ನಮ್ಮ ವಾಚಕರಿಂದ
ಕ್ಷಮಿಸುವುದು ಮತ್ತು ಮರೆಯುವುದು “ಬೈಬಲಿನ ದೃಷ್ಟಿಕೋನ: ಕ್ಷಮಿಸುವುದು ಮತ್ತು ಮರೆಯುವುದು—ಹೇಗೆ ಸಾಧ್ಯ?” (ಜೂನ್ 8, 1995) ಎಂಬ ಅತ್ಯುತ್ತಮ ಲೇಖನಕ್ಕಾಗಿ ನಿಮಗೆ ಉಪಕಾರ. ಬೈಬಲು ಅಪರಿಪೂರ್ಣ ಜನರಿಂದ ಅಸಾಧ್ಯವಾಗಿರುವ ವಿಷಯವನ್ನು ಕೇಳಿಕೊಳ್ಳುತ್ತಿದೆಯೊ ಎಂದು ನಾನು ಕುತೂಹಲ ಪಡುತ್ತಿದ್ದೆ. ಆದರೆ ಕ್ಷಮಿಸುವುದು ಮತ್ತು ಮರೆಯುವುದು ಏನನ್ನು ಅರ್ಥೈಸುತ್ತವೆ ಎಂಬುದನ್ನು ಈಗ ನಾನು ಗ್ರಹಿಸುತ್ತೇನೆ. ದೇವರ ಆಜ್ಞೆಗಳು ಭಾರವಾದವುಗಳಲ್ಲ ಎಂಬ ನನ್ನ ದೃಢಸಂಕಲ್ಪಕ್ಕೆ ಈ ಲೇಖನವು ನೆರವನ್ನಿತ್ತಿದೆ.
ಸಿ. ಐ. ಸಿ., ನೈಜೀರಿಯ
ಲೇಖನವನ್ನು ನಾನೆಷ್ಟು ಗಣ್ಯಮಾಡುತ್ತೇನೆಂದು ನಿಮಗೆ ತಿಳಿಯಪಡಿಸಲು ನಾನು ಬರೆಯಲೇಬೇಕಾಯಿತು. ಎಳೆಯ ಮಗುವಾಗಿದ್ದಾಗ, ನನ್ನ ತಂದೆಯ ಇಬ್ಬರು ಸಹೋದರರಿಂದ ನಾನು ಲೈಂಗಿಕವಾಗಿ ಅಪಪ್ರಯೋಗಿಸಲ್ಪಟ್ಟೆ. ತದನಂತರ, ಹೆಂಡತಿಯಾಗಿ ನಾನು ಅಪಪ್ರಯೋಗಿಸಲ್ಪಟ್ಟೆ ಮತ್ತು ದುರುಪಚರಿಸಲ್ಪಟ್ಟೆ. ಕ್ರೈಸ್ತಳಾದ ಮೇಲೆ, ನಾನು ಪ್ರೀತಿಯನ್ನು ತೋರಿಸಲು ಮತ್ತು ಕ್ಷಮಿಸುವವಳಾಗಿರಲು ಪ್ರಯತ್ನಿಸಿದೆ. ಆದರೆ, ಅನೇಕ ವರ್ಷಗಳ ಕಾಲ ನನ್ನಲ್ಲಿ ಆಳವಾದ ವೇದನೆಯನ್ನು ಉಂಟುಮಾಡಿದ ಈ ಮೂರು ಜನರನ್ನು ನಾನು ಕ್ಷಮಿಸಿದ್ದೇನೆಂದು ಪ್ರಾಮಾಣಿಕವಾಗಿ ಹೇಳಲು ನಾನೆಂದೂ ಶಕ್ತಳಾಗಿರುವುದಿಲ್ಲ. ಕೆಲವು ವಿಷಯಗಳು ಯೆಹೋವನ ಕೈಗಳಲ್ಲಿ ಬಿಡಲ್ಪಡಬೇಕೆಂಬುದನ್ನು ನಾನು ಈಗ ಮನಗಾಣುತ್ತೇನೆ, ಮತ್ತು ನನ್ನ ಜೀವಿತದೊಂದಿಗೆ ನಾನು ಮುಂದುವರಿಯಬಲ್ಲೆ. ನನ್ನನ್ನು ಬಾಧಿಸಿರುವ ಈ ಆಳವಾದ ಗಾಯವು ಬೇಗನೆ ಇಲ್ಲದೆ ಹೋಗುವುದೆಂದು ಪ್ರಕಟನೆ 21:4 ನನಗೆ ಆಶ್ವಾಸನೆ ನೀಡುತ್ತದೆ.
ಎ. ಬಿ., ಅಮೆರಿಕ
ನಾನು ಈಗ ತಾನೇ ಆ ಲೇಖನವನ್ನು ಓದಿ ಮುಗಿಸಿದ್ದೇನೆ, ಮತ್ತು ಯೆಹೋವ ದೇವರಿಗೆ ಸಮೀಪವಾಗಿರುವ ಅನಿಸಿಕೆಯು ಈ ಕ್ಷಣದಲ್ಲಿ ಅನಿಸುವಷ್ಟು ಬೇರೆ ಯಾವಾಗಲೂ ನನಗನಿಸಿಲ್ಲ. ಸ್ವಲ್ಪ ಸಮಯದ ಹಿಂದೆ ನಾನೊಂದು ಗಂಭೀರವಾದ ಪಾಪದಲ್ಲಿ ಒಳಗೊಂಡಿದ್ದೆ, ಅದಕ್ಕಾಗಿ ಸಭಾ ಹಿರಿಯರ ಸಹಾಯವನ್ನು ನಾನು ಕೋರಿದೆ. ನಾನು ಅವರಿಂದ ದಯಾಪರವಾದ ಪ್ರೀತಿಯ ಸಲಹೆಯನ್ನು ಪಡೆದೆನಾದರೂ, ಪ್ರಾರ್ಥನೆಯಲ್ಲಿ ಯೆಹೋವನೊಡನೆ ಮಾತಾಡುವುದರಿಂದ ತಡೆಯಲ್ಪಟ್ಟಂತೆ ನನಗಿನ್ನೂ ಅನಿಸಿತು. ನನಗೆ ತೀರಾ ಅವಶ್ಯವಿದ್ದ, ನಮ್ಮ ಸ್ವರ್ಗೀಯ ತಂದೆಯು ಹೇಗೆ ಕ್ಷಮಿಸುತ್ತಾನೆ ಮತ್ತು ಮರೆಯುತ್ತಾನೆ ಎಂಬುದರ ಸ್ಪಷ್ಟವಾದ ತಿಳಿವಳಿಕೆಯನ್ನು ಈ ಲೇಖನವು ನನಗೆ ಕೊಟ್ಟಿದೆ. ನಾನು ಮೂರ್ಖತನದಿಂದ ತ್ಯಜಿಸುತ್ತಿದ್ದ ಒಂದು ಸುಯೋಗವಾದ, ಹೃತ್ಪೂರ್ವಕ ಪ್ರಾರ್ಥನೆಯಲ್ಲಿ ಆತನನ್ನು ಮುಕ್ತವಾಗಿ ಸಮೀಪಿಸುವಂತೆ ಅದು ನನ್ನನ್ನು ಶಕ್ತಗೊಳಿಸಿದೆ. ನನಗೆ “ಸರಿಯಾದ ಹೊತ್ತಿಗೆ ಆಹಾರ”ವನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ಉಪಕಾರ.—ಮತ್ತಾಯ 24:45, NW.
ಡಿ. ಜೆ. ಎಸ್., ಅಮೆರಿಕ
ಸಾಲ “ಸಾಲಕ್ಕೆ ಈಡಾಗುವುದು ಪ್ರಯೋಜನಕಾರಿಯಾಗಿದೆಯೋ?” (ಜೂನ್ 8, 1995) ಎಂಬ ನಿಮ್ಮ ಲೇಖನಕ್ಕಾಗಿ ನಿಮಗೆ ಉಪಕಾರ. ನಾನು ಕೇವಲ 13 ವರ್ಷ ಪ್ರಾಯದವಳು, ಆದರೆ ನನ್ನ ಹಣವನ್ನು ನಾನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಈ ಲೇಖನವು ನನಗೆ ಮಹತ್ತರವಾಗಿ ಸಹಾಯ ಮಾಡುವುದೆಂದು ನಾನು ನೆನೆಸುತ್ತೇನೆ.
ಸಿ. ಎ., ಅಮೆರಿಕ
ಜಗತ್ತನ್ನು ಗಮನಿಸುವುದು ನಿಮ್ಮ ಪತ್ರಿಕೆಗಳು ಹೆಚ್ಚು ಹೆಚ್ಚು ಆಸಕ್ತಿಕರವಾಗುತ್ತಿವೆ. ಅವು ಎಲ್ಲ ಬಗೆಯ ವಿಷಯ—ಪ್ರಚಲಿತ ಘಟನೆಗಳು, ಕ್ರೀಡೆಗಳು, ವಿಜ್ಞಾನ, ಮತ್ತು ಮುಂತಾದ ವಿಷಯ—ಗಳೊಂದಿಗೆ ವ್ಯವಹರಿಸುತ್ತವೆ. “ಜಗತ್ತನ್ನು ಗಮನಿಸುವುದು” ತುಂಬ ಆಸಕ್ತಿಕರವಾದದ್ದಾಗಿದೆ. ಟೀವೀ ವಾರ್ತೆಗಳು ಈ ವೈಶಿಷ್ಟ್ಯದ ಮೇಲೆ ಆಧರಿಸಿರುತ್ತಿದ್ದರೆ, ಅದು ಮತ್ತಷ್ಟು ಆಸಕ್ತಿಕರವಾಗಿರುತ್ತಿತ್ತೆಂದು ನಾನು ನೆನೆಸುತ್ತೇನೆ.
ಆರ್. ಎಸ್., ಇಟಲಿ
“ಜಗತ್ತನ್ನು ಗಮನಿಸುವುದು” ಎಂಬುದರಲ್ಲಿ ಆವರಿಸಲ್ಪಟ್ಟ ವಿಷಯಗಳನ್ನು ನಾನು ನಿಜವಾಗಿಯೂ ಗಣ್ಯಮಾಡುತ್ತೇನೆ. ನನಗೆ ನಿಜವಾಗಿ ಅರ್ಥವತ್ತಾಗಿದ್ದ ಒಂದು, ಮೇ 8, 1995ರ ಸಂಚಿಕೆಯಲ್ಲಿತ್ತು. ವಿಷಯವು “ಶಿಕ್ಷಕರನ್ನು ಜನಪ್ರಿಯವಾಗಿ ಮಾಡುವಂತಹದು ಯಾವುದು?” ಎಂದಾಗಿತ್ತು. ಕಡಿಮೆ ಶಾಲಾ ಮನೆಗೆಲಸವನ್ನು ಕೊಡುವ ಶಿಕ್ಷಕರನ್ನು ವಿದ್ಯಾರ್ಥಿಗಳು ಅಗತ್ಯವಾಗಿ ಇಷ್ಟಪಡುವುದಿಲ್ಲ, ಆದರೆ ದಯಾಪರರೂ, ಕಾಳಜಿ ವಹಿಸುವವರೂ, ನಿಷ್ಪಕ್ಷಪಾತಿಗಳೂ ಆಗಿರುವ ಶಿಕ್ಷಕರನ್ನು ಇಷ್ಟಪಡುತ್ತಾರೆಂದು ಲೇಖನವು ಹೇಳಿತು. ಅದು ಸತ್ಯವಾಗಿದೆ! ಜನಪ್ರಿಯರಾಗುವ ಪ್ರಯತ್ನದಲ್ಲಿ, ಜನಪ್ರಿಯರಾಗಿರುವ ವಿದ್ಯಾರ್ಥಿಗಳಿಗೆ ಕೃಪೆ ತೋರಿಸುವ ಶಿಕ್ಷಕರೊಂದಿಗೆ ಅನೇಕ ಅನುಭವಗಳು ನನಗಾಗಿದೆ. ಆದರೆ ಕಟ್ಟಕಡೆಗೆ, ಅಂತಹ ಶಿಕ್ಷಕರು ಜನಪ್ರಿಯರಾಗಿ ಉಳಿಯುವುದಿಲ್ಲ. ಈ ಅಮೂಲ್ಯವಾದ ಮಾಹಿತಿಗಾಗಿ ಮತ್ತೊಮ್ಮೆ ಉಪಕಾರ.
ಎಲ್. ಕೆ., ಅಮೆರಿಕ
ಕದಿಯುವಿಕೆ ನಾನು 13 ವರ್ಷ ಪ್ರಾಯದವಳು, ಮತ್ತು ನನಗಿದ್ದ ಸಮಸ್ಯೆಯು ಕದಿಯುವಿಕೆ ಆಗಿತ್ತು. ನಾನು ಹಣವನ್ನು ಕದಿಯುತ್ತಿದ್ದೆ, ಅಥವಾ ಒಂದು ಅಂಗಡಿಗೆ ಹೋಗಿ ಬಬ್‌ಲ್ ಗಮ್ ಅನ್ನು ಕದಿಯುತ್ತಿದ್ದೆ. ನಾನು ನಿಲ್ಲಿಸಲು ಬಯಸಿದೆ, ಆದರೆ ನಾನು ಜುಲೈ 8, 1995ರ ಎಚ್ಚರ! ಪತ್ರಿಕೆಯನ್ನು ಪಡೆದು, “ಯುವಜನರು ಪ್ರಶ್ನಿಸುವುದು . . . ಕದಿಯುವಿಕೆ—ಏಕೆ ಮಾಡಬಾರದು?” ಎಂಬ ಲೇಖನಕ್ಕೆ ತಿರುಗಿಸುವ ವರೆಗೆ ಯಾವುದೂ ಸಹಾಯ ಮಾಡಲಿಲ್ಲ. ಅದು ನನ್ನನ್ನು ನಿಜವಾಗಿಯೂ ಪ್ರಭಾವಿಸಿತು. ಯೆಹೋವನಿಗೆ ಪ್ರಾರ್ಥಿಸುವಂತೆ ಮತ್ತು ಆತನು ಮಹಾ ಕೃಪೆಯಿಂದ ಕ್ಷಮಿಸುವನೆಂದು ತಿಳಿದುಕೊಳ್ಳುವಂತೆ ಅದು ನನಗೆ ಸಹಾಯ ಮಾಡಿತು. ನಾನು ದೇವರ ರಾಜ್ಯದಲ್ಲಿರಲು ಬಯಸುತ್ತೇನೆ, ಮತ್ತು ಕಳ್ಳತನ ಮಾಡುವ ಜನರು ಅಲ್ಲಿರರೆಂದು ನನಗೆ ಗೊತ್ತಿದೆ. ಈ ಲೇಖನವನ್ನು ಪ್ರಕಟಿಸಿದುದಕ್ಕಾಗಿ ಉಪಕಾರ.
ಜೆ. ಎ., ಕೆನಡ
ನಾನು 23 ವರ್ಷ ಪ್ರಾಯದವನು ಮತ್ತು ಕದಿಯುವಿಕೆಗಾಗಿ ಸೆರೆಮನೆಯಲ್ಲಿದ್ದೇನೆ. ಅದೆಲ್ಲವು ಸಮಾನಸ್ಕಂಧರ ಒತ್ತಡದ ಕಾರಣ ಆರಂಭಿಸಿತು. ಯಾರೊ ಒಬ್ಬರ ಮೇಲೆ ಕುಚೇಷ್ಟೆಯನ್ನು ನಾನು ಮಾಡಬೇಕೆಂದು ಅವರು ಬಯಸಿದರು ಮತ್ತು ಅಲ್ಲಿಂದ ಸನ್ನಿವೇಶವು ಕೀಳಾಗತೊಡಗಿತು. ಲೇಖನವು ಎಷ್ಟೋ ಸತ್ಯವಾಗಿದೆ. ಹೆಚ್ಚು ತಡವಾಗುವ ಮುಂಚೆ ಯುವ ಜನರು ಈ ಸಲಹೆಯನ್ನು ಆಲಿಸುವರೆಂದು ನಾನು ಕೇವಲ ನಿರೀಕ್ಷಿಸುತ್ತೇನೆ. ಆ ವಿಧದಲ್ಲಿ ಅವರು ನಾನಿರುವಲ್ಲಿ—ಸೆರೆಮನೆಯಲ್ಲಿ—ಇರುವುದನ್ನು ತೊರೆಯಬಲ್ಲರು.
ಎಮ್. ಎಸ್., ಅಮೆರಿಕ