ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 3/8 ಪು. 20-23
  • ರೋಮಾಂಚಕವಾದ ಆಶ್ಚರ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರೋಮಾಂಚಕವಾದ ಆಶ್ಚರ್ಯ
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪ್ರಣಯ ಮತ್ತು ಕಾಲೇಜ್‌
  • ಧರ್ಮದಲ್ಲಿ ಆಸಕ್ತಿ
  • ಒಂದು ಸಂಕಟಕರವಾದ ಅವಧಿ
  • ನನ್ನ ಜೀವನವನ್ನು ಹಿಡಿತದಲ್ಲಿಟ್ಟುಕೊಳ್ಳುವುದು
  • ಅಪ್ಪನೊಂದಿಗಿನ ನನ್ನ ಸಂಬಂಧ
  • ನಾನು ನನ್ನ ಹೆತ್ತತಾಯಿಯನ್ನು ಕಂಡುಕೊಂಡ ವಿಧ
  • ಫೋನ್‌ ಕರೆ ಮತ್ತು ಆಶ್ಚರ್ಯ
  • ಸ್ಮರಣೀಯ ಪುನರ್ಮಿಲನ
  • ಒಂದು ಅಪೂರ್ವ ಕ್ರೈಸ್ತ ಪರಂಪರೆ
    ಕಾವಲಿನಬುರುಜು—1993
  • ಯಶಸ್ವಿಯಾದವರ ಕಿರುಪರಿಚಯ ಭಾಗ - I
    ಎಚ್ಚರ!—2010
  • ಬಹುಮಾನದ ಮೇಲೆ ಕಣ್ಣುಗಳನ್ನು ಮತ್ತು ಹೃದಯವನ್ನು ನೆಟ್ಟಿರುವುದು
    ಕಾವಲಿನಬುರುಜು—1996
  • ದೇವರ ಜೊತೆಗೂ ಅಮ್ಮನ ಜೊತೆಗೂ ಶಾಂತಿ ಸಂಬಂಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಎಚ್ಚರ!—1997
g97 3/8 ಪು. 20-23

ರೋಮಾಂಚಕವಾದ ಆಶ್ಚರ್ಯ

ಡೇನ ಫಾಲ್ಟ್ಸ್‌ ಎಂಬವನು ಎಂಟು ವಯಸ್ಸಿನವನಾಗಿದ್ದಾಗ ಅವನಿಗೆ ತಾನು ದತ್ತುಪುತ್ರನೆಂದು ತಿಳಿದುಬಂತು. ವರುಷಗಳ ತರುವಾಯ, ‘ನನ್ನ ತಾಯಿ ಯಾರು? ಅವರು ಹೇಗಿದ್ದರು? ಅವರು ನನ್ನನ್ನು ದತ್ತುಸ್ವೀಕಾರಕ್ಕಾಗಿ ಏಕೆ ಕೊಟ್ಟರು? ನನಗೆ ಸೋದರ ಸೋದರಿಯರಿದ್ದಾರೊ?’ ಎಂದು ಅವನು ಕುತೂಹಲಪಡಲು ಆರಂಭಿಸಿದನು. ಡೇನ ಕೊನೆಗೆ ಹೆತ್ತತಾಯಿಯನ್ನು ಕಂಡುಹಿಡಿದ ವಿಧ ಮತ್ತು ಅನುಸರಿಸಿ ಬಂದ ನಾಟಕೀಯ ಆಶ್ಚರ್ಯದ ಕುರಿತ ಅವನ ಕಥನವನ್ನು ಓದಿರಿ.

ನಾನು ಅಮೆರಿಕದ ಅಲಾಸ್ಕದ ಕೆಚಿಕನ್‌ನಲ್ಲಿ ಆಗಸ್ಟ್‌ 1, 1966ರಲ್ಲಿ ಹುಟ್ಟಿದೆ. ನನ್ನ ಅಕ್ಕ ಪ್ಯಾಮ್‌ ನನಗಿಂತ ಎರಡು ವರ್ಷ ದೊಡ್ಡವಳು. ನಮ್ಮ ತಂದೆ, ಬ್ಯೂರೋ ಆಫ್‌ ಇಂಡಿಯನ್‌ (ಮೂಲನಿವಾಸಿ) ಅಫೇರ್ಸ್‌ ಸಂಸ್ಥೆಯಲ್ಲಿ ಒಬ್ಬ ಸಮಾಜ ಸೇವಕರಾಗಿದ್ದು, ಪದೇ ಪದೇ ವರ್ಗಾಯಿಸಲ್ಪಡುತ್ತಿದ್ದರು. ನಾವು ಅಲಾಸ್ಕದಲ್ಲಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಿಸುತ್ತಿದ್ದೆವು. ಆ ಬಳಿಕ ನಾವು ಐಅವ, ಓಕ್ಲಹೋಮ, ಆ್ಯರಿಸೋನ ಮತ್ತು ಆರಿಗನ್‌ನಲ್ಲಿ ಜೀವಿಸಿದೆವು.

ನಾವು 1975ರ ಬೇಸಗೆಯಲ್ಲಿ ವಿಸ್ಕಾನ್ಸಿನ್‌ನಲ್ಲಿ ಸಂಬಂಧಿಕರನ್ನು ಭೇಟಿಮಾಡುತ್ತಿದ್ದಾಗ, ನನ್ನ ಕೆಲವು ಸೋದರ ಬಂಧು (ಕಸಿನ್‌)ಗಳು ಮತ್ತೊಬ್ಬ ಸೋದರ ಬಂಧುವಿನ ವಿಷಯದಲ್ಲಿ ನಿರ್ದಾಕ್ಷಿಣ್ಯವಾಗಿ ಮಾತಾಡಿದರು. “ಅವನು ದತ್ತುಪುತ್ರನಾಗಿರುವುದರಿಂದ ನಿಜವಾಗಿಯೂ ಫಾಲ್ಟ್ಸ್‌ ಕುಟುಂಬದವನಲ್ಲ,” ಎಂದರವರು. ನಾವು ಮನೆಗೆ ಹಿಂದಿರುಗಿದ ಬಳಿಕ, ನಾನು ಅಮ್ಮನೊಡನೆ ಇದರ ಕುರಿತು ಕೇಳಲಾಗಿ, ಅವರ ಮುಖದಲ್ಲಿ ಕಂಡುಬಂದ ತಲ್ಲಣಗೊಂಡ ಮುದ್ರೆಯಿಂದ ನಾನು ಅಚ್ಚರಿಗೊಂಡೆ. ದತ್ತುಸ್ವೀಕಾರವೆಂದರೇನೆಂದು ಅವರು ವಿವರಿಸಿದರು. ಆ ರಾತ್ರಿ, ಅವರು ಕಣ್ಣೀರು ಸುರಿಸುತ್ತ, ನಾನು ಮತ್ತು ನನ್ನ ಅಕ್ಕ ಸಹ ದತ್ತುಮಕ್ಕಳೆಂದು ನನಗೆ ಹೇಳಿದರು.

ದತ್ತುಸ್ವೀಕಾರವೆಂಬುದು ಆಗ ನನಗೆ ಅಷ್ಟು ದೊಡ್ಡ ವಿಷಯವಾಗಿ ಕಂಡುಬರಲಿಲ್ಲ; ಮತ್ತು ಸ್ವಲ್ಪ ಸಮಯದ ವರೆಗೆ ನಾನು ಅದಕ್ಕೆ ಹೆಚ್ಚಿನ ಗಮನವನ್ನು ಕೊಡಲಿಲ್ಲ. ನನಗೆ ತಂದೆತಾಯಿಗಳಿದ್ದರು, ಮತ್ತು ಜೀವನವು ಹೇಗಿರಬೇಕೊ ಅದೇ ರೀತಿಯಲ್ಲಿ ಇದೆಯೆಂಬಂತೆ ತೋರಿತು. ನನ್ನ ಹೆತ್ತವರು ಸ್ಥಳಾಂತರಿಸುವುದನ್ನು ನಿಲ್ಲಿಸಿ, ಒಂದೇ ಖಾಯಂ ಸ್ಥಳದಲ್ಲಿ ಉಳಿಯಲು ನಿರ್ಧರಿಸಿದರು. ನಾನು ಒಂಬತ್ತು ವಯಸ್ಸಿನವನಾಗಿದ್ದಾಗ, ನಾವು ವಾಷಿಂಗ್ಟನ್ನಿನ ವ್ಯಾಂಕೂವರ್‌ನಲ್ಲಿ ನೆಲೆಸಿದೆವು. ನಾನೂ ತಂದೆಯೂ ಆಪ್ತರಾಗಿದ್ದರೂ ತಾಯಿಯೂ ನಾನೂ ಅಷ್ಟು ಆಪ್ತರಾಗಿರಲಿಲ್ಲ. ನಾನು ಸ್ವತಂತ್ರವರ್ತಿಯೂ ಆಗಾಗ ಪ್ರತಿಭಟಿಸುವವನೂ ಆಗಿದ್ದೆ ಮತ್ತು ಇದರಿಂದ ತಾಯಿಗಾದ ಹತಾಶೆಯು ನಮ್ಮ ಮಧ್ಯೆ ಬೆಳೆದ ಅಂತರವನ್ನು ವಿವರಿಸೀತು.

ಪ್ರಣಯ ಮತ್ತು ಕಾಲೇಜ್‌

ನಾನು ಪ್ರೌಢಶಾಲೆಯಲ್ಲಿದ್ದಾಗ ಟ್ರೀನಳನ್ನು ಸಂಧಿಸಲಾಗಿ, ನಾವು ಒಡನೆ ಸ್ನೇಹಿತರಾದೆವು. ಪದವಿ ಪಡೆದ ಬಳಿಕ, ನಾನು ಆರಿಗನ್‌ನ ಕಾರ್ವಾಲಿಸ್‌ನಲ್ಲಿದ್ದ ಆರಿಗನ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಪ್ರೌಢ ವಿದ್ಯಾರ್ಥಿವೇತನವನ್ನು ಅಂಗೀಕರಿಸಿದೆ. ನನಗಿದ್ದ ಬಿಡುವಿನ ಸಮಯವನ್ನು ಟ್ರೀನಳೊಂದಿಗಿರಲು ವ್ಯಾಂಕೂವರಿಗೆ ಹೋಗಿಬರುವುದರಲ್ಲಿ ಕಳೆದೆ. ಟ್ರೀನಳಿಗೆ ಇನ್ನೂ ಒಂದು ವರುಷದ ಪ್ರೌಢಶಾಲೆಯ ವ್ಯಾಸಂಗವು ಬಾಕಿ ಇತ್ತು. ನಾನು ಹೆಚ್ಚು ಪಾಠಾಭ್ಯಾಸ ಮಾಡದಿದ್ದರೂ, ಕಾಲೇಜಿನಲ್ಲಿ ಹೇಗೂ ಪಾಸಾಗುವೆನೆಂದೆಣಿಸಿದೆ. ನನ್ನ ಮೊದಲ ರಿಪೋರ್ಟ್‌ ಕಾರ್ಡು ನನಗೆ ಆಘಾತವನ್ನುಂಟುಮಾಡಿತು—ಆ ವರೆಗಿನ ನನ್ನ ರಿಪೋರ್ಟ್‌ಗಳಲ್ಲಿ ಅತಿ ಕೆಳಮಟ್ಟದ್ದು! ನನಗೆ ನಾಚಿಕೆಯಾಯಿತು. ಆದರೂ ನಾನು ಟ್ರೀನಳಿಗೆ ಭೇಟಿಕೊಡುವುದನ್ನು ನಿಲ್ಲಿಸಲಿಲ್ಲ; ನನ್ನ ಭೇಟಿಗಳ ಸಮಯದಲ್ಲಿ ಅಭ್ಯಾಸಮಾಡಸಾಧ್ಯವಾಗುವಂತೆ ನಾನು ಪುಸ್ತಕಗಳನ್ನು ನನ್ನೊಂದಿಗೆ ಒಯ್ದೆ ಅಷ್ಟೆ.

ಬಳಿಕ ಒಂದು ದಿನ, ವ್ಯಾಂಕೂವರಿನಿಂದ ಮೋಟರ್‌ಸೈಕಲ್‌ನ ಮೇಲೆ ಶಾಲೆಗೆ ಹಿಂದಿರುಗಿ ಹೋಗುತ್ತಿದ್ದಾಗ, ನಾನೊಂದು ಗುರುತರವಾದ ಅಪಘಾತದಲ್ಲಿ ಸಿಲುಕಿಕೊಂಡೆ. ಇದಾಗಿ ಸ್ವಲ್ಪದರಲ್ಲಿ, ಕ್ರಾಸ್‌ವಾಕ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಒಂದು ಕಾರು ನನಗೆ ಹೊಡೆಯಲಾಗಿ ಇನ್ನೂ ಗುರುತರವಾಗಿ ಗಾಯಗೊಂಡೆ. ನಾನು ಕೆಲಸಮಾಡಲಾರಂಭಿಸಿದೆ ಮತ್ತು ಕಾಲೇಜಿಗೆ ಹಿಂದಿರುಗುವ ಆಸೆಯನ್ನು ಕಳೆದುಕೊಂಡೆ.

ಧರ್ಮದಲ್ಲಿ ಆಸಕ್ತಿ

ಸಕಾಲದಲ್ಲಿ, ನಾನೂ ಟ್ರೀನಳೂ ಸಹಜೀವನವನ್ನಾರಂಭಿಸಿದೆವು. ನಮಗೆ ದೇವರಲ್ಲಿ ನಂಬಿಕೆಯಿತ್ತು ಮತ್ತು ಆತನನ್ನು ತಿಳಿಯಬಯಸಿದೆವು. ಆದರೂ, ಚರ್ಚುಗಳು ಕಪಟಾಚರಣೆ ಮಾಡುತ್ತವೆಂದು ನಮಗನಿಸಿತು. ಆದಕಾರಣ, ನಾವು ನಮ್ಮಷ್ಟಕ್ಕೇ ಬೈಬಲನ್ನು ಓದಲಾರಂಭಿಸಿದೆವು, ಆದರೆ ಅದರ ಅರ್ಥವೇ ನಮಗಾಗುತ್ತಿರಲಿಲ್ಲ.

ಒಂದು ದಿನ, ಆರಿಗನ್‌ನ ಪೋರ್ಟ್‌ಲೆಂಡಿನಲ್ಲಿ ನಾನು ಕೆಲಸಮಾಡುತ್ತಿದ್ದಾಗ, ನಾನು ಭೇಟಿಯಾಗಿರುವವರಲ್ಲಿ ಅತಿ ಸಭ್ಯನೆಂದು ನಾನೆಣಿಸಿದ ಒಬ್ಬ ಪುರುಷನಿಗೆ, ಜೊತೆಕಾರ್ಮಿಕರು ಕೀಟಲೆಮಾಡಲಾರಂಭಿಸಿದರು. ರ್ಯಾಂಡಿ ಈ ಕಿರುಕುಳವನ್ನು ಶಾಂತಭಾವದಿಂದ ಸಹಿಸಿಕೊಂಡನು. ತರುವಾಯ ಆ ದಿನ, ನಾನು ಅವನನ್ನು, “ನೀನೊಬ್ಬ ಶುಶ್ರೂಷಕ (ಮಿನಿಸ್ಟರ್‌)ನೆಂದು ನನಗೆ ಕೇಳಿಬರುತ್ತಿರುವ ವಿಷಯದ ಕುರಿತೇನು?’ ಎಂದು ಕೇಳಿದೆ.

“ಅದು ಸರಿ, ನಾನೊಬ್ಬ ಶುಶ್ರೂಷಕ,” ಎಂದನವನು.

“ಯಾವ ಸಂಸ್ಥೆಯಲ್ಲಿ?” ಎಂದು ಕೇಳಿದೆ.

“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು.”

“ಯೆಹೋವನ ಸಾಕ್ಷಿಗಳು ಯಾರು?”

“ನಿನಗೆ ನಿಜವಾಗಿ ಗೊತ್ತಿಲ್ಲವೊ?” ಎಂದು ಅವನು ಆಶ್ಚರ್ಯದ ಮುಖಭಾವದಿಂದ ಕೇಳಿದ.

“ಹೌದು, ಯೆಹೋವನ ಸಾಕ್ಷಿಗಳೆಂದರೆ ಯಾರು? ನನಗೆ ಗೊತ್ತಿರಬೇಕೊ?” ಎಂದು ನಾನು ಹೇಳಿದೆ.

“ಹೌದು,” ಎಂದನವನು ನಸುನಗೆ ಬೀರುತ್ತ, “ನಿನಗೆ ಗೊತ್ತಿರಬೇಕು. ಊಟದ ಸಮಯದಲ್ಲಿ ನೀನು ಏನು ಮಾಡುತ್ತೀ?”

ಅದು ಮಧ್ಯಾಹ್ನದೂಟದ ಸಮಯದಲ್ಲಿ ಮಾಡಿದ ಅನೇಕ ಬೈಬಲ್‌ ಚರ್ಚೆಗಳಲ್ಲಿ ಮೊದಲನೆಯದಾಗಿತ್ತು. ಒಂದು ರಾತ್ರಿ ನಾನು ಟ್ರೀನಳಿಗೆ ಅವರ ವಿಷಯ ಹೇಳಿದೆ. “ಯೆಹೋವನ ಸಾಕ್ಷಿಗಳೊಂದಿಗೆ ಮಾತಾಡಬೇಡ!” ಎಂದು ಅವಳು ಉದ್ಘರಿಸಿದಳು. “ಅವರು ವಿಚಿತ್ರ ಜನರು! ಅವರು ಕ್ರೈಸ್ತರೂ ಅಲ್ಲ. ಅವರು ಕ್ರಿಸ್ಮಸನ್ನು ಆಚರಿಸುವುದಿಲ್ಲ.” ಯೆಹೋವನ ಸಾಕ್ಷಿಗಳ ವಿಷಯ ಆಕೆ ಕೇಳಿದ್ದ ಇತರ ಸಂಗತಿಗಳನ್ನೂ ಆಕೆ ಹೇಳತೊಡಗಿದಳು.

“ನಿನಗೆ ಸತ್ಯವಾಗಿಲ್ಲದಿರುವ ತುಂಬ ವಿಷಯಗಳನ್ನು ಯಾರೊ ಹೇಳಿದ್ದಾರೆ,” ಎಂದೆ ನಾನು. ದೀರ್ಘ ಸಂಭಾಷಣೆಯ ಬಳಿಕ, ಆಕೆ ಪೂರ್ತಿ ಸತ್ಯವನ್ನು ಕೇಳಿಲ್ಲವೆಂದು ಆಕೆಗೆ ಮನದಟ್ಟುಮಾಡಿಸಲು ನಾನು ಸಮರ್ಥನಾದೆ. ಇದಾದ ಬಳಿಕ, ನಾನು ರ್ಯಾಂಡಿಯೊಂದಿಗೆ ಪ್ರಶ್ನೆಗಳನ್ನು ಕೇಳುವಂತೆ ಆಕೆ ಮಾಡಿದಳು, ಮತ್ತು ನಾನು ಸ್ಪಷ್ಟವಾದ ಒಂದು ಶಾಸ್ತ್ರೀಯ ಉತ್ತರದ ಬೆನ್ನಿಗೆ ಇನ್ನೊಂದನ್ನು ಹಿಂದೆ ತಂದುಕೊಟ್ಟೆ. ಕೊನೆಗೆ, ಟ್ರೀನ, “ಇದೆಲ್ಲ ಬೈಬಲಿನಲ್ಲಿತ್ತೆಂಬುದು ನನಗೆ ಗೊತ್ತೇ ಇರಲಿಲ್ಲವಾದರೂ ಅವರಿನ್ನೂ ವಿಚಿತ್ರ ಜನರಾಗಿದ್ದಾರೆಂದು ನನ್ನ ಭಾವನೆ. ಅವನೊಂದಿಗೆ ನೀನು ಬೈಬಲಿನ ಕುರಿತು ಚರ್ಚಿಸುತ್ತ ಇರಬೇಕೆಂದು ಬಯಸುವುದಾದರೆ ಚರ್ಚಿಸು; ಅದನ್ನು ನಾನು ಲಕ್ಷ್ಯಮಾಡುವುದಿಲ್ಲ, ಆದರೆ ಮನೆಗೆ ಬಂದು ಅದನ್ನು ನನ್ನ ಮೇಲೆ ಒತ್ತಾಯಿಸುವುದು ಬೇಡ” ಎಂದು ಹೇಳಿದಳು.

ಒಂದು ಸಂಕಟಕರವಾದ ಅವಧಿ

ನಾನು ಬೈಬಲಿನಿಂದ ಕಲಿಯುತ್ತಿದ್ದುದನ್ನು ನಾನು ನಂಬಿದೆ, ಆದರೆ ಅದಕ್ಕನುಸಾರ ಜೀವಿಸುವುದು ನನ್ನಿಂದ ಸಾಧ್ಯವಿಲ್ಲ ಎಂಬ ಅನಿಸಿಕೆ ನನಗಾಯಿತು. ಟ್ರೀನ ಮತ್ತು ನಾನು ಹೆಚ್ಚೆಚ್ಚು ಜಗಳವಾಡುತ್ತಿರುವಂತೆ ಕಂಡುಬಂತು. ಆದಕಾರಣ, ನಾನು ಮತ್ತು ನನ್ನ ಒಬ್ಬ ಸ್ನೇಹಿತನು ನಮ್ಮ ನಲ್ಲೆಯರನ್ನು ಬಿಟ್ಟುಹೋಗಿ, ಓಕ್ಲಹೋಮದಲ್ಲಿ ಹೊಸ ಜೀವನವನ್ನಾರಂಭಿಸಲು ನಿರ್ಣಯಿಸಿದೆವು. ನಾನು ಕೆಲಸದಿಂದ ರಜೆಯನ್ನು ಪಡೆದುಕೊಳ್ಳುವ ಏರ್ಪಾಡು ಮಾಡಿದೆ. ಸ್ವಲ್ಪದರಲ್ಲಿ, ನಾನೂ ನನ್ನ ಮಿತ್ರನೂ ಟೆಕ್ಸಸ್‌ ಗಡಿಯ ಹತ್ತಿರದ ಒಂದು ಚಿಕ್ಕ ಪಟ್ಟಣದಲ್ಲಿ, ಒಂದು ವಾಸದ ಮಹಡಿಯಲ್ಲಿ ನೆಲೆಸಿದೆವು. ನಾನು ಟ್ರೀನಳ ಗೈರುಹಾಜರಿಗಾಗಿ ಬಹಳ ವಿಷಾದಪಡುತ್ತೇನೆಂದು ಗ್ರಹಿಸಲು ಹೆಚ್ಚು ಸಮಯ ಹಿಡಿಯಲಿಲ್ಲವಾದರೂ, ಹೇಗೂ ಸ್ವತಃ ಸುಖಾನುಭವಿಸಲು ನಿರ್ಣಯಿಸಿದೆ.

ಟೆಕ್ಸಸ್‌ನಲ್ಲಿ ಮದ್ಯಪಾನೀಯವನ್ನು ಕುಡಿಯಲಿಕ್ಕಾಗಿರುವ ಶಾಸನಬದ್ಧ ಪ್ರಾಯವು 19ತ್ತಾಗಿತ್ತೆಂದು ನನಗೆ ತಿಳಿಯಲಾಗಿ, ನನ್ನ ಸ್ನೇಹಿತನು ಒಂದು ಪ್ರವಾಸಕ್ಕೆ ಹೊರಟಾಗ, ಒಂದು ಪ್ರಸಿದ್ಧ ರಾಕ್‌ನ್ರೋಲ್‌ ಬಾರ್‌ನಲ್ಲಿ ಸಂತೋಷಿಸಲು ನಾನು ಒಂದು ರಾತ್ರಿ ಗಡಿ ದಾಟಿಹೋದೆ. ನಾನು ತುಂಬ ಕುಡಿದು ಮತ್ತನಾಗಿ, ನನ್ನ ಕಾರನ್ನು ಧ್ವಂಸಮಾಡಿದೆ, ಮತ್ತು ನಾನು ಸೆರೆಮನೆಗೆ ಕರೆದೊಯ್ಯಲ್ಪಟ್ಟೆ. ಸಕಾಲದಲ್ಲಿ, ನಾನು ನನ್ನ ತಂದೆಯನ್ನು ಸಂಪರ್ಕಿಸಶಕ್ತನಾದೆ ಮತ್ತು ಅವರು ನನ್ನನ್ನು ಜಾಮೀನಿನ ಮೇಲೆ ಬಿಡಿಸಿದರು. ಹಾಗೂ, ಟ್ರೀನ ನನ್ನನ್ನು ತನ್ನೊಂದಿಗೆ ಜೀವಿಸುವಂತೆ ಅನುಮತಿಸಿದಳು, ಅದಕ್ಕಾಗಿ ನಾನು ಕೃತಜ್ಞನಾಗಿದ್ದೆ! ನಾನು ನನ್ನ ಹಳೆಯ ಕೆಲಸಕ್ಕೆ ಹಿಂದಿರುಗಿ, ರ್ಯಾಂಡಿಯೊಂದಿಗೆ ಬೈಬಲ್‌ ಚರ್ಚೆಗಳನ್ನು ಮುಂದುವರಿಸಿದೆ.

ನನ್ನ ಜೀವನವನ್ನು ಹಿಡಿತದಲ್ಲಿಟ್ಟುಕೊಳ್ಳುವುದು

ನಾನು ಮೊದಲಾಗಿ ಯೆಹೋವನ ಸಾಕ್ಷಿಗಳ ಕುರಿತು ಕೇಳಿ ಸುಮಾರು ಎರಡು ವರ್ಷಗಳಾಗಿದ್ದವು, ಮತ್ತು ನನ್ನ ಬೈಬಲ್‌ ಅಭ್ಯಾಸದಲ್ಲಿ ಹೆಚ್ಚಾಗಿ ಒಳಗೊಳ್ಳಲು ನಾನು ನಿಶ್ಚಯಿಸಿದೆ. ನನಗೀಗ 20 ವರ್ಷ ವಯಸ್ಸಾಗಿತ್ತು, ಮತ್ತು ನಾನು ಈ ಲೇಖನದ ಮೊದಲಲ್ಲಿ ಹೇಳಿರುವ, ನನ್ನ ದತ್ತುಸ್ವೀಕಾರದ ಕುರಿತ ಪ್ರಶ್ನೆಗಳು ನನ್ನನ್ನು ಕಾಡಿಸತೊಡಗಿದವು. ಆದಕಾರಣ, ನಾನು ನನ್ನ ಹೆತ್ತತಾಯಿಯನ್ನು ಹುಡುಕಲು ಗಂಭೀರವಾಗಿ ಪ್ರಯತ್ನಿಸತೊಡಗಿದೆ.

ನಾನು ಹುಟ್ಟಿದ್ದ ಅಲಾಸ್ಕದ ಆಸ್ಪತ್ರೆಯನ್ನು ಸಂಪರ್ಕಿಸಿ, ನಾನು ಹೇಗೆ ಮುಂದುವರಿಯಬೇಕೆಂದು ಕೇಳಿದೆ. ಏನು ಮಾಡಬೇಕೆಂದು ತಿಳಿದ ಬಳಿಕ, ನನ್ನ ಮೂಲ ಜನನ ಪ್ರಮಾಣಪತ್ರದ ಒಂದು ಪ್ರತಿಯನ್ನು ಪಡೆದೆ. ಮತ್ತು ನನ್ನ ತಾಯಿಯ ಹೆಸರು ಸಾಂಡ್ರ ಲೀ ಹರ್ಶ್‌ ಎಂಬುದನ್ನು ನಾನು ಕಂಡುಹಿಡಿದೆ; ಆದರೆ ನನ್ನ ತಂದೆಯ ಹೆಸರು ಇರಲಿಲ್ಲ. ನಾನು ಹುಟ್ಟಿದಾಗ ಸಾಂಡ್ರ ಕೇವಲ 19 ವಯಸ್ಸಿನವಳಾಗಿದ್ದಳು. ಆದಕಾರಣ ಆಕೆ ಭಯಭೀತಳಾದ, ವಿವಾಹವಾಗದೆ ಗರ್ಭಿಣಿಯಾಗಿದ್ದ ಒಬ್ಬ ಹುಡುಗಿಯೆಂದೂ, ಕಷ್ಟಕರವಾದ ನಿರ್ಣಯವನ್ನು ಮಾಡಿದ್ದವಳೆಂದು ನಾನು ಭಾವಿಸಿದೆ. ನನ್ನ ತಾಯಿಯನ್ನು ಕಂಡುಹಿಡಿಯಲು ಸಾಕಷ್ಟು ಮಾಹಿತಿ ನನ್ನ ಜನನ ಪ್ರಮಾಣಪತ್ರದಲ್ಲಿರಲಿಲ್ಲ.

ಈ ಮಧ್ಯೆ, ರ್ಯಾಂಡಿಯೊಂದಿಗೆ ನಾನು ಮಾಡುತ್ತಿದ್ದ ಬೈಬಲ್‌ ಅಭ್ಯಾಸದ ಫಲವಾಗಿ, ನಾನು ಸತ್ಯ ಧರ್ಮವನ್ನು ಕಂಡುಹಿಡಿದಿದ್ದೇನೆಂಬ ನಿಶ್ಚಿತಾಭಿಪ್ರಾಯ ನನಗಾಗಿತ್ತು. ಆದರೆ ಹಾನಿಮಾಡುವ ಹೊಗೆಸೊಪ್ಪಿನ ಉಪಯೋಗವನ್ನು ಬಿಟ್ಟುಬಿಡುವುದರಲ್ಲಿ ನಾನು ಪದೇ ಪದೇ ವಿಫಲಗೊಂಡೆ. (2 ಕೊರಿಂಥ 7:1) ಯೆಹೋವನು ನನ್ನನ್ನು ತ್ಯಜಿಸಿದ್ದಾನೆಂದು ನಾನು ನೆನಸಿದೆ. ಆಗ, ರಾಜ್ಯ ಸಭಾಗೃಹದಲ್ಲಿ ಒಬ್ಬ ಸಾಕ್ಷಿಯು ಹೇಳಿದ ಒಂದು ವಿಷಯವು ನನಗೆ ನಿಜವಾಗಿಯೂ ಸಹಾಯಮಾಡಿತು. ನಾವು ವಿಫಲಗೊಳ್ಳುವಂತೆ ಬಯಸುವವನು ಸೈತಾನನೆಂದೂ, ಕೆಲವರು ಪ್ರಯತ್ನ ಮಾಡುವುದನ್ನು ತೊರೆದು ನಿತ್ಯಜೀವವನ್ನು ಕಳೆದುಕೊಳ್ಳುವುದನ್ನು ನೋಡುವುದು ದುಃಖಕರವೆಂದೂ ಅವನು ಹೇಳಿದನು. “ನಾವು ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹೇರಬೇಕು ಮತ್ತು ನಮ್ಮ ಕ್ಲೇಶಕರ ಸಮಯಗಳಲ್ಲಿ ಆತನು ನಮಗೆ ಸಹಾಯಮಾಡುವಂತೆ ನಾವು ಸಂಪೂರ್ಣವಾಗಿ ಆತನ ಮೇಲೆ ಆತುಕೊಳ್ಳಬೇಕು” ಎಂದು ಅವನಂದನು.—ಕೀರ್ತನೆ 55:22.

ನನಗೆ ಕೇಳಲು ಅವಶ್ಯವಿದ್ದದ್ದೂ ಅದೇ! ಯೆಹೋವನ ಸಹಾಯಕ್ಕಾಗಿ ಅನೇಕ ವೇಳೆ ಪ್ರಾರ್ಥಿಸುತ್ತ, ಆ ಸಹೋದರನು ಹೇಳಿದ್ದನ್ನು ನಾನು ಅನ್ವಯಿಸತೊಡಗಿದೆ. ಬೇಗನೆ, ನಾನು ತಂಬಾಕು ಬಳಸುವುದನ್ನು ಬಿಟ್ಟುಬಿಟ್ಟೆ, ಟ್ರೀನ ಮತ್ತು ನಾನು ವಿವಾಹಮಾಡಿಕೊಂಡೆವು, ಮತ್ತು ನಾನು ನನ್ನ ಬೈಬಲ್‌ ಅಭ್ಯಾಸಗಳಲ್ಲಿ ಕ್ರಮವುಳ್ಳವನಾದೆ. ಸಕಾಲದಲ್ಲಿ ಟ್ರೀನ ಸಹ ಅಭ್ಯಾಸಮಾಡತೊಡಗಿದಳು. ನಾನು ಜೂನ್‌ 9, 1991ರಂದು ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸೂಚಿಸಿದೆ. ಸುಮಾರು ಎರಡು ವಾರಗಳ ಅನಂತರ ನಮ್ಮ ಜ್ಯೇಷ್ಠ ಪುತ್ರಿ, ಬ್ರಿಆ್ಯನ ಜೀನ್‌ ಹುಟ್ಟಿದಳು.

ಅಪ್ಪನೊಂದಿಗಿನ ನನ್ನ ಸಂಬಂಧ

ನನ್ನ ಅಪ್ಪ ಮತ್ತು ನಾನು ಆಪ್ತರಾಗಿದ್ದೆವು. ಅವರು ನಾನು ಹತಾಶನಾಗುತ್ತಿದ್ದಾಗ ಸದಾ ಪ್ರೋತ್ಸಾಹ ನೀಡಲು ಉಪಸ್ಥಿತರಾಗಿದ್ದ ಬಹಳ ದಯಾಪರ ವ್ಯಕ್ತಿಯಾಗಿದ್ದರು. ಆದರೂ, ನನಗೆ ಶಿಸ್ತು ಬೇಕಾಗಿದ್ದಾಗ ಅವರು ದೃಢಸಂಕಲ್ಪದವರಾಗಿದ್ದರು. ಹೀಗೆ, 1991ರ ಮೊದಲಲ್ಲಿ, ಅಪ್ಪನಿಗೆ ಮಾರಕವಾದ ಶ್ವಾಸಕೋಶದ ಕ್ಯಾನ್ಸರ್‌ ಇದೆಯೆಂಬುದು ನನಗೆ ತಿಳಿದುಬಂದಾಗ, ಅದು ಕಷ್ಟಕರವಾದ ಸಮಯವಾಗಿತ್ತು. ಅಷ್ಟರೊಳಗೆ, ಅಮ್ಮ ಮತ್ತು ಅಪ್ಪ ಮಾಂಟ್ಯಾನದ ಹ್ಯಾಮಿಲ್ಟನ್‌ಗೆ ಸ್ಥಳಾಂತರಿಸಿದ್ದರು. ನಾವು ಅವರನ್ನು ನೋಡಲು ಮತ್ತು ಅಮ್ಮನಿಗೆ ಬೆಂಬಲ ನೀಡಪ್ರಯತ್ನಿಸಲು ಅನೇಕ ವೇಳೆ ಅಲ್ಲಿಗೆ ಪ್ರಯಾಣಿಸಿದೆವು.

ನಾವು ಅಪ್ಪನಿಗೆ ಇರುವುದು ಈ ಜೀವಿತ ಮಾತ್ರವೋ? ಎಂಬ ಪುಸ್ತಕವನ್ನು ಕೊಡಶಕ್ತರಾದೆವು. ತಾನದನ್ನು ಓದುವೆನೆಂದು ಅವರು ವಚನಕೊಟ್ಟರು, ಮತ್ತು ತಾನು ತನ್ನ ಕುಟುಂಬದ ಯೋಗಕ್ಷೇಮದ ವಿಷಯದಲ್ಲಿ ಚಿಂತಿತನಾಗಿದ್ದೇನೆಂದು ಹೇಳಿದರು. ನನ್ನ ಕೊನೆಯ ಭೇಟಿಯ ವೇಳೆ, ನಾನು ಅವರ ಮಗನಾಗಿರುವುದು ಅವರಿಗೆ ಎಷ್ಟೊಂದು ಹೆಮ್ಮೆಯ ವಿಷಯವೆಂದೂ, ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆಂದೂ ಹೇಳಿದರು. ಕಣ್ಣೀರು ಉಕ್ಕಿಬರಲಾಗಿ, ಅವರು ತಮ್ಮ ತಲೆಯನ್ನು ಕಿಟಿಕಿಯ ಕಡೆ ತಿರುಗಿಸಿದರು. ನಾನು ಅವರನ್ನು ಬಿಟ್ಟುಹೋಗುವ ಮೊದಲು, ನಾವು ಅನೇಕ ಬಾರಿ ಒಬ್ಬರನ್ನೊಬ್ಬರು ಅಪ್ಪಿಕೊಂಡೆವು. ನವೆಂಬರ್‌ 21, 1991ರಲ್ಲಿ ಸಾಯುವ ಮೊದಲು, ಅಪ್ಪ ಪುಸ್ತಕದಲ್ಲಿ ಮೂರನೆಯ ಒಂದಂಶವನ್ನು ಓದಿದ್ದರು.

ಅಪ್ಪನ ಮರಣ ಮತ್ತು ವಾಷಿಂಗ್ಟನ್ನಿನ ಮೋಸೆಸ್‌ ಲೇಕ್‌ಗೆ ನಮ್ಮ ಸ್ಥಳಾಂತರದ ಬಳಿಕ, ನನಗೆ ನನ್ನ ಹಿನ್ನೆಲೆಯ ಕುರಿತು ತಿಳಿದುಕೊಳ್ಳಲು ಇನ್ನೂ ಹೆಚ್ಚಿನ ಬಯಕೆಯುಂಟಾಯಿತು. ಆದರೆ ನಾನು ಆ ಅನ್ವೇಷಣೆಗಾಗಿ ವ್ಯಯಿಸಿದ ಎಲ್ಲ ಸಮಯದ ಹೊರತೂ, ನಾವು ಆತ್ಮಿಕಾಭಿರುಚಿಗಳನ್ನು ಅಸಡ್ಡೆಮಾಡಲಿಲ್ಲ. ಟ್ರೀನಗೆ ಜೂನ್‌ 5, 1993ರಲ್ಲಿ ದೀಕ್ಷಾಸ್ನಾನವಾಯಿತು ಮತ್ತು ಆರು ತಿಂಗಳುಗಳ ಬಳಿಕ ಆಕೆ ನಮ್ಮ ಎರಡನೆಯ ಮಗಳಾದ ಸೀಎರ ಲಿನ್‌ಅನ್ನು ಹೆತ್ತಳು.

ನಾನು ನನ್ನ ಹೆತ್ತತಾಯಿಯನ್ನು ಕಂಡುಕೊಂಡ ವಿಧ

ನಾನು ಅಲಾಸ್ಕದ ಶಾಸನ ವ್ಯವಸ್ಥೆಯಿಂದ, ಮಾಹಿತಿಯನ್ನು ಒದಗಿಸುವಂತೆ ಸತತವಾಗಿ ಕೇಳಿಕೊಳ್ಳತೊಡಗಿದೆ. ವಿವಿಧ ಏಜನ್ಸಿಗಳಿಗೆ ಒಂದು ಪತ್ರದ ಹಿಂದೆ ಇನ್ನೊಂದು ಪತ್ರವನ್ನು ಬರೆದುದಲ್ಲದೆ ನನ್ನ ಸ್ವಂತ ಕಂಪ್ಯೂಟರ್‌ ಅನ್ವೇಷಣೆಗಳನ್ನೂ ಮಾಡಿದೆ. ಆದರೆ ಇವೆಲ್ಲವೂ ವಿಫಲಗೊಂಡವು. ಬಳಿಕ, 1995ರ ಅಂತ್ಯಭಾಗದಲ್ಲಿ, ನಾನು ಮಾಡಿಸಿಕೊಂಡ ವೈದ್ಯಕೀಯ ಪರೀಕ್ಷೆಯು, ಹೃದಯವು ಅವ್ಯವಸ್ಥಿತವಾಗಿ ಕಾರ್ಯನಡಿಸುತ್ತಿರುವುದನ್ನು ತೋರಿಸಿಕೊಟ್ಟಿತು. ನಾನು ಕೇವಲ 29 ವಯಸ್ಸಿನವನಾಗಿದ್ದೆ ಮತ್ತು ನನ್ನ ಡಾಕ್ಟರರು ನನ್ನ ವೈದ್ಯಕೀಯ ಚರಿತ್ರೆಯನ್ನು ತಿಳಿದುಕೊಳ್ಳಬಯಸಿದರು.

ಡಾಕ್ಟರರು, ನನ್ನ ದತ್ತುಸ್ವೀಕಾರ ಕಾಗದಪತ್ರಗಳಲ್ಲಿರುವ ಮಾಹಿತಿ ನನ್ನ ಶಾರೀರಿಕ ಕ್ಷೇಮಕ್ಕೆ ಮಹತ್ವದ್ದಾಗಿರಬಲ್ಲದೆಂದು ಒತ್ತಿಹೇಳಿದ, ಒಂದು ಪರಿಷ್ಕಾರವಾದ, ನಿಷ್ಕೃಷ್ಟ ಬಿನ್ನಹವನ್ನು ಬರೆದರು. ಸಕಾಲದಲ್ಲಿ, ನಮಗೊಂದು ಉತ್ತರ ಬಂತು. ಅದರಲ್ಲಿ ಒಬ್ಬ ನ್ಯಾಯಾಧೀಶರ ತೀರ್ಮಾನವು ಒಳಗೂಡಿತ್ತು. ನನ್ನ ವೈದ್ಯಕೀಯ ಆವಶ್ಯಕತೆ, ಆ ದಾಖಲೆಗಳನ್ನು ತೆರೆಯುವಷ್ಟು ಗುರುತರವಾಗಿಲ್ಲವೆಂದು ಅವರು ಎಣಿಸುತ್ತಾರೆಂದು ಅದು ಘೋಷಿಸಿತು. ನಾನು ನಿಬ್ಬೆರಗಾದೆ. ಒಂದು ಕೋರ್ಟ್‌ ಆರ್ಡರ್‌ ನನಗೆ, ದತ್ತುಸ್ವೀಕಾರ ದಾಖಲೆಗಳನ್ನು ನೋಡಲು ಅನುಮತಿಯನ್ನು ಒದಗಿಸಿತು!

ನನ್ನ ವಾಸ್ತವಿಕವಾದ ದತ್ತುಸ್ವೀಕಾರ ಕಾಗದ ಪತ್ರಗಳು ಜನವರಿ 1996ರ ಆದಿಭಾಗದಲ್ಲಿ ಬಂದು ಮುಟ್ಟಿದವು. ನನ್ನ ಹೆತ್ತತಾಯಿಯ ಸ್ವಂತ ಊರು ಮತ್ತು ಕುಟುಂಬ ಹಿನ್ನೆಲೆಯು ಅವುಗಳಲ್ಲಿತ್ತು. ಆ ಕೂಡಲೇ ನಾನು ಸಾಂಡ್ರಳ ಹೆಸರನ್ನು ಅವರ ಹುಟ್ಟೂರಿನೊಂದಿಗೆ ಕಂಪ್ಯೂಟರ್‌ನಲ್ಲಿ ಹುಡುಕಲಾಗಿ ಆರು ಫೋನ್‌ ನಂಬ್ರಗಳು ಸಿಕ್ಕಿದವು. ಟ್ರೀನಳು ಫೋನ್‌ ಕರೆಗಳನ್ನು ಮಾಡುವುದು ಒಳ್ಳೆಯದೆಂದು, ಟ್ರೀನ ಮತ್ತು ನಾನು ನಿರ್ಣಯಿಸಿದೆವು. ಮೂರನೆಯ ಕರೆ ಮಾಡಿದಾಗ, ಒಬ್ಬ ಸ್ತ್ರೀಯು, ಸಾಂಡ್ರ ತನ್ನ ಸೋದರ ಮಗಳೆಂದು ಹೇಳಿ, ಅವಳ ಫೋನ್‌ ನಂಬ್ರವನ್ನು ಒದಗಿಸಿದಳು.

ಫೋನ್‌ ಕರೆ ಮತ್ತು ಆಶ್ಚರ್ಯ

ಟ್ರೀನ ಆ ನಂಬ್ರಕ್ಕೆ ಡಯಲ್‌ ಮಾಡಿದಾಗ, ಉತ್ತರಿಸಿದ ಸ್ತ್ರೀ, ತನ್ನನ್ನು ಗುರುತಿಸಿಕೊಳ್ಳಲು ನಿರಾಕರಿಸಿದಳು. ಕೊನೆಯದಾಗಿ, ಟ್ರೀನ ನೇರವಾಗಿ, “ನನ್ನ ಗಂಡ ಅಲಾಸ್ಕದ ಕೆಚಿಕನ್‌ನಲ್ಲಿ ಆಗಸ್ಟ್‌ 1, 1966ರಲ್ಲಿ ಹುಟ್ಟಿದರು, ಮತ್ತು ನಾನು ಹುಡುಕುತ್ತಿರುವ ವ್ಯಕ್ತಿ ನೀವೆಯೋ ಎಂದು ನನಗೆ ತಿಳಿಯುವುದು ಅವಶ್ಯ,” ಎಂದು ಹೇಳಿದಳು. ದೀರ್ಘಕಾಲದ ಮೌನದ ಬಳಿಕ, ಕಂಪಿಸುವ ಧ್ವನಿಯಲ್ಲಿ ಆ ಸ್ತ್ರೀ, ಟ್ರೀನಳ ಹೆಸರು ಮತ್ತು ಫೋನ್‌ ನಂಬ್ರವನ್ನು ಕೇಳಿ, ತಾನು ಪುನಃ ಫೋನ್‌ ಮಾಡುವೆನೆಂದು ಹೇಳಿದಳು. ಅವರು ಆ ಕೂಡಲೆ ಸಂಪರ್ಕಿಸುವರೆಂದು ನಾನು ಎಣಿಸಲಿಲ್ಲ. ಆದುದರಿಂದ ನಮಗೆ ಬೇಕಾಗಿದ್ದ ಕೆಲವು ವಸ್ತುಗಳನ್ನು ಕೊಳ್ಳಲಿಕ್ಕಾಗಿ ಅಂಗಡಿಗೆ ಹೋಗಲು ನಾನು ನಿಶ್ಚಯಿಸಿದೆ.

ನಾನು ಹಿಂದಿರುಗಿದಾಗ, ಟ್ರೀನಳು ಫೋನ್‌ನಲ್ಲಿ ಮಾತಾಡುತ್ತಿದ್ದಳು, ಮತ್ತು ಅವಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಆಕೆ ಫೋನನ್ನು ನನಗೆ ಕೊಟ್ಟಳು. ಅಮ್ಮನೂ ನಾನೂ ಒಬ್ಬರನ್ನೊಬ್ಬರು ವಂದಿಸಿ ಲಘುಮಾತುಗಳನ್ನು ವಿನಿಮಯಿಸುತ್ತಿದ್ದಾಗ, ಟ್ರೀನ ಅವಸರವಾಗಿ, “ನಿಜವಾಗಿಯೂ ಅವರು ನಿನ್ನನ್ನು ತಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳಲು ಬಯಸಿದ್ದರು,” ಎಂದು ಪಿಸುಗುಟ್ಟಿದಳು. ಅಮ್ಮ ತನ್ನ ವಿಷಯ ಮಾತಾಡತೊಡಗಿದಾಗ, ನನಗೆ ಅವರ ಮೇಲೆ ಕನಿಕರ ಹುಟ್ಟಿತು. “ನೀವು ನನಗೆ ಕೊಟ್ಟ ಜೀವಕ್ಕಾಗಿ ನಾನು ಕೃತಜ್ಞತೆ ಸೂಚಿಸಬಯಸುತ್ತೇನೆ. ನಾನು ಉತ್ತಮ ಜೀವನವನ್ನು ನಡೆಸುತ್ತಿದ್ದೇನೆ, ಮತ್ತು ಬೇಕಾಗಿರುವ ಸಕಲ ವಿಷಯಗಳೂ ನನಗಿವೆ. ನನಗೆ ಉತ್ತಮರಾದ ಹೆತ್ತವರೂ ಧಾರಾಳ ಪ್ರೀತಿಯೂ ಇತ್ತು ಮತ್ತು ಈಗ ನನಗೆ ಒಬ್ಬ ಉತ್ಕೃಷ್ಟಳಾದ ಪತ್ನಿಯೂ ಮುದ್ದಾದ ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ. ನಾನು ಬಹಳ ಸಂತೋಷದಿಂದಿದ್ದೇನೆ,” ಎಂದು ನಾನು ಹೇಳಿದೆ.

ಅವರು ಅಳತೊಡಗಿದರು. ನಾವು ಮಾತಾಡುತ್ತ ಹೋದಂತೆ, ತಮ್ಮ ಮೇಲೆ ನಡೆದ ಬಲಾತ್ಕಾರ ಸಂಭೋಗ, ಗರ್ಭಧಾರಣೆ ಮತ್ತು ನನ್ನನ್ನು ದತ್ತು ಕೊಡಲು ಬಂದ ಒತ್ತಡದ ಕುರಿತು ಅವರು ಹೇಳಿದರು; ಆ ಬಳಿಕ ತಾನು ವಿವಾಹವಾದೆನೆಂದೂ, ಸ್ವಲ್ಪ ಸಮಯಾನಂತರ, ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಯಿಂದ ಗುಣಹೊಂದುತ್ತಿದ್ದಾಗ, ತಮ್ಮ ಹೆಣ್ಣು ಮಗು ಮತ್ತು ತಮ್ಮ ತಾಯಿ ಬೆಂಕಿಯಲ್ಲಿ ಕೊಲ್ಲಲ್ಪಟ್ಟರೆಂದು ಅವರು ಹೇಳಿದರು. ಆ ಸಮಯದಲ್ಲಿ, ತಾನು ಮಗನನ್ನು ದತ್ತು ಕೊಟ್ಟದ್ದಕ್ಕೆ ಶಿಕ್ಷೆಯಾಗಿ ದೇವರು ಈ ಪ್ರಿಯರನ್ನು ತೆಗೆದುಕೊಂಡನೆಂದು ಅವರಿಗೆ ಅನಿಸಿತ್ತು ಎಂದು ಅವರಂದರು. ನಾನು ಕೂಡಲೆ, “ಇಲ್ಲ, ದೇವರು ಹಾಗೆ ಮಾಡುವುದಿಲ್ಲ!” ಎಂದೆ. ತಮಗೆ ಈಗ ಅದು ತಿಳಿದದೆ ಎಂದರವರು, ಏಕೆಂದರೆ ಆ ದುರಂತದ ಬಳಿಕ, ಅವರು “ಬೈಬಲ್‌ ಸತ್ಯವನ್ನು ಹುಡುಕಲು” ಆರಂಭಿಸಿದ್ದರು ಮತ್ತು ಈಗ “ಒಬ್ಬ ಬೈಬಲ್‌ ವಿದ್ಯಾರ್ಥಿ”ಯಾಗಿದ್ದರು.

‘ಇದು ಸತ್ಯವಾಗಿರಸಾಧ್ಯವಿಲ್ಲ’ ಎಂದು ನಾನು ಯೋಚಿಸತೊಡಗಿ, “ನೀವು ಯಾರೊಂದಿಗೆ ಅಭ್ಯಾಸಮಾಡಿದಿರಿ?” ಎಂದು ಕೇಳಿದೆ. ಒಂದು ದೀರ್ಘ ಅವಧಿಯ ಮೌನವಿತ್ತು. ತದನಂತರ ಅವರು “ಯೆಹೋವನ ಸಾಕ್ಷಿಗಳೊಂದಿಗೆ” ಅಂದರು. ನಾನು ಎಷ್ಟು ಭಾವೋದ್ರೇಕಗೊಂಡೆನೆಂದರೆ ನನಗೆ ಮಾತಾಡಲಾಗಲಿಲ್ಲ. ಕಣ್ಣೀರು ಸುರಿಸುತ್ತ, ಕೊನೆಗೆ, “ನಾನೂ ಒಬ್ಬ ಸಾಕ್ಷಿಯಾಗಿದ್ದೇನೆ,” ಎಂದೆ ಪ್ರಯಾಸದಿಂದ. ನಾನದನ್ನು ಹೆಚ್ಚು ಸ್ಪಷ್ಟವಾಗಿ ಪುನರುಚ್ಚರಿಸಿದಾಗ, ಅವರು ಸಂತೋಷದಿಂದ ವಿಪರೀತ ಉದ್ರೇಕಿತರಾದರು. ಅದು ಅತ್ಯಾಶ್ಚರ್ಯಕರವಾಗಿತ್ತು!

ತಾಯಿಯವರು 1975ರಲ್ಲಿ, ತಮ್ಮ ಹೆಣ್ಣುಮಗುವಿನ ಮರಣದ ಸ್ವಲ್ಪ ಸಮಯಾನಂತರ, ಒಬ್ಬ ಸಾಕ್ಷಿಯಾದರು. ಅವರ ಗಂಡನು ಆತ್ಮಿಕವಾಗಿ ಪ್ರಗತಿಹೊಂದತೊಡಗಿದಾಗ, ಅವರು ನನ್ನ ವಿಷಯವನ್ನು ಗಂಡನಿಗೆ ಹೇಳಿದರು. ಗಂಡನು ಅವರಿಗೆ ಸಮಾಧಾನ ಹೇಳಿ, ನಾವಿಬ್ಬರೂ ಅವನನ್ನು ಹುಡುಕೋಣ ಎಂದು ಹೇಳಿದನು. ಆದರೆ ಅದಾಗಿ ಸ್ವಲ್ಪ ಸಮಯದಲ್ಲಿ, ಅವನು ಒಂದು ಕಾರ್‌ ಅಪಘಾತದಲ್ಲಿ ಕೊಲ್ಲಲ್ಪಟ್ಟನು. ತಾಯಿ ಮೂರು ಚಿಕ್ಕ ಮಕ್ಕಳನ್ನು ಬೆಳೆಸುವಂತೆ ಬಿಡಲ್ಪಟ್ಟರು. ಅಂದಿನಿಂದ ನಾವು ಅನೇಕ ಸಾಯಂಕಾಲಗಳಲ್ಲಿ ತಾಸುಗಟ್ಟಲೆ ಮಾತಾಡಿದೆವು. ಕೊನೆಗೆ, ನಾವು ಫೆಬ್ರವರಿ 1996ರ ಎರಡನೆಯ ವಾರ, ಆ್ಯರಿಸೋನದ ಫೀನಿಕ್ಸ್‌ನಲ್ಲಿ ಭೇಟಿಯಾಗಲು ನಿರ್ಧರಿಸಿದೆವು. ಅಮ್ಮ ಬೇರೊಬ್ಬ ಕ್ರೈಸ್ತ ಸಹೋದರಿಯೊಂದಿಗೆ ಅಲ್ಲಿಗೆ ಭೇಟಿಕೊಡಲು ಈಗಾಗಲೇ ಯೋಜಿಸಿದ್ದರು.

ಸ್ಮರಣೀಯ ಪುನರ್ಮಿಲನ

ಈ ಸಂಚಾರಕ್ಕೆ, ಟ್ರೀನ ಮತ್ತು ನಾನು ಮಕ್ಕಳನ್ನು ಮನೆಯಲ್ಲಿ ಬಿಟ್ಟುಹೋದೆವು. ವಿಮಾನದಿಂದ ಇಳಿದಾಗ ನಾನು ನನ್ನ ತಾಯಿಯನ್ನು ನೋಡಿ, ಕೊನೆಗೆ ಅವರನ್ನು ಅಪ್ಪಿಕೊಳ್ಳಶಕ್ತನಾದೆ. ನಾವು ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಾಗ, ನನ್ನನ್ನು ಹಾಗೆ ಆಲಿಂಗಿಸಲು ತಾನು 29 ವರ್ಷ ಕಾದಿದ್ದೆನೆಂದು ಅವರು ಹೇಳಿದರು, ಮತ್ತು ಅವರು ದೀರ್ಘಕಾಲ ನನ್ನನ್ನು ಅಪ್ಪಿಹಿಡಿದರು. ನಮ್ಮ ಸಂದರ್ಶನವು ಅತಿ ಸಂತೋಷಕರವಾದದ್ದಾಗಿದ್ದು, ನಾವು ಚಿತ್ರಗಳನ್ನು ಮತ್ತು ಕಥೆಗಳನ್ನು ಹಂಚಿಕೊಂಡೆವು. ಆದರೂ ಗಮನಾರ್ಹ ಸಂಭವವು, ಫೀನಿಕ್ಸ್‌ನ ಒಂದು ರಾಜ್ಯ ಸಭಾಗೃಹದಲ್ಲಿ ಅಮ್ಮನೊಂದಿಗೆ ಕುಳಿತುಕೊಳ್ಳುವುದಾಗಿತ್ತು! ನಾವು ಕೂಡಿ ಕೂಟವನ್ನು ಕೇಳಿದೆವು ಮತ್ತು ರಾಜ್ಯಗೀತಗಳನ್ನು ಹಾಡುವಾಗ ಒಬ್ಬರು ಇನ್ನೊಬ್ಬರ ಪಕ್ಕದಲ್ಲಿ ನಿಂತುಕೊಂಡೆವು. ಅದು ನಾನು ಸದಾಕಾಲ ಜ್ಞಾಪಿಸಿಕೊಳ್ಳಲಿರುವ ಅದ್ಭುತಕರವಾದ ಅನಿಸಿಕೆಯಾಗಿತ್ತು.

ಎಪ್ರಿಲ್‌ 1996ರಲ್ಲಿ, ನನ್ನ ತಂಗಿ ಲಾರ, ಐಅವದ ತನ್ನ ಮನೆಯಿಂದ ನಮ್ಮನ್ನು ಭೇಟಿಮಾಡಲು ಬಂದಳು. ಆಕೆಯೊಂದಿಗೆ ಹೃದಯೋಲ್ಲಾಸಕರವಾದ ಕ್ರೈಸ್ತ ಸಹವಾಸವನ್ನು ಅನುಭವಿಸುವುದು ಎಷ್ಟು ಅದ್ಭುತಕರವಾಗಿತ್ತು! ನಾನು ನನ್ನ ಹೊಸತಾಗಿ ಕಂಡುಹಿಡಿಯಲ್ಪಟ್ಟ ಇಬ್ಬರು ಸಹೋದರರೊಂದಿಗೂ ಫೋನಿನಲ್ಲಿ ಮಾತನಾಡಿದ್ದೇನೆ. ನನ್ನ ಕುಟುಂಬದೊಂದಿಗೆ ಐಕ್ಯದಿಂದಿರುವುದು ಆಶ್ಚರ್ಯಕರವಾಗಿದೆಯಾದರೂ, ಯೆಹೋವನ ಸಂಸ್ಥೆಯೊಳಗಡೆ ಪ್ರೀತಿಯಲ್ಲಿ ಐಕ್ಯರಾಗಿರುವುದು, ನಮ್ಮ ಮಹಾ ದೇವರಾದ ಯೆಹೋವನು ಮಾತ್ರ ಕೊಡಬಲ್ಲ ಒಂದು ಕೊಡುಗೆಯಾಗಿದೆ.—ಡೇನ ಫಾಲ್ಟ್ಸ್‌ ಹೇಳಿರುವಂತೆ.

[ಪುಟ 34 ರಲ್ಲಿರುವ ಚಿತ್ರ]

ನನ್ನ ಹೆತ್ತತಾಯಿಯೊಂದಿಗೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ