ನಿರಾಶ್ರಿತರನ್ನು ಉಪಚರಿಸಲಿಕ್ಕಾಗಿ ಒಂದು ಆದರ್ಶ
ಯೆಹೋವ ದೇವರು ಇಸ್ರಾಯೇಲ್ ಜನಾಂಗಕ್ಕೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಐಗುಪ್ತದಲ್ಲಿ ನಿರಾಶ್ರಿತರಾಗಿದ್ದ ಅವರ ಸನ್ನಿವೇಶದ ಕುರಿತು ಇಸ್ರಾಯೇಲ್ಯರಿಗೆ ಜ್ಞಾಪಕ ಹುಟ್ಟಿಸಲಾಯಿತು. (ವಿಮೋಚನಕಾಂಡ 22:21; 23:9; ಧರ್ಮೋಪದೇಶಕಾಂಡ 10:19) ಆದಕಾರಣ ತಮ್ಮ ಮಧ್ಯದಲ್ಲಿರುವ ವಿದೇಶೀ ನಿವಾಸಿಗಳನ್ನು ಅವರು ದಯೆಯಿಂದ, ಹೌದು ಸೋದರರಂತೆ ಉಪಚರಿಸಬೇಕೆಂದು ಅವರಿಗೆ ಉಪದೇಶಿಸಲಾಯಿತು.
ದೇವರ ಧರ್ಮಶಾಸ್ತ್ರವು ಹೇಳಿದ್ದು: “ನಿಮ್ಮ ದೇಶದಲ್ಲಿ ಇಳುಕೊಂಡಿರುವ ಪರದೇಶದವರಿಗೆ [ಅನೇಕ ವೇಳೆ ಒಬ್ಬ ನಿರಾಶ್ರಿತನಾಗಿದ್ದವನಿಗೆ] ಅನ್ಯಾಯವೇನೂ ಮಾಡಬಾರದು. ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ.”—ಯಾಜಕಕಾಂಡ 19:33, 34.
ವಿದೇಶೀ ನಿವಾಸಿಗಳು ಅನೇಕ ವೇಳೆ ಸುಲಭಭೇದ್ಯರೂ ಅಸುರಕ್ಷಿತರೂ ಆಗಿದ್ದರೆಂಬುದನ್ನು ಗ್ರಹಿಸುತ್ತಾ, ಅವರ ಹಿತಕ್ಕಾಗಿಯೂ ಸುರಕ್ಷೆಗಾಗಿಯೂ ಯೆಹೋವನು ನಿರ್ದಿಷ್ಟ ನಿಯಮಗಳನ್ನು ಕೊಟ್ಟನು. ಅವರಿಗೆ ಖಾತ್ರಿಯನ್ನು ನೀಡಿದ ಈ ಮುಂದಿನ ಹಕ್ಕುಗಳನ್ನು ಪರಿಗಣಿಸಿರಿ.
ಪಕ್ಷಪಾತರಹಿತ ವಿಚಾರಣೆಯ ಹಕ್ಕು: “ಅನ್ಯರಿಗಾಗಲಿ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ವಿಧಿಯಿರಬೇಕು.” “ನೀವು ಪರದೇಶಿಯ . . . ವ್ಯಾಜ್ಯವನ್ನು ವಿಚಾರಿಸುವಾಗ ನ್ಯಾಯವನ್ನು ಬಿಟ್ಟು ತೀರ್ಪುಕೊಡಬಾರದು.”—ಯಾಜಕಕಾಂಡ 24:22; ಧರ್ಮೋಪದೇಶಕಾಂಡ 24:17.
ದಶಮಾಂಶದಲ್ಲಿ ಪಾಲಿಗನಾಗುವ ಹಕ್ಕು: “ಪ್ರತಿ ಮೂರನೆಯ ವರುಷದ ಬೆಳೆಯ ದಶಮಭಾಗವನ್ನು ತಂದು ತಂದು ನೀವು ಇರುವ ಊರಲ್ಲಿಯೇ ಕೂಡಿಸಬೇಕು. ಆಗ ಊರಲ್ಲಿರುವ ಅನ್ಯದೇಶದವರೂ ತಾಯಿತಂದೆಯಿಲ್ಲದವರೂ ವಿಧವೆಯರೂ ನಿಮ್ಮೊಡನೆ ಸ್ವಾಸ್ತ್ಯವನ್ನು ಹೊಂದದೆಹೋದ ಲೇವಿಯರೂ ಉಂಡು ಸಂತೋಷವಾಗಿರಲಿ.”—ಧರ್ಮೋಪದೇಶಕಾಂಡ 14:28, 29.
ನ್ಯಾಯವಾದ ಸಂಬಳದ ಹಕ್ಕು: “ನೀವು ಸ್ವದೇಶದವರಲ್ಲಿಯಾಗಲಿ ನಿಮ್ಮಲ್ಲಿರುವ ಅನ್ಯದೇಶದವರಲ್ಲಿಯಾಗಲಿ ಗತಿಯಿಲ್ಲದ ಬಡ ಕೂಲಿಯವನಿಗೆ ಏನೂ ಅನ್ಯಾಯಮಾಡ”ಬಾರದು.—ಧರ್ಮೋಪದೇಶಕಾಂಡ 24:14.
ಅನುದ್ದೇಶಪೂರ್ವಕವಾದ ಕೊಲೆಗಾರನಿಗೆ ಆಶ್ರಯದ ಹಕ್ಕು: “ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲ್ಯನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.”—ಅರಣ್ಯಕಾಂಡ 35:15.
ಹಕ್ಕಲಾಯುವ ಹಕ್ಕು: “ನೀವು ಪೈರುಗಳನ್ನು ಕೊಯ್ಯುವಾಗ ಹೊಲಗಳ ಮೂಲೆಗಳಲ್ಲಿರುವದನ್ನೆಲ್ಲಾ ಕೊಯ್ಯಬಾರದು; ಮತ್ತು ಕೊಯ್ದಾಗ ಹಕ್ಕಲಾಯಬಾರದು. ದ್ರಾಕ್ಷೆಯ ತೋಟಗಳಲ್ಲಿಯೂ ಹಕ್ಕಲಾಯಕೂಡದು; ಉದುರಿದ ಹಣ್ಣುಗಳನ್ನು ಆರಿಸಿಕೊಳ್ಳದೆ ಬಡವರಿಗೂ ಪರದೇಶಿಗಳಿಗೂ ಬಿಟ್ಟುಬಿಡಬೇಕು. ನಾನು ನಿಮ್ಮ ದೇವರಾದ ಯೆಹೋವನು.”—ಯಾಜಕಕಾಂಡ 19:9, 10.
ನಮ್ಮ ಸೃಷ್ಟಿಕರ್ತನಾದ ಯೆಹೋವನಿಗೆ ನಿರಾಶ್ರಿತರ ಮೇಲೆ ಕನಿಕರವಿದೆಯೆಂಬುದು ನಿಶ್ಚಯ, ಮತ್ತು ನಾವೂ ಕನಿಕರ ತೋರಿಸುವಾಗ ಆತನು ಸಂತೋಷಪಡಬೇಕು. ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ಆತನನ್ನು [ದೇವರನ್ನು] ಅನುಸರಿಸುವವರಾಗಿ . . . ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.”—ಎಫೆಸ 5:1, 2.
[ಪುಟ 0 ರಲ್ಲಿರುವ ಚಿತ್ರ ಕೃಪೆ]
Boy on left: UN PHOTO 159243/J. Isaac