ಬೈಬಲಿನ ದೃಷ್ಟಿಕೋನ
ದಾಂಪತ್ಯದ್ರೋಹದ ನಂತರವೂ ಒಂದು ವಿವಾಹವನ್ನು ರಕ್ಷಿಸಸಾಧ್ಯವೊ?
“ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ.” —ಮತ್ತಾಯ 19:9.
ಆ ಮಾತುಗಳಲ್ಲಿ ಯೇಸು ಕ್ರಿಸ್ತನು, ದಾಂಪತ್ಯ ದ್ರೋಹಗೈದ ಒಬ್ಬ ಸಂಗಾತಿಗೆ ವಿವಾಹವಿಚ್ಛೇದ ನೀಡಲು ಆರಿಸಿಕೊಳ್ಳುವಂತೆ ಕ್ರೈಸ್ತನೊಬ್ಬನಿಗೆ ಅನುಮತಿಯನ್ನು ನೀಡಿದನು.a ಆದರೆ, ನಿರ್ದೋಷಿಯಾದ ಸಂಗಾತಿಯು ವಿವಾಹವನ್ನು ಸಂರಕ್ಷಿಸಲು ಮತ್ತು ದಂಪತಿಗಳು ತಮ್ಮ ಸಂಬಂಧವನ್ನು ಪುನಃ ಕಟ್ಟಲಿಕ್ಕಾಗಿ ನಿರ್ಧರಿಸಲು ಆರಿಸಿಕೊಳ್ಳುವುದಾದರೆ ಆಗೇನು? ಯಾವ ಸಮಸ್ಯೆಗಳು ದಂಪತಿಗಳ ಮುಂದಿವೆ ಮತ್ತು ಆ ಸಮಸ್ಯೆಗಳನ್ನು ಅವರು ಹೇಗೆ ಯಶಸ್ವಿಕರವಾಗಿ ಎದುರಿಸಬಲ್ಲರು? ಈ ಪ್ರಶ್ನೆಗಳಿಗೆ ಉತ್ತರ ನೀಡಲು ಬೈಬಲ್ ಹೇಗೆ ಸಹಾಯಮಾಡುತ್ತದೆಂದು ನಾವು ನೋಡೋಣ.
ಕೆಡವಲ್ಪಟ್ಟ ಒಂದು ಮನೆ
ನಾವು ಪ್ರಥಮವಾಗಿ ದಾಂಪತ್ಯದ್ರೋಹದಿಂದ ಉಂಟಾದ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಬೇಕು. ಯೇಸು ಕ್ರಿಸ್ತನು ವಿವರಿಸಿದಂತೆ, ಪತಿಪತ್ನಿಯರು “ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿ”ರಬೇಕೆಂದು ವಿವಾಹದ ಮೂಲಕರ್ತನು ಉದ್ದೇಶಿಸಿದನು. ಅವನು ಕೂಡಿಸಿದ್ದು: “ಆದದರಿಂದ, ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” ಹೌದು, ವಿವಾಹವು ಮನುಷ್ಯರನ್ನು ಅಗಲಿಸಲಾಗದಂತೆ ಜೋಡಿಸಲು ರಚಿಸಲ್ಪಟ್ಟಿದೆ. ವ್ಯಭಿಚಾರ ಗೈಯುವ ಮೂಲಕ ವ್ಯಕ್ತಿಯೊಬ್ಬನು ವಿವಾಹದ ಪ್ರತಿಜ್ಞೆಯನ್ನು ಮುರಿಯುವಾಗ, ಅಪಾರ ಯಾತನೆಯ ಪರಿಣಾಮಗಳು ತರುವಾಯ ಸಂಭವಿಸುತ್ತವೆ.—ಮತ್ತಾಯ 19:6; ಗಲಾತ್ಯ 6:7.
ಈ ವಿಷಯಕ್ಕೆ ನಿರ್ದೋಷಿಯಾದ ಸಂಗಾತಿಯಿಂದ ಅನುಭವಿಸಲ್ಪಡುವ ಸಂಕಟವು ಸಾಕ್ಷ್ಯನೀಡುತ್ತದೆ. ವ್ಯಭಿಚಾರದ ಪರಿಣಾಮಗಳು, ಮನೆಗಳನ್ನು ಧ್ವಂಸಮಾಡುವ ಚಂಡಮಾರುತದ ಪರಿಣಾಮಗಳಿಗೆ ಹೋಲಿಸಲ್ಪಡಸಾಧ್ಯವಿದೆ. ಡಾ. ಶರ್ಲೀ ಪಿ. ಗ್ಲಾಸ್ ಗಮನಿಸಿದ್ದು: “ನಾನು ಯಾರೊಂದಿಗೆ ವಿಚಾರಣೆ ನಡೆಸಿದ್ದೇನೋ ಆ ಹಲವಾರು ರೋಗಿಗಳು, ತಮ್ಮ ಸಂಗಾತಿಯು ಸತ್ತುಹೋಗಿದ್ದರೆ ತಮಗೆ ತಾಳಿಕೊಳ್ಳುವುದು ಹೆಚ್ಚು ಸುಲಭವಾಗಿರುತ್ತಿತ್ತು ಎಂದು ನನಗೆ ಹೇಳಿದ್ದಾರೆ.” ತಮ್ಮ ಸಂಗಾತಿಗಳನ್ನು ಮರಣದಲ್ಲಿ ಕಳೆದುಕೊಂಡಿರುವ ಸಂಗಾತಿಗಳು ಇದಕ್ಕೆ ಅಸಮ್ಮತಿ ಸೂಚಿಸಬಹುದೆಂಬುದು ನಿಜ. ಹಾಗಿದ್ದರೂ, ವ್ಯಭಿಚಾರವು ಅತಿಯಾತನೆ ಕೊಡುವ ವೇದನೆಯನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟ. ಕೆಲವು ಜನರು ದ್ರೋಹದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದೇ ಇಲ್ಲ.
ಇಂತಹ ಬೇಗುದಿಯನ್ನು ಪರಿಗಣಿಸುತ್ತಾ, ಒಬ್ಬನು ಹೀಗೆ ಕೇಳಬಹುದು, ‘ವ್ಯಭಿಚಾರವು ಒಂದು ವಿವಾಹವನ್ನು ಕೊನೆಗೊಳಿಸಬೇಕೊ?’ ಕೊನೆಗೊಳಿಸಲೇಬೇಕೆಂದಿಲ್ಲ. ವ್ಯಭಿಚಾರದ ಕುರಿತಾಗಿ ಯೇಸು ಮಾಡಿದ ಹೇಳಿಕೆಯು ತೋರಿಸುವುದೇನೆಂದರೆ, ನಂಬಿಗಸ್ತ ಸಂಗಾತಿಗೆ ವಿವಾಹವಿಚ್ಛೇದ ಮಾಡುವ ಶಾಸ್ತ್ರೀಯ ಆಯ್ಕೆ ಇದೆ, ಆದರೆ ಹಾಗೆ ಮಾಡುವಂತೆ ಅವನು ಅಥವಾ ಅವಳು ಬದ್ಧರಾಗಿರುವುದಿಲ್ಲ. ವ್ಯಭಿಚಾರವನ್ನು ಯಾವ ಸಂಗತಿಯೂ ಮನ್ನಿಸುವುದಿಲ್ಲವಾದರೂ, ಕೆಲವು ದಂಪತಿಗಳು ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಯಾವುದು ಜಜ್ಜಲ್ಪಟ್ಟಿತ್ತೊ ಅದನ್ನು ಪುನಃ ಕಟ್ಟಲು ಮತ್ತು ಬಲಪಡಿಸಲು ನಿರ್ಧರಿಸುತ್ತಾರೆ.
ನಿಶ್ಚಯವಾಗಿಯೂ, ಸಂಗಾತಿಗಳಿಬ್ಬರೂ ಒಬ್ಬರಿಗೊಬ್ಬರು ನಂಬಿಗಸ್ತರಾಗಿರುವಾಗ ವೈವಾಹಿಕ ಸಂಬಂಧದಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡುವುದು ಉತ್ತಮ. ಹಾಗಿದ್ದರೂ, ದಾಂಪತ್ಯದ್ರೋಹವು ಸಂಭವಿಸಿರುವಾಗಲೂ, ಕೆಲವು ನಿರ್ದೋಷಿ ಸಂಗಾತಿಗಳು ವಿವಾಹವನ್ನು ಸಂರಕ್ಷಿಸಲು ಆರಿಸಿಕೊಳ್ಳುತ್ತಾರೆ. ಇಂತಹ ಒಂದು ನಿರ್ಣಯವನ್ನು ಆಶಾಭರಿತ ಆಲೋಚನೆಯ ಮೇಲೆ ಆಧರಿಸುವ ಬದಲು, ನಿರ್ದೋಷಿಯಾದ ಸಂಗಾತಿಯು ಪರಿಣಾಮಗಳನ್ನು ತೂಗಿನೋಡಬೇಕು. ಅವಳು ಬಹುಶಃ ಅವಳ ಮಕ್ಕಳ ಅಗತ್ಯಗಳು ಅಷ್ಟೇ ಅಲ್ಲದೆ ಅವಳ ಸ್ವಂತ ಆತ್ಮಿಕ, ಭಾವನಾತ್ಮಕ, ಶಾರೀರಿಕ ಹಾಗೂ ಆರ್ಥಿಕ ಅಗತ್ಯತೆಗಳ ಕಡೆಗೆ ಗಮನಕೊಡುವಳು.b ತನ್ನ ವಿವಾಹವನ್ನು ರಕ್ಷಿಸಸಾಧ್ಯವೊ ಇಲ್ಲವೊ ಎಂಬುದನ್ನು ಅವಳು ಪರಿಗಣಿಸುವುದೂ ವಿವೇಕಯುತವು.
ವಿವಾಹವನ್ನು ರಕ್ಷಿಸಸಾಧ್ಯವೊ?
ಒಂದು ಚಂಡಮಾರುತದಿಂದ ಮುರಿದುಹಾಕಲ್ಪಟ್ಟ ಮನೆಯನ್ನು ಪುನಃ ಕಟ್ಟಪ್ರಯತ್ನಿಸುವ ಮೊದಲು, ಅದನ್ನು ಪುನಸ್ಸ್ಥಾಪಿಸಸಾಧ್ಯವೊ ಇಲ್ಲವೊ ಎಂಬುದನ್ನು ಕಟ್ಟುವವನು ನಿರ್ಧರಿಸಬೇಕು. ತದ್ರೀತಿಯಲ್ಲಿ, ದಾಂಪತ್ಯದ್ರೋಹದಿಂದ ಧ್ವಂಸಗೊಂಡಿರುವ ಒಂದು ಸಂಬಂಧವನ್ನು ಪುನಃ ಕಟ್ಟಪ್ರಯತ್ನಿಸುವ ಮೊದಲು, ದಂಪತಿಗಳು—ವಿಶೇಷವಾಗಿ ನಂಬಿಗಸ್ತ ಸಂಗಾತಿಯು—ವಿವಾಹದಲ್ಲಿ ಪುನಸ್ಸ್ಥಾಪಿತ ಆಪ್ತತೆ ಹಾಗೂ ಭರವಸೆಗಾಗಿರುವ ಸಾಧ್ಯತೆಯ ವಾಸ್ತವಿಕ ಅಂದಾಜು ಮಾಡಬಯಸುವರು.
ದೋಷಿಯಾದ ಸಂಗಾತಿಯು ಪ್ರಾಮಾಣಿಕವಾದ ಪಶ್ಚಾತ್ತಾಪವನ್ನು ತೋರಿಸುತ್ತಾನೊ ಇಲ್ಲವೆ “ತನ್ನ ಹೃದಯದಲ್ಲಿ” (NW) ಇನ್ನೂ ವ್ಯಭಿಚಾರವನ್ನು ಮಾಡುತ್ತಿದ್ದಾನೊ ಎಂಬುದು ಪರಿಗಣಿಸಲ್ಪಡಬೇಕಾಗಿರುವ ಒಂದು ಅಂಶವಾಗಿದೆ. (ಮತ್ತಾಯ 5:27, 28) ತಾನು ಬದಲಾಗುವೆನೆಂದು ಅವನು ಮಾತುಕೊಡುತ್ತಾನಾದರೂ, ತನ್ನ ಅನೈತಿಕ ಸಂಬಂಧವನ್ನು ಹಠಾತ್ತಾಗಿ ಕೊನೆಗೊಳಿಸಲು ಅವನು ಹಿಂಜರಿಯುತ್ತಾನೊ? (ವಿಮೋಚನಕಾಂಡ 20:14; ಯಾಜಕಕಾಂಡ 20:10; ಧರ್ಮೋಪದೇಶಕಾಂಡ 5:18) ಅವನು ಇತರ ಸ್ತ್ರೀಯರ ಕಡೆಗೆ ಭಾವನಾಶೀಲ ಆಸಕ್ತಿಯಿಂದ ಇನ್ನೂ ನೋಡುತ್ತಾನೊ? ತನ್ನ ವ್ಯಭಿಚಾರಕ್ಕಾಗಿ ಅವನು ತನ್ನ ಹೆಂಡತಿಯನ್ನು ದೂಷಿಸುತ್ತಾನೊ? ಹಾಗಿರುವಲ್ಲಿ, ಆ ವಿವಾಹಕ್ಕೆ ಭರವಸೆಯನ್ನು ಪುನಸ್ಸ್ಥಾಪಿಸುವ ಪ್ರಯತ್ನಗಳು ಸಫಲವಾಗುವ ಸಾಧ್ಯತೆಗಳಿಲ್ಲ. ಇನ್ನೊಂದು ಕಡೆಯಲ್ಲಿ, ಅವನು ಆ ನಿಷಿದ್ಧ ಪ್ರಕರಣವನ್ನು ಕೊನೆಗೊಳಿಸುವಲ್ಲಿ, ತನ್ನ ತಪ್ಪಿಗಾಗಿ ಹೊಣೆಗಾರಿಕೆಯನ್ನು ಸ್ವೀಕರಿಸುವಲ್ಲಿ, ಮತ್ತು ವಿವಾಹವನ್ನು ಪುನಃ ಕಟ್ಟುವುದಕ್ಕೆ ತಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆಂದು ತೋರಿಸುವಲ್ಲಿ, ಒಂದು ದಿನ ಯಥಾರ್ಥವಾದ ಭರವಸೆಯು ಪುನಸ್ಸ್ಥಾಪಿಸಲ್ಪಡುವುದೆಂದು ನಿರೀಕ್ಷಿಸುವುದಕ್ಕೆ ಅವನ ಹೆಂಡತಿಯು ಒಂದು ಆಧಾರವನ್ನು ಕಂಡುಕೊಳ್ಳಬಹುದು.—ಮತ್ತಾಯ 5:29.
ಮತ್ತು, ನಂಬಿಗಸ್ತ ಸಂಗಾತಿಯು ಕ್ಷಮಿಸಲು ಶಕ್ತಳಾಗಿರುವಳೊ? ಸಂಭವಿಸಿದ ವಿಷಯದ ಕುರಿತು ತನ್ನ ಆಳವಾದ ನೋವಿನ ಅನಿಸಿಕೆಗಳನ್ನು ಅವಳು ವ್ಯಕ್ತಪಡಿಸಬಾರದು ಇಲ್ಲವೆ ಏನೊಂದೂ ಬದಲಾಗಿಲ್ಲ ಎಂಬಂತೆ ಅವಳು ನಟಿಸಬೇಕೆಂಬುದನ್ನು ಇದು ಅರ್ಥೈಸುವುದಿಲ್ಲ. ಸಕಾಲದಲ್ಲಿ ಅವಳು ಆಳವಾದ ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದನ್ನು ಮುಂದುವರಿಸದಿರಲು ಪ್ರಯತ್ನಿಸುವಳು ಎಂಬುದನ್ನು ಇದು ಅರ್ಥೈಸುತ್ತದೆ. ಅಂತಹ ಕ್ಷಮಾಪಣೆಗೆ ಸಮಯ ಹಿಡಿಯುತ್ತದೆ, ಆದರೆ ಅದು ವಿವಾಹವನ್ನು ಪುನಃ ಕಟ್ಟಲಿಕ್ಕಾಗಿ ಗಟ್ಟಿಯಾದ ಆಧಾರವನ್ನು ಸ್ಥಾಪಿಸಲು ಸಹಾಯಮಾಡಬಲ್ಲದು.
“ಭಗ್ನಾವಶೇಷ”ವನ್ನು ತೆಗೆದುಹಾಕುವುದು
ನಂಬಿಗಸ್ತ ಸಂಗಾತಿಯು ತಮ್ಮ ವಿವಾಹವನ್ನು ರಕ್ಷಿಸಲು ನಿರ್ಧರಿಸಿದ ಬಳಿಕ, ಯಾವ ಹೆಜ್ಜೆಗಳನ್ನು ದಂಪತಿಗಳು ಮುಂದೆ ತೆಗೆದುಕೊಳ್ಳಬಹುದು? ಚಂಡಮಾರುತದಿಂದ ಬಹಳವಾಗಿ ಹಾನಿಗೊಂಡ ಮನೆಯ ಸುತ್ತಲೂ ಇರುವ ಭಗ್ನಾವಶೇಷವು ಹೇಗೆ ತೆಗೆದುಹಾಕಲ್ಪಡಬೇಕೊ ಹಾಗೆಯೇ, ವಿವಾಹದ ಸುತ್ತಲೂ ಇರುವ “ಭಗ್ನಾವಶೇಷ”ವು ತೆಗೆದುಹಾಕಲ್ಪಡಬೇಕು. ದಂಪತಿಗಳು ಒಬ್ಬರಿಗೊಬ್ಬರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿಕೊಳ್ಳುವುದಾದರೆ ಇದನ್ನು ಒಂದಿಷ್ಟು ಮಟ್ಟಿಗೆ ಸಾಧಿಸಸಾಧ್ಯವಿದೆ. ಜ್ಞಾನೋಕ್ತಿ 15:22 ಹೇಳುವುದು: “ಯೋಚನೆ ಹೇಳುವವರಿಲ್ಲದೆ [“ಅಂತರಂಗದ ಮಾತುಕತೆಯಿಲ್ಲದೆ,” NW] ಉದ್ದೇಶಗಳು ನೆರವೇರವು.” ‘ಅಂತರಂಗದ ಮಾತುಕತೆ’ ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದವು ಆಪ್ತತೆಯನ್ನು ಸೂಚಿಸುತ್ತದೆ ಮತ್ತು ಕೀರ್ತನೆ 89:7ರಲ್ಲಿ ಆ ಪದವನ್ನು “ಆಪ್ತ ಗುಂಪು” (NW) ಎಂಬುದಾಗಿ ತರ್ಜುಮೆಮಾಡಲಾಗಿದೆ. ಆದುದರಿಂದ ಅದು ಬರಿಯ ಮೇಲ್ಮೈಯ ಸಂಭಾಷಣೆಯನ್ನಲ್ಲ, ಬದಲಿಗೆ ಎರಡೂ ಪಕ್ಷದವರು ತಮ್ಮ ಅತಿ ಗಾಢವಾದ ಅನಿಸಿಕೆಗಳನ್ನು ಪ್ರಕಟಪಡಿಸುವ ಪ್ರಾಮಾಣಿಕ ಹಾಗೂ ಉತ್ಸಾಹಭರಿತ ಸಂವಾದವನ್ನು ಒಳಗೊಳ್ಳುವುದು.—ಜ್ಞಾನೋಕ್ತಿ 13:10.
ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ, ನಂಬಿಗಸ್ತ ಸಂಗಾತಿಯು ತನ್ನ ಗಂಡನನ್ನು ಕೇಳಲಿಕ್ಕಾಗಿ ಇನ್ನೂ ಅನೇಕ ಪ್ರಶ್ನೆಗಳನ್ನು ಹೊಂದಿರಬಹುದು. ಆ ಪ್ರಕರಣವು ಹೇಗೆ ಆರಂಭಗೊಂಡಿತು? ಎಷ್ಟು ಸಮಯದ ವರೆಗೆ ಅದು ಮುಂದುವರಿಯಿತು? ಅದರ ಬಗ್ಗೆ ಇನ್ಯಾರಿಗೆ ಗೊತ್ತು? ಈ ವಿವರಗಳನ್ನು ಚರ್ಚಿಸುವುದು ದಂಪತಿಗಳಿಗೆ ವೇದನಾಮಯವಾಗಿ ಇರುವುದೆಂಬುದು ಒಪ್ಪತಕ್ಕದ್ದು. ಹಾಗಿದ್ದರೂ, ಇಂತಹ ಜ್ಞಾನವು ಭರವಸೆಯ ಪುನಸ್ಸ್ಥಾಪನೆಗೆ ಆವಶ್ಯಕವೆಂದು ನಂಬಿಗಸ್ತ ಸಂಗಾತಿಯು ಕಂಡುಕೊಳ್ಳಬಹುದು. ಹಾಗಿರುವಲ್ಲಿ, ಅಪನಂಬಿಗಸ್ತ ಸಂಗಾತಿಯು ಪ್ರಾಮಾಣಿಕವಾಗಿ ಮತ್ತು ವಿವೇಚನೆಯಿಂದ ಉತ್ತರಿಸುವುದು ಅತ್ಯುತ್ತಮ. ಪರಸ್ಪರ ವಿನಿಮಯದ ಉದ್ದೇಶವು ಮನನೋಯಿಸುವುದಲ್ಲ, ಗುಣಪಡಿಸುವುದಾಗಿದೆ ಎಂಬುದನ್ನು ಮನಸ್ಸಿನಲ್ಲಿಡುತ್ತಾ, ವಿಷಯಗಳನ್ನು ಅವನು ಪ್ರೀತಿಪೂರ್ಣ ಹಾಗೂ ದಯಾಪರ ವಿಧದಲ್ಲಿ ವಿವರಿಸಬೇಕು. (ಜ್ಞಾನೋಕ್ತಿ 12:18; ಎಫೆಸ 4:25, 26) ಸಂಭವಿಸಿದ ವಿಷಯದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಂತೆ, ಇಬ್ಬರೂ ವಿವೇಕ, ಆತ್ಮನಿಯಂತ್ರಣ, ಮತ್ತು ಅನುಭೂತಿಯುಳ್ಳ ಆಲಿಸುವಿಕೆಯನ್ನು ಪ್ರಯೋಗಿಸಬೇಕಾಗುವುದು.c—ಜ್ಞಾನೋಕ್ತಿ 18:13; 1 ಕೊರಿಂಥ 9:25; 2 ಪೇತ್ರ 1:6.
ಯೆಹೋವನ ಸಾಕ್ಷಿಗಳಾಗಿರುವವರು, ಸಭೆಯ ಹಿರಿಯರಿಂದ ನೆರವನ್ನು ವಿನಂತಿಸಿಕೊಳ್ಳಲು ಬಯಸಬಹುದು. ನಿಶ್ಚಯವಾಗಿಯೂ ಕ್ರೈಸ್ತರ ವಿಷಯದಲ್ಲಿಯಾದರೋ, ವ್ಯಭಿಚಾರದಂತಹ ಗಂಭೀರ ಪಾಪಗಳು, ದಂಪತಿಗಳ ಹಾಗೂ ಸಭೆಯ ಆತ್ಮಿಕ ಕ್ಷೇಮದ ಕುರಿತಾಗಿ ಚಿಂತಿತರಾಗಿರುವ ಹಿರಿಯರಿಗೆ ಕೂಡಲೇ ಹೇಳಲ್ಪಡಬೇಕಾದ ವಿಷಯಗಳಾಗಿವೆ. ವ್ಯಭಿಚಾರಿಯು ಹಿರಿಯರನ್ನು ಸಂಧಿಸಿದಾಗ, ಯಥಾರ್ಥವಾದ ಪಶ್ಚಾತ್ತಾಪವನ್ನು ತೋರಿಸಿದ್ದಿರಬಹುದು, ಮತ್ತು ಹೀಗೆ ಸಭೆಯಲ್ಲಿ ಉಳಿಯಲು ಅನುಮತಿಸಲ್ಪಟ್ಟಿರಬಹುದು. ಇಂತಹ ಒಂದು ಸಂದರ್ಭದಲ್ಲಿ, ಹಿರಿಯರು ಸಂಗಾತಿಗಳಿಗಿಬ್ಬರಿಗೂ ಸತತವಾದ ನೆರವನ್ನು ಕೊಡಬಲ್ಲರು.—ಯಾಕೋಬ 5:14, 15.
ಪುನರ್ಕಟ್ಟುವಿಕೆ
ದಂಪತಿಗಳು ಸಾಕಷ್ಟು ಮಟ್ಟಿಗೆ ತಮ್ಮ ಅನಿಸಿಕೆಗಳನ್ನು ಸ್ಥಿರೀಕರಿಸಿದ ಬಳಿಕ, ತಮ್ಮ ವಿವಾಹದ ಅತ್ಯಾವಶ್ಯಕ ವಿಷಯಗಳನ್ನು ಪುನಃ ಕಟ್ಟುವ ಒಳ್ಳೆಯ ಸ್ಥಾನದಲ್ಲಿ ಅವರಿದ್ದಾರೆ. ಶ್ರದ್ಧಾಪೂರ್ವಕ ಸಂವಾದದ ಅಗತ್ಯವು ಮುಂದುವರಿಯುತ್ತದೆ. ಬಲಹೀನತೆಗಳು ಕಂಡುಕೊಳ್ಳಲ್ಪಡುವ ಕ್ಷೇತ್ರಗಳಲ್ಲಿ ಸೂಕ್ತವಾದ ಬದಲಾವಣೆಗಳು ಮಾಡಲ್ಪಡಬೇಕು.
ಬದಲಾವಣೆಗಳನ್ನು ಮಾಡುವ ಅಗತ್ಯವು ಪ್ರಥಮವಾಗಿ ದೋಷಿಯಾದ ಸಂಗಾತಿಯ ಮೇಲೆ ಬೀಳುವುದು. ಹಾಗಿದ್ದರೂ, ನಂಬಿಗಸ್ತ ಸಂಗಾತಿಯು ವಿವಾಹದಲ್ಲಿನ ಬಲಹೀನ ಕ್ಷೇತ್ರಗಳನ್ನು ಬಲಪಡಿಸುವುದರಲ್ಲಿ ತನ್ನ ಪಾತ್ರವನ್ನು ಪೂರೈಸಬೇಕು. ಇದು, ವ್ಯಭಿಚಾರವು ಅವಳ ತಪ್ಪಾಗಿತ್ತು ಇಲ್ಲವೆ ಅದನ್ನು ಮನ್ನಿಸಸಾಧ್ಯವಿದೆ ಎಂಬುದನ್ನು ಅರ್ಥೈಸದು—ಇಂತಹ ಒಂದು ಪಾಪವನ್ನು ಗೈಯಲು ಯಾವ ಸಮಂಜಸವಾದ ನೆವವೂ ಇರುವುದಿಲ್ಲ. (ಹೋಲಿಸಿ ಆದಿಕಾಂಡ 3:12; 1 ಯೋಹಾನ 5:3.) ಅದು, ಪರಿಹರಿಸುವ ಅಗತ್ಯವಿದ್ದ ಸಮಸ್ಯೆಗಳು ವಿವಾಹದಲ್ಲಿದ್ದಿರಬಹುದೆಂಬುದನ್ನು ಮಾತ್ರ ಅರ್ಥೈಸುತ್ತದೆ. ಪುನರ್ಕಟ್ಟುವಿಕೆಯು ಒಂದು ಜಂಟಿ ಕಾರ್ಯಯೋಜನೆಯಾಗಿದೆ. ಪರಸ್ಪರ ಮೌಲ್ಯಗಳು ಮತ್ತು ಗುರಿಗಳನ್ನು ಬಲಪಡಿಸುವ ಅಗತ್ಯ ಇದೆಯೊ? ಆತ್ಮಿಕ ಚಟುವಟಿಕೆಗಳು ಅಲಕ್ಷಿಸಲ್ಪಟ್ಟಿವೆಯೊ? ಮಹತ್ತರವಾದ ಬಲಹೀನತೆಗಳನ್ನು ಕಂಡುಹಿಡಿಯುವ ಮತ್ತು ಬೇಕಾದ ಬದಲಾವಣೆಗಳನ್ನು ಮಾಡುವ ಪ್ರಕ್ರಿಯೆಯು, ಬಹಳವಾಗಿ ಹಾನಿಗೊಂಡ ಒಂದು ವಿವಾಹವನ್ನು ಪುನರ್ಕಟ್ಟುವುದರಲ್ಲಿ ಅತ್ಯಾವಶ್ಯಕವಾಗಿದೆ.
ದುರಸ್ತಾಗಿಟ್ಟುಕೊಳ್ಳುವಿಕೆ
ಚೆನ್ನಾಗಿ ಕಟ್ಟಲ್ಪಟ್ಟ ಮನೆಗೂ ಕ್ರಮವಾದ ದುರಸ್ತಿಯು ಬೇಕಾಗಿರುತ್ತದೆ. ಅಂದಮೇಲೆ, ಪುನರ್ಕಟ್ಟಲ್ಪಟ್ಟ ಒಂದು ಸಂಬಂಧವನ್ನು ಕಾಪಾಡಿಕೊಳ್ಳುವುದು ಬಹಳ ಪ್ರಾಮುಖ್ಯ. ದಂಪತಿಗಳು ತಮ್ಮ ಹೊಸ ಸಂಕಲ್ಪಗಳಿಗೆ ಅಂಟಿಕೊಂಡಿರಬೇಕೆಂಬ ತಮ್ಮ ನಿರ್ಧಾರವನ್ನು ಸಮಯದ ಗತಿಸುವಿಕೆಯು ಸವೆಯಿಸುವಂತೆ ಬಿಡಬಾರದು. ನ್ಯೂನ ಸಂವಾದದ ಹವ್ಯಾಸಗಳಲ್ಲಿ ಮರುಕೊಳಿಸುವಂತಹ ಚಿಕ್ಕಪುಟ್ಟ ತಡೆಗಳನ್ನು ತಾವು ಅನುಭವಿಸುವಲ್ಲಿ ಎದೆಗುಂದುವ ಬದಲಿಗೆ, ಅವರು ಒಳ್ಳೆಯ ಸಂವಾದ ಹವ್ಯಾಸಗಳನ್ನು ಪುನಸ್ಸ್ಥಾಪಿಸಬೇಕು ಮತ್ತು ಮುಂದೆ ಸಾಗುವುದನ್ನು ಮುಂದುವರಿಸಬೇಕು.—ಜ್ಞಾನೋಕ್ತಿ 24:16; ಗಲಾತ್ಯ 6:9.
ಎಲ್ಲಕ್ಕಿಂತ ಹೆಚ್ಚಾಗಿ, ಪತಿಪತ್ನಿಯರು ತಮ್ಮ ಆತ್ಮಿಕ ದಿನಚರಿಗೆ ಶ್ರೇಷ್ಠ ಆದ್ಯತೆಯನ್ನು ಕೊಡತಕ್ಕದ್ದು. ಆತ್ಮಿಕ ದಿನಚರಿಯಾಗಲಿ ತಮ್ಮ ವಿವಾಹವಾಗಲಿ ಬೇರೆ ಯಾವುದೇ ಚಟುವಟಿಕೆಗೆ ಹೋಲಿಕೆಯಲ್ಲಿ ದ್ವಿತೀಯ ಸ್ಥಾನವನ್ನು ತೆಗೆದುಕೊಳ್ಳುವಂತೆ ಎಂದೂ ಅನುಮತಿಸಬಾರದು. ಕೀರ್ತನೆ 127:1 ಹೇಳುವುದು: “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.” ಹಾಗೂ, ಯೇಸು ಎಚ್ಚರಿಸಿದ್ದು: “ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.”—ಮತ್ತಾಯ 7:24-27.
ಹೌದು, ಬೈಬಲ್ ತತ್ವಗಳನ್ನು ಅನ್ವಯಿಸುವುದು ಕಷ್ಟಕರವೆಂಬ ಕಾರಣದಿಂದ ಅವುಗಳನ್ನು ಕಡೆಗಣಿಸುವುದಾದರೆ, ದಾಂಪತ್ಯನಿಷ್ಠೆಯ ಮುಂದಿನ ಬಿರುಗಾಳಿಯಂಥ ಪರೀಕ್ಷೆಗೆ ವಿವಾಹವು ಸುಲಭಭೇದ್ಯವಾಗಿ ಉಳಿಯುವುದು. ಹಾಗಿದ್ದರೂ, ಪತಿಪತ್ನಿಯರು ಎಲ್ಲ ವಿಷಯಗಳಲ್ಲಿ ಬೈಬಲ್ ಮಟ್ಟಗಳಿಗೆ ಅಂಟಿಕೊಳ್ಳುವುದಾದರೆ, ಅವರ ವಿವಾಹಕ್ಕೆ ದೈವಿಕ ಆಶೀರ್ವಾದವಿರುವುದು. ವೈವಾಹಿಕ ನಂಬಿಗಸ್ತಿಕೆಗೆ ಇರುವ ಅತ್ಯಂತ ಶಕ್ತಿಶಾಲಿ ಪ್ರೇರಕವೂ ಅವರಿಗಿರುವುದು. ಅದು ವಿವಾಹದ ಮೂಲಕರ್ತನಾದ ಯೆಹೋವ ದೇವರನ್ನು ಮೆಚ್ಚಿಸುವ ಬಯಕೆಯೇ.—ಮತ್ತಾಯ 22:36-40; ಪ್ರಸಂಗಿ 4:12.
[ಅಧ್ಯಯನ ಪ್ರಶ್ನೆಗಳು]
a ವ್ಯಕ್ತಿಯೊಬ್ಬನು ವ್ಯಭಿಚಾರಮಾಡಿದ ಸಂಗಾತಿಗೆ ವಿವಾಹವಿಚ್ಛೇದ ನೀಡಲು ಏಕೆ ಆರಿಸಿಕೊಳ್ಳಬಹುದೆಂಬುದಕ್ಕೆ ಸಮಂಜಸವಾದ ಕಾರಣಗಳಿವೆ. ಈ ವಿಷಯದ ಕುರಿತಾದ ಒಂದು ವಿಸ್ತೃತ ಚರ್ಚೆಗಾಗಿ, ಎಚ್ಚರ! ಪತ್ರಿಕೆಯ ಸೆಪ್ಟೆಂಬರ್ 8, 1995ರ ಸಂಚಿಕೆಯಲ್ಲಿ “ಬೈಬಲಿನ ದೃಷ್ಟಿಕೋನ: ವ್ಯಭಿಚಾರ—ಕ್ಷಮಿಸಬೇಕೊ ಅಥವಾ ಕ್ಷಮಿಸಬಾರದೊ?” ಎಂಬ ಲೇಖನವನ್ನು ನೋಡಿರಿ.
b ಅಪನಂಬಿಗಸ್ತ ಸಂಗಾತಿಯನ್ನು ನಾವು ಪುರುಷನೆಂದು ಸಂಬೋಧಿಸುತ್ತೇವೆ. ಒಂದು ಸಮೀಕ್ಷೆಯು ಅಂದಾಜು ಮಾಡುವುದೇನೆಂದರೆ, ಹೆಂಗಸರಿಗೆ ಹೋಲಿಸುವಾಗ ಪುರುಷರಲ್ಲಿ ದಾಂಪತ್ಯದ್ರೋಹದ ಪ್ರಮಾಣವು ಎರಡರಷ್ಟಿದೆ. ಹಾಗಿದ್ದರೂ, ಚರ್ಚಿಸಲ್ಪಡುತ್ತಿರುವ ತತ್ವಗಳು—ನಿರ್ದೋಷಿಯಾದ ಸಂಗಾತಿಯು ಕ್ರೈಸ್ತ ಪುರುಷನಾಗಿರುವಾಗ—ಸಮಾನವಾಗಿ ಅನ್ವಯವಾಗುತ್ತವೆ.
c ಒಳ್ಳೆಯ ಆಲಿಸುವಿಕೆಯ ಕುರಿತಾದ ಮಾಹಿತಿಗಾಗಿ, ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಜನವರಿ 22, 1994, ಪುಟಗಳು 6-9, ಮತ್ತು ಡಿಸೆಂಬರ್ 8, 1994, ಪುಟಗಳು 10-13ನ್ನು ನೋಡಿರಿ.