ಯುವ ಜನರು ಪ್ರಶ್ನಿಸುವುದು . . .
ನಾನೇಕೆ ಇಷ್ಟು ಅಸ್ವಸ್ಥನಾಗಿರಬೇಕು?
ಜೇಸನ್ 13 ವರ್ಷ ಪ್ರಾಯದವನಾಗಿದ್ದಾಗ, ತಾನು ಭವಿಷ್ಯತ್ತಿನಲ್ಲಿ ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯದ ಬೆತೆಲ್ನಲ್ಲಿ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಸಲ್ಲಿಸುವ ದೃಢನಿರ್ಧಾರ ಮಾಡಿದ್ದನು. ಅವನು ತನಗಾಗಿ ಒಂದು ಮರದ ಪೆಟ್ಟಿಗೆಯನ್ನು ಮಾಡಿ, ಅದನ್ನು ತನ್ನ ಬೆತೆಲ್ ಪೆಟ್ಟಿಗೆ ಎಂದು ಹೆಸರಿಸಿದನು. ಅವನು ತನ್ನ ಬೆತೆಲ್ ಜೀವನಗತಿಯನ್ನು ಆರಂಭಿಸುವಾಗ ಉಪಯುಕ್ತವಾಗಿರುವುದೆಂದು ನೆನಸಿದ ವಿಷಯಗಳನ್ನು ಅವನು ಅದರಲ್ಲಿ ಶೇಖರಿಸತೊಡಗಿದನು.
ಆದರೆ, ತನ್ನ 18ನೆಯ ಜನ್ಮದಿನದ ಕೇವಲ ಮೂರು ತಿಂಗಳುಗಳ ನಂತರ, ಜೇಸನಿಗೆ ಕ್ರೋನ್ಸ್ ರೋಗ—ಒಂದು ತೀವ್ರವಾದ, ವೇದನಾಮಯ ಕರುಳು ಬೇನೆ—ಇದೆ ಎಂದು ರೋಗನಿರ್ಣಯ ಮಾಡಲಾಯಿತು. “ಅದು ನನ್ನನ್ನು ಧ್ವಂಸಮಾಡಿತು,” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. “ಕೆಲಸದಮೇಲಿದ್ದ ನನ್ನ ತಂದೆಗೆ ವಿಷಯವನ್ನು ತಿಳಿಸಿ, ಅಳುವುದೊಂದೇ ನಾನು ಮಾಡಸಾಧ್ಯವಿದ್ದ ಸಂಗತಿಯಾಗಿತ್ತು. ಏನೂ ಅಲ್ಲದಿದ್ದರೂ, ಬೆತೆಲಿಗೆ ಹೋಗುವ ನನ್ನ ಕನಸಿನ ಎದುರು ಒಂದು ಅಡಚಣೆ ಇತ್ತೆಂಬುದು ನನಗೆ ಗೊತ್ತಿತ್ತು.”
“ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರು”ವುದಕ್ಕೆ ಕಾಯಿಲೆಯು ಒಂದು ಮೂಲಭೂತ ಕಾರಣವಾಗಿದೆ. (ರೋಮಾಪುರ 8:22) ಅಸ್ವಸ್ಥರಲ್ಲಿ ಎಣಿಕೆಯಿಲ್ಲದ ಕೋಟಿಗಟ್ಟಲೆ ಯುವ ಜನರು ಸೇರಿದ್ದಾರೆ. ಅನೇಕ ಯುವ ಜನರು ಕಟ್ಟಕಡೆಗೆ ಗುಣಹೊಂದುತ್ತಾರೆ. ಆದರೆ ಇತರರು ಅಸ್ಥಿಗತವಾಗಿರುವ ಇಲ್ಲವೆ ಕೆಲವು ಸಂದರ್ಭಗಳಲ್ಲಿ ಜೀವಕ್ಕೆ ಬೆದರಿಕೆಯನ್ನೊಡ್ಡುವ ರೋಗಗಳೊಂದಿಗೆ ವ್ಯವಹರಿಸಬೇಕು. ಯುವ ಜನರು ಅನೇಕ ವೇಳೆ ಕಷ್ಟಾನುಭವಿಸುವ ಪಿಡುಗುಗಳಲ್ಲಿ ಉಬ್ಬಸ, ಮಧುಮೂತ್ರ ರೋಗ, ಸಿಕ್ಲ್ ಸೆಲ್ ರೋಗ, ಸಾಂಕ್ರಾಮಿಕ ಕಾಯಿಲೆಗಳು, ಮೂರ್ಛೆರೋಗ, ಮಾನಸಿಕ ಕಾಯಿಲೆ, ಮತ್ತು ಕ್ಯಾನ್ಸರ್ ರೋಗಗಳು ಸೇರಿವೆ. ಕೆಲವು ಯುವ ಜನರು ಹಲವು ರೀತಿಯ ವ್ಯಾಧಿಗಳೊಂದಿಗೆ ಜೀವಿಸುತ್ತಾರೆ.
‘ಇದು ನನಗೇಕೆ ಸಂಭವಿಸುತ್ತಿದೆ?’
ಕಾಯಿಲೆ, ಶಾರೀರಿಕ ಸಂಕಟದ ಜೊತೆಗೆ ಅನೇಕ ವೇಳೆ ಮಾನಸಿಕ ಹಾಗೂ ಭಾವಾತ್ಮಕ ಒತ್ತಡವನ್ನು ಸೃಷ್ಟಿಸುತ್ತದೆ. ದೃಷ್ಟಾಂತಕ್ಕೆ, ಅಸ್ವಸ್ಥತೆಯು ನಿಮ್ಮನ್ನು ಹಲವಾರು ತಿಂಗಳುಗಳ ವರೆಗೆ ಶಾಲೆಗೆ ಹೋಗದಿರುವಂತೆ ಮಾಡುವಲ್ಲಿ, ನೀವು ವ್ಯಾಸಂಗದ ವಿಷಯದಲ್ಲಿ ಹಿಂದೆ ಬೀಳುವಿರಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರತ್ಯೇಕಗೊಳಿಸಲ್ಪಟ್ಟಿದ್ದೀರಿ ಎಂದು ನಿಮಗನಿಸಬಹುದು. ಆಸ್ಪತ್ರೆಯಲ್ಲಿ ತನ್ನ ನಿಯತಕಾಲಿಕ ತಂಗುವಿಕೆಗಳಿಂದಾಗಿ ಶಾಲೆಯನ್ನು ತಪ್ಪಿಸಬೇಕಾದ ಸಂದರ್ಭವಿರುವಾಗ, 12 ವರ್ಷ ಪ್ರಾಯದ ಸನಿ ಚಿಂತಿಸುವುದು: ‘ನನ್ನ ಸಹಪಾಠಿಗಳು ಏನು ಮಾಡುತ್ತಿರುವರು? ಇಂದು ನನಗೆ ಯಾವ ವಿಷಯವು ತಪ್ಪಿಹೋಗುತ್ತಿದೆ?
ತದ್ರೀತಿಯಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗಲು ಇಲ್ಲವೆ ಬೈಬಲನ್ನು ಓದಲು ಸಹ ನೀವು ತೀರ ಅಸ್ವಸ್ಥರಾಗಿರುವಾಗ, ಆತ್ಮಿಕ ಬೆಳವಣಿಗೆಯು ತೊಂದರೆಯನ್ನು ಅನುಭವಿಸುತ್ತಿರುವಂತೆ ತೋರಬಲ್ಲದು. ಈ ಪರಿಸ್ಥಿತಿಗಳಲ್ಲಿ ನಿಮಗೆ ಹೆಚ್ಚಿನ ಭಾವಾತ್ಮಕ ಹಾಗೂ ಆತ್ಮಿಕ ಬೆಂಬಲದ ಅಗತ್ಯವಿದೆ. ಮೊದಲಿಗೆ, ನೀವು ರೋಗನಿರ್ಣಯವನ್ನು ನಂಬಲು ನಿರಾಕರಿಸಬಹುದು. ತದನಂತರ, ನೀವು ಹೇಗೊ ಆ ಕಾಯಿಲೆಯನ್ನು ತಡೆದಿರಸಾಧ್ಯವಿತ್ತೆಂದು ನೆನಸುತ್ತಾ, ಬಹುಶಃ ನಿಮ್ಮ ಮೇಲೆಯೇ ನಿಮಗೆ ಬಹಳ ಕೋಪಬರಬಹುದು. ‘ಇದು ನನಗೆ ಸಂಭವಿಸುವಂತೆ ದೇವರು ಏಕೆ ಅನುಮತಿಸಿದನು?’ ಎಂದು ಕೂಗಿಹೇಳುವಂತೆ ನಿಮಗೆ ಅನಿಸಬಹುದು. (ಹೋಲಿಸಿ ಮತ್ತಾಯ 27:46.) ವಾಸ್ತವವಾಗಿ, ಒಂದಿಷ್ಟು ಖಿನ್ನತೆಯನ್ನು ಅನುಭವಿಸುವುದು ಸರ್ವಸಾಮಾನ್ಯವಾಗಿದೆ.
ಇದಕ್ಕೆ ಕೂಡಿಸಿ ಯುವಕನೊಬ್ಬನು, ತಾನು ವರ್ತನೆಯಲ್ಲಿ ಹೆಚ್ಚು ಒಳ್ಳೆಯವನಾಗಿರಲು ಯಾವುದೊ ವಿಶೇಷ ಪ್ರಯತ್ನವನ್ನು ಮಾಡುವುದಾದರೆ, ದೇವರು ತನ್ನ ಕಾಯಿಲೆಯನ್ನು ಇಲ್ಲವಾಗುವಂತೆ ಮಾಡುವನೆಂದು ಸಹ ಊಹಿಸಬಹುದು. ಹಾಗಿದ್ದರೂ, ಅಂತಹ ಯೋಚನೆಯು ನಿರಾಶೆಗೆ ನಡೆಸಬಲ್ಲದು, ಏಕೆಂದರೆ ದೇವರು ಈ ಸಮಯದಲ್ಲಿ ಅದ್ಭುತಕರ ಗುಣಪಡಿಸುವಿಕೆಯನ್ನು ವಾಗ್ದಾನಿಸುವುದಿಲ್ಲ.—1 ಕೊರಿಂಥ 12:30; 13:8, 13.
ಬಹುಶಃ ನೀವು ಎಂದಿಗೂ ಸಾಯಬೇಕಾಗುವುದೇ ಇಲ್ಲವೆಂದು—ದೇವರು “ಮಹಾ ಸಂಕಟ”ವನ್ನು ತರುವ ಸಮಯದಲ್ಲಿ ನೀವು ಜೀವಂತರಾಗಿ ಇರುವಿರೆಂದು ನಿರೀಕ್ಷಿಸಿದ್ದಿರಿ. (ಪ್ರಕಟನೆ 7:14, 15; ಯೋಹಾನ 11:26) ಹಾಗಿರುವಲ್ಲಿ, ಜೀವವನ್ನು ಬೆದರಿಸುವ ಕಾಯಿಲೆ ನಿಮಗಿದೆ ಎಂದು ಅರಿತುಕೊಳ್ಳುವುದು ದ್ವಿವಿಧವಾಗಿ ತಲ್ಲಣಗೊಳಿಸುವಂತಹದ್ದಾಗಿರಬಲ್ಲದು. ಯೆಹೋವನ ಮನನೋಯಿಸುವಂತಹ ಯಾವ ವಿಷಯವನ್ನಾದರೂ ನೀವು ಮಾಡಿದ್ದೀರೊ ಎಂದು ನೀವು ಕುತೂಹಲಪಡಬಹುದು, ಇಲ್ಲವೆ ಸಮಗ್ರತೆಯ ಯಾವುದೊ ವಿಶೇಷ ಪರೀಕ್ಷೆಗೆ ದೇವರು ನಿಮ್ಮನ್ನು ಆರಿಸಿದ್ದಾನೆಂದು ನೀವು ನೆನಸಬಹುದು. ಆದರೆ, ಇವು ಯೋಗ್ಯವಾದ ತೀರ್ಮಾನಗಳಲ್ಲ. “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ [“ದುಷ್ಕೃತ್ಯಗಳಿಗೆ,” NW] ಪ್ರೇರೇಪಿಸುವದಿಲ್ಲ” ಎಂದು ದೇವರ ವಾಕ್ಯವಾದ ಬೈಬಲ್ ಹೇಳುತ್ತದೆ. (ಯಾಕೋಬ 1:13) ಅಸ್ವಸ್ಥತೆ ಮತ್ತು ಮರಣವು ಪ್ರಚಲಿತ ಮಾನವ ಪರಿಸ್ಥಿತಿಯ ಅಸಂತೋಷಕರ ಅಂಶಗಳಾಗಿವೆ, ಮತ್ತು ನಾವೆಲ್ಲರೂ “ಕಾಲ ಮತ್ತು ಮುಂಗಾಣದ ಸಂಭವಕ್ಕೆ” (NW) ಅಧೀನರಾಗಿದ್ದೇವೆ.—ಪ್ರಸಂಗಿ 9:11.
ಭಯದೊಂದಿಗೆ ನಿರ್ವಹಿಸುವುದು
ಗಂಭೀರವಾದೊಂದು ಕಾಯಿಲೆಯು ಬರುವುದು, ಪ್ರಥಮ ಬಾರಿಗೆ ಗಾಢವಾದ ಭಯದ ಅನಿಸಿಕೆ ಆಗುವಂತೆಯೂ ಮಾಡಬಹುದು. ನಿಮ್ಮ ಜೀವಕ್ಕಾಗಿ ಹೋರಾಡುವುದು ಯಾವ ಅನಿಸಿಕೆಗಳನ್ನು ಉಂಟುಮಾಡುತ್ತದೆ (ಇಂಗ್ಲಿಷ್) ಎಂಬ ಪುಸ್ತಕವು, ಗಂಭೀರವಾದ ಕಾಯಿಲೆಗಳಿರುವ 14 ಯುವ ಜನರ ಅವಲೋಕನಗಳನ್ನು ದಾಖಲುಮಾಡುತ್ತದೆ. ಉದಾಹರಣೆಗೆ, ಹತ್ತು ವರ್ಷ ಪ್ರಾಯದ ಆ್ಯಂಟಾನ್, ಒಂದು ತೀವ್ರವಾದ ಉಬ್ಬಸದ ಹೊಡೆತದಲ್ಲಿ ತಾನು ಸಾಯಲಿರುವೆನೆಂದು ಭಯಪಟ್ಟನು. ಮತ್ತು ಎಲುಬಿನ ಕ್ಯಾನ್ಸರಿನ ವಿರುದ್ಧ ಹೋರಾಡುತ್ತಿದ್ದ 16 ವರ್ಷ ಪ್ರಾಯದ ಎಲಿಸಬೆತ್, ನಿದ್ರೆಮಾಡಲು ಹೋಗಿ ಎಚ್ಚರಗೊಳ್ಳದೇ ಇರುವ ವಿಷಯವಾಗಿ ಭಯಪಟ್ಟಳು.
ಕೆಲವು ಯುವ ಜನರಿಗಾದರೊ ಬೇರೆಯೇ ರೀತಿಯ ಭಯಗಳಿರುತ್ತವೆ—ತಮ್ಮನ್ನು ಮದುವೆಯಾಗಲು ಯಾರೊಬ್ಬರೂ ಬಯಸದೆ ಇರುವ ಭಯ ಇಲ್ಲವೆ ನಂತರ ಜೀವಿತದಲ್ಲಿ ತಮಗೆ ಆರೋಗ್ಯವಂತ ಮಕ್ಕಳು ಇರಲಾರರು ಎಂಬ ಭಯ. ಇತರ ಯುವ ಜನರಿಗೆ ತಮ್ಮ ಕಾಯಿಲೆ ಸಾಂಕ್ರಾಮಿಕವಾಗಿರಲಿ ಇಲ್ಲದಿರಲಿ, ಕುಟುಂಬ ಸದಸ್ಯರಿಗೆ ತಾವು ಕಾಯಿಲೆಯನ್ನು ವರ್ಗಾಯಿಸಬಹುದೆಂಬ ಭಯವಿರುತ್ತದೆ.
ರೋಗವೊಂದು ಸಮಸ್ಥಿತಿಗೆ ಬಂದಿರುವುದಾದರೂ ಇಲ್ಲವೆ ಅದರ ಪರಿಣಾಮವು ತಗ್ಗಿರುವಲ್ಲಿಯೂ, ಯಾವುದೇ ಹೊಸ ಆಕ್ರಮಣದೊಂದಿಗೆ ಭಯಗಳು ಮೇಲೆಬರಬಲ್ಲವು. ನೀವು ಅಂತಹ ಭಯಗಳನ್ನು ಅನುಭವಿಸಿರುವಲ್ಲಿ, ಅವು ಬಹಳ ನೈಜವೆಂದು ನಿಮಗೆ ಗೊತ್ತು. ಸಂತೋಷಕರವಾಗಿ, ನಕಾರಾತ್ಮಕ ಭಾವನೆಗಳ ಪ್ರಾರಂಭದ ಹೊಯ್ದಾಟವು ಸಕಾಲದಲ್ಲಿ ಶಮನವಾಗುತ್ತದೆ. ಆಗ ನೀವು ನಿಮ್ಮ ಪರಿಸ್ಥಿತಿಗಳನ್ನು ಹೆಚ್ಚು ತರ್ಕಸಮ್ಮತವಾಗಿ ತೂಗಿನೋಡಲು ತೊಡಗಸಾಧ್ಯವಿದೆ.
ಅಸ್ವಸ್ಥರಾಗಿರುವುದರ ಪಂಥಾಹ್ವಾನ
“ನೀವು ತರುಣರಾಗಿರುವಾಗ, ನೀವು ಅಜೇಯರೆಂಬ ಅನಿಸಿಕೆ ನಿಮಗಾಗುತ್ತದೆ,” ಎಂದು ಈ ಮೊದಲು ಉಲ್ಲೇಖಿಸಲ್ಪಟ್ಟ ಜೇಸನ್ ಗಮನಿಸುತ್ತಾನೆ. “ಆಗ ಹಠಾತ್ತನೆ ಗಂಭೀರವಾಗಿ ಅಸ್ವಸ್ಥರಾಗುವುದು ನೀವು ಅಜೇಯರಲ್ಲ ಎಂಬುದನ್ನು ನಿಮಗೆ ಮನಗಾಣಿಸುತ್ತದೆ. ನೀವು ರಾತ್ರಿ ಬೆಳಗಾಗುವುದರೊಳಗೆ ವೃದ್ಧರಾಗಿದ್ದೀರಿ ಎಂದು ಭಾವಿಸುತ್ತೀರಿ ಏಕೆಂದರೆ ನೀವು ನಿಮ್ಮ ಚಟುವಟಿಕೆಯನ್ನು ಕಡಿಮೆಮಾಡಬೇಕಾಗುತ್ತದೆ.” ಹೌದು, ಹೊಸ ಪರಿಮಿತಿಗಳನ್ನು ಎದುರಿಸುವುದು ಪಂಥಾಹ್ವಾನವಾಗಿದೆ.
ಇತರರು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದಿರುವಾಗ ಮತ್ತೊಂದು ದೊಡ್ಡ ಪಂಥಾಹ್ವಾನವು ಬರುತ್ತದೆಂದು ಜೇಸನ್ ಕಂಡುಕೊಂಡನು. ಜೇಸನಿಗೆ “ಅದೃಶ್ಯ ಕಾಯಿಲೆ” ಎಂಬುದಾಗಿ ಕರೆಯಲ್ಪಡಬಹುದಾದ ಕಾಯಿಲೆಯಿದೆ. ಅವನ ಹೊರಗಣ ತೋರಿಕೆಗಳು ಒಳಗಿರುವ ಸಮಸ್ಯೆಗಳನ್ನು ಹುಸಿಮಾಡುತ್ತವೆ. “ನನ್ನ ದೇಹವು ಆಹಾರವನ್ನು ಜೀರ್ಣಿಸಬೇಕಾದ ವಿಧದಲ್ಲಿ ಜೀರ್ಣಿಸುವುದಿಲ್ಲ, ಆದುದರಿಂದ ನಾನು ಪದೇ ಪದೇ ತಿನ್ನಬೇಕು ಮತ್ತು ನಾನು ಅನೇಕರು ತಿನ್ನುವುದಕ್ಕಿಂತ ಹೆಚ್ಚಿನ ಮೊತ್ತಗಳಷ್ಟು ಆಹಾರವನ್ನು ತಿನ್ನುತ್ತೇನೆ,” ಎಂದು ಜೇಸನ್ ವಿವರಿಸುತ್ತಾನೆ. “ಆದರೂ ನಾನು ತೆಳ್ಳಗಾಗಿಯೇ ಇದ್ದೇನೆ. ಮತ್ತು ಕೆಲವೊಮ್ಮೆ ನಾನು ಎಷ್ಟು ಬಳಲಿಹೋಗುತ್ತೇನೆಂದರೆ, ನಡುಹಗಲಿನಲ್ಲಿ ನನಗೆ ಕಣ್ಣುಗಳನ್ನು ತೆರೆದಿಡಲು ಸಾಧ್ಯವಾಗುವುದಿಲ್ಲ. ಆದರೆ ಜನರು, ನಾನು ಅತಿಲೋಲುಪನು ಇಲ್ಲವೆ ಸೋಮಾರಿಯೆಂದು ನೆನಸುವಂತೆ ತೋರುವ ಹೇಳಿಕೆಗಳನ್ನು ನುಡಿಯುತ್ತಾರೆ. ಈ ರೀತಿಯ ವಿಷಯಗಳನ್ನು ಅವರು ಹೇಳುತ್ತಾರೆ: ‘ಇನ್ನು ಉತ್ತಮವಾಗಿ ನೀನು ಮಾಡಬಲ್ಲೆ ಎಂದು ನಿನಗೆ ಗೊತ್ತು. ನೀನು ಪ್ರಯತ್ನವನ್ನೂ ಮಾಡುತ್ತಿಲ್ಲ!’”
ಜೇಸನಿಗೆ ತಮ್ಮಂದಿರು ಹಾಗೂ ತಂಗಿಯರಿದ್ದಾರೆ. ಇವನು ಮೊದಲು ಮಾಡುತ್ತಿದ್ದ—ಚೆಂಡಾಟವಾಡಲು ಅವರನ್ನು ಹೊರಗೆ ಕರೆದುಕೊಂಡು ಹೋಗುವಂತಹ ವಿಷಯಗಳನ್ನು ಏಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರು ಯಾವಾಗಲೂ ಅರ್ಥಮಾಡಿಕೊಳ್ಳುವುದಿಲ್ಲ. ಜೇಸನ್ ಗಮನಿಸುವುದು: “ಆದರೆ ನಾನು ಗಾಯಗೊಂಡರೆ, ಗುಣಹೊಂದಲು ನನಗೆ ಹಲವಾರು ವಾರಗಳು ಬೇಕಾಗಬಹುದೆಂದು ನನಗೆ ಗೊತ್ತು. ಅವರು ನನ್ನ ವೇದನೆಯನ್ನು ತಮ್ಮ ವೇದನೆಗೆ ಹೋಲಿಸಿ, ‘ಕೇವಲ ಗಮನವನ್ನು ಸೆಳೆಯಲು ಇವನು ನರಳುತ್ತಿದ್ದಾನೆ’ ಎಂದು ಹೇಳುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಅವರ ಅತ್ಯಂತ ಮಹತ್ತರವಾದ ವೇದನೆಯು, ಬಹುಶಃ ಉಳುಕಿದ ಪಾದದಂತಹ ವೇದನೆಯಾಗಿದೆ. ಆದುದರಿಂದ ನನ್ನ ವೇದನೆಯು ಹೇಗಿದೆ ಎಂಬುದನ್ನು ಅವರು ಊಹಿಸಸಾಧ್ಯವಿಲ್ಲ.”
ನಿಮ್ಮ ಕಾಯಿಲೆಯು ನಿಮ್ಮ ಕುಟುಂಬದ ಮೇಲೆ ಒಂದು ಹೊರೆಯನ್ನು ಹಾಕುತ್ತಿರುವಂತೆ ತೋರುವಲ್ಲಿ, ನೀವು ದೋಷಿಭಾವನೆಯೊಂದಿಗೆ ಹೆಣಗಾಡಬಹುದು. ನಿಮ್ಮ ಹೆತ್ತವರಿಗೂ ದೋಷಿಭಾವನೆಯ ಅನಿಸಿಕೆಯಾಗಬಹುದು. “ಅವರು ನನಗೆ ಸಮಸ್ಯೆಯನ್ನು ಕೊಟ್ಟಿರಬಹುದೆಂದು ನನ್ನ ಹೆತ್ತವರಿಬ್ಬರೂ ನಂಬುತ್ತಾರೆ,” ಎಂದು ಜೇಸನ್ ಹೇಳುತ್ತಾನೆ. “ಮಕ್ಕಳು ಸಾಮಾನ್ಯವಾಗಿ ರೋಗದ ವಾಸ್ತವಿಕತೆಯನ್ನು ಸ್ವೀಕರಿಸಿದ ಬಳಿಕ, ಅದಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ ಹೆತ್ತವರಿಗೆ ಇದು ಬಹಳ ಕಷ್ಟಕರವಾಗಿರುತ್ತದೆ. ಅವರು ಪದೇ ಪದೇ ನನ್ನಲ್ಲಿ ಕ್ಷಮೆಯಾಚಿಸುತ್ತಾರೆ. ಅವರ ದೋಷಿಭಾವನೆಗಳನ್ನು ಶಮನಮಾಡಲು ಪ್ರಯತ್ನಿಸಲಿಕ್ಕಾಗಿ ನನ್ನಿಂದ ಸಾಧ್ಯವಾದಷ್ಟನ್ನು ನಾನು ನಿರಂತರವಾಗಿ ಮಾಡಬೇಕು.”
ವೈದ್ಯಕೀಯ ಭೇಟಿಗಳು—ಹಿತಕರವಲ್ಲ
ವೈದ್ಯರಲ್ಲಿಗೆ ಮಾಡಲ್ಪಡುವ ಸತತವಾದ ಭೇಟಿಗಳು ಕಳವಳದ ಮೂಲವಾಗಿರಬಲ್ಲವು. ನೀವು ಅಲ್ಪರೂ ನಿಸ್ಸಹಾಯಕರೂ ಎಂಬ ಅನಿಸಿಕೆಯನ್ನು ಅವು ಉಂಟುಮಾಡಬಲ್ಲವು. ಆಸ್ಪತ್ರೆಯ ನಿರೀಕ್ಷಣಾಲಯದಲ್ಲಿ ನಿಮ್ಮ ಸರದಿಗಾಗಿ ಕಾಯುತ್ತಾ ಕುಳಿತಿರುವುದು ತಾನೇ ಭಯಹುಟ್ಟಿಸುವಂತಹದ್ದಾಗಿರಬಲ್ಲದು. “ನಿಮಗೆ . . . ಒಬ್ಬೊಂಟಿಗರಾದ ಮತ್ತು ಯಾರಾದರೂ ನಿಮ್ಮೊಂದಿಗೆ ಅಲ್ಲಿ ಇರುತ್ತಿದ್ದಲ್ಲಿ ಚೆನ್ನಾಗಿರುತ್ತಿತ್ತು ಎಂಬ ಅನಿಸಿಕೆ ಆಗುತ್ತದೆ,” ಎಂದು 14 ವರ್ಷ ಪ್ರಾಯದ ಹೃದ್ರೋಗಿ ಜೋಸೆಫ್ ಹೇಳುತ್ತಾನೆ. ವಿಷಾದಕರವಾಗಿ, ಕೆಲವು ಯುವ ಜನರಿಗೆ ಆ ರೀತಿಯ ಬೆಂಬಲವು ತಮ್ಮ ಹೆತ್ತವರಿಂದಲೂ ಸಿಗುವುದಿಲ್ಲ.
ವೈದ್ಯಕೀಯ ಪರೀಕ್ಷೆಗಳು ತದ್ರೀತಿಯಲ್ಲಿ ಕಳವಳವನ್ನು ಉದ್ರೇಕಿಸಬಲ್ಲವು. ಕೆಲವು ಪರೀಕ್ಷೆಗಳು ಸಂಪೂರ್ಣವಾಗಿ ಅಹಿತಕರವಾಗಿರಬಲ್ಲವು ನಿಜ. ಇದರ ನಂತರ, ಫಲಿತಾಂಶಗಳಿಗಾಗಿ ನೀವು ಕಾಯುವಾಗ ಕಳವಳಗೊಂಡ ದಿನಗಳು, ಇಲ್ಲವೆ ವಾರಗಳನ್ನು ತಾಳಿಕೊಳ್ಳಬೇಕಾಗಬಹುದು. ಆದರೆ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ: ಒಂದು ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಶಾಲೆಯಲ್ಲಿ ಒಂದು ಪರೀಕ್ಷೆಯನ್ನು ಬರೆಯುವ ರೀತಿಯಲ್ಲಿರುವುದಿಲ್ಲ; ಒಂದು ವೈದ್ಯಕೀಯ ಸಮಸ್ಯೆಯಿರುವುದು ನೀವು ಹೇಗೊ ವಿಫಲರಾಗಿದ್ದೀರಿ ಎಂಬುದನ್ನು ಅರ್ಥೈಸುವುದಿಲ್ಲ.
ವಾಸ್ತವದಲ್ಲಿ, ಒಂದು ಪರೀಕ್ಷೆಯು ಬಹಳಷ್ಟು ಸಹಾಯಕಾರಿಯಾದ ಮಾಹಿತಿಯನ್ನು ಒದಗಿಸಬಲ್ಲದು. ಬಹಳಷ್ಟು ಸುಲಭವಾಗಿ ಗುಣಪಡಿಸಬಹುದಾದ ಒಂದು ವೈದ್ಯಕೀಯ ಸಮಸ್ಯೆ ನಿಮಗಿದೆ ಎಂಬುದನ್ನು ಅದು ತೋರಿಸಬಲ್ಲದು. ಅಥವಾ ಅದನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಿರದಿದ್ದಲ್ಲಿ, ಆ ವ್ಯಾಧಿಯೊಂದಿಗೆ ಜೀವಿಸಲು ನೀವು ಏನು ಮಾಡಸಾಧ್ಯವಿದೆ ಎಂಬುದನ್ನು ತೋರಿಸಲು ಒಂದು ಪರೀಕ್ಷೆಯು ಸಹಾಯಮಾಡಬಲ್ಲದು. ನೀವು ಸಂಶಯಪಟ್ಟ ಒಂದು ಕಾಯಿಲೆ ನಿಮಗೆ ಇಲ್ಲವೇ ಇಲ್ಲ ಎಂಬುದನ್ನೂ ಅದು ತೋರಿಸಬಹುದು. ಆದುದರಿಂದ ನಿಮ್ಮ ಪರಿಸ್ಥಿತಿಯ ಕುರಿತು ಅವಸರದ ತೀರ್ಮಾನಗಳನ್ನು ಮಾಡಲು ಪ್ರಯತ್ನಿಸಬೇಡಿರಿ.
ಅತಿಯಾಗಿ ಚಿಂತಿಸುವುದು ಕೇವಲ ನಿಮ್ಮನ್ನು ಬಳಲಿಸುವುದು. ಬೈಬಲ್ ಹೇಳುವುದು: “ಕಳವಳವು ಮನಸ್ಸನ್ನು ಕುಗ್ಗಿಸುವದು.” (ಜ್ಞಾನೋಕ್ತಿ 12:25) ಬದಲಿಗೆ, ನಮ್ಮ ಚಿಂತೆಗಳ ಕುರಿತಾಗಿ ತನಗೆ ಹೇಳುವಂತೆ ದೇವರು ನಮ್ಮನ್ನು ಆಮಂತ್ರಿಸುತ್ತಾನೆ. ಆತನು ನಮ್ಮ ಕಾಳಜಿವಹಿಸುತ್ತಾನೆ ಮತ್ತು ಸಾಧ್ಯವಿರುವ ಅತ್ಯುತ್ತಮ ವಿಧದಲ್ಲಿ ಸಮಸ್ಯೆಯೊಂದಿಗೆ ವ್ಯವಹರಿಸಲಿಕ್ಕಾಗಿ ತನ್ನ ಮಾರ್ಗದರ್ಶನ ಮತ್ತು ತನ್ನ ವಿವೇಕವನ್ನು ನಮಗೆ ಕೊಡುವನು ಎಂಬ ಭರವಸೆ ನಮಗಿರಬೇಕು.—ಕೀರ್ತನೆ 41:3; ಜ್ಞಾನೋಕ್ತಿ 3:5, 6; ಫಿಲಿಪ್ಪಿ 4:6, 7; ಯಾಕೋಬ 1:5.
ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರು ನೀತಿಯ ಒಂದು ಹೊಸ ಲೋಕವನ್ನು ತರಲು ಏರ್ಪಾಡನ್ನು ಮಾಡಿದ್ದಾನೆಂಬುದಕ್ಕೆ ನಾವು ಸಂತೋಷಿಸಬಲ್ಲೆವು. ಆ ಹೊಸ ಲೋಕವನ್ನು ಅನುಭವಿಸುವ ಅವಕಾಶವನ್ನು ಕೊಡುತ್ತಾ, ಆತನು ಮೃತರನ್ನೂ ಪುನರುತ್ಥಾನಗೊಳಿಸುವನು. ಆ ಸಮಯದಲ್ಲಿ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದು ಬೈಬಲ್ ನಮಗೆ ಆಶ್ವಾಸನೆ ಕೊಡುತ್ತದೆ.—ಯೆಶಾಯ 33:24.
ಅಷ್ಟರ ತನಕ, ನೀವು ಗಂಭೀರವಾದ ಕಾಯಿಲೆಯನ್ನು ನಿಭಾಯಿಸಬೇಕಾಗಬಹುದು. ಹಾಗಿದ್ದರೂ, ನಿಮ್ಮ ಪರಿಸ್ಥಿತಿಯೊಂದಿಗೆ ಯಶಸ್ವಿಕರವಾಗಿ ವ್ಯವಹರಿಸಲು ನೀವು ಮಾಡಸಾಧ್ಯವಿರುವ ಅನೇಕ ಪ್ರಾಯೋಗಿಕ ವಿಷಯಗಳಿವೆ. ಇವುಗಳನ್ನು ನಾವು ಮುಂದಿನ ಲೇಖನವೊಂದರಲ್ಲಿ ಚರ್ಚಿಸುವೆವು.
[ಪುಟ 34 ರಲ್ಲಿರುವ ಚಿತ್ರ]
‘ಇದು ನನಗೆ ಸಂಭವಿಸುವಂತೆ ದೇವರು ಏಕೆ ಅನುಮತಿಸಿದನು?’ ಎಂದು ನೀವು ಕೇಳಬಹುದು