ಚಳಿಗಾಲದ ಹಾಸುಗಂಬಳಿ
ಬೀಳುತ್ತಿರುವ ಹಿಮವನ್ನು ನೀವು ಮೈಮರೆತು ಎಂದಾದರೂ ದಿಟ್ಟಿಸಿ ನೋಡಿದ್ದೀರೊ? ನೋಡಿರುವುದಾದರೆ—ವಿಶೇಷವಾಗಿ ನೀವು ಮನೆಯೊಳಗೆ ಸುರಕ್ಷಿತವಾಗಿಯೂ ಬೆಚ್ಚಗಾಗಿಯೂ ಮತ್ತು ಪ್ರಯಾಣ ಮಾಡುವ ಯಾವುದೇ ಅವಸರವಿರದವರಾಗಿಯೂ ಇರುವಾಗ—ಇದು ಅತ್ಯಂತ ಸುಂದರವಾದ ಹಾಗೂ ಪ್ರಶಾಂತವಾದ ನೋಟಗಳಲ್ಲಿ ಒಂದೆಂದು ನಿಸ್ಸಂದೇಹವಾಗಿ ಒಪ್ಪುವಿರಿ. ಬಿಳಿಯ ಹಾಸುಗಂಬಳಿಯು ದಟ್ಟವಾದಂತೆ, ಅದು ಎಲ್ಲೆಡೆಯೂ ಒಂದು ಅಗಾಧವಾದ ಶಾಂತಿ ಮತ್ತು ನಿಶ್ಶಬ್ದತೆಯನ್ನು ಹರಡುವಂತೆ ತೋರುತ್ತದೆ. ಕೋಮಲವಾದ ಈ ಪೊರೆಗಳು ಹೇರಳವಾಗಿ ಬಿದ್ದಂತೆ, ನಗರದ ಕೋಲಾಹಲವೂ ತಣ್ಣಗಾಗುತ್ತದೆ.
ಆದರೂ, ಹಿಮಪಾತದಂತೆ ಕೋಮಲವಾಗಿ ತೋರುವ ವಿಷಯವು ವಿನಾಶಕಾರಿಯಾಗಿ ಪರಿಣಮಿಸಬಲ್ಲದೆಂಬ ಸಂಗತಿಯು ವಿಸ್ಮಯಕರವಲ್ಲವೊ? “ಎಂದೂ ನಿದ್ರಿಸದ ನಗರ”ವೆಂದು ಅನೇಕ ವೇಳೆ ವರ್ಣಿಸಲ್ಪಡುವ ನ್ಯೂ ಯಾರ್ಕ್‌ನಂತಹ ಸಡಗರದಲ್ಲಿರುವ ನಗರಗಳು, ಸಾಕಷ್ಟು ಎತ್ತರವಾಗಿ ಹಿಮವು ಶೇಖರಿಸುವಲ್ಲಿ ತಲೆ ತಗ್ಗಿಸುವಂತಹ ನಿಲ್ಲೆಡೆಗೆ ತರಲ್ಪಡಬಲ್ಲವು.
ದೇವರು ನಂಬಿಗಸ್ತ ಮನುಷ್ಯನಾದ ಯೋಬನನ್ನು ಹೀಗೆ ಕೇಳಿದ್ದು ಆಶ್ಚರ್ಯಕರವೇನಲ್ಲ: “ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೆಯೋ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೆಯಾ?” (ಯೋಬ 38:22, 23) ತನ್ನ ಸೃಷ್ಟಿಕರ್ತನಾದ ಯೆಹೋವ ದೇವರ ನಿಯಂತ್ರಣದಲ್ಲಿ, ಹಿಮವು ನಿಶ್ಚಯವಾಗಿ ಎದುರಿಸಲಾಗದಂತಹ ಒಂದು ಶಸ್ತ್ರವಾಗಿರಬಲ್ಲದು.
ಹಾಗಿದ್ದರೂ, ಹಿಮವು ಅನೇಕ ವೇಳೆ ನಾಶನವನ್ನು ತರುವುದಕ್ಕಿಂತ ಜೀವವನ್ನು ಸಂರಕ್ಷಿಸುವುದರಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಉದಾಹರಣೆಗೆ, ಬೈಬಲು ಹೇಳುವುದೇನೆಂದರೆ, ದೇವರು “ಉಣ್ಣೆಯಂತಿರುವ ಹಿಮವನ್ನು ಬೀಳಿಸು”ತ್ತಿದ್ದಾನೆ. (ಕೀರ್ತನೆ 147:16) ಹಿಮವು ಉಣ್ಣೆಯಂತಿರುವುದು ಹೇಗೆ? ಬೈಬಲು, ಹಿಮ ಮತ್ತು ಉಣ್ಣೆಯನ್ನು—ಎರಡನ್ನೂ—ಬಿಳುಪು ಮತ್ತು ಶುದ್ಧತೆಯನ್ನು ಪ್ರತಿನಿಧಿಸಲು ಬಳಸುತ್ತದೆ. (ಯೆಶಾಯ 1:18) ಆದರೆ ಮತ್ತೊಂದು ಪ್ರಾಮುಖ್ಯವಾದ ಹೋಲಿಕೆ ಇದೆ. ಹಿಮ ಮತ್ತು ಉಣ್ಣೆ—ಎರಡೂ—ಶಾಖ ನಿರೋಧಕಗಳಂತೆ ಕಾರ್ಯಮಾಡುತ್ತವೆ. ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯ ಹೇಳುವುದು: “ಉಣ್ಣೆ . . . ಶೀತ ಹಾಗೂ ಉಷ್ಣ—ಎರಡರ ವಿರುದ್ಧ ರಕ್ಷಿಸುತ್ತದೆ.” ಮತ್ತು ಹಿಮದ ಕುರಿತಾಗಿ, ವರ್ಲ್ಡ್ ಬುಕ್ ಗಮನಿಸುವುದೇನೆಂದರೆ, ಅದು ಸಹ “ಒಂದು ಒಳ್ಳೆಯ ಶಾಖ ನಿರೋಧಕದಂತೆ ಕೆಲಸಮಾಡುತ್ತದೆ. ತಣ್ಣನೆಯ ಚಳಿಯ ಗಾಳಿಯಿಂದ ಗಿಡಗಳನ್ನು, ಮತ್ತು ಚಳಿಗಾಲವನ್ನು ಸುಪ್ತಾವಸ್ಥೆಯಲ್ಲಿ ಕಳೆಯುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಹಿಮವು ಸಹಾಯ ಮಾಡುತ್ತದೆ.”
ಆದುದರಿಂದ ನೀವು ಮುಂದಿನ ಸಲ ಆಕಾಶದಿಂದ ಹಿಮವು ಬೀಳುತ್ತಿರುವುದನ್ನು ವೀಕ್ಷಿಸುವುದಾದರೆ, ದೇವರ ಭಯಭಕ್ತಿ ಹುಟ್ಟಿಸುವ ಶಕ್ತಿಯ ಕುರಿತು ಯೋಚಿಸಲು ಬಯಸಬಹುದು. ಅಥವಾ ತನ್ನ ಸೃಷ್ಟಿಯ ಮೇಲೆ ಒಂದು ಬಿಳಿಯ ಹಾಸುಗಂಬಳಿಯನ್ನು ಹಾಸಿದಂತೆ—ಪ್ರೀತಿಯ ಹೆತ್ತವರಲ್ಲೊಬ್ಬರು ಮಗುವನ್ನು ಸುರಕ್ಷಿತವಾಗಿ ಹಾಸಿಗೆಯಲ್ಲಿ ಹೊದಿಸಬಹುದಾದ ವಿಧದಲ್ಲೇ—ಆತನು ಒದಗಿಸುವ ಕೋಮಲವಾದ ಸಂರಕ್ಷಣೆಯ ಕುರಿತು ಯೋಚಿಸಲು ನೀವು ಆರಿಸಿಕೊಳ್ಳಬಹುದು.