಲ್ಲಿ ಪ್ರಸಾರಮಾಡಲ್ಪಡುವ ಸ್ಥಳೀಯವಾಗಿ ಉತ್ಪಾದಿಸಲ್ಪಟ್ಟ ಚಲನ ಚಿತ್ರಗಳು, ಪ್ರೇತವ್ಯವಹಾರವಾದವನ್ನು ಸಾಮಾನ್ಯವಾಗಿ ಪ್ರದರ್ಶಿಸುತ್ತವೆ.”
ದಕ್ಷಿಣ ಆಫ್ರಿಕ: “ರೇವ್ಸ್ ಇಲ್ಲಿ ವೃದ್ಧಿಯಾಗುತ್ತಿವೆ ಮತ್ತು ಅನೇಕವೇಳೆ ಆ ಸ್ಥಳಗಳಲ್ಲಿ ಅಮಲೌಷಧಗಳು ಸುಲಭವಾಗಿ ದೊರೆಯುತ್ತವೆ.”
ಸ್ವೀಡನ್: “ಸ್ವೀಡನ್‌ನಲ್ಲಿ ಮದ್ಯದಂಗಡಿಗಳು ಮತ್ತು ನೈಟ್‌ಕ್ಲಬ್‌ಗಳು ಯಶಸ್ವಿಕರವಾಗಿವೆ, ಮತ್ತು ಅನೇಕವೇಳೆ ಇಂತಹ ಸ್ಥಳಗಳಿಗೆ ಅಪರಾಧಿಗಳು ಮತ್ತು ಅಮಲೌಷಧ ವ್ಯಾಪಾರಿಗಳು ಹಿಂಡುಹಿಂಡಾಗಿ ಬರುತ್ತಾರೆ. ಟೆಲಿವಿಷನ್ ಮತ್ತು ವಿಡಿಯೊ ಮನೋರಂಜನೆಯು, ಹಿಂಸಾಚಾರ, ಪ್ರೇತವ್ಯವಹಾರವಾದ ಮತ್ತು ಅನೈತಿಕತೆಯಿಂದ ತುಂಬಿದೆ.”