ತೋಟಕ್ಕಾಗಿರುವ ನಮ್ಮ ಪ್ರೀತಿ
ಗದ್ದಲ ಮತ್ತು ಜೀವನದ ಉದ್ರಿಕ್ತ ವೇಗದಿಂದ ಒಂದು ಮರೆಯಸ್ಥಾನದಂತೆ, ನೀವು ಒಂದು ಸುಂದರ ತೋಟದ ಪ್ರಶಾಂತತೆಯನ್ನು ಸ್ವಾಗತಿಸುತ್ತೀರೊ? ನಿಮ್ಮ ಕುಟುಂಬದೊಂದಿಗೆ ಪಿಕ್ನಿಕ್ಗಾಗಿ ಅಥವಾ ಒಬ್ಬ ಮಿತ್ರನೊಂದಿಗೆ ತಿರುಗಾಟಕ್ಕಾಗಿ ನೀವು ಇಷ್ಟಪಡುವ ಪರಿಸರಗಳು, ಹುಲ್ಲುಮೈದಾನಗಳು, ಪುಷ್ಪಗಳು, ನೆರಳು ಕೊಡುವ ಮರಗಳು ಮತ್ತು ಕೆರೆಗಳಿರುವ ಪ್ರಶಾಂತವಾದ ಉಪವನಗಳೊ? ಹೌದು, ತೋಟವು ಎಷ್ಟೊಂದು ಸಾಂತ್ವನದಾಯಕ, ಚೈತನ್ಯಭರಿತ, ಶಾಂತಪೂರ್ಣ, ಹಾಗೂ ಚಿಕಿತ್ಸಕವೂ ಆದ ಸ್ಥಳವಾಗಿದೆ!
ಕೆಲವರು ಬಹುಶಃ ಸಮಯದ ಕೊರತೆಯಿಂದಾಗಿ ಒಂದು ತೋಟವನ್ನು ನೋಡಿಕೊಳ್ಳುವುದರಿಂದ ದೂರ ಸರಿದುಕೊಳ್ಳಬಹುದಾದರೂ, ನಮ್ಮಲ್ಲಿ ಎಲ್ಲರೂ ತೋಟದ ಬಣ್ಣಗಳು, ಸುವಾಸನೆಗಳು, ಶಬ್ದಗಳು, ಮತ್ತು ಹಣ್ಣುಗಳಲ್ಲಿ ಹರ್ಷಿಸುತ್ತೇವೆ. ಥಾಮಸ್ ಜೆಫರ್ಸನ್—ವಾಸ್ತುಶಿಲ್ಪಿ, ವಿಜ್ಞಾನಿ, ವಕೀಲ, ಸಂಶೋಧಕ, ಮತ್ತು ಅಮೆರಿಕದ ಅಧ್ಯಕ್ಷರು—ತೋಟವನ್ನು ಪ್ರೀತಿಸಿದರು. ಅವರು ಬರೆದುದು: “ನನಗೆ ಭೂಮಿಯ ಸಾಗುವಳಿಯಷ್ಟು ಹರ್ಷಕರವಾದ ಮತ್ತೊಂದು ವೃತ್ತಿಯಿರುವುದಿಲ್ಲ. . . . ನಾನಿನ್ನೂ ತೋಟಕ್ಕೆ ಸಮರ್ಪಿತನಾಗಿದ್ದೇನೆ. ನಾನೊಬ್ಬ ವೃದ್ಧ ಪುರುಷನಾಗಿದ್ದರೂ, ತರುಣ ತೋಟಗಾರನಾಗಿದ್ದೇನೆ.”
ಅನೇಕರ ದೃಷ್ಟಿಕೋನವು ಥಾಮಸ್ ಜೆಫರ್ಸನ್ ಅವರ ದೃಷ್ಟಿಕೋನದಂತೆಯೇ ಇದೆ. ಪ್ರತಿ ವರ್ಷ ಕೋಟಿಗಟ್ಟಲೆ ಸಂದರ್ಶಕರು ಲೋಕದ ಪ್ರಸಿದ್ಧ ತೋಟಗಳಿಗೆ ಪ್ರವಾಹರೂಪದಲ್ಲಿ ಹೋಗುತ್ತಾರೆ. ಇವುಗಳಲ್ಲಿ, ಇಂಗ್ಲೆಂಡ್ನಲ್ಲಿರುವ ಕ್ಯೂ ಗಾರ್ಡನ್ಸ್ (ರಾಯಲ್ ಬೊಟ್ಯಾನಿಕ್ ಗಾರ್ಡನ್ಸ್); ಜಪಾನಿನ ಕಿಯೋಟೊದಲ್ಲಿರುವ ತೋಟಗಳು; ಫ್ರಾನ್ಸ್ನಲ್ಲಿರುವ ವರ್ಸೈ ಅರಮನೆಯ ತೋಟಗಳು; ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಲಾಂಗ್ವುಡ್ ಗಾರ್ಡನ್ಸ್ ಕೆಲವಾಗಿವೆ. ಅನೇಕ ದೇಶಗಳಲ್ಲಿ, ಸಾಲಾಗಿ ಮರಗಳಿರುವ ಬೀದಿಗಳ ಉದ್ದಕ್ಕೂ ಒಳಸೇರಿಕೊಂಡಿರುವ, ಕುರುಚಲು ಗಿಡಗಳು, ಮರಗಳು, ಮತ್ತು ಪುಷ್ಪ ಬಣ್ಣದ ಪ್ರಜ್ವಲತೆಯಿಂದ ಸುತ್ತುವರಿಯಲ್ಪಟ್ಟ—ಒಂದು ಸೂಕ್ಷ್ಮಪ್ರಮಾಣದ ಪ್ರಮೋದವನದಂತೆ—ಮನೆಗಳುಳ್ಳ ನಗರ ಪ್ರದೇಶಗಳೂ ಇವೆ.
ತೋಟಗಳು ದೇಹಾರೋಗ್ಯವನ್ನು ಪ್ರವರ್ಧಿಸಬಲ್ಲವು
ಮಾನವರು ನೈಸರ್ಗಿಕ ಲೋಕದೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವಾಗ—ಆ ಸಂಪರ್ಕವು ಒಂದು ಕಿಟಕಿಯ ಮೂಲಕ ಪುಷ್ಪಗಳು, ಮರಗಳು, ಕುರುಚಲು ಗಿಡಗಳು, ಮತ್ತು ಪಕ್ಷಿಗಳನ್ನು ನೋಡುವುದಕ್ಕಿಂತ ಹೆಚ್ಚಿನದ್ದೇನೂ ಆಗಿರದಿದ್ದಾಗ್ಯೂ—ಅವರ ದೇಹಾರೋಗ್ಯವು ಉತ್ತಮವಾಗಿರಬಹುದೆಂದು ಗಮನಿಸಲಾಗಿದೆ. ಇದು, ನ್ಯೂ ಯಾರ್ಕ್ ನಗರದ ಆಸ್ಪತ್ರೆಯೊಂದು, ಅದರ ಚಾವಣಿಯ ಮೇಲೆ ಒಂದು ತೋಟವನ್ನು ನೆಡುವಂತೆ ಮಾಡಿತು. ಅದನ್ನು “ಸಂತೋಷ ಹಾಗೂ ಉತ್ಸಾಹದಿಂದ ಅಂಗೀಕರಿಸಲಾಯಿತು” ಎಂಬುದಾಗಿ ಆಸ್ಪತ್ರೆಯ ಒಬ್ಬ ಅಧಿಕಾರಿ ಹೇಳಿದನು. “ಅದು ರೋಗಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ—ಇಬ್ಬರಿಗೂ—ಸ್ಥೈರ್ಯ ವರ್ಧಕವಾಗಿ ಪರಿಣಮಿಸಿದೆ. . . . ಅದಕ್ಕೆ ಬಹಳಷ್ಟು ಚಿಕಿತ್ಸಕ ಸಂಭವನೀಯತೆಗಳಿರುವುದನ್ನು ನಾವು ಗ್ರಹಿಸುತ್ತೇವೆ.” ನಿಶ್ಚಯವಾಗಿಯೂ, ಅಧ್ಯಯನಗಳು ತೋರಿಸುವುದೇನೆಂದರೆ, ನಿಸರ್ಗದ ಮೇಲೆ ಜನರು ತಮ್ಮ ಜ್ಞಾನೇಂದ್ರಿಯಗಳನ್ನು ಸಂತೃಪ್ತಿಪಡಿಸಿಕೊಳ್ಳುವ ಮೂಲಕ ಶಾರೀರಿಕವಾಗಿ, ಮಾನಸಿಕವಾಗಿ, ಮತ್ತು ಭಾವಾತ್ಮಕವಾಗಿ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ.
ಅಲ್ಲದೆ, ಆತ್ಮಿಕ ಒಲವಿರುವ ವ್ಯಕ್ತಿಯೊಬ್ಬನು ದೇವರ ಕೈಕೆಲಸದ ಮಧ್ಯೆಯಿರುವಾಗ, ದೇವರಿಗೆ ಹೆಚ್ಚು ನಿಕಟವಾದ ಅನಿಸಿಕೆ ಅವನಿಗಾಗಬಹುದು. ತೋಟದ ಕುರಿತಾದ ಈ ವಿಷಯವನ್ನು, ಭೂಮಿಯ ಮೇಲಿದ್ದ ಪ್ರಪ್ರಥಮ ತೋಟ—ಏದೆನ್ ತೋಟ—ಕ್ಕೆ ಗುರುತಿಸಸಾಧ್ಯವಿದೆ. ಅಲ್ಲಿ ದೇವರು ಪ್ರಥಮವಾಗಿ ಮನುಷ್ಯನೊಂದಿಗೆ ಸಂವಾದಿಸಿದನು.—ಆದಿಕಾಂಡ 2:15-17; 3:8.
ತೋಟಕ್ಕಾಗಿರುವ ಪ್ರೀತಿಯು ವಿಶ್ವವ್ಯಾಪಿಯಾಗಿದೆ. ಮತ್ತು ನಾವು ನೋಡಲಿರುವಂತೆ, ಈ ವಾಸ್ತವಾಂಶವು ಮಹತ್ವದ್ದಾಗಿದೆ. ಆದರೆ, ಆ ವೈಶಿಷ್ಟ್ಯವನ್ನು ಚರ್ಚಿಸುವ ಮೊದಲು, ಎಲ್ಲ ಜನರ ಹೃದಯಗಳಲ್ಲಿ ಪ್ರಮೋದವನಕ್ಕಾಗಿರುವ ಹಂಬಲಿಕೆಯು ನಿಜವಾಗಿಯೂ ಎಷ್ಟು ಗಾಢವಾಗಿದೆ ಎಂಬುದನ್ನು ಅವಲೋಕಿಸಲು, ಇತಿಹಾಸದ ಕೆಲವೊಂದು ತೋಟಗಳೊಳಗೆ “ಸುತ್ತಾಡು”ವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.