ಅವರು ಅದನ್ನು ಮನೋರಂಜನೆಯೆಂದು ಕರೆದರು
ಅಖಾಡವು ಕೋಲಾಹಲದಿಂದ ತುಂಬಿತ್ತು. ಹತ್ತಾರು ಸಾವಿರ ಜನರು, ಪ್ರಾಚೀನ ರೋಮಿನ ಅತ್ಯಂತ ರೋಮಾಂಚಕಾರಿ ದೃಶ್ಯಗಳಲ್ಲೊಂದಕ್ಕಾಗಿ ಒಟ್ಟುಸೇರಿದ್ದರು. ಬಾವುಟಗಳು, ಗುಲಾಬಿಗಳು, ಮತ್ತು ಬಣ್ಣದ ತೆರೆಬಟ್ಟೆಗಳು ಕಣವನ್ನು ಬೆಡಗಿನಿಂದ ಅಲಂಕರಿಸಿದವು. ನೀರಿನ ಬುಗ್ಗೆಗಳು ಸುಗಂಧಿತ ನೀರನ್ನು ಚಿಮ್ಮಿ, ಗಾಳಿಯಲ್ಲಿ ಮನೋಹರವಾದ ಪರಿಮಳಗಳನ್ನು ಸೇರಿಸಿದವು. ಧನವಂತರು ತಮ್ಮ ಅತ್ಯಂತ ಪ್ರಕಾಶಮಾನವಾದ ಉಡುಗೆತೊಡುಗೆಯಲ್ಲಿ ಅಲಂಕೃತರಾಗಿದ್ದರು. ಗುಂಪಿನ ಹರಟೆಯ ಮಧ್ಯೆ ಆಗಾಗ ನಗುವಿನ ಅಟ್ಟಹಾಸಗಳು ಕೇಳಿಬಂದವಾದರೂ, ಈ ಸಮೂಹದ ಹುಡುಗಾಟಿಕೆಯು ಅಷ್ಟರಲ್ಲೇ ಸಂಭವಿಸಲಿದ್ದ ಭೀತಿಯನ್ನು ಸುಳ್ಳಾಗಿಸಿತು.
ಬೇಗನೆ, ಟೂಬೈಗಳ ಅನಿಷ್ಟಕರ ಘೋಷವು, ಕಾದಾಟಕ್ಕಾಗಿ ಒಂದು ಜೋಡಿ ಕತ್ತಿಮಲ್ಲರನ್ನು ಆಹ್ವಾನಿಸಿತು. ಸ್ಪರ್ಧಿಗಳು ಕರುಣಾರಹಿತ ಕ್ರೌರ್ಯದಿಂದ ಒಬ್ಬರನ್ನೊಬ್ಬರು ಸೀಳಿಕೊಳ್ಳಲು ಆರಂಭಿಸಿದಾಗ, ಗುಂಪು ಉನ್ಮಾದಗೊಂಡಿತು. ಪ್ರೇಕ್ಷಕರ ಕಿವುಡುಗೊಳಿಸುವ ಜಯಕಾರಗಳ ನಡುವೆ ಕತ್ತಿಗಳ ದೊಡ್ಡ ಶಬ್ದವನ್ನು ಕೇಳಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಹಠಾತ್ತನೆ, ಕ್ಷಿಪ್ರವಾದ ಕೈಚಳಕದಿಂದ ಒಬ್ಬ ಮಲ್ಲನು ತನ್ನ ವಿರೋಧಿಯನ್ನು ನೆಲಕ್ಕುರುಳಿಸಿದನು. ಹೊಡೆದು ಉರುಳಿಸಲ್ಪಟ್ಟ ಮಲ್ಲನ ಅದೃಷ್ಟವು ಈಗ ಪ್ರೇಕ್ಷಕರ ಕೈಗಳಲ್ಲಿತ್ತು. ಅವರು ತಮ್ಮ ಕರವಸ್ತ್ರಗಳನ್ನು ಬೀಸುವುದಾದರೆ, ಅವನು ಬದುಕುವನು. ತಮ್ಮ ಹೆಬ್ಬೆರಳುಗಳ ಒಂದೇ ಒಂದು ಸನ್ನೆಯಿಂದ, ಆ ಗುಂಪು—ಹೆಂಗಸರು ಮತ್ತು ಹುಡುಗಿಯರನ್ನೂ ಸೇರಿಸಿ—ಮರಣದ ಏಟನ್ನು ವಿಧಿಸಿತು. ಕೆಲವೇ ಕ್ಷಣಗಳೊಳಗೆ, ಆ ಜೀವರಹಿತ ದೇಹವನ್ನು ಕಣದಿಂದ ಎಳೆದುಕೊಂಡು ಹೋಗಲಾಯಿತು, ರಕ್ತದಿಂದ ತೊಯ್ದ ಮಣ್ಣನ್ನು ಮೊರಗುದ್ದಲಿಗಳಿಂದ ಉಳುಮೆಮಾಡಲಾಯಿತು, ಹೊಸ ಮರಳನ್ನು ಚೆದರಿಸಲಾಯಿತು, ಮತ್ತು ಗುಂಪು ಉಳಿದ ರಕ್ತಪಾತಕ್ಕಾಗಿ ತನ್ನನ್ನು ಅಣಿಮಾಡಿಕೊಂಡಿತು.
ಪ್ರಾಚೀನ ರೋಮಿನಲ್ಲಿ ಜೀವಿಸುತ್ತಿದ್ದ ಅನೇಕರಿಗೆ ಅದು ಮನೋರಂಜನೆಯಾಗಿತ್ತು. “ಅತಿ ಕಟ್ಟುನಿಟ್ಟಿನ ನೀತಿಜ್ಞರು ಕೂಡ, ರಕ್ತಪಾತದಲ್ಲಿನ ಈ ಹರ್ಷಕ್ಕೆ ಯಾವ ಆಕ್ಷೇಪವನ್ನೂ ಎತ್ತಲಿಲ್ಲ,” ಎಂಬುದಾಗಿ ರೋಮ್: ಮೊದಲ ಸಾವಿರ ವರುಷಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. ಮತ್ತು ಕದನರೂಪದ ಆ ಆಟವು, ರೋಮ್ ನೀಡಿದಂತಹ ಕೆಳಮಟ್ಟದ ಮನೋರಂಜನೆಯಲ್ಲಿ ಕೇವಲ ಒಂದು ಪ್ರಕಾರದ್ದಾಗಿತ್ತು. ರಕ್ತಪಿಪಾಸೆಯಿಂದ ಕೂಡಿದ ಪ್ರೇಕ್ಷಕರ ವಿನೋದಕ್ಕಾಗಿ, ನಿಜ ಜೀವನದ ನೌಕಾ ಕದನಗಳೂ ಪ್ರಸ್ತುತಗೊಳಿಸಲ್ಪಟ್ಟವು. ಸಾರ್ವಜನಿಕ ಮರಣದಂಡನೆಗಳು ಸಹ ಜಾರಿಗೊಳಿಸಲ್ಪಟ್ಟವು. ಅಲ್ಲಿ ಖಂಡಿಸಲ್ಪಟ್ಟ ಅಪರಾಧಿಯು ಒಂದು ಗೂಟಕ್ಕೆ ಕಟ್ಟಲ್ಪಟ್ಟು, ಹಸಿದು ಕಂಗಾಲಾಗಿರುವ ಕಾಡು ಪ್ರಾಣಿಗಳಿಂದ ಕಬಳಿಸಲ್ಪಡುತ್ತಿದ್ದನು.
ಯಾರ ಅಭಿರುಚಿಗಳು ರಕ್ತಮಯವಾಗಿರಲಿಲ್ಲವೊ ಅವರಿಗಾಗಿ ರೋಮ್, ಬಗೆಬಗೆಯ ನಾಟಕಗಳನ್ನು ಪ್ರಸ್ತುತಪಡಿಸಿತು. ಅಣಕ ನಾಟಕ—ಅನುದಿನದ ಜೀವಿತದ ಕುರಿತಾದ ಲಘು ನಾಟಕ—ಗಳಲ್ಲಿ, “ವ್ಯಭಿಚಾರ ಮತ್ತು ಪ್ರಣಯ ಪ್ರಸಂಗಗಳು ಪ್ರಧಾನ ವಿಷಯಗಳಾಗಿದ್ದವು” ಎಂಬುದಾಗಿ ಆದಿ ಸಾಮ್ರಾಜ್ಯದಲ್ಲಿ ರೋಮನ್ ಜೀವನ ಮತ್ತು ಶಿಷ್ಟಾಚಾರಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಲೂಟ್ವಿಕ್ ಫ್ರೀಡ್ಲೆಂಡರ್ ಬರೆದರು. “ಆ ಭಾಷೆಯು ಅಸಭ್ಯ ಅಭಿವ್ಯಕ್ತಿಗಳಿಂದ ತುಂಬಿತ್ತು, ಮತ್ತು ವಿನೋದವು ಒರಟಾಗಿತ್ತು. ಅದರಲ್ಲಿ ಹುಸಿ ಮುಖಭಾವಗಳು, ಅಶ್ಲೀಲ ಭಾವಾಭಿನಯಗಳು, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕೊಳಲಿನ ನಾದಕ್ಕೆ ವಿಕೃತವಾದ ನೃತ್ಯಗಳು ಸಮೃದ್ಧವಾಗಿದ್ದವು.” ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕಕ್ಕನುಸಾರ, “ರೋಮನ್ ಸಾಮ್ರಾಜ್ಯದಲ್ಲಿ, ಅಣಕ ನಾಟಕದ ವೇದಿಕೆಯ ಮೇಲೆ ವ್ಯಭಿಚಾರದ ಕೃತ್ಯಗಳು ವಾಸ್ತವವಾಗಿ ಅಭಿನಯಿಸಲ್ಪಟ್ಟವು ಎಂಬುದಕ್ಕೆ ಪ್ರಮಾಣವು ಅಸ್ತಿತ್ವದಲ್ಲಿದೆ.” ಸಕಾರಣದಿಂದಲೇ ಫ್ರೀಡ್ಲೆಂಡರ್ ಅಣಕ ನಾಟಕವನ್ನು, “ಅನೈತಿಕತೆ ಮತ್ತು ಅಶ್ಲೀಲತೆಯ ನಗೆನಾಟಕಗಳಲ್ಲಿ ಅತಿ ವ್ಯಕ್ತವಾದ ನೀತಿಗೆಟ್ಟ ವಿಷಯ”ವೆಂದು ಕರೆದರು. ಮತ್ತು ಅವರು ಕೂಡಿಸಿದ್ದು: “ಅತ್ಯಂತ ಕಾಮುಕವಾದ ದೃಶ್ಯಗಳೇ ಅತಿಯಾಗಿ ಶ್ಲಾಘಿಸಲ್ಪಟ್ಟವು.”a
ಇಂದಿನ ವಿಷಯವಾಗಿ ಏನು? ಮನೋರಂಜನೆಯ ವಿಷಯದಲ್ಲಿ ಮನುಷ್ಯನ ಅಭಿರುಚಿಯು ಬದಲಾಗಿದೆಯೊ? ಮುಂದಿನ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ಪ್ರಮಾಣವನ್ನು ಪರಿಗಣಿಸಿರಿ.
[ಅಧ್ಯಯನ ಪ್ರಶ್ನೆಗಳು]
a ಕೆಲವೊಮ್ಮೆ, ಒಂದು ನಾಟಕೀಯ ಉತ್ಪಾದನೆಗೆ ವಾಸ್ತವಿಕತೆಯನ್ನು ನೀಡಲು, ವೇದಿಕೆಯ ಮೇಲೆ ಮರಣದಂಡನೆಯನ್ನು ಜಾರಿಗೊಳಿಸಲಾಗುತ್ತಿತ್ತು. ರೋಮ್ನ ನಾಗರಿಕತೆ (ಇಂಗ್ಲಿಷ್) ಎಂಬ ಪುಸ್ತಕವು ಗಮನಿಸುವುದು: “ನಾಟಕ ನಿರ್ವಹಣೆಯ ಕೊನೆಯ ಗಳಿಗೆಯಲ್ಲಿ, ಮರಣದಂಡನೆ ವಿಧಿಸಲ್ಪಟ್ಟ ಒಬ್ಬ ಅಪರಾಧಿಯು, ನಟನ ಸ್ಥಾನವನ್ನು ತೆಗೆದುಕೊಳ್ಳುವ ಸಂಗತಿಯು ಅಸಾಮಾನ್ಯವಾಗಿರಲಿಲ್ಲ.”
[ಪುಟ 4 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/J. G. Heck