ಪರಿಹಾರವೇನು?
ರಾಶ್ರಿತ ಸನ್ನಿವೇಶವು ಪೂರ್ತಿ ಅಂಧಕಾರವಿರುವ ಒಂದು ಪರಿಸ್ಥಿತಿಯಲ್ಲ. ಲೋಕದಾದ್ಯಂತ, ಮಾನವಹಿತ ಸಂಘಟನೆಗಳು, ಯುದ್ಧ ಮತ್ತು ಇತರ ಸಮಸ್ಯೆಗಳಿಂದ ಸ್ಥಳಾಂತರಿಸಲ್ಪಟ್ಟವರಿಗೆ ಸಹಾಯಮಾಡಲು ಪ್ರಯತ್ನಿಸುತ್ತವೆ. ಅವರು ಸಹಾಯ ನೀಡುವ ಒಂದು ಪ್ರಧಾನ ವಿಧವು, ನಿರಾಶ್ರಿತರು ತಮ್ಮ ಸ್ವದೇಶಗಳಿಗೆ ಹಿಂದಿರುಗುವಂತೆ ನೆರವಾಗುವುದೇ.
ತಾವು ಕೊಲ್ಲಲ್ಪಡುವೆವು, ಚಿತ್ರಹಿಂಸೆಗೊಳಗಾಗುವೆವು, ಬಲಾತ್ಕಾರ ಸಂಭೋಗಕ್ಕೊಳಗಾಗುವೆವು, ಬಂಧಿಸಲ್ಪಡುವೆವು, ದಾಸತ್ವಕ್ಕೊಳಗಾಗುವೆವು, ಸುಲಿಗೆ ಮಾಡಲ್ಪಡುವೆವು ಅಥವಾ ಉಪವಾಸ ಬೀಳಿಸಲ್ಪಡುವೆವು ಎಂಬ ಭಯದ ಕಾರಣ, ನಿರಾಶ್ರಿತರು ತಮ್ಮ ಮನೆ, ಸಮಾಜ ಮತ್ತು ದೇಶವನ್ನು ತ್ಯಜಿಸುತ್ತಾರೆ. ಆದುದರಿಂದ, ನಿರಾಶ್ರಿತರು ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಮುನ್ನ, ಅವರ ಪಲಾಯನಕ್ಕೆ ಕಾರಣವಾದ ಸಮಸ್ಯೆಗಳು ಪರಿಹರಿಸಲ್ಪಡಬೇಕು. ಸಶಸ್ತ್ರ ಹೋರಾಟವು ಕೊನೆಗೆ ಅಂತ್ಯಗೊಳ್ಳುವಾಗಲೂ, ನಿಯಮ ಮತ್ತು ಕ್ರಮದ ಗೈರುಹಾಜರಿಯು ಜನರನ್ನು ಅನೇಕ ವೇಳೆ ಮನೆಗೆ ಹಿಂದಿರುಗುವುದರಿಂದ ನಿರುತ್ತೇಜನಗೊಳಿಸುತ್ತದೆ. ರುಆಂಡದ ಒಬ್ಬ ನಿರಾಶ್ರಿತೆಯೂ ಆರು ಮಕ್ಕಳ ತಾಯಿಯೂ ಆದ ಆ್ಯಗ್ನೆಸ್ ಹೇಳಿದ್ದು: “ನಮ್ಮನ್ನು ರುಆಂಡಕ್ಕೆ [ಹಿಂದೆ] ಒಯ್ಯವುದು ನಮ್ಮ ಸಮಾಧಿಗಳಿಗೆ ನಮ್ಮನ್ನು ತೆಗೆದುಕೊಂಡುಹೋಗುವ ಹಾಗಿರುವುದು.”
ಆದರೂ, 1989ರಿಂದ, 90 ಲಕ್ಷಕ್ಕೂ ಹೆಚ್ಚಿನ ನಿರಾಶ್ರಿತರು ತಮ್ಮ ಮನೆಗಳಿಗೆ ಹಿಂದಿರುಗಿಹೋಗಿದ್ದಾರೆ. ಇವರಲ್ಲಿ ಸುಮಾರು 36 ಲಕ್ಷ ಮಂದಿ ಇರಾನ್ ಮತ್ತು ಪಾಕಿಸ್ತಾನ್‌ನಿಂದ ಅಫ್ಘಾನಿಸ್ತಾನಕ್ಕೆ ಹಿಂದಿರುಗಿದರು. ಆರು ದೇಶಗಳಲ್ಲಿದ್ದ ಇನ್ನೂ 16 ಲಕ್ಷ ನಿರಾಶ್ರಿತರು, 16 ವರ್ಷಗಳ ಆಂತರಿಕ ಯುದ್ಧದಿಂದ ಛಿದ್ರವಾದ ಒಂದು ರಾಷ್ಟ್ರವಾದ ಮೋಸಂಬೀಕ್‌ಗೆ ಹಿಂದಿರುಗಿದರು.
ಹಿಂದಿರುಗುವುದು ಸುಲಭವಲ್ಲ. ಅನೇಕ ವೇಳೆ, ನಿರಾಶ್ರಿತರು ಹಿಂದಿರುಗುವ ದೇಶಗಳು ಧ್ವಂಸವಾಗಿರುತ್ತವೆ; ಹಳ್ಳಿಗಳು ಹೆಂಟೆಗಳಾಗಿ, ಸೇತುವೆಗಳು ನಾಶಗೊಳಿಸಲ್ಪಟ್ಟು, ಬೀದಿ ಮತ್ತು ಹೊಲಗಳಲ್ಲಿ ಸಿಡಿಮದ್ದುಗಳು ಹೂಳಿಡಲ್ಪಟ್ಟಿರುತ್ತವೆ. ಹೀಗೆ, ಹಿಂದಿರುಗುತ್ತಿರುವ ನಿರಾಶ್ರಿತರು ಏನೂ ಇಲ್ಲದ ಸ್ಥಿತಿಯಿಂದ ತಮ್ಮ ಜೀವನಗಳನ್ನು ಮಾತ್ರವಲ್ಲ, ತಮ್ಮ ಮನೆಗಳು, ಶಾಲೆಗಳು, ಆರೋಗ್ಯ ಚಿಕಿತ್ಸಾಲಯಗಳು ಮತ್ತು ಇನ್ನೆಲ್ಲವನ್ನೂ ಪುನಃ ಕಟ್ಟಬೇಕು.
ಆದರೂ, ಹೋರಾಟದ ಜ್ವಾಲೆಗಳು ಒಂದು ಸ್ಥಳದಲ್ಲಿ ಆರಿಹೋಗಿ, ನಿರಾಶ್ರಿತರು ಹಿಂದಿರುಗುವಂತೆ ಅನುಮತಿಸುವಾಗ, ಅವು ಇನ್ನೆಲ್ಲಿಯಾದರೂ ಹೊತ್ತಿಕೊಂಡು, ನಿರಾಶ್ರಿತರ ಹೊಸ ಪ್ರವಾಹಗಳನ್ನು ಉಂಟುಮಾಡುತ್ತವೆ. ಆದುದರಿಂದ, ನಿರಾಶ್ರಿತ ಬಿಕ್ಕಟ್ಟನ್ನು ಪರಿಹರಿಸುವುದೆಂದರೆ, ಸಂಬಂಧಿತ ಸಮಸ್ಯೆಗಳಾದ ಯುದ್ಧ, ದಬ್ಬಾಳಿಕೆ, ದ್ವೇಷ, ಹಿಂಸೆ ಮತ್ತು ಜನರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಪಲಾಯನಮಾಡುವಂತೆ ಮಾಡುವ ಇತರ ಸಂಗತಿಗಳನ್ನು ಪರಿಹರಿಸಬೇಕೆಂದು ಅರ್ಥವಾಗುತ್ತದೆ.
ಲೋಕದ ನಿರಾಶ್ರಿತರ ಸ್ಥಿತಿ 1995 (ಇಂಗ್ಲಿಷ್) ಒಪ್ಪಿಕೊಳ್ಳುವುದು: “ಗಡುಸಾದ ಸತ್ಯ . . . ಏನೆಂದರೆ, [ನಿರಾಶ್ರಿತ ಬಿಕ್ಕಟ್ಟಿನ] ಪರಿಹಾರಗಳು ಅಂತಿಮವಾಗಿ, ಯಾವುದೇ ಮಾನವಹಿತ ಸಂಘಟನೆಯ ನಿಯಂತ್ರಣಕ್ಕೆ ಮೀರಿರುವ ರಾಜಕೀಯ, ಮಿಲಿಟರಿ ಮತ್ತು ಆರ್ಥಿಕ ಸಂಗತಿಗಳ ಮೇಲೆ ಹೊಂದಿಕೊಂಡಿವೆ.” ಬೈಬಲಿಗನುಸಾರ, ಪರಿಹಾರಗಳು ತದ್ರೀತಿ ಮಾನವ ಹಿತದ ಅಥವಾ ಇನ್ನಿತರ ಯಾವುದೇ ಭೂಸಂಘಟನೆಯ ಹಿಡಿತಕ್ಕೆ ಮೀರಿದವುಗಳಾಗಿವೆ.
ನಿರಾಶ್ರಿತರಿಲ್ಲದ ಒಂದು ಜಗತ್ತು
ಆದರೂ ಒಂದು ಪರಿಹಾರವಿದೆ. ತಮ್ಮ ಮನೆಗಳಿಂದ ಮತ್ತು ಕುಟುಂಬಗಳಿಂದ ಅಗಲಿಸಲ್ಪಟ್ಟಿರುವವರ ಕುರಿತು ಯೆಹೋವ ದೇವರು ಚಿಂತಿಸುತ್ತಾನೆಂದು ಬೈಬಲು ತೋರಿಸುತ್ತದೆ. ಭೂಸರಕಾರಗಳಿಗೆ ಅಸದೃಶವಾಗಿ, ಮಾನವ ಕುಲವನ್ನು ಎದುರಿಸುತ್ತಿರುವ ಜಟಿಲವಾದ ಸಕಲ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿಯೂ ವಿವೇಕವೂ ಆತನಿಗಿದೆ. ಆತನು ತನ್ನ ರಾಜ್ಯ—ಭೂಮಿಯ ವಿಚಾರಗಳನ್ನು ಬೇಗನೆ ಹಿಡಿತಕ್ಕೆ ತರಲಿರುವ ಸ್ವರ್ಗೀಯ ಸರಕಾರ—ದ ಮೂಲಕ ಹಾಗೆ ಮಾಡುವನು.
ದೇವರ ರಾಜ್ಯವು ಸಕಲ ಮಾನವ ಸರಕಾರಗಳ ಸ್ಥಾನವನ್ನು ಭರ್ತಿಮಾಡುವುದು. ಈಗ ನಮಗಿರುವಂತೆ, ಭೂಮಿಯ ಮೇಲೆ ಅನೇಕ ಸರಕಾರಗಳಿರುವುದಕ್ಕೆ ಬದಲಾಗಿ, ಇಡೀ ಭೂಗ್ರಹದ ಮೇಲೆಲ್ಲ ಆಳುವ ಒಂದೇ ಒಂದು ಸರಕಾರವಿರುವುದು. ಬೈಬಲು ಮುಂತಿಳಿಸುವುದು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಬೈಬಲಿನಲ್ಲಿ ಮತ್ತಾಯ 6:9-13ರಲ್ಲಿ ಕಂಡುಬರುವ ಮಾದರಿ ಪ್ರಾರ್ಥನೆಯ ಪರಿಚಯ ನಿಮಗಿರಬಹುದು. ಆ ಪ್ರಾರ್ಥನೆಯ ಒಂದು ಭಾಗವು ಹೇಳುವುದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” ಆ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ದೇವರ ರಾಜ್ಯವು ಭೂಮಿಗಿರುವ ದೇವರ ಉದ್ದೇಶವನ್ನು ನೆರವೇರಿಸಲು ಬೇಗನೆ ‘ಬರಲಿರು’ವುದು.
ದೇವರ ರಾಜ್ಯದ ಪ್ರೀತಿಯ ಆಳಿಕೆಯ ಕೆಳಗೆ, ವಿಶ್ವ ಶಾಂತಿ ಮತ್ತು ಸುರಕ್ಷಿತತೆಗಳಿರುವುವು. ಭೂಮಿಯ ಜನರ ಮತ್ತು ರಾಷ್ಟ್ರಗಳ ನಡುವೆ ದ್ವೇಷ ಮತ್ತು ಹೋರಾಟಗಳು ಇನ್ನು ಮುಂದೆ ಇರವು. (ಕೀರ್ತನೆ 46:9) ತಮ್ಮ ಜೀವಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಪಲಾಯನಮಾಡುತ್ತಿರುವ ಇಲ್ಲವೆ ಶಿಬಿರಗಳಲ್ಲಿ ಸೊರಗುತ್ತಿರುವ ಕೋಟ್ಯಂತರ ನಿರಾಶ್ರಿತರು ಇನ್ನೆಂದಿಗೂ ಇರರು.
ದೇವರ ರಾಜ್ಯದ ಅರಸನಾದ ಕ್ರಿಸ್ತ ಯೇಸುವು, “ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು” ಎಂದು ದೇವರ ವಾಕ್ಯವು ವಾಗ್ದಾನಿಸುತ್ತದೆ.—ಕೀರ್ತನೆ 72:12-14.
[ಪುಟ 21 ರಲ್ಲಿರುವ ಚಿತ್ರ]
ಬೇಗನೆ ಎಲ್ಲರೂ ಒಬ್ಬರನ್ನೊಬ್ಬರು ನಿಜ ಸಹೋದರ ಸಹೋದರಿಯರಂತೆ ಉಪಚರಿಸುವರು